Friday, May 7, 2010
ಹೊಗೇನಕಲ್‌ನಲ್ಲಿ ತಮಿಳು ಹೊಗೆ
ಹೊಗೇನಕಲ್ ಪ್ರದೇಶ ಕರ್ನಾಟಕದ್ದು. ಈ ಪ್ರದೇಶದಲ್ಲಿ ತಮಿಳುನಾಡು ಕ್ಯಾತೆಯನ್ನು ಬಿಜೆಪಿ ಖಂಡಿಸುತ್ತದೆ. ಬಿಜೆಪಿ ಸರ್ಕಾರ ಬಂದರೆ ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚು ನೆಲವನ್ನೂ, ರಾಜ್ಯದ ಪಾಲಿನ ಒಂದಿಷ್ಟು ನೀರನ್ನು ಅನ್ಯರ ಪಾಲಾಗಲು ಬಿಡುವುದಿಲ್ಲ. ಈವರೆಗೆ ಆಳಿದ ಕಾಂಗ್ರೆಸ್ ಹಾಗೂ ಜನತಾದಳ ಸರ್ಕಾರಗಳು ರಾಜ್ಯದ ಬಗ್ಗೆ ಕಾಳಜಿಯನ್ನೇ ವಹಿಸಿಲ್ಲ. ಇದರಿಂದ ರಾಜ್ಯಕ್ಕೆ ತೀವ್ರ ಅನ್ಯಾಯವಾಗಿದೆ
ಹೀಗೆ ಅಬ್ಬರಿಸಿದ್ದರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ. ಸರಿಯಾಗಿ ಎರಡು ವರ್ಷದ ಹಿಂದೆ ಇದು ನಡೆದಿದ್ದು. ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಹೊಗೇನಕಲ್ ಯೋಜನೆಗೆ ಶಿಲಾನ್ಯಾಸ ಮಾಡಲು ಬರುತ್ತಾರೆಂಬ ಸುದ್ದಿಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲ. ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿ ಕೈಕೊಟ್ಟಿದ್ದ ಕುಮಾರಸ್ವಾಮಿಯಿಂದಾದ ವಿಶ್ವಾಸದ್ರೋಹ ಮುಂದಿಟ್ಟುಕೊಂಡು ಹಾಲಿ ಮುಖ್ಯಮಂತ್ರಿ, ಆಗ ವಾರದ ಮುಖ್ಯಮಂತ್ರಿಯಾಗಿ ಮಾಜಿಯಾಗಿ ಅಧಿಕಾರಕ್ಕಾಗಿ ಪರದಾಡುತ್ತಿದ್ದ ಯಡಿಯೂರಪ್ಪ ಹೀಗೆ ಗುಡುಗಿದ್ದರು.
ಅದೂ ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ಹೊಗೇನಕಲ್ ಪ್ರದೇಶಕ್ಕೆ ತೆರಳಿ ಅಲ್ಲಿಯೇ ಮಾಧ್ಯಮದವರ ಬಳಿ ಮಾತನಾಡಿದ್ದರು. ಹೊಗೇನಕಲ್‌ನ ನೀರಿನ ಪ್ರದೇಶದಲ್ಲಿ ಉಕ್ಕಡದ ಮೇಲೆ ಕುಳಿತು ಓಡಾಡಿ ಕರ್ನಾಟಕದ ಪ್ರದೇಶವನ್ನು ಉಳಿಸುವ ಪಣ ತೊಟ್ಟಿದ್ದರು. ತಾವು ಮಾತ್ರ ಕರ್ನಾಟಕದ ಪಾಲನ್ನು ಉಳಿಸುವ ಧೀರರು ಎಂದು ಫೋಸು ಕೊಟ್ಟಿದ್ದರು.
ಅದೆಲ್ಲಾ ಆಗಿ ಈಗ್ಗೆ ಎರಡು ವರ್ಷ. ೨೦೦೮ರ ಮೇ ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಆರಿಸಿ ಬಂತು. ಯಡಿಯೂರಪ್ಪ ಮುಖ್ಯಮಂತ್ರಿಯೂ ಆದರು. ಅವರ ಜತೆಗಿದ್ದ ಈಶ್ವರಪ್ಪ ಒಂದುವರ್ಷ ಇಂಧನ ಸಚಿವರೂ ಆಗಿದ್ದರು. ಆದರೆ ಈ ಇಬ್ಬರೂ ಈ ಬಗ್ಗೆ ಚಕಾರವೆತ್ತಲೇ ಇಲ್ಲ. ತಾವಾಯ್ತು ತಮ್ಮ ಪಾಡಾಯಿತು ಎಂದು ಹಾಗೆ ಇದ್ದು ಬಿಟ್ಟರು. ಹೊಗೇನಕಲ್‌ನಲ್ಲಿ ಗುಡುಗಿದ ಶಬ್ದವಷ್ಟೇ ಕರ್ನಾಟಕದ ಜನತೆಗೆ ಕೇಳಲು ಸಿಕ್ಕಿತು. ಅದು ಬಿಟ್ಟರೆ ಮತ್ತೇನೂ ಆಗಲೇ ಇಲ್ಲ. ಹೊಗೇನಕಲ್ ಕೂಡ.
ಕಾಲ ಎಲ್ಲವನ್ನೂ ಮರೆಸುತ್ತದೆಯಂತೆ. ಕರ್ನಾಟಕದ ಸಜ್ಜನರೂ ಕೂಡ ಯಡಿಯೂರಪ್ಪ-ಈಶ್ವರಪ್ಪ ಗುಡುಗಿದ್ದನ್ನೂ ಮರೆತರು. ಹೀಗೆ ಅಧಿಕಾರ ಮಾಡಿದರೆ ಮುಂದಿನ ಚುನಾವಣೆ ಹೊತ್ತಿಗೆ ಕರ್ನಾಟಕದ ಜನ ಯಡಿಯೂರಪ್ಪನವರನ್ನು, ಬಿಜೆಪಿಯವರನ್ನು ಮರೆಯುವ ದಿನ ದೂರವಿಲ್ಲ. ಅದನ್ನು ಬಿಜೆಪಿ ನೆನಪಿಟ್ಟುಕೊಳ್ಳಬೇಕು.
ಏನಿದು ಹೊಗೇನಕಲ್?
ಕಳಸಾಬಂಡೂರಿ, ಮಹದಾಯಿ ನೀರಿನಲ್ಲಿ ಕರ್ನಾಟಕದ ಪಾಲಿನ ಬಗ್ಗೆ ತಲೆ ಕೆಡಿಸಿಕೊಳ್ಳದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಾರ್ಯಸಾಧುವಲ್ಲದ ದಂಡಾವತಿ ಯೋಜನೆ ಬಗ್ಗೆ ಸಿಕ್ಕಾಪಟ್ಟೆ ಚಿಂತೆ ಮಾಡುತ್ತಿದೆ. ಅದಕ್ಕೇ ಹೇಳೋದು ಅದಲ್ಲ ಕಣೋ ದಾಸಯ್ಯ ಅಂದ್ರೆ ಗುಡಿ ಮುಂದೆ ಹೋಗಿ ಟಿಂಗ್ ಅಂದಿದ್ನಂತೆ ಎಂದು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಮೇಲಿನ ದ್ವೇಷಕ್ಕೆ ಸೊರಬ ಅಥವಾ ಶಿವಮೊಗ್ಗ ಜಿಲ್ಲೆಗೆ ಪ್ರಯೋಜನವಾಗದ ಅಥವಾ ಸ್ವತಃ ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರಕ್ಕೂ ಲಾಭ ತಾರದ ದಂಡಾವತಿ ಯೋಜನೆ ಬಗ್ಗೆ ಯಡಿಯೂರಪ್ಪ, ಅವರ ಸಂಪುಟದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತೀವ್ರ ಉತ್ಸುಕರಾಗಿದ್ದಾರೆ. ಆದರೆ ಕರ್ನಾಟಕದ ಸ್ವಾಭಿಮಾನವನ್ನು ಪದೇ ಪದೇ ಕೆಣಕುತ್ತಿರುವ ಹೊಗೇನಕಲ್ ಯೋಜನೆ ಬಗ್ಗೆ ಸ್ಮಶಾನ ಮೌನ ತಾಳಿದ್ದಾರೆ. ಇದನ್ನು ನಾಡಿನ ದುರ್ವಿಧಿಯೆನ್ನಬೇಕೋ? ತಮಿಳುನಾಡು ಪಾಲಿನ ಸುಯೋಗ ಎನ್ನಬೇಕೋ ಗೊತ್ತಿಲ್ಲ.
ಹೊಗೇನಕಲ್ ತಮಿಳುನಾಡು ಹಾಗೂ ಕರ್ನಾಟಕದ ಗಡಿಭಾಗದಲ್ಲಿರುವ ಪ್ರದೇಶ. ಇಲ್ಲೊಂದು ಸುಂದರ ಜಲಪಾತ ಹಾಗೂ ನಡುಗಡ್ಡೆಯಿದೆ. ಇಲ್ಲಿಂದ ಧರ್ಮಪುರಿ ಹಾಗೂ ಕೃಷ್ಣಗಿರಿ ಜಿಲ್ಲೆಗೆ ಕುಡಿಯುವ ನೀರು ಒದಗಿಸಲು ತಮಿಳು ನಾಡು ಸರ್ಕಾರ ೧೯೯೮ರಲ್ಲೇ ಮುಂದಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲರು ೧.೪ ಟಿ.ಎಂ.ಸಿ. ನೀರನ್ನು ಕುಡಿಯುವ ನೀರಿಗಾಗಿ ಬಳಸಲು ಒಪ್ಪಿಗೆ ನೀಡಿ ಒಪ್ಪಂದವನ್ನೂ ಮಾಡಿಕೊಂಡಿದ್ದರು.
೨೦೦೭ರಲ್ಲಿ ಮತ್ತೆ ಈ ಯೋಜನೆಗೆ ಮರುರೂಪುಕೊಟ್ಟ ತಮಿಳುನಾಡು ಸರ್ಕಾರ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಾಯಿತು. ಆಗ ಕರ್ನಾಟಕದ ವಿವಿಧ ಕನ್ನಡ ಪರ ಸಂಘಟನೆಗಳು, ಸರ್ಕಾರ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದವು. ಆಗ ಯೋಜನೆಯ ಪ್ರಸ್ತಾಪವನ್ನು ನೆನೆಗುದಿಗೆ ಬಿಟ್ಟ ತಮಿಳುನಾಡು ಸರ್ಕಾರ ಯೋಜನೆಯನ್ನು ಮರೆಯುವಂತೆ ಮಾಡಿತು.
ತೆರೆಮರೆಯಲ್ಲಿ
ಆದರೆ ತಮಿಳುನಾಡು ಸರ್ಕಾರ ಸುಮ್ಮನೇ ಕೂರಲಿಲ್ಲ. ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಪಾಲು ಪಡೆದ ಡಿಎಂಕೆ ಪಕ್ಷ ತನ್ನ ಪ್ರಾಬಲ್ಯವನ್ನು ಬಳಸಿ ಯೋಜನೆ ಅನುಷ್ಠಾನಕ್ಕೆ ಮುಂದಾಯಿತು. ಕಾವೇರಿ ನದಿಪಾತ್ರದಲ್ಲಿ ಯಾವುದೇ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾದರೂ ಕಾವೇರಿ ನ್ಯಾಯಾಧಿಕರಣದ ಅನುಮೋದನೆ ಪಡೆಯಬೇಕಾಗಿತ್ತು. ಅದರ ಗೋಜಿಗೆ ಹೋದರೆ ಕರ್ನಾಟಕ ಸರ್ಕಾರ ಹಾಗೂ ನ್ಯಾಯಾಧಿಕರಣದ ತಕರಾರನ್ನು ಎದುರಿಸುವುದು ಕಷ್ಟವೆಂದರಿತ ತಮಿಳುನಾಡು ಸರ್ಕಾರ ಆ ಪ್ರಕ್ರಿಯೆಯನ್ನು ಮಾಡಲೇ ಇಲ್ಲ.
ಸದರಿ ಯೋಜನೆಗೆ ಮರುರೂಪ ಕೊಟ್ಟು ಅನುಷ್ಠಾನ ಮಾಡಲು ಮುಂದಾಯಿತು. ಕರ್ನಾಟಕದ ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರ ಜತೆ ಮಾಡಿಕೊಂಡ ಒಪ್ಪಂದ ಅನ್ವಯ ಧರ್ಮಪುರಿ ಹಾಗೂ ಕೃಷ್ಣಗಿರಿ ಜಿಲ್ಲೆಗೆ ಕುಡಿಯುವ ನೀರು ಒದಗಿಸಲು ೧.೪ ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳಲು ತಮಿಳುನಾಡಿಗೆ ಅವಕಾಶವಿತ್ತು.
ಆದರೆ ಆ ಒಪ್ಪಂದವನ್ನು ಮುರಿದ ತಮಿಳುನಾಡು ಸರ್ಕಾರ ಧರ್ಮಪುರಿ, ಕೃಷ್ಣಗಿರಿಗೆ ಕುಡಿಯುವ ನೀರಲ್ಲದೇ ಹೊಸೂರು ಜಿಲ್ಲೆ, ಪಾಳಕ್ಕಾರ್, ಮರಂಡಳ್ಳಿ, ರಾಯಕೋಟೈ ಹಾಗೂ ಪೆನ್ನಾಗರಂಗೆ ನೀರು ಒದಗಿಸುವ ಯೋಜನೆಯನ್ನು ಜತೆ ಸೇರಿಸಿಕೊಂಡಿತು. ಅಲ್ಲಿಗೆ ೧.೪ ಟಿ.ಎಂ.ಸಿ. ನೀರಿನ ಬದಲಾಗಿ ೨.೧ ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳುವ ಸಂಚು ರೂಪಿಸಿತು. ಅದಕ್ಕಾಗಿ ೧೫೦೦ ಕೋಟಿ ರೂ.ಗಳ ವೆಚ್ಚವನ್ನು ನಿಗದಿ ಮಾಡಿತು. ಈ ಮೊತ್ತದಲ್ಲಿ ೪೦೦ ಕೋಟಿ ರೂ. ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಸಾಲದ ರೂಪದಲ್ಲಿತ್ತು.
ಆದರೆ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಪಡೆಯುವ ಸಾಲಕ್ಕೆ ಕೇಂದ್ರ ಸರ್ಕಾರ ಗ್ಯಾರಂಟಿ ಹಾಕಬೇಕಿತ್ತು. ಅದನ್ನು ಮಾಡದಿದ್ದರೆ ಜಪಾನ್ ಬ್ಯಾಂಕ್‌ನಿಂದ ಸಾಲ ಲಭ್ಯವಾಗುತ್ತಿರಲಿಲ್ಲ. ಕೇಂದ್ರದಲ್ಲಿ ಸಚಿವರಾಗಿರುವ ಕರುಣಾನಿಧಿ ಪುತ್ರ ಅಳಗಿರಿ, ಕನಿಮೋಳಿ ಸೇರಿದಂತೆ ತಮಿಳುನಾಡು ಸಂಸದರೆಲ್ಲರೂ ಕೇಂದ್ರದ ಮೇಲೆ ಒತ್ತಡ ತಂದು ಜಪಾನ್ ಸಾಲಕ್ಕೆ ಕೇಂದ್ರ ಗ್ಯಾರಂಟಿ ಹಾಕುವಂತೆ ಮಾಡಿದರು. ತಮಿಳು ಸಂಸದರು ಎಲ್ಲವನ್ನೂ ರಾಜ್ಯದ ಪರ ಕಾಳಜಿಯಿಂದ ನಡೆಸಿಕೊಟ್ಟರು.
ಇಷ್ಟರಮೇಲೆ ಹೊಗೇನಕಲ್‌ನಲ್ಲಿ ನೀರಾವರಿ ಯೋಜನೆ ಅನುಷ್ಠಾನ ಮಾಡುವುದೊಂದು ಬಾಕಿಯಿತ್ತು. ಈಗಾಗಲೇ ಈ ಕಾಮಗಾರಿಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ತಮಿಳುನಾಡು ಸರ್ಕಾರ ದಿನಾಂಕವನ್ನು ನಿಗದಿ ಮಾಡಿಲ್ಲ. ತಮಿಳುನಾಡು ಉಪಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇತ್ತೀಚೆಗೆ ಮಾಧ್ಯಮದವರ ಜತೆ ಮಾತನಾಡುತ್ತಾ, ಹೊಗೇನಕಲ್ ತಮಿಳುನಾಡಿಗೆ ಸೇರಿದ್ದು, ಅಲ್ಲಿ ನೀರಾವರಿ ಯೋಜನೆ ರೂಪಿಸಲು ಯಾರು ತಕರಾರು ಮಾಡುವ ಪ್ರಶ್ನೆಯೇ ಇಲ್ಲ. ರಾಜ್ಯದ ನೀರಿನ ಪಾಲನ್ನು ಸಮರ್ಪಕವಾಗಿ ಬಳಸಿಕೊಂಡು ಧರ್ಮಪುರಿ ಹಾಗೂ ಕೃಷ್ಣಂ ಜಿಲ್ಲೆಗೆ ನೀರುಣಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಘೋಷಿಸಿದ್ದಾರೆ.
ಅಲ್ಲಿಗೆ ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ಯೋಜನೆ ಜಾರಿಗೊಳಿಸುವುದು ನಿಶ್ಚಿತವಾಗಿದೆ. ಅಲ್ಲದೇ ಈ ಪ್ರದೇಶವನ್ನು ಅದು ತಮ್ಮದು ಎಂದು ನಿರ್ಧರಿಸಿಬಿಟ್ಟಿದೆ.
ಪ್ರವಾಸೋದ್ಯಮ
ಇಷ್ಟರಮಧ್ಯೆಯೇ ಹೊಗೇನಕಲ್‌ನ ಜಲಪಾತ, ಸುಂದರ ಅರಣ್ಯ ಪ್ರದೇಶದಲ್ಲಿ ತಮಿಳುನಾಡಿನ ಪ್ರವಾಸೋದ್ಯಮ ಇಲಾಖೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಮುಂದಾಗಿದೆ.
ತಮಿಳುನಾಡು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ ಪ್ರವಾಸೋದ್ಯಮ ಇಲಾಖೆಯ ಕೈಪಿಡಿಯಲ್ಲಿ ಹೊಗೇನಕಲ್‌ನ್ನು ಒಂದು ಪ್ರವಾಸಿ ತಾಣವಾಗಿ ಘೋಷಿಸಲಾಗಿದೆ. ಅಲ್ಲಿನ ಆಕರ್ಷಕ ಜಲಪಾತದ ಚಿತ್ರವನ್ನು ಬ್ರೋಚರ್‌ನಲ್ಲಿ ಮುದ್ರಿಸಲಾಗಿದೆ. ಜಲಪಾತದ ಕೆಳಭಾಗದ ನಡುಗಡ್ಡೆಯಲ್ಲಿ ದೋಣಿ ವಿಹಾರ, ವಾಸಿಸಲು ಆಕರ್ಷಕ ಲಾಡ್ಜಿಂಗ್, ಅರಣ್ಯ ಪ್ರದೇಶ ಸುತ್ತಲು ಅವಕಾಶವಿರುವ ಪ್ಯಾಕೇಜ್ನ್ನು ರೂಪಿಸಿದೆ. ಅಲ್ಲಿ ಕಟ್ಟಡಗಳನ್ನು ಈಗಾಗಲೇ ಕಟ್ಟಿರುವ ತಮಿಳುನಾಡು ಪ್ರವಾಸೋದ್ಯಮ ಇಲಾಖೆ ಅಲ್ಲಿ ಆದ್ಯತೆ ಮೇರೆಗೆ ಅಭಿವೃದ್ಧಿ ಮಾಡುತ್ತಿದೆ.
ಕರ್ನಾಟಕಕ್ಕೆ ಸೇರುವ ಪ್ರದೇಶದಲ್ಲಿ ಸೇತುವೆಯೊಂದನ್ನು ತಮಿಳುನಾಡು ಸರ್ಕಾರ ನಿರ್ಮಿಸಿದೆ. ಅಲ್ಲಿ ಓಡಾಡುವ ವಾಹನಗಳಿಂದ ನಿಗದಿತ ಶುಲ್ಕವನ್ನು ವಸೂಲು ಮಾಡುತ್ತಿದೆ. ಆದರೆ ಅದರ ಚಿಕ್ಕಾಸು ಕರ್ನಾಟಕಕ್ಕೆ ದೊರೆಯುತ್ತಿಲ್ಲ.
ಹಾಗಿದ್ದರೆ ಹೊಗೇನಕಲ್ ಪ್ರದೇಶ ತಮಿಳುನಾಡಿಗೆ ಸೇರಿದ್ದೇ ಎಂಬ ಪ್ರಶ್ನೆಗೆ ಖಡಾಖಂಡಿತವಾಗಿಯೂ ಇಲ್ಲ ಎಂಬುದೇ ಉತ್ತರ. ಈ ಜಾಗ ಯಾರದ್ದೆಂಬುದು ಇನ್ನೂ ಇತ್ಯರ್ಥವಾಗಬೇಕಾದ ಸಂಗತಿಯಾಗಿದೆ. ಸತ್ಯ ಮರೆಯಾಗಿರುವಾಗ ಈ ಜಾಗವನ್ನು ತಮ್ಮದೆಂದು ಪ್ರತಿಪಾದಿಸಿ, ಅಲ್ಲಿ ಬೇಕಾಬಿಟ್ಟಿ ಕಾಮಗಾರಿ ಮಾಡುವುದು ತಮಿಳುನಾಡಿನ ಆಕ್ರಮಣಕಾರಿ ದುರ್ವರ್ತನೆಗೆ ಸಾಕ್ಷಿ.
ಹೊಗೇನಕಲ್ ವ್ಯಾಪ್ತಿಯಲ್ಲಿ ೬೫ ಕಿ.ಮೀ. ದೂರ ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗವಿದೆ. ಇಲ್ಲಿ ಯಾವ ಪ್ರದೇಶ ಕರ್ನಾಟಕದ್ದು, ಯಾವ ಭಾಗ ತಮಿಳುನಾಡಿನದ್ದು ಎಂಬುದು ಇನ್ನೂ ಗೊಂದಲವಿದೆ. ಯಾಕೆಂದರೆ ಬಹುತೇಕ ಭಾಗ ಅರಣ್ಯಪ್ರದೇಶವಾಗಿದ್ದು, ಆಸುಪಾಸು ವಾಸಿಸುವ ಜನ ಕನ್ನಡ-ತಮಿಳು ಎರಡನ್ನೂ ಬಲ್ಲವರಾಗಿದ್ದಾರೆ. ಗಡಿ ತಂಟೆ ವಿವಾದ ಭುಗಿಲೇಳಬೇಕಾದರೆ ಅದನ್ನು ಪ್ರತಿಪಾದಿಸಲು ಬೇಕಾದ ಯಾವುದೇ ಒಂದು ಭಾಷೆಗೆ ಸೇರಿದ ಸಮುದಾಯ ಈ ಗಡಿಭಾಗದುದ್ದಕ್ಕೂ ಇಲ್ಲ. ಇಲ್ಲದಿದ್ದರೆ ಇಷ್ಟೊತ್ತಿಗೆ ಇದು ಮತ್ತೊಂದು ಬೆಳಗಾವಿ, ಕಾಸರಗೋಡು ವಿವಾದದಂತಾಗುತ್ತಿತ್ತು.
ಭಾಷಾವಾರು ಪ್ರಾಂತ್ಯ ವಿಂಗಡಣೆ ಸಮಯದಲ್ಲೂ ಈ ಭಾಗ ಯಾರಿಗೆ ಸೇರಿದ್ದೆಂಬುದು ಕರಾರುವಾಕ್ಕಾಗಿ ನಿಷ್ಕರ್ಷೆಯಾಗಿಲ್ಲ. ಆದರೆ ಈವರೆಗೆ ಎಲ್ಲರೂ ಸಮ್ಮತಿಸಿರುವ ಬ್ರಿಟಿಷರ ಕಾಲದ ಭೂನಕಾಶೆಯನ್ನೇ ಈಗ ಸದ್ಯಕ್ಕಿರುವ ನಂಬಲಾರ್ಹ ದಾಖಲಾತಿ ಎಂದು ಹೇಳಲಾಗಿದೆ.
ಬ್ರಿಟಿಷ್ ಅಧಿಕಾರಿಗಳು ಆ ಕಾಲದಲ್ಲೇ ಕಾಡು ಮೇಡು ಸುತ್ತಾಡಿ, ದಟ್ಟ ಅರಣ್ಯಗಳಲ್ಲಿ ನಿರ್ಭಯವಾಗಿ ಸಂಚರಿಸಿ, ಇಂಚಿಂಚೂ ಭಾಗವನ್ನು ಅಳತೆ ಮಾಡಿದ್ದರು. ಯಾವ ಗುಡ್ಡ, ಯಾವ ನದಿ, ಯಾವ ಹಳ್ಳ, ಯಾವ ಬೆಟ್ಟ ಎಲ್ಲಿ ಬರುತ್ತದೆ. ಅದರ ಹೆಸರೇನು, ಅದು ಯಾವ ದಿಕ್ಕಿಗೆ ಇದೆ ಎಂಬುದನ್ನು ಗುರುತಿಸಿಕೊಂಡು ಕರಾರುವಕ್ ನಕ್ಷೆ ತಯಾರಿಸಿದ್ದರು. ಅಲ್ಲದೇ ತಾವು ಗುರುತಿಸಿದ ಗಡಿ ಭಾಗದಲ್ಲಿ ಬಾಂದ್‌ಗಳನ್ನು ನೆಟ್ಟಿದ್ದರು. ಅವೇ ಈಗಲೂ ಎಲ್ಲಾ ರಾಜ್ಯಗಳ ಗಡಿ ನಿಷ್ಕರ್ಷೆಗೆ ಆಧಾರ.
ಈ ನಕಾಶೆಯನ್ವಯ ಹೊಗೇನಕಲ್ ಪ್ರದೇಶ ಕರ್ನಾಟಕಕ್ಕೆ ಸೇರಿದ್ದೆಂದು ತಜ್ಞರು ಪ್ರತಿಪಾದಿಸುತ್ತಿದ್ದಾರೆ. ಆದರೆ ತಮಿಳುನಾಡು ಸರ್ಕಾರ ಇದನ್ನು ಸುತರಾಂ ಒಪ್ಪುತ್ತಿಲ್ಲ. ಈ ಭಾಗ ತಮ್ಮದೇ ಎಂದು ಅದು ಹಠಕ್ಕೆ ಕೂತಿದೆ.
ಇರುವ ದಾಖಲೆಯನ್ನು ಒಪ್ಪುವುದಿಲ್ಲವೆಂದ ಮೇಲೆ ಹೊಸ ಸಮೀಕ್ಷೆ ಮಾಡಲಾದರೂ ಕೇಂದ್ರಸರ್ಕಾರವನ್ನು ತಮಿಳುನಾಡು ಸರ್ಕಾರ ಒತ್ತಾಯಿಸಬೇಕು. ತಮಿಳುನಾಡಿಗಾದರೂ ಲಾಭವಾಗಿದೆ. ಅದಕ್ಕೆ ಸಮೀಕ್ಷೆ ಬೇಕಿಲ್ಲ. ಆದರೆ ನಮ್ಮ ರಾಜ್ಯದ ನಮ್ಮನ್ನು ಆಳುವ ಪ್ರಭೃತಿಗಳಿಗೆ ಏನಾಗಿದೆ. ಕಿಂಚಿತ್ತೂ ರಾಜ್ಯದ ಪರ ಕಾಳಜಿಯಿಲ್ಲದಂತೆ ವರ್ತಿಸುತ್ತಿರುವ ಸರ್ಕಾರಕ್ಕಂತೂ ನಾಚಿಕೆಯೇ ಇಲ್ಲವಾಗಿದೆ.
ತಮಿಳುನಾಡು ಅಕ್ರಮ ಕಾಮಗಾರಿ ಮಾಡುತ್ತಿದೆ ಎಂದು ಗೊತ್ತಾದ ಮೇಲಾದರೂ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಹಾಗೂ ಕಾವೇರಿ ನ್ಯಾಯಾಧೀಕರಣದ ಮೇಲೆ ಒತ್ತಡ ತರಬೇಕಿತ್ತು. ಆ ಕೆಲಸವನ್ನು ಇವತ್ತಿಗೂ ಮಾಡಿಲ್ಲ. ಕಾನೂನು ಸಚಿವ ಸುರೇಶಕುಮಾರ್‌ಗಾಗಲಿ, ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರಿಗಾಗಲಿ ಇದು ಬೇಕಾಗಿಲ್ಲ. ರಾಜ್ಯದ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡುವ ಮುಖ್ಯಮಂತ್ರಿ ಯಡಿಯೂರಪ್ಪನವರಾದರೂ ಇದರ ಬಗ್ಗೆ ಮಾತನಾಡಬೇಕಿತ್ತು. ಅವರು ರಾಜ್ಯದ ಅಭಿವೃದ್ಧಿಯಲ್ಲಿ ತನ್ಮಯರಾಗಿರುವುದರಿಂದ ಅವರಿಗೆ ಪುರುಸೊತ್ತಿಲ್ಲ.
ಇದು ಸದ್ಯದ ವಾಸ್ತವ. ಇನ್ನಾದರೂ ರಾಜ್ಯ ಸರ್ಕಾರ ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ನಡೆಸುತ್ತಿರುವ ಕಾಮಗಾರಿಯನ್ನು ನಿಲ್ಲಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಆಗಾಗ ರಾಜ್ಯದ ಕಾಂಗ್ರೆಸ್-ಜೆಡಿ ಎಸ್ ನಾಯಕರನ್ನು ತರಾಟೆಗೆ ತೆಗೆದುಕೊಳ್ಳಲು ತಮ್ಮ ಸಮಯವನ್ನು ವ್ಯಯಿಸುತ್ತಿರುವ ಕರ್ನಾಟಕದ ದೆಹಲಿ ಪ್ರತಿನಿಧಿ, ಸಚಿವ ಸ್ಥಾನಮಾನ ಹೊಂದಿರುವ ಧನಂಜಯಕುಮಾರ್ ಈಗಲಾದರೂ ತಮ್ಮ ಗೈರತ್ತು ತೋರಬೇಕು. ಕೈಯಲ್ಲಿ ಎಲೆಹಿಡಿದು ಆಟವಾಡುವುದನ್ನು ನಿಲ್ಲಿಸಿ, ದಾಖಲೆಗಳನ್ನು ಕೈಯಲ್ಲಿ ಹಿಡಿದು ದೆಹಲಿಯಲ್ಲಿ ಓಡಾಡಬೇಕು.
ಯುವಕರನ್ನು ಗೆಲ್ಲಿಸಿ, ದೆಹಲಿಯಲ್ಲಿ ರಾಜ್ಯದ ಧ್ವನಿ ಮೊಳಗಿಸುವೆ ಎಂದು ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ರಾಜ್ಯದ ಜನರ ಮುಂದೆ ಅಲವತ್ತು ಕೊಂಡಿದ್ದರು. ಶಿವಮೊಗ್ಗದಿಂದ ಅವರ ಮಗ ಬಿ.ವೈ.ರಾಘವೇಂದ್ರ, ಚಿತ್ರದುರ್ಗದಿಂದ ಜನಾರ್ದನಸ್ವಾಮಿ, ಮಂಗಳೂರಿನಿಂದ ನಳಿನಕುಮಾರ ಕಟೀಲು, ಗದಗದಿಂದ ಶಿವಕುಮಾರ ಉದಾಸಿ, ಬಾಗಲಕೋಟೆಯಿಂದ ಸುರೇಶ ಕತ್ತಿ, ಬಳ್ಳಾರಿಯಿಂದ ಶಾಂತ, ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್ ಹೀಗೆ ಹತ್ತಾರು ಮಂದಿ ಯುವ ಸಂಸದರನ್ನೇ ಬಿಜೆಪಿಯಿಂದ ಜನ ಆರಿಸಿದ್ದರು. ಆದರೆ ಅವರೆಲ್ಲಾ ಎಲ್ಲಿ ಹೋದರು? ಯುವಪಡೆಯೂ ಅವರ ಪಕ್ಷದ ಮಹಾನ್ ನಾಯಕ ಶ್ರೀಮಾನ್ ವಾಜಪೇಯಿಯವರಂತೆ ಮಲಗಿದರೆ?
ಅವರೆಲ್ಲಾ ಹೋಗಲಿ. ಉತ್ತಮ ಸಂಸದೀಯ ಪಟುಗಳೆಂದು, ರಾಜ್ಯದ ಹಿತ ಕಾಪಾಡುವುದು ತಮ್ಮಿಂದ ಮಾತ್ರ ಸಾಧ್ಯವೆಂದು ಬೊಬ್ಬಿರಿಯುವ ಅನಂತಕುಮಾರ್, ಡಿ.ವಿ. ಸದಾನಂದಗೌಡ, ಡಿ.ಬಿ. ಚಂದ್ರೇಗೌಡ ಇಂತಹ ನಾಯಕರಿಗೆಲ್ಲಾ ಏನಾಗಿದೆ. ಇವರಾದರೂ ಕರ್ನಾಟಕದ ಪರವಾಗಿ ಧ್ವನಿಯೆತ್ತಬೇಡವೆ? ರಾಜ್ಯ ಸರ್ಕಾರ ಬಲಿಷ್ಠವಾಗಿರುವಾಗ ಎಲ್ಲಾ ಸಂಸದರನ್ನೂ ಒಗ್ಗೂಡಿಸಿ ಹೊಗೇನಕಲ್‌ನಲ್ಲಿ ಕರ್ನಾಟಕದ ಅಸ್ತಿತ್ವವನ್ನು ಸ್ಥಾಪಿಸುವುದು ಯಾಕೆ ಸಾಧ್ಯವಾಗದು?
ಕಾಂಗ್ರೆಸ್-ಜೆಡಿಎಸ್ ಕತೆ
ಕಾಂಗ್ರೆಸ್ ಕತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ನಾಲ್ಕು ಜನ ಪ್ರಭಾವಿ ಸಚಿವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಅದರಲ್ಲೂ ಕಾನೂನು ಮತ್ತು ವಿದೇಶಾಂಗ ಖಾತೆ ಹಿಂದೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯಿಲಿ ಹಾಗೂ ಎಸ್.ಎಂ. ಕೃಷ್ಣ ಅವರ ಬಳಿಯೇ ಇದೆ. ಕೃಷ್ಣ ಅವರಂತೂ ವಿದೇಶ ಸುತ್ತಾಟದಲ್ಲೆ ಬ್ಯುಸಿಯಾಗಿದ್ದಾರೆ.
ಆದರೆ ಮೊಯಿಲಿ ಸಾಹೇಬರ ಕೈಯಲ್ಲಿ ಎಲ್ಲವೂ ಇದೆ. ಕಾನೂನು ಖಾತೆಯೇ ಅವರ ಬಳಿ ಇರುವುದರಿಂದ ಅವರು ಏನು ಬೇಕಾದರೂ ಮಾಡಬಲ್ಲರು. ಆ ಇಚ್ಛಾಶಕ್ತಿಯನ್ನು ಮೊಯಿಲಿ ತೋರಬೇಕು.
ಇನ್ನು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಸಂಸತ್‌ನಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತುವ ಗೈರತ್ತು ಇಲ್ಲವೆಂದ ಮೇಲೆ ಇವರು ಸಂಸದರಾಗಿ, ಸಚಿವರಾಗಿ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಜನ ಕೇಳಬೇಕಾಗಿದೆ.
ಜೆಡಿಎಸ್ ಪಾಳೆಯ ಕೂಡ ಕಡಿಮೆಯೇನಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಚೆಲುವರಾಯಸ್ವಾಮಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಸಂಸದರೆಂದರೆ ಕರ್ನಾಟಕದಲ್ಲಿ ರಾಜಕಾರಣ ಮಾಡುವುದು, ತಮ್ಮ ಪಕ್ಷವನ್ನು ತಳಮಟ್ಟದಲ್ಲಿ ಬೆಳೆಸುವುದು ಎಂದು ಇವರು ನಂಬಿಕೊಂಡಂತಿದೆ. ದೇವೇಗೌಡರ ಮಾತನ್ನು ಕೇಂದ್ರ ಸರ್ಕಾರ ತೆಗೆದು ಹಾಕುವುದಿಲ್ಲ. ರಾಜ್ಯದ ರಾಜಕಾರಣದಲ್ಲಿ ಹುಳಿ ಹಿಂಡಿ, ಕೌಟುಂಬಿಕ ರಾಜಕಾರಣ ಮಾಡುವ ಬದಲಿಗೆ ರಾಜ್ಯದ ಹಿತವನ್ನು ದೆಹಲಿಯಲ್ಲಾದರೂ ಕಾಪಾಡುವ ಜಾಣ್ಮೆ, ಕಾಳಜಿಯನ್ನು ಗೌಡರು ತೋರಬೇಕಿದೆ.
ಇದೆಲ್ಲವೂ ಹೌದು. ಇಂತಹ ಸಲಹೆಗಳನ್ನೆಲ್ಲಾ ತಮಿಳುನಾಡು ಸಂಸದರಿಗೆ ಹೇಳಿದ್ದರೆ ಖಂಡಿತಾ ಮಾಡುತ್ತಿದ್ದರು. ಏಕೆಂದರೆ ಅವರು ಯಾರೂ ಹೇಳದೆಯೇ ಮಾಡಿದ್ದಾರೆ. ಹೇಳಿದ್ದರೆ ಇನ್ನೂ ಎಷ್ಟು ಚೆನ್ನಾಗಿ ಮಾಡುತ್ತಿದ್ದರು. ರಾಜ್ಯದ ಜನ ಚಾಟಿ ಅಥವಾ ಬಾರುಕೋಲು ಕೈಗೆತ್ತಿಕೊಳ್ಳದೇ ರಾಜಕಾರಣಿಗಳಿಗೆ ಬುದ್ದಿ ಬರುವುದಿಲ್ಲ. ಯಾಕೆಂದರೆ ಎಮ್ಮೆ ಚರ್ಮ ಯಾವಾಗಲೂ ದಪ್ಪ ನೋಡಿ. ಏನು ಮಾಡುವುದು. ಎಲ್ಲಾ ನಮ್ಮ ಹಣೆಬರೆಹ. ಯಾರೋ ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಗೀಚಿ ಹೋಗಿ ಬಿಟ್ಟಿದ್ದಾರೆ... ಅದನ್ನು ಅಳಿಸುವುದು ಯಾರು?
ಸೌಹಾರ್ದ ಎಲ್ಲಿ?
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಲು ಯಡಿಯೂರಪ್ಪ ಆರೇಳು ತಿಂಗಳ ಹಿಂದೆ ಮುಂದಾಗಿದ್ದರು. ೧೯೯೨ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಿದ್ಧಗೊಂಡು ಸ್ವಾಭಿಮಾನಿ ಕನ್ನಡಿಗರ ಪ್ರತಿಭಟನೆ ಕಾರಣಕ್ಕೆ ನಿಂತು ಹೋಗಿದ್ದ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಯಡಿಯೂರಪ್ಪ ಮುಂದಾಗಿದ್ದಾಗ ಬಹುತೇಕ ಸಂಘಟನೆಗಳು ವಿರೋಧಿಸಿದ್ದವು. ಕರ್ನಾಟಕ ರಕ್ಷಣಾ ವೇದಿಕೆ, ವಾಟಾಳ್ ನಾಗರಾಜ್ ಎಲ್ಲರೂ ಪ್ರತಿಭಟನೆ ನಡೆಸಿ, ಕಾರ್ಯಕ್ರಮ ನಡೆಯಗೊಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಆದರೆ ಅವರನ್ನೆಲ್ಲಾ ಬಂಧಿಸಿ ಮೊಕದ್ದಮೆ ದಾಖಲಿಸಿದ ರಾಜ್ಯ ಸರ್ಕಾರ ತಿರುವಳ್ಳುವರ್ ಪ್ರತಿಮೆಯನ್ನು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಂದಲೇ ಅನಾವರಣ ಮಾಡಿಸಿತ್ತು. ಇದಕ್ಕೂ ಮೊದಲೇ ತಮಿಳುನಾಡಿನಲ್ಲಿ ಯಡಿಯೂರಪ್ಪನವರು ಸರ್ವಜ್ಞ ಪ್ರತಿಮೆ ಅನಾವರಣ ಮಾಡಿದ್ದರು.
ಆಗ ಮುಖ್ಯಮಂತ್ರಿ ಯಡಿಯೂರಪ್ಪನವರು ಎರಡೂ ರಾಜ್ಯದ ಮಧ್ಯೆ ಸೌಹಾರ್ದ ಸಂಬಂಧಕ್ಕೆ, ಬಹಳ ವರ್ಷಗಳ ವ್ಯಾಜ್ಯ ಬಗೆಹರಿಸಿಕೊಳ್ಳುವುದಕ್ಕೆ, ಶಾಂತಿ-ಸಹಬಾಳ್ವೆಗೆ ತಿರುವಳ್ಳುವರ್ ಪ್ರತಿಮೆ ಅನಾವರಣ ದಾರಿ ಮಾಡಕೊಡಲಿದೆ ಎಂದಿದ್ದರು. ಕರುಣಾನಿಧಿ-ಯಡಿಯೂರಪ್ಪನವರು ಒಟ್ಟಿಗೆ ಉಂಡು ಕೈತೊಳೆದಿದ್ದರು. ಈಗ ಆ ಸೌಹಾರ್ದ, ವ್ಯಾಜ್ಯ ಪರಿಹಾರದ ತರ್ಕ ಎಲ್ಲಿ ಹೋಗಿದೆ ಎಂಬ ಪ್ರಶ್ನೆಗೆ ಯಡಿಯೂರಪ್ಪನವರೇ ಉತ್ತರಿಸಬೇಕು. ಈಗಲಾದರೂ ತಿರುವಳ್ಳುವರ್ ಪ್ರತಿಮೆ ಅನಾವರಣದ ಪ್ರಸಂಗವನ್ನು ಕರುಣಾನಿಧಿಗೆ ನೆನಪಿಸಿ, ಹೊಗೇನಕಲ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಯಡಿಯೂರಪ್ಪ ನೋಡಿ ಕೊಳ್ಳ ಬೇಕು.
ಚಾರುದತ್ತ
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
May
(20)
- ಹೊಸ ಕನಸುಗಳತ್ತ...
- No title
- No title
- ಗುರುವಿನ ಗುರು, ಮುನ್ನಡೆಸುವವರು ಯಾರು?
- ಮಹಾತಾತ್ವಿಕ ಪ್ರೊ.ನಂಜುಂಡಸ್ವಾಮಿ
- ಕನ್ನಡದ ಬೆಳವಣಿಗೆಯ ಹೊಸ ಸಾಧ್ಯತೆಗಳು
- ನಾಡು ನುಡಿಯ ಪ್ರೀತಿ ಮತ್ತು ಅಭಿಮಾನ
- ಶರಣರ ಸಮಾಜಮುಖಿ ಚಿಂತನೆ ಒಂದು ಅವಲೋಕನ
- ಕರ್ನಾಟಕ ಮಹಾರಾಷ್ಟ್ರ ಅನುಬಂಧ
- ಹೊಗೇನಕಲ್‌ನಲ್ಲಿ ತಮಿಳು ಹೊಗೆ
- No title
- ಕನ್ನಡಕ್ಕೆ ಕೈ ಎತ್ತಿ: ಜೈಲೆ ಗತಿ
- ದಕ್ಕದ ಶಾಸ್ತ್ರೀಯ ಸ್ಥಾನ-ಸಿಗದ ಮಾನ
- ಉದ್ಯಮ ಉದ್ಯೋಗ ಮತ್ತು ಕನ್ನಡ
- ಕನ್ನಡದ ರಕ್ಷೆ ನಾರಾಯಣಗೌಡರ ಪರೀಕ್ಷೆ
- ಜನಭಾಷೆ ಸ್ಥಿತಿ ಮತ್ತು ಗತಿ
- ಪೂರ್ಣಚಂದ್ರ ತೇಜಸ್ವಿ
- ನಮ್ಮವರೇ ಹದಹಾಕಿ ತಿವಿದರೇನು ಹೂವೆ?
- ಸವಾಲುಗಳ ನಡುವೆ ದಿಟ್ಟ ಹೆಜ್ಜೆ...
- ಕರವೇ ನಲ್ನುಡಿ ಲೋಕಾರ್ಪಣೆ ಬನ್ನಿ
-
▼
May
(20)
No comments:
Post a Comment