Friday, May 7, 2010

ಗುರುವಿನ ಗುರು, ಮುನ್ನಡೆಸುವವರು ಯಾರು?




ಅದು 1991 ಕಾವೇರಿ ನದಿ ನೀರಿಗಾಗಿ ನಡೆಯುತ್ತಿದ್ದ ಹೋರಾಟ ಗಂಭೀರ ಸ್ವರೂಪ ಪಡೆದಿತ್ತು. ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ ಚಳವಳಿ ರಾಜ್ಯಾದಾದ್ಯಂತ ಕಾವು ಸೃಷ್ಟಿಸಿತ್ತು. ಅದು ಬೆಂಗಳೂರಿನ ಸದಾಶಿವನಗರದ ಬಂಗಲೆಯನ್ನೂ ಸುತ್ತುವರೆದಿತ್ತು. ಹಾಗಾಗಿ ಕನ್ನಡದ ಮೇರು ನಟ ಡಾ.ರಾಜ್್ಕುಮಾರ್್ ಅವರ ಮೇಲೂ ಕಾವೇರಿ ನದಿ ನೀರಿನ ಸಿಂಚನವಾಗಿತ್ತು. ಸಂದರ್ಭ ಬಂದಾಗಲೆಲ್ಲಾ ಪಂಚೆ ಎತ್ತಿ ಕಟ್ಟಿ ನಿಂತು ನೆರೆದಿದ್ದವರನ್ನು ಹುರಿದುಂಬಿಸುತ್ತಿದ್ದ ರಾಜ್. ಅಂದು ಕೂಡ ಮೈಕೊಡವಿ ನಿಂತರು. ಅಷ್ಟರಲ್ಲಿ ಬೆಂಗಳೂರು ಬಂದ್್ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದವು. ನಾಳೆ ಬಂದ್ ಎನ್ನುವಂತಿರುವಾಗ, ರಾಜ್ ಬಾಯಿಬಿಟ್ಟರು. 'ಅಗತ್ಯ ಬಿದ್ದರೆ, ನಾನು ಬೀದಿಗಿಳಿಯುತ್ತೇನೆ' ಎನ್ನುವ ಅವರ ಮಾತು ಸಂಜೆ ಪತ್ರಿಕೆಯೊಂದರ ಹೆಡ್್ಲೈನ್ ಆಗಿ ಕಾಣಿಸಿಕೊಂಡಿತ್ತು. ಸೈನ್ಯಾಧಿಕಾರಿಯ ಸೂಚನೆಗಾಗಿ ಕಾದು ಕುಳಿತ್ತಿದ್ದ ಸೈನಿಕರಂತೆ ತುದಿಗಾಲಲ್ಲಿ ಕಾಯುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಆಕ್ರೋಶಕ್ಕೆ ಆನೆ ಬಲ ಬಂದಂತಾಯಿತು. ಮುಂದಿನ ನಾಲ್ಕು ದಿನ ಕರ್ನಾಟಕ ರಾಜ್ಯ. ಅದರಲ್ಲೂ ಬೆಂಗಳೂರು ರಣರಂಗವಾಗಿ ಮಾರ್ಪಟ್ಟಿತು. ರಾಜ್ ಕುಮಾರ್ ಅವರ ಪ್ರಭಾವಳಿ ಹಾಗಿತ್ತು.
ಸಿನಿಮಾ ನಟರಾಗಿ ಕಾಲಿರಿಸಿದರೂ ಕಾಲಂತರದಲ್ಲಿ ಇಡೀ ನಾಡಿಗೆ ನಾಯಕರಾಗಿ ಬೆಳೆದ ಅವರ ಬೆಳವಣಿಗೆಯೇ ಅಚ್ಚರಿ ಮೂಡಿಸುತ್ತದೆ. ರಾಜಕೀಯ ನಾಯಕರ ಕಿತ್ತಾಟಗಳಲ್ಲಿ ಹಂಚಿ ಹೋಗಿದ್ದ ಜನರಿಗೊಬ್ಬ ಸರ್ವಾನುಮತದ ನಾಯಕ ಬೇಕಾಗಿತ್ತು. ಜಾತಿಯ ಜಂಜಾಟದ ನಡುವೆ ಕರಗಿ ಹೋಗಿದ್ದ ಕನ್ನಡಿಗರಿಗೊಬ್ಬ ದಳಪತಿಯ ಅವಶ್ಯಕತೆಯಿತ್ತು. ಧರ್ಮದ ಹೆಸರಿನಲ್ಲಿ ದಾರಿ ದಪ್ಪಿದ ಯುವಕರಿಗೂ ಕಣ್ಮಣಿ ಬೇಕಾಗಿತ್ತು. ಅವರೆಲ್ಲರ ಪ್ರತಿನಿಧಿಯಾಗಿ ರಾಜ್ ಮೆರೆದಿದ್ದು ಈಗ ಇತಿಹಾಸ. ಅಂತಹ ಇತಿಹಾಸದ ಪುಟಗಳಲ್ಲಿ ೧೯೯೧ರ ಘಟನೆಗಳೂ ಕರಗಿ ಹೋಗಿವೆ. ಆದರೆ, ರಾಜ್ ನೀಡಿದ ಹೇಳಿಕೆ ಮಾತ್ರ ಇಂದಿಗೂ ಪ್ರತಿಧ್ವನಿಸುತ್ತಿದೆ. ನಾನೂ ಕೂಡ ಬೀದಿಗಿಳಿಯುತ್ತೇನೆ.
ರಾಜ್‌ಕುಮಾರ್ ಅವರಿಗಿದ್ದ ಜನಬೆಂಬಲ ಮೊದಲು ಬೆಳಕಿಗೆ ಬಂದದ್ದು ಗೋಕಾಕ್ ಚಳವಳಿಯಲ್ಲಿ. ರಾಜ್ ಆಗಿನ್ನು ಚೆನ್ನೈನಲ್ಲೇ ನೆಲೆಸಿದ್ದರು. ಇತ್ತ ಬೆಂಗಳೂರಿನಲ್ಲಿ ದಿನೇದಿನೇ ಹೋರಾಟದ ರೂಪುರೇಷೆಗಳು ಸಿದ್ಧಗೊಳ್ಳತೊಡಗಿದವು. ಕೇವಲ ಬೆರಳಣಿಕೆಯ ಹೋರಾಟಗಾರರು ಮತ್ತು ಸಾಹಿತಿಗಳು ಸೇರಿ ಹುಟ್ಟಿಹಾಕಿದ ಸಮರಕ್ಕೆ ನಿಜವಾದ ಕಾವು ಬಂದಿದ್ದು ರಾಜ್ ಆಗಮನದಿಂದ. ಸಾಹಿತಿಗಳ ಪ್ರೀತಿಯ ಒತ್ತಾಯಕ್ಕೆ ಮಣಿದ ರಾಜ್ ಗೋಕಾಕ್ ಚಳವಳಿಗೆ ಧುಮುಕಿದರು. ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಕನ್ನಡಿಗರ ಎದೆಯಲ್ಲಿ ಹುದುಗಿದ್ದ ಹೋರಾಟದ ಕಿಡಿಯನ್ನು ಬಡಿದೆಬ್ಬಿಸಿದರು.
ರಾಜ್ ಹೋದೆಡೆಯಲ್ಲೆಲ್ಲಾ ಸೇರುತ್ತಿದ್ದ ಜನಸಾಗರವನ್ನು ನೋಡಿ ಅಂದಿನ ಸರ್ಕಾರವೇ ಬೆಚ್ಚಿ ಬಿದ್ದಿತ್ತು. ಆ ನಂತರ ಸರ್ಕಾರವೇ ಬದಲಾಯಿತು. ರಾಜ್ ಮುಂದಿನ ಮುಖ್ಯಮಂತ್ರಿ ಎಂಬಂತೆ ಬಿಂಬಿಸಲ್ಪಟ್ಟರು. ಅದನ್ನು ಕೇಳಿದ ಕೇಂದ್ರ ಸರ್ಕಾರದ ದೊರೆಸ್ವಾಮಿಗಳು ನಡುಗಿ ಹೋದರು. ರಾಜ್‌ರನ್ನು ರಾಜಿ ಮಾಡಿಸುವ ಹುನ್ನಾರಗಳು ನಡೆದವು. ರಾಜ್ ರಾಜಿಯೂ ಮಾಡಿಕೊಳ್ಳಲಿಲ್ಲ. ರಾಜನಾಗುವ ಆಸೆಯನ್ನು ಅಂಟಿಸಿಕೊಳ್ಳಲಿಲ್ಲ. ಆದರೂ, ಅವರ ಕನ್ನಡಿಗರ ಮನೆ ದೇವರಾದರು. ಹೃದಯ ಸಿಂಹಾಸನಧೀರರಾದರು. ಅದು ಅವರಿಗೆ ದಕ್ಕಿದ್ದಾದರೂ ಹೇಗೆ? ನಗುಮುಖದ ರಾಜ್, ಮುಗ್ದಮನಸ್ಸಿನ ರಾಜ್ ಆ ಎತ್ತರಕ್ಕೆ ಏರಿದ್ದಾದರೂ ಹೇಗೆ?

ಅದು ಮುಳ್ಳಿನ ಹಾದಿ
ಸಾಮಾನ್ಯ ಹಳ್ಳಿಯಿಂದ ಬಂದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಓದಿದ್ದು ಮೂರೇ ಕ್ಲಾಸು. ಆದರೆ ಅವರ ಬಾಲ್ಯ ಮಾತ್ರ ಫಸ್ಟ್‌ಕ್ಲಾಸು. ಬಡತನದ ದಿನಗಳನ್ನು ಅವರು ಹೇಳಿಕೊಂಡು ಆನಂದಪಡುತ್ತಿದ್ದರು. ಅವರ ಜೀವನ ಪ್ರೀತಿಗೆ ಅನೇಕ ಘಟನೆಗಳು ಸಾಕ್ಷಿಯಾಗಿವೆ. ತಂದೆಯಿಂದ ಬಳವಳಿಯಾಗಿ ಪಡೆದ ನಟನೆ ಮತ್ತು ಗಾಯನವನ್ನು ಶ್ರದ್ಧಾ-ಭಕ್ತಿಯಿಂದ ಮುಂದುವರೆಸಿದರು. ಬಾಲನಟನಾಗಿಯೇ ಕಾಲಿರಿಸಿದ ಮುತ್ತುರಾಜ್ ನಟನೆಯನ್ನು ಉದರ ಪೋಷಣೆಯಾಗಿ ನೆಚ್ಚಿಕೊಂಡರು.
ಸಿನಿಮಾ ಆಗಿನ್ನೂ ಕಣ್ಣುಬಿಡುತ್ತಿದ್ದ ಕಾಲ. ಎಲ್ಲರಂತೆ ನಮ್ಮ ಮುತ್ತುವಿಗೂ ಹೀರೋ ಆಗುವ ಆಸೆ. ಒಂದೆರಡು ಸಲ ಅದು ಬಾಗಿಲ ತನಕ ಬಂದು ವಾಪಸ್ಸು ಹೋಗಿತ್ತು. ಆದರೆ ಅದೊಂದು ದಿನ ಬೇಡರ ಕಣ್ಣಪ್ಪನಾಗುವ ಮೂಲಕ ಕನ್ನಡಿಗರ ಹೃದಯದ ನಾಡಿ ಮಿಡಿತ ಹಿಡಿಯುವ ಕೆಲಸಕ್ಕಿಳಿದರು. ಮೊದಲ ಚಿತ್ರ ಹೆಸರು ತಂದುಕೊಟ್ಟರೂ ಅದೃಷ್ಟವಿನ್ನು ದೂರವೇ ಇತ್ತು. ಆಗಿನ ಮೂರು ಕೋಟಿ ಕನ್ನಡಿಗರಿಗೊಬ್ಬ ಆರಾಧ್ಯದೈವ ಬೇಕಿತ್ತು ಎಂಬ ಸತ್ಯ ಅರಿತಿದ್ದ ತಾಯಿ ಭುವನೇಶ್ವರಿ, ರಾಜ್‌ಕುಮಾರ್ ಅವರ ಪ್ರತಿಭೆಯನ್ನು ಕಂಡು ಕೈ ಹಿಡಿದು ನಡೆಸಿದಳು. ರಾಜ್ ಅದೇ ಶ್ರದ್ಧೆ ಮತ್ತು ಭಕ್ತಿಯಿಂದ ಒಂದೊಂದೇ ಮೆಟ್ಟಿಲು ಏರತೊಡಗಿದರು.

ಮನೆ ಮಾತಾದ ಮುತ್ತು
ಭಕ್ತಿ ಪ್ರಧಾನ ಚಿತ್ರದ ಮೂಲಕ ಕಾಲಿರಿಸಿದ್ದರಿಂದ ಧಾರ್ಮಿಕ ಮನಸ್ಸುಗಳಿಗೆ ಹತ್ತಿರವಾದರು. ಹಳ್ಳಿ ಹೈದನಾಗಿ ಗ್ರಾಮೀಣ ಜನರ ಮನೆ ಮಾತಾದರು. ಆದರೆ ಯಾವಾಗ ರಣಧೀರ ಕಂಠೀರವನಾಗಿ ಘರ್ಜಿಸಿದರೋ, ಇಮ್ಮಡಿ ಪುಲಕೇಶಿಯಾಗಿ ಮಿಂಚಿದರೋ ನೋಡಿ, ಅಲ್ಲಿಂದ ರಾಜ್‌ಗೆ ಬೇರೆ ರೀತಿಯ ಸ್ಥಾನ ದೊರೆಯಿತು. ಇತಿಹಾಸ ಪುರುಷರನ್ನು ರಾಜ್ ಅವರಲ್ಲೇ ಕಾಣುವ ಪ್ರಯತ್ನಗಳು ನಡೆದವು. ಇದ್ದರೆ ಹೀಗಿರಬೇಕೆಂದು ಆದರ್ಶ ಪಾತ್ರಗಳೇ ತಾವಾಗಿ ಮೆರೆದಾಗಲಂತೂ ಕನ್ನಡದ ಜನ ರಾಜ್ ಅವರನ್ನು ತಮ್ಮ ಮನೆಯ ಸದಸ್ಯ ಎಂಬಂತೆ ಪ್ರೀತಿಸತೊಡಗಿದರು.
ಕೆಂಪೇಗೌಡ ರಸ್ತೆಯ ಕಿಡಿ:
ಇಡೀ ಕನ್ನಡ ಚಿತ್ರರಂಗವೇ ಮದರಾಸಿನಲ್ಲಿ ಬೀಡುಬಿಟ್ಟಿದ್ದ ಕಾಲವದು. ಹಾಗಾಗಿ ತಮಿಳು ಸಿನಿಮಾಗಳು ರಾಜಾರೋಷವಾಗಿ ಕೆಂಪೇಗೌಡ ರಸ್ತೆಯಲ್ಲಿ ತೆರೆ ಕಾಣುತ್ತಿದ್ದವು. ಅದೊಂದು ದಿನ ರಾಜ್ ಮತ್ತು ಎಂಜಿಆರ್ ನಟಿಸಿದ ಚಿತ್ರಗಳು ತೆರೆ ಕಂಡಿದ್ದವು. ಅವರವರ ಅಭಿಮಾನಿಗಳು ತಮ್ಮ ತಮ್ಮ ಆರಾಧ್ಯ ದೈವಗಳ ಕಟೌಟ್ ಮತ್ತು ಸ್ಟಾರ್‌ಗಳ ಹೊತ್ತು ಮೆರವಣಿಗೆ ಹೊರಟರು. ಅದೊಂದು ಕೆಟ್ಟ ಘಳಿಗೆಯಲ್ಲಿ ಎರಡೂ ಪಂಗಡಗಳು ಎದುರಾದವು. ಅಷ್ಟರಲ್ಲಿ ಅಲ್ಲೇ ಗುಂಪಿನಲ್ಲಿದ್ದ ಎಂಜಿಆರ್ ಅಭಿಮಾನಿಯೊಬ್ಬ ರಾಜ್ ಅಭಿಮಾನಿಗಳನ್ನು ಹೊಲಸು ರೀತಿಯಲ್ಲಿ ಕೆಣಕ್ಕಿದ್ದಾನೆ. ಬಿಡುವುದುಂಟೇ..! ಅಟ್ಟಾಡಿಸಿಕೊಂಡು ಬಡಿದು ಕನ್ನಡಿಗರ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ ಆ ಸಂದರ್ಭ ಮುಂದೊಂದು ದಿನ ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ.
ಅದೇನೇ ಆಗಲಿ, ಆ ಮೂಲಕ ಕನ್ನಡತನ, ಅದರಲ್ಲೂ ಸಿನಿಮಾ ಅಭಿಮಾನಿಗಳಲ್ಲಿ ತಾಯಿ ಭಾಷೆಯ ಬಗ್ಗೆ ಪ್ರೀತಿ ಮೂಡಿದ್ದನ್ನಂತೂ ತಳ್ಳಿ ಹಾಕುವಂತಿಲ್ಲ. ಹಾಗೇ ಆರಂಭಗೊಂಡ ಗಲಾಟೆ ಮುಂದೊಂದು ದಿನ ಕೆಂಪೇಗೌಡ ರಸ್ತೆಯಲ್ಲಿ ತಮಿಳು ಚಿತ್ರಗಳು ತೆರೆ ಕಾಣಲೇಬಾರದೆಂಬ ಹೊಸ ನಿಯಮಕ್ಕೆ ಕಾರಣವಾಗಿದ್ದಂತೂ ಹೌದು.
ಅದರಿಂದ ಎರಡು ರೀತಿಯ ಬೆಳವಣಿಗೆಗಳಾದವು. ರಾಜ್ ಅಭಿಮಾನಿಗಳು ಸಂಘಟಿತರಾದರು. ಸಂಘಟಿತರಾದವರೆಲ್ಲಾ ಕನ್ನಡದ ಮೇಲಿನ ಅಭಿಮಾನದಿಂದ ಸೇರುತ್ತಿದ್ದರು. ರಾಜ್ ಮತ್ತು ಕನ್ನಡ ಎರಡೂ ಒಂದೇ ಎಂಬಂತೆ ಬಿಂಬಿಸಲ್ಪಡುತ್ತಿದ್ದವು. ಅದು ರಾಜ್‌ಗೆ ಸುಲಭವಾಗಿ ದಕ್ಕಿದ್ದಲ್ಲ. ಮೊದಲೇ ಹೇಳಿದಂತೆ ಹಳ್ಳಿ ಹೈದನಾಗಿ, ಜೇಮ್ಸ್‌ಬಾಂಡ್ ಆಗಿ, ಭಕ್ತಿರಸದ ಮಹಾನ್ ಭಕ್ತನಾಗಿ, ಪುಲಕೇಶಿಯಾಗಿ, ರಣಧೀರನಾಗಿ ಶ್ರೀ ಕೃಷ್ಣದೇವರಾಯನಾಗಿ, ಮಯೂರನಾಗಿ ನಟಿಸುವುದೆಂದರೆ ಅದು ಊಹಿಸಿಕೊಳ್ಳುವಷ್ಟು ಸುಲಭದ ಮಾತಾಗಿರಲಿಲ್ಲ. ರಾಜ್ ಅದಕ್ಕಾಗಿ ಎಷ್ಟು ಅದೃಷ್ಟ ಮಾಡಿದ್ದರೋ ಏನೋ? ಗೊತ್ತಿಲ್ಲ. ಆದರೆ ತಪಸ್ಸು ಮಾಡಿದಂತೂ ಹೌದು.
ಕೆಲಸವನ್ನೇ ಪೂಜಿಸುತ್ತಿದ್ದ ರಾಜ್, ಪ್ರತಿ ಪಾತ್ರಕ್ಕೂ ನ್ಯಾಯ ಒದಗಿಸುವತ್ತ ಗಮನ ನೀಡುತ್ತಿದ್ದರು. ಹಣದ ಹಿಂದೆ ಬೀಳದೆ ಗುಣವನ್ನು ಬೆಳೆಸಿಕೊಂಡರು. ಆ ಮೂಲಕ ಬೇರೆಯವರಿಗೂ ಹಂಚಿದರು. ಈ ಎಲ್ಲಾ ಕಾರಣಗಳಿಂದಲೇ ರಾಜ್‌ಕುಮಾರ್ ದಿನದಿಂದ ದಿನಕ್ಕೆ ಎತ್ತರೆತ್ತರಕ್ಕೆ ಬೆಳೆಯುತ್ತಾ ಹೋದರು. ಆರಂಭದಲ್ಲಿ ಕಾಲೆಳೆದವರೂ ಅನಂತರ ಹೊಗಳುವಷ್ಟು ಹಾದಿ ಸವೆಸಿದ ರಾಜ್, ಮತ್ತೆ ತಿರುಗಿ ನೋಡಲೇ ಇಲ್ಲ.
ಗೋಕಾಕ್ ಎಂಬ ಮಹಾನ್ ಚಳವಳಿ:
ಪರಭಾಷೆಯ ಆಕ್ರಮಣಕ್ಕೆ ಕಡಿವಾಣ ಹಾಕಲು ಮತ್ತು ಪರಭಾಷಿಗರ ಉಪಟಳವನ್ನು ಹತ್ತಿಕ್ಕಲು ವೇದಿಕೆ ಬೇಕಿದ್ದ ಕಾಲವದು. ಬೆರಳೆಣಿಕೆಯ ಸಾಹಿತಿಗಳು ಮತ್ತು ಸಂಘಟಕರು ಸೇರಿ ಹುಟ್ಟು ಹಾಕಿದ ಗೋಕಾಕ್ ಚಳವಳಿಗೆ ಅದಾಗಲೇ ಸಾಹಿತಿಗಳು, ಬುದ್ಧಿಜೀವಿಗಳು ಚಾಲನೆ ನೀಡಿದ್ದರು. ಹೇಗಾದರೂ ಮಾಡಿ ದೊಡ್ಡ ಮಟ್ಟದ ಸಂಚಲನ ಸೃಷ್ಠಿಸಿ ಹೋರಾಟದಲ್ಲಿ ಜಯ ಸಾಧಿಸಲೇಬೇಕೆಂದು ನಿರ್ಧರಿಸಿದ್ದ ಚಳಿವಳಿಗಾರರಿಗೆ ರಾಜ್ ಹೆಸರು ನೆನಪಾಯಿತು. ಅವರು ತಡಮಾಡಲಿಲ್ಲ. ಚೆನ್ನೈನಲ್ಲಿದ್ದ ರಾಜ್‌ರನ್ನು ನೇರವಾಗಿ ಹೋರಾಟದ ಅಂಗಳಕ್ಕೆ ಕರೆದು ತಂದರು. ತಣ್ಣಗಿದ್ದ ಚಳವಳಿ ರಾಜ್ ಆಗಮನದಿಂದ ಬೃಹತ್ತಾಗಿ ಬೆಳೆಯತೊಡಗಿತು. ರಾಜ್ ಕೂಡ ಅದೇ ಹುರುಪಿನಲ್ಲಿ ರಾಜ್ಯದ ಮೂಲೆಮೂಲೆಗಳು ಹೋಗಿ ಬಂದರು. ಹೋದೆಡೆಯಲೆಲ್ಲಾ ಅದ್ಭುತ ಸ್ವಾಗತ ಕೋರುತ್ತಿದ್ದ ಜನ ನಿಮ್ಮೊಂದಿಗೆ ನಾವಿದ್ದೇವೆ ಎಂದು ಕೂಗಿ ಬೆಂಬಲಿಸುತ್ತಿದ್ದರು. ಅಂದು ರಾಜ್ ಜೊತೆಗೆ ಇಡೀ ಚಿತ್ರೋದ್ಯಮವೇ ಹಿಂಬಾಲಿಸಿತ್ತು ಎಂಬುದನ್ನು ಮರೆಯುವಂತಿಲ್ಲ.
ಸಾವಿರಾರು ಸಂಘಗಳು:
ಸಾಹಿತಿಗಳ ಮಾತಿಗೆ ಮಣಿದ ರಾಜ್ ಹೋರಾಟಕ್ಕೆ ಧುಮುಕ್ಕಿದ್ದೇನೋ ನಿಜ. ಆದರೆ ರಾಜ್‌ಗೆ ತಮ್ಮ ಶಕ್ತಿಯ ಬಗ್ಗೆ ಅರಿವಿತ್ತೆ...? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಆದರೆ, ತಮಗೇ ಅರಿವಿಲ್ಲದೆ ರಾಜ್, ಬೃಹತ್ ಸಂಘಟನೆಯ ಹುಟ್ಟಿಗೆ ಕಾರಣಕರ್ತರಾದರು. ರಾಜ್‌ಕುಮಾರ್ ಅಭಿಮಾನಿ ಸಂಘ ಹುಟ್ಟಿಕೊಂಡಿದ್ದಷ್ಟೇ ಅಲ್ಲ. ರಾಜ್ಯದ ಮೂಲೆ ಮೂಲೆಯಲ್ಲಿ ಶಾಖೆಗಳು ಬಾಗಿಲು ತೆರೆದವು. ಅಭಿಮಾನಿಗಳು ತಾಯಿ ನೆಲದ ಋಣ ತೀರಿಸುವ ಸಲುವಾಗಿ ಟೊಂಕ ಕಟ್ಟಿ ನಿಂತರು. ನೋಡನೋಡುತ್ತಲೇ ಸಾವಿರಾರು ಕನ್ನಡ ಕಲಿಗಳು ಹುಟ್ಟಿಕೊಂಡರು.
ಯಾವುದೇ ಭಾಷೆಯಲ್ಲೂ ಇಲ್ಲ
ಸಿನಿಮಾ ಮತ್ತು ತಾಯಿ ಭಾಷೆಯನ್ನು ಒಟ್ಟಿಗೆ ಬೆಳೆಸಿದ ಉದಾಹರಣೆಗಳೂ ಬೇರೆ ಎಲ್ಲೂ ಕಾಣಸಿಗುವುದಿಲ್ಲ. ಎಂಜಿಆರ್, ಎನ್‌ಟಿಆರ್ ಅವರುಗಳು ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದರೆಂಬುದು ನಿಜವಾದರೂ, ನಿಸ್ವಾರ್ಥವಾಗಿ ರಾಜ್ಯವನ್ನು ಪ್ರೀತಿಸಿದ ಎತ್ತರಕ್ಕೆ ಅವರ‍್ಯಾರು ಬೆಳೆಯಲಿಲ್ಲ ಎಂಬುದು ಅಷ್ಟೇ ಸತ್ಯ. ಅಷ್ಟೇ ಅಲ್ಲ ಎಷ್ಟೇ ಜನಪ್ರಿಯತೆಯಿದ್ದಾಗಲೂ, ಏನೇ ಬೇಡಿಕೆ ಇದ್ದರೂ ಪರಭಾಷೆಯ ಆಹ್ವಾನವನ್ನು ನಿರಾಕರಿಸಿದ ಮಹಾನ್ ಯೋಗಿ ರಾಜ್.

ಒತ್ತಾಯದ ಮೇರೆಗೆ...
ನಟನೆಯಿಂದ ದೂರ ಸರಿದ ರಾಜ್ ಅವರನ್ನು ಅಭಿಮಾನಿಗಳು ಹೋರಾಟದ ಮೂಲಕ ಕರೆತರಬೇಕಾಯಿತು. ಇನ್ನು ಸಾಕು ಎಂದು ಮನೆಯಲ್ಲಿದ್ದ ರಾಜ್, ಅಭಿಮಾನಿಗಳ ಪ್ರೀತಿಗೆ ಮಣಿದು ಮತ್ತೆ ಬಣ್ಣ ಹಚ್ಚಿದರು. ಜೀವನ ಚೈತ್ರ ಬಿಡುಗಡೆಯಾದಾಗ ಅಭಿಮಾನಿಗಳ ಸಂಭ್ರಮ ಹೇಳತೀರದು. ಹಾಗೆ ಬೆರತು ಹೋಗಿದ್ದ ರಾಜ್ ವೀರಪ್ಪನ್‌ನಿಂದ ಅಪಹರಣಕ್ಕೊಳಗಾದಾಗಲಂತೂ ಅಭಿಮಾನಿಗಳು ಚಡಪಡಿಸಿ ಹೋದರು. ೧೦೩ದಿನ ರಾಜ್ ಜೊತೆಗೆ ಅಭಿಮಾನಿಗಳು ಕಣ್ಣುಮುಚ್ಚಲಿಲ್ಲ. ಕಡೆಗೊಂದು ದಿನ ತಮ್ಮ ಕರ್ತವ್ಯ ಮುಗಿಸಿ ಎದ್ದು ಹೋದ ರಾಜ್ ತಮ್ಮ ವೃತ್ತಿ ಮತ್ತು ತಾಯಿ ನೆಲದ ಋಣ ತೀರಿಸಿದ ಸಂತೃಪ್ತಿಯಲ್ಲಿ ಅಭಿಮಾನಿಗಳನ್ನು ತೊರೆದರು.

ಅರಸನಿಲ್ಲದ ನಾಡಲ್ಲಿ....
ರಾಜ್ ಇಹಲೋಕ ತ್ಯಜಿಸಿ ನಾಲ್ಕು ವರ್ಷಗಳು ಕಳೆದಿವೆ. ಈ ನಡುವೆ ಕನ್ನಡ ಚಿತ್ರರಂಗ ಬಾಗಿಲು ಮುಚ್ಚುವ ಬಗ್ಗೆ ಊಹಾಪೋಹವೆದ್ದಿದೆ. ಸುಭಿಕ್ಷವಾಗಿದ್ದ ಸಿನಿಮಾರಂಗ ಹೀಗೇಕಾಯಿತು. ರಾಜ್ ಕಟ್ಟಿ ಬೆಳೆಸಿದ ಚಿತ್ರರಂಗವನ್ನು ಉಳಿಸಿಕೊಳ್ಳುವಲ್ಲಿ ಏಕೆ ವಿಫಲತೆ ಕಾಣುತ್ತಿದೆ? ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಅನಾಥವಾಗಿ ಬಿದ್ದಿದೆ. ರಾಜ್ ಹೋದ ಮೇಲೆ ಅವರ ಸ್ಥಾನ ವಿಷ್ಣು ತುಂಬುತ್ತಾರಾ? ಎಂಬ ಮಾತು ಏಳುತ್ತಿರುವಾಗಲೇ ಅವರು ಹೊರಟು ಹೋದರು. ಇನ್ನು ಅಂಬಿ, ಅತ್ತ ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಇರುವುದರಿಂದ ನಾಯಕರಾಗುವುದು ಕಷ್ಟ. ರಾಜ್‌ಗಿದ್ದ ಹಿಡಿತ ರಾಜ್ ಜತೆಯಲ್ಲೇ ಕೊನೆಯಾಗಿದ್ದು ಮಾತ್ರ ದುರಂತವೇ ಸರಿ.
ನಂತರದ ತಲೆಮಾರಿನ ನಟರು ತಮ್ಮ ಸಿನಿಮಾಗಳನ್ನೇ ನೆಟ್ಟಗೆ ಮಾಡಲಾಗುತ್ತಿಲ್ಲ. ಅಂತಹುದರಲ್ಲಿ ಚಿತ್ರರಂಗವನ್ನು ಮುನ್ನಡೆಸುವ ಮಾತಂತೂ ದೂರವೇ. ಕಾಸು ಮಾಡೋದಷ್ಟೇ ಕಾಯಕ ಎಂಬತ್ತಾಗಿರುವ ಇವರುಗಳ ಬಳಿ ಯಾರು ನಮ್ಮ ನಾಯಕ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟಸಾಧ್ಯ.
ಸ್ವಾರಸ್ಯವಿಲ್ಲದ ಸಿನಿಮಾಗಳು....ಇಲ್ಲಿ ಮಚ್ಚು ಮಾತ್ರ ಮಾತನಾಡುತ್ತವೆ:
ನಮ್ಮ ಸಂಸಾರ, ನಂದಗೋಕುಲ, ಬಂಗಾರದ ಮನುಷ್ಯ, ಶಂಕರ್‌ಗುರು, ಜೀವನ ಚೈತ್ರದಂತಹ ಸಿನಿಮಾ ಮಾಡದಿದ್ದರೂ, ಕನಿಷ್ಠ ಈ ನಾಡಿನ ಸೊಗಡನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಾದರೂ ಯೋಚಿಸಬೇಡವೇ. ಸಮಾಜ ಹುಟ್ಟಿಕೊಂಡಾಗಲೇ ಅದರ ಜತೆಗೆ ಕೊಳಕು ಸೇರಿಕೊಳ್ಳುತ್ತದೆ. ಅದು ರಾಜ್‌ಕುಮಾರ್ ಕಾಲದಲ್ಲೂ ಇತ್ತು. ಆದರೆ, ಈವತ್ತೇನಾಗಿದೆಯೋ ನೋಡಿ. ಮಾತೆತ್ತಿದ್ದರೆ ಎಲ್ಲಾ ಹೀರೋಗಳು ಮಚ್ಚು ಹಿಡಿಯುತ್ತಾರೆ. ರಕ್ತ ಹರಿಸುತ್ತಾರೆ. ದ್ವೇಷದ ಚಿತ್ರ ನೋಡುವವರು ಪ್ರೀತಿಯನ್ನು ಕಲಿಯುವುದಾದರೂ ಹೇಗೆ? ಇನ್ನು ಸಹಬಾಳ್ವೆಯಂತೂ ದೂರದ ಮಾತು. ರಾಜ್ ತಮ್ಮ ಕೊನೆಯ ದಿನಗಳಲ್ಲೂ ಒಡಹುಟ್ಟಿದವರು ರೀತಿಯ ಮನೆ ಉಳಿಸುವ, ಆ ಮೂಲಕ ನಾಡು ಕಟ್ಟುವ ಚಿತ್ರಗಳನ್ನಷ್ಟೇ ಮಾಡಿದರು ಎಂಬುದನ್ನು ಗಮನಿಸಬೇಕು.
ನಿರ್ದೇಶಕರ ಪೈಕಿ ಇಂಗ್ಲಿಷ್ ಚಿತ್ರಗಳಿಂದ ಕದ್ದವರು ಮೇಲ್ಪಂಕ್ತಿಯಲ್ಲಿದ್ದಾರೆ. ಆದರೆ ಅವರ ಸ್ಟಾರ್‌ಗಿರಿಯ ಯೋಗದ ಜೊತೆಗೆ ಸವಾಲೆನಿಸುವ ಚಿತ್ರ ಕೂಡುವ ಇರಾದೆ ಇಲ್ಲ. ಕೆಲವರು ರೀಮಿಕ್ಸ್‌ನಲ್ಲಿ ಬ್ಯುಸಿ. ಮತ್ತೆ ಕೆಲವರು ರಿಮೇಕ್‌ನಲ್ಲಿ. ಅವರಿಗೆ ಉದ್ಯಮ ಕಾಸು ಕೊಡುವ ಯಂತ್ರವಾಗಿ ಮಾತ್ರ ಕಾಣುತ್ತಿದೆ. ಅದಕ್ಕೆ ನಿರ್ಮಾಪಕರ ಕೊಡುಗೆಯೂ ದೊಡ್ಡ ಮಟ್ಟದಲ್ಲಿದೆ.
ರಾಜ್‌ಕುಮಾರ್ ಕೂಡ ಇವರಂತೆಯೇ ಯೋಚನೆ ಮಾಡಿದ್ದರೆ ಚಿತ್ರರಂಗ ಈ ಮಟ್ಟಕ್ಕೆ ಬೆಳೆಯುತ್ತಿತ್ತೇ..? ಕನ್ನಡದ ಕಹಳೆ ಮೊಳಗುತ್ತಿತ್ತೆ. ಹೌದು, ಬದಲಾದ ಕಾಲಕ್ಕೆ ಒಂದಷ್ಟು ಬದಲಾವಣೆ ಬೇಕೆಂಬುದೇನೋ ನಿಜ. ಆದರೆ, ಭವಿಷ್ಯವನ್ನೇ ಮರೆತರೆ ಹೇಗೆ, ಮಚ್ಚು-ಮಳೆ ಎಂಬ ಸಿದ್ಧ ಸೂತ್ರದಿಂದ ಹೊರಬಂದು ಮಾನವೀಯ ಮೌಲ್ಯಗಳ ಜೊತೆಗೆ, ಭಾಂದವ್ಯದ ಬೆಸುಗೆ ಬೆರೆಸಿ ಸಾಮಾಜಿಕ ಕಳಕಳಿಯನ್ನು ತುಂಬುವ ಕೆಲಸ ಸಿನಿಮಾದವರಿಂದ ಆಗಬೇಕಿದೆ. ಸಿನಿಮಾ ಮಾಧ್ಯಮದಷ್ಟು ಪ್ರಭಾವಶಾಲಿ ಮಾಧ್ಯಮ ಮತ್ತೊಂದಿಲ್ಲ. ಅದನ್ನು ಮರೆತು ನಡೆದರೆ ಮುಂದೊಂದು ದಿನ ಈ ಹೋರೋಯಿಸಂ ಮತ್ತು ಸಿನಿಮಾ ಎರಡನ್ನು ಜನ ದೂರವಿಟ್ಟರೆ ಆಶ್ಚರ್ಯವಿಲ್ಲ.
ನಾವು ಏನನ್ನು ಬಿತ್ತುತ್ತೇವೋ ಅದನ್ನೇ ಬೆಳೆಯುತ್ತೇವೆ. ಅಂದು ನೆಟ್ಟ ಗಿಡದ ಹಣ್ಣು ತಿನ್ನುತ್ತಿರುವ ಫಲಾನುಭವಿಗಳೇ ನಾಳೆಯ ಬಗ್ಗೆಯೂ ಒಂದಷ್ಟು ಚಿಂತಿಸಿ. ನೀವೂ ಸ್ವಲ್ಪ ಆರೋಗ್ಯಕರ ಗಿಡಗಳನ್ನು ನೆಡಿ. ಅವು ಹೆಮ್ಮರವಾಗಿ ಮುಂದಿನ ಪೀಳಿಗೆಗೆ ಆರೋಗ್ಯದ ಹಣ್ಣು ನೀಡಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಇಂದೇ ಕಾಯೋನ್ಮುಖರಾಗಿ ರಾಜ್ ಹಾಕಿ ಕೊಟ್ಟ ಹಾದಿಯಲ್ಲಿ ಹೆಜ್ಜೆ ಹಾಕಿ.

- ಯತಿರಾಜ್ ಕೆ.

No comments:

Post a Comment

ಹಿಂದಿನ ಬರೆಹಗಳು