ದಿನನಿತ್ಯ ನನ್ನ ಕಾರ್ಯಕರ್ತರು ಸಂಸತ್ ಸದಸ್ಯರ ನಿವಾಸಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದಾರೆ. ಹೊಗೇನಕಲ್ ವಿಷಯದಲ್ಲಿ ಅವರು ಯಾಕೆ ಬಾಯಿಬಿಡುತ್ತಿಲ್ಲ ಎಂಬುದು ನಮ್ಮ ಪ್ರಶ್ನೆ. ‘ಯಾರ ಮನೆ ಮುಂದಾದರೂ ಪ್ರತಿಭಟನೆ ಮಾಡಿ, ಇವರೊಬ್ಬರ ಮನೆ ಮುಂದೆ ಬೇಡ’ ಎಂದು ಸಂಸದರ ಆಪ್ತ ಕಾರ್ಯದರ್ಶಿಯೊಬ್ಬರು ನನ್ನ ಬಳಿ ಹೇಳಿಕೊಂಡರು. ‘ನನಗೆ ಎಲ್ಲರೂ ಒಂದೇ, ಪ್ರತಿಭಟನೆ ನಡೆದೇ ನಡೆಯುತ್ತದೆ, ನಾಡಿನ ಗಡಿಯನ್ನು ಹೊರರಾಜ್ಯದವರು ಹುರಿದು ಮುಕ್ಕುತ್ತಿದ್ದರೂ ನೋಡಿ ಸುಮ್ಮನಿರುವವರು ಕನ್ನಡಿಗರ ಕಣ್ಣಲ್ಲಿ ಅಪರಾಧಿಗಳು’ ಎಂದು ಪ್ರತ್ಯುತ್ತರ ನೀಡಿದೆ.
ನಮ್ಮ ಪ್ರತಿಭಟನೆ ವೈಯಕ್ತಿಕವಾಗಿ ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ. ಕನ್ನಡಿಗರ ವಿರುದ್ಧವಾಗಿ ಯಾವ ವ್ಯಕ್ತಿ-ಸಂಸ್ಥೆ ಇರುತ್ತದೋ ಅಲ್ಲಿ ನಾವು ಕಾಣಿಸಿಕೊಳ್ಳುತ್ತೇವೆ, ಪ್ರತಿಭಟಿಸುತ್ತೇವೆ. ಕನ್ನಡದ ವಿಷಯದಲ್ಲಿ ಕನ್ನಡಿಗರೇ ದ್ರೋಹವೆಸಗಿದರೂ ನಾವು ಸುಮ್ಮನಿರುವುದಿಲ್ಲ. ಕನ್ನಡಿಗರನ್ನು ವಂಚಿಸುವ ವ್ಯಕ್ತಿ ಎಷ್ಟೇ ದೊಡ್ಡವನಾದರೂ, ಎಂಥದೇ ಅಧಿಕಾರ ಸ್ಥಾನದಲ್ಲಿದ್ದರೂ ನಾವು ಬಿಡುವುದಿಲ್ಲ.
*****
ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ಕಾಮಗಾರಿ ಆರಂಭಿಸಿಯಾಗಿದೆ. ಯಡಿಯೂರಪ್ಪನವರು ವಿಧಾನಸಭಾ ಚುನಾವಣೆಗೂ ಮುನ್ನ ಹೊಗೇನಕಲ್‌ಗೆ ಹೋಗಿ, ದೋಣಿ ವಿಹಾರ ನಡೆಸಿ ಯಾವುದೇ ಕಾರಣಕ್ಕೂ ಹೊಗೇನಕಲ್ ಕೈ ತಪ್ಪಿ ಹೋಗಲು ಬಿಡುವುದಿಲ್ಲ ಎಂದು ಘೋಷಿಸಿದ್ದರು. ಅವರ ಅಂದಿನ ವೀರಾವೇಶದ ಮಾತುಗಳನ್ನು ಕೇಳಿ ಸಂಭ್ರಮಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೆ. ಕನ್ನಡಿಗರ ಹಿತಾಸಕ್ತಿಗಳನ್ನು ಕಾಪಾಡುವ ಜನನಾಯಕ ಕಡೆಗೂ ಉದ್ಭವಿಸಿದರಲ್ಲ ಎಂಬ ರೋಮಾಂಚನವೂ ಕನ್ನಡಿಗರಿಗೆ ಆಗಿತ್ತು.
ಆದರೆ ಯಡಿಯೂರಪ್ಪನವರು ಮಾಡಿದ್ದೇನು? ಅವರು ಮಾತನಾಡುತ್ತಿರುವುದೇನು?
ಯಡಿಯೂರಪ್ಪನವರ ದರ್ಬಾರು ಆರಂಭಗೊಳ್ಳುವುದಕ್ಕೂ ಮುನ್ನ ರಾಜ್ಯಪಾಲರ ಆಡಳಿತ ಜಾರಿಯಲ್ಲಿದ್ದಾಗಲೇ ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ಯೋಜನೆ ಆರಂಭಿಸುವ ಪ್ರಯತ್ನ ನಡೆಸಿತ್ತು. ಅದರ ವಿರುದ್ಧವಾಗಿ ಅಂದು ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಹೋರಾಟವನ್ನು ನಾವು ಸಂಘಟಿಸಿದೆವು. ಕಡೆಗೆ ‘ಕರ್ನಾಟಕ ಬಂದ್’ಗೂ ಕರೆ ನೀಡಿದ್ದೆವು. ೧೯೯೧ರ ಕಾವೇರಿ ಗಲಭೆ ಮರುಕಳಿಸುವಂಥ ವಾತಾವರಣ ಬೆಂಗಳೂರಿನಲ್ಲಿ ಸೃಷ್ಟಿಯಾಗಿತ್ತು. ಆಗ ಅನಿವಾರ್ಯವಾಗಿ ಸ್ವತಃ ಕರುಣಾನಿಧಿಯೇ ಹೇಳಿಕೆ ನೀಡಿ, ಕರ್ನಾಟಕದಲ್ಲಿ ಜನಪ್ರಿಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ನಂತರ ಯೋಜನೆ ಆರಂಭಿಸುತ್ತೇವೆ ಎಂದಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡಪರ ಸಂಘಟನೆಗಳ ಹೋರಾಟದಿಂದಲೇ ಅಂದು ಆರಂಭಗೊಳ್ಳಬೇಕಿದ್ದ ಯೋಜನೆ ಸ್ಥಗಿತಗೊಂಡಿತ್ತು.
ತರುವಾಯ ಕರ್ನಾಟಕದಲ್ಲಿ ಚುನಾವಣೆ ನಡೆದು, ಯಡಿಯೂರಪ್ಪ ಅಧಿಕಾರಕ್ಕೆ ಬಂದರು. ಯಡಿಯೂರಪ್ಪನವರೇ ಸ್ವತಃ ಚೈನ್ನೈಗೆ ತೆರಳಿ ಕರುಣಾನಿಧಿಯವರನ್ನು ರಹಸ್ಯ ಭೇಟಿ ಮಾಡಿ ಬಂದರು. ಅಲ್ಲಿ ಹೊಗೇನಕಲ್ ವಿಷಯವೇನು ಚರ್ಚೆಯಾಗಿರಲಿಲ್ಲ. ಯಡಿಯೂರಪ್ಪನವರು ಬಹಳ ಆಸ್ಥೆಯಿಂದ ಹೋಗಿ ಕರುಣಾನಿಧಿಯವರನ್ನು ಭೇಟಿಯಾಗಿದ್ದು, ಬೆಂಗಳೂರಿನ ಭಾಷಾಂಧ, ಭಯೋತ್ಪಾದಕರ ಬೆಂಬಲಿಗ ತಮಿಳಿಗರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಲೇ ಹೊರತು, ಕನ್ನಡ-ಕರ್ನಾಟಕದ ಹಿತಾಸಕ್ತಿಯ ರಕ್ಷಣೆಗಾಗಿ ಅಲ್ಲ.
ಈ ದೇಶದ ಮಾಜಿ ಪ್ರಧಾನಿಯನ್ನು ಕೊಂದ ಎಲ್‌ಟಿಟಿಇ ಸಂಘಟನೆಯ ಬೆಂಬಲಿಗರು ಹಲಸೂರು ಕೆರೆ ಆವರಣದಲ್ಲಿ ತಮಿಳುಕವಿ ತಿರುವಳ್ಳುವರ್ ಪ್ರತಿಮೆಯನ್ನು ತಂದು ಸ್ಥಾಪಿಸಿ, ಕನ್ನಡಿಗರ ವಿರುದ್ಧ ತೊಡೆತಟ್ಟಿ ನಿಂತಿದ್ದರು. ಬೆಂಗಳೂರಿನಲ್ಲಿ ತಮಿಳು ಸಾಮ್ರಾಜ್ಯವನ್ನು ಸ್ಥಾಪಿಸಿ, ಕನ್ನಡಿಗರ ವಿರುದ್ಧ ತಮಿಳರನ್ನು ಛೂ ಬಿಡುವ ಆ ಪ್ರಯತ್ನವನ್ನು ಅಂದೇ ಕನ್ನಡ ಸಂಘಸಂಸ್ಥೆಗಳು ವಿಫಲಗೊಳಿಸಿದ್ದವು. ನ್ಯಾಯಾಲಯವೂ ಕೂಡ ಈ ನ್ಯಾಯಬಾಹಿರ ಕಾರ್ಯಕ್ಕೆ ತಡೆಯಾಜ್ಞೆಯನ್ನು ನೀಡಿತ್ತು. ಹೀಗಾಗಿ ಭಾಷಾಂಧ ತಮಿಳರ ದುರಾಚಾರದ ಪ್ರತೀಕವಾಗಿ ನಮಗೆ ಕಾಣುತ್ತಿದ್ದ ತಿರುವಳ್ಳುವರ್ ಪ್ರತಿಮೆ ಮುಸುಕು ಹೊದ್ದುಕೊಂಡು ವರ್ಷಗಳಿಂದ ಅಜ್ಞಾತವಾಸದಲ್ಲಿತ್ತು.
*****
ತಮಿಳುನಾಡು ಮುಖ್ಯಮಂತ್ರಿಯನ್ನು ಸ್ವಯಂಸ್ಫೂರ್ತಿಯಿಂದ ಭೇಟಿಯಾದ ಸಂದರ್ಭದಲ್ಲಿ ಪದೇ ಪದೇ ಕನ್ನಡಿಗರ ಕಾಲುಕೆರೆದುಕೊಂಡು ಬಂದು ವ್ಯಾಜ್ಯಗಳನ್ನು ಹುಟ್ಟುಹಾಕುವ ಅಲ್ಲಿನ ಜನರೊಂದಿಗೆ ನಮ್ಮ ಮುಖ್ಯಮಂತ್ರಿ ಒಂದಿಷ್ಟು ನಿಷ್ಠುರವಾಗಿ ಮಾತನಾಡಬಹುದಿತ್ತು. ಹೊಗೇನಕಲ್‌ನಲ್ಲಿ ಜಂಟಿ ಸಮೀಕ್ಷೆ ನಡೆಸಿ, ನಂತರ ನಾವು ಜಂಟಿಯಾಗಿಯೇ ಕುಡಿಯುವ ನೀರು, ಜಲವಿದ್ಯುತ್ ಯೋಜನೆ ಆರಂಭಿಸೋಣ ಎಂದು ನಮ್ಮ ಮುಖ್ಯಮಂತ್ರಿಗಳು ಕೇಳಬಹುದಿತ್ತು, ಆದರೆ ಕೇಳಲಿಲ್ಲ. ಕನ್ನಡಕ್ಕೆ ದೊರಕಿರುವ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ತಪ್ಪಿಸಲೆಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಹೂಡಲಾಗಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳಲು ಸಂಬಂಧಪಟ್ಟವರ ಮನವೊಲಿಸಿ ಎಂದು ಕೇಳಬಹುದಿತ್ತು, ಆದರೂ ಕೇಳಲಿಲ್ಲ. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಅನ್ಯಾಯದಿಂದ ಕೂಡಿದೆ, ಕರ್ನಾಟಕ ಇಷ್ಟು ನೀರನ್ನು ಕೊಡಲು ಸಾಧ್ಯವೇ ಇಲ್ಲ ಎಂದು ತಮಿಳುನಾಡು ರೈತರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮಾತುಕತೆ ಮೂಲಕ ವೈಜ್ಞಾನಿಕವಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಕೇಳಬಹುದಿತ್ತು, ಆದರೂ ಕೇಳಲಿಲ್ಲ. ಕೆರೆ ಹೂಳೆತ್ತುವುದಕ್ಕೂ ತಕರಾರು ಮಾಡುವ ತಮಿಳುನಾಡು ಶಿವನಸಮುದ್ರ ಯೋಜನೆ ಬಗ್ಗೆ ಅಪಸ್ವರ ಎತ್ತಿರುವುದನ್ನು ಪ್ರಸ್ತಾಪಿಸಿ, ಇಂಥ ಕುಚೇಷ್ಟೆಯನ್ನು ಕೈಬಿಡಿ ಎಂದಾದರೂ ಕರುಣಾನಿಧಿಯವರನ್ನು ಕೇಳಬಹುದಿತ್ತು, ಆದರೂ ಕೇಳಲಿಲ್ಲ.
ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಇದ್ಯಾವುದೂ ಮುಖ್ಯವಾಗಿರಲೇ ಇಲ್ಲ. ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ತಮಿಳಿಗರ ಮತಗಳನ್ನು ಪಡೆಯುವುದು ಹೇಗೆ ಎಂಬುದಷ್ಟೇ ಮುಖ್ಯವಾಗಿತ್ತು. ದಿನನಿತ್ಯ ವಲಸೆ ಬರುವ ತಮಿಳಿಗರನ್ನು ಮೊದಲಿನಿಂದ ಮುದ್ದುಮಾಡಿ ಮತಬ್ಯಾಂಕ್ ಮಾಡಿಟ್ಟುಕೊಂಡಿದ್ದು ಕಾಂಗ್ರೆಸ್ ಪಕ್ಷ. ಇತ್ತೀಚಿಗೆ ದೇವೇಗೌಡರು ಸಹ ‘ದರಿದ್ರ ನಾರಾಯಣ ರ‍್ಯಾಲಿ’ಯ ಮೂಲಕ ಕೊಳಗೇರಿಗಳಲ್ಲಿರುವ ತಮಿಳಿಗರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಬಿಜೆಪಿಗೆ ತಮಿಳು ಮತಗಳನ್ನು ಪಡೆಯಲು ಮಾರ್ಗವೊಂದು ಬೇಕಾಗಿತ್ತು. ಅದಕ್ಕಾಗಿಯೇ ನಮ್ಮ ಮುಖ್ಯಮಂತ್ರಿಗಳು, ಕರುಣಾನಿಧಿ ಬಳಿ ಮಂಡಿಯೂರಿ ನಿಂತರು.
ಇದನ್ನೆಲ್ಲ ನಾವು ಅಂದೇ ಹೇಳಿದ್ದೆವು, ಆದರೆ ಬುದ್ಧಿಜೀವಿಗಳು, ಸಾಹಿತಿಗಳೂ ಸಹ ಯಡಿಯೂರಪ್ಪ ಪರವಾಗಿಯೇ ನಿಂತರು. ನಮ್ಮನ್ನು ಹಿಂದಿನ ದಿನವೇ ವಿಧವಿಧದ ಪ್ರಕರಣಗಳನ್ನು ಹೂಡಿ ಬಂಧಿಸಲಾಯಿತು. ತಿರುವಳ್ಳುವರ್ ಪ್ರತಿಮೆ ಅನಾವರಣ ಸಾಂಗವಾಗಿ ನಡೆಯಿತು. ಯಡಿಯೂರಪ್ಪ ಪಾಲಿಗೆ ಕರುಣಾನಿಧಿ ಪೆರಿಯಣ್ಣ ಆದರೆ, ಕರುಣಾನಿಧಿಯವರಿಗೆ ಯಡಿಯೂರಪ್ಪ ಚಿನ್ನತಂಬಿ ಆದರು.
*****
ಈಗ ಬೆನ್ನಿಗೆ ಚೂರಿ ಬಿದ್ದಿದೆ. ಕರ್ನಾಟಕದಲ್ಲಿ ಜನಪ್ರಿಯ ಸರ್ಕಾರ ಬಂದ ನಂತರ ಮಾತುಕತೆ ನಡೆಸಿ ನಂತರ ಹೊಗೇನಕಲ್ ಯೋಜನೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದ ಕರುಣಾನಿಧಿ ಮಾತು ಮರೆತಿದ್ದಾರೆ. ಆ ಮಾತನ್ನು ನೆನಪಿಸಬೇಕಾದ ಅವರ ಚಿನ್ನತಂಬಿ ಯಡಿಯೂರಪ್ಪ ಅವರಿಗೂ ಇತ್ತೀಚಿಗೆ ಯಾವುದೋ ವಿಸ್ಮೃತಿ ಆವರಿಸಿಕೊಂಡಿದೆ. ಹೊಗೇನಕಲ್‌ನಲ್ಲಿ ದೋಣಿ ವಿಹಾರ ಮಾಡುವಾಗ ತಾವೇ ಆಡಿದ್ದ ಮಾತುಗಳನ್ನೇ ಅವರು ಮರೆತುಬಿಟ್ಟಿದ್ದಾರೆ.
ಹಾಗೆ ನೋಡಿದರೆ, ಕಳೆದ ಕೇಂದ್ರ ಬಜೆಟ್‌ನಲ್ಲಿ ಹೊಗೇನಕಲ್ ಯೋಜನೆಗೆ ಕೇಂದ್ರ ಸರ್ಕಾರವೇ ಬೆಂಬಲ ಸೂಚಿಸುವ ಹಾಗೆ ತಮಿಳುನಾಡು ಸರ್ಕಾರ ಜಪಾನ್‌ನ ಹಣಕಾಸು ಸಂಸ್ಥೆಯೊಂದರಿಂದ ಯೋಜನೆಗೆ ಪಡೆಯಲು ಉದ್ದೇಶಿಸಿರುವ ಸಾಲಕ್ಕೆ ‘ಭದ್ರತಾ ಪತ್ರ’ ನೀಡಿತ್ತು. ಆಗಲೇ ಯಡಿಯೂರಪ್ಪ ತನ್ನ ಪೆರಿಯಣ್ಣನೊಂದಿಗೆ ಮಾತನಾಡಬೇಕಿತ್ತು, ಆದರೆ ಅವರಿಗೆ ಅದು ಅರ್ಥವಾಗಲಿಲ್ಲವೇನೋ?
ಇದೀಗ ತಮಿಳುನಾಡು ಸರ್ಕಾರ ಹೊಗೇನಕಲ್ ಯೋಜನೆಗೆ ೪೦೦ ಕೋಟಿ ರೂ. ಬಿಡುಗಡೆ ಮಾಡಿದೆ. ಕೆಲಸ ಆರಂಭಗೊಂಡಿದೆ. ಈಗಲಾದರೂ ಬಾಯಿ ಬಿಡುತ್ತಾರಾ ಎಂದರೆ ಯಡಿಯೂರಪ್ಪನವರು ತೀರಾ ನಿರ್ಲಕ್ಷ್ಯದ ಧಾಟಿಯಲ್ಲಿ ಜಂಟಿ ಸರ್ವೆ ಆಗಲಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎನ್ನುತ್ತಿದ್ದಾರೆಯೇ ಹೊರತು, ನಾಡ ರಕ್ಷಣೆ ಮಾಡಬೇಕಾದ ಮುಖ್ಯಮಂತ್ರಿಯ ಹಾಗೆ ವರ್ತಿಸುತ್ತಲೇ ಇಲ್ಲ.
*****
ಕಡೇ ಪಕ್ಷ ನಮ್ಮ ಸಂಸದರಾದರೂ ಬಾಯಿ ಬಿಡುತ್ತಿದ್ದಾರೆಯೇ? ರಾಜ್ಯದ ಗಡಿಯನ್ನೇ ತಮಿಳುನಾಡು ಸರ್ಕಾರ ನುಂಗುತ್ತಿದ್ದರೂ ನಮ್ಮ ಸಂಸದರಿಗೆ ಏನೂ ಅನ್ನಿಸುತ್ತಿಲ್ಲವೇಕೆ? ಕೇಂದ್ರ ಸಚಿವ ಸಂಪುಟದಲ್ಲಿ ನಾಲ್ಕು ಮಂದಿ ಕ್ಯಾಬಿನೆಟ್ ಸಚಿವರಿದ್ದರೂ ಅವರೂ ಸಹ ಮಿಸುಕಾಡುತ್ತಿಲ್ಲ.
ಈ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಾಗುವುದು ಕುವೆಂಪು ಅವರ ಮಾತುಗಳು: ‘ಕತ್ತಿ ವಿದೇಶಿಯಾದರೇನು ನೋವೆ? ನಮ್ಮವರೇ ಹದ ಹಾಕಿ ತಿವಿದರದು ಹೂವೇ?
ಅನಿವಾರ್ಯವಾಗಿ ನಾವು ನಮ್ಮವರ ವಿರುದ್ಧವೇ ಹೋರಾಟ ನಡೆಸಬೇಕಿದೆ.
ನಮ್ಮ ಪ್ರತಿಭಟನೆಗಳಿಂದಾಗಿಯಾದರೂ ನಮ್ಮ ಸಂಸದರು, ಶಾಸಕರು, ಜನಪ್ರತಿನಿಧಿಗಳು ಕಣ್ತೆರೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಕರ್ನಾಟಕದ ನುಡಿ-ನೆಲ-ಜಲದ ವಿಷಯದಲ್ಲಿ ಸಮಸ್ಯೆಗಳು ಉದ್ಭವಿಸಿದಾಗಲೆಲ್ಲ ನಮ್ಮ ರಾಜಕಾರಣಿಗಳು ಜಾಣ ಕುರುಡು, ಜಾಣ ಕಿವುಡನ್ನು ಪ್ರದರ್ಶಿಸುವುದು ಅಭ್ಯಾಸವಾಗಿ ಹೋಗಿದೆ. ಹೈಕಮಾಂಡ್ ಗುಲಾಮಗಿರಿಗೆ ಸಿಲುಕಿರುವ ನಮ್ಮ ಜನನಾಯಕರು ಜನದ್ರೋಹದ ಕೆಲಸವನ್ನು ಮುಂದುವರೆಸಿಕೊಂಡೇ ಬಂದಿದ್ದಾರೆ. ಈ ಹೀನ ಪರಂಪರೆ ಕೊನೆಗೊಳ್ಳಲೇಬೇಕಿದೆ. ನಮ್ಮ ಜನಪ್ರತಿನಿಧಿಗಳು ಇನ್ನಾದರೂ ನಾಡು-ನುಡಿಯ ವಿಷಯದಲ್ಲಿ ಧ್ವನಿಯೆತ್ತುವುದನ್ನು ಅಭ್ಯಾಸ ಮಾಡಿಕೊಳ್ಳಲಿ, ಇಲ್ಲದಿದ್ದರೆ ಅವರ ಮೂಗು ಹಿಡಿದು ಬಾಯಿಬಿಡಿಸುವುದು ನಮಗೆ ಗೊತ್ತಿದೆ, ಆ ಕೆಲಸವನ್ನು ನಾವು ಮಾಡುತ್ತೇವೆ.
*****
ನಮ್ಮ ರಾಜ್ಯದ ಪ್ರದೇಶವಾದ ಹೊಗೇನಕಲ್‌ನಲ್ಲಿ ಅಕ್ರಮವಾಗಿ ತಮಿಳುನಾಡು ಸರ್ಕಾರ ಕುಡಿಯುವ ನೀರು ಯೋಜನೆ ಆರಂಭಿಸಿರುವ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿಯೂ ಹೊರಬಂದಿದೆ.
ತಮಿಳುನಾಡಿನ ನಿಯೋಗವೊಂದನ್ನು ನನ್ನನ್ನು ಭೇಟಿಯಾಗಿ ಮನವಿ ಪತ್ರವೊಂದನ್ನು ನೀಡಿದೆ. ಇದೇ ಫೆಬ್ರವರಿ ೧ರಂದು ತಮಿಳುನಾಡು ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ ತಮಿಳುನಾಡಿನ ಎಲ್ಲ ಶಾಲೆಗಳಲ್ಲೂ ತಮಿಳು ಪ್ರಥಮ ಭಾಷೆಯಾಗಲಿದೆ, ಇಂಗ್ಲಿಷ್ ಎರಡನೇ ಭಾಷೆಯಾಗಲಿದೆ. ಅದರರ್ಥ ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ, ತೆಲುಗರಿಗೆ, ಮಲಯಾಳಿಗಳಿಗೆ, ಉರ್ದು ಭಾಷಿಕರು ತಮ್ಮ ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸುವಂತೆ ಇಲ್ಲ! ತಮಿಳುನಾಡಿನ ಕೃಷ್ಣಗಿರಿ, ಈರೋಡ್ ಜಿಲ್ಲೆಗಳಲ್ಲಿ ಒಟ್ಟು ೬೨ ಕನ್ನಡ ಶಾಲೆಗಳಿವೆ. ಚೆನ್ನೈನಲ್ಲಿ ಎರಡು ಶಾಲೆಗಳಿವೆ. ಈ ಎಲ್ಲ ಶಾಲೆಗಳೂ ಸಹ ಒಂದೇ ಮುಚ್ಚಿಹೋಗುತ್ತವೆ ಅಥವಾ ತಮಿಳು ಶಾಲೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಇನ್ನು ಸಾಮಾನ್ಯ ತಮಿಳು ಶಾಲೆಗಳಲ್ಲೂ ಸಹ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಯುವಂತೆಯೂ ಇಲ್ಲ.
ನನ್ನನ್ನು ಭೇಟಿ ಮಾಡಿದ ನಿಯೋಗ ನೀಡಿದ ಅಂಕಿಅಂಶಗಳ ಪ್ರಕಾರ ತಮಿಳುನಾಡಿನಲ್ಲಿ ತಲೆತಲಾಂತರಗಳಿಂದ (ವಲಸೆ ಹೋದವರು ಅಲ್ಲ) ವಾಸಿಸುತ್ತಿರುವ ಕನ್ನಡಿಗರ ಸಂಖ್ಯೆ ಶೇ.೮ರಷ್ಟಿದೆ. ಕನ್ನಡ ಮಾತನಾಡುವ ಮಾಧ್ವಬ್ರಾಹ್ಮಣರು, ನಗರ್ತ ಶೆಟ್ಟರು, ಮಗ್ಗದವರು, ಮಾದಿಗರು, ದೇವಾಂಗದವರು, ಭಜಂತ್ರಿಗಳು, ಅಗಸರು, ಬೇಡರು, ಗೊಲ್ಲರು, ಬಡಿಗರು, ಕುರುಬ ಗೌಡರು, ಅನುಪಗೌಡರು, ಒಕ್ಕಲಿಗ ಉಪಜಾತಿಗಳವರು ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಹರಡಿಹೋಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕನ್ನಡಿಗರು ತಮ್ಮ ಮಾತೃಭಾಷೆಯನ್ನೇ ಬಿಟ್ಟು ತಮಿಳಿಗೆ ಶರಣಾಗಿದ್ದಾರೆ.
ಒಟ್ಟಾರೆಯಾಗಿ ತಲೆತಲಾಂತರಗಳಿಂದ ತಮಿಳುನಾಡಿನಲ್ಲಿ ನಡೆದು ಬಂದಿದ್ದ ಕನ್ನಡ ಸಂಸ್ಕೃತಿಯ ಬೇರುಗಳನ್ನು ಕಿತ್ತುಹಾಕಲಾಗಿದೆ. ಇದೀಗ ಕರುಣಾನಿಧಿ ಸರ್ಕಾರ ಮಾಡಿರುವ ಆದೇಶ ಕನ್ನಡತನದ ನಾಮಾವಶೇಷ ಮಾಡುವಂತಿದೆ.
ಈ ಆದೇಶ ನನ್ನ ಗಮನಕ್ಕೆ ಬಂದ ಕೂಡಲೇ ಪತ್ರಿಕಾ ಹೇಳಿಕೆ ನೀಡಿ, ಕರ್ನಾಟಕ ಸರ್ಕಾರ ಧ್ವನಿಯೆತ್ತಿ ತಮಿಳುನಾಡಿನಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವಂತೆ ಒತ್ತಾಯಿಸಿದ್ದೇನೆ. ಒಂದು ವೇಳೆ ತಮಿಳುನಾಡಿನಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸುವುದು ಕರ್ನಾಟಕ ಸರ್ಕಾರಕ್ಕೆ ಆಗದಿದ್ದಲ್ಲಿ, ಕೂಡಲೇ ಕರ್ನಾಟಕದಲ್ಲಿರುವ ಎಲ್ಲ ತಮಿಳು ಶಾಲೆಗಳನ್ನೂ ಮುಚ್ಚಿಸುವ ಕ್ರಮವನ್ನು ಅದು ಕೈಗೊಳ್ಳಬೇಕಾಗುತ್ತದೆ. ಒಂದು ವೇಳೆ ಸರ್ಕಾರ ಅದನ್ನು ಮಾಡದಿದ್ದರೆ, ಎಲ್ಲ ತಮಿಳು ಶಾಲೆಗಳನ್ನು ಮುಚ್ಚಿಸುವ ಅಥವಾ ಅವುಗಳನ್ನು ಕನ್ನಡ ಶಾಲೆಗಳನ್ನಾಗಿ ಪರಿವರ್ತಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರೇ ಮಾಡಲಿದ್ದಾರೆ.
*****
ನಾನು ಮೊದಲಿನಿಂದಲೂ ಸ್ಪಷ್ಟಪಡಿಸುತ್ತಲೇ ಬಂದಿದ್ದೇನೆ. ನಾವು ಇತರ ಭಾಷಿಕರ ವಿರುದ್ಧ ಅಲ್ಲ. ನಮ್ಮ ಸಂಘಟನೆಯಲ್ಲೇ ಬೇರೆ ಬೇರೆ ಮಾತೃಭಾಷೆಯನ್ನಾಗಿ ಉಳ್ಳವರು ಇದ್ದಾರೆ. ಕನ್ನಡತನವನ್ನು ಮೈಗೂಡಿಸಿಕೊಂಡು ಅವರು ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ನಾವು ಪರಭಾಷಿಕರ ದ್ವೇಷಿಗಳಲ್ಲ; ಕನ್ನಡ ವಿರೋಧಿಗಳ ದ್ವೇಷಿಗಳು. ಕನ್ನಡ ದ್ರೋಹಿಗಳು ಕನ್ನಡಿಗರೇ ಆದರೂ ನಾವು ಅವರನ್ನು ವಿರೋಧಿಸುತ್ತೇವೆ. ಅದಕ್ಕೆ ಸಾಕಷ್ಟು ನಿದರ್ಶನಗಳನ್ನೂ ನೀವು ಈಗಾಗಲೇ ಗಮನಿಸಿದ್ದೀರಿ.
ಇತರ ಭಾಷಿಗರು ನಮ್ಮ ಅತಿಥಿಗಳು. ಅತಿಥಿಗಳನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುವ ಪರಂಪರೆ ನಮ್ಮದು. ನೀರು ಕೇಳಿದವರಿಗೆ ಮಜ್ಜಿಗೆ, ಪಾನಕ ಕೊಡುವ ಸಂಸ್ಕಾರ ನಮ್ಮದು.
ಆದರೆ, ಉಂಡ ಮನೆಗೆ ದ್ರೋಹ ಬಗೆಯುವವರನ್ನು ಕರ್ನಾಟಕ ರಕ್ಷಣಾ ವೇದಿಕೆ ಯಾವತ್ತಿಗೂ ಕ್ಷಮಿಸುವುದಿಲ್ಲ. ಅಂಥವರಿಗೆ ತಕ್ಕ ಪಾಠ ಕಲಿಸಲು ನನ್ನ ಕಾರ್ಯಕರ್ತರು ಎಂದೆಂದಿಗೂ ಸಜ್ಜಾಗಿಯೇ ಇರುತ್ತಾರೆ. ಈ ಹಾದಿ ಕಠಿಣವೆಂಬುದು ನಿಜ, ಆದರೆ ನಾವು ಎಂಥ ತ್ಯಾಗಕ್ಕೂ ಸಿದ್ಧರಾಗಿಯೇ
ಇದ್ದೇವೆ.
ಟಿ.ಎ.ನಾರಾಯಣಗೌಡ
No comments:
Post a Comment