Friday, May 7, 2010

ಕನ್ನಡದ ಬೆಳವಣಿಗೆಯ ಹೊಸ ಸಾಧ್ಯತೆಗಳು

ಭಾಷೆ ಎನ್ನುವುದು ಇಬ್ಬರ ನಡುವಿನ ವಿಚಾರ ವಿನಿಮಯ ಎಂದರಷ್ಟೇ ಆದೀತೆ? ಪಶು ಪಕ್ಷಿಗಳಿಗೂ ತಮ್ಮದೇ ಆದ ಭಾಷೆ ಇದೆ ಎನ್ನುವುದಾದರೆ, ಮನುಷ್ಯರಿಗೆ ಇರುವುದು ಯಾವ ಭಾಷೆ, ಎಂಥ ಭಾಷೆ, ಭಾಷೆಯ ಸೌಂದರ್ಯವೇನು? ಪಶುಪಕ್ಷಿಗಳ ಭಾಷೆಗೂ ಮನುಷ್ಯ ಭಾಷೆ ಏನಾದರೂ ಮಹತ್ವ ಇದೆಯಾ? ಎಂದು ನಮ್ಮ ಹತ್ತು ವರ್ಷದ ಮೊಮ್ಮಗಳು ನನ್ನನ್ನೂ ಮೇಲಿಂದ ಮೇಲೆ ಕೆಣಕುತ್ತಲೇ ಇರುತ್ತಾಳೆ. ಅವಳಿಗೆ ನನ್ನಿಂದ ಏನೆಲ್ಲ ಸಾಧ್ಯವೋ ಅವಳ ವಿಚಾರಕ್ಕೆ ತಕ್ಕ ಮಟ್ಟಿಗೆ ಅನುಮಾನ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ಇಂದು ಸಾರ್ವಜನಿಕವಾಗಿ ಮೀಸೆ ಮೂಡದ ಹಾಗೂ ಮೀಸೆ ಮೂಡಿದ ಮಕ್ಕಳ ಏನೆಲ್ಲಾ ದೃಷ್ಟಿಕೋನದ ಪ್ರಶ್ನೆಗಳಿಗೆ ಉತ್ತರಿಸುವುದು ಬಹಳ ಕಷ್ಟಸಾಧ್ಯವೆಂದು ಅರಿತರೂ ಅವರು ಪ್ರಶ್ನಿಸುವುದು ಕನ್ನಡದಲ್ಲಿಯೆ, ನಾನು ಉತ್ತರಿಸುವುದು ಕನ್ನಡ ಭಾಷೆಯಲ್ಲಿಯೇ ಎನ್ನುವುದು ಒಂದು ಸಂತೋಷದ ಸಂಗತಿ.
ಕರ್ನಾಟಕಕ್ಕೆ ರಾಜ್ಯ ಮನ್ನಣೆ ದೊರೆತು ಐದು ದಶಕಗಳು ಸಂದಿವೆ. ಇದೇ ಸಂದರ್ಭ ಸುವರ್ಣ ಕರ್ನಾಟಕ ವರ್ಷಾಚರಣೆಯ ವರ್ಷವೂ ಕಳೆದಿದೆ. ಆದರೆ ಕನ್ನಡಿಗರಿಗೆ ಆಗಿದೆಯೇ ಹರ್ಷ? ಯಾವುದಕ್ಕೂ ಈ ನಾಡಿನ ಪ್ರತಿಯೊಬ್ಬ ಕನ್ನಡಿಗ ತನ್ನ ಹೃದಯ ಮುಟ್ಟಿ ಪ್ರಶ್ನಿಸಿಕೊಳ್ಳಬೇಕಾದ ವರ್ಷ. ನಮ್ಮ ನಾಡು ಕನ್ನಡವೇ? ನಮ್ಮ ನುಡಿಯು ಕನ್ನಡವೇ? ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಕನ್ನಡಮಯವಾಗಿ ಉಳಿದಿದೆಯೇ? ನಾನು ಐದುವರೆ ಕೋಟಿ ಕನ್ನಡಿಗರು ಈ ನಾಡಿನ ಸಂತತಿ ಹಾಗೂ ವಾರಸುದಾರರು. ಮನದಾಳದಲ್ಲಿ ಏನೆಲ್ಲ ವಿಚಾರಗಳ ತಾಕಲಾಟ ಸಮಸ್ಯೆಗಳು ಬಿಚ್ಚಿದಾಗ ಪೀಕಲಾಟ. ನಾಡಿನ ಜಲ, ನೆಲ, ಭಾಷೆ ಬುನಾದಿ ಎಲ್ಲ ಮಗ್ಗಲುಗಳ ಪ್ರಾಮಾಣಿಕ ಹುಡುಕಾಟ ಮಾಡಬೇಕಾಗಿರುವುದು ಅನಿವಾರ್ಯದ ಅವಶ್ಯಕತೆಯೂ ಹೌದು. ಕಳೆದ ಐದು ದಶಕಗಳಲ್ಲಿ ನಾವು ಸಾಧಿಸಿ ದ್ದಾದರೂ ಏನು? ನಮ್ಮ ಹಿರಿಯರು ಕನ್ನಡ ನಾಡು-ನುಡಿ, ನೆಲ-ಜಲ ಅಭಿವೃದ್ಧಿ ಕುರಿತಾಗಿ ಅವರುಗಳು ಇರಿಸಿಕೊಂಡಿದ್ದ ಕನಸುಗಳೇನು? ಅವುಗಳಿಗೆ ನಾವು ಪ್ರಮಾಣಿಕವಾಗಿ ಅವರ ವಾರಸುದಾರರಾದ ನಾವು ಸ್ಪಂದಿಸಿದ್ದೇವೆಯೇ? ನಮ್ಮ ಐವತ್ತು ವರ್ಷಗಳ ಗತ ಇತಿಹಾಸವನ್ನು ನಾವು ಯಾರು ತಿಳಿದಿಲ್ಲವೋ ಅಂಥವರಿಂದ ಹೊಸ ಇತಿಹಾಸ ರಚಿಸುವುದೂ ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸತ್ಯ.
ಆದರೂ ನಮ್ಮ ಇಂದಿನ ಪೀಳಿಗೆಗೆ ನಮ್ಮ ನಾಡಿನ ಇತಿಹಾಸವನ್ನು ಪುನಃ ನೆನಪಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವೆಂದೇ ತಿಳಿದು ಈ ಹಿನ್ನೆಲೆಯಲ್ಲಿ ಇಂದಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಗಳು ಸಂಕೀರ್ಣ ಕಾಲಘಟ್ಟದಲ್ಲಿವೆ ಎಲ್ಲ ಬಗೆಯ ಚಳುವಳಿಗಳು ಸ್ಥಗಿತಗೊಂಡಿವೆ. ಯಾವುದೇ ಒಂದು ಅನ್ಯಾಯ, ಅಸಮಾನತೆಯ ವಿರುದ್ಧವಾಗಿ ಧ್ವನಿಯೆತ್ತಿದರೆ ಅದರ ವಿರುದ್ಧವಾಗಿ ದೊಡ್ಡದಾದ ಕಿರುಚಾಟ ಮಾಡಿ ಸತ್ಯದ ಧ್ವನಿಯನ್ನು ಅಡಗಿಸುವ ರಾಕ್ಷಸೀ ಪ್ರವೃತ್ತಿಗಳು ರಾಜಕೀಯದಲ್ಲಿ ಬೆಳೆಯುತ್ತಿರುವ ವಿಚಿತ್ರವಾದ ಪರಿಸ್ಥಿತಿ. ಹೀಗಾಗಿ ಯಾವುದಕ್ಕೂ ಒಂದು ಸಾಂಘಿಕ ಧ್ವನಿಯೆಂಬುದೇ ಇಲ್ಲವಾಗಿದೆ. ಅದು ಕನ್ನಡಪರ ಚಳುವಳಿಯೇ ಆಗಿರಬಹುದು. ಚಳುವಳಿಗಾರರು ನಿರಾಸಕ್ತಿಯಿಂದ ನೋಡುವ ಪ್ರವೃತ್ತಿಯಿಂದಾಗಿ ರಾಜಕೀಯ ಲಾಭಕ್ಕಾಗಿ ಡೊಂಕು ಬಾಲದ ನಾಯಕರು ರಾಜಕೀಯ ಮಯಗೊಳಿಸಿ ತಿಪ್ಪೆ ಸಾರಿಸಿ ಬಿಡುತ್ತಾರೆ. ಇಂತಹ ಅತಂತ್ರ ಸ್ಥಿತಿಯಲ್ಲಿ ಹೊಸ ಆಲೋಚನೆಯ ಹೊಸ ಮನಸ್ಸುಗಳು ಕೂಡಿ ಸಾಂಘಿಕವಾಗಿ ಧ್ವನಿ ಎತ್ತುವ ಯುವಪಡೆ ಕನ್ನಡಕ್ಕೆ ಖಂಡಿತವಾಗಿಯೂ ಬೇಕಾಗಿದೆ. ಕನ್ನಡ ಹರಿತ ಮಾತುಗಳು ವೈಚಾರಿಕ ಆಲೋಚನೆಯ ಪ್ರಗತಿಪರ ವಿಚಾರಧಾರೆಯ ಕನ್ನಡಿಗರ ಸೈನ್ಯ ಪಡೆಯು ನಿರ್ಮಾಣಗೊಂಡು ಕಾರ್ಯಪ್ರವೃತ್ತಿಯಾದಾಗ ರಾಜಧಾನಿಯಲ್ಲಿಯೇ ಇರುವ ತೆಲುಗು, ತಮಿಳು, ಮಲೆಯಾಳಿ, ಆಂಗ್ಲಭಾಷೆ ಜನರಿಂದ ನಡೆಯುವ ಕನ್ನಡ ಭಾಷೆಯ ಮೇಲೆ ಆಗುವ ಸವಾರಿ ಕಡಿಮೆಯಾಗಬಹುದು. ಶೇ.೮೦ ಹೊಂದಿದ ಇತರ ಭಾಷಿಕರ ನಡುವೆ ಶೇ.೨೦ ಜನ ಕನ್ನಡಿಗರು ಏನು ಮಾಡಲು ಸಾಧ್ಯ?
ತಮಿಳಿನ ಮಾಸ್ತಿ ಕನ್ನಡದ ಆಸ್ತಿಯಾದರು. ಮರಾಠಿ ಮೂಲದ ಬೇಂದ್ರೆ ಕನ್ನಡದ ರಸಋಷಿಯಾದರು. ಆಂಗ್ಲಭಾಷೆಯ ಕಿಟಲ್ ಈ ನಾಡಿಗೆ ನಿಘಂಟು ಕೊಟ್ಟರು. ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು ಇಲ್ಲಿಯೇ ಗಂಧಗಾಳಿ ಉಸಿರಾಡುತ್ತಿರುವ ಇತರ ಭಾಷಿಕರಿಗೆ ಕೃತಜ್ಞತೆ ಇರಬೇಕಲ್ಲ? ಸಿರಿಗನ್ನಡಂ ಗೆಲ್ಗೆ ಎನ್ನುವವರು ಇಲ್ಲದೇ ಇರುವಾಗ ಕನ್ನಡ ತಾನೇ ಹೇಗೆ ಬೆಳೆದೀತು. ಪ್ರಾಂತೀಯ ಸ್ವಾಯತ್ತತೆಯ ಮೂಲಕ ಇತರ ರಾಜ್ಯಗಳಲ್ಲಿರುವಂತೆ ನಮ್ಮಲ್ಲಿಯೂ ವಿಲಕ್ಷಣ ಜಾಗೃತಿ ಕಂಡು ಬರುತ್ತಿದೆ. ರಾಜ್ಯದ ಪ್ರತಿಯೊಂದು ಊರುಗಳಲ್ಲಿ, ಗ್ರಾಮಗಳಲ್ಲಿ ಕರ್ನಾಟಕ ಸಂಘಗಳು ಹುಟ್ಟಿ ನಾಡದೇವಿಯ ಈ ನಾಡ ಹಬ್ಬವನ್ನು ಆಚರಿಸುವ ಹತ್ತು ದಿನಗಳ ಕಾಲ ಕನ್ನಡ ಕಟ್ಟುವ ಕಾರ್ಯವಾಗಬೇಕಾಗಿದೆ. ನಾಡಿನ ಅಭಿವೃದ್ಧಿ ಕಾರ್ಯಗಳಲ್ಲಿ ಸಮತೋಲನ ಬೆಳವಣಿಗೆ ಕಾಣಬೇಕಾಗಿದೆ. ರಾಜ್ಯದ ಏಕತೆ ಏಳಿಗೆಯಿಂದ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯವೆಂಬುದನ್ನು ಮನಗಾಣಬೇಕಾಗಿದೆ. ಕನ್ನಡಿಗರ ಸಾಂಸ್ಕೃತಿಕ ಬಾಂಧವ್ಯವನ್ನೂ ಬೆಸೆಯುವ ದೃಷ್ಟಿಯಿಂದ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್ತು ಆಪೇಕ್ಷಣಿಯವಾದ ಕೆಲಸ ಮಾಡುತ್ತಿದೆ. ಹೈಸ್ಕೂಲು, ಕಾಲೇಜುಗಳಲ್ಲಿ ಕರ್ನಾಟಕ ಸಂಘಗಳಿಂದ ತುಂಬಬೇಕಿದೆ. ಕನ್ನಡದ ಕಾರ್ಯಕರ್ತರು, ಕನ್ನಡ ಕಾವಲು ಸಮಿತಿ ಕನ್ನಡ ಪ್ರಾಧಿಕಾರದ ಹುಟ್ಟಿಕೊಂಡಿದ್ದರ ಪರಿಣಾಮವಾಗಿ ವಿಧಾನಸೌಧದಲ್ಲಿ ಕನ್ನಡ ಉಳಿಯಲು ಅನುಕೂಲವಾಗಿದೆ.
ಶಿಕ್ಷಣದ ನೀತಿಯನ್ನು ಅಂತರಾಷ್ಟ್ರೀಯ ಕಂಪನಿಗಳೇ ನಿರ್ಧರಿಸು ತ್ತಿರುವುದರಿಂದ ಎಲ್ಲರಿಗೂ ಕಡ್ಡಾಯ ಶಿಕ್ಷಣದಲ್ಲಿ ಸಡಲಿಕೆ ಉಂಟಾಗಿದೆ. ಉಳ್ಳವರಿಗೆ ಮಾತ್ರವೇ ವಿದ್ಯಾಭ್ಯಾಸ ಹೊರತು ಸಾಮಾನ್ಯನಿಗಲ್ಲ ಎನ್ನುವ ಸಾರ್ವಜನಿಕ ಅಭಿಪ್ರಾಯ ಮೂಡುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ಬುದಿ ಮತ್ತು ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯವಿದೆಯೇ ಹೊರತು ಸಾಮಾಜಿಕ ನ್ಯಾಯಕ್ಕಿಲ್ಲ. ಜಾಗತೀಕರಣದ ಪ್ರವೇಶದಿಂದ ಭಾಷೆ, ಸಂಸ್ಕೃತಿ ಮನುಷ್ಯ ಸಂಬಂಧಗಳಲ್ಲಿ ಹೊಸ ಬಿರುಕು ಕಾಣಿಸಿಕೊಂಡಿವೆ. ಗ್ರಾಮೀಣ ಮಹಿಳೆಯರಂತೂ ಗ್ರಾಮ್ಯ ಸೊಗಡಿನ ಭಾಷೆಯನ್ನು ಮಾತನಾಡುವುದೇ ಹೀನಾಯವೆಂದು ತಿಳಿದುಕೊಳ್ಳುತ್ತಿರುವುದು ಭಾಷೆಯ ನಾಶಕ್ಕೆ ಕಾರಣವಾಗಬಹುದು. ಒಂದು ಭಾಷೆಯ ನಾಶ ಒಂದು ಸಂಸ್ಕೃತಿ ಸತ್ತಂತೆ ಎಂಬ ಜಾಗತಿಕ ಸತ್ಯವನ್ನು ನಾವು ಅರಿತಷ್ಟೂ ಒಳ್ಳೆಯದು. ೧೮೮೨ರ ಹಂಟರ್ ಆಯೋಗದಿಂದ ಸ್ವಾತಂತ್ರ್ಯಾ ನಂತರದ ೧೯೮೬ ಹೊಸ ಶಿಕ್ಷಣ ನೀತಿಯವರೆಗೂ ಗಮನಿಸಿದಾಗ ಎಲ್ಲವೂ ಬ್ರಿಟಿಷ್‌ಮಯ ಖಾಸಗೀಕರಣ, ಜಾಗತೀಕರಣಗಳ ಒತ್ತಡದಿಂದ ಶ್ರೀಸಾಮಾನ್ಯನು ಶಿಕ್ಷಣ ವರ್ತುಲದಿಂದ ಹೊರಗೆ ಉಳಿಯಲಿದ್ದಾನೆ. ನಮ್ಮ ಸಂವಿಧಾನದ ೪೫ನೇ ವಿಧಿಯು ಶ್ರೀಸಾಮಾನ್ಯರಿಗೆ ಶಿಕ್ಷಣವನ್ನೂ ದೊರಕಿಸುವುದೇ ಪ್ರಜಾತಾಂತ್ರಿಕಸಾರ ಎನ್ನುತ್ತದೆ. ೧೪ ವರ್ಷ ವಿದ್ಯಾರ್ಥಿಗಳಿಗೆ ತುಂಬುವವರೆಗೆ ಉಚಿತ ಹಾಗೂ ಕಡ್ಡಾಯವಾಗಿ ಶಿಕ್ಷಣ ಎನ್ನುತ್ತದೆ ಸರಕಾರ. ಹಾಗಾದರೆ ೪೫ನೇ ವಿಧಿಗೆ ದೊರೆತ ಮಾನ್ಯತೆ ಎಲ್ಲಿ?
ಬಂಡವಾಳಶಾಹಿ ಶಿಕ್ಷಣ ನೀತಿಯಲ್ಲಿ ಬೌದ್ಧಿಕ ಕೀಳರಿಮೆಗೆ ಒಳಪಡಿಸಿ, ಊಳಿಗಮಾನ್ಯ ಮಂದಿಯನ್ನು ಆಧುನಿಕ ಶಿಕ್ಷಣಕ್ಕೆ ಹೊಂದಿಸುವುದು ಒಂದು ನೀತಿಯಾಗಿದೆ. ಇಂಥ ವಸಾಹತುಶಾಹಿ ನೀತಿಯಿಂದ ೬ರಿಂದ ೧೪ ವರ್ಷದ ಸುಮಾರು ೧೦ ಕೋಟಿ ಮಕ್ಕಳು ಪ್ರಾಥಮಿಕ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜಾಗತೀಕರಣದ ನೆಪದಲ್ಲಿ ಸರ್ಕಾರದ ಶಿಕ್ಷಣ ನೀಡಿ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೂ ತನ್ನ ಕರಿ ನೆರಳನ್ನೂ ಹರಡುತ್ತಿದೆ. ಇಲ್ಲಿ ಹಣವೇ ಪ್ರಾಮುಖ್ಯ. ಇಂದು ಕೇಂದ್ರ ಸರ್ಕಾರದ ಶಿಕ್ಷಣ ಮಸೂದೆಗೆ ಯಾರು ೧೦ ಕೋಟಿ ಕಾಣಿಕೆ ಕೊಡುತ್ತಾರೆಯೋ ಅವರು ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಅನುಮತಿಕೊಡುವ ವಿಚಾರ ಒಂದು ಅಂದಾಜಿನ ಪ್ರಕಾರ ಈ ದೇಶದ ೧೧೦ ಕೋಟಿ ಜನತೆಗೆ ೬.೫೦ ದಶಲಕ್ಷ ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯಲು ಸಾಧ್ಯ ಎನ್ನುವ ಇಂಥ ಆತಂಕಕಾರಿ ಸಂಗತಿ ಬೇಕೆ? ಇಂಥ ಶಿಕ್ಷಣ ನೀತಿಯಿಂದಾಗಿ ಬಡವರು ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಮಹಿಳೆಯರು ಇಂಥ ದುಬಾರಿ ಶಿಕ್ಷಣದಿಂದ ಶಿಕ್ಷೆ ಅನುಭವಿಸುವಂತೆ ಆಗುತ್ತದೆ. ಇಂದಿನ ಶಿಕ್ಷಣ ಹಳ್ಳಿ ಅಥವಾ ಪಟ್ಟಣ ಪ್ರದೇಶಗಳಲ್ಲಿ ಪ್ರಾಮಾಣಿಕವಾಗಿ ಬದುಕ ಬಯಸುವ ಜನರ ಆಶೋತ್ತರಗಳಿಗೆ ಅನುಗುಣವಾಗಿ ತಿದ್ದಬೇಕಾಗಿದೆ. ಇಲ್ಲವಾದಲ್ಲಿ ನಮ್ಮಲ್ಲಿರುವ ಜಾತಿ, ಜನಾಂಗ, ಭಾಷೆ, ಪ್ರಾಂತ್ಯದ ಹಿನ್ನೆಲೆಯಲ್ಲಿ ದ್ವೇಷಗಳು ಹುಟ್ಟಿಕೊಂಡು ಜಾಗತಿಕ ಗ್ರಾಮದ ಕಡೆ ವಾಲುವ ಮುನ್ನ ಈ ಹಿನ್ನೆಲೆಯಲ್ಲಿ ಸರಕಾರವು ಶಿಕ್ಷಣ ನೀತಿಯನ್ನು ರೂಪಿಸಿ ರಾಜ್ಯ, ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಗಳಿಗೆ ಅನುಗುಣವಾಗಿ ನಾಡು ನುಡಿಯನ್ನು ಕಟ್ಟಿಕೊಡಬೇಕಾಗಿದೆ.
ಇದೇ ರೀತಿ ಕರ್ನಾಟಕ ಗಡಿಯಾಚೆಗೆ ಇರುವ ಕನ್ನಡಿಗರ ಬಗೆಗೆ, ಗಡಿನಾಡವರ ಭಾಷೆಯ ಕಾಳಜಿ ಇರಬೇಕು. ಆದರೆ ಅದರ ಅಭಾವ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದು ಬಹು ದೊಡ್ಡದುರಂತ. ಗಡಿ ನಾಡಿನಲ್ಲಿ ಹೊರನಾಡಿನಲ್ಲಿ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಕನ್ನಡ ಪುಸ್ತಕಗಳ ಪ್ರಕಟಣೆ ಹಾಗೂ ಗ್ರಂಥಾಲಯಗಳ ಬೆಳವಣಿಗೆ, ಸಮಕಾಲೀನ ಸಾಹಿತ್ಯ ಕ್ಷೇತ್ರ, ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ, ಕನ್ನಡ ವಿಮರ್ಶೆಯ ಸ್ಥಿತಿ, ಗತಿ, ಮಕ್ಕಳ ಸಾಹಿತ್ಯ ಆಡಳಿತದಲ್ಲಿ ಕನ್ನಡ, ಕನ್ನಡದ ಸಮಸ್ಯೆಗಳು, ಕನ್ನಡಪರ ಹೋರಾಟ, ಗೋಕಾಕ, ಮಹಿಷಿ, ಬರಗೂರ ಇವರೆಲ್ಲರ ವರದಿಗಳ ಜಾರಿ, ಲೋಕಸೇವಾ ಆಯೋಗದಲ್ಲಿ ಕನ್ನಡ, ಕನ್ನಡ ಪುಸ್ತಕಗಳ ಸಗಟು ಖರೀದಿ, ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಹಾಗೂ ಅಭಿವೃದ್ಧಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಹೀಗೆ ಇನ್ನೂ ಹತ್ತು ಹಲವಾರು ಸಂಗತಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಎಲ್ಲದ್ದಕ್ಕೂ ಎಂದು ಸುಖಾಂತ್ಯ?
ನಮ್ಮ ನಾಡು-ನುಡಿಯ ಬಗ್ಗೆ ಅಭಿಮಾನವನ್ನು ಬಡಿದೆಬ್ಬಿಸುವ ಸಾಮೂಹಿಕ ಪ್ರಯತ್ನವನ್ನೇ ನಾವು ಕನ್ನಡ ಚಳವಳಿ ಎಂದು ಕರೆದದ್ದು. ಕನ್ನಡಿಗರು ಸಮರ್ಥರಾದರೆ ಕನ್ನಡ ಭಾಷೆ ಸಾಮರ್ಥ್ಯ ಪಡೆಯುತ್ತದೆ. ನಾಡು ಪ್ರಗತಿಯತ್ತ ಸಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಕನ್ನಡಿಗ ತನ್ನ ವೈಯಕ್ತಿಕ ಸಾರ್ವಭೌಮ ಮಾನವನ್ನೂ ಹೆಚ್ಚಿಸಿಕೊಂಡು ಅದನ್ನು ನಾಡು ನುಡಿಗಳ ಮೇಲ್ಮೆಗಾಗಿ ಧಾರೆಯೆರೆಯಬೇಕು. ಸ್ವಾಭಿಮಾನವಿಲ್ಲದ ಬಾಳು ವ್ಯರ್ಥ. ನಿದ್ರಾವಸ್ಥೆಯಲ್ಲಿರುವ ಕನ್ನಡಿಗರಿಗೆ ಕನ್ನಡದ ಜೀವ ತುಂಬುತ್ತದೆಯೋ ಅಂದೇ ಕನ್ನಡನಾಡು ನುಡಿ, ನೆಲ-ಜಲ, ಕಲೆ-ಸಾಹಿತ್ಯ, ಸಂಸ್ಕೃತಿ ಧನ್ಯ, ಪ್ರಪಂಚದಲ್ಲಿ ಮಾನ್ಯ.

ಮಲ್ಲಿಕಾರ್ಜುನ ವಿ. ಬನ್ನಿ
ಮಾಜಿ ಶಾಸಕರು, ಗುಳೇದಗುಡ್ಡ, ಬಾಗಲಕೋಟೆ ಜಿಲ್ಲೆ

No comments:

Post a Comment

ಹಿಂದಿನ ಬರೆಹಗಳು