Thursday, May 6, 2010

ಕನ್ನಡದ ರಕ್ಷೆ ನಾರಾಯಣಗೌಡರ ಪರೀಕ್ಷೆ



೧.೧೨.೦೭ನೇಯ ತೇದಿ. ಶನಿವಾರ. ಮಧ್ಯಾಹ್ನ ೧೨ ಗಂಟೆ ಸಮಯ. ಬೆಂಗಳೂರಿನ ರಮಣ ಮಹರ್ಷಿ ರಸ್ತೆ. ಕಣ್ಣು ಹರಿದತ್ತ ಸ್ವರ್ಗದಿಂದಿಳಿಬಿಟ್ಟಂತಿದ್ದ ಹಳದಿ, ಕೆಂಪು ಬಾವುಟಗಳು: ಜನ ವಾಹನಗಳ ನೂಕುನುಗ್ಗಲು. ಸ್ಯಾಂಕಿ ರಸ್ತೆ, ರಮಣ ಮಹರ್ಷಿ ರಸ್ತೆಯನ್ನು ಕೂಡುವೆಡೆಯಿಂದ ಕಾರಿನಲ್ಲಿ ಅರಮನೆಯ ಮೈದಾನವನ್ನು ತಲುಪಲು ಸಾಕೋಸಾಕಾಯಿತು. ಒಂದು ಗಂಟೆ ಹಿಡಿಯಿತು. ಮೂರು ಮಾರಿಗೆ ನಿಂತಿದ್ದ ಪೊಲೀಸರು ಸಹ ಆ ಜನವಾಹನ ಸಂದಣಿಯನ್ನು ನಿಯಂತ್ರಿಸುವಲ್ಲಿ ಸೋತು ಸುಣ್ಣವಾಗಿದ್ದರು.

ಅಂತು ಇಂತು ಅರಮನೆಯ ಮೈದಾನವನ್ನು ತಲುಪಿದ್ದಾಯಿತು. ಅಲ್ಲಿ ಸಹ ವಾಯು ಸಂಚಲನೆಗೂ ಅವಕಾಶವಿಲ್ಲ. ಎಲ್ಲಿ ನೋಡಿದರೂ ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ವಿವಿಧ ವೇಷಭೂಷಣಗಳ, ಕೊರಳುಗಳನ್ನಲಂಕರಿಸಿದ್ದ ಹಳದಿ- ಕೆಂಪು ಪಟ್ಟಿಗಳ ಹೆಂಗಸರು ಗಂಡಸರ ತಲೆಗಳೇ ಕಾಣುತ್ತವೆ. ‘ಮುಖ್ಯ ಅತಿಥಿಗಳು ಬಂದಿದ್ದಾರೆ. ದಾರಿ ಬಿಡಿ’ ಎಂಬ ಮಿತ್ರರ, ಸ್ವಯಂ ಸೇವಕರ ಹಾಗೂ ಪೊಲೀಸರ ಘೋಷಣೆಗಳ ನಡುವೆಯೂ ತಳ್ಳಾಡಿಕೊಂಡೇ ಮಹಾಮಂಟಪದ ಬಳಿಗೆ ಕರೆದೊಯ್ಯುತ್ತಾರೆ.

ಮಹಾಸಮಾವೇಶದ ಕರ್ಣಧಾರರೇ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದಾಗ, ಜನ ದಾರಿ ಬಿಟ್ಟು, ಕೈ ಮುಗಿಯುತ್ತಾರೆ. ಕಣ್ಣೆಟುಕಿಗೂ ನಿಲುಕದ ಭೂವಿಸ್ತೀರ್ಣದಲ್ಲಿ (ಹತ್ತು ಎಕರೆ?) ನಿರ್ಮಾಣಗೊಂಡಿದ್ದ ಚಪ್ಪರದಡಿಯಲ್ಲಿ ಮಾತ್ರವಲ್ಲ, ಅದರ ಸುತ್ತ ನಾಲ್ಕು ಕಡೆ ಚದರಿ ಹೋಗಿದ್ದ ಜನ ಸಂದಣಿಯನ್ನು ನೋಡಿದಾಗ, ಯಾವ ಕನ್ನಡಿಗನಿಗಾದರೂ ರೋಮಾಂಚನವಾಗದಿರದು. ಕನ್ನಡ ವಿರೋಧಿಗಳಿಗೆ ತೊರಳೆ ನಡುಗದಿರಲಾರದು. ನಾನು ನೋಡಿದ ಸಾಹಿತ್ಯ ಸಮ್ಮೇಳನದಲ್ಲಾಗಲಿ, ಕಾಂಗ್ರೆಸ್ ಅಧಿವೇಶನದಲ್ಲಾಗಲಿ, ಇಷ್ಟೊಂದು ಜನರನ್ನು ನೋಡಿದಂತೆ ನೆನಪಿಲ್ಲ.

ವೇದಿಕೆಯೊ? ನೂರು-ನೂರೈವತ್ತು ಜನ ಕುಳಿತುಕೊಳ್ಳುವಷ್ಟು ವಿಸ್ತಾರವಾಗಿತ್ತು. ಎಲ್ಲ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಬೃಹತ್ತು ಮತ್ತು ಮಹತ್ತುಗಳ ಕಲ್ಪನೆ ಇತ್ತೆಂದು ತೋರುತ್ತದೆ. ಅಷ್ಟೊಂದು ಜನಕ್ಕೆ ಭೋಜನ ವ್ಯವಸ್ಥೆಯ ನಿರ್ವಹಣೆ ಸಾಮಾನ್ಯ ಸಂಗತಿಯಲ್ಲ. ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಅಚ್ಚುಕಟ್ಟು ಶಿಸ್ತು ಎದ್ದುಕಾಣುತ್ತಿದ್ದವು. ಇಷ್ಟೆಲ್ಲ ಸಾಧನೆಯ ಹಿಂದೆ ಕರ್ತೃತ್ವ ಶಕ್ತಿ, ಮಿತ್ರ ಸಂಪತ್ತು, ದೀರ್ಘಕಾಲೀನ ಚಿಂತನೆ, ಸಾತ್ವಿಕ ಛಲ ಹಾಗೂ ದೂರದೃಷ್ಟಿ ಇವೆಯೆಂಬುದರಲ್ಲಿ ಸಂದೇಹವಿಲ್ಲ.

ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಧ್ಯೇಯ ವಾಕ್ಯಗಳುಳ್ಳ ಕರ್ನಾಟಕ ರಕ್ಷಣಾ ವೇದಿಕೆ ವ್ಯವಸ್ಥೆಗೊಳಿಸಿರುವ ರಾಜ್ಯಮಟ್ಟದ ೬ನೆಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಕನ್ನಡಿಗರಲ್ಲಿ ಸುಪ್ತವಾಗಿರುವ ಸ್ವಾಭಿಮಾನವನ್ನು ಜಾಗೃತಗೊಳಿಸುವುದು ಈ ಸಮಾವೇಶದ ಉದ್ದೇಶ.

ಸತ್ತಂತಿಹರನು ಬಡಿದೆಚ್ಚರಿಸು,
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ಸುರಿಸು,
ಕಚ್ಚಾಡುವರನು ಕೂಡಿಸಿ ಒಲಿಸು,
ಒಟ್ಟಿಗೆ ಬಾಳುವ ತೆರದಲಿ ಹರಸು.
ಎಂಬುದಾಗಿ ಸುಮಾರು ೪೫ ವರ್ಷಗಳ ಹಿಂದೆ ಕನ್ನಡ ಡಿಂಡಿಮವನ್ನು ಬಾರಿಸುವಂತೆ ದ್ರಷ್ಠಾರ ಕವಿ ಕರ್ನಾಟಕ ಹೃದಯಶಿವನನ್ನು ಪ್ರಾರ್ಥಿಸಿದಂತೆ, ಇಂದು ಈ ವೇದಿಕೆ ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಕೆರಳಿಸುವಂತೆ ಕನ್ನಡ ಭುವನೇಶ್ವರಿಯನ್ನು ಪ್ರಾರ್ಥಿಸುತ್ತಿದೆ. ಸ್ವಾಭಿ ಮಾನ ಮತ್ತು ಆತ್ಮಗೌರವ ಪ್ರಜ್ಞೆ ಕನ್ನಡಿಗರಲ್ಲಿ ಜಾಗೃತಗೊಂಡದ್ದಾದರೆ, ಅವರ ಸರ್ವಾಭಿವೃದ್ಧಿ ಸಾಧ್ಯವಾಗಿ, ನಾಡುನುಡಿಗಳು ಭುವನ ಸುತ್ತಿಗೆ ಪಾತ್ರವಾಗುವುದರಲ್ಲಿ ಅನುಮಾನವಿಲ್ಲ ಎನಿಸಿತು.

ಸಮಾವೇಶ ಉದ್ಘಾಟಿಸಿ ನಾನು ಮಾತನಾಡಿದೆ. “ಈ ಸಮಾವೇಶ ಸಂಪೂರ್ಣವಾಗಿ ಯಶಸ್ಸು ಪಡೆಯುತ್ತದೆನ್ನುವುದಕ್ಕೆ ಪಕ್ಷ ಭೇದವನ್ನು ಮರೆತು ವೇದಿಕೆಯ ಮೇಲೆ ಆಸೀನರಾಗಿ ಈ ಸಮಾವೇಶದಲ್ಲಿ ಭಾಗಿಯಾಗಿ ರುವ ಸರ್ವಶ್ರೀ ಅನಂತಕುಮಾರ್, ಚೆಲುವರಾಯಸ್ವಾಮಿ, ದಿನೇಶ್ ಗುಂಡೂ ರಾವ್, ಆರ್.ರೋಷನ್ ಬೇಗ್, ಪುಟ್ಟಣ್ಣ ಮೊದಲಾದವರು, ನಾಡಿನ ಮೂಲೆ ಮೂಲೆಗಳಿಂದ ಬಂದಿರುವ ಪ್ರತಿನಿಧಿಗಳು, ಸಮಾರೋಪ ಸಮಾರಂಭದಲ್ಲಿ ಮತ್ತು ಜಾನಪದ ಕಲಾತಂಡಗಳಲ್ಲಿ ಭಾಗವಹಿಸುವ ಅನೇಕ ನಾಯಕರೇ ಸಾಕ್ಷಿಗಳಾಗಿದ್ದಾರೆ. ಈ ಎಲ್ಲರಿಗೆ ಶಿಖರಪ್ರಾಯವಾಗಿ ವೇದಿಕೆಯ ಚಟುವಟಿಕೆಗಳನ್ನು ಆಶೀರ್ವಾದಿಸುವ ಆಗಮಿಸಿರುವ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮಿಯವರು ಹಾಗೂ ಶ್ರೀ ಶ್ರೀ ಸುರೇಶ್ವರಾನಂದ ಭಾರತಿ ಸ್ವಾಮಿಯವರ ಪವಿತ್ರ ಸಾನ್ನಿಧ್ಯವೇ ಈ ಸಮಾವೇಶಕ್ಕೆ ವರವಾಗಿ ಪರಿಣಮಿಸಿದೆ.

ಚರಿತ್ರಾರ್ಹವಾದ ಈ ಸಮಾವೇಶವನ್ನು ಅನಿರೀಕ್ಷಿತವಾಗಿ ಉದ್ಘಾಟಿಸುವ ಅವಕಾಶ ನನಗೆ ದೊರೆತದ್ದೇ ನನ್ನ ಸೌಭಾಗ್ಯವೆಂದು ನಾನು ಬಗೆದಿದ್ದೇನೆ. ಇಂಥ ಸಮಾವೇಶವನ್ನು ನಾನು ಕನಸಿನಲ್ಲಿಯೂ ಕಂಡಿರಲಿಲ್ಲ; ಅದು ನನ್ನ ಊಹೆಗೂ ನಿಲುಕಿರಲಿಲ್ಲ. ನಿಮ್ಮೆಲ್ಲರನ್ನು ನೋಡಿದಾಗ ನನಗೆ ಯೌವನ ಬಂದಂತೆ ಉತ್ತೇಜಿತನಾಗಿದ್ದೇನೆ; ಕನ್ನಡನಾಡು ನುಡಿಗಳ ಸಮಸ್ಯೆಗಳೆಲ್ಲ ಬಗೆಹರಿದಂತೆ ನನಗೆ ಹರ್ಷವಾಗುತ್ತಿದೆ. ಕನ್ನಡ ನಾಡಿನ ಇತಿಹಾಸ ಪ್ರಾಚೀನವಾದದ್ದು. ಪ್ರೋಜ್ವಲವಾದದ್ದು. ಭಾಷೆ, ಸಾಹಿತ್ಯಗಳು ಸಮೃದ್ಧವಾದವು; ಸಂಸ್ಕೃತಿ ವೈಭವ ಪೂರ್ಣವಾದದ್ದು. ಇವುಗಳ ಬಗ್ಗೆ ಹೆಮ್ಮೆ ಪಡದವನು, ಅವನ್ನು ಹೃನ್ಮನಗಳಲ್ಲಿ ತುಂಬಿಕೊಳ್ಳದವನು ಕನ್ನಡ ನಾಡಿನಲ್ಲಿರಬಾರದು. ನೆರೆಹೊರೆಯವರನ್ನು ನೋಡಿಯಾದರೂ ನಮ್ಮ ರಾಜಕಾರಣಿಗಳು ಭಾಷಾ ಪ್ರೇಮವನ್ನು ರೂಢಿಸಿಕೊಳ್ಳಲಿ. ಕನ್ನಡನಾಡಿನ ಬಗೆಗಿನ ಕೇಂದ್ರದ ಮಲತಾಯಿ ಧೋರಣೆಯನ್ನು ಕಂಡಾಗ, ಪ್ರಾದೇಶಿಕ ಪಕ್ಷವೊಂದು ಈ ನಾಡಿನಲ್ಲಿ ತಲೆಯೆತ್ತಿದರೆ ಮೇಲೆಂದು ನನಗೆ ತೋರುತ್ತದೆ. ಶ್ರೀ ನಾರಾಯಣಗೌಡರ ನಾಯಕತ್ವದಲ್ಲಿ ನಡೆಯುತ್ತಿರುವ ಈ ಸಮಾವೇಶ ಕನ್ನಡ ನಾಡಿನ ನೂತನ ಇತಿಹಾಸಕ್ಕೆ ನಾಂದಿಯಾಗಲೆಂದು ಹಾರೈಸುತ್ತೇನೆ. ಚಳವಳಿ ಚಿರಾಯುವಾಗಲೆಂದು ಪ್ರಾರ್ಥಿಸುತ್ತೇನೆ”.

*****

ಕೇವಲ ೪೧ವರ್ಷ ವಯಸ್ಸಿನ ಈ ಯುವ ನಾಯಕನ ಸಾಧನೆ ಸಾಹಸಗಳು ಆತನ ವೈರಿಗಳನ್ನು ಸಹ ವಿಸ್ಮಯಗೊಳಿಸಿ, ಅವರ ಹೃದಯಗಳಲ್ಲಿ ಭಯದ ಬಾಂಬುಗಳನ್ನಿರಿಸಿಬಹುದೆಂದು ತೋರುತ್ತದೆ. ಅವರು ಜನಿಸಿದ್ದು ೧೦-೬-೧೯೬೬ರಂದು, ಅರಸೀಕೆರೆ ತಾಲೂಕಿನ ಧಾರ್ಮಿಕ ಕೇಂದ್ರ ಮಾಲೇಕಲ್ ತಿರುಪತಿ ಗ್ರಾಮದಲ್ಲಿ. ಅವರು ಶ್ರೀ ಅನಂತಯ್ಯ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳ ದ್ವಿತೀಯ ಪುತ್ರರು. ಒಕ್ಕಲುತನ ಅವರ ಜೀವನಾಧಾರ.

ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ, ಕುವೆಂಪು ಅವರ ಕವಿತೆಗಳು ಅವರ ಮನಸ್ಸಿನ ಮೇಲೆ ಅಚ್ಚಳಿಯದ ಅದಮ್ಯ ಪ್ರಭಾವವನ್ನು ಬೀರುತ್ತವೆ. ‘ಕನ್ನಡ ಎನೆ ಕುಣಿದಾಡುವುದೆನ್ನದೆ, ಕನ್ನಡ ಎನೆ ಕಿವಿ ನಿಮಿರುವುದು;’ ‘ಕನ್ನಡಕೆ ಹೋರಾಡು ಕನ್ನಡದ ಕಂದ! ಕನ್ನಡವ ಕಾಪಾಡು ನನ್ನ ಆನಂದ’ ಈ ಕವನ ಪಂಕ್ತಿಗಳು ಕುಳಿತಲ್ಲಿ, ನಿಂತಲ್ಲಿ, ನಡೆಯುವಲ್ಲಿ, ಎಚ್ಚರವಾಗಿದ್ದಾಗಲೆಲ್ಲಾ ಅವರ ಮನಸ್ಸಿನಲ್ಲಿ ಗುಯ್‌ಗುಡುತ್ತವೆ.

ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ!
ಇನ್ನೆಂದೂ ತಾನೊಂದೇ!-ಕರ್ನಾಟಕ ಮಂತ್ರ ದೀಕ್ಷೆ

ಈ ಸಾಲುಗಳನ್ನೋದಿದ ಅವರು ಕುವೆಂಪು ಸಾನ್ನಿಧ್ಯದಲ್ಲಿದ್ದಂತೆ ಭಾವಿಸಿಕೊಂಡು ಅಂದೇ ದೀಕ್ಷಬದ್ಧರಾಗುತ್ತಾರೆ.

ಕರ್ನಾಟಕ ಎಂಬುದೇನು
ಹೆಸರೇ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
‘ಅಖಂಡ ಕರ್ನಾಟಕ’ ಕವಿತೆಯ ಈ ಪಂಕ್ತಿಗಳು ಅವರ ಶರೀರದ ಕಣಕಣಗಳಲ್ಲಿ ಪ್ರತಿಧ್ವನಿಸುತ್ತವೆ. ‘ಬಾರಿಸು ಕನ್ನಡ ಡಿಂಡಿಮವ’ ಕವನವಂತೂ ಅವರ ಬದುಕಿನ ಧ್ಯೇಯ ಮಂತ್ರವಾಗುತ್ತದೆ. ಕರ್ನಾಟಕದ ಚಳವಳಿಗಾರರ ಮೇಲೆ ಕುವೆಂಪು ಅವರ ಕವನಗಳು ಹಾಗೂ ಭಾಷಣಗಳು ಬೀರಿದಷ್ಟು ಪ್ರಭಾವವನ್ನು ಬೇರೆ ಯಾರ ಕವಿತೆಗಳೂ, ಭಾಷಣಗಳೂ ಬೀರಿಲ್ಲ. ಶೈಶವದಲ್ಲಿಯೇ ಕುವೆಂಪು ಗೀತೆಗಳು ನಾರಾಯಣಗೌಡರ ಮೇಲೆ ಅಪ್ರತಿಮ ಪ್ರಭಾವಗಳನ್ನು ಬೀರಿ, ಕಾರ್ಯೋನ್ಮುಖಗೊಳಿಸಿದ್ದು ಅಸಾಮಾನ್ಯ ಸಂಗತಿಯೆಂದೇ ಹೇಳಬೇಕು.

ಗೌಡರ ಕಾರ್ಯೋನ್ಮುಖತೆಗೊಂದು ನಿದರ್ಶನವನ್ನು ನೀಡಬಹುದು. ಅರಸೀಕೆರೆಯಲ್ಲಿ ಗಣೇಶೋತ್ಸವ ನಡೆಯುವಾಗ ತಮಿಳು ಹಾಡುಗಳು ವಿಜೃಂಭಿಸುತ್ತವೆ. ಅವನ್ನು ನಿಲ್ಲಿಸಿ, ಕನ್ನಡದ ಹಾಡುಗಳಿಗೆ ಅವಕಾಶ ನೀಡುವಂತೆ ನಾರಾಯಣಗೌಡರು ಕೇಳಿಕೊಂಡಾಗ, ಯಾರೂ ಅವರ ವಿನಂತಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆಗವರು ವೇದಿಕೆಗೆ ನುಗ್ಗಿ ನಿರ್ಭೀತಿಯಿಂದ ಗಲಾಟೆ ಎಬ್ಬಿಸಿದ ನಂತರ ಕನ್ನಡ ಹಾಡುಗಳಿಗೆ ಮನ್ನಣೆ ದೊರೆಯುತ್ತದೆ. ಆದರೆ, ಪೊಲೀಸ್ ಠಾಣೆಯ ಕನ್ನಡ ವಿರೋಧಿ ಇನ್ಸ್‌ಪೆಕ್ಟರ್ ಬಾಲಕ ನಾರಾಯಣಗೌಡನನ್ನು ಬಂಧಿಸಿ, ಕೈಕಾಲುಗಳನ್ನು ಕಟ್ಟಿಹಾಕಿ, ‘ನಿನಗೆ ಕನ್ನಡ ಹಾಡು ಬೇಕೇನೋ, ತಗೋ’ ಎಂದು ಬೆತ್ತ ಚಾವಟಿಗಳಿಂದ ನಿರ್ದಯವಾಗಿ ಥಳಿಸಿ ಸಂಜೆಯವರೆಗೆ ಅನ್ನ ನೀರು ಇಲ್ಲದೆ ಕೋಣೆಯಲ್ಲಿ ಕೂಡಿಹಾಕುತ್ತಾರೆ.

ಅವರು ಮನೆಗೆ ಮರಳಿದಾಗ ದೊರೆತದ್ದು ಸಾಂತ್ವನವಲ್ಲ, ಏಟುಗಳ ಸುರಿಮಳೆ. ನ್ಯಾಯವೊ, ಅನ್ಯಾಯವೊ, ಯಾವ ಕಾರಣಕ್ಕಾದರೂ ಸರಿಯೇ ಪೊಲೀಸ್ ಠಾಣೆಗೆ ಹೋದದ್ದಾದರೆ, ಆಗಿನ ಕಾಲದಲ್ಲಿ ಸಮಾಜದಲ್ಲಿ ಮಾನಹಾನಿಯಾಗುತ್ತದೆಂಬ ನಂಬಿಕೆ ಪ್ರಬಲವಾಗಿತ್ತು. ಅದರಿಂದಾಗಿ ತಂದೆ ಅನಂತಯ್ಯ ಮಗನನ್ನು ಬಡಿಯುತ್ತಾರೆ. ಅದೇ ತಾನೆ ಮನೆಗೆ ಬಂದ ಸೋದರ ಮಾವನಿಂದಾದರೂ ಅನುಕಂಪೆಯ ಉಪಚಾರ ದೊರೆಯಿತೇ? ಇಲ್ಲ, ಇಂಥ ಅನ್ಯಾಯದ ಶಿಕ್ಷೆಯಿಂದಾಗಿ ಬಾಲಕ ನಾರಾಯಣಗೌಡನ ಮನಸ್ಸು ರೋಸಿಹೋಗುತ್ತದೆ, ಕಠಿನವಾಗುತ್ತದೆ, ಆ ಕಾಠಿನ್ಯ ಛಲಕ್ಕೆ ತಿರುಗುತ್ತದೆ. ಆ ಛಲದ ಪರಿಣಾಮವಾಗಿ ಅವರು ಲಾರಿಯವರ ಸಹಾಯದಿಂದ ಮುಂಬಯಿಗೆ ದೌಡಾಯಿಸುತ್ತಾರೆ.

ಅವರೆಲ್ಲಿಗೆ ಹೋದರೂ ಹುಟ್ಟುಗುಣ ಮಾತ್ರ ಬದಲಾಯಿಸುವುದಿಲ್ಲವಷ್ಟೇ. ಬೊಂಬಾಯಿಯ ಕಾರ್ಖಾನೆಯೊಂದರಲ್ಲಿ ಉದ್ಯೋಗವನ್ನು ಸಂಪಾದಿಸಿಕೊಳ್ಳುತ್ತಾರೆ. ಅಲ್ಲಿ ಅವರಿಗೆ ನಾಗಮಂಗಲ ಕೃಷ್ಣಾರಾಜಪೇಟೆಯ ಕಡೆಯ ಕನ್ನಡಿಗರ ಪರಿಚಯವಾಗುತ್ತದೆ. ಅವರ ಸಹಾಯದಿಂದ ‘ಹೊಯ್ಸಳ ಕರ್ನಾಟಕ ಸಂಘ’ವನ್ನು ಕಟ್ಟಿ, ಪ್ರತಿ ಭಾನುವಾರ ಒಂದೆಡೆ ಸೇರಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾರೆ; ಕನ್ನಡಿಗರ ಸಮಸ್ಯೆಗಳನ್ನು ಕುರಿತು ಚರ್ಚಿಸುತ್ತಾರೆ. ಆಗ ಅಲ್ಲಿ ಶಿವಸೇನೆಯ ಉತ್ಕ್ರಾಂತಿಯ ಕಾಲ. ವ್ಯಾಪಾರ ವಹಿವಾಟು ಉದ್ಯೋಗಗಳಲ್ಲಿ ಅಲ್ಲಿಯ ಕನ್ನಡಿಗರು ಉತ್ತುಂಗ ಶಿಖರದಲ್ಲಿದ್ದ ಕಾಲವೂ ಅದೇಯೇ. ಕನ್ನಡಿಗರ ಅಭ್ಯುದಯ ಶಿವಸೇನೆಗೆ ಸಹನೆಯಾಗಲಿಲ್ಲ; ಅವರು ಕನ್ನಡಿಗರ ವಹಿವಾಟುಗಳ ಮೇಲೆ ದಾಳಿ ಮಾಡಲಾರಂಭಿಸಿದರು. ಮರಾಠಿಗರ ಕೋರಡಿಗತನ ನಾರಾಯಣಗೌಡರ ಛಲವನ್ನು ಮತ್ತಷ್ಟು ಬಲಪಡಿಸುತ್ತದೆ: ನಾಡು ನುಡಿಗಳ ಅಭಿಮಾನವನ್ನು ಅಧಿಕಗೊಳಿಸುತ್ತದೆ. ತಾವು ಎಸಗಬೇಕಾದ ಕರ್ತವ್ಯ, ಅರ್ಥಾತ್ ಜೀವನ ಸಾಧನೆ ಇರುವುದು ಮಹಾರಾಷ್ಟ್ರದಲ್ಲಲ್ಲ, ಕರ್ನಾಟಕದಲ್ಲಿ ಎಂದು ನಿರ್ಧರಿಸಿಕೊಳ್ಳುತ್ತಿರುವಾಗಲೇ ಅವರಣ್ಣ ನರಸಿಂಹಮೂರ್ತಿ ಮುಂಬಯಿಗೆ ಹೋಗಿ ಗೌಡರನ್ನು ಆರು ವರ್ಷಗಳ ನಂತರ ಊರಿಗೆ ಕರೆತರುತ್ತಾರೆ.

ಬೆಂಗಳೂರಿಗೆ ವಾಪಸಾದ ನಂತರ ನಾರಾಯಣ ಗೌಡರು ಕೆಲವು ದಿನ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿದ್ದು, ಅದನ್ನು ತೊರೆದು ವೈಶ್ಯಬ್ಯಾಂಕಿನ ಶಾಖೆಯೊಂದರಲ್ಲಿ ಅಟೆಂಡರಾಗಿ ಉದ್ಯೋಗ ಸಂಪಾದಿಸುತ್ತಾರೆ. ಎಲ್ಲಿ ಹೋದರೂ ಅವರ ಕನ್ನಡದ ಸ್ವಾಭಿಮಾನ ದಿನದಿಂದ ದಿನಕ್ಕೆ ತೀವ್ರವಾಗುತ್ತದೆ; ಕನ್ನಡ ನುಡಿಗಡಿಗಳ ನೆಲಜಲಗಳ ಚಿಂತನೆಯೆ ಅವರ ಬದುಕಾಗುತ್ತದೆ. ಬೆಂಗಳೂರಿನಲ್ಲಿ ಯಾವ ಮೂಲೆಗೆ ಹೋದರೂ, ತಮಿಳರದೇ ದರ್ಬಾರು. ಕೀಟಲೆ ತೆಗೆದಾಗ ಆ ನಗರ ತಮ್ಮ ಸ್ವಂತ ಆಸ್ತಿಯೆಂಬಂತೆ ಅಟ್ಟಹಾಸವನ್ನು ಮೆರೆಯುತ್ತಾರೆ. ಬ್ಯಾಂಕಿನ ತಮಿಳು ನೌಕರರ ಪ್ರಾಬಲ್ಯ ಮಿತಿಮೀರಿ, ಅವರೊಡನೆ ಕೈ ಕೈ ಮಿಲಾಯಿಸಿದಾಗ, ಅಧಿಕಾರಿಗಳು ಗೌಡರನ್ನು ಹೊರಗಟ್ಟುತ್ತಾರೆ.

ಅನಂತರ ಅವರು ಯಾವುದಾದರೂ ವ್ಯಾಪಾರದಲ್ಲಿ ತೊಡಗುವುದೆಂದು ನಿರ್ಧರಿಸಿ, ಬಸವನಗುಡಿಯ ಸಹಕಾರಿ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಗುಜರಾಯಿಸುತ್ತಾರೆ. ಅಲ್ಲಿಯ ಬ್ರಾಹ್ಮಣ ಅಧಿಕಾರಿಗಳಿಗೆ ‘ಗೌಡ’ ಅನ್ನುವ ಪದ ಹಿಡಿಸುವುದಿಲ್ಲ. ಅಲ್ಲಿಯ ಕರಣಿಕನೊಬ್ಬನ ಸಲಹೆಯ ಮೇರೆಗೆ ‘ಗೌಡ’ ಪದವನ್ನು ತಮ್ಮ ಹೆಸರಿನಿಂದ ಕಳಚಲು ನಾರಾಯಣಗೌಡರು ಒಪ್ಪಿ, ಒಂದು ಲಕ್ಷ ರೂಪಾಯಿ ಸಾಲ ಪಡೆಯುತ್ತಾರೆ. ಅಂದು ರಾತ್ರಿ ನಿದ್ದೆಗೆ ಸಿದ್ದವಾಗುತ್ತಿದ್ದಂತೆ, ಗೌಡ ಪದದ ನಿರಾಕರಣೆ ನೆನಪಾಗಿ, ಅವರ ಸ್ವಾಭಿಮಾನ ಹೆಡೆಯೆತ್ತುತ್ತದೆ. ತಲಾತಲಾಂತರದಿಂದ ತಮ್ಮ ವಂಶದೊಡನೆ ಬೆಸೆದುಕೊಂಡಿದ್ದ ಆ ವೃತ್ತಿ ಗೌರವ ಸೂಚಕ ಪದವನ್ನು ಬಿಟ್ಟಿದ್ದು ಮಹಾಪರಾಧವೆಂದು ಬಗೆದು, ಮಾರನೆಯ ಬೆಳಗ್ಗೆ ಬ್ಯಾಂಕಿಗೆ ತೆರಳಿ, ಆ ಹಣವನ್ನು ಹಿಂದಿರುಗಿಸುತ್ತಾರೆ.
ತಾಪೆದಾರಿಕೆ ತಮ್ಮ ಸ್ವಭಾವಕ್ಕೆ ವಿರುದ್ಧವೆಂದು ತಿಳಿದು ನಾರಾಯಣಗೌಡರು ಸ್ವತಂತ್ರವಾಗಿ ಜೀವನ ನಡೆಸಲು ಹಾತೊರೆಯುತ್ತಾರೆ. ಮಗನ ಮನಸ್ಸಿನ ತಾಕಲಾಟವನ್ನೂಹಿಸಿದ ತಮ್ಮ ತಾಯಿ ಕಾಸಿನಸರವನ್ನು ಕೊಟ್ಟು, ಅದನ್ನು ಮಾರಿ ಬಂಡವಾಳವನ್ನು ಹೊಂದಿಸಿಕೊಳ್ಳುವಂತೆ ಆಶೀರ್ವದಿಸುತ್ತಾರೆ. ಆ ಬಂಡವಾಳದಿಂದ ಗೌಡರು ಅವೆನ್ಯೂ ರಸ್ತೆಯಲ್ಲಿ ಉಡುಪಿನಂಗಡಿಯನ್ನು ತೆರೆಯುತ್ತಾರೆ. ಅಲ್ಲಿಯೂ ಕನ್ನಡದ ಗುಂಗಿನಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗದು. ಚಿಕ್ಕಪೇಟೆ ವಲಯದ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗುತ್ತಾರೆ. ಪರಭಾಷಿಕರೇ ತುಂಬಿರುವ ಆ ಪ್ರದೇಶದಲ್ಲಿ ಕಲಾವಿದರ ಮತ್ತು ಸಾಹಿತಿಗಳ ಸಮ್ಮುಖದಲ್ಲಿ ವೈಭವಪೂರ್ಣವಾಗಿ ರಾಜ್ಯೋತ್ಸವವನ್ನವರು ಆಚರಿಸುತ್ತಾರೆ.
ಅಷ್ಟರಲ್ಲಿ ನಾಡು ನುಡಿಗಳ ಸಮಸ್ಯೆಗಳು, ಕೇಂದ್ರದ ಮಲತಾಯಿ ಧೋರಣೆ ಹಾಗೂ ನಿರ್ವೀಯತೆಯ ನಾಯಕರ ಪರಿಣಾಮವಾಗಿ ಒದಗಿದ ನಾಡಿನ ಅನಾಥ ಸ್ಥಿತಿಯೂ ನಾರಾಯಣಗೌಡರ ಒಳಗಣ್ಣನ್ನು ತೆರೆಯಿಸುತ್ತವೆ. ಜನಜಾಗೃತಿಯಿಂದಲ್ಲದೆ ನಾಡಿನ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲವೆಂದು ಸದೃಢ ಸಂಘಟನೆಯಿಂದಲ್ಲದೆ ಜನಜಾಗೃತಿ ಅಸಾಧ್ಯವೆಂದು ನಿರ್ಧರಿಸಿ ಗೌಡರು ಸಮಾನ ಮನಸ್ಕರೊಂದಿಗೆ ಸೇರಿಕೊಂಡು ೧೯೯೯ರಲ್ಲಿ ‘ಕರ್ನಾಟಕ ರಕ್ಷಣಾ ವೇದಿಕೆ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಕರ್ನಾಟಕದ ಉದ್ದಗಲಗಳಲ್ಲಿ ಸುತ್ತಾಡಿ, ಜಿಲ್ಲಾ ಮತ್ತು ತಾಲ್ಲೂಕು ಸ್ತರಗಳಲ್ಲಿಯೂ ಶಾಖೆಗಳನ್ನು ಪ್ರಾರಂಭಿಸಿ, ಜನಪ್ರಿಯತೆಯನ್ನು ಗಳಿಸುತ್ತಾರೆ. ಅದು ಕೇವಲ ಒಬ್ಬ ವ್ಯಕ್ತಿಯ ಖಾಸಗಿ ಆಸ್ತಿಯಾಗದೆ, ತನ್ನ ಸಂದೇಶವನ್ನು ರಾಜ್ಯದ ಪ್ರತಿಯೊಂದು ಹಳ್ಳಿಗೂ ಕೊಂಡೊಯ್ಯುವ ಸಾರ್ವಜನಿಕ ಸಂಸ್ಥೆಯಾಗುತ್ತದೆ.

ಬೆಂಗಳೂರಿನ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಖಾಲಿಯಾದ ಹುದ್ದೆಗಳಿಗೆ ತಮಿಳುನಾಡಿನಿಂದ ಅಭ್ಯರ್ಥಿಗಳನ್ನು ಕರೆತಂದು ತುಂಬುತ್ತಿದ್ದಾಗ, ಸ್ಥಳೀಯರಿಗೆ ಮಾತ್ರವೇ ಆ ಜಾಗಗಳು ಸಲ್ಲಬೇಕೆಂದು ವೇದಿಕೆ ಹೋರಾಟ ನಡೆಸಿ ಜಯಗಳಿಸುತ್ತದೆ. ಮಂಡ್ಯ ಜಿಲ್ಲೆಯ ಅಚ್ಚುಕಟ್ಟಿಗೆ ನೀರು ಸಾಲದಿದ್ದಾಗ ನವೆಂಬರ್ ತಿಂಗಳಲ್ಲಿ ತಮಿಳುನಾಡಿಗೆ ನೀರು ಬಿಟ್ಟ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಿ, ಬೆಂಗಳೂರು ಬಳ್ಳಾರಿ ಜೈಲುಗಳಲ್ಲಿ ಗೌಡರೂ ವೇದಿಕೆಯ ಸದಸ್ಯರೂ ಶಿಕ್ಷೆಯನ್ನನುಭವಿಸಬೇಕಾಗುತ್ತ. ಗೌಡರು ಜೈಲಿನಲ್ಲಿದ್ದಾಗ ಅವರ ಮಡದಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡುಮಗುವನ್ನು ಪ್ರಸವಿಸುತ್ತಾರೆ. ಅವರ ಮೊದಲ ಮಗಳ ಹೆರಿಗೆಯ ಕಾಲದಲ್ಲಿಯೂ ಅವರು ಜೈಲಿನಲ್ಲಿ ಪೊಲೀಸರ ಅತಿಥಿಯಾಗಿದ್ದರು.

ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕು ಯಾವಾಗಲೂ ಬರಪೀಡಿತ ಪ್ರದೇಶ. ಕುಡಿಯುವ ನೀರನ್ನು ಅಲ್ಲಿಯ ನೂರಾರು ಹಳ್ಳಿಗಳಿಗೆ ಒದಗಿಸುವ ಸಲುವಾಗಿ ೨೦೦೨ರಲ್ಲಿ ಚಿತ್ರಾವತಿ ನದಿಗೆ ಅಣೆಕಟ್ಟು ನಿರ್ಮಿಸಲು ಎಸ್.ಎಂ.ಕೃಷ್ಣ ಸರ್ಕಾರ ಅಣಿಯಾಗುತ್ತದೆ. ಆಂಧ್ರ ಪ್ರದೇಶದ ತೆಲುಗು ದೇಶಂ ಸರ್ಕಾರ ಕೇಂದ್ರಕ್ಕೆ ದೂರು ಸಲ್ಲಿಸಿ, ಅಣೆಕಟ್ಟು ನಿರ್ಮಿಸದಂತೆ ಒತ್ತಡ ತರಲು ಪ್ರಯತ್ನಿಸಿದ್ದಲ್ಲದೆ, ಅಲ್ಲಿಯ ಶಾಸಕರೊಬ್ಬರು ಅಣೆಕಟ್ಟಿಗೆ ಬಾಂಬ್ ಹಾಕುವುದಾಗಿ ಘೋಷಿಸಿ, ಆ ಭಾಗದ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಾರೆ. ಆಗ ನಾರಾಯಣಗೌಡರು ಸಾವಿರಾರು ಕಾರ್ಯಕರ್ತರೊಂದಿಗೆ ಬೆಂಗಳೂರಿನ ಕೆಂಪೇಗೌಡ ಪ್ರತಿಮೆಯಿಂದ ಚಿತ್ರಾವತಿ ಅಣೆಕಟ್ಟೆಯವರೆಗೆ ಪಾದಯಾತ್ರೆ ನಡೆಸಿ, ಅಲ್ಲಿ ಪೂಜೆ ನಡೆಸಿ, ಸರ್ಕಾರಕ್ಕೆ ನೈತಿಕ ಬೆಂಬಲವನ್ನೂ ಅಲ್ಲಿಯ ರೈತರಿಗೆ ಅಭಯವನ್ನೂ ನೀಡುತ್ತಾರೆ. ೨೦೦೫ರಲ್ಲಿ ಆ ಅಣೆಕಟ್ಟೆ ತುಂಬಿದಾಗ ಸ್ಥಳೀಯ ಆಡಳಿತ ವರ್ಗ ಮತ್ತು ರೈತರು ನಾರಾಯಣಗೌಡರನ್ನು ಆಹ್ವಾನಿಸಿ, ಅವರು ಬಾಗಿನ ಸಮರ್ಪಣೆಯನ್ನು ನೆರವೇರಿಸುವಂತೆ ಏರ್ಪಾಡು ಮಾಡುತ್ತಾರೆ.

೨೦೦೨ರಲ್ಲಿ ತೆಂಗಿನ ಮರಗಳಿಗೆ ನುಸಿಪೀಡೆ ಎರಗಿದಾಗ, ನೀರಾ ಚಳವಳಿ ನಡೆಸಿ, ರೈತರಿಗೆ ಅನುಕೂಲ ಕಲ್ಪಿಸಿದ್ದು, ಒಂದಂಕಿ ಲಾಟರಿಯನ್ನು ನಿಷೇಧಿಸುವಂತೆ ೨೦೦೩ರಲ್ಲಿ ಜಾಥಾ ನಡೆಸಿದ್ದು, ಎಲ್‌ಟಿಟಿಇ ತಮಿಳು ವಿಚಾರಾದಿ ನೆಡುಮಾರನ್ ಅವರನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಸನ್ಮಾನಿಸಲು ಏರ್ಪಾಡು ನಡೆದಾಗ, ಪೊಲೀಸ್ ಇಲಾಖೆಯ ಮೇಲೆ ಒತ್ತಡ ತಂದು ಆ ಕಾರ್ಯಕ್ರಮವನ್ನೇ ರದ್ದುಪಡಿಸಿದ್ದು; ಅರ್ಕಾವತಿ ಬಡಾವಣೆಯ ಸಂಬಂಧದಲ್ಲಿ ರೈತರಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರತಿಭಟಿಸಿದ್ದು; ಬಳ್ಳಾರಿ ಜಿಲ್ಲೆಯನ್ನು ಆಂಧ್ರ ಪ್ರದೇಶಕ್ಕೆ ಸೇರಿಸುವ ಹುನ್ನಾರಗಳನ್ನು ವಿಫಲಗಯ್ಯುವ ಸಲುವಾಗಿ ರಾಜ್ಯಮಟ್ಟದ ಐದನೆಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶವನ್ನು ಬಳ್ಳಾರಿಯಲ್ಲಿ ನಡೆಸಿದ್ದು; ಇಂಥ ಹತ್ತಾರು ಪ್ರತಿಭಟನೆ ಚಳವಳಿಗಳಲ್ಲಿ ಪೊಲೀಸರಿಂದ ಲಾಠಿ ಏಟು ತಿಂದಿದ್ದಲ್ಲದೆ, ಗೌಡರು ಮತ್ತು ಅವರ ಕಾರ್ಯಕರ್ತರು ಹಲವು ಸಲ ಜೈಲುವಾಸವನ್ನ ನುಭವಿಸಬೇಕಾಗುತ್ತದೆ. ಸ್ವಾತಂತ್ರ್ಯ ಸಮರಯೋಧರಂತೆ ಇವರಿಗೂ ಜೈಲು ನೀರು ಹೊಳೆಯ ದಾರಿಯಾಗುತ್ತದೆ.
ನಾರಾಯಣಗೌಡರ ಧೈರ‍್ಯ ಶೌರ‍್ಯ ಸಾಹಸಗಳಿಗೆ ಐತಿಹಾಸಿಕ ಬೆಳಗಾವಿ ಪ್ರಕರಣ ಜ್ವಲಂತ ನಿದರ್ಶನವಾಗಿದೆ. ಅವರೊಮ್ಮೆ ಬೆಳಗಾವಿಯಲ್ಲಿ ಪ್ರವಾಸ ಮಾಡುತ್ತಿದ್ದಾಗ ಶಾಸಕ ಮನೋಹರ ಕಿಣೇಕರ್ ಅವರೊಡನೆ ವಾಗ್ಯುದ್ಧ ಪ್ರಾಪ್ತವಾಗುತ್ತದೆ. ‘ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು; ಅದಕ್ಕಾಗಿ ನಾವು ಉಗ್ರ ಹೋರಾಟ ನಡೆಸುತ್ತೇವೆ. ‘ನೀವಿಲ್ಲಿಗೆ ಬಂದು ಕರ್ನಾಟಕದ ಪರವಾಗಿ ಮಾತಾಡಲು ಹಕ್ಕಿಲ್ಲ’ ಎಂದು ಕಿಣೇಕರ್ ಕೂಗಾಡುತ್ತಾರೆ. ಮಾತಿನಲ್ಲಾಗಲಿ ಛಲದಲ್ಲಾಗಲಿ ಗೌಡರು ಯಾರಿಗೂ ಸೋಲುವವರಲ್ಲ. ಇದು ಕಿತ್ತೂರು ಚೆನ್ನಮ್ಮನ ನಾಡು. ಎಂದೆಂದಿಗೂ ಇದು ಕರ್ನಾಟಕಕ್ಕೆ ಸೇರಿದ್ದೇ ಹೊರತು ಮಹಾರಾಷ್ಟ್ರಕ್ಕಲ್ಲ. ಮಹಾಜನ ವರದಿಯೇ ಅಂತಿಮ’ ಎಂದು ವಾದಿಸುತ್ತಾರೆ. ‘ಮತ್ತೆ ನೀವಿಲ್ಲಿ ಬಂದು ನೋಡಿ. ಇಲ್ಲಿ ಕಾಲು ಹಾಕದಂತೆ ನೋಡಿಕೊಳ್ಳುತ್ತೇನೆ’ ಎಂದು ಕಿಣೇಕರ್ ಸವಾಲೆಸೆಯುತ್ತಾರೆ. ‘ದೊಡ್ಡ ಸಮಾವೇಶವನ್ನು ಏರ್ಪಡಿಸುತ್ತೇನೆ. ನೀವು ಏನು ಮಾಡ್ತೀರೋ ನೋಡ್ಕೋತ್ತಿನಿ’ ಎಂದು ಇವರು ಸಹ ಪ್ರತಿ ಸವಾಲೆಸೆಯುತ್ತಾರೆ. ಕೆಲವು ದಿನಗಳಲ್ಲಿಯೇ ‘ಕನ್ನಡವೇ ಸತ್ಯ’ ಎಂಬ ಕಾರ್ಯಕ್ರಮವನ್ನು ನಾರಾಯಣಗೌಡರು ಬೆಳಗಾವಿಯಲ್ಲಿ ಏರ್ಪಡಿಸುತ್ತಾರೆ. ಇಪ್ಪತ್ತು ಸಾವಿರ ಜನನೆರೆದ ಅಂದಿನ ಸಭೆ ಯಶಸ್ವಿಯಾಗಿ ಮುಕ್ತಾಯಗೊಳ್ಳುತ್ತದೆ.

೨೦೦೫ರ ನವೆಂಬರ್ ತಿಂಗಳಲ್ಲಿ ಎಂಇಎಸ್ ಪಕ್ಷದ ಮೇಯರ್ ಆಗಿದ್ದ ವಿಜಯ ಪಿ.ಮೋರೆಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ನಗರ ಸೇರಿದಂತೆ ಬೆಳಗಾವಿ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿದಾಗ, ಕನ್ನಡ ನಾಡಿನ ಯಾವುದೊಂದು ಪಿಳ್ಳೆಯಾಗಲಿ, ಗಂಡುಗಲಿ ಚಳುವಳಿಗಾರನಾಗಲಿ, ನಕಲಿ ಹೋರಾಟಗಾರರಾಗಲಿ, ಆ ನಿರ್ಣಯದ ವಿರುದ್ಧವಾಗಿ ತುಟಿಪಿಟಿಕೆನ್ನಲಿಲ್ಲ. ನಾರಾಯಣಗೌಡರು ತಾವೇ ಗುಪ್ತದಳವನ್ನು ರಚಿಸಿಕೊಂಡು, ಮೇಯರ್ ಮೋರೆ ಬೆಂಗಳೂರಿಗೆ ಬರುವ ದಿನವನ್ನು ತಿಳಿದುಕೊಂಡು, ಅವರಲ್ಲಿ ಎರಡು ದಿನ ತಂಗಿದ್ದಾಗ, ಅವರ ಚಲನವಲನವನ್ನನುಸರಿಸುತ್ತಾರೆ. ಇವರು ಇತರ ಮೂವರು ಎಂಇಎಸ್ ನಾಯಕರೊಡನೆ ಶಾಸಕರ ಭವನದಲ್ಲಿ ಕುಳಿತಿದ್ದಾಗ ಅವರ ಮುಖಕ್ಕೆ ಮಸಿ ಬಳಿದದ್ದು ಈಗ ಐತಿಹಾಸಿಕ ಸಂಗತಿಯಾಗುಳಿದಿದೆ. ಗೌಡರು ಕೆಲವು ದಿನ ಪೊಲೀಸ್‌ರ ಅಧೀನದಲ್ಲಿದ್ದರು, ನಿಜ. ಬಿಡುಗಡೆಯಾದ ಕೂಡಲೇ ಬೆಳಗಾವಿ ನಗರಪಾಲಿಕೆಯನ್ನು ವಿಸರ್ಜಿಸುವಂತೆ ಅಂದಿನ ಧರ್ಮಸಿಂಗ್ ಸರ್ಕಾರದ ಮೇಲೆ ಒತ್ತಡ ತರುತ್ತಾರೆ. ಈ ಸಾಹಸದ ಕಥೆ ಯಾವಾಗಲೂ ಚರಿತ್ರೆಯ ಪುಟಗಳಲ್ಲಿ ಜೀವಂತವಾಗಿ ಉಳಿಯುತ್ತದೆ.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಎರಡು ವರ್ಷಗಳಿಂದ (೨೦೦೫ರಿಂದ) ವೇದಿಕೆ ನಿರಂತರವಾಗಿ ಒತ್ತಡ ಹೇರುತ್ತಿದೆ. ೨೦೦೬ರ ಫೆಬ್ರವರಿ ತಿಂಗಳಲ್ಲಿ ಸಾವಿರಾರು ಕಾರ್ಯಕರ್ತರ ದಂಡನ್ನು ದೆಹಲಿಗೆ ಕರೆದೊಯ್ದು ಮುಷ್ಕರ ಧರಣಿಗಳನ್ನು ಹೂಡಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸುತ್ತಾರೆ. ನಾಡು-ನುಡಿ-ಗಡಿ-ಜಲ-ನೆಲಗಳಿಗೆ ಯಾವಾಗ, ಎಲ್ಲಿ ಧಕ್ಕೆಯಾಗುತ್ತದೆಯೋ ಆಗ ಅಲ್ಲಿ ನಾರಾಯಣಗೌಡರೂ, ಅವರ ವೇದಿಕೆಯ ಕಾರ್ಯಕರ್ತರೂ ಹಾಜರು. ಇದೀಗ ವೇದಿಕೆ ನಾಡು-ನುಡಿಗಳಿಗೆ ಭದ್ರ ಕೋಟೆಯಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಭವಿಷ್ಯವನ್ನರಿಯುವ ಸಲುವಾಗಿ ನಾರಾಯಣಗೌಡರಿಗೆ ಕೆಲವು ಪ್ರಶ್ನೆಗಳನ್ನು ಹಾಕಿದೆ. ಅವರು ಕೊಟ್ಟ ಉತ್ತರಗಳು ಮೇಲಿನ ಕಥಾನಕದಲ್ಲಿ ಸೇರಿವೆ. ಅದರಲ್ಲಿ ಸೇರ್ಪಡೆಯಾಗದ ಕೆಲವು ಪ್ರಶ್ನೋತ್ತರಗಳನ್ನಿಲ್ಲಿ ದಾಖಲಿಸಲಾಗಿದೆ.

೧. ನಿಮ್ಮ ಸಂಸ್ಥೆ ನೋಂದಾವಣಿಯಾಗಿದೆಯೇ? ಪ್ರಜಾಪ್ರಭುತ್ವದ ತತ್ವಗಳಿಗನುಗುಣವಾಗಿ ನಡೆಯುತ್ತಿದೆಯೇ?
ಉ: ಹೌದು. ನೋಂದಾವಣಿಗೊಂಡಿದೆ. ನಮ್ಮ ವೇದಿಕೆಯ ಶಾಖೆಗಳು ತಾಲ್ಲೂಕು ಸ್ತರದವರೆಗೆ ಹಬ್ಬಿವೆ.
೨. ಕನ್ನಡ ಸರ್ವ ಮಾಧ್ಯಮವಾಗದಿರಲು ಕಾರಣವೇನು? ಆ ಬಗ್ಗೆ ನೀವೇನಾದರೂ ಕಾರ್ಯಕ್ರಮಗಳನ್ನು ರೂಪಿಸಿದ್ದೀರಾ?
ಉ: ಈ ವಿಷಯದಲ್ಲಿ ಉನ್ನತ ಅಧಿಕಾರಿಗಳು ತೊಡಕಾಗಿದ್ದಾರೆ. ರಾಜಕೀಯ ನಾಯಕರಲ್ಲಿ ಇಚ್ಛಾಶಕ್ತಿಯಿಲ್ಲ. ಆ ಬಗ್ಗೆ ಉಗ್ರ ಚಳವಳಿ ಹೂಡಬೇಕಾಗಿದೆ.
೩. (ಅ). ಆರನೇಯ ಸ್ವಾಭಿಮಾನ ಸಮಾವೇಶವನ್ನು ನೋಡಿದಾಗ, ರಾಜ್ಯದ ರಾಜಕೀಯದಲ್ಲಿ ನಿಮಗೆ ಭಾರೀ ಭವಿಷ್ಯವಿದೆ ಎಂದು ಯಾರಿಗಾದರೂ ಮನದಟ್ಟಾಗದಿರದು. ನೀವೇಕೆ ಮುಂದಿನ ಚುನಾವಣೆಯಲ್ಲಿ ಭಾಗವಹಿಸಬಾರದು?
ಉ: ೫ ವರ್ಷ ಯಾವ ಚುನಾವಣೆ ಯಲ್ಲಿಯೂ ಭಾಗವಹಿಸಬಾರ ದೆಂದು ಕೊಂಡಿದ್ದೇನೆ.
(ಆ) ನಿಮ್ಮ ವೇದಿಕೆಯಿಂದ ಬೇರೆ ಯಾರನ್ನಾದರೂ ನಿಲ್ಲಿಸಬಹುದಲ್ಲವೇ?
ಉ: ಆ ಬಗ್ಗೆ ಯೋಚಿಸಬಹುದಾಗಿದೆ.
೪. ಪ್ರಾದೇಶಿಕ ಪಕ್ಷದಿಂದಲ್ಲದೆ ನಮ್ಮ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ ಎಂಬುದು ಬಲ್ಲವರ ಅಭಿಪ್ರಾಯವಾಗಿದೆ. ಈ ವಿಷಯದಲ್ಲಿ ನಿಮ್ಮ ಅನಿಸಿಕೆಯೇನು?
ಉ: ಆ ಬಗ್ಗೆ ಎರಡು ಮಾತಿಲ್ಲ.
೫. ನಿಮ್ಮ ವೇದಿಕೆ ಪ್ರಾದೇಶಿಕ ರಾಜಕೀಯ ಪಕ್ಷವಾಗಿ ಪರಿವರ್ತನೆಯಾಗಬಾರದೇಕೆ?
ಉ: ಆ ಬಗ್ಗೆ ಎರಡು ಮಾತಿಲ್ಲ.
೬. ನೀವು ಸುಲಲಿತವಾಗಿ ಅರ್ಥಪೂರ್ಣವಾಗಿ, ಭಾಷಣ ಮಾಡುತ್ತೀರಿ. ನಿಜಕ್ಕೂ ಅದು ಹೆಮ್ಮೆಯ ಸಂಗತಿ. ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ನೀವು ನಿತ್ಯವೂ ಓದುತ್ತೀರಾ?
ಉ: ತಕ್ಕಮಟ್ಟಿಗೆ ಅವುಗಳನ್ನು ತಿಳಿದುಕೊಂಡಿದ್ದೇನೆ. ನನಗೆ ಜ್ಞಾನ ಕುತೂಹಲವಿದೆ. ಓದುವ ಆಸೆಯಿದೆ. ಬಿಡುವಾಗೋಲ್ಲ. ಆದರೂ ಪ್ರಯತ್ನಿಸುತ್ತೇನೆ.
ಈಗಾಗಲೇ ತಾರುಣ್ಯದಲ್ಲಿಯೇ ಕನ್ನಡನಾಡಿನಲ್ಲಿ ದೊಡ್ಡ ಹೆಸರು ಮಾಡಿದ್ದೀರಿ. ಅಷ್ಟಕ್ಕೆಲ್ಲಾ ನಿಮ್ಮ ಧೈರ್ಯ, ಸ್ಥೈರ್ಯ, ಸಾಹಸ, ಛಲ, ದೂರದೃಷ್ಟಿ ಚಿಂತನ ಮಂಥನಗಳು ಹಾಗೂ ಸಮಷ್ಟಿ ಕ್ಷೇಮ ಕಾರಣ. ಇದೇ ರೀತಿ, ಇನ್ನೂ ಅಧಿಕತರವಾಗಿ ನೀವು ಮುಂದುವರೆಯಲೆಂದು, ನಿಮಗೆ ಸರ್ವಶುಭಗಳೂ ಪ್ರಾಪ್ತವಾಗಲೆಂದು ನಾನು ಹಾರೈಸುತ್ತೇನೆ ಎಂದು ಹೇಳಿದೆ.




-ದೇ.ಜವರೇಗೌಡ

No comments:

Post a Comment

ಹಿಂದಿನ ಬರೆಹಗಳು