Saturday, March 27, 2010

ಕನ್ನಡಿಗರ ಧ್ವನಿಯಾಗಿ ನಲ್ನುಡಿ...

ಕಳೆದ ಒಂದು ದಶಕದಿಂದ ಕರ್ನಾಟಕದ ಚಳವಳಿಯ ಕ್ಷೇತ್ರದಲ್ಲಿ ಹೊಸ ಆಶಾವಾದ, ಕ್ರಿಯಾಶೀಲತೆ, ಉತ್ಸಾಹವನ್ನು ಹುಟ್ಟುಹಾಕುವ ಮೂಲಕ ಕನ್ನಡ ನಾಡು-ನುಡಿಯ ಹೋರಾಟವನ್ನು ಹೊಸ ಎತ್ತರಕ್ಕೆ ತಂದು ನಿಲ್ಲಿಸಿರುವುದು ಕರ್ನಾಟಕ ರಕ್ಷಣಾ ವೇದಿಕೆ.

ಕನ್ನಡಿಗರ ಎಲ್ಲ ತವಕ-ತಲ್ಲಣಗಳಿಗೆ ಧ್ವನಿಯಾಗಿ, ಅವರ ಎದೆಯ ಕೂಗನ್ನು ಪ್ರಭುತ್ವಕ್ಕೆ, ಆಡಳಿತಶಾಹಿಗೆ ತಲುಪಿಸುತ್ತ ಬರುತ್ತಲೇ, ದೇಸೀಯ ಸಂಸ್ಕೃತಿಯ ಕುತ್ತಿಗೆ ಹಿಸುಕಿ, ಪರಭಾಷೆಯನ್ನು, ಪರಭಾಷಾ ಸಂಸ್ಕೃತಿಯನ್ನು ಸ್ಥಾಪಿಸಲು-ಕನ್ನಡಿಗರ ಮೇಲೆ ಹೇರಲು ಹೊರಟವರಿಗೆ ಸಿಂಹಸ್ವಪ್ನವಾಗಿದ್ದು ಕರವೇ. ಲಾಭಕೋರ ವ್ಯವಸ್ಥೆಗಾಗಿ, ಅಗ್ಗದ ಜನಪ್ರಿಯತೆಗಾಗಿ, ಹುಸಿರಾಷ್ಟ್ರೀಯತೆಯ
ಪ್ರತಿಪಾದನೆಗಾಗಿ ಕನ್ನಡತನವನ್ನು ಮಾರಿಕೊಂಡು ಬಂದ ನಮ್ಮವರ ವಿರುದ್ಧವೂ ಸಿಡಿದು ನಿಂತಿದ್ದು ಕರವೇ.

ಇವತ್ತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲ ಜಿಲ್ಲೆ, ಎಲ್ಲ ತಾಲ್ಲೂಕು, ಎಲ್ಲ ಹೋಬಳಿಗಳಲ್ಲೂ ತನ್ನ ಅಸ್ತಿತ್ವವನ್ನು ಕಂಡಿದೆ. ಕಳೆದ ೧೦ ವರ್ಷಗಳಿಂದ ತನ್ನ ವೈಯಕ್ತಿಕ ಜೀವನವನ್ನು ಬದಿಗಿಟ್ಟು, ಕನ್ನಡದ ಕೆಲಸಕ್ಕೇ ಶ್ರದ್ಧೆ, ಅಂತಃಕರಣದಿಂದ ತೊಡಗಿಸಿಕೊಂಡ ಶ್ರೀ ಟಿ.ಎ.ನಾರಾಯಣಗೌಡರ ಸಾಹಸದ ಫಲವಾಗಿಯೇ ಕರ್ನಾಟಕ ರಕ್ಷಣಾ ವೇದಿಕೆ ಇಂದು ರಾಜ್ಯದ ಅತಿದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ಗೌಡರ ರಾಜೀರಹಿತ ಹೋರಾಟದ ಫಲವಾಗಿಯೇ ಕನ್ನಡಿಗರ ಹಲವು ಬೇಡಿಕೆಗಳು ಈಡೇರಿವೆ, ಮತ್ತೆ ಕೆಲವು ಭಾಗಶಃ ಈಡೇರಿವೆ.

ಕಾವೇರಿ-ಕೃಷ್ಣಾ-ಹೊಗೇನಕಲ್-ಚಿತ್ರಾವತಿ ಮತ್ತಿತರ ಜಲವಿವಾದಗಳ ಸಂದರ್ಭದಲ್ಲಿ ಕರವೇ ಅಭೂತಪೂರ್ವ ಹೋರಾಟದ ಕಿಚ್ಚನ್ನು ಪ್ರದರ್ಶಿಸಿದ್ದನ್ನು ತಾವು ಬಲ್ಲಿರಿ. ಬೆಳಗಾವಿ, ಕಾರವಾರ, ಹೊಗೇನಕಲ್ ಮತ್ತಿತರ ಗಡಿಪ್ರದೇಶಗಳ ಮೇಲೆ ನೆರೆರಾಜ್ಯದವರ ಕಣ್ಣು ಬಿದ್ದಾಗಲೆಲ್ಲ ರಕ್ಷಣಾ ವೇದಿಕೆಯ ರಣಧೀರರು ಸಿಡಿದು ನಿಂತಿದ್ದನ್ನು ತಾವು ಬಲ್ಲಿರಿ. ರೈಲ್ವೆ ಇಲಾಖೆಯೂ ಸೇರಿದಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗಕ್ಕೆ ಧಕ್ಕೆ ಬಂದಾಗ, ಮಣ್ಣಿನ ಮಕ್ಕಳ ರಕ್ಷಣೆಗೆ ವೇದಿಕೆ ನಿಂತಿದ್ದೂ ತಮಗೆ ತಿಳಿದಿದೆ. ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆ ಬಂದಾಗಲೆಲ್ಲ ಲಾಠಿ-ಬೂಟು ಏಟು ತಿನ್ನುತ್ತಲೇ, ಜೈಲು ಸೇರುತ್ತಲೇ ಶ್ರೀ ಟಿ.ಎ.ನಾರಾಯಣಗೌಡರ ನೇತೃತ್ವದ ಕರವೇ ಸೇನಾನಿಗಳು ಕನ್ನಡತನದ ರಕ್ಷಣೆಗೆ ಧಾವಿಸುತ್ತಲೇ ಬಂದಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಾಗಿ ಕರವೇ ನಲ್ನುಡಿ ಇದೀಗ ನಿಮ್ಮ ಮುಂದಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಸಾಂಸ್ಕೃತಿಕ-ಸಾಹಿತ್ಯಿಕ ಅಭಿವ್ಯಕ್ತಿಯಾಗಿ ಈ ಪತ್ರಿಕೆ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಿದೆ. ಕರವೇ ಚಟುವಟಿಕೆಗಳ ಕುರಿತು ಅಧಿಕೃತ ಮಾಹಿತಿಗಳೂ ಪತ್ರಿಕೆಯಲ್ಲಿರುತ್ತದೆ.

ಇದರೊಂದಿಗೆ, ಕರ್ನಾಟಕದ ಕನ್ನಡಿಯಾಗಿ, ಕನ್ನಡಿಗರ ಧ್ವನಿಯಾಗಿ ಈ ಪತ್ರಿಕೆ ಮೂಡಿಬರಲಿದೆ.
ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಚರಿತ್ರೆ, ಚಳವಳಿಗೆ ಸಂಬಂಧಿಸಿದ ಲೇಖನ, ಪ್ರಬಂಧ, ಕವಿತೆ ಎಲ್ಲಕ್ಕೂ ಸ್ವಾಗತವಿದೆ. ನಲ್ನುಡಿಗೆ ನಿಮ್ಮ ಪ್ರೋತ್ಸಾಹ, ಬೆಂಬಲ, ಪ್ರೀತಿ, ಹರಕೆ ಇರಲಿ.

-ಪ.ಬ.ಜ್ಞಾನೇಂದ್ರ ಕುಮಾರ್
ಕಾರ್ಯನಿರ್ವಾಹಕ ಸಂಪಾದಕ

No comments:

Post a Comment