Tuesday, June 14, 2011

ಪೂಜೆ ಮತ್ತು ಪ್ರತಿಭಟನೆ



ಮೈಸೂರು ಜಿಲ್ಲಾ ಹನ್ನೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಅಧ್ಯಕ್ಷ ಭಾಷಣ-ಪ್ರೊ.ಕೆ.ಎಸ್.ಭಗವಾನ್

ತಮಗೆಲ್ಲ ಪ್ರಾರಂಭದಲ್ಲಿಯೇ ವಂದಿಸುತ್ತೇನೆ. ನಾನು ಮಾಡಿರುವೆನೆಂಬ ಕಿರು ಸೇವೆಯನ್ನು ತಾವು ತಮ್ಮ ಅಭಿಮಾನದ ಮಸೂರದಲ್ಲಿ ದೊಡ್ಡದಾಗಿ ಕಂಡಿದ್ದೀರಿ. ನಿಮಗೆ ನಾನು ಅಭಾರಿಯಾಗಿರುವೆ. ನಮ್ಮ ಹುಣಸೂರು ತಾಲೂಕು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಮಾನ್ ಹೆಚ್.ಪಿ.ಮಂಜುನಾಥ್ ಅವರ ಪ್ರೀತ್ಯಾದರಗಳಿಗೆ ನಾನು ಋಣಿ. ಪ್ರಾತಿನಿಧಿಕವಾದ ನಮ್ಮ ತಾಲೂಕಿನ ಮೂಲಕ ಇಡೀ ಕನ್ನಡ ನಾಡಿಗೆ, ತನ್ಮೂಲಕ ನಮ್ಮ ಬೃಹತ್ ರಾಷ್ಟ್ರಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಇಲ್ಲಿನ ಜನರು ಸ್ವಾಭಿಮಾನಿಗಳು. ಸ್ವಾಭಿಮಾನ ಸಮಾನತೆಯ ಅಧಿಷ್ಠಾನ. ಸ್ವಾಭಿಮಾನವೇ ಶಕ್ತಿ, ಸಂಪತ್ತು, ಸರ್ವಸ್ವ.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಡ್ಡೀಕೆರೆ ಗೋಪಾಲ್ ಅವರು ಉತ್ಸಾಹಿಗಳು, ಒಳ್ಳೆಯ ಸಂಘಟನಾಕಾರರು, ನಿಷ್ಠಾವಂತ ಕನ್ನಡ ಪ್ರೇಮಿ. ಎಲ್ಲರ ನೆರವಿನಿಂದ ಮೈಸೂರು ಜಿಲ್ಲಾ ಹನ್ನೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೂಡಿದೆ. ಸಹನೆ ಮತ್ತು ಸಹಕಾರ ಬಾಳಬಂಡಿಯ ಚಕ್ರಗಳು.
ಸಾಹಿತ್ಯ ಸಮ್ಮೇಳನಗಳನ್ನು ಕೆಲವರು ಜಾತ್ರೆ ಎನ್ನುವುದುಂಟು. ಸದ್ಯ ಅವರು ಸಂತೆ ಎನ್ನಲಿಲ್ಲ. ಸಂತೆಗೂ ಜಾತ್ರೆಗೂ ಮೂಲಭೂತ ವ್ಯತ್ಯಾಸ ಇದೆ. ಸಂತೆ ಪ್ರತಿ ವಾರ ಕಟ್ಟುತ್ತದೆ. ಜಾತ್ರೆ ನಡೆಯುವುದು ವರ್ಷಕ್ಕೊಮ್ಮೆ. ಸಂತೆ ಒಂದು ದಿನದ, ನಿಖರವಾಗಿ ಹೇಳುವುದಾದರೆ, ಒಂದು ಒಪ್ಪೊತ್ತಿನ ಅಥವಾ ಅರ್ಧ ದಿನದ ವ್ಯವಹಾರ. ಜಾತ್ರೆಗೆ ಒಂದು ದಿನದ ಅಥವಾ ಒಂದು ಮುಹೂರ್ತದ ಸಡಗರ. ಎರಡು ಕಡೆಯೂ ವ್ಯಾಪಾರ ನಡೆಯುತ್ತದೆ. ಸಂತೆಯಲ್ಲಿ ಜೀವನದ ಜಂಜಾಟಕ್ಕೆ ಪ್ರಾಮುಖ್ಯತೆ. ಜಾತ್ರೆಯಲ್ಲಿ ಭಕ್ತಿಗೆ ಪ್ರಾಧಾನ್ಯತೆ. ರಥೋತ್ಸವಕ್ಕೆ ಮೊದಲೇ ಜಾತ್ರೆ ಕಟ್ಟುತ್ತದೆ. ವಿನೋದ ಒದಗಿಸಲು ನಾಟಕ ಮತ್ತು ಸರ್ಕಸ್ ಕಂಪನಿಗಳು ಬರುತ್ತವೆ. ಜಾತ್ರೆಯಲ್ಲಿ ಕಳ್ಳರು ಅಗೋಚರವಾಗಿ ಇರುವರು. ಸಂತೆಗೆ ಹೋದವರು ರಾತ್ರಿ ಅಲ್ಲಿ ತಂಗುವುದಿಲ್ಲ. ಆದರೆ ಜಾತ್ರೆಗೆ ಹೋದವರು ಉಳಿಯುತ್ತಾರೆ. ಮನೆಯಿಂದ ತೆಗೆದುಕೊಂಡು ಹೋಗಿರುವ ರಾತಿಪಿನಿಂದ ಅಡಿಗೆ ಮಾಡಿಕೊಳ್ಳುವರು. ತೇರು ಹರಿದ ಮೇಲೆ, ಒಂದೆರಡು ದಿನ ಇದ್ದು, ವ್ಯಾಪಾರ ಕುದುರದಿದ್ದರೆ, ಜಾತ್ರೆ ಬೇಗ ಕಿತ್ತು ಹೋಗುತ್ತದೆ. ಸಂತೆಯಲ್ಲಿ ಕೇವಲ ಲೌಕಿಕ ಚಟುವಟಿಕೆ ಕಂಡು ಬಂದರೆ, ಜಾತ್ರೆಯಲ್ಲಿ ಅನುಭವವಾಗುವಂಥದು ಒಂದು ಅಲೌಕಿಕ ಸ್ತರದಲ್ಲಿ ಭಾಗವಹಿಸುವ ಅಥವಾ ಆ ಸ್ಥಿತಿಗೆ ಏರುವ ಉತ್ಸುಕತೆ. ಸಂತೆ ಪ್ರಾಪಂಚಿಕವಾದುದು. ಜಾತ್ರೆ ಧಾರ್ಮಿಕವಾದುದು. ಜಾತ್ರೆಯಲ್ಲಿ ಅನುಭವವಾಗುವಂಥದ್ದು ಒಂದು ಅಲೌಕಿಕ ಸ್ತರದಲ್ಲಿ ಭಾಗವಹಿಸುವ ಅಥವಾ ಆ ಸ್ಥಿತಿಗೆ ಏರುವ ಉತ್ಸುಕತೆ. ಸಂತೆ ಪ್ರಾಪಂಚಿಕವಾದುದು. ಜಾತ್ರೆ ಧಾರ್ಮಿಕವಾದುದು. ಜಾತ್ರೆಯಲ್ಲಿ ತೇರು ಹರಿಯುತ್ತದೆ. ಆಸಕ್ತರು ರಥದ ಹಗ್ಗ ಹಿಡಿದು ಎಳೆಯುತ್ತಾರೆ. ನೋಡುಗರು ಹಣ್ಣು ದವನ ಎಸೆಯುವರು. ಸಾಹಿತ್ಯ ಸಮ್ಮೇಳನಗಳಿಗೆ ಕನ್ನಡ ಪ್ರೇಮಿಗಳು ನಾಡಿನ ಮೂಲೆ ಮೂಲೆಯಿಂದ, ದೇಶದ ಎಲ್ಲ ಭಾಗಗಳಿಂದ ಆಗಮಿಸುತ್ತಾರೆ. ಸಮ್ಮೇಳನ ಸಮಷ್ಟಿ ಪ್ರಜ್ಞೆಯ ಸಂಕೇತ; ಸಾಧನೆಗಳನ್ನು ಶೋಧಿಸುವ ಸಮಾವೇಶ. ಜಿಲ್ಲಾ ಮಟ್ಟದ ಸಮ್ಮೇಳನಗಳಲ್ಲಿ ಹೆಚ್ಚಾಗಿ ಜಿಲ್ಲೆಯವರು ಸೇರುತ್ತಾರೆ. ಜಾತ್ರೆ ಮತ್ತು ಸಂತೆಗಳು ಮಾನವ ಸಂಬಂಧಗಳನ್ನು ಬೆಳೆಸುತ್ತವೆ. ಸಮ್ಮೇಳನಗಳು ಸಮ್ಮಿಲನಗಳಾಗಿ ಪರಿಚಯಸ್ಥರನ್ನು, ನೆಂಟರಿಷ್ಟರನ್ನು ನೋಡುವ ಅವಕಾಶಗಳನ್ನು ಒದಗಿಸುವವು. ಸಮ್ಮೇಳನಗಳಿಂದ ಭಾಷಾಭಿವೃದ್ಧಿಯಾಗಲೀ, ಸಾಹಿತ್ಯ ರಚನೆಯಾಗಲೀ ಆಗುತ್ತದೆಯೇ? ಎಂದು ಹೇಳಲು ಅಷ್ಟು ಸುಲಭವಾಗಲಾರದೇನೋ. ಏಕೆಂದರೆ ಬೌದ್ಧಿಕ ಮತ್ತು ಭಾವುಕ ಕೆಲಸವಾದ ಬರವಣಿಗೆ ಏಕಾಗ್ರತೆಯಿಂದ, ಬಹುವಾಗಿ ಏಕಾಂತದಲ್ಲಿ ಜರುಗುವಂಥದು. ಅದಕ್ಕೆ ಸಮ್ಮೇಳನಗಳು ಹುರುಪು ಮತ್ತು ಪ್ರೇರಣೆ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಸಾಹಿತ್ಯ ರಚನೆಗೆ ಲೋಕದ ಬದುಕೇ ಕಾರಣ ಮತ್ತು ಹೂರಣ. ಸೃಷ್ಟಿಯಲ್ಲಿ ಸರ್ವವೂ ಸಾಹಿತ್ಯದ ಸಾಮಾಗ್ರಿಯಾಗಬಲ್ಲದು. ಸಾಹಿತಿ ನಾನು ಕಂಡುಂಡ ಸಿಹಿ ಕಹಿ ಅನುಭವಗಳನ್ನು ಓದುಗನಿಗೆ ಸಂತೋಷ ಕೊಡುವ ಹಾಗೆ ಚಿತ್ರಿಸುತ್ತಾನೆ. ಮಾನವನ ಜೀವನ ವರ್ಣನೆಯೆ ಸಾಹಿತಿಯ ಪ್ರಮುಖ ಆದ್ಯತೆ. ಆದರೆ ಪ್ರಕೃತಿಯಲ್ಲಿ ಮನುಷ್ಯ ಒಬ್ಬನೇ ಇಲ್ಲ. ಅಲ್ಲಿ ಇತರ ಕೋಟಿ ಕೋಟಿ ಜೀವರಾಶಿಗಳಿವೆ. ಪ್ರಾಣಿ ಪಕ್ಷಿಗಳು, ಗಿಡ ಮರಗಳು, ಎಲೆ ಹೂವು ಹಣ್ಣುಗಳು, ನದಿ ಬೆಟ್ಟ ಗುಡ್ಡಗಳು ಅಪಾರ. ಇವುಗಳ ನೆಲೆ ಬೆಲೆಯ ಔಚಿತ್ಯವರಿತು ಲೇಖಕ ತನ್ನ ಬರವಣಿಗೆಯಲ್ಲಿ ಇವುಗಳಿಗೆ ಆಸ್ವಾದ್ಯ ಯೋಗ್ಯ ಮೂರ್ತ ರೂಪ ಕೊಡುತ್ತಾನೆ. ಕೇವಲ ಸಂತೋಷಕ್ಕಾಗಿ ಸಾಹಿತ್ಯ ಎಂಬ ದೃಷ್ಟಿಕೋನದಿಂದ ದೂರವಾದುದು ಬಂಡಾಯ ಧೋರಣೆ. ಸಾಹಿತ್ಯ ಕಲೆಗಳು ಜೀವನಕ್ಕಾಗಿ, ಜೀವನವನ್ನು ಉತ್ತಮಗೊಳಿಸುವುದಕ್ಕಾಗಿ ಅದನ್ನು ಸಮೃದ್ಧಗೊಳಿಸಿ ಸುಖಪಡುವುದಕ್ಕಾಗಿ ಎನ್ನುವ ಆರೋಗ್ಯಕರ ದೃಷ್ಟಿ ಅವಶ್ಯಕ. ಇದಕ್ಕೆ ಬದಲಾಗಿ ಸಾಹಿತ್ಯಕ್ಕಾಗಿ ಸಾಹಿತ್ಯ, ಕಲೆಗಾಗಿ ಕಲೆ ಎನ್ನುವುದು ಬೇಜವಾಬ್ದಾರಿ ನಿಲುವು. ಅನ್ನಕ್ಕಾಗಿ ಅನ್ನ ಎಂದರೆ ಎಷ್ಟು ಹಾಸ್ಯಾಸ್ಪದವಾಗುತ್ತದೆಯೋ, ಇದೂ ಅಷ್ಟೇ ನಗೆಪಾಟಲಾಗುತ್ತದೆ. ಬರಿ ಭಾವೋದ್ದೀಪನೆ ಉಂಟು ಮಾಡಿ, ಮನೋರಂಜನೆ ಒದಗಿಸುವುದಷ್ಟೇ ಅಲ್ಲ ಸಾಹಿತ್ಯದ ಕೆಲಸ. ಅದು ಬುದ್ಧಿಯನ್ನು ನಿಶಿತಗೊಳಿಸಿ, ಮನೋದ್ದೀಪನೆ ಶ್ರೇಷ್ಠ ಸಾಹಿತ್ಯದ ಗುಣ ಲಕ್ಷಣಗಳು. ಇಡೀ ಬದುಕನ್ನು ಪರಿವರ್ತಿಸುವ, ಉಳ್ಳವರು ಮತ್ತು ಇಲ್ಲದವರ, ಗ್ರಾಮೀಣರು ಮತ್ತು ನಾಗರಿಕರ, ಅಕ್ಷರಸ್ಥರು ಮತ್ತು ಅವಿದ್ಯಾವಂತರ ಬದುಕುವ ರೀತಿಯನ್ನು ಬದಲಿಸುವ, ಅವರ ಬಾಳನ್ನು ಹಸನುಗೊಳಿಸುವ ಹಸುರು ಸಾಹಿತ್ಯ ಅಗತ್ಯ ಇಂದು ಅಧಿಕವಾಗಿದೆ. ಎಲ್ಲಾ ಸಾಮಾಜಿಕ ಆರ್ಥಿಕ ಮತೀಯ ತಾರತಮ್ಯಗಳನ್ನೂ ತೊಲಗಿಸಿ, ಸರ್ವ ಜ್ಞಾನ ಶಾಖೆಗಳ ಅತ್ಯುತ್ತಮ ಅರಿವನ್ನು ಪಡೆದುಕೊಂಡು, ಸಮಸ್ತ ವರ್ಗಗಳ ಪ್ರಜ್ಞೆಯನ್ನು ಬೆಳೆಸಿ ಎತ್ತರಕ್ಕೆ ಕೊಂಡೊಯ್ಯುವ ಬರವಣಿಗೆ ಪ್ರಕೃತದಲ್ಲಿ ಅತ್ಯಾವಶ್ಯಕವಾಗಿದೆ. ಏಕೆಂದರೆ ಈಗ ಸಾರ್ವತ್ರಿಕ ಶಿಕ್ಷಣದ ಸ್ಫೋಟವಾಗಿದೆ. ನವ ವಿದ್ಯಾವಂತರ ಮನಸ್ಸನ್ನು ವಿಶಾಲಗೊಳಿಸುವ, ಹೃದಯವನ್ನು ಆಳಗೊಳಿಸುವ ಅತ್ಯುತ್ತಮ ವಾಚನ ಸಂಪತ್ತು ಸದಾ ಸೃಷ್ಟಿಯಾಗುತ್ತಿರಬೇಕು. ಇಂಥ ಸರ್ವಾಗ್ರಹಿ, ಸರ್ವವ್ಯಾಪಿ, ಸರ್ವೋಪಯೋಗಿ ವಾಙ್ಮಯವನ್ನು ಹಸುರು ಸಾಹಿತ್ಯ ಎನ್ನಬಹುದು. ಹಸುರು ಸಮೃದ್ಧಿ, ಸಮಾನತೆ ಮತ್ತು ಸಂತೋಷದ ಸಂಕೇತ. ಈ ಹಿನ್ನೆಲೆಯಲ್ಲಿ ಹಿಂದಿನ ಬರವಣಿಗೆಗಳಿಂದ, ಸಾಂಪ್ರದಾಯಿಕ ಕೃತಿಗಳಿಂದ, ಕೆಂಪು ಸಾಹಿತ್ಯದಿಂದ ವೈಜ್ಞಾನಿಕ ವೈಚಾರಿಕ ಮನಸ್ಸಿಗೆ ಏನೆಲ್ಲ ಹಿತವಾಗಿ ಕಾಣುತ್ತದೋ ಅದನ್ನು ದಶ ದಿಕ್ಕುಗಳಿಂದಲೂ ಎಲ್ಲ ಬಗೆಯ, ಎಲ್ಲ ಸ್ತರದ ಅಪೂರ್ವ ಚೇತನಗಳು ಬರವಣಿಗೆಯ ಕಾಯಕದಲ್ಲಿ ತೊಡಗಿಕೊಂಡಿರುವುದರಿಂದ ಹಿಂದೆಂದೂ ಕಾಣದ ವೈವಿಧ್ಯ ಮತ್ತು ಅನುಭವಗಳು ಅಭಿವ್ಯಕ್ತಿ ಪಡೆಯುತ್ತಿವೆ. ಇದು ಹಸುರು ಸಾಹಿತ್ಯ ವಿಸ್ತಾರಗೊಳ್ಳುತ್ತಿರುವ ಬಗೆ ಎಂದು ಭಾವಿಸುತ್ತೇನೆ.
ಆದ್ದರಿಂದ ಬರಹಗಾರನ ಸೃಜನಶೀಲತೆ ಸರ್ವತೋಮುಖಿ ಆಗಿರಬೇಕಾಗುತ್ತದೆ. ಸೃಜನಶೀಲತೆ ಎನ್ನುವುದು ಕತೆ, ಕವನ, ಕಾದಂಬರಿ, ನಾಟಕ, ಇತ್ಯಾದಿ ಪ್ರಕಾರಗಳಿಗೆ ಮಾತ್ರ ಸೀಮಿತವಾದದಲ್ಲ. ನವ್ಯರಲ್ಲಿ ಕೆಲವರು ಸೃಜನಶೀಲತೆ ಬಗ್ಗೆ ಗದ್ದಲ ಮಾಡಿದರು. ಆದರೆ ನವೋದಯಯರು ಈ ಕುರಿತು ಸದ್ದಿಲ್ಲದೆ ದೊಡ್ಡ ಸಾಧನೆ ಮಾಡಿದ್ದಾರೆ. ಭಾಷೆಯಲ್ಲಿ ಎಲ್ಲವನ್ನೂ ಹೇಳುವುದಕ್ಕಾಗುವುದಿಲ್ಲ ಎಂದದ್ದೂ ಇದೆ. ಇದು ಇಂಗ್ಲೀಷ್ ಕವಿ ವಿಮರ್ಶಕ ಟಿ.ಎಸ್.ಎಲಿಯಟ್ ತನ್ನ ಫೋರ್ ಕ್ವಾರ್ಟೆಟ್ಸ್ ಕಾವ್ಯದ ’ಈಸ್ಟ್ ಕೋಕರ್ ಭಾಗದಲ್ಲಿ (ಸಾಲು ೧೭೧-೧೮೯ ನೋಡಿ). ಹೇಳಿದ್ದು. ಇದನ್ನು ಎಲಿಯಟ್ ತತ್ವಜ್ಞಾನಿ (ನೀಟ್ಸೆಯಿಂದ ತೆಗೆದುಕೊಂಡಿದ್ದಾನೆ. ಕನ್ನಡದಲ್ಲಿ ಕೆಲವರು ಅದು (೧೮೪೪-೧೯೦೦) ತಮ್ಮದೆಂಬಂತೆ ಹೇಳಿಕೊಂಡರು). ಆದರೆ ವ್ಯಾಸ, ವಾಲ್ಮೀಕಿ ಪಂಪ, ಕುಮಾರವ್ಯಾಸ ಷೇಕ್‌ಸ್ಪಿಯರ್, ಟಾಲ್‌ಸ್ಟಾಯ್ ಮುಂತಾದವರು ಇಂಥ ಮಾತುಗಳನ್ನು ಆಡದೆ ಮಹತ್ತಮ ಕೃತಿಗಳನ್ನು ಸೃಷ್ಟಿಸಿದರು. ಜೀವನ ಮತ್ತು ಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಏನೇನು ಹೊಸದು, ಬಾಳಿಗೆ ಬೆಳಕನ್ನು ನೀಡಿ ಬುದ್ಧಿಶಕ್ತಿಯನ್ನು ವೃದ್ಧಿಸಿ ತನ್ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಸುಖ ಶಾಂತಿಗೆ ಸಾಧನವಾಗುತ್ತದೋ ಅದು ನಿಜವಾಗಿ ಸೃಜನಶೀಲತೆ ಎಂದು ತಿಳಿಯಬೇಕು. ಈ ದೃಷ್ಟಿಯಿಂದ ಸಮೀಕ್ಷಿಸಿದಾಗ ಯಾವ ಕವಿಯೂ ಸಾಹಿತಿಯೂ ಸಂಪೂರ್ಣ ಸ್ವೋಪಜ್ಞನಲ್ಲ. ವಿಚಾರಗಳು ಅಥವಾ ಆಲೋಚನೆಗಳನ್ನು ತತ್ವಜ್ಞಾನಿಗಳು, ಮನಃಶಾಸ್ತ್ರಜ್ಞರು, ವಿಜ್ಞಾನಿಗಳು, ಸಮಾಜ ಸುಧಾಕರು ಅಥವಾ ಅನುಭಾವಿಗಳಿಂದ ತೆಗೆದುಕೊಳ್ಳುತ್ತಾರೆ. ಇವುಗಳಿಂದ ಸಾಹಿತಿಗಳು ತಮ್ಮ ಸ್ವಭಾವ, ಸಂಸ್ಕಾರ ಮತ್ತು ಅಭಿರುಚಿಗಳಿಗೆ ತಕ್ಕಂತೆ ತಮಗೆ ಇಷ್ಟವಾದ ತಾತ್ವಿಕತೆಯನ್ನು ಕಟ್ಟಿಕೊಳ್ಳುವರು. ಆ ಆಲೋಚನೆಗಳನ್ನು ಭಾವಗಳನ್ನಾಗಿ ಪರಿವರ್ತಿಸಿ ಸಾಹಿತ್ಯ ರೂಪ ಕೊಡಲಾಗುತ್ತದೆ. ಸಾಹಿತಿಗಳು ಮಾನವ ಜನಾಂಗದ ನೇತಾರರಲ್ಲ. ಬರಹಗಾರರು ಮನೋರಂಜನೆಗಾರರು.
ಬರಹಗಾರ ಪ್ರಜ್ಞಾವಂತನಾಗಿದ್ದು ಸಮಾಜದಲ್ಲಿ ಕಂಡುಬರುವ ಕುರೂಪಗಳು ಮತ್ತು ಕೊಳಕುಗಳನ್ನು ಕುರಿತು ಬರೆಯುತ್ತಾನೆ. ಭಾರತೀಯ ಸಮಾಜ ಹೇಳಿ ಕೇಳಿ ಜಾತಿಗಳ ತಡಿಕೆ. ಇಲ್ಲಿ ಯಾರ ಮೈಯನ್ನು ಕೆರೆದರೂ ರಕ್ತ ಬರುವುದಿಲ್ಲ, ಜಾತಿ ಚಿಮ್ಮುತ್ತದೆ. ಇಲ್ಲಿನ ಸಾಮರಸ್ಯ ತಂತಿ ಮೇಲಿನ ನಡಗೆಯ ಸಮತೋಲನದಂತೆ ಪ್ರಯಾಸಕರ. ಭಾರತಾಂಬೆ ಮತ್ತು ಕನ್ನಡ ಭುವನೇಶ್ವರಿಯ ಕೃಪೆಯಿಂದ ಇದು ಹೇಗೋ ಸಾಗುತ್ತಿದೆ. ಆದರೆ ಪೊಲೀಸ್ ಮತ್ತು ಸೈನ್ಯದ ಬಲಗಳಿಂದ ನ್ಯಾಯ ಮತ್ತು ಶಿಸ್ತು ಪಾಲನೆ ಆಗುತ್ತಿದೆ ಎಂಬ ವಾಸ್ತವವನ್ನು ಮರೆಯುವಂತಿಲ್ಲ. ಜಾತಿಯಲ್ಲಿ ವರ್ಗ, ವರ್ಗದಲ್ಲಿ ಜಾತಿ ಬೆರೆತುಕೊಂಡು ಹಿಮ್ಮುಖ ಮುಮ್ಮುಖವಾಗಿ ಮೇಲ್ಮುಖ ಕೆಳಮುಖವಾಗಿ ಏಕ ಕಾಲದಲ್ಲಿ ಸಂಕೀರ್ಣವಾಗಿ ಕೆಲಸ ಮಾಡುತ್ತಿದೆ. ವರ್ಗ ಎಂದು ಎಷ್ಟೇ ವಾದಿಸಿದರೂ ಇಲ್ಲಿ ಎದುರಾಗುವುದು ಜಾತಿಯೇ. ಒಂದೇ ಮತ ಅಥವಾ ಜನಾಂಗ ಇರುವ ಕಡೆ ವರ್ಗವನ್ನು ಗುರುತಿಸುವುದು ಸಾಧ್ಯವಾದೀತು. ಜಾತಿಯೇ ಸರ್ವ ಪ್ರಧಾನವಾಗಿ ಎಲ್ಲ ವರ್ಗೀಕರಣವನ್ನು ನಿರರ್ಥಕಗೊಳಿಸಬಲ್ಲದು. ಜಾತಿ ಎಂದೂ ಸರಳವಲ್ಲ. ಅದರಲ್ಲಿ ಮತೀಯ ಆರ್ಥಿಕ ರಾಜಕೀಯ ಸಾಮಾಜಿಕ ಇತ್ಯಾದಿ ಆಯಾಮಗಳು ಹೆಣೆದುಕೊಂಡು ಸಂಕ್ಲಿಷ್ಟವಾಗಿ ಸಂಕಟಕರವಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಪ್ರಾಣಿ ಪಕ್ಷಿಗಳ, ನರ ಮಾನವರ ಆರೋಗ್ಯ ಪಾಲನೆಗೆ ವೈದ್ಯರು ಅವಶ್ಯಕವಾಗಿರುವಂತೆ ಮತ ಮತ್ತು ಸಮಾಜಗಳ ಸ್ವಾಸ್ಥ್ಯ ಸಂವರ್ಧನೆಗೆ ಸುಧಾರಕರು ಮತ್ತು ಕ್ರಾಂತಿಕಾರಿಗಳು ಸದಾ ಇರಬೇಕು. ಸುಧಾರಕರು ಮತ್ತು ಕ್ರಾಂತಿಕಾರಿಗಳು ಸಮಾಜದ ಸ್ವಸ್ಥತೆ ಮತ್ತು ಸಂವರ್ಧನೆಯನ್ನು ಕಾಪಾಡುವ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರಾಗಿದ್ದಾರೆ.
ಹಾಗಾಗಿ ಬರಹಗಾರ ತಾಯಿಯಂತೆ ಇರಬೇಕೋ? ಇಲ್ಲ ವೈದ್ಯನಂತೆ ನಡೆದುಕೊಳ್ಳಬೇಕೇ? ಎಂಬುದು ಪ್ರಶ್ನೆ. ಆದರೆ ಮಾತೆಯದು ಮಮಕಾರಮಯ ಪ್ರೀತಿ. ಅವಳದು ಒಲವರದ ಪ್ರಕೃತಿ. ಮಕ್ಕಳ ತಪ್ಪುಗಳನ್ನು ತಾಯಿ ಕ್ಷಮಿಸುವುದು, ಇಲ್ಲವೆ ಸಂದರ್ಭೋಚಿತವಾಗಿ ಅವುಗಳನ್ನು ಮರೆಮಾಚುವುದು ಸ್ವಾಭಾವಿಕ. ತಾಯಿಗೆ ಈ ನ್ಯೂನತೆ ಇರುವುದರಿಂದ, ಸಾಹಿತಿ ವೈದ್ಯನ ದೃಷ್ಟಿ ತಾಳಬೇಕಾದ್ದು ಅನಿವಾರ್ಯ. ವೈದ್ಯನ ಕಾಳಜಿ ಯಾವಾಗಲೂ ಆರೋಗ್ಯ ಪಾಲನೆ ಮತ್ತು ಜೀವ ರಕ್ಷಣೆ. ಔಷಧಿಗೆ ವಾಸಿಯಾಗದ ರುಜೆಯನ್ನು ಅವನು ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸುತ್ತಾನೆ. ಹಾಗಾಗಿ ಲೇಖಕನ ದೃಷ್ಟಿ ತಾಯಿಯ ಅಕ್ಕರೆಗಿಂತ ಹೆಚ್ಚಾಗಿ ಶಸ್ತ್ರಚಿಕಿತ್ಸಕನ ಆರೋಗ್ಯವರ್ಧಕ ಉದ್ದೇಶವನ್ನು ಹೊಂದಿರಬೇಕಾಗುತ್ತದೆ. ಸಮಾಜದಲ್ಲಿನ ಕುಂದು ಕೊರತೆಗಳನ್ನು ಚಿಂತಕ(ಕಿ) ಬರೆದು ಬಹಿರಂಗಪಡಿಸಿದ ಎಂದರೆ ಅವನು(ಳು) ಯಾವುದೋ ಕೋಮಿನ ಪಂಥದ ಮತದ ವಿರುದ್ಧ ಇದ್ದಾನೆ(ಳೆ) ಎಂದು ಅರ್ಥ ಮಾಡಿಕೊಳ್ಳಬಾರದು. ಅವನ ಜೀವಪರ ಜವಾಬ್ದಾರಿಯನ್ನು ಅಷ್ಟೇ ಬದ್ಧತೆಯಿಂದ ಗ್ರಹಿಸುವ ತಿದ್ದಿಕೊಳ್ಳುವ ಮನಸ್ಸನ್ನು ರೂಪಿಸಿಕೊಳ್ಳುವ ಧೀರ ನೈತಿಕ ಹೊಣೆಗಾರಿಕೆ ಸಮಾಜದ್ದು.
ಆದಿಮಾನವ ಬುಡಕಟ್ಟು ಒಂದೆಡೆ ಸೇರಿ ಪೂಜಿಸುತ್ತಿತ್ತು. ಆಗ ಪೂಜೆ ಕೂಡಿಸುವ ಶಕ್ತಿಯನ್ನು ಹೊಂದಿದ್ದು ನಿಜ. ಪ್ರಕೃತಿಯ ವಿಕೋಪಗಳಾದ ಬಿರುಗಾಳಿಗಳು, ಬರಸಿಡಿಲುಗಳು, ಬಿರುಮಳೆಗಳು, ಕಾಳ್ಗಿಚ್ಚು, ಪ್ರವಾಹಗಳು, ಭೂಕಂಪಗಳು, ಜ್ವಾಲಾಮುಖಿಗಳ ಲಾವಾಗಳಿಂದ ಸಾಂಕ್ರಾಮಿಕ ರೋಗಗಳಿಂದ, ದುಷ್ಟಮೃಗಗಳ ಹಾವಳಿಯಿಂದ, ಶತ್ರು ಬುಡಕಟ್ಟುಗಳಿಂದ ರಕ್ಷಣೆಗಾಗಿ ಆರ್ತ ಪ್ರಾರ್ಥನೆಯ ರೂಪದಲ್ಲಿ ಪೂಜೆ ಪ್ರಾರಂಭವಾಯಿತು. ಕಾಲಾಂತರದಲ್ಲಿ ಬುಡಕಟ್ಟು ನಾನಾ ಕಾರಣಗಳಿಗಾಗಿ ಒಡೆದು ಬೇರೆ ಆಯಿತು. ಹಳೆಯ ತಲೆಮಾರುಗಳು ನಶಿಸಿ, ಹೊಸ ಬಾಳು ಬಂದಾಗ ಆರಾಧಾನ ವಿಧಾನಗಳು ಬದಲಾದುವು. ಅವು ವ್ಯತ್ಯಾಸವಾದಾಗ ಅವರೇ ಬೇರೆ, ಇವರೇ ಬೇರೆ ಎಂಬ ತಾರತಮ್ಯಗಳು ಉಂಟಾದದ್ದು ನಿಜ. ಒಂದು ಕಾಲದಲ್ಲಿ ಒಂದುಗೂಡಿ ಮಾಡುತ್ತಿದ್ದ ಅರ್ಚನೆ ಭಿನ್ನವಾಯಿತು. ಬುಡಕಟ್ಟುಗಳು ವಿವಿಧ ಜನಾಂಗಗಳಾದವು. ಅದಕ್ಕೆ ತಕ್ಕಂತೆ ಮತಗಳು ಹುಟ್ಟಿಕೊಳ್ಳಲು ಸಾಧ್ಯವಾಯಿತು. ಮತ ’ಮನ್ ಧಾತುವಿನಿಂದ ಬಂದಿದೆ. ಮನ್ ಎಂದರೆ ಮನಸ್ಸು. ಮನಸ್ಸಿನಿಂದ ಮತ ಮೂಡಿತು. ಮತಗಳೆಲ್ಲ ಮನೋವಿಕಾರಗಳು. ಪ್ರಪಂಚದಲ್ಲಿ ಈಗ ಧರ್ಮಗಳು ಇಲ್ಲ, ಇರುವುದೆಲ್ಲ ಮತಗಳು. ಧರ್ಮ ಎಂದರೆ ಭೇದ ಭಾವನೆ ಇಲ್ಲದೆ ಎಲ್ಲರನ್ನೂ ರಕ್ತ ಸಂಬಂಧದಲ್ಲಿ ಬೆಸೆಯುವ ಸಮಾನತಾ ಭಾವ. ಮತಧರ್ಮ ಎನ್ನುವುದು ತಪ್ಪು ಪ್ರಯೋಗ.
ಈ ಹಿನ್ನೆಲೆಯಲ್ಲಿ ಪೂಜೆ ಮತ್ತು ಪ್ರತಿಭಟನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಇವು ಪರಸ್ಪರ ಪೂರಕವಾಗಿವೆ ಎಂದರೆ ಅಚ್ಚರಿಯಾದೀತು. ಎಲ್ಲರನ್ನೂ ಒಂದು ಎಂದು ಕೂಡಿಸಿ ಭೇದ ಭಾವನೆಯನ್ನೆಲ್ಲ ತೊಡೆದುಹಾಕಿ, ಜೀವನದ ಅತ್ಯುತ್ತಮ ಭಾವನೆಗಳನ್ನು ಮಹೋನ್ನತ ತತ್ವಗಳನ್ನು ಸದಾ ಚಿಂತಿಸುವುದು ಧ್ಯಾನಿಸುವುದು, ಅವುಗಳನ್ನು ಬಿಡದೆ ಅನುಷ್ಠಾನದಲ್ಲಿ ತರುವುದು ಪೂಜೆ ಎನಿಸಿಕೊಳ್ಳುತ್ತದೆ. ಇದಕ್ಕೆ ವಿರುದ್ಧವಾದುದೆಲ್ಲವನ್ನೂ ವ್ಯಕ್ತಿಗೆ ಸಮಾಜಕ್ಕೆ ದೇಶಕ್ಕೆ ಅಂದರೆ ಜಗತ್ತಿಗೆ ಹಿತಕರವಲ್ಲ ಎಂದು ವಿಶ್ಲೇಷಿಸಿಕೊಂಡು ಹೊರದೂಡುವುದು ಪ್ರತಿಭಟನೆ ಆಗುವುದು. ಆದ್ದರಿಂದ ಪೂಜೆಯನ್ನು ದೇವಸ್ಥಾನಗಳು, ಮಸೀದಿಗಳು, ಚರ್ಚುಗಳು ಇತ್ಯಾದಿ ವಿಚ್ಛಿದ್ರಕಾರಕವಾದ ಮತೀಯ ಸ್ಥಳಗಳಲ್ಲಿ ನಡೆಯುವ ಅರ್ಚನೆ ಎಂಬ ಅರ್ಥದಲ್ಲಿ ಇಲ್ಲಿ ಬಳಸಿಲ್ಲ. ಏಕೆಂದರೆ ಇಂಥ ಕಡೆಗಳಲ್ಲಿ ಬೇರೊಂದು ಪಂಗಡದ ಜನರನ್ನು ಹೊರಗಿಡುವ ಅಥವಾ ಅನ್ಯ ಜನಾಂಗದವರು ಅದು ನಮ್ಮ ಆರಾಧನಾ ಜಾಗವಲ್ಲ ಎಂದು ಭಾವಿಸಿಕೊಂಡು ಹೋಗದಿರುವಂಥ, ವಾ(ನಾ)ತಾವರಣ ಇರುವುದು. ಈ ಎಡೆಗಳಲ್ಲಿ ನಡೆಯುವ ಆರಾಧನೆ ಸಾಂಪ್ರದಾಯಕವಾಗಿ ಕಂದಾಚಾರಗಳನ್ನು ಮೌಢ್ಯಗಳನ್ನು ಅಜ್ಞಾನವನ್ನು, ಜೊತೆಗೆ ಗೊತ್ತಿಲ್ಲದಂತೆ ಸುಪ್ತವಾಗಿ ಜನಾಂಗ ದ್ವೇಷವನ್ನು ಬೀರುತ್ತದೆ. ಇಲ್ಲಿ ’ದೇವರು’ ಮಾನವರಿಗೆ ಬೆಳಕು ನೀಡುವ ಶಕ್ತಿಯಾಗದೆ ಕತ್ತಲೆಯನ್ನು ಬಿತ್ತುವ ಬೆದರು ಬೊಂಬೆಯಾಗಿ, ಕೊನೆಗೆ ಬಾಂಬಾಗಿ ಸಿಡಿಯುತ್ತದೆ.
ಹೀಗಿರುವುದರಿಂದ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಯಾವುದೇ ಮಂದಿರ ಮಸೀದಿ ನಿರ್ಮಿಸುವುದು ರಾಷ್ಟ್ರಕ್ಕೆ ಹಿತವಲ್ಲ. ಅಲ್ಲಿ ರಾಷ್ಟ್ರೀಯ ಉದ್ಯಾನವನ್ನು ಬೆಳೆಸುವುದು ಮತೀಯ ಕಲಹವನ್ನು ನಿವಾರಿಸುವ ಉದ್ದೇಶದಿಂದ ಬಹಳ ಒಳ್ಳೆಯದು. ಜಾತಿ ಮತ ಜನಾಂಗಗಳ ಬೇಧ ಭಾವನೆ ಮತ್ತು ವೈಷಮ್ಯಗಳ ಇಂಗಾಲಾಮ್ಲವನ್ನು ಹೀರಿಕೊಂಡು ಮಾನವ ಮೈತ್ರಿ ಮತ್ತು ವಿಶ್ವಶಾಂತಿ ಸೌಹಾರ್ದಗಳ ಆಮ್ಲಜನಕವನ್ನು ನೀಡುವ ರಾಷ್ಟ್ರೀಯ ಉದ್ಯಾನವನ ಅಲ್ಲಿ ಬೆಳೆಯುವಂತಾಗಲಿ. ಇದರಿಂದ ಪರಿಸರ ಉತ್ತಮವಾಗುತ್ತದೆ. ಅಲ್ಲಿಗೆ ಎಲ್ಲಾ ಮತದ ಜನರು ಹೋಗಿ ಒಳ್ಳೆಯ ಗಾಳಿ ಸೇವಿಸಬಹುದು. ರಾಷ್ಟ್ರದಲ್ಲಿ ಉತ್ತಮ ವಾತಾವರಣ ಹಬ್ಬಿಸಿ ಉನ್ನತ್ತಿಗೇರಲು ಸಾಧ್ಯವಾಗುತ್ತದೆ.
ಮಾನವೀಯ ಧಾರ್ಮಿಕ ಮನೋಭಾವನೆಗಳನ್ನು ಒಂದೆರಡು ಉದಾಹರಣೆಗಳಿಂದ ವಿವರಿಸಿಕೊಳ್ಳಲು ಯತ್ನಿಸೋಣ. ಬಸವಣ್ಣ ಮತ್ತು ಇತರ ಶರಣರು ದೇವರನ್ನು ನಂಬಿದ್ದರು. ಶರಣರು ನಂಬಿದ್ದು ಸಾಂಸ್ಥಿಕ ದೇವರನ್ನಲ್ಲ. ದೇವರು ಶರಣರ ಆತ್ಮಸಾಕ್ಷಿಯ ಸಂಕೇತ. ಆದರೆ ನಮ್ಮ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮುಂತಾದ ಸಾಮಾಜಿಕ ಅನಿಷ್ಟಗಳನ್ನು ದೈವನಿರ್ಮಿತ ಎಂದು ಬೊಗಳೆ ಬಿಡುವವರನ್ನು ಅವರು ಒಪ್ಪದೆ ತಿರಸ್ಕರಿಸಿದ್ದರು. ಆದ್ದರಿಂದ ದೇವರನ್ನು ನಂಬಿದರೆ ಕ್ರಾಂತಿಕಾರಿ ಆಗುವುದಿಲ್ಲ ಎಂದು ಭಾವಿಸುವುದು ತಪ್ಪು ಕಲ್ಪನೆ ಮತ್ತು ಬೆಪ್ಪು ನಿರ್ಧಾರ. ಬಸವಣ್ಣಾದಿ ಪ್ರಮಥರಿಗಿಂತ ಕ್ರಾಂತಿಕಾರಿಗಳು ಯಾರಿದ್ದಾರೆ? ಸ್ವಾಮಿ ವಿವೇಕಾನಂದರಿಗಿಂತ ದೊಡ್ಡ ಕ್ರಾಂತಿಕಾರಿ, ಆಚಾರ್ಯರು ಎನ್ನಿಸಿಕೊಂಡವರಲ್ಲಿ ಯಾರಾದರೂ ಸಿಗುತ್ತಾರೆಯೇ? ಅನುಭಾವಿಗಳು ಕ್ರಾಂತಿಕಾರಿಗಳು. ಆಚಾರ್ಯರುಗಳು ಜಾತಿವಾದಿಗಳು. ಆಚಾರ್ಯರು ಸಿದ್ಧರಲ್ಲ, ಬದ್ಧರು. ಆದ್ದರಿಂದ ತಿರಸ್ಕರಿಸಬೇಕಾದ್ದು ದೇವರನ್ನಲ್ಲ. ದೇವರ ಹೆಸರಿನಲ್ಲಿ ನಂಬಿಸಿ ಪೋಷಿಸುತ್ತಿರುವ ಅವಿವೇಕಗಳನ್ನು, ಅನಾಚಾರಗಳನ್ನು, ಶೋಷಣೆಗಳನ್ನು, ಜಾತಿ ದೌರ್ಜನ್ಯಗಳನ್ನು. ಆದರೆ ಈ ಎಲ್ಲ ಅನಿಷ್ಟಗಳ ಜೊತೆ ದೇವರು ತಳುಕು ಹಾಕಿಕೊಂಡಿರುವುದರಿಂದ ಅಂತಿಮ ವಿಶ್ಲೇಷಣೆಯಲ್ಲಿ ದೇವರೆಂಬ ವಸ್ತುವೂ ತಿರಸ್ಕೃತವಾಗುತ್ತದೆ. ಇದಕ್ಕೆ ಉದಾಹರಣೆಯಾಗಿ ನನ್ನ ವೈಚಾರಿಕ ಲೇಖನ ’ಶ್ರೀರಾಮ ದೇವರೇ? ಅಲ್ಲ, ಕೊಲೆಗಡುಕ’ ನೋಡಬಹುದು (ಅನನ್ಯತೆ ಕೃತಿ ೨೦೦೯). ಈ ವಿಶ್ಲೇಷಣೆಯನ್ನು ಗಮನಿಸಿದರೆ ಹಿಂದೂ ಚಾತುರ್ ವರ್ಣಪದ್ಧತಿ ಅರ್ಥಾತ್ ಜಾತಿ ವ್ಯವಸ್ಥೆ-ಎಷ್ಟು ಕ್ರೂರ, ಭಯಂಕರ, ಜೀವ ವಿರೋಧಿ ಎಂದು ಅರಿವಾಗುತ್ತದೆ. ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬರುವ ಶಂಬೂಕ ವಧೆ ಪ್ರಸಂಗ ಒಂದನ್ನು ಖಚಿತವಾಗಿ ಅರ್ಥಮಾಡಿಕೊಂಡರೆ ಸಾಕು. ಇಡೀ ಜಾತಿ ವ್ಯವಸ್ಥೆ ಸರಿಯಾಗಿ ತಿಳಿಯುತ್ತದೆ. ಆದ್ದರಿಂದ ಏನನ್ನು ಪುರಸ್ಕರಿಸಬೇಕು, ಯಾವುದನ್ನು ತಿರಸ್ಕರಿಸಬೇಕು ಎಂದು ಅರಿತು ಅನುಸರಿಸುವುದೇ ಪ್ರತಿಭಟನೆ. ಆಗ ಪೂಜೆ ತಿರಸ್ಕಾರವಾಗಿ ಪ್ರತಿಭಟನೆ ಪುರಸ್ಕರವಾಗುತ್ತದೆ. ಹೀಗಾಗಿ ವಚನಕಾರರು ನಂಬಿದ್ದು ಮಾನವನಲ್ಲಿ ಇರುವ ಚೈತನ್ಯವನ್ನು, ಹೃದಯದಾಳದಲ್ಲಿ ಗುಪ್ತ ನಿಧಿಯಾಗಿರುವ ಸದ್ಭಾವನೆಯ ಉದಾತ್ತತೆಯನ್ನು ಎಂದು ಅರಿವಾಗುವುದು. ಶರಣರ ಅರ್ಥದಲ್ಲಿ, ಎಲ್ಲಾ ಅತ್ಯುತ್ತಮ ಆದರ್ಶಗಳ ವಿಚಾರಗಳ ಆನುಭಾವಿಕ ಸತ್ಯಗಳ ಮೊತ್ತವೇ ದೇವರು. ಅಂದರೆ ಬೆಳಕು, ಅರಿವಿನ ಸ್ಫೋಟದ ಬೆಳಕೇ ದೇವರು.
ಇನ್ನೊಂದು ನಿದರ್ಶನ ಎಂದರೆ ಕುವೆಂಪು (೧೯೦೪-೯೪). ಇವರ ಜೀವನ ಮತ್ತು ಕೃತಿಗಳಲ್ಲಿ ಪೂಜೆ ಮತ್ತು ಪ್ರತಿಭಟನೆ ಹಾಸುಹೊಕ್ಕಾಗಿ ಹರಿದಿವೆ. ಇದನ್ನು ಸಾಮಾನ್ಯವಾಗಿ ದ್ವಂದ್ವ ಅಥವಾ ವೈರುಧ್ಯ ಎಂದು ಹೇಳಲು ಅವಕಾಶವಾಗಿದೆ. ಶ್ರೀರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಆಧ್ಯಾತ್ಮ ಮಾರ್ಗದಲ್ಲಿ ಸಾಧನೆ ಮಾಡಿದವರು ಕುವೆಂಪು. ಈ ಇಬ್ಬರು ಅಸಾಧಾರಣ ಮಹಾತ್ಮರ ಜೀವನ ಸಾಧನೆಗಳನ್ನು ಗಮನಿಸಿದರೆ, ನಿರ್ವಿಕಲ್ಪ ಸಮಾಧಿ ಎಂಬ ಸ್ಥಿತಿಯಲ್ಲಿ ದೇವರು ಎಂಬ ವಸ್ತುವೂ ಕರಗಿ ನಿರಾಕಾರವಾಗುತ್ತದೆ ಅಥವಾ ಇಲ್ಲವಾಗುವುದು. ಇದು ಅತ್ಯುನ್ನತ ಅಧ್ಯಾತ್ಮಿಕ ಅನುಭವ ಎನ್ನುವರು. ಇದನ್ನೇ ವಿಶ್ವಗುರು ಬುದ್ಧ (ಕ್ರಿ.ಪೂ.೫೬೦-೪೮೦) ’ಶೂನ್ಯ ಎಂದುದು. ಶೂನ್ಯ ಎಂದರೆ-ಎಂಟಿನೆಸ್-ಖಾಲಿತನ ಅಲ್ಲ. ಅದು ಎಲ್ಲವನ್ನೂ ಒಳಗೊಂಡ ಅನುಭವ, ಅನುಭಾವ. ಪರಿಪೂರ್ಣತೆ ಎಂದು ಪರಿಭಾವಿಸಬಹುದು. ಇದನ್ನು ಉಪನಿಷತ್ತಿನ ಪರಿಭಾಷೆಯಲ್ಲಿ ’ಪೂರ್ಣ ಎನ್ನಲಾಗಿದೆ. ಇಂಥ ಅತ್ಯುನ್ನತ ಅನುಭಾವ ಸ್ತರಕ್ಕೆ ಏರಿದವರು ಪರಮಹಂಸರು (೧೮೩೬-೮೬) ಮತ್ತು ವಿವೇಕಾನಂದರು (೧೮೬೩-೧೯೦೨). ಈ ಇಬ್ಬರು ಮಹಾಗುರುಗಳ ಆಂತರಿಕ ಜೀವನದ ಸಾಧನೆಯ ವಿವರಗಳು ಲಭ್ಯ ಇರುವುದರಿಂದ ಹೀಗೆ ಹೇಳಲು ಸಾಧ್ಯವಾಗಿದೆ. ಹಾಗಾಗಿಯೇ ಮಹರ್ಷಿ ಅರವಿಂದರು (೧೮೭೨-೧೯೫೦) "ನನ್ನ ಜೀವನವನ್ನು ಕುರಿತು ಬರೆಯಲು ಯಾರೊಬ್ಬರಿಗೂ ಸಾಧ್ಯವಿಲ್ಲ; ಏಕೆಂದರೆ ಅದು ಮಾನವನಿಗೆ ಕಾಣಿಸದ ಒಳಪದರದಲ್ಲಿಯೆ ಸಾಗಿದೆ.-ನೋ ಒನ್ ಕೆನ್ ರೈಟ್ ಎಬೌಟ್ ಮೈ ಲೈಫ್, ಫಾರ್ ಇಟ್ ಹ್ಯಾಸ್ ನಾಟ್ ಬೀನ್ ಆನ್ ದ ಸರ್ಫೇಸ್ ಫಾರ್ ಮೆನ್ ಟು ಸೀ" ಎಂದಿರುವುದು ಕಣ್ತೆರೆಸುವಂತಿದೆ.
ಈ ಅತಿ ಮಾನವರು ಕಂಡುಕೊಂಡ ವೇದಾಂತ ಅಪ್ಪಟ ನಿರೀಶ್ವರವಾಗಿದೆ. ಅದು ಮನುಷ್ಯನನ್ನೇ ದೇವರನ್ನಾಗಿ ಬೆಳೆಸುವ ಸಾಧನಾಕ್ರಮ ಎನ್ನಬೇಕು. ವೇದಾಂತ ಅತ್ಯುನ್ನತ ವಿಚಾರವಾದ ಮತ್ತು ಮಾನವತಾವಾದವಾಗಿದೆ. ವೇದಾಂತವನ್ನು ವೇದಗಳ ಕೊನೆಯ ಭಾಗ ಎಂದು ಹೇಳುವುದು ರೂಢಿ. ಅದಕ್ಕೆ ವೇದದ ಅಂತ್ಯವೆಂದು ಅರ್ಥ. ವೇದಗಳ ಕರ್ಮಕಾಂಡವನ್ನು ಕೊನೆಗೊಳಿಸಿ ಬಂದ ಜ್ಞಾನಕಾಂಡವೇ ಉಪನಿಷತ್ತುಗಳು. ಅಂದರೆ ಭೇದ ಬಗೆಯುವ ವೇದಗಳನ್ನು ಅಂತ್ಯ ಮಾಡಿ ಮೂಡಿದ ಅನುಭಾವವೇ ವೇದಾಂತ. ವೇದಾಂತ ಜ್ಞಾನವನ್ನು ಕೊಟ್ಟವರೆಲ್ಲ ಪೌರೋಹಿತ್ಯವನ್ನು ಧಿಕ್ಕರಿಸಿದ ರಾಜರು ಮತ್ತು ರಾಜರ್ಷಿಗಳು.
ಆದ್ದರಿಂದ ಅಧ್ಯಾತ್ಮಿಕ ಅನುಭವದಲ್ಲಿ ಕಂಡುಕೊಂಡ ಸರ್ವ ಜೀವಿ ಸಮಾನತಾ ಭಾವವನ್ನು ಮಾನವ ಅಖಂಡತೆಯನ್ನು ನಾನು ’ಸಾಕ್ಷಾತ್ಕಾರ’ ಎಂದು ತಿಳಿದಿದ್ದೇನೆ. ಇದನ್ನು ಸಾಮಾಜಿಕ ಸ್ತರಕ್ಕೆ ಇಳಿಸುವುದೇ ಪ್ರತಿಭಟನೆ. ಆದ್ದರಿಂದಲೇ ದಾಸವರೇಣ್ಯ ಕನಕದಾಸರು "ಜೀವ ಯಾವ ಕುಲ? ಆತ್ಮ ಯಾವ ಕುಲ?" ಎಂದು ಕೇಳಿದರು. ಇನ್ನೂ ಮುಂದೆ ಹೋಗಿ "ಕುಲ ಕುಲ ಎನ್ನುವಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?" ಎಂದು ಜಗತ್ತಿಗೆ ಸವಾಲು ಹಾಕಿದ ವಿಶ್ವಮಾನವ ಕನಕದಾಸರು (೧೪೯೫-೧೫೯೩).
"ನೀವು ಪೂಜೆ ಮಾಡುವುದಾದರೆ ನಿಮ್ಮ ಜೀವನವನ್ನೇ ಪೂಜೆಯಂತೆ ಮಾಡಿಕೊಳ್ಳಿ ಎಂದು ನುಡಿದ ಬುದ್ಧದೇವನ ಮಾತು ಅಮೃತಪ್ರಾಯವಾದುದು. ಪೂಜೆಯ ಹಾಗೆ ಪರಿಶುದ್ಧ ಮತ್ತು ಪವಿತ್ರಗಿರಿ ಎಂದು ಅರ್ಥ. ಪರಿಶುದ್ಧಿ ಮತ್ತು ಪಾವಿತ್ರ್ಯದಿಂದ ಭವ್ಯತೆ ಪ್ರಾಪ್ತವಾಗುತ್ತದೆ. ತ್ಯಾಗ ಮತ್ತು ಪರಿಜ್ಞಾನಗಳಿಂದ ಭೂಮತೆ ಲಭಿಸುವುದು. ಹತ್ತು ನಿಮಿಷವೋ, ಅರ್ಧ ಅಥವಾ ಒಂದು ಗಂಟೆಯೋ ಪೂಜೆ ಮಾಡಿ, ಅಂದರೆ ಅಮರ ಭಾವನೆಗಳನ್ನು ಪಠಿಸಿ, ಉಸಿರಾಡಿ, ದಿನದ ಉಳಿದ ಸಮಯವನ್ನೆಲ್ಲ ಅದಕ್ಕೆ ವಿರುದ್ಧವಾದ ಅಪವಿತ್ರ ವಿಷಯಗಳಲ್ಲಿ ಕಳೆದರೆ ಪೂಜೆಗೆ ಏನು ಅರ್ಥ? ನಿಜವಾದ ಅರ್ಥದಲ್ಲಿ, ಪೂಜೆ ಮತ್ತು ಪ್ರತಿಭಟನೆ ಪರ್ಯಾಯ ಪದಗಳು. ಪೂಜೆ ಸೌಮ್ಯರೂಪಿ ಶೋಧನೆ. ಪ್ರತಿಭಟನೆ ಉಗ್ರ ರೀತಿ ಸಾಧನೆ. ಪೂಜೆ ಏಕಾಂತ ಮತ್ತು ಅಂತರಂಗಿಕ ಕ್ರಿಯೆಯಾದರೆ, ಪ್ರತಿಭಟನೆ ಸಾಮಾಜಿಕ ಮತ್ತು ಬಹಿರಂಗ ಹೋರಾಟವಾಗಿದೆ. ಪೂಜೆ ಒಳಗಿನ ಕೊಳೆಯನ್ನು ತೊಳೆಯುವುದು. ಪ್ರತಿಭಟನೆ ಹೊರಗಿನ ಕೊಳಕನ್ನು ತೊಡೆಯುವುದು.
ಇಂಥ ತಾಕಲಾಟಗಳನ್ನು ಹೇಗೆ ನಿವಾರಿಸಿಕೊಳ್ಳುವುದು? ಎಂದು ಸಮಸ್ಯೆ ಎದುರಾಗುತ್ತದೆ. ಇದಕ್ಕೆ ದಾರಿಯನ್ನು ವಿಚಾರವಾದ ಮತ್ತು ವೈಜ್ಞಾನಿಕ ದೃಷ್ಟಿ ತೋರಬಲ್ಲವು.
ಗೆಲಿಲಿಯೊ (೧೫೬೪-೧೯೪೨) ಯುಗ ನಿರ್ಮಾಪಕ ಖಗೋಳ ವಿಜ್ಞಾನಿ. ಅವನು ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ದೂರದರ್ಶಕಯಂತ್ರವನ್ನು ಕಂಡುಹಿಡಿದ. ಕಂಡುಹಿಡಿದ ಎಂದು ಮಾತ್ರ ಹೇಳುತ್ತೇವೆ. ಆದರೆ ಇದರ ಪರಿಣಾಮವನ್ನು ನಮ್ಮ ವಿದ್ಯಾಭ್ಯಾಸ ಕ್ರಮದಲ್ಲಿ ಸರಿಯಾಗಿ ಬೋಧಿಸುತ್ತಿಲ್ಲ. ದೂರದರ್ಶಕ ಯಂತ್ರದ ಅವಿಷ್ಕಾರದಿಂದ ಆದ ಕ್ರಾಂತಿ ಏನು? ಮತ ಗ್ರಂಥಗಳು ಮತ್ತು ಚರ್ಚುಗಳು, ಮಠಾಧೀಶರುಗಳು ಸ್ವರ್ಗ ಮೇಲಿದೆ, ಅಲ್ಲಿ ದೇವರಿದ್ದಾನೆ, ಅವನು ಲೋಕವನ್ನು ರಕ್ಷಿಸುತ್ತಿದ್ದಾನೆ, ಎಂದು ಪ್ರಚಾರ ಮಾಡುತ್ತಿದ್ದವು. ಗೆಲಿಲಿಯೊ ದೂರದರ್ಶಕ ಯಂತ್ರದಲ್ಲಿ ನೋಡಿದಾಗ ಅದೇನೊ, ಅಂದರೆ ದೇವರು ಸ್ವರ್ಗ ಧೊಪ್ಪನೆ ಬಿದ್ದು ಧ್ವಂಸವಾದವು. ಅದರಿಂದ ಧರ್ಮ ಮತ್ತು ದೇವರನ್ನು ಗುತ್ತಿಗೆ ಹಿಡಿದಿದ್ದ ಸಂಸ್ಥೆಗಳು ಮತ್ತು ಶಕ್ತಿಗಳು ಗಡಗಡ ನಡುಗಿದವು. ಅವನನ್ನು ಶಿಕ್ಷಿಸಲು ಪ್ರಯತ್ನ ನಡೆಯಿತು. ಆದರೆ ಅವನ ವೈಜ್ಞಾನಿಕ ಶೋಧನೆಯೇ ಇಲ್ಲಿಯವರೆಗೂ ಪ್ರಖರವಾಗಿ ಉಳಿದಿದೆ. ಅದಕ್ಕೆ ಇನ್ನೂ ಹೊಸ ಹೊಸ ಶೋಧನೆಗಳು ಸೇರಿ ಬೆಳೆಯುತ್ತಿರುವುದನ್ನು ಕಾಣಬಹುದು. ಖಗೋಳಶಾಸ್ತ್ರ ಮತ್ತು ಖಭೌತಶಾಸ್ತ್ರ ಪ್ರಬಲವಾಗಿ ಬೆಳೆದು ಮತೀಯ ಮೂಢನಂಬಿಕೆಯನ್ನೆಲ್ಲ ಛಿದ್ರ ಮಾಡುತ್ತಿವೆ. ಪಟ್ಟಭದ್ರಹಿತಾಸಕ್ತಿಗಳು ತಮಗೆ ಬೇಕಾದುದನ್ನು ಹರಡಿ ಜನರನ್ನು ನಂಬಿಸಿ ಕತ್ತಲನ್ನು ಕಾಪಾಡುತ್ತಿರುವವು. ಜನರು ಅಜ್ಞಾನಿಗಳಾಗಿದ್ದರೆ ಆಳುವುದು ಸುಲಭ, ಅವರು ತಿಳಿವಳಿಕಸ್ಥರಾದರೆ ಅವರನ್ನು ನಿಯಂತ್ರಿಸುವುದು ಕಷ್ಟ.
ಅದೇ ರೀತಿ ಪಾತಾಳದ ಅಥವಾ ನರಕದ ಕಲ್ಪನೆಗಳನ್ನು ಅಡುಗೊಲಜ್ಜಿ ಕತೆ ಎಂದು ಭೂಗರ್ಭಶಾಸ್ತ್ರ ತೋರಿಸಿಬಿಟ್ಟಿದೆ. ಭೂಮಿಯ ಪದರಗಳು ಗಟ್ಟಿ ಶಿಲೆಗಳಿಂದ ರೂಪಿತವಾಗಿ ಬೃಹತ್ ತಟ್ಟೆಗಳಂತೆ ಚಲಿಸುತ್ತಿವೆ ಎನ್ನುತ್ತಾರೆ. ಆದಿಶೇಷನ ತಲೆಯ ಮೇಲೆ ಭೂಮಿ ಕುಳಿತಿದೆ ಎಂದು ಹೇಳುವವರು ಆ ಆದಿಶೇಷ ಮಹಾಸರ್ಪ ಯಾವುದರ ಮೇಲೆ ಇದೆ? ಎಂದು ಹೇಳುತ್ತಿಲ್ಲ. ಇದು ಬರಿ ಕಟ್ಟುಕತೆ ಎಂಬುದಾಗಿ ಸ್ವಲ್ಪ ಪ್ರಶ್ನಿಸಿದರೆ ಗೊತ್ತಾಗುತ್ತದೆ. ಭೂ ಪದರಗಳಲ್ಲಿ ಅಥವಾ ಅಗ್ನಿಪರ್ವತದ ಕ್ರಿಯೆಯಲ್ಲಿ ಉಂಟಾದ ದೋಷಗಳ ಪರಿಣಾಮವಾಗಿ ಸಂಗ್ರಹಗೊಂಡ ಒತ್ತಡ ಬಿಡುಗಡೆಯಾದಾಗ ಭೂಮಿಯ ಮೇಲ್ಭಾಗ ಅದುರುತ್ತದೆ. ಇದನ್ನು ಭೂಕಂಪ ಎನ್ನುವರು. ಆದರೆ ಮೂಢನಂಬಿಕೆಯ ಜನರು ಆದಿಶೇಷ ತನ್ನ ತಲೆಯನ್ನು ಅಲುಗಾಡಿಸಿದಾಗ ಭೂಕಂಪವಾಗುತ್ತದೆ ಎಂದು ಹೇಳುವುದು ರಂಜನೀಯವಾಗಿದೆ! ನರಕದ ಭಾವನೆಯನ್ನು ಮುಂದಿಟ್ಟುಕೊಂಡು ಜಗತ್ತಿನ ಎಲ್ಲ ಕಡೆ ಮತೀಯ ಸಂಸ್ಥೆಗಳು ಜನರನ್ನು ಹೆದರಿಸುತ್ತಿದ್ದವು; ನೀವು ಪಾಪ ಮಾಡಿದ್ದೀರಿ, ನರಕಕ್ಕೆ ಬೀಳುತ್ತೀರಿ, ನರಕದಲ್ಲಿ ನಿಮ್ಮ ನಾಲಗೆ ಸೀಳಿ, ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ನಿಮ್ಮನ್ನು ಬೇಯಿಸುತ್ತಾರೆ. ಆದ್ದರಿಂದ ನಿಮ್ಮ ಪಾಪ ಪರಿಹಾರ ಮತ್ತು ವಿಮೋಚನೆಗೆ ಇಂತಿಂಥ ಪೂಜೆ ಮಾಡಿ, ಕಾಣಿಕೆ ಸಲ್ಲಿಸಿ, ದಾನ ಧರ್ಮ ಮಾಡಿ ಎಂದು ಪುರೋಹಿತ ಸೇನೆ ಮತ್ತು ಧರ್ಮಾಧಿಕಾರಿಗಳ ದಂಡು ಜನರನ್ನು ಭಯಂಕರವಾಗಿ ಸುಲಿಗೆ ಮಾಡುತ್ತಿದ್ದವು. ಹೆಚ್ಚು ಹಣ ಕೊಟ್ಟವರಿಗೆ ಮುಕ್ತಿ ಪತ್ರಗಳನ್ನೂ ಸ್ವರ್ಗಪ್ರವೇಶ ಪ್ರಮಾಣ ಪತ್ರಗಳನ್ನೂ ವಿತರಿಸುವ ಪರಿಪಾಟವಿತ್ತು. ಭೂಮಿಯ ಕೆಳಗಡೆ ನರಕ ಎನ್ನುವಂಥದ್ದು ಏನೂ ಇಲ್ಲ ಎಂದು ಭೂ ವಿಜ್ಞಾನ ಖಚಿತಪಡಿಸಿ ಭಯವನ್ನು ನಿರ್ಮೂಲಗೊಳಿಸಿ ಅದನ್ನು ತಪ್ಪಿಸಿದೆ. ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ವೈಜ್ಞಾನಿಕ ಸತ್ಯಗಳಿಂದ ಜೀವನ ಸುಖಮಯವಾಗುತ್ತದೆ; ಇಲ್ಲದಿದ್ದರೆ ಅಜ್ಞಾನದಿಂದ ಶೋಷಣೆಗೆ, ತುಳಿತಕ್ಕೆ ಒಳಗಾಗಿ ದುಃಖಮಯವಾಗುವುದು.
ಪುರೋಹಿತರು ಮತ್ತು ಮತದ ಮಧ್ಯವರ್ತಿಗಳಿಂದ ಬಿಡುಗಡೆ ಹೊಂದುವುದೇ ನಿಜವಾದ ಮುಕ್ತಿ. ವಿಜ್ಞಾನ ಬೆಳೆದು ವೈಜ್ಞಾನಿಕ ದೃಷ್ಟಿ ಹರಡಿದ ಮೇಲೆ ನಾಕ ಮತ್ತು ನರಕ ಹೋಗುತ್ತವೆ. ಆದರೆ ಈ ಶಬ್ದಗಳನ್ನು ಬಿಡಬೇಕೇ? ಎಂದರೆ ಸಲ್ಲದು. ಪಾಪ ಕೇಡು ದುಃಖಗಳಿಗೆ ನರಕ ಪ್ರತೀಕವಾದರೆ, ಪುಣ್ಯ ಒಳಿತು ಸುಖಕ್ಕೆ ಸ್ವರ್ಗ ಸಂಕೇತವಾಗುತ್ತದೆ.
ಪ್ರತಿದಿನ ಬೆಳಿಗ್ಗೆ ದೂರದರ್ಶನವನ್ನು ಚಾಲುಗೊಳಿಸಿದರೆ, ಸಾಮಾನ್ಯವಾಗಿ ಎಲ್ಲಾ ಕನ್ನಡವಾಹಿನಿಗಳಲ್ಲಿ ಭವಿಷ್ಯದ ಬಗ್ಗೆ ಕಣಿ ಹೇಳುವ ಜ್ಯೋತಿಷಿಗಳು ಕಾಣಿಸಿಕೊಳ್ಳುತ್ತಾರೆ. ಬೇರೆಯವರ ಬಾಳನ್ನು ಹೊಳಪುಗೊಳಿಸಲು ಸೋಗು ಹಾಕಿರುವ ಅವರು ತಮ್ಮ ಬದುಕನ್ನು ಏಕೆ ಎತ್ತರಕ್ಕೆ ತೆಗೆದುಕೊಂಡು ಹೋಗುವ ಮನಸ್ಸು ಮಾಡುತ್ತಿಲ್ಲ? ಸುಳ್ಳು ಹೇಳಿ ಏಕೆ ಜೀವನ ಸಾಗಿಸುತ್ತಾರೆ? ಜ್ಯೋತಿಷ್ಯ ವಿಜ್ಞಾನ ಎನ್ನುವುದು ಇರಲಿ; ಅದು ವಿಚಾರ ಎಂದು ಹೇಳುವ ಒಬ್ಬ ವಿಜ್ಞಾನಿಯೂ ಪ್ರಪಂಚದಲ್ಲಿ ಇಲ್ಲ. ಏಕೆಂದರೆ ವಿಜ್ಞಾನ ಪ್ರಯೋಗದ ಮೇಲೆ ನಿಂತಿದೆ. ಪ್ರಯೋಗ ಮಾಡಿ ಪರೀಕ್ಷೆಯಲ್ಲಿ ಸತ್ಯವೆಂದು ಗೊತ್ತಾಗದ ಹೊರತು ಯಾವುದನ್ನೂ ವಿಜ್ಞಾನ ಎಂದು ಸ್ವೀಕರಿಸುವುದಿಲ್ಲ. ಪ್ರಪಂಚದ ಯಾವ ವಿಶ್ವವಿದ್ಯಾನಿಲಯದಲ್ಲೂ ಜ್ಯೋತಿಷ್ಯವನ್ನು ಒಂದು ವಿಷಯ ಎಂದಾಗಲೀ, ವಿಜ್ಞಾನ ಎಂದಾಗಲೀ ಬೋಧಿಸುವುದಿಲ್ಲ. ಆದರೂ ಜ್ಯೋತಿಷ್ಯ ವಿಜ್ಞಾನ ಎಂದು ಬುರುಡೆ ಬಿಡುವ ಜನರಿಗೇನೂ ಭಾರತದಲ್ಲಿ ಬರವಿಲ್ಲ. ನೊಬೆಲ್ ಪ್ರಶಸ್ತಿ ವಿಜೇತರಾದ ಹತ್ತೊಂಬತ್ತು ಹಾಗೂ ಒಂದು ನೂರ ಎಂಬತ್ತಾರು ಪ್ರಮುಖ ವಿಜ್ಞಾನಿಗಳು "ಜ್ಯೋತಿಷ್ಯ ವಿಜ್ಞಾನ ಅಲ್ಲ ಎಂದು ಘೋಷಿಸಿ ಮೂವತ್ತೈದು ವರ್ಷಗಳ ಮೇಲಾದವು. ಆದರೂ ಈ ಅರಿವಿನ ಒಂದಂಶವೂ ಮಂದಿಯ ಮನಸ್ಸಿಗೆ ಹೋಗದಿರುವುದು ಶೋಚನೀಯ. ಇದರಿಂದ ವಿಜ್ಞಾನ ಯಾವ ಗತಿಯಲ್ಲಿ ನಮ್ಮ ದೇಶದಲ್ಲಿ ಸಾಗುತ್ತಿದೆ, ಬೇರೂರುತ್ತಿದೆ ಎಂಬುದು ಗೊತ್ತಾಗುತ್ತದೆ. ಹೀಗಿರುವಾಗ ವೈಜ್ಞಾನಿಕ ಮನೋಭಾವ ಮೂಡುವುದಾದರೂ ಹೇಗೆ? ಸೂರ್ಯಾದಿ ಗ್ರಹ ನಕ್ಷತ್ರಗಳ ಪ್ರಭಾವ ಮನುಷ್ಯನ ಮೇಲೆ ಆಗುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಇದನ್ನು ನಿರ್ಧರಿಸುವುದು ಹೇಗೆ? ಸೂರ್ಯ ಚಂದ್ರರನ್ನು ಪ್ರಯೋಗಶಾಲೆಗೆ ತರಲು ಸಾಧ್ಯವೇ? ಹೀಗೆ ಪ್ರಶ್ನೆ ಮಾಡದೆ ಜನರನ್ನು ಜ್ಯೋತಿಷಿಗಳು ವಂಚಿಸುತ್ತಾರೆ. ಜನರು ಹೋಗುವುದರಿಂದ ತಾನೆ ಅವರು ಭವಿಷ್ಯ ವಂಚಿಸುತ್ತಾರೆ. ಜನರು ಹೋಗುವುದರಿಂದ ತಾನೆ ಅವರು ಭವಿಷ್ಯ ಹೇಳುವುದು? ಜನರೇಕೆ ಹೋಗಬೇಕು? ಸಂವಿಧಾನಕ್ಕೆ ವಿರುದ್ಧವಾದ ಕೆಲಸ ಇದು ಎಂದು ಜ್ಯೋತಿಷ್ಯವನ್ನು ನಿಷೇಧಿಸಬೇಕು. ಭಾರತದ ಸಂವಿಧಾನ ವಿಧಿ ೫೧ ಎ (ಹೆಚ್) ಹೀಗೆ ಹೇಳುತ್ತದೆ: "ಭಾರತದ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ, ಮಾನವತಾವಾದ, ಅನ್ವೇಷಣಾ ದೃಷ್ಟಿ ಮತ್ತು ಸುಧಾರಣೆಯನ್ನು ಬೆಳೆಸಲೇಬೇಕು. ಇದು ಅವನ ಮೂಲಭೂತ ಕರ್ತವ್ಯ ಎಂದು ತಾಕೀತು ಮಾಡುತ್ತದೆ ನಮ್ಮ ಸಂವಿಧಾನ. ("ಇಟ್ ಷಲ್ ಬಿ ದ ಡ್ಯೂಟಿ ಆಫ್ ಎವ್ರಿ ಸಿಟಿಜನ್ ಆಫ್ ಇಂಡಿಯ ಟು ಡೆವೆಲಪ್ ದ ಸೈಂಟಿಫಿಕ್ ಟೆಂಪರ್, ಹ್ಯೂಮನಿಸಂ, ಅಂಡ್ ದ ಸ್ಟಿರಿಟ್ ಆಫ್ ಎಂಕ್ವೈರಿ, ಅಂಡ್ ರಿಫಾರ್ಮ್"- ’ಮೂಲಭೂತ ಕರ್ತವ್ಯಗಳು’, ಭಾರತದ ಸಂವಿಧಾನ.
ನಮ್ಮ ಹಕ್ಕುಗಳಿಗಾಗಿ ಹೋರಾಡುವ ನಾವು ನಮ್ಮ ಮೂಲಭೂತ ಕರ್ತವ್ಯಗಳನ್ನು ಕಡೆಗಣಿಸಿದ್ದೇವೆ. ಕರ್ತವ್ಯಗಳನ್ನು ಮಾಡದವರಿಗೆ ಹಕ್ಕುಗಳನ್ನು ಒತ್ತಾಯಿಸಲು ನೈತಿಕ ಶಕ್ತಿ ಬರುವುದಿಲ್ಲ.
ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ದೃಷ್ಟಿಯನ್ನು ಬೆಳೆಸುವಲ್ಲಿ ನಮ್ಮ ಕೇಂದ್ರ ಮತ್ತು ರಾಜ್ಯ-ಸರ್ಕಾರಗಳು ವಿಫಲವಾಗಿವೆ ಎಂದು ವಿಷಾದದಿಂದ ಹೇಳಬೇಕಾಗಿದೆ. ರಾಜಕೀಯ ಧುರೀಣರು ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುತ್ತಾರೆ. ಅದಕ್ಕೆ ಮುನ್ನ ಅವರು ಜ್ಯೋತಿಷ್ಯ ಕೇಳುವರು; ಬೇಕು ಬೇಕಾದ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಇರುವ ಒಂದು ಸ್ಥಾನಕ್ಕೆ ಹತ್ತು ಹದಿನೈದು ಇಪ್ಪತ್ತು ಅಭ್ಯರ್ಥಿಗಳು ಚುನಾವಣೆಗೆ ನಿಲ್ಲುತ್ತಾರೆ. ಎಲ್ಲ ಅಭ್ಯರ್ಥಿಗಳಿಗೆ ಅವರವರ ಭವಿಷ್ಯವಾದಿಗಳ ಇಂಥ ಸಮಯಕ್ಕೆ ಅಥವಾ ಗಳಿಗೆಗೆ ನೀವು ನಾಮಪತ್ರ ಹಾಕಿದರೆ ನಿಮಗೆ ಜಯ ಖಂಡಿತ ಎಂದು ಭರವಸೆ ನೀಡುವರು. ಆದರೆ ಆರಿಸಬೇಕಾದ್ದು ಒಬ್ಬನನ್ನೇ. ಎಲ್ಲರೂ ಗೆಲ್ಲುವುದು ಹೇಗೆ ಸಾಧ್ಯ?
ಕೆಲವು ಮುಖಂಡರು ಕೈಗೆ ಎಂಥೆಂಥದೋ ದಾರಗಳನ್ನು ಕಟ್ಟಿಕೊಂಡು, ಅದರಿಂದಲೇ ನಾವು ಶಾಸಕರಾಗಿರುವುದು, ಮಂತ್ರಿಗಳು, ಮುಖ್ಯಮಂತ್ರಿ ಆಗಿರುವುದು ಎಂಬಂತೆ ನಡೆದುಕೊಳ್ಳುತ್ತಿರುವರು. ಇದನ್ನು ನೋಡಿ ಅನೇಕ ಯುವಕರು ಅವರನ್ನು ಅನುಕರಿಸಲು ತಮ್ಮ ಕೈಗೆ ದಾರ ಕಟ್ಟಿಕೊಂಡಿದ್ದಾರೆ. ಇದು ಬಹಳ ದುಃಖಕರ ಸಂಗತಿ. ಧೀರವಾಗಿ ಬದುಕನ್ನು, ಸಮಸ್ಯೆಗಳನ್ನು ಎದುರಿಸಬೇಕಾದ ಯುವ ಜನತೆ ಮಾಟ ಮಂತ್ರಗಳ ವಾಮಾಚಾರಕ್ಕೆ ಬಂದು ಬಿಟ್ಟಿದ್ದಾರಲ್ಲ! ಎಂದು ವ್ಯಥೆ. ಇದರಿಂದ ಒಳ್ಳೆಯ ಆದರ್ಶಗಳ ಅಭಾವ ಎದ್ದು ಕಾಣುತ್ತಿದೆ. ಇಂಥವರು ನಾಯಕರಾಗಿ ಸರ್ಕಾರ ನಡೆಸುವುದಾದರೆ ಹೇಗೆ ವಿದ್ಯಾಭ್ಯಾಸ ಪುಷ್ಟಿಗೊಂಡು, ಬುದ್ಧಿ ಶಕ್ತಿಯನ್ನು ಬೆಳೆಸಲು, ಸ್ವಂತ ಚಿಂತನೆ ಮಾಡಲು, ಪ್ರತಿಭಟನೆಯನ್ನು ಕಲಿಸಲು, ಸಮಾನತೆಯ ಸಮಾಜವನ್ನು ನಿರ್ಮಿಸಲು ಸಾಧ್ಯ? ರಾಜಕೀಯ ಜೀವನ ನಿಸ್ಸತ್ವವಾಗುತ್ತಿರುವುದರಿಂದ, ಶಿಕ್ಷಣವೂ ಸೇರಿದಂತೆ ರಾಷ್ಟ್ರೀಯ ಜೀವನ ನಿಸ್ಸಾರವಾಗುತ್ತಿದೆ.
ಜನತಾ ಪ್ರತಿನಿಧಿಯಾದ ನಮ್ಮ ಮುಖ್ಯಮಂತ್ರಿಯವರ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಸರ್ಕಾರ ನಡೆಸಲು ನಿರ್ದೇಶನಗಳನ್ನು ಎಲ್ಲಿಂದ ತೆಗೆದುಕೊಳ್ಳುತ್ತಿದ್ದಾರೆ? ಅವರು ಪ್ರಜಾಪ್ರಭುತ್ವದ ಪ್ರಭುಗಳಾದ ಜನರಿಂದ ಅಥವಾ ಶಾಸಕರಿಂದ, ಶಾಸನ ಸಭೆಯಿಂದ, ತಮ್ಮ ಪಕ್ಷದ ವತಿಯಿಂದ ಸಲಹೆಗಳನ್ನು, ಆದೇಶಗಳನ್ನು ಪಡೆಯುವುದು ಸೂಕ್ತ. ಆದರೆ ಅವರು ಸಲಹೆಗಳನ್ನು ಸ್ವೀಕರಿಸುವುದು ಎಲ್ಲಿಂದ? ಪ್ರಜಾಪ್ರಭುತ್ವವನ್ನು ಗೌರವಿಸದ, ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿಲ್ಲದ ಒಂದು ಅರೆ ಸೈನಿಕ ಸಂಘಟನೆಯ ಮುಖಂಡರುಗಳಿಂದ. ಇದು ನಾಚಿಕೆಗೇಡಿನ ವಿಷಯ ಯಡ್ಯೂರಪ್ಪ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ. ಅವರು ಬಸವಣ್ಣ ಭಕ್ತರೋ? ಇಲ್ಲ ಆರ್‌ಎಸ್‌ಎಸ್‌ನ ಗುಲಾಮರೋ? ಏಕೆಂದರೆ ಆರ್‌ಎಸ್‌ಎಸ್ ಅವರನ್ನು ನಿಯಂತ್ರಿಸುತ್ತಿದೆ. ಅದಕ್ಕೆ ನಿಜವಾಗಿಯೂ ಸಮಾನತೆಯ ಬಗ್ಗೆ ಪ್ರೀತಿ ಇದ್ದರೆ ಎಲ್ಲ ಜನರ ಏಳಿಗೆಯನ್ನೂ ಮಾಡಬೇಕು. ಅವರು ಬಸವಣ್ಣನ ಅನುಯಾಯಿ ಆಗಿದ್ದರೆ ಬಸವಣ್ಣನ ಸಮಾನತೆಯ ಎಲ್ಲ ತತ್ವಗಳನ್ನು ಜಾರಿಗೆ ತರಲಿ. ಅದು ಅವರಿಂದ ಸಾಧ್ಯವಿಲ್ಲ. ಕಾರಣ ಬಸವಣ್ಣನ ತತ್ವಗಳೂ ಆರ್‌ಎಸ್‌ಎಸ್ ಸಿದ್ಧಾಂತಗಳೂ ಪರಸ್ಪರ ವಿರುದ್ಧವಾಗಿವೆ, ತೀವ್ರ ಪೈಪೋಟಿಯ ಪರಮ ವೈರಿಗಳಾಗಿವೆ. ಅಂದರೆ ಭಾರತದ ಧರ್ಮಗ್ರಂಥವಾದ ಭಾರತ ಸಂವಿಧಾನದ ವಿಧಿಗಳು ಆಶಯಗಳು ತತ್ವಗಳು ಆದರ್ಶಗಳು ಸಮಾನತೆಗಳಿಗೆಲ್ಲ ಆರ್‌ಎಸ್‌ಎಸ್ ಕಟಿ ಬದ್ಧ ವೈರಿಯಾಗಿದೆ. ಆರ್‌ಎಸ್‌ಎಸ್ ಹುಲಿ, ಪ್ರಜಾಪ್ರಭುತ್ವ ಹಸು. ಆದರೆ ಅದ್ಭುತ ಕಾವ್ಯವಾದ ಗೋವಿನ ಹಾಡುವಿನಲ್ಲಿ ಕೊನೆಗೆ ಹುಲಿ ಪ್ರಾಣ ಬಿಡುತ್ತದೆ. ಹಸು ಉಳಿಯುತ್ತದೆ. ಆದ್ದರಿಂದ ಯಾವಾಗಲೂ ಉಳಿಯುವುದು ಮತ್ತು ಉಳಿಯಬೇಕಾದ್ದು ಪ್ರಜಾಪ್ರಭುತ್ವ. ಹಿಂದೂಗಳೆಲ್ಲರೂ ಒಂದು ಎಂದು ಹುಸಿ ನುಡಿಯುವ ಅರ್‌ಎಸ್‌ಎಸ್ ಅಸಮಾನತೆಯ ನೆಲೆಯಾದ ಜಾತಿ ವ್ಯವಸ್ಥೆಯನ್ನು ನಿರ್ನಾಮ ಮಾಡಬೇಕು. ಅಲ್ಲಿಯವರೆಗೆ ಅದರ ಮಾತುಗಳಿಗೆ ಮಾನ್ಯತೆ ಬರುವುದಿಲ್ಲ. ಏಕೆಂದರೆ ಜಾತಿ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವಕ್ಕೆ ಘರ್ಷಣೆ ಉಂಟಾಗುವುದು ಅನಿವಾರ್ಯ.
ಇನ್ನು ವಿದ್ಯಾಭ್ಯಾಸಕ್ಕೆ ಬಂದರೆ ಶಾಲೆಗಳ ಸ್ಥಿತಿಯಂತೂ ಚಿಂತಾಜನಕವಾಗಿದೆ. ಮೈಸೂರಿನ ಲಕ್ಷ್ಮೀಪುರದ ಸರ್ಕಾರಿ ಶಾಲೆಯ ಕಾಂಪೌಂಡು ಹಾಳಾಗಿ ಅದನ್ನು ನೋಡುವ ಸ್ಥಿತಿಯಲ್ಲಿ ಇಲ್ಲ. ಇತ್ತ ಶಾಸಕರು, ಮಂತ್ರಿಗಳು, ಸಂಸದರು-ಹೀಗೆ ಎಲ್ಲರೂ ಓಡಾಡುತ್ತಿರುತ್ತಾರೆ. ಆದರೆ ಯಾರೂ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಸಾಂಸ್ಕೃತಿಕ ರಾಜಧಾನಿ ಎಂದು ಹೇಳಲಾಗುವ ಮೈಸೂರು ನಗರದಲ್ಲೇ ಹೀಗೆ ಆದರೆ ಇನ್ನು ಹಳ್ಳಿಗಳ ಶಾಲೆಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.
ನಮ್ಮ ಕನ್ನಡ ಭಾಷೆಯನ್ನು ಕುರಿತು ಮಾತನಾಡದ ಸಾಹಿತಿಗಳೇ ಇಲ್ಲ ಎನ್ನಬಹುದು. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಧವಾಗಿ ಕನ್ನಡದ ಅಭಿವೃದ್ಧಿಯ ಬಗ್ಗೆ ವಿವರಿಸಿದ್ದಾರೆ. ಕನ್ನಡ ನಮ್ಮ ತಾಯಿ ನುಡಿ, ಸರಿ. ಮಾತೃಭಾಷೆಯ ಮೇಲೆ ಅಭಿಮಾನ ಇರಬೇಕಾದದ್ದು ಸಹಜ. ಆದರೆ ಬರಿ ಅಭಿಮಾನ ಮತ್ತು ಪ್ರೀತಿಯಿಂದ ಹೊಟ್ಟೆ ತುಂಬುವುದಿಲ್ಲ. ಆದ್ದರಿಂದ ಕನ್ನಡ ಕನ್ನಡಿಗರನ್ನು ಸಾಕುವ ಭಾಷೆಯಾಗಬೇಕು. ಕನ್ನಡದಲ್ಲಿ ಓದಿದರೆ ಕೆಲಸ ಸಿಗುತ್ತದೆ, ಜೀವನ ಸಲೀಸಾಗಿ ಸಾಗಿಸಬಹುದು, ಬದುಕಿಗೆ ಭದ್ರತೆ ಒದಗುತ್ತದೆ ಎಂದು ಖಾತ್ರಿಯಾದರೆ ಕನ್ನಡವನ್ನು ಯಾರು ಕಡೆಗಣಿಸುತ್ತಾರೆ? ಆದ್ದರಿಂದ ಸಂಬಂಧಪಟ್ಟವರು, ಮುಖ್ಯವಾಗಿ ಸರ್ಕಾರ, ಈ ಕಡೆ ಒತ್ತು ಕೊಡಬೇಕಾಗುತ್ತದೆ. ಕನ್ನಡಿಗರು ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು.
ಭಾಷಾಂಧರಾಗದೆ ಭಾಷಾಭಿಮಾನಿಗಳಾಗಿಯೇ ಕನ್ನಡಿಗರು ಯಾವತ್ತೂ ನಡೆದುಕೊಂಡು ಬರುತ್ತಿರುವರು. ಪ್ರಜ್ಞಾವಂತ ಮನುಷ್ಯನಿಗೆ ಎಲ್ಲ ಜ್ಞಾನವೂ ತನ್ನ ಭಾಷೆಯಲ್ಲಿ ಲಭಿಸುವುದು ದುರ್ಲಭ. ಆದ್ದರಿಂದ ಆಸಕ್ತರು ಶಕ್ತಿವಂತರು ಕನ್ನಡವನ್ನು ಬೆಳೆಸುವ ಆಕಾಂಕ್ಷೆಯಿಂದ, ನಮ್ಮಲ್ಲಿ ಇಲ್ಲದ ಜ್ಞಾನವನ್ನು ಸಾಹಿತ್ಯವನ್ನು ವಿಜ್ಞಾನವನ್ನು ಕನ್ನಡಕ್ಕೆ ತರುವುದು ದೊಡ್ಡ ಕೆಲಸವಾಗುತ್ತದೆ. ಉತ್ತಮ ಅನುವಾದ ಸ್ವಂತ ರಚನೆಯಂತೆ ಶ್ರೇಷ್ಠವಾದುದು. ಮೂಲ ಕೃತಿಯ ಮನೋಧರ್ಮ, ಅದರ ಭಾಷೆಯ ಸೌಂದರ್ಯ, ಅಂತಃಸತ್ವ, ಧ್ವನಿ, ಮುಂತಾದವನ್ನು ಮುಕ್ಕಾಗದಂತೆ ತರುವುದು ಸ್ವತಂತ್ರ ಬರವಣಿಗೆಗಿಂತ ಹೆಚ್ಚು ಕಷ್ಟಕರವಾದ ಕೆಲಸ. ಸ್ವತಂತ್ರ ಕೃತಿಯಾದರೆ ತನಗೆ ಬೇಕಾದ ಪದವನ್ನೋ ನುಡಿಗಟ್ಟನ್ನೋ ಬಳಸಲು ಲೇಖಕ ಸ್ವತಂತ್ರ್ಯನಿರುತ್ತಾನೆ. ಆದರೆ ಅನುವಾದದಲ್ಲಿ ಯಾವ ಸ್ವಾತಂತ್ರ್ಯವೂ ಇರುವುದಿಲ್ಲ. ಅನುವಾದ ಎಂದು ಹಗುರವಾಗಿ ಭಾವಿಸುವವರು, ಅದರಲ್ಲೂ ಪದ್ಯವನ್ನು ಅನುವಾದಿಸಲು ಪ್ರಯತ್ನಿಸಿದರೆ ಅದರ ಪ್ರಯಾಸ ಅರ್ಥವಾದೀತು.
ದಲಿತ ಬಂಡಾಯ ಸಾಹಿತ್ಯ ಚಳವಳಿಯ ಮೇಲೆ ಅಂಬೇಡ್ಕರ್ (೧೮೯೧-೧೯೫೬) ಅವರ ಪ್ರಭಾವ ಗಾಢವಾಗಿದೆ. ಅಂಬೇಡ್ಕರ್ ವಿಚಾರಧಾರೆಯಿಂದ ನಾವೆಲ್ಲ ರೂಪಿತವಾಗಿದ್ದೇವೆ. ಅಂಬೇಡ್ಕರ್ ಮೂಲತಃ ಆಧ್ಯಾತ್ಮವಾದಿಯಾಗಿದ್ದರು. ಅಧ್ಯಾತ್ಮವಾದಿ ಯಾವಾಗಲೂ ಸಮಾನತಾವಾದಿ. ಅಂಬೇಡ್ಕರ್ ಅವರಿಂದ ಯಾವುದೇ ತಪ್ಪು ನಡೆಯದಿದ್ದರೂ, ’ಬಹಿಷ್ಕೃತ’ ಜನಾಂಗದಲ್ಲಿ ಹುಟ್ಟಿದ್ದಕ್ಕೋಸ್ಕರವಾಗಿಯೇ ಸಾಮಾಜಿಕ ದೌರ್ಜನ್ಯಗಳಿಗೆ ಅವರು ಬಲಿಯಾದರು. ಅದರಿಂದ ಅವರು ಎಲ್ಲಾ ದಮನಿತ ಜನರ ಪ್ರತೀಕವಾಗಿದ್ದರೆ. ಅವರು ನೀಡಿದ ಯುಗಪ್ರವರ್ತಕ ತತ್ವಗಳಾದ ಸಾಮಾಜಿಕ ನ್ಯಾಯ, ಮೀಸಲಾತಿ, ಸಾಮಾಜಿಕಾರ್ಥಿಕ ಸಮಾನತೆ, ಜಾತಿ ವಿನಾಶ ಮೊದಲಾದವು ದೇಶವನ್ನು ಸಂಪೂರ್ಣ ಬದಲಾಯಿಸುವ ಶಕ್ತಿಯುಳ್ಳವಾಗಿವೆ. ಇದನ್ನು ಆಗುಮಾಡಲು ನಿಷ್ಠಾವಂತ ಕಾರ್ಯಕರ್ತರ ಪಡೆ ತಯಾರಾಗಬೇಕಾಗಿದೆ.
ಇನ್ನೊಬ್ಬ ರಾಷ್ಟ್ರ ನಾಯಕರಾದ ಬಾಬು ಜಗಜೀವನರಾಮ್ (೧೯೦೨-೧೯೮೬) ಅವರ ಕೃತಿಗಳು ಈಚೆಗೆ ಕನ್ನಡಕ್ಕೆ ಬರುತ್ತಿರುವುದು ಸ್ವಾಗತಾರ್ಹ ವಿಷಯ. ಇದರಿಂದ ಕನ್ನಡದ ವೈಚಾರಿಕ ನೆಲ ಇನ್ನೂ ಹೆಚ್ಚು ಫಲವತ್ತಾಗುವುದು.
ಇನ್ನು ಹುಣಸೂರಿನ ಬಗ್ಗೆ ಹೇಳುವುದಾದರೆ,-ಕಾಲಾವಕಾಶ ಇಲ್ಲದಿರುವುದರಿಂದ ಇಡೀ ಮೈಸೂರಿನ ಜಿಲ್ಲೆಯನ್ನು ಕುರಿತು ಹೇಳಲಾಗದುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಹುಣಸೂರು ಕರ್ನಾಟಕ ರಾಜ್ಯದಲ್ಲೇ ವಿಶಿಷ್ಟವಾದ ತಾಲೂಕು. ಇಲ್ಲಿನ ತೇಗದಮರ, ಹೊಗೆಸೊಪ್ಪು, ಸರಿಸಾಟಿ ಇಲ್ಲ ಎಂದರೆ ತಪ್ಪಾಗದು. ಹುಣಸೂರಿನಲ್ಲಿ ಇರುವಷ್ಟು ಮರದ ಮಿಲ್ಲುಗಳು ಬೇರೆಲ್ಲೂ ಇಲ್ಲ ಎಂದರೆ ತಪ್ಪಾಗದು. ತಂಬಾಕು ಬೆಳೆಯೇ ಈ ತಾಲೂಕು ಜನರಿಗೆ ಸ್ವಲ್ಪ ಮಟ್ಟಿಗೆ ಹಣ ತರುವ ವಾಣಿಜ್ಯ ಬೆಳೆಯಾಗಿದೆ. ಇದನ್ನು ಸಂಸ್ಕರಿಸಲು ಹೆಚ್ಚು ಸೌದೆ ಬೇಕಾದುದರಿಂದ ಕಾಡು ಕಮ್ಮಿಯಾಗುತ್ತಿರುವುದನ್ನು ಎಲ್ಲರೂ ಬಲ್ಲರು. ಅರಣ್ಯ ನಾಶದಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ. ಮುಖ್ಯವಾಗಿ ಮಳೆಗೆ ಮೂಲವಾದ ಮರಗಳು ಇಲ್ಲದಂತಾಗುತ್ತವೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಆದಾಯ ಬರುವ ಬೇರೆ ಬೆಳೆಗಳನ್ನು ಶೋಧಿಸುವುದು ಕ್ಷೇಮಕರ.
ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟ ತಾಲೂಕು ಹುಣಸೂರು. ಕಲ್ಲಹಳ್ಳಿಯ ’ಬುದ್ಧಿ’ಯವರೆಂದು ಪ್ರಖ್ಯಾತರಾಗಿದ್ದ ದೇವರಾಜ ಅರಸು ಅವರು ಏಳು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. (೨೦-೦೨-೧೯೭೨ ರಿಂದ ೨೧-೧೨-೧೯೭೭ ಮತ್ತು ೨೮-೦೨-೧೯೭೮ ರಿಂದ ೦೨-೦೧-೧೯೮೦. ಮಧ್ಯೆ ಒಂದು ವರ್ಷ ಎರಡು ತಿಂಗಳು ರಾಷ್ಟ್ರಪತಿ ಆಡಳಿತ ಇತ್ತು). ಇಷ್ಟು ದೀರ್ಘಾವಧಿಯವರೆಗೆ ಈ ತನಕ ಬೇರೆ ಯಾರೂ ಕರ್ನಾಟಕದ ಮುಖ್ಯಮಂತ್ರಿ ಆಗಿಲ್ಲ. ಅರಸರು ಮುಖ್ಯಮಂತ್ರಿ ಪದವಿಯಲ್ಲಿದ್ದಾಗ ರಾಜ್ಯದ ಹೆಸರನ್ನು ’ಕರ್ನಾಟಕ’ ಎಂದು ಬದಲಾಯಿಸಿದರು. ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಅಪಾರ ಅನುಕೂಲವನ್ನು ಹಾವನೂರ ಆಯೋಗದ ಮೂಲಕ ಕಾನೂನುಬದ್ಧ ಮಾಡಿದ್ದು ಅವರ ಹಿರಿಮೆ. ಅತ್ಯಂತ ಕಡಿಮೆ ಮತದಾರರಿರುವ ಕೋಮಿನಿಂದ ಬಂದ ಅವರು ಸುಮಾರು ಮೂರು ದಶಕಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಸಾಮಾನ್ಯವಲ್ಲ.
ಹುಣಸೂರು ತಾಲೂಕು ಚಿಲ್ಕುಂದ ಹೋಬಳಿಯ ಕಲ್ಲಹಳ್ಳಿಯವರಾದ ಸುಬ್ರಹ್ಮಣ್ಯ ರಾಜೇ ಅರಸ್ ಎಂದರೆ ಬೇಗ ಗೊತ್ತಾಗುವುದಿಲ್ಲ. ಅವರದು ’ಚದುರಂಗ’ (೧೯೧೬-೧೯೯೮) ಎಂಬ ಕಾವ್ಯನಾಮ. ಅವರು ಈ ತಾಲೂಕಿನ ಮತ್ತು ಕನ್ನಡ ನಾಡಿನ ಒಬ್ಬ ಪ್ರಮುಖ ಕಾದಂಬರಿಕಾರ ಮತ್ತು ಕತೆಗಾರ ಆಗಿದ್ದಾರೆ. ಅವರ ಸರ್ವಮಂಗಳಾ ಮತ್ತು ಉಯ್ಯಾಲೆ ಕೃತಿಗಳು ಚಲನಚಿತ್ರವಾಗಿವೆ. ಇವರ ಮಹತ್ವದ ಕಾದಂಬರಿ ವೈಶಾಖ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು. ಇನ್ನೊಂದು ಕೃತಿ ’ಹೆಜ್ಜಾಲ’.
ಅವರ ಮಗ ಡಾ.ವಿಕ್ರಮರಾಜೇ ಅರಸ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದಾರೆ. ಅವರು ಕರ್ನಾಟಕ ಮುಕ್ತವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವರು. ಇವರ ತಾಯಿ ದೊಡ್ಡಮ್ಮಣ್ಣಿ. ಅವರು ನಿಜವಾಗಿಯೂ ’ದೊಡ್ಡತಾಯಿ’ ಆಗಿದ್ದರು. ಅವರ ಆತಿಥ್ಯ ಮತ್ತು ವಾತ್ಸಾಲ್ಯವನ್ನು ನಾನು ಮರೆಯಲಾರೆ.
ಹುಣಸೂರು ಕೃಷ್ಣಮೂರ್ತಿ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ದೊಡ್ಡ ಹೆಸರು. ಅವರ ಕೊಡುಗೆ ಅಪಾರ.
ಪ್ರೊ.ಎಸ್.ಶ್ರೀನಿವಾಸ್ ಅವರು ಹುಣಸೂರು ಪುರಸಭೆ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ’ಅಭಿವೃದ್ಧಿ ಅರ್ಥಶಾಸ್ತ್ರ, ’ಸಹಕಾರ ತತ್ವದ ಚಿಂತನೆಗಳು’, ’ಪರಿಸರ ಸಂರಕ್ಷಣೆ’, ಎಂಬ ಕನ್ನಡ ಕೃತಿಗಳನ್ನು ಮತ್ತು ’ಇಸಂ’ ಎನ್ನುವ ಒಂದು ಇಂಗ್ಲಿಷ್ ಕೃತಿಯನ್ನು ಬರೆದು ಜ್ಞಾನ ಪ್ರಸಾರ ಮಾಡಿದ್ದಾರೆ. ಅವರ ಅರಬ್ಬಿ ತಿಟ್ಟು’ ಎಂಬ ಕಾದಂಬರಿ ಹುಣಸೂರು ಗ್ರಾಮೀಣ ಬದುಕನ್ನು ಪರಿಚಯಿಸುತ್ತದೆ. ಜೊತೆಗೆ ಹಳ್ಳಿಯ ಕೆಲವು ಹೊಸ ನುಡಿಗಟ್ಟುಗಳು, ಪದಗಳು ಇದರಲ್ಲಿ ಬಂದಿವೆ.
ಹಾಲಿ ಶಾಸಕರಾದ ಶ್ರೀ ಎಚ್.ಪಿ. ಮಂಜುನಾಥ್ ಅವರದ್ದು ವಿಶೇಷ ಸಾಧನೆ. ಕೇವಲ ನಾಲ್ಕುನೂರ ತೊಂಬತ್ತೆಂಟು ಮತದಾರರಿರುವ, ಸೂಕ್ಷ್ಮದರ್ಶಿಯಲ್ಲಿ ಕಾಣಬಹುದಾದ ತೀರಾ ಅತ್ಯಂತ ಸಣ್ಣ ಪಂಗಡದಿಂದ ಬಂದ ಇವರು ಜನರನ್ನು ಸರಿದೂಗಿಸಿಕೊಂಡು ಹೋಗುತ್ತಿರುವರು. ಅವರ ಅವಧಿಯಲ್ಲಿ ಇದುವರೆಗೆ ಯಾವುದೇ ಘರ್ಷಣೆಗಳಿಲ್ಲ. ಈಗ ಕ್ಷೇತ್ರ ’ಸರ್ವ ಜನಾಂಗದ ಶಾಂತಿಯ ತೋಟ’ ಎನ್ನಬಹುದಾಗಿದೆ.
ವಿವಿಧ ಜನಾಂಗಗಳ ಜನಸಂಖ್ಯೆ ದೃಷ್ಟಿಯಿಂದ ಹುಣಸೂರು ವಿಧಾನಸಭಾ ಕ್ಷೇತ್ರ ಅಕ್ಕಪಕ್ಕದ ತಾಲೂಕುಗಳಿಗಿಂತ ವೈಶಿಷ್ಟ್ಯಪೂರ್ಣವಾಗಿದೆ. ಹೆಗ್ಗಡದೇವನ ಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟುಗಳು ಅಧಿಕವಾಗಿದೆ. ಕೆ.ಆರ್.ನಗರ ತಾಲೂಕಿನಲ್ಲಿ ಮೊದಲನೆಯ ಸ್ಥಾನದಲ್ಲಿ ಒಕ್ಕಲಿಗರಿದ್ದಾರೆ. ಎರಡನೆಯ ಸ್ಥಾನದಲ್ಲಿ ಹಾಲುಮತದವರಿದ್ದಾರೆ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಲಿಗರು ಪ್ರಮುಖವಾಗಿರುವರು. ಹುಣಸೂರು ತಾಲೂಕು ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಜನಾಂಗಗಳು ಸಾಕಷ್ಟು ಸಮಸಂಖ್ಯೆಯಲ್ಲಿ ಇರುವುದು ವಿಶೇಷ. ದಲಿತರು ಸುಮಾರು ನಲವತ್ತೈದು ಸಾವಿರ, ಒಕ್ಕಲಿಗರು ನಲವತ್ತು ಸಾವಿರ, ಕುರುಬರು ಇಪ್ಪತ್ತೈದು ಸಾವಿರ, ನಾಯಕರು ಇಪ್ಪತ್ತೈದು ಸಾವಿರ, ಮುಸ್ಲಿಮರು ಇಪ್ಪತ್ತು ಸಾವಿರ,. ಲಿಂಗಾಯಿತರು ಹನ್ನೆರಡು ಸಾವಿರ, ಇತರ ಹಿಂದುಳಿದವರು (ಓಬಿಸಿ), ಹಕ್ಕಿಪಿಕ್ಕಿಯವರು, ಕುಂಬಾರರು, ಗಾಣಿಗರು, ಕ್ಷೌರಿಕರು, ಮಡಿವಾಳರು, ವಿಶ್ವಕರ್ಮರು, ಮುಂತಾದವರು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ.
ಪಶ್ಚಿಮ ಘಟ್ಟಗಳ ಇರ್ಪುನಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ಹೊಳೆ ಹುಣಸೂರಿನ ಮಧ್ಯಭಾಗದಲ್ಲಿ ಹರಿಯುತ್ತಿದೆ. ಪಟ್ಟಣದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸೇತುವೆ ಬೆಸೆದಿರುವುದು. ಇದು ಕಲ್ಕತ್ತಾದ ಹೌರಾ ಸೇತುವೆಯನ್ನು ನೆನಪಿಸುವಂತಿದೆ.
ಆಕಾಶವಾಣಿ ಬಾತ್ಮೀದಾರರೂ ಹಿರಿಯ ಪತ್ರಕರ್ತರೂ ಗಾಂಧಿವಾದಿಯೂ ಆದ ಶ್ರೀ ಕೆ.ವಿ.ಶ್ರೀನಿವಾಸನ್ ಕಲ್ಕುಣಿಕೆಯವರು. ಇವರು ತಮ್ಮ ಮಾತಾಪಿತೃಗಳ ಹೆಸರಿನಲ್ಲಿ ಪ್ರತಿವರ್ಷ ಉತ್ತಮ ಸಾಧನೆಗಳ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ನೀಡುವುದು ಪ್ರಶಂಸನೀಯ.
ಪತ್ರಿಕೋದ್ಯಮದಲ್ಲಿ ತಾಲೂಕಿನ ತರುಣರು ವಿಕ್ರಮ ಸಾಧಿಸಿದ್ದಾರೆ. ಶ್ಯಾನುಭೋಗನ ಹಳ್ಳಿ ರಾಮಕೃಷ್ಣ ’ವೃತ್ತಾಂತ ಕರ್ನಾಟಕ’ ಎಂಬ ವಾರಪತ್ರಿಕೆಯನ್ನು ಆಕರ್ಷಕವಾಗಿ ತರುತ್ತಿದ್ದಾರೆ. ವಾರ ವಾರದ ವಿದ್ಯಮಾನಗಳನ್ನು ಅವರು ಚೇತೋಹಾರಿಯಾಗಿ ವಿಶ್ಲೇಷಿಸುವುದನ್ನು ಇಲ್ಲಿ ಕಾಣಬಹುದು.
ಹಿಂಡುಗುಡ್ಲು ವೆಂಕಟೇಶ್ ’ಲಾ ಗೈಡ್ ಎಂಬ ಕಾನೂನು ಪತ್ರಿಕೆಯಲ್ಲಿ ಕನ್ನಡದಲ್ಲಿ ಪ್ರಕಟಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಕಾನೂನಿನ ತಿಳಿವಳಿಕೆಯನ್ನು ಕೊಡಲು ಸಾಧ್ಯವಾಗಿದೆ. ಇಡೀ ರಾಜ್ಯದಲ್ಲಿ ಈ ಬಗೆಯ ಪತ್ರಿಕೆ ಇದೊಂದೇ ಎಂಬುದು ಇದರ ಪ್ರಾಶಸ್ತ್ಯ.
’ಅಹಿಂದ ಎಕ್ಸ್‌ಪ್ರೆಸ್ ಎಂಬ ಕನ್ನಡ ಪಾಕ್ಷಿಕೆಯನ್ನು ಇಂಟಕ್ ರಾಜು ತಮ್ಮ ಸಂಪಾದಕತ್ವದಲ್ಲಿ ಹೊರಡಿಸುತ್ತಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಸಮಸ್ಯೆಗಳನ್ನು ಅವರು ತಮ್ಮ ಪತ್ರಿಕೆಯಲ್ಲಿ ವಿಶ್ಲೇಷಿಸುತ್ತಿರುವರು. ಇದರಿಂದ ಅಹಿಂದ ಜನಸ್ತೋಮಕ್ಕೆ ಬಹಳ ಪ್ರಯೋಜನವಾಗುತ್ತಿದೆ.
ಪ್ರವಾಹ ಬಂದಾಗ ಲಕ್ಷ್ಮಣತೀರ್ಥ ಸ್ವಚ್ಛವಾಗುತ್ತದೆ. ಉಳಿದ ಸಮಯದಲ್ಲಿ ಕೊಳಕಾಗಿರುವುದನ್ನು ನೋಡುತ್ತಿದ್ದೇವೆ. ಶ್ರೀ ಸಿ.ಎಚ್.ವಿಜಯಶಂಕರ ಅವರು ಪ್ರಕೃತದಲ್ಲಿ ಅರಣ್ಯ ಸಚಿವರು. ಎರಡು ಬಾರಿ ಈ ತಾಲೂಕಿನ ಎಂ.ಎಲ್.ಎ. ಆಗಿದ್ದರು. ಎರಡು ಸಾರಿ ಸಂಸತ್ ಸದಸ್ಯರಾಗಿದ್ದರು. ಅವರು ಲಕ್ಷ್ಮಣ ತೀರ್ಥವನ್ನು ಶುದ್ಧಿ ಮಾಡುವ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿದೆ.
ಈಗ ಜಾಗತೀಕರಣ ಪ್ರವಾಹದಂತೆ ಹೆಚ್ಚುತ್ತಿದ್ದು, ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಜಾಗತೀಕರಣ ಕುರಿತಂತೆ ಪರ ಮತ್ತು ವಿರೋಧ ಮಾತುಗಳು ತೀವ್ರವಾಗಿದೆ. ಜಾಗತೀಕರಣ ಆಧುನಿಕ ಜಗತ್ತಿನ ಒಂದು ಸವಾಲು. ನಾವು ಉಳಿಯಬೇಕಾದರೆ ಈ ಸವಾಲನ್ನು ಎದುರಿಸಲೇಬೇಕು. ಜೀವವಿಜ್ಞಾನದ ಪಿತಾಮಹ ಚಾರ‍್ಲಸ್ ಡಾರ್ವಿನ್ (೧೮೦೯-೮೨) "ನೈಸರ್ಗಿಕ ಆಯ್ಕೆಯಲ್ಲಿ ಯೋಗ್ಯತಮವಾದದ್ದು ಉಳಿಯುತ್ತದೆ" ("ದ ಸರ್ವೈವಲ್ ಆಫ್‌ದ ಫಿಟೆಸ್ಟ್") ಎನ್ನುತ್ತಾನೆ. ಇದು ಜೀವನದ ಎಲ್ಲ ರಂಗಕ್ಕೂ ಅನ್ವಯವಾಗುವ ಮಾತು. ಸವಾಲನ್ನು ಎದುರಿಸಲಾಗದವರು ಸೋಲುತ್ತಾರೆ, ಹಿಂದೆ ಉಳಿಯುತ್ತಾರೆ. ಆದ್ದರಿಂದ ಜಾಗತೀಕರಣಕ್ಕೆ ಸಮಾಜ ಸಜ್ಜಾಗಬೇಕು.
ಸುಮಾರು ೨೦೨೦ರ ಹೊತ್ತಿಗೆ ಹೊಗೆಸೊಪ್ಪಿನ ವ್ಯಾಪಾರ ಕುಸಿಯಬಹುದು ಅಥವಾ ನಿಲುಗಡೆ ಆದೀತು ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ನಮ್ಮ ಜಿಲ್ಲೆಯ ಸಂಸದರಾದ ಶ್ರೀ ಎಚ್.ವಿಶ್ವನಾಥ್ ಅವರು ಗಮನ ಹರಿಸಬೇಕೆಂದು ಕೋರುತ್ತೇನೆ. ಅವರು ಆಲೋಚನಾಪರರು, ಬರಹಗಾರರು. ಆದುದರಿಂದ ಅವರಿಗೆ ಹೊಣೆಗಾರಿಕೆ ಹೆಚ್ಚು. ಸಾವಿರಾರು ಕುಟುಂಬಗಳ ಲಕ್ಷಾಂತರ ಜನರ ಭವಿಷ್ಯದ ಬಗ್ಗೆ ಅವರು ಚಿಂತಿಸುವರೆಂದು ನಾನು ನಂಬಿದ್ದೇನೆ.
ರಾಜ್ಯ ಮತ್ತು ರಾಷ್ಟ್ರದ ರಾಜಕೀಯ ರಂಗದ ಮೇಲೆ ಮುದುಕರೇ ವಿರಾಜಮಾನರಾಗಿದ್ದಾರೆ. ಅವರು ಯುವಕರಿಗೆ ಅವಕಾಶ ಕೊಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಐವತ್ತು ಐವತ್ತೈದನೆಯ ವಯಸ್ಸಿಗೆ ಸೌಜನ್ಯಪೂರಿತವಾಗಿ ರಾಜಕೀಯದಿಂದ ನಿವೃತ್ತರಾಗುತ್ತಾರೆ. ಮೊನ್ನೆ ಭಾರತಕ್ಕೆ (೦೭-೧೧-೨೦೧೦) ಬಂದಿದ್ದ ಅಮೆರಿಕೆಯ ರಾಷ್ಟ್ರಾಧ್ಯಕ್ಷ ಒಬಾಮ ಎಷ್ಟು ಲವಲವಿಕೆಯಿಂದ ಇದ್ದಾರೆಂದು ನೋಡಿ ಇಡೀ ರಾಷ್ಟ್ರ ಹರ್ಷಪಟ್ಟಿತು. ನಮ್ಮ ನಾಯಕರುಗಳು ಕೂತರೆ ಏಳಲಾರದ, ಎದ್ದರೆ ಕೂರಲಾರದ ವಯಸ್ಸಿನ ಸ್ಥಿತಿಯಲ್ಲಿ ಇದ್ದಾರೆ. ಇವರು ಇತರ ದೇಶದವರನ್ನು ನೋಡಿ ಕಲಿಯುವವರಲ್ಲ. ಮುಪ್ಪಾದರೂ ಅಧಿಕಾರ ಬಿಡದವರ ವಿಷಯವನ್ನು ರೂಪಕದಲ್ಲಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಚಿತ್ರಿಸುತ್ತವೆ. ರಾಮ ತನ್ನ ಮಕ್ಕಳಾದ ಲವ ಮತ್ತು ಕುಶರಿಂದ ಸೋಲುತ್ತಾನೆ; ಅರ್ಜುನ ತನ್ನ ಮಗ ಬಭ್ರುವಾಹನನಿಂದ ಪರಾಜಯ ಹೊಂದುವನು. ಅನ್ಯರು ಹಾಗೆ ಪರಾಭವಗೊಳಿಸಿದ್ದರೆ ಅದು ದ್ವೇಷಾಸೂಯೆಗಳ ಕೆಲಸದ ಫಲ ಎನ್ನಿಸಿಬಿಡುತ್ತಿತ್ತು. ಆದರೆ ಇದು ತಂದೆ ಮಕ್ಕಳ ಹೋರಾಟವಾದ್ದರಿಂದ ಮಾನ್ಯತೆ ಮತ್ತು ಮೆಚ್ಚಿಕೆ ಮುತ್ತಿಕೊಂಡಿವೆ. ಆದರೆ ಇಲ್ಲಿ ಧ್ವನಿತವಾಗುವ ಸಂದೇಶ: ತರುಣರಿಗೆ ಮುದುಕರು ಜಾಗ ಬಿಟ್ಟುಕೊಡಬೇಕು. ಯೌವ್ವನದಲ್ಲಿ ಮಹಾಶೂರಾಧಿಶೂರನಾಗಿದ್ದರೂ ಮುಪ್ಪಿನಲ್ಲಿ ಅದೇ ಬಲ ಇರುವುದಿಲ್ಲ. ಇದು ಪ್ರಕೃತಿ ನಿಯಮ. ಇದನ್ನು ಗ್ರಹಿಸಿ ವಯಸ್ಸಾದವರು ಗೌರವದಿಂದ ಅಧಿಕಾರ ತೆರವು ಮಾಡುವುದು ಯೋಗ್ಯ. ಯುವಕರು ಉತ್ಸಾಹದಿಂದ ಸ್ವಾಭಿಮಾನದಿಂದ ಆ ಸ್ಥಾನವನ್ನು ಜವಾಬ್ದಾರಿಯಿಂದ ತುಂಬುವುದು ಅಪೇಕ್ಷಣೀಯ.
ಕೊನೆಯದಾಗಿ ಎಂದು ಹೇಳುತ್ತಿದ್ದರೂ ನಿಜವಾಗಿ ಮೊದಲನೆಯದಾದ ಸಂಗತಿಯನ್ನು ಅಂದರೆ ನಾನು ಬರವಣಿಗೆ ಮಾಡಲು ಪ್ರೋತ್ಸಾಹಿಸಿ, ನಾನು ಬರೆದುದನ್ನು ತಿದ್ದಿ ನಡೆಸಿದ ಮಹತ್ವದ ಕವಿ ವಿಮರ್ಶಕ ವಿದ್ವಾಂಸ ಪ್ರೊ|ಸುಜನಾ ಅವರಿಗೆ ನನ್ನ ಪ್ರಣಾಮಗಳು.
’ವಿಜಯ’ ದಿನಪತ್ರಿಕೆಯನ್ನು ನಡೆಸುತ್ತಿದ್ದ ತ್ಯಾಗಜೀವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎ.ರಾಮಣ್ಣನವರು ನನ್ನ ಜೀವನದ ಆಧಾರವಾಗಿದ್ದರು. ಅವರು ತಮ್ಮ ಮನೆಯಲ್ಲಿ ನನಗೆ ಆಶ್ರಯ ನೀಡಿ ಪೋಷಿಸಿದ ಮಹಾವ್ಯಕ್ತಿ. ಅವರ ಮುದ್ರಣಾಲಯದಲ್ಲಿ ನಾನು ಬರೆಯುವುದನ್ನು ಕಲಿತೆ. ಎ.ರಾಮಣ್ಣನವರು ನನ್ನ ಬದುಕಿನ ಪ್ರಾತಃಸ್ಮರಣೀಯರಲ್ಲಿ ಒಬ್ಬರು.
ನನ್ನನ್ನು ತಮ್ಮ ಪಾಡಿಗೆ ಅಡಿಗೆ ಮನೆಯಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ಊಟ ಮಾಡಿಸುತ್ತ ಮಹಾನುಭಾವರಾದ ಪ್ರೊ|ತ.ಸು.ಶಾಮರಾಯರು ನಾನು ಬರವಣಿಗೆ ಮಾಡಬೇಕೆಂದು ಉತ್ತೇಜಿಸುತ್ತಿದ್ದುದನ್ನು ಮರೆಯಲಾರೆ. ಅವರ ಮಗ ಪ್ರಸಿದ್ಧ ಪ್ರಕಾಶಕ ಲೇಖಕ ಶ್ರೀ ಟಿ.ಎಸ್.ಛಾಯಾಪತಿ ನನ್ನ ಪುಸ್ತಕಗಳನ್ನು ಪ್ರಕಟಿಸಿ ನನಗೆ ಸಹಾಯ ಮಾಡಿದ್ದಾರೆ. ನಾನು ಬರೆದ ವಿಚಾರ ಮತ್ತು ವಿಮರ್ಶಾ ಲೇಖನಗಳನ್ನು ಮೊದಲು ಸಂಕ್ರಮಣ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟಿಸಿ ನನ್ನನ್ನು ಬೆಳಕಿಗೆ ತಂದವರು ಖ್ಯಾತ ಕವಿ ಮತ್ತು ಚಿಂತಕ ಪ್ರೊ.ಚಂದ್ರಶೇಖರ ಪಾಟೀಲರು. ಅವರಿಗೆ ನಾನು ಋಣಿ.
ನನ್ನ ವಿಚಾರ ಮತ್ತು ವಿಮರ್ಶೆಯನ್ನು ಹೃದ್ಯವಾಗಿ ಮೆಚ್ಚಿ ನನ್ನನ್ನು ಬಹಳವಾಗಿ ಪ್ರೋತ್ಸಾಹಿಸಿದ ಹಿರಿಮೆಯ ಕವಿವರ ಡಾ.ಚೆನ್ನವೀರ ಕಣವಿ ಅವರನ್ನು ನೆನೆಯುತ್ತೇನೆ. ಈ ಅಭೂತಪೂರ್ವ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ ಎಲ್ಲಾ ಮಂಗಳ ಮೂರ್ತಿಗಳಿಗೆ ನಾನು ವಂದಿಸುತ್ತೇನೆ. ತಮ್ಮೆಲ್ಲರ ಆಶೀರ್ವಾದಗಳು ಶುಭಾಕಾಂಕ್ಷೆಗಳು ಸದಾ ನನ್ನ ಬೆಂಗಾವಲಾಗಿರಲಿ ಎಂದು ನನ್ನ ಹಾರೈಕೆ.

No comments:

Post a Comment

ಹಿಂದಿನ ಬರೆಹಗಳು