Thursday, June 2, 2011

ಸ್ನೇಹಕ್ಕ್ಕೂ ಬದ್ಧ ಸಮರಕ್ಕೂ ಸಿದ್ಧ



‘ಸ್ನೇಹಕ್ಕು ಬದ್ಧ ಸಮರಕ್ಕೂ ಸಿದ್ಧ’
ಈ ಘೋಷಣೆ ಪ್ರಸ್ತುತ ಕನ್ನಡ ಸಂದರ್ಭದ ಹೆಚ್ಚು ಪರಿಣಾಮಕಾರಿಯಾದ ಒಕ್ಕೊರಲಿನ ಕೂಗು.
ಇವನಾರವ, ಇವನಾರವ, ಇವನಾರವ
ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ ಕೂಡಲಸಂಗಮದೇವ ನಿಮ್ಮ ಮನೆಯ ಮಗನೆಂದೆನಿಸಯ್ಯ ಎಂದು ಬಸವಣ್ಣನವರು ವಿಶ್ವಭಾತೃತ್ವವನ್ನು ಕನ್ನಡಿಗರಿಗೆ ಬೋಧಿಸಿದ್ದಾರೆ. ಕನ್ನಡನಾಡು ಎಂದೂ ಕಾಣದಷ್ಟು ವಲಸಿಗರನ್ನು ತನ್ನ ಒಡಲಲ್ಲಿ ಇಂದು ತುಂಬಿಕೊಂಡಿದೆ. ಇಲ್ಲಿನ ನೆಲ-ಜಲ, ಸರ್ವಸ್ವವನ್ನು ಧಾರೆ ಎರೆದು ಎಲ್ಲರನ್ನೂ ಸಮಾನ ದೃಷ್ಟಿಯಿಂದ ಪೋಷಿಸುತ್ತದೆ.
ಆದರೆ, ಈ ಮಣ್ಣಿನ ಋಣವನ್ನು ತಿನ್ನುವ ಜನಕ್ಕೆ ಋಣದ ಅರಿವು ಎಷ್ಟಿದೆ ಎಂಬುದು ಇಂದಿನ ದೊಡ್ಡ ಪ್ರಶ್ನೆ. ಕನ್ನಡ ನಾಡಿನ ಮೇಲೆ, ಕನ್ನಡಿಗರ ಮೇಲೆ, ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯ ಮೇಲೆ ದಾಳಿ ನಡೆದು ಮೂಲ ಕನ್ನಡಿಗರಿಗೆ ತುಂಬಾ ಅನ್ಯಾಯವಾಗುತ್ತಿದೆ. ಇದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ. ಈ ಬಗ್ಗೆ ಜಾಗೃತಿಯ ಗಂಟೆಯನ್ನು ಬಾರಿಸುವವರು ಯಾರು ಮತ್ತು ಎಷ್ಟು ಮಂದಿ ಇದ್ದಾರೆ? ಅವಲೋಕಿಸಬೇಕಾದ ತುರ್ತಿದೆ. ಊರೆಲ್ಲ ಕೊಳ್ಳೆ ಹೊಡೆದು ಹೋದ ಮೇಲೆ ಬಾಗಿಲು ಮುಚ್ಚಿದರು ಎಂಬಂತೆ ಕನ್ನಡಿಗರ ಪರಿಸ್ಥಿತಿ ತಾಳುವ ಸಂದರ್ಭ ಎದುರಾಗುತ್ತದೆ. ಕನ್ನಡಿಗರ ಸಮಸ್ಯೆಗಳು ಸಾವಿರಾರು. ಈ ಬಗ್ಗೆ ರಾಜಕಾರಣಿಗಳನ್ನು ನಂಬಬಹುದೇ? ಪ್ರತಿಯೊಬ್ಬ ರಾಜಕಾರಣಿಯೂ ಒಂದು ಪಕ್ಷಕ್ಕೆ ನೇತಾಡುತ್ತಿರುವುದು ನಿಚ್ಚಳವಾಗಿ ಕಂಡುಬರುತ್ತಿದೆ.
ನಮ್ಮ ನೆರೆ ರಾಜ್ಯಗಳಲ್ಲಿ ಭಾಷಾವಾರು ಪ್ರಾದೇಶಿಕ ಪಕ್ಷಗಳು ದಶಮಾನಗಳ ಹಿಂದೆ ಅಸ್ತಿತ್ವಕ್ಕೆ ಬಂದು ಸದೃಢವಾಗಿವೆ. ಕೇಂದ್ರ ಸರ್ಕಾರದಲ್ಲಿ ಯಾವುದೇ ಪಕ್ಷ ಬಂದರು ಅದಕ್ಕೆ ಬೆಂಬಲ ಸೂಚಿಸುವುದರಿಂದ ತಮ್ಮಲ್ಲಿ ಸವಲತ್ತುಗಳನ್ನು ಪಡೆದುಕೊಂಡು ಬೀಗುತ್ತಿವೆ. ಈ ವಿಷಯದಲ್ಲಿ ಕನ್ನಡಿಗರು ದುರ್ದೈವಿಗಳು.
ನರಿ ಕೂಗು ಗಿರಿಗೆ ಮುಟ್ಟುವುದೇ ಎಂಬಂತೆ ನಮ್ಮ ಸಂಸದರ ಕೂಗು ಅಲ್ಲಿಗೆ ಮುಟ್ಟುತ್ತಲೇ ಇಲ್ಲ.
ಶ್ರೀ ಟಿ.ಎ.ನಾರಾಯಣಗೌಡರು ತಮ್ಮ ಹೋರಾಟದ ನಿಲುವನ್ನು ಮತ್ತು ಅವರ ಸಂಘಟನಾ ಶಕ್ತಿಯನ್ನು ಇತ್ತೀಚಿನ ದಿನಗಳಲ್ಲಿ ನಿಚ್ಚಳವಾಗಿ ತೋರಿಸಿ ಸಾಬೀತು ಪಡಿಸಿದ್ದಾರೆ. ಅದಕ್ಕೆ ಜೀವಂತ ಉದಾಹರಣೆ ಎಂದರೆ ಬೆಳಗಾವಿ ಮಸಿ ಪ್ರಕರಣ. ಇಂದು ಬೆಳಗಾವಿ ಜಾಗೃತಗೊಂಡು ಬಹುಮತದ ಕನ್ನಡ ಪರವಾದ ವಾತಾವರಣ ಸೃಷ್ಟಿಯಾಗಿದೆ.
ದೆಹಲಿಯಲ್ಲಿ ತಮ್ಮ ಸಂಘಟನೆಯ ಮೆರವಣಿಗೆ ತೆಗೆದು ಸಂಸತ್ ಭವನದಲ್ಲಿ ಒಂದು ಕಹಳೆಯ ಧ್ವನಿ ಮೊಳಗಿಸಿ ತಮ್ಮ ಬೆಂಬಲಿಗರ ಬಲಪ್ರದರ್ಶನ ನಡೆಸಿದ್ದು ಇಂದಿನ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿದೆ.
ಬಸವಣ್ಣನವರ ಕಾಲದಲ್ಲಿ ನಮ್ಮ ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬಂದು ಕನ್ನಡವನ್ನು ಕಲಿತು ಕನ್ನಡದ ವಚನಗಳನ್ನು ರಚಿಸಿದ್ದಾರೆ. ಇಂದು ಕರ್ನಾಟಕಕ್ಕೆ ಬೇರೆ ಬೇರೆ ಕಾರಣಗಳಿಂದ ವಲಸೆ ಬಂದಿರುವ ಜನರಿಗೆ ಕನ್ನಡ ಕಲಿಯಲೇಬೇಕೆಂಬ ಒತ್ತಡ ಎಲ್ಲೂ ಕಾಣುತ್ತಿಲ್ಲ. ಯಾರೇ ಇಲ್ಲಿಗೆ ಬರಲಿ ಅವರು ಕನ್ನಡ ಕಲಿತು ಮಾತನಾಡಿ ಕನ್ನಡಿಗರಾಗಬೇಕಾದ ಅಗತ್ಯವಿದೆ. ಈ ಬಗ್ಗೆ ಯಾರದು ಜವಾಬ್ದಾರಿ?
ಇತ್ತೀಚೆಗೆ ಯಳಚೇನಹಳ್ಳಿಯಲ್ಲಿ ರಕ್ಷಣಾ ವೇದಿಕೆಯ ಶಾಖೆಯೊಂದು ಪ್ರಾರಂಭವಾಯಿತು. ಅದರ ಉದ್ಘಾಟನಾ ಸಮಾರಂಭಕ್ಕೆ ಚಂದ್ರಶೇಖರ ಪಾಟೀಲರು ಹಾಗೂ ನಾರಾಯಣಗೌಡರು ಬಂದಿದ್ದರು. ಆ ಮೈದಾನದ ಸುತ್ತ ಹತ್ತಾರು ಜಾಹೀರಾತಿನ ಬೃಹದಾಕಾರದ ಫಲಕಗಳು ರಾರಾಜಿಸುತ್ತಿದ್ದವು. ಅಲ್ಲಿ ಕನ್ನಡದ ಒಂದು ಅಕ್ಷರವೂ ಮುದ್ರಿತವಾಗಿರಲಿಲ್ಲ. ಅದನ್ನು ಇಬ್ಬರೂ ಪ್ರಸ್ತಾಪ ಮಾಡಿದರು. ಕೂಡಲೇ ಕಾರ್ಯಕರ್ತರು ಅವುಗಳನ್ನು ಧ್ವಂಸ ಮಾಡಿದರು. ಸಮರಕ್ಕೂ ಸಿದ್ಧ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ!
ಕನ್ನಡಿಗ ಔದಾರ್ಯವನ್ನು ಸದಾ ಇದೇ ರೀತಿಯಲ್ಲಿ ದುರುಪಯೋಗವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಕೃತ್ಯಗಳನ್ನು ಖಂಡಿಸುವ ಮನಸ್ಸು ನಮಗೇ ಬೇಕಿದೆ.
ಅಂತಹ ಮನಸ್ಸುಗಳಲ್ಲಿ ಮಾನ್ಯ ಟಿ.ಎ.ನಾರಾಯಣಗೌಡರ ಮನಸ್ಸು ಒಂದು. ಕಪ್ಪು ಮೋಡದಲ್ಲಿ ಉದಯಿಸುವ ಮಿಂಚು-ಸಿಡಿಲಿನಂತೆ.
ಹಾಗಾಗಿ ನಾರಾಯಣಗೌಡರು ತಮ್ಮ ಒಡಲಿನ ತುಂಬ ಸಿಡಿಲುಗಳನ್ನು ತುಂಬಿಕೊಂಡಿದ್ದಾರೆ. ಮಳೆಯನ್ನು ಸುರಿಸಬಲ್ಲರು. ಗುಡುಗು-ಮಿಂಚು-ಸಿಡಿಲುಗಳನ್ನು ಹೊಮ್ಮಿಸಬಲ್ಲರು. ಅವರಿಗೆ ಅಭಿನಂದನೆ ಸಲ್ಲಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವೇ ಸರಿ.

ಜರಗನಹಳ್ಳಿ ಶಿವಶಂಕರ್
ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೫೬೦ ೦೧೮

No comments:

Post a Comment

ಹಿಂದಿನ ಬರೆಹಗಳು