Tuesday, June 14, 2011

ಮಹಾರತ್ನಮೆನಿಸಿದಂ ಕವಿರತ್ನಂ


ಕವಿಜನದೊಳ್ ರತ್ನತ್ರಯ
ಪವಿತ್ರಮೆನೆ ನೆಗೞ್ದು ಪಂಪನುಂ ಪೊನ್ನಿಗನುಂ
ಕವಿರತ್ನಮುಮೀ ಮೂವರ್
ಕವಿಗಳ ಜಿನಸಮಯ ದೀಪಕರ್ ಪೆೞರೊಳರೇ||
ಕವಿ ರತ್ನ ಕವಿ ಚಕ್ರವರ್ತಿ ರನ್ನ ಹತ್ತನೆಯ ಶತಮಾನದ ರತ್ನತ್ರಯರಲ್ಲಿ ಒಬ್ಬ. "ರನ್ನನ ಕೃತಿ. ರತ್ನಮುಮಂ ಪೇೞ್ ಪರೀಕ್ಷಿಪಂಗೆಟೆರ್ದೆಯೇ" ಎಷ್ಟೊಂದು ದೃಢ ವಿಶ್ವಾಸ ತನ್ನ ಕೃತಿ. ರತ್ನಗಳ ಮೇಲೆ. ಸಂಸ್ಕೃತ ಕನ್ನಡ ಉಭಯ ಭಾಷಾ ವಿಶಾರದ. ಪ್ರಾಕೃತವನ್ನೂ ತಿಳಿದಿದ್ದ. ವ್ಯಾಕರಣ ಪಂಡಿತ ಪ್ರತಿಭಾವಂತ ಜೈನ ಕವಿ. ತನ್ನ ಕವಿತ್ವ ಕುರಿತಾಗಿ-
ವಸುಧೆಯೊಳಗೊಂದು ರತ್ನಮಿ
ದೆಸೆದಿರ್ದುದು ಪಲವು ರನ್ನಮಿಲ್ಲೆಂಬಿನ ಮೇಂ
ಮಸುಳಿಸಿದನೊ ಬಹುರತ್ನಾ
ವಸುಂಧರಾಯೆಂಬ ವಾಕ್ಯಮಂ ಕವಿರತ್ನಂ||
ಕವಿ ರನ್ನ ಸಿರಿವಂತ ಕುಲದವನಾಗಲಿ ರಾಜ ಮನ್ನಣೆಗೆ ಪಾತ್ರರಾದ ಪಂಡಿತರ ಹಿನ್ನೆಲೆಯಲ್ಲಾಗಲೀ ಬಂದವನಲ್ಲ. ಬಳೆಗಾರ ವೃತ್ತಿಯ ಬಡ ಜೈನ ಕುಟುಂಬದಲ್ಲಿ ಜನಿಸಿದವ. ಕ್ರಿ.ಶ.೯೪೯ ಸೌಮ್ಯ ಸಂವತ್ಸರದಲ್ಲಿ. ಬೆಳುಗೆರೆನಾಡೊಳ ಮುದುವೊಳಲು. ಇಂದಿನ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ. ಜಿನವಲ್ಲಭ ಅಬ್ಬಲಬ್ಬೆ ತಂದೆತಾಯಿಗಳು. ದೃಢಬಾಹು ರೇಚಣ ಮಾರಮಯ್ಯ ಅಣ್ಣಂದಿರು. ಅಜಿತ ಸೇನಾಚಾರ್ಯರು ಗುರುಗಳು. ಇಬ್ಬರು ಹೆಂಡಿರು ಜಕ್ಕಿ ಮತ್ತು ಶಾಂತಿ ಮಗರಾಯ ಹಾಗೂ ಮಗಳು ಅತ್ತಿಮಬ್ಬೆ. ಬಾಲ್ಯದಲ್ಲೇ ಮುಧೋಳನನ್ನು ತ್ಯಜಿಸುತ್ತಾನೆ. ಅತ್ತಿಗೆ ಒಂದು ದಿನ-"ಮೂಲೆಯೊಳಗಿದ್ದ ಒನಕೆ ಚಿಗಿಯುತ್ತದೋ ಆದರೆ ನೀ ಮಾತ್ರ ದಡ್ಡಶಿಖಾಮಣಿ". ಮನಸ್ಸಿಗೆ ನೆಟ್ಟು ಅಂದೇ ಊರು ಬಿಟ್ಟ. ಅಲೆದಲೆದು ಬದುಕಿನೊಂದಿಗೆ ಹೆಣಗುತ್ತ ದಕ್ಷಿಣದ ಗಂಗರಾಜ್ಯದತ್ತ ಬರುವನು. ಶ್ರವಣಬೆಳಗೊಳ ಜೈನ ಕೇಂದ್ರವಾಗಿತ್ತು. ದೈವೇಚ್ಛೆಯಂತೆ ಭಾಗ್ಯದ ಬಾಗಿಲು ತೆರೆಯುವ ಕಾಲ ಸನ್ನಿಹಿತವಾಗಿತ್ತು. ಇವನಿಗೆ ಸಾಮಂತರಾಜರ ಮಂಡಲೇಶ್ವರರ ಆಶ್ರಯ ದೊರೆಯುತ್ತದೆ. ಗಂಗ ಮಂತ್ರಿ ಚಾವುಂಡರಾಯ ಇವರ ಬುದ್ಧಿಮತ್ತೆಗೆ ಮೆಚ್ಚಿ ತನ್ನಾಶ್ರಮದೊಳು ಶಿಕ್ಷಣವನ್ನೀಯುತ್ತಾನೆ.
ಮೊದಲೊಳ್ ಸಾವಂತರಿನಿನಿ
ಸುದಿತೋದಿತನಾಗಿ ಮಂಡಲೇಶ್ವರನಿಂದ
ಭ್ಯುದಯಪರನೆನಿಸಿ ಚಕ್ರಿಯಿ
ನುದಯ ಪರಂಪರೆಯಯನೆಯ್ದಿದಂ ಕವಿರನ್ನಂ
ಚಾವುಂಡರಾಯನಿಂದ ವ್ಯಕ್ತಿತ್ವದ ಬೆಳವಣಿಗೆ. ಅಜಿತಸೇನಾಚಾರ್ಯ ಗುರುಗಳಿಂದ ಧಾರ್ಮಿಕವಾದ ಆಸಕ್ತಿ ಬೆಳೆದು ಕವಿಯೂ ವಿದ್ವಾಂಸನೂ ಆಗಿ ಪ್ರಕಾಶಿಸಿ ಹತ್ತಿದನು.
"ಗಂಗ ಮಂಡಲ ಚಕ್ರೇಶ್ವರ ಕಟಕೋತ್ತಮ ನಾಯಕ ವಿರಚನೆ| ಯಿನನರ್ಘ್ಯ ರತ್ನಮಾದಂ ರತ್ನಂ" ಎಂದು ಹೇಳಿಕೊಂಡಿದ್ದಾನೆ. ಗಂಗದಂಡನಾಯಕ ಚಾವುಂಡರಾಯನಿಂದ ತಾನು ರತ್ನವಾಗಿ ರೂಪುಗೊಂಡನೆಂದು ಹೆಮ್ಮೆಯಿಂದ ನುಡಿದಿದ್ದಾನೆ.
ಗಂಗರಾಜ್ಯ ಪತನಾ ನಂತರ ಚಾಲುಕ್ಯ ಚಕ್ರವರ‍್ತಿ ಆಹವಮಲ್ಲ ತೈಲಪನ ಆಶ್ರಯವನ್ನು ಪಡೆಯುವನು. ಈ ಸಮಯದಲ್ಲೇ ರಾಜಪುತ್ರ ಸತ್ಯಾಶ್ರಯನು ತಂದೆ ತೈಲಪನ ಆಶ್ರಯವನ್ನು ಪಡೆಯುವನು. ಈ ಸಮಯದಲ್ಲೇ ರಾಜಪುತ್ರ ಸತ್ಯಾಶ್ರಯನು ತಂದೆ ತೈಲಪನ ಅನುಜ್ಞೆಯಂತೆ ದಂಡಯಾತ್ರೆ ಕೈಗೊಳ್ಳುವನು. ಚೋಳರಾಜ ಅಪರಾದಿತನನ್ನು ಸೋಲಿಸಿ ಕಾಂಚೀಪುರವನ್ನು ಕೈವಶಮಾಡಿಕೊಳ್ಳುವನು. ಘೂರ್ಜರರನ್ನು ಗೆದ್ದು ತನ್ನ ಪರಾಕ್ರಮ ಮೆರೆಯಿಸುತ್ತಾನೆ. ಇದನ್ನು ಕಂಡ ರನ್ನ ಈತನ ಸಾಹಸಗಳ ಬಣ್ಣಿಸಲೇಬೇಕೆಂದು "ಗದಾಯುದ್ಧ" ಕಾವ್ಯ ರಚನೆಗೆ ಕೈ ಹಾಕುತ್ತಾನೆ. ಅಜಿತ ತೀರ್ಥಂಕರ ಪುರಾಣದ ಕೊನೆಯಲ್ಲಿ ತನ್ನ ಕೃತಿಗಳ ಕುರಿತಂತೆ
ಕರಮೆಸೆದುವು ರತ್ನತ್ರಯ
ಪರಿಕಲ್ಪದೆ ಪರಶುರಾಮಚರಿತಂ ಚಕ್ರೇ
ಶ್ವರ ಚರಿತಮಜೀತ ತೀರ್ಥ
ಶ್ವರ ಚರಿತಂ ರತ್ನನಿಂದೆ ಭುವನ ತ್ರಯದೊಳ್
ತನ್ನಾಶ್ರಯದಾತನಾದ ಸಮರ ಪರಶುರಾಮನೆಂಬ ಕೀರ್ತಿಯ ಚಾವುಂಡರಾಯನನ್ನು ಕುರಿತ ಕೃತಿ ಪರಶುರಾಮ ಚರಿತೆಯಾಗಿರಬೇಕು. ಆದರೀ ಕಾವ್ಯ ಲಭ್ಯವಾಗಿಲ್ಲ. ಚಕ್ರೇಶ್ವರ ಚರಿತೆಯೇ ಗದಾಯುದ್ಧ ಅಥವಾ ಸಾಹಸಭೀಮ ವಿಜಯಂ ಕವಿಯು ಅನೇಕ ಸ್ಥಳದಲ್ಲಿ ಸತ್ಯಾಶ್ರಯನನ್ನು ಚಕ್ರೇಶ್ವರನೆಂದು ಕರೆದಿರುವುದಲ್ಲದೆ ತನ್ನ "ಕೃತಿಗೀಶ್ವರ ಚಕ್ರವರ‍್ತಿ ಸಾಹಸ ಭೀಮಂ" ಎಂದಿದ್ದಾನೆ. ಅಜಿತ ಪುರಾಣವನ್ನು ದಾನ ಚಿಂತಾಮಣಿ ಅತ್ತಿಮಬ್ಬೆಗೆ ಅಂಕಿತವಾಗಿಸಿದ್ದಾನೆ. ಇವೆರೆಡರ ಹೊರತಾಗಿ "ಕನ್ನಡ ಕಂದ" ನಿಘಂಟುವೆಂದು ಕಂದಪದ್ಯದಲ್ಲಿಯ ವೈಯಾಕರಣಿಯೂ ಆಗಿದ್ದರಿಂದ ವ್ಯಾಕರಣ ಗ್ರಂಥವನ್ನೂ ರಚಿಸಿರಬಹುದಾಗಿದೆ. ಸಾಹಸಭೀಮ ವಿಜಯ ಅಥವಾ ಗದಾಯುದ್ಧ ಮತ್ತು ಅಜಿತ ಪುರಾಣಗಳು ಲಭ್ಯವಿದ್ದ ಎರಡು ಚಂಪೂ ಕಾವ್ಯಗಳು. ಒಂದು ಲೌಕಿಕ ಇನ್ನೊಂದು ಧಾರ್ಮಿಕ. ಸಾಹಸಭೀಮ ವಿಜಯ ಭಾರತದ ಕಥೆ. ಕವಿ ರನ್ನ ಜೈನ ಮತಾವಲಂಭಿ. ಆದರೆ ಜೈನನಾಗಿ ಈ ಕಾವ್ಯವನ್ನು ವೈದಿಕ ಧರ್ಮಕ್ಕೆ ಚ್ಯುತಿಯಾಗದಂತೆ ಸೃಜಿಸಿರುವನು. ಚಾಲುಕ್ಯರು ವೈಷ್ಣವರು. ಲಾಂಛನ ವರಾಹ. (ವಿಷ್ಣುವಿನ ವರಾಹಾವತಾರ) ಮೇಲಾಗಿ ರನ್ನನ ಪೋಷಕರೂ ಕೂಡ. ಹೀಗಾಗಿ ಆಶ್ರಯದಾತ ಇೞುವಬೆಡಂಗ ಸತ್ಯಾಶ್ರಯನನ್ನು ಮಹಾಭಾರತದ ಭೀಮನೊಡನೆ ಹೋಲಿಸಿ ಅವನ ಶೌರ್ಯ ಸಾಹಸಗಳನ್ನು ಇಲ್ಲಿ ತುಂಬಿದ್ದಾನೆ.
"ಮೆಚ್ಚಿ ಬಣ್ಣಿಸಲಭಿಯೋಗ ಮಾಯ್ತೆನೆಗೆ ಸಾಹಸ ಭೀಮನ ಸಾಹಸಂಗಳಂ ಎಂದಿದ್ದಾನೆ. ಭೀಮ ದುರ್ಯೋಧನರ ಕಾಳಗದಲ್ಲಿ ಗದೆಗಳ ತಾಕಲಾಟದ ವೀರಾವೇಶದ ದಿಧಿಲ್ ಬುಧಿಲ್‌ಗಳ ಆರ್ಭಟ ವರ್ಣನೆ.
"ಧಪ್ಪರಿ ಧಟ್ಟುಂ ಪೊಟ್ಟೆನೆ
ಧೊಪ್ಪಧೊಗಪೆನೆ ದಿಧಿಲ್ ಬುಧಿಲ್ಲೆನೆ ಗದೆಗಳ್
ಸೊಪ್ಪು ಸೊವಡೆಪ್ಪಿನಂ ಸೂಮ್
ತಪ್ಪದೆ ಕಡುಕೆಯ್ದು ಪೊಯ್ದರೊರ್ವರನೊರ್ವರ್
ಈತನು ಚಿತ್ರಿಸಬೇಕಾದ ಚಿತ್ರ ಹೇಳಬೇಕಾಗಿರುವುದೆಲ್ಲ ಕಣ್ಮುಂದೆ ಕಟ್ಟುವಂತೆ ಪದಗಳನ್ನು ನಾಟಕೀಯವಾಗಿ ಹೆಣೆದಿದ್ದಾನೆ. ಯಾವ ಸನ್ನಿವೇಶದಲ್ಲೂ ಅದನ್ನು ಓದುವಾಗ ನೋಡುತ್ತಿರುವಂತೆ ಕೇಳುತ್ತಿರುವಂತೆ ಭಾಸವಾಗುತ್ತದೆ.
ಗದೆ ಗದೆಯಂ ಘಟ್ಟಿಸೆ ಪು
ಟ್ಟಿದ ಕೆಂಡದ ಕಿಡಿಯ ಕುಂಡವೆಣ್ಟುಂ ದೆಸೆಯಂ
-ಪುದಿಯೆ ಪದಧೂಳಿ ಗಗನದೊ
ಳೊಡನೆ ಸುರರ್ ಬೆದಮಿತಿ ಕಾದಿದರ್ ಕಡುಗಲಿಗಳ್
ವೀರ ಕಲಿಗಳಾದ ಭೀಮ-ದುರ್ಯೋಧನನ ಕಾದಾಟದ ಬಣ್ಣನೆಯಿದು. ಸತ್ಯಾಶ್ರಯನ ಶೌರ್ಯದ ಅಪ್ರತಿಮ ನೋಟವಿದು. ದುರ್ಯೋಧನನ್ನು ಪ್ರತೀಕಾರದ ಪ್ರತೀಕವಾಗಿ ಗದೆಯಿಂದ ಇಕ್ಕರಿಸುತ್ತ ತಗೋ-
ಇದು ಲಾಕ್ಷಾಗೇಹದಾಹಕ್ಕಿದು ವಿಷಮ ವಿಷಾನ್ನಕ್ಕಿದು ನಾಡ ಜೂಜಿಂಗದು ಪಾಂಚಾಲೀ ಪ್ರಪಂಚಕ್ಕಿದು ಕೃತಕಸಭಾಲೋಕದ ಭ್ರಾಂತಿಗೆಂದೋವದೆ.
ಚಲುಕ್ಯ ಚಕ್ರವರ್ತಿ ಆಹಮಮಲ್ಲ ತೈಲಪನು ಗದಾಯುದ್ಧ ಕಾವ್ಯವನ್ನು ಆಮೂಲಾಗ್ರ ಕೇಳಿ ಸಂತೋಷಗೊಂಡನು. ಈತನಿಗೆ ಕವಿ ಚಕ್ರವರ್ತಿ ಎಂಬ ಬಿರುದು ನೀಡಿ, ಪಾಲಕಿ ಚಾಮರ, ಛತ್ರ ಆನೆ, ಚಿನ್ನದ ಕೋಲು ಭತ್ತದ ಗದ್ದೆಗಳನ್ನು ಕೊಟ್ಟು ಗೌರವಿಸುತ್ತಾನೆ.
ಕವಿಮುಖ ಚಂದ್ರಂಕವಿಚ| ಕುವರ‍್ತಿ ಕವಿರಾ,
ಜಶೇಖರಂ ಕವಿರಾಜಂ
ಕವಿಜನ ಚೂಡಾರತ್ನಂ|ಕವಿ ತಿಲಕಂ ಕವಿ ಚತುರ್ಮುಖಂ-
-ಕವಿರತ್ನಂ||
ಎಂಬ ಬಿರುದುಗಳಿವೆ.
ಕವಿ ರನ್ನನ ಈ ಅಸಾಧಾರಣ ಪ್ರತಿಭೆ ಪಾಂಡಿತ್ಯಗಳಿಗೆ ಅತ್ತಿಮಬ್ಬೆ ಮೆಚ್ಚಿ ಅವನನ್ನು ಆದರಿಸುತ್ತಾಳೆ. ಆಶ್ರಯ ನೀಡುತ್ತಾಳೆ. ರನ್ನನೂ ಕೂಡ ಅವಳ ಧವಳ ಚಾರಿತ್ರ್ಯ ಮಹಾನ್ ವ್ಯಕ್ತಿತ್ವಕ್ಕೆ ಮನಸೋತು, ಅವಳ ಆದೇಶದಂತೆ ಅಜಿತ-ತೀರ್ಥಕಂಕರ ಪುರಾಣ ಕಾವ್ಯವನ್ನು ಧಾರ್ಮಿಕವಾಗಿ ರಚಿಸಿದ್ದಾನೆ.
ಪೊನ್ನಿಗನಿಂ ಮಲ್ಲಪನುಂ
ಪೊನ್ನನು ಮೞ್ತಯೆ ಪುರಾಣ ಚೂಡಾ ಮಣಿಯಂ
ಮುನ್ನಂ ಪೇೞಸಿದಂತೆ ಗು
ಣೋನ್ನತ ಕವಿರತ್ನನಿಂದಿದಂ ಪೇೞಸಿದಳ್||
ಅತ್ತಿಮಬ್ಬೆ ಪೊನ್ನನ ಶಾಂತಿಪುರಾಣದ ಹದಿನೈದುನೂರು ಪ್ರತಿಗಳನ್ನು ಮಾಡಿಸಿ ಗ್ರಂಥದಾನ ಮಾಡಿದ್ದಳು. ಅದರಿಂದ ತೃಪ್ತಿ ಹೊಂದದೆ ರನ್ನನಿಂದ ಅಜಿತ ಪುರಾಣವನ್ನು ಬರೆಸಿದಳು. ಈ ಪುರಾಣದಲ್ಲಿ ಎರಡನೆಯ ತೀರ್ಥಂಕರನಾದ ಅಜಿತಸ್ವಾಮಿಯ ಪಂಚಕಲ್ಯಾಣರೂಪವಾದ ಚರಿತ್ರೆಯನ್ನು ಜೈನಮತ ಪ್ರವಿಷ್ಟರಲ್ಲಿ ಜಿನಭಕ್ತಿ ಪುಟ್ಟುವ ಹಾಗೆಯೇ ಅನ್ಯರಲ್ಲಿ ಆಶ್ಚರ್ಯ ಹುಟ್ಟುವಂತೆಯೂ ಚಿತ್ರಿಸಿದ್ದಾನೆ.
ಶ್ರವಣ ಬೆಳಗೊಳದಲ್ಲಿ ಬಾಹುಬಲಿಯ ಭವ್ಯ ಮೂರ್ತಿ ಸ್ಥಾಪನೆ ಅತ್ತಿಮಬ್ಬೆ ಕಾಲದಲ್ಲೇ ಆಗಿದ್ದು. ಆಗ ಅವಳು ಉಪವಾಸವ್ರತದಿಂದಲೇ ಬೆಟ್ಟವನ್ನೇರಿದ್ದಳು. ಅತ್ತಿಮಬ್ಬೆ ಬಗೆಗೆ ರನ್ನನ ಭಕ್ತಿ ಅಸ್ಸೀಮವಾದುದು ಅವನ ದೃಷ್ಟಿಯಲ್ಲಿ-"ಪಿಕ್ಕುವೊಡೆ ಅತ್ತಿಯಪಣ್ ಅತ್ತಿಮಬ್ಬೆಯಲ್ಲದರ ಗುಣಂ". ವರ್ಣಿಸಿದಷ್ಟೂ ತೃಪ್ತಿಯಿಲ್ಲ. "ಬಿಳಿಯರಳೆಯಂತೆ ಗಂಗಾಜಲದಂತೆ ಸೇವೆ ಜಿನಸೇನ ಮುನಿಪತಿಯ ಗುಣಾವಳಿಯಂತೆ ನೆಗೞ್ದಕೊಪಣಾಚಳದಂತೆ ಪವಿತ್ರ ಮತ್ತಿಮಬ್ಬೆಯ ಚರಿತ್ರಂ" ಎಂದಿರುವನು. ತನ್ನ ಮಗಳಿಗೆ ಪ್ರೀತಿ ಹಾಗೂ ಅಭಿಮಾನ ದ್ಯೋತಕವಾಗಿ ಅತ್ತಿಮಬ್ಬೆ ಎಂದ್ಹೆಸರಿಟ್ಟು ಆ ಪುಣ್ಯ ಮೂರ್ತಿಯ ನಿತ್ಯ ನಾಮಸ್ಮರಣೆ ಗೈದಿದ್ದಾನೆ. ಅಜಿತಪುರಾಣದ ಪ್ರತಿ ಆಶ್ವಾಸದಲ್ಲೂ ಅತ್ತಿಮಬ್ಬೆಯ ಸ್ತುತಿಗೈದಿರುವನು.
"ಇದು ಸಕಲ ಮುನೀಂದ್ರವೃಂದ ವೃಂದಾರಕ ಶ್ರೀ ಮದಜಿತ. ಸೇನಾಭಟ್ಟಾರಕ ಶ್ರೀಪಾದ ಪದ್ಮಪ್ರಸಾದಾ ಸಂದಿತ-ರತ್ನಯಾಲಂಕೃತ. ಶ್ರೀಮದಭಿನವ ಕವಿ ಚಕ್ರವರ್ತಿ ಕವಿರನ್ನ ನಿರ್ಮಿತ. ಶ್ರೀದಾನ ಚಿಂತಾಮಣಿ ನಿರ್ಮಾಪಿತ ಶ್ರೀಮದಜಿತ. ತೀರ್ಥಂಕರ ಪುರಾಣ ತಿಲಕದೊಳ್. "ಜಿನಧರ್ಮಪತಾಕೆಯಿವಳು. ಆತನಿಗೆ ಯಥೇಶ್ಚ ಪುರಸ್ಕಾರ ಧನ ಕನಕಗಳನ್ನಿತ್ತು ಕವಿಗಳ ಕಾಮಧೇನು ಎನಿಸಿದಳು.
ಬುಧಜನ ವಂದಿತೆ ಧರ್ಮ
ಪ್ರಧಾನೆ ದರ್ಶನ ವಿಶುದ್ಧೆ ದಾನಗುಣೈಕಾಂ
ಬುಧಿಯೆನಿಸಿದ ಕವಿವರಕಾ
ಮಧೇನುವೆಂಬುದತ್ತಿಮಬ್ಬೆಯನೆಜಗಂ
ಆಕೆ ರತ್ನತ್ರಯಾಲಂಕೃತೆ ಚಾರಿತ್ರ್ಯಮೇರು. ಗುಣದಂಬಕಾರ‍್ತಿ,
ರನ್ನನ ಭಾಷಾ ಪ್ರಭುತ್ವ. ಅನುಭವದ ಆಳ ಅಭಿವ್ಯಕ್ತಿಸುವ ಸಾಮರ್ಥ್ಯಗಳೆಲ್ಲ ಒಟ್ಟಾಗಿ ಸೇರಿ ರನ್ನನನ್ನು ಶಕ್ತಿಕವಿಯನ್ನಾಗಿಸಿವೆ.
ಸಾಹಸಭೀಮ ವಿಜಯದ ವಿಶಿಷ್ಟ ಹಿರಿಮೆಯೆಂದರೆ ನಾಯಕನನ್ನು ಮೀರಿ ಬೆಳೆದ ಪ್ರತಿ ನಾಯಕ. ಈತನೇ ದುರಂತ ನಾಯಕ. ಇಲ್ಲಿ ದುರ್ಯೋಧನ ದುರಂತ ನಾಯಕ. ಕೃತಿ ನಾಯಕನಲ್ಲ. ಕೃತಿಯಲ್ಲೀತ ಪ್ರತಿ ನಾಯಕ. ಹೀಗಾಗಿ ಇದೊಂದು ದುರಂತ ನಾಟಕ.
ಮುಧೋಳದವನಾಗಿದ್ದ ರನ್ನ ಸಹಜವಾಗೇ, ಜನಪದಗಳನ್ನು ಗಾದೆಮಾತುಗಳನ್ನು ನಿರರ್ಗಳವಾಗಿ ಬಳಕೆ ಮಾಡಿಕೊಂಡಿರುವನು. ಹಾಸ್ಯ ಚೇಷ್ಟೇ, ವ್ಯಂಗ್ಯ ಅಣುಕುಗಳೆಲ್ಲಾ ಹಾಸು ಹೊಕ್ಕಾಗಿವೆ.
ಕಪಿಗೆ ಚಪಲತೆ ಸಹಜಂ
ತದ್ರಥದ ಗಾಲಿಗಳ್ ದೊಡ್ಡಿದುವೆ
ಕಯ್ದೆಸೂರೆಯ ಕುಡಿಯೇಂ ಮಿಡಿಯೇಂ.
ಕವಿ ಚಕ್ರವರ್ತಿ ರನ್ನ ತನ್ನೀ ಕಾವ್ಯಗಳಲ್ಲಿ ಸಮಕಾಲೀನ ಸಾಮಾಜಿಕ ಚಾರಿತ್ರಿಕ ವಂಶಾವಳಿ ದಾಖಲೆಗಳನ್ನು ಹೇಳಿದ್ದುದು ಮಹತ್ವದ್ದಾಗಿದೆ.
ಇಂಥ ರಸಘಟ್ಟಿ ರನ್ನನು ಕ್ರಿ.ಶ.ಸುಮಾರು ೧೦೨೦ರಲ್ಲಿ ಭೂಲೋಕವನ್ನು ತ್ಯಜಿಸಿ ಜಿನಸಾನ್ನಿಧ್ಯ ಹೊಂದಿದನು. ಆದರೆ ತನ್ನ ಕಾವ್ಯಗಳಿಂದ ಅಮರತ್ವ ಪಡೆದಿದ್ದಾನೆ.

ಹಣಮಂತ ತಾಸಗಾಂವಕರ
"ಸುಧನ್ವ ಸೆಕ್ಟರ್ ನಂ.೧೮/೨೫
ನವನಗರ, ಬಾಗಲಕೋಟೆ-೫೮೭ ೧೦೩

No comments:

Post a Comment

ಹಿಂದಿನ ಬರೆಹಗಳು