Friday, June 17, 2011

ಜನಪದ ಮಹಿಳೆ

ಯು.ಎನ್. ಸಂಗನಾಳಮಠ


ಗ್ರಂಥಸ್ಥ ಅಕ್ಷರದ ಅರಿವು ಆರಂಭವಾಗುವ ಅವಕಾಶಕ್ಕೂ ಮುನ್ನ ಹುಟ್ಟಿಕೊಂಡ ಈ ಜನಪದ ಸಾಹಿತ್ಯ ಇತರರನ್ನು ಮೆಚ್ಚಿಸಲಿಕ್ಕಾಗಿ ಹುಟ್ಟಿದ್ದಲ್ಲ. ಜನಪದರು ತಾವು ಅನುಭವಿಸಿದ ನೋವು-ನಲಿವು, ದುಃಖ-ದುಮ್ಮಾನ, ಆಶೆ-ನಿರಾಶೆಗಳನ್ನು ಹೃದಯದಿಂದ ಹಾಡಿದರು, ಹೇಳಿದರು. ಅದು ಕಿವಿಯಿಂದ ಕಿವಿಗೆ ಹಾಡಾಗಿ, ಗೀತೆ, ಕಥೆ, ನೀತಿ, ಲಾವಣಿ, ಒಗಟು, ನಾಟಕ, ಚಿತ್ರ, ಶಿಲ್ಪ, ನಂಬಿಕೆ, ಆಚಾರ-ವಿಚಾರ ಸಂಪ್ರದಾಯ ಈ ರೀತಿ ವ್ಯಾಪಕವಾಗಿದೆ. ಇವರಲ್ಲಿ ಗ್ರಾಮೀಣ ಜನರ ಬದುಕು, ಜೀವನ, ಸಂಸ್ಕೃತಿ, ನಿಸರ್ಗ ಇವೆಲ್ಲ ಒಳಗೊಂಡಿರುತ್ತದೆ.
ಜನಪದ ಸಾಹಿತ್ಯದಲ್ಲಿ ಮಹಿಳೆಗೆ ಪ್ರಮುಖ ಸ್ಥಾನ. ಮಹಿಳೆ ಪತಿವ್ರತೆ, ಗರತಿ, ಉದಾರಿ, ತ್ಯಾಗಿಯ ಸ್ಥಾನದಲ್ಲಿ ಚಿತ್ರಿತಳಾಗಿದ್ದಾಳೆ. ಇವೆಲ್ಲವನ್ನು ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮುತ್ತೈದೆಯಾಗಿ, ದೇವತೆಯಾಗಿ ಹಲವು ರೂಪಗಳ ಮುಖಾಂತರ ಅಭಿವ್ಯಕ್ತಳಾಗುತ್ತಾಳೆ. ಹಾಗೆ ಮಹಿಳೆಯ ತಾಯ್ತನ, ಮುತ್ತೈದೆತನ, ದಾಪಂತ್ಯಜೀವನ, ತವರಿನ ಹಂಬಲ, ಸಹೋದರರ ವಾತ್ಸಲ್ಯ ಇವು ಒಂದು ಮುಖವಾದರೆ, ಬಂಜೆತನ, ವೈಧವ್ಯ, ವೇಶ್ಯಾತನ ಇವುಗಳ ಮುಖವೂ ಕಾಣುತ್ತದೆ. ಇವೆಲ್ಲ ಗರತಿಯ ಹಾಡುಗಳು. ಮಹಿಳೆ ತನ್ನ ಹಲವಾರು ಕಾಯಕಗಳಲ್ಲಿ ದಣಿವು ಆರಿಸಿಕೊಳ್ಳಲು ನಿವಾರಿಸಲು ಅನೇಕ ಹಾಡುಗಳನ್ನು ಹಾಡುತ್ತಿದ್ದಳು.
"ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳೆ| ಭೂಮಿತಾಯಿ|
ಎದ್ದೊಂದು ಗಳಿಗೆ ನೆನೆದೇನು"
ಎಂದು ಮುಂಗೋಳಿ ಕೂಗುವ ಮುನ್ನ ಎದ್ದು ನೆಲ ಸಾರಿಸಿ ರಂಗವಲ್ಲಿ ಇಟ್ಟು ತನ್ನ ಕೆಲಸಕ್ಕೆ ಹೋಗುವ ಮುನ್ನ ಕುಲದೈವ, ಭೂತಾಯಿಯನ್ನು ಸ್ಮರಣೆ ಮಾಡುತ್ತಾಳೆ. ಅನಂತರ
"ಅತ್ತೆ ಮಾವಗೆ ಶರಣು ಮತ್ತೆ ಗುರುವಿಗೂ ಶರಣು
ಮತ್ತೊಂದು ಶರಣು ಶಿವನಿಗೆ| ಒಪ್ಪವೆಂದು
ನಾ ಬಗ್ಗಿದೆ ಮನೆಯ ಕೆಲಸಕ್ಕೆ"
ಎಂದು ತನ್ನ ಕೆಲಸ ಪ್ರಾರಂಭಿಸುವಳು.
ಅಂದಿನ ಆಹಾರ-ಊಟ ತಯಾರಿಸುವ ಸಲುವಾಗಿ ಬೀಸುವ ಕಾರ್ಯ ಆರಂಭವಾಗುವುದು.
"ಶರಣೆಂಬೆ ಶಿವನಿಗೆ ಶರಣೆಂಬೆ ಗುರುವಿಗೆ
ಶರಣೆಂಬೆ ಶಿವನ ಮಡದಿಗೆ| ಗೌರಮ್ಮಗೆ
ಶರಣೆಂದು ಕಲ್ಲು ಹಿಡಿದೇನ||" ಎನ್ನುವಳು.
ಹೆಣ್ಣುಮಗಳು ಮದುವೆ ಆಗಿ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ತಾಯಿ ತನ್ನ ಮಗಳಿಗೆ ಕೆಲವು ಜೀವನ ಮೌಲ್ಯಗಳನ್ನು ಉಪದೇಶಿಸುವಳು. ಎಷ್ಟೇ ಕಷ್ಟಗಳು ಕುತ್ತಿಗೆವರೆಗೂ ಬಂದರೂ ತಾಳ್ಮೆಯಿಂದ ಸಹಿಸಿಕೊಳ್ಳಬೇಕು ಎಂದು ಕುತ್ತಿಗೆಗೆ ತಾಳಿ ಕಟ್ಟುವರು ಎಂಬರ್ಥದಲ್ಲಿ ತಿಳುವಳಿಕೆ ಹೇಳುವಳು. ಇದರ ಜೊತೆಗೆ ಕೆಲವು ನೀತಿ ಮಾತುಗಳನ್ನು ಹೇಳುತ್ತಾಳೆ.
"ಕರಿಸೀರೆ ಉಡಬ್ಯಾಡ ಕಡಿವಾಣ ಬಿಡಬೇಡ
ನಡು ಓಣ್ಯಾಗ ನಿಂತು ನಗಬೇಡ| ನನ ಮಗಳೆ
ತವರಿಗೆ ಮಾತ ತರಬೇಡ"

"ಮಾತ್ಗಂಟಿ ಮಗಳಲ್ಲ ತಾಟ್ಗಿತ್ತಿ ಸೊಸೆಯಲ್ಲ
ಧೂಪರದ ಚಕ್ಕಿ ಒಲೆಗಲ್ಲ| ತವರಿಗೆ
ಮಾತು ತಂದೋಳಲ್ಲ ಮಗಳಲ್ಲ

"ಅತ್ತೆ ಮಾವರಿಗಂಜಿ ಸುತ್ತೇಳು ನೆರೆಗಂಜಿ
ಮತ್ತೆ ಆಳುವ ದೊರೆಗಂಜಿ| ನನ ಮಗಳೆ
ಅತ್ತೀ ಮನೆಯೊಳಗ ಬಾಳವ್ವ

"ನೆರೆಮನೆಯ ಸಿರಿದೇವಿ ನೀನಾಗು ಮಗಳೆ
ಮನೆಯಾಗ ಭೇದಬಗಿಬಾಡ| ಮಗಳೆ
ತುಂಬಿದ ಮನೆಯ ಒಡಿಬಾಡ||

"ಅತ್ತೆ ಮನೆಯಲಿ ಮುತ್ತಾಗಿ ಇರಬೇಕು
ಹೊತ್ತಾಗಿ ನೀಡಿದರೂ ಉಣಬೇಕು| ಮಗಳೆ
ತವರಿಗೆ ಹೆಸರು ತರಬೇಕು"

"ಗಂಡನೇ ಗುರು ಅವ್ವ ಗಂಡನೇ ದೇವರು ಕೇಳು
ಗಂಡನೆ ಹೊರತು ಗತಿಯಿಲ್ಲ| ಹೆಣ್ಣಿಗೆ
ಗಂಡನೆ ಸಕಲ ಸೌಭಾಗ್ಯ
ಎಂದು ತವರು ಮನೆಗೆ ಒಳ್ಳೆಯ ಕೀರ್ತಿ ತರುವಂಥ ಮಗಳಾಗು ಎನ್ನುತ್ತಾರೆ. ಇದಕ್ಕೆ ಉತ್ತರವಾಗಿ...
"ತಾವರೆಯ ಗಿಡಹುಟ್ಟಿ ದೇವರಿಗೆ ನೆರಳಾಗಿ
ನಾಹುಟ್ಟಿ ಮನೆಗೆ ಎರವಾದೆ| ಹಡೆದವ್ವ
ನೀ ಕೊಟ್ಟ ಮನೆಗೆ ಹೆಸರಾದೆ" ಎಂದು ಹೇಳಿ
ಆ ರೀತಿ ಬಾಳಲು ಆಶಿಸುವಳು. ಗಂಡನ ಮನೆಗೆ ಹೊರಡುವ ಮುನ್ನ ತಾಯಿ ಕೊಟ್ಟ ಹೊಸ ಸೀರಿ ಉಟಗೊಂಡು ಇದ್ದಷ್ಟು ಬಂಗಾರದ ಆಭರಣ ಹಾಕಿಕೊಂಡು ತವರಿನ ಹೊಸ್ತಿಲಿಗೆ ನೀರು ಹಾಕಿ ಬಾಗಿ ಶರಣೆಂದು ’ತವರಿಗೆ ಯಶಸ್ಸು ಸಿಗಲಿ’ ಅಂತ ಹರಕೆ ಕೊಟ್ಟು ಹೋಗುತ್ತಾಳೆ.
ಆಗ ತಾಯಿ ತನ್ನ ಮಗಳಿಗೆ ಸಂಸ್ಕಾರಯುತವಾದ ಮಾತುಗಳನ್ನು ಹೇಳುತ್ತಾಳೆ. ಆದರೆ ಇಂದಿನ ಸಂದರ್ಭದಲ್ಲಿ ಇವೆಲ್ಲ ಮರೆಯಾಗಿ, ಮನಸ್ಸು ಮನೆಯನ್ನು ಒಡೆಯುವ ಚತುರ ಮಾತುಗಳನ್ನು ಭಿತ್ತುವಳು. ಇಂದಿನ ಹೆಣ್ಣು ಮಕ್ಕಳಲ್ಲಿ ತವರು ಮನೆಯವರು ಬಂದಾಗ ವರ್ತನೆಗಿಂತ, ಗಂಡಿನ ಮನೆಯವರು ಬಂದಾಗ ವರ್ತನೆ ಭಿನ್ನವಾಗಿರುತ್ತದೆ. ಹೀಗಾಗಿ ಮಗ ಮದುವೆಯಾದ ಕೂಡಲೇ ತನಗೆ ಪರಕೀಯವಾದ ಎನ್ನುವ ಭಾವವು ಆ ತಾಯಿಗೆ ಮೂಡಿ
"ಹಾಲು ಬಾನ ಉಣಿಸಿ ಮಾರಿ ಸೆರಗಲಿ ಒರಸಿ
ನೀ ಯಾರಿಗ್ಯಾದೋ ನನ ಮಗನೆ| ಬಂದಂತೆ
ನಾರಿಗಾದ್ಯಲ್ಲೋ ಹಡದಪ್ಪ ಎಂದು ಹಲಬುತ್ತಾಳೆ. ಇಲ್ಲಿಯ ತಾಯಿಗೆ ಕರುಳಬಳ್ಳಿ ಕತ್ತರಿಸಿದ ಅನುಭವವಾಗಿದೆ.
ಪ್ರಾಪ್ತ ವಯಸ್ಕಳಾದೊಡನೆ ಗಂಡನ ಮನೆ ಪ್ರವೇಶಿಸುವ ಹೆಣ್ಣು ತನ್ನ ತವರು ಮನೆ ಅಗಲಿ, ತನ್ನ ನೋವನ್ನು ನುಂಗಿಕೊಂಡು ಹೊಸ ಮನೆಗೆ ಬಂದು, ಮಡದಿಯಾಗಿ, ಸೊಸೆಯಾಗಿ, ಅತ್ತಿಗೆ-ನಾದಿನಿ-ನೆಗಣ್ಣಿಯಾಗಿ, ಕುಟುಂಬದ ಸದಸ್ಯೆಯಾಗುತ್ತಾಳೆ. ತನ್ನ ಕೈ ಹಿಡಿದ ಗಂಡನ ಬಗ್ಗೆ-
"ಎಲ್ಲೆಲ್ಲಿ ನೋಡಿದರ ನಲ್ಲನಂಥವರಿಲ್ಲ
ಹಲ್ಲು ನೋಡಿದರ ಹವಳವ| ನಲ್ಲನ
ಸೊಲ್ಲು ಕೇಳಿದರ ಸಮಾಧಾನ"

"ಸರದಾರ ನಿಮ್ಮಿಂದ ಸರುವೆಲ್ಲ ಮರೆತೀನ
ಸರದಾರ ಇರುವ ಗುಳದಾಳಿ| ನಿಮ್ಮಿಂದ
ಸರುವ ಬಳಗೆಲ್ಲ ಮರೆತೀನ"

"ಅತ್ತೆ ಅತ್ತಿಕಾಯಿ ಮಾವ ಮಲ್ಲಿಗ್ಹೂವ
ಬಂಗಾರಕೋಲ ಹಿರಿಭಾವ| ನನಮನಿಯ
ಅರಸರು ಹಾರ ಪರಿಮಳ"

ಕೂಲಿ ಮಾಡಿದರೇನ ಕೋರಿ ಹೊತ್ತರೇನ
ನಮಗ ನಮರಾಯ ಜಡಮೇನ| ಬಂಗಾರ
ಮಾಲ ಇದ್ಹಾಂಗ ಮನಿಯಾಗ"
ಗಂಡನ ಮನೆಯಲ್ಲಿ ಪ್ರೀತಿ ವಿಶ್ವಾಸದ ಕೊರತೆಯಾಗದಿದ್ದರೆ ಅವಳ ಜೀವನಕ್ಕೆ ನೆಮ್ಮದಿ. ಕುಟುಂಬದ ನೆಮ್ಮದಿಯ ವಾತಾವರಣವಿದ್ದಾಗ ತವರ ಮನೆಯ ಕರೆ ಬಂದಾಗ ಅಗಲಿಕೆಯ ಅನಿವಾರ್ಯ ಪ್ರಸಂಗ ಬಂದಾಗ-
"ಹಚ್ಚಡದ ಪದರಾಗ ಅಚ್ಚಮಲ್ಲಿಗೆ ಹೂವ
ಬಿಚ್ಚಿ ನನಮ್ಯಾಗ ಒಗೆವಂಥ| ರಾಯರನ
ಬಿಟ್ಹಾಂಗ ಬರಲೇ ಹಡೆದವ್ವ ಎನ್ನುವಳು.
ದಾಂಪತ್ಯ ಜೀವನದಲ್ಲಿ ವಿರಸ ಸಹಜ. ’ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಂಗ’ ’ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’ ಈ ಗಾದೆಗಳು ಬಹಳ ಹಿಂದಿನಿಂದಲೂ ಪ್ರಚಲಿತವಾಗಿವೆ. ಈಗ "ಗಂಡ ಹೆಂಡಿರ ಜಗಳ ಡೈವೋರ್ಸ್ ತನಕ" ಆಗ ಗಂಡ ಸಿಟ್ಟು ಮಾಡಿದಾಗ-
"ಬಟ್ಟಲಗಣ್ಣೀಲಿ ದಿಟ್ಟಿಸಿ ನೋಡ್ಯಾರ
ಸಿಟ್ಟ್ಯಾಕೋ ರಾಯ ನನಮ್ಯಾಗ| ನಾ ಅಂಥ
ಹುಟ್ಟಿಸ್ಯಾಡವರ ಮಗಳಲ್ಲ
ತಾನೂ ಪ್ರಾಮಾಣಿಕ ಮನೆತನದಿಂದ ಬಂದವಳು ಅನುಮಾನ ಇರಬಾರದು ಎಂದು ಭಾವ ವ್ಯಕ್ತವಾಗುವುದು. ಆದರೂ ಸಿಟ್ಟು ಇಳಿಯದಿದ್ದಾಗ-
ಕಟ್ಟಾಣಿ ಗುಂಡೀಗಿ ಸಿಟ್ಟು ಮಾಡಲಿ ಬೇಡ
ಬಿಟ್ಟು ಬಂದದೆ ಬಳಗೆಲ್ಲ| ಪತಿರಾಯ
ಕಟ್ಟ್ಯಾರ ತಮ್ಮ ಪದರಾಗ" ಎನ್ನುವಳು.
ಹೀಗೆ ಗಂಡನೇ ದೇವರು ಸರ್ವಸ್ವ ಎಂದಾಗ ಓರ್ವ ಹೆಣ್ಣು ಮಗಳು ಬಂದು ಚಾಡಿ ಹೇಳುವಳು.
"ಚಿಂತಾಕ ಇಟಗೊಂಡು ಚಿಪ್ಪಾಡಿ ಬಳಿವಾಕೆ
ಚಿಂತಿಲ್ಲ ಏನ ನಿನಗಿಷ್ಟು| ನಿನ ಗಂಡ
ಅಲ್ಲೊಬ್ಬಳ ಕೂಡ ನಗುತಿದ್ದ"
ಆಗ ತನ್ನ ಗಂಡನ ಬಗ್ಗೆ ಸಿಟ್ಟು ಬಂದರೂ ಅದನ್ನು ತೋರಿಸದೇ-
"ನಕ್ಕರೆ ನಗಲೆವ್ವ ನಗಿ ಮುಖದಿ ಕ್ಯಾದಿಗಿ
ನಾ ಮುಚ್ಚಿ ಮುಡಿವ ಪರಿಮಳದ| ಆ ಹೂವ
ಅವಳೊಂದು ಗಳಿಗೆ ಮುಡಿಯಲಿ" ಎಂದು ತನ್ನ ಗಂಡನ ಬಗ್ಗೆ ಅಸೂಯೆ ಏಕೆ ಎನ್ನುವ ಭಾವದಲ್ಲಿ ಈ ರೀತಿ ಹೇಳುವಳು.
ಮುಂದೆ ಇಂಥ ಪ್ರಮಾದವಾಗದಿರಲಿ ಎಂಬ ಎಚ್ಚರಿಕೆಯಿಂದ ಗಂಡ ಮನೆಗೆ ಬಂದಾಗ
"ಎಲ್ಲಿ ಹೋಗಿದ್ದಿ ರಾಯ ಸೆಲ್ಲ್ಯಾಕ ಮಾಸೇದ
ಅಲ್ಲೊಬ್ಬಳ ಕೂಡ ಸಲಗೀಯ| ಮಾಡಿ
ಇಲ್ಲೆಂಬುದೇನ ನನಮುಂದೆ" ಎಂದು ಗಂಡನಿಗೆ ಸತ್ಯ ಹೇಳಲು ಒತ್ತಾಯಿಸುತ್ತಾಳೆ. ಹಾಗೆ ಅಂಥ ಪ್ರಸಂಗ ಬಂದಾಗ ಗಂಡನಿಗೆ ನೀತಿ ಪಾಠ ಹೇಳುವಳು-
"ಅಂಗಿಯ ಮ್ಯಾಲಂಗಿ ಛಂದೇನೋ ನನರಾಯ
ರಂಭೀಯ ಮ್ಯಾಲ ಪ್ರತಿರಂಭಿ | ಬಂದಾರ
ಛಂದೇನೋ ರಾಯ ಮನಿಯಾಗ"
ತಾನೇ ರಂಭೆ, ಊರ್ವಶಿ ಎಂಬುದನ್ನು ಒತ್ತಿ ಹೇಳುತ್ತ ’ರಂಭಿಯ ಮ್ಯಾಗ ಪ್ರತಿರಂಭಿ ಏಕೆ ಎನ್ನುವಳು. ಗಂಡನನ್ನು ಸರಿ ದಾರಿಗೆ ತರಲು ಪ್ರೀತಿ-ಶಾಸ್ತ್ರ ಮೇಲು ಎಂಬುದನ್ನು-
"ಹಣ್ಣ ಹಾಗಲಕಾಯಿ ಎಣ್ಣ್ಯಾಗ ಕರಿದೀನಿ
ಉಂಡಾರೆ ನೋಡು ಸವಿಗಾರ| ನನಮ್ಯಾಗ
ತಂದರೆ ನೋಡು ಸವತೀನ"
ಇಲ್ಲಿ ಸವತಿ ಎಂದರೆ ವಿಷದ ಮರಿ ಹಾವು ಎಂಬ ಅಭಿಪ್ರಾಯ. ಹಾಗೆ ಪರಸ್ತ್ರೀ ಸಹವಾಸ ಮಾಡಿದ ಗಂಡಿನ ಕುರಿತು ಹಳ್ಳಿಯ ಜನಪದರು-
"ವಾರಿ ರುಂಬಾಲು ಸುತ್ತಿ ದಾರ‍್ಯಾಗ ನಿಂತಿದ್ದು
ಹ್ವಾರ‍್ಯಾ ಇಲ್ಲೇನೋ ಮನಿಯಾಗ| ನನ ತಮ್ಮ
ನಾರಿಯಿಲ್ಲೋನೋ ಮನಿಯಾಗ" ಎಂದು ಹೆಂಡತಿಯ ನೆನಪು ಮಾಡುವರು. ಕೆಲಸದ (ಹ್ವಾರ‍್ಯಾ) ನೆನಪು ಮಾಡುವರು. ಮತ್ತು ಒಂದು ನೀತಿ ಮಾತು ಹೇಳುವರು.
"ಹೆಣ್ಣೆಂದು ರಾವಣ ಮಣ್ಣು ಮುಕ್ಕಿದವನಯ್ಯ
ಹೆರವರ ಹೆಣ್ಣು ಬಯಸದೆ| ಲಗ್ನದ
ಸತಿಯೊಡನೆ ಸುಖದಿ ಬಾಳಣ್ಣ" ಎನ್ನುವರು.

’ತಾಯಿ ಇದ್ದರೆ ತವರು| ತಂದೆ ಇದ್ದರೆ ಬಳಗ
ಪತಿ ಇದ್ದರೆ ಮುತ್ತೈದೆತನ’ ಎಂಬ ಮಾತುಗಳಿವೆ.
‘ತಾಯಿಯೇ ದೇವರು’ ಈ ವೇದವಾಕ್ಯ ಗೃಹಿಣಿ ಕಂಡ ಸತ್ಯ.
"ಕಾಶಿಗೆ ಹೋಗಾಕ ಏಸೊಂದ ದಿನ ಬೇಕ
ತಾಸ್ಹೊತ್ತಿನ್ಹಾದಿ ತವರೂರ| ಮನಿಯಾಗ
ಕಾಶಿ ಕುಂತಾಳ ಹಡೆದವ್ವ
ತವರು ಮನೆ ಅವಳಿಗೆ ಕಾಶಿಯ ಪುಣ್ಯಕ್ಷೇತ್ರ.
ತನ್ನ ತವರಮನಿ ತನ್ನ ರಕ್ತಸಂಬಂಧ ಸುಖವಾಗಿರಲೆಂದು ಆಶಿಸುವಳು.
"ತವರ ಮನಿಯ ದೀಪ ತವಕೇರಿ ನೋಡೇನ
ಹತ್ತು ಬೆರಳ್ಹಚ್ಚಿ ಶರಣೆಂದೆ| ತಮ್ಮಂದಿರು
ಜಯವಂತರಾಗಿ ಇರಲೆಂದೆ"
ತಾಯಿಗೆ ಯಾರೂ ಸರಿಯಿಲ್ಲವೆಂದು
"ಯಾರೂ ಇದ್ದರು ನನ್ನ ತಾಯವ್ವನ್ಹೋಲಾರ
ಸಾವಿರ ಕೊಳ್ಳಿ ಒಲಿಯಾಗ| ಇದ್ದರು
ಜ್ಯೋತಿ ನೀನ್ಯಾರು ಹೋಲರು"
ಜ್ಯೋತಿ ಸ್ವರೂಪಳಾದ ತಾಯಿಗೆ ಯಾರೂ ಸಮನಲ್ಲ. ತವರಿನ ತುಂಬಿದ ಮಾವಿನ ಮರ ಎಂದರೆ ತಾಯಿ. ತಾನು ತಾಯಿಯ ಕರುಳಿನ ಕುಡಿ ಎಂದು.
"ಕಣ್ಣೆಂಜಲ ಕಾಡಿಗೆ ಬಾಯೆಂಜಲ ವೀಳ್ಯವ
ಯಾರೆಂಜಲುಂಡಿ ನನ ಮನವೆ| ಹಡೆದವ್ವ
ಬಾಯೆಂಜಲುಂಡು ಬೆಳೆದೇನ"
ತಾಯಿಯ ಬಾಯ ಎಂಜಲವನ್ನುಂಡು ಬೆಳೆದ ಬಗೆಯನ್ನು ಕೃತಜ್ಞತೆಯಿಂದ ಸ್ಮರಿಸುವಳು.
ತಾಯಿಯ ಮಹತ್ವವನ್ನು ಈ ರೀತಿ ಹೇಳುವಳು.
"ಉಂಗುರ ಉಡುದಾರ ಮುರಿದರ ಮಾಡಿಸಬಹುದು.
ಮಡದಿ ಸತ್ತರ ತರಬಹುದು| ಹಡೆದ
ತಂದೆ-ತಾಯಿಯೆಲ್ಲಿ ಸಿಕ್ಕಾರ" ಎನ್ನುವರು.
ಪ್ರತಿಯೊಂದು ಹೆಣ್ಣಿಗೂ ತಾನು ಹುಟ್ಟಿ ಬೆಳೆದು ಆಡಿದ ತವರಿಗೆ ಹೆಸರು ತರಬೇಕೆಂಬ ಆಶೆ-
"ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾಗಿ
ನಾ ಹುಟ್ಟಿ ಮನೆಗೆ ಎರವಾದೆ| ಹಡೆದವ್ವ
ನೀ ಕೊಟ್ಟ ಮನೆಗೆ ಹೆಸರಾದೆ" ಎನ್ನುವಳು.
ಆ ರೀತಿ ಬಾಳಲು ಅಪೇಕ್ಷಿಸುತ್ತಾಳೆ. ಅವಳಿಗೆ ’ತಾಯ್ತನ’ ಪಟ್ಟ ಸಿಕ್ಕಾಗ ಬದುಕು ಸಾರ್ಥಕವಾಗುತ್ತದೆ. ಮಕ್ಕಳನ್ನು ಪಡೆಯುವುದೇ ಅಂತಿಮಗುರಿ. ಹೆಣ್ಣು ಹೆತ್ತಾಗಲೇ ಬಂಜೆತನ ನೀಗುತ್ತದೆ.
"ಅರಗಿನಂಥ ತಾಯಿ ಮರದಂಥ ಮಕ್ಕಳು
ಕರಗಿದರ ಬೆಣ್ಣೆ ತಿಳಿತುಪ್ಪ| ದಂಥಕಿ
ಕರಗದಂಥ ತಾಯಿ ಇರಬೇಕು"
ಮಕ್ಕಳಿಗಾಗಿ ಶಿವನನ್ನು ಈ ರೀತಿ ಪ್ರಾರ್ಥಿಸುವಳು.
"ಮಕ್ಕಳ ಕೊಡು ಶಿವನೇ ಬಾಳ ಮಕ್ಕಳಿರಲಿ
ಮ್ಯಾಗ ಗುರುವಿನ ದಯವಿರಲಿ| ನನ ಗುರುವೆ
ಬಡತನದ ಚಿಂತೆ ನನಗಿರಲಿ||
ಮಕ್ಕಳಿದ್ದರೆ ಗರತಿಗೆ ಮತ್ತೇನೂ ಬೇಡ-
"ಕೂಸಿದ್ದ ಮನೆಗೆ ಬೀಸಣಿಕೆ ಯಾತಕ
ಕೂಸು ಕಂದಯ್ಯ ಒಳಹೊರಗ| ಸುಳಿದಾರೆ
ಬೀಸಣಿಕೆ ಗಾಳಿ ಸುಳಿದಾಂಗ" ಎಂಥ ಸುಂದರಗೀತೆ.
ಹೆಣ್ಣಿನ ಜನುಮಕ ಬಂಜೆತನ ಶಾಪ ಎಂಬುದನ್ನು
"ಬಾಲಕರಿಲ್ಲದ ಬಾಲಿದ್ಯಾತರ ಜನುಮ
ಬಾಡಿಗೆಯ ಎತ್ತು ದುಡಿದ್ಹಾಂಗ| ಬಾಳೆಲೆಯ
ಹಾಸುಂಡು ಬೀಸಿ ಬಗೆದ್ಹಾಂಗ|| ಎನ್ನುತ್ತಾಳೆ.
ಅವಳಲ್ಲಿ ಬಸಿರ-ಬಯಕೆ ಪ್ರಾರಂಭವಾದಾಗ
"ಬಸಿರ ಬಯಕೆ ಚಂದ ಹಸಿರು ಕುಪ್ಪಸ ಚಂದ
ನಸುಗೆಂಪಿನವಳ ನಗೆ ಚೆಂದ| ನನ ಮಗಳು
ಬಸುರಾದರೆ ಚಂದ ಬಳಗಕ" ಎಂದು ತಾಯಿ ಹಂಬಲಿಸುವಳು. ತಾಯ್ತನ ಪಡೆದ ಹೆಣ್ಣು ತನ್ನ ಕನಸಿನ ಕೂಸಿನ ಅಂದ ಚಂದಕ್ಕೆ ಹಾಡಿನ ಸುಗ್ಗಿಯೇ ಹರಿಯುತ್ತದೆ.
"ಜೋಗುಳ ಹಾಡಿದರ ಆಗಲೇ ಕೇಳ್ಯಾನ
ಹಾಲ ಹಂಬಲ ಮರೆತಾನ| ಕಂದನ
ಜೋಗುಳದಾಗ ಅತಿ ಮುದ್ದ"
"ಅತ್ತಾನ ಕಾಡ್ಯಾಗ ಮತ್ತೇನು ಬೇಡ್ಯಾನ
ಮೆತ್ತ ಮೆತ್ತನ್ನ ದಿಂಭವ| ಕೊಟ್ಟರೆ
ಗುಪ್ಪು ಚಿಪ್ಪಾಗಿ ಮಲಗ್ಯಾನೆ"
"ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ
ಶಿವನ ಕೈಯಲಗು ಹೊಳೆದ್ಹಂಗ"
"ಹಾಲಬೇಡಿ ಅತ್ತಾನ ಕೋಲಬೇಡಿ ಕುಣಿದಾನ
ಮೊಸರಬೇಡಿ ಕೆಸರ ತುಳಿದಾನ| ಕಂದನ
ಕುಸುಲಾದ ಗೆಜ್ಜಿ ಕೆಸರಾಗಿ" ಹಾಗೆ
"ಕೂಸ ಕಂದಯ್ಯ ತೊಡಿಮ್ಯಾಗ ಆಡಿದರ ಬಂದ
ಬ್ಯಾಸರಕಿ ಬಯಲಾಯ್ತು" ಎನ್ನುವಳು.
ವಂಶ ಬೆಳೆಸುವ ಹತ್ತು ಮಂದಿಯನ್ನು ಹೆತ್ತರೂ ತಾಯ್ತನದ ಮಾನ್ಯತೆ ತಾಯಿಗೆ ದೊರೆಯದು. ಹೆಣ್ಣು ಹೆತ್ತಾಗಲೇ ಬಂಜೆತನ ನೀಗುವುದು.
"ಹತ್ತು ಗಂಡ್ಹೆಡೆದರೂ ಮತ್ತೆ ಬಂಜೆಂಬರು
ದಟ್ಟಿಯ ಉಡುವ ಧರಣೀಯ| ಹಡೆದರ
ಹೆತ್ತಾಯಿಯೆಂದು ಕರೆದಾರ"
"ನಾಕು ಮಕ್ಕಳ ಕೊಟ್ಟು ಸಾಕು ಮಾಡೋ ಶಿವನೇ
ನಾಕರ ಮ್ಯಾಲೆ ಆರತಿ ಹಿಡಿಯೋಕೆ
ನಾರಿಯ ಕೊಟ್ಟು ಕಡೆ ಮಾಡೋ"
ತಾಯಿಗೆ ತನ್ನ ಕಂದನು ಚೆನ್ನಾಗಿ ರೂಪುಗೊಳ್ಳುವ ಚಿಂತನೆ ಹದುಳ ಹಾರೈಕೆಯ ಸಂದೇಶ ಇಲ್ಲಿದೆ-
"ಆಚಾರಕ್ಕರಸಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗು| ನನಕಂದ
ಜ್ಯೋತಿಯೆ ಆಗು ಜಗಕೆಲ್ಲ ಎಂದು ಹಾರೈಸುವಳು.
ಬಂಜೆಯ ಬದುಕನ್ನು ಜನಪದರು ಈ ರೀತಿ ಹೇಳುತ್ತಾರೆ.
"ಬಂಜೆ ಬಾಗಿಲ ಮಂದೆ ಅಂಜೂರ ಗಿಡ ಹುಟ್ಟಿ
ಟೊಂಗಿ ಟೊಂಗೆಲ್ಲ ಗಿಳಿ ಕುಂತು| ಹೇಳ್ಯಾವ
ಬಂಜೆಯ ಬದುಕು ಹೆರವರಿಗೆ" ಎಂದು ಬಂಜೆಯ ನಿಂದನೆ ಕೇವಲ ಮನುಷ್ಯರಿಂದಲ್ಲ ಪಶುಪಕ್ಷಿಗಳಿಂದ ಸಹ ಎಂಬುದನ್ನು ಈ ಪದ್ಯ ಹೇಳುತ್ತದೆ.
ತಾಯಿ ತನ್ನ ಅಳುವ ಕಂದನನ್ನು ಹಲವು ರೀತಿಯಿಂದ ಸಮಾಧಾನ ಪಡಿಸುತ್ತಾಳೆ. ಮಗುವಿಗೆ ಈ ಪ್ರಾಸಬದ್ಧ ಹಾಡು ಮೋಜಿನ ಸಂಭ್ರಮ ತರುತ್ತದೆ.
ಆನಿ ಬಂತೊಂದು ಆನಿ| ಇದ್ಯಾವೂರ ಆನಿ|
ಹಾದಿ ತಪ್ಪಿ ಬಂದಿತ್ತ| ಹಾವಿಗೊಂದು ದುಡ್ಡು|
ಬೀದಿಗೊಂದು ದುಡ್ಡು| ಅದೂ ದುಡ್ಡು ಕೊಟ್ಟು|
ಸೇರ ಕೊಬ್ರಿ ತಂದು| ಲಡಾ ಲಡಾ ಮುರಿದು|
ಎಲ್ಲಾರಿಗೂ ಕೊಟ್ಟು| ಕಂದನ ಬಾಯಾಗ ಬಟ್ಟು| ಬಟ್ಟು ತೊಡೆಯ ಮೇಲೆ ಆನಿ ಆಡಿಸಿ, ಕೊಬ್ರಿ ತಂದು ಎಲ್ಲರಿಗೂ ಹಂಚಿ, ಕಂದನ ಹಲ್ಲು ಮೂಡದ ಬಾಯಿಗೆ ಕೊಬ್ರಿ ಕೊಡದೇ ಅದಕ್ಕೆ ಅದರ ಬೆರಳನ್ನೇ ಚೀಪಿಸುತ್ತಾಳೆ.
ಮಳೆಗಾಲದ ಸಮಯದಲ್ಲಿ
ಗುಡುಗುಡು ಮುತ್ಯಾ ಬಂದಾನೋ
ಬೆಣ್ಣಿ-ರೊಟ್ಟಿ ತಂದಾನೋ ಎಂದು ಗುಡುಗಿನ ಭಯವನ್ನು ನಿವಾರಿಸುವಳು.
ತನ್ನ ಮಗುವನ್ನು ಕುರಿತು
"ಅತ್ತು ಕಾಡುವವನಲ್ಲ ಹಸ್ತರುಂಬುವವನಲ್ಲ
ಲಕ್ಷಣವಂತ ಗುಣವಂತ| ತಮ್ಮಯ್ಯ
ಲಕ್ಷಣಕ ಲಕ್ಷ್ಮಿ ಒಲಿದಾಳೋ" ಎಂದು ಹರ್ಷಿಸುವಳು.
ಅಳು ನಿಲ್ಲಿಸದ ಮಗುವನ್ನು ಕುರಿತು
"ಬಾಳ ನೀ ಅಳದಿರು| ಬಾಗಿಲಿಗೆ ಬರದಿರು|
ಬಾಳೆಯೊಳಗಿನ ತಿಳಿನೀರು| ತಕ್ಕೊಂಡು
ಬಾಳ ನಿನ್ನ ಮಾರಿ ತೊಳೆದೇನು"
ಆಡುವಾಗ ಕೊಳೆಯಾದರೂ ಚಿಂತೆ ಬೇಡ ಎಂದು
"ಆಡಿ ಬಾ ನನ ಕಂದ ಅಂಗಾಲ ತೊಳೆದೇನು
ತೆಂಗಿನಕಾಯಿ ತಿಳಿನೀರ| ತಕ್ಕೊಂಡು
ಬಂಗಾರದ ಪಾದ ತೊಳೆದೇನು" ಎನ್ನುವಳು.
ಯಾರಾದರೂ ಮಗ "ಅಳಬುರುಕ’ ಎಂದರೆ ಬೇಸರಿಸದೇ
"ಅತ್ತರ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ| ಕೆಟ್ಟರು
ಮತ್ತೊಮ್ಮೆ ಮಾಡಿ ಮುಗಿಸೇನಿ" ಎಂದು ಮಕ್ಕಳ ಭಾಗ್ಯದ ಶ್ರೇಷ್ಠತೆ ತೋರುವಳು.
"ಕಂದಯ್ಯ ಅತ್ತರ ಕಣಗೀಲ ಕಾಣತಾವ
ಒಣಗಿದ್ದ ಬಾಳೆ ಚಿಗಿತಾವ| ಬರಡು
ಆಕಳೆಲ್ಲ ಹಯನಾಗಿ"
ಮಗು ಅಳಲಿ-ನಗಲಿ ಅದು ಮನೆಯ ದೀಪ. ಬದುಕಿನ ಬವಣೆ ತೀರಿಸುತ್ತದೆ.
"ಜನಕರಾಯನ ಮಗಳು ವನಕ ತೊಟ್ಟಿಲ ಕಟ್ಟಿ
ಲವಕುಶರನಿಟ್ಟು ತೂಗ್ಯಾಳೆ| ನಗುತ
ವನವಾಸ ಕಳೆದಾಳ"
ಮಗುವಿನ ಅಳು ನಿಲ್ಲಿಸಲು-
"ಕಂದಮ್ಮ ಕಾಪೀತು ಕವಳಿಯ ಹಣ್ಣಿಗೆ
ತುಂಬುಚ್ಚಿ ಬಿದ್ದ ಮಗಿಮಾವು| ಸಕ್ಕರಿ
ನೀ ಕೇಳಿದಾಗ ನಾ ಕೊಡುವೆ"
ಕವಳಿ ಹಣ್ಣಿಗೇಕೆ ಆಶೆ? ಗಿಡದಲ್ಲಿ ಹಣ್ಣಾಗಿ ಕಳಚಿ ಬಿದ್ದ ಮಾವಿಗೆ ಸಕ್ಕರಿ ಬೆರೆಸಿ ತಿನ್ನಿಸುವೆ ಎನ್ನುತ್ತಾಳೆ. ಆಗ ಮಗು ಹಠ ನಿಲ್ಲಿಸುವುದು.
ತಾಯಿಗೆ ಹೆಣ್ಣು ಮಗು ಆದರೂ ಸಂತಸ.
"ಹೆಣ್ಣಲ್ಲವದು ನಮಗೆ ರವಿ ಚೆನ್ನ
ಈ ಮಾತೃ ದೇವತೆಗೆ ಸೂರ್ಯಕಾಂತಿಯ
ರವಿ ಚಿನ್ನ ಅಪ್ಪಟ ಬಂಗಾರ"
"ಹೆಣ್ಣಿದ್ದ ಮನೆಗೆ ಕನ್ನಡಿಯಾತಕ್ಕ
ಹೆಣ್ಣು ಕಂದವ್ವ ಒಳಹೊರಗು| ಓಡಾಡಿದರು
ಕನ್ನಡಿ ಹಂಗ ಹೊಳೆವಳು"
ಕನ್ನಡಿ-ಮನೆಯ ಸಂಸ್ಕಾರದ ಪ್ರತೀಕ.
ತಾಯಿ ತನ್ನ ಮಗಳನ್ನು ಈ ರೀತಿ ಶೃಂಗರಿಸುವಳು.
"ಬಂಗಾರ ಬಾ ನಿನ್ನ ಸಿಂಗಾರ ಮಾಡೇನ
ಗೊಂಡೆ ಹಾಕೇನಿ ಹೆರಳೀಗೆ| ಪುಟ್ಟಕ್ಕ
ಗೊಂಬೀಯ ಆಟ ಕಲಿಸೇನ"
ತಾಯಿ ತನ್ನ ಮಕ್ಕಳಾಟವನ್ನು ನೋಡಿ
"ನನ್ನಯ್ಯನಂಥೋರು ಹನ್ನೆರಡು ಮಕ್ಕಳು
ಹೊನ್ನೆಯ ಮರದ ನೆರಳಲಿ ಆಡುವಾಗ
ಸಂನ್ಯಾಸಿ ಜಪವ ಮರೆತಾನು" ಎಂದು ವಿರಕ್ತನ ವಿರಕ್ತಿ ಮರೆಯಾಗಿ ಅನುರಕ್ತಿ ಉಂಟಾಗುವುದು ಎಂದು ಹೇಳುವಳು.
ಪತಿಯೇ ತನ್ನ ಸರ್ವಸ್ವ ಎಂದು ಸದಾಕಾಲ ತನ್ನ ಗಂಡನ ಏಳ್ಗೆಯನ್ನು ಬಯಸುವವಳೇ ಗರತಿ. ತನ್ನ ಪತಿಗೆ ಹೆಗಲು ಹೆಗಲು ಕೊಟ್ಟು ತನ್ನ ಕುಟುಂಬದ ಸದಸ್ಯರನ್ನು ಸಾಕಿ ಸಲುಹುವಳು.
ತನ್ನ ಪತಿಯ ಸೌಂದರ್ಯದ ಬಗ್ಗೆ
"ಎಲ್ಲೆಲ್ಲಿ ನೋಡಿದರೂ ನಲ್ಲನಂಥವರಿಲ್ಲ
ಹಲ್ಲು ನೋಡಿದರೆ ಹವಳವು| ನಲ್ಲನೆ
ಸೊಲ್ಲು ಕೇಳಿದರೆ ಸಮಾಧಾನ"
"ಕಾಣದೆ ಇರಲಾರೆ ಕನ್ನಡಿ ಮುಖದವರ
ಕಾಮನಿಗಿಂತ ಚೆಲುವ್ಹಾರ| ಚೆನ್ನಿಗರ
ಕಾಣದರಗಳಿಗೆ ಇರಲಾರೆ"
ತನ್ನ ಪತಿ ಬಡವನಾಗಿದ್ದರೂ ತನಗೆ ಪತಿ ಬಂಗಾರ ಎನ್ನುವಳು.
"ಕೂಲಿ ಮಾಡಿದರೇನ ಕೋರಿ ಹೊತ್ತರೇನ
ನನಗ ನನ ರಾಮ ಬಡವೇನ| ಬಂಗಾರದ
ಮಾಲ ಇದ್ಹಾಂಗ ಮನಿಯಾಗ" ಎಂದೆನ್ನುತ್ತಾಳೆ.
ತವರಿನ ಹಂಬಲ ಇರಿಸಿ ಕೊಂಡ ಸತಿಗೆ ಪತಿ ಹೀಗೆ ಹೇಳುತ್ತಾನೆ.
"ಹಾಸಿಗೆ ಹಾಸೆಂದ ಮಲ್ಲೀಗಿ ಮುಡಿ ಎಂದ
ಬ್ಯಾಸತ್ತರೆ ಮಡದಿ ಮಲಗೆಂದ| ತನರಾಯ
ತನ ನೋಡಿ ತವರ ಮರೆಯೆಂದ"
ವಿರಸದ ಸಂದರ್ಭದಲ್ಲಿ ಪತ್ನಿಗೆ ಹೊಡೆದು ನಂತರ ಮನದಲ್ಲಿ ಮರುಗಿ
"ಮಡದಿಯ ಬಡದಾನ ಮನದಾಗ ಮರುಗ್ಯಾನ
ಒಳಗ್ಹೋಗಿ ಸೆರಗ ಹಿಡಿದು| ತಾ ಕೇಳ್ಯಾನ
ನಾ ಹೆಚ್ಚೋ ನಿನ್ನ ತವರ‍್ಹೆಚ್ಚೋ" ಎಂದು
ತಾಯಿ ತವರಿಗೆ ಕರೆಯಲು ಬಂದಾಗ ತನ್ನ ಪ್ರೀತಿಯ ಪತಿ ಬಿಟ್ಟು ಬರಲಾರೆ ಎನ್ನುವಳು.
"ಹಚ್ಚಡದ ಪದರಾಗ ಅಚ್ಚಮಲ್ಲಿಗಿ ಹೂವ
ಬಿಚ್ಚಿ ನನ ಮೇಲೆ ಬಗೆವಂಥ ರಾಯರನ
ಬಿಟ್ಹಾಂಗ ಬರಲೇ ಹಡೆದವ್ವ
"ಆಕಾಶದಂಥ ಅತ್ತೆ ಗೋಕುಲದಂಥ ಮಾವ
ಶ್ರೀ ಕೃಷ್ಣನಂಥ ಪತಿರಾಯ| ಇದ್ದರ
ಸಾಕೀದ ತವರು ಮರತೇನ" ಎನ್ನುವಳು.
ಅಕಸ್ಮಾತ್ತಾಗಿ ಮುನಿಸಿಕೊಂಡು ತವರಿಗೆ ಹೋದ ಸತಿಯನ್ನು ಹೀಗೆ ನೆನೆಸುತ್ತಾನೆ. ಪತಿ-
"ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ
ಅಡಗೀ ಬಾಯಿಗಿ ರುಚಿಯಿಲ್ಲ| ಹಡೆದವ್ವ
ಮಡದಿ ತವರಿಗಿ ಹೋಗ್ಯಾಳು"
ಆದರೂ ಪತಿಯ ಪ್ರೇಮ ಅವಳನ್ನು ಕರೆಯುತ್ತದೆ.
"ಗಂಜೀಯ ಕುಡಿದರೂ ಗಂಡನ ಮನೆ ಲೇಸು
ಅಂದಣದ ಮೇಲೆ ಚವರವೆ ಸಾರಿದರೂ
ಹಂಗಿನ ತವರ ಮನಿಸಾಕ" ಎನ್ನುವಳು
ಇದೇ ಸೊಸೆ ತನ್ನ ಗಂಡನನ್ನೂ ಪ್ರೀತಿಸಿ ಉಳಿದವರನ್ನು ಕಡೆಗಣಿಸಿದಾಗ
"ಸೊಸೆಯು ಬರುತಾಳಂತ ಖುಷಿ ಭಾಳ ಮನದಾಗ
ಸೊಸಿಬಂದು ಮಗನ ಕಸಗೊಂಡು| ಬಾಳ್ವಾಗ
ಮುಗಿಲೀಲಿ ಬಾಯಿ ತೆರದಾಳ"
ಇನ್ನು ತಾಯಿ ಸತ್ತ ತವರು ಮನೆಗೆ ಗಂಡನ ಮನೆಯಿಂದ ಬಂದ ಮಗಳಿಗೆ ಕಹಿ ಅನುಭವಗಳಾಗುತ್ತವೆ ಎಂಬುದನ್ನು
"ಹಡೆದವ್ವ ಇರುತನಕ ನಡುಮನಿ ನಂದೆನ್ನೆ
ಕಡಗದ ಕೈ ಸೂಸಿ ಬಂದು| ನಡಿವಾಗ
ತುದಿಗಟ್ಟೆ ನನಗ ಎರವಾದೆ"
ತಾಯಿ ಇದ್ದಾಗ ಸ್ವೇಚ್ಛೆಯಿಂದ ಮನೆತುಂಬ ಓಡಾಡಿದ್ದ ಮಗಳು ಇಂದಿ ಅತ್ತಿಗೆಯ ಅಪ್ಪಣೆ ಇಲ್ಲದೆ ಅವಳು ’ಒಳಗೆ ಬಾ’ ಎಂದು ಕರೆಯದೆ ಮನೆಯ ಒಳಗೆ ಪ್ರವೇಶಿಸಲು ಅಭಿಮಾನ ಅಡ್ಡಬಂದು ಮನೆಯ ಮುಂಭಾಗದ ಕಟ್ಟೆಯ ಮೇಲೆ ಕೂಡಲೂ ಅವಳಿಗೆ ಧೈರ್ಯವಿಲ್ಲ. ಅವಳ ಅಂತರಂಗದ ಭಾವನೆ ಈ ರೀತಿ ಮಿಡಿಯುತ್ತದೆ.
"ತಾಯಿಯಿಲ್ಲದ ತವರಿಗೆ ಹೋಗಬ್ಯಾಡ ಮಗಳೆ
ನೀರಿಲ್ದ ಕೆರಿಗೆ ಕರುಬಂದ| ತಿರುಗುವಾಗ
ಆಗ ನೋಡಿದರೆ ದುಃಖವ"
ನೀರಡಿಕೆಯಾಗಿರುವ ಕರು, ನೀರಿಲ್ಲದ ಕೆರೆಗೆ ಬಂದ ಹಾಗೆ, ಸುಖ ದುಃಖ ಹಂಚಿಕೊಳ್ಳುವುದಕ್ಕೆ ಬಂದ ಮಗಳು ಹೊಟ್ಟೆಯಲ್ಲಿ ಸಂಕಟವನ್ನು ಅವಿತಿಟ್ಟುಕೊಂಡು ಬಂದ ದಾರಿ ಹಿಡಿದು ಹೋಗುತ್ತಾಳೆ.
ಅಣ್ಣ-ತಂಗಿಯರ ಮಧುರ ಬಾಂಧವ್ಯ ಜನಪದದಲ್ಲಿ ಹಾಸು ಹೊಕ್ಕಾಗಿದೆ. ಅಣ್ಣನನ್ನು ಕುರಿತು ತಂಗಿ ಹೇಳುತ್ತಾಳೆ.

"ಹೆಣ್ಣಿನ ಜನುಮಕ ಅಣ್ಣತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗೆ| ಸಾವಿರ
ಹೊನ್ನ ಕಟ್ಟುವರು ಉಡಿಯೊಳಗೆ"
ತಂಗಿಯ ಆಪತ್ ಕಾಲಕ್ಕೆ ಸಹಾಯಕ್ಕೆ ಬಂದ ಅಣ್ಣನನ್ನು ಜೀವನ ಪರ್ಯಂತ ನೆನೆಯುವಳು. ಅಂಥ ಅಣ್ಣನನ್ನು ನೋಡುವ ಬಯಕೆ ಅವಳದು.
"ಸೊಲ್ಲಾಪುರದಣ್ಣಗ ನಿಲ್ಲದಲೆ ಬರಹೇಳು|
ಸೀರೊಲ್ಲೆ ಅವನ ಕುಬಸೊಲ್ಲೆ| ಅಣ್ಣನ
ಮಾರಿ ನೋಡಂಥ ಮನವಾಗಿ"
ಅಣ್ಣನಿಂದ ಸೀರೆ ಕುಪ್ಪಸ ಬೇಡ ಅಣ್ಣ ಬರುವನೆಂದು ಸುದ್ದಿ ಸ್ವರ್ಗಕ್ಕೆ ಮೂರೇಗೇಣು.
"ಅಣ್ಣ ಬರತಾನಂತ ಅಂಗಳಕೆ ಥಳಿಕೊಟ್ಟೆ
ರನ್ನ ಬಚ್ಚಲಕೆ ಮಣಿ ಹಾಕಿ| ಕೇಳೀನ
ತಣ್ಣಗಾಗಿರ‍್ಲಿ ತವರವರು"
ಅಂಗಳಕ್ಕೆ ನೀರು ಹಾಕಿ ಥಣ್ಣಗೆ ಮಾಡಿ, ಧೂಳೇಳದಂತೆ ಮಾಡಿ ನೀರನ್ನು ಕಾಯಿಸಿ ಬಚ್ಚಲಿಗೆ ಇಟ್ಟು ದಣಿದ ಅಣ್ಣನನ್ನು ಮನೆಯಲ್ಲಿ ಎಲ್ಲರೂ ಸೌಖ್ಯವೇ ಎಂದು ಕೇಳುತ್ತಾಳೆ.
ಹಬ್ಬ ಹರಿದಿನಗಳಂದು ತವರಿಗೆ ತನ್ನಣ್ಣ ಕರೆಯಲು ಬರುವನೆಂದು ಕಾತರ. ಆತನ ದಾರಿ ಕಾಯುವುದೇ ಅವಳ ಸಡಗರ.
ಕುದರಿಯ ಕುಣಿಸೂತ| ಆನಿಯ ನಡೆಸೂತ
ಅರಗಿಣಿಗೆ ಮಾತ ಕಲಿಸೂತ| ಬರತಾನೆ
ಬರಿಗೊಡದಮ್ಮ ದಾರಿಬಿಡ.
ಇಲ್ಲ ತನ್ನಣ್ಣ ಕುದುರೆ, ಆನೆ ಸವಾರನೆಂದು, ಗಿಣಿಗೆ ಮಾತು ಕಲಿಸುವನೆಂದು ಕಲ್ಪಿಸುತ್ತಾಳೆ. ಈ ರೀತಿ ಬರುವಾಗ ಬರಿಗೊಡ ಎದುರಿಗೆ ಬಂದರೆ ಅಪಶಕುನ ಎಂದು ಭಾವಿಸಿ ನೀರಿಗೆ ಹೊರಟುವರಿಗೆ ಬರಿಗೊಡ ತೊರಿಸಬಾರದೆಂದು ಹೇಳುವಳು. ಅದೆಂಥ ಪ್ರೀತಿ ತಂಗಿಯದು?
ಎಲ್ಲ ಹಬ್ಬಗಳಿಗೂ ಬರಬೇಡೆಂದು ಹೇಳುತ್ತ
"ಕಾರ ಹುಣ್ಣಿಮೆ ಹಬ್ಬಕ ಕರಿಯಲಾಕ ಬರಬ್ಯಾಡ
ಕಾಲಬಾಡಿಗೆ ಕೊಡಬ್ಯಾಡ| ನನ್ನಣ್ಣ
ಹೊನ್ನ ದೀವಳಿಗೆ ಮರಿಬ್ಯಾಡ||
ಹೆಣ್ಣು ಮಕ್ಕಳ ಸಡಗರ ಹಬ್ಬ ದೀಪಾವಳಿಗೆ ಮಾತ್ರ ಮರಿಬ್ಯಾಡ ಎನ್ನುತ್ತಾಳೆ.
ಹಬ್ಬ ಮುಗಿದು ಪತಿ ಮನೆಗೆ ಹೋಗುವಾಗ ಕಣ್ಣಲ್ಲಿ ನೀರು ತುಂಬುತ್ತದೆ. ಆಗ ಅಣ್ಣನಿಗೂ ಕಣ್ಣು ತುಂಬುತ್ತದೆ.
"ತಂಗೀಗಿ ಕಳುಹ್ಯಾನ ತವರೇರಿ ನಿಂತಾನ
ಅಂಗೀಲಿ ನೀರ ವರಸ್ಯಾನ ನನ್ನಣ್ಣ
ಇಂದಿಗಿ ತಂಗಿ ಎರವಾಗಿ"
ಜಾನಪದದಲ್ಲಿ ಒಂದು ಪ್ರಸಂಗ ಹೀಗಿದೆ.
ತವರು ಮನಿಗೆ ಬಂದ ತಂಗಿಗೆ ಸಾವಕ್ಕಿ ಕುಟ್ಟ ಬೇಕಾಗಿದೆ. ಅತ್ತಿಗೆ ಮಲಗಿದ್ದಾಳೆ. ಅಣ್ಣನಿಗೆ ಹೀಗೆ ಹೇಳುವಳು
"ಸಾಂವಕ್ಕಿ ಕುಟ್ಟಂದ್ರೆ ಸೆರಗ್ಹಾಸಿ ಮಲಗ್ಯಾಳೆ
ಎಬ್ಬಿಸಣ್ಣ ನಿನ್ನ ಮಡದೀನ" ಎಂದಾಗ ಅಣ್ಣ ಹೇಳಿದ್ದು
"ಮಡದೀನ ಎಬ್ಬಿಸಿದ್ರ ಅರನಿದ್ರೆ ಆದಾವ
ಎರಡೊಬ್ಬಿ ಮಾಡಿ ನೀ ಕುಟ್ಟವ್ವ ಎಂದನು.
ನೀನೇ ಎರಡು ಭಾಗ ಮಾಡಿ ಕುಟ್ಟು ಎಂದನು. ಆಗ ತಂಗಿ ಹೇಳುವಳು. "ಎರಡೊಬ್ಬಿ ಮಾಡಿದರ ಸರಿಯಾಗಿ ಸುರಿಯೋದಿಲ್ಲ. ಒಂದಬ್ಬಿ ಸಣ್ಣವಾಗಬಹುದು ಇನ್ನೊಂದಬ್ಬಿ ಉರುಮ ಆಗಬಹುದು. ಒಂದೇ ಸಲ ಕುಟ್ಟುವುದಕ್ಕೆ ಎಬ್ಬಿಸು" ಮತ್ತು ಅತ್ತಿಗೆಯನ್ನು ಎಬ್ಬಿಸಲು ಒತ್ತಾಯಿಸುವಳು. ಆಗ ಅಣ್ಣನಿಂದ ಬಂದ ಉತ್ತರ
"ಕುಟ್ಟಿದರ ಕುಟ್ಟವ್ವ
ಕಿಡಿ ಕಿಡಿ ಹಚಬ್ಯಾಡ| ಬಂದ್ಹಾದಿ
ಹಿಡಿದು ನಡಿ ತಂಗಿ" ಎನ್ನುವನು. ಆಗ ತಂಗಿ
"ಚಕ್ಕಡಿಯೊಳಗ ಕೂಡಿಸಿಕೊಂಡು
ನಡೀ ನನ್ನ ಲಗೂನ ಕಳಿಸು" ಎಂದಾಗ ಎತ್ತು ಚಕ್ಕಡಿ ನಮ್ಮನ್ಯಾಗ ಇಲ್ಲ. ಬರೋಮುಂದ ನೀ ಹ್ಯಾಂಗ ಬಂದಿ ಹಾಂಗು ಸುಮ್ಮನೆ ಬಂದ ಹಾದಿ ಹಿಡಿ" ಅಂದಕೂಡ್ಲೆ, ನಿಂತ ಕಾಲ ಮೇಲೆ ಗಂಡನ ಮನೆ ಹಾದಿ ಹಿಡಿದಳು. ಇತ್ತ ಮರುದಿನ ಅತ್ತಿಗೆಗೆ ಭಾರೀ ಚಳಿಜ್ವರ ಬಂದವು. ಅಣ್ಣ ದೇವರ ಕೇಳಿಸಿದಾಗ-ಮನಿ ಹೆಣಮಗಳ ಉಸಿರು, ಅವಳು ಪಟ್ಟ ತಾಪದ ಪರಿಣಾಮ ಎಂದಾಗ, ಅಣ್ಣ ಚಕ್ಕಡಿ ಕಟಿಗೊಂಡು ತಂಗಿ ಮನೆಗೆ ಬಂದಾಗ, ಎಂದೂ ಬರಲಾರದ ಅಣ್ಣ ಬಂದಾನೆಂದು ಆತಿಥ್ಯ ನೀಡಿದ್ದು, ತಂಗಿನ ತವರಿಗೆ ಬಾ ಎಂದು ಕರೆದರೂ ವಿವಿಧ ಕಾರಣಗಳನ್ನು ಹೇಳಿ ತಪ್ಪಿಸಿ ಕೊಂಡಳು. ತವರಿಗೆ ಮೋಹ ತೆಗೆದಳು. ತಾಯಿಯಿಲ್ಲದ ತವರು ದೂರವಾಯಿತು. ಹೀಗೆ ಮನೆಯ ಹೆಣ್ಣುಮಕ್ಕಳು ಉಸಿರು ಹಾಕಿದರೆ ಶಾಪವಾಗಿ ಪರಿಣಮಿಸುತ್ತದೆ.
ಹೆಣ್ಣು ದೇವರಲ್ಲಿ ಕೇಳುವುದು ಒಂದೇ ಒಂದು ಮುತ್ತೈದೆತನ. ಹಾಗೂ ಮುತ್ತೈದೆಯಾಗಿ ಸಾಯುವುದು. ಅದಕ್ಕಾಗಿ ವ್ರತ ನೇಮಗಳನ್ನು ಮಾಡುತ್ತಾಳೆ.
ದೇವರಲ್ಲಿ ಈ ಪರಿ ಬೇಡುತ್ತಾಳೆ.
"ಮುತ್ತೈದೆತನ ಬೇಡಿ ಮೂರುತಾಸು ನಿಂತೆ
ಮುತ್ತಿನ ತುರಾಯಿ ಅರಸರ| ಸಂಗ ಬೇಡಿ
ಸುತ್ತೇನ ಶಿವನ ಶಿಖರವ||
ಅವಳ ವೈಧವ್ಯದ ಬಾಳು ಮನವನ್ನು ಕಲಕುತ್ತದೆ.
"ಗಂಡನಿಲ್ಲದ ಬಾಳು ದಂಡನಾಳಿದರೇನು
ಪುಂಡಿಯ ಹೂವ ಹೊಲ ತುಂಬ| ಅರಳಿದರೆ
ಗಂಡನಿಲ್ಲದ ಬಾಳು ಬೀಳಲ್ಲವೇ" ಎಂದು ಎಲ್ಲರಿಂದ ತಿರಸ್ಕಾರ, ಅವಮಾನ, ಅಸ್ಪೃಶ್ಯತೆ ಅನುಭವಿಸಬೇಕಾಗುತ್ತದೆ. ಜನಪದ ಸಾಹಿತ್ಯದಲ್ಲಿ ಕುಟುಂಬ ಯೋಜನೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಂಡುಬರುತ್ತದೆ. ಗೃಹಿಣಿ ತನ್ನ ಬಂಜೆತನದಿಂದ ದೂರ ಮಾಡೆಂದು ಶಿವನಲ್ಲಿ ಕೇಳುತ್ತಾಳೆ.
"ಬಂಜೆಂಬ ಶಬುದ ಹೊರಲಾರೆ| ಎನ್ನುವಳು. ತನಗೆಷ್ಟು ಮಕ್ಕಳು ಬೇಕೆಂಬುದನ್ನು
"ಎರಡು ಮಕ್ಕಳ ಕೊಟ್ಟು ಸಾಕು ಮಾಡು ಶಿವನೇ
ಎರಡರ ಮ್ಯಾಲೆ ಆರುತಿ-ಹಿಡಿಲಾಕ
ನಾರಿಯ ಕೊಟ್ಟು ಕಡೆಮಾಡೋ"
ಆವಾಗಲೇ ಮಿತ ಕುಟುಂಬದ ಕಲ್ಪನೆ ಅವರಲ್ಲಿತ್ತು.
ಇನ್ನೊಬ್ಬ ಹೆಣ್ಣು ಮಗಳು
"ಹತ್ತು ಹಡೆಯುವುದಕ್ಕಿಂತ ಮುತ್ತೊಂದು ಹಡೇದಿನಿ
ಎತ್ತಿಕೋ ತಮ್ಮ ಬಗಲಾಗ-ನನ್ನ ತಮ್ಮ
ಮುತ್ತಿನ ಶಲ್ಯವ ಮರೆಮಾಡೋ"
ಮಕ್ಕಳನ್ನು ಕೊಡು ಎಂದು ಶಿವನಲ್ಲಿ ಕೇಳುವಾಗ ತುಂಬ ಎಚ್ಚರಿಕೆ ವಹಿಸುವಳು.
"ಮಕ್ಕಳರ್ಥಿ ಉಳ್ಳವರಿಗೆ ಮಕ್ಕಳ ಕೊಡುದೇವ
ಮಕ್ಕಳು ಸಾಕೆಂದು ತಿರುದುಂಬ-ಬಡವರಿಗೆ
ಮಕ್ಕಳ ಕೊಡಬ್ಯಾಡ ಮನಿತುಂಬ" ಎಂದು ಬಡವರಿಗೆ ಹಿಂಡು ಮಕ್ಕಳು ಬೇಡ ಎನ್ನುವಳು.
ಗೃಹಿಣಿಯೊಬ್ಬಳು ತನ್ನ ಮಗ ಹೇಗಿರಬೇಕೆಂದು ಈ ರೀತಿ ಬಯಸುವಳು.
"ಉಪ್ಪರಿಗೆ ಮನಿ ಬೇಕು ಕೊಪ್ಪರಿಗೆ ಹಣಬೇಕು
ರುಕ್ಮಿಣಿಯಂತ ಸೊಸಿಬೇಕು-ನನಮನೆಗೆ
ಕೃಷ್ಣದೇವನಂಥ ಮಗಬೇಕು"
"ಮಾಳಿಗೆ ಮನೆ ಬೇಕು, ಜೋಳಿಗೆ ಹಣ ಬೇಕು
ಜಾನಕಿಯಂಥ ಸೊಸಿಬೇಕು-ನನ ಮನೆಗೆ
ರಾಮದೇವರಂಥ ಮಗ ಬೇಕು"
ಇನ್ನೊಬ್ಬ ಗೃಹಿಣಿ ದೇವರಲ್ಲಿ ಈ ರೀತಿ ಬೇಡುವಳು.
’ನಾನು ತಿಮ್ಮಯ್ಯನ ಏನು ಬೇಡೋಳಲ್ಲ
ಹೂಡೋವೆರಡೆತ್ತು ಕರಿಎಮ್ಮೆ-ಮುತ್ತಿನ ಚೆಂಡು
ಆಡುಂಬೊನೊಬ್ಬ ಮಗ ಸಾಕು"
ಬೇಸಾಯಕ್ಕೆ ಎರಡು ಎತ್ತು. ಹಯನಕ್ಕೆ ಎಮ್ಮೆ, ಆಡಿ ಉಣ್ಣಲು ಒಬ್ಬ ಮಗ ಈ ರೀತಿ ನೆಮ್ಮದಿಯ ಬದುಕಿಗೆ ದೇವರನ್ನು ಪ್ರಾರ್ಥಿಸುವಳು. ಹೀಗೆ ಕುಟುಂಬ ಯೋಜನೆ ಪದ್ಧತಿಯನ್ನು ಬೆಂಬಲಿಸುವಂತೆ ಹಲವಾರು ತ್ರಿಪದಿಗಳು ಜನಪದರಲ್ಲಿದ್ದವು.
ಪತಿ ತೀರಿದಾಗ ಪತ್ನಿ ಸಹಗಮನ ಮಾಡಿದ ಉದಾಹರಣೆಗಳು ಅನೇಕ ಇವೆ. ಆದರೆ ಪ್ರೇಮದ ಪತ್ನಿ ಕೆರೆಗೆ ಹಾರವಾದಾಗ ಗಂಡ ಮಡದಿಯನ್ನು ಅಗಲಿರಲಾರದೆ ತಾನೂ ಕೆರೆಗೆ ಹಾರಿದ ಕಥೆ ’ಕೆರೆಗೆ ಹಾರ’. ಪರೋಪಕಾರಕ್ಕೆ ಗರತಿ ಬಲಿದಾನಗೈದ ಕಥೆ. ಕೊಟ್ಟರೆ ಕೊಡಲೇಳು ಇಟ್ಟಾಂಗ ಇರಬೇಕು ಎಂಬುದು ಈ ಕಥೆಯ ಜೀವನಾಡಿ ಪತ್ನಿಯ ತ್ಯಾಗ ಪತಿಯ ನಿರ್ವಾಜ್ಯ ಪ್ರೇಮ ವ್ಯಕ್ತವಾಗಿದೆ.
ಹೆಣ್ಣಿಗೆ ಗುಣವೇ ಮುಖ್ಯ ಸೌಂದರ್ಯ ಮುಖ್ಯವಲ್ಲ ಎಂಬುದನ್ನು-
"ಕಪ್ಪು ಹೆಂಡತಿಯಂತ ಕಿರಿಕಿರಿ ಮಾಡಬೇಡ
ನೇರಲದ ಹಣ್ಣು ಬಲು ಕಪ್ಪು| ಇದ್ದರು
ತಿಂದು ನೋಡಿದರ ಬಹಳ ರುಚಿ"
"ಕೆಂಪು ಹೆಂಡತಿ ಎಂದು ಸಂತೋಷ ಪಡಬ್ಯಾಡ
ಅತ್ತಿಯ ಹಣ್ಣು ಬಲುಕೆಂಪು| ಇದ್ದರು
ಒಡೆದು ನೋಡಿದರೆ ಹುಳಭಾಳ"
ಜನಪದ ಮಹಿಳೆ ಜನಪದರು ತಮಗೂ ಅನ್ಯರಿಗೂ ಲೇಸೆನಿಸುವ ಹಿತವಚನಗಳನ್ನು ಅನುಭವದಿಂದ ಹೇಳಿದರು. ಹಾಡಿದರು. ನಡೆದು ತೋರಿದರು.
"ಮಂದೀ ಮಂದೀ ಎಂದು ಮಂದಿ ನಂಬಲಿ ಹೋದ
ಮಂದಿ ಬಿಟ್ಟಾರ ನಡುನೀರ|ಮಲ್ಲಯ್ಯ
ತಂದಿ ನನ ಕೈಯ ಬಿಡಬ್ಯಾಡ"
"ಮಾದೇವ ನಿನ ಹೊರತು ನಾನ್ಯಾರ ನಂಬಿಲ್ಲ
ನಾ ಮಾಡಿದೆನೆಂಬ ಅಳವಿಲ್ಲ| ಮಹಾದೇವ
ನೀ ನಡೆಸು ನನ್ನ ಸರುವೆಲ್ಲ
ಯಾವುದೇ ಒಂದು ವ್ಯವಸ್ಥೆಯಲ್ಲಿ ಗಂಡು ಹೆಣ್ಣು ಪರಸ್ಪರ ಹೊಣೆಗಾರರಾಗುತ್ತಾರೆ. ಜಾನಪದ ಜೀವನದಲ್ಲಿ ಗಂಡಿಗಿಂತ ಹೆಣ್ಣು ಹೊಣೆಗಾರಳಾಗಿದ್ದಳು. ಆಗಲೂ ಹೆಣ್ಣು ಶೋಷಣೆಯ ವಸ್ತುವಾಗಿದ್ದಳು. ಆ ಶೋಷಣೆ ಹೆಣ್ಣಿನ ಜೀವನದೊಂದಿಗೆ ಅನಿವಾರ್ಯವಾಗಿ ಹೆಣೆದು ಕೊಂಡಿದೆ. ಹೆಣ್ಣು ಹಕ್ಕುಗಳಿಗಾಗಿ ಹೋರಾಡುತ್ತಲೇ ಬಂದಿದ್ದಾಳೆ. ಹೆಣ್ಣಿಗೆ ಹಲ್ಲುಗಳ ಸಂಖ್ಯೆ ಕಡಿಮೆ ಎಂದು ಧರ್ಮಶಾಸ್ತ್ರಗಳು ನಂಬಿದ್ದವು. ಈಗ ಹೆಣ್ಣು ಹೆಚ್ಚು ವಿದ್ಯಾವಂತಳಾಗಿ ಕಂಡರೂ ತನ್ನ ಕಾಲ ಮೇಲೆ ನಿಲ್ಲುವ ಸಾಮರ್ಥ್ಯ ಹೊಂದಿದರೂ ಈಗಲೂ ಎರಡನೇ ದರ್ಜೆ ನಾಗರಿಕಳಾಗಿದ್ದಾಳೆ. ವರದಕ್ಷಿಣೆ, ಅತ್ಯಾಚಾರ ಹೆಣ್ಣು ಎಂಬ ತಾರತಮ್ಯ, ದೌರ್ಜನ್ಯ ಇದ್ದೇ ಇವೆ. ಕೆಲವೆಡೆ ಹೆಣ್ಣು ನೊಂದು ನುಡಿದ ಗೀತೆ ಇದು.
"ಹೆಣ್ಣಾಗಿ ಹುಟ್ಟೋದಕ್ಕಿಂತ ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮೇಲೊಂದು ಮರವಾಗಿ| ಹುಟ್ಟಿದರೆ
ಪುಣ್ಯವಂತರಿಗೆ ನೆರಳಾದೆ"
ಪುರುಷ ಪ್ರಧಾನ ಸ್ವಾರ್ಥದ ’ಕೆರೆಗೆ ಹಾರ’ಕ್ಕೆ ’ಭಾಗೀರಥಿ’ಯರು ಬಲಿಯಾಗಬಾರದು. ಈ ರೀತಿ ಸಾಧಿಸಿದಾಗ ಹೆಣ್ಣಿಗೆ ಸಮಾನತೆ ಬರುವುದು.

No comments:

Post a Comment

ಹಿಂದಿನ ಬರೆಹಗಳು