Thursday, June 2, 2011

ಬಸವಣ್ಣ, ಪೈಗಂಬರ್ ಮತ್ತು ಕಾರ್ಮಿಕರು



ಐರೋಪ್ಯ ರಾಷ್ಟ್ರಗಳಲ್ಲಿ ಮೇ ೧, ವಸಂತ ಋತುವಿನ ಆರಂಭದ ದಿನವಾಗಿದೆ. ವಸಂತ ಋತುವಿನಲ್ಲಿ ಇಡೀ ನಿಸರ್ಗ ವರ್ಣರಂಜಿತವಾಗಿರುತ್ತದೆ. ಆದರೆ ಕಾರ್ಮಿಕರು ಈ ಸಂತೋಷದಿಂದ ವಂಚಿತರಾಗಿದ್ದರು. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ದುಡಿಯುವ ಪರಿಸ್ಥಿತಿ ಇತ್ತು. ಅವರ ಬದುಕಿನಲ್ಲಿ ವಿಶ್ರಾಂತಿ ಮತ್ತು ಮನರಂಜನೆ ಎಂಬುವು ಗೌಣವಾಗಿದ್ದವು. ಇಂಥ ಕಠಿಣ ಬದುಕಿನಿಂದ ಒಂದಿಷ್ಟು ಬಿಡುವು ಮಾಡಿಕೊಳ್ಳುವುದಕ್ಕಾಗಿ ಕೆಲಸದ ಅವಧಿಯನ್ನು ೮ ಗಂಟೆಗೆ ಸೀಮಿತಗೊಳಿಸಬೇಕೆಂದು ಒತ್ತಾಯಿಸಿ ಅಮೆರಿಕದ ಷಿಕಾಗೊ ನಗರದ ೪೦ ಸಾವಿರಕ್ಕೂ ಹೆಚ್ಚು ಕಾರ್ಮಿಕರು ೧೮೮೬ನೇ ಮೇ ೧ರಂದು ಶಾಂತಿಯುತ ಹೋರಾಟ ಆರಂಭಿಸಿದರು.
ಮೇ ೩ರಂದು ಷಿಕಾಗೊದ ಮ್ಯಾಕೊರ್ಮಿಕ್ ಹಾರ್ವೆಸ್ಟರ್ ಪ್ಲಾಂಟ್‌ನಲ್ಲಿ ಪೊಲೀಸರು ಗುಂಡು ಹಾರಿಸಿದಾಗ ೬ ಮಂದಿ ಸತ್ತು ೫೦ ಮಂದಿ ಗಾಯಗೊಂಡರು. ಮೇ ೪ರಂದು ಹೇ ಮಾರ್ಕೆಟ್ ಚೌಕದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ ಹೊರಡಿಸಲಾಯಿತು. ರ‍್ಯಾಲಿ ಮುಗಿಯುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಎಸೆದ ಬಾಂಬ್ ಸ್ಫೋಟಗೊಂಡಾಗ ಒಬ್ಬ ಪೊಲೀಸ್ ಮೃತಪಟ್ಟ. ನಂತರ ಆರಂಭವಾದ ಗಲಭೆಯಲ್ಲಿ ಆರು ಮಂದಿ ಪೊಲೀಸರು ಮತ್ತು ನಾಲ್ವರು ಕಾರ್ಮಿಕರು ಸತ್ತು ಅನೇಕರು ಗಾಯಗೊಂಡರು. ಹೀಗೆ ವಿಶ್ವಾದ್ಯಂತ ಕಾರ್ಮಿಕರ ಹೋರಾಟದ ದಿನವಾಗಿ ಮೇ ದಿನಾಚರಣೆ ಆರಂಭವಾಯಿತು.
ಷಿಕಾಗೊ ದುರಂತಕ್ಕೆ ೩೮ ವರ್ಷಗಳ ಮೊದಲೇ ಮಾರ್ಕ್ಸ್ ಮತ್ತು ಏಂಗೆಲ್ಸ್ ಅವರು ರಚಿಸಿದ ಕಮ್ಯೂನಿಸ್ಟ್ ಪ್ರಣಾಳಿಕೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಕಾರ್ಮಿಕ ಚಳವಳಿಯ ಮಹತ್ವದ ಕುರಿತು ತಿಳಿಸಲಾಗಿದೆ. ಕಾರ್ಮಿಕರ ಶೋಷಣೆಯ ಕಾರಣಗಳನ್ನು ವಿವರಿಸಲಾಗಿದೆ. ವರ್ಗ ಹೋರಾಟದಿಂದ ಕಾರ್ಮಿಕರ ವಿಮೋಚನೆಯಾಗುವುದರ ಬಗ್ಗೆ ಸೂಚಿಸಲಾಗಿದೆ.
ಕಳೆದ ನೂರು ವರ್ಷಗಳ ಅವಧಿಯಲ್ಲಿ ವಿವಿಧ ಹೋರಾಟಗಳ ಫಲವಾಗಿ ವಿವಿಧ ಕ್ಷೇತ್ರಗಳ ಕಾರ್ಮಿಕರು ೮ ಗಂಟೆಗಳ ಕೆಲಸವೂ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆದರು. ಅಂತರ್ರಾಷ್ಟ್ರೀಯ ಪ್ರಜ್ಞೆಯನ್ನೂ ಪಡೆದರು. ಆದರೆ ಕಳೆದ ೨೫ ವರ್ಷಗಳ ಅವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಕಂಪ್ಯೂಟರ್ ತಂತ್ರಜ್ಞಾನದ ಬಳಕೆ ಮತ್ತು ಜಾಗತೀಕರಣದಿಂದಾಗಿ ವಿಶ್ವದ ಮುಖವೇ ಬದಲಾಗುತ್ತಿದೆ. ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಉತ್ಪಾದನೆಯಲ್ಲಿ ಕಾರ್ಮಿಕರ ಪಾತ್ರ ಇಲ್ಲವೇನೋ ಎನ್ನುವ ರೀತಿಯಲ್ಲಿ ಕಂಪ್ಯೂಟರ್ ತಂತ್ರಜ್ಞಾನದ ಬಳಕೆಯಾಗುತ್ತಿದೆ. ದುಡಿಯುವ ಕೈಗಳು ಕೆಲಸ ಕಳೆದುಕೊಂಡಷ್ಟೂ ಹೋರಾಟಗಳು ಗೌಣವಾಗಿ ಅಪರಾಧಗಳು ಹೆಚ್ಚುತ್ತಿವೆ. ಕೌಟುಂಬಿಕ ಮತ್ತು ಸಾಮಾಜಿಕ ಬದುಕು ಅಸಹನೀಯವಾಗುತ್ತಿದೆ.
ಮಾನವನನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತ ಸುವ್ಯವಸ್ಥಿತ ಸಮಾಜವೊಂದನ್ನು ಸೃಷ್ಟಿಸಿ, ಉಳಿಸಿ ಬೆಳೆಸುವುದಕ್ಕಾಗಿ ಅನೇಕ ಧರ್ಮಸಂಸ್ಥಾಪಕರು ಪ್ರಯತ್ನಪಟ್ಟಿದ್ದಾರೆ. ಅವರೆಲ್ಲ ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಬಡವರ ಹಕ್ಕುಗಳ ರಕ್ಷಣೆಯಾಗುವ ಹಾಗೆ ಧಾರ್ಮಿಕ ಕಟ್ಟಳೆಗಳನ್ನು ವಿಧಿಸಿದ್ದಾರೆ. ಆ ಮೂಲಕ ತಾವು ಸ್ಥಾಪಿಸಿದ ಅಥವಾ ವಿಕಾಸಗೊಳಿಸಿದ ಧರ್ಮಗಳು ಬಡವರ ಪರ ಎಂಬುದನ್ನು ಸೂಚಿಸಿದ್ದಾರೆ. ಅಂಥವರಲ್ಲಿ ೭ನೆಯ ಶತಮಾನದ ಮುಹಮ್ಮದ್ ಪೈಗಂಬರ್ ಮತ್ತು ೧೨ನೆಯ ಶತಮಾನದ ಬಸವಣ್ಣನವರು ಪ್ರಮುಖರಾಗಿದ್ದಾರೆ. ಕ್ರಿಸ್ತ ಪೂರ್ವ ೬ನೆಯ ಶತಮಾನದ ಭಗವಾನ ಬುದ್ಧ ಮತ್ತು ಕ್ರಿಸ್ತ ಶಕೆಗೆ ಕಾರಣವಾದ ಏಸು ಕ್ರಿಸ್ತ ಕೂಡ ಬಡವರ ಪರವಾಗಿಯೇ ಧರ್ಮ ಸ್ಥಾಪನೆ ಮಾಡಿದವರು.
ದುಡಿಯುವ ವರ್ಗಕ್ಕೆ ಸಂಬಂಧಿಸಿದ ಶೂದ್ರರು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕಟ್ಟಳೆಗಳಿಂದಾಗಿ ನರಕಯಾತನೆಯನ್ನು ಅನುಭವಿಸುತ್ತಿದ್ದ ಸಂದರ್ಭದಲ್ಲಿ ಭಗವಾನ ಬುದ್ಧ ದುಡಿಯುವ ಜನರ ಧರ್ಮ ಸ್ಥಾಪನೆ ಮಾಡಿದ. ವರ್ಣ ಮತ್ತು ವರ್ಗಭೇದಗಳನ್ನು ತಿರಸ್ಕರಿಸಿದ ಬೌದ್ಧಧರ್ಮವು ಕೆಳಜಾತಿ ಮತ್ತು ಕೆಳವರ್ಗದ ಜನರಿಗೆ ಹೊಸ ಆಶಾಕಿರಣವಾಯಿತು. ಏಸು ಕ್ರಿಸ್ತ ಕೂಡ ಭೇದಭಾವವಿಲ್ಲದ ಸಮಾಜಕ್ಕಾಗಿ ಧರ್ಮಮಾರ್ಗವನ್ನು ಹಾಕಿಕೊಟ್ಟ. ಪೈಗಂಬರರು ಮತ್ತು ಬಸವೇಶ್ವರರು ಬಡವರ ಪರವಾದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ತಲ್ಲೀನರಾಗಿದ್ದರು.
"ಸಂಪತ್ತಿನ ಗುಲಾಮನನ್ನು ದೇವರು ತಿರಸ್ಕರಿಸುವನು" ಎಂದು ಪೈಗಂಬರರು ಎಚ್ಚರಿಸಿ ಮಾನವರ ಸಂಗ್ರಹ ಬುದ್ಧಿಯನ್ನು ವಿರೋಧಿಸಿದ್ದಾರೆ. "ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ" ಎಂದು ಬಸವಣ್ಣನವರು ತಿಳಿಸುವ ಮೂಲಕ ಸಂಪತ್ತಿನ ಸಂಗ್ರಹವನ್ನು ಅಲ್ಲಗಳೆದಿದ್ದಾರೆ.
ಸಂಗ್ರಹ ಬುದ್ಧಿಯು ಮಾನವನ ಎಲ್ಲ ದುರಂತಗಳಿಗೆ ಕಾರಣವಾಗಿದೆ. ಆತ ಸಂಪತ್ತನ್ನು ಗಳಿಸಿದಷ್ಟೂ ತಾನು ಬೇರೆಯವರಿಗಿಂತ ಭಿನ್ನ ಎಂಬ ಭಾವನೆ ತಾಳುತ್ತ ಹೋಗುತ್ತಾನೆ. ಅಂಥವರು ಹೆಚ್ಚಾಗುತ್ತ ಮೇಲ್ವರ್ಗವಾಗಿ ಪರಿಣಮಿಸುತ್ತಾರೆ. ಈ ಮೇಲ್ವರ್ಗದಿಂದಾಗಿ ಮೇಲ್ಜಾತಿಗಳ ಮತ್ತು ಉತ್ತಮವೆಂದು ಕರೆಯಿಸಿಕೊಳ್ಳುವ ಕುಲಗಳ ನಿರ್ಮಾಣವಾಗುತ್ತದೆ. ಎಲ್ಲ ರೀತಿಯ ಮೆಲು-ಕೀಳುಗಳಿಗೆ ನಾಂದಿಯಾಗುತ್ತದೆ. ಆದ್ದರಿಂದ ಪೈಗಂಬರರ ಮೂಲಕ ಅವತೀರ್ಣಗೊಂಡ ಕುರಾನ್‌ನಲ್ಲಿ ಮತ್ತು ಬಸವಣ್ಣನವರ ವಚನಗಳಲ್ಲಿ ನರನ ಸಂಗ್ರಹಬುದ್ಧಿಯನ್ನು ತಿರಸ್ಕರಿಸಲಾಗಿದೆ.
"ಕಾಯಕ ಜೀವಿಗಳು ದೇವರ ಪ್ರೀತಿಗೆ ಪಾತ್ರರಾಗುವರು" ಎಂದು ಹೇಳಿದ ಪೈಗಂಬರರು, "ಕೂಲಿಯ ಒರಟು ಕೈಗಳನ್ನು ನಾನು ಪ್ರೀತಿಸುತ್ತೇನೆ" ಎಂದು ತಿಳಿಸಿದ್ದಾರೆ. "ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ ಎಂದು ಬಸವಣ್ಣನವರು ಕಾಯಕಜೀವಿಗಳನ್ನು ಗೌರವಿಸಿದ್ದಾರೆ. ದುಡಿದು ಉತ್ಪಾದಿಸುತ್ತ ನಾವೆಲ್ಲ ಬದುಕಲು ಸಾಧ್ಯವಾಗುವಂತೆ ಮಾಡುವ ಕಾಯಕಜೀವಿಗಳ ಒರಟು ಕೈಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಪೈಗಂಬರರು ಸೂಚಿಸಿದರೆ, ಅವರೇ ನಮ್ಮ ಹಿರಿಯರು ಎಂದು ಬಸವಣ್ಣನವರು ಶ್ಲಾಘಿಸುತ್ತಾರೆ.
"ನಿಮಗೆ ಅತ್ಯಧಿಕ ಪ್ರಿಯವಾದುದನ್ನು ದೇವಮಾರ್ಗದಲ್ಲಿ ವ್ಯಯಿಸುವ ತನಕ ನೀವು ಪುಣ್ಯ ಗಳಿಸಲಾರಿರಿ" ಎಂದು ಕುರಾನಿನಲ್ಲಿ ತಿಳಿಸಲಾಗಿದೆ. ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪದು, ಕೂಡಲಸಂಗನ ಶರಣರಿಗೆ ಸವೆಸಲೇ ಬೇಕು" ಎಂದು ಬಸವಣ್ಣನವರು ಎಚ್ಚರಿಸಿದ್ದಾರೆ.
ಸಂಪತ್ತನ್ನು ಕೂಡಿಸುವುದರಿಂದ ಅದು ದಿನಗಳೆದಂತೆ ಮಾನವಕುಲಕ್ಕೆ ಕಂಟಕಪ್ರಾಯವಾಗುತ್ತ ಹೋಗುತ್ತದೆ. ದುಡಿಯುವ ಮತ್ತು ಸುಲಿಯುವ ವರ್ಗಗಳ ನಿರ್ಮಾಣಕ್ಕೆ ನಾಂದಿ ಹಾಡುತ್ತದೆ. ವರ್ಗರಹಿತವಾದ ಸಮಾಜದಲ್ಲಿ ಮಾತ್ರ ಮಾನವ ಏಕೋಭಾವದಿಂದ ಬದುಕಲು ಸಾಧ್ಯ ಎಂಬ ಆಶಯ ಪೈಗಂಬರರದ್ದು ಮತ್ತು ಬಸವಣ್ಣನವರದ್ದು ಆಗಿದೆ.
"ನಮಾಜನ್ನು ಸ್ಥಿರಗೊಳಿಸಿರಿ; ಜಕಾತ್ ಕೊಡಿರಿ" ಎಂದು ಕುರಾನ್ ಆದೇಶಿಸುತ್ತದೆ. " ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು, ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು, ನಾನು ಪರಸೇವೆಯ ಮಾಡುವೆನಯ್ಯಾ ಜಂಗಮ ದಾಸೋಹಕ್ಕೆಂದು" ಎಂದು ಬಸವಣ್ಣನವರು ಹೇಳುತ್ತಾರೆ. ದೇವರ ಒಲುಮೆಯನ್ನು ಎರಡು ರೀತಿಯಿಂದ ಗಳಿಸಬೇಕೆಂಬುದು ಕುರಾನಿನ ಆದೇಶವಾಗಿದೆ ಎಂದು ಪೈಗಂಬರರು ಸೂಚಿಸಿದ್ದಾರೆ. ನಮಾಜ್ ಮಾಡುವುದು ದೇವರ ಆರಾಧನೆಯಾಗಿರುವಂತೆಯೆ ಜಕಾತ್ ಕೊಡುವುದು ಸಮಾಜವೆಂಬ ‘ದೇವರ’ ಆರಾಧನೆಯಾಗಿದೆ. ಸೃಷ್ಟಿಗೆ ಸೃಷ್ಟಿಕರ್ತನೇ ಕಾರಣನಾಗಿರುವುದರಿಂದ ಎಲ್ಲವೂ ದೇವರದ್ದೇ ಆಗಿದೆ. ಬಸವಣ್ಣನವರು ಇಷ್ಟಲಿಂಗ ಪೂಜೆ ಮತ್ತು ಜಂಗಮಲಿಂಗ ಪೂಜೆಯ ಬಗ್ಗೆ ಹೇಳುತ್ತಾರೆ. ಇಷ್ಟಲಿಂಗ ಪೂಜೆಯು ನಮಾಜ್ ಸ್ಥಾನದಲ್ಲಿದ್ದರೆ ಜಂಗಮಲಿಂಗ ಪೂಜೆಯು ಜಕಾತ್ ಸ್ಥಾನದಲ್ಲಿದೆ. ಜಕಾತ್ ಎಂದರೆ ಶ್ರೀಮಂತರ ಸಂಪತ್ತಿನಲ್ಲಿ ಬಡವರ ಪಾಲು. ಜಂಗಮಲಿಂಗ ಪೂಜೆ ಎಂದರೆ ಕಾಯಕ ಮಾಡಿ ಗಳಿಸಿದ್ದನ್ನು ದಾಸೋಹ ರೂಪದಲ್ಲಿ ಸಮಾಜಕ್ಕೆ ಅರ್ಪಿಸುವುದು. ಇದುವೆ ಜಂಗಮ ದಾಸೋಹ. ದೇವರು ಸಮಾಜದ ರೂಪದಲ್ಲಿಯೂ ಇರುತ್ತಾನೆ ಎಂಬ ಭಾವವು ವರ್ಗರಹಿತ ಸಮಾಜದ ಭಾವವೇ ಆಗಿದೆ. ಹೀಗೆ ಪೈಗಂಬರರು ಮತ್ತು ಬಸವಣ್ಣನವರು ಮಾನವರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ತುಂಬುತ್ತ ಮೇಲಿಲ್ಲದ ಮತ್ತು ಕೀಳಿಲ್ಲದ ವ್ಯವಸ್ಥೆಯನ್ನು ಸೃಷ್ಟಿಸಲು ಮಾರ್ಗ ತೋರಿಸಿಕೊಟ್ಟರು.
"ವ್ಯಾಪಾರವನ್ನು ಅಲ್ಲಾಹನು ಧರ್ಮಬದ್ಧಗೊಳಿಸಿದ್ದಾನಲ್ಲದೆ ಬಡ್ಡಿಯನ್ನು ನಿಷೇಧಗೊಳಿಸಿದ್ದಾನೆ" ಎಂದು ಕುರಾನ್ ಸಾರಿದೆ. "ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ ಕಡಬಡ್ಡಿಯ ಕೊಡಲಾಗದು" ಎಂದು ಬಸವಣ್ಣನವರು ತಿಳಿಸುತ್ತಾರೆ. ದುಡಿಯದೆ ಬದುಕುತ್ತ ಸಂಪತ್ತನ್ನು ಸಂಗ್ರಹಿಸುವಲ್ಲಿ ಬಡ್ಡಿಯ ಪಾತ್ರ ಹಿರಿದಾಗಿದೆ. ಅದು ಅನೈತಿಕ ಬದುಕಿಗೆ ದಾರಿ ಮಾಡಿಕೊಡುವುದು. ಬಡ್ಡಿಯ ಹಣದಿಂದ ಮೌಲ್ಯಹೀನ ಸಮಾಜ ನಿರ್ಮಾಣವಾಗುವುದು. ಅಂತೆಯೆ ಏಸು ಕ್ರಿಸ್ತ ಮತ್ತು ಕಾರ್ಲ್ ಮಾರ್ಕ್ಸ್ ಅವರ ಹಾಗೆ ಪೈಗಂಬರರು ಮತ್ತು ಬಸವಣ್ಣನವರು ಬಡ್ಡಿಯನ್ನು ತೀಕ್ಷ್ಣವಾಗಿ ವಿರೋಧಿಸಿದ್ದಾರೆ. ಬಡ್ಡಿಯ ಹಣದಿಂದಲೇ ವಿಶ್ವದಲ್ಲಿ ಕೆಲವೊಂದು ರಾಷ್ಟ್ರಗಳು ದೈತ್ಯರಾಷ್ಷ್ರಗಳಾಗಿ ರೂಪುತಾಳಿದರೆ ನೂರಾರು ರಾಷ್ಟ್ರಗಳು ಅವುಗಳಿಗೆ ಬಡ್ಡಿಯನ್ನು ಕೊಡುತ್ತ ಬಡವಾಗಿವೆ. ಬಡ್ಡಿಯು ಇಡೀ ಜಗತ್ತನ್ನು ತಲ್ಲಣಗೊಳಿಸುವತ್ತ ಸಾಗಿದೆ.
"ಜನರಿಗೆ ಕೃತಜ್ಞನಾಗಿರದವನು ಅಲ್ಲಾಹನಿಗೂ ಕೃತಜ್ಞನಾಗಿರಲಾರನು" ಎಂದು ಪೈಗಂಬರರು ಹೇಳುತ್ತಾರೆ. "ಜಂಗಮವಾಪ್ಯಾಯನವಾದಡೆ ಲಿಂಗ ಸಂತುಷ್ಟಿಯಹುದಯ್ಯಾ ಎಂದು ಬಸವಣ್ಣವರು ತಿಳಿಸುತ್ತಾರೆ. ಜನಸಮುದಾಯದ ಸುಂದರ ಬದುಕಿಗಾಗಿ ಚಿಂತಿಸುವುದು ಮತ್ತು ಅದಕ್ಕಾಗಿ ತನು ಮನ ಧನಗಳನ್ನು ಅರ್ಪಿಸುವುದು ನಿಜವಾದ ದೇವರ ಸೇವೆಯಾಗಿದೆ.
"ನನ್ನನ್ನು ಬಲಹೀನರ ಮತ್ತು ಬಡವರ ಮಧ್ಯೆ ಹುಡುಕಿರಿ. ನಿಶ್ಚಯವಾಗಿಯೂ ನೀವು ಅವರ ದುಡಿಮೆಯಿಂದಲೇ ಆಹಾರವನ್ನು, ಸಹಾಯವನ್ನು ಪಡೆಯುತ್ತೀರಿ" ಎಂದು ಪೈಗಂಬರರು ಹೇಳುತ್ತಾರೆ. "ಕುದುರೆ ಸತ್ತಿಗೆಯವರ ಕಂಡರೆ ಹೊರಳಿಬಿದ್ದು ಕಾಲ ಹಿಡಿವರು, ಬಡಭಕ್ತರು ಬಂದರೆ ‘ಎಡೆಯಿಲ್ಲ ಅತ್ತ ಸನ್ನಿ’ ಎಂಬರು" ಎಂದು ಬಸವಣ್ಣನವರು ಸಾತ್ವಿಕ ಕೋಪವನ್ನು ವ್ಯಕ್ತಪಡಿಸುತ್ತಾರೆ. ಹೀಗೆ ಪೈಗಂಬರರು ಮತ್ತು ಬಸವಣ್ಣನವರು ಸದಾ ಬಡವರ ಪರವಾಗಿ ನಿಲ್ಲುತ್ತಾರೆ. ಬಡವರ ಬದುಕನ್ನು ಹಸನಾಗಿಸುವುದೇ ಧರ್ಮದ ಗುರಿ ಎಂದು ಸಾರುತ್ತಾರೆ.
"ನಿಮ್ಮ ಧನವನ್ನು ನೀವು ಅನ್ಯಾಯವಾಗಿ ತಿನ್ನಬಾರದು" ಎಂಬುದು ಕುರಾನಿನ ಆದೇಶವಾಗಿದೆ. "ಧನವ ಕೊಟ್ಟು ಜಂಗಮವನೊಲಿಸಬೇಕು" ಎಂದು ಬಸವಣ್ಣನವರು ಹೇಳುತ್ತಾರೆ. ಧನವು ಸದಾ ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕೆ ಬಳಕೆಯಾಗಬೇಕು. ಇಲ್ಲದಿದ್ದರೆ ಅದು ಅಪರಾಧಗಳಿಗೆ ಮೂಲವಾಗುತ್ತದೆ. ಮನುಷ್ಯನನ್ನು ಮೌಲ್ಯವಂತನನ್ನಾಗಿ ಮಾಡುವುದು ಧರ್ಮದ ಕರ್ತವ್ಯವಾಗಿದೆ. ಆದರೆ ಆತ ಮೌಲ್ಯ ಕಳೆದುಕೊಳ್ಳತೊಡಗಿದಾಗ ಅಪರಾಧಗಳ ಸಮಾಜದ ಹುಟ್ಟಿಗೆ ಕಾರಣನಾಗುತ್ತಾನೆ. ಸಮಾಜದಲ್ಲಿ ನಡೆಯುವ ಸುಲಿಗೆಯಿಂದ ಅಪರಾಧಗಳ ಸೃಷ್ಟಿಯಾಗುತ್ತದೆ. ಸಮಾಜಸೇವೆಯಿಂದ ಸುಂದರ ಸಮಾಜದ ನಿರ್ಮಾಣವಾಗುತ್ತದೆ. ಆದ್ದರಿಂದ ನಮ್ಮ ಹಣ ಸತ್ಪಾತ್ರಕ್ಕೆ ಸಲ್ಲುವಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ.
"ಪೂರ್ವ ಪಶ್ಚಿಮದ ಕಡೆಗೆ ನಿಮ್ಮ ಮುಖವನ್ನು ತಿರುಗಿಸುವಲ್ಲಿ ಧರ್ಮಶೀಲತೆ ಇಲ್ಲ. ಆದರೆ ಅಲ್ಲಾಹನಲ್ಲಿ, ಅಂತಿಮ ದಿವಸದಲ್ಲಿ, ದೇವದೂತರಲ್ಲಿ, ಪ್ರವಾದಿಗಳಲ್ಲಿ ವಿಶ್ವಾಸವಿಡುವವರು ತಮ್ಮ ಧನವನ್ನು ಆತನ ಸಂಪ್ರೀತಿಗಾಗಿ ಬಂಧುಗಳಿಗೆ, ಅನಾಥರಿಗೆ, ದರಿದ್ರರಿಗೆ, ಸಂಚಾರಿಗಳಿಗೆ, ಸಹಾಯಾರ್ಥಿಗಳಿಗೆ ಮತ್ತು ದಾಸ್ಯ ವಿಮೋಚನೆಗೆ (ಗುಲಾಮರನ್ನು ಸ್ವತಂತ್ರಗೊಳಿಸುವುದಕ್ಕೆ) ಕೊಡುವವರು, ನಮಾಜನ್ನು ಸ್ಥಿರಗೊಳಿಸುವವರು, ತಾವು ವಾಗ್ದಾನವಿತ್ತಿದ್ದರೆ ಅದನ್ನು ಪೂರ್ಣಗೊಳಿಸುವವರು, ಕಷ್ಟಕಾರ್ಪಣ್ಯದಲ್ಲಿ ಹಾಗೂ ಸಮರದಲ್ಲಿ ಸಹನೆ ಕಳೆದುಕೊಳ್ಳದವರೇ ಪುಣ್ಯಶೀಲರು, ಇಂಥವರೇ ದೈವಭಕ್ತರು ಆಗಿರುತ್ತಾರೆ" ಎಂದು ಕುರಾನ್ ಸ್ಪಷ್ಟಪಡಿಸಿದೆ. "ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ ಎಂದು ಬಸವಣ್ಣನವರು ವಿಷಾದ ವ್ಯಕ್ತಪಡಿಸುತ್ತಾರೆ. ಜಗತ್ತನ್ನು ದುಃಖದಿಂದ ಮತ್ತು ಎಲ್ಲ ರೀತಿಯ ಅಸಹಾಯಕತೆಗಳಿಂದ ಪಾರು ಮಾಡುವಂಥ ಕ್ರಿಯೆಯಲ್ಲಿ ತೊಡಗುವುದು ಅವಶ್ಯವಾಗಿದೆ. ಸುಮ್ಮನೆ ನಮಾಜ್ ಮಾಡುತ್ತ ಇಲ್ಲವೆ ಇಷ್ಟಲಿಂಗ ಪೂಜೆ ಮಾಡುತ್ತ ಕೂಡುವುದರಲ್ಲಿ ಅರ್ಥವಿಲ್ಲ. ಅವುಗಳ ಜೊತೆ ಸತ್ಕಾರ್ಯಗಳನ್ನು ಮಾಡುವುದರಲ್ಲೇ ಬದುಕಿನ ಸಾರ್ಥಕತೆ ಇದೆ.
"ತುಳಿತಕ್ಕೀಡಾದವರು ಜಗತ್ತಿನ ನಾಯಕರು ಮತ್ತು ನೇರ ವಾರಸುದಾರರು ಆಗಬೇಕೆಂದು ನಾವು ಇಚ್ಛಿಸಿದ್ದೇವೆ" ಎಂದು ಕುರಾನ್ ಹೇಳುತ್ತದೆ. ಬಸವಣ್ಣನವರ ಕೂಡಲಸಂಗಮದೇವ ಮಾನವ ಹಕ್ಕುಗಳ ದೇವರಾಗಿದ್ದಾನೆ. ಆತ ಅಸ್ಪೃಶ್ಯ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿ ಕುಡಿಯುತ್ತಾನೆ. "ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತ್ತಯ್ಯಾ!....... ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲ್ಲುಂಡಕಾರಣ" ಎಂದು ಬಸವಣ್ಣನವರು ಹೇಳುತ್ತಾರೆ. ಹೀಗೆ ಪೈಗಂಬರರ ಅಲ್ಲಾಹ್ ಮತ್ತು ಬಸವಣ್ಣನವರ ಕೂಡಲಸಂಗಮದೇವ ಸದಾ ಬಡವರ, ದುಡಿಯುವವರ, ನಿರ್ಗತಿಕರ ಮತ್ತು ತುಳಿತಕ್ಕೊಳಗಾದವರ ಪರ ಇದ್ದಾರೆ. ಸದ್ಗುಣಗಳ ಆಗರವಾದವರ ಜೊತೆ ಇದ್ದಾರೆ. ಅವರಿಬ್ಬರೂ ಒಂದೇ ಆಗಿದ್ದಾರೆ. ದೇವನೊಬ್ಬ
ನಾಮ ಹಲವು" ಎಂದು ಬಸವಣ್ಣನವರು ಹೇಳಿದ್ದಾರೆ.
"ದುಡಿದು ಸಂಪಾದಿಸುವ ಮುಸ್ಲಿಮನನ್ನು ಅಲ್ಲಾಹನು ಪ್ರೀತಿಸುತ್ತಾನೆ" ಎಂದು ಪೈಗಂಬರರು ಹೇಳುವಲ್ಲಿ ಪ್ರತಿಯೊಬ್ಬ ಮುಸ್ಲಿಮನು ಕಾಯಕಜೀವಿಯಾಗಿರಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ. "ಶರಣರ ಬರವೆನಗೆ ಪ್ರಾಣಜೀವಾಳವಯ್ಯಾ ಎಂದು ಬಸವಣ್ಣನವರು ತಮ್ಮ ಧರ್ಮದ ಮೂಲಾಧಾರಗಳಾದ ಕಾಯಕಜೀವಿಗಳನ್ನು ಕೊಂಡಾಡುತ್ತಾರೆ.
"ತನ್ನ ಕೈಯಿಂದ ಸಂಪಾದಿಸಿದುದಕ್ಕಿಂತ ಉತ್ತಮ ಆಹಾರವನ್ನು ಎಂದೂ ಯಾರೂ ತಿಂದಿಲ್ಲ ಎಂದು ಪೈಗಂಬರರು ಹೇಳುತ್ತಾರೆ. "ಕೊಲುವನೆ ಮಾದಿಗ, ಹೊಲಸು ತಿಂಬುವನೆ ಹೊಲೆಯ, ಕುಲವೇನೊ ಅವಂದಿರ ಕುಲವೇನೊ, ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು" ಎಂದು ಬಸವಣ್ಣನವರು ಹೇಳುತ್ತಾರೆ. ಯಜ್ಞಯಾಗಾದಿಗಳಲ್ಲಿ ಪ್ರಾಣಿಬಲಿ ಕೊಡುವವರೇ ಮಾದಿಗರು. ಕಾಯಕ ಮಾಡದೆ ವರ್ಷಗಟ್ಟಲೆ ನಡೆಯುವ ಆ ಯಜ್ಞಯಾಗಾದಿಗಳಲ್ಲಿ ಬರಿ ತಿನ್ನುವುದು ಹೊಲಸು. ಆದರೆ ಹೊಲೆ ಮಾದಿಗರು ಮೊದಲುಮಾಡಿ ಜಾತಿಸಂಕರವಾಗಿ, ಎಲ್ಲರೂ ಒಂದಾಗಿ ದುಡಿಯುತ್ತ ಬದುಕುವ ಕೂಡಲಸಂಗನ ಶರಣರೇ ಕುಲಜರು ಎಂದು ಬಸವಣ್ಣನವರು ಘೋಷಿಸುತ್ತಾರೆ.
ಕಾಯಕವು ಕಾಯವನ್ನು ಸುಂದರಗೊಳಿಸುತ್ತದೆ, ಸದೃಢಗೊಳಿಸುತ್ತದೆ. ಕಾಯಕದಿಂದ ಆಗುವ ಮಾನವನ ಬದುಕಿನಲ್ಲಿ ಹಸಿವು ಬಹುಮುಖ್ಯವಾಗಿದೆ. ಈ ಹಸಿವು ಮಾನವನ ರುಚಿಶಕ್ತಿಯನ್ನು ಹೆಚ್ಚಿಸುತ್ತದೆ. ಅದರಿಂದಾಗಿ ಸಾದಾ ಆಹಾರ ಕೂಡ ರುಚಿಕಟ್ಟಾಗುತ್ತದೆ. ಚೆನ್ನಾಗಿ ದುಡಿದಾಗ ಒಳ್ಳೆಯ ನಿದ್ರೆ ಬಂದು ನಿಜವಾದ ವಿಶ್ರಾಂತಿ ಲಭಿಸುವುದು. ಹೀಗೆ ಹಸಿವು, ರುಚಿ ಮತ್ತು ವಿಶ್ರಾಂತಿ ಎಂಬುವು ನಿಜವಾದ ಅರ್ಥದಲ್ಲಿ ಬಡವರ ಸೊತ್ತಾಗಿವೆ. ಶ್ರೀಮಂತರು ಎಷ್ಟೇ ಸಂಪತ್ತು ಗಳಿಸಿದರೂ ಬಡವರ ಈ ಸೊತ್ತು ಅವರ ಪಾಲಾಗಲು ಸಾಧ್ಯವಿಲ್ಲ. ಬಡವರಿಗೆ ಕಾಯಕದಿಂದ ಸಿಗುವ ಆನಂದವನ್ನು ಶ್ರೀಮಂತರು ಖರೀದಿಸಲು ಸಾಧ್ಯವಿಲ್ಲ. ಇಂಥ ಬಡವರೇ ಬಸವಣ್ಣನವರ ಶರಣಸಂಕುಲದಲ್ಲಿ ಇದ್ದವರು. ಇವರು ಸ್ವತಂತ್ರಧೀರರು. ಯಾವುದಕ್ಕೂ ಆಸೆಪಟ್ಟವರಲ್ಲ. ಕಾಯಕದಲ್ಲಿ ದೇವರನ್ನು ಕಂಡವರು. ಸಕಲ ಜೀವಾತ್ಮರಿಗೆ ಲೇಸ ಬಯಸಿದವರು. ಆ ಮೂಲಕ ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದವಿಲ್ಲದ ಸಮಾಜವನ್ನು ಸೃಷ್ಟಿಸಿದವರು. ಪೈಗಂಬರರು ಕೂಡ ಇಂಥದೆ ಸಮಾಜದ ನಿರ್ಮಾಣವನ್ನು ಬಯಸಿದ್ದರು.

ರಂಜಾನ್ ದರ್ಗಾ
ನಿರ್ದೇಶಕ, ವಚನ ಅಧ್ಯಯನ ಕೇಂದ್ರ ಬಸವ ಸೇವಾ ಪ್ರತಿಷ್ಠಾನ, ಶರಣ ಉದ್ಯಾನ, ಶರಣ ನಗರ, ಬೀದರ -೫೮೫೪೦೧ ಮೊಬೈಲ್: ೯೨೪೨೪೭೦೩೮೪

No comments:

Post a Comment

ಹಿಂದಿನ ಬರೆಹಗಳು