Friday, June 17, 2011

ನೆಲದ ಒಡಲ ಹಾಡೇ ಜಾನಪದ

ಟಿ.ಎ.ನಾರಾಯಣಗೌಡ



ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಮ್ಮ ಒಳ-ಹೊರಗ
ಕೂಸು ಕಂದಮ್ಮ ಒಳ-ಹೊರಗ ಆಡಿದರ
ಬೀಸಣಿಕೆ ಗಾಳಿ ಸುಳಿದಾವ

ಬೆಳಗಾಗಿ ನೆನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು

ತೊಟ್ಟಿಲ ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು! ತೌರೂರ
ತಿಟ್ಟಹತ್ತಿ ತಿರುಗಿ ನೋಡ್ಯಾಳೋ

ಹೆಣ್ಣುಮಕ್ಕಳ ಕಳುಹಿ ಹೆಂಗಿದಿ ನನ ಹಡೆದವ್ವಾ
ಹನ್ನೆರಡಂಕನ ಪಡೆಸಾಲಿ
ಹನ್ನೆರಡು ಅಂಕನ ಪಡಸಾಲಿ ಒಳ ಹೊರಗ
ಹೆಣ್ಣು ಮಕ್ಕಳ ಉಲವಿಲ್ಲ

ಆಡಿ ಬಾ ನನ ಕಂದ
ಅಂಗಾಲ ತೊಳದೇನ
ತೆಂಗಿನ ಕಾಯಿ ತಿಳಿ ನೀರು
ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು
ಕಂದಮ್ನ ಪಾದ ತೊಳದೇನ...

ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು

ಮಣ್ಣಲ್ಲಿ ಹುಟ್ಟೋಳೆ ಮಣ್ಣಾಲಿ ಬೆಳೆವೋಳೆ
ಎಣ್ಣೇಲಿ ಕಣ್ಣಾ ಬಿಡುವೋಳೆ, ಜಗಜ್ಯೋತಿ
ಸತ್ಯಾದಿಂದುರಿಯೆ ನಮಗಾಗಿ


ಇಂಥ ಅದ್ಭುತ ಗೀತೆಗಳನ್ನು ಬರೆದವರ‍್ಯಾರು? ಇವರ‍್ಯಾರೂ ನಮ್ಮ ನಾಡಿನ ಗಣ್ಯಾತಿಗಣ್ಯ ಸಾಹಿತಿಗಳಲ್ಲ. ಯಾವ ರಾಜರ ಆಸ್ಥಾನದ ಕವಿಗಳೂ ಅಲ್ಲ. ಪ್ರಶಸ್ತಿ, ಪುರಸ್ಕಾರ, ಸಮ್ಮಾನ, ಖ್ಯಾತಿ ಇತ್ಯಾದಿಗಳ ಗೊಡವೆಗೆ ಹೋದವರಲ್ಲ. ಆದರೂ ಇವರು ಕನ್ನಡದ ಶ್ರೇಷ್ಠ ಸಾಹಿತಿಗಳು. ಮತ್ತೆ ಮತ್ತೆ ಓದುವಂತೆ, ಕೇಳುವಂತೆ, ಹಾಡುವಂತೆ ಮಾಡಿದ ಈ ಅಜ್ಞಾತ ಕವಿಗಳಿಗೆ ಕೋಟಿ ವಂದನೆ. ಜನರ ಬಾಯಿಂದ ಬಾಯಿಗೆ ತಲುಪುತ್ತಲೇ ಲಕ್ಷಾಂತರ ಜನರನ್ನು ಸೆಳೆದ ಈ ಗೀತೆಗಳು ಜನಸಂಸ್ಕೃತಿಯನ್ನು ಬಿಂಬಿಸುವ ರೂಪಕಗಳು.
ಜಾನಪದ ಎಂದರೆ ಕೇವಲ ಅಜ್ಞಾತ ಕವಿಗಳ ಹಾಡು-ಪಾಡು ಮಾತ್ರವಲ್ಲ. ಅದು ಬದುಕಿನ ಎಲ್ಲ ಜ್ಞಾನಶಾಖೆಗಳಿಗೂ ಅನ್ವಯಿಸುವಂಥದ್ದು. ಒಟ್ಟಾಗಿ ಇದನ್ನು ಜಾನಪದ ಸಂಸ್ಕೃತಿ ಎಂದು ನಾವು ಕರೆಯಬಹುದು. ಜಾನಪದ ಸಾಹಿತ್ಯ, ಜಾನಪದ ಕಲೆ, ಜಾನಪದ ತಂತ್ರಜ್ಞಾನ, ಜಾನಪದ ವೈದ್ಯ, ಜಾನಪದ ಕ್ರೀಡೆ, ಜಾನಪದ ನಾಟಕ, ಜಾನಪದ ಹಬ್ಬ-ಸಂಪ್ರದಾಯಗಳು, ಜಾನಪದ ಪುರಾಣ-ಒಗಟು ಇತ್ಯಾದಿ ಎಲ್ಲವೂ ಸೇರಿಯೇ ಜಾನಪದ. ಜಾನಪದ ಎಂದರೆ ಜನರ ಪದ. ಈ ಜನಪದರು ಈ ನೆಲದ ಜತೆಯಲ್ಲಿ ಅವಿನಾಭಾವ ಸಂಬಂಧವಿಟ್ಟುಕೊಂಡವರು. ಹುಟ್ಟಿದ ಮಣ್ಣನ್ನು ಪ್ರೀತಿಸುವವರು, ಸುತ್ತಲ ನಿಸರ್ಗವನ್ನು ಆರಾಧಿಸುವವರು.
ಜಾನಪದ ಸಾಹಿತ್ಯವೂ ವಿಸ್ತಾರವಾಗಿದೆ. ಜಾನಪದ ಗೀತೆಗಳು ಅತ್ಯಂತ ಜನಪ್ರಿಯ. ಅದೇ ರೀತಿ ಜನಪದ ಕಥನಗಳು, ಕಾವ್ಯಗಳು, ನಾಟಕಗಳು, ಒಗಟುಗಳು, ಗಾದೆಗಳು ಜನಜೀವನದ ಭಾಗವಾಗೇ ಉಳಿದುಕೊಂಡಿವೆ. ಇದನ್ನೆಲ್ಲ ಕಟ್ಟಿದ ಜನರ ಹೆಸರು ಗೊತ್ತಿಲ್ಲ. ಆದರೆ ಈ ಮೌಖಿಕ ಪರಂಪರೆ ಕರ್ನಾಟಕದ ಸಂಸ್ಕೃತಿಯ ಹಿರಿಮೆ. ಅದು ನಮ್ಮ ದೇಸೀ ಪರಂಪರೆಯ ತೋರುಗನ್ನಡಿ.
ಮನುಷ್ಯ ವಿಕಾಸಗೊಳ್ಳುತ್ತಿದ್ದಂತೆ ಸಂವಹನಕ್ಕೆ ಭಾಷೆ ಒಂದು ಮಾಧ್ಯಮವಾಯಿತು. ಭಾಷೆಗೊಂದು ಲಿಪಿ ಸೃಷ್ಟಿಯಾಯಿತು. ನಂತರ ಸಾಹಿತ್ಯವೂ ದಾಖಲಾಯಿತು. ಆದರೆ ಇದೆಲ್ಲವೂ ಆಗುವ ಮುನ್ನವೇ ಜಾನಪದವಿತ್ತು. ಜಾನಪದ ಕಲೆ-ಸಾಹಿತ್ಯ-ಸಂಸ್ಕೃತಿ ಜನರ ನಡುವೆ ಇತ್ತು. ಅಕ್ಷರವೇ ಗೊತ್ತಿಲ್ಲದವರು ಹಾಡು ಕಟ್ಟಿದರು. ಸುಶ್ರಾವ್ಯವಾಗಿ ಹಾಡಿದರು. ಜನರು ತಮ್ಮ ಮನರಂಜನೆಗಾಗಿ, ಬೌದ್ಧಿಕ ಬೆಳವಣಿಗೆಗಾಗಿ ಈ ಸಂಸ್ಕೃತಿಯನ್ನೇ ಬಳಸಿದರು.
ಜಾನಪದ ಹಾಡು, ಕಾವ್ಯ, ಕಥನಗಳಲ್ಲಿ ನಮ್ಮ ಜನಪದ ಮಾನವೀಯ ಸಂಬಂಧಗಳು, ಕಾಯಕ ಶ್ರದ್ಧೆ, ಜೀವಪರತೆಗಳನ್ನೇ ಕಾಣುತ್ತೇವೆ. ಅಷ್ಟೇ ಅಲ್ಲ ಜನಪದರ ಜ್ಞಾನ, ತಿಳಿವಳಿಕೆಯೂ ಅಸಾಧಾರಣವಾದದ್ದು. ವಿಜ್ಞಾನ ಬೆಳೆಯುವ ಮುನ್ನವೇ ಜನಪದರು ವೈಜ್ಞಾನಿಕವಾಗಿ ಯೋಚಿಸಬಲ್ಲವರಾಗಿದ್ದರು.
ಹಳ್ಳಿ ಬದುಕಿನ ಸೌಂದರ್ಯವಿರುವುದೇ ಅಲ್ಲಿಯ ಸಂಬಂಧಗಳ ಮಧುರ ಅನುಭೂತಿಯಲ್ಲಿ. ಅಜ್ಜಿ, ಅಜ್ಜ, ತಾಯಿ, ತಂದೆ, ಮಗಳು, ಮಗ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಅತ್ತೆ, ಸೋದರ ಮಾವ, ಸೋದರತ್ತೆ, ಸೊಸೆ, ಅಳಿಯ, ನಾದಿನಿ, ಬಾವ, ಬಾಮೈದ, ಅತ್ತಿಗೆ, ವಾರಗಿತ್ತಿ, ಮೊಮ್ಮಕ್ಕಳು ಇತರ ಎಲ್ಲ ಸಂಬಂಧಗಳ ಜತೆಜತೆಯೇ ಹಳ್ಳಿಯ ಬದುಕು ಸಾಗುತ್ತದೆ. ಒಂದೊಂದು ಸಂಬಂಧಕ್ಕೂ ಒಂದೊಂದು ಗುಣವಿದೆ, ಅದರದ್ದೇ ಆದ ಸೆಳೆತವಿದೆ. ಈ ಎಲ್ಲ ಸಂಬಂಧಗಳ ಸೊಗಸನ್ನು ಜಾನಪದ ಸಾಹಿತ್ಯ ನವಿರಾಗಿ ಬಿಡಿಸಿಡುತ್ತದೆ.
ಜನಪದರಿಗೆ ಹಾಡು-ಕಲೆ ಬದುಕಿನ ಭಾಗ. ತಮ್ಮ ಎಲ್ಲ ದಿನನಿತ್ಯದ ಕೆಲಸಗಳ ಜತೆಗೂ ಅವರು ತಮ್ಮ ಪಾಡಿಗೆ ತಾವು ಹಾಡಿಕೊಂಡು ಇದ್ದವರು. ಹೊಲ ಉಳುವಾಗ, ಕೂರಿಗೆ ಹೊಡೆಯುವಾಗ, ಕಳೆ ಕೀಳುವಾಗ, ನಾಟಿ ಹಾಕುವಾಗ, ಪೈರು ಕೀಳುವಾಗ, ಕಾಳು ಒಕ್ಕುವಾಗ, ಮೊಸರು ಕಡೆಯುವಾಗ, ಅಡಿಕೆ ಸುಲಿಯುವಾಗ, ಮಗು ಮಲಗಿಸುವಾಗ, ಹಚ್ಚೆ ಹೊಯ್ಯುವಾಗ, ಬೀಸುವಾಗ, ಕುಟ್ಟುವಾಗ, ನೇಯುವಾಗ ಇತರ ಎಲ್ಲ ಕೆಲಸಗಳನ್ನು ಮಾಡುವಾಗ ಅವರಿಗೆ ಹಾಡೇ ಸಂಗಾತಿ. ಆ ಹಾಡುಗಳಾದರೂ ಎಂಥದ್ದು. ಇನ್ನು ಮದುವೆ, ಮುಂಜಿ, ನಾಮಕರಣ, ಹಸೆ ಇತ್ಯಾದಿ ಯಾವುದೇ ಶುಭಕಾರ್ಯವಿದ್ದರೂ ಅಲ್ಲಿ ಹಾಡು ಇದ್ದೇ ಇರಬೇಕು. ಕಡೆಗೆ ಸಾವಿನ ಸಂದರ್ಭದಲ್ಲೂ ಕೌಡಿ ಹೇಳುವ (ಸತ್ತವರ ಗುಣಗಾನ ಮಾಡುವುದು) ಹಾಡುಗಾರಿಕೆ ಇದ್ದೇ ಇರುತ್ತದೆ.
ನಮ್ಮ ಜನಪದರು ದೈವಭಕ್ತರು. ಅವರ ಕಣ್ಣಲ್ಲಿ ನಿಸರ್ಗವೇ ದೈವ. ಭೂಮಿತಾಯಿಯೇ ಅವರ ಮೊದಲ ದೈವ. ಬೆಳಗಾಗಿ ಎದ್ದು ಅವರು ಎಳ್ಳು ಜೀರಿಗೆ ಬೆಳೆಯೋ ಭೂಮಿ ತಾಯಿಯನ್ನೇ ನೆನೆಯುತ್ತಾರೆ. ಹೆಚ್ಚಿನ ಹಾಡುಗಳನ್ನು ರಚಿಸಿದವರು ಮಹಿಳೆಯರು. ಅವರಿಗೆ ತಮ್ಮ ಜವಾಬ್ದಾರಿಗಳ ಅರಿವುಂಟು. ತವರಿನ ಸುಖ, ಸೇರಿದ ಮನೆಯ ತಾಪತ್ರಯಗಳು ಎಲ್ಲದರ ಅರಿವುಂಟು. ಪುರುಷ ಪ್ರಧಾನ ಸಂಸ್ಕೃತಿಯಲ್ಲಿ ಮಹಿಳೆ ಸಿಕ್ಕಿಕೊಂಡ ಕಟ್ಟುಪಾಡುಗಳಿಂದ ಹೊರಗೆ ಬರುವುದು ಕಷ್ಟ. ಹೀಗಾಗಿ ತಮ್ಮ ನೋವು, ಸಂಕಟಗಳನ್ನೆಲ್ಲ ಜಾನಪದ ಹೆಣ್ಣುಮಕ್ಕಳು ಹಾಡುಗಳಲ್ಲೇ ಹೇಳಿ ಹಗುರಾಗುತ್ತಿದ್ದರು.
ನಮ್ಮ ಜನಪದರು ಎಷ್ಟು ಸೃಜನಶೀಲರಾಗಿದ್ದರು, ಕಲೆಯ ಉಪಾಸಕರಾಗಿದ್ದರು ಎಂಬುದಕ್ಕೆ ಈ ಹಾಡುಗಳೇ ಸಾಕ್ಷಿ. ಅವರ ಇಡೀ ಬದುಕೇ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿತ್ತು. ಅವರು ನಿಜವಾದ ಮಣ್ಣಿನ ಮಕ್ಕಳು, ಪ್ರಕೃತಿಯ ಮಕ್ಕಳು.
ಆದರೆ ಇವತ್ತು ಏನಾಗಿದೆ?
ದೊಡ್ಡ ದೊಡ್ಡ ನಗರಗಳಲ್ಲಿ ಮಾಲ್ ಸಂಸ್ಕೃತಿ, ಎಲ್ಲೆಲ್ಲೂ ಕೊಳ್ಳುಬಾಕರ ಜನಜಂಗುಳಿ. ಪಿಡ್ಜಾ ಹಟ್‌ಗಳು, ಮ್ಯಾಕ್ ಡೊನಾಲ್ಡ್‌ಗಳು, ಕಾಫಿ ಡೇಗಳು, ಬರಿಸ್ತಾಗಳು, ಮಲ್ಟಿಪ್ಲೆಕ್ಸ್ ಥೇಟರುಗಳು ಗಲ್ಲಿಗಲ್ಲಿಗಳಲ್ಲಿ ತುಂಬಿಕೊಂಡಿವೆ. ಬೆಂಗಳೂರಿನಂಥ ಹೈಟೆಕ್ ನಗರಗಳಲ್ಲಿ ಎಗ್ಗಿಲ್ಲದಂತೆ ಲೈವ್ ಬ್ಯಾಂಡ್‌ಗಳು, ಡಿಸ್ಕೋಥೆಕ್‌ಗಳು, ಡಾನ್ಸ್ ಬಾರ್‌ಗಳು ನಮ್ಮ ಯುವ ಸಮುದಾಯವನ್ನು ಮನರಂಜಿಸುವ ಕೆಲಸದಲ್ಲಿ ತೊಡಗಿವೆ. ಎಲ್ಲ ವಿದೇಶಿ ಸಂಗೀತದ-ಕುಣಿತದ ಅಮಲು. ತೊಟ್ಟಿಲು, ತವರುಬಣ್ಣ, ಮಣ್ಣು, ಭೂಮಿತಾಯಿ, ಬೀಸಣಿಕೆ, ಮಲ್ಲಿಗೆ, ಹೊಳೆ, ಕೆರೆ, ಎಮ್ಮೆ, ಹಸು, ಗದ್ದೆ, ಪೈರು, ಪಚ್ಚೆ ಇದ್ಯಾವುದೂ ನಮ್ಮ ಆಸಕ್ತಿಯ ವಿಷಯಗಳಾಗಿಲ್ಲ. ಮನೆಗಳಲ್ಲಿ ಅಪ್ಪ-ಅಮ್ಮ ಮಕ್ಕಳು ಇಷ್ಟೇ ಜನರ ಕುಟುಂಬ. ಆ ಮಕ್ಕಳಿಗೆ ಅಜ್ಜ-ಅಜ್ಜಿಯೂ ಗೊತ್ತಿಲ್ಲ, ಅತ್ತಿಗೆ-ನಾದಿನಿ ಇತ್ಯಾದಿಗಳ ಅರ್ಥವೂ ಗೊತ್ತಿಲ್ಲ. ಅಪ್ಪ, ಅಮ್ಮ ಹೊರತಾಗಿ ನಮ್ಮ ಮಕ್ಕಳಿಗೆ ಜಗತ್ತಲ್ಲಿ ಉಳಿದವರೆಲ್ಲ ಆಂಟಿ-ಅಂಕಲ್ಲುಗಳೇ.

ಯಾಕಳುವಿ ನನ ಕಂದ
ಬೇಕಾದ್ದು ನಿನಗೇನು
ಬಾಕೆಮ್ಮೆ ಕರೆದ ನೊರೆ ಹಾಲು
ನೊರೆ ಹಾಲು ಕುಡಿಸಿದರ
ಗಪ್ಪು-ಚಿಪ್ಪಾಗಿ ಮಲಗ್ಯಾನ..


ಅತ್ತರೆ ಅಳಲವ್ವ
ಈ ಕೂಸು ನಮಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ
ಮಕ್ಕಳಿರಲವ್ವ ಮನೆತುಂಬ..

ಇದು ತಾಯಿ-ಮಕ್ಕಳ ಅನುಬಂಧ. ಆದರೆ ಇವತ್ತು ನಗರಗಳ ಮಕ್ಕಳು ಕ್ರೀಚುಗಳಲ್ಲಿ ಬೆಳೆಯುತ್ತಿವೆ. ಕನ್ನಡದ ಕಂದಮ್ಮಗಳಿಗೆ ಕನ್ನಡವನ್ನೇ ಕಲಿಸುತ್ತಿಲ್ಲ. ಅಳುವ ಮಕ್ಕಳಿಗೆ ನೊರೆಹಾಲಲ್ಲ ದಕ್ಕುತ್ತಿರುವುದು; ನಿದ್ದೆ ಮಾತ್ರೆಗಳು!
ಕೆಟ್ಟಿರುವುದು ತಾಯಿ-ಮಗುವಿನ ಸಂಬಂಧ ಮಾತ್ರವಲ್ಲ. ಎಲ್ಲ ಸಂಬಂಧಗಳೂ ಹದಗೆಟ್ಟಿವೆ. ವಯಸ್ಸಾದ ಅಪ್ಪ-ಅಮ್ಮ ಮನೆಯಲ್ಲಿ ಇಟ್ಟುಕೊಳ್ಳಲಾಗದ ಮಕ್ಕಳ ಸಂಖ್ಯೆ ಹೆಚ್ಚುತ್ತಿವೆ. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ. ಅಲ್ಲಿ ವಾಸಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮನೆಗಳಲ್ಲಿ ಇರುವವರ ನಡುವೆಯೂ ನಿತ್ಯ ಕದನ. ಕೂಡಿ ಬಾಳುವ ಮನಸ್ಸನ್ನು ಎಲ್ಲರೂ ಕಳೆದುಕೊಂಡಿದ್ದೇವೆ. ಯಾವ ಬಾಂಧವ್ಯಕ್ಕೂ ಅರ್ಥ ಉಳಿಯುತ್ತಿಲ್ಲ.
ಜನಪದ ಸಂಸ್ಕೃತಿ ಉಳಿಯಬೇಕು ಎಂದು ಚೀರುವುದೂ ಈಗ ವ್ಯರ್ಥ ಪ್ರಯತ್ನ. ಯಾಕೆಂದರೆ ಹಳ್ಳಿಗಳಲ್ಲಿ ಜನರು ಉಳಿಯುತ್ತಿಲ್ಲ. ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ. ರೈತ ಸಂಕಷ್ಟಕ್ಕೆ ಸಿಲುಕಿದನೆಂದರೆ ಆತನ ಬದುಕನ್ನೇ ಅವಲಂಬಿಸುವ ಕೂಲಿ ಕಾರ್ಮಿಕರು, ಕುಶಲಕರ್ಮಿಗಳು ಇನ್ನಷ್ಟು ಸಂಕಟಕ್ಕೆ ಸಿಲುಕುತ್ತಾರೆ. ಬೆಳೆಯಿಲ್ಲ, ಬೆಳೆದ ಬೆಳೆಗೆ ಬೆಲೆಯಿಲ್ಲ. ಜಾಗತೀಕರಣದ ಸುಂಟರಗಾಳಿಗೆ ಸಿಕ್ಕು ಹಳ್ಳಿಗಳೇ ನಾಶವಾಗುತ್ತಿವೆ. ನಗರದ ಸುತ್ತಮುತ್ತಲ ಹಳ್ಳಿಗಳು ಆಧುನಿಕತೆಯ ಬಿರುಗಾಳಿಗೆ ಸಿಕ್ಕಿವೆ. ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳಿಗೆ, ಸರ್ಕಾರದ ಬೃಹತ್ ಯೋಜನೆಗಳಿಗೆ, ನುಣುಪಾದ ಅಗಲಗಲ ರಸ್ತೆಗಳಿಗಾಗಿ ರೈತರ ಜಮೀನುಗಳನ್ನು ನಾಶಪಡಿಸಲಾಗಿದೆ.
ಹಳ್ಳಿಗಳು ನಾಶವಾದಂತೆ ಆ ಹಳ್ಳಿಯ ಅನನ್ಯ ಸಂಸ್ಕೃತಿ, ಪರಂಪರೆ, ದೇವರು, ಜಾತ್ರೆ, ತೇರು, ಕುಣಿತ, ಹಾಡು, ಸಂಪ್ರದಾಯ ಎಲ್ಲವೂ ನಾಶವಾಗುತ್ತವೆ. ಹಳ್ಳಿ ತೊರೆದು ಪಟ್ಟಣ ಸೇರಿದವರಿಗೆ ಆ ಪಟ್ಟಣದ ಬದುಕಿನ ಜತೆ ಹೊಂದಿಕೊಳ್ಳುವ ಅನಿವಾರ್ಯತೆ. ಹೀಗಾಗಿ ಜಾನಪದ ಸಂಸ್ಕೃತಿಯೇ ನಾಶವಾಗುವ ಸ್ಥಿತಿ ತಲುಪಿದೆ.
ಜಾನಪದ ನಮ್ಮ ತಾಯಿಬೇರು. ನಾವು ಅದನ್ನೇ ಕಳೆದುಕೊಳ್ಳುತ್ತಿದ್ದೇವೆ, ತಬ್ಬಲಿಗಳಾಗುತ್ತಿದ್ದೇವೆ. ತಾಯಿಯಿಲ್ಲದ ಮಕ್ಕಳ ನೋವು ಏನೆಂಬುದನ್ನೂ ನಮ್ಮ ಜನಪದರು ಹೇಳಿದ್ದಾರೆ.
ತಾಯಿಲ್ದ ಮಕ್ಕಳಿಗೆ ಬಾಯಿಲ್ಲ ಸಿರಿಯಿಲ್ಲ
ಬಾ ಎಂದು ಕರಿವಾರು ಯಾರಿಲ್ಲದಾಯ್ತೆ ಅಬ್ಬಯ್ಯ
ಹಾಲ ಕುಡಿಸುವರ‍್ಯಾರು ಅನ್ನ ಉಣಿಸುವರ‍್ಯಾರು
ಓಡಿ ನಾವು ಬೀಳಾಲು ಎತ್ತುವರ‍್ಯಾರು ಅಬ್ಬಯ್ಯ
ನಮ್ಮ ನೆಲದ ಸಂಸ್ಕೃತಿಯನ್ನು ಕಳೆದುಕೊಂಡ ನಮಗೆ, ನಮ್ಮ ಮುಂದಿನ ಪೀಳಿಗೆಗೆ ಬಾಯಿಯೂ ಇರದು, ಸಿರಿಯೂ ಇರದು. ನಮಗೆ ಹಾಲು ಕುಡಿಸುವರೂ ಇಲ್ಲ, ಅನ್ನ ಉಣಿಸುವರೂ ಇಲ್ಲ, ಬಾ ಎಂದು ಕರೆಯುವವರು ಮೊದಲೇ ಇಲ್ಲ. ಓಡಿ ಬಿದ್ದರೆ ನಮ್ಮ ಎತ್ತುವವರೂ ಇಲ್ಲ.
ಇದು ನಮಗೆ ಒದಗಿ ಬಂದಿರುವ ದುರ್ಗತಿ.

ಜನಪದ ಮಹಿಳೆ

ಯು.ಎನ್. ಸಂಗನಾಳಮಠ


ಗ್ರಂಥಸ್ಥ ಅಕ್ಷರದ ಅರಿವು ಆರಂಭವಾಗುವ ಅವಕಾಶಕ್ಕೂ ಮುನ್ನ ಹುಟ್ಟಿಕೊಂಡ ಈ ಜನಪದ ಸಾಹಿತ್ಯ ಇತರರನ್ನು ಮೆಚ್ಚಿಸಲಿಕ್ಕಾಗಿ ಹುಟ್ಟಿದ್ದಲ್ಲ. ಜನಪದರು ತಾವು ಅನುಭವಿಸಿದ ನೋವು-ನಲಿವು, ದುಃಖ-ದುಮ್ಮಾನ, ಆಶೆ-ನಿರಾಶೆಗಳನ್ನು ಹೃದಯದಿಂದ ಹಾಡಿದರು, ಹೇಳಿದರು. ಅದು ಕಿವಿಯಿಂದ ಕಿವಿಗೆ ಹಾಡಾಗಿ, ಗೀತೆ, ಕಥೆ, ನೀತಿ, ಲಾವಣಿ, ಒಗಟು, ನಾಟಕ, ಚಿತ್ರ, ಶಿಲ್ಪ, ನಂಬಿಕೆ, ಆಚಾರ-ವಿಚಾರ ಸಂಪ್ರದಾಯ ಈ ರೀತಿ ವ್ಯಾಪಕವಾಗಿದೆ. ಇವರಲ್ಲಿ ಗ್ರಾಮೀಣ ಜನರ ಬದುಕು, ಜೀವನ, ಸಂಸ್ಕೃತಿ, ನಿಸರ್ಗ ಇವೆಲ್ಲ ಒಳಗೊಂಡಿರುತ್ತದೆ.
ಜನಪದ ಸಾಹಿತ್ಯದಲ್ಲಿ ಮಹಿಳೆಗೆ ಪ್ರಮುಖ ಸ್ಥಾನ. ಮಹಿಳೆ ಪತಿವ್ರತೆ, ಗರತಿ, ಉದಾರಿ, ತ್ಯಾಗಿಯ ಸ್ಥಾನದಲ್ಲಿ ಚಿತ್ರಿತಳಾಗಿದ್ದಾಳೆ. ಇವೆಲ್ಲವನ್ನು ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮುತ್ತೈದೆಯಾಗಿ, ದೇವತೆಯಾಗಿ ಹಲವು ರೂಪಗಳ ಮುಖಾಂತರ ಅಭಿವ್ಯಕ್ತಳಾಗುತ್ತಾಳೆ. ಹಾಗೆ ಮಹಿಳೆಯ ತಾಯ್ತನ, ಮುತ್ತೈದೆತನ, ದಾಪಂತ್ಯಜೀವನ, ತವರಿನ ಹಂಬಲ, ಸಹೋದರರ ವಾತ್ಸಲ್ಯ ಇವು ಒಂದು ಮುಖವಾದರೆ, ಬಂಜೆತನ, ವೈಧವ್ಯ, ವೇಶ್ಯಾತನ ಇವುಗಳ ಮುಖವೂ ಕಾಣುತ್ತದೆ. ಇವೆಲ್ಲ ಗರತಿಯ ಹಾಡುಗಳು. ಮಹಿಳೆ ತನ್ನ ಹಲವಾರು ಕಾಯಕಗಳಲ್ಲಿ ದಣಿವು ಆರಿಸಿಕೊಳ್ಳಲು ನಿವಾರಿಸಲು ಅನೇಕ ಹಾಡುಗಳನ್ನು ಹಾಡುತ್ತಿದ್ದಳು.
"ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳೆ| ಭೂಮಿತಾಯಿ|
ಎದ್ದೊಂದು ಗಳಿಗೆ ನೆನೆದೇನು"
ಎಂದು ಮುಂಗೋಳಿ ಕೂಗುವ ಮುನ್ನ ಎದ್ದು ನೆಲ ಸಾರಿಸಿ ರಂಗವಲ್ಲಿ ಇಟ್ಟು ತನ್ನ ಕೆಲಸಕ್ಕೆ ಹೋಗುವ ಮುನ್ನ ಕುಲದೈವ, ಭೂತಾಯಿಯನ್ನು ಸ್ಮರಣೆ ಮಾಡುತ್ತಾಳೆ. ಅನಂತರ
"ಅತ್ತೆ ಮಾವಗೆ ಶರಣು ಮತ್ತೆ ಗುರುವಿಗೂ ಶರಣು
ಮತ್ತೊಂದು ಶರಣು ಶಿವನಿಗೆ| ಒಪ್ಪವೆಂದು
ನಾ ಬಗ್ಗಿದೆ ಮನೆಯ ಕೆಲಸಕ್ಕೆ"
ಎಂದು ತನ್ನ ಕೆಲಸ ಪ್ರಾರಂಭಿಸುವಳು.
ಅಂದಿನ ಆಹಾರ-ಊಟ ತಯಾರಿಸುವ ಸಲುವಾಗಿ ಬೀಸುವ ಕಾರ್ಯ ಆರಂಭವಾಗುವುದು.
"ಶರಣೆಂಬೆ ಶಿವನಿಗೆ ಶರಣೆಂಬೆ ಗುರುವಿಗೆ
ಶರಣೆಂಬೆ ಶಿವನ ಮಡದಿಗೆ| ಗೌರಮ್ಮಗೆ
ಶರಣೆಂದು ಕಲ್ಲು ಹಿಡಿದೇನ||" ಎನ್ನುವಳು.
ಹೆಣ್ಣುಮಗಳು ಮದುವೆ ಆಗಿ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ ತಾಯಿ ತನ್ನ ಮಗಳಿಗೆ ಕೆಲವು ಜೀವನ ಮೌಲ್ಯಗಳನ್ನು ಉಪದೇಶಿಸುವಳು. ಎಷ್ಟೇ ಕಷ್ಟಗಳು ಕುತ್ತಿಗೆವರೆಗೂ ಬಂದರೂ ತಾಳ್ಮೆಯಿಂದ ಸಹಿಸಿಕೊಳ್ಳಬೇಕು ಎಂದು ಕುತ್ತಿಗೆಗೆ ತಾಳಿ ಕಟ್ಟುವರು ಎಂಬರ್ಥದಲ್ಲಿ ತಿಳುವಳಿಕೆ ಹೇಳುವಳು. ಇದರ ಜೊತೆಗೆ ಕೆಲವು ನೀತಿ ಮಾತುಗಳನ್ನು ಹೇಳುತ್ತಾಳೆ.
"ಕರಿಸೀರೆ ಉಡಬ್ಯಾಡ ಕಡಿವಾಣ ಬಿಡಬೇಡ
ನಡು ಓಣ್ಯಾಗ ನಿಂತು ನಗಬೇಡ| ನನ ಮಗಳೆ
ತವರಿಗೆ ಮಾತ ತರಬೇಡ"

"ಮಾತ್ಗಂಟಿ ಮಗಳಲ್ಲ ತಾಟ್ಗಿತ್ತಿ ಸೊಸೆಯಲ್ಲ
ಧೂಪರದ ಚಕ್ಕಿ ಒಲೆಗಲ್ಲ| ತವರಿಗೆ
ಮಾತು ತಂದೋಳಲ್ಲ ಮಗಳಲ್ಲ

"ಅತ್ತೆ ಮಾವರಿಗಂಜಿ ಸುತ್ತೇಳು ನೆರೆಗಂಜಿ
ಮತ್ತೆ ಆಳುವ ದೊರೆಗಂಜಿ| ನನ ಮಗಳೆ
ಅತ್ತೀ ಮನೆಯೊಳಗ ಬಾಳವ್ವ

"ನೆರೆಮನೆಯ ಸಿರಿದೇವಿ ನೀನಾಗು ಮಗಳೆ
ಮನೆಯಾಗ ಭೇದಬಗಿಬಾಡ| ಮಗಳೆ
ತುಂಬಿದ ಮನೆಯ ಒಡಿಬಾಡ||

"ಅತ್ತೆ ಮನೆಯಲಿ ಮುತ್ತಾಗಿ ಇರಬೇಕು
ಹೊತ್ತಾಗಿ ನೀಡಿದರೂ ಉಣಬೇಕು| ಮಗಳೆ
ತವರಿಗೆ ಹೆಸರು ತರಬೇಕು"

"ಗಂಡನೇ ಗುರು ಅವ್ವ ಗಂಡನೇ ದೇವರು ಕೇಳು
ಗಂಡನೆ ಹೊರತು ಗತಿಯಿಲ್ಲ| ಹೆಣ್ಣಿಗೆ
ಗಂಡನೆ ಸಕಲ ಸೌಭಾಗ್ಯ
ಎಂದು ತವರು ಮನೆಗೆ ಒಳ್ಳೆಯ ಕೀರ್ತಿ ತರುವಂಥ ಮಗಳಾಗು ಎನ್ನುತ್ತಾರೆ. ಇದಕ್ಕೆ ಉತ್ತರವಾಗಿ...
"ತಾವರೆಯ ಗಿಡಹುಟ್ಟಿ ದೇವರಿಗೆ ನೆರಳಾಗಿ
ನಾಹುಟ್ಟಿ ಮನೆಗೆ ಎರವಾದೆ| ಹಡೆದವ್ವ
ನೀ ಕೊಟ್ಟ ಮನೆಗೆ ಹೆಸರಾದೆ" ಎಂದು ಹೇಳಿ
ಆ ರೀತಿ ಬಾಳಲು ಆಶಿಸುವಳು. ಗಂಡನ ಮನೆಗೆ ಹೊರಡುವ ಮುನ್ನ ತಾಯಿ ಕೊಟ್ಟ ಹೊಸ ಸೀರಿ ಉಟಗೊಂಡು ಇದ್ದಷ್ಟು ಬಂಗಾರದ ಆಭರಣ ಹಾಕಿಕೊಂಡು ತವರಿನ ಹೊಸ್ತಿಲಿಗೆ ನೀರು ಹಾಕಿ ಬಾಗಿ ಶರಣೆಂದು ’ತವರಿಗೆ ಯಶಸ್ಸು ಸಿಗಲಿ’ ಅಂತ ಹರಕೆ ಕೊಟ್ಟು ಹೋಗುತ್ತಾಳೆ.
ಆಗ ತಾಯಿ ತನ್ನ ಮಗಳಿಗೆ ಸಂಸ್ಕಾರಯುತವಾದ ಮಾತುಗಳನ್ನು ಹೇಳುತ್ತಾಳೆ. ಆದರೆ ಇಂದಿನ ಸಂದರ್ಭದಲ್ಲಿ ಇವೆಲ್ಲ ಮರೆಯಾಗಿ, ಮನಸ್ಸು ಮನೆಯನ್ನು ಒಡೆಯುವ ಚತುರ ಮಾತುಗಳನ್ನು ಭಿತ್ತುವಳು. ಇಂದಿನ ಹೆಣ್ಣು ಮಕ್ಕಳಲ್ಲಿ ತವರು ಮನೆಯವರು ಬಂದಾಗ ವರ್ತನೆಗಿಂತ, ಗಂಡಿನ ಮನೆಯವರು ಬಂದಾಗ ವರ್ತನೆ ಭಿನ್ನವಾಗಿರುತ್ತದೆ. ಹೀಗಾಗಿ ಮಗ ಮದುವೆಯಾದ ಕೂಡಲೇ ತನಗೆ ಪರಕೀಯವಾದ ಎನ್ನುವ ಭಾವವು ಆ ತಾಯಿಗೆ ಮೂಡಿ
"ಹಾಲು ಬಾನ ಉಣಿಸಿ ಮಾರಿ ಸೆರಗಲಿ ಒರಸಿ
ನೀ ಯಾರಿಗ್ಯಾದೋ ನನ ಮಗನೆ| ಬಂದಂತೆ
ನಾರಿಗಾದ್ಯಲ್ಲೋ ಹಡದಪ್ಪ ಎಂದು ಹಲಬುತ್ತಾಳೆ. ಇಲ್ಲಿಯ ತಾಯಿಗೆ ಕರುಳಬಳ್ಳಿ ಕತ್ತರಿಸಿದ ಅನುಭವವಾಗಿದೆ.
ಪ್ರಾಪ್ತ ವಯಸ್ಕಳಾದೊಡನೆ ಗಂಡನ ಮನೆ ಪ್ರವೇಶಿಸುವ ಹೆಣ್ಣು ತನ್ನ ತವರು ಮನೆ ಅಗಲಿ, ತನ್ನ ನೋವನ್ನು ನುಂಗಿಕೊಂಡು ಹೊಸ ಮನೆಗೆ ಬಂದು, ಮಡದಿಯಾಗಿ, ಸೊಸೆಯಾಗಿ, ಅತ್ತಿಗೆ-ನಾದಿನಿ-ನೆಗಣ್ಣಿಯಾಗಿ, ಕುಟುಂಬದ ಸದಸ್ಯೆಯಾಗುತ್ತಾಳೆ. ತನ್ನ ಕೈ ಹಿಡಿದ ಗಂಡನ ಬಗ್ಗೆ-
"ಎಲ್ಲೆಲ್ಲಿ ನೋಡಿದರ ನಲ್ಲನಂಥವರಿಲ್ಲ
ಹಲ್ಲು ನೋಡಿದರ ಹವಳವ| ನಲ್ಲನ
ಸೊಲ್ಲು ಕೇಳಿದರ ಸಮಾಧಾನ"

"ಸರದಾರ ನಿಮ್ಮಿಂದ ಸರುವೆಲ್ಲ ಮರೆತೀನ
ಸರದಾರ ಇರುವ ಗುಳದಾಳಿ| ನಿಮ್ಮಿಂದ
ಸರುವ ಬಳಗೆಲ್ಲ ಮರೆತೀನ"

"ಅತ್ತೆ ಅತ್ತಿಕಾಯಿ ಮಾವ ಮಲ್ಲಿಗ್ಹೂವ
ಬಂಗಾರಕೋಲ ಹಿರಿಭಾವ| ನನಮನಿಯ
ಅರಸರು ಹಾರ ಪರಿಮಳ"

ಕೂಲಿ ಮಾಡಿದರೇನ ಕೋರಿ ಹೊತ್ತರೇನ
ನಮಗ ನಮರಾಯ ಜಡಮೇನ| ಬಂಗಾರ
ಮಾಲ ಇದ್ಹಾಂಗ ಮನಿಯಾಗ"
ಗಂಡನ ಮನೆಯಲ್ಲಿ ಪ್ರೀತಿ ವಿಶ್ವಾಸದ ಕೊರತೆಯಾಗದಿದ್ದರೆ ಅವಳ ಜೀವನಕ್ಕೆ ನೆಮ್ಮದಿ. ಕುಟುಂಬದ ನೆಮ್ಮದಿಯ ವಾತಾವರಣವಿದ್ದಾಗ ತವರ ಮನೆಯ ಕರೆ ಬಂದಾಗ ಅಗಲಿಕೆಯ ಅನಿವಾರ್ಯ ಪ್ರಸಂಗ ಬಂದಾಗ-
"ಹಚ್ಚಡದ ಪದರಾಗ ಅಚ್ಚಮಲ್ಲಿಗೆ ಹೂವ
ಬಿಚ್ಚಿ ನನಮ್ಯಾಗ ಒಗೆವಂಥ| ರಾಯರನ
ಬಿಟ್ಹಾಂಗ ಬರಲೇ ಹಡೆದವ್ವ ಎನ್ನುವಳು.
ದಾಂಪತ್ಯ ಜೀವನದಲ್ಲಿ ವಿರಸ ಸಹಜ. ’ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಂಗ’ ’ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’ ಈ ಗಾದೆಗಳು ಬಹಳ ಹಿಂದಿನಿಂದಲೂ ಪ್ರಚಲಿತವಾಗಿವೆ. ಈಗ "ಗಂಡ ಹೆಂಡಿರ ಜಗಳ ಡೈವೋರ್ಸ್ ತನಕ" ಆಗ ಗಂಡ ಸಿಟ್ಟು ಮಾಡಿದಾಗ-
"ಬಟ್ಟಲಗಣ್ಣೀಲಿ ದಿಟ್ಟಿಸಿ ನೋಡ್ಯಾರ
ಸಿಟ್ಟ್ಯಾಕೋ ರಾಯ ನನಮ್ಯಾಗ| ನಾ ಅಂಥ
ಹುಟ್ಟಿಸ್ಯಾಡವರ ಮಗಳಲ್ಲ
ತಾನೂ ಪ್ರಾಮಾಣಿಕ ಮನೆತನದಿಂದ ಬಂದವಳು ಅನುಮಾನ ಇರಬಾರದು ಎಂದು ಭಾವ ವ್ಯಕ್ತವಾಗುವುದು. ಆದರೂ ಸಿಟ್ಟು ಇಳಿಯದಿದ್ದಾಗ-
ಕಟ್ಟಾಣಿ ಗುಂಡೀಗಿ ಸಿಟ್ಟು ಮಾಡಲಿ ಬೇಡ
ಬಿಟ್ಟು ಬಂದದೆ ಬಳಗೆಲ್ಲ| ಪತಿರಾಯ
ಕಟ್ಟ್ಯಾರ ತಮ್ಮ ಪದರಾಗ" ಎನ್ನುವಳು.
ಹೀಗೆ ಗಂಡನೇ ದೇವರು ಸರ್ವಸ್ವ ಎಂದಾಗ ಓರ್ವ ಹೆಣ್ಣು ಮಗಳು ಬಂದು ಚಾಡಿ ಹೇಳುವಳು.
"ಚಿಂತಾಕ ಇಟಗೊಂಡು ಚಿಪ್ಪಾಡಿ ಬಳಿವಾಕೆ
ಚಿಂತಿಲ್ಲ ಏನ ನಿನಗಿಷ್ಟು| ನಿನ ಗಂಡ
ಅಲ್ಲೊಬ್ಬಳ ಕೂಡ ನಗುತಿದ್ದ"
ಆಗ ತನ್ನ ಗಂಡನ ಬಗ್ಗೆ ಸಿಟ್ಟು ಬಂದರೂ ಅದನ್ನು ತೋರಿಸದೇ-
"ನಕ್ಕರೆ ನಗಲೆವ್ವ ನಗಿ ಮುಖದಿ ಕ್ಯಾದಿಗಿ
ನಾ ಮುಚ್ಚಿ ಮುಡಿವ ಪರಿಮಳದ| ಆ ಹೂವ
ಅವಳೊಂದು ಗಳಿಗೆ ಮುಡಿಯಲಿ" ಎಂದು ತನ್ನ ಗಂಡನ ಬಗ್ಗೆ ಅಸೂಯೆ ಏಕೆ ಎನ್ನುವ ಭಾವದಲ್ಲಿ ಈ ರೀತಿ ಹೇಳುವಳು.
ಮುಂದೆ ಇಂಥ ಪ್ರಮಾದವಾಗದಿರಲಿ ಎಂಬ ಎಚ್ಚರಿಕೆಯಿಂದ ಗಂಡ ಮನೆಗೆ ಬಂದಾಗ
"ಎಲ್ಲಿ ಹೋಗಿದ್ದಿ ರಾಯ ಸೆಲ್ಲ್ಯಾಕ ಮಾಸೇದ
ಅಲ್ಲೊಬ್ಬಳ ಕೂಡ ಸಲಗೀಯ| ಮಾಡಿ
ಇಲ್ಲೆಂಬುದೇನ ನನಮುಂದೆ" ಎಂದು ಗಂಡನಿಗೆ ಸತ್ಯ ಹೇಳಲು ಒತ್ತಾಯಿಸುತ್ತಾಳೆ. ಹಾಗೆ ಅಂಥ ಪ್ರಸಂಗ ಬಂದಾಗ ಗಂಡನಿಗೆ ನೀತಿ ಪಾಠ ಹೇಳುವಳು-
"ಅಂಗಿಯ ಮ್ಯಾಲಂಗಿ ಛಂದೇನೋ ನನರಾಯ
ರಂಭೀಯ ಮ್ಯಾಲ ಪ್ರತಿರಂಭಿ | ಬಂದಾರ
ಛಂದೇನೋ ರಾಯ ಮನಿಯಾಗ"
ತಾನೇ ರಂಭೆ, ಊರ್ವಶಿ ಎಂಬುದನ್ನು ಒತ್ತಿ ಹೇಳುತ್ತ ’ರಂಭಿಯ ಮ್ಯಾಗ ಪ್ರತಿರಂಭಿ ಏಕೆ ಎನ್ನುವಳು. ಗಂಡನನ್ನು ಸರಿ ದಾರಿಗೆ ತರಲು ಪ್ರೀತಿ-ಶಾಸ್ತ್ರ ಮೇಲು ಎಂಬುದನ್ನು-
"ಹಣ್ಣ ಹಾಗಲಕಾಯಿ ಎಣ್ಣ್ಯಾಗ ಕರಿದೀನಿ
ಉಂಡಾರೆ ನೋಡು ಸವಿಗಾರ| ನನಮ್ಯಾಗ
ತಂದರೆ ನೋಡು ಸವತೀನ"
ಇಲ್ಲಿ ಸವತಿ ಎಂದರೆ ವಿಷದ ಮರಿ ಹಾವು ಎಂಬ ಅಭಿಪ್ರಾಯ. ಹಾಗೆ ಪರಸ್ತ್ರೀ ಸಹವಾಸ ಮಾಡಿದ ಗಂಡಿನ ಕುರಿತು ಹಳ್ಳಿಯ ಜನಪದರು-
"ವಾರಿ ರುಂಬಾಲು ಸುತ್ತಿ ದಾರ‍್ಯಾಗ ನಿಂತಿದ್ದು
ಹ್ವಾರ‍್ಯಾ ಇಲ್ಲೇನೋ ಮನಿಯಾಗ| ನನ ತಮ್ಮ
ನಾರಿಯಿಲ್ಲೋನೋ ಮನಿಯಾಗ" ಎಂದು ಹೆಂಡತಿಯ ನೆನಪು ಮಾಡುವರು. ಕೆಲಸದ (ಹ್ವಾರ‍್ಯಾ) ನೆನಪು ಮಾಡುವರು. ಮತ್ತು ಒಂದು ನೀತಿ ಮಾತು ಹೇಳುವರು.
"ಹೆಣ್ಣೆಂದು ರಾವಣ ಮಣ್ಣು ಮುಕ್ಕಿದವನಯ್ಯ
ಹೆರವರ ಹೆಣ್ಣು ಬಯಸದೆ| ಲಗ್ನದ
ಸತಿಯೊಡನೆ ಸುಖದಿ ಬಾಳಣ್ಣ" ಎನ್ನುವರು.

’ತಾಯಿ ಇದ್ದರೆ ತವರು| ತಂದೆ ಇದ್ದರೆ ಬಳಗ
ಪತಿ ಇದ್ದರೆ ಮುತ್ತೈದೆತನ’ ಎಂಬ ಮಾತುಗಳಿವೆ.
‘ತಾಯಿಯೇ ದೇವರು’ ಈ ವೇದವಾಕ್ಯ ಗೃಹಿಣಿ ಕಂಡ ಸತ್ಯ.
"ಕಾಶಿಗೆ ಹೋಗಾಕ ಏಸೊಂದ ದಿನ ಬೇಕ
ತಾಸ್ಹೊತ್ತಿನ್ಹಾದಿ ತವರೂರ| ಮನಿಯಾಗ
ಕಾಶಿ ಕುಂತಾಳ ಹಡೆದವ್ವ
ತವರು ಮನೆ ಅವಳಿಗೆ ಕಾಶಿಯ ಪುಣ್ಯಕ್ಷೇತ್ರ.
ತನ್ನ ತವರಮನಿ ತನ್ನ ರಕ್ತಸಂಬಂಧ ಸುಖವಾಗಿರಲೆಂದು ಆಶಿಸುವಳು.
"ತವರ ಮನಿಯ ದೀಪ ತವಕೇರಿ ನೋಡೇನ
ಹತ್ತು ಬೆರಳ್ಹಚ್ಚಿ ಶರಣೆಂದೆ| ತಮ್ಮಂದಿರು
ಜಯವಂತರಾಗಿ ಇರಲೆಂದೆ"
ತಾಯಿಗೆ ಯಾರೂ ಸರಿಯಿಲ್ಲವೆಂದು
"ಯಾರೂ ಇದ್ದರು ನನ್ನ ತಾಯವ್ವನ್ಹೋಲಾರ
ಸಾವಿರ ಕೊಳ್ಳಿ ಒಲಿಯಾಗ| ಇದ್ದರು
ಜ್ಯೋತಿ ನೀನ್ಯಾರು ಹೋಲರು"
ಜ್ಯೋತಿ ಸ್ವರೂಪಳಾದ ತಾಯಿಗೆ ಯಾರೂ ಸಮನಲ್ಲ. ತವರಿನ ತುಂಬಿದ ಮಾವಿನ ಮರ ಎಂದರೆ ತಾಯಿ. ತಾನು ತಾಯಿಯ ಕರುಳಿನ ಕುಡಿ ಎಂದು.
"ಕಣ್ಣೆಂಜಲ ಕಾಡಿಗೆ ಬಾಯೆಂಜಲ ವೀಳ್ಯವ
ಯಾರೆಂಜಲುಂಡಿ ನನ ಮನವೆ| ಹಡೆದವ್ವ
ಬಾಯೆಂಜಲುಂಡು ಬೆಳೆದೇನ"
ತಾಯಿಯ ಬಾಯ ಎಂಜಲವನ್ನುಂಡು ಬೆಳೆದ ಬಗೆಯನ್ನು ಕೃತಜ್ಞತೆಯಿಂದ ಸ್ಮರಿಸುವಳು.
ತಾಯಿಯ ಮಹತ್ವವನ್ನು ಈ ರೀತಿ ಹೇಳುವಳು.
"ಉಂಗುರ ಉಡುದಾರ ಮುರಿದರ ಮಾಡಿಸಬಹುದು.
ಮಡದಿ ಸತ್ತರ ತರಬಹುದು| ಹಡೆದ
ತಂದೆ-ತಾಯಿಯೆಲ್ಲಿ ಸಿಕ್ಕಾರ" ಎನ್ನುವರು.
ಪ್ರತಿಯೊಂದು ಹೆಣ್ಣಿಗೂ ತಾನು ಹುಟ್ಟಿ ಬೆಳೆದು ಆಡಿದ ತವರಿಗೆ ಹೆಸರು ತರಬೇಕೆಂಬ ಆಶೆ-
"ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾಗಿ
ನಾ ಹುಟ್ಟಿ ಮನೆಗೆ ಎರವಾದೆ| ಹಡೆದವ್ವ
ನೀ ಕೊಟ್ಟ ಮನೆಗೆ ಹೆಸರಾದೆ" ಎನ್ನುವಳು.
ಆ ರೀತಿ ಬಾಳಲು ಅಪೇಕ್ಷಿಸುತ್ತಾಳೆ. ಅವಳಿಗೆ ’ತಾಯ್ತನ’ ಪಟ್ಟ ಸಿಕ್ಕಾಗ ಬದುಕು ಸಾರ್ಥಕವಾಗುತ್ತದೆ. ಮಕ್ಕಳನ್ನು ಪಡೆಯುವುದೇ ಅಂತಿಮಗುರಿ. ಹೆಣ್ಣು ಹೆತ್ತಾಗಲೇ ಬಂಜೆತನ ನೀಗುತ್ತದೆ.
"ಅರಗಿನಂಥ ತಾಯಿ ಮರದಂಥ ಮಕ್ಕಳು
ಕರಗಿದರ ಬೆಣ್ಣೆ ತಿಳಿತುಪ್ಪ| ದಂಥಕಿ
ಕರಗದಂಥ ತಾಯಿ ಇರಬೇಕು"
ಮಕ್ಕಳಿಗಾಗಿ ಶಿವನನ್ನು ಈ ರೀತಿ ಪ್ರಾರ್ಥಿಸುವಳು.
"ಮಕ್ಕಳ ಕೊಡು ಶಿವನೇ ಬಾಳ ಮಕ್ಕಳಿರಲಿ
ಮ್ಯಾಗ ಗುರುವಿನ ದಯವಿರಲಿ| ನನ ಗುರುವೆ
ಬಡತನದ ಚಿಂತೆ ನನಗಿರಲಿ||
ಮಕ್ಕಳಿದ್ದರೆ ಗರತಿಗೆ ಮತ್ತೇನೂ ಬೇಡ-
"ಕೂಸಿದ್ದ ಮನೆಗೆ ಬೀಸಣಿಕೆ ಯಾತಕ
ಕೂಸು ಕಂದಯ್ಯ ಒಳಹೊರಗ| ಸುಳಿದಾರೆ
ಬೀಸಣಿಕೆ ಗಾಳಿ ಸುಳಿದಾಂಗ" ಎಂಥ ಸುಂದರಗೀತೆ.
ಹೆಣ್ಣಿನ ಜನುಮಕ ಬಂಜೆತನ ಶಾಪ ಎಂಬುದನ್ನು
"ಬಾಲಕರಿಲ್ಲದ ಬಾಲಿದ್ಯಾತರ ಜನುಮ
ಬಾಡಿಗೆಯ ಎತ್ತು ದುಡಿದ್ಹಾಂಗ| ಬಾಳೆಲೆಯ
ಹಾಸುಂಡು ಬೀಸಿ ಬಗೆದ್ಹಾಂಗ|| ಎನ್ನುತ್ತಾಳೆ.
ಅವಳಲ್ಲಿ ಬಸಿರ-ಬಯಕೆ ಪ್ರಾರಂಭವಾದಾಗ
"ಬಸಿರ ಬಯಕೆ ಚಂದ ಹಸಿರು ಕುಪ್ಪಸ ಚಂದ
ನಸುಗೆಂಪಿನವಳ ನಗೆ ಚೆಂದ| ನನ ಮಗಳು
ಬಸುರಾದರೆ ಚಂದ ಬಳಗಕ" ಎಂದು ತಾಯಿ ಹಂಬಲಿಸುವಳು. ತಾಯ್ತನ ಪಡೆದ ಹೆಣ್ಣು ತನ್ನ ಕನಸಿನ ಕೂಸಿನ ಅಂದ ಚಂದಕ್ಕೆ ಹಾಡಿನ ಸುಗ್ಗಿಯೇ ಹರಿಯುತ್ತದೆ.
"ಜೋಗುಳ ಹಾಡಿದರ ಆಗಲೇ ಕೇಳ್ಯಾನ
ಹಾಲ ಹಂಬಲ ಮರೆತಾನ| ಕಂದನ
ಜೋಗುಳದಾಗ ಅತಿ ಮುದ್ದ"
"ಅತ್ತಾನ ಕಾಡ್ಯಾಗ ಮತ್ತೇನು ಬೇಡ್ಯಾನ
ಮೆತ್ತ ಮೆತ್ತನ್ನ ದಿಂಭವ| ಕೊಟ್ಟರೆ
ಗುಪ್ಪು ಚಿಪ್ಪಾಗಿ ಮಲಗ್ಯಾನೆ"
"ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿಹುಬ್ಬು ಬೇವಿನೆಸಳಂಗೆ| ಕಣ್ಣೋಟ
ಶಿವನ ಕೈಯಲಗು ಹೊಳೆದ್ಹಂಗ"
"ಹಾಲಬೇಡಿ ಅತ್ತಾನ ಕೋಲಬೇಡಿ ಕುಣಿದಾನ
ಮೊಸರಬೇಡಿ ಕೆಸರ ತುಳಿದಾನ| ಕಂದನ
ಕುಸುಲಾದ ಗೆಜ್ಜಿ ಕೆಸರಾಗಿ" ಹಾಗೆ
"ಕೂಸ ಕಂದಯ್ಯ ತೊಡಿಮ್ಯಾಗ ಆಡಿದರ ಬಂದ
ಬ್ಯಾಸರಕಿ ಬಯಲಾಯ್ತು" ಎನ್ನುವಳು.
ವಂಶ ಬೆಳೆಸುವ ಹತ್ತು ಮಂದಿಯನ್ನು ಹೆತ್ತರೂ ತಾಯ್ತನದ ಮಾನ್ಯತೆ ತಾಯಿಗೆ ದೊರೆಯದು. ಹೆಣ್ಣು ಹೆತ್ತಾಗಲೇ ಬಂಜೆತನ ನೀಗುವುದು.
"ಹತ್ತು ಗಂಡ್ಹೆಡೆದರೂ ಮತ್ತೆ ಬಂಜೆಂಬರು
ದಟ್ಟಿಯ ಉಡುವ ಧರಣೀಯ| ಹಡೆದರ
ಹೆತ್ತಾಯಿಯೆಂದು ಕರೆದಾರ"
"ನಾಕು ಮಕ್ಕಳ ಕೊಟ್ಟು ಸಾಕು ಮಾಡೋ ಶಿವನೇ
ನಾಕರ ಮ್ಯಾಲೆ ಆರತಿ ಹಿಡಿಯೋಕೆ
ನಾರಿಯ ಕೊಟ್ಟು ಕಡೆ ಮಾಡೋ"
ತಾಯಿಗೆ ತನ್ನ ಕಂದನು ಚೆನ್ನಾಗಿ ರೂಪುಗೊಳ್ಳುವ ಚಿಂತನೆ ಹದುಳ ಹಾರೈಕೆಯ ಸಂದೇಶ ಇಲ್ಲಿದೆ-
"ಆಚಾರಕ್ಕರಸಾಗು ನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗು| ನನಕಂದ
ಜ್ಯೋತಿಯೆ ಆಗು ಜಗಕೆಲ್ಲ ಎಂದು ಹಾರೈಸುವಳು.
ಬಂಜೆಯ ಬದುಕನ್ನು ಜನಪದರು ಈ ರೀತಿ ಹೇಳುತ್ತಾರೆ.
"ಬಂಜೆ ಬಾಗಿಲ ಮಂದೆ ಅಂಜೂರ ಗಿಡ ಹುಟ್ಟಿ
ಟೊಂಗಿ ಟೊಂಗೆಲ್ಲ ಗಿಳಿ ಕುಂತು| ಹೇಳ್ಯಾವ
ಬಂಜೆಯ ಬದುಕು ಹೆರವರಿಗೆ" ಎಂದು ಬಂಜೆಯ ನಿಂದನೆ ಕೇವಲ ಮನುಷ್ಯರಿಂದಲ್ಲ ಪಶುಪಕ್ಷಿಗಳಿಂದ ಸಹ ಎಂಬುದನ್ನು ಈ ಪದ್ಯ ಹೇಳುತ್ತದೆ.
ತಾಯಿ ತನ್ನ ಅಳುವ ಕಂದನನ್ನು ಹಲವು ರೀತಿಯಿಂದ ಸಮಾಧಾನ ಪಡಿಸುತ್ತಾಳೆ. ಮಗುವಿಗೆ ಈ ಪ್ರಾಸಬದ್ಧ ಹಾಡು ಮೋಜಿನ ಸಂಭ್ರಮ ತರುತ್ತದೆ.
ಆನಿ ಬಂತೊಂದು ಆನಿ| ಇದ್ಯಾವೂರ ಆನಿ|
ಹಾದಿ ತಪ್ಪಿ ಬಂದಿತ್ತ| ಹಾವಿಗೊಂದು ದುಡ್ಡು|
ಬೀದಿಗೊಂದು ದುಡ್ಡು| ಅದೂ ದುಡ್ಡು ಕೊಟ್ಟು|
ಸೇರ ಕೊಬ್ರಿ ತಂದು| ಲಡಾ ಲಡಾ ಮುರಿದು|
ಎಲ್ಲಾರಿಗೂ ಕೊಟ್ಟು| ಕಂದನ ಬಾಯಾಗ ಬಟ್ಟು| ಬಟ್ಟು ತೊಡೆಯ ಮೇಲೆ ಆನಿ ಆಡಿಸಿ, ಕೊಬ್ರಿ ತಂದು ಎಲ್ಲರಿಗೂ ಹಂಚಿ, ಕಂದನ ಹಲ್ಲು ಮೂಡದ ಬಾಯಿಗೆ ಕೊಬ್ರಿ ಕೊಡದೇ ಅದಕ್ಕೆ ಅದರ ಬೆರಳನ್ನೇ ಚೀಪಿಸುತ್ತಾಳೆ.
ಮಳೆಗಾಲದ ಸಮಯದಲ್ಲಿ
ಗುಡುಗುಡು ಮುತ್ಯಾ ಬಂದಾನೋ
ಬೆಣ್ಣಿ-ರೊಟ್ಟಿ ತಂದಾನೋ ಎಂದು ಗುಡುಗಿನ ಭಯವನ್ನು ನಿವಾರಿಸುವಳು.
ತನ್ನ ಮಗುವನ್ನು ಕುರಿತು
"ಅತ್ತು ಕಾಡುವವನಲ್ಲ ಹಸ್ತರುಂಬುವವನಲ್ಲ
ಲಕ್ಷಣವಂತ ಗುಣವಂತ| ತಮ್ಮಯ್ಯ
ಲಕ್ಷಣಕ ಲಕ್ಷ್ಮಿ ಒಲಿದಾಳೋ" ಎಂದು ಹರ್ಷಿಸುವಳು.
ಅಳು ನಿಲ್ಲಿಸದ ಮಗುವನ್ನು ಕುರಿತು
"ಬಾಳ ನೀ ಅಳದಿರು| ಬಾಗಿಲಿಗೆ ಬರದಿರು|
ಬಾಳೆಯೊಳಗಿನ ತಿಳಿನೀರು| ತಕ್ಕೊಂಡು
ಬಾಳ ನಿನ್ನ ಮಾರಿ ತೊಳೆದೇನು"
ಆಡುವಾಗ ಕೊಳೆಯಾದರೂ ಚಿಂತೆ ಬೇಡ ಎಂದು
"ಆಡಿ ಬಾ ನನ ಕಂದ ಅಂಗಾಲ ತೊಳೆದೇನು
ತೆಂಗಿನಕಾಯಿ ತಿಳಿನೀರ| ತಕ್ಕೊಂಡು
ಬಂಗಾರದ ಪಾದ ತೊಳೆದೇನು" ಎನ್ನುವಳು.
ಯಾರಾದರೂ ಮಗ "ಅಳಬುರುಕ’ ಎಂದರೆ ಬೇಸರಿಸದೇ
"ಅತ್ತರ ಅಳಲವ್ವ ಈ ಕೂಸು ನನಗಿರಲಿ
ಕೆಟ್ಟರೆ ಕೆಡಲಿ ಮನೆಗೆಲಸ| ಕೆಟ್ಟರು
ಮತ್ತೊಮ್ಮೆ ಮಾಡಿ ಮುಗಿಸೇನಿ" ಎಂದು ಮಕ್ಕಳ ಭಾಗ್ಯದ ಶ್ರೇಷ್ಠತೆ ತೋರುವಳು.
"ಕಂದಯ್ಯ ಅತ್ತರ ಕಣಗೀಲ ಕಾಣತಾವ
ಒಣಗಿದ್ದ ಬಾಳೆ ಚಿಗಿತಾವ| ಬರಡು
ಆಕಳೆಲ್ಲ ಹಯನಾಗಿ"
ಮಗು ಅಳಲಿ-ನಗಲಿ ಅದು ಮನೆಯ ದೀಪ. ಬದುಕಿನ ಬವಣೆ ತೀರಿಸುತ್ತದೆ.
"ಜನಕರಾಯನ ಮಗಳು ವನಕ ತೊಟ್ಟಿಲ ಕಟ್ಟಿ
ಲವಕುಶರನಿಟ್ಟು ತೂಗ್ಯಾಳೆ| ನಗುತ
ವನವಾಸ ಕಳೆದಾಳ"
ಮಗುವಿನ ಅಳು ನಿಲ್ಲಿಸಲು-
"ಕಂದಮ್ಮ ಕಾಪೀತು ಕವಳಿಯ ಹಣ್ಣಿಗೆ
ತುಂಬುಚ್ಚಿ ಬಿದ್ದ ಮಗಿಮಾವು| ಸಕ್ಕರಿ
ನೀ ಕೇಳಿದಾಗ ನಾ ಕೊಡುವೆ"
ಕವಳಿ ಹಣ್ಣಿಗೇಕೆ ಆಶೆ? ಗಿಡದಲ್ಲಿ ಹಣ್ಣಾಗಿ ಕಳಚಿ ಬಿದ್ದ ಮಾವಿಗೆ ಸಕ್ಕರಿ ಬೆರೆಸಿ ತಿನ್ನಿಸುವೆ ಎನ್ನುತ್ತಾಳೆ. ಆಗ ಮಗು ಹಠ ನಿಲ್ಲಿಸುವುದು.
ತಾಯಿಗೆ ಹೆಣ್ಣು ಮಗು ಆದರೂ ಸಂತಸ.
"ಹೆಣ್ಣಲ್ಲವದು ನಮಗೆ ರವಿ ಚೆನ್ನ
ಈ ಮಾತೃ ದೇವತೆಗೆ ಸೂರ್ಯಕಾಂತಿಯ
ರವಿ ಚಿನ್ನ ಅಪ್ಪಟ ಬಂಗಾರ"
"ಹೆಣ್ಣಿದ್ದ ಮನೆಗೆ ಕನ್ನಡಿಯಾತಕ್ಕ
ಹೆಣ್ಣು ಕಂದವ್ವ ಒಳಹೊರಗು| ಓಡಾಡಿದರು
ಕನ್ನಡಿ ಹಂಗ ಹೊಳೆವಳು"
ಕನ್ನಡಿ-ಮನೆಯ ಸಂಸ್ಕಾರದ ಪ್ರತೀಕ.
ತಾಯಿ ತನ್ನ ಮಗಳನ್ನು ಈ ರೀತಿ ಶೃಂಗರಿಸುವಳು.
"ಬಂಗಾರ ಬಾ ನಿನ್ನ ಸಿಂಗಾರ ಮಾಡೇನ
ಗೊಂಡೆ ಹಾಕೇನಿ ಹೆರಳೀಗೆ| ಪುಟ್ಟಕ್ಕ
ಗೊಂಬೀಯ ಆಟ ಕಲಿಸೇನ"
ತಾಯಿ ತನ್ನ ಮಕ್ಕಳಾಟವನ್ನು ನೋಡಿ
"ನನ್ನಯ್ಯನಂಥೋರು ಹನ್ನೆರಡು ಮಕ್ಕಳು
ಹೊನ್ನೆಯ ಮರದ ನೆರಳಲಿ ಆಡುವಾಗ
ಸಂನ್ಯಾಸಿ ಜಪವ ಮರೆತಾನು" ಎಂದು ವಿರಕ್ತನ ವಿರಕ್ತಿ ಮರೆಯಾಗಿ ಅನುರಕ್ತಿ ಉಂಟಾಗುವುದು ಎಂದು ಹೇಳುವಳು.
ಪತಿಯೇ ತನ್ನ ಸರ್ವಸ್ವ ಎಂದು ಸದಾಕಾಲ ತನ್ನ ಗಂಡನ ಏಳ್ಗೆಯನ್ನು ಬಯಸುವವಳೇ ಗರತಿ. ತನ್ನ ಪತಿಗೆ ಹೆಗಲು ಹೆಗಲು ಕೊಟ್ಟು ತನ್ನ ಕುಟುಂಬದ ಸದಸ್ಯರನ್ನು ಸಾಕಿ ಸಲುಹುವಳು.
ತನ್ನ ಪತಿಯ ಸೌಂದರ್ಯದ ಬಗ್ಗೆ
"ಎಲ್ಲೆಲ್ಲಿ ನೋಡಿದರೂ ನಲ್ಲನಂಥವರಿಲ್ಲ
ಹಲ್ಲು ನೋಡಿದರೆ ಹವಳವು| ನಲ್ಲನೆ
ಸೊಲ್ಲು ಕೇಳಿದರೆ ಸಮಾಧಾನ"
"ಕಾಣದೆ ಇರಲಾರೆ ಕನ್ನಡಿ ಮುಖದವರ
ಕಾಮನಿಗಿಂತ ಚೆಲುವ್ಹಾರ| ಚೆನ್ನಿಗರ
ಕಾಣದರಗಳಿಗೆ ಇರಲಾರೆ"
ತನ್ನ ಪತಿ ಬಡವನಾಗಿದ್ದರೂ ತನಗೆ ಪತಿ ಬಂಗಾರ ಎನ್ನುವಳು.
"ಕೂಲಿ ಮಾಡಿದರೇನ ಕೋರಿ ಹೊತ್ತರೇನ
ನನಗ ನನ ರಾಮ ಬಡವೇನ| ಬಂಗಾರದ
ಮಾಲ ಇದ್ಹಾಂಗ ಮನಿಯಾಗ" ಎಂದೆನ್ನುತ್ತಾಳೆ.
ತವರಿನ ಹಂಬಲ ಇರಿಸಿ ಕೊಂಡ ಸತಿಗೆ ಪತಿ ಹೀಗೆ ಹೇಳುತ್ತಾನೆ.
"ಹಾಸಿಗೆ ಹಾಸೆಂದ ಮಲ್ಲೀಗಿ ಮುಡಿ ಎಂದ
ಬ್ಯಾಸತ್ತರೆ ಮಡದಿ ಮಲಗೆಂದ| ತನರಾಯ
ತನ ನೋಡಿ ತವರ ಮರೆಯೆಂದ"
ವಿರಸದ ಸಂದರ್ಭದಲ್ಲಿ ಪತ್ನಿಗೆ ಹೊಡೆದು ನಂತರ ಮನದಲ್ಲಿ ಮರುಗಿ
"ಮಡದಿಯ ಬಡದಾನ ಮನದಾಗ ಮರುಗ್ಯಾನ
ಒಳಗ್ಹೋಗಿ ಸೆರಗ ಹಿಡಿದು| ತಾ ಕೇಳ್ಯಾನ
ನಾ ಹೆಚ್ಚೋ ನಿನ್ನ ತವರ‍್ಹೆಚ್ಚೋ" ಎಂದು
ತಾಯಿ ತವರಿಗೆ ಕರೆಯಲು ಬಂದಾಗ ತನ್ನ ಪ್ರೀತಿಯ ಪತಿ ಬಿಟ್ಟು ಬರಲಾರೆ ಎನ್ನುವಳು.
"ಹಚ್ಚಡದ ಪದರಾಗ ಅಚ್ಚಮಲ್ಲಿಗಿ ಹೂವ
ಬಿಚ್ಚಿ ನನ ಮೇಲೆ ಬಗೆವಂಥ ರಾಯರನ
ಬಿಟ್ಹಾಂಗ ಬರಲೇ ಹಡೆದವ್ವ
"ಆಕಾಶದಂಥ ಅತ್ತೆ ಗೋಕುಲದಂಥ ಮಾವ
ಶ್ರೀ ಕೃಷ್ಣನಂಥ ಪತಿರಾಯ| ಇದ್ದರ
ಸಾಕೀದ ತವರು ಮರತೇನ" ಎನ್ನುವಳು.
ಅಕಸ್ಮಾತ್ತಾಗಿ ಮುನಿಸಿಕೊಂಡು ತವರಿಗೆ ಹೋದ ಸತಿಯನ್ನು ಹೀಗೆ ನೆನೆಸುತ್ತಾನೆ. ಪತಿ-
"ಅಡಗೀಯ ಮನಿಯಾಗ ಮಡದೀಯ ಸುಳಿವಿಲ್ಲ
ಅಡಗೀ ಬಾಯಿಗಿ ರುಚಿಯಿಲ್ಲ| ಹಡೆದವ್ವ
ಮಡದಿ ತವರಿಗಿ ಹೋಗ್ಯಾಳು"
ಆದರೂ ಪತಿಯ ಪ್ರೇಮ ಅವಳನ್ನು ಕರೆಯುತ್ತದೆ.
"ಗಂಜೀಯ ಕುಡಿದರೂ ಗಂಡನ ಮನೆ ಲೇಸು
ಅಂದಣದ ಮೇಲೆ ಚವರವೆ ಸಾರಿದರೂ
ಹಂಗಿನ ತವರ ಮನಿಸಾಕ" ಎನ್ನುವಳು
ಇದೇ ಸೊಸೆ ತನ್ನ ಗಂಡನನ್ನೂ ಪ್ರೀತಿಸಿ ಉಳಿದವರನ್ನು ಕಡೆಗಣಿಸಿದಾಗ
"ಸೊಸೆಯು ಬರುತಾಳಂತ ಖುಷಿ ಭಾಳ ಮನದಾಗ
ಸೊಸಿಬಂದು ಮಗನ ಕಸಗೊಂಡು| ಬಾಳ್ವಾಗ
ಮುಗಿಲೀಲಿ ಬಾಯಿ ತೆರದಾಳ"
ಇನ್ನು ತಾಯಿ ಸತ್ತ ತವರು ಮನೆಗೆ ಗಂಡನ ಮನೆಯಿಂದ ಬಂದ ಮಗಳಿಗೆ ಕಹಿ ಅನುಭವಗಳಾಗುತ್ತವೆ ಎಂಬುದನ್ನು
"ಹಡೆದವ್ವ ಇರುತನಕ ನಡುಮನಿ ನಂದೆನ್ನೆ
ಕಡಗದ ಕೈ ಸೂಸಿ ಬಂದು| ನಡಿವಾಗ
ತುದಿಗಟ್ಟೆ ನನಗ ಎರವಾದೆ"
ತಾಯಿ ಇದ್ದಾಗ ಸ್ವೇಚ್ಛೆಯಿಂದ ಮನೆತುಂಬ ಓಡಾಡಿದ್ದ ಮಗಳು ಇಂದಿ ಅತ್ತಿಗೆಯ ಅಪ್ಪಣೆ ಇಲ್ಲದೆ ಅವಳು ’ಒಳಗೆ ಬಾ’ ಎಂದು ಕರೆಯದೆ ಮನೆಯ ಒಳಗೆ ಪ್ರವೇಶಿಸಲು ಅಭಿಮಾನ ಅಡ್ಡಬಂದು ಮನೆಯ ಮುಂಭಾಗದ ಕಟ್ಟೆಯ ಮೇಲೆ ಕೂಡಲೂ ಅವಳಿಗೆ ಧೈರ್ಯವಿಲ್ಲ. ಅವಳ ಅಂತರಂಗದ ಭಾವನೆ ಈ ರೀತಿ ಮಿಡಿಯುತ್ತದೆ.
"ತಾಯಿಯಿಲ್ಲದ ತವರಿಗೆ ಹೋಗಬ್ಯಾಡ ಮಗಳೆ
ನೀರಿಲ್ದ ಕೆರಿಗೆ ಕರುಬಂದ| ತಿರುಗುವಾಗ
ಆಗ ನೋಡಿದರೆ ದುಃಖವ"
ನೀರಡಿಕೆಯಾಗಿರುವ ಕರು, ನೀರಿಲ್ಲದ ಕೆರೆಗೆ ಬಂದ ಹಾಗೆ, ಸುಖ ದುಃಖ ಹಂಚಿಕೊಳ್ಳುವುದಕ್ಕೆ ಬಂದ ಮಗಳು ಹೊಟ್ಟೆಯಲ್ಲಿ ಸಂಕಟವನ್ನು ಅವಿತಿಟ್ಟುಕೊಂಡು ಬಂದ ದಾರಿ ಹಿಡಿದು ಹೋಗುತ್ತಾಳೆ.
ಅಣ್ಣ-ತಂಗಿಯರ ಮಧುರ ಬಾಂಧವ್ಯ ಜನಪದದಲ್ಲಿ ಹಾಸು ಹೊಕ್ಕಾಗಿದೆ. ಅಣ್ಣನನ್ನು ಕುರಿತು ತಂಗಿ ಹೇಳುತ್ತಾಳೆ.

"ಹೆಣ್ಣಿನ ಜನುಮಕ ಅಣ್ಣತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗೆ| ಸಾವಿರ
ಹೊನ್ನ ಕಟ್ಟುವರು ಉಡಿಯೊಳಗೆ"
ತಂಗಿಯ ಆಪತ್ ಕಾಲಕ್ಕೆ ಸಹಾಯಕ್ಕೆ ಬಂದ ಅಣ್ಣನನ್ನು ಜೀವನ ಪರ್ಯಂತ ನೆನೆಯುವಳು. ಅಂಥ ಅಣ್ಣನನ್ನು ನೋಡುವ ಬಯಕೆ ಅವಳದು.
"ಸೊಲ್ಲಾಪುರದಣ್ಣಗ ನಿಲ್ಲದಲೆ ಬರಹೇಳು|
ಸೀರೊಲ್ಲೆ ಅವನ ಕುಬಸೊಲ್ಲೆ| ಅಣ್ಣನ
ಮಾರಿ ನೋಡಂಥ ಮನವಾಗಿ"
ಅಣ್ಣನಿಂದ ಸೀರೆ ಕುಪ್ಪಸ ಬೇಡ ಅಣ್ಣ ಬರುವನೆಂದು ಸುದ್ದಿ ಸ್ವರ್ಗಕ್ಕೆ ಮೂರೇಗೇಣು.
"ಅಣ್ಣ ಬರತಾನಂತ ಅಂಗಳಕೆ ಥಳಿಕೊಟ್ಟೆ
ರನ್ನ ಬಚ್ಚಲಕೆ ಮಣಿ ಹಾಕಿ| ಕೇಳೀನ
ತಣ್ಣಗಾಗಿರ‍್ಲಿ ತವರವರು"
ಅಂಗಳಕ್ಕೆ ನೀರು ಹಾಕಿ ಥಣ್ಣಗೆ ಮಾಡಿ, ಧೂಳೇಳದಂತೆ ಮಾಡಿ ನೀರನ್ನು ಕಾಯಿಸಿ ಬಚ್ಚಲಿಗೆ ಇಟ್ಟು ದಣಿದ ಅಣ್ಣನನ್ನು ಮನೆಯಲ್ಲಿ ಎಲ್ಲರೂ ಸೌಖ್ಯವೇ ಎಂದು ಕೇಳುತ್ತಾಳೆ.
ಹಬ್ಬ ಹರಿದಿನಗಳಂದು ತವರಿಗೆ ತನ್ನಣ್ಣ ಕರೆಯಲು ಬರುವನೆಂದು ಕಾತರ. ಆತನ ದಾರಿ ಕಾಯುವುದೇ ಅವಳ ಸಡಗರ.
ಕುದರಿಯ ಕುಣಿಸೂತ| ಆನಿಯ ನಡೆಸೂತ
ಅರಗಿಣಿಗೆ ಮಾತ ಕಲಿಸೂತ| ಬರತಾನೆ
ಬರಿಗೊಡದಮ್ಮ ದಾರಿಬಿಡ.
ಇಲ್ಲ ತನ್ನಣ್ಣ ಕುದುರೆ, ಆನೆ ಸವಾರನೆಂದು, ಗಿಣಿಗೆ ಮಾತು ಕಲಿಸುವನೆಂದು ಕಲ್ಪಿಸುತ್ತಾಳೆ. ಈ ರೀತಿ ಬರುವಾಗ ಬರಿಗೊಡ ಎದುರಿಗೆ ಬಂದರೆ ಅಪಶಕುನ ಎಂದು ಭಾವಿಸಿ ನೀರಿಗೆ ಹೊರಟುವರಿಗೆ ಬರಿಗೊಡ ತೊರಿಸಬಾರದೆಂದು ಹೇಳುವಳು. ಅದೆಂಥ ಪ್ರೀತಿ ತಂಗಿಯದು?
ಎಲ್ಲ ಹಬ್ಬಗಳಿಗೂ ಬರಬೇಡೆಂದು ಹೇಳುತ್ತ
"ಕಾರ ಹುಣ್ಣಿಮೆ ಹಬ್ಬಕ ಕರಿಯಲಾಕ ಬರಬ್ಯಾಡ
ಕಾಲಬಾಡಿಗೆ ಕೊಡಬ್ಯಾಡ| ನನ್ನಣ್ಣ
ಹೊನ್ನ ದೀವಳಿಗೆ ಮರಿಬ್ಯಾಡ||
ಹೆಣ್ಣು ಮಕ್ಕಳ ಸಡಗರ ಹಬ್ಬ ದೀಪಾವಳಿಗೆ ಮಾತ್ರ ಮರಿಬ್ಯಾಡ ಎನ್ನುತ್ತಾಳೆ.
ಹಬ್ಬ ಮುಗಿದು ಪತಿ ಮನೆಗೆ ಹೋಗುವಾಗ ಕಣ್ಣಲ್ಲಿ ನೀರು ತುಂಬುತ್ತದೆ. ಆಗ ಅಣ್ಣನಿಗೂ ಕಣ್ಣು ತುಂಬುತ್ತದೆ.
"ತಂಗೀಗಿ ಕಳುಹ್ಯಾನ ತವರೇರಿ ನಿಂತಾನ
ಅಂಗೀಲಿ ನೀರ ವರಸ್ಯಾನ ನನ್ನಣ್ಣ
ಇಂದಿಗಿ ತಂಗಿ ಎರವಾಗಿ"
ಜಾನಪದದಲ್ಲಿ ಒಂದು ಪ್ರಸಂಗ ಹೀಗಿದೆ.
ತವರು ಮನಿಗೆ ಬಂದ ತಂಗಿಗೆ ಸಾವಕ್ಕಿ ಕುಟ್ಟ ಬೇಕಾಗಿದೆ. ಅತ್ತಿಗೆ ಮಲಗಿದ್ದಾಳೆ. ಅಣ್ಣನಿಗೆ ಹೀಗೆ ಹೇಳುವಳು
"ಸಾಂವಕ್ಕಿ ಕುಟ್ಟಂದ್ರೆ ಸೆರಗ್ಹಾಸಿ ಮಲಗ್ಯಾಳೆ
ಎಬ್ಬಿಸಣ್ಣ ನಿನ್ನ ಮಡದೀನ" ಎಂದಾಗ ಅಣ್ಣ ಹೇಳಿದ್ದು
"ಮಡದೀನ ಎಬ್ಬಿಸಿದ್ರ ಅರನಿದ್ರೆ ಆದಾವ
ಎರಡೊಬ್ಬಿ ಮಾಡಿ ನೀ ಕುಟ್ಟವ್ವ ಎಂದನು.
ನೀನೇ ಎರಡು ಭಾಗ ಮಾಡಿ ಕುಟ್ಟು ಎಂದನು. ಆಗ ತಂಗಿ ಹೇಳುವಳು. "ಎರಡೊಬ್ಬಿ ಮಾಡಿದರ ಸರಿಯಾಗಿ ಸುರಿಯೋದಿಲ್ಲ. ಒಂದಬ್ಬಿ ಸಣ್ಣವಾಗಬಹುದು ಇನ್ನೊಂದಬ್ಬಿ ಉರುಮ ಆಗಬಹುದು. ಒಂದೇ ಸಲ ಕುಟ್ಟುವುದಕ್ಕೆ ಎಬ್ಬಿಸು" ಮತ್ತು ಅತ್ತಿಗೆಯನ್ನು ಎಬ್ಬಿಸಲು ಒತ್ತಾಯಿಸುವಳು. ಆಗ ಅಣ್ಣನಿಂದ ಬಂದ ಉತ್ತರ
"ಕುಟ್ಟಿದರ ಕುಟ್ಟವ್ವ
ಕಿಡಿ ಕಿಡಿ ಹಚಬ್ಯಾಡ| ಬಂದ್ಹಾದಿ
ಹಿಡಿದು ನಡಿ ತಂಗಿ" ಎನ್ನುವನು. ಆಗ ತಂಗಿ
"ಚಕ್ಕಡಿಯೊಳಗ ಕೂಡಿಸಿಕೊಂಡು
ನಡೀ ನನ್ನ ಲಗೂನ ಕಳಿಸು" ಎಂದಾಗ ಎತ್ತು ಚಕ್ಕಡಿ ನಮ್ಮನ್ಯಾಗ ಇಲ್ಲ. ಬರೋಮುಂದ ನೀ ಹ್ಯಾಂಗ ಬಂದಿ ಹಾಂಗು ಸುಮ್ಮನೆ ಬಂದ ಹಾದಿ ಹಿಡಿ" ಅಂದಕೂಡ್ಲೆ, ನಿಂತ ಕಾಲ ಮೇಲೆ ಗಂಡನ ಮನೆ ಹಾದಿ ಹಿಡಿದಳು. ಇತ್ತ ಮರುದಿನ ಅತ್ತಿಗೆಗೆ ಭಾರೀ ಚಳಿಜ್ವರ ಬಂದವು. ಅಣ್ಣ ದೇವರ ಕೇಳಿಸಿದಾಗ-ಮನಿ ಹೆಣಮಗಳ ಉಸಿರು, ಅವಳು ಪಟ್ಟ ತಾಪದ ಪರಿಣಾಮ ಎಂದಾಗ, ಅಣ್ಣ ಚಕ್ಕಡಿ ಕಟಿಗೊಂಡು ತಂಗಿ ಮನೆಗೆ ಬಂದಾಗ, ಎಂದೂ ಬರಲಾರದ ಅಣ್ಣ ಬಂದಾನೆಂದು ಆತಿಥ್ಯ ನೀಡಿದ್ದು, ತಂಗಿನ ತವರಿಗೆ ಬಾ ಎಂದು ಕರೆದರೂ ವಿವಿಧ ಕಾರಣಗಳನ್ನು ಹೇಳಿ ತಪ್ಪಿಸಿ ಕೊಂಡಳು. ತವರಿಗೆ ಮೋಹ ತೆಗೆದಳು. ತಾಯಿಯಿಲ್ಲದ ತವರು ದೂರವಾಯಿತು. ಹೀಗೆ ಮನೆಯ ಹೆಣ್ಣುಮಕ್ಕಳು ಉಸಿರು ಹಾಕಿದರೆ ಶಾಪವಾಗಿ ಪರಿಣಮಿಸುತ್ತದೆ.
ಹೆಣ್ಣು ದೇವರಲ್ಲಿ ಕೇಳುವುದು ಒಂದೇ ಒಂದು ಮುತ್ತೈದೆತನ. ಹಾಗೂ ಮುತ್ತೈದೆಯಾಗಿ ಸಾಯುವುದು. ಅದಕ್ಕಾಗಿ ವ್ರತ ನೇಮಗಳನ್ನು ಮಾಡುತ್ತಾಳೆ.
ದೇವರಲ್ಲಿ ಈ ಪರಿ ಬೇಡುತ್ತಾಳೆ.
"ಮುತ್ತೈದೆತನ ಬೇಡಿ ಮೂರುತಾಸು ನಿಂತೆ
ಮುತ್ತಿನ ತುರಾಯಿ ಅರಸರ| ಸಂಗ ಬೇಡಿ
ಸುತ್ತೇನ ಶಿವನ ಶಿಖರವ||
ಅವಳ ವೈಧವ್ಯದ ಬಾಳು ಮನವನ್ನು ಕಲಕುತ್ತದೆ.
"ಗಂಡನಿಲ್ಲದ ಬಾಳು ದಂಡನಾಳಿದರೇನು
ಪುಂಡಿಯ ಹೂವ ಹೊಲ ತುಂಬ| ಅರಳಿದರೆ
ಗಂಡನಿಲ್ಲದ ಬಾಳು ಬೀಳಲ್ಲವೇ" ಎಂದು ಎಲ್ಲರಿಂದ ತಿರಸ್ಕಾರ, ಅವಮಾನ, ಅಸ್ಪೃಶ್ಯತೆ ಅನುಭವಿಸಬೇಕಾಗುತ್ತದೆ. ಜನಪದ ಸಾಹಿತ್ಯದಲ್ಲಿ ಕುಟುಂಬ ಯೋಜನೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಂಡುಬರುತ್ತದೆ. ಗೃಹಿಣಿ ತನ್ನ ಬಂಜೆತನದಿಂದ ದೂರ ಮಾಡೆಂದು ಶಿವನಲ್ಲಿ ಕೇಳುತ್ತಾಳೆ.
"ಬಂಜೆಂಬ ಶಬುದ ಹೊರಲಾರೆ| ಎನ್ನುವಳು. ತನಗೆಷ್ಟು ಮಕ್ಕಳು ಬೇಕೆಂಬುದನ್ನು
"ಎರಡು ಮಕ್ಕಳ ಕೊಟ್ಟು ಸಾಕು ಮಾಡು ಶಿವನೇ
ಎರಡರ ಮ್ಯಾಲೆ ಆರುತಿ-ಹಿಡಿಲಾಕ
ನಾರಿಯ ಕೊಟ್ಟು ಕಡೆಮಾಡೋ"
ಆವಾಗಲೇ ಮಿತ ಕುಟುಂಬದ ಕಲ್ಪನೆ ಅವರಲ್ಲಿತ್ತು.
ಇನ್ನೊಬ್ಬ ಹೆಣ್ಣು ಮಗಳು
"ಹತ್ತು ಹಡೆಯುವುದಕ್ಕಿಂತ ಮುತ್ತೊಂದು ಹಡೇದಿನಿ
ಎತ್ತಿಕೋ ತಮ್ಮ ಬಗಲಾಗ-ನನ್ನ ತಮ್ಮ
ಮುತ್ತಿನ ಶಲ್ಯವ ಮರೆಮಾಡೋ"
ಮಕ್ಕಳನ್ನು ಕೊಡು ಎಂದು ಶಿವನಲ್ಲಿ ಕೇಳುವಾಗ ತುಂಬ ಎಚ್ಚರಿಕೆ ವಹಿಸುವಳು.
"ಮಕ್ಕಳರ್ಥಿ ಉಳ್ಳವರಿಗೆ ಮಕ್ಕಳ ಕೊಡುದೇವ
ಮಕ್ಕಳು ಸಾಕೆಂದು ತಿರುದುಂಬ-ಬಡವರಿಗೆ
ಮಕ್ಕಳ ಕೊಡಬ್ಯಾಡ ಮನಿತುಂಬ" ಎಂದು ಬಡವರಿಗೆ ಹಿಂಡು ಮಕ್ಕಳು ಬೇಡ ಎನ್ನುವಳು.
ಗೃಹಿಣಿಯೊಬ್ಬಳು ತನ್ನ ಮಗ ಹೇಗಿರಬೇಕೆಂದು ಈ ರೀತಿ ಬಯಸುವಳು.
"ಉಪ್ಪರಿಗೆ ಮನಿ ಬೇಕು ಕೊಪ್ಪರಿಗೆ ಹಣಬೇಕು
ರುಕ್ಮಿಣಿಯಂತ ಸೊಸಿಬೇಕು-ನನಮನೆಗೆ
ಕೃಷ್ಣದೇವನಂಥ ಮಗಬೇಕು"
"ಮಾಳಿಗೆ ಮನೆ ಬೇಕು, ಜೋಳಿಗೆ ಹಣ ಬೇಕು
ಜಾನಕಿಯಂಥ ಸೊಸಿಬೇಕು-ನನ ಮನೆಗೆ
ರಾಮದೇವರಂಥ ಮಗ ಬೇಕು"
ಇನ್ನೊಬ್ಬ ಗೃಹಿಣಿ ದೇವರಲ್ಲಿ ಈ ರೀತಿ ಬೇಡುವಳು.
’ನಾನು ತಿಮ್ಮಯ್ಯನ ಏನು ಬೇಡೋಳಲ್ಲ
ಹೂಡೋವೆರಡೆತ್ತು ಕರಿಎಮ್ಮೆ-ಮುತ್ತಿನ ಚೆಂಡು
ಆಡುಂಬೊನೊಬ್ಬ ಮಗ ಸಾಕು"
ಬೇಸಾಯಕ್ಕೆ ಎರಡು ಎತ್ತು. ಹಯನಕ್ಕೆ ಎಮ್ಮೆ, ಆಡಿ ಉಣ್ಣಲು ಒಬ್ಬ ಮಗ ಈ ರೀತಿ ನೆಮ್ಮದಿಯ ಬದುಕಿಗೆ ದೇವರನ್ನು ಪ್ರಾರ್ಥಿಸುವಳು. ಹೀಗೆ ಕುಟುಂಬ ಯೋಜನೆ ಪದ್ಧತಿಯನ್ನು ಬೆಂಬಲಿಸುವಂತೆ ಹಲವಾರು ತ್ರಿಪದಿಗಳು ಜನಪದರಲ್ಲಿದ್ದವು.
ಪತಿ ತೀರಿದಾಗ ಪತ್ನಿ ಸಹಗಮನ ಮಾಡಿದ ಉದಾಹರಣೆಗಳು ಅನೇಕ ಇವೆ. ಆದರೆ ಪ್ರೇಮದ ಪತ್ನಿ ಕೆರೆಗೆ ಹಾರವಾದಾಗ ಗಂಡ ಮಡದಿಯನ್ನು ಅಗಲಿರಲಾರದೆ ತಾನೂ ಕೆರೆಗೆ ಹಾರಿದ ಕಥೆ ’ಕೆರೆಗೆ ಹಾರ’. ಪರೋಪಕಾರಕ್ಕೆ ಗರತಿ ಬಲಿದಾನಗೈದ ಕಥೆ. ಕೊಟ್ಟರೆ ಕೊಡಲೇಳು ಇಟ್ಟಾಂಗ ಇರಬೇಕು ಎಂಬುದು ಈ ಕಥೆಯ ಜೀವನಾಡಿ ಪತ್ನಿಯ ತ್ಯಾಗ ಪತಿಯ ನಿರ್ವಾಜ್ಯ ಪ್ರೇಮ ವ್ಯಕ್ತವಾಗಿದೆ.
ಹೆಣ್ಣಿಗೆ ಗುಣವೇ ಮುಖ್ಯ ಸೌಂದರ್ಯ ಮುಖ್ಯವಲ್ಲ ಎಂಬುದನ್ನು-
"ಕಪ್ಪು ಹೆಂಡತಿಯಂತ ಕಿರಿಕಿರಿ ಮಾಡಬೇಡ
ನೇರಲದ ಹಣ್ಣು ಬಲು ಕಪ್ಪು| ಇದ್ದರು
ತಿಂದು ನೋಡಿದರ ಬಹಳ ರುಚಿ"
"ಕೆಂಪು ಹೆಂಡತಿ ಎಂದು ಸಂತೋಷ ಪಡಬ್ಯಾಡ
ಅತ್ತಿಯ ಹಣ್ಣು ಬಲುಕೆಂಪು| ಇದ್ದರು
ಒಡೆದು ನೋಡಿದರೆ ಹುಳಭಾಳ"
ಜನಪದ ಮಹಿಳೆ ಜನಪದರು ತಮಗೂ ಅನ್ಯರಿಗೂ ಲೇಸೆನಿಸುವ ಹಿತವಚನಗಳನ್ನು ಅನುಭವದಿಂದ ಹೇಳಿದರು. ಹಾಡಿದರು. ನಡೆದು ತೋರಿದರು.
"ಮಂದೀ ಮಂದೀ ಎಂದು ಮಂದಿ ನಂಬಲಿ ಹೋದ
ಮಂದಿ ಬಿಟ್ಟಾರ ನಡುನೀರ|ಮಲ್ಲಯ್ಯ
ತಂದಿ ನನ ಕೈಯ ಬಿಡಬ್ಯಾಡ"
"ಮಾದೇವ ನಿನ ಹೊರತು ನಾನ್ಯಾರ ನಂಬಿಲ್ಲ
ನಾ ಮಾಡಿದೆನೆಂಬ ಅಳವಿಲ್ಲ| ಮಹಾದೇವ
ನೀ ನಡೆಸು ನನ್ನ ಸರುವೆಲ್ಲ
ಯಾವುದೇ ಒಂದು ವ್ಯವಸ್ಥೆಯಲ್ಲಿ ಗಂಡು ಹೆಣ್ಣು ಪರಸ್ಪರ ಹೊಣೆಗಾರರಾಗುತ್ತಾರೆ. ಜಾನಪದ ಜೀವನದಲ್ಲಿ ಗಂಡಿಗಿಂತ ಹೆಣ್ಣು ಹೊಣೆಗಾರಳಾಗಿದ್ದಳು. ಆಗಲೂ ಹೆಣ್ಣು ಶೋಷಣೆಯ ವಸ್ತುವಾಗಿದ್ದಳು. ಆ ಶೋಷಣೆ ಹೆಣ್ಣಿನ ಜೀವನದೊಂದಿಗೆ ಅನಿವಾರ್ಯವಾಗಿ ಹೆಣೆದು ಕೊಂಡಿದೆ. ಹೆಣ್ಣು ಹಕ್ಕುಗಳಿಗಾಗಿ ಹೋರಾಡುತ್ತಲೇ ಬಂದಿದ್ದಾಳೆ. ಹೆಣ್ಣಿಗೆ ಹಲ್ಲುಗಳ ಸಂಖ್ಯೆ ಕಡಿಮೆ ಎಂದು ಧರ್ಮಶಾಸ್ತ್ರಗಳು ನಂಬಿದ್ದವು. ಈಗ ಹೆಣ್ಣು ಹೆಚ್ಚು ವಿದ್ಯಾವಂತಳಾಗಿ ಕಂಡರೂ ತನ್ನ ಕಾಲ ಮೇಲೆ ನಿಲ್ಲುವ ಸಾಮರ್ಥ್ಯ ಹೊಂದಿದರೂ ಈಗಲೂ ಎರಡನೇ ದರ್ಜೆ ನಾಗರಿಕಳಾಗಿದ್ದಾಳೆ. ವರದಕ್ಷಿಣೆ, ಅತ್ಯಾಚಾರ ಹೆಣ್ಣು ಎಂಬ ತಾರತಮ್ಯ, ದೌರ್ಜನ್ಯ ಇದ್ದೇ ಇವೆ. ಕೆಲವೆಡೆ ಹೆಣ್ಣು ನೊಂದು ನುಡಿದ ಗೀತೆ ಇದು.
"ಹೆಣ್ಣಾಗಿ ಹುಟ್ಟೋದಕ್ಕಿಂತ ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮೇಲೊಂದು ಮರವಾಗಿ| ಹುಟ್ಟಿದರೆ
ಪುಣ್ಯವಂತರಿಗೆ ನೆರಳಾದೆ"
ಪುರುಷ ಪ್ರಧಾನ ಸ್ವಾರ್ಥದ ’ಕೆರೆಗೆ ಹಾರ’ಕ್ಕೆ ’ಭಾಗೀರಥಿ’ಯರು ಬಲಿಯಾಗಬಾರದು. ಈ ರೀತಿ ಸಾಧಿಸಿದಾಗ ಹೆಣ್ಣಿಗೆ ಸಮಾನತೆ ಬರುವುದು.

ಡಬ್ಬಿಂಗ್ ಮತ್ತು ಕನ್ನಡ ಚಿತ್ರಪ್ರೇಕ್ಷಕ

ಡಬ್ಬಿಂಗ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ನಿಷೇಧ ಜಾರಿಯಲ್ಲಿದೆ. ಡಬ್ಬಿಂಗ್ ವಿರೋಧವಾಗಿ ರಾಜ್ಯದಲ್ಲಿ ವರನಟ ಡಾ.ರಾಜಕುಮಾರ್ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಚಳವಳಿ ನಡೆದದ್ದು ಈಗ ಇತಿಹಾಸ. ಆಗಿನ್ನೂ ಕನ್ನಡ ಚಿತ್ರರಂಗ ಪೂರ್ಣ ಪ್ರಮಾಣದಲ್ಲಿ ನೆಲೆ ನಿಂತಿರಲಿಲ್ಲ. ಈಗ ಚಿತ್ರರಂಗ ಸಮೃದ್ಧವಾಗಿ ಬೆಳೆದಿದೆ. ಬದಲಾದ ಕಾಲದಲ್ಲಿ ಡಬ್ಬಿಂಗ್ ಚಿತ್ರಗಳಿಗೂ ಅವಕಾಶ ನೀಡಬೇಕು ಎಂಬ ವಾದ ಎಲ್ಲೆಡೆ ಕೇಳಿಬರುತ್ತಿದೆ. ಡಬ್ಬಿಂಗ್ ಸಿನಿಮಾಗಳು ಬಂದರೆ ಕರ್ನಾಟಕದ ಸಿನಿಮಾರಂಗದ ಕಲಾವಿದರು, ತಂತ್ರಜ್ಞರು ಸಮಸ್ಯೆಗೆ ಸಿಕ್ಕಿಕೊಳ್ಳುತ್ತಾರೆ. ಡಬ್ಬಿಂಗ್ ನಿಂದಾಗಿ ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ಹೊಡೆತ ಬೀಳುತ್ತದೆ ಎಂಬ ವಾದ ಡಬ್ಬಿಂಗ್ ವಿರೋಧಿಗಳದ್ದು. ಡಬ್ಬಿಂಗ್‌ನಿಂದಾಗಿ ಜಗತ್ತಿನ ಎಲ್ಲ ಭಾಷೆಯ ಉತ್ತಮ ಸಿನಿಮಾಗಳನ್ನು ನಾವು ಕನ್ನಡದಲ್ಲೇ ನೋಡಲು ಸಾಧ್ಯವಾಗುತ್ತದೆ. ರೀಮೇಕ್ ಚಿತ್ರಗಳ ಹಾವಳಿ ತಪ್ಪುತ್ತದೆ. ಪೈಪೋಟಿಯಿಂದಾಗಿ ಉತ್ತಮ ಗುಣಮಟ್ಟದ ಕನ್ನಡ ಚಿತ್ರಗಳೂ ತಯಾರಾಗುತ್ತವೆ. ಪರಭಾಷಾ ಚಿತ್ರಗಳ ಹಾವಳಿ ಕಡಿಮೆಯಾಗುತ್ತದೆ ಎಂಬ ವಾದ ಡಬ್ಬಿಂಗ್ ಪರವಾಗಿರುವವರದು.
ಇಂಥ ವಿಷಯಗಳ ಕುರಿತು ವಾದವಿವಾದಗಳು, ಚರ್ಚೆಗಳು ನಡೆಯಬೇಕು. ಈ ಚರ್ಚೆಯಲ್ಲಿ ಚಿತ್ರರಂಗ ಮಾತ್ರವಲ್ಲ ಚಿತ್ರ ವೀಕ್ಷಕರನ್ನು ಒಳಗೊಂಡಂತೆ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಈ ಹಿನ್ನೆಲೆಯಲ್ಲಿ ಕರವೇ ನಲ್ನುಡಿ ಈ ವಿಷಯ ಕುರಿತ ಚರ್ಚೆಯನ್ನು ಆರಂಭಿಸುತ್ತಿದೆ. ಆರಂಭದಲ್ಲಿ ಬನವಾಸಿ ಬಳಗದ ಮುಖ್ಯಸ್ಥರಾದ ಆನಂದ್ ಅವರು ಬರೆದಿರುವ ಪ್ರಾಸ್ತಾವಿಕ ಲೇಖನ ಇಲ್ಲಿದೆ. ನಮ್ಮ ಎಲ್ಲ ಓದುಗರು ತಮ್ಮ ಅಭಿಪ್ರಾಯಗಳನ್ನು ಬರೆದು ಕಳುಹಿಸಬೇಕಾಗಿ ವಿನಂತಿ. ಓದುಗರ ಅಭಿಪ್ರಾಯಗಳ ಜತೆಗೆ ಚಿತ್ರರಂಗದ ಗಣ್ಯರು, ಸಮಾಜ ಚಿಂತಕರು, ವಿವಿಧ ಕ್ಷೇತ್ರಗಳ ಪ್ರಮುಖರ ಅಭಿಪ್ರಾಯಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. -ಸಂ


ಬಹುಶಃ ಇಂದು ಇಡೀ ಪ್ರಪಂಚದಲ್ಲಿ ತಮ್ಮ ಮನರಂಜನೆಯನ್ನು ತಮ್ಮದೇ ನುಡಿಯಲ್ಲಿ ಪಡೆದುಕೊಳ್ಳುವ ಹಕ್ಕನ್ನು ಕಳೆದುಕೊಂಡಿರುವ ಏಕೈಕ ಜನರೆಂದರೆ ಕನ್ನಡಿಗರು. ಹೌದು. ಕನ್ನಡಿಗರು ತಮಿಳು, ತೆಲುಗು, ಹಿಂದಿ, ಇಂಗ್ಲೀಷ್, ಜಪಾನೀಸ್, ಫ್ರೆಂಚ್ ಸೇರಿದಂತೆ ಯಾವುದೇ ಭಾಷೆಯ ಒಂದೊಳ್ಳೆ ಚಿತ್ರ ನೋಡಬೇಕೆಂದರೆ ಅರ್ಥವಾಗದಿದ್ದರೂ ಅದೇ ಭಾಷೆಯಲ್ಲಿ ನೋಡಬೇಕಾಗಿದೆ. ನಮ್ಮ ಮಕ್ಕಳು ತಮಗೆ ಬೇಕಾದ ಕಾರ್ಟೂನ್, ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್, ಅವತಾರ್ ಮೊದಲಾದ ಚಿತ್ರಗಳನ್ನು ಕನ್ನಡದಲ್ಲೇ ನೋಡುವ ಭಾಗ್ಯ ಪಡೆದಿಲ್ಲ. ಇದು ಯಾವುದೋ ತಾಂತ್ರಿಕ ತೊಂದರೆಯಿಂದಾಗಿದ್ದರೆ ಬೇರೆ ಮಾತು. ಇಂಥಾ ನಿರಾಕರಣೆಗೆ ಒಳಗಾಗಿರುವುದು ಚಿತ್ರರಂಗದ ಕಟ್ಟುಪಾಡಿನಿಂದಾಗಿ. ಕನ್ನಡದಲ್ಲಿ ನಾನು ಪರಭಾಷೆಯ ಚಿತ್ರ ನೋಡಬೇಕು ಎಂದರೆ ನಮ್ಮ ಚಿತ್ರರಂಗಕ್ಕೆ ಎಲ್ಲಿಲ್ಲದ ಆಕ್ರೋಶ ಉಕ್ಕಿ ಬರುತ್ತದೆ. ಈ ನಾಡಿನ ಜನರು ಏನನ್ನು ನೋಡಬೇಕು, ಕೇಳಬೇಕು ಎಂಬುದನ್ನೆಲ್ಲಾ ತೀರ್ಮಾನಿಸಲು ತಮಗೆ ಜನ್ಮಸಿದ್ಧ ಹಕ್ಕಿರುವಂತೆ ಚಿತ್ರರಂಗದ ಕೆಲ ಪಟ್ಟಭದ್ರರು ನಡೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆಸಗುವ ಅಪಚಾರವಾಗಿದೆ.
ಡಬ್ಬಿಂಗ್ ಪರವಾದ ನಿಲುವಿಗೆ ಕಾರಣ
ಉಳಿದೆಲ್ಲಾ ಕಾರಣಗಳಿಗಿಂತಲೂ ಪ್ರಮುಖವಾದದ್ದು “ಕನ್ನಡಿಗರ ಮನರಂಜನೆ ಕನ್ನಡದಲ್ಲಿ ಪಡೆದುಕೊಳ್ಳುವ ಹಕ್ಕು ಕನ್ನಡಿಗರಿಗಿದೆ” ಎನ್ನುವುದು. ಡಬ್ಬಿಂಗ್ ಎನ್ನುವ ಸೌಕರ್ಯ ಇರುವಾಗ ಅದನ್ನು ಬಳಸಿಕೊಳ್ಳಲು ನಮಗೆ ಸಂಪೂರ್ಣ ಸ್ವಾತಂತ್ರವಿರಬೇಕು. ಡಬ್ಬಿಂಗ್ ಎನ್ನುವುದು ಕಾನೂನು ಬಾಹಿರ ದಂಧೆಯಲ್ಲದ್ದರಿಂದ ಮತ್ತು ಅದು ನಮ್ಮ ಮೂಲಭೂತ ಹಕ್ಕೊಂದನ್ನು ಪೂರೈಸುವುದರಿಂದ ಡಬ್ಬಿಂಗ್ ಬೇಕು. ಕನ್ನಡ ನಾಡಿನ ಮಕ್ಕಳು ತಾವು ಕನ್ನಡಿಗರಾಗಿ ಹುಟ್ಟಿದ ಕಾರಣದಿಂದಲೇ ಕಾರ್ಟೂನುಗಳನ್ನೂ ಸೇರಿಸಿ ಅವತಾರ್, ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಮೊದಲಾದ ಹೊರದೇಶದ ಚಿತ್ರಗಳನ್ನೂ, ತಾರೆ ಜಮೀನ್ ಪರ್, ಕುಟ್ಟಿ ಚಾತನ್ ಮೊದಲಾದ ಭಾರತೀಯ ಚಿತ್ರಗಳನ್ನೂ ಅರ್ಥ ಮಾಡಿಕೊಂಡು ತಮ್ಮದೇ ಭಾಷೆಯಲ್ಲಿ ನೋಡುವ ಸೌಕರ್ಯದಿಂದ ವಂಚಿಸಲ್ಪಡಬಾರದೆನ್ನುವ ಕಾರಣಕ್ಕೆ ಡಬ್ಬಿಂಗ್ ಬೇಕು. ಡಬ್ಬಿಂಗ್ ಬರುವುದರಿಂದ ಕನ್ನಡಕ್ಕೆ ಒಳಿತಾಗುವ ಸಾಧ್ಯತೆಗಳು ಕೂಡಾ ಹೆಚ್ಚಾಗಿದೆ. ಪರಭಾಷಾ ಚಿತ್ರಗಳನ್ನು ನೋಡನೋಡುತ್ತಲೇ ಕನ್ನಡಿಗರು ಕನ್ನಡದಿಂದ ದೂರಾಗುತ್ತಿರುವುದನ್ನೂ, ಪರಭಾಷಿಕರು ನಮ್ಮೂರುಗಳಲ್ಲಿ ಅವರವರ ಭಾಷೆಯ ಮನರಂಜನೆಯನ್ನು ಪಡೆಯುತ್ತಾ ನಾಡಿನ ಮುಖ್ಯವಾಹಿನಿಗೆ ಸೇರುವ ಅಗತ್ಯವಿಲ್ಲದಂತಿರುವುದನ್ನೂ ನಾವು ಕಾಣಬಹುದು. ಕನ್ನಡದಲ್ಲಿ ಡಬ್ಬಿಂಗ್ ಎನ್ನುವ ಉದ್ಯಮದಿಂದಾಗಿ ಹೆಚ್ಚು ಹೆಚ್ಚು ಜನಕ್ಕೆ ದುಡಿಮೆಯ ಅವಕಾಶ ದೊರೆಯುತ್ತದೆ. ಡಬ್ಬಿಂಗ್ ಮೂಲಕ ಶಿವಾಜಿ, ಕುಸೇಲನ್, ತಾರೆ ಜಮೀನ್ ಪರ್, ಘಜನಿ... ಮೊದಲಾದವು ನೂರಾರು ಕೇಂದ್ರದಲ್ಲಿ ಆಯಾ ಭಾಷೇಲೇ ಬಿಡುಗಡೆಯಾಗಿ, ಕನ್ನಡದವರೆಲ್ಲಾ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೇ ಮನರಂಜನೆ ಪದೆದುಕೊಳ್ಳಲು ಮುಂದಾಗುವುದನ್ನು ತಪ್ಪಿಸಬಹುದಾಗಿದೆ. ಈ ಕಾರಣಗಳಿಂದಾಗಿ ಡಬ್ಬಿಂಗ್ ಬರಬೇಕು. ಎಲ್ಲಕ್ಕೂ ಮಿಗಿಲಾಗಿ ಮೇಲೆ ಹೇಳಿದ್ದೆಲ್ಲಾ ಆದರೂ ಆಗದಿದ್ದರೂ ಕೂಡಾ ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ ಪಡೆಯುವ ಮೂಲಭೂತ ಹಕ್ಕಿಗೆ ಮಾನ್ಯತೆ ಸಿಗಲಾದರೂ ಡಬ್ಬಿಂಗ್ ಬೇಕು. ದುರಂತವೆಂದರೆ ಚಿತ್ರರಂಗದ ಕೆಲವು ಮಂದಿ ಡಬ್ಬಿಂಗ್ ಬರುವುದರಿಂದ ಸ್ಪರ್ಧೆ ಎದುರಿಸಬೇಕಾದೀತು ಎಂಬ ಕಾರಣಕ್ಕೋ ಏನೋ ಹತ್ತಾರು ಕಾರಣಗಳನ್ನು ಕೊಡುತ್ತಾ ಡಬ್ಬಿಂಗ್ ಬರದಂತೆ ತಡೆಯುತ್ತಿದ್ದಾರೆ.
ಡಬ್ಬಿಂಗ್ ಬೇಕೆನ್ನುವವರ ಮೇಲಿನ ಕೆಸರೆರಚಾಟ!
ಕರ್ನಾಟಕ ಚಲನಚಿತ್ರ ಆಕಾಡಮಿ ದಕ್ಷಿಣ ಭಾರತ ಚಲನಚಿತ್ರ ಮಂಡಳಿ ಹೊರತಂದಿದ್ದ, ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ್ದ ವರದಿಯೊಂದರ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಒಂದು ಸಮೀಕ್ಷಾ ವರದಿಯನ್ನು ಬನವಾಸಿ ಬಳಗದ ಸಹಯೋಗದಲ್ಲಿ ಹೊರತಂದಿತ್ತು. ಅದರಲ್ಲಿ ಉದ್ಯಮದ ಅನೇಕರು ಡಬ್ಬಿಂಗ್ ಬೇಕು ಎಂದದ್ದನ್ನು ಪ್ರಸ್ತಾಪಿಸಿ ಇದರ ಬಗ್ಗೆ ಚರ್ಚೆಯಾಗಬೇಕು ಎಂದು ಬರೆಯಲಾಗಿತ್ತು. ಆಕ್ರೋಶದಿಂದ ಮೈಮೇಲೆ ದೇವರು ಬಂದಂತೆ ಕನ್ನಡ ಚಿತ್ರೋದ್ಯಮದ ಕೆಲ ಮಂದಿ ಡಬ್ಬಿಂಗ್ ಬಗ್ಗೆ ಚರ್ಚೆಯಾಗಬೇಕೆಂದು ಬರೆದಿದ್ದ ಕಾರಣದಿಂದಲೇ ವರದಿಯನ್ನು ಹಿಂಪಡೆಯುವಂತೆ ಮಾಡಲು ಯಶಸ್ವಿಯಾದರು. ಇದರಿಂದ ತಿಳಿಯುವುದಾದರೂ ಏನು? ಇವತ್ತಿನ ದಿನ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕೆನ್ನುವ ಹೇಳಿಕೆಯನ್ನು ಚಿತ್ರರಂಗದ ಒಳಗಿನ ಯಾರೊಬ್ಬರೂ ಹೇಳುವ ಸ್ಥಿತಿ ಇದ್ದಂತಿಲ್ಲ. ಹಾಗೂ ಯಾರಾದರೂ ಹೇಳಬೇಕೆಂದರೆ ಶ್ರೀಮತಿ ಬಿ.ಸರೋಜಾದೇವಿಯವರಂತೆ ನಿವೃತ್ತರಾದವರು ಹೇಳಬೇಕಾಗಿದೆ. ಕನ್ನಡ ಚಿತ್ರರಂಗದಲ್ಲಿದ್ದೇ ಡಬ್ಬಿಂಗ್ ಬೇಕು ಎಂದವರಿಗೆ ಮುಂದೇನಾದೀತು ಎಂಬುದು ಊಹೆಗೆ ನಿಲುಕುವಂತಹುದೇ ಆಗಿದೆ. ಅವರ ಸಿನಿಮಾ ಚಟುವಟಿಕೆಗಳಿಗೆ ಅಸಹಕಾರ, ಚಿತ್ರರಂಗದಿಂದ ಬಹಿಷ್ಕಾರ ಮುಂತಾದ ತಂತ್ರಗಳಿಗೆ ಬಲಿಯಾಗಬೇಕಾಗುತ್ತದೆ ಎಂಬ ಭಯ ಅನೇಕರ ಬಾಯಿ ಕಟ್ಟಿಹಾಕಿದೆ ಮತ್ತು ಸಾರ್ವಜನಿಕವಾಗಿ ಡಬ್ಬಿಂಗ್ ಬೇಡವೆಂಬ ಹೇಳಿಕೆ ನೀಡುವಂತೆ ಮಾಡುತ್ತಿದೆ ಎಂಬುದು ಉದ್ಯಮದ ಒಳಗಿನ ಮಾತು. ಯಾರೇ ಡಬ್ಬಿಂಗ್ ಬೇಕೂ ಅಂದರೂ ಇವರು ವೈಯುಕ್ತಿಕ ಲಾಭಕ್ಕಾಗಿ ಈ ನಿಲುವು ತಳೆದಿದ್ದಾರೆ ಎನ್ನುವ ಸುಲಭದ ಆರೋಪ ಇಂಥವರ ಮೇಲೆ. ಇತ್ತೀಚಿಗೆ ಶ್ರೀಮತಿ ಸರೋಜದೇವಿಯವರು ಡಬ್ಬಿಂಗ್ ಬೇಕು ಅಂದ ಕೂಡಲೇ ಕೇಳಿಬಂದ ಪ್ರತಿಕ್ರಿಯೆ ‘ಅವರು ಚತುರ್ಭಾಷಾ ತಾರೆ, ನ್ಯಾಷನಲ್ ಲೆವೆಲ್ಲಲ್ಲೇ ಮಾತಾಡ್ತಾರೆ’ ಎಂಬ ವ್ಯಂಗ್ಯ. ಹಾಗೇ ಡಬ್ಬಿಂಗ್ ಪರವಾದವರನ್ನೆಲ್ಲಾ ಚಲನಚಿತ್ರ ಕಾರ್ಮಿಕ ವಿರೋಧಿ ಅಂತಾ ಬ್ರಾಂಡ್ ಮಾಡಿ ಬಾಯಿ ಮುಚ್ಚಿಸೋ, ಜನರ ಕಣ್ಣಲ್ಲಿ ಖಳರಾಗಿಸೋ ಪ್ರಯತ್ನಗಳು ನಡೀತಾನೆ ಇವೆ. ಕನ್ನಡಿಗರು ರಾಮಾಯಣ ಮಹಾಭಾರತ ಕನ್ನಡದಲ್ಲೇ ನೋಡಬಾರದಾ? ಎಂದರೆ ನಮ್ಮ ಹಳ್ಳಿ ಜನಕ್ಕೆ ಈ ಕಥೆಗಳು ಗೊತ್ತು, ಅವರಿಗೆ ಇವೆಲ್ಲಾ ಬೇಕಾಗಿಲ್ಲ ಅನ್ನೋ ಫರ್ಮಾನು ಹೊರಡಿಸುತ್ತಾರೆ. ಹಾಗಾದ್ರೆ ನಿಮ್ಮ ಸಿನಿಮಾ ಕಥೆಗಳೂ ನಮ್ಮ ಜನಕ್ಕೆ ಗೊತ್ತಿರೋದೆ ಅಲ್ವಾ ಅಂತಂದ್ರೆ ಏನುತ್ತರ ಕೊಟ್ಟಾರೋ? ಅವತಾರ್, ಸ್ಯಾಂಕ್ಟಮ್ ಥರದ ಚಿತ್ರಗಳನ್ನು ನಮ್ಮ ಜನ ತಮಗೆ ಅರ್ಥವಾಗುವ ಭಾಷೇಲಿ ನೋಡಬೇಕು ಅಂದ್ರೆ ನಮ್ಮ ಹಳ್ಳಿಜನಕ್ಕೆ ಆ ಸಿನಿಮಾಗಳಿಂದ ಏನಾಗಬೇಕಿಲ್ಲಾ ಅಂತಾರೆ. ಹಾಗಾದ್ರೆ ಇವರ ಚಿತ್ರಗಳಿಂದ ಜನಕ್ಕೆ ಏನಾಗಬೇಕಿದೆ? ಯಾರಿಗೆ ಏನು ಬೇಕು, ಏನು ಬೇಡ ಅಂತಾ ನಿರ್ಧರಿಸಕ್ಕೆ ಇವರಿಗೆ ಹಕ್ಕು ಕೊಟ್ಟವರು ಯಾರು?
ಡಬ್ಬಿಂಗ್ ಬರಲಿ! ಕನ್ನಡಿಗರ ಮನರಂಜನೆ ಕನ್ನಡದಲ್ಲಿರಲಿ!
ಹೌದು, ನೋಡುಗರಿಗೆ ತಮಗೆ ಬೇಕಾದ್ದನ್ನು ತಮ್ಮ ನುಡಿಯಲ್ಲಿ ಪಡೆದುಕೊಳ್ಳುವ ಹಕ್ಕು ಇದ್ದೇ ಇದೆ. ಕನ್ನಡಕ್ಕೆ ಡಬ್ಬಿಂಗ್ ಬರಬೇಕಾದ್ದು ಈ ಕಾರಣಕ್ಕಾಗಿಯೇ. ಇನ್ನು ಇದರಿಂದ ಪರಭಾಷಿಕರು ಕನ್ನಡದ ಮುಖ್ಯವಾಹಿನಿಗೆ ಬರ್ತಾರೆ, ಭಾಷೆ ಉಳಿಯುತ್ತೆ ಅನ್ನೋ ನಾಡಪರ ಕಾಳಜಿಯ ಮಾತುಗಳನ್ನೆಲ್ಲಾ ಬದಿಗಿಟ್ಟೇ ನೋಡಿದರೆ ಡಬ್ಬಿಂಗ್ ಸಿನಿಮಾಗಳು ಕನ್ನಡಿಗರಿಗೆ ತಮ್ಮ ಮನರಂಜನೆಯನ್ನು ತಮ್ಮ ತಾಯ್ನುಡಿಯಲ್ಲಿ ಪಡೆದುಕೊಳ್ಳುವ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತದೆ. ಹಾಗೆ ಬರೋ ಸಿನಿಮಾಗಳನ್ನು ಚೆನ್ನಾಗಿದ್ದಲ್ಲಿ ಹಿಟ್ ಮಾಡೋದೂ, ಚೆನ್ನಾಗಿಲ್ಲದಿದ್ದರೆ ಹಿಟ್ಟು ಮಾಡೋದೂ ಜನಗಳ ಕೈಲೇ ಇದೆ.
ಚಿತ್ರರಂಗಕ್ಕೊಂದು ಕಿವಿಮಾತು
ಇಂದು ಪರಭಾಷೆಯ ಸಿನಿಮಾಗಳು ನಾಡಿನ ಮೂಲೆಮೂಲೆಗಳಲ್ಲಿ ಬಿಡುಗಡೆಯ ಸೌಭಾಗ್ಯ ಕಾಣಲು ಕನ್ನಡ ಚಿತ್ರರಂಗದ ತಪ್ಪುನೀತಿಗಳೆ ಕಾರಣವಾಗಿದೆ. ಡಬ್ಬಿಂಗ್ ವಿರೋಧಿ ನಿಲುವು, ರಿಮೇಕು, ಹಾಡುಗಳ ಸಂಗೀತದ ನಕಲಿಸುವಿಕೆ, ಕಡಿಮೆಯಿರುವ ಹೊಸ ಪ್ರತಿಭೆಗಳ ಹರಿವು? ಇಂತಹವುಗಳಿಂದಾಗಿ ಕನ್ನಡಿಗ ಪ್ರೇಕ್ಷಕ ಬೇರೆ ಭಾಷೆಯ ಚಿತ್ರಗಳತ್ತ ಮನಸೋಲುತ್ತಿದ್ದಾನೆ. ಗ್ರಾಹಕನಾಗಿ ಆತನಿಗಿರುವ ಅತ್ಯುತ್ತಮವಾದದ್ದನ್ನು ಪಡೆದುಕೊಳ್ಳುವ ಹಕ್ಕನ್ನು ಕನ್ನಡ ಚಿತ್ರರಂಗ ಗೌರವಿಸದೆ ಬ್ಯಾನ್, ನಿಗದಿತ ಪ್ರತಿಯಂತಹ ನಕಾರಾತ್ಮಕ ಕ್ರಮಗಳನ್ನು ಹೇರಲು ಮುಂದಾಗಿ ಈ ಚಿತ್ರಗಳಿಗೆ ಸಲ್ಲದ ಪ್ರಚಾರವನ್ನು ತಾನಾಗೆ ಕಟ್ಟಿಕೊಡುತ್ತಿದೆ ಮತ್ತು ಕಾನೂನಿನ ಮುಂದೆ ಅಪರಾಧಿಯಾಗಿ ನಿಂತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಬರೀ ಕನ್ನಡ ಚಿತ್ರ ವಾಣಿಜ್ಯ ಮಂಡಳಿ ಆಗಿಲ್ಲದಿರುವುದರಿಂದ ಅದು ತುರ್ತಾಗಿ ಮಾಡಬೇಕಾಗಿರೋ ಕೆಲಸವೆಂದರೆ ತುಳು, ಕೊಡವ ಮೊದಲಾದ ಈ ನೆಲದ ಮಣ್ಣಿನ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಅಂತಹ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಬೇಕಾಗಿದೆ. ಕನ್ನಡದ ಪುನೀತ್, ಉಪೇಂದ್ರ ಸೇರಿದಂತೆ ಕನ್ನಡ ಚಿತ್ರಗಳನ್ನು ನೆರೆಯ ಭಾಷೆಗಳಿಗೆ ಡಬ್ಬಿಂಗ್ ಮಾಡಿಸಿ ಅಲ್ಲೂ ಕನ್ನಡಿಗರ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಲು ಮುಂದಾಗಬೇಕಾಗಿದೆ. ಒಟ್ಟಿನಲ್ಲಿ ಬದಲಾದ ಕಾಲಕ್ಕೆ ತಕ್ಕಂತೆ ಕನ್ನಡ ಚಿತ್ರರಂಗ ಹೆಜ್ಜೆ ಹಾಕಲು ಸಹಾಯ ಮಾಡಬೇಕಾಗಿದೆ. ಕನ್ನಡ ಚಿತ್ರರಂಗವು ತಾನೊಂದೇ ನಾಡು ನುಡಿಯ ರಕ್ಷಣೆಯ ಹೊಣೆ ಹೊರುವ/ ಹೊರುತ್ತಿರುವ ಮಾತಾಡುವ ಬದಲು, ಆ ಹೊಣೆಯನ್ನು ನಾಡಪರ ಚಿಂತಕರಿಗೆ, ಸಾಮಾಜಿಕ ಸಂಘಟನೆಗಳಿಗೆ, ರಾಜಕಾರಣಿಗಳಿಗೆ, ಜನತೆಗೆ ಬಿಟ್ಟು - ನಾಡ ರಕ್ಷಣೆಯಲ್ಲಿ ತನ್ನ ಸೀಮಿತ ಪಾತ್ರವನ್ನು ನಿರ್ವಹಿಸುತ್ತಾ ಕನ್ನಡ ಚಿತ್ರರಂಗವನ್ನು ಉದ್ಯಮವಾಗಿ ಹೇಗೆ ಯಶ ಗಳಿಸುವಂತೆ ಮಾಡುವುದು ಎಂದು ಚಿಂತಿಸಿದರೆ ಒಳಿತು.

ಆನಂದ್, ಬನವಾಸಿ ಬಳಗ

ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು: ಗೊ.ರು.ಚನ್ನಬಸಪ್ಪ

ಸಂದರ್ಶನ: ಭಾನುಮತಿ


ಕನ್ನಡ ಸಾಹಿತ್ಯ, ಸಂಸ್ಕೃತಿ, ಸಮಾಜ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಹಲವಾರು ದಶಕಗಳಿಂದ ಅವಿರತವಾಗಿ ದುಡಿದಿದ್ದೀರಿ. ಹಿಂದಿರುಗಿ ನೋಡಿದಾಗ ಸದ್ಯದ ಸನ್ನಿವೇಶದಲ್ಲಿ ನಿಮಗೆ ಏನನ್ನಿಸುತ್ತದೆ?

ಹಿಂದಿರುಗಿ ನೋಡಿದ್ದು ಕಡಿಮೆ, ಮುಂದಿನದರ ಬಗೆಗೆ ಚಿಂತಿಸಿದ್ದೂ ಕಡಿಮೆ. ಅಂದಂದು ನಿರ್ವಹಿಸಬೇಕಾದ ಹೊಣೆಗಾರಿಕೆಯೊಂದರ ಬಗೆಗೆ ನಾನು ಗಮನ ಕೊಡುತ್ತಾ ಬಂದಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಹಿಂದಿರುಗಿ ನೋಡಿದಾಗ ಕಹಿ-ಸಿಹಿಗಳೆರಡೂ ನೆನಪಾಗುತ್ತವೆ. ತಂದೆ-ತಾಯಿಗಳಿಗೆ ನನ್ನನ್ನು ಹೆಚ್ಚಿನ ಶಿಕ್ಷಣಕ್ಕೆ ಕಳುಹಿಸಬೇಕೆಂದಿದ್ದರೂ ಬಡತನದ ಬವಣೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಅವರ ಸಂಕಟದ ನೆನಪು ಈಗಲೂ ನನಗೆ ದುಃಖವುಂಟು ಮಾಡುತ್ತದೆ. ನನ್ನ ತಂದೆ ತಿಂಗಳಿಗೆ ಏಳು ರೂ. ಸಂಬಳದಲ್ಲಿ ಅನುದಾನಿತ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿದ್ದರು. ನನ್ನನ್ನೂ ಅಂತಹ ಶಾಲಾ ಉಪಾಧ್ಯಾಯನನ್ನಾಗಿ ಮಾಡಲು ಮಾತ್ರ ಅವರಿಗೆ ಸಾಧ್ಯವಾಯಿತು ಅಷ್ಟೇ.
ನನ್ನ ಜೀವನದ ಆರಂಭದ ಆ ಕಾಲ ದುರ್ಭರ ದಾರಿದ್ರ್ಯ ಅನುಭವದ ಕಾಲವಾದರೂ ಒಂದು ರೀತಿಯ ಸಂತೃಪ್ತಿ-ಸಮಾಧಾನಗಳೇ ಇದ್ದವು. ನನ್ನ ತಾಯಿ ಕಂಡವರ ಹೊಲಕ್ಕೆ ದಿನಕ್ಕೆ ಮೂರು ಆಣೆ ಕೂಲಿಗೆ ಹೋಗುತ್ತಿದ್ದರು. ರಜದ ದಿನಗಳಲ್ಲಿ ನಾನೂ ಕೂಲಿಗೆ ಹೋಗುತ್ತಿದ್ದೆ. ನನಗೆ ದಿನಕ್ಕೆ ಒಂದೂವರೆ ಆಣೆ ಕೂಲಿ. ನಮಗೆ ಆ ಹಣಕ್ಕಿಂತ ಮುಖ್ಯವಾಗುತ್ತಿದ್ದುದು ನಾವು ಕೂಲಿ ಹೋಗುತ್ತಿದ್ದ ಹೊಲದವರು ಕೊಡುತ್ತಿದ್ದ ಒಂದು ಹೊತ್ತಿನ ಊಟ!
ನಮ್ಮೂರು ಚಿಕ್ಕಮಗಳೂರು ಜಿಲ್ಲಾ ತರೀಕೆರೆ ತಾಲೂಕಿನ ಒಂದು ಚಿಕ್ಕ ಹಳ್ಳಿ-ಗೊಂಡೇದಹಳ್ಳಿ. ಗ್ರಾಮೀಣ ಪರಿಸರದಲ್ಲೇ ಬೆಳೆದ ನನಗೆ ಸಾಹಿತ್ಯ, ಸಂಸ್ಕೃತಿ ಸಾಮಾಜಿಕ ಚಟುವಟಿಕೆಗಳಲ್ಲಿ ಹೇಗೆ ಆಸಕ್ತಿ ಉಂಟಾಯಿತೆಂದು ಸ್ಪಷ್ಟವಾಗಿ ಹೇಳಲಾರೆ. ನಾನು ಮಾಧ್ಯಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ ಚಳವಳಿಯ ಕಾಲ. ನಾನು ಚಳವಳಿಯಲ್ಲಿ ಪಾಲುಗೊಂಡೆ. ಆ ಸಂದರ್ಭದಲ್ಲಿ ಸಿದ್ಧವನಹಳ್ಳಿ ನಿಜಲಿಂಗಪ್ಪನವರು, ಗುದ್ಲೆಪ್ಪ ಹಳ್ಳಿಕೇರಿ, ಮೊದಲಾದ ನಾಡ ಅಭಿಮಾನಿಗಳನ್ನು ನಿಕಟವಾಗಿ ನೋಡಲು ಅವಕಾಶವಾಯಿತು. ಅವರ ನಡೆ-ನುಡಿಗಳು ನನ್ನ ಮೇಲೆ ಪ್ರಭಾವ ಬೀರಿದವು.
ನಾನು ಪ್ರೌಢಶಾಲೆ ಕಲಿತದ್ದು ಬೀರೂರಿನಲ್ಲಿ. ಸ್ವಾತಂತ್ರ್ಯ ಚಳವಳಿ ಭಾಗವಾಗಿ ಪ್ರತಿದಿನ ಬೆಳಗ್ಗೆ ನಡೆಯುತ್ತಿದ್ದ ಪ್ರಭಾತ್‌ಭೇರಿಯಲ್ಲಿ ಸ್ವಾತಂತ್ರ್ಯ ಗೀತೆಗಳನ್ನು ನಾನೇ ಹಾಡುತ್ತಿದ್ದೆ. ಅವುಗಳಲ್ಲಿ ಒಂದು ಗೀತೆಯ ಒಂದೆರಡು ಸಾಲುಗಳು ಇನ್ನೂ ನೆನಪಿನಲ್ಲಿವೆ: "ಓ ತಮ್ಮ, ಓ ತಂಗಿ, ಓ ಏನಂತಿ? ಹಾಕಬೇಕು ಇನ್ನು ಖಾದಿ, ಹಿಡಿಬೇಕು ಹಳ್ಳಿ ಹಾದಿ, ಓ ಏನಂತಿ?" ಆ ಸಾಲುಗಳೇ ನನ್ನ ಬದುಕಿನ ಸೂತ್ರಗಳಾದವು. ಅಂದಿನಿಂದ ಹುಟ್ಟಿದ ಹಳ್ಳಿಯ ಸೇವೆ ನನ್ನ ಕರ್ತವ್ಯಗಳಲ್ಲಿ ಒಂದಾಯಿತು. ಖಾದಿ ಧರಿಸುವುದು ನನ್ನ ರೂಢಿಯಾಯಿತು. ಈ ಎರಡನ್ನು ಇಂದಿಗೂ ಪರಿಪಾಲಿಸಿಕೊಂಡು ಬಂದಿದ್ದೇನೆ.
ಅಂದು ಗಾಂಧೀಜಿ ಕೊಟ್ಟ ಗ್ರಾಮೋದ್ಧಾರದ ಕರೆಯಲ್ಲಿ ಗ್ರಾಮ ಭಾರತದಲ್ಲಿ ನೈತಿಕ ಬಲ ಮತ್ತು ಆತ್ಮವಿಶ್ವಾಸವನ್ನು ಹುಟ್ಟಿಸುವ ಒಂದು ಆಶಯವಿತ್ತು. ಸ್ವಾತಂತ್ರ್ಯಾನಂತರ ಗ್ರಾಮೀಣಾಭಿವೃದ್ಧಿಯ ಕೆಲಸಗಳೇನೋ ಆಗುತ್ತಿವೆ. ಆದರೆ ಗ್ರಾಮೀಣರ ನೈತಿಕ ಬಲ ಮತ್ತು ಆತ್ಮವಿಶ್ವಾಸಗಳು ನೆಲಕಚ್ಚಿ ಹೋಗಿವೆ. ಇದು ನಿಜಕ್ಕೂ ಒಂದು ನಿರಾಸೆಯ ಬೆಳವಣಿಗೆ. ನಮ್ಮ ಪ್ರಜಾಪ್ರಭುತ್ವದ ನೆಲಗಟ್ಟೇ ಹಳ್ಳಿಗಳು. ಆದರೆ ಆ ನೆಲಗಟ್ಟನ್ನು ಭದ್ರಪಡಿಸುವ ಪ್ರಾಮಾಣಿಕ ಪ್ರಯತ್ನ ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ರಾಜಕೀಯ ವ್ಯವಸ್ಥೆಗಳಿಂದ ನಡೆಯಲಿಲ್ಲವೆಂದೇ ನನಗನಿಸುತ್ತದೆ. ನಮ್ಮ ಹಳ್ಳಿಗಳ ಕ್ರಿಯಾಶೀಲ ಬದುಕನ್ನು ಹಾಳುಮಾಡಿರುವ, ಅಲ್ಲಿನ ಜನರ ಪರಂಪರೆಯ ಜೀವನ ಸಂಸ್ಕೃತಿಯನ್ನು ವಿಕೃತಗೊಳಿಸಿರುವ ಒಂದು ದೊಡ್ಡ ಅನಿಷ್ಟವೆಂದರೆ ಅಲ್ಲಿ ಪ್ರವೇಶಿಸುವ ಅಪಕ್ವ ರಾಜಕೀಯ. ಈ ಕಳವಳಕಾರಿ ಬೆಳವಣಿಗೆಯ ಬಗೆಗೆ ಪ್ರಜ್ಞಾವಂತರೆಲ್ಲ ಗಂಭೀರವಾಗಿ ಆಲೋಚಿಸಬೇಕು.

ಶಿಕ್ಷಣ ಇಲಾಖೆಯಿಂದಲೇ ನಿಮ್ಮ ವೃತ್ತಿ ಬದುಕು ಆರಂಭವಾಯಿತು. ಪ್ರಾಥಮಿಕ ಶಾಲೆ ಉಪಾಧ್ಯಾಯರಾಗಿ ತಮ್ಮ ಸೇವೆಯನ್ನು ಆರಂಭಿಸಿದಿರಿ. ಶಿಕ್ಷಣ ಕ್ಷೇತ್ರ ಅದರಲ್ಲೂ ಪ್ರಾಥಮಿಕ ಶಿಕ್ಷಣ ಕ್ಷೇತ್ರದ ಇಂದಿನ ಆಗುಹೋಗುಗಳ ಕುರಿತು ನಿಮ್ಮ ಅಭಿಪ್ರಾಯವೇನು? ಇಲ್ಲಿ ನಡೆಸಬೇಕಿರುವ ಸುಧಾರಣೆಗಳೇನು?
ನನ್ನ ವೃತ್ತಿ ಜೀವನ ಆರಂಭವಾದದ್ದು ಪ್ರಾಥಮಿಕ ಶಾಲಾ ಶಿಕ್ಷಕನಾಗಿ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವೇ ನಾನು ಸರ್ಕಾರಿ ಸೇವೆಗೆ ಸೇರಿದೆ. ಅಂದಿಗಿಂತ ಇಂದು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಪ್ರಯೋಗಗಳಾಗಿವೆ. ಸುಧಾರಣೆಗಳೂ ಆಗಿವೆ. ಆದರೆ ಈ ಎಲ್ಲವೂ ಕೇವಲ ಜೀವನೋಪಾಯಕ್ಕೆ ಒತ್ತು ಕೊಡುತ್ತಿವೆಯೇ ವಿನಃ ವ್ಯಕ್ತಿ ನಿರ್ಮಾಣದ ಕಡೆ ಗಮನ ಕೊಟ್ಟಿಲ್ಲವೆಂದೇ ನನಗನಿಸುತ್ತದೆ. ವಾಸ್ತವವಾಗಿ ಶಿಕ್ಷಣದ ಮೂಲ ಉದ್ದೇಶವೇ ವ್ಯಕ್ತಿ ನಿರ್ಮಾಣ. ವಿದ್ಯಾರ್ಥಿಗಳಲ್ಲಿ ಅಧ್ಯಯನ ಶ್ರದ್ಧೆ, ರಾಷ್ಟ್ರನಿಷ್ಠೆ, ಸಾಮಾಜಿಕ ಬದ್ಧತೆ, ವೈಯಕ್ತಿಕ ಚಾರಿತ್ರ್ಯ, ಸಮಷ್ಟಿ ಪ್ರಜ್ಞೆ, ಅರ್ಪಣಾಭಾವದ ಸೇವಾಸಕ್ತಿ, ಇತ್ಯಾದಿ ನೈತಿಕ ಗುಣಗಳನ್ನು ಮೈಗೂಡಿಸದಿದ್ದರೆ ಶಿಕ್ಷಣಕ್ಕೆ ಏನು ಅರ್ಥವಿರುತ್ತದೆ? "ಪ್ರತಿಯೊಂದು ಮಗುವೂ ಹುಟ್ಟುವಾಗ ಪ್ರತಿಭಾನ್ವಿತವಾಗೇ ಇರುತ್ತದೆ. ಶಾಲೆ-ಕಾಲೇಜುಗಳು ಆ ಪ್ರತಿಭೆಯನ್ನು ಹಾಳುಗೆಡವುತ್ತವೆ" ಎಂಬ ಒಂದು ಮಾತಿದೆ. ಈ ಮಾತನ್ನು ನಮ್ಮ ಶಿಕ್ಷಣ ನೀತಿ ನಿರೂಪಕರು, ಶಿಕ್ಷಣ ಮೇಲ್ವಿಚಾರಕರು, ಮಕ್ಕಳ ಪೋಷಕರು, ವಿಶೇಷವಾಗಿ ಶಿಕ್ಷಕರು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು.
ಶಿಕ್ಷಣ ಕ್ಷೇತ್ರವೆಂದರೆ ಶಿಕ್ಷಕನ ಪಾತ್ರವೇ ಮುಖ್ಯವಾಗುತ್ತದೆ. ಸ್ವಾತಂತ್ರ್ಯಪೂರ್ವದ ಮತ್ತು ಸ್ವಾತಂತ್ರ್ಯ ಬಂದ ಆರಂಭದ ಒಂದೆರಡು ದಶಕಗಳಲ್ಲಿ ಇದ್ದ ಶಿಕ್ಷಕರ ಸಮರ್ಪಣ ಭಾವದ ಸೇವೆಯನ್ನು ಇಂದು ಕಾಣಲಾಗುತ್ತಿಲ್ಲ ಎನ್ನುವುದು ಅತ್ಯಂತ ದುಃಖದ ಸಂಗತಿ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಕೇವಲ ಯಾಂತ್ರಿಕ ಸೇವೆ ಸಲ್ಲಿಸುವಂತಾದರೆ ಅದು ಹಳ್ಳಿಯ ಮಕ್ಕಳಿಗೆ ಬಗೆದ ದ್ರೋಹವಾಗುತ್ತದೆ.
ನಾನು ಸುಮಾರು ೧೫ ವರ್ಷಗಳ ಕಾಲ ಪ್ರಾಥಮಿಕ ಶಾಲೆ ಉಪಾಧ್ಯಾಯನಾಗಿದ್ದೆ. ನಾನು ಕೆಲಸ ಮಾಡಿದ ೩-೪ ಹಳ್ಳಿಗಳಲ್ಲಿ ಅಲ್ಲಿನ ಶಾಲೆಗಳಿಗೆ ಅಗತ್ಯವಾದ ಪಾಠ-ಪೀಠೋಪಕರಣಗಳು, ಅಕ್ಕ-ಪಕ್ಕದ ಹಳ್ಳಿಗಳಿಂದ ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ-ಮೊದಲಾದ ಸೌಲಭ್ಯಗಳನ್ನು ಆಯಾ ಹಳ್ಳಿಗಳ ಜನರ ಸಹಾಯ-ಸಹಕಾರಗಳಿಂದಲೇ ಕಲ್ಪಿಸಿದ ತೃಪ್ತಿ ನನ್ನದು. ಒಂದು ಹಳ್ಳಿಯಲ್ಲಿ ಮಕ್ಕಳಿಗೆ ಕೂರಲು ಸ್ಥಳಾವಕಾಶವಿರಲಿಲ್ಲ. ಆಗ ಪೋಷಕರೊಡನೆ ಸಮಾಲೋಚಿಸಿ, ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಿ, ಮಕ್ಕಳ ಶ್ರಮದಾನದಿಂದಲೇ ಒಂದು ಮಣ್ಣಿನ ಗೋಡೆಯ ಕೊಠಡಿ ನಿರ್ಮಿಸಿ, ಅದರಲ್ಲಿ ತರಗತಿ ನಡೆಸಿದ್ದನ್ನು ನಾನು ಮರೆಯಲಾರೆ.

ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಬೇಕು ಎಂಬುದು ಮೊದಲಿನಿಂದಲೂ ಕೇಳಿ ಬರುತ್ತಿರುವ ಕೂಗು. ಅದಕ್ಕೆ ನಾನಾ ರೀತಿಯ ಅಡ್ಡಿ, ಆತಂಕ, ತಕರಾರುಗಳು. ಈ ಕುರಿತು ನಿಮ್ಮ ಸ್ಪಷ್ಟ ನಿಲುವೇನು? ಮತ್ತು ಅದಕ್ಕೆ ಕಾರಣಗಳೇನು?
ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಬೇಕು ಎನ್ನುವುದು, ’ಪ್ರಾಥಮಿಕ ಶಿಕ್ಷಣಕ್ಕೆ ಮಕ್ಕಳ ಮಾತೃಭಾಷೆಯೇ ಮಾಧ್ಯಮವಾಗಬೇಕು’ ಎಂಬ ವಿಶ್ವದಾದ್ಯಂತ ಶಿಕ್ಷಣತಜ್ಞರು ಅಭಿಪ್ರಾಯಕ್ಕೆ ಅನುಗುಣವಾಗೇ ಇದೆ. ಇದಕ್ಕೆ ನ್ಯಾಯಾಲಯಗಳೂ ವಿರೋಧವಾಗಿಲ್ಲ. ಇದು ಕರ್ನಾಟಕಕ್ಕಷ್ಟೇ ಅನ್ವಯಿಸುವಂತಹ ಸಂಗತಿಯಲ್ಲ. ಯಾವುದೇ ಪ್ರದೇಶದ ಭಾಷೆಗೆ ಅನ್ವಯಿಸುವಂತಹ ನಿಲುವು.
ಕರ್ನಾಟಕದಲ್ಲಿ ಕನ್ನಡ ಅಧಿಕೃತವಾಗಿ ರಾಜ್ಯಭಾಷೆ ಎಂದು ಘೋಷಿಸಲ್ಪಟ್ಟಿರುವ ಭಾಷೆ. ನಮ್ಮ ಸಂವಿಧಾನದಲ್ಲೇ ರಾಷ್ಟ್ರೀಯ ಭಾಷೆಯ ಮನ್ನಣೆ ಪಡೆದಿದೆ. ಇಲ್ಲಿನ ಮಕ್ಕಳು ತಮ್ಮ ತಾಯಿ ನುಡಿಯಲ್ಲಿ ಕಲಿಯಲು ಅವಕಾಶವಿಲ್ಲವೆಂದರೆ ಹೇಗೆ? ಮುಂದಿನ ಹಂತಗಳಲ್ಲಿ ಮಕ್ಕಳು ಇಚ್ಛಿಸುವ ಯಾವ ಭಾಷೆಯನ್ನಾದರೂ ಕಲಿಯಲಿ. ಕಲಿಕೆಗೆ ವಿಷಯಗಳನ್ನು ಆರಿಸಿಕೊಳ್ಳುವಂತೆ ಭಾಷೆಯನ್ನೂ ಆರಿಸಿಕೊಳ್ಳಲಿ. ಆದರೆ ಮೂಲಭೂತವಾದ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕನ್ನಡವೇ ಮಾಧ್ಯಮವಾಗಬೇಕೆಂಬ ಸಾಮಾನ್ಯ ಪ್ರಜ್ಞೆಯೂ ನಮ್ಮ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುವವರಿಗೆ ಇಲ್ಲದಿದ್ದರೆ ಹೇಗೆ?
ಇಂದು ವಿಶ್ವವ್ಯಾಪಿ ಎನಿಸಿರುವ ಇಂಗ್ಲೀಷ್ ಭಾಷೆಯ ಬ್ರಿಟೀಷರು ನಮ್ಮನ್ನಾಳುತ್ತಿದ್ದಾಗ, ೧೮೩೦ರಲ್ಲಿ ಧಾರವಾಡದಲ್ಲಿ ಮರಾಠಿ ಶಾಲೆ ಆರಂಭದ ಪ್ರಯತ್ನ ನಡೆದಾಗ ತಾನೇ ’ಇದು ತಪ್ಪು, ಇದು ಕನ್ನಡದ ನೆಲ’ ಎಂದು ವಾದಿಸಿ ಕನ್ನಡ ಶಾಲೆ ತೆರೆದು ತನ್ನ ಹಣದಿಂದಲೇ ಅದನ್ನು ಕೆಲಕಾಲ ನಡೆಸಿದ ಈಲಿಯೆಟ್‌ಗಿದ್ದಂತಹ ಭಾಷಾಭಿಮಾನ ನಮಗಿಲ್ಲದಿದ್ದರೆ ಹೇಗೆ? ಆಡಳಿತ ನಡೆಸುವವರು ಕಾನೂನು ತೊಡಕು ಹೇಳುತ್ತಾರೆ. ಆ ತೊಡಕನ್ನು ಬಿಡಿಸಬೇಕಾದವರೂ ಅವರೇ. ಅವರು ರಾಜಕೀಯ ಕಾರಣಗಳಿಂದಾಗಿ ಶಿಕ್ಷಣ ಮಾಧ್ಯಮ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಿಂದೆ ಮುಂದೆ ನೋಡುತ್ತಿರುವುದು ಹಗಲಿನಷ್ಟೇ ಸತ್ಯ.
ಇಂಗ್ಲೀಷ್ ಕಲಿಸುವ ಬಗೆಗೆ ಯಾರದೇ ವಿರೋಧವಿಲ್ಲ. ಶಿಕ್ಷಕನಾಗಬೇಕೆನ್ನುವವರಿಗೆ ಬೋಧನ ತರಬೇತಿ ಕೊಡುವಂತೆ, ಶೂಶ್ರೂಷಕರಾಗಬೇಕೆನ್ನುವವರಿಗೆ ಶುಶ್ರೂಷಣ ತರಬೇತಿ ಕೊಡುವಂತೆ, ಉದ್ಯೋಗದ ಸಲುವಾಗಿ ಇಂಗ್ಲಿಷ್ ಬೇಕೆನ್ನುವವರಿಗೆ ಇಂಗ್ಲಿಷ್ ತರಬೇತಿ ಕೊಡಲಿ. ಆದರೆ ಎಳೆ ಮಕ್ಕಳ ಮೇಲೆ ತಾಯ್ನುಡಿಯಲ್ಲದ ಭಾಷೆಯ ಬರೆ ಎಳೆಯಬಾರದು.
ಈ ದಿಸೆಯಲ್ಲಿ ಸರ್ಕಾರ ಉದಾಸೀನ ಅಥವಾ ನಿರ್ಲಕ್ಷ್ಯ ತಾಳಿದರೆ, ಮಾತೃಭಾಷಾ ಶಿಕ್ಷಣ ಮಾಧ್ಯಮವಾದಿಗಳು ಸಂಘಟಿತ ಪ್ರಯತ್ನ ನಡೆಸಬೇಕು. ಪೋಷಕರೂ ಇಂಗ್ಲಿಷಿನ ಹುಚ್ಚು ಬಿಟ್ಟು ಮಕ್ಕಳ ಆರಂಭಿಕ ಜ್ಞಾನವಿಕಾಸಕ್ಕೆ ಮನಮಾಡಬೇಕು. ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿರುವ ಯಾರೂ ಇಂದು ಆ ಕಾರಣಕ್ಕಾಗಿ ಹಿಂದುಳಿದಿಲ್ಲ.
ಇಲ್ಲಿ ಬೇಕಾಗಿರುವುದು ಜನಜಾಗೃತಿ ಮತ್ತು ಆಡಳಿತ ನಡೆಸುವವರಿಗೆ ವಸ್ತುನಿಷ್ಠ ಪ್ರಜ್ಞೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅದಕ್ಕೆ ಹೊಸ ರೂಪವನ್ನು ಕೊಟ್ಟವರು ನೀವು. ಅಮೃತನಿಧಿ ಸ್ಥಾಪನೆ ನಿಮ್ಮ ಕಾಲದಲ್ಲೇ ಆಗಿದ್ದು. ಕನ್ನಡ ಸಾಹಿತ್ಯ ಪರಿಷತ್ತು ಹೊಸ ಕಾಲಘಟ್ಟದಲ್ಲಿ ಅನುಸರಿಸಬೇಕಾದ ಮಾರ್ಗವೇನು? ಪರಿಷತ್ತನ್ನು ಇನ್ನಷ್ಟು ಜನಮುಖಿಗೊಳಿಸಲು ಅಗತ್ಯವಾಗಿರುವ ಕಾರ್ಯಕ್ರಮಗಳೇನು?
ಕನ್ನಡ ಸಾಹಿತ್ಯ ಪರಿಷತ್ತಿಗೆ ನಾನು ಅಧ್ಯಕ್ಷನಾಗುವ ಮುನ್ನ ಅದರ ಕಾರ್ಯದರ್ಶಿಯೂ ಆಗಿದ್ದೆ. ಆ ಕಾಲದ ಕಷ್ಟವನ್ನು ಈಗ ಹೇಳಿಕೊಂಡು ಫಲವಿಲ್ಲ. ಹಿಂದೊಂದು ಸಮ್ಮೇಳನ ಸಂದರ್ಭದಲ್ಲಿ ದಿ.ಹಾ.ಮಾ.ನಾಯಕ ಅವರು ’ಒಬ್ಬ ಕನ್ನಡಿಗ ಒಂದು ರೂ. ಕೊಟ್ಟರೂ ಸಾಕು ಮುನ್ನಿಲ್ಲದಂತೆ ಕನ್ನಡದ ಕೆಲಸ ಮಾಡಬಹುದು ಎಂದಿದ್ದರು. ಆ ಮಾತಿನ ಎಳೆ ಹಿಡಿದೇ ನಾನು ’ಒಬ್ಬ ಕನ್ನಡಿಗ-ಒಂದು ರೂಪಾಯಿ’ ಯೋಜನೆ ಆರಂಭಿಸಿದೆ. ಯಾವುದೇ ಹೊಸ ವಿಚಾರಕ್ಕೆ ಬಂದಂತೆ ಅದಕ್ಕೂ ನಾನಾ ರೂಪದ ಪ್ರತಿಕ್ರಿಯೆಗಳು ಬಂದವು. ಹಲವು ರೀತಿಯ ಅನುಮಾನಗಳು ವ್ಯಕ್ತವಾದುವು. ಆದರೆ ನನಗೆ ವಿಶ್ವಾಸವಿತ್ತು. ಕೈಗೊಂಡ ಯೋಜನೆ ಆಶಾದಾಯಕವಾಗೇ ಆರಂಭವಾಯಿತು. ಅದು ಇಲ್ಲಿಗೆ ೧೭ ವರ್ಷಗಳ ಹಿಂದಿನ ಮಾತು. ಆಗ ಸುಮಾರು ೨೦-೦೦ ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಯಿತು. ಬಹುಶಃ ಅದನ್ನು ಹಾಗೆಯೇ ಮುಂದುವರಿಸಿದ್ದರೆ ಇಷ್ಟು ಹೊತ್ತಿಗೆ ಐದಾರು ಕೋಟಿ ರೂ.ಗಳೇ ಸಂಗ್ರಹವಾಗುತ್ತಿತ್ತು.
ಆದರೆ, ಈಗ ಸರ್ಕಾರವೇ ವರ್ಷಕ್ಕೆ ಕೋಟ್ಯಂತರ ರೂ.ಗಳ ನೆರವು ಕೊಡಲು ಆರಂಭಿಸಿದೆ. ಈ ನೆರವು ಬರುವುದೇನೋ ಸಂತೋಷವೇ. ಇಂತಹ ಪ್ರಾತಿನಿಧಿಕ ಸಂಘಟನೆಗಳಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯವೂ ಹೌದು. ಆದರೆ, ಅದರಲ್ಲಿ ಜನರ ಪಾಲುಗಾರಿಕೆ ಇದ್ದಂತಾಗುವುದಿಲ್ಲ. ಸುಲಭವಾಗಿ ದೊರೆಯುವ ನೆರವು ಯಾವಾಗಲೂ ನಮ್ಮ ಕ್ರಿಯಾಶೀಲತೆಯನ್ನು ಹಾಳು ಮಾಡುತ್ತದೆ. ಸಾಹಿತ್ಯ ಪರಿಷತ್ತು ಕೇವಲ ಸರ್ಕಾರದ ಅನುದಾನದ ಒಂದು ಮನೆಯಾಗಬಾರದು ಅದಕ್ಕೆ ಸಾಹಿತಿಗಳ ಶ್ರಮದ ಸಂಭವವೂ ಸೇರಬೇಕು. ಕನ್ನಡಿಗರ ಕೊಡುಗೆಯೂ ಕೂಡಬೇಕು.
ಇನ್ನು ಸರ್ಕಾರ ಅನುದಾನ ಕೊಟ್ಟ ಮಾತ್ರಕ್ಕೆ ಪರಿಷತ್ತು ಸರ್ಕಾರದ ಹಂಗಿನಲ್ಲಿರುಬೇಕೆಂದೇನೂ ಇಲ್ಲ. ಪರಿಷತ್ತಿನಂತಹ ಪ್ರಾತಿನಿಧಿಕ ಸಾಂಸ್ಕೃತಿಕ ಸಂಘಟನೆ ಸರ್ಕಾರದ ಅನುದಾನ ಪಡೆಯುವುದು ಅದರ ಹಕ್ಕು. ಅನುದಾನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಆ ಅನುದಾನವನ್ನೇ ಅವಲಂಬಿಸುವುದಕ್ಕಿಂತ ತನ್ನ ಸಂಪನ್ಮೂಲಗಳನ್ನು ರೂಢಿಸಿಕೊಳ್ಳುವುದು ಹೆಚ್ಚು ಆರೋಗ್ಯಕರ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೀವು ನಿರ್ವಹಿಸಿದ, ನಿಮಗೆ ತೃಪ್ತಿ ತಂದ ಕೆಲಸಗಳೇನು?
ನಾನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ಹಣದ ಕೊರತೆ ಅಗಾಧವಾಗಿತ್ತಾದರೂ, ನನಗಿದ್ದ ಜನಸಂಪರ್ಕವನ್ನು ಬಳಸಿಕೊಂಡು, ಪರಿಷತ್ತಿನ ಘನತೆ-ಗೌರವಗಳಿಗೆ ತಕ್ಕಂತೆ ಅದನ್ನು ನಿರ್ವಹಿಸಿದ ತೃಪ್ತಿ ನನಗಿದೆ.
ಆಗ ನಾನು ಸರ್ಕಾರದ ಒಂದು ಬಿಡಿಕಾಸಿನ ನೆರವೂ ಇಲ್ಲದೆ ಕೇವಲ ಕನ್ನಡ ಬಂಧುಗಳ ಸಹಕಾರದಿಂದ ನಡೆಸಿದ ವಿಶಿಷ್ಟ ಕಾರ್ಯಕ್ರಮಗಳೆಂದರೆ, ಸಾಹಿತ್ಯದ ವಿವಿಧ ಪ್ರಕಾರ ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜ್ಯದ ಬೇರೆ ಬೇರೆ ಕಡೆ ಕಾವ್ಯ ಸಾಹಿತ್ಯ, ನಾಟಕ ಸಾಹಿತ್ಯ, ಮಕ್ಕಳ ಸಾಹಿತ್ಯ, ಮಹಿಳಾ ಸಾಹಿತ್ಯ, ಚಲನಚಿತ್ರ ಸಾಹಿತ್ಯ, ಚಾರಣ ಸಾಹಿತ್ಯ, ಮಾಧ್ಯಮ ಸಾಹಿತ್ಯ, ಜನಪದ ಸಾಹಿತ್ಯ ಮುಂತಾದ ಸಮಾವೇಶಗಳು. ಈ ಸಮಾವೇಶಗಳಿಂದಾಗಿ ಆಯಾ ಕ್ಷೇತ್ರದ ಲೇಖಕರು, ಚಿಂತಕರು ಮತ್ತು ಆಸಕ್ತರು ಒಂದು ಕಡೆ ಕೂಡಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶವಾಯಿತು.
ನನ್ನ ಅವಧಿಯ ಮತ್ತೊಂದು ಮಹತ್ವದ ಕಾರ್ಯವೆಂದರೆ ಪರಿಷತ್ತಿನ ದತ್ತಿನಿಧಿ ಯೋಜನೆಗೆ ಹೊಸ ಚಾಲನೆ ಕೊಟ್ಟಿದ್ದು. ಅದಕ್ಕೆ ದೊರೆತ ಪ್ರತಿಕ್ರಿಯೆ ನಿಜಕ್ಕೂ ಹೃದಯ ತುಂಬಿ ಬರುವಂತಹುದು. ನೂರು-ಸಾವಿರ ರೂ.ಗಳ ದತ್ತಿ ಕೊಡುಗೆಗಳ ಮೊತ್ತ ಲಕ್ಷ-ಲಕ್ಷ ರೂ ಗಳಿಗೆ ಹೆಚ್ಚಿತು. ಬಹುಶಃ ಆ ದತ್ತಿಗಳ ಸಂಖ್ಯೆ ಈಗ ಸಾವಿರಗಟ್ಟಲೆ ಆಗಿರಬಹುದು. ಅಂತಹ ಕೊಡುಗೆಗಳ ಮೊತ್ತವೂ ಕೋಟಿಗಟ್ಟಲೆ ಆಗಿರಬಹುದು. ಕನ್ನಡ ಸಂಬಂಧದ ಒಂದಲ್ಲ ಒಂದು ಚಟುವಟಿಕೆ ರಾಜ್ಯದ ಒಂದಲ್ಲ ಒಂದು ಕಡೆ ಇಡೀ ವರ್ಷ ನಡೆಯಲು ಈ ದತ್ತಿ ನಿಧಿ ಯೋಜನೆ ನೆರವಾಗಿದೆ. ಇದೊಂದು ಶಾಶ್ವತ ವ್ಯವಸ್ಥೆ.
ನನ್ನ ಅವಧಿಯಲ್ಲಿ ಪರಿಷತ್ತಿನಲ್ಲಿ ನಡೆಸಿದ ಎಲ್ಲ ಸಾಹಿತ್ಯ-ಸಂಸ್ಕೃತಿ ಚಟುವಟಿಕೆಗಳೂ ನನ್ನ ನೆನಪಿನಲ್ಲಿ ಉಳಿದಿಲ್ಲ. ಆದರೆ, ಸಂಶೋಧನ ವಿಭಾಗದ ವಿಶೇಷ ಉಪನ್ಯಾಸಗಳು, ಪಶ್ಚಿಮಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ನಡೆಸಿದ ಸಾಹಿತ್ಯ ವಿನಿಮಯ ಕಾರ್ಯಕ್ರಮಗಳು, ಕನ್ನಡ ನಾಡಗೀತೆಗಳ ಧ್ವನಿಸುರುಳಿ ನಿರ್ಮಾಣ, ಸಮ್ಮೇಳನ ಸಂದರ್ಭದಲ್ಲಿ ಗೀತ-ಸಂಗೀತ ಕಾರ್ಯಕ್ರಮ, ನಿಘಂಟು ಯೋಜನೆ ಪೂರ್ಣಗೊಳಿಸಿದ್ದು, ಪರಿಷತ್ತಿನ ಸಿಬ್ಬಂದಿಯನ್ನು ಸರ್ಕಾರದ ಅನುದಾನ ಸಂಹಿತೆಗೆ ಒಳಪಡಿಸಿದ್ದು, ಪ್ರಪ್ರಥಮವಾಗಿ ಪರಿಷತ್ತಿನ ವೇದಿಕೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಿದ್ದು, ವಿದೇಶ ನಿವಾಸಿ ಕನ್ನಡಿಗರಿಂದ ಪರಿಷತ್ತಿಗೆ ಕೊಡುಗೆ ಸಂಗ್ರಹಿಸಿದ್ದು, ಕನ್ನಡ ಪರ ಚಳವಳಿಗಳಲ್ಲಿ ಕ್ರಿಯಾತ್ಮಕವಾಗಿ ಪಾಲುಗೊಂಡಿದ್ದು, ಪರಿಷತ್ತಿನ ಕಾರ್ಯಕ್ರಮಗಳ ವ್ಯವಸ್ಥೆಯಲ್ಲಿ ಕನ್ನಡ ಕಾರ್ಯಕರ್ತರನ್ನು ಸ್ವಯಂ ಸೇವಕರನ್ನಾಗಿ ಪಡೆದದ್ದು-ಹೀಗೆ ಕೆಲವು ಕಾರ್ಯಚಟುವಟಿಕೆಗಳನ್ನು ಮಾತ್ರ ನೆನಪು ಮಾಡಿಕೊಳ್ಳಬಹುದು. ಏನೇ ಇದ್ದರೂ ಪರಿಷತ್ತಿನಲ್ಲಿ ನನ್ನ ಸೇವಾವಧಿ ನನಗೆ ತೃಪ್ತಿ ತಂದಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳು ಕನ್ನಡಿಗರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ? ಈ ಸಂಸ್ಥೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲವೇ?
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಪದನಿಮಿತ್ತ ಸದಸ್ಯನಾಗಿರುವ ಅವಕಾಶ ಇದ್ದದ್ದು ನಿಜ. ಆ ಅವಧಿಯಲ್ಲಿ ಆ ಪ್ರಾಧಿಕಾರಗಳಿಗೆ ನನ್ನಿಂದ ಹೇಳಿಕೊಳ್ಳುವಂತಹ ಸಲಹೆಗಳೇನಾದರೂ ದೊರೆತಿವೆ ಎಂದು ಭಾವಿಸುವುದಿಲ್ಲ. ಆದರೂ ಆ ಎರಡೂ ಪ್ರಾಧಿಕಾರಗಳ ಪ್ರಾಮುಖ್ಯತೆಯನ್ನು ಅರಿತಿದ್ದೇನೆ.
ಈ ಪ್ರಾಧಿಕಾರಗಳು ಕನ್ನಡಿಗರ ಆಶೋತ್ತರಗಳ ಈಡೇರಿಕೆಗಾಗಿಯೇ ಸ್ಥಾಪನೆಗೊಂಡಂಥವು. ಆಯಾ ವ್ಯವಸ್ಥೆಗಳ ಮಿತಿಯಲ್ಲಿ ಅವು ಕಾರ್ಯ ನಿರ್ವಹಿಸಿಕೊಂಡು ಬರುತ್ತಿವೆ. ಯಾವುದೇ ಒಂದು ವ್ಯವಸ್ಥೆಯಿರಲಿ. ಅದರ ಮುಖ್ಯಸ್ಥರ ಸ್ಥಾನದಲ್ಲಿರುವ ವ್ಯಕ್ತಿಯ ಮೇಲೆ ಆ ವ್ಯವಸ್ಥೆಯ ಪ್ರಭಾವ-ಪರಿಣಾಮಗಳು ಅವಲಂಭಿಸಿರುತ್ತವೆ.
ಪ್ರಭಾವ ಬೀರಿ ಸ್ಥಾನ ಗಳಿಸುವವರಿಂದ ಮತ್ತು ಮತಗಳಿಕೆಯ ದೃಷ್ಟಿಯಿಂದ ನೇಮಕಗೊಂಡವರಿಂದ ನಾವು ಹೆಚ್ಚಿನದನ್ನು ನಿರೀಕ್ಷಿಸುವುದು ಕಷ್ಟವೇ. ಆದರೆ ಸಮರ್ಥರಾದವರು ಅಂತಹ ಸ್ಥಾನಗಳಿಗೆ ಬಂದಾಗ ಸಹಜವಾಗಿಯೇ ಗಮನಾರ್ಹ ಕೆಲಸ ಮಾಡುತ್ತಾರೆ. ಪ್ರಸ್ತುತ ಈ ಎರಡು ಪ್ರಾಧಿಕಾರಗಳು ಸಾಕಷ್ಟು ಒಳ್ಳೆಯ ಕೆಲಸ ಮಾಡುತ್ತಿವೆಯೆಂದು ನಾನು ತಿಳಿದಿದ್ದೇನೆ. ಈ ಸಂಸ್ಥೆಗಳು ಮಾಡಬೇಕಾದ ಕೆಲಸ ಇನ್ನೂ ಇದೆ. ಆದರೆ ಅವು ನಡೆಸುವ ಪ್ರಯತ್ನಗಳು ಮತ್ತು ಕಾರ್ಯಕ್ರಮಗಳಲ್ಲಿ ಕನ್ನಡಿಗರು ಹೆಚ್ಚು ಕ್ರಿಯಾಶೀಲ ಪಾತ್ರ ವಹಿಸಬೇಕು.
ಇಂದಿನ ಸನ್ನಿವೇಶದಲ್ಲಿ ನಮ್ಮ ನಾಡಿನಲ್ಲಿ ಹೊಸ ಹೊಸ ವಿಧಾನಗಳನ್ನು ರೂಪಿಸಿ ಅವನ್ನು ಅನುಷ್ಠಾನಗೊಳಿಸಬೇಕು. ಆಡಳಿತದಲ್ಲಿ ಕನ್ನಡ ಬಳಕೆ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ, ಇವುಗಳ ಜೊತೆಗೆ ಉದ್ಯೋಗದಲ್ಲಿ ಕನ್ನಡಿಗರಿಗೆ ಭರವಸೆ ದೊರಕಿಸುವಂತಹ ವಿಶೇಷ ನೀತಿಯೊಂದನ್ನು ಸರ್ಕಾರ ರೂಪಿಸಬೇಕಾಗುತ್ತದೆ. ಹಾಗೆಯೇ ಅಂತಾರಾಜ್ಯ ವಲಸೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯೊಂದರ ಅಗತ್ಯವೂ ಇದೆ. ಪ್ರಾದೇಶಿಕ ಹಿತ ರಕ್ಷಣೆಯಾಗದಿದ್ದರೆ ಹೊರಗಿನಿಂದ ಬಂದವರೊಡನೆ ಅನಗತ್ಯ ಘರ್ಷಣೆಗಳುಂಟಾಗುವ ಸಂಭವವಿರುತ್ತದೆ.
ನಮ್ಮ ಭಾಷೆ, ಸಂಸ್ಕೃತಿ, ಜೀವನ ಪದ್ಧತಿ ಮತ್ತು ಗೌರವಯುತ ಬದುಕು ಆಘಾತಕ್ಕೆ ಈಡಾಗುತ್ತಿದ್ದುದನ್ನು ಕಂಡೇ ಭಾರತ ಸ್ವಾತಂತ್ರ್ಯದ ಕಿಚ್ಚು ಹುಟ್ಟಿದ್ದು. ಹಾಗೆಯೇ ಪ್ರಾದೇಶಿಕ ಭಾಷೆ-ಸಂಸ್ಕೃತಿಗಳು ಆಳುವವರ ಅಲಕ್ಷ್ಯಕ್ಕೆ ಒಳಗಾದರೆ ಸಹಜವಾಗಿಯೇ ಪ್ರತಿಭಟನೆ, ಪ್ರತಿರೋಧಗಳು ಅನಿವಾರ್ಯವಾಗುತ್ತವೆ. ಪ್ರಸ್ತಾಪಿತ ಪ್ರಾಧಿಕಾರಗಳು ತಮ್ಮ ನಿಗದಿತ ಚೌಕಟ್ಟಿನಲ್ಲಿ ಕೆಲಸ ಮಾಡುವುದರ ಜೊತೆಗೆ ಜನ ಜಾಗೃತಿಯ ಕಾರ್ಯದಲ್ಲೂ ಪರಿಣಾಮಕಾರಿ ಪಾತ್ರವಹಿಸಬೇಕಾಗುತ್ತದೆ. ಜಾಗೃತ ಸಮುದಾಯದಿಂದ ಮಾತ್ರ ನಾಡಿನ ಆಶೋತ್ತರಗಳು ಈಡೇರಲು ಸಾಧ್ಯ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಿಮ್ಮ ನೇತೃತ್ವದ ಸಂಸ್ಥೆ. ಇದರ ಗೊತ್ತು ಗುರಿಗಳೇನು? ಸಂಸ್ಥೆಯ ಮಹತ್ವವೇನು?
ಸಂಸ್ಥೆಯ ಮೂಲಕ ತಾವು ಮಾಡಲು ಸಾಧ್ಯವಾಗಿರುವ ಕೆಲಸ ಕಾರ್ಯಗಳೇನು?
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ಸುತ್ತೂರು ಕ್ಷೇತ್ರದ ಪೂಜ್ಯ ಲಿಂ.ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ನಮ್ಮ ನಾಡಿನ ಹಿರಿಯ ವಿದ್ವಾಂಸರಾಗಿದ್ದ ಡಾ.ಎಚ್.ತಿಪ್ಪೇರುದ್ರಸ್ವಾಮಿ ಅವರು ಪ್ರಥಮ ಅಧ್ಯಕ್ಷರು. ಅವರ ನಿಧನ ನಂತರ ೧೯೯೫ರಲ್ಲಿ ಪರಿಷತ್ತಿನ ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಅಪೇಕ್ಷೆಯಂತೆ ನಾನು ಆ ಸ್ಥಾನವನ್ನು ವಹಿಸಿಕೊಂಡೆ.
ಹನ್ನೆರೆಡನೆಯ ಶತಮಾನದಲ್ಲಿ ಕನ್ನಡ ನಾಡು ಕಂಡ ಅಪೂರ್ವವಾದ ಸಮಾಜೋ-ಧಾರ್ಮಿಕ ಆಂದೋಲನದ ಕಾರಣಕರ್ತರಾದ ಬಸವಾದಿ ಶರಣರ ಸಂದೇಶವನ್ನು ಪ್ರಸ್ತುತ ಜನಸಮುದಾಯಕ್ಕೆ ಮುಟ್ಟಿಸಬೇಕೆಂಬುದು ಶರಣ ಸಾಹಿತ್ಯ ಪರಿಷತ್ತಿನ ಮುಖ್ಯ ಧ್ಯೇಯೋದ್ದೇಶ. ಜಾತಿ, ಲಿಂಗ, ವರ್ಣ, ವರ್ಗ, ಭೇದಗಳಿಲ್ಲದ ಮಾನವ ಘನತೆಯ ಒಂದು ಆದರ್ಶ ಸಮಾಜ ನಿರ್ಮಾಣದ ಆಶಯದಿಂದ ಶರಣರು ನಡೆಸಿದ ಆಂದೋಲನದ ಒಂದು ಫಲರೂಪವೇ ವಚನಸಾಹಿತ್ಯ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ನಾನು ಪಡೆದಿದ್ದ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ಸಂಘಟನೆಗೆ ಬಳಸಿದ್ದೇನೆ. ಕಳೆದ ೧೬ ವರ್ಷಗಳಿಂದ ನನ್ನ ಕೈಲಾದ ಸೇವೆ ಸಲ್ಲಿಸಿದ್ದೇನೆ. ಈಗ ಶರಣ ಸಾಹಿತ್ಯ ಪರಿಷತ್ತು ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲದೇ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ತಮಿಳುನಾಡು ಮತ್ತು ಗೋವಾ ರಾಜ್ಯಗಳಲ್ಲೂ ತನ್ನ ಕ್ಷೇತ್ರ ಘಟಕಗಳನ್ನು ಹೊಂದಿದೆ.
ಶರಣ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಪರ್ಯಾಯ ಸಂಘಟನೆ ಎಂಬ ತಪ್ಪು ಕಲ್ಪನೆ ಕೆಲವರಲ್ಲಿದೆ. ಅದು ವಾಸ್ತವವಾಗಿ ಪರ್ಯಾಯ ಸಂಘಟನೆಯಲ್ಲ; ಪೂರಕ ಸಂಘಟನೆ.
ಶರಣರ ವಿಚಾರ ಧಾರೆ ೧೨ನೆಯ ಶತಮಾನಕ್ಕಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂಬುದನ್ನು ಧರ್ಮಗುರುಗಳಾದಿಯಾಗಿ ಎಲ್ಲ ವಿಚಾರವಾದಿಗಳು, ಸಮಾಜಕಾರ್ಯತಜ್ಞರು ಒಪ್ಪಿಕೊಂಡಿದ್ದಾರೆ. ನೈತಿಕವಾಗಿ ನೆಲಕಚ್ಚುತ್ತಿರುವ, ಹಿಂದೆಂದಿಗಿಂತಲೂ ಜಾತಿ ವ್ಯವಸ್ಥೆ ಬಲಗೊಳ್ಳುತ್ತಿರುವ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳೆಲ್ಲ ನಡೆ-ನುಡಿಗಳಲ್ಲಿ ಭ್ರಷ್ಟಗೊಳ್ಳುತ್ತಿರುವ ಇಂದಿನ ವಿವೇಕಹೀನ ಸನ್ನಿವೇಶದಲ್ಲಿ ಬಸವಣ್ಣನವರ ಮತ್ತು ಅವರ ಸಮಕಾಲೀನ ಶರಣರ ಜೀವನ ಮತ್ತು ವಿಚಾರಧಾರೆ ನಮಗೆ ಮಾರ್ಗದರ್ಶನ ಮಾಡಬೇಕಾಗಿದೆ. ಈ ದೃಷ್ಟಿಯಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಪ್ರಕಟಣೆಗಳು, ಉಪನ್ಯಾಸಗಳು, ಚಿಂತನ ಗೋಷ್ಠಿಗಳು, ಸಮ್ಮೇಳನಗಳು, ಸಂವಾದಗಳು-ಹೀಗೆ ನಾನಾ ರೂಪದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.
ಶರಣ ಸಾಹಿತ್ಯ ಪರಿಷತ್ತು ಯಾವುದೇ ಜಾತಿ-ಮತ ಭೇದವಿಲ್ಲದ ಮುಕ್ತ ಸಂಘಟನೆ. ಈಗಾಗಲೇ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ರಾಷ್ಟ್ರಮಟ್ಟದ ಶರಣ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿರುವ ಪರಿಷತ್ತು ಇತ್ತೀಚೆಗಷ್ಟೆ ಒಂದು ಮಹತ್ವದ ಸಾಧನೆ ನಡೆಸಿದೆ. ಅದೆಂದರೆ ೧೨ನೆಯ ಶತಮಾನದ ಶರಣರ ಕ್ಷೇತ್ರಗಳ ದಾಖಲೀಕರಣ. ಗ್ರಂಥ ಮತ್ತು ಡಿ.ವಿ.ಡಿ.ಗಳ ರೂಪದಲ್ಲಿ ಆ ದಾಖಲೀಕರಣ ಆಸಕ್ತರಿಗೆ ದೊರೆಯುವಂತೆ ವ್ಯವಸ್ಥೆ ಮಾಡಿದೆ. ಹಾಗೆಯೇ ಮಹಿಳೆಯರಿಗೆ ಒಂದು ವೇದಿಕೆ ಒದಗಿಸಲು ’ಕದಳಿ’ ಮಹಿಳಾ ವೇದಿಕೆ, ಮಕ್ಕಳಿಗಾಗಿ ’ಎಳೆಯರ ಲೋಕ’, ಯುವಜನಕ್ಕಾಗಿ ’ಯುವಸಂಗಮ’ ಎಂಬ ಸಂಘಟನೆಗಳನ್ನು ಪರಿಷತ್ತಿನ ಆಶ್ರಯದಲ್ಲಿ ಬೆಳೆಸಲಾಗಿದೆ.
ರಜತ ಮಹೋತ್ಸವವನ್ನು ಆಚರಿಸುತ್ತಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ’ಮನೆಯಲ್ಲಿ ಮಹಾಮನೆ’ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮನೆ ಮನೆಗೆ ಶರಣ ಸಂದೇಶ ಮುಟ್ಟಿಸುತ್ತಿದೆ. ಜನಸಮುದಾಯದಲ್ಲಿ ಕಾಯಕ ನಿಷ್ಠೆ, ದಾಸೋಹ ಪ್ರಜ್ಞೆ ಮತ್ತು ಅನುಭವ ಚಿಂತನೆಗಳ ಬಗೆಗೆ ಜಾಗೃತಿ ಮೂಡಿಸುವ ಮಣಿಹದಲ್ಲಿ ತೊಡಗಿದೆ. ಸಮಾಜ ಶಿಕ್ಷಣ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಆಶಯ.

ಜಾನಪದ ನಿಮ್ಮ ಇಷ್ಟದ ಕ್ಷೇತ್ರ. ಸಾಕಷ್ಟು ಜಾನಪದ ಸಾಹಿತ್ಯವನ್ನು ಸಂಗ್ರಹಿಸುತ್ತ ಬಂದಿದ್ದೀರಿ. ಜಾನಪದ ಕ್ಷೇತ್ರದಲ್ಲಿ ಇನ್ನೂ ಆಗಬೇಕಿರುವ ಕೆಲಸಗಳೇನು?
ನಾನು ಹುಟ್ಟಿದ್ದು ಹಳ್ಳಿಯ ಅಂಗಳದಲ್ಲಿ. ಆದ್ದರಿಂದ ಸಹಜವಾಗಿ ಜಾನಪದದಲ್ಲಿ ನನಗೆ ಆಸಕ್ತಿ. ಇದಕ್ಕೆ ಮುಖ್ಯ ಪ್ರೇರಣೆಯಾದವರು ನನ್ನ ಹಿರಿಯ ಸ್ನೇಹಿತರಾಗಿದ್ದ ದಿ.ಕೆ.ಆರ್.ಲಿಂಗಪ್ಪನವರು. ಇಂಪಾದ ಕಂಠದಿಂದ ಅವರು ಹಾಡುತ್ತಿದ್ದ ಜನಪದ ಗೀತೆಗಳ ಸ್ವಾರಸ್ಯ ನನ್ನ ಆಸಕ್ತಿಯನ್ನು ಅರಳಿಸಿತು. ನನ್ನ ತಾಯಿ ಹಾಡುತ್ತಿದ್ದ ಬೀಸುವ ಪದಗಳು. ಸುತ್ತಮುತ್ತಣ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಹಾಡುತ್ತಿದ್ದ ಗೀತೆಗಳನ್ನು ಸಂಗ್ರಹಿಸಿ ನಮ್ಮ ಊರಿನ ತರುಣರ ಸಂಘದಿಂದ ಅದನ್ನು ಪ್ರಕಟಿಸಿದೆ. ಮೂರ‍್ನಾಲ್ಕು ಸಂಗ್ರಹಗಳ ಹೊರತಾಗಿ ಹೆಚ್ಚೇನು ಪ್ರಕಟಣೆಗಳನ್ನು ಹೊರತರಲಾಗಲಿಲ್ಲ. ಆದರೂ ಜನಪದ ಗೀತೆಗಳ ಪ್ರಸಾರ ಕಾರ್ಯ ಮಾಡುತ್ತಲೇ ಇದ್ದೆ.
೧೯೬೭ರಲ್ಲಿ ತರೀಕೆರೆಯಲ್ಲಿ ಪ್ರಥಮ ಬಾರಿಗೆ ಅಖಿಲ ಕರ್ನಾಟಕ ಜನಪದ ಸಾಹಿತ್ಯ ಸಮ್ಮೇಳನ ಸಂಘಟಿಸುವ ಭಾರ ಹೊತ್ತೆ. ಆಗ ನಾವು ಪ್ರಕಟಿಸಿದ ’ಹೊನ್ನ ಬಿತ್ತೇವು ಹೊಲಕೆಲ್ಲ ಸ್ಮರಣ ಗ್ರಂಥ ಜಾನಪದ ಕ್ಷೇತ್ರಕ್ಕೆ ಒಂದು ಮೌಲಿಕ ಕೊಡುಗೆ ಎಂದು ಹೇಳಬಹುದು. ಅಲ್ಲಿಂದ ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ಜಿ.ನಾರಾಯಣ ಅವರು ಅಧ್ಯಕ್ಷರಾಗಿದ್ದಾಗ ನಡೆದ ಜಿಲ್ಲಾ ಹಾಗೂ ರಾಜ್ಯಮಟ್ಟದ ಜನಪದ ಕಲಾಮೇಳಗಳ ಸಂಚಾಲಕರಾಗಿ ನಾನು ಆ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಳ್ಳಲು ಅವಕಾಶವಾಯಿತು.
ಜಾನಪದ ಪರಂಪರೆ, ಅಂತಃಸತ್ವ ಮತ್ತು ಜೀವನ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಹೆಚ್.ಎಲ್.ನಾಗೇಗೌಡ, ಡಾ.ದೇ.ಜವರೇಗೌಡ, ಡಾ.ಜೀ.ಶಂ.ಪರಮಶಿವಯ್ಯ ಕೆ.ಆರ್.ಲಿಂಗಪ್ಪ, ಡಾ.ಹಾ.ಮಾ.ನಾಯಕ ಮೊದಲಾದವರು ಜೊತೆಯಾಗಿ ಜಾನಪದ ಪರಿಷತ್ತನ್ನು ಸ್ಥಾಪಿಸಿದೆವು. ನಂತರ ಅದು ಜಾನಪದ ಅಕಾಡೆಮಿ ಸ್ಥಾಪನೆಗೆ ಕಾರಣವಾಯಿತು. ಆರಂಭದ ಅವಧಿಯಲ್ಲಿ ನಾನು ಅಕಾಡೆಮಿ ಸದಸ್ಯನಾಗಿದ್ದೆ. ಈಗ ಅದರ ಅಧ್ಯಕ್ಷ ಸ್ಥಾನದಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿದೆ.
ನನಗೀಗ ವಯಸ್ಸಾಗಿದೆ. ಇಂತಹ ಸಾರ್ವಜನಿಕ ಸಂಸ್ಥೆಗಳ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಯಾವ ಆಸಕ್ತಿಯೂ ಉಳಿದಿಲ್ಲ. ಆದರೂ ನನ್ನನ್ನು ಬಹುದಿನಗಳಿಂದ ಕಾಡುತ್ತಿದ್ದ ಕೆಲವು ಕೆಲಸಗಳ ದೃಷ್ಟಿಯಿಂದ ಈ ಅಕಾಡೆಮಿ ಅಧ್ಯಕ್ಷ ಸ್ಥಾನ ಒಪ್ಪಿಕೊಂಡೆ. ಕಳೆದ ಎರಡೂವರೆ ವರ್ಷಗಳಲ್ಲಿ ನನ್ನ ಆಸೆ ಈಡೇರಿದೆ. ನನಗಿದ್ದ ಆಸೆಗಳೆಂದರೆ, ರಾಜ್ಯದಲ್ಲಿ ಜಾನಪದಕ್ಕೆ ಮೀಸಲಾದ ಒಂದು ವಿಶ್ವವಿದ್ಯಾನಿಲಯ ಸ್ಥಾಪನೆ. ಕಷ್ಟದಲ್ಲಿರುವ ಜನಪದ ಕಲಾವಿದರಾಗಿ ಒಂದು ಕ್ಷೇಮನಿಧಿ ಸ್ಥಾಪನೆ, ರಾಷ್ಟ್ರಮಟ್ಟದ ಒಂದು ಜಾನಪದ ಸಮ್ಮೇಳನ ಮತ್ತು ದೇಸಿ ಶಬ್ದಗಳ ಒಂದು ನಿಘಂಟು ರಚನೆ. ಈ ಕನಸುಗಳೆಲ್ಲ ನನಸಾಗಿವೆ. ಓರ್ವ ಹಳ್ಳಿಗನಾಗಿ ಜಾನಪದಕ್ಕೆ ನನ್ನ ಭಾಗದ ಸೇವೆ ಸಲ್ಲಿಸಿದ ಸಮಾಧಾನ ನನಗಿದೆ.
ಜಾನಪದ ಒಂದು ಮಹಾ ಸಾಗರ. ಅದರ ಗರ್ಭದಲ್ಲಿರುವ ಇನ್ನೂ ಎಷ್ಟೋ ಮೌಲಿಕ ವಸ್ತುಗಳನ್ನು ಹೊರತರಬೇಕಾಗಿದೆ. ಮೊದಲು ಬೃಹತ್ ಪ್ರಮಾಣದಲ್ಲಿ ಕ್ರಮಬದ್ಧವಾದ ಕ್ಷೇತ್ರಕಾರ್ಯ ನಡೆಯಬೇಕಾಗಿದೆ. ಈಗ ಕಾರ್ಯಾರಂಭ ಮಾಡುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಯೋಜನೆಯಲ್ಲಿ ಜಾನಪದ ಕ್ಷೇತ್ರದಲ್ಲಿ ಆಗಬೇಕಾಗಿರುವ ಕಾರ್ಯಗಳ ವಿಸ್ತೃತ ಪಟ್ಟಿಯನ್ನೇ ಕೊಡಲಾಗಿದೆ. ನೂತನ ವಿಶ್ವವಿದ್ಯಾನಿಲಯ ಸ್ಥಾಪನೆಯ ಪ್ರಕ್ರಿಯೆಯ ಆರಂಭದ ಕೆಲಸಗಳನ್ನೆಲ್ಲ ಅದಕ್ಕಾಗಿ ನೇಮಕಗೊಂಡಿರುವ ವಿಶೇಷಾಧಿಕಾರಿ ಜಾನಪದ ತಜ್ಞರಾದ ಡಾ.ಅಂಬಳಿಕೆ ಹಿರಿಯಣ್ಣನವರು ಮಾಡಿದ್ದಾರೆ.
ಬಹುಶಃ ವಿಶ್ವದಲ್ಲೇ ಮೊದಲೆನಿಸುವ ಜಾನಪದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಕೀರ್ತಿ ಕರ್ನಾಟಕಕ್ಕೆ ಸಂದಂತಾಗಿದೆ. ಈ ವಿಶ್ವವಿದ್ಯಾನಿಲಯ ಉಳಿದ ವಿಶ್ವವಿದ್ಯಾನಿಲಯಗಳ ಸ್ವರೂಪಕ್ಕಿಂತ ಭಿನ್ನವಾಗಿರುತ್ತದೆ. ಜಾನಪದಕ್ಕೆ ಸಂಬಂಧಿಸಿದ ಕ್ಷೇತ್ರಕಾರ್ಯ, ದಾಖಲೀಕರಣ, ಸಂಶೋಧನೆ, ಪ್ರಕಟಣೆ, ಪ್ರಸಾರ ಇತ್ಯಾದಿಗಳೇ ಅಲ್ಲದೆ ನಶಿಸಿಹೋಗುತ್ತಿರುವ ಜಾನಪದ ಜೀವನಸಂಸ್ಕೃತಿಯ ಸಂರಕ್ಷಣೆಗೆ ಅಗತ್ಯವಾದ ಕಾರ್ಯಚಟುವಟಿಕೆಗಳಿಗೆ ಈ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚು ಒತ್ತು ಕೊಡಲಾಗುತ್ತದೆ. ಇದು ವಾಸ್ತವ ಅರ್ಥದಲ್ಲಿ ಜನರದ್ದೇ ವಿಶ್ವವಿದ್ಯಾನಿಲಯವಾಗಬೇಕೆಂಬುದು ನನ್ನ ಹಂಬಲ.
ತಲೆಮಾರುಗಳ ಬದುಕಿನ ಅನುಭವವಾಗಿರುವ ಜಾನಪದದ ಮೌಲ್ಯಗಳನ್ನು ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಸರಿಹೊಂದಿಸುವ ಕೆಲಸ ಈಗ ನಡೆಯಬೇಕಾಗಿದೆ. ನಮ್ಮ ಹಳ್ಳಿಗರು ಮತ್ತು ಗುಡ್ಡಗಾಡಿನ ಜನರಲ್ಲಿ ಜೀವನ ವಿಶ್ವಾಸ ಮೂಡಿಸಿ, ಪರಂಪರೆಯಿಂದ ಬಂದ, ಎಂದೆಂದಿಗೂ ಸಲ್ಲುವಂತಹ ಅಂಶಗಳನ್ನು ಉಳಿಸಿಕೊಂಡು ಹೋಗುವಂತೆ ಮಾಡಬೇಕಾಗಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ನಾಡು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಮಗೆ ಸಾಕಷ್ಟು ಅರಿವಿದೆ. ಈ ಸಂದರ್ಭದಲ್ಲಿ ನಮ್ಮ ಎದುರು ಇರುವ ಪ್ರಮುಖ ಸವಾಲುಗಳು ಯಾವುವು? ಅವುಗಳನ್ನು ಎದುರಿಸುವ ಬಗೆ ಹೇಗೆ?
ಕರ್ನಾಟಕ ಭಾರತ ಒಕ್ಕೂಟದ ವ್ಯವಸ್ಥೆಯ ಒಂದು ಭಾಗ. ನಮ್ಮ ಸಂವಿಧಾನದಲ್ಲಿ ರಾಜ್ಯಗಳಿಗೆ ತಮ್ಮವೇ ಆದ ಸ್ಥಾನ-ಮಾನಗಳಿವೆ. ರಾಷ್ಟ್ರದ ಸಮಗ್ರತೆ ಮತ್ತು ಅಖಂಡತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಒಂದು ಅಂಗೀಕೃತ ವ್ಯವಸ್ಥೆ. ಆದರೆ ಈ ವ್ಯವಸ್ಥೆ ಪ್ರಾದೇಶಿಕ ಪ್ರಗತಿ ನೋಡಿಕೊಳ್ಳಬೇಕಾದ ರಾಜ್ಯ ಸರ್ಕಾರ ವ್ಯವಸ್ಥೆಗೆ ಆತಂಕವಾಗಬಾರದು.
ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯ ಪ್ರದೇಶದ ಜನರ ಹಿತ ರಕ್ಷಣೆಗಾಗಿ ತಮ್ಮದೇ ಆದ ನೀತಿಯನ್ನು ರೂಪಿಸಿಕೊಂಡು ಅದನ್ನು ಅನುಷ್ಠಾನಗೊಳಿಸಲು ಮುಕ್ತ ಅವಕಾಶವಿರಬೇಕು. ಹೆಜ್ಜೆ ಹೆಜ್ಜೆಗೆ ರಾಜ್ಯಗಳು ಕೇಂದ್ರ ಸರ್ಕಾರವನ್ನು ಅವಲಂಬಿಸುವಂತಾಗಬಾರದು. ಕೇಂದ್ರದ್ದೇನಾದರೂ ಒಟ್ಟು ರಾಷ್ಟ್ರದ ಗಡಿ ರಕ್ಷಣೆ, ಅಂತಾರಾಷ್ಟ್ರೀಯ ಸಂಬಂಧ, ರಾಷ್ಟ್ರೀಯ ಸಂಪನ್ಮೂಲಗಳ ಅಭಿವೃದ್ಧಿ, ಆಂತರಿಕ ಶಾಂತಿಪಾಲನೆ, ರಾಜ್ಯ ರಾಜ್ಯಗಳ ನಡುವಿನ ಸಂಬಂಧ-ಇಂತಹ ಕ್ಷೇತ್ರಗಳ ಕಾರ್ಯ ನಿರ್ವಹಣೆ ಮಾಡಿದರೆ, ರಾಜ್ಯಗಳು ತಮ್ಮ ತಮ್ಮ ಪ್ರದೇಶಗಳ ಅಭಿವೃದ್ಧಿಯನ್ನು ನೋಡಿಕೊಳ್ಳಲು ಪೂರ್ಣ ಸ್ವಾತಂತ್ರವಿರಬೇಕು.
ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ದೇಶದ ಬಹುತೇಕ ರಾಜ್ಯಗಳ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ. ನಮ್ಮ ಕರ್ನಾಟಕವನ್ನೇ ತೆಗೆದುಕೊಂಡರೆ, ಗಡಿ ಸಮಸ್ಯೆ, ಶಿಕ್ಷಣ ಮಾಧ್ಯಮದ ಸಮಸ್ಯೆ, ನದಿನೀರಿನ ಸಮಸ್ಯೆ, ವಲಸೆ ಸಮಸ್ಯೆ, ಇತ್ಯಾದಿ ಸಮಸ್ಯೆಗಳು ಜೀವಂತವಾಗಿರುವುದಷ್ಟೇ ಅಲ್ಲದೆ ಜನಜೀವನದ ನೆಮ್ಮದಿಯನ್ನೇ ಹಾಳುಮಾಡುತ್ತಿವೆ. ಇಂತಹ ರಾಷ್ಟ್ರೀಯ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಮೂಲಕ ಕ್ಷಿಪ್ರ ಕ್ರಮ ಕೈಗೊಳ್ಳಬೇಕು.
ನಮ್ಮ ರಾಜ್ಯದಲ್ಲೂ ಅಷ್ಟೇ. ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ನಡೆಸಬೇಕು. ಶಿಕ್ಷಣ ಮಾಧ್ಯಮ, ಸ್ಥಳೀಯ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ, ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಜೀವನ ಸೌಲಭ್ಯಗಳ ಪೂರೈಕೆ, ಪರಿಸರ ಸಂರಕ್ಷಣೆ-ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಬೇಕು. ನಾಡಿನ ಹಿತಕ್ಕಾಗಿ ಪ್ರಾಮಾಣಿಕ ಹೋರಾಟ ನಡೆಸುವ ಸಂಘಟನೆಗಳನ್ನು ರಾಜ್ಯದ ಸಮಗ್ರ ಕ್ಷೇಮಕ್ಕಾಗಿ ಒಂದು ಶಕ್ತಿಯಾಗಿ ಬಳಸಿಕೊಳ್ಳಬೇಕು.
ಇದೆಲ್ಲದಕ್ಕೂ ಮುಖ್ಯವಾಗಿ ನಮ್ಮ ನಾಡಿಗೆ ಈಗ ಬೇಕಾಗಿರುವುದು ಅರ್ಪಣಾಭಾವದ, ಶುದ್ಧಚಾರಿತ್ರ್ಯದ, ಸಮಷ್ಟಿದೃಷ್ಟಿಯ, ಪ್ರಾಮಾಣಿಕ ದುಡಿಮೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು; ನಾಡು-ನುಡಿಗಳ ಹಿತರಕ್ಷಣೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ಜನಸಮುದಾಯ.

ಕನ್ನಡ ಸಾಹಿತ್ಯ ಲೋಕ ವರ್ತಮಾನದ ತವಕ, ತಲ್ಲಣಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತಿದೆ. ಹಿಂದೆ ಸಾಹಿತಿಗಳು ಚಳವಳಿಗೆ ಇಳಿದು ಜನಪರ ಚಳವಳಿಗಳನ್ನು ಮುನ್ನಡೆಸಿದ್ದರು. ಈಗ ಕೆಲವರನ್ನು ಬಿಟ್ಟರೆ ಇತರರಿಗೆ ಆ ಕುರಿತು ಆಸಕ್ತಿ ಇಲ್ಲ. ಹೀಗಾಗಿದ್ದಕ್ಕೆ ಕಾರಣವೇನು?
ಕನ್ನಡ ಸಾಹಿತ್ಯ ತನ್ನ ಸಮಕಾಲೀನ ಸಂದರ್ಭಗಳಿಗೆ ಸದಾ ಸ್ಪಂದಿಸುತ್ತಲೇ ಬಂದಿದೆ ಎಂದು ನನಗನಿಸುತ್ತದೆ. ಅದು ಇಂದೂ ಸ್ಪಂದಿಸುತ್ತಿದೆ. ಸ್ವಾತಂತ್ರ್ಯಪೂರ್ವದಿಂದ ಇಂದಿನವರೆಗೂ ಆಯಾ ಸಂದರ್ಭ-ಸನ್ನಿವೇಶಗಳ ತವಕ-ತಲ್ಲಣಗಳನ್ನು ತಮ್ಮ ಲೇಖಕರು ಅಭಿವ್ಯಕ್ತಿಸುತ್ತಲೇ ಇದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಇರುವಂತೆ ಸಾಹಿತ್ಯ ಕ್ಷೇತ್ರದಲ್ಲೂ ನಾನಾ ಪಂಥಗಳಿವೆ. ಅಂತಹ ಪಂಥಗಳಿರುವುದು ಸಹಜ. ಕೆಲವು ಸಂದರ್ಭಗಳಲ್ಲಿ ಆಯಾ ಪಂಥದೊಡನೆ ಗುರುತಿಸಿಕೊಂಡ ಕೆಲವರು ವೈಯಕ್ತಿಕ ಪ್ರತಿಷ್ಠೆಗಾಗಿ ತಮ್ಮ ಬರಹಗಳನ್ನು, ಹೇಳಿಕೆಗಳನ್ನು ಬಳಸಿಕೊಳ್ಳುವುದುಂಟು. ವೈಯಕ್ತಿಕ ಪ್ರತಿಷ್ಠೆ ಇತ್ತೆಂದರೆ ಸಮಷ್ಠಿ ಹಿತದ ಬಗೆಗೆ ಅಂಥವರು ಅಂಧರಾಗಿಬಿಡುತ್ತಾರೆ.
ಹಿಂದೆ ಸಾಹಿತಿಗಳು ಯಾವುದೇ ಪ್ರತಿಷ್ಠೆಯ ಪ್ರಸಿದ್ಧಿಗೆ ಒಳಗಾಗದೆ ಒಟ್ಟು ನಾಡ ಹಿತವನ್ನೇ ಗಮನದಲ್ಲಿಟ್ಟುಕೊಂಡು ಒಂದು ದನಿಯಾಗಿ ಜನಪರ ಚಳವಳಿ ನಡೆಸಿದ್ದುಂಟು. ಅಂತಹ ಸಹಜ ಸ್ಪಂದನ ಈಗ ಕಂಡುಬರುತ್ತಿಲ್ಲವೆನ್ನುವುದೂ ನಿಜ. ಈಗ ಮಾಧ್ಯಮಕ್ಕೆ ಮೆಚ್ಚುಗೆಯಾಗುವ ಮಾತುಗಳೇ ಹೆಚ್ಚಾಗಿವೆ. ಹಣ ಮತ್ತು ಹೆಸರುಗಳು ಅನೇಕ ವೇಳೆ ವ್ಯಕ್ತಿಯ ಸಮಷ್ಟಿಪ್ರಜ್ಞೆಯನ್ನು ಕೆಡಿಸಿಬಿಡುತ್ತವೆ. ಬೀದಿಗೆ ಇಳಿದರೆ ತಮ್ಮ ಸ್ಥಾನದ ಘನತೆ-ಪ್ರತಿಷ್ಠೆಗೆ ಎಲ್ಲಿ ಭಂಗ ಬರುವುದೋ ಎಂಬ ಭಯವೂ ಅಂಥವರನ್ನು ಕಾಡುತ್ತಿರಬಹುದು.
ಒಂದೊಮ್ಮೆ ಚಳವಳಿಗಾರರು ಹೋಗಿ ಕರೆದರೂ, ಅದರಲ್ಲಿ ತಮ್ಮ ಸ್ಥಾನಮಾನವೇನೆಂದು ಕೇಳುವವರೂ ಇಲ್ಲದಿಲ್ಲ. ಹತ್ತರಲ್ಲಿ ಮತ್ತೊಬ್ಬರಾಗಲು ಅವರು ಇಚ್ಛಿಸುವುದಿಲ್ಲ. ಅವರು ಪ್ರತ್ಯೇಕವಾಗೇ ಇದ್ದು ’ಪ್ರತಿಷ್ಠಿತ’ ರಾಗ ಬಯಸುತ್ತಾರೆ. ಹಾಗಾಗಿ ಕೆಲವು ಸಾಹಿತಿಗಳು ಕನ್ನಡ ಚಳವಳಿಗಳನ್ನು ಕಡೆಗಣ್ಣಿನಿಂದಲೇ ನೋಡುತ್ತಾರೆ. ಇದು ಒಳ್ಳೆಯ ಲಕ್ಷಣವಲ್ಲ. ಬರಹಗಾರರು ಜನಪರವಾದ ಯಾವುದೇ ಚಳವಳಿಗಳಲ್ಲಿ ಕ್ರಿಯಾಶೀಲವಾಗಿ ಸ್ಪಂದಿಸಬೇಕು ಮತ್ತು ನೇರವಾಗಿ ಪಾಲುಗೊಳ್ಳಬೇಕು. ಸಾಹಿತಿಗಳು ಹಾಗೆ ಪಾಲುಗೊಳ್ಳುವುದರಿಂದ ಚಳವಳಿಗಾರರಿಗೆ ಸಹಜವಾಗಿಯೇ ಸ್ಪೂರ್ತಿ ದೊರೆಯುತ್ತದೆ. ಆತ್ಮವಿಶ್ವಾಸ ಮೂಡುತ್ತದೆ. ಚಳವಳಿ ಹಾದಿ ತಪ್ಪದಂತೆ ನೋಡಿಕೊಳ್ಳುವುದೂ ಸಾಹಿತಿಗಳ ಕರ್ತವ್ಯ.
ವಾಸ್ತವ ಸಂಗತಿಯೆಂದರೆ, ಇಂದಿನ ಜಾಗತೀಕರಣ ದಾಳಿಯಲ್ಲಿ ಕನ್ನಡದ ಸದ್ದು ಅಷ್ಟಿಷ್ಟಾದರೂ ಕೇಳಿಬರುತ್ತಿದ್ದರೆ, ಅದು ನಮ್ಮ ಚಳವಳಿಗಾರರ ಹೋರಾಟದಿಂದಲೇ ಎನ್ನುವುದನ್ನು ನಾವು ಮರೆಯುವಂತಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಹಿತಕ್ಕಾಗಿ ದನಿ ಮಾಡಲು ಮುಕ್ತ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ನಾಡು-ನುಡಿಗಳ ಹಿತದ ಪ್ರಶ್ನೆ ಬಂದಾಗ ಸಾಹಿತಿಗಳು ಕಾಯಾ-ವಾಚಾ-ಮನಸಾ ಚಳವಳಿಗಳಲ್ಲಿ ನೇರವಾಗಿ ಪಾಲುಗೊಳ್ಳಬೇಕೆಂದು ನನಗನಿಸುತ್ತದೆ. ಹಾಗೆಯೇ ಅತ್ಯಂತ ಭ್ರಷ್ಟಗೊಂಡಿರುವ ವ್ಯವಸ್ಥೆಯ ವಿರುದ್ಧವೂ ಸಾಹಿತಿಗಳು ಸಂಘಟಿತ ದನಿಮಾಡಬೇಕು. ಅಷ್ಟೇ ಅಲ್ಲ, ಬೀದಿಗಿಳಿದು ಜನಜಾಗೃತಿಗೊಳಿಸುವ ಕೆಲಸವನ್ನೂ ಮಾಡಬೇಕು.

ಈ ಸಂದರ್ಭದಲ್ಲಿ ’ನಲ್ನುಡಿ’ಯ ಓದುಗರೊಂದಿಗೆ ಹಂಚಿಕೊಳ್ಳಬಯಸುವ ನಿಮ್ಮ ಮಾತುಗಳೇನು?
ಭೂಕಂಪ ಎಲ್ಲೋ ಒಂದೊಂದು ಕಡೆ ಆಗಬಹುದು. ಆದರೆ ವಾಸ್ತವವಾಗಿ ಭೂಮಿ ಎಲ್ಲ ಕಡೆ ನಡುಗುತ್ತಿದೆ. ಭಯೋತ್ಪಾದಕರ ಭೀಕರ ಕೃತ್ಯಗಳಿಂದ ನಡುಗುತ್ತಿದೆ. ರಾಜಕೀಯ ಭೀಬತ್ಸ ಭ್ರಷ್ಟಾಚಾರದಿಂದ ನಡುಗುತ್ತಿದೆ. ಕೆಲವು ಧರ್ಮಗುರುಗಳ ಭೋಗ ಜೀವನದಿಂದ ನಡುಗುತ್ತಿದೆ. ಮತಾಂಧರ ಮತಿಹೀನತೆಯಿಂದ ನಡುಗುತ್ತಿದೆ. ಶಿಕ್ಷಣ ವ್ಯವಸ್ಥೆಯ ಅವನತಿಯನ್ನು ಕಂಡು ನಡುಗುತ್ತಿದೆ. ಅಹಂಕಾರದ ಅಮಲಿನಲ್ಲಿರುವ ಅಧಿಕಾರಿಗಳಿಂದ ನಡುಗುತ್ತಿದೆ. ಕರ್ತವ್ಯಹೀನ ಕಚೇರಿ ಸಿಬ್ಬಂದಿಯಿಂದ ನಡುಗುತ್ತಿದೆ. ಕೆಲವು ಸಾಹಿತಿ-ಕಲಾವಿದರ ಸೋಗಲಾಡಿತನದಿಂದ ನಡುಗುತ್ತಿದೆ. ಶ್ರಮಜೀವಿ ರೈತರ ಆತ್ಮಹತ್ಯೆ ಕಂಡು ನಡುಗುತ್ತಿದೆ. ’ಪ್ರತಿಷ್ಠಿತ’ರೆನ್ನುವವರ ಶೀಲ-ಚಾರಿತ್ರ್ಯಗಳ ದಾರಿದ್ರ್ಯದಿಂದ ನಡುಗುತ್ತಿದೆ. ತೋರಿಕೆಯ ಸಭ್ಯರಿಂದ, ಹಾರಿಕೆಯ ಹೊಣೆಗಾರರಿಂದ ನಮ್ಮ ಭೂಮಿ ತತ್ತರಿಸಿ ನಡುಗುತ್ತಿದೆ. ಈ ನಡುಕವನ್ನು ನಿಲ್ಲಿಸಿ ನೆಲದ ಮೇಲೆ ನೆಮ್ಮದಿ ಮೂಡಿಸುವ ಕೆಲಸ ಆಗಬೇಕಾಗಿದೆ. ವೃದ್ಧಾಪ್ಯದಲ್ಲಿರುವ ನನ್ನಂಥವರು ಸುಮ್ಮನೆ ಮರುಗುವುದಷ್ಟೆ.

ಬಸವ ಬೆಳಕು (ರೂಪಕ)


ಮಹಾತ್ಮಾ ಬಸವೇಶ್ವರರಿಗೆ ಜಯವಾಗಲಿ,
ಜಗಜ್ಜ್ಯೋತಿ ಬಸವೇಶ್ವರರಿಗೆ ಜಯವಾಗಲಿ,
ಮಹಾನುಭಾವಿ ಬಸವೇಶ್ವರರಿಗೆ ಜಯವಾಗಲಿ,
ಭಕ್ತಿ ಭಂಡಾರಿ ಬಸವೇಶ್ವರರಿಗೆ ಜಯವಾಗಲಿ,
ವಿಶ್ವಗುರು ಬಸವೇಶ್ವರರಿಗೆ ಜಯವಾಗಲಿ,
ಶರಣಬಸವ
ಆಹಾ ಈ ಬಸವಣ್ಣನವರ ಹೆಸರು ಕೇಳಿದೊಡನೆ ಈ ಬೇಸಿಗೆಯಲ್ಲೂ ಮನಕ್ಕೆ ತಂಪೆರೆದಂತಾಗುತ್ತದೆ. ಜಗದೇವಿ ಬಸವ ಜನ್ಮೋತ್ಸವದಂದು ಬಸವಾಷ್ಟಕಂ ಕೇಳೋಣ.
ಭಕ್ತಿಯ ಸಾಗರ ನಿರ್ಮಲ ಬಸವಂ
ಪ್ರೀತಿಯ ಆಗರ ಕೋಮಲ ಬಸವಂ
ಉತ್ತಮ ಪುರುಷಂ ಸರ್ವರ ಮಿತ್ರಂ
ಲೋಕದ ಗುರು ನಿತ್ಯಂ ಬಸವಂ.

ದೀನರ ದಲಿತರ ಪ್ರೀತಿಯ ಬಸವಂ
ನ್ಯಾಯನಿಷ್ಠುರಿ ಧೀರೋದಾತ್ತಂ
ಭೇದ ವಿನಾಶಕಂ ಏಕೋಭಾವಂ
ಲೋಕದ ಗುರು ಆತ್ಮಂ ಬಸವಂ.

ಜಾತಿಯ ಅಹಂ ಮುರಿದಂ ಬಸವಂ
ಧರ್ಮದ ದಾರಿ ತೋರಿದ ಬಸವಂ
ಸರ್ವರೂ ಒಂದೇ ಎಂದಂ ಬಸವಂ
ಲೋಕದ ಗುರು ಜ್ಞಾನಂ ಬಸವಂ.

ಕಾಯಕಮಂತ್ರಂ ದುಃಖ ನಿವಾರಕಂ
ದಾಸೋಹ ಭಾವಂ ಜೀವಪ್ರಿಯಂ
ನಾನೆಂಬ ಭಾವಂ ವಿಶ್ವವಿನಾಶಕಂ
ಲೋಕದ ಗುರು ಸತ್ಯಂ ಬಸವಂ.

ಪಡೆದದ್ದೆಲ್ಲ ಪರಮತ್ಮ ಪ್ರಸಾದಂ
ಉಳಿದದ್ದೆಲ್ಲ ಲೋಕಹಿತಾರ್ಥಕಂ
ನುಡಿದಂತೆ ನಡೆದ ಭಕ್ತಂ ಬಸವಂ
ಲೋಕದ ಗುರು ತತ್ತ್ವಂ ಬಸವಂ.

ಒಳಗಿನ ಸುಖವ ಕೊಟ್ಟಂ ಬಸವಂ
ಹೊರಗಿನ ದುಃಖವ ಕಳೆದಂ ಬಸವಂ
ಅನುಭಾವಂ ಬೆಳಕೆಂದಂ ಬಸವಂ
ಲೋಕದ ಗುರು ಜೀವಂ ಬಸವಂ.

ಇಷ್ಟಲಿಂಗಂ ಪರಮತ್ಮ ಸಂಗಂ
ಜಂಗಮಲಿಂಗಂ ಸರ್ವಾತ್ಮ ಸಂಗಂ
ದಯ ಭಾವಂ ಧರ್ಮದ ಮೂಲಂ
ಲೋಕದ ಗುರು ಮಂತ್ರಂ ಬಸವಂ

ನಮ್ಮಂತಃಸಾಕ್ಷಿಯೇ ಇಷ್ಟಲಿಂಗಂ
ಸಕಲಜೀವಾತ್ಮರೆ ಜಂಗಮಲಿಂಗಂ
ಕೈಲಾಸವೆಂಬುದು ಭಕ್ತರ ಅಂಗಂ
ಲೋಕದ ಗುರು ಲಿಂಗಂ ಬಸವಂ.

ಜಗದೇವಿ: ಈ ಬಸವಾಷ್ಟಕ ಕೇಳಿ ಎನ್ನ ಹೃದಯ ತುಂಬಿ ಬಂತು. ಇನ್ನು ಮುಂದೆ ಇಷ್ಟಲಿಂಗ ಪೂಜೆಯ ವೇಳೆ ನಾನು ಬಸವಾಷ್ಟಕವನ್ನೇ ಹಾಡೋದು.
ಶರಣಬಸವ: ಜಗದೇವಿ ನಿನ್ನಂಥ ಹೆಂಡತಿಯನ್ನು ಪಡೆದ ನಾನು ಧನ್ಯ, ನಿನಗೆ ಗೊತ್ತೇ ಇದೆಯ.. ನಾನು ಬಸವಣ್ಣನವರಿಗೆ ಸದಾ ಶರಣಾಗಿದ್ದೇನೆ. ಶರಣು ಬಸವ ಎಂದು ನನ್ನ ಮನಸ್ಸು ಸದಾ ಹೇಳುತ್ತಿರುತ್ತದೆ. ನನ್ನ ತಂದೆ ತಾಯಿ ನನಗೆ ಶರಣಬಸವ ಎಂದು ಹೆಸರಿಟ್ಟಿದು ಎಷ್ಟೊಂದು ಸೂಕ್ತವಾಗಿದೆ.
ಜಗದೇವಿ: ಬಸವಣ್ಣನವರು ನಿರ್ಮಲರೂ ಕೋಮಲರೂ ಆಗಿದ್ದರು.
ಶರಣಬಸವ: ಅಷ್ಟೇ ಅಲ್ಲ, ಅಹಂಕಾರ ಮುಕ್ತರೂ ನ್ಯಾಯನಿಷ್ಠುರಿಯೂ ಭೇದವಿನಾಶಕರೂ ಆಗಿದ್ದರು. ಅವರ ಆದರ್ಶಗಳೇ ನಮಗೆ ದಾರಿದೀಪವಾಗಬೇಕಲ್ಲವೆ?
ಜಗದೇವಿ: ೧೨ನೇ ಶತಮನದ ವಿಚಾರಗಳನ್ನು ೨೧ನೇ ಶತಮನದಲ್ಲಿ ಹೇಗೆ ದಾರಿದೀಪ ಮಡಿಕೊಳ್ಳೋದು? ಶಿವನೇ ಬಸವಾ ಬಸವಾ ಶಿವನೇ ಎನ್ನುತ್ತ ವಿಭೂತಿಧಾರಿಯಗಿ ಇಷ್ಟಲಿಂಗ ಪೂಜೆ ಮಡುತ್ತ ಮಯದೆಯಿಂದ ಬದುಕಿದರೆ ಸಾಲದೆ?
ಲಿಂಗವ ಪೂಜಿಸಿ ಫಲವೇನಯ
ಸಮರತಿ, ಸಮಕಳೆ, ಸಮಸುಖವನರಿಯದನ್ನಕ್ಕ.
ಲಿಂಗವ ಪೂಜಿಸಿ ಫಲವೇನಯ?
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?
ಶರಣಬಸವ: ಲಿಂಗಪೂಜೆಗೆ ಬಹುದೊಡ್ಡ ಉದ್ದೇಶವಿದೆ.
ಜಗದೇವಿ: ಆತ್ಮಶಾಂತಿಯೇ ಇಷ್ಟಲಿಂಗದ ಉದ್ದೇಶವಲ್ಲವೆ?
ಶರಣಬಸವ: ಬರಿ ಆತ್ಮಶಾಂತಿಯೇ ಉದ್ದೇಶವಾಗಿದ್ದರೆ ಮೂಢನಂಬಿಕೆಯೊಂದಿಗೆ ಕಲ್ಲನ್ನು ಪೂಜಿಸಿಯೂ ಪಡೆದುಕೊಳ್ಳಬಹುದು ಜಗದೇವಿ. ಬಸವಣ್ಣನವರು ಅರುಹಿದ ಇಷ್ಟಲಿಂಗ ಪೂಜೆಗೆ ಆತ್ಮಶಾಂತಿಯ ಜೊತೆ ಲೋಕಶಾಂತಿಯ ಉದ್ದೇಶವೂ ಇದೆ.
ಜಗದೇವಿ: ಇಷ್ಟಲಿಂಗ ಪೂಜಿಸಿದರೆ ಲೋಕಶಾಂತಿ ಕೂಡ ಲಭಿಸುವುದೆ?
ಶರಣಬಸವ: ಲೋಕಶಾಂತಿಗಾಗಿ ಯಜ್ಞ ಯಗಾದಿಗಳನ್ನು ಮಡುತ್ತಾರೆ. ಜಪತಪಗಳಲ್ಲಿ ತಲ್ಲೀನರಾಗುತ್ತಾರೆ. ಶಾಂತಿ ಮಂತ್ರಗಳನ್ನು ಉಚ್ಚರಿಸುತ್ತಾರೆ. ಪ್ರಾಣಿಬಲಿಯನ್ನೂ ಕೊಡುವವರುಂಟು. ಹೀಗೆಲ್ಲ ಮಡಿದರೆ ಜಗತ್ತಿನಲ್ಲಿ ಶಾಂತಿ ನೆಲೆಗೊಳ್ಳುವುದು ಎಂದು ಭಾವಿಸುವುದು ಭ್ರಮೆ. ಈ ಕುರಿತು ಬಸವಣ್ಣನವರು ಆಳವಾದ ಚಿಂತನೆ ಮಾಡಿದ್ದಾರೆ. ಲೋಕಶಾಂತಿಯನ್ನು ಸಾಧಿಸುವ ಸನ್ಮಾರ್ಗವನ್ನು ಕಂಡುಹಿಡಿದಿದ್ದಾರೆ.
ಜಗದೇವಿ: ಅದೇ ಇಷ್ಟಲಿಂಗ ಪೂಜೆ ಮಡಿದರಾಯಿತು.
ಶರಣಬಸವ: ಹಾಗಲ್ಲ. ಇಷ್ಟಲಿಂಗಪೂಜೆ ಎಂಬುದು ಲೋಕಕಲ್ಯಾಣದ ಧ್ಯಾನ. ಲೋಕದ ಅಶಾಂತಿಗೆ ಕಾರಣವನ್ನು ಕಂಡುಹಿಡಿಯೋದು. ಅವುಗಳ ನಿವಾರಣೆಗಾಗಿ ಶರಣಸಂಕುಲದೊಂದಿಗೆ ಸಾಮೂಹಿಕ ಪ್ರಯತ್ನ ಮಡೋದು.
ಜಗದೇವಿ: ನೀವು ಹೇಳೋದು ನನಗೆ ಅರ್ಥವಾಗುತ್ತಿಲ್ಲ.
ಶರಣಬಸವ: ಜಗದೇವಿ. ಇದು ಗಹನವಾದ ವಿಚಾರ. ಪೂಜೆ ಮಂತ್ರಗಳಿಂದ ಲೋಕದಲ್ಲಿ ಶಾಂತಿ ಲಭಿಸುವುದಿಲ್ಲ. ಅದಕ್ಕಾಗಿ ಜಂಗಮಲಿಂಗದ ಸೇವೆ ಮಡಬೇಕಾಗುತ್ತದೆ.
ಜಗದೇವಿ: ಹಾಗೆಂದರೆ?
ಶರಣಬಸವ: ಕೇಳು... ಸಕಲ ಜೀವಾತ್ಮರೇ ಜಂಗಮಲಿಂಗ. ಕ್ರಿಯಶೀಲರಾಗಿ ಸಕಲ ಜೀವಾತ್ಮರಿಗೆ ಲೇಸನೆ ಬಯಸುವುದೇ ಜಂಗಮಲಿಂಗದ ಸೇವೆ.
ಜಗದೇವಿ: ಅದು ಹೇಗೆ ಕ್ರಿಯಶೀಲರಾಗಿ ಜಂಗಮಲಿಂಗದ ಸೇವೆ ಮಡೋದು? ನನಗೆ ಒಂದೂ ಅರ್ಥವಾಗುತ್ತಿಲ್ಲ.
ಶರಣಬಸವ: ಈ ಸೃಷ್ಟಿಗೊಬ್ಬ ಸೃಷ್ಟಿಕರ್ತನಿದ್ದಾನೆ. ಆತನ ಸೃಷ್ಟಿಯನ್ನು ಕಾಪಾಡುವ ಜವಾಬ್ದಾರಿ ಮನವರ ಮೇಲೆ ಇದೆ. ಆದರೆ ಮನವರು ಲಿಂಗಭೇದ, ವರ್ಣಭೇದ, ಜಾತಿ ಮತ್ತು ವರ್ಗಭೇದಗಳಿಂದ ಬದುಕನ್ನು ನರಕಸದೃಶಗೊಳಿಸಿದ್ದಾರೆ. ಈ ಭೇದಗಳಿಂದಾಗಿ ಜಗತ್ತು ವಿನಾಶದ ಅಂಚನ್ನು ತಲುಪುತ್ತಿದೆ. ಆದರೆ ಬಸವಣ್ಣನವರ ಮೇಲಿನ ವಚನ ಈ ಜಗತ್ತನ್ನು ರಕ್ಷಿಸುವ ರಹಸ್ಯವನ್ನು ತಿಳಿಸುತ್ತದೆ. ಹೆಣ್ಣು ಗಂಡಿನ ಮಧ್ಯೆ ಸಹಚರ ಭಾವ ಉಂಟಾದಾಗ ಲಿಂಗಭೇದ ಅಳಿದು ಸಮರತಿ ಉಂಟಾಗುತ್ತದೆ. ಬ್ರಹ್ಮತೇಜ, ಕ್ಷಾತ್ರತೇಜ ಎಂದು ಹೇಳುವ ಮೂಲಕ ಶೂದ್ರರನ್ನು, ಪಂಚಮರನ್ನು ನಿಸ್ತೇಜಗೊಳಿಸಲಾಗಿದೆ. ವರ್ಣಭೇದ ಮತ್ತು ಜಾತಿಭೇದಗಳನ್ನು ಸಂಪೂರ್ಣವಾಗಿ ಅಳಿಸಿಹಾಕಿದಾಗ ಮತ್ರ ಮನವರೆಲ್ಲರು ಸಮಕಳೆಯನ್ನು ಹೊಂದುವರು. ಬಡವರು ದುಡಿಯಲು ಸ್ವತಂತ್ರರು, ಒಡೆಯರು ದುಡಿಸಿಕೊಳ್ಳಲು ಸ್ವತಂತ್ರರು ಎಂಬ ಭಾವ ಪ್ರಬಲವಾಗಿದೆ. ಶೋಷಣೆಗೆ ಒಳಗಾಗುವವರು ಮತ್ತು ಶೋಷಣೆ ಮಡುವವರು ಇರುವವರೆಗೆ ಸಮಸುಖವೆಂಬುದು ಮರೀಚಿಕೆ. ಆದ್ದರಿಂದ ಸಮಸುಖಕ್ಕಾಗಿ ವರ್ಗಭೇದ ಅಳಿಯಲೇ ಬೇಕು. ಹೀಗೆ ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದಗಳು ಅಳಿದಾಗ ಮತ್ರ ಸಮರತಿ, ಸಮಕಳೆ ಮತ್ತು ಸಮಸುಖಗಳಿಂದ ಲೋಕದ ಜನ ಆನಂದಮಯವಾದ ಬದುಕನ್ನು ಪಡೆಯುವರು. ಇದನ್ನು ಅರಿಯುವುದೇ ಇಷ್ಟಲಿಂಗಪೂಜೆಯ ಉದ್ದೇಶ ಎಂದು ಬಸವಣ್ಣನವರು ಹೇಳುತ್ತಾರೆ.
ಜಗದೇವಿ: ಕೆಳಜಾತಿ, ಕೆಳವರ್ಗಗಳಲ್ಲಿ ಜನಿಸುವುದು ಅವರವರ ಕರ್ಮಫಲ ಅಲ್ಲವೆ?
ಕಬ್ಬುನ ಪರುಷವೇಧಿಯದಡೇನು
ಕಬ್ಬುನ ಹೊನ್ನಾಗದಡಾ ಪರುಷವದೇಕೊ?
ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ?
ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
ಕರ್ಮ ಹರಿಯದೊಡಾ ಪೂಜೆಯದೇಕೊ?

ಶರಣಬಸವ: ಇಷ್ಟಲಿಂಗ ಪೂಜೆ ಕರ್ಮದ ಸಂಕೋಲೆಗಳಿಂದ ಮನವನನ್ನು ಮುಕ್ತನನ್ನಾಗಿಸುತ್ತದೆ. ಹೀಗೆ ಬಸವಧರ್ಮ ಮನವ ವಿಮೋಚನೆಯ ಧರ್ಮವಾಗಿದೆ. ಕರ್ಮಸಿದ್ಧಾಂತವನ್ನು ತಿರಸ್ಕರಿಸಿ ಕಾಯಕ ಸಿದ್ಧಾಂತವನ್ನು ಪುರಸ್ಕರಿಸುವುದೇ ಬಸವಧರ್ಮದ ಉದೇಶವಾಗಿದೆ. ಕತ್ತಲೆ ಕಳೆಯಲೆಂದು ಜ್ಯೋತಿಯನ್ನು ಬೆಳಗಿಸುವಂತೆ ಕರ್ಮವನ್ನು ಹರಿಯಲು ಇಷ್ಟಲಿಂಗ ಪೂಜೆ ಮಡಬೇಕು. ಇಷ್ಟಲಿಂಗ ಪೂಜೆ ಮಡಿಯೂ ಕರ್ಮಸಿದ್ಧಾಂತವನ್ನು ನಂಬಿದರೆ ಆ ಪೂಜೆ ನಿಷ್ಪ್ರಯೋಜಕ ಎಂಬುದು ಮಹಾನುಭಾವಿ ಬಸವಣ್ಣನವರ ಅಭಿಮತವಾಗಿದೆ.
ಜಗದೇವಿ: ವಿಚಾರ ಬಹಳೇ ಗಹನವಾಗಿದೆ. ಕಾಯಕ, ಕಾಯಕ ಎಂದು ದಿನವೂ ಹೇಳುತ್ತೇವೆ. ಕಾಯಕ ಸಿದ್ಧಾಂತ ಎಂದರೇನು?
ನಾನು ಆರಂಬವ ಮಡುವೆನಯ ಗುರುಪೂಜೆಗೆಂದು;
ನಾನು ಬೆವಹಾರವ ಮಡುವೆನಯ ಲಿಂಗಾರ್ಚನೆಗೆಂದು;
ನಾನು ಪರಸೇವೆಯ ಮಡುವೆನಯ ಜಂಗಮದಾಸೋಹಕ್ಕೆಂದು;
ನಾನಾವಾವ ಕರ್ಮಂಗಳ ಮಡಿದಡೆಯೂ
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಡೆನು,
ನಿಮ್ಮ ಸೊಮ್ಮಿಂಗೆ ಸಲಿಸುವೆನು
ನಿಮಣೆ ಕೂಡಲಸಂಗಮದೇವಾ.
ಶರಣಬಸವ: ಕಾಯಕ ಸಿದ್ಧಾಂತವು ಪ್ರಸಾದ ಮತ್ತು ದಾಸೋಹ ವಿಚಾರಗಳನ್ನೂ ಒಳಗೊಂಡಿದೆ. ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಇಡೀ ವಿಶ್ವವನ್ನೇ ರಕ್ಷಿಸಲು ಸಾಧ್ಯ. ಪ್ರತಿಯೊಬ್ಬರು ಕಾಯಕದ ಮೂಲಕ ತಮ್ಮ ದೈನಂದಿನ ಬದುಕಿಗೆ ಬೇಕಾದುದನ್ನು ಪಡೆಯಬೇಕು. ಆದರೆ ಬರಿ ತಮ್ಮ ಬಗ್ಗೆಯೇ ಯೋಚಿಸಿದರೆ ಅದು ಕಾಯಕ ಸಿದ್ಧಾಂತವಾಗದು. ನಮ್ಮ ಕಾಯಕ ಕೇವಲ ಸ್ವಂತದ ಉದ್ದೇಶಕ್ಕೆ ಸೀಮಿತವಾಗಿರದೆ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಜಿಕ ಜವಾಬ್ದಾರಿಯನ್ನು ಹೊಂದಿರಬೇಕು ಎಂಬುದು ಜಗಜ್ಯೋತಿ ಬಸವೇಶ್ವರರ ಆಶಯವಾಗಿದೆ.
ಜಗದೇವಿ: ಸ್ವಲ್ಪ ವಿವರಿಸಿದರೆ ಚೆನ್ನಾಗಿರುತ್ತೆ. ಬಸವಣ್ಣನವರ ವಚನಗಳು ಮೇಲ್ನೋಟಕ್ಕೆ ಸರಳ ಎನಿಸುತ್ತವೆ. ಚಿಂತಿಸಿದಂತೆಲ್ಲ ಎಷ್ಟೊಂದು ಅರ್ಥಗರ್ಭಿತವಾಗಿವೆ. ನನಗೆ ತಿಳಿದುಕೊಳ್ಳುವ ಆಸೆ ತೀವ್ರವಾಗುತ್ತಿದೆ.
ಶರಣಬಸವ: ಬಸವಣ್ಣನವರು ಗುರು ಲಿಂಗ ಮತ್ತು ಜಂಗಮವನ್ನು ನಮ್ಮ ಸಮಜದ ಕಾಣುತ್ತಾರೆ. ನಮ್ಮ ಪ್ರತಿಯೊಂದು ಉತ್ಪಾದನೆ ಮತ್ತು ಸೇವೆ ಸಮಜಮುಖಿಯಗಿರಬೇಕೆಂದು ಬಯಸುತ್ತಾರೆ. ನಮ್ಮ ಅಂತಃಸಾಕ್ಷಿಯನ್ನು ಮತ್ತು ಇಡೀ ಸಮಜವನ್ನು ದೇವರೆಂದು ಸಾರುತ್ತಾರೆ. ಕ್ರಮವಾಗಿ ಗುರುಪೂಜೆ, ಲಿಂಗಾರ್ಚನೆ ಮತ್ತು ಜಂಗಮದಾಸೋಹದ ಮೂಲಕ ಬಸವಣ್ಣನವರು ಈ ಜವಾಬ್ದಾರಿಗಳನ್ನು ಸೂಚಿಸಿದ್ದಾರೆ. ದೇವರು ಕೊಟ್ಟಿದ್ದನ್ನೆಲ್ಲ ಸಮಜವೆಂಬ ದೇವರಿಗೆ ಕೊಡುವುದಾಗಿ ಹೇಳುತ್ತಾರೆ. ನಿಮ್ಮ ಸೊಮ್ಮಿಂಗೆ ಅಂದರೆ ಶಿವನಿಧಿಗೆ ಸಲ್ಲಿಸಿ ಅದನ್ನು ಸಾಮಜಿಕ ನಿಧಿಯಗಿಸಿ. ದುರ್ಬಲವರ್ಗಗಳ ಉದ್ಧಾರಕ್ಕೆ ಬಳಸಬೇಕೆಂದು ಸೂಚಿಸುತ್ತಾರೆ. ಹೀಗೆ ಮಡಿದಾಗ ಯರೂ ಅಪಮನಕ್ಕೆ ಒಳಗಾಗುವುದಿಲ್ಲ. ಯರೂ ಉಪವಾಸ ಬೀಳುವುದಿಲ್ಲ. ಯರೂ ನಿರುದ್ಯೋಗಿಗಳಾಗುವುದಿಲ್ಲ. ಇಲ್ಲಿ ಕೊಡುವವರಿಗೆ ವಿನಮ್ರಭಾವ ಇರುತ್ತದೆ. ಇದೇ ದಾಸೋಹ ಭಾವ. ಪಡೆದುಕೊಳ್ಳುವವರು ಸಮನತೆಯ ಮತ್ತು ಜವಾಬ್ದಾರಿಯ ಭಾವದೊಂದಿಗೆ ಸ್ವೀಕರಿಸುತ್ತಾರೆ. ಹಾಗೆಯೆ ಕಾಯಕದ ಮೂಲಕ ಇತರರಿಗೆ ದಾಸೋಹ ಮಡುತ್ತಾರೆ. ಆದರೆ ದಾನದಲ್ಲಿ ಹೀಗಾಗುವುದಿಲ್ಲ. ಕೊಡುವವರಿಗೆ ಅಹಂಭಾವ ಬರಬಹುದು. ಪಡೆದುಕೊಳ್ಳುವವರಿಗೆ ದೀನಭಾವವಂತೂ ಇದ್ದೇ ಇರುತ್ತದೆ.
ಜಗದೇವಿ: ನೀವು ಹೇಳುವ ಪ್ರಕಾರ ಕಾಯಕ ಸಿದ್ಧಾಂತ ವಿಶ್ವಮನವ ಸಿದ್ಧಾಂತವಾಗಿದೆ. ಈ ಸಿದ್ಧಾಂತದಲ್ಲಿ ಪ್ರಸಾದ ಕುರಿತು ಹೇಳಲೇ ಇಲ್ಲವ. ದೇವಾಲಯಗಳಲ್ಲಿ ಪೂಜೆಯ ನಂತರ ಪಡೆಯುವುದು ಇಲ್ಲವೆ ಆಹಾರ ಸೇವನೆಗೆ ಮಡುವುದು ಮತ್ರ ಪ್ರಸಾದ ಎಂಬುದು ನನಗೆ ಗೊತ್ತು.
ಶರಣಬಸವ: ಜಗದೇವಿ, ಬಸವಣ್ಣನವರ ದೃಷ್ಟಿಯಲ್ಲಿ ಪ್ರಸಾದಕ್ಕೆ ವಿಶಾಲವಾದ ಅರ್ಥವಿದೆ. ನಿಮ್ಮ ಸಂಪತ್ತನ್ನು ಕೂಡ ನೀವು ಅನ್ಯಾಯವಾಗಿ ಬಳಸಬಾರದು ಎಂದು ಅಣ್ಣನವರು ಹೇಳುತ್ತಾರೆ. ಕಾಯಕದಿಂದ ಬಂದುದನ್ನು ದುಡಿಮೆಯ ಫಲ ಎಂದು ಭಾವಿಸಿದರೆ ಮನದಲ್ಲಿ ಅಹಂಕಾರ ಮೂಡುವ ಸಾಧ್ಯತೆ ಇದೆ. ಅಂತೆಯೆ ದುಡಿಮೆಯ ಫಲವನ್ನೂ ದೇವರ ಪ್ರಸಾದವೆಂದು ಸ್ವೀಕರಿಸಬೇಕು. ಹಾಗೆ ಗಳಿಸಿದ ಸಂಪತ್ತನ್ನು ಇಂದಿಂಗೆ ನಾಳಿಂಗೆ ಎನ್ನದೆ ಸಮಜವೆಂಬ ದೇವರಿಗೆ ದಾಸೋಹ ಭಾವದ ಮೂಲಕ ಅರ್ಪಿಸಬೇಕು. ಒಂದು ಅನ್ನದ ಅಗುಳನ್ನೂ ಹಾಳು ಮಡಬಾರದು. ಹೀಗೆ ಮಡಿದಾಗ ಯರೂ ಹಸಿವಿನಿಂದ ಬಳಲುವುದಿಲ್ಲ. ಕೊಲೆ ಸುಲಿಗೆಗಳಾಗುವುದಿಲ್ಲ. ಕಾಯಕ ಸಿದ್ಧಾಂತ ಈ ರೀತಿಯ ದಾಸೋಹ ಅರ್ಥಶಾಸ್ತ್ರವನ್ನು ಒಳಗೊಂಡಿದೆ.
ಜಗದೇವಿ: ನಿಮ್ಮ ಮತು ಕೇಳುತ್ತಿದ್ದಂತೆಲ್ಲ. ಮನಸ್ಸು ನಿರಾಳವಾಗುತ್ತಿದೆ. ಬದುಕಿನ ಎಲ್ಲ ಜಟಿಲ ಸಮಸ್ಯೆಗಳನ್ನು ಬಸವ ತಂದೆ ಎಷ್ಟು ಸಲೀಸಾಗಿ ಬಗೆಹರಿಸಿದ್ದಾರೆ ಎಂಬುದರ ಅರಿವಾಗುತ್ತಿದೆ. ನಾವು ಹೀಗೆ ಚಿಂತನ ಶಕ್ತಿಯನ್ನು ಬೆಳೆಸಿಕೊಂಡಂತೆಲ್ಲ ನಮ್ಮ ಜಾತಿ, ಕುಲ ಮತ್ತು ಅಂತಸ್ತು ಎಷ್ಟೊಂದು ಟೊಳ್ಳು ಎಂಬುದರ ಅರಿವಾಗುವುದು. ಆದರೆ ಕುಲಮದ ಮತ್ತು ಧನಮದಗಳಿಂದ ಮುಕ್ತನಾದಾಗ ಮತ್ರ ಮನವನಿಗೆ ಇಂಥ ದಾಸೋಹಂಭಾವ ಬರಲು ಸಾಧ್ಯ. ಅಹಂಕಾರದ ಮನಸ್ಸು ಇಂಥ ಸರಳ ಸಹಜ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನನಗನಿಸುತ್ತಿದೆ.
ಜನ್ಮಜನ್ಮಕ್ಕೆ ಹೋಗಲೀಯದೆ
ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ
ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ
ಕೂಡಲಸಂಗಮದೇವ ನಿಮ್ಮ ಧರ್ಮ.

ಶರಣಬಸವ: ಜಗದೇವಿ ಸರಿಯಗಿಯೇ ಹೇಳಿದೆ. ಅಹಂಕಾರವೇ ಎಲ್ಲ ಸಮಸ್ಯೆಗಳ ಮೂಲ ಎಂದು ಭಕ್ತಿಭಂಡಾರಿ ಬಸವಣ್ಣನವರು ಸೂಚಿಸಿದ್ದಾರೆ. ದಯ ಭಾವದಿಂದ ಮತ್ರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಸಾರಿದ್ದಾರೆ. ಅಂತೆಯೇ ಅವರು ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ದಾಸೋಹಂ ಭಾವದಿಂದ ಅಹಂಭಾವವನ್ನು ಹೊಡೆದುಹಾಕಬೇಕಿದೆ. ಆಗ ಮತ್ರ ಈ ಜಗತ್ತು ಎಲ್ಲ ಅನಿಷ್ಟಗಳಿಂದ ಮುಕ್ತವಾಗಲು ಸಾಧ್ಯ.
ಜಗದೇವಿ: ಇಷ್ಟೆಲ್ಲ ವಿಚಾರಗಳನ್ನು ಒಳಗೊಂಡ ಬಸವಧರ್ಮ ಹೊಸ ಧರ್ಮವೇ ಆದ ಹಾಗಾಯಿತಲ್ಲ?
ಶರಣಬಸವ: ಬಸವಣ್ಣನವರು ತೋರಿಸಿದ ಮರ್ಗಕ್ಕೆ ಬಸವಧರ್ಮ ಎಂದು ಸೊನ್ನಲಿಗೆಯ ಶರಣ ಸಿದ್ಧರಾಮರೇ ಹೇಳಿದ್ದಾರೆ. “ಎನ್ನ ತನುಮನ ಪ್ರಾಣಂಗಳು ಶುದ್ಧವಾದವು ಬಸವಣ್ಣಾ ನಿಮ್ಮ ಧರ್ಮದಿಂದ” ಎಂದು ಮಡಿವಾಳ ಮಚಿದೇವರು ತಿಳಿಸಿದ್ದಾರೆ. ನಮ್ಮ ಜನಪದ ಕವಿಗಳು ಬಸವಣ್ಣನವರ ವಿಚಾರಗಳು ಹೊಸ ಮತದ ಹೊಸ ಮಂತ್ರಗಳು ಎಂದು ಹಾಡಿ ಹೊಗಳಿದ್ದಾರೆ.
ಬಸವಣ್ಣ ನಿನ್ಹೆಸರು ದೆಸೆದೆಸೆಗೆ ಶಿವಮಂತ್ರ
ಹೊಸ ಮತಕೆ ಮಂತ್ರ ನಿತ್ಯದಲ್ಲಿ ಒಕ್ಕಲಿಗ
ಹೊಸ ಮಂತ್ರ ಬಸವ ಜಪಿಸುವನು.

ಸಾಧು ಸಾಧೆಲೆ ಬಸವ ಓದು ಕಲಿಯಿತು ಜನವು
ಹೋದ ಹೋದಲ್ಲಿ ಹೊಸಮತು ಕೇಳಿದವು
ಮೇದಿನಿಗೆ ಬಂತು ಹೊಸಬೆಳಕು.

ಎಲ್ಲ ಬಲ್ಲಿದನಯ ಕಲ್ಯಾಣ ಬಸವಯ
ಚೆಲ್ಲಿದನು ತಂದು ಶಿವಬೆಳಕ ನಾಡೊಳಗೆ
ಸೊತ್ತಿ ಜನವು ಹಾಡುವುದು.

ಶರಣಬಸವ: ಬಸವಣ್ಣನವರು ಹೊಸಧರ್ಮವನ್ನು, ಹೊಸ ಪರಿಕಲ್ಪನೆಯ ಶಿವನನ್ನು ಮತ್ತು ಹೊಸ ಜೀವನ ವಿಧಾನವನ್ನು ತೋರಿಸಿಕೊಟ್ಟರು ಎಂಬುದನ್ನು ರೈತಾಪಿ ಜನರು ಹಾಡು ಕಟ್ಟಿ ಹಾಡಿದ್ದಾರೆ ಎನ್ನಲು ಇಂಥ ಜನಪದ ಹಾಡುಗಳೇ ಸಾಕ್ಷಿ. ಹೀಗೆ ಬಸವಧರ್ಮ ರೈತರ, ಕೃಷಿ ಕಾರ್ಮಿಕರ ಮತ್ತು ಎಲ್ಲ ರೀತಿಯ ಕಾಯಕ ಜೀವಿಗಳ ಧರ್ಮವಾಗಿದೆ. ಒಟ್ಟಾರೆ ಬಡವರ ಧರ್ಮವಾಗಿದೆ. ಬಸವಧರ್ಮವನ್ನು ಸ್ವೀಕರಿಸದೆ ಭೇದಭಾವದ ಧರ್ಮದ ಉಳಿಯುವುದೆಂದರೆ ಮಲ್ಲಿಗೆ ಮುಳ್ಳು ಮುಡಿದ ಹಾಗೆ. ಕಲ್ಲಿಗೆ ಕೈ ಮುಗಿದರೆ ಬರುವುದೇನಿದೆ. ಹೊಸಧರ್ಮ ಮತ್ತು ಹೊಸಬದುಕನ್ನು ಕೊಟ್ಟ ಕಲ್ಯಾಣದ ಬಸವಣ್ಣನಿಗೆ ಕೈಮುಗಿಯವುದರಲ್ಲಿ ಸಾರ್ಥಕತೆ ಇದೆ.

ಜಗದೇವಿ: ಇಂಥ ಮನವಕುಲತಿಲಕ ಬಸವಣ್ಣನವರ ಜೊತೆಗೆ ಬದುಕಿದವರೇ ಧನ್ಯರಲ್ಲವೆ? ಬಸವಣ್ಣನವರು ಅವರಿಗೆಲ್ಲ ಎಂಥ ಸ್ಫೂರ್ತಿಯ ಸೆಲೆಯಗಿರಬಹುದು? ಅವರೆಲ್ಲ ಬಸವಣ್ಣನವರನ್ನು ಹೇಗೆ ಕಂಡಿರಬಹುದು?
ಶರಣಬಸವ: ಬಸವಣ್ಣನವರು ಕುಟುಂಬ ಪ್ರೇಮಿ, ಸಮಜವೆಂಬ ಜಂಗಮ ಪ್ರೇಮಿ. ಅವರು ಶರಣರನ್ನು ತಮ್ಮ ಕುಟುಂಬದ ಸದಸ್ಯರೆಂದೇ ಭಾವಿಸುತ್ತಿದ್ದರು, ಶರಣ ಸಂಕುಲ ಜಾತಿ ಮತ ಭೇದಗಳಿಂದ ಮುಕ್ತವಾಗಿತ್ತು. ಇಷ್ಟಲಿಂಗವೊಂದೇ ಅವರ ದೇವರು. ಕುಲದೇವರು, ಮನೆದೇವರು, ಗ್ರಾಮದೇವರು, ನಗರದೇವರು, ಸೀಮೆ ದೇವರು ಹೀಗೆ ೩೩ ಕೋಟಿ ದೇವರುಗಳು ಅವರಿಗೆ ಇದ್ದಿಲ್ಲ. ಒಬ್ಬನೇ ದೇವರು, ಒಂದೇ ಮನವ ಜನಾಂಗ, ದಯವೇ ಧರ್ಮದ ಮೂಲ, ಧರ್ಮದ ಮೂಲವಾದ ದಯೆಯಿಂದ ಮತ್ರ ವಿಶ್ವರಕ್ಷಣೆ ಸಾಧ್ಯ ಎಂದು ಸಾರಿದ ಬಸವಣ್ಣನವರನ್ನು ಸಮಕಾಲೀನ ಶರಣರು ಹೃದಯತುಂಬಿ ಕೊಂಡಾಡಿದ್ದಾರೆ. ಬಸವಣ್ಣನವರೆಂದರೆ ಶರಣರಿಗೆಲ್ಲ ಪಂಚಪ್ರಾಣ.
ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು,
ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು,
ತೊಳಗಿ ಬೆಳಗುತ್ತಿದ್ದಿತಯ ಶಿವನ ಪ್ರಕಾಶ!
ಬೆಳಗಿನೊಳಗೆ ಒಪ್ಪುತ್ತಿದ್ದರಯ ಅಸಂಖ್ಯಾತ ಭಕ್ತಗಣಂಗಳು.
ಶಿವಭಕ್ತರಿದ್ದ ಕ್ಷೇತ್ರವೇ ಅವಿಮುಕ್ತಕ್ಷೇತ್ರವೆಂಬುದು ಹುಸಿಯೇ?
ಶಿವಭಕ್ತರಿದ್ದ ದೇಶ ಪಾವನವೆಂಬುದು ಹುಸಿಯೆ?
ಗುಹೇಶ್ವರಲಿಂಗದಲ್ಲಿ ಎನ್ನ ಪರಮರಾಧ್ಯ ಸಂಗನಬಸವಣ್ಣನ
ಕಂಡು ಬದುಕಿದೆನು ಕಾಣಾ ಸಿದ್ಧರಾಮಯ.

ಹೀಗೆ ವ್ಯೋಮಮೂರುತಿ ಅಲ್ಲಮಪ್ರಭುಗಳು ಬಸವಣ್ಣನವರನ್ನು ಕೊಂಡಾಡಿದ್ದಾರೆ. ಬಸವಜ್ಯೋತಿಯಿಂದ ಶಿವನ ಪ್ರಕಾಶ ಬೆಳಗುವುದು ಎಂದು ಅಲ್ಲಮಪ್ರಭುಗಳು ಹೇಳಬೇಕಾದರೆ ಬಸವಣ್ಣನವರ ವ್ಯಕ್ತಿತ್ವ ಹೇಗಿತ್ತು ಎಂಬುದು ನಮ್ಮ ಅರಿವಿಗೆ ಬಾರದೆ ಇರದು. ಪ್ರಭುಗಳಿಗೆ ಇಷ್ಟು ಕೊಂಡಾಡಿದರೂ ಸಮಧಾನವಿಲ್ಲ. ಅವರು ಗುಹೇಶ್ವರಲಿಂಗದಲ್ಲಿ ಬಸವಣ್ಣನವರನ್ನೇ ಕಾಣುತ್ತಾರೆ. ಹೀಗೆ ಬಸವಣ್ಣನವರು ದೇವಸ್ವರೂಪರೇ ಆಗ್ದಿದರು.
ಜಗದೇವಿ: ಬಸವಣ್ಣನವರ ಹೊಸ ಧರ್ಮದ ಕುರಿತು ಎಷ್ಟು ಕೇಳಿದರೂ ಕೇಳಬೇಕೆನಿಸುತ್ತಿದೆ. ವಿಶ್ವದ ಮನವರನ್ನು ಎಲ್ಲ ರೀತಿಯ ಬಂಧನಗಳಿಂದ ವಿಮೋಚನೆಗೊಳಿಸುವ ಈ ಧರ್ಮದ ವೈಶಿಷ್ಟ್ಯವೇನು? ಜಗತ್ತಿನ ಹಿನ್ನೆಲೆಯಲ್ಲಿ ಈ ಧರ್ಮವನ್ನು ನೋಡುವ ಬಗೆ ಹೇಗೆ?
ಶರಣಬಸವ: ಬಸವಣ್ಣನವರು ಕಲ್ಯಾಣದಲ್ಲಿ ಮಡಿದ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು ಜಗತ್ತಿನಲ್ಲಿ ನಡೆದ ಮೊದಲ ಪ್ರಯೋಗಗಳೇ ಆಗಿವೆ. ಬಸವಣ್ಣನವರು ಎಲ್ಲದಕ್ಕೂ ಪಯಯ ವ್ಯವಸ್ಥೆ ಮಡಿದರು. ರಾಜ್ಯಸಿಂಹಾಸನವನ್ನು ಅವರು ಕೆಣಕಲಿಲ್ಲ.
ಆದರೆ ಶೂನ್ಯಸಿಂಹಾಸನ ಸೃಷ್ಟಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದರು. ಅವರ ಅನುಭವಮಂಟಪದಲ್ಲಿನ ಅಮರಗಣಂಗಳಲ್ಲಿ ಎಲ್ಲ ಜಾತಿ ಜನಾಂಗದವರಿದ್ದರು. ಮಹಿಳೆಯರಿದ್ದರು. ಅವರೆಲ್ಲ ಆ ಅನುಭವ ಮಂಟಪ ಎಂಬ ಸಮಜೋ ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದವರಾಗಿದ್ದರು. ಹೀಗೆ ಸ್ವತಂತ್ರ ಸರ್ವಸಮನತೆಯ ವಿಚಾರಧಾರೆಯನ್ನು ಹರಿಸಿದವರಲ್ಲಿ ಬಸವಣ್ಣನವರು ಮೊದಲಿಗರು, ಅವರು ಪ್ರಾರಂಭಿಸಿದ ಚಳವಳಿಯಿಂದಾಗಿ ಮಹಿಳೆಯರು ಮತ್ತು ಅಸ್ಪೃಶ್ಯರು ಕೂಡ ಶರಣರಾದರು. ಅಕ್ಷರ ಕಲಿತರು, ವಯಸ್ಕರ ಶಿಕ್ಷಣ ಕಲ್ಯಾಣದ ಆರಂಭವಾಯಿತು. ಬಸವಣ್ಣನವರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಮನವ ಹಕ್ಕುಗಳೆಲ್ಲ ಇವೆ. ಬಸವಣ್ಣನವರು ಎಲ್ಲದಕ್ಕೂ ಪಯಯವನ್ನು ಹುಡುಕಿದರು. ಸ್ಥಾವರ ಲಿಂಗಕ್ಕೆ ಪಯಯವಾಗಿ ಇಷ್ಟಲಿಂಗ, ಗುಡಿಗೆ ಪಯಯವಾಗಿ ಅನುಭವ ಮಂಟಪ, ದಾನಕ್ಕೆ ಪಯಯವಾಗಿ ದಾಸೋಹ, ಕರ್ಮಸಿದ್ಧಾಂತಕ್ಕೆ ಪಯಯವಾಗಿ ಕಾಯಕಸಿದ್ಧಾಂತ, ಹೀಗೆ ಎಲ್ಲ ರೀತಿಯಿಂದಲೂ ಬಸವಧರ್ಮ ಹೊಸಧರ್ಮವಾಗಿದೆ.
ಜಗದೇವಿ: ಇಂಥ ಹೊಸಧರ್ಮವನ್ನು ನಮ್ಮ ರೈತಾಪಿ ಜನರೂ ಗುರುತಿಸಿದ್ದು ನನಗೆ ಹೆಮ್ಮೆ ಎನಿಸುತ್ತಿದೆ. ಅವರು ಹಾಡಿದ ಹಾಡುಗಳನ್ನು ಇನ್ನಷ್ಟು ಕೇಳೋಣವೆ.
ಶರಣಬಸವ: ನನಗೂ ಕೇಳಬೇಕೆನಿಸುತ್ತಿದೆ.
ವಾದವಾದವೆ ನಡೆದು ವೇದವೇದವೆ ಸೋತು
ಭೇದ ಬೇಡೆಂದು ಬಸವಣ್ಣ | ಸಾರುದಕೆ
ಹೋದ ಹೋದಲ್ಲಿ ಹೊಸಮತು.

ಬಸವ ರಾಜ್ಯದ ಸಿರಿಯು ಬಸವ ಬಡವರ ನಿಧಿಯು
ಬಸವ ಮಳೆಬೆಳೆಯು ನಾಡೊಳಗ | ನಿಜದೀಪ
ಬಸವನೇ ಸಗ್ಗಸೋಪಾನ.

ಮಲ್ಲಿಗೆ ಇದ್ದಾಗ ಮುಳ್ಯಾಕ ಮುಡಿಯದು
ಕಲ್ಯಾಣದಾಗ ಬಸವಣ್ಣ ಇರುವಾಗ
ಕಲ್ಲಿಗ್ಯಾಕ ಕೈ ಮುಗಿಯದು.
(ಸಮಾಪ್ತಿ)


ರಂಜಾನ್ ದರ್ಗಾ
ನಿರ್ದೇಶಕ, ವಚನ ಅಧ್ಯಯನ ಕೇಂದ್ರ ಬಸವ ಸೇವಾ ಪ್ರತಿಷ್ಠಾನ, ಶರಣ ಉದ್ಯಾನ, ಶರಣ ನಗರ, ಬೀದರ -೫೮೫೪೦೧
ಮೊಬೈಲ್: ೯೨೪೨೪೭೦೩೮೪

ಬಹುಭಾಷಿಕತೆ ಮತ್ತು ಕನ್ನಡ


ಹಲವು ಭಾಷೆಗಳು ಒಂದು ಪ್ರದೇಶ ಅಥವಾ ಪರಿಸರದಲ್ಲಿ ಬಳಕೆಯಾಗುತ್ತಿದ್ದರೆ ಅದನ್ನು ಬಹು ಭಾಷಿಕ ಪರಿಸರ, ಒಬ್ಬ ವ್ಯಕ್ತಿ ಏಕಕಾಲಕ್ಕೆ ಹಲವು ಭಾಷೆಗಳನ್ನು ಬಳಸಲು ಸಮರ್ಥನಾಗಿದ್ದರೆ ಆತ ಬಹು ಭಾಷಿಕ ವ್ಯಕ್ತಿ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಯಾವುದೇ ಊರು, ನಗರ, ಒಂದಿಡೀ ನಾಡು, ಅಥವಾ ಜನ ಸಮುದಾಯ ಸಾವಿರಾರು ವರ್ಷಗಳ ಹಿನ್ನೆಲೆಯಿರುವ ತನ್ನ ಭಾಷೆ, ಸಾಹಿತ್ಯ, ಇತಿಹಾಸ, ಕಲಾಪರಂಪರೆಗಳ ಜೊತೆ ಆಳವಾದ, ಗಾಢವಾದ ಕರುಳಬಳ್ಳಿ ಸಂಬಂಧವನ್ನು ಹೊಂದಿರುತ್ತದೆ ಮತ್ತು ಇವೆಲ್ಲವುಗಳ ಮೂಲಕ ರೂಪುಗೊಳ್ಳುವ ವಿಶಿಷ್ಟ ಸಾಂಸ್ಕೃತಿಕ ಚಹರೆಗಳನ್ನು ಹೊಂದಿರುತ್ತದೆ ಎನ್ನುವುದು ಒಂದು ಒಪ್ಪಿತ ತಿಳಿವಳಿಕೆ. ಹಾಗೆಯೇ ಜನಸಮುದಾಯವೊಂದು ಬೇರೆ ಬೇರೆ ಸಾಂಸ್ಕೃತಿಕ ಒಳರಚನೆಗಳನ್ನು ಹೊಂದಿರುವಂತೆ ಭಾಷಿಕವಾಗಿಯೂ ಬಹುರೂಪಿಯಾಗುತ್ತದೆ. ಅಲ್ಲಿ ಹಲವು ಸ್ಥರದ, ಭಿನ್ನ ಸಾಮರ್ಥ್ಯದ ಭಾಷಿಕ ಸಂಸಾರಗಳೂ ಇರುತ್ತವೆ. ಪ್ರತಿ ಸಂಸಾರಕ್ಕೆ ವಿಶಿಷ್ಟ ಘನತೆಯ ಅಸ್ತಿತ್ವ ಇರುತ್ತದೆ. ಆದ್ದರಿಂದಲೇ ಒಂದು ಪರಿಸರದ ಹಲವು ಭಾಷಿಕ ಸಂಸಾರಗಳ ಮಧ್ಯೆ ಸಾಮರಸ್ಯದ, ಈರ್ಷ್ಯೆಯ, ಸಂದೇಹಗಳ, ಪೈಪೋಟಿಯ ಸಂಬಂಧವೂ ಇರುತ್ತದೆ ಎನ್ನುವುದು ನಿರಾಕರಿಸಲಾಗದ ಸತ್ಯ. ಹಲವು ಭಾಷೆಗಳು ಒಗ್ಗೂಡಿದ ವಾಸ್ತವ್ಯದ ಬಹುಭಾಷಿಕ ಪರಿಸರದಲ್ಲಿ ಈ ಬಗೆಯ ಸಂಬಂಧಗಳ ಸ್ಥಿತಿ ಸಹಜ ಹಾಗೂ ನಿರಂತರವಾಗಿರುತ್ತವೆ. ಏಕೆಂದರೆ ಈ ಭಾಷಿಕ ಸಂಬಂಧಗಳು ಒಂದೆರಡು ದಿನಗಳಲ್ಲಿ ಪ್ರಭುತ್ವಗಳ ಆಜ್ಞೆಗಳ ಮೂಲಕವೋ, ವಿದ್ವಾಂಸರ ಪ್ರಮಾಣ ವಚನ ಬೋಧನೆಯ ಮೂಲಕವೋ ರೂಪುಗೊಳ್ಳದೆ ಸಹಜ ರಾಗದ್ವೇಷಗಳಿಂದ ಕೂಡಿದ ಒಡನಾಟಗಳ ಮೂಲಕ ರೂಪುಗೊಂಡಿರುವಂತದ್ದು.
ಆದರೆ ಬಹು ಭಾಷಿಕ ಪರಿಸರ ಇತ್ತೀಚಿನ ದಶಕಗಳಲ್ಲಿ ಕೆಲವು ಅನಪೇಕ್ಷಿತ ಒತ್ತಡಗಳಿಗೆ ಸಿಲುಕಿ ನಲುಗುತ್ತಿದೆ. ಇಲ್ಲಿ ಬಲಿಷ್ಟ ಭಾಷೆಗಳ ಪರವಾದ ವಾತಾವರಣ ರೂಪುಗೊಳ್ಳುತ್ತಿದೆ. ಹಲವು ಬೇರೆ ಬೇರೆ ಕಾಲಘಟ್ಟಗಳಲ್ಲಿ ವಲಸೆ ಬಂದ ಅಥವಾ ಅಲ್ಲಿಯ ಜನರೇ ಆಡಳಿತಶಾಹಿ ಒತ್ತಡಕ್ಕೆ ಸಿಲುಕಿ ಒಪ್ಪಿಕೊಂಡ ಅಥವಾ ಸಹಜವಾಗಿಯೇ ಬರಮಾಡಿಕೊಂಡಿರಬಹುದಾದ, ಕೆಲವೊಮ್ಮೆ ಹೇರಿರಬಹುದಾದ, ಆಕ್ರಮಿಸಿಯೂ ಇರಬಹುದಾದ ಭಾಷೆಗಳನ್ನು ಪ್ರಧಾನ ಭೂಮಿಕೆಗೆ ತಂದು, ಸ್ಥಳೀಯ ಮೂಲಭಾಷೆಗಳನ್ನು ಅನ್ಯಗಳ ನೆರಳಲ್ಲಿ ನಿಲ್ಲಿಸಲಾಗುತ್ತಿದೆ. ಮೂಲಭಾಷೆಗಳ ಸಾಂಸ್ಕೃತಿಕ ಅಸ್ಮಿತೆಗಳನ್ನು ನಿರಾಕರಿಸಲಾಗುತ್ತಿದೆ. ಹಾಗೆಯೇ ಸ್ಥಳೀಯ ಪ್ರಬಲ ಭಾಷೆಗಳನ್ನು ’ಯಜಮಾನ’ ಸ್ಥಾನದಲ್ಲಿ ಪ್ರತಿಷ್ಟಾಪಿಸುವ ಮತ್ತು ಸ್ಥಳೀಯ ಅಲ್ಪಸಂಖ್ಯಾತ ಭಾಷೆಗಳನ್ನು ಮಂಡಿಯೂರುವಂತೆ ಮಾಡುವ ಪ್ರಯತ್ನಗಳನ್ನು ಬಹಳಷ್ಟು ನಿಷ್ಕರುಣೆಯಿಂದಲೇ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ.
ಸ್ಥಳೀಯರ ಮಾತೃಭಾಷೆಗಳು ಎಷ್ಟರ ಮಟ್ಟಿಗೆ ಪ್ರಧಾನ ಭೂಮಿಕೆಗೆ ಎತ್ತಿ ತರಲ್ಪಟ್ಟ ಪ್ರಬಲ ಮತ್ತು ಅನ್ಯಗಳ ನೆರಳಲ್ಲಿ ನಿಕೃಷ್ಟಗೊಳ್ಳುತ್ತಿವೆ, ಕೀಳರಿಮೆಯಿಂದ ನರಳುತ್ತಿವೆಯೆಂದರೆ ಭಾಷೆಗಳ ಅವನತಿಯ ಆತಂಕವನ್ನು ಸಾರಾಸಗಟಾಗಿ ತಳ್ಳಿ ಹಾಕುವ ಭಾಷಾ ವಿದ್ವಾಂಸರೂ ತಮ್ಮ ಅಭಿಪ್ರಾಯಗಳನ್ನು ಮರುರೂಪಿಸಬೇಕಾದ ಅನಿವಾರ‍್ಯ ಎದುರಾಗುತ್ತಿದೆ. ಅನ್ಯ ಅಥವಾ ಪ್ರಬಲ ಭಾಷೆ, ಭಾಷಿಕ ಹಾಗೂ ಸಾಂಸ್ಕೃತಿಕ ಪರಿಕರಗಳು ಉದಾರವಾಗಿದ್ದರೆ, ಸ್ಥಳೀಯ ಮತ್ತು ಸಣ್ಣ ಸಮುದಾಯಗಳ ಸಾಂಸ್ಕೃತಿಕ, ಭಾಷಿಕ ಚಹರೆಗಳು ಮತ್ತು ಸ್ಮೃತಿಗಳನ್ನು ಗೌರವಿಸುವ ಮನಸ್ಥಿತಿ ಹೊಂದಿದ್ದರೆ ಯಾವ ಆತಂಕಗಳಿಗೂ ಎಡೆಯಿಲ್ಲ. ಆಕ್ರಮಣಕಾರಿಯಾಗಿದ್ದರೆ, ಗುಡಿಸಿಹಾಕುವ ಮನೋಧರ್ಮ ಹೊಂದಿದ್ದರೆ ಎದುರಿಸುವುದಾದರೂ ಹೇಗೆ? ಒಂದೋ ಪ್ರತಿ ದಾಳಿ ನಡೆಸಬೇಕು ಇಲ್ಲವೇ ಅಸಹಾಯಕವಾಗಿ ಶರಣಾಗಬೇಕು ಅಥವಾ ಮುಖ ಮುಚ್ಚಿಕೊಂಡು ಸ್ವತ: ಜಾಗ ತೆರವು ಮಾಡಬೇಕು. ಸಮಸ್ಯೆಯೆಂದರೆ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ಗೌರವವಿಲ್ಲದಂತಹ ದಯನೀಯ ಸ್ಥಿತಿ. ಇದು ಸ್ಥಳೀಯ ಪ್ರಧಾನ ಭಾಷೆಗಳಿಗೆ ಪ್ರಬಲ ಅನ್ಯಗಳು ಮತ್ತು ಸಾಂಸ್ಕೃತಿಕವಾಗಿ ಬಲಾಢ್ಯವಾದ ಭಾಷೆಗಳ ಎದುರು ಹೇಗೆ ಉಳಿವಿನ ಹೋರಾಟವೋ ಹಾಗೆಯೇ ಅಲ್ಪಸಂಖ್ಯಾತ ಸ್ಥಳೀಯ ಭಾಷೆಗಳಿಗೆ ಸ್ಥಳೀಯ ಪ್ರಧಾನ ಭಾಷೆಗಳ ಎದುರು ಉಳಿವಿನ ಹೋರಾಟವೂ ಆಗಿರುವುದು ವಾಸ್ತವ ಸತ್ಯ. ಅದರೊಂದಿಗೆ ಒಂದು ಭಾಷೆಯೊಳಗಿನ ಹಲವು ಭಾಷಿಕ ರೂಪಗಳಿಗೆ ಪ್ರಮಾಣಿತ ಅಥವಾ ಶಿಷ್ಟ ರೂಪದ ಎದುರು ತನ್ನ ಚಹರೆಗಳನ್ನು ಕಾಪಾಡಿಕೊಳ್ಳುವ ಹವಣಿಕೆಯೂ ಇರುತ್ತದೆ. ಆದರೆ ಅಂತಹ ಪ್ರತಿರೋಧಗಳಿಗೆ ಬೇಕಾದ ಸ್ಥೈರ‍್ಯ ಸಾಕಾಗದ ಸಂದರ್ಭದಲ್ಲಿ ಸಾಂಸ್ಕೃತಿಕ ಯಜಮಾನಿಕೆಯ ಗುಣಗಳನ್ನು ರೂಢಿಸಿಕೊಂಡಿರುವ ಭಾಷೆಗಳು ಮತ್ತು ಸಾಮ್ರಾಜ್ಯಶಾಹಿ ಭಾಷೆಗಳ ಎದುರು ಸ್ಥಳೀಯ ಪ್ರಧಾನ ಭಾಷೆಗಳು ಮತ್ತು ಈ ಮೂರೂ ವರ್ಗದ ಭಾಷೆಗಳ ಎದುರು ಸ್ಥಳೀಯ ಅಲ್ಪಸಂಖ್ಯಾತ ಭಾಷೆಗಳು ಹಾಗೂ ಅಲ್ಲಿನ ಪ್ರತಿಯೊಂದು ಭಾಷೆಯ ಪ್ರಮಾಣಿತ ರೂಪದೆದುರು ಅದರ ಒಳ ರೂಪ ರಚನೆಗಳು ಅನುಸಂಧಾನ, ಸಾಮರಸ್ಯ, ಕೊಡುಕೊಳ್ಳುವಿಕೆ ಮುಂತಾದ ಜಾಣ ವ್ಯವಹಾರಗಳ ಮೂಲಕ ನಿರಂತರವಾಗಿ ತಮ್ಮ ಅಸ್ತಿತ್ವದ ಉಳಿವಿನ ಅವಕಾಶಗಳನ್ನು ಹುಡುಕುತ್ತಿರುತ್ತವೆ.
ಕನ್ನಡದ ಸಂದರ್ಭದಲ್ಲಿ ಸಂಸ್ಕೃತವನ್ನು ಸಾಂಸ್ಕೃತಿಕ ಯಜಮಾನ್ಯ ಭಾಷೆಯನ್ನಾಗಿಯೂ, ಇಂಗ್ಲೀಷನ್ನು ಸಾಮ್ರಾಜ್ಯಶಾಹಿ ಭಾಷೆಯನ್ನಾಗಿಯೂ, ಪರಿಭಾವಿಸಲಾಗುತ್ತಿದೆ. ಸಂಸ್ಕೃತ ಮತ್ತು ಕನ್ನಡಗಳ ನಡುವಿನ ಯಜಮಾನ್ಯ - ಅಧೀನ ಸಂಬಂಧ ೧೫೦೦ ಸಾವಿರ ವರ್ಷಗಳಷ್ಟು ಸುದೀರ್ಘ ಕಾಲದ್ದಾದರೆ, ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳ ನಡುವಿನ ಆಳುವ ಮತ್ತು ಆಳಿಸಿಕೊಳ್ಳುವ ಸ್ವರೂಪದ ಸಂಬಂಧ ಕೆಲವು ನೂರು ವರ್ಷಗಳ ಕಾಲದ್ದು. ಸಂಸ್ಕೃತ ಆಳ್ವಿಕೆಯ ಭಾಷೆಯಾಗಿದ್ದ ನಿದರ್ಶನಗಳು ತೀರಾ ಕಡಿಮೆಯಾದರೂ ಆಳುವವರ ತಾತ್ವಿಕತೆಯನ್ನು ರೂಪಿಸುವ ಸ್ಥಾನದಲ್ಲಿ ಇಂದಿಗೂ ವಿರಾಜಮಾನವಾಗಿರುವುದು ಅದರ ಯಜಮಾನಿಕೆಯ ಗತ್ತಿನ ಅಗಾಧತೆಯನ್ನು ಅಥವಾ ಅವೈದಿಕ ಸಮುಯಗಳು ದಾಸ್ಯಪ್ರಿಯ ಸ್ವಭಾವವನ್ನು ಸೂಚಿಸುತ್ತಿರಬಹುದಾದಂತೆ, ಇಂಗ್ಲೀಷ್ ಕಲಿಕೆ ಮತ್ತು ಇಂಗ್ಲೀಷ್ ಮಾಧ್ಯಮದ ಶಿಕ್ಷಣದ ಕುರಿತು ಒಂದಿಡೀ ಜನಸಮುದಾಯದ ತೀವ್ರ ತುಡಿತವು ಇಂಗ್ಲೀಷ್ ಭಾಷೆಯ ಕ್ಷಿಪ್ರವ್ಯಾಪಿ ಗುಣವನ್ನೂ, ವಸಾಹತುಶಾಹಿಯ ಅಗಾಧ ಸಾರ್ವಕಾಲಿಕತೆಯನ್ನೂ ಸೂಚಿಸುತ್ತಿರಬಹುದು.
ಭಾಷೆಗಳ ನಡುವೆ ಅನುಮಾನ ಮತ್ತು ಸಂಘರ್ಷಗಳು ತಾರಕಕ್ಕೇರುವುದು ಶಿಕ್ಷಣಕ್ಕೆ ಸಂಬಂಧಿಸಿದ ವಿದ್ಯಮಾನಗಳಲ್ಲಿ. ಉದಾಹರಣೆಗೆ, ಸಂಸ್ಕೃತ ಎಲ್ಲರಿಗೂ ತಲುಪುವ ಔದಾರ‍್ಯವನ್ನು ಮೊದಲಿನಿಂದ ತೋರದೆ ಇದ್ದುದರಿಂದ ಆಧುನಿಕ ಪೂರ್ವ ಮತ್ತು ನಂತರದ ದಿನಗಳಲ್ಲಿ ಜನಸಾಮಾನ್ಯರ ಶಿಕ್ಷಣದ ವಾಹಕವಾಗಲಿಲ್ಲ. ಆದರೆ ಅದಕ್ಕೆ ಆರೋಪಿಸಲಾಗಿದ್ದ ದೈವಿಕ ಪ್ರಭಾವಳಿ ಮತ್ತು ಅದಕ್ಕಿದ್ದ ಆಳುವ ಶಕ್ತಿಗಳ ಜೊತೆಗಿನ ಒಡನಾಟವು ಪರೋಕ್ಷವಾಗಿ ಸಾಮಾನ್ಯರ ಮತ್ತು ಶೂದ್ರಾತಿಶೂದ್ರರ ಮನೋಲೋಕವನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ನೆರವಾಗಿತ್ತು. ೧೯ ನೇ ಶತಮಾನದ ಕೊನೆಯ ಹೊತ್ತಿಗಾಗಲೇ ಶಿಕ್ಷಣವು ಮಠ ಮತ್ತು ಅಗ್ರಹಾರಗಳ ವ್ಯಾಪ್ತಿಯನ್ನು ದಾಟಿ ಸಮಾಜಮುಖಿ ಆಗತೊಡಗಿತು. ಅದರಲ್ಲೂ ಕಲಿಕೆಯ ಪರಿಕರಗಳ ಮತ್ತು ಮಾನದಂಡಗಳ ಸ್ವರೂಪವೇ ಬದಲಾಗತೊಡಗಿದ ಕೂಡಲೇ ಸಂಸ್ಕೃತವು ತನ್ನ ಪ್ರಭಾವ ವಲಯದಿಂದ ಬಹು ದೊಡ್ಡ ಸಮಾಜವೊಂದು ನಿಧಾನವಾಗಿ ಹೊರ ಸರಿಯತೊಡಗುತ್ತಿರುವುದರ ಬಗ್ಗೆ ಆತಂಕ ಪಡತೊಡಗಿತು. ಬ್ರಿಟಿಷ್ ಆಳ್ವಿಕೆಯ ಕಾಲದ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲೀಷ್‌ಗೆ ನೇರ ಪರ‍್ಯಾಯವೆನ್ನುವ ನೆಲೆಯಲ್ಲಿ ನಿಲ್ಲಬಯಸಿದ ಅದರ ಪ್ರಯತ್ನಕ್ಕೆ ನಿರೀಕ್ಷಿತ ಪ್ರಮಾಣದ ಫಲ ಸಿಗಲಿಲ್ಲವಾದ್ದರಿಂದ ಅದು ಬೇರೆ ರೂಪದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲೆತ್ನಿಸಿತು.
ಆಧುನಿಕ ಎನ್ನಬಹುದಾದ ಸಾಮುದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿ ದೇಶ ಭಾಷೆಗಳ ಮೂಲಕ ಕಲಿಕೆಗೆ ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಅವಕಾಶ ಸಿಕ್ಕಿದ್ದರಿಂದ ಕೆಳಸ್ತರದ ಬಹುಸಂಖ್ಯಾತ ಕನ್ನಡ ಜನ ಸಂಸ್ಕೃತದ ಹಂಗಿನಿಂದ ಪಾರಾಗುವ ಅವಕಾಶ ಇತ್ತು. ಆದರೆ ಆಗಲೂ ಸಂಸ್ಕೃತ ಪಾಂಡಿತ್ಯ ಪಡೆದವರ ನೆರವಿನ ಮೂಲಕವೇ ಆ ಸಂದರ್ಭದ ಶಿಕ್ಷಣದ ರೂಪುರೇಷೆ ನಿರ್ಧರಿಸಬೇಕಾದ ಅನಿವಾರ‍್ಯ ಎದುರಾಯಿತು. ಹಾಗಾಗಿ ಸಂಸ್ಕೃತ ಮತ್ತು ಸಂಸ್ಕೃತ ಪಂಡಿತ ಪರಂಪರೆಯು ಪಠ್ಯಪುಸ್ತಕಗಳ ಮೂಲಕ ತನ್ನ ಯಜಮಾನ ಸ್ಥಾನಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿ ದೊಡ್ಡ ಯಶಸ್ಸನ್ನೇ ಪಡೆದಿದ್ದನ್ನು, ಹಲವು ದಶಕಗಳ ಕಾಲ ಕನ್ನಡದ ಮನಸ್ಸನ್ನು ಹಾದಿ ತಪ್ಪಿಸಿದ್ದನ್ನು ಕೆಲವರು ಸತಾರ್ಕಿಕವಾಗಿ ಪ್ರತಿಪಾದಿಸುತ್ತಾರೆ.
ಭಾರತದಲ್ಲಿ ಇಂಗ್ಲೀಷ್ ಭಾಷೆಯ ಮೂಲಕ ಶಿಕ್ಷಣ ಕ್ರಮವನ್ನು ಅಧಿಕೃತಗೊಳಸುವ ನಿಟ್ಟಿನಲ್ಲಿ ಲಾರ್ಡ್ ವಿಲಿಯಂ ಬೆಂಟಿಂಕ್‌ನ ಆದೇಶದ ಮೇರೆಗೆ ೧೮೩೫ ರ ಫೆಬ್ರವರಿ ೨ ರಂದು ಥಾಮಸ್ ಮೆಕಾಲೆ ತಯಾರಿಸಿ ಸಲ್ಲಿಸಿದ ಪ್ರಸಿದ್ಧ ವರದಿಯು ಬ್ರಿಟಿಷ್ ಸರ್ಕಾರ ಶಿಕ್ಷಣಕ್ಕೆಂದು ಮೀಸಲಿರಿಸಿದ ಎಲ್ಲ ಹಣವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ನೀಡಲಾಗುವ ಶಿಕ್ಷಣಕ್ಕೆ ಮಾತ್ರ ಬಳಸುವ ಸ್ಥಿತಿಯನ್ನು ಸೃಷ್ಟಿಸಿತು. ಆನಂತರ ಹಲವು ಸಂದರ್ಭಗಳಲ್ಲಿ ಬ್ರಿಟಿಷ್ ಸರ್ಕಾರವೇ ತನ್ನ ತಪ್ಪನ್ನು ತಿದ್ದಿಕೊಳ್ಳುವ ಸಲುವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ನೀಡುವ ನೀತಿಗಳನ್ನು ಜಾರಿಗೊಳಿಸಲೆತ್ನಿಸಿತು. ೧೯೧೭ ರಲ್ಲಿ ಸರ್ ಮೈಕೆಲ್ ಸ್ಯಾಡ್ಲರ್ ಸಲ್ಲಿಸಿದ ವರದಿಯ ಫಲವಾಗಿ ೧೯೨೦ ರ ನಂತರ ಭಾರತದಾದ್ಯಂತ ಕಾಲೇಜುಗಳಿಗೆ ಮತ್ತು ವಿಶ್ವ ವಿದ್ಯಾಲಯಗಳಿಗೆ ಮಾತ್ರ ಇಂಗ್ಲೀಷ್ ಮಾಧ್ಯಮದ ಶಿಕ್ಷಣವು ಸೀಮಿತವಾಯಿತು. ಬಹುಪಾಲು ಅದು ಸೂಕ್ತ ಕ್ರಮವೇ ಆಗಿತ್ತು.
ಆದರೆ ಈ ಹೊತ್ತಿನ ತನಕ ಕರ್ನಾಟಕದ ಶಿಕ್ಷಣದಲ್ಲಿ ಸ್ಥಳೀಯ ಭಾಷೆ ಮುಖ್ಯವಾಗಿ ಅದರಲ್ಲೂ ಶಿಕ್ಷಣದಲ್ಲಿ ಕಲಿಕೆಯ ಮಾಧ್ಯಮದ ಭಾಷೆ ಯಾವುದಾಗಿರಬೇಕು? ಇಂಗ್ಲಿಷ್ ಭಾಷೆಯೇ? ದೇಶೀಯವಾಗಿ ಹೆಚ್ಚು ಬಳಕೆಯ ವ್ಯಾಪ್ತಿ ಪಡೆದಿರುವ ಭಾಷೆಯೇ? ಅಥವಾ ಯಾವುದೇ ಸ್ಥಳೀಯ ಭಾಷೆಯೇ? ಸ್ಥಳೀಯ ಭಾಷೆಯೇ ಕಲಿಕೆಯ ಮಾಧ್ಯಮವಾಗಿದ್ದಾಗ ಆ ಭಾಷೆಯ ಯಾವ ಕಾಲಘಟ್ಟದ, ಯಾವ ಪ್ರದೇಶದ, ಯಾವ ರೂಪದ ಭಾಷೆಗೆ ಪಠ್ಯದಲ್ಲಿ ಆದ್ಯತೆ ಸಿಗಬೇಕು? ಹಾಗೆಯೇ ಕಲಿಕೆಯ ಮಾಧ್ಯಮವಾಗಬಹುದಾದ ಆ ಸ್ಥಳೀಯ ಭಾಷೆ ಯಾವುದು? ಆ ಪ್ರದೇಶದ ಬಹುಸಂಖ್ಯಾತರ ಭಾಷೆಯೇ ಅಥವಾ ಅಲ್ಲಿ ಬಳಕೆಯಲ್ಲಿರುವ ಭಾಷೆಗಳೆಲ್ಲವೂ ಕಲಿಕೆಯ ಮಾಧ್ಯಮದ ಅರ್ಹತೆಯನ್ನು ಹೊಂದಿರುವ ಭಾಷೆಗಳೆನಿಸಿಕೊಳ್ಳುತ್ತವೆಯೇ? ಇಂತಹ ಚರ್ಚೆ ಮುನ್ನೆಲೆಗೆ ಬಂದರೆ ಪ್ರತಿಯೊಂದು ಸ್ಥಳೀಯ ಭಾಷೆಯು ನಿಲ್ಲಬೇಕಾದ ಸ್ಥಾನ ಯಾವುದು ಮತ್ತು ಆ ಬಗೆಯ ಸ್ಥಾನಸೂಚಿಗೆ ಅನುಸರಿಸಲಾಗುವ ಮಾನದಂಡಗಳು ಯಾವುವು? ಇಂಗ್ಲಿಷ್ ಭಾಷೆಯು ಕಲಿಕೆಯ ಮಾಧ್ಯಮವಾಗಿರುವ, ಆಗುವ ಸಂದರ್ಭಗಳಲ್ಲಿ ದೇಶವ್ಯಾಪಿಯ ಭಾಷೆ ಮತ್ತು ಸ್ಥಳೀಯರ ಭಾಷೆಗಳ ಸ್ಥಾನಮಾನ ಯಾವುದು? ಆ ಎಲ್ಲ ಪ್ರಶ್ನೆಗಳು ಸತತವಾಗಿ ಚರ್ಚೆಗೆ ಒಳಪಡುತ್ತಿದ್ದರೂ ಉತ್ತರ ಮಾತ್ರ ಅಸ್ಪಷ್ಟ.
ಹಾಗಾಗಿಯೇ ಕನ್ನಡದ ಕಲಿಕೆ, ಬಳಕೆ, ಅಧ್ಯಯನ ಮತ್ತು ಬೋಧನೆಗಳಿಗೆ ಸಂಬಂಧಿಸಿದಂತೆ ವಿಪರೀತ ಗೋಜಲಿನ ಸ್ಥಿತಿಯಿದೆ. ಕರ್ನಾಟಕದ ಭಾಷಾ ವಿದ್ವಾಂಸರು, ಶಿಕ್ಷಣ ತಜ್ಞರು, ಬೋಧಕರು, ಆಸಕ್ತ ಸಾಮಾಜಿಕರು, ಶಿಕ್ಷಣ ಕ್ಷೇತ್ರದ ನೀತಿ ನಿರೂಪಕರ ಸ್ಥಾನದಲ್ಲಿರುವ ಅಧಿಕಾರ ವರ್ಗ ಮತ್ತು ರಾಜಕಾರಣಿಗಳು, ಕನ್ನಡದ ಅಸ್ಮಿತೆಯ ಉಳಿವಿಗಾಗಿ ಶ್ರಮಿಸುವವರು, ಭಾಷೆ ಮತ್ತು ಕಲಿಕೆಯ ಕ್ರಮಗಳನ್ನು ಸಾಂಸ್ಕೃತಿಕ ಆಧಿಪತ್ಯದ ಸ್ಥಾಪನೆ ಅಥವಾ ಮುಂದುವರಿಕೆಯ ಉದ್ದೇಶದ ಅಸ್ತ್ರವಾಗಿಸಿಕೊಂಡಿರುವವರು ಇಲ್ಲವೇ ವರ್ಗಶ್ರೇಣೀಕರಣವನ್ನು ಇನ್ನಷ್ಟು ಬಲವತ್ತರಗೊಳಿಸಲು ಯತ್ನಿಸುವವರು, ಕಲಿಕೆಯ ಮಾಧ್ಯಮ ಭಾಷೆಯ ಬಗೆಗೆ ಸಮುದಾಯದಲ್ಲಿ ಸೃಷ್ಟಿಯಾಗಿರುವ ಭಾವೋನ್ಮಾದವನ್ನು ಉದ್ಧೀಪಿಸಲೆತ್ನಿಸುತ್ತ ಲಾಭ ದೋಚಲೆತ್ನಿಸುವ ಶಿಕ್ಷಣ ವ್ಯಾಪಾರಿಗಳು, ಶಿಕ್ಷಣವನ್ನು ಒದಗಿಸುವುದು ಒಂದು ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆ ಎಂದು ಯೋಚಿಸುವವರು, ಇಂಗ್ಲಿಷ್ ಕಲಿಕೆಯು ಶತಮಾನಗಳ ಕಾಲದ ಅವಮಾನಗಳಿಂದ, ದೈನೇಸಿ ಬದುಕಿನಿಂದ ಬಿಡುಗಡೆ ಹೊಂದಲು ಸಿಗುತ್ತಿರುವ ಅಸಾಮಾನ್ಯ ಅವಕಾಶ ಎಂದು ನಂಬುತ್ತಿರುವ ದಲಿತ ಹಾಗೂ ಹಿಂದುಳಿದ ಸಮುದಾಯಗಳು, ಇಂಗ್ಲಿಷನ್ನು ತಮ್ಮ ಸೊಫಿಸ್ಟಿಕೇಟೆಡ್ ಬದುಕಿನ ಅವಿಭಾಜ್ಯ ಭಾಗ ಎಂದು ಭಾವಿಸಿರುವ ಪ್ರತಿಷ್ಟಿತ ವರ್ಗಗಳು _ ಇವೆಲ್ಲದರಿಂದ ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಗಳ ಕುರಿತ ಚರ್ಚೆ ಬಲು ಸಂಕೀರ್ಣವಾದ ಹಂತಕ್ಕೆ ತಲುಪಿರುವುದರಿಂದ ಸರ್ಕಾರಗಳೂ ದಿಟ್ಟ ಇಲ್ಲವೇ ಸರ್ವ ಸ್ವೀಕೃತವಾಗಬಹುದಾದ ನಿಲುವು ತಳೆಯಲು ಸಾಧ್ಯವಾಗದೇ ಸುದೀರ್ಘ ಕಾಲದಿಂದ ತಿಣುಕುತ್ತಿವೆ. ಕಲಿಯುವ ಭಾಷೆಯಾಗಿ ಮತ್ತು ಕಲಿಕೆಯ ಮಾಧ್ಯಮದ ಭಾಷೆಯಾಗಿ ಸ್ಥಳೀಯ ಭಾಷೆಯ ಸ್ಥಾನ ನಿರ್ಣಯ, ಅದರ ಕಲಿಕೆಯ ಪರಿಕರವಾದ ಪಠ್ಯದ ಸ್ವರೂಪ, ಕಲಿಕೆಯ ಪರಿಸರ, ಪಠ್ಯದ ಅಧ್ಯಯನ ಕ್ರಮ, ಬೋಧನಾ ವಿಧಾನ ಇವೆಲ್ಲವೂ ಬೇರೆ ಬೇರೆ ಸಂದರ್ಭಗಳ ತತ್ಕಾಲೀನ ತೀರ್ಮಾನಗಳಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಆದ್ದರಿಂದಲೇ ಕಲಿಯಬೇಕಾದ ಭಾಷೆ ಮತ್ತು ಕೈಯಲ್ಲಿ ಹಿಡಿಯಬೇಕಾದ ಪಠ್ಯಪುಸ್ತಕ ಯಾವುದೆನ್ನುವ ಗೊಂದಲ ದಶಕಗಳಿಂದ ಮುಂದುವರಿಯುತ್ತಲೇ ಇದೆ.
ಈ ಗೊಂದಲಗಳ ಪರಿಣಾಮವೆಂದರೆ, ಇವೊತ್ತು ಇಂಡಿಯಾದ ಅದರಲ್ಲೂ ಕರ್ನಾಟಕದ ಜನರ ಅಗಾಧ ಪ್ರಮಾಣದ ಸಂಪತ್ತು ಇಂಗ್ಲೀಷ್ ಮಾಧ್ಯಮದ ಪ್ರಾಥಮಿಕ ಶಿಕ್ಷಣಕ್ಕಾಗಿಯೇ ವಿನಿಯೋಗವಾಗುತ್ತಿದೆ. ಸಮಾಜದ ಕೆಳವರ್ಗಗಳ ಜನ ಸಮುದಾಯ ತಮ್ಮ ದುಡಿಮೆಯನ್ನೆಲ್ಲ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಸುರಿಯುತ್ತಿರುವುದರಿಂದ ಆ ಸಮುದಾಯಗಳು ಆರ್ಥಿಕವಾಗಿ ಅತ್ಯಂತ ದಯನೀಯ ಸ್ಥಿತಿಗೆ ತಲುಪುತ್ತಿವೆ. ಸಾಲದೆನ್ನುವಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ವಿಷಯ ಜ್ಞಾನ, ಭಾಷಿಕ ಕೌಶಲ್ಯಗಳ ತಿಳಿವಳಿಕೆ, ಅಗತ್ಯ ತರಬೇತಿ ಇವೇನೂ ಇಲ್ಲದ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿರುವುದರಿಂದ ಇಂಥ ಶಾಲೆಗಳಿಂದ ಕಲಿತು ಬರುವ ಎಳೆಯ ಮನಸ್ಸುಗಳು ಗೋಜಲುಗಳ ಮೂಟೆಗಳಾಗಿರುತ್ತವೆ. ಈ ಮಕ್ಕಳಿಗೆ ಮಾತೃಭಾಷೆಯನ್ನು ಶೈಕ್ಷಣಿಕ ಪರಿಸರದಲ್ಲಿ ಬಳಸುವ ಮತ್ತು ಬಳಕೆಯ ಸಾಧ್ಯತೆಗಳನ್ನು ದಕ್ಕಿಸಿಕೊಳ್ಳುವ ಅವಕಾಶಗಳು ತೀರಾ ಕಡಿಮೆ ಇರುತ್ತದೆ. ತಾಯಿನುಡಿಯನ್ನು ಕಳೆದುಕೊಂಡ ಈ ಮಕ್ಕಳಿಗೆ ಹೆತ್ತವರ ಅಪಾರ ತ್ಯಾಗ ಮತ್ತು ಶ್ರಮದ ಮೂಲಕ ಗಳಿಸಲೆತ್ನಿಸಿದ ಇಂಗ್ಲೀಷ್ ಜ್ಞಾನವೂ ಸರಿಯಾದ ಕ್ರಮದಲ್ಲಿ ಸಿಗದೆ ತಮ್ಮ ಸುತ್ತಲ ಬದುಕಿನ ಜೊತೆಗಿನ ಇವರ ಸಂಬಂಧ ವಿಕಲಗೊಂಡಿದೆ. ಹೀಗಾಗಿ ಸಾಂಸ್ಕೃತಿಕವಾಗಿ ದಿಕ್ಕುಗೆಟ್ಟ ಸ್ಥಿತಿ ಈ ಮಕ್ಕಳದು. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯದ, ಇಂಗ್ಲೀಷನ್ನು ಮಾತನಾಡದಿರುವ ಜನಾಂಗಗಳು ಮನುಷ್ಯರೇ ಅಲ್ಲ, ಸ್ಪರ್ಧೆ ಮತ್ತು ಯಶಸ್ಸಿನ ಕಲ್ಪನೆಯನ್ನು ಆಧರಿಸಿದ ಬಂಡವಾಳಶಾಹಿ ಸಮಾಜದ ಮೌಲ್ಯಗಳಿಗೆ ಅನುಸಾರವಾಗಿ ವರ್ತಿಸದಿದ್ದರೆ, ಬದುಕದಿದ್ದರೆ ಅದು ಬದುಕೇ ಅಲ್ಲ ಎಂಬಂತಹ ಧೋರಣೆಗಳು ಸಾಮೂಹಿಕ ಸನ್ನಿಯಂತೆ ಹಬ್ಬಿಕೊಂಡಿರುವ ಸ್ಥಿತಿಯಲ್ಲಿ ಇಂತಹ ಅತಾರ್ಕಿಕ ಶಿಕ್ಷಣ ವ್ಯವಸ್ಥೆಗಳು ರೂಪುಗೊಳ್ಳುವುದು ಒಂದು ಸಹಜ ವಿದ್ಯಮಾನ. ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಅನೇಕ ಸ್ಥಳೀಯ ಭಾಷೆಗಳ ಬಳಕೆಯನ್ನು ಹಿಂದುಳಿದಿರುವಿಕೆಯ ಮತ್ತು ದೈನ್ಯದ ಸಂಕೇತವೆಂದು ಭಾವಿಸುವ ಸ್ಥಿತಿಯಿದೆ. ಮುಖ್ಯವಾಗಿ ಖಾಸಗಿ ಶಿಕ್ಷಣ ಮತ್ತು ಔದ್ಯೋಗಿಕ ವಲಯಗಳಲ್ಲಿ ಕನ್ನಡದಂತಹ ಸ್ಥಳೀಯ ಭಾಷೆಯನ್ನು ನಿರ್ಬಂಧಿಸುವ ಇಲ್ಲವೇ ಮೂಲೆಗುಂಪಾಗಿಸುವ ಪ್ರಯತ್ನವನ್ನು ತುಂಬ ಆತಂಕದಿಂದ ಗಮನಿಸಲಾಗುತ್ತಿದೆ. ನೂರಾರು ವರ್ಷಗಳ ಕೆಲವೊಮ್ಮೆ ಸಾವಿರಾರು ವರ್ಷಗಳ ಚರಿತ್ರೆಯುದ್ದಕ್ಕೂ ಜನಸಮುದಾಯಗಳು ಶ್ರಮವಹಿಸಿ ರೂಪಿಸಿಕೊಂಡಿರುವ ಸಂವಹನದ ಪರಿಕರಗಳು ಮತ್ತು ಅವುಗಳ ಮೂಲಕ ರೂಪುಗೊಳ್ಳುವ ಜೀವನ ಕ್ರಮಗಳ ಕುರಿತ ಇಂತಹ ದೃಷ್ಟಿಕೋನ ತುಂಬಾ ಅಪಾಯಕಾರಿಯಾದುದು. ಆದ್ದರಿಂದ ಸ್ಥಳೀಯ ಭಾಷೆಗಳ ಸಬಲೀಕರಣಕ್ಕಾಗಿ ಪ್ರಭುತ್ವ ಮತ್ತು ಇನ್ನಿತರ ಸಾಂಸ್ಥಿಕ ಶಕ್ತಿಗಳು ಕಾರ‍್ಯೋನ್ಮುಖವಾಗಬೇಕಾದ ಅವಶ್ಯಕತೆ ಇದೆ ಎಂದು ಒಂದು ಜನ ವರ್ಗ ಭಾವಿಸುತ್ತಿದೆ.
ಈ ವಿದ್ಯಮಾನವನ್ನು ಕೆಲವು ಭಾಷೆಗಳ ಮೂಲೆಗುಂಪಾಗುವಿಕೆ ಎಂದು ಭಾವಿಸುವುದಕ್ಕಿಂತ ಆ ಪರಿಸರದಲ್ಲಿನ ಇತರ ಭಾಷೆಗಳಿಗೆ ಜನ ಸಮುದಾಯ ತನ್ನ ಅಗತ್ಯಗಳ ಅನುಸಾರ ನೀಡಿದ ಆದ್ಯತೆ ಎಂದು ಭಾವಿಸುವುದು ಉಚಿತ. ಹಾಗೂ ಇಂತಹ ಆದ್ಯತೆಗಳ ಅನುಕ್ರಮಣಿಕೆ, ಅವಗಣನೆ, ಪರಿಗಣನೆಯ ಆವರ್ತನ ಕ್ರಿಯೆಯೆನ್ನುವುದು ಬಹು ಭಾಷಿಕ ಪರಿಸರದ ಸಹಜ ನಡಾವಳಿಯಾಗಿರುವುದರಿಂದ ಯಾವುದೇ ಭಾಷೆ ಮತ್ತು ಭಾಷಿಕ ಸಮುದಾಯ ಇದನ್ನು ತನ್ನ ಅಳಿವು ಉಳಿವಿನ ಪ್ರಶ್ನೆಯನ್ನಾಗಿ ಭಾವಿಸಿ ಆತಂಕ ಪಡಬೇಕಾಗಿಲ್ಲ. ಆದರೆ ತನ್ನ ಸ್ಥಾನ ಪಲ್ಲಟಕ್ಕೆ ಕಾರಣಗಳನ್ನು ಶೋಧಿಸುವುದರಲ್ಲಿ ಅದರ ಸ್ಥಾನದ ಮರು ಗಳಿಕೆಯ ಸಾಧ್ಯತೆಗಳಿರುತ್ತವೆ ಎನ್ನುವುದು ಭಾಷಾ ತಜ್ಞರ ಒಂದು ವಲಯದ ಅಭಿಮತ. ಆರ್ಥಿಕ ಮೂಲದ ಶಕ್ತಿಗಳು ಮತ್ತು ಅದು ರೂಪಿಸುವ ಶೋಷಣೆಯ ವ್ಯವಸ್ಥೆ ಮಾತ್ರವಲ್ಲ, ಸಮಾಜವೊಂದು ಅವಲಂಬಿಸಿರುವ ಶಿಕ್ಷಣ ಕ್ರಮವೂ ಆ ಸಮಾಜದ ಜನರ ವಿಶಿಷ್ಟ ಭಾಷಿಕ ಮತ್ತು ಸಾಂಸ್ಕೃತಿಕ ಚಹರೆಗಳನ್ನು ನಾಶಮಾಡುತ್ತದೆ ಎನ್ನುವ ಅಭಿಪ್ರಾಯಗಳು ಸಾರ್ವತ್ರಿಕವಾಗಿ ವ್ಯಕ್ತಗೊಳ್ಳುತ್ತಿರುವುದು ಈಗಿನ ವಾಸ್ತವ. ಭಾಷೆಯೊಂದರ ಅಳಿವು ಉಳಿವಿನ ಕಾಳಜಿಯ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಮೂರು ರೀತಿಯ ಧೋರಣೆಗಳನ್ನು ಕಾಣಲು ಸಾಧ್ಯವಿದೆ. ಶಿಕ್ಷಣದಲ್ಲಿ ಮಾರ್ಪಾಡುಗಳು ಆಗುವ ಮುಂಚೆ ಆ ಸಮುದಾಯದ ಯೋಚನಾಕ್ರಮದಲ್ಲಿ, ಪ್ರಭುತ್ವಗಳ ನೀತಿಗಳಲ್ಲಿ ಬದಲಾವಣೆ ಆಗಬೇಕು. ಶಿಕ್ಷಣ ಕ್ರಮವು ಸ್ಥಳೀಯ ಭಾಷೆಯ ಉಳಿವಿನ ವಿಚಾರದಲ್ಲಿ ವಿಫಲವಾದರೆ ಸಮಾಜ ಮತ್ತು ಶಾಲಾ ವ್ಯವಸ್ಥೆಗಳೆರಡೂ ಆ ಭಾಷೆಯನ್ನು ಅದರ ಎಲ್ಲಾ ಸಾಧ್ಯತೆಗಳ ಸಹಿತ ಕಲಿಯುವ ಹಾಗೂ ಕಲಿಸುವ ಜವಾಬ್ದಾರಿ ತೋರಬೇಕು. ಜೊತೆಗೆ ಪ್ರಭುತ್ವಗಳೂ ತನ್ನ ಕಾನೂನುಗಳ ಮೂಲಕ ಇಂತಹ ಪ್ರಯತ್ನಗಳನ್ನು ಬೆಂಬಲಿಸಬೇಕು ಎಂದು ಪ್ರತಿಪಾದಿಸಲಾಗುತ್ತಿದೆ. ಸಮಾಜವನ್ನು ಸಂರಚಿಸುವ ಸ್ವಯಂತಂತ್ರ ಶಕ್ತಿಗಳಲ್ಲಿ ಶಿಕ್ಷಣ ವ್ಯವಸ್ಥೆಯೂ ಒಂದು ಎನ್ನುವ ಅಭಿಪ್ರಾಯ ಮೊದಲನೆಯದು. ಸಮಾಜವು ಎಲ್ಲ ಪರಿವರ್ತನೆಗಳ ಮೂಲ, ಶಿಕ್ಷಣ ಕ್ರಮದಲ್ಲಿನ ಬದಲಾವಣೆಗಳು ಸಮಾಜದ ಬದಲಾವಣೆಗಳನ್ನು ಆಧರಿಸಿರುತ್ತದೆ ಎನ್ನುವುದು ಮತ್ತೊಂದು ರೀತಿಯ ಅಭಿಪ್ರಾಯ. ಪ್ರಭುತ್ವಗಳು ಭಾಷೆಯೊಂದರ ಉಳಿವಿನ ವಿಚಾರದಲ್ಲಿ ಹೊಣೆಗಾರಿಕೆಯಿಂದ ದೂರ ಉಳಿಯುವುದು ಅಸಾಧ್ಯ ಹಾಗೂ ಅದು ಸರಿಯಾದ ಕ್ರಮವೂ ಅಲ್ಲ ಎನ್ನುವುದು ಮೂರನೇ ಅಭಿಪ್ರಾಯ. ಇವೆಲ್ಲವೂ ಕೆಳಸ್ತರದ ಭಾಷೆಗಳ ಪರವಾದ ಚಿಂತನೆಗಳೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಈ ಬಗೆಯ ಚಿಂತನೆಗಳೂ ಒಂದು ಹಂತದ ಭಾಷೆಗಳವರೆಗೆ ಬಂದು ಸುಮ್ಮನಾಗಿಬಿಡುತ್ತವೆ. ಏಕೆಂದರೆ, ಈ ಹಂತದಲ್ಲಿ ಸ್ಥಳೀಯ ಭಾಷೆಗಳ ಸಂಖ್ಯಾಪ್ರಮಾಣ ಹೆಚ್ಚಿರುತ್ತದೆ. ಮೊದಲೇ ಪ್ರಸ್ತಾಪಿಸಿದಂತೆ ಇವುಗಳ ನಡುವಿನ ಸಂಬಂಧ ಸಂಕೀರ್ಣ ಸ್ವರೂಪದ್ದಾಗಿರುತ್ತದೆ. ಅದರೊಂದಿಗೆ ಇಲ್ಲಿ ಸ್ಥಳೀಯ ಎನ್ನುವ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎನ್ನುವ, ಸ್ಥಳೀಯವಾಗಿ ಯಾವುದು ಪ್ರಧಾನ ಯಾವುದು ಪ್ರಧಾನವಲ್ಲದ್ದು ಎನ್ನುವ ಹಲವು ತರದ ಸಮಸ್ಯೆಗಳಿವೆ. ಭಾಷಿಕ ಪರಿಸರದಲ್ಲಿರುವ ಹಲವು ಸ್ಥಳೀಯ ಭಾಷೆಗಳ ಪೈಕಿ ಹಳೆಯದಾದ, ಹೆಚ್ಚು ಸಂಖ್ಯಾ ಬಾಹುಳ್ಯವಿರುವ, ಸಾಂಸ್ಕೃತಿಕ ನೆಲೆಯಲ್ಲಿ ಸ್ಥಳೀಯವಾಗಿ ಆಳ ಬೇರು ಹೊಂದಿದ, ಪ್ರಭುತ್ವದ ಸಹಾನುಭೂತಿ ಪಡೆದ ಭಾಷೆಯೇ ಸಹಜವಾಗಿ ಪ್ರಧಾನ ಸ್ಥಳೀಯ ಭಾಷೆಯ ಸ್ಥಾನ ಗೌರವ ಗಳಿಸುವುದರಿಂದ ಮತ್ತು ಅದರ ಉಳಿವಿಗೆ ಪೂರಕವಾದ ಭಾಷಾ ನೀತಿಗಳ ಕಡೆಗೇ ಪ್ರಭುತ್ವಗಳ ಒಲವೂ ಹರಿಯುವುದರಿಂದ ನೂರಾರು ವರ್ಷಗಳಿಂದ ಅಲ್ಲಿಯೇ ಇದ್ದು ಆ ನಾಡಿನ ಎಲ್ಲಾ ಆಗು ಹೋಗುಗಳಲ್ಲಿ ಭಾಗಿಯಾದ ಉಳಿದ ಭಾಷೆಗಳು ನಗಣ್ಯಗೊಳ್ಳುವುದರಿಂದ ಆ ಭಾಷೆಗಳನ್ನು ಆಡುವ ಸಮುದಾಯಗಳಲ್ಲಿ ಅಸಹನೆ ಬೆಳೆಯುತ್ತದೆ. ಹಾಗಾಗಿ ಇಂತಹ ಸ್ಥಿತಿಯಲ್ಲಿ ಭಾಷೆಗಳ ನಡುವೆ ತಿಕ್ಕಾಟವೂ ಇರುತ್ತದೆ. ಇದನ್ನು ಕರ್ನಾಟಕದಲ್ಲಿ ಕನ್ನಡ ಮತ್ತು ಇತರ ಭಾಷೆಗಳ ನಡುವಿನ ಸಂಬಂಧದ ನೆಲೆಯಲ್ಲಿಯೂ ಭಾವಿಸಲು ಸಾಧ್ಯವಿದೆ. ಇಂತಹ ತಿಕ್ಕಾಟಕ್ಕೆ ಇರಬಹುದಾದ ಕೆಲವು ಕಾರಣಗಳೆಂದರೆ,
ಸ್ಥಳೀಯ ಪ್ರಧಾನ ಭಾಷೆಯ ಭಾಷಿಕರಾದ ಕನ್ನಡಿಗರಿಗೆ ಇತರ ಭಾಷಿಕ ಮತ್ತು ಭಾಷೆಗಳಿಂದ ತಮ್ಮ ಅಸ್ತಿತ್ವಕ್ಕೆ ಅಪಾಯ ಸೃಷ್ಟಿಯಾಗುತ್ತಿದೆ ಎನ್ನುವ ಕಳವಳ.
ಕನ್ನಡೇತರರಿಗೆ ಇರುವ ಪರಸ್ಥಳ ಪ್ರಜ್ಞೆ ಈ ಕಾರಣದಿಂದ ತಮ್ಮ ಮೂಲ ಭಾಷೆ ಮತ್ತು ಸಾಂಸ್ಕೃತಿಕ ಚಹರೆಗಳಿಗೆ ಅಂಟಿಕೊಳ್ಳುವ ತವಕ. ಅದೇ ಸಂದರ್ಭದಲ್ಲಿ ಕನ್ನಡಿಗರ ಅಳಿವು ಉಳಿವಿನ ಆತಂಕಗಳನ್ನು ತಮ್ಮ ವಿರುದ್ದದ ಸಂಘರ್ಷದ ಪ್ರಯತ್ನ ಎಂದು ಭಾವಿಸುವುದು.
ಆ ಇತರ ಭಾಷೆಗಳಲ್ಲಿ ಕೆಲವು ಭಾಷೆಗಳ ಮೂಲ ನೆಲೆಯ ರಾಜ್ಯಗಳ ಜೊತೆಗೆ ಕರ್ನಾಟಕ ಹೊಂದಿರುವ ನೆಲ ಜಲ ವ್ಯಾಜ್ಯಗಳೂ ಸಹ ಬಹು ಭಾಷಿಕ ಪರಿಸರದ ಸಾಮರಸ್ಯದ ಸಾಧ್ಯತೆಗಳು ಕ್ಷೀಣಿಸುವಂತೆ ಮಾಡುತ್ತಿವೆ. ಆದ್ದರಿಂದಲೇ ಕರ್ನಾಟಕದಲ್ಲಿ ಕನ್ನಡದ ಪರವಾಗಿ ಪ್ರಕಟಿಸಲಾಗುವ ಯಾವುದೇ ನೀತಿಗಳ ಕುರಿತಂತೆ ಇತರ ಭಾಷಿಕ ಸಮುದಾಯಗಳ ಕಡೆಯಿಂದ ಅಂತಹ ಉತ್ಸಾಹದ ಪ್ರತಿಕ್ರಿಯೆಯೇನೂ ವ್ಯಕ್ತವಾಗುವುದಿಲ್ಲ.
ಬಹು ಭಾಷಿಕ ವ್ಯವಸ್ಥೆಯಲ್ಲಿನ ಈ ಬಗೆಯ ಅಸಮಾನ ಆದ್ಯತೆಗಳು ಮತ್ತು ಪರಸ್ಪರ ಅಸಹನೆಗಳು ಇಂಗ್ಲೀಷಿನಂತಹ ಭಾಷೆಯ ಪ್ರಾಬಲ್ಯಕ್ಕೆ ಸಹಜವಾಗಿಯೇ ದಾರಿ ಮಾಡಿಕೊಡುತ್ತವೆ. ಕ್ರಮ ಕ್ರಮೇಣ ಸ್ಥಳೀಯ ಭಾಷೆಗಳು ಬದುಕಿನ ಎಲ್ಲ ಸಂದರ್ಭಗಳಲ್ಲಿಯೂ ಅಪ್ರಸ್ತುತಗೊಳ್ಳುತ್ತವೆ. ಬಹು ಭಾಷಿಕತೆಯ ಬಹುರೂಪಿಯಾದ ಬದುಕಿನ ವ್ಯವಸ್ಥೆ ಇಲ್ಲವಾಗಿ ಏಕಭಾಷಿಕತೆಯ ಏಕರೂಪಿ ಬದುಕು ನೆಲೆಯೂರುವ ಅವಕಾಶಗಳು ಹೆಚ್ಚಾಗುತ್ತವೆ ಎನ್ನುವ ಆತಂಕಗಳೂ ಭಾಷಾ ತಜ್ಞರ ಇನ್ನೊಂದು ವಲಯದಲ್ಲಿ ವ್ಯಕ್ತವಾಗುತ್ತಿವೆ.


ಆರ್. ಅಮರೇಂದ್ರಶೆಟ್ಟಿ ಹೊಲ್ಲಂಬಳ್ಳಿ,
ಸಹಾಯಕ ಕನ್ನಡ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹೆಬ್ರಿ -೫೭೬೧೧೨.
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.

Tuesday, June 14, 2011

ಬೆಂಗಳೂರು ಕೆಂಪೇಗೌಡ

ಸಾಹಿತಿ, ಸಂಶೋಧಕ ಡಾ.ಡಿ.ಲಿಂಗಯ್ಯ ಅವರು ನಾಡಪ್ರಭು ಕೆಂಪೇಗೌಡರ ಕುರಿತು ಬರೆದಿರುವ ಲೇಖನ ಮಾಲಿಕೆ ಆರಂಭಿಸುತ್ತಿದ್ದೇವೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಮತ್ತು ಅವರ ವಂಶಸ್ಥರ ಇತಿಹಾಸ ರೋಚಕ. ನಾಡಪ್ರಭುಗಳ ಜನಪರ ಕಾಳಜಿ, ತ್ಯಾಗ ಮನೋಭಾವ ಸರ್ವ ಕಾಲಕ್ಕೂ ಆದರ್ಶವಾಗಿ ಉಳಿಯುವಂಥದ್ದು. ಈ ಲೇಖನ ಮಾಲಿಕೆ ಕೆಂಪೇಗೌಡರೂ ಸೇರಿದಂತೆ ಅವರ ವಂಶಸ್ಥರ ಬದುಕನ್ನು ಕಟ್ಟಿ ಕೊಡುವುದರಲ್ಲಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ನಮ್ಮದು.
-ಸಂ



ಡಾ.ಡಿ.ಲಿಂಗಯ್ಯ
ಕರ್ನಾಟಕದ ಸಂದರ್ಭದಲ್ಲಿ ಯಲಹಂಕ ನಾಡು ಪ್ರದೇಶದ ಆಡಳಿತವೆಂದರೆ ಗೌಡ ಪ್ರಭುಗಳ ಆಡಳಿತವೆಂದೇ ಅರ್ಥ. ಗೌಡ ಪ್ರಭುಗಳು ಎಂದರೆ ಒಕ್ಕಲಿಗಗೌಡ ಪ್ರಭುಗಳು ಎಂಬುದು ವಾಸ್ತವ ಸತ್ಯ. ಯಲಹಂಕ ನಾಡು ಸಣ್ಣಪುಟ್ಟ ಪಾಳೇಯಪಟ್ಟಲ್ಲ, ಮಹಾನಾಡು, ವಿಶಾಲ ರಾಜ್ಯ. ಯಲಹಂಕ ನಾಡನ್ನು ಐದುನೂರು ವರ್ಷಗಳಿಗೂ ಮೀರಿದ ದೀರ್ಘ ಕಾಲ ಆಳಿದ ಗೌಡ ದೊರೆಗಳು ಚಿಕ್ಕಪುಟ್ಟ ಪಾಳೇಗಾರರಲ್ಲ; ನಾಡಪ್ರಭುಗಳು, ಸಾಮಂತರಾಜರು. ಅವರ ಬದುಕು ಬವಣೆ ಸಾಧನೆ ಸಂವೇದನೆ ರೋಚಕವಾಗಿದೆ. ಸಾಮ್ರಾಜ್ಯ ಚಕ್ರವರ್ತಿಗಳ ಉಜ್ವಲ ವ್ಯಕ್ತಿತ್ವದಂತೆಯೇ ನಾಡಪ್ರಭುಗಳ ಉದಾತ್ತ ವ್ಯಕ್ತಿತ್ವವೂ ಇತಿಹಾಸ ಪುಟಗಳಲ್ಲಿ ರಾರಾಜಿಸಿದೆ. ಯಲಹಂಕ ನಾಡಪ್ರಭುಗಳನ್ನು ಕುರಿತು ಬರೆದಿರುವವರೆಲ್ಲರೂ ಪ್ರಶಂಸೆಯ ನುಡಿಗಳನ್ನಾಡಿರುವುದು ಎದ್ದುಕಾಣುತ್ತದೆ.
ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲ (೧೮.೦೪.೧೩೩೬-೧೬೬೪) ಸುವರ್ಣ ಅಧ್ಯಾಯ. ಆ ಅರಸರು ಸಾಮ್ರಾಜ್ಯದ ಸಾಮ್ರಾಟರು ಎಂಬ ಅಭಿದಾನಕ್ಕೆ ಪಾತ್ರರಾದವರು. ಶ್ರೀಕೃಷ್ಣ ದೇವರಾಯ ವಿಜಯನಗರ ಅರಸರ ಮೇರುಪುರುಷ. ಅವನ ಆಡಳಿತ ಹಲವು ಅನನ್ಯ ಸಾಧನೆಗಳ ಕೋಶ. ವಿಜಯನಗರ ಸಾಮ್ರಾಜ್ಯದ ಉಚ್ಛ್ರಾಯದ ಕಾಲವೆಂದರೆ ಶ್ರೀ ಕೃಷ್ಣದೇವರಾಯನ ಆಡಳಿತ ಕಾಲವೆಂದೇ ಹೇಳಬೇಕು. ಅವನ ಆಡಳಿತವನ್ನು ಇತಿಹಾಸಕಾರರೆಲ್ಲ ಮುಕ್ತಕಂಠದಿಂದ ಪ್ರಶಂಸಿದ್ದಾರೆ. ಅವನ ಜನೋಪಕಾರಿ ಕಾರ್ಯಗಳು ಇಂದಿಗೂ ಮನೆಮಾತಾಗಿವೆ. ಶ್ರೀ ಕೃಷ್ಣದೇವರಾಯನ ಆಡಳಿತದಲ್ಲಿ ದಕ್ಷತೆ, ಸಮೃದ್ಧಿ ತುಂಬಿತ್ತು. ಜನಸಾಮಾನ್ಯರು ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿದ್ದರು. ವಿಜಯನಗರದ ಅರಸರ ಆದರ್ಶ, ಆಡಳಿತ ವಿಧಾನ, ಜನೋಪಕಾರಿ ಕೆಲಸ ಕಾರ್ಯಗಳ ಹಿನ್ನೆಲೆಯಲ್ಲಿ ಅವರ ಸಾಮಂತರು, ಮಾಂಡಲಿಕರು, ನಾಡಪ್ರಭುಗಳು ಬೇರೆ ಬೇರೆ ಕಡೆಗಳಲ್ಲಿ ರಾಜ್ಯಭಾರ ಮಾಡುತ್ತಿದ್ದರು. ವಿಜಯನಗರ ಸಾಮ್ರಾಜ್ಯಕ್ಕೆ ನಿಷ್ಠರಾಗಿದ್ದರು. ದಕ್ಷರಾದ ಅಧೀನ ಮಾಂಡಲಿಕರು, ನಾಡಪ್ರಭುಗಳಿಂದ ವಿಜಯನಗರ ಸಾಮ್ರಾಜ್ಯ ಭೂಪರು ನಿರಾಳವಾಗಿ ರಾಜ್ಯಾಡಳಿತ ನಡೆಸುತ್ತಿದ್ದರು.
ವಿಜಯನಗರ ಅರಸರ ನಾಡಪ್ರಭುಗಳಲ್ಲಿ ಯಲಹಂಕ ನಾಡಪ್ರಭುಗಳದು ಗಮನಾರ್ಹ ಉಲ್ಲೇಖ. ಅವರು ವಿಜಯನಗರದ ಅರಸರಷ್ಟೇ ಪ್ರಸಿದ್ಧರಾಗಿದ್ದರು; ಜನಮಾನಸದಲ್ಲಿ ನೆಲೆಸಿದ್ದರು. ನಾಡಪ್ರಭುಗಳಾಗಿದ್ದರೂ ಸಾಮಂತರಾಗಿದ್ದರೂ ರಾಜರ ಸ್ಥಾನ ಮಾನ ಗಳಿಸಿದ್ದರು. ಕರ್ನಾಟಕದ ಹಲವು ಸಾಮಂತರ ಮನೆತನಗಳಲ್ಲಿ ಯಲಹಂಕನಾಡು ನಾಡಪ್ರಭುಗಳ ಇತಿಹಾಸ ರೋಚಕವಾದದ್ದು. ಅವರು ಕೇವಲ ಅಧೀನ ಆಡಳಿತಗಾರರಲ್ಲ ನಾಡಪ್ರಭುಗಳು, ಸಾಮಂತರಾಜರು ಎಂದೇ ಖ್ಯಾತರಾಗಿದ್ದರು.
ಕರ್ನಾಟಕವನ್ನು ಆಳಿದ ಗಂಗರು, ಹೊಯ್ಸಳರ ಕಾಲದಲ್ಲೇ ಯಲಹಂಕನಾಡು ಅಸ್ತಿತ್ವದಲ್ಲಿದ್ದಂತೆ ಕಾಣುತ್ತದೆ. ಆ ಕಾಲದಲ್ಲಿ ಯಲಹಂಕ ನಾಡನ್ನು ಆಯಾ ರಾಜರೇ ಆಳುತ್ತಿದ್ದರೋ ಅಥವಾ ಅವರ ಅಧೀನದ ಸಾಮಂತರು ಆಳುತ್ತಿದ್ದರೋ ಸ್ಪಷ್ಟವಿಲ್ಲ. ಬಹುಶಃ ಆಯಾ ರಾಜರೇ ಆಳುತ್ತಿದ್ದಿರಬೇಕು. ಹೊಯ್ಸಳರ ಕಾಲದಲ್ಲಿ ’ಮಹಾಯಲಹಂಕನಾಡು’ ಪ್ರಸಿದ್ಧವಾಗಿತ್ತು. ಅಷ್ಟು ಹೊತ್ತಿಗೆ ನಾಡಪ್ರಭುಗಳು ರಾಜರ ಪರವಾಗಿ ಆಡಳಿತ ನಡೆಸಿರುವಂತೆ ಕಾಣುತ್ತದೆ. ಕರ್ನಾಟಕದ ದಕ್ಷಿಣ ಭಾಗದ ಯಲಹಂಕನಾಡು ಪ್ರದೇಶವನ್ನು ಆಳಿದ ನಾಡಪ್ರಭುಗಳೆಲ್ಲ ಒಕ್ಕಲಿಗ ಜನಾಂಗದವರೆಂಬುದು ನಿಜ. ಆದರೆ ಅವರೆಲ್ಲ ಒಂದೇ ಮನೆತನಕ್ಕೆ ಸೇರಿದವರಲ್ಲ. ಹೊಯ್ಸಳರ ಕಾಲದಲ್ಲಿ ಒಕ್ಕಲಿಗರ ಒಂದು ಮನೆತನದವರು ಆಳಿದ್ದರೆ, ಅನಂತರ ಇನ್ನೊಂದು ಮನೆತನದವರು ಆಳಿರುವಂತೆ ಕಾಣುತ್ತದೆ. ದೇಚೀದೇವ, ಯಚಣಗೌಡ, ಬಯಿರೇಗೌಡರನ್ನು ಹೊಯ್ಸಳರ ಕಾಲದ ಯಲಹಂಕನಾಡಿನ ಪ್ರಧಾನ ನಾಡಪ್ರಭುಗಳೆನ್ನಬಹುದು. ಅವರ ಹಿಂದೆಯೂ ನಾಡಪ್ರಭುಗಳು ಆಳಿರಬಹುದು. ಆದರೆ ಅವರ ವಿವರ ಲಭ್ಯವಿಲ್ಲ.
ವಿಜಯನಗರದ ಅರಸರ ಕಾಲದಲ್ಲಿ ಯಲಹಂಕ ನಾಡಪ್ರಭುಗಳ ಕೀರ್ತಿ ಅಧಿಕವಾಯಿತು. ರಣಭೈರೇಗೌಡನಿಂದ ವಿಜಯನಗರ ಪ್ರಭುಗಳ ಕಾಲದ ನಾಡಪ್ರಭುಗಳ ವಂಶ ಪ್ರಾರಂಭವಾಗಿದೆ. ರಣಭೈರೇಗೌಡ, ಜಯಗೌಡ, ಗಿಡ್ಡಪ್ಪಗೌಡ, ನಾಚಪ್ಪಗೌಡ, ಕೆಂಪನಾಚಪ್ಪಗೌಡ ಮೊದಲಾದವರ ಮೂಲಕ ಈ ವಂಶ ಆಡಳಿತ ನಡೆಸಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪುತ್ತೂರು, ಆವತಿ, ಯಲಹಂಕ, ಬೆಂಗಳೂರು ಪ್ರದೇಶಗಳನ್ನು ಕೇಂದ್ರವಾಗಿಟ್ಟುಕೊಂಡು ಈ ನಾಡಪ್ರಭುಗಳು ಆಡಳಿತ ನಡೆಸಿದರು. ಯಲಹಂಕ ನಾಡಪ್ರಭುಗಳು ಸನಾತನ ಅಥವಾ ಹಿಂದೂ ಧರ್ಮೀಯರು, ಒಕ್ಕಲಿಗ ಜಾತಿಯವರು, ಭೈರವನ ಆರಾಧಕರು, ವಿಜಯನಗರ ಸಾಮ್ರಾಜ್ಯದ ದಕ್ಷಿಣ ಭದ್ರಕೋಟೆಯಂತೆ ರಕ್ಷಕರಾಗಿದ್ದವರು. ಅವರು ಧರ್ಮಶ್ರದ್ಧೆ, ದೈವಭಕ್ತಿಗೆ, ಜನೋಪಕಾರಕ್ಕೆ ಹೆಸರಾಗಿದ್ದರು. ಕೆರೆಕುಂಟೆ, ಗುಡಿಗೋಪುರ, ಕೋಟೆ ಪೇಟೆ, ಹಜಾರ ಚಾವಡಿ ನಿರ್ಮಾಣದಲ್ಲಿ ಆಸಕ್ತರಾಗಿದ್ದರು. ರಣಭೈರೇಗೌಡ ಆವತಿ ನಾಡಪ್ರಭು ಎಂದೂ ಅವನ ಮಗ ಜಯಗೌಡ ಯಲಹಂಕ ಭೂಪಾಲ ಎಂದೂ ಕೆಂಪೆನಂಜೇಗೌಡ ವಿಜಯನಗರ ಸಾಮ್ರಾಟ ಶ್ರೀ ಕೃಷ್ಣದೇವರಾಯನ ಅಚ್ಚುಮೆಚ್ಚಿನ ನಾಡಪ್ರಭುವೆಂದೂ ಹೆಸರಾಗಿದ್ದರು. ಆ ವಂಶದ ಅನಂತರದವರೂ ಇತಿಹಾಸ ಪುರುಷರಾದರು.
ಇತಿಹಾಸ ಪುರುಷನ ಜನನ, ಕಾಲ, ಜನ್ಮಸ್ಥಳ
ರಣಭೈರೇಗೌಡನ ಮರಿಮಗ ಕೆಂಪನಾಚಪ್ಪಗೌಡ ಅಥವಾ ಕೆಂಪನಂಜೇಗೌಡ. ಅವನ ಹೆಂಡತಿ ಲಿಂಗಮ್ಮ (ಲಿಂಗಾಂಬೆ). ಆಕೆ ಹಳೆಯ ಬೆಂಗಳೂರು (ಕೊಡಿಗೆಹಳ್ಳಿ ಸಮೀಪದ ಊರು) ಗ್ರಾಮದವಳು. ಆ ನಾಡಪ್ರಭು ದಂಪತಿಗಳಿಗೆ ಮೂವರು ಗಂಡುಮಕ್ಕಳು: ಕೆಂಪೇಗೌಡ, ಬಸವೇಗೌಡ ಮತ್ತು ಕೆಂಪಸೋಮೇಗೌಡ. ಅವರ ಮೊದಲನೆಯ ಮಗ ಕೆಂಪೇಗೌಡ ಹುಟ್ಟಿದಾಗ ಶುಭಶಕುನಗಳಾದವು. ಆತನಲ್ಲಿ ರಾಜಲಕ್ಷಣಗಳಿವೆಯೆಂದೂ ಯಲಹಂಕ ನಾಡಪ್ರಭುಗಳಲ್ಲೇ ಅಧಿಕ ಕೀರ್ತಿಶಾಲಿಯಾಗುವನೆಂದೂ ಅಪೂರ್ವ ಸಾಧನೆಗಳಿಂದ ಇತಿಹಾಸ ಪುರುಷನಾಗುವನೆಂದೂ ಮಗುವಿನ ಜನ್ಮಕುಂಡಲಿಯನ್ನು ಪರಿಶೀಲಿಸಿದ ಪುರೋಹಿತರೂ ಜ್ಯೋತಿಷಿಗಳೂ ಕಣಿ ಹೇಳಿದರು. ಕೆಂಪನಂಜೇಗೌಡ ದಂಪತಿಗಳಿಗೆ ಅತ್ಯಾನಂದವಾಯಿತು. ಮಗುವನ್ನು ಮುಚ್ಚಟೆಯಿಂದ ಸಾಕಿಸಲಹಿದರು. ಆ ಮಗುವೇ ಮುಂದೆ ಬೆಂಗಳೂರು ಕೆಂಪೇಗೌಡ ಎಂದು ಸುಪ್ರಸಿದ್ಧನಾದ ಸಾಮಂತರಾಜ.
ಹಿರಿಯ ಕೆಂಪೇಗೌಡ ಅಥವಾ ಒಂದನೇ ಕೆಂಪೇಗೌಡ ಸುಮಾರು ೧೫೧೦ರಲ್ಲಿ ರಾಜಧಾನಿ ಯಲಹಂಕದಲ್ಲಿ ಜನಿಸಿದನು. ಶುಭಶಕುನದ ಮಗುವಿನ ಜನನ ಯಲಹಂಕ ನಾಡಿಗೇ ಸಂತೋಷವನ್ನು ಉಂಟುಮಾಡಿತು. ಮಗುವಿನ ಆಯಸ್ಸು ಯಶಸ್ಸು ವೃದ್ಧಿಸುವ ಸಲುವಾಗಿ ಮಹಾಜನತೆಯ ಹಾಗೂ ದೇವಾನುದೇವತೆಗಳ ಆಶೀರ್ವಾದ ಹಾಗೂ ಅನುಗ್ರಹ ಪಡೆಯಲು ದಾನ ಧರ್ಮಗಳನ್ನೂ ಪೂಜೆ ಪುರಸ್ಕಾರಗಳನ್ನೂ ಮಾಡಲಾಯಿತು. ಕುಲದೇವತೆ ಕೆಂಪಮ್ಮ ಮತ್ತು ಭೈರವನ ಅನುಗ್ರಹದಿಂದ ಜನಿಸಿದ ಮಗು, ಶಿವ ಶಿವೆಯರ ಕಳೆ ಬೆಳಗುವಂತೆ, ತಾಯಿ ತಂದೆಯರ ಅಕ್ಷನಿಧಿಯಂತೆ ಬೆಳೆಯಿತು. ತಾಯಿ ತಂದೆಯರು, ಬಂಧುಬಳಗದವರು ಮಗುವನ್ನು ಕೆಂಪ, ಕೆಂಪಯ್ಯ, ಕೆಂಪಣ್ಣ ಎಂದು ಮುದ್ದಿನಿಂದ ಕರೆದು ಮುದಗೊಂಡರು. ಪ್ರಜೆಗಳು ಚಿಕ್ಕರಾಯ,. ಕೆಂಪರಾಯ ಎಂದು ಕರೆದು ಗೌರವಿಸಿದರು. ತಾಯಿ ತಂದೆಯರು ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಿಸಿದರು; ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡರು. ಮಗುವಿನ ಮನಸ್ಸಿನಲ್ಲಿ ದೈವಭಕ್ತಿಯನ್ನು ನಾಟಿಮಾಡಿದರು; ತಮ್ಮ ವಂಶಸ್ಥರ ಪುಣ್ಯಕಾರ್ಯಗಳನ್ನು ಬಿತ್ತಿದರು; ರಾಮಾಯಣ ಮಹಾಭಾರತಾದಿ ಕಥೆಗಳನ್ನು ನೆಲೆಗೊಳಿಸಿದರು. ಕುಲವೆತ್ತಿ ಕೊಂಡಾಡುವ ಹೆಳವರು ಹೇಳುವ ಪೂರ್ವಜರ ಸಾಹಸ ಕಥೆಗಳನ್ನೂ ಮಹಾಸಾಧನೆಗಳನ್ನೂ ಬಾಲಕ ಕೆಂಪೇಗೌಡ ಕುತೂಹಲದಿಂದ ಕೇಳಿದನು. ಅರಮನೆಯಲ್ಲಿ ಓರಗೆಯ ಹುಡುಗರೊಡನೆ ಆಟಪಾಟ ವಿನೋದಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದನು. ಬೆಂಗಾವಲಿನವರೊಡನೆ ಅರಮನೆಯ ಹೊರಗೂ ಹೋಗಿ ಬರುತ್ತಿದ್ದನು.
ಹಿರಿಯ ಕೆಂಪೇಗೌಡ ಹುಟ್ಟಿದ ಕಾಲದ ಬಗೆಗೆ ಸ್ಪಷ್ಟ ಅಭಿಮತವಿಲ್ಲ. ಸಾಮಾನ್ಯವಾಗಿ ಇತಿಹಾಸಕಾರರು ಚಾರಿತ್ರಿಕ ವ್ಯಕ್ತಿಯ ಆಡಳಿತಾವಧಿಯನ್ನು ಗಮನಿಸುತ್ತಾರೆಯೇ ಹೊರತು ಅವನ ಜೀವಿತ ಕಾಲವನ್ನು ಪರಿಗಣಿಸುವುದಿಲ್ಲ. ಕೆಂಪೇಗೌಡನ ವಿಷಯದಲ್ಲೂ ಹಾಗೇ ಆಗಿದೆ. ಆಡಳಿತಾವಧಿಯಲ್ಲೂ ಏಕಾಭಿಪ್ರಾಯವಿಲ್ಲ. ಅವನ ಆಡಳಿತ ಪ್ರಾರಂಭದ ಹಾಗೂ ಜೀವಿತಾವಧಿಯ ಕೊನೆಯ ಶಾಸನಗಳನ್ನು ಗಂಭೀರವಾಗಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ಚಾರಿತ್ರಿಕ ಘಟನೆಗಳ ಪ್ರಸ್ತಾಪದಲ್ಲಿ ಏರುಪೇರಾಗಿದೆ. ಅದನ್ನು ಆದಷ್ಟು ಸುಧಾರಿಸಲು ಸಾಧ್ಯವಿದೆ.
ಕೆಂಪನಂಜೇಗೌಡನ ಮಗ ಕೆಂಪೇಗೌಡ ಹುಟ್ಟಿದ್ದು ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ಪಟ್ಟಾಭಿಷೇಕಕ್ಕೆ ಬಂದ ಮಾರನೆಯ ವರ್ಷ (೧೫೧೦). ಹಂಪೆಯಲ್ಲಿ ಪ್ರಥಮ ಬಾರಿಗೆ ವಿಜಯದಶಮಿ ಉತ್ಸವ ಪ್ರಾರಂಭವಾದದ್ದು ೧೫೧೫ರಲ್ಲಿ. ತಂದೆಯ ಜೊತೆಯಲ್ಲಿ ಮೊದಲ ವಿಜಯದಶಮಿ ಉತ್ಸವಕ್ಕೆ ಹೋದಾಗ ಬಾಲಕ ಕೆಂಪೇಗೌಡನಿಗೆ ಐದು ವರ್ಷ. ಬಹುತೇಕ ಸಾಹಿತ್ಯ ಚರಿತ್ರೆಕಾರರು ಈ ಅವಧಿಯನ್ನು ನಮೂದಿಸಿದ್ದಾರೆ. ಹಾಗಾಗಿ ಒಂದನೆಯ ಕೆಂಪೇಗೌಡ ಹುಟ್ಟಿದ್ದು ಸುಮಾರು ೧೫೧೦ರಲ್ಲಿ ಎಂದು ನಿರ್ಧರಿಸಲಾಗಿದೆ. ಕರ್ಲಮಂಗಲಂ ಶ್ರೀಕಂಠಯ್ಯ ಅವರ ಊಹೆಯೂ ಹೆಚ್ಚು ಕಡಿಮೆ ಈ ಅವಧಿಗೆ ಹೊಂದಿಕೊಳ್ಳುತ್ತದೆ. ಈ ಇಸವಿಯನ್ನೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಪೇಗೌಡನ ಜಯಂತಿ ಉತ್ಸವಕ್ಕೆ ಬಳಸುತ್ತಾ ಬಂದಿದೆ. ಆಯಾ ವರ್ಷದ ಬೆಂಗಳೂರು ಕರಗೋತ್ಸವದಂದು ಕೆಂಪೇಗೌಡ ಜಯಂತ್ಯುತ್ಸವ ಆಚರಣೆಯಾಗುತ್ತಿದೆ.
ಇತಿಹಾಸ ಪುರುಷ ಹಿರಿಮೆ ಕೆಂಪೆಗೌಡ ಹುಟ್ಟಿದ್ದು ಅಂದಿನ ರಾಜಧಾನಿ ಯಲಹಂಕದಲ್ಲಿ ಎಂಬುದು ನಿರ್ವಿವಾದ ಕಟುಸತ್ಯ. ಆದರೂ ಕೆಂಪೇಗೌಡ ಹುಟ್ಟಿದ್ದು ತಾಯಿಯ ತೌರುಮನೆಯಲ್ಲಿ ಎಂದು ಒಬ್ಬಿಬ್ಬರು ಹುಡುಕಾಟ ನಡೆಸಿರುವುದೂ ಉಂಟು. ಒಕ್ಕಲಿಗರಲ್ಲಿ ಚೊಚ್ಚಲ ಹೆರಿಗೆ ಹೆಣ್ಣಿನ ತೌರು ಮನೆಯಲ್ಲಿ ನಡೆಯುವ ಪದ್ಧತಿ ಇತ್ತು. ಈಗಲೂ ಅಲ್ಲಲ್ಲಿ ಇದೆ. ಸಾಮಾನ್ಯ ಸಂಸಾರಿಗರ ವಿಷಯದಲ್ಲಿ ಇದು ಸರಿಯಿರಬಹುದು. ಆದರೆ ರಾಜನ ಮಗನ ಹೆರಿಗೆಯಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು, ಸಂರಕ್ಷಣೆಯ ಅಂಶಗಳನ್ನು ಗಮನಿಸಬೇಕಾಗುತ್ತದೆ. ರಾಜನ ಗಂಡು ಸಂತಾನದ ಬಗೆಗೆ ಶತೃಗಳ ದುಷ್ಟ ದೃಷ್ಟಿ ಸದಾ ಹಿಂಬಾಲಿಸುತ್ತಿತ್ತು. ಅಂಥ ಕಾಲ ಅದು. ಅಂಥ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗಿತ್ತು. ಸಕಲ ಸೌಭಾಗ್ಯಗಳಿರುವ, ಸಕಲ ರಕ್ಷಣೆಯ ಭರವಸೆಯಿರುವ ಸ್ಥಳದಲ್ಲಿ ಹೆರಿಗೆ ಮಾಡಿಸಿ ರಾಜ್ಯಕ್ಕೆ ಉತ್ತರಾಧಿಕಾರಿಯಾಗುವ ಗಂಡು ಮಗುವನ್ನು ಪೋಷಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಧಾನಿ ಯಲಹಂಕ ಸುರಕ್ಷಿತ ಸ್ಥಳವಾಗಿತ್ತು.
ಕೆಂಪನಂಜೇಗೌಡನ ಹೆಂಡತಿ, ಕೆಂಪೇಗೌಡನ ತಾಯಿ ಲಿಂಗಾಂಬೆ ಹಳೆ ಬೆಂಗಳೂರಿನವಳು. ಅದು ಹೆರಿಗೆಗೆ ಸುರಕ್ಷಿತ ಹಾಗೂ ಸೂಕ್ತ ಸ್ಥಳವೆಂದು ನಂಬುವಂತಿಲ್ಲ. ಅಷ್ಟಕ್ಕೂ ಅದು ಸಕಲ ಸೌಲಭ್ಯಗಳ ದೊಡ್ಡ ನಗರವಾಗಿರಲಿಲ್ಲ. ಹೇಳಿಕೇಳಿ ಅದು ಹಳ್ಳಿಯಾಗಿತ್ತು. ಅಲ್ಲಿ ಹೆರಿಗೆಯಾಗಿರುವ ಸಂಭವವಿಲ್ಲ.
ಹಳೆ ಬೆಂಗಳೂರು ಈಗಿನ ಕೊಡಿಗೇನಹಳ್ಳಿಯ ಪ್ರದೇಶ ಎಂದು ಹೇಳುತ್ತಾರೆ. ಈಗ ಅಲ್ಲಿ ಹಳೆಯ ಬೆಂಗಳೂರಿನ ಯಾವ ಅವಶೇಷಗಳೂ ಇಲ್ಲ. ಹೆಸರೇ ಹೇಳುವಂತೆ ಕೊಡುಗೆಹಳ್ಳಿ. ಸುಮಾರು ನೂರು ವರ್ಷಗಳ ಹಿಂದೆ ಬಚ್ಚೇಗೌಡ, ಭೈರೇಗೌಡ ಎಂಬ ಸೋದರರು ಮೈಸೂರು ಮಹಾರಾಜರಿಗೆ ಯಾವುದೋ ಸಹಾಯ ಮಾಡಿ, ಅವರಿಂದ ಪಡೆದ ಭೂಮಿಯಲ್ಲಿ ವಸತಿ ನೆಲೆ ಸ್ಥಾಪಿಸಿದ ಊರು. ಆ ಗೌಡರು ನೇರವಾಗಿ ರಾಜ ಕೆಂಪೇಗೌಡನ ವಂಶಸ್ಥರಲ್ಲ. ಲಿಂಗಾಂಬೆ ಆ ಗೌಡ ಸೋದರರ ಮನೆಗೆ ಸೇರಿದವಳಲ್ಲ. ಹಳೆ ಬೆಂಗಳೂರು ದಂಡು ಪ್ರದೇಶದ ಹತ್ತಿರದ ಊರಾದುದರಿಂದ ದಂಡು ಕೋಡಿಗೆ ಹಳ್ಳಿ ಎನ್ನುತ್ತಾರೆ. ಆ ಹಳ್ಳಿಯೇ ಕ್ರಮೇಣ ’ಹಳೆಕೋಟೆಯ ಕೋಡಿಗೆ ಹಳ್ಳಿ, ’ಕೊಡಿಗೆ ಹಳ್ಳಿ-ವಿರೂಪಾಕ್ಷಪುರ’ವೆಂದು ಎರಡು ಭಾಗವಾಗಿದೆ. ಅಲ್ಲೆಲ್ಲೂ ’ಹಳೆಯ ಬೆಂಗಳೂರು’ ಎಂಬ ನಾಮಫಲಕವಿಲ್ಲ.
ಅಲ್ಲಿ ಹಳೆಕೋಟೆ ಕೊಡಿಗೆಹಳ್ಳಿ, ಹಳೆಕೋಟೆ ಕೊಡಿಗೆಹಳ್ಳಿ ಅಶ್ವತ್ಥಕಟ್ಟೆ, ಹಳೆಕೋಟೆ ಪ್ರಸನ್ನ ಶ್ರೀ ವೀರ ಆಂಜನೇಯಸ್ವಾಮಿ ದೇವಸ್ಥಾನ ಎಂಬ ಹೆಸರುಗಳಿವೆ. ಅಲ್ಲಿ ’ಕೋಟೆ’ ಎಂದರೆ ಹಳೆ ಬೆಂಗಳೂರಿನ ಕೋಟೆಯಲ್ಲ. ಶ್ರೀಮಂತರ ಮನೆ ದೊಡ್ಡದಾಗಿದ್ದು, ಎತ್ತರವಾದ ಬಾಗಿಲಿದ್ದರೆ ಅದಕ್ಕೆ ’ಕೋಟೆ’ ಎಂದು ಕರೆಯುವುದು ರೂಢಿಯಲ್ಲಿರುವಂತೆ ಕಾಣುತ್ತದೆ. ಉತ್ತರ ಕರ್ನಾಟಕದಲ್ಲಿ ದೇಸಾಯರ ’ವಾಡೆ’ ಇದೆಯಲ್ಲ ಹಾಗೆ. ಕೋಟೆಕೊತ್ತಲ ನಗರ ಏನೂ ಇಲ್ಲ. ಬೆಂಗಳೂರು ಜಿಲ್ಲೆಯ ಅನೇಕ ಕಡೆ ದೊಡ್ಡ ಮನೆಗಳಿಗೆ ಕೋಟೆಯೆಂಬ ಹೆಸರಿದೆ. ಉದಾಹರಣೆಗೆ ಸಾಹಿತಿ ಸಮೇತನಹಳ್ಳಿ ರಾಮರಾಯರ ಮನೆಯ ಹೆಸರು ’ಕೋಟೆ ಮನೆ’. ಹಾಗಾಗಿ ಸುಮಾರು ಒಂದು ನೂರು ವರ್ಷ ಇತಿಹಾಸವಿರುವ ಕೊಡಿಗೆಹಳ್ಳಿಯಲ್ಲಿ ಐದು ನೂರು ವರ್ಷ ಹಿಂದಿನ ಹಳೆಯ ಬೆಂಗಳೂರಿನ ಕುರುಹು ಹುಡುಕುವುದು ವ್ಯರ್ಥ. ಅಷ್ಟಕ್ಕೂ ಕೊಡಿಗೆಹಳ್ಳಿಯ ಸಮೀಪದಲ್ಲಿ ಹಳೆಯ ಬೆಂಗಳೂರು ಇತ್ತೆಂದು ಹೇಳುತ್ತಾರೆಯೇ ಹೊರತು ಈಗಿನ ಕೊಡಿಗೆಹಳ್ಳಿಯೇ ಹಳೆಯ ಬೆಂಗಳೂರಲ್ಲ.
ಈಗಿನ ಕೊಡಿಗೆ ಹಳ್ಳಿಯ ಹಳೆಯ ಬಾವಿಯೊಂದರ ಬಳಿಯಲ್ಲಿ ತರಕಾರಿ ಬಳ್ಳಿಯನ್ನು ಹಬ್ಬಿಸುವುದಕ್ಕೆ ಚಪ್ಪರ ಹಾಕಲು ನೆಟ್ಟಿರುವ ಉದ್ದನೆಯ ಕಲ್ಲು ಕಂಬಗಳನ್ನು ನೋಡಿ, ಅದು ಕೆಂಪೇಗೌಡ ಹುಟ್ಟಿದ ಸ್ಥಳದ ಅವಶೇಷ ಎನ್ನುವುದು ಸರಿಯಲ್ಲ. ಅದೇ ಬಾವಿಯ ಹತ್ತಿರವಿರುವ ಐವತ್ತು ಅರವತ್ತು ವರ್ಷದ ಸಿಮೆಂಟ್ ಸಮಾಧಿಗಳನ್ನು ನೋಡಿ, ಅವುಗಳಲ್ಲಿ ಒಂದು ಕೆಂಪೇಗೌಡನ ಸಮಾಧಿಯೆಂದೂ ಅದರಲ್ಲಿ ಕೆಂಪೇಗೌಡನ ಬಾಲ್ಯದ ಆಟದ ಸಾಮಾನುಗಳು, ಅವನ ಖಡ್ಗ, ವೇಷಭೂಷಣಗಳಿವೆ ಎಂದು ಊಹಿಸುವುದೂ ಸಂಶೋಧನಾ ದೃಷ್ಟಿಯಾಗುವುದಿಲ್ಲ.
ಹಿರಿಯ ಕೆಂಪೇಗೌಡನ ಜನ್ಮಸ್ಥಳವನ್ನು ಹಳೆಯ ಬೆಂಗಳೂರಿನಲ್ಲಿ ಅಥವಾ ಕೊಡಿಗೇನಹಳ್ಳಿಯಲ್ಲಿ ಹುಡುಕುವುದಕ್ಕಿಂತ ರಾಜಧಾನಿಯಾಗಿದ್ದ ಯಲಹಂಕದಲ್ಲಿ ಹುಡುಕಿದರೆ ಅಷ್ಟೋ ಇಷ್ಟೋ ಅವಶೇಷ ಸಿಕ್ಕಿದರೂ ಸಿಕ್ಕಬಹುದು. ಏಕೆಂದರೆ, ಶ್ರೀರಾಮಚಂದ್ರ ಹುಟ್ಟಿದ್ದು ಅಯೋಧ್ಯೆಯಲ್ಲಿ, ಕೌಸಲ್ಯೆಯ ತೌರುಮನೆಯಲ್ಲಲ್ಲ. ಹಾಗೆಯೇ ಕೆಂಪೇಗೌಡ ಹುಟ್ಟಿದ್ದು ರಾಜಧಾನಿ ಯಲಹಂಕದಲ್ಲಿ, ಲಿಂಗಾಂಬೆಯ ತೌರುಮನೆಯಲ್ಲಲ್ಲ.
ಕೆಂಪೇಗೌಡನ ಬಾಲ್ಯ, ವಿದ್ಯಾಭ್ಯಾಸ
ಚಿಕ್ಕರಾಯ ಬಾಲ್ಯದಲ್ಲಿ ಚುರುಕಾಗಿದ್ದನು. ಅರಮನೆಯ ಉದ್ಯಾನದಲ್ಲಿ ಲವಲವಿಕೆಯಿಂದ ಸುತ್ತಾಡುತ್ತಿದ್ದನು, ಆಟವಾಡುತ್ತಿದ್ದನು. ಪಶುಪಕ್ಷಿ ಗಿಡ ಮರಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದನು. ಅವನ ಜೊತೆಯಲ್ಲಿ ಆಟವಾಡುವುದಕ್ಕೆ ಆರಿಸಿದ ಮಕ್ಕಳನ್ನು ನೇಮಿಸಿದ್ದರು. ಆಟಪಾಠ ಕುಣಿತ ನೆಗೆತಗಳಲ್ಲಿ ಕಾಲಕಳೆಯುತ್ತಿತ್ತು. ಒಮ್ಮೊಮ್ಮೆ ಓರಗೆಯವರೊಡನೆ ಅರಮನೆಯ ಹೊರಗಿನ ತೋಪಿಗೂ ಹೋಗುತ್ತಿದ್ದನು. ಅಲ್ಲಿಗೆ ಇತರ ಬಾಲಕರೂ ಸೇರಿಕೊಳ್ಳುತ್ತಿದ್ದರು. ಮರಕೋತಿಯಾಟ, ಕಣ್ಣುಮುಚ್ಚಾಲೆಯಾಟ, ಗೋಲಿಯಾಟ, ಕುದುರೆಯಾಟ, ಚೆಂಡಾಟ ಮೊದಲಾದ ಆಟಗಳನ್ನು ಆಡುತ್ತಿದ್ದರು. ಆಟದ ನಡುವೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬಂದು ಜಗಳವಾದರೆ, ಮುಖಂಡತ್ವ ವಹಿಸಿ ಜಗಳ ಬಿಡಿಸುವುದು ಚಿಕ್ಕರಾಯನಿಗೆ ಖುಷಿ ಎನಿಸುತ್ತಿತ್ತು. ಅವನ ನ್ಯಾಯ ತೀರ್ಮಾನಕ್ಕೆ ಉಳಿದವರು ಒಪ್ಪಿಕೊಳ್ಳುತ್ತಿದ್ದರು. ಬಾಲ್ಯದಲ್ಲೇ ಮುಖಂಡನ ಲಕ್ಷಣಗಳು ಕಾಣಿಸುತ್ತಿದ್ದವು.
ಕೆಂಪರಾಯ ರೋಗಿಗಳನ್ನು ಕಂಡರೆ ಅನುಕಂಪ ತೋರಿಸುತ್ತಿದ್ದನು. ವೃದ್ಧರಿಗೆ ಗೌರವ ನೀಡುತ್ತಿದ್ದನು. ಕಾಲಕಳೆದಂತೆ ಕುದುರೆ ಸವಾರಿ, ಗರಡಿ ಮನೆಯ ಕಸರತ್ತಿನಲ್ಲಿ ಆಸಕ್ತಿ ತಾಳಿದನು. ಹೊರಗಡೆ ಹೋದಾಗ ಹೊಲಗದ್ದೆ ತೋಟಗಳಲ್ಲಿ ಕೃಷಿಕರು ಬೇಸಾಯ ಮಾಡುವುದನ್ನು ಕುತೂಹಲದಿಂದ ನೋಡುತ್ತಿದ್ದನು. ಅನುಮಾನಗಳೆದ್ದಾಗ ಜೊತೆಯಲ್ಲಿರುವ ಹಿರಿಯರನ್ನು ಪ್ರಶ್ನಿಸಿ ಪರಿಹಾರ ಕಂಡುಕೊಳ್ಳುತ್ತಿದ್ದನು. ಚಿಕ್ಕರಾಯ ತಾಯಿ ತಂದೆಯರಿಗೆ, ಅರಮನೆಯವರಿಗೆ, ಅಚ್ಚುಮೆಚ್ಚಿನ ಮುದ್ದು ಬಾಲಕನಾಗಿ ಬೆಳೆದನು. ಚಿಕ್ಕರಾಯನ ತಾಯಿ ಲಿಂಗಾಂಬೆ ಸ್ವಾರಸ್ಯವಾಗಿ ನಿರೂಪಿಸುತ್ತಿದ್ದ ವೀರ ಶೂರ ಸಾಹಸ ತ್ಯಾಗಶೀಲ, ದೈವಭಕ್ತಿ, ವೀರ ಹನುಮಂತ, ವೀರ ಅಭಿಮನ್ಯು, ಭಕ್ತಧ್ರುವ, ಲವಕುಶ ಮೊದಲಾದ ಕಥೆಗಳು ಅವನಿಗೆ ಪ್ರಿಯವಾಗುತ್ತಿದ್ದವು. ಸತ್ಯ, ನ್ಯಾಯ, ಧರ್ಮದ ಹೋರಾಟದ ಕಥೆಗಳೆಂದರೆ ಉತ್ಸಾಹ ತೋರುತ್ತಿದ್ದನು.
ಕೆಂಪರಾಯನಿಗೆ ಐದು ವರ್ಷ ತುಂಬುತ್ತಿದ್ದಂತೆ ಐಗಂಡಪುರದ ಮಾಧವಭಟ್ಟರ ಗುರುಕುಲಾಶ್ರಮಕ್ಕೆ ಸೇರಿಸಿದರು. ಮಾಧವ ಭಟ್ಟರು ಅರಮನೆಯ ಪುರೋಹಿತರೂ ಹಿತಚಿಂತಕರೂ ಆಗಿದ್ದರು. ಗುರುಕುಲಾಶ್ರಮದಲ್ಲಿ ಬಾಲಕ ಚಿಕ್ಕರಾಯ ಸಾಮಾನ್ಯ ವಿದ್ಯಾರ್ಥಿಗಳ ಜೊತೆ ಕುಳಿತು ವಿದ್ಯಾಭ್ಯಾಸ ಮಾಡಿದನು. ಎಲ್ಲರಂತೆ ಗುರುಸೇವೆ, ಆಶ್ರಮ ಸೇವೆ ಮಾಡಿದನು. ಅವನಿಗೆ ರಾಜೋಚಿತವಾದ ಶಿಕ್ಷಣ ದೊರೆಯಿತು. ಸಾಮಾನ್ಯ ಶಿಕ್ಷಣದ ಜೊತೆಗೆ ಕ್ಷತ್ರಿಯರಿಗೆ, ನಾಡಪ್ರಭುಗಳಿಗೆ ಅಗತ್ಯವಾದ ದೊಣ್ಣೆ ವರಸೆ, ಕತ್ತಿವರಸೆ, ಮಲ್ಲಯುದ್ಧ, ಕುಸ್ತಿ ಕಸರತ್ತು, ಯುದ್ಧತಂತ್ರ, ಆಡಳಿತ, ರಾಜನೀತಿ, ಆರ್ಥಿಕ ತಿಳಿವಳಿಕೆ ಮೊದಲಾದ ವಿಷಯಗಳ ಬಗೆಗೆ ಅರಿವು ಮೂಡಿಸಲಾಯಿತು. ಅಲ್ಲಿ ಕಾಡುಮೇಡು, ಕೆರೆಕುಂಟೆ, ಪ್ರಾಣಿಪಕ್ಷಿ ಮೊದಲಾದವುಗಳ ಪರಿಚಯವಾಯಿತು. ಗುರುಕುಲಾಶ್ರಮದಲ್ಲಿ ವೀರಣ್ಣಗೌಡನೆಂಬ ಆಪ್ತ ಸ್ನೇಹಿತ ಲಭ್ಯವಾದನು. ಅವನೊಬ್ಬ ರೈತನ ಮಗ. ವೀರಣ್ಣಗೌಡನಿಗೆ ಕೆಂಪೇಗೌಡನೆಂದರೆ ಅಚ್ಚುಮೆಚ್ಚು. ಇಬ್ಬರೂ ಆಪ್ತಸ್ನೇಹಿತರಾದರು. ಕಷ್ಟ ಸುಖಗಳಲ್ಲಿ ಪರಸ್ಪರ ಭಾಗಿಯಾಗುತ್ತಿದ್ದರು.
ಗುರುಕುಲಾಶ್ರಮದಲ್ಲಿ ಶಿಕ್ಷಣಾರ್ಥಿಗಳ ನಡುವೆ ಆಗಾಗ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅವುಗಳಲ್ಲಿ ಚಿಕ್ಕರಾಯ ಮತ್ತು ವೀರಣ್ಣಗೌಡ ಸಾಮಾನ್ಯವಾಗಿ ಜಯಗಳಿಸುತ್ತಿದ್ದರು. ಮಲ್ಲಕಾಳಗ, ಕತ್ತಿವರಸೆ, ಕುದುರೆ ಸವಾರಿಯಲ್ಲಿ ಕೆಂಪರಾಯ ಸದಾ ಮುಂದಾಗಿರುತ್ತಿದ್ದನು. ಗುರುಕುಲಾಶ್ರಮದಲ್ಲಿ ಶಿಕ್ಷಣ ಮುಗಿಯುವ ಹೊತ್ತಿಗೆ ಚಿಕ್ಕರಾಯನಲ್ಲಿ ಸಹಜವಾದ ಹುಡುಗಾಟ ಕಡಿಮೆಯಾಗಿ ಜವಾಬ್ದಾರಿ ಗಾಂಭೀರ್ಯ ಕಾಣಿಸಿಕೊಂಡಿತು.
ಕೆಂಪೇಗೌಡ ವಿದ್ಯಾಭ್ಯಾಸದ ಕಾಲದಲ್ಲಿ ಸಾಹಸ ಪ್ರವೃತ್ತಿ, ಲೋಕೋಪಕಾರಿ ಗುಣಗಳನ್ನು ಪ್ರದರ್ಶಿಸಿದನು. ಒಮ್ಮೆ ಆತನ ವಿದ್ಯಾಗುರುಗಳ ಮನೆಯಲ್ಲಿದ್ದ ಹಸುಗಳನ್ನು ಕಳ್ಳರು ಕದ್ದೊಯ್ದರು. ವಿಷಯ ತಿಳಿದ ಕೆಂಪೇಗೌಡ ಸ್ನೇಹಿತರೊಡನೆ, ವೀರಣ್ಣ ಮತ್ತಿತರ ಸಹಪಾಠಿಗಳೊಡನೆ ಕಳ್ಳರನ್ನು ಬೆನ್ನುಹತ್ತಿ ಹಿಡಿದು ಅವರೊಡನೆ ವೀರಾವೇಶದಿಂದ ಹೋರಾಡಿ ಕಳ್ಳರನ್ನು ಸೋಲಿಸಿ ಪಲಾಯನಗೊಳಿಸಿ ಹಸುಗಳನ್ನು ಸುರಕ್ಷಿತವಾಗಿ ಹಿಡಿದುಕೊಂಡು ಬಂದು ಗುರುಮನೆಗೆ ಸೇರಿಸಿದ. ಯುವಕ ಶಿಷ್ಯನ ಸಾಹಸ ಪ್ರವೃತ್ತಿಗೆ ಗುರು ಮನಸಾರೆ ಮೆಚ್ಚುಗೆ ಸೂಚಿಸಿದನು.
ಕೆಂಪೇಗೌಡ ವಿದ್ಯಾಭ್ಯಾಸ ಮುಗಿದ ಮೇಲೆ ಗುರುವಿನ ಅಣತಿಯಂತೆ ದೇಶಸಂಚಾರ ಮಾಡಿ ಅಪಾರವಾದ ಲೋಕಾನುಭವವನ್ನು ಪಡೆದ. ಜನರ ಜೀವನಸ್ಥಿತಿಯನ್ನು ಸ್ವತಃ ಕಣ್ಣಾರೆ ಕಂಡ. ಅದರಿಂದ ಜೀವವೈವಿಧ್ಯವನ್ನು ಗುರುತಿಸಿದ.
ವಿಜಯನಗರದ ದರ್ಶನ
ಪ್ರ.ವ.೧೫೧೫ರಲ್ಲಿ ಶ್ರೀ ಕೃಷ್ಣದೇವರಾಯ ಪ್ರಥಮ ಬಾರಿಗೆ ವಿಜಯದಶಮಿ ಉತ್ಸವವನ್ನು ಏರ್ಪಡಿಸಿದ್ದ. ಆಗ ತಂದೆ ಕೆಂಪನಂಜೇಗೌಡನ ಜೊತೆಯಲ್ಲಿ ಕೆಂಪೇಗೌಡನೂ ಹೋಗಿದ್ದ. ಆಗ ಅವನಿಗೆ ಐದು ವರ್ಷ ವಯಸ್ಸು. ಚಿಕ್ಕ ವಯಸ್ಸಿಗೆ ವಿಜಯದಶಮಿ ಉತ್ಸವವನ್ನು ಕಣ್ಣಾರೆ ಕಂಡ. ಅನೇಕ ಕನಸುಗಳನ್ನು ತುಂಬಿಕೊಂಡ. ಆಳಿದರೆ ಸಾಮ್ರಾಜ್ಯ ಚಕ್ರವರ್ತಿ ಶ್ರೀಕೃಷ್ಣದೇವರಾಯನ ಹಾಗೆ ಆಳಬೇಕು; ರಾಜ್ಯ ಕಟ್ಟಿದರೆ ವಿಜಯನಗರ ಸಾಮ್ರಾಜ್ಯದಂತೆ ರಾಜ್ಯ ಕಟ್ಟಬೇಕೆಂದು ನಿರ್ಧರಿಸಿಕೊಂಡ. ನಾಡಪ್ರಭುವಂಶದ ಹುಟ್ಟುಗುಣ ಪುಟಿಯತೊಡಗಿತು. ಅನಂತರವೂ ಕೆಂಪೇಗೌಡ ಎರಡೂ ಮೂರು ಸಾರಿ ತಂದೆಯೊಡನೆ ವಿಜಯನಗರದ ವಿಜಯದಶಮಿ ಉತ್ಸವಕ್ಕೆ ಹೋಗಿದ್ದ.
ವಿಜಯನಗರದ ಮಹಾನವಮಿ ದಿಬ್ಬದಲ್ಲಿ ವಿಜಯದಶಮಿ ಪ್ರಯುಕ್ತ ನಾನಾ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕತ್ತಿವರಸೆ, ದೊಣ್ಣೆವರಸೆ, ಕುದುರೆ ಸವಾರಿ ಮೊದಲಾದವು ಅವುಗಳಲ್ಲಿ ಸೇರಿದ್ದವು. ಯುವಕ ಕೆಂಪೇಗೌಡ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಯಶಾಲಿಯಾಗಿ ನೆರೆದಿದ್ದ ಜನಸ್ತೋಮದ ಹೊಗಳಿಕೆಗೆ ಪಾತ್ರನಾದ.
ಇನ್ನೊಮ್ಮೆ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಶ್ರೀಕೃಷ್ಣದೇವರಾಯನ ಒಡ್ಡೋಲಗದಲ್ಲಿ ಮಲ್ಲಯುದ್ಧಕ್ಕೆ ಅಣಿಗೊಳಿಸಲಾಗಿತ್ತು. ಸಾಕ್ಷಾತ್ ಶ್ರೀ ಕೃಷ್ಣದೇವರಾಯನ ಅಳಿಯ ತಿರುಮಲರಾಯ ಮತ್ತು ಕೆಂಪೇಗೌಡ ಸ್ಪರ್ಧಾಳುಗಳು, ಚಕ್ರವರ್ತಿ, ಪ್ರಧಾನಿ ಮೊದಲಾದ ಪ್ರಮುಖರ ಸಮಕ್ಷಮದಲ್ಲಿ ನಡೆದ ಮಲ್ಲಯುದ್ಧದಲ್ಲಿ ಕೆಂಪೇಗೌಡ ದಿಟ್ಟತನದಿಂದ ಹೋರಾಡಿ, ನಾನಾ ಪಟ್ಟುಗಳನ್ನು ಪ್ರದರ್ಶಿಸಿ, ತಿರುಮಲರಾಯನನ್ನು ಸೋಲಿಸಿದ. ಶ್ರೀಕೃಷ್ಣದೇವರಾಯ ಸಂತೋಷಗೊಂಡು, ಯುವಸಾಹಸಿ ಕೆಂಪೇಗೌಡನನ್ನು ಪ್ರಶಂಸಿಸಿ ಸನ್ಮಾನಿಸಿದ. ಅದು ಕೆಂಪೇಗೌಡನ ಜೀವನದಲ್ಲಿ ಮರೆಯಾದ ಕ್ಷಣವಾಯಿತು.
ಯುವರಾಜ ಪಟ್ಟಾಭಿಷೇಕ, ಮದುವೆ
ಯೌವನಕ್ಕೆ ಕಾಲಿಟ್ಟ ಸ್ಫುರದ್ರೂಪಿ ಕೆಂಪೇಗೌಡನಿಗೆ ಯುವರಾಜ ಪಟ್ಟಾಭಿಷೇಕವಾಯಿತು (ಸು.೧೫೨೮). ಜೊತೆಯಲ್ಲಿ ಮದುವೆ. ಹೆಂಡತಿ ಚೆನ್ನಮ್ಮ (ಚೆನ್ನಾಂಬೆ). ಆಕೆ ತಾಯಿ ಲಿಂಗಾಂಬೆಯ ಸಹೋದರನ ಮಗಳು. ಹಳೆಯ ಬೆಂಗಳೂರಿನವಳು. ಆ ಶುಭಸಮಾರಂಭಗಳಿಗೆ ವಿಜಯನಗರ ಸಾಮ್ರಾಜ್ಯ ಚಕ್ರವರ್ತಿ ಶ್ರೀ ಕೃಷ್ಣದೇವರಾಯನ ಪ್ರತಿನಿಧಿಯೂ ಚನ್ನಪಟ್ಟಣ, ಶಿರಾ, ಹೊಳವನಹಳ್ಳಿ, ಸೋಲೂರು, ಕೆಳದಿ, ಬೆಳಗುತ್ತಿ, ಚಿತ್ರದುರ್ಗ ಮೊದಲಾದ ಸಂಸ್ಥಾನದ ಪಾಳೆಯಗಾರರೂ ಉಡುಗೊರೆಯೊಡನೆ ಬಂದು ಪಾಲ್ಗೊಂಡರು.
ಹಿರಿಯ ಕೆಂಪೇಗೌಡನಿಗೆ ಇಬ್ಬರು ಗಂಡು ಮಕ್ಕಳು. ಗಿಡ್ಡೇಗೌಡ (ಜನನ ಸು.೧೫೩೦) ಮತ್ತು ಇಮ್ಮಡಿ ಕೆಂಪೇಗೌಡ (ಜನನ ಸು.೧೫೬೦). ದೊರೆ ಕೆಂಪೇಗೌಡನಿಗೆ ಒಬ್ಬ ಮಗಳು ಇದ್ದಳೆಂದು ಹೇಳುತ್ತಾರೆ. ಆದರೆ ಅವಳ ಬಗೆಗೆ ವಿವರಗಳು ಲಭ್ಯವಿಲ್ಲ.
ಯುವ ರಾಜ್ಯಾಭಿಷೇಕವಾದ ಮೇಲೆ ಕೆಂಪೇಗೌಡ ತಂದೆಯ ಆಡಳಿತದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡ. ರಾಜನೀತಿಯನ್ನು ರಕ್ತಗತಮಾಡಿಕೊಂಡ. ತಮ್ಮ ನಾಡಿನ ಅಕ್ಕಪಕ್ಕದ ಪಾಳೆಯಗಾರರ, ದಾಯಾದಿ ಪಾಳೆಯಗಾರರ ಚಹರೆಗಳನ್ನು ಗಮನಿಸಿ ಶತ್ರುಗಳಾರು? ಮಿತ್ರರಾರು? ಎಂಬುದನ್ನು ಮನದಟ್ಟು ಮಾಡಿಕೊಂಡ. ಗಡಿಭಾಗದಲ್ಲಿ ರಕ್ಷಣೆಗೆ ಹೆಚ್ಚು ಗಮನ ಹರಿಸಿದ. ತಂದೆಗೆ ಮೆಚ್ಚುಗೆಯಾಗುವಂತೆ ರಾಜ್ಯಾಡಳಿತದಲ್ಲಿ ಪಳಗಿದ.
ನಾಡಪ್ರಭು
ಮುಪ್ಪಿನ ತಂದೆ ಮಗನಿಗೆ ನಾಡಪ್ರಭು ಅಧಿಕಾರವನ್ನು ವಹಿಸಿಕೊಟ್ಟ (ಸು.೧೫೩೧). ಆ ಹೊತ್ತಿಗೆ ಕೆಂಪೇಗೌಡ ಸರ್ವರೀತಿಯಲ್ಲೂ ನಾಡಪ್ರಭು ಸ್ಥಾನಕ್ಕೆ ಅರ್ಹನಾಗಿ ಬೆಳೆದಿದ್ದ. ಆಡಳಿತದ ಎಲ್ಲಾ ಮರ್ಮಗಳನ್ನೂ ಕರಗತಮಾಡಿಕೊಂಡಿದ್ದ; ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಪ್ರದರ್ಶಿಸುತ್ತಿದ್ದ.
ಕೆಂಪೇಗೌಡ ಅಧಿಕಾರ ವಹಿಸಿಕೊಂಡಾಗ ಯಲಹಂಕ ರಾಜ್ಯದಲ್ಲಿ ಗಂಭೀರವಾದ ಪರಿಸ್ಥಿತಿಯಿತ್ತು. ನೆರೆಯ ಪಾಳೆಯಗಾರರು ಅಸೂಯೆಯಿಂದ ಕುದಿಯುತ್ತಿದ್ದರು. ರಾಜ್ಯವನ್ನು ಆಕ್ರಮಿಸಲು ಹೊಂಚುಹಾಕುತ್ತಿದ್ದರು. ದಾಯಾದಿ ಪಾಳೆಯಗಾರರೂ ಹೊಟ್ಟೆಕಿಚ್ಚಿನಿಂದ ಉರಿಯುತ್ತಿದ್ದರು. ವಿಜಯನಗರದ ಗಡಿಯಲ್ಲಿ ಬಹಮನಿ ಸುಲ್ತಾನರ ಕೋಟಲೆಯಿತ್ತು. ಚಕ್ರವರ್ತಿಗಳ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಆಡಳಿತ ನಡೆಸಬೇಕಾಗಿತ್ತು. ಕೆಂಪೇಗೌಡ ಎಲ್ಲವನ್ನೂ ದಕ್ಷತೆಯಿಂದ ನಿಭಾಯಿಸಿದನು. ರಾಜ್ಯ ರಕ್ಷಣೆಗಾಗಿ ಮದ್ದುಗುಂಡು ಅಸ್ತ್ರಗಳ ತಯಾರಿಕೆ, ಸೈನ್ಯ ಜಮಾವಣೆ, ಮೇಲ್ವಿಚಾರಕರ ನೇಮಕ, ಗೂಢಚಾರರ ವ್ಯವಸ್ಥೆ ಮೊದಲಾದವುಗಳಿಗೆ ಗಮನಕೊಟ್ಟನು. ಅದಕ್ಕಾಗಿ ದಕ್ಷರೂ ನಂಬಿಕಸ್ಥರೂ ಆದ ನಿಷ್ಠರನ್ನು ನೇಮಿಸಿದನು.
೧೫೨೯ರಲ್ಲಿ ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ನಿಧನ ಹೊಂದಿದನು. ಆಗ ಅನೇಕ ಪಾಳೆಯಗಾರರು, ನಾಡಪ್ರಭುಗಳು ಸ್ವತಂತ್ರರೆಂದು ಘೋಷಿಸಿಕೊಂಡರು. ಆದರೆ ರಾಜನಿಷ್ಠ ಕೆಂಪೇಗೌಡ ಹಾಗೇ ಮಾಡಲಿಲ್ಲ. ಸಾಮಂತರಾಜ ನಿಷ್ಠೆಯನ್ನೇ ಮುಂದುವರಿಸಿದ.
ವಿಜನಯಗರ ಸಾಮ್ರಾಜ್ಯ ಚಕ್ರವರ್ತಿ, ಕರ್ನಾಟಕ ರಮಾರಮಣ ಶ್ರೀಕೃಷ್ಣದೇವರಾಯ ಸ್ವರ್ಗಸ್ಥನಾದ ಮೇಲೆ ಅವನ ಸಹೋದರ ಅಚ್ಚುತರಾಯ ಅಧಿಕಾರಕ್ಕೆ ಬಂದ. ಅವನ ಪಟ್ಟಾಭಿಷೇಕದ ಸಂದರ್ಭದಲ್ಲಿ ಬೆಂಗಳೂರು ಕೆಂಪೇಗೌಡ ಅತಿಥಿಯಾಗಿ ಹೋಗಿದ್ದ. ಆ ನಂತರವೂ ಚಕ್ರವರ್ತಿಯೊಡನೆ ಆಪ್ತನಾಗಿದ್ದ. ವಿಜಯದಶಮಿ ಸಂದರ್ಭದಲ್ಲಿ ಅಚ್ಚುತರಾಯ ರಾಜನಿಷ್ಠ ಯಲಹಂಕ ನಾಡಪ್ರಭು ಕೆಂಪೇಗೌಡನಿಗೆ ರಾಜಮರ್ಯಾದೆ ನೀಡಿ ಉಡುಗೊರೆಯಿತ್ತು ರಾಜಸಭೆಯಲ್ಲಿ ಪ್ರಶಂಸಿಸಿದ. ಗೌಡಕುಲ ವಿಭೂಷಣ, ಅರಿರಾಯರಗಂಡ, ಬಂಡಿಕುಲ ತಿಲಕ ಎಂದು ಬಿರುದಿತ್ತು ಗೌರವಿಸಿದ. ಕೆಂಪೇಗೌಡ ವಿಜಯನಗರದ ಅರಸರಿಗೆ ಆಪ್ತನಾಗಿ ನಡೆದುಕೊಂಡ. ಜೀವನ ಪರ್ಯಂತ ತನ್ನ ರಾಜನಿಷ್ಠೆಯನ್ನು ಬದಲಿಸಲಿಲ್ಲ.
ಕೆಂಪೇಗೌಡನಿಗೆ ಆಳರಸರಿಂದಲೂ ಪ್ರಜೆಗಳಿಂದಲೂ ಧರ್ಮವೀರ, ಶಾಂತಿವೀರ, ಶತ್ರುನಿಗ್ರಹಿ ಮೊದಲಾದ ಬಿರುದುಗಳು ದೊರಕಿದ್ದವು. ಕೆಂಪೇಗೌಡ ಅತ್ಯಂತ ಹೆಸರುವಾಸಿಯಾದ ನಾಡಪ್ರಭುಗಳಲ್ಲಿ ಅಗ್ರಪಂಕ್ತಿಯಲ್ಲಿದ್ದನು.
ಒಂದನೇ ಕೆಂಪೇಗೌಡ ಸುಮಾರು ೧೫೩೧ರಲ್ಲಿ ನಾಡಪ್ರಭುವಾದನು. ಅದ್ಧೂರಿಯಾಗಿ ನಡೆದ ಕೆಂಪೇಗೌಡನ ಪಟ್ಟಾಭಿಷೇಕಕ್ಕೆ ಅನೇಕ ರಾಜವಂಶೀಯರು ಬಂದಿದ್ದರು. ಪ್ರಾರಂಭದಲ್ಲಿ ಕೆಂಪೇಗೌಡನ ವಾರ್ಷಿಕ ಆದಾಯ ೩೦,೦೦೦ ವರಹಗಳದಾಗಿತ್ತು. ಅನಂತರ ಅದು ವೃದ್ಧಿಸಿತು. ಅವನ ಏಳಿಗೆಯನ್ನು, ಆರ್ಥಿಕ ಸಂಪತ್ತನ್ನು ಸಹಿಸದೆ ಚನ್ನಪಟ್ಟಣ, ಶಿರ್ಯ, ಸೋಲೂರು, ಕುಣಿಗಲ್ಲು ಪಾಳೆಯಗಾರರು ಕರಬುತ್ತಿದ್ದರು. ಕೆಂಪೇಗೌಡನ ಆಡಳಿತಾವಧಿ ಸುಭಿಕ್ಷವಾಗಿತ್ತು. ಪ್ರಜೆಗಳ ಸಾಮಾನ್ಯ ಅಗತ್ಯಗಳು ಸಲೀಸಾಗಿ ಪೂರೈಕೆಯಾಗುತ್ತಿದ್ದವು. ಪ್ರಜೆಗಳ ನೆಮ್ಮದಿಗೆ ಕೊರತೆಯಿರಲಿಲ್ಲ. ಕೆಂಪೇಗೌಡ ಯಲಹಂಕನಾಡಿನ ಸಿಂಹದಂತಿದ್ದನು. ಅವನನ್ನು ಕೆಣಕಲು, ಸೋಲಿಸಲು ಎಂಥವರೂ ಹೆದರುತ್ತಿದ್ದರು. ಕೆಂಪೇಗೌಡ ಆಡಳಿತದಲ್ಲಿ ಪರಿಣತನಾಗಿದ್ದ. ಆತ ಯುದ್ಧಚತುರ, ಮಹಾಯೋಧ, ಮಹಾಸೇನಾನಾಯಕ, ರಣಪ್ರಿಯ, ತೀಕ್ಷ್ಣಮತಿಯಾಗಿದ್ದನು. ಅತ್ಯುತ್ತಮ ಮಟ್ಟದ ಸೈನ್ಯವಿದ್ದು ಅದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದನು.
ಕೆಂಪೇಗೌಡ ನಾಡಪ್ರಭುವಾದ ಒಂದೆರಡು ವರ್ಷಗಳಲ್ಲೇ ಸಾಮಂತ ಅರಸನ ಸ್ಥಾನಕ್ಕೆ ಪಾತ್ರನಾದ. ವಿಜಯನಗರ ಸಾಮ್ರಾಜ್ಯ ಚಕ್ರವರ್ತಿ ಅಚ್ಚುತರಾಯ (೧೫೩೨-೧೫೪೨)ನು ಕೆಂಪೇಗೌಡನಿಗೆ ಯಲಹಂಕ ರಾಜ್ಯವನ್ನು ಅಮರನಾಯಕತನಕ್ಕೆ ಕೊಟ್ಟ (೧೮-೧೦-೧೫೩೨). ಆ ಕಾಲಕ್ಕೆ ಕೆಂಪೇಗೌಡನು ’ಕೆಂಪದೇವರಸಗೌಡ’ ಎಂಬ ಮನ್ನಣೆ ಪಡೆದ. ಶಿವನಸಮುದ್ರ ಸೀಮೆಯ ಚೊಕ್ಕನಹಳ್ಳಿ ಗ್ರಾಮವನ್ನು ಅಚ್ಚುತರಾಯನಿಗೆ ಧರ್ಮವಾಗಲಿ ಎಂದು ಭೈರವನ ಗುಡಿಗೆ (ಚೌಡೇಶ್ವರ ದೇವಾಲಯ) ಅಂಗಭೋಗ, ರಂಗಭೋಗಕ್ಕಾಗಿ ದಾನವಾಗಿ ನೀಡಿದ. ಇದು ಕೆಂಪರಾಯನು ಅಚ್ಚುತರಾಯನಿಗೆ ತೋರಿದ ಗೌರವ. (ದಾಸರಹಳ್ಳಿ ಶಿಲಾಶಾಸನದಲ್ಲಿ ಈ ಐತಿಹಾಸಿಕ ಅಂಶ ದಾಖಲಾಗಿದೆ).
ಮಹಾಸಾಧನೆಯ ಕನಸುಗಾರ
ವಿಜಯನಗರ ಮಾನವಮಿ ದಿಬ್ಬದ ಉತ್ಸವ, ಶ್ರೀ ಕೃಷ್ಣದೇವರಾಯನ ಒಡ್ಡೋಲಗ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಿರಿಯ ಕೆಂಪೇಗೌಡನ ಮೇಲೆ ಗಾಢವಾದ ಪರಿಣಾಮ ಬೀರಿದವು. ಹೊಸ ರಾಜಧಾನಿಯನ್ನು ನಿರ್ಮಿಸಿ ಶ್ರೀ ಕೃಷ್ಣದೇವರಾಯನ ಹಾಗೆ ರಾಜ್ಯಾಡಳಿತ ನಡೆಸಲು ಉದ್ದೇಶಿಸಿದ. ಕೆಂಪೇಗೌಡ ರಾಜ್ಯಭಾರ ಮಾಡುತ್ತಿದ್ದುದು ಯಲಹಂಕದಿಂದ. ಅದಕ್ಕಿಂತ ಭಿನ್ನವಾದ ಉತ್ತಮವಾದ ಆಯಕಟ್ಟಿನ ಸ್ಥಳಕ್ಕಾಗಿ ಶೋಧ ನಡೆಸಿದ. ಸ್ನೇಹಿತ ವೀರಣ್ಣಗೌಡ, ಸಹೋದರರು ಮತ್ತು ಆಪ್ತರೊಡನೆ ಸ್ಥಳ ವೀಕ್ಷಣೆ ಮಾಡಿದ. ಯಲಹಂಕದಿಂದ ದಕ್ಷಿಣದ ಶಿವನಸಮುದ್ರ ಹಳ್ಳಿ, ಅದರ ವಾಯುವ್ಯಕ್ಕೆ ಹೆಬ್ಬಾಳದ ಒಳಗೆರೆಯ ದಕ್ಷಿಣಕ್ಕೆ ಹಳೆಯ ಬೆಂಗಳೂರು, ಅದರ ಮುಂದಕ್ಕೆ ಹುಲ್ಲುಗಾವಲ್ (ಕಾವಲ್) ದಿಣ್ಣೆ. ಅದರಿಂದ ಮುಂದೆ ಕೊಡಿಗೆಹಳ್ಳಿ ಬಯಲು. ಸುತ್ತಮುತ್ತ ಹಸುರು ಕಾಡು. ಅಲ್ಲಲ್ಲಿ ನೀರಿನ ಹೊಂಡಗಳು. ಆ ಪ್ರದೇಶ ಮನಸ್ಸಿಗೆ ಹಿಡಿಸಿತು.
ಸ್ಥಳ ಪರಿವೀಕ್ಷಣೆಗೆ ಬಂದಾಗ ಬಿಸಿಲಿನ ದಣಿವು ಇಂಗಿಸಲು ಮರದ ನೆರಳಿನಲ್ಲಿ ಕುಳಿತ. ಜೋಂಪು ಹತ್ತಿತು. ಕನಸಿನಲ್ಲಿ ಕುಲದೇವತೆ ಕೆಂಪಮ್ಮ, ಕಾಣಿಸಿಕೊಂಡು ’ಈ ಸ್ಥಳದಲ್ಲಿ ರಾಜಧಾನಿ ನಿರ್ಮಿಸಿದರೆ ನಿನ್ನ ಏಳಿಗೆಯಾಗುತ್ತದೆ’ ಎಂದಳು. (ಕುಲದೇವತೆ ಮುದುಕಿಯ ವೇಷದಲ್ಲಿ ಬಂದು ಹೀಗೆ ಹೇಳಿದಳು ಎಂಬ ಜನಪದ ಐತಿಹ್ಯವೂ ಉಂಟು). ಕಣ್ಣುಬಿಟ್ಟಾಗ ಕಾಕತಾಳೀಯವಾಗಿ ಮೊಲವೊಂದು ಬೇಟೆನಾಯಿಯೊಂದರ ಮೇಲೆ ದಾಳಿ ಮಾಡಿದುದನ್ನು ನೋಡಿದ. ಇದು ’ಗಂಡುಭೂಮಿ’ ಎಂದು ಅರಿವಾಯಿತು. ಅಲ್ಲೆ ಹೊಸರಾಜಧಾನಿ ನಿರ್ಮಿಸಲು ನಿರ್ಧರಿಸಿದನು. ಅದು ಬಹಳ ಹಿಂದೆ ಜನವಸತಿಯಿಂದ ಕೂಡಿದ್ದು, ಕಾರಣಾಂತರಗಳಿಂದ ನಾಶವಾಗಿ, ಕಾಡುಮಯವಾಗಿತ್ತು.
ಸ್ಥಳದ ಬಗೆಗೆ, ಭೂಗರ್ಭ ತಜ್ಞರೊಡನೆ, ನೀರಾವರಿ ತಜ್ಞರೊಡನೆ, ಸಾಂಪ್ರದಾಯಿಕ ವಾಸ್ತುಶಿಲ್ಪಿಗಳೊಡನೆ, ಸನಾತನ ಜ್ಯೋತಿಷಿಗಳೊಡನೆ, ಆಪ್ತರೊಡನೆ ಸಮಾಲೋಚಿಸಿದ. ನೆಲದ ಸಂಪೂರ್ಣ ಪರಿಚಯ ಮಾಡಿಕೊಂಡ. ಪ್ರತಿಯೊಂದು ನೈಸರ್ಗಿಕ ಸಂಪತ್ತನ್ನು ಸದುಪಯೋಗಪಡಿಸಕೊಳ್ಳಲು ಯೋಚಿಸಿದ. ತಾನು ನಿರ್ಮಿಸಲಿರುವ ನೂತನ ರಾಜಧಾನಿ ತನ್ನ ಪೂರ್ವಿಕರು ಕಟ್ಟಿದ ಆವತಿ, ಯಲಹಂಕಗಳಿಗಿಂತ ಉನ್ನತವಾಗಿರಬೇಕೆಂದೂ ಅಲ್ಲಿ ನಿರ್ಮಿಸುವ ಪ್ರತಿಯೊಂದೂ ರಾಜ್ಯಕ್ಕೂ ಪ್ರಜೆಗಳಿಗೂ ಉಪಯೋಗವಾಗುವಂತಿರಬೇಕೆಂದೂ ದೂರಾಲೋಚನೆಯನ್ನು ಮಾಡಿದನು. ಈ ಪ್ರದೇಶದಲ್ಲಿ ಮಳೆಯ ಕೊರತೆಯಿರುವುದಿಲ್ಲ, ಬರಗಾಲ ಕಾಲಿಡುವುದಿಲ್ಲ ಎಂದು ಭವಿಷ್ಯವಾಣಿ ಕೇಳಿ ಸಂತೋಷಿಸಿದನು.
ಹಿರಿಯ ಕೆಂಪೇಗೌಡ ವಿಜಯನಗರದ ಅರಸ ಅಚ್ಚುತರಾಯನ ಒಪ್ಪಿಗೆ ಪಡೆದು ರಾಜಧಾನಿ ಹಾಗೂ ಕೋಟೆಯ ನಿರ್ಮಾಣಕ್ಕೆ ತೊಡಗಿದನು. ವಿಜಯನಗರದ ಸಾಮ್ರಾಜ್ಯದ ದಕ್ಷಿಣಕೋಟೆ ಭದ್ರವಾಗಿರಬೇಕೆಂಬ ಸದುದ್ದೇಶದಿಂದ, ಕೆಂಪೇಗೌಡ ರಾಜನಿಷ್ಠೆಯ ನಂಬಿಕಸ್ಥನೆಂಬ ಖಾತ್ರಿಯಿಂದ ರಾಜಧಾನಿ ನಿರ್ಮಾಣಕ್ಕೆ ಚಕ್ರವರ್ತಿಯ ಒಪ್ಪಿಗೆ ದೊರೆಯಿತು. ಕೆಂಪೇಗೌಡ ಮಹದಾಸೆಯ ಕನಸುಗಾರ, ಹಿಡಿದ ಕೆಲಸ ಸಾಧಿಸುವ ಛಲಗಾರ.
ವಿನೂತನ ರಾಜಧಾನಿ ಬೆಂಗಳೂರಿನ ನಿರ್ಮಾಣ
೧೫೩೭ರ ಒಂದು ಶುಭ ದಿನದ ಸುಮುಹೂರ್ತದಂದು ಹೊಸ ರಾಜಧಾನಿಗೆ ಗುದ್ದಲಿ ಪೂಜೆ ನಡೆಯಿತು. ಕೃಷಿಕ ಮೂಲ ಕೆಂಪೇಗೌಡ ಹೊನ್ನಾರು ಕಟ್ಟುವ ಆಚರಣೆಯಿಂದ ರಾಜಧಾನಿ ನಿರ್ಮಾಣ ಕಾರ್ಯವನ್ನು ಆರಂಭಿಸಿದ. ನಾಲ್ವರು ನೇಗಿಲಿಗೆ ಆರು ಕಟ್ಟಿ ಗುರುತುಮಾಡಿದರು. ನಾಡಪ್ರಭು ಕೆಂಪೇಗೌಡನೂ
ನೇಗಿಲು ಹಿಡಿದು ನಾಲ್ಕು ಹೆಜ್ಜೆ ನಡೆದ. ಅದು ಹಲವು ಕಥೆಗಳಿಗೆ ನಾಂದಿಯಾಯಿತು.
ಕೆಂಪೇಗೌಡ ತಜ್ಞರೊಡನೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಂಡಂತೆ ವೇಗವಾಗಿ ನಿರ್ಮಾಣಕಾರ್ಯ ನಡೆದವು. ಹೊಸರಾಜಧಾನಿಗೆ ’ದೇವರಾಯ ಪಟ್ಟಣ’ ಎಂದು ನಾಮಕರಣ ಮಾಡಲಾಯಿತೆಂದು ಪ್ರತೀತಿಯಿದೆ. ಅದು ವಿಜಯನಗರ ಅರಸರ ಹೆಸರಿನ ಸ್ಮರಣೆಗೆ ಎನ್ನುವುದುಂಟು. ಆದರೆ ಆ ಹೆಸರು ನಿಲ್ಲದೆ ’ಬೆಂಗಳೂರು’ ಎಂಬ ಹೆಸರೇ ಊರ್ಜಿತವಾಯಿತು. ಪ್ರ.ವ.೧೫೯೭ ಏಪ್ರಿಲ್ ೨೧ರ ಪೌರೋಹಿತ್ಯ ದಾನಶಾಸನದಲ್ಲಿ ಇಮ್ಮಡಿ ಕೆಂಪೇಗೌಡ ಬೆಂಗಳೂರು ನಗರವನ್ನು ನಿರ್ಮಿಸಿದ ಎಂದಿದೆ. ಅದು ಕೂಟಶಾಸನ. ಅದನ್ನು ನಂಬುವಂತಿಲ್ಲ. ಹಿರಿಯ ಕೆಂಪೇಗೌಡ
ಬೆಂಗಳೂರು ಸ್ಥಾಪಿಸಿದಾಗ ಅವನ ಮಗ ಇಮ್ಮಡಿ ಕೆಂಪೇಗೌಡ ಇನ್ನೂ ಹುಟ್ಟಿರಲಿಲ್ಲ.
ಹೊಸ ರಾಜಧಾನಿಗೆ ’ಬೆಂಗಳೂರು’ ಎಂಬ ಹೆಸರೇ ಸ್ಥಿರವಾಯಿತು. ಅದು ಹಳೆಯ ಬೆಂಗಳೂರಿನ ಸಮೀಪದಲ್ಲಿದ್ದುದರಿಂದ, ಅದೇ ಹೆಸರಿನ ಊರೊಂದು ಹಿಂದೆ ಇದ್ದು ಬೇಚರಾಕ್ ಆಗಿದ್ದುದರಿಂದ, ಹಿಂದಿನ ಹೆಸರು ಜನಮಾನಸದಿಂದ ಅಳಿಸಿರಲಿಲ್ಲವಾದ್ದರಿಂದ ’ಬೆಂಗಳೂರು’ ಎಂಬ ಹೆಸರು ಪ್ರಸಿದ್ಧವಾಗಲು ತಡವಾಗಲಿಲ್ಲ. ಅಷ್ಟಕ್ಕೂ ಕೆಂಪೇಗೌಡನಿಗೂ ಬೆಂಗಳೂರು ಶಬ್ದಕ್ಕೂ ಅವಿನಾಸಂಬಂಧವಿದೆ. ಹಿರಿಯ ಕೆಂಪೇಗೌಡ ಹುಟ್ಟಿದ್ದು, ಬೆಳೆದದ್ದು, ಆಡಳಿತ ಪ್ರಾರಂಭಿಸಿದ್ದು ಯಲಹಂಕದಲ್ಲಿ. ಅವನ ತಾಯಿ ಮತ್ತು ಹೆಂಡತಿ ಹಳೆಯ ಬೆಂಗಳೂರಿನವರು. ಹಾಗಾಗಿ ಬೆಂಗಳೂರು ಶಬ್ದದ ಬಗೆಗೆ, ಬೆಂಗಳೂರು ಊರಿನ ಬಗೆಗೆ ಅವನಿಗೆ ಇನ್ನಿಲ್ಲದ ಅಭಿಮಾನ. ಬೆಂಗಳೂರನ್ನು ಸರ್ವಾಂಗ ಸುಂದರ ಮಾಡಲು ಅವನು ಕಂಡ ಕನಸು ಅಷ್ಟಿಷ್ಟಲ್ಲ.
ಬೆಂಗಳೂರು ಕೆಂಪೇಗೌಡನ ಊರು. ಬೆಂಗಳೂರೆಂದರೆ ಕೆಂಪೇಗೌಡ, ಕೆಂಪೇಗೌಡ ಎಂದರೆ ಬೆಂಗಳೂರು. ಹದಿನಾರನೇ ಶತಮಾನದಿಂದ ಕೆಂಪೇಗೌಡನ ಹೆಸರಿನೊಂದಿಗೆ ಬೆಂಗಳೂರು ಸೇರಿಕೊಂಡಿದೆ. ಪ್ರಧಾನ ಬೆಂಗಳೂರಿನ ನಾಲ್ಕು ಕಡೆ ಕಾವಲು ಸ್ಥಳಗಳಿಗಾಗಿ ಗುರುತು ಮಾಡಿಸಿದ. ಅವು ಪೂರ್ವಕ್ಕೆ ಹಲಸೂರು ಕೆರೆ ಏರಿಯ ಮೇಲೆ, ಪಶ್ಚಿಮಕ್ಕೆ ಕೆಂಪಾಂಬುದಿ ಕೆರೆ ಏರಿಯ ಮೇಲೆ, ಉತ್ತರಕ್ಕೆ ಹೆಬ್ಬಾಳದ ರಸ್ತೆಯ ಕಡೆ, ದಕ್ಷಿಣಕ್ಕೆ ಲಾಲಬಾಗಿನ ತೋಟದ ಬಂಡೆಯ ಮೇಲೆ ಗುರುತಾದವು. ಮುಂದೆ ಮಾಗಡಿ ಕೆಂಪೇಗೌಡ ಇವುಗಳ ಸ್ಥಳದಲ್ಲಿ ಆಳೆತ್ತರದ ಆಕರ್ಷಕ ಗೋಪುರಗಳನ್ನು ನಿರ್ಮಿಸಿದ. ಇವು ರಾಯಗೋಪುರಗಳೆಂದು ಹೆಸರಾದವು. ಶ್ರೀಕೃಷ್ಣದೇವರಾಯನ ಹೆಸರಿಗೆ ಹೀಗೆ ಕರೆಯಲಾಯಿತೆಂದು ಹೇಳುತ್ತಾರೆ. ವಿದೇಶಿಯರು ಇವುಗಳನ್ನು ಕೆಂಪೇಗೌಡ ಗೋಪುರಗಳೆಂದು ಕರೆದಿದ್ದಾರೆ. ಅತ್ಯಾಕರ್ಷಕ ಗೋಪುರಗಳನ್ನು ನಿರ್ಮಿಸುವುದು ಕೆಂಪೇಗೌಡಾದಿಗಳಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಈಗಿನ ಬಿನ್ನಿ ಮಿಲ್ಲಿನ ಹತ್ತಿರ ಬೆಂಗಳೂರು ಅರಮನೆಗೆ ಸಂಬಂಧಿಸಿದ ಗೋಪುರವೊಂದು ಇತ್ತು. ಈಚೆಗೆ ಅದನ್ನು ನಗರ ಪಾಲಿಕೆಯವರು ಕೆಡವಿಹಾಕಿದರು. ಕೆಂಪೇಗೌಡಾದಿಗಳು ಕಟ್ಟಿದ ಕೆರೆಗಳ ಹತ್ತಿರವೂ ಆಕರ್ಷಕ ಗೋಪುರಗಳಿವೆ.
ಹಿರಿಯ ಕೆಂಪೇಗೌಡನಿಗೆ ರಾಜಧಾನಿ ಬೆಂಗಳೂರು ನಿರ್ಮಿಸುವಾಗ ಹೇರಳವಾಗಿ ಗುಪ್ತನಿಧಿ ದೊರೆಯಿತಂತೆ. ಅದನ್ನು ರಾಜಧಾನಿ ನಿರ್ಮಾಣಕ್ಕೆ ಬಳಸಿದ ಎಂದು ಹೇಳುವರು. ಕೆಂಪೇಗೌಡ ವಂಶಸ್ಥರಿಗೆ ನಿಧಿ ದೊರಕಿದ ಪ್ರಸಂಗಗಳು ಮತ್ತೆ ಮತ್ತೆ ಉಲ್ಲೇಖಗೊಂಡಿವೆ. ಅವು ಜನಪದ ಕವಿ ಸಮಯ ಇರಬಹುದು. ನಿಜವೂ ಆಗಿರಬಹುದು. ಅವುಗಳಿಗೆ ಇದೂ ಒಂದು ಸೇರ್ಪಡೆಯಾಗಿದೆ. ಕೆಂಪೇಗೌಡ ಅಪ್ಪಟ ದೈವಭಕ್ತ, ಅದೃಷ್ಟವಂತ; ಆರ್ಥಿಕಾಭಿವೃದ್ಧಿಗಾಗಿ ಹಲವು ಪೇಟೆಗಳನ್ನು ನಿರ್ಮಿಸಿದ. ವಿವಿಧ ವೃತ್ತಿಯ ಜನರನ್ನು ಆಹ್ವಾನಿಸಿ, ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ. ರಾಜಧಾನಿ ನಿರ್ಮಾಣವಾದ ಮೇಲೆ, ಯಲಹಂಕದಿಂದ ಬೆಂಗಳೂರಿಗೆ ರಾಜಧಾನಿಯನ್ನು ಸ್ಥಳಾಂತರಿಸಿದ (೧೫೩೭).
(ಮುಂದುವರೆಯುವುದು)

ಹಿಂದಿನ ಬರೆಹಗಳು