ಎಷ್ಟೇ ಠುಸ್‌ಪುಸ್ ಎಂದು ಇಂಗ್ಲೀಷಿನಲ್ಲಿ, ಅಥವಾ ಇಂಗ್ಲೀಷಿಗೆ ಸ್ವಲ್ಪವೇ ಕನ್ನಡ ಬೆರೆಸಿ ಮಾತಾಡುವುದೇ ಇಂದು, ನಾಗರಿಕತೆಯ, ಆಧುನಿಕತೆಯ ಲಕ್ಷಣವಾಗಿದ್ದರೂ, ಕೆಲವು ಕ್ಷೇತ್ರಗಳಲ್ಲಾದರೂ, ನಾವು ಕನ್ನಡದಲ್ಲೇ ವ್ಯವಹರಿಸಬೇಕಾದುದು ಅನಿವಾರ್ಯವಾಗಿ ಉಳಿದುಕೊಂಡಿರುವುದು, ನಮ್ಮ ಕನ್ನಡಮ್ಮನ ಪುಣ್ಯವೇ ಸರಿ!
ಪೌರಾಣಿಕ ನಾಟಕಗಳಲ್ಲಿ, ಯಕ್ಷಗಾನ ಕ್ಷೇತ್ರದಲ್ಲಿ, ಹರಿಕೀರ್ತನಕಾರರು, ದೊಡ್ಡಾಟದವರು, ಕನ್ನಡ ಅಧ್ಯಾಪಕರು, ಹೀಗೆ ಕನ್ನಡ ಮಾತ್ರವನ್ನೇ ಬಳಸಬೇಕಾದವರ ಪಟ್ಟಿಯಲ್ಲೇ ನಾನೂ ಇದ್ದೇನೆನ್ನುವುದು, ನನಗೊಂದು ಹೆಮ್ಮೆಯ ವಿಚಾರವೇ! ಆದರೆ, ನಾನು ಈ ಯಾವ ವೃತ್ತಿಯಲ್ಲೂ ಇಲ್ಲ. ಹಾಗಿದ್ದೂ ಅವರ ಸಾಲಿನಲ್ಲಿ ನಿಂತಿದ್ದೇನೆ. ಏಕೆಂದರೆ.......... ನಾನು ಕರ್ನಾಟಕ ಶೈಲಿಯ ಸಂಗೀತಗಾರ್ತಿ ಮತ್ತು ಇತರರಿಗೂ ಅದನ್ನು ಕಲಿಸುತ್ತೇನೆ. ಅಷ್ಟೇ! ನನ್ನ ಅನುಭವಾಧಾರಿತ, ಕೆಲವು ಕನ್ನಡದ ಮೋಜಿನ ಸನ್ನಿವೇಶಗಳು ಇಲ್ಲಿವೆ.
ವಿಶೇಷವೆಂದರೆ, ಒಂದು ಅಂತರಾಷ್ಟ್ರೀಯ ವಿದ್ಯಾಸಂಸ್ಥೆ ಇರುವ ಊರಿನ ಪಕ್ಕದಲ್ಲೇ ನಮ್ಮ ತರಬೇತಿ ಸಂಸ್ಥೆಯೂ ಇರುವುದರಿಂದ, ನನ್ನ ಸಂಗೀತದ ತರಗತಿಗೆ ಹಲವಾರು ಪರಭಾಷಿಗರು ಬರುತ್ತಾರೆ. ಮಾತ್ರವಲ್ಲ, ಇಂದು ನಮ್ಮೂರಿನದೇ ಮಕ್ಕಳು ಸಹ, ಪ್ಲೇಕ್ಲಾಸ್ನಿಂದಲೇ ಕನ್ನಡವನ್ನು ಮಾತಾಡಲೂ ಮರೆಯತೊಡಗಿ, ಮುಂದೆ ಎಲ್.ಕೆ.ಜಿ-ಯು.ಕೆ.ಜಿಗಳಲ್ಲಿ ಮತ್ತೆ ಇನ್ನೂ ಮರೆತು, ಆ ಬಳಿಕ, ಕೇವಲ ಮೂರನೇ ನಾಲ್ಕನೇ ತರಗತಿಯವರೆಗೆ ಒಂದು ಸಬ್ಜೆಕ್ಟ್ ಎಂದು ಮಾತ್ರ, ಕನ್ನಡವನ್ನು ಕಲಿತದನ್ನು, ಆರೇಳಕ್ಕೆ ಬರುವ ವೇಳೆಗೆ ಮತ್ತೆ ಸಂಪರ್ಕವೇ ಇಲ್ಲದೇ ಸಂಪೂರ್ಣವಾಗಿ ಮರೆತುಬಿಟ್ಟಿರುತ್ತಾರೆ! ಮಾತೃಭಾಷೆ ಕನ್ನಡವೇ ಆಗಿದ್ದರೂ, ವಿದ್ಯಾರ್ಜನೆಗೆ ಸುಲಭವಾಗಲೆಂಬ ಉದ್ದೇಶದಿಂದ ಮಗುವಿನೊಡನೆ ಆಂಗ್ಲಭಾಷೆಯಲ್ಲೇ ಮಾತಾಡುವ ಮಾತಾಪಿತೃಗಳು! ಇನ್ನು ಎಂದೋ ಕಲಿತಿದ್ದ ಆ ಮುದ್ದುಕನ್ನಡದ ಅಕ್ಷರಗಳನ್ನು ಹೇಗೆ ನೆನಪಿಸಿಯಾರು ಹೇಳಿ! ಹಾಗಾಗಿ, ಕನ್ನಡವೇ ಪ್ರಧಾನವಾಗಿರುವ ನಮ್ಮ ಈ ಕಲಾತರಬೇತಿ ಸಂಸ್ಥೆಯ ತರಗತಿಯೊಳಗೆ, ದಿನದಿನವೂ ಹಲವಾರು ಗಮ್ಮತ್ತಿನ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.....
ತಮಿಳುನಾಡಿನಿಂದ ಉನ್ನತ ಶಿಕ್ಷಣಕ್ಕಾಗಿ ನಮ್ಮೂರಿಗೆ ಬಂದಿದ್ದ ಆಕೆ, ಅಲ್ಲಿದ್ದಾಗ ಅರ್ಧಕ್ಕೆ ಬಿಟ್ಟಿದ್ದ ಕಲೆಯ ಮುಂದರಿಕೆಗಾಗಿ, ನಮ್ಮ ತರಬೇತಿ ಕೇಂದ್ರಕ್ಕೆ ಬಂದಿದ್ದಳು. ನಾನು ಹೇಳುವುದನ್ನೆಲ್ಲ, ಆಕೆ ತನ್ನ ಪುಸ್ತಕದಲ್ಲಿ ತಮಿಳಿನಲ್ಲೇ ಬರೆದುಕೊಳ್ಳುವಳು. ಸ್ವರಗಳನ್ನೇನೋ ಸಂಗಮದನಿ ಎಂದು ಸರಿಯಾಗಿಯೇ ಉಚ್ಚರಿಸುವ ಆಕೆ, ಆಗೀಗ ಕನ್ನಡದ ಸಾಹಿತ್ಯವನ್ನು ತಪ್ಪಾಗಿ ಹೇಳುವುದಿತ್ತು. ನಾನು ಸರಿಪಡಿಸುವುದಿತ್ತು. ಪಾಪ! ಆಕೆಯದೇನೂ ತಪ್ಪಿಲ್ಲ ಬಿಡಿ, ತಮಿಳಿನಲ್ಲಿ ಕ-ಗ ಗಳ ಅಕ್ಷರ ಒಂದೇ ಮತ್ತು ಚ-ಜ ಗಳು, ಪ-ಬ ಗಳು ಒಂದೇ ಅಂತೆ. ಹಾಗಾಗಿ ವಿಷಯವನ್ನು ಅರ್ಥಮಾಡಿಕೊಂಡೇ ಆಯಾ ಶಬ್ದವನ್ನು ಗ್ರಹಿಸಬೇಕಂತೆ. ಆದ್ದರಿಂದ, ನಾನು ಆಕೆಗೆ, ಕನ್ನಡದ ಶಬ್ದಾರ್ಥಗಳನ್ನೂ ವಿವರಿಸುತ್ತಾ ಸಂಗೀತ ಶಿಕ್ಷಕಿ ಮತ್ತು ಪರೋಕ್ಷವಾಗಿ ಕನ್ನಡ ಭಾಷಾ ಶಿಕ್ಷಕಿಯೂ ಆಗಿದ್ದೆ! ಒಮ್ಮೆ, ನಾನು ವಿನಾಯಕಾ ನಿನ್ನ ಪಾಡಿ ಪೊಗಳುವೆ ಎನ್ನುವ ದೇವರ ನಾಮವನ್ನು ಕಲಿಸುವವಳಿದ್ದೆ. ಆಕೆ ಎಂದಿನಂತೆ ತಮಿಳಿನಲ್ಲಿ ಬರೆದುಕೊಂಡಿದ್ದಾಯ್ತು. ನಾನು ಹಾಡುತ್ತಿದ್ದಂತೆ ಆಕೆ ಪುನಃ ಹಾಡಬೇಕಲ್ಲ? ನಾನು ಪಲ್ಲವಿಯ ಮೊದಲ ಸಾಲನ್ನು ಹಾಡಿದ್ದೇ ತಡ, ಆಕೆ ನಿರಾಳವಾಗಿ ವಿನಾಯಗಾ ನಿನ್ನ ಬಾಡಿ ಬೊಗಳುವೆ ಎಂದು ತಾನೇ ಕೈಯ್ಯಾರೆ ಬರೆದುಕೊಂಡಿದ್ದನ್ನು ನೋಡುತ್ತ, ಏರು ಶೃತಿಯಲ್ಲಿ ಹಾಡಿದಳು. ನಮ್ಮ ವಿನಾಯಕನನ್ನು ನೀನು ವಿನಾಯಗಾ ಎಂದರೆ, ಅವನದೂ ತಕರಾರು ಇರಲಿಕ್ಕಿಲ್ಲ. ನನ್ನದೂ ಅಭ್ಯಂತರ ಇಲ್ಲ. ಹಾಗೇ, ನೀನು ಪಾಡುವ ಬದಲು ಬಾಡಿದ್ರೂ, ನನ್ಗೇನೂ ನಷ್ಟ ಇಲ್ಲ. ಆ ದೇವ್ರದೂ ಆಕ್ಷೇಪ ಇಲ್ಲ. ಆದ್ರೆ, ಅವನನ್ನು ಪೊಗಳುವ ಬದಲು ನೀನೇ ಬೊಗಳಿದ್ರೆ, ನಮ್ಮೂರ ನಾಯಿಗಳೇ ತಮ್ಮ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ, ಚಳವಳಿ ಮಾಡಿದ್ರೇನು ಗತಿ ಮಾರಾಯ್ತಿ?! ಸದ್ಯ! ಆಕೆಗೆ, ಇಂತಹ ಶುದ್ಧ ಕನ್ನಡ ಆರ್ಥವಾಗುತ್ತಿರಲಿಲ್ಲ! ಹೀಗೆ, ಕೇರಳದ ಮತ್ತೊಬ್ಬಾಕೆ, ಚಿಂತೆ ಯಾತಕೋ ಬಯಲು ಭ್ರಾಂತಿ ಯಾತಕೋ ಎನ್ನುವ ದಾಸರ ಪದವನ್ನು ಚಿಂತೆಯಾ-ತಕೋ ಬಯಲ ಭ್ರಾಂದಿಯಾ-ತಕೊ ಎಂದು ನನಗೆ ಚಿಂತೆಯ ಜತೆಗೆ ವಿದೇಶಿ ಮದವನ್ನೂ ನೀಡಬಂದಂತಿತ್ತು! ನಾನು ಚಿಂತೆಯನ್ನಾದರೂ ತಕೊಂಡೇನು, ಬ್ರಾಂದಿಯನ್ನು ಕೈಯಲ್ಲೂ ಮುಟ್ಟಿದವಳಲ್ಲವೆಂದು ಆಕೆಗೆ ಹೇಳಿದ್ದೆ!
ಇನ್ನು ನಮ್ಮದೇ ಕನ್ನಡಮ್ಮನ ಮಡಿಲಲ್ಲೇ ಹುಟ್ಟಿ ಬೆಳೆದ! ಇಂಗ್ಲೀಷ್ ಮೀಡಿಯಂನವರೂ ಈ ವಿಷಯದಲ್ಲಿ ಕಡಿಮೆಯೇನಿಲ್ಲ! ಕನಕದಾಸರ ಕೃತಿಯಲ್ಲಿ ಚರಣಕಮಲ ನೆನೆ ಎಂದು ನಾನು ಹೇಳಿಕೊಟ್ಟರೆ, ಚರಣಕ......ಮಲ ನೆನೆ ಎಂದು ನಿರ್ಭಿಡೆಯಿಂದ ಹಾಡಿ, ನಾನು ಯಾವ್ಯಾವುದನ್ನೋ ನೆನಪಿಸಿಕೊಳ್ಳುವಂತೆ ಆಜ್ಞಾಪಿಸುತ್ತಾರೆ. ಆದಿಕೇಶವರಾಯ ಎಂದು ನಾನು ಹಾಡಿದ್ದನ್ನು ಆದಿಕೇ-ಶವರಾಯ ಎಂದು ತಮ್ಮ ಉಸಿರನ್ನು ವಿಭಾಗಿಸಿ ಉಚ್ಚರಿಸಿ, ಆ ಕೇಶವನನ್ನೇ ಉಸಿರುಗಟ್ಟಿಸಿ ಶವರಾಯನಾಗಿಸಿದರೂ, ಹಾಯಾಗಿರುತ್ತಾರೆ! ಇಂಥವು ಇನ್ನೆಷ್ಟೋ!
ಆಗೀಗ, ವ್ಯಾಕರಣ ಶಾಸ್ತ್ರಕ್ಕೂ ಇವರು ಲಗ್ಗೆ ಇಟ್ಟ ಪ್ರಕರಣಗಳೂ ಇವೆ. ಒಮ್ಮೆ ನಾನು ಮೋರೆ ಕಪ್ಪಿನ ಭಾವ ಎನ್ನುವ ಚರಣದ ಸಾಲನ್ನು ಹೇಳಿಕೊಡುತ್ತ, ಭಾವ ಎನ್ನುವುದು ಮಹಾಪ್ರಾಣ. ಅಂದರೆ ಭಾವನೆ. ಭಾವ ಎಂದು ಅಲ್ಪಪ್ರಾಣವನ್ನಾಗಿ ಉಚ್ಚರಿಸಿದರೆ, ಅದು ಅಕ್ಕನಗಂಡ-ಬಾವ ಎಂದಾಗುತ್ತದೆ. ಹಾಗಾಗಿ ಇಲ್ಲಿ ಭಾವ ಅಂದರೆ ಬಕೆ ಬಾಲ ಉಂಟು. ಹಾಗೆ ಹಾಡಬೇಕು. ಇಲ್ಲವಾದರೆ, ನಿಮ್ಮ ಅಕ್ಕನ ಗಂಡ (ಬಾವನ) ಮೋರೆ ಕಪ್ಪು ಎಂದಾಗುತ್ತದೆ ವಿವರಿಸಿದೆ. ಪ್ರಾಯಶಃ ನಮ್ಮಲ್ಲಿ ಹಲವಾರು ಕನ್ನಡಿಗರಿಗೂ ಈ ವ್ಯತ್ಯಾಸ ಗೊತ್ತಿಲ್ಲವೇನೋ? ಅಂತಿರುವಾಗ ಈ ಆಂಗ್ಲಮಾಧ್ಯಮದಲ್ಲಿ ಓದಿದ, ಈಗ ಆಗೇ ಆ-ಆ-ಇ-ಈಯನ್ನೂ ಬರೆಯಲು ಮರೆಯಲಾರಂಭಿಸಿರುವ, ಏನಿದ್ದರೂ ಅತ್ಯಗತ್ಯವಾದಾಗ ಕಂಪ್ಯೂಟರ್‌ನಲ್ಲೇ ಕನ್ನಡವನ್ನು ಕುಟ್ಟುವ ಈ ಸಾಫ್ಟ್‌ವೇರ್ ತಜ್ಞೆಗೆ, ಅವೆಲ್ಲ ಹೇಗೆ ಗೊತ್ತಿದ್ದಿರಬೇಕು ಹೇಳಿ? ಹಾಗಾಗಿ ಆಕೆ ಕುತೂಹಲದಿಂದ ನನ್ನನ್ನು ಕೇಳಿದ್ದೇನು? ಹಾಗಾದ್ರೆ ಮೇಡಂ.... ಅಕ್ಕನ ಗಂಡನಿಗೆ ಬಾಲ ಇರೋದಿಲ್ವಾ?! (ನಮ್ಮಲ್ಲಿ, ಬ ಗೆ ಬಾಲ ಕೊಟ್ರೆ ಭ ಎಂದೇ ಕಲಿಸಲಾಗುತ್ತದೆ) ಅಕ್ಕನ ಗಂಡ ಅಲ್ಪ ಪ್ರಾಣವಾ?! ನಾನಂದೆ ನನ್ನ ಅಕ್ಕನ ಗಂಡನಿಗೂ ಖಂಡಿತಾ ಬಾಲ ಇಲ್ಲ, ನಿನ್ನ ಅಕ್ಕನ ಗಂಡನಿಗೇನಾದ್ರೂ ಇದ್ದಿದ್ರೆ, ಮುಂದಾದರೂ ಆ ಬಾಲವನ್ನು ಪೂರ್ತಿಯಾಗಿ ತುಂಡು ಮಾಡು. ಅದೇ ಸರಿ ಆಯ್ತಾ?! ಮತ್ತೇ ಜಗತ್ತಿನ ಎಲ್ಲ ಬಾವಂದಿರೂ ಅಲ್ಪ ಪ್ರಾಣರಲ್ಲ. ಯಾಕೆಂದರೆ ಅವರಿಗೆ ಭಾವನೆಗಳಿವೆ. ಇಲ್ಲಿ ಮಹಾಪ್ರಾಣವೇ ಉಂಟಲ್ಲ?!
ಒಟ್ಟಾರೆ, ಶುದ್ಧ ಕನ್ನಡವಿದ್ದಲ್ಲೆಲ್ಲ ಎಂತಹ ಮನೋರಂಜನೆಗಳೂ ಇರುತ್ತವೆ ಎನ್ನುವುದಕ್ಕೆ ಇವೆಲ್ಲ ಸಹಜ ಉದಾಹರಣೆಗಳು ಅಷ್ಟೆ. ಒಮ್ಮೆ, ಅತಿ ಚಿಕ್ಕ ಕತೆ ಬರೆದವರಿಗೆ ಬಹುಮಾನ ಎನ್ನುವ ಘೋಷಣೆಯೊಂದಿಗೆ, ಸ್ಪರ್ಧೆ ನಡೆಯುತಂತೆ. ಪ್ರಥಮ ಬಹುಮಾನ ಪಡೆದ ಕತೆ ಇದಾಗಿತ್ತು... ನನ್ನ ಮದುವೆ ಆಯಿತು. ಇಲ್ಲಿಗೆ ನನ್ನ ಕತೆ ಮುಗಿಯಿತು! ಆಹಾ! ಎಂಥಾ ಸೊಬಗಿನ ಕತೆ! ಬರೆದವರು, ಹೆಣ್ಣೋ, ಗಂಡೋ?! ಬ್ರಿಟಿಷ್ ಅಧಿಕಾರಿಯೊಬ್ಬರು ಕನ್ನಡದವರೊಬ್ಬರ ಮನೆಗೆ ಊಟಕ್ಕೆ ಬಂದನಂತೆ. ಒಳ್ಳೇ, ಸುಕ್ರುಂಡೆ-ಪಾಯಸ-ವಡೆಗಳ ಊಟ. ಪಟ್ಟಾಗಿ ಉಂಡ ಅಧಿಕಾರಿ ಖುಷಿಯಿಂದ, ಇಂಗ್ಲೀಷ್‌ನಲ್ಲೇ ಕೇಳಿದ ಊಟ ಬಹಳ ಚೆನ್ನಾಗಿತ್ತು. ಅಂದಹಾಗೆ ಏನಿತ್ತು ಇವತ್ತು ನಿಮ್ಮನೆಯಲ್ಲಿ? ಅತಿಥೇಯರು ಇಂಗ್ಲೀಷಿನಲ್ಲೇ ಉತ್ತರಿಸಿದರು. ಇವತ್ತು ನಮ್ಮ ತಂದೆ ತಿಥಿ ಅದಕ್ಕೇ......... ಕೂಡಲೇ, ಆ ಕನ್ನಡ ಬಾರದ ಪರದೇಶಿ ಹೇಳಿದ್ದೇನು? ಹೌದಾ? ನಾಳೆಗೆ ನಾನು ಮತ್ತೆ ಊಟಕ್ಕೆ ಬರ‍್ತೇನೆ. ನೀವು ಈ ಹಣ ತಗೊಳ್ಳಿ, ಮತ್ತು ನಾಳೆ ನನ್ನ ತಿಥಿ ಮಾಡಿ ಆಯ್ತಾ?! ಅಂತೂ ಅಚ್ಚ ಕನ್ನಡವೇ ಅಪರೂಪವಾದ ಇಂದಿನ ವಾತಾವರಣದಲ್ಲಿ, ಕನ್ನಡ ಎಂದರೆ, ಇನ್ನೂ ಎಂತೆಂಥ ಘಟನೆಗಳು ನಡೆದಾವೋ, ಎಂದು ನನ್ನ ಎದೆ ನಡುಗುತ್ತಲೇ ಇರುತ್ತದೆ!
-ಟಿ.ಎಸ್. ಅಂಬುಜಾ, ಶಿಕ್ಷಕರು, ಉಡುಪಿ
ನವಿರಾದ ಬರಹ ಅಂಬುಜಾ ಅವರೇ... ಮನಕ್ಕೆ ಮುದ ತಂದಿತು
ReplyDelete