Tuesday, March 15, 2011

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ರಹಮತ್ ತರೀಕೆರೆಕನ್ನಡ ಸಾರಸ್ವತ ಲೋಕದ ಮಹತ್ವದ ಸಾಹಿತಿಯೆನ್ನಿ, ಸೂಕ್ಷ್ಮಾತಿಸೂಕ್ಷ್ಮ ತೀಕ್ಷ್ಣಾತಿತೀಕ್ಷ್ಣ ಒಳನೋಟಗಳ ಲೇಖಕನೆನ್ನಿ, ಕನ್ನಡ ಸಂಸ್ಕೃತಿಯ ಪ್ರಖರ ಚಿಂತಕನೆನ್ನಿ, ಕನ್ನಡ ಸಾಹಿತ್ಯ ವಿಮರ್ಶೆಯ ಪ್ರಚಂಡ ಪಂಡಿತನೆನ್ನಿ, ಕನ್ನಡ ಸಾಹಿತ್ಯ ಮೀಮಾಂಸೆಯ ಹೊಸ ಮಿಂಚೆನ್ನಿ, ವೈಚಾರಿಕ ಪ್ರಜ್ಞೆಯ ಹೊಂಬೆಳಕೆನ್ನಿ, ಅಪ್ರತಿಮ ಅನುವಾದಕನೆನ್ನಿ, ಅಸಾಧಾರಣ ಸಂಶೋಧಕನೆನ್ನಿ, ಅಸಾಮಾನ್ಯ ಸಂಪಾದಕನೆನ್ನಿ, ಅಪೂರ್ವ ಇತಿಹಾಸಕಾರನೆನ್ನಿ, ಅನನ್ಯ ಜಾನಪದ ವಿದ್ವಾಂಸನೆನ್ನಿ, ಅದ್ಭುತ ಪ್ರಾಧ್ಯಾಪಕನೆನ್ನಿ, ಅಪರಿಮಿತ ಕಾಳಜಿಯ ಶಿಕ್ಷಣತಜ್ಞನೆನ್ನಿ, ಜನಪರ ನಿಲುವಿನ ಹೋರಾಟಗಾರನೆನ್ನಿ ಅಕ್ಷರಶಃ ಅದು ಡಾ|| ರಹಮತ್ ತರೀಕೆರೆ ಆಗಿರುತ್ತಾರೆ. ಇಷ್ಟೆಲ್ಲವೂ ಆಗಿರುವ ಇಷ್ಟೆಲ್ಲವನ್ನೂ ತನ್ನೊಳಗಿರಿಸಿಕೊಂಡಿರುವ ಇವರು ಇವೆಲ್ಲಕ್ಕಿಂತಲೂ ಮಿಗಿಲಾಗಿ ಮಾನವೀಯ ಅಂತಃಕರಣದ ತುಡಿತವಿರುವ ಲೇಖಕರು. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಂತಿವೆ ೨೦೦೬ ರಲ್ಲಿ ಪ್ರಕಟಗೊಂಡ ತಮ್ಮ ಕತ್ತಿಯಂಚಿನ ದಾರಿ ಕುರಿತು ಆ ಕೃತಿಯಲ್ಲಿ ಸ್ವತಃ
ಡಾ|| ತರೀಕೆರೆ ಅವರೇ ಹೇಳಿಕೊಂಡು ಬರೆದಿರುವ ಈ ಮಾತುಗಳು -
ಇದೊಂದು ಬಿಕ್ಕಟ್ಟಿನ ಕಾಲ. ನನ್ನ ತಲೆಮಾರಿನ ಅನೇಕರ ನಡೆ-ನುಡಿಗಳ ನಡುವೆ ಕಾಣಿಸಿಕೊಳ್ಳುವ ಕಷ್ಟ ಕೂಡ. ನಮ್ಮ ನಾಡಿನ ಚರಿತ್ರೆಯಲ್ಲಿ ಯಾವೊತ್ತೂ ಇಷ್ಟೊಂದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮ ವರ್ಗದ ಅವಕಾಶವಾದೀ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳವಳಿಗಾರರ ದಮನ-ಇವೆಲ್ಲವೂ ನಮ್ಮ ಓದು ಮತ್ತು ಬರಹಗಳ ಮೇಲೆ ಹೇಗೋ ಆವರಿಸಿಕೊಂಡಿವೆ. ಇವನ್ನು ಮರೆತು ಬರೆಯುವಂತಿಲ್ಲ. ಮರೆಯದೆ ಬರೆದರೆ, ಬರೆದ ಬರಹ ಆತ್ಮವಿಶ್ವಾಸ ಕೊಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರುನಿಂತು ಕಾಡುತ್ತದೆ. ಇದನ್ನೇ ಕತ್ತಿಯಂಚಿನ ದಾರಿಯಲ್ಲಿ ನಡೆಯುವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯ ಅಲಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ. ಅದನ್ನು ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ. ಅದನ್ನು ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ ನಮ್ಮ ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ.... ಯಾವೊತ್ತೂ ಇಷ್ಟೊಂದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲವೆನ್ನುವಲ್ಲಂತೂ ಅವರ ಅಂತಃಕರಣ ಬಾಯ್ದೆರೆದು ಮಿಡಿದಿದೆ, ಜೀವಪರ ದನಿಯಾಗಿ ನುಡಿದಿದೆ.
ಇಂಥ ಮಾತುಗಳ ನಿವೇದನೆಯೊಡನೆ ಪ್ರಕಟಗೊಂಡಿರುವ ಡಾ|| ರಹಮತ್ ತರೀಕೆರೆ ಅವರ ಈ ಕತ್ತಿಯಂಚಿನ ದಾರಿ ಕೃತಿಗೆ ಈಗ ೨೦೧೦ ನೇ ಸಾಲಿನ ಪ್ರತಿಷ್ಟಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಒಂದು ಲಕ್ಷ ರೂ.ಗಳ ಗೌರವಧನ ಮತ್ತು ತಾಮ್ರ ಫಲಕದ ಚೆಂದದ ಸ್ಮರಣಿಕೆಯನ್ನು ಒಳಗೊಂಡಿರುವ ದೇಶದ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಬರುವ ೨೦೧೧ ಫೆಬ್ರವರಿ ೧೫ ರಂದು ದೆಹಲಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಡಾ|| ತರೀಕೆರೆ ಅವರಿಗೆ ನೀಡಿ ಗೌರವಿಸಲಾಗಿದೆ. ರಸಋಷಿ ಮಹಾಕವಿ ಕುವೆಂಪು ಮೊದಲ್ಗೊಂಡು (೧೯೫೫) ಲೇಖಕಿ ವೈದೇಹಿ ತನಕ (೨೦೦೯) ಇದುವರೆಗೆ ೫೩ ಮಂದಿ ಕನ್ನಡದ ಮಹತ್ವದ ಸಾಹಿತಿಗಳಿಗೆ ಅವರ ಶ್ರೇಷ್ಟ ಕೃತಿಗಳ ಮೂಲಕ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದ್ದು, ಈಗ ಡಾ|| ತರೀಕೆರೆಯವರು ತಮ್ಮ ಕತ್ತಿಯಂಚಿನ ದಾರಿ ಮೂಲಕ ರಾಷ್ಟ್ರಮಟ್ಟದ ಇಂಥ ಉನ್ನತ ಗೌರವವನ್ನು ಕನ್ನಡಕ್ಕೆ ತಂದು ಕೊಟ್ಟವರಲ್ಲಿ ೫೪ನೆಯವರೆನಿಸಿದ್ದಾರೆ. ಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಮೊಟ್ಟ ಮೊದಲ ಮುಸ್ಲಿಂ ಕನ್ನಡ ಲೇಖಕರೆಂಬ ಹೆಗ್ಗಳಿಕೆ ಕೂಡ!
ಕನ್ನಡ ಸಾರಸ್ವತ ಲೋಕ ಬಹುವಾಗಿ ಮೆಚ್ಚಿಕೊಂಡಿರುವ ಬಹಳ ಕಾಲ ಬಾಳಿಕೆ ಬರುವಂತಹ ಸತ್ವಯುತ ಕೃತಿಗಳನ್ನು ಕೊಟ್ಟಿರುವ ಡಾ|| ತರೀಕೆರೆ ಅವರ ಮಹತ್ವದ ಕೃತಿಯೆಂದೇ ಹೆಸರಾಗಿರುವ ಕತ್ತಿಯಂಚಿದ ದಾರಿ ಹೆಸರೇ ಹೇಳುವಂತೆ ಬಹಳ ಹರಿತವಾದ ಕೃತಿ. ಪ್ರಕಾರದಲ್ಲಿದು ಸಾಹಿತ್ಯ ವಿಮರ್ಶಾ ಸಂಕಲನವಾಗಿದ್ದು, ಬೆಂಗಳೂರಿನ ಅಭಿನವ ಪ್ರಕಾಶನ ಇದನ್ನು ಪ್ರಕಟಿಸಿದೆ. ತಮ್ಮ ಸಾಹಿತ್ಯ ಕೃಷಿಗೆ ಪ್ರೇರಣಾಶಕ್ತಿಯಾದ ಮಡದಿ ಭಾನು ಅವರಿಗೆ ಇದನ್ನು ಅರ್ಪಿಸಲಾಗಿದೆ. ನೋಡಿದೊಡನೆಯೇ ಓದುಗನನ್ನು ತನ್ನತ್ತ ಸೆಳೆದುಕೊಳ್ಳುವಂಥ ಆಕರ್ಷಣೆಯುಳ್ಳ ಈ ಪುಸ್ತಕ ತನ್ನೊಳಗೂ ಅಷ್ಟೇ ಆಕರ್ಷಣೆಯ ಮಹತ್ವದ ಬರಹಗಳನ್ನು ಹೊಂದಿದ್ದು ಹೊಸತಲೆಮಾರಿನ ಸಂಸ್ಕೃತಿ ಚಿಂತಕರಾದ ಡಾ|| ತರೀಕೆರೆ ಅವರ ಲೇಖನಿಯಲ್ಲಿ ಹೊಸ ಹೊಸ ಆಲೋಚನಾ ಕ್ರಮದಿಂದ ಅರಿವಿನ ವ್ಯಾಪ್ತಿಯನ್ನು ಅಗಾಧವಾಗಿ ಹಿಗ್ಗಿಸಿಕೊಂಡು ಬಂದು ಅಪೂರ್ವ ಕೃತಿಯಾಗಿ ರೂಪುಗೊಂಡಿದೆ. ಇಲ್ಲಿ ಕುವೆಂಪು, ಶಿವರಾಮಕಾರಂತ, ಶಾಂತಿನಾಥದೇಸಾಯಿ, ರಾಚಚಂದ್ರಶರ್ಮ, ಪೂರ್ಣಚಂದ್ರತೇಜಸ್ವಿ, ಕೆ.ಎಸ್.ನಿಸಾರ್‌ಅಹಮದ್, ಡಿ.ಆರ್.ನಾಗರಾಜ್, ಮುಂತಾದ ಆಧುನಿಕ ಸಾಹಿತಿಗಳನ್ನು ಕುರಿತು ಹಾಗೂ ದೇವಚಂದ್ರ, ಬಸವಣ್ಣ, ರಾಘವಾಂಕ, ಶಿವಕೋಟ್ಯಾಚಾರ್ಯ, ವಡ್ಡಾರಾಧನೆ, ಶೂನ್ಯಸಂಪಾದನೆ ಮುಂತಾದ ಆಧುನಿಕಪೂರ್ವ ಸಾಹಿತಿಗಳು ಮತ್ತು ಕೃತಿಗಳ ಮೇಲೆ ಕ್ಷ-ಕಿರಣ ಬೀರುವ ಲೇಖನಗಳಿವೆ. ಹಾಗೆಯೇ ಶಂಕರಮೊಕಾಶಿಪುಣೇಕರ, ಪಿ.ಲಂಕೇಶ್, ಕೆ.ವಿ.ಸುಬ್ಬಣ್ಣ, ಎಚ್.ಎಂ.ಚೆನ್ನಯ್ಯ, ಕುಂ.ವೀರಭದ್ರಪ್ಪ ಮುಂತಾದ ವ್ಯಕ್ತಿಗಳ ವಿಶ್ಲೇಷಣಾ ಚಿತ್ರಗಳಿವೆ. ಇಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ನುಡಿಗೋಪುರವನ್ನು ನಿರ್ಮಿಸಿದ ಮನಸ್ಸುಗಳೊಡನೆ ಮುಖಾಮುಖಿಯಾಗಿ ಡಾ|| ತರೀಕೆರೆ ಅವರು ಚರ್ಚಿಸಿರುವ ಪರಿಯಂತೂ ಅದ್ಭುತವಾಗಿದೆ. ಅಂತೆಯೇ ಕನ್ನಡ ಮುಸ್ಲಿಂ ತತ್ವಪದಕಾರರ ಮೇಲೆ ಬೆಳಕು ಚೆಲ್ಲುವ ಎರಡು ಲೇಖನಗಳಿವೆ. ಇದಿಷ್ಟು ಕತ್ತಿಯಂಚಿನ ದಾರಿಯಲ್ಲಿರುವ ಹೂರಣ. ನಿಜಕ್ಕೂ ಇದು ಕನ್ನಡ ಸಾಹಿತ್ಯ ದೇವಿಗೆ ಹೊಸಬಗೆಯ ತೋರಣ.
ಇಂಥ ಪ್ರತಿಭಾವಂತ ಲೇಖಕ ಡಾ|| ರಹಮತ್ ತರೀಕೆರೆ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಡುಗೆ ಎಂಬುದೇ ವಿಶೇಷ. ಈ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಪುಟ್ಟ ಗ್ರಾಮವಾದ ಸಮತಳ ಎಂಬಲ್ಲಿ ೧೯೫೯ ಆಗಸ್ಟ್ ೨೬ ರಂದು ಜನಿಸಿದ ಅವರ ಸ್ವಂತ ಊರು ತರೀಕೆರೆ. ತಂದೆ ಮಹಮದ್‌ದಸ್ತಗೀರ್‌ಸಾಬ್, ತಾಯಿ ಜುಲೇಖಾಬಿ. ವೃತ್ತಿಯಲ್ಲಿ ಕಮ್ಮಾರರು. ಕಿತ್ತುತಿನ್ನುವ ಬಡತನವೇ ಇವರ ಆಸ್ತಿ. ಅನಕ್ಷರತೆ ವಂಶಪಾರಂಪರ್ಯವಾಗಿ ಬಂದ ಬಳುವಳಿ. ಇಂಥ ಕುಟುಂಬದ ಕೂಸು ರಹಮತ್‌ಗೆ ಅಕ್ಷರ ಕಲಿಯುವ ಹಂಬಲ. ಇದಕ್ಕೆ ಒತ್ತಾಸೆಯಾಗಿ ಓದಿನ ದೀಕ್ಷೆ ಕೊಟ್ಟದ್ದು ಜನ್ಮದಾತೆ ಜುಲೇಖಾಬಿಯೇ! ಪ್ರಾಥಮಿಕ ಶಿಕ್ಷಣವನ್ನು ತರೀಕೆರೆಯಲ್ಲೇ ಆರಂಭಿಸಿದ್ದ ಅವರು ಎಸ್.ಎಸ್.ಎಲ್.ಸಿ. ತನಕ ಅಲ್ಲಿಯೇ ಕಲಿತು ಮುಂದಿನ ಶಿಕ್ಷಣವನ್ನು ಜೋಗದ ಸಿರಿ ಬೆಳಕಿನ ನಾಡಾದ ಶಿವಮೊಗ್ಗ ಮತ್ತು ಅರಮನೆಗಳ ನಾಡು ಮೈಸೂರಿನಲ್ಲಿ ಪಡೆದು ಅಲ್ಲಿನ ಪರಿಸರದಲ್ಲೇ ಶಿಕ್ಷಣದ ಬದುಕನ್ನು ಕಟ್ಟಿಕೊಂಡವರು. ಬಂಗಾರದ ಪದಕದೊಡನೆ ಬಿ.ಎ. ಪದವಿ ಗಳಿಸಿದ ಅವರು ಎಂ.ಎ. ಪದವಿಯಲ್ಲಂತೂ ರ‍್ಯಾಂಕುಗಳ ರಾಶಿಯೊಡನೆ ಚಿನ್ನದ ಪದಕಗಳ ಗೊಂಚಲನ್ನೇ ಪಡೆದು ಮೈಸೂರು ವಿ.ವಿ.ಯಲ್ಲಿ ಮಿರಮಿರನೆ ಮಿಂಚಿದ್ದರು. ನಂತರ ತಾವು ಕಲಿತ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಭಾಷಾನಿಕಾಯದ ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಹಂಪಿ ಕನ್ನಡ ವಿ.ವಿ. ಎಂದರೆ ಪಂಚಪ್ರಾಣ. ಅದಕ್ಕೇನೆ ಅವರು ತಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿ ಅದು ಕಿವಿಗೆ ತಾಗುತ್ತಲೇ ನನ್ನ ಬೌದ್ಧಿಕ ಹಸಿವನ್ನು ನೀಗಿಸಿ ನನ್ನನ್ನು ಸಾಹಿತ್ಯಿಕವಾಗಿ ಬೆಳಸಿ ಪ್ರಬುದ್ಧಗೊಳಿಸಿದ ನನ್ನ ತಾಯಿ ಸಮಾನ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದಿರುವುದು. ಹಂಪಿ ಕನ್ನಡ ವಿ.ವಿ. ಬಗ್ಗೆ ಅವರು ಇಟ್ಟುಕೊಂಡಿರುವ ಅಗಾಧ ಅಭಿಮಾನವಿದು. ಇದೇ ಹಂಪಿ ವಿ.ವಿ.ಗೆ ಸೇರಿದ ೮೦ ಎಕರೆ ಜಮೀನನ್ನು ವಿಜಯನಗರ ಪುನಶ್ಚೇತನ ಪ್ರತಿಷ್ಟಾನ ಟ್ರಸ್ಟ್‌ಗೆ ವಹಿಸುವತ್ತ ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಅವರು ತಮ್ಮ ಡೀನ್‌ಶೀಪ್‌ಗೆ ರಾಜೀನಾಮೆ ನೀಡಿ ಪ್ರತಿಭಟಿಸಿದ್ದರು. ಇದು ಹಂಪಿ ಕನ್ನಡ ವಿ.ವಿ. ಮೇಲೆ ಅವರಿಟ್ಟಿರುವ ಕಾಳಜಿಗೊಂದು ನಿದರ್ಶನ. ಇದವರ ಸಾಮಾಜಿಕ ಕಾಳಜಿ ಕೂಡ ಹೌದು.
ಹರಿವ ನೀರಿನಂತಹ ವ್ಯಕ್ತಿತ್ವದ ಡಾ|| ತರೀಕೆರೆ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕರ್ನಾಟಕದಾದ್ಯಂತ ಒಂದು ರೀತಿ ಜಂಗಮನಂತೆ ಸಂಚರಿಸಿ ಜನಜೀವನದ ಒಳ-ಹೊರಗನ್ನೆಲ್ಲಾ ತಮ್ಮ ಒಳಗಣ್ಣಿನಿಂದ ಗುರುತಿಸಿ ಅವರೊಡಲಾಳದ ನೋವು-ನಲಿವುಗಳನ್ನೆಲ್ಲಾ ಬಹು ಹತ್ತಿರಕ್ಕೆ ತಂದುಕೊಂಡು ಸಾಹಿತ್ಯಕೃಷಿ ಮಾಡುತ್ತಿರುವವರು. ಸಾಹಿತ್ಯ ವಿಮರ್ಶೆಯನ್ನು ತಮ್ಮ ಮೊದಲ ಆಯ್ಕೆ ಮಾಡಿಕೊಂಡವರಂತೆ ಬಂದ ಅವರು ಪ್ರತಿ ಸಂಸ್ಕೃತಿ ಎಂಬ ಸಾಹಿತ್ಯ ವಿಮರ್ಶೆಯ ಕೃತಿಯ ಮೂಲಕವೇ ಪ್ರಥಮವಾಗಿ ಸಾರಸ್ವತ ಲೋಕ ಪ್ರವೇಶ ಮಾಡಿದವರು. ತಮ್ಮ ಸೂಕ್ಷ್ಮಸಂವೇದನೆಯ ಚಿಂತನಶೀಲ ಬರಹದಿಂದ ಪ್ರತಿ ಸಂಸ್ಕೃತಿಯಲ್ಲಿ ಭರವಸೆಯ ಬೆಳಕನ್ನು ಮೂಡಿಸಿದ್ದ ಅವರು ತಮ್ಮ ಮರದೊಳಗಣ ಕಿಚ್ಚು ಕೃತಿಯಲ್ಲಿ ಅದನ್ನು ಮತ್ತಷ್ಟು ಪ್ರಜ್ವಲಿಸಿದ್ದಾರೆ. ಈ ಬೃಹತ್ ಕೃತಿ ಅವರ ಮಹಾಪ್ರಬಂಧವೂ ಹೌದು. ಹೀಗೆ ಶುರುವಾದ ಅವರ ಬರಹದ ದಾರಿ ಬರಬರುತ್ತಾ ಮತ್ತಷ್ಟು ಮಗದಷ್ಟು ದುಪ್ಪಟ್ಟು ಗಟ್ಟಿಯಾಗುತ್ತಾ ಬಹಳ ಗಟ್ಟಿ ಕೃತಿಗಳನ್ನು ಕನ್ನಡ ಸಾಹಿತ್ಯ ಭಂಡಾರಕ್ಕೆ ನೀಡುತ್ತಾ ಬಂದಿರುವ ಹಿರಿಮೆ ಅವರದು. ಅಪ್ಪ ಹಾಕಿದ ಆಲದ ಮರವೆಂಬಂತೆ ಒಂದಕ್ಕೇ ಅಂಟಿಕೊಳ್ಳದ ವೈವಿಧ್ಯಮಯ ಆಸಕ್ತಿಯ ತರೀಕೆರೆ ಅವರ ಸಾಹಿತ್ಯ ಸಹ ವೈವಿಧ್ಯಮಯವಾದದ್ದೇ. ತಮ್ಮ ಆಲೋಚನೆಗಿಂತ ಭಿನ್ನವಾಗಿ ಜನರ ಆಲೋಚನಾಕ್ರಮವನ್ನು ಅನುಸರಿಸಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅರಿತ ಒಂದು ವಿಶಿಷ್ಟ ಮಾದರಿ ಅವರದ್ದಾಗಿದೆ.
ಡಾ|| ತರೀಕೆರೆ ಅವರು ನೈಜೀರಿಯಾದ ಲೇಖಕ ಗೂಗಿ ಥಿಯೋಂಗ್‌ನ ಕೃತಿಯನ್ನು ವಸಾಹತುಶಾಹಿ ಮತ್ತು ವಿಮೋಚನಾ ಪ್ರಜ್ಞೆ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ತಂದಿರುವ ಬಗೆಯಾಗಲಿ, ಕನ್ನಡವು ಸಂಸ್ಕೃತ ಕಾವ್ಯ ಮೀಮಾಂಸೆಯನ್ನು ಅನುಕರಣೆ ಮಾಡುತ್ತಿರುವುದನ್ನು ಪ್ರಶ್ನಿಸಿ ನಾಡಿನ ಗಮನ ಸೆಳೆದ ಅವರು ಕನ್ನಡದ ಪರಂಪರೆಯ ನೆಲೆಯಿಂದಲೇ ಕನ್ನಡ ಸಾಹಿತ್ಯ ಮೀಮಾಂಸೆಯನ್ನು ಕಟ್ಟುವತ್ತ ಸಂಪಾದಿಸಿರುವ ಕನ್ನಡ ಮಾತು ತಲೆಯೆತ್ತುವ ಬಗೆ ಹಾಗೂ ಅವರೇ ಬರೆದಿರುವ ಇಲ್ಲಿ ಯಾರೂ ಅಮುಖ್ಯರಲ್ಲ ಕೃತಿಗಳು ರಚನೆಯಾಗಿರುವ ಪರಿ ಇದೆಯಲ್ಲ ಅದು ಜ್ಞಾನಕೋಶದ ವಿಸ್ತಾರದ ದೃಷ್ಟಿಯಿಂದ ಬಹಳ ವಿಶಿಷ್ಟವೆನಿಸುವಂತಾದ್ದು. ಹಾಗೆಯೇ ನಾಥಪಂಥ ಮತ್ತು ಸೂಫಿ ಪರಂಪರೆಗಳಲ್ಲಿ ಅತೀವ ಆಸಕ್ತಿಯುಳ್ಳ ಅವರ ಕರ್ನಾಟಕದ ಸೂಫಿಗಳು ಮತ್ತು ಕರ್ನಾಟಕದ ನಾಥಪಂಥ ಕೃತಿಗಳೆರಡೂ ಕನ್ನಡ ನಾಡಿನ ಸಂಸ್ಕೃತಿ ಪರಂಪರೆಯನ್ನು ವಿಭಿನ್ನ ದೃಷ್ಟಿಕೋನದಲ್ಲಿ ತಿಳಿಸುವ ಕರ್ನಾಟಕದ ಸಾಂಸ್ಕೃತಿಕ ಅಧ್ಯಯನದ ಅದ್ಭುತ ಕೃತಿಗಳೇ ಆಗಿವೆ. ಬಿಜಾಪುರದ ಆದಿಲ್‌ಶಾಹಿಗಳ ಕಾಲದಲ್ಲಿ ಬರೆದದ್ದೆಂದು ಹೇಳಲಾಗುವ ಕಿತಾಬ್‌ನವರಸ್ ಸಂಗೀತ ಕೃತಿ ಕುರಿತು ಮತ್ತು ಅಜ್ಞಾತಳಾಗಿಯೇ ಅಮರಳಾಗಿರುವ ಹಿಂದೂಸ್ಥಾನಿ ಸಂಪ್ರದಾಯದ ಖ್ಯಾತಗಾಯಕಿ ಅಮೀರಬಾಯಿ ಕರ್ನಾಟಕಿ ಅವರ ಬಗ್ಗೆ ಹಾಗೂ ಬಾಬಾಬುಡನ್‌ಗಿರಿ ಕುರಿತು ಅವರು ಬರೆದಿರುವ ಸಂಶೋಧನಾ ಲೇಖನಗಳಂತೂ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದಂತಹವು. ತಮಗೆ ಬೇಕೆನಿಸಿದ್ದನ್ನು ಬೇಕಾದಷ್ಟು ತನ್ನ ಸುತ್ತಲ ಪರಿಸರದಲ್ಲಿ ಹೀರಿಕೊಳ್ಳುವ ತಾಯಿ ಬೇರುಗಳುಳ್ಳಂತಹ ಸೂಕ್ಷ್ಮ ಸಂವೇದನೆ, ಸೂಕ್ಷ್ಮ ಮನಸ್ಸಿನ ಡಾ|| ತರೀಕೆರೆ ಅವರು ತಮ್ಮ ಮುಸ್ಲಿಂ ಹಿನ್ನೆಲೆಯನ್ನು ದುಡಿಸಿಕೊಂಡೇ ವಿಶೇಷವಾಗಿ ಕನ್ನಡ ಗದ್ಯ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಅಪ್ಪಟ ಕನ್ನಡಾಭಿಮಾನಿ. ಡಾ|| ತರೀಕೆರೆಯವರ ಮತ್ತೊಂದು ವಿಶಿಷ್ಟ ಗುಣವೆಂದರೆ ಕನ್ನಡದ ಯುವ ಲೇಖಕ-ಲೇಖಕಿಯರು ಬರೆದಿದ್ದನ್ನೆಲ್ಲಾ ಆಳವಾಗಿ ಅಧ್ಯಯನ ಮಾಡಿ ಅವರುಗಳ ಬಗ್ಗೆ ವ್ಯಾಪಕವಾಗಿ ಬರೆಯುವುದು. ಹಾಗೆಯೇ ಸಂಸ್ಕೃತಿ ವಿಮರ್ಶೆ ಹಾಗೂ ತಿರುಗಾಟ ಅವರ ಪ್ರೀತಿಯ ವಿಷಯಗಳಾಗಿದ್ದು, ದೇಸಿ ಚಿಂತನೆಯ ಆಲೋಚನೆಯ ಕ್ರಮವನ್ನು ತಳಮಟ್ಟದಿಂದಲೇ ರೂಪಿಸುವತ್ತ ಅವರದು ವಿಶೇಷ ಆಸಕ್ತಿ. ಹಾಗಾಗಿ ಈ ವಿಷಯದಲ್ಲಿ ಅವರು ಪ್ರಮುಖ ದೇಸಿ ಚಿಂತಕರೆನಿಸಿದ್ದಾರೆ. ಅಂತೆಯೇ ಧಾರ್ಮಿಕ ಮೂಲಭೂತವಾದದ ವಿರುದ್ಧ ದನಿಯೆತ್ತುವಲ್ಲಿಯೂ ಅವರದು ದಿಟ್ಟ ನಡೆಯಾಗಿದ್ದು ಈ ದಿಶೆಯಲ್ಲಿ ಅನೇಕ ಚರ್ಚೆಗಳಿಗೆ ಅವರು ಕಾರಣಕರ್ತರೂ ಆಗಿದ್ದಾರೆ.
ಪ್ರಮುಖ ಕೃತಿಗಳು : ಪ್ರತಿ ಸಂಸ್ಕೃತಿ (ಸಾಹಿತ್ಯ ವಿಮರ್ಶೆ) ಐವರು ಹೇಳಿದ ಜನಪದ ಕಥೆಗಳು (ಜನಪದ) ೧೯೯೩, ಮರದೊಳಗಣ ಕಿಚ್ಚು (ಸಂಸ್ಕೃತಿ ಚಿಂತನೆ) ೧೯೯೭, ಕರ್ನಾಟಕದ ಸೂಫಿಗಳು (ಸಂಶೋಧನೆ) ೧೯೯೭, ವಸಾಹತು ಪ್ರಜ್ಞೆ ಮತ್ತು ವಿಮೋಚನೆ (ಅನುವಾದ) ೧೯೯೮, ಕವಿರಾಜಮಾರ್ಗ: ಸಾಂಸ್ಕೃತಿಕ ಮಹಾಮುಖಿ (ಸಂಪಾದನೆ) ೨೦೦೦, ಅಂಡಮಾನ್ ಕನಸು (ಪ್ರವಾಸ ಕಥನ) ೨೦೦೧, ಕುಮಾರವ್ಯಾಸ ಭಾರತ: ಸಾಂಸ್ಕೃತಿಕ ಮಹಾಮುಖಿ (ಸಂಪಾದನೆ) ೨೦೦೩, ಸಾಂಸ್ಕೃತಿಕ ಅಧ್ಯಯನ (ವಿಶ್ಲೇಷಣೆ) ೨೦೦೪, ಅಕ್ಕನ ವಚನಗಳು: ಸಾಂಸ್ಕೃತಿಕ ಮಹಾಮುಖಿ (ಸಂಪಾದನೆ) ೨೦೦೫, ಇಲ್ಲಿ ಯಾರೂ ಅಮುಖ್ಯರಲ್ಲ (ಕನ್ನಡ ಸಾಹಿತ್ಯ ಮೀಮಾಂಸೆ ೨) ೨೦೦೫, ಕನ್ನಡಮಾತು ತಲೆಯೆತ್ತುವ ಬಗೆ (ಕನ್ನಡ ಸಾಹಿತ್ಯ ಮೀಮಾಂಸೆ ೧) ೨೦೦೦, ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ), ಕರ್ನಾಟಕದ ನಾಥಪಂಥ (ಸಂಶೋಧನೆ) ೨೦೦೬, ಹೊಸತಲೆಮಾರಿನ ತಲ್ಲಣ (ಸಂಪಾದನೆ), ಧರ್ಮಪರೀಕ್ಷೆ (ವೈಚಾರಿಕ ಬರಹಗಳು), ಕನ್ನಡ ಸಂಶೋಧನೆ ತಾತ್ವಿಕ ವಿಚಾರ (ಚಿಂತನೆ), ಇಂಗ್ಲೀಷ್ ಗೀತಗಳು: ಸಾಂಸ್ಕೃತಿಕ ಮಹಾಮುಖಿ (ಸಂಪಾದನೆ) ೨೦೦೭, ಲೋಕವಿರೋಧಿಗಳ ಜತೆಯಲ್ಲಿ (ಸಂದರ್ಶನಗಳು) ೨೦೦೮, ಚಿಂತನೆಯ ಪಾಡು, ಮಲೆಗಳಲ್ಲಿ ಮದುಮಗಳು (ಸಾಂಸ್ಕೃತಿಕ
ಮುಖಾಮುಖಿ) ೨೦೧೦ ಮುಂತಾದವು ಡಾ|| ತರೀಕೆರೆ ತರೀಕೆರೆ ಅವರ ಮುಖ್ಯ ಕೃತಿಗಳು. ಅವರು ಕನ್ನಡ ಅಧ್ಯಯನ ಎಂಬ ತ್ರೈಮಾಸಿಕ ಪತ್ರಿಕೆಯ ಸಂಪಾದಕರೂ ಆಗಿದ್ದಾರೆ.
ಪ್ರಮುಖ ಪ್ರಶಸ್ತಿ ಪುರಸ್ಕಾರಗಳು : ಪ್ರತಿಸಂಸ್ಕೃತಿ, ಕರ್ನಾಟಕದ ಸೂಫಿಗಳು, ಅಂಡಮಾನ್ ಕನಸು ಕೃತಿಗಳಿಗೆ ೧೯೯೩ ಮತ್ತು ೧೯೯೮ ಹಾಗೂ ೨೦೦೦ ನೇ ವರ್ಷಳಲ್ಲಿ ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೮ ನೇ ಸಾಲಿನ ಶಿವಮೊಗ್ಗ ಕರ್ನಾಟಕ ಸಂಘದ ಪಿ. ಲಂಕೇಶ್ ಪ್ರಶಸ್ತಿ, ಒಟ್ಟಾರೆ ಸಾಹಿತ್ಯ ಸೇವೆಗಾಗಿ ೨೦೦೮ ನೇ ಸಾಲಿನ ಜಿ.ಎಸ್.ಎಸ್. ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಹಾ.ಮಾ. ನಾಯಕ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳಿಗೆ ಡಾ|| ತರೀಕೆರೆ ಅವರು ಭಾಜನರಾಗಿದ್ದು, ಇವೆಲ್ಲಕ್ಕೂ ತಿಲಕವಿಟ್ಟಂತೆ ಇದೀಗ ಇವರ ಕತ್ತಿಯಂಚಿನ ದಾರಿ ಕೃತಿಗೆ ಪ್ರತಿಷ್ಟಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

No comments:

Post a Comment