Tuesday, May 17, 2011

ಕುಂ.ವೀರಭದ್ರಪ್ಪ ಅವರ ಕೂರ್ಮಾವತಾರಕಥೆಯ ಹೊರ ಆಕಾರ ಅಥವಾ ಆಕೃತಿಯ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ಅದು ಒಳಗೊಳ್ಳುವ ಅನುಭವ ಸಮೃದ್ಧಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡು ಬರೆಯುತ್ತಿರುವ ಕುಂ.ವೀರಭದ್ರಪ್ಪನವರು ಓರ್ವ ಮುಖ್ಯ ಸಮಕಾಲೀನ ಗದ್ಯ ಬರಹಗಾರರು. ಕನ್ನಡದ ಬಹುತೇಕ ಮಧ್ಯಮವರ್ಗದ ಓದುಗರು ಬೆಚ್ಚಿಬೀಳುವಂಥ ಹಲವು ಕಥೆಗಳನ್ನು, ಅನುಭವಚಿತ್ರಗಳನ್ನು ಅವರು ನೀಡಿದ್ದಾರೆ. ಕುಂವೀ ಅವರ ಕಥೆಗಳಲ್ಲಿ ಪ್ರಜ್ಞಾಪೂರ್ವಕ ತಂತ್ರಗಾರಿಕೆ ಅಥವಾ ಕುಸುರಿ ಕೆಲಸ ಕಾಣುವುದಿಲ್ಲ. ಸ್ವಚ್ಚಂದತೆ, ಉತ್ಪ್ರೇಕ್ಷೆ, ಅತಿಶಯೋಕ್ತಿ ಇವು ಕುಂವೀ ಬರವಣಿಗೆಯ ಮುಖ್ಯ ಲಕ್ಷಣಗಳು. ಹಾಸ್ಯ ವಿನೋದಗಳು ಕುಂವೀ ಕಥನಗಳಲ್ಲಿ ಕೇವಲ ಪರಿಣಾಮಕ್ಕೆಂಬಂತೆ ಬಳಕೆಯಾಗುವ ಕೃತಕ ಸರಕುಗಳಲ್ಲ. ಅವು ಲೇಖಕರ ಭಾಷೆ ಮತ್ತು ಮನೋಧರ್ಮಗಳಲ್ಲೇ ಅಂತರ್ಗತವಾದಂಥವು. ’ರೂಪ’ದ ’ತರ್ಕದ ಸಾಮಾನ್ಯ ನಿರೀಕ್ಷೆಗಳನ್ನು ಮೀರಿ ತಾವು ಕಟ್ಟಿಕೊಡುವ ಅನುಭವಸತ್ವದಿಂದಲೇ ಓದುಗರ ಅರಿವನ್ನು ಹಿಗ್ಗಿಸಬೇಕೆಂಬ ಮಹತ್ವಾಕಾಂಕ್ಷೆ ಅವರದು. ಪ್ರಬಂಧವೆಂಬ ಲಹರಿಯೇ ಪ್ರಧಾನವಾದ ಬರವಣಿಗೆಗೆ ಈ ಮನೋಭಾವವು ಅಂಥ ತೊಡಕಾಗುವುದಿಲ್ಲ. ಇನ್ನು ಕಾದಂಬರಿಯ ಗಾತ್ರ ಮತ್ತು ವಿಸ್ತಾರ ಈ ಲಹರಿಯನ್ನು ತೂಗಿಸಿಕೊಂಡು ಹೋಗಬಲ್ಲ ಸಾಮರ್ಥ್ಯವನ್ನು ತನ್ನ ಪ್ರಕಾರದಲ್ಲೇ ಸ್ವಲ್ಪಮಟ್ಟಿಗೆ ಒಳಗೊಂಡಿರುವಂಥದ್ದು. ಕುಂವೀ ಬರವಣಿಗೆ ಹೆಚ್ಚಾಗಿ ಈ ಎರಡು ಪ್ರಕಾರಗಳಿಗೆ ಒಲಿದಿರುವುದೂ ಕಾಕತಾಳೀಯವಾಗಿರಲಾರದು. ಅವರ ಹೆಚ್ಚಿನ ಸಣ್ಣ ಕಥೆಗಳು ಆ ದಿಕ್ಕಿನತ್ತಲೇ ಧಾವಿಸುವಂತೆ ಕಾಣಿಸುವುದಕ್ಕೂ ಪ್ರಾಯಶಃ ಇದೇ ಕಾರಣವಿರಬೇಕು. ಕುಂವೀ ಅವರ ಹೆಚ್ಚಿನ ಕತೆಗಳು ತಾವು ಧಾರಣ ಮಾಡುವುದಕ್ಕಿಂತ ಹೆಚ್ಚಿನದನ್ನು ಒಳಗೊಳ್ಳುತ್ತವೆ ಎಂದು ಅನ್ನಿಸಿದರೆ ಆಶ್ಚರ್ಯವಿಲ್ಲ. ಇಷ್ಟೆಲ್ಲ ಹೇಳಿದ ಮೇಲೆಯೂ ಕುಂವೀ ಬರವಣಿಗೆಗೆ ತನ್ನದೇ ಆದ ಮೋಡಿ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಕೆಲವೆಡೆ ಕಥೆಗಾರರು ಹೇಳುವ ವಿಷಯಗಳಲ್ಲಿ, ಹೆಚ್ಚಿನ ಸಂದರ್ಭಗಳಲ್ಲಿ ಅವರ ಅನನುಕರಣೀಯ ನಿರೂಪಣಾ ಧಾಟಿಯಲ್ಲಿ ಕುಂವೀ ಬರವಣಿಗೆ ನಮ್ಮನ್ನು ಆವರಿಸಿಕೊಳ್ಳುವಂತಿರುತ್ತದೆ.
ಕುಂವೀ ಅವರ ಹೆಚ್ಚಿನ ಬರವಣಿಗೆಯು ಕೆಳವರ್ಗದ ಬದುಕಿನ ಸ್ಥಿತಿ ಮತ್ತು ಸಾಧ್ಯತೆಗಳ ನಿರೂಪಣೆ. ಈ ದೃಷ್ಟಿಯಿಂದ "ಕೂರ್ಮಾವತಾರ" ಕುಂವೀ ಕಥಾಪ್ರಪಂಚದಲ್ಲಿ ತುಸು ವಿಭಿನ್ನವಾದ ಕೃತಿ. ಯಾವುದೋ ಕಛೇರಿಯಲ್ಲಿ ಸಾಮಾನ್ಯ ಕಾರಕೂನರಾಗಿದ್ದ, ಯಾರೊಬ್ಬರಿಗೂ ಅಷ್ಟಾಗಿ ಪರಿಚಯವಿರದಿದ್ದ ಆನಂದ ರಾಯರು ಎಂಬ ವ್ಯಕ್ತಿಯ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಅವರ ತಂದೆ ರಂಗನಾಥರಾಯರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಜೈಲುವಾಸ ಅನುಭವಿಸಿದ್ದ ಗಾಂಧಿವಾದಿ. ಆನಂದರಾಯರ ಮೇಲೂ ಗಾಂಧಿಯ ಪ್ರಭಾವ ಅಷ್ಟಿಷ್ಟು ಇತ್ತು. "ತಂದೆಯ ಜೊತೆಗೊಮ್ಮೆ ಗಾಂಧೀಜಿಯವರನ್ನು ನೋಡಿದ್ದ ಫಲವಾಗಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರು. ಕಡತಗಳೇ ತಮ್ಮ ಸರ್ವಸ್ವವೆಂದು ತಿಳಿದಿದ್ದ ಅವರು ತಮ್ಮ ಜೀವನದಲ್ಲಿ ಸೂರ್ಯೋದಯ, ಸೂರ್ಯಾಸ್ತಗಳನ್ನು ನೋಡಿದ್ದು ಕಡಿಮೆ. ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತಿದ್ದರು. ಯಾರ ಗೊಡವೆಗೂ ಹೋಗದೆ ತಲೆತಗ್ಗಿಸಿಕೊಂಡು ಕಛೇರಿಗೆ ಬರುತ್ತಿದ್ದರು; ತಲೆತಗ್ಗಿಸಿಕೊಡು ಮನೆಗೆ ಮರಳುತ್ತಿದ್ದರು. ತಲೆ ತಗ್ಗಿಸಿಕೊಂಡೇ ಊಟಮಾಡುತ್ತಿದ್ದರು. ಊಟ ಮುಗಿದೊಡನೆ ತಮ್ಮ ಕೋಣೆ ಸೇರಿಕೊಂಡು ವ್ಯಾಸಪೀಠದಲ್ಲಿ ಸತ್ಯಾನ್ವೇಷಣೆ ಕೃತಿಯನ್ನೊ, ಭಗವದ್ಗೀತೆಯನ್ನೊ ಅಥವಾ ವೇದೋಪನಿಷತ್ತು, ಪುರಾಣಗ್ರಂಥಗಳನ್ನಿರಿಸಿಕೊಂಡು ಅಧ್ಯಯನ ಮಾಡುತ್ತಿದ್ದರು." ತನ್ನ ಅಂಗಾಂಗಗಳನ್ನೆಲ್ಲ ತನ್ನ ಚಿಪ್ಪಿನೊಳಕ್ಕೆ ಸೆಳೆದುಕೊಂಡು, ತನ್ನ ಮೃದುತ್ವವನ್ನು ಒಳಗೆ ಇಟ್ಟುಕೊಂಡು ಒರಟು ಭಾಗವನ್ನು ಮಾತ್ರ ತೋರಿಸುವಂಥ, ತನ್ನ ಪಾಡಿಗೆ ತಾನು ನಿರುಪದ್ರವಿಯಾಗಿ ಬಾಳುವಂಥ ಆಮೆಯ ಹೋಲಿಕೆಯೊಂದನ್ನು "ಕೂರ್ಮಾವಾತರ" ಎಂಬ ಕಥಾಶೀರ್ಷಿಕೆಯು ಸೂಚಿಸುತ್ತಿದೆಯೆ? ಹಾಗೆಂದು ಕುಂವೀ ಕಥೆಯು ಆನಂದರಾಯರ ವ್ಯಕ್ತಿತ್ವವನ್ನು ಭಾವುಕವಾಗಿ, ಏಕಮುಖವಾಗಿ ಚಿತ್ರಿಸುವುದಿಲ್ಲ. ಟಿಪಿಕಲ್ ಕುಂವೀ ಎನ್ನಬಹುದಾದ ನಿರೂಪಣೆಯಲ್ಲಿ ಮೇಲು ನೋಟಕ್ಕೆ ಗಾಂಧಿಯ ಒಂದು ಮುಖವನ್ನು ಹೋಲುವಂಥ ಆನಂದರಾಯರ ವ್ಯಕ್ತಿತ್ವದ ಇತರ ಪದರಗಳನ್ನು ಕಥೆ ಹೀಗೆ ಅನಾವರಣಗೊಳಿಸುತ್ತದೆ: "ಉಂಡು ಉಪವಾಸಿಯಂತೆಯೂ, ಬಳಸಿ ಬ್ರಹ್ಮಚಾರಿಯಂತೆಯೂ ಬದುಕುತ್ತಿದ್ದ ರಾಯರಿಗೆ ತಮಗೊಬ್ಬ ಮಗನಿರುವನೆಂಬ ಸಂಗತಿಯೂ ಸರಿಯಾಗಿ ತಿಳಿದಿರಲಿಲ್ಲ. ತ್ರಿಭುಜದ ಮೂರು ಮೂಲೆಗಳಂತೆ ಪರಸ್ಪರವಿರುದ್ಧ ದಿಸೆಯಲ್ಲಿ ನೋಡುತ್ತ ಆ ಮುವ್ವರು ಒಂದು ಕುಟುಂಬವನ್ನು ಪಾಲಿಸಿ ಪೋಷಿಸುತ್ತಿದ್ದರು....ಹೆಂಡತಿ ಮತ್ತು ಮಗನಿಗಿಂತ ಕಛೇರಿಯ ಕಡತಗಳನ್ನೇ ಬಹುವಾಗಿ ಪ್ರೀತಿಸುತಿದ್ದ ರಾಯರು ತಮ್ಮನ್ನು ತಾವು ಎಂದೂ ಕನ್ನಡಿಯಲ್ಲಿ ನೋಡಿಕೊಂಡವರಾಗಿರಲಿಲ್ಲ." ಮನೆಯಲ್ಲಿ ಹೆಂಡತಿ, ಮಗ ಇದ್ದಾರೆನ್ನುವುದು ಜ್ಞಾಪಕವಿದೆಯೆ ಎಂದು ಅವರ ಹೆಂಡತಿಯು ಅವರನ್ನು ಒಮ್ಮೆ ನೋವಿನಿಂದ ಕೇಳಿದ್ದರು. ತಮ್ಮ ಹೆಂಡತಿಯು ಕಾಲುಜಾರಿ ಪುಷ್ಕರಣಿಯಲ್ಲಿ ಬಿದ್ದು ದುರ್ಮರಣಕ್ಕೀಡಾದಾಗಲೂ ಆನಂದರಾಯರು ಸಮಾಜಚಿಂತನೆಯಿಂದ ವಿಮುಖರಾಗಿರಲಿಲ್ಲ. "ಮಗ ಮೃತ್ಯುಂಜಯನಿಗೆ ತಮ್ಮ ತಂದೆಯವರಿಗೆ ಹೃದಯ ಇರುವುದರ ಬಗ್ಗೆ ಅನುಮಾನವಾಯಿತು. ಅವರ ಕಣ್ಣಿಂದ ಒಂದಾದರೂ ಹನಿ ಉದುರಬಹುದೆಂದು ನಿರೀಕ್ಷಿಸಿದ್ದ ಆತನು ನಿರಾಸೆಗೊಂಡನು. ತಮ್ಮ ತಾಯಿ ಜುಗುಪ್ಸೆಗೊಂಡೇನಾದರೂ ಆತ್ಮಹತ್ಯೆ ಮಾಡಿಕೊಂಡಿರಬಹುದೆ ಎಂದು ಅನುಮಾನ ಪಟ್ಟನು. ಈ ಕುರಿತು ಜಗಳವಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದೇ ಆತನು ಅದೇ ಬಡಾವಣೆಯ ನಿವಾಸಿಗನಾದ ಮುಕುಂದ ಎಂಬಾತನನ್ನು ಪರಿಚಯ ಮಾಡಿಕೊಂಡು ಆತನ ಮಾಲೀಕತ್ವದ ಮಾಂಸದಂಗಡಿಯಲ್ಲಿ ಕೆಲಸ ಮಾಡತೊಡಗಿದನು." ನಿವೃತ್ತರಾದ ಮೇಲೆ ದೈಹಿಕವಾಗಿಯೂ ಗಾಂಧೀಜಿಯನ್ನು ತುಸುಮಟ್ಟಿಗೆ ಹೋಲುತ್ತಿದ್ದ, ಗಾಂಧೀತನವನ್ನು ತಮ್ಮ ಮೇಲೆ ಹಲವು ರೀತಿಗಳಲ್ಲಿ ಆರೋಪಿಸಿಕೊಂಡಿದ್ದ ಆನಂದರಾಯರಿಗೆ ಇದರಿಂದ ತುಂಬ ನೋವಾಗುತ್ತದೆ. ಏಕಕಾಲದಲ್ಲಿ ಮಗನ ಮೇಲೂ ಮುಕುಂದನ ಮೇಲೂ ಸಿಟ್ಟು ಬರುತ್ತದೆ. ಕಡೆಗೆ ಪ್ರಾಣಿದಯಾಸಂಘದ ಗೌರವಾಧ್ಯಕ್ಷ ಪದವಿಗೆ ರಾಜೀನಾಮೆ ನೀಡುತ್ತಾರೆ. ಹೀಗೆ ಕುಂವೀ ಅವರ ಕಥೆಯು ಸಾತ್ವಿಕ ಎಂದು ಮೇಲು ನೋಟಕ್ಕೆ ಗೋಚರವಾಗುವಂಥ ಒಂದು ಜೀವನಕ್ರಮವನ್ನೇ ತುಸು ಸಮಸ್ಯಾತ್ಮಕವಾಗಿ ಗ್ರಹಿಸಲು ಪ್ರಯತ್ನಿಸುತ್ತದೆ. ಅಷ್ಟೇ ಅಲ್ಲ, ಗಾಂಧೀಮಾರ್ಗವೆಂದು ಹೇಳಲಾಗುವ ಕೆಲವು ಸರಳ ಗೃಹೀತಗಳನ್ನು ಲಘುಧಾಟಿಯಲ್ಲೇ ವಿಮರ್ಶಿಸ ಬಯಸುತ್ತದೆ. ಆನಂದರಾಯರ ಜೀವನವನ್ನು ಗಾಂಧೀಜಿಯ ಸಮಗ್ರ ಜೀವನಕ್ಕೆ ಹೋಲಿಸುವಂಥ ಸರಳೀಕರಣದಿಂದ ಕುಂವೀ ಕಥೆ ತುಂಬ ದೂರದಲ್ಲಿದೆ. ಆದರೆ ಆನಂದರಾಯರ ಜೀವನದ ಕೆಲವು ಮುಖಗಳನ್ನು ವಿಮರ್ಶೆಗೆ ಒಡ್ಡುವ ಪರಿಕ್ರಮದಲ್ಲೇ ಗಾಂಧೀಜಿಯ ಬದುಕಿನ ಕೆಲವು ಮುಖಗಳನ್ನೂ ಪರ್ಯಾಯವಾಗಿ ವಿಮರ್ಶಿಸ ಬಯಸುವ ಲೇಖಕರ ಸೂಕ್ಷ್ಮ ಇರಾದೆಯನ್ನು ಗಮನಿಸದೇ ಇರಲು ಸಾಧ್ಯವಿಲ್ಲ. ಕೂರ್ಮಾವತಾರದ ಪುರಾಣದ ಸ್ಮೃತಿಯನ್ನು ಜಾಗೃತಗೊಳಿಸಿಯೂ ಲೇಖಕರು ಆ ಪುರಾಣಕ್ಕೆ ಸಂವಾದಿಯೆಂಬಂತೆ ಸಮಕಾಲೀನ ಸಂಗತಿಯೊಂದನ್ನು ವೈಭವೀಕರಿಸುವ ಪ್ರಯತ್ನದಲ್ಲಿದ್ದಾರೆ ಅನ್ನಿಸುವುದಿಲ್ಲ. ಗಾಂಧೀಜಿಯ ಗೌರವಪೂರ್ಣ ಪ್ರಸ್ತಾಪ ಇದ್ದರೂ ಅದು ಅವಿಮರ್ಶಾತ್ಮಕವಾಗಿಯೇನೂ ಇಲ್ಲ. ಸ್ವಾತಂತ್ರ್ಯ ಚಳುವಳಿಯ ಗಾಂಧೀಜಿಯ ಸ್ಪಷ್ಟ ಸ್ವರೂಪ ಸ್ವಾತಂತ್ರ್ಯೋತ್ತರ ಪೀಳಿಗೆಗೆ ಇಲ್ಲ. ಅಲ್ಲದೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇಡಿಯಾಗಿ ಗಾಂಧೀಜಿಯ ನೆನಪನ್ನು ಉದ್ದೀಪ್ತಗೊಳಿಸಬಲ್ಲ ವ್ಯಕ್ತಿಗಳೂ ಇಲ್ಲ. ಗಾಂಧೀಜಿಯ ತುಂಬು ವ್ಯಕ್ತಿತ್ವ ಇಂದು ಅದರ ಛಿದ್ರ ರೂಪಗಳಲ್ಲಿ ಕೆಲವು ವ್ಯಕ್ತಿಗಳಲ್ಲಿ ಕಾಣಿಸುವುದುಂಟು. ಅಂಥ ಒಂದು ಸೀಮಿತ, ಛಿದ್ರ ರೂಪವಾಗಿ ಆನಂದರಾಯರ ಪಾತ್ರವನ್ನು ಪರಿಭಾವಿಸಿಕೊಳ್ಳಬಹುದು. ಆ ಮಾದರಿಯ ಪರಿಶೀಲನೆ ಎಂಬಂತೆ ಪ್ರಸ್ತುತ ಕುಂವೀ ಕಥೆಯನ್ನು ಓದಲು ಸಾಧ್ಯವಿದೆ.
ಕಥೆಯ ಮಟ್ಟದಲ್ಲಿ ಕೂರ್ಮಾವತಾರದ ಪ್ರಸ್ತಾಪಕ್ಕೆ ಒಂದು ಸದ್ಯದ ಪ್ರಸ್ತುತತೆಯೂ ಇದೆ. ರಾಯರ ಮೊಮ್ಮಗನು ಒಂದು ದಿನ ಪುಟ್ಟ ಆಮೆಯೊಂದನ್ನು ಮನೆಗೆ ತರುತ್ತಾನೆ. ರಾಯರು ಅದನ್ನು ಜತನದಿಂದ ಜೋಪಾನ ಮಾಡುತ್ತಾರೆ. ಅವರ ಆರೈಕೆಯಿಂದ ಆಮೆಯು ಚೆನ್ನಾಗಿ ಬೆಳೆಯುತ್ತದೆ. ಸ್ವತಃ ರಾಯರೇ ಅದಕ್ಕೆ ಹುಳುಗಳನ್ನೂ ಕಪ್ಪೆಗಳನ್ನೂ ಆಹಾರವಾಗಿ ಒದಗಿಸಲಾರಂಭಿಸುತ್ತಾರೆ. ಪ್ರಾಣಿದಯಾಸಂಘ ನೆನಪಾದರೂ ದೈವಾಂಶವುಳ್ಳ ಆಮೆಗೆ ಜಲಚರಗಳನ್ನು ಉಣಬಡಿಸಿದರೆ ಪಾಪವಿಲ್ಲವೆಂಬ ನಿಲುವಿಗೆ ಬರುತ್ತಾರೆ. ಈ ಕೂರ್ಮಾವತಾರವು ರಾಯರ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ. ನಿರ್ದೇಶಕ ನಾಯ್ಡು ರಾಯರನ್ನು ಗಾಂಧೀಜಿ ಪಾತ್ರವನ್ನು ಮಾಡುವಂತೆ ಒತ್ತಾಯಿಸಿ ಗಾಂಧೀಜಿಯನ್ನು ಕುರಿತ ಧಾರಾವಾಹಿಯನ್ನು ನಿರ್ಮಿಸುತ್ತಾರೆ. ಧಾರಾವಾಹಿ ತುಂಬ ಜನಪ್ರಿಯವಾಗುತ್ತದೆ. ಪರಿಸ್ಥಿತಿಯ ವ್ಯಂಗ್ಯವೆಂದರೆ, "ಪೆಪ್ಸೆ, ಟೆಮರಿಂಡ್, ವಾಹ್ ಕಂಪೆನಿಗಳು ನಾಮುಂದು ತಾಮುಂದು ಅಂತ ಮುನ್ನುಗ್ಗಿ ಬಂದು ಪ್ರಾಯೋಜಕತ್ವ ವಹಿಸಿಕೊಂಡವು." ರಾಯರು ಭ್ರಷ್ಟರಾದರೆ? ಇಲ್ಲ. ದಾಂಡಿ ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ತಮ್ಮ ದಾಂಡೀನಮಕ್ ಕಂಪೆನಿಯ ಒಂದಾದರೂ ಜಾಹಿರಾತು ಕಾಣಿಸಿಕೊಳ್ಳಬೇಕೆಂಬ, ತಮ್ಮ ಕಂಪೆನಿಯ ಜಾಹಿರಾತಿಗೆ ರೂಪದರ್ಶಿಯಾಗಬೇಕೆಂಬ ರತನಲಾಲನ ಒತ್ತಾಯವನ್ನು ತಿರಸ್ಕರಿಸಿ ರಾಯರು ದೊಡ್ಡ ಸುದ್ದಿ ಮಾಡುತ್ತಾರೆ; ಜಾಗತೀಕರಣದ ವಿರೋಧಿಗಳಿಂದ ಅಭಿನಂದನೆಗಳನ್ನು ಪಡೆಯುತ್ತಾರೆ. ಅವರ ವರ್ಚಸ್ಸು, ಕೀರ್ತಿ, ಪ್ರಭಾವಗಳು ಹಲವು ನಿಟ್ಟಿನಲ್ಲಿ ಬೆಳೆಯುತ್ತವೆ. ಮಾಂಸದಂಗಡಿಯ ಮಾಲೀಕ ಮುಕುಂದ ಮಾತ್ರ, ’ಹೆಂಡತಿ ಮಗನನ್ನು ಸೇರದ ಮುದುಕ ಅದಾವ ಸೀಮೆ ಗಾಂಧಿ ಎಂದು ಗೇಲಿ ಮಾಡಲಾರಂಭಿಸಿದ.’ ಮುಕುಂದನಿಗೆ ಈ ಆಮೆಯನ್ನು ಯಾರಾದರೂ ಕದ್ದೊಯ್ಯಬಾರದೆ ಎಂದು ಅನಿಸತೊಡಗುತ್ತದೆ. ಗವುಳೇರ ರಾಮನ ಹೆಂಡತಿ ತುಂಬು ಬಸುರಿ ಲಕ್ಷ್ಮಿಗೆ ಆಮೆಯ ಮಾಂಸದ ಬಯಕೆಯುಂಟಾಗುತ್ತದೆ.
ಕಥೆಯ ಆರಂಭದಲ್ಲೇ ರಾಯರ ಜೀವನದ ಅಂತ್ಯವನ್ನು ನಾಟಕೀಯವಾಗಿ ನಿರೂಪಿಸಿ ಕಥನ ಮುಂದೆ ಸಾಗಿದಂತೆ ರಾಯರ ಜೀವನದ ಭೂತವನ್ನು ಕಟ್ಟಿಕೊಡುವ ಧಾಟಿಯಲ್ಲಿ ಈ ಕಥೆಯನ್ನು ಬರೆಯಲಾಗಿದೆ. ಗಾಂಧಿ ಹತ್ಯೆಯ ಪ್ರಕರಣದ ಶೂಟಿಂಗ್‌ನಲ್ಲಿ ಗೋಡ್ಸೆಯ ಪಾತ್ರಧಾರಿ ಇಕ್ಬಾಲ್ ರಾಯರತ್ತ ಗುಂಡು ಹಾರಿಸುತ್ತಿದ್ದಂತೆ, ’ಹೇ ರಾಮ್ ಎನ್ನುತ್ತ ಗಾಂಧಿ ಪಾತ್ರಧಾರಿ ಆನಂದರಾಯರು ನೆಲಕ್ಕೆ ಕುಸಿಯುತ್ತಾರೆ. ರಾಯರ ಅಮೋಘ ಅಭಿನಯವನ್ನು ನಿರ್ದೇಶಕ ನಾಯ್ಡು ಹೊಗಳುತ್ತಿದ್ದಂತೆಯೇ ರಾಯರ ಮೈ ತಣ್ಣಗಾಗಿ ಅವರು ಸಾವನ್ನಪ್ಪುತ್ತಾರೆ. ಗೋಡ್ಸೆ ಪಾತ್ರಧಾರಿ ಇಕ್ಬಾಲ್ ಮೂರ್ಛೆ ಹೋಗುತ್ತಾನೆ. ಸ್ವಲ್ಪ ಹೊತ್ತಿನ ನಂತರ ಮೂರ್ಛೆಯಿಂದ ಎದ್ದವನು ತಾನೇ ರಾಯರನ್ನು ಕೊಂದವನೆಂದೂ ತನಗೆ ಮರಣದಂಡನೆ ವಿಧಿಸಿದರೂ ತಪ್ಪಿಲ್ಲವೆಂದು ರೋದಿಸಲಾರಂಭಿಸುತ್ತಾನೆ. ಎರಡು ದಿನಗಳ ಹಿಂದೆ ತಾನು ರಾಯರ ಮನೆಯ ಆಮೆಯನ್ನು ಕದ್ದೊಯ್ದು ತಿಂದನೆಂದೂ ಅವತ್ತೇ ನಿಜವಾಗಿ ರಾಯರು ಸತ್ತುಹೋದರೆಂದೂ ಇವತ್ತು ಅವರ ಭೌತಿಕ ಜೀವ ಮಾತ್ರ ಹೋಯಿತೆಂದೂ ಗೋಳಿಡುತ್ತಾನೆ. ರಾಯರ ಹೆಣಕ್ಕೆ ಮಾಂಸದಂಗಡಿಯ ಮಾಲೀಕ ಮುಕುಂದ ಮತ್ತು ಗೋಡ್ಸೆ ಪಾತ್ರಧಾರಿ ಇಕ್ಬಾಲರೂ ಹೆಗಲು ಕೊಟ್ಟರೆಂಬ ಸೂಚನೆಯಲ್ಲಿ ಕಥೆ ಮುಕ್ತಾಯಗೊಳ್ಳುತ್ತದೆ. ಬಹಿರಂಗದಲ್ಲಿ ಕಾಣುವುದಷ್ಟೇ ಸತ್ಯವಲ್ಲ ಎಂದು ಕಥೆ ಧ್ವನಿಸುವಂತೆ ತೋರುತ್ತದೆ. ಆಮೆಯನ್ನು ಆಮೆಯಾಗಿಯೂ, ಆನಂದರಾಯರ ಜೀವನಕ್ಕೆ ಒಡ್ಡಿದ ಒಂದು ರೂಪಕವಾಗಿಯೂ, ಗಾಂಧಿಯ ಅವತಾರಕ್ಕೆ ಒಂದು ಪುರಾಣ ಪ್ರತಿಮೆ ಎಂಬಂತೆಯೂ ಗ್ರಹಿಸಿ ಕೂರ್ಮಾವತಾರ ಎಂಬ ಕಲ್ಪನೆಯನ್ನು ವ್ಯಂಜಿಸಿರುವುದರಲ್ಲಿ ಕುಂವೀ ಪ್ರತಿಭೆ ಸೃಜನಶೀಲವಾಗಿ ಪ್ರಕಟವಾಗಿದೆ ಎನಿಸುತ್ತದೆ.


ಟಿ.ಪಿ.ಅಶೋಕ, ಅಗ್ರಹಾರ, ಸಾಗರ-೫೭೭ ೪೦೧, ೯೪೪೮೨ ೫೪೨೨೮

No comments:

Post a Comment

ಹಿಂದಿನ ಬರೆಹಗಳು