Tuesday, May 17, 2011

ಶೂದ್ರ ತಪಸ್ವಿ ಎಂಬ ವಿಚಾರಪೂರಿತ ನಾಟಕವು



ಪುರಾಣ ಕಥಾನಕಗಳನ್ನು ಸಮಕಾಲೀನ ಜೀವನದ ಸಂಗತಿಗಳೊಂದಿಗೆ ಮುಖಾಮುಖಿ ಮಾಡುವ ಯತ್ನ ರಂಗಭೂಮಿಯಲ್ಲಿ ನಿರಂತರ ನಡೆಯುತ್ತಿರುತ್ತದೆ. ನಮ್ಮ ನಾಟಕ ಸಾಹಿತ್ಯ ಬೆಳೆದಿರುವ ಅನೇಕ ರೀತಿಗಳಲ್ಲಿ ಇದೂ ಕೂಡ ಒಂದು. ಪುರಾಣ, ಇತಿಹಾಸ ಮತ್ತು ಸಾಮಾಜಿಕ ಕಥಾನಕಗಳೇ ರಂಗಭೂಮಿಗೆ ಜೀವಾಳ. ಆದರೆ ಈ ಮೂರು ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು ನೆನಪಿಸುವ ಎದುರಾಗುವ, ಪ್ರಶ್ನಿಸುವ ಇಲ್ಲವೆ ವಿಮರ್ಶಿಸುವ ಕೆಲಸವನ್ನು ಮಾಡುತ್ತಿರುತ್ತವೆ. ಕೆಲವು ಹೊಸದಾದ ಸಂಕಥನಗಳೂ ನಿರ್ಮಾಣವಾಗುತ್ತಿರುತ್ತವೆ. ನಮ್ಮ ಕಂಪನಿ ನಾಟಕಗಳು ಮೊದಲು ಪುರಾಣ ನಂತರ ಚರಿತ್ರೆ ನಂತರ ಸಾಮಾಜಿಕ ಕ್ರಮದಲ್ಲಿ ನಾಟಕಗಳನ್ನು ಪ್ರದರ್ಶಿಸಿವೆ. ನಮ್ಮ ಮೊದಲ ದುರಂತ ನಾಟಕ ಶ್ರೀಯವರ ’ಅಶ್ವತ್ಥಾಮನ್ ಮಹಾಭಾರತ ಕಥಾನಕ. ಕುjavascript:void(0)ವೆಂಪು ಅನೇಕ ಪುರಾಣ, ಚಾರಿತ್ರಿಕ, ಸಾಮಾಜಿಕ ನಾಟಕಗಳನ್ನು ಬರೆದರು. ಪರಂಪರೆಯನ್ನು ಪ್ರಶ್ನಿಸುವ ಗುಣದಿಂದಾಗಿ ಆ ನಾಟಕಗಳಿಗೆ ಹೊಸ ಕಣ್ಣು, ಹೊಸ ಸತ್ವ ಬಂದಿದೆ. ಅವರ ಮೂರು ನಾಟಕಗಳಾದ ಜಲಗಾರ, ಬೆರಳ್‌ಗೆ ಕೊರಳ್ ಮತ್ತು ಶೂದ್ರ ತಪಸ್ವಿ ಮೂರು ವಿಭಿನ್ನ ಸಾಮಾಜಿಕ ವಸ್ತುಗಳನ್ನು ಸಮಕಾಲೀನ ಬದುಕಿನ ಮುಖಾಮುಖಿಯಾಗಿ ಚಿತ್ರಿಸುವ ನಾಟಕಗಳು. ಜಲಗಾರ ಶ್ರಮಜೀವಿಯೊಬ್ಬ ತನ್ನ ಕಾಯಕದಲ್ಲಿ ಶಿವನನ್ನು ಕಾಣುವ, ಶ್ರಮರಹಿತರು ದೇವರನ್ನು ಕಾಣಲಾರದ ಸ್ಥಿತಿಯನ್ನು ಚಿತ್ರಿಸಿದರೆ, ಬೆರಳ್‌ಗೆ ಕೊರಳ್ ಏಕಲವ್ಯನ ಬೆರಳನ್ನು ಪಡೆದವರ ಕೊರಳ್ ಹರಿದು ಹೋಗಲೆಂಬ ಏಕಲವ್ಯನ ತಾಯಿಯ ಶಾಪಾಶಯದ ಜೊತೆ ತಾಯಿಯ ಅಳಲನ್ನು ಅಭಿವ್ಯಕ್ತಿಸುವ ನಾಟಕ. ಅಂಗಛೇದಕ್ಕೆ ಕಾರಣವಾಗಬಲ್ಲ ಅಂಶಗಳನ್ನು ಪ್ರಶ್ನಿಸುವ ಚಿಂತನ ಪ್ರಧಾನ ನಾಟಕ. ಬೆರಳನ್ನು ಪಡೆವ ನೈತಿಕತೆ ದ್ರೋಣರಿಗೆ ಇತ್ತೆ? ಗುರುಕಾಣಿಕೆ ಪಡೆಯಲು ಏಕಲವ್ಯನಿಗೆ ಅವರು ಕಲಿಸಿದ ಪಾಠವೆಷ್ಟು? ಮುಂತಾದ ಪ್ರಶ್ನೆಗಳನ್ನು ಮುಂದಿಡುತ್ತದೆ. ಶೂದ್ರತಪಸ್ವಿ ಶಂಭೂಕನೆಂಬ ಶೂದ್ರ ತಪಸ್ಸು ಮಾಡ ತೊಡಗಿದ್ದರಿಂದ ಬ್ರಾಹ್ಮಣನೊಬ್ಬ ತನ್ನ ಮಗನ ಸಾವಿಗೆ ಶೂದ್ರನ ತಪಸ್ಸೇ ಕಾರಣ. ನನಗೆ ನ್ಯಾಯ ಬೇಕು ಎಂದು ರಾಮನಲ್ಲಿ ಮೊರೆ ಇಡುವ ವಸ್ತುವನ್ನುಳ್ಳದ್ದು.
ಈಗ ಶೂದ್ರ ತಪಸ್ವಿ ನಾಟಕವನ್ನು ವಿವರವಾಗಿ ನೋಡೋಣ. ಇದು ಭವಭೂತಿಯ ಉತ್ತರ ರಾಮಚರಿತದ ಪ್ರಸಂಗವೆಂದೂ, ರಾಮಾಯಣಕ್ಕೆ ಇದು ಪ್ರಕ್ಷೇಪ ಭಾಗವೆಂದೂ ಇದು ರಾಮನ ಕಾಲಕ್ಕೆ ನಡೆದಿದೆ ಎಂದೂ ನಡೆದಿರಲಿಕ್ಕಿಲ್ಲ ಎಂದು ನಾನಾ ಅಭಿಪ್ರಾಯಗಳಿವೆ. ಈ ನಾಟಕ ಕುರಿತು ಈಗಾಗಲೆ ಮಾಸ್ತಿಯಂಥವರು ವಾಗ್ವಾದ ನಡೆಸಿದ್ದಾರೆ. ಡಾ.ಬಸವರಾಜ ಕಲ್ಗುಡಿಯವರ ’ನಕ್ಷ ನಕ್ಷತ್ರ ಎಂಬ ಕೃತಿಯಲ್ಲಿ ಈ ಬಗ್ಗೆ ಅನೇಕ ವಿವರಗಳೂ ಇವೆ. ಮೂಲ ರಾಮಾಯಣದ ಕತೆಗೂ ಕುವೆಂಪು ಅವರ ನಾಟಕದ ಕತೆಗೂ ವ್ಯತ್ಯಾಸವಿದೆ. ಆ ವ್ಯತ್ಯಾಸದ ಬಗ್ಗೆಯೇ ಜಿಜ್ಞಾಸೆ ಹೆಚ್ಚು. ಮೂಲ ರಾಮಾಯಣದ ಕತೆ ಹೀಗಿದೆ. ಶೂದ್ರ ತಪಸ್ಸು ಮಾಡುತ್ತಿರುವುದರಿಂದ ನನ್ನ ಮಗ ಸತ್ತಿದ್ದಾನೆ. ತಪಸ್ಸು ಮಾಡುತ್ತಿರುವ ಶೂದ್ರನನ್ನು ಕೊಂದು ನನ್ನ ಮಗನನ್ನು ಬದುಕಿಸಿಕೊಡು ಎಂಬ ಬ್ರಾಹ್ಮಣನ ಮನವಿಯಂತೆ ರಾಮ ತಪಸ್ಸಿನಲ್ಲಿ ನಿರತನಾಗಿದ್ದ ಶಂಭೂಕನನ್ನು ಕೊಂದುದರಿಂದ ಬ್ರಾಹ್ಮಣನ ಮಗ ಬದುಕಿದ.
ಕುವೆಂಪು ಈ ಕತೆಯನ್ನು ಪರೀಕ್ಷಕ ದೃಷ್ಟಿಯಿಂದ ತಮ್ಮ ಕಲಾಭಿವ್ಯಕ್ತಿಯ ಸಾಧ್ಯತೆಗಳನ್ನು ತೋರಿದ್ದಾರೆ. ಶೂದ್ರ ತಪಸ್ವಿ ನಾಟಕದಲ್ಲಿ ರಾಮ ಬ್ರಾಹ್ಮಣನ ಕೋರಿಕೆಯಂತೆ ಶಂಭೂಕನಿಗೆ ಬಾಣ ಬಿಡುತ್ತಾನೆ. ಆ ಬಾಣ ಆತನನ್ನು ಕೊಲ್ಲದೆ ಅವನನ್ನು ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ವಾಪಸ್ಸು ಬಂದು ಬ್ರಾಹ್ಮಣನನ್ನು ಕೊಲ್ಲ ಹೋಗುತ್ತದೆ. ಆಗ ರಾಮನೂ ಬ್ರಾಹ್ಮಣನನ್ನು ರಕ್ಷಿಸಲಾಗುವುದಿಲ್ಲ. ನಂತರ ಶಂಭೂಕನೇ ಬ್ರಾಹ್ಮಣನನ್ನು ಕಾಪಾಡಬೇಕಾದ ಸ್ಥಿತಿ ಬರುತ್ತದೆ. ಅಸಂಬದ್ಧವಾದ ಸಂಬಂಧ ಕಲ್ಪಿಸಿ ಬ್ರಹ್ಮ ವಿದ್ಯೆ ಕಲಿಯುತ್ತಿದ್ದ ಶಂಭೂಕನ ಸಂಹಾರಕ್ಕೆ ಕಾರಣವಾದ ಕುತಂತ್ರಕ್ಕೆ ತಕ್ಕಶಾಸ್ತಿ ಮಾನವೀಯತೆಯಿಂದ ನಾಟಕೀಯತೆಯನ್ನು ಕವಿ ಕುವೆಂಪು ಅವರು ಸೃಜಿಸಿದ್ದಾರೆ. ಇದನ್ನು ಮಾಸ್ತಿಯಂಥವರೂ ಸಮೀಪ ದೃಷ್ಟಿಯಿಂದ ನೋಡಿದ್ದು ನಮ್ಮ ಸಾಂಸ್ಕೃತಿಕ ವಾಗ್ವಾದಗಳಲ್ಲಿ ದಾಖಲಾಗಿದೆ.
ತಪಸ್ಸು ಶೂದ್ರನಿಗೆ ಸಲ್ಲದೆಂಬ ದೃಷ್ಟಿಗೆ ಸರಿಯಾದ ವಿವೇಕವನ್ನು ಈ ನಾಟಕ ನೀಡುತ್ತದೆ. ಅವತ್ತಿನ ತಪಸ್ಸು ಇವತ್ತಿನ ವಿದ್ಯಾಭ್ಯಾಸ ಎರಡೂ ಒಂದೇ. ಇವತ್ತು ಅಕ್ಷರಸ್ಥರಾಗುತ್ತಿರುವವರನ್ನು ಕಂಡು ಅಸಹನೆ ಪಡುವ ಜನ ಅನೇಕ ಸ್ತರದಲ್ಲಿರುತ್ತಾರೆ. ಅಲೆಮಾರಿಗಳು, ಅಲಕ್ಷಿತ ಸಮುದಾಯಗಳು ಶಿಕ್ಷಣ ಪಡೆಯುವ ಸಾಧ್ಯತೆಗಳು ಇಂದಿಗೂ ಕಡಿಮೆಯಾಗಿವೆ. ಅಲೆಮಾರಿಗಳಿಗೆ ಇರಲು ನೆಲೆ ಇಲ್ಲದೆ ವ್ಯಾಸಂಗ ಮಾಡಲಾಗುತ್ತಿಲ್ಲ. ಯಾದಗಿರಿ ಪ್ರದೇಶದಿಂದ ದೇಶಾದ್ಯಂತ ಗುಳೆಹೋಗುವ ಜನರ ಮಕ್ಕಳು, ಮರಿಗಳು ವಿದ್ಯಾಭ್ಯಾಸದಿಂದ ನಿತ್ಯ ವಂಚಿರಾಗುತ್ತಾರೆ. ಶೂದ್ರ ತಪಸ್ವಿ ನಾಟಕ ಅನೇಕ ಹೊಸ ವಿಚಾರಗಳಿಗೆ ಕಾರಣವಾಗಿದೆ. ಅದನ್ನು ಪ್ರಯೋಗಿಸುವ ಸಂದರ್ಭದಲ್ಲಾದ ಗೊಂದಲಗಳಿಗೆ ಸ್ವತಃ ಕುವೆಂಪು ಅವರೇ ಬೇಸತ್ತು ’ನನ್ನ ನಾಟಕ ಪ್ರದರ್ಶನದಲ್ಲಿ; ಮನೋರಂಗ ಭೂಮಿಯದ್ದು’ ಎಂದು ಹೇಳಿದ್ದರು. ಅಲ್ಲದೆ ನನ್ನ ನಾಟಕವನ್ನು ಪರ-ವಿರೋಧದ ಎರಡೂ ನೆಲೆಯವರು ಹೇಗೆ ತಪ್ಪಾಗಿ ಭಾವಿಸಿದರು ಎಂಬ ಬಗ್ಗೆ ನೊಂದುಕೊಂಡಿದ್ದರು.
ಇತ್ತೀಚೆಗೆ ನೀನಾಸಂ ವಿದ್ಯಾರ್ಥಿಗಳು ಈ ನಾಟಕವನ್ನು ಅಭಿನಯಿಸುತ್ತ, ಹೊಸ ರೂಪಕಗಳನ್ನು ಸೃಜಿಸುತ್ತಿದ್ದೇವೆಂಬ ಭ್ರಮೆಯಲ್ಲಿ ಯಜ್ಞೋಪವೀತ ಪ್ರದಾನ ಮಾಡುವ ದೃಶ್ಯ ಸಂಯೋಜನೆ ಮಾಡಿದ್ದಾರೆ. ಇದು ಕುವೆಂಪು ಆಶಯಕ್ಕೆ ವಿರುದ್ಧವಾದುದು. ಶೂದ್ರ ತಪಸ್ವಿ ಭಾರತೀಯ ಸಂಸ್ಕೃತಿಯ ಹುಸಿ ಮೌಲ್ಯವನ್ನು ಪ್ರಶ್ನಿಸುವ ಮುಖ್ಯ ನಾಟಕ. ರಾಮಾಯಣದಲ್ಲಾದ ಅಮಾನವೀಯ ದೃಷ್ಟಿಯನ್ನು ಸರಿಪಡಿಸಿ ಯೋಗ್ಯ ಚಿಂತನೆಗೆ ಹಚ್ಚುವ ಮೂಲಕ ಸರ್ವರಿಗೂ ಸಮಬಾಳಿನ ತಾತ್ವಿಕ ಜಿಜ್ಞಾಸೆ ಉಂಟು ಮಾಡುವ ನಾಟಕ. ಪರಂಪರೆಯ ತಪ್ಪನ್ನು ಸರಿಪಡಿಸಿದ ಕುವೆಂಪು ಅವರ ಹೊಸ ದೃಷ್ಟಿಯನ್ನು ಮುಚ್ಚಲು ಯಾರೂ ಯತ್ನಿಸಬಾರದು. ನಾಟಕಕ್ಕೆ ಸಬ್‌ಜೆಕ್ಟ್ ಪೂರಕವಾದರೆ ಒಪ್ಪೋಣ. ತದ್ವಿರುದ್ಧವಾದ ಅರ್ಥ ನೀಡುವಂತಿದ್ದರೆ ಆಕೃತಿಗಳನ್ನು ವಿಕೃತಿಗೊಳಿಸಿದಂತಾಗುತ್ತದೆ. ನಿರ್ದೇಶಕರ ಇಂಟ್ರಪಟೇಷನ್ ಹೊಸ ಚಿಂತನೆ ದಾರಿಯಾಗಬೇಕೇ ಹೊರತು ಅನರ್ಥಗಳಿಗೆ ಕಾರಣ ಆಗಬಾರದು. ನಾಟಕವನ್ನು ಅರ್ಥೈಸಲಿಕ್ಕಾಗಿಯೇ ನಿರ್ದೇಶಕ ಇರುವುದು ಎಂದಾದ ಮೇಲೆ ಶೂದ್ರ ತಪಸ್ವಿಯಂಥ ನಾಟಕ ಪುನಃ ರಾಮಾಯಣದ ಕತೆಯೇ ಆದರೆ ಏನು ಪ್ರಯೋಜನ. ಹಾಗಾದಾಗ ಅಲ್ಲಿ ಕುವೆಂಪು ಅವರ ಶೂದ್ರ ತಪಸ್ವಿಯೇ ಕಳೆದು ಹೋಗುತ್ತಾನೆ.
ಶೂದ್ರ ತಪಸ್ವಿಯಂಥ ನಾಟಕ ಮತ್ತೊಂದು ಭಾರತೀಯ ಭಾಷೆಯಲ್ಲಿ ಸಂಭವಿಸಿಲ್ಲ. ಕುವೆಂಪು ಅವರಿಗೇ ಇದ್ದ ದೊಡ್ಡ ಶಕ್ತಿಯೆಂದರೆ ಅವರು ವೇದಾಂತದ ಮೂಲಕ ಭಾರತೀಯ ಸಂಸ್ಕೃತಿಯನ್ನು ನೋಡಿದವರು. ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದ ಅವರ ಎರಡು ಕಣ್ಣುಗಳು ಪಾಶ್ಚಾತ್ಯ ತತ್ವಜ್ಞಾನ, ವಿಜ್ಞಾನ, ಸಾಹಿತ್ಯ ಮೂರು ತ್ರಿವೇಣಿ ಸಂಗಮವಾದದ್ದು ಅವರ ಮನಸ್ಸು. ಆದ್ದರಿಂದಲೇ ಅವರ ಕಾವ್ಯ, ನಾಟಕ, ವಿಮರ್ಶೆ, ವಿಚಾರ, ಕತೆ, ಕಾದಂಬರಿಗಳಲ್ಲಿ ಹೊಸ ವಿವೇಕವೊಂದು ಸೃಜನೆಗೊಳ್ಳಲು ಸಾಧ್ಯವಾಯಿತು.
ಪುರಾಣ ವಸ್ತುವನ್ನು ಯಥಾಕಥಿತವಾಗಿ ಸೃಜಿಸುವ ನೆಲೆ ಒಂದಾದರೆ, ವಿಮರ್ಶಾತ್ಮಕವಾಗಿ ನೋಡುವುದು ಮತ್ತೊಂದು ನೆಲೆ. ಶೂದ್ರ ತಪಸ್ವಿ ಎತ್ತುವ ಪ್ರಶ್ನೆಗಳು ಪರಂಪರೆಯನ್ನು ಸ್ಥಿರತೆಯ ದೃಷ್ಟಿಯಿಂದ ನೋಡುವವರಿಗೆ ಬೇಸರ ತರಬಹುದು. ಆದರೆ ಪರಂಪರೆಯನ್ನು ಚಲನಶೀಲವಾಗಿ ನೋಡುವವರಿಗೆ ಹೊಸ ದೃಷ್ಟಿಯನ್ನು ನೀಡುತ್ತದೆ. ನಾಟಕ ಮತ್ತೆ ಮತ್ತೆ ಎತ್ತುವ ಪ್ರಶ್ನೆಗಳಿಗೆ ಕಾಲಕಾಲಕ್ಕೆ ಹೊಸ ಉತ್ತರಗಳನ್ನು ಹುಡುಕಿಕೊಳ್ಳಲೇ ಬೇಕಾಗುತ್ತದೆ. ೧೯೪೪ರಲ್ಲಿ ನಡೆದ ಚರ್ಚೆ ಒಂದು ತುದಿಯಾದರೆ, ಈಗ ನಡೆಯುತ್ತಿರುವ ಚರ್ಚೆ ಇಂದಿನ ಅನೇಕ ಸಾಮಾಜಿಕ ಸಮಸ್ಯೆಗಳತ್ತ ತನ್ನ ಹರಹುವನ್ನು ವಿಸ್ತರಿಸುತ್ತದೆ. ವೈಚಾರಿಕತೆ ಎಂಬುದು ಕೇವಲ ಪಾಶ್ಚಾತ್ಯರಿಂದ ಕಡ ತಂದ ಆಲೋಚನೆ ಎಂದೇನೂ ವಿರೋಧಾತ್ಮಕ ನೆಲೆಯಿಂದ ನೋಡಬೇಕಾಗಿಲ್ಲ. ವಿಚಾರವಂತರನ್ನು ಸಮಾಜಘಾತುಕರಂತೆ ನೋಡುವ ಹೊಸ ರೋಗವೊಂದು ಇತ್ತೀಚೆಗೆ ಸಮಾಜದಲ್ಲಿ ಅಧಿಕವಾಗಿದೆ. ಅಂಧಶ್ರದ್ಧೆಯನ್ನು ಪೋಷಿಸುವ ರಾಜಕಾರಣ ಚೈತನ್ಯಶೀಲವಾಗಿರುವ ಕಾರಣ ಪ್ರಗತಿಪರತೆ, ವೈಚಾರಿಕತೆ ಮುಂತಾದ ಮನೋಧರ್ಮಗಳಿಗೆ ಹಿನ್ನಡೆ ಆಗಿದೆ. ವೈಜ್ಞಾನಿಕ ಮನೋಧರ್ಮ ಮಾಟ, ಮಂತ್ರ, ಬಲಿ, ಯಾಗಗಳಲ್ಲಿ ಕ್ಷೀಣಿಸಿ ಹೋಗುತ್ತಿದೆ. ಶಿಕ್ಷಣದ ಜೊತೆ ಬರಬೇಕಿದ್ದ ಬೌದ್ಧಿಕ ಶ್ರೀಮಂತಿಕ ಮಾಯವಾಗಿ ವಿ.ಆರ್.ನಾರ‍್ಲಾ ಅವರು ಹೇಳಿದಂತೆ ಬೌದ್ಧಿಕ ದಾರಿದ್ರ್ಯ ವಿಜೃಂಭಿಸುತ್ತಿದೆ. ಇದಕ್ಕೆ ನಾವೂ ಕಾರಣರಾಗಿಲ್ಲವೆ?


ಡಾ.ರಾಜಪ್ಪ ದಳವಾಯಿ

No comments:

Post a Comment

ಹಿಂದಿನ ಬರೆಹಗಳು