Wednesday, May 18, 2011

ಕವಿ ಮುದ್ದಣನ ಅನನ್ಯತೆ



’ಪದ್ಯಂ ವಧ್ಯಂ ಗದ್ಯಂ ಪದ್ಯಂ’ ಎನ್ನುತ್ತಾ ಹೊಸಗನ್ನಡದ ಅರುಣೋದಯವನ್ನು ಎತ್ತಿ ಹಿಡಿದವನು ಕವಿ ಮುದ್ದಣ. "ಹಳಸಿ ತಂಗೂಳಾದ ರೀತಿಗಳ ಹೀಗಳಿಸಿ ಬಳಬಳಸಿ ಸವಿಗೆಟ್ಟ ನಲ್ಗತೆಯ ರಸವೆರಸುಧ ಬಳಸಿ ಪೇಳಿದನು ಒಳ ಹರಳವನು ಹದಮಾಡಿ ತನ್ನ ಮಾತಿನಿಂದ" ಎಂದು ಮುದ್ದಣನ ಅನನ್ಯತೆಯನ್ನು ವರಕವಿ ಬೇಂದ್ರೆಯವರು ಸರಿಯಾಗಿ ಗುರುತಿಸಿದ್ದಾರೆ. "ಹಳಗನ್ನಡ ಹೊಸಗನ್ನಡ ಹಾರದ ಮಧ್ಯಮಣಿ ನಮ್ಮ ಮುದ್ದಿನ ಮುದ್ದಣ ಕನ್ನಡ ನವೋದಯದ ಮುಂಗೋಳಿ" ಎಂಬುದಾಗಿ ಸೇಡಿಯಾಪು ಕೃಷ್ಣಭಟ್ಟರು ಅಭಿಪ್ರಾಯ ಪಟ್ಟಿದ್ದಾರೆ. ಮುದ್ದಣನ ನಿಜನಾಮ ’ನಂದಳಿಕೆ ಲಕ್ಷ್ಮೀನಾರಾಯಣಯ್ಯ. ಮುದ್ದಣ ಹುಟ್ಟಿದ್ದು ೧೮೭೦ರಲ್ಲಿ; ಆತ ತೀರಿಕೊಂಡಿದ್ದು ೧೯೦೧ರಲ್ಲಿ. ೩೧ ವರ್ಷಗಳ ಅಲ್ಪ ಅವಧಿಯಲ್ಲೇ ಗಣನೀಯ ಸಾಧನೆ ಮಾಡಿದ ಶ್ರೇಯಸ್ಸು ನಂದಳಿಕೆ ಲಕ್ಷ್ಮೀನಾರಾಯಣಯ್ಯಗೆ ಸಲ್ಲುತ್ತದೆ.
ಬಡತನದಲ್ಲೇ ಬಾಳಿ ಬೆಳಗಿ ಅಳು ನುಂಗಿ ನಗೆ ನಕ್ಕ ಮುದ್ದಣ ಪ್ರತಿಭಾನ್ವಿತ ಕವಿ. ವೃತ್ತಿಯಲ್ಲಿ ಆತ ವ್ಯಾಯಾಮ ಶಿಕ್ಷಕನಾಗಿದ್ದ. ಕಡು ಬಡತನದಲ್ಲಿ ಬೆಳೆದ ಆತ ಓದಿದ್ದು ಪ್ರಾಥಮಿಕ ಶಾಲೆಯವರೆಗೆ ಮಾತ್ರ. ಸ್ವಪರಿಶ್ರಮ, ಸ್ವಯಂ ಪ್ರತಿಭೆಯಿಂದಲೇ ಮುದ್ದಣ ಮಹಾನ್ ಕವಿಯಾಗಿ ಲೋಕ ವಿಖ್ಯಾತನಾದುದು ಸಾಮಾನ್ಯ ಸಂಗತಿಯಲ್ಲ. ಮುದ್ದಣನ ತಂದೆ ಪಾಟಾಳಿ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಷ್ಮಮ್ಮ. ಆತ ತನ್ನ ಇಪ್ಪತ್ತಮೂರನೆಯ ವಯಸ್ಸಿನಲ್ಲಿ ಕಮಲಾಬಾಯಿಯನ್ನು ಮದುವೆಯಾದ. ಈಕೆ ಮುದ್ದಣನ ಕಾವ್ಯದ ’ಮನೋರಮೆ’ಯೂ ಆಗಿದ್ದಾಳೆ.
"ಸ್ವಭಾವತಃ: ಮಹಾ ಸರಸಿಯಾಗಿದ್ದ ನಾರಣಪ್ಪನವರು ಬಿಡುವಿದ್ದಾಗಲೆಲ್ಲಾ ಬರೆಯುವುದು, ಓದುವುದು ಇವುಗಳಲ್ಲೇ ಮಗ್ನ. ಪ್ರಾಚೀನಕಾಲದ ಗ್ರಂಥಗಳನ್ನೂ ತಾಡೋಲೆಗಳನ್ನೂ ಸಂಗ್ರಹಿಸಿ ಅಧ್ಯಯನ ಮಾಡುವುದು ಅಭ್ಯಾಸ. ಅಲ್ಲದೇ ಆ ಕಾಲಕ್ಕೆ ಅಮೋಘವೂ ಅಧಿಕೃತವೂ ಎನಿಸಿದ್ದ ಕಿಟ್ಟೆಲ್ ಡಿಕ್ಷನರಿಯನ್ನು ಆಮೂಲಾಗ್ರವಾಗಿ ಓದುವುದರ ಜೊತೆಗೆ ಅದರಲ್ಲಿರುವ ಪದಗಳನ್ನು ಪದ ಅರ್ಥಗಳನ್ನು ಉರುಹಚ್ಚುವುದು ನಾರಾಣಪ್ಪನವರ ಮತ್ತೊಂದು ಹವ್ಯಾಸ. ನಾರಣಪ್ಪನವರು ಬಹುಭಾಷಾಪ್ರಿಯರು" ಎಂಬ ಬಿ.ಎಸ್.ಕೇಶವರಾವ್ ಅವರ ಮಾತು ನಿಜವೇ ಆಗಿದೆ.
ಸೊಗಸಾದ ಅಂಗಸೌಷ್ಠವವನ್ನು ಹೊಂದಿದ್ದ ಯುವಕ ಲಕ್ಷ್ಮೀನಾರಾಯಣಯ್ಯನ ಕುರಿತು ಗೋವಿಂದ ಪೈ ಅವರು "ನಾರಾಣಪ್ಪನವರ ಎತ್ತರ ಐದು ಅಡಿ ನಾಲ್ಕು ಇಂಚು, ಗಂಭೀರ ಮುಖ ಮುದ್ರೆಯಿಂದಲೇ ಸದಾ ಕಾಲವಿರುತ್ತಿದ್ದ ನಾರಣಪ್ಪ ಸುಂದರಾಂಗ. ಯಾವಾಗಲೂ ಏನನ್ನೋ ಹುಡುಕುವುದರಲ್ಲಿ ಹಾತೊರೆಯುವಂತಿದ್ದ ಚುರುಕು ದೃಷ್ಟಿಯ ಕಣ್ಣುಗಳು, ಎದ್ದು ಕಾಣುವಂತಿದ್ದ ಉದ್ದನೆಯ ನಾಸಿಕ, ದಿಟ್ಟ ನಿಲುವು, ನಡಿಗೆ, ಹರಿತವೆನಿಸುವ ಚುರುಕುಬುದ್ಧಿ, ಆದರೆ ಮಿತಭಾಷಿ. ಆತ ಬಹುಸೂಕ್ಷ್ಮಗ್ರಾಹಿ, ಏಕಪಾಠಿ" ಎಂದು ಮುದ್ದಣ ಕವಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ. ವ್ಯಾಯಾಮ ಶಿಕ್ಷಕನಾಗಿದ್ದ ಮುದ್ದಣ ತನ್ನ ಪ್ರತಿಭೆ ಹಾಗೂ ಸ್ವಾಧ್ಯಾಯದ ಮೂಲಕ ಕನ್ನಡ ಪಾಂಡಿತ್ಯವನ್ನು ಕೈವಶ ಮಾಡಿಕೊಂಡಿದ್ದನೆಂಬುದು ಯಾರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ಮುದ್ದಣ ಜೀವಿಸಿದ್ದ ಕಾಲ ಕನ್ನಡ ವಾಙ್ಞಯದ ದೃಷ್ಟಿಯಿಂದ ಸಂಧಿಕಾಲ. ಕನ್ನಡ ಸಾಹಿತ್ಯಲೋಕ ಹೊಸತಿಗಾಗಿ ಹಾತೊರೆಯುತ್ತಿದ್ದ ಸಂದರ್ಭ. ಕನ್ನಡದಲ್ಲಿ ಆಗತಾನೆ ಪ್ರಕಟಣಾ ಕಾರ್ಯ ಶುರುವಾಗಿತ್ತು. ಕಿಟ್ಟೆಲ್‌ಕೋಶ, ಶಬ್ದಮಣಿದರ್ಪಣ, ಛಂದೋಂಬುಧಿ ಮೊದಲಾದವು ಲಭ್ಯವಿದ್ದ ಬಹುಮುಖ್ಯ ಸಾಹಿತ್ಯ ಹಾಗೂ ಶಾಸ್ತ್ರಕೃತಿಗಳು. ಯಕ್ಷಗಾನ ಬಯಲಾಟ ಪ್ರಭಾವವೂ ಅವನ ಮೇಲಾಯಿತು. ಇದೆಲ್ಲವುಗಳಿಂದ ಸಿದ್ಧಿಸಿದ್ದು ತುಸು ಪ್ರೌಢಶೈಲಿ, ಹಳಗನ್ನಡ ನಡುಗನ್ನಡಗಳನ್ನು ನಾಂದಿ ಮಾಡಿದ ವಿಶಿಷ್ಟ ಶೈಲಿ-ಅವನದು. "ಮುದ್ದಣನಿಗೆ ಹಳಗನ್ನಡದ ಮೇಲೆ ವಿಶೇಷ ಒಲವು. ಅವನ ಕಾಲವೆಂದರೆ ನಮ್ಮ ನಾಡು ಆಧುನಿಕತೆಗೆ ತೆರೆದುಕೊಳ್ಳಲು ತೊಡಗಿದ ಸಂಧಿಕಾಲವೆಂಬುದು ನೆನಪಿಸಬೇಕಾದ ವಿಷಯ. ಅವನಲ್ಲಿ ಆಧುನಿಕತೆಯೆಂಬುದು ಹಳೆಯ ಗ್ರಂಥಗಳ ಮರು ಓದು, ಪುನರ್ಮನನ, ಪುನರ್‌ವಿಮರ್ಶೆಗಳ ಮೂಲಕವೇ ಮೂಡಿಬಂತೆಂಬುದು ಗಮನಿಸಬೇಕಾದ ವಿಷಯ. ಹೊಸಕಾಲದ ಒಲವು ಗದ್ಯದೆಡೆಗೆಂಬುದನ್ನು ಕನ್ನಡದ ನಾಡಿಮಿಡಿತದಿಂದ ಮುದ್ದಣ ತಿಳಿದುಕೊಂಡವನಾಗಿದ್ದ". ಸಂಕ್ರಮಣ ಕಾಲಘಟ್ಟದಲ್ಲಿ ನಿಂತು ಕೃತಿ ರಚಿಸಿ ಪ್ರಯೋಗಶೀಲತೆಯನ್ನು ಮೆರೆದ ಮುದ್ದಣನ ಅಪೂರ್ವ ಸಾಧನೆಯನ್ನು ಡಾ||ಪಾದೇಕಲ್ಲು ವಿಷ್ಣುಭಟ್ಟ ಅವರು ಸರಿಯಾಗಿಯೇ ವಿಶ್ಲೇಷಿಸಿದ್ದಾರೆ. ಮುದ್ದಣ ಶಬ್ದಗಾರುಡಿಗನಾಗಿದ್ದ; ಆತನ ಶಬ್ದಸೃಷ್ಟಿ ಸೋಜಿಗ ಹುಟ್ಟಿಸುತ್ತದೆ. ನಿಜವಾದ ಅರ್ಥದಲ್ಲಿ ಮುದ್ದಣ ವಾಗ್ದೇವಿಯ ಭಂಡಾರದ ಮುದ್ರೆಯನ್ನೊಡೆದ ಪ್ರತಿಭಾ ಸಂಪನ್ನ ಕವಿ. ವರ್ತಮಾನದ ಸಾಹಿತ್ಯ ಹೇಗಿರಬೇಕೆಂಬ ಕುರಿತು ಗಂಭೀರವಾಗಿ ಚಿಂತನಮಂಥನ ನಡೆಸಿಯೇ ಆತ ಸಾಹಿತ್ಯ ಕೃತಿಗಳನ್ನು ರಚಿಸಿದಂತೆ ತೋರುತ್ತದೆ. ’ಉಳಿದೊಡಂ ಅಳಿದೊಡಂ ಬಟ್ಟೆದೋರಿಪ ರಸಭರಿತಂ ಚರಿತಂ’ ಅರ್ಥಾತ್ ಇಹಪರಕ್ಕೆ ದಾರಿತೋರುವ, ಬರುವ ಮನ್ವಂತರದಲ್ಲಿ ಇತರರಿಗೆ ಮಾದರಿಯಾಗುವ, ಮಾರ್ಗದರ್ಶನ ಮಾಡುವ, ದಾರಿತೋರುವ ಮಹತ್ವಾಕಾಂಕ್ಷೆಯ ಕೃತಿಗಳನ್ನು ರಚಿಸಿ ಆತ ಕನ್ನಡಿಗರ ಭಾವಕೋಶದಲ್ಲಿ ಸೇರಿ ಹೋಗಿದ್ದಾನೆ. ಇಂದಿಗೂ ಮುದ್ದಣ ವಿರಚಿತ ಕೃತಿಗಳ ಓದು, ಅಧ್ಯಯನ, ವಾಚನ, ವಿಶ್ಲೇಷಣೆ ಸತತವಾಗಿ ನಡೆಯುತ್ತಿರುವುದು ಅವನ ಕೃತಿಗಳ ಹಿರಿಮೆಗೆ ಸಾಕ್ಷಿ.
’ಕನ್ನಡಂ ಕತ್ತುರಿಯಲ್ತೆ’ ಎಂದು ಸಾರಿದ ಮುದ್ದಣ ಶ್ರೀರಾಮಾಶ್ವಮೇಧಂ, ಅದ್ಭುತ ರಾಮಾಯಣ, ಶ್ರೀರಾಮ ಪಟ್ಟಾಭಿಷೇಕಂ, ರತ್ನಾವತೀಕಲ್ಯಾಣ, ಕುಮಾರವಿಜಯ ಮೊದಲಾದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಭಂಡಾರವನ್ನು ಸಮೃದ್ಧಗೊಳಿಸಿದ್ದಾನೆ. ’ರಾಮಾಶ್ವಮೇಧ’ ಒಂದು ಅಭಿಜಾತಕೃತಿ. ಹಳೆಯ ಹೊಸ ಸಂವೇದನೆಗಳ ಸಂಗಮ ಇಲ್ಲಿ ಮೇಳೈಸಿದೆ. ಸಂಸ್ಕೃತ ಮೂಲದಿಂದ ಕಥಾವಸ್ತುವನ್ನು ಆಯ್ದುಕೊಂಡರೂ ಕಥೆಯ ಆರಂಭದಿಂದ ತೊಡಗಿ ಕೊನೆಯವರೆಗೂ ಕವಿ ಮುದ್ದಣನ ಸ್ವಂತಿಕೆಯ ಛಾಪು ಎದ್ದುಕಾಣುತ್ತದೆ. ’ಓವೋ ಕಾಲ ಪುರುಷಂಗೆ ಗುಣಮಣಮಿಲ್ಲಂ ಗಡ’ ಎಂದು ಬಿಚ್ಚಿಕೊಳ್ಳುವ ಕಾವ್ಯ ಲಲಿತ ಮನೋಹರವಾಗಿ ಅರಳಿದೆ. ಮುದ್ದಣ ಮನೋರಮೆಯರ ನಡುವಿನ ಸರಸ ಸಲ್ಲಾಪ ಸಂವಾದ ರಸದ ಮಡು, ತೀಕ್ಷ್ಣ ವಿಮರ್ಶೆ, ವ್ಯಂಗ್ಯ ವಿಡಂಬನೆಗಳಿಂದ ಈ ಕಾವ್ಯ ಕನ್ನಡ ಭಾಷೆಯ ಹಿರಿಮೆಗೂ ಕನ್ನಡಿ ಹಿಡಿಯುತ್ತದೆ. ಆ ಕಾವ್ಯದ ಒಂದು ಸಂದರ್ಭ ಇಂತಿದೆ.
ಕೊನೆಗೆ ಕವಿ ಹೇಳುತ್ತಾನೆ. ಮನೋರಮೆಗೆ:
ಮುದ್ದಣ: ಏನೆನ್ನ ಕಬ್ಬಂ ನಿನಗೆ ಮೆಚ್ಚುಗೆಯಾಯ್ತೆ?
ಮನೋರಮೆ: ಎನಗೊರ್ವಳ್ಗೇಂ? ನಾಡೊಳೆಲ್ಲರ್ಗಂ.
ಮುದ್ದಣ: ಎನ್ನೊಳೊಂದಭಿಮಾನದಿನಿಂತುಸಿರ‍್ದೆಯಕ್ಕುಂ.
ಮನೋರಮೆ: ಎನ್ನ ಮುದ್ದಿನರಸ! ಅಂತಲ್ತು. ನಿನ್ನ ಪೆಸರೆಂತಂತು ಕಬ್ಬಮುಂ ಮುದ್ದುಮುದ್ದಾಯ್ತು ಜಗಕೆ.
ಮುದ್ದಣ: ಎಂತು ನಿನಗೆ ಸೊಗಸಾಯ್ತಲೆ! ಇದವೆ ರಮಾನಂದಮೆನಗೆ.
ಮನೋರಮೆ: ಬಿನ್ನಣದ ಬಣ್ಣನೆಯಲ್ತು. ನೀನೆಂದ ಕತೆ.
ಮುದ್ದಣ: ಅಂತಪ್ಪೊಡೆ ತಾರೆಲೆ ನೀನೆಂದ ಮೆಚ್ಚುಗೆಯನುಡುಗೊರೆಯಂ.
ಮನೋರಮೆ: ಆಯ್ತಾಯ್ತು. ಪೇಳ್ದ ಕತೆ ಮಂಗಳಂ ಮಾಡು, ಮೆಚ್ಚುಗಿಚ್ಚು ಬಳಿಕ್ಕಮಲ್ತೆ?
ಮುದ್ದಣ: ಬರಿದೆ ಮಂಗಳಮಕ್ಕುಮೆ? ಹೋಳಿಗೆ ತುಪ್ಪಮಂ ತಿನವಡಿಸವೇಡಾ?
ಮನೋರಮೆ: ಹೋಳಿಗೆ ತುಪ್ಪಕ್ಕಿಂದೇಂ ನಿನಗೆ ಶೋಭನವೆ?
ಮುದ್ದಣ: ಇಂದೆನಗೆಂಡದೊಡೇಂ? ಎನಗಂ ನಿನಗಂ.
ಮನೋರಮೆ: ಪೋ, ಸಾಲ್ಗುಮೀ ಬಣ್ಣದ ನುಡಿ. (ಅನಿತರೊಳ್ ಎದ್ದು ಪೋಪಳ್).
ಮುದ್ದಣ: ಬಲ್ಸೆಡಕುಗಾರ್ತಿ ಕಣಾ! ಮುದ್ದಣನಂ ಟಕ್ಕಿಪ ಪೆಂಡಿರೊಳರೆ? ಮೆಚ್ಚನಿತ್ತಲ್ಲದೆ ಬಿಡುವೆನೆ?
ಮನೋರಮೆ: ಕತೆಗೆ ಮಂಗಳಮಂ ಮಾಡದೆ, ಬಹುದೆ ಉಡುಗೊರೆ ತುಡುಗೊರೆ?
ಮುದ್ದಣ: ಕತೆಗೆ ಮಂಗಳಮನಾಗಳೆ ಪೇಳ್ದೆಂ. ಈಗುಳಿದುದೊಂದೆ ನಿನ್ನುಡುಗೊರೆ.
ಮನೋರಮೆ: ನಿನ್ನುಡುಗೊರೆಯ ಕಾಟಕ್ಕಿನ್ನೆತ್ತ ಪೋಪೆಂ! ನೀನೇನು ಬೇಡುವಯ್?
ಮುದ್ದಣ: ಬೇಡುವೊಡೇಂ ತಿರುಕನೆ? ಮನೆಗೆ ಬಂದನೆ? ಮೆಚ್ಚಿತ್ತೊಡದನೆ ಕೊಳ್ವೆಂ.
ಮನೋರಮೆ: ಆಂ ಪರಾಧೀನೆ ಗಡ, ಏನನೀವೆನೆಂತೀವೆಂ?
ಮುದ್ದಣ: ಏನೊ ಎಂತೊ, ಆಂ ಮೆಚ್ಚುವಂತೆಯುಂ, ಕತೆಯ ತಿರುಳ್ಗೋವಂತುಂ, ನಾಲ್ವರ್ ತಲೆದೂಗುವಂತುಂ ಉಡುಗೊರೆ ಇತ್ತೊಡಾಯ್ತು.
ಇದೇ ರೀತಿಯ ಸಂಭಾಷಣೆ, ಚರ್ಚೆ, ವಿಮರ್ಶೆ, ಸಂವಾದ ಮುದ್ದಣನ ಕಾವ್ಯದ ಪ್ರಮುಖ ವೈಶಿಷ್ಟ್ಯಗಳು.
ಯಕ್ಷಗಾನ ಕಲೆಯ ಬಗೆಗೆ ಮುದ್ದಣನಿಗೆ ವಿಶೇಷವಾದ ಗೌರವ, ಆದರಗಳಿದ್ದವು. ಹೀಗಾಗಿ ಅವನು ಎರಡು ಮಹತ್ವದ ಕೃತಿಗಳನ್ನು ರಚಿಸಿ ಕಲಾಸೇವೆಗೂ ಕೈಜೋಡಿಸಿದ್ದಾನೆ.
ಮುದ್ದಣ ಸಾಹಿತ್ಯ ಕೃಷಿ ಮಾಡಿದ್ದು ಇಪ್ಪತ್ತನೆಯ ಶತಮಾನದ ಶುರುವಾತಿನಲ್ಲಿ. ಅದು ಆಧುನಿಕ ಕಾಲದ ಪ್ರಾರಂಭವೂ ಆಗಿತ್ತು. ಆಗ ಕವಿ ಸಾಹಿತಿಗಳಿಗೆ ಅಂಥ ಗೌರವವೇನೂ ಇರಲಿಲ್ಲ. ಮುದ್ದಣನದು ಸಂಕೋಚದ ಸ್ವಭಾವ. ಹೀಗಾಗಿ ಆತ ತನ್ನ ನಿಜನಾಮವನ್ನು ಮರೆಸಿ ಕೃತಿರಚನೆ ಮಾಡಿದ. ಕೊನೆಗೂ ’ಮುದ್ದಣ’ ಎಂಬ ಹೆಸರೇ ಸ್ಥಿರವೂ ಜನಪ್ರಿಯವೂ ಆಗುಳಿಯಿತು. ಮುದ್ದಣ ಬದುಕಿದ್ದು ಕೇವಲ ಮೂವತ್ತೊಂದು ವರ್ಷಗಳಷ್ಟು ಕಾಲ. ಅಂಥ ಚೇತನಕ್ಕೆ ಊರವರೆಲ್ಲ ಸೇರಿ ನಂದಳಿಕೆಯಲ್ಲಿ ಒಂದು ಸೊಗಸಾದ ಸ್ಮಾರಕಸೌಧವನ್ನು ನಿರ್ಮಿಸಿ ಕೃತಾರ್ಥರಾಗಿದ್ದಾರೆ. ಕನ್ನಡ ಸಾಹಿತ್ಯದ ನವಯುಗದ ಹರಿಕಾರ ಮುದ್ದಣನ ಸಾಹಿತ್ಯದ ಕಂಪು ಈ ಮೂಲಕ ಎಲ್ಲೆಡೆ ಪಸರಿಸುವಂತಾಗಿದೆ.
ಹೀಗೆ ಮುದ್ದಣ ಹೊಸಗನ್ನಡದಲ್ಲಿ ಯೋಚಿಸಿ ಹಳಗನ್ನಡದಲ್ಲಿ ಕೃತಿಗಳನ್ನು ರಚಿಸಿ ಕನ್ನಡ ವಾಙ್ಞಯಕ್ಕೆ ಹೊಸ ತಿರುವು ನೀಡಿದ ಸೀಮಾಪುರುಷ. ’ಕರ್ಮಣಿಸರದಲ್ಲಿ ಚೆಂಬವಳಮಂ ಕೋದಂತೆ’ ಸಂಸ್ಕೃತ-ಕನ್ನಡದ ಸಮನ್ವಯವನ್ನು ಸಾಧಿಸಿದ್ದಾನೆ. "ಮುದ್ದಣ ಜೀವನ ಸಾಹಿತ್ಯಗಳೆರಡರಲ್ಲಿಯೂ ಕನ್ನಡದ ಒಬ್ಬ ವಿಶಿಷ್ಟ ಕವಿ. ದಟ್ಟ ದಾರಿದ್ರ್ಯದಿಂದ ಪಡಬಾರದ ಕಷ್ಟಪಟ್ಟು ಕೊನೆಗೆ ಕ್ಷಯರೋಗದಂತಹ ಭಯಂಕರ ರೋಗಕ್ಕೆ ತುತ್ತಾಗಿ ದೈಹಿಕವಾಗಿ ಸಂಕಟವನ್ನೂ ಮಾನಸಿಕವಾದ ನೋವನ್ನೂ ಸಾಕಷ್ಟು ಅನುಭವಿಸಿದ ಕವಿ, ಕುಸ್ತಿ ಮಾಸ್ತರ್, ಎಲ್ಲೂ ತನ್ನ ನೋವನ್ನು ವ್ಯಕ್ತಪಡಿಸಲಿಲ್ಲ! ಎಂಬ ಹಾಮಾನಾ ಅವರ ಮಾತು ನಿಜವೇ ಆಗಿದೆ. ತನ್ನ ಪದ ಪ್ರಯೋಗ ಪ್ರತಿಭೆಯಿಂದ ಕನ್ನಡವನ್ನು ಕಸ್ತೂರಿ ಕನ್ನಡವಾಗಿಸಿದ ಮುದ್ದಣನ ಸಾಧನೆ ಅನುಕರಣೀಯವಾಗಿದೆ.
ನಂದಳಿಕೆಯ ನಂದನ
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ’ನಂದಳಿಕೆ’ ಗ್ರಾಮಕ್ಕೆ ವಿಶಿಷ್ಟವಾದ ಸ್ಥಾನಮಾನ ಪ್ರಾಪ್ತವಾದುದು ಕವಿ ಮುದ್ದಣನಿಂದ. ಕವಿ ಮುದ್ದಣ ಸ್ಮಾರಕ ಭವನದ ಮೂಲಕ ನಂದಳಿಕೆಯಲ್ಲಿ ಮತ್ತೆ ಕವಿ ಮುದ್ದಣನ ವಾಙ್ಞಯ ಸೇವೆಯನ್ನು ಲೋಕಮುಖಕ್ಕೆ ಪರಿಚಯಿಸಿದ ಕೀರ್ತಿ ಬಾಲಚಂದ್ರರಾವ್ ನಂದಳಿಕೆ ಅವರಿಗೆ ಸಲ್ಲುತ್ತದೆ. ಬಾಲಚಂದ್ರರಾವ್ ಅವರು ವೃತ್ತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದುಡಿದು ನಿವೃತ್ತರಾಗಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಅವರು ಮುದ್ದಣ ಮಿತ್ರ ಮಂಡಳಿಯ ಮೂಲಕ ನಂದಳಿಕೆಯಲ್ಲಿ ಮಾಡಿದ ಕನ್ನಡ ಕೈಂಕರ್ಯ ನಾಡಿಗೆ ಮಾದರಿಯಾಗಿದೆ. ಒಂದು ಅಕಾಡೆಮಿ, ಒಂದು ವಿವಿ ಮಾಡಬಹುದಾದಷ್ಟು ಕಾರ್ಯವನ್ನು ರಾವ್ ಅವರು ಮಾಡಿದ್ದಾರೆ. ಹಿಂದುಳಿದ ಹಳ್ಳಿಯಾಗಿದ್ದ ನಂದಳಿಕೆ ಮುದ್ದಣ ಸ್ಮಾರಕದ ಮೂಲಕ ಅಭಿವೃದ್ಧಿ ಕಂಡು ಜಗತ್ತಿಗೆ ಪರಿಚಯವಾದದ್ದು ಬಾಲಚಂದ್ರರಾಯರ ಸತತ ಹೋರಾಟ ಹಾಗೂ ಪರಿಶ್ರಮದಿಂದ. ಮುದ್ದಣನ ಸಾಹಿತ್ಯ ಸಾಧನೆಯನ್ನು ಗ್ರಂಥ ಪ್ರಕಟಣೆ ಪ್ರಶಸ್ತಿ, ಪ್ರಚಾರ, ಉಪನ್ಯಾಸ, ಗ್ರಂಥಾಲಯ, ಸ್ಮಾರಕ ಭವನದ ಮೂಲಕ ಕನ್ನಡಿಗರ ಮನ ಮನೆಗೆ ಮುಟ್ಟಿಸುವ ವ್ರತ ತೊಟ್ಟಿರುವ ನಂದಳಿಕೆ ಬಾಲಚಂದರಾಯರ ಕನ್ನಡ ಪ್ರೀತಿಗೆ ಕನ್ನಡಿಗರು ಯಾವತ್ತೂ ಕೃತಜ್ಞರಾಗಿದ್ದಾರೆ.

ಡಾ.ಜಿ.ಎನ್.ಉಪಾಧ್ಯ
ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ.
ವಿದ್ಯಾನಗರಿ, ಮುಂಬಯಿ-೪೦೦ ೦೯೮

No comments:

Post a Comment

ಹಿಂದಿನ ಬರೆಹಗಳು