Tuesday, May 17, 2011

ಶಂಕರದಾಸಿಮಯ್ಯನವರ ವಚನಗಳ ವಿಶ್ಲೇಷಣೆ
ಬಸವಣ್ಣನವರಿಗೆ ಪೂರ್ವದಲ್ಲಿ ಅಥವಾ ಹಿರಿಯ ಸಮಕಾಲೀನ ಶರಣರಾಗಿ ಹಲವಾರು ವಚನಕಾರರು ಕಂಡು ಬರುತ್ತಾರೆ. ಬಸವಣ್ಣನವರ ವಿಚಾರಕ್ರಾಂತಿಗೆ ಭೂಮಿಕೆಯನ್ನು ಅಣಿಗೊಳಿಸಿದ ಶರಣರಲ್ಲಿ ಮಾದಾರ ಚನ್ನಯ್ಯ, ಜೇಡರದಾಸಿಮಯ್ಯ, ಡೋಹರ ಕಕ್ಕಯ್ಯ ಮುಂತಾದವರ ಸಾಲಿನಲ್ಲಿ ಶರಣರ ಶಂಕರದಾಸಿಮಯ್ಯನವರು ಪ್ರಮುಖರು. ಇವರ ವಚನಗಳು ಅನುಭಾವ ಸಂಪತ್ತಿನಿಂದ ಕೂಡಿ ಸರಳವಾಗಿವೆ. ವಚನಗಳು ಶರಣರ ಆತ್ಮಸಾಕ್ಷಿಯ ಅಭಿವ್ಯಕ್ತಿ. ನುಡಿದಂತೆ ನಡೆದ ವಚನಕಾರರು ನಡೆದಂತೆ ನುಡಿದ ಅನುಭಾವಿಗಳು. ಅರಿವಿನೊಂದಿಗೆ ಕ್ರಿಯೆಗೂ ಮಹತ್ವ ನೀಡಿದವರು ಶರಣರು. ಕಾಯಕದಲ್ಲಿಯೇ ಕೈಲಾಸ ಕಂಡವರು. ವಿಚಾರ ಮಂಥನದ ಮೂಲಕ ವೈಚಾರಿಕ ಕ್ರಾಂತಿ ಮಾಡಿದರು ಶರಣರ ಮನದ ಭಾವನೆಗಳು ಅವರ ವಚನಗಳಲ್ಲಿ ಹರಳುಗಟ್ಟಿವೆ. ಶಂಕರದಾಸಿಮಯ್ಯ ಶರಣರ ಐದು ವಚನಗಳು ಸಮಗ್ರ ವಚನ ಸಂಪುಟದಲ್ಲಿ ಪ್ರಕಟವಾಗಿವೆ.
"ಎನ್ನ ಕಾಯಕ್ಕೆ ಗುರುವಾದನಯ್ಯಾ ಬಸವಣ್ಣನು,
ಎನ್ನ ಜೀವಕ್ಕೆ ಲಿಂಗವಾದನಯ್ಯಾ
ಚೆನ್ನಬಸವಣ್ಣನು, ಎನ್ನ ಪ್ರಾಣಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು,
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು,
ಇಂತಿವರ ಕರುಣದಿಂದಲಾನು
ಬದುಕಿದೆನಯ್ಯಾ ನಿಜಗುರು ಶಂಕರದೇವಾ!"
(ಶ.ದಾ.ವ.ಸಂ ೧)
ಮೇಲಿನ ವಚನದಲ್ಲಿ ಹಿರಿಯ ವಚನಕಾರರಾದ ಜೇಡರದಾಸಿಮಯ್ಯ, ಕೆಂಭಾವಿ ಭೋಗಣ್ಣ, ಡಕ್ಕೆಯ ಮಾರಯ್ಯ ಮುಂತಾದವರ ಸಮಕಾಲೀನರಾದ ಶಂಕರದಾಸಿಮಯ್ಯನವರು, ಲಿಂಗಾಯತ ಧರ್ಮ, ಶರಣಧರ್ಮ ಸ್ಥಾಪನೆಗೆ ಕಾರಣೀಭೂತರಾದ ಬಸವಣ್ಣ, ಚೆನ್ನಬಸವಣ್ಣ, ಮರುಳಶಂಕರದೇವ, ಪ್ರಭುದೇವರನ್ನು ಗುರು, ಲಿಂಗ, ಜಂಗಮ ಪ್ರಸಾದಿ ಸ್ಥಾನದಲ್ಲಿ ಸ್ಮರಿಸಿ ಗೌರವಿಸಿದ್ದರೆ. ನಿಮ್ಮ ಶರಣರ ಮನೆಯ ಮಗ ನಾನು ಎನ್ನುವ ಭಗವಾನ್ ಬಸವೇಶ್ವರರ ಕರುಣೆಯಿಂದ ನಾನು ಬದುಕಿದೆ ಎನ್ನುವ ಶಂಕರದಾಸಿಮಯ್ಯನವರ ವ್ಯಕ್ತಿತ್ವವನ್ನು ಮೇಲಿನ ವಚನದಲ್ಲಿ ಕಾಣಬಹುದು. ಎನ್ನ ಕಾಯ, ಜೀವ, ಪ್ರಾಣ, ಜ್ಞಾನಗಳು ನಿಮ್ಮ ಅಧೀನ ಎಂಬ ವಿನೀತ ಭಾವವನ್ನು ಹಿರಿಯ ಸಮಕಾಲೀನ ಶರಣ ಶಂಕರದಾಸಿಮಯ್ಯನವರು ವ್ಯಕ್ತಪಡಿಸಿದ್ದಾರೆ. ದೇಹಭಾವವನ್ನು ತೊಲಗಿಸಿ, ಮನಸ್ಸಿನ ಸಂಕಲ್ಪ-ವಿಕಲ್ಪಗಳನ್ನು ನೀಗಿಸಿ, ಜನ್ಮಾಂತರದ ಭ್ರಮೆಯನ್ನು ಅಳಿಸಿದ ನಿತ್ಯ ಪರಿಪೂರ್ಣ ಅಖಂಡ ಪರಮವಸ್ತು ನಿಜಗುರು ಶಂಕರದೇವನನ್ನು ಬಸವಣ್ಣ, ಅಲ್ಲಮಪ್ರಭುಗಳಲ್ಲಿ ಕಂಡು ಸುಖಿಸಿದ್ದಾರೆ ಶಂಕರದಾಸಿಮಯ್ಯ ಶರಣರು.
"ಎರಳೆ(ಯತಿ)ಯಂತೆ ಕಾಕ ಪಿಕದಂತಿರಬೇಡವೇ?
ತಿಟ್ಟನೆ ತಿರುಗಿ, ತೊಟ್ಟನೆ ತೊಳಲಿ
ಬಳಲುವವರ ಕಳ ಹೇಸಿಗೆಯ ನೋಡಾ!
ಇರುಳು ಹಗಲೆನ್ನದೆ ತಿರುಗುವರ ಕಂಡು ಹೇಸಿದೆ.
ಅರಿದೆಡೆ ಶರಣ ಮರೆದಡೆ ಮಾನವ ಸತ್ತ
ಕಸನ ಹೊತ್ತುಕೊಂಡು ಊರೂರಿಗೆ ಮಾರುವ,
ಕಾಶಾಂಬರಧಾರಿಗಳನೊಲ್ಲ, ನಿಜಗುರು ಶಂಕರದೇವ"
(-ಶ.ದಾ.ವ.ಸಂ ೨)
ಕಾಗೆ ಕೋಗಿಲೆಗಳಂತೆ ತಿರುಗುತ್ತಾ ಬಳಲುವವರನ್ನು, ಹಗಲು ರಾತ್ರಿ ತಿರುಗುವವರನ್ನು ಕಂಡು ವಿಡಂಬಿಸಿದ್ದಾರೆ, ಶರಣ ಶಂಕರದಾಸಿಮಯ್ಯನವರು. "ಅರಿದಡೆ ಶರಣ, ಮರೆದಡೆ ಮಾನವ" ಎಂಬ ನುಡಿಗಟ್ಟನ್ನು ನೀಡಿದ್ದಾರೆ. ಸತ್ತ ಕಸನ ಎಂದರೆ ಬೇಡವಾದ ಚಿಂತನೆಗಳನ್ನು ಮೂಢನಂಬಿಕೆಗಳನ್ನು ಹೊತ್ತು ಊರೂರು ಸುತ್ತಿ ಜನಮಾನಸದಲ್ಲಿ ಬಿತ್ತುವ, ಕಾವಿಧಾರಿಗಳನ್ನು ಒಲ್ಲ ನಮ್ಮ ನಿಜಗುರು ಶಂಕರದೇವ ಎಂದು ವಾಸ್ತವ ಜಗತ್ತಿನ ವೈರುಧ್ಯಗಳನ್ನು ತಮ್ಮ ಮೇಲಿನ ವಚನದಲ್ಲಿ ಅನಾವರಣಗೊಳಿಸಿದ್ದಾರೆ. ಬಸವಣ್ಣನವರ ವಿಚಾರಕ್ರಾಂತಿಯಿಂದ ಪ್ರಭಾವಿತರಾದ ವಿಶಿಷ್ಟ ವಚನಕಾರರಾಗಿ ಶರಣ ಶಂಕರದಾಸಿಮಯ್ಯನವರು ಕಂಡು ಬರುತ್ತಾರೆ.
"ಕಾಯದ ಮದವಳಿದಲ್ಲದೆ ಮಾಯಾವಿಕಾರವಳಿಯದು ಮಾಯಾವಿಕಾರವಳಿದಲ್ಲದೆ
ಭವನಾಶವಾಗದು, ಭವನಾಶವಾದಲ್ಲದೆ
ಲಿಂಗಸಂಬಂಧವಳವಡದು, ಲಿಂಗಸಂಬಂಧವಳವಟ್ಟಲ್ಲದೆ
ಸುಖವು ಸಾಧ್ಯವಾಗದು, ಪರಮ ಸುಖ
ಪರಿಣಾಮಕ್ಕೆ ಮಹಾನುಭಾವಿಗಳ ಸಂಗವೇಬೇಕು
ಮಹಾನುಭಾವಿಗಳ ಸಂಗದಿಂದಲ್ಲದೆ
ವಿಶ್ರಾಮವಿಲ್ಲ ಇಂತಪ್ಪ ಮಹಾನುಭಾವದ ಮೂರ್ತಿ
ಸಂಗನ ಬಸವಣ್ಣನ ಕೃಪೆಯಿಂದಲೆನಗೆ ನಿಜವು
ಕಾಣಬಂದಿತ್ತು. ಇದು ಕಾರಣ ನಿಜಗುರು
ಶಂಕರದೇವರ ಶರಣ ಪ್ರಭುದೇವರ ಶ್ರೀಪಾದವ ಕಂಡು ನಿಶ್ಚಿಂತನಾದೆನಯ್ಯಾ (ಶ.ದಾ.ವ. ಸಂ ೩)
ಭೌತಿಕ ದೇಹದ ಮದವಳಿದರೆ ಮನಸ್ಸಿನ ವಿಕಾರವನ್ನು ತೊರೆಯಲು ಸಾಧ್ಯ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿರಿಸಿದರೆ ಮಾತ್ರ ಐಹಿಕ ಭೋಗಾಪೇಕ್ಷೆಯಿಂದ ಮುಕ್ತಿ ಸಾಧ್ಯ. ಆಗ ಇಷ್ಟಲಿಂಗ ಸಂಬಂಧ ಸಾಧ್ಯ. ಇದರಿಂದ ಪರಮಸುಖ ಹೊಂದಲು ಮಹಾನುಭಾವಿಗಳ ಸಾಮಿಪ್ಯಬೇಕು ಇಲ್ಲವಾದರೆ ನೆಮ್ಮದಿ ಸಿಗಲಾರದು. ಮಹಾನುಭಾವಿ ಬಸವಣ್ಣನವರ ಕೃಪೆಯಿಂದ ನನಗೆ ಲೌಕಿಕ ಬದುಕಿನ ನಿಜದರಿವು ಕಂಡುಬಂದಿತು. ಈ ಕಾರಣದಿಂದ ನಿಜಗುರು ಶಂಕರದೇವರ ಶರಣ ಅಲ್ಲಮಪ್ರಭುದೇವರ ಚರಣಕಮಲ ಕಂಡು ನಿಶ್ಚಿಂತನಾದೆ ಎಂದು ತಮ್ಮ ಮನದ ಭಾವನೆಗಳನನು ಸರಳವಾದ ಕನ್ನಡದಲ್ಲಿ ಅಭಿವ್ಯಕ್ತಿಸಿದ್ದಾರೆ. ವಯಸ್ಸಿನಲ್ಲಿ ತಮಗಿಂತಲೂ ಕಿರಿಯರಾದವರನ್ನೂ ಅವರ ಆಧ್ಯಾತ್ಮಿಕ ಸಾಧನೆಯನ್ನು ಕಂಡು ಗೌರವಿಸಿದ ಮಹಾನ್ ಶರಣ ಶಂಕರದಾಸಿಮಯ್ಯನವರು.
"ಕಾಯವಿಲ್ಲಾಗಿ ಮಾಯವಿಲ್ಲ, ಮಾಯವಿಲ್ಲಾಗಿ ಮಥನವಿಲ್ಲ
ಮಥನವಿಲ್ಲಾಗಿ ಭಾವವಿಲ್ಲ, ಭಾವವಿಲ್ಲಾಗಿ ಬಯಕೆಯಿಲ್ಲ
ಬಯಕೆಯಿಲ್ಲಾಗಿ ನಿರ್ಭಾವ ನಿಜವನೈದಿ ನಿಜಗುರು ಶಂಕರದೇವರೆಂಬುದು ತಾನಿಲ್ಲ (-ಶ.ದಾ.ವ. ಸಂ.೪)
ಮೇಲಿನ ವಚನದಲ್ಲಿ ಶರಣ ಶಂಕರದಾಸಿಮಯ್ಯನವರು ದೇಹದ ಬಯಕೆಗಳಿಲ್ಲದಿದ್ದರೆ (ಮಾಯೆ) ವ್ಯಾಮೋಹ ಇಲ್ಲ, ವ್ಯಾಮೋಹವೆಂಬ ಭ್ರಾಂತಿ ಇಲ್ಲದಾಗ ವಿಚಾರವಿಲ್ಲ, ವಿಚಾರವಿಲ್ಲದಲ್ಲಿ ಭಾವನೆಗಳಿಲ್ಲ. ಭಾವನೆಗಳಿಲ್ಲದಲ್ಲಿ ಆಸೆ, ಹಂಬಲ ಇಲ್ಲ. ಬಯಕೆ ಇಲ್ಲದಾಗ ನಿರ್ಭಾವ ನಿಜವನೈದಿ ನಿಜಗುರು ತಾನಿಲ್ಲ ಎನ್ನುವ ಆಧ್ಯಾತ್ಮಿಕ ತತ್ವವನ್ನು ಶೂನ್ಯಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ ಶರಣ ಶಂಕರದಾಸಿಮಯ್ಯನವರು "ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ ಎಂಬ ಬಸವಣ್ಣನವರ ವಾಣಿಗೆ ಸಾಕ್ಷಿಯಾಗಿದ್ದಾರೆ.
"ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ
ಕಾರಣ ಶಿವಾಚಾರ ಸದಾಚಾರವೆಂಬುದು
ಧರೆಗೆ ವಿಖ್ಯಾತವಾಗಿತ್ತು, ಶಿವಗಣ ಪ್ರಮಥಗಣಗಳೆಂಬ
ಮಹಾಮಹಿಮರ ಸುಳುಹು ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ, ಪರುಷವ ಸಾಧಿಸಿದಂತಾಯಿತ್ತು,
ನಿಮ್ಮ ಶರಣರ ಸಂಗದಿಂದ
ಎನ್ನ ನಂದಿಯ ಮೊಗವಾಡ, ನೊಸಲ ಕಣ್ಣುಂಟೆಂಬ
ಅಹಂಕಾರವ ಮುದಗೊಂಡಿದ್ದೆನಯ್ಯಾ
ಎನ್ನ ಮದ ಉಡುಗಿ, ಸಂಗನ ಬಸವಣ್ಣನ ಕರುಣದಿಂದ ಪ್ರಭುದೇವರೆಂಬ
ನಿರಾಳವ ಕಂಡು ಬದುಕಿದೆನು ಕಾಣಾ, ನಿಜಗುರು ಶಂಕರದೇವಾ."
(-ಶ.ದಾ.ವ.ಸಂ ೫)
ಹಿರಿಯ ವಚನಕಾರರಾದ ಶಂಕರದಾಸಿಮಯ್ಯನವರು ತಮ್ಮ ಮೇಲಿನ ವಚನದಲ್ಲಿ ಭಗವಾನ್ ಬಸವೇಶ್ವರರು. ಶಿವನ ಅಣತಿಯಂತೆ ಈ ಭೂಮಿಯಲ್ಲಿ ಅವರತಿಸಿದರು, ಶಿವಭಕ್ತಿ ಸದಾಚಾರವನ್ನು ಈ ಭುವಿಯಲ್ಲಿ ಬಿತ್ತಿದರು. ಶಿವನ ಗಣಂಗಳು ಧರೆಯ ಮೇಲೆ ಶರಣರಾಗಿ ಅವತರಿಸಿದರು. ಶರಣರ ಸಂಗದಿಂದ ಪರುಷ ಸೊಂಕಿದ ಲೋಹ ಚಿನ್ನವಾಗುವಂತೆ ನಾನು ಬದಲಾದೆ. ನಂದಿಯ ಮೊಗವಾಡ, ನೊಸಲ ಕಣ್ಣು ಉಂಟೆಂದು ನಾನು ಅಹಂಕಾರದಿಂದ ಬೀಗಿದ್ದೆ. ಇಂತಹ ಸಮಯದಲ್ಲಿ ನನ್ನ ಅಹಂಕಾರವನ್ನು ತೊಲಗಿಸಿದ ಬಸವಣ್ಣನವರ ಕೃಪೆಯಿಂದ ಅಲ್ಲಮಪ್ರಭು ದೇವರನ್ನು ಕಂಡು ನೆಮ್ಮದಿಯಿಂದ ಬದುಕಿದೆನು ಕಾಣಾ ನಿಜಗುರು ಶಂಕರದೇವಾ ಎಂದು ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಸಾಮಾನ್ಯನಾಗಿದ್ದ ನನ್ನನ್ನು ಆಧ್ಯಾತ್ಮಿಕವಾಗಿ ಉನ್ನತಿಗೆರಿಸದ ಭಗವಾನ್ ಬಸವೇಶ್ವರರಿಗೆ ಮತ್ತು ಅಲ್ಲಮಪ್ರಭುದೇವರಿಗೆ ಕೃತಜ್ಞತೆಯನ್ನು ಅರ್ಪಿಸಿದ್ದಾರೆ. ವ್ಯಕ್ತಿಯಾಗಿ ಮಾತ್ರವಲ್ಲದೆ ಸಮಷ್ಠಿಯಾಗಿಯೂ ಅಹಂಭಾವವನ್ನು ತೊರೆದು ಭಕ್ತಿಮಾರ್ಗದಲ್ಲಿ ನಡೆಯಿರಿ. ಇಷ್ಟಲಿಂಗಧಾರಿಗಳಾಗಿ, ಇಷ್ಟಲಿಂಗ ಪೂಜಕರನ್ನು ಸಾಕ್ಷತ್ ಶಿವನೆಂದು ತಿಳಿಯಿರಿ. ಪರನಿಂದೆ ಮಾಡದಿರಿ. ಸದಾ ಶರಣರ ಸಂಗದಲ್ಲಿ ನೆಮ್ಮದಿಯನ್ನು ಕಾಣಿರಿ ಎಂದಿದ್ದಾರೆ. ಶರಣ ಶಂಕರದಾಸಿಮಯ್ಯನವರ, ವಚನಗಳು ಸರಳವಾಗಿ, ಸೃಷ್ಟತೆಯಿಂದ ಕೂಡಿದ್ದು ವಚನಶಿಲ್ಪ ದೃಷ್ಟಿಯಿಂದ ಮಹತ್ವದವುಗಳಾಗಿವೆ. ವಿಷಯ ಸಂಗ್ರಹ ಮತ್ತು ಅಭಿವ್ಯಕ್ತಿ ಕೌಶಲ್ಯದಿಂದ ಗಮನಾರ್ಹವಾಗಿದೆ.
ಶಂಕರದಾಸಿಮಯ್ಯನವರ ಜೀವನ ವೃತ್ತಾಂತಗಳನ್ನು "ಮಲ್ಲಿಕಾರ್ಜುನ ಕವಿ" ವಿರಚಿತ ಶಂಕರದಾಸಿಮಯ್ಯ ಪುರಾಣ, ಶಂಕರದಾಸಿಮಯ್ಯ ರಗಳೆ ಸೋಮೇಶ್ವರ ಪುರಾಣ ಮುಂತಾದ ಗ್ರಂಥಗಳಲ್ಲಿ ಕಾಣಬಹುದು. ಶಂಕರದಾಸಿಮಯ್ಯನವರ ಸಮಕಾಲೀನ ಶರಣರೂ ತಮ್ಮ ವಚನಗಳಲ್ಲಿ ಸ್ಮರಿಸಿ ಅವರಿಗೆ ಗೌರವ ತೋರಿದ್ದಾರೆ. ಮಲ್ಲಿಕಾರ್ಜುನ ಕವಿ ವಿರಚಿತ ಶಂಕರದಾಸಿಮಯ್ಯ ಪುರಾಣ ಗ್ರಂಥವನ್ನು. ನಿವೃತ್ತ ನ್ಯಾಯಾಧೀಶರಾಗಿದ್ದ ವೀರಭದ್ರಪ್ಪ ಬಸವಪ್ಪ ಹಾಲಬಾವಿ ಧಾರವಾಡದ ಅವರು ೧೯೪೧ರಲ್ಲಿ ಪ್ರಕಟಿಸಿದರು. ಈ ಗ್ರಂಥದ ಪ್ರತಿಗಳು ಲಭ್ಯವಿರಲಿಲ್ಲ ಇದನ್ನು ಗಮನಿಸಿದ ಶ್ರೀ ಜಡೆಯಶಂಕರಲಿಂಗ ಟ್ರಸ್ಟ್ ೨೦೦೯ರಲ್ಲಿ ಪುನರ್ ಮುದ್ರಿಸಿದೆ.

ಜಯದೇವಪ್ಪ ಜೈನಕೇರಿ
ನಂ.೮೭, ಶಾಂತಲಾ, ಕುವೆಂಪು ರಸ್ತೆ
ಶಿವಮೊಗ್ಗ-೫೭೭ ೨೦೧

No comments:

Post a Comment

ಹಿಂದಿನ ಬರೆಹಗಳು