1) ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದ ಇತ್ಯಾದಿ ಅನೈತಿಕ ಮಾರ್ಗಗಳನ್ನು ಹಿಡಿದಿರುವ ರಾಜಕೀಯ ಪಕ್ಷಗಳು ಕರ್ನಾಟಕದ ಭವಿಷ್ಯಕ್ಕೆ ಕಂಟಕವಾಗಿವೆ. ಇವುಗಳಿಂದ ಬಿಡುಗಡೆ ಹೇಗೆ?
2) ಹೈಕಮಾಂಡ್ ಗುಲಾಮಗಿರಿಯಿಂದ ನರಳುತ್ತಿರುವ ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರು ಕರ್ನಾಟಕದ ಹಿತಾಸಕ್ತಿಗಳನ್ನು ಮರೆತಿದ್ದಾರೆ. ಪ್ರಾದೇಶಿಕ ಪಕ್ಷವೊಂದು ಮೂಡಿ ಬರಲು ಸಕಾಲವಲ್ಲವೆ?
3) ಒಕ್ಕೂಟ ವ್ಯವಸ್ಥೆಯಲ್ಲಿ, ಬಹುಪಕ್ಷಗಳ ಕೇಂದ್ರ ಸರಕಾರಗಳೇ ಆಳ್ವಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಚೌಕಾಶಿ ರಾಜಕಾರಣ ಮಾಡಬಲ್ಲ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಶಕ್ತಿಶಾಲಿಯಾಗಿವೆ. ಕರ್ನಾಟಕದಲ್ಲೂ ಇಂಥದೊಂದು ಪಕ್ಷ ರಚನೆ ಅನಿವಾರ್ಯವಲ್ಲವೆ?
4) ಒಂದು ಪ್ರಾದೇಶಿಕ ಶಕ್ತಿ ಕರ್ನಾಟಕದಲ್ಲಿ ಮೂಡಿಬರುವುದಾದರೆ ಅದರ ಧ್ಯೇಯೋದ್ದೇಶಗಳೇನಾಗಿರಬೇಕು?
5) ಹಣವೇ ಪ್ರಧಾನವಾಗಿರುವ ಇಂದಿನ ರಾಜಕೀಯ ಸಂದರ್ಭದಲ್ಲಿ ಭ್ರಷ್ಟ ರಾಜಕೀಯ ಪಕ್ಷಗಳ ಎದುರಿಸಲು ಪ್ರಾದೇಶಿಕ
ಪಕ್ಷವೊಂದು ಯಾವ ಕ್ರಮಗಳನ್ನು ಅನುಸರಿಸಬೇಕು?
ಕರ್ನಾಟಕದ ರಾಜಕಾರಣ ಎಷ್ಟು ಹದಗೆಟ್ಟಿದೆಯೆಂದರೆ, ಇದನ್ನು ಸರಿಪಡಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ ಎಂದು ಬಹುತೇಕ ಜನರು ತೀರ್ಮಾನಕ್ಕೆ ಬಂದ ಹಾಗೆ ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದ ಯುವಜನತೆ ರಾಜಕಾರಣದ ಕುರಿತು ಸಿನಿಕರಂತೆ ಮಾತನಾಡುವುದನ್ನು ನಾವು ನೋಡಬಹುದು. ಅದು ಅವರ ತಪ್ಪೂ ಅಲ್ಲ. ನಮ್ಮ ಜನಪ್ರತಿನಿಧಿಗಳು ರಾಜಕೀಯ ರಂಗವನ್ನು ರಾಡಿಯೆಬ್ಬಿಸಿದ್ದಾರೆ. ಇಲ್ಲಿ ಹಣ, ಜಾತಿ, ಧರ್ಮವೇ ರಾಜಕಾರಣವನ್ನು ಆಪೋಷನ ತೆಗೆದುಕೊಂಡಿದೆ. ಹಣ ಎಸೆದು ಓಟು ಪಡೆದು ಅಧಿಕಾರಕ್ಕೆ ಬರುವವರು ಹಣ ಗಳಿಸುವ ದಂಧೆಗೇ ನಿಲ್ಲುತ್ತಾರಲ್ಲವೆ? ರಾಜಕಾರಣವೇ ಇಂದು ದಂಧೆ ಎನ್ನುವಂತಾಗಿದೆ.
ಇದರ ಜತೆಗೆ ಕರ್ನಾಟಕವನ್ನು ಕಳೆದ ೬ ದಶಕಕ್ಕೂ ಹೆಚ್ಚು ಕಾಲ ಕಾಡುತ್ತಿರುವುದು ರಾಷ್ಟ್ರೀಯ ಪಕ್ಷಗಳ ಭೂತಗಳು. ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ರಾಜ್ಯವನ್ನು ಲೂಟಿ ಹೊಡೆಯುತ್ತಿರುವ ರಾಜಕೀಯ ಪಕ್ಷಗಳು ಎಂದೂ ಕನ್ನಡ-ಕರ್ನಾಟಕ-ಕನ್ನಡಿಗನ ಕುರಿತು ಕಾಳಜಿ ವಹಿಸಿದವರಲ್ಲ. ಈ ಪಕ್ಷಗಳ ರಾಜ್ಯ ಮುಖಂಡರಿಗೆ ತಮ್ಮ ಹೈಕಮಾಂಡ್ ಹೇಳಿದ್ದಷ್ಟೇ ವೇದವಾಕ್ಯ. ದಿಲ್ಲಿಯಲ್ಲಿ ಕುಳಿತಿರುವ ಪಕ್ಷದ ಹೈಕಮಾಂಡ್‌ನ ಎದುರು ಭಿಕ್ಷೆ ಬೇಡಿ, ಅಂಗಲಾಚಿ ಅಧಿಕಾರ ಪಡೆದುಕೊಳ್ಳುವ ರಾಜ್ಯ ನಾಯಕರು ನಂತರ ಗುಲಾಮಗಿರಿಯನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ.
ಕಾವೇರಿ ಜಲವಿವಾದ, ಬೆಳಗಾವಿ ಗಡಿ ವಿವಾದ, ಕೃಷ್ಣಾ ಜಲವಿವಾದ, ಕಳಸಾ ಬಂಡೂರಿ ವಿವಾದ, ಹೊಗೇನಕಲ್ ವಿವಾದ ಇತ್ಯಾದಿ ಯಾವುದೇ ವಿವಾದಗಳ ಸಂದರ್ಭದಲ್ಲಿ ಈ ರಾಷ್ಟ್ರೀಯ ಪಕ್ಷಗಳ ರಾಜ್ಯ ಮುಖಂಡರು ಬಾಯಿಬಿಟ್ಟು ಎಂದಾದರೂ ಮಾತನಾಡಿದ್ದನ್ನು ನೋಡಿದ್ದೀರಾ? ಒಂದು ವೇಳೆ ಮಾತನಾಡಿದರೂ ಅದು ನಾಟಕದ ಮಾತುಗಳು. ಅದೇ ಮಾತನ್ನು ತಮ್ಮ ಹೈಕಮಾಂಡ್ ಎದುರು ಹೇಳಲು ಅಳುಕುವ ಸಮಯ ಸಾಧಕರು ಇವರು.
ಇದೇ ರಾಷ್ಟ್ರೀಯ ಪಕ್ಷಗಳಿಂದ ಆಯ್ಕೆಯಾಗಿ ದೆಹಲಿ ಪಾರ್ಲಿಮೆಂಟಿಗೆ ಹೋಗುವ ಇದೇ ನಾಯಕರುಗಳು ಲೋಕಸಭೆ-ರಾಜ್ಯಸಭೆಗಳಲ್ಲೂ ತುಟಿ ಬಿಚ್ಚುವುದಿಲ್ಲ. ತಮ್ಮ ಪಕ್ಷದ ಹೈಕಮಾಂಡ್‌ಗೆ ಇರಿಸು ಮುರಿಸಾಗಬಾರದು ಎಂಬುದು ಅವರ ಉದ್ದೇಶ. ಹೇಗೂ ಮಾತನಾಡದ ಬೊಂಬೆಗಳೇ ಆಯ್ಕೆಯಾಗುತ್ತಿರುವುದರಿಂದ ರಾಷ್ಟ್ರೀಯ ಪಕ್ಷಗಳೂ ಒಂದು ಹೊಸ ವಿಧಾನ ಅನುಸರಿಸುತ್ತಿವೆ. ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಇತರ ರಾಜ್ಯಗಳಿಂದ ಹುಡುಕಿ ತಂದು ಕರ್ನಾಟಕದಲ್ಲಿ ನಿಲ್ಲಿಸುತ್ತಿವೆ. ಈ ರಾಜಕೀಯ ವ್ಯಭಿಚಾರವನ್ನೂ ಸಹ ನಮ್ಮ ರಾಜ್ಯ ನಾಯಕರು ಪ್ರೀತಿಯಿಂದ, ಭೀತಿಯಿಂದ ಸ್ವೀಕರಿಸಿ, ಇಂಥ ಪರದೇಶಿಗಳನ್ನು ಗೆಲ್ಲಿಸಿ ಕಳುಹಿಸುತ್ತಿದ್ದಾರೆ.
ಇದೇ ಸಂಪ್ರದಾಯ ಮುಂದುವರೆದರೆ ಇತರ ರಾಜ್ಯಗಳ ನಾಯಕರನ್ನೇ ನಮ್ಮ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲೂ ಈ ಹೈಕಮಾಂಡ್‌ಗಳು ಹಿಂಜರಿಯುವುದಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೂ ಪರದೇಶಿ ಅಭ್ಯರ್ಥಿಗಳಿಗೇ ಟಿಕೆಟ್ ಕೊಡುವ ಸಾಧ್ಯತೆಗಳು ಈಗಾಗಲೇ ಕಾಣಿಸಿಕೊಂಡಿವೆ.
ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಮೇಲೆ ಮಾಡಿರುವ ಅನಾಚಾರಗಳು ಒಂದಲ್ಲ, ಎರಡಲ್ಲ. ಈ ರೀತಿಯ ಆಕ್ರಮಣವನ್ನು ಗ್ರಹಿಸಿಯೇ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತಿತರ ಭಾಗಗಳಲ್ಲಿ ಪ್ರಾದೇಶಿಕ ಪಕ್ಷಗಳು ಪ್ರವರ್ಧಮಾನಕ್ಕೆ ಬಂದಿವೆ. ಈ ಪಕ್ಷಗಳು ಅಧಿಕಾರ ಅನುಭವಿಸುತ್ತಿರುವುದರಿಂದ ಆಯಾ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯವೂ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ದೊಡ್ಡ ಪ್ರಮಾಣದ ನೆರವು ತಮಿಳುನಾಡಿಗೇ ಏಕೆ ಹರಿಯುತ್ತದೆ ಎಂದರೆ ಅಲ್ಲಿನ ಪ್ರಾದೇಶಿಕ ಪಕ್ಷಗಳು ಬಹುಪಕ್ಷೀಯ ಸರ್ಕಾರವೇ ರಚನೆಯಾಗುತ್ತಿರುವ ಕೇಂದ್ರದ ಇಂದಿನ ವಿದ್ಯಮಾನದಲ್ಲಿ ಚೌಕಾಶಿ ರಾಜಕಾರಣಕ್ಕೆ ಇಳಿಯುತ್ತದೆ. ಡಿಎಂಕೆಯಾಗಲೀ, ಎಐಡಿಎಂಕೆಯಾಗಲಿ ಯಾವುದೇ ಪಕ್ಷ ಹೆಚ್ಚು ಸ್ಥಾನ ಗೆದ್ದರೂ ಅದು ಕೇಂದ್ರ ಸರ್ಕಾರದಲ್ಲಿ ಭಾಗೀದಾರನಾಗಿ, ತನ್ನ ರಾಜ್ಯಕ್ಕೆ ಬೇಕಾದ್ದನ್ನು ಮಾಡಿಕೊಳ್ಳುತ್ತದೆ. ಆಯಾ ರಾಜ್ಯದ ಸಂಪೂರ್ಣ ಆಡಳಿತವೂ ರಾಜ್ಯದಲ್ಲೇ ಉಳಿಯುತ್ತದೆ. ಎಲ್ಲದಕ್ಕೂ ದಿಲ್ಲಿಯ ಕಡೆ ನೋಡುವ ಗೋಳು ಅದಕ್ಕಿಲ್ಲ. ದಿಲ್ಲಿಯನ್ನೇ ತನ್ನ ರಾಜ್ಯದ ಕಡೆ ತಿರುಗಿಸಿಕೊಳ್ಳುವ, ಬೇಕಾದ ನಾಯಕರನ್ನು ಚೈನ್ನೈಗೇ ಕರೆಸಿಕೊಳ್ಳುವ ತಾಕತ್ತು ತಮಿಳುನಾಡಿನ ರಾಜಕಾರಣಿಗಳಿವೆ. ಅದಕ್ಕೆ ಕಾರಣ, ಅಲ್ಲಿನ ಪ್ರಾದೇಶಿಕ ಪಕ್ಷಗಳು.
ಇಂಥ ಸಂದರ್ಭದಲ್ಲಿ ಕರ್ನಾಟಕಕ್ಕೂ ಒಂದು ಪ್ರಾದೇಶಿಕ ಪಕ್ಷ ಬೇಡವೇ? ಒಂದು ವೇಳೆ ಪ್ರಾದೇಶಿಕ ಪಕ್ಷ ಸ್ಥಾಪನೆಯಾದಲ್ಲಿ ಅದರ ಸಂರಚನೆ ಹೇಗಿರಬೇಕು? ಅದರ ಧ್ಯೇಯೋದ್ದೇಶಗಳ ಏನಾಗಿರಬೇಕು ಎಂಬ ಪ್ರಶ್ನೆಗಳನ್ನಿಟ್ಟುಕೊಂಡು, ರಾಜ್ಯದ ಕೆಲವು ಗಣ್ಯರನ್ನು ಮಾತನಾಡಿಸಿದ್ದೇವೆ. ಅವರ ಅಭಿಪ್ರಾಯಗಳು ಇಲ್ಲಿವೆ.
-ಸಂ
ಪಿ.ವಿ. ನಾರಾಯಣ
ನಾಡಿನ ಜನತೆ ಎಚ್ಚರಗೊಂಡರೆ, ಅನ್ಯಾಯಗಳನ್ನು ಪ್ರಶ್ನಿಸುವಂತಾದರೆ ಮತ್ತು ಪ್ರತಿಭಟಿಸುವಂತಾದರೆ ರಾಜ್ಯದ ಭವಿಷ್ಯಕ್ಕೆ ಕಂಟಕವಾಗಿರುವ ಎಲ್ಲಾ ರೀತಿಯ ಅನೈತಿಕ ಮಾರ್ಗಗಳಿಗೂ ವಿರಾಮ ಹಾಕುವುದು ಅಸಾಧ್ಯವೇನಲ್ಲ. ಭ್ರಷ್ಟಾಚಾರಿಗಳಿಗೆ ಮತ ಹಾಕದೆ ಮತ್ತು ಅವರಿಗೆ ಅಧಿಕಾರ ನೀಡದಿರುವ ಬಗ್ಗೆ ರಾಜ್ಯದಲ್ಲಿ ಜನಾಂದೋಲನ ಆಗಬೇಕಿದೆ. ನಾಡಿನ ಸಾಮಾನ್ಯ ಜನತೆಗೆ ಧೈರ್ಯ ನೀಡುವಂತಹ ಮತ್ತು ಈ ಬಗ್ಗೆ ಉತ್ತಮ ಮಾರ್ಗದರ್ಶನ ನೀಡುವಂತಹ ಕೆಲಸಗಳು ಆಗಬೇಕಿದೆ. ಭ್ರಷ್ಟ ವ್ಯವಸ್ಥೆಗೆ ಪರ್ಯಾಯವಾಗಿ ಬದಲಿ ವ್ಯವಸ್ಥೆಯೊಂದನ್ನು ನೀಡಿದರೆ ಹೊಸ ದಿಕ್ಕಿನತ್ತ ಕರ್ನಾಟಕವನ್ನು ಕೊಂಡೊಯ್ಯಬಹುದು.
ಹೌದು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಅಸ್ತಿತ್ವಕ್ಕೆ ಬರಲು ಸದ್ಯದ ಸ್ಥಿತಿ ಅನುಕೂಲಕರವಾಗಿದೆ. ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರು ನಾಡಿನ ಹಿತಾಸಕ್ತಿಗಳನ್ನು ಮರೆತು ತಮ್ಮ ತಮ್ಮ ಪಕ್ಷಗಳ, ಸ್ವಾರ್ಥ ಸಾಧನೆಗಳ ಬೆನ್ನತ್ತಿ ನಾಡಿನ ಹಿತ ಮರೆತಿದ್ದಾರೆ. ಕನ್ನಡ ನಾಡು-ನುಡಿ ಜನಪದವನ್ನೇ ಪ್ರಮುಖವಾಗಿಸುವ ಪ್ರಾದೇಶಿಕ ಪಕ್ಷವೊಂದು ಅಸ್ತಿತ್ವಕ್ಕೆ ಬರಬೇಕಿದೆ. ಕರ್ನಾಟಕದ ಉದ್ದಾರಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಪೂರಕವಾದ ವಾತಾವರಣ ಸೃಷ್ಟಿಯಾಗದ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಜ್ಞಾ ಕೇಂದ್ರವನ್ನು ಬಿಂಬಿಸುವ ಪ್ರಾದೇಶಿಕ ಪಕ್ಷ ಮೂಡಬೇಕಿದೆ.
ಭಾರತ ದೇಶ ರಾಜ್ಯಗಳ ಒಕ್ಕೂಟ. ದೇಶದಲ್ಲಿ ಬೇರೆಬೇರೆ ಭಾಷೆಯ ಪಕ್ಷಗಳು ಅಸ್ತಿತ್ವದಲ್ಲಿವೆ. ಕೆಲ ರಾಜ್ಯಗಳು ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಹೊಂದಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರಗಳನ್ನು ತಮ್ಮ ಹಿಡಿತಕ್ಕೆ ತಂದುಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ ನಾಡಿನಲ್ಲಿ ಉದಯವಾಗುವ ಪ್ರಾದೇಶಿಕ ಪಕ್ಷ ಒಕ್ಕೂಟ ವ್ಯವಸ್ಥೆಯಲ್ಲಿ ಅನ್ಯರಾಜ್ಯಗಳಿಗೆ ಅನಾನುಕೂಲವಾಗದಂತೆ ನಾಡಿನ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ಜನಾಭಿಪ್ರಾಯದ ಮೂಲಕ ಅನುಷ್ಠಾನಗೊಳಿಸುವಂತಹ ರಚನಾತ್ಮಕ ಕಾರ್ಯ ನಡೆಯಬೇಕಿದೆ.
ನಾಡಿನ ಹಿತಕ್ಕೆ ಪೂರಕವಾಗುವಂತಹ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಬಲ್ಲ ಧ್ಯೇಯೋದ್ದೇಶಗಳನ್ನು ಹೊಂದಿದ ಸಮತೋಲನ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಕೊಡು-ಕೊಳ್ಳುವಿಕೆ ಮೂಲಕ ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಲ್ಲ ಸರ್ವರೀತಿಯ ಧ್ಯೇಯೋದ್ದೇಶಗಳನ್ನು ಪ್ರಾದೇಶಿಕ ಪಕ್ಷ ಹೊಂದಬೇಕಿದೆ.
ಪ್ರಾದೇಶಿಕ ಪಕ್ಷದಲ್ಲಿ ಪ್ರಾಮಾಣಿಕರಿಗಷ್ಟೆ ಅವಕಾಶ ಕಲ್ಪಿಸುವಂತಾಗಬೇಕು. ಜನತೆಯ ಸಮಸ್ಯೆಗಳನ್ನು ಗಂಭೀರವಾಗಿ ಚಿಂತಿಸಬಲ್ಲ ನಿಷ್ಠ ವ್ಯಕ್ತಿಗಳಿಗೆ ಪ್ರಾದೇಶಿಕ ಪಕ್ಷ ಅಧಿಕಾರ ನೀಡುವಂತಾಗಬೇಕು. ನಾಡು-ನುಡಿ-ಜನಪದ ಏಳಿಗೆಯ ಧ್ಯೇಯವನ್ನು ಹೊಂದಿದವರ ಪ್ರಾದೇಶಿಕ ಪಕ್ಷವಾಗಿ ಕಟ್ಟುವ ಕೆಲಸವಾಗಬೇಕು.
ಎಚ್.ಎಸ್. ದೊರೆಸ್ವಾಮಿ
ರಾಜ್ಯಕ್ಕೆ ಕಂಟಕಪ್ರಾಯವಾಗಿರುವ ಅನೈತಿಕ ಮಾರ್ಗಗಳ ನಿರ್ಮೂಲನೆಗೆ ಪಕ್ಷ ರಾಜಕೀಯದಿಂದ ಪರಿಹಾರ ಅಸಾಧ್ಯ. ಬೇರೆಬೇರೆ ರಾಜಕೀಯ ಪಕ್ಷಗಳಿಂದ ನಿರಂತರವಾಗಿ ಆಗಿರುವ ಅನಾಹುತಗಳೇ ಮತ್ಯಾವುದೇ ಪಕ್ಷವನ್ನು ರಚಿಸಿದರೂ ಆಗುವ ಸಾಧ್ಯತೆಗಳೇ ಹೆಚ್ಚಿದೆ. ಯಾವುದೇ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪ್ರತಿನಿಧಿಸದಂತೆ ಕಡಿವಾಣ ಹಾಕಬೇಕಿದೆ. ಇದಕ್ಕೆ ಪರ್ಯಾಯವಾಗಿ ಪ್ರತಿ ಕ್ಷೇತ್ರಗಳಲ್ಲೂ ಮತದಾರರ ಸಂಘವನ್ನು ರಚಿಸಬೇಕು. ಆ ಸಂಘವೇ ಚುನಾವಣಾ ಅಭ್ಯರ್ಥಿಯನ್ನು ಸೂಚಿಸಬೇಕು. ಹಳ್ಳಿಯಿಂದ ದಿಲ್ಲಿಯಿಂದ ತನಕ ಇಂತಹ ಪ್ರಯತ್ನ ನಡೆದರೆ ಮತದಾರನ ಸಮಸ್ಯೆಗಳನ್ನು ಬಗೆಹರಿಸುವ ಅಭ್ಯರ್ಥಿಗಳು ಜನಪ್ರತಿನಿಧಿಗಳಾಗುತ್ತಾರೆ. ಆಗ ಮಾತ್ರ ಎಲ್ಲಾ ರೀತಿಯ ಅನೈತಿಕ ಮಾರ್ಗಗಳಿಗೂ ಕಡಿವಾಣ ಬೀಳಲು ಸಾಧ್ಯವಾಗಿದೆ.
ಪಕ್ಷ ರಾಜಕಾರಣ ಒಪ್ಪುವುದಾದರೆ ಹೈಕಮಾಂಡ್ ಗುಲಾಮಗಿರಿಯನ್ನು ಒಪ್ಪಿಕೊಳ್ಳಬೇಕಾದಂತಹ ಅನಿವಾರ್ಯ ಸ್ಥಿತಿ ಸೃಷ್ಟಿಯಾಗಿದೆ. ದೇಶದಲ್ಲಿರುವ ಹಲವು ಪ್ರಾದೇಶಿಕ ಪಕ್ಷಗಳು ತಮ್ಮ ಯೋಗ್ಯತೆಗಳನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮತ್ತು ನಾಡಿನಲ್ಲಿ ಉದಯಿಸಿದ ಹಲವು ಪ್ರಾದೇಶಿಕ ಪಕ್ಷಗಳು ಅಸ್ತಿತ್ವ ಕಾಪಾಡಿಕೊಳ್ಳುವಲ್ಲಿ ವೈಫಲ್ಯಹೊಂದಿರುವ ಅನೇಕ ನಿದರ್ಶನಗಳು ನಮ್ಮ ಕಣ್ಣಮುಂದಿರುವಾಗ ಜನತೆಯ ಅಭ್ಯರ್ಥಿಯನ್ನೇ ಚುನಾವಣಾ ಕಣಕ್ಕೆ ಇಳಿಸುವುದೇ ಸೂಕ್ತ ಅನ್ನಿಸುತ್ತದೆ.
ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವಂತಹ ಗೊಂದಲದ ವಾತಾವರಣ ಸೃಷ್ಟಿಯಾಗಲು ಬಹುಪಕ್ಷಗಳ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿರುವುದೇ ಕಾರಣವಾಗಿದೆ. ಅನುಕೂಲ ಮತ್ತ ಅನಾನುಕೂಲಗಳ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರದ ಸ್ಥಿರತೆ ಮತ್ತು ಅಸ್ಥಿರತೆ ನಿರ್ಧಾರವಾಗುತ್ತಿದೆ. ಒಂದೆರಡು ಬಲಿಷ್ಠ ಪಕ್ಷಗಳನ್ನು ಹೊಂದಿದ ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿದ್ದರೆ ಒಕ್ಕೂಟ ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡಬಹುದು. ಆದರೆ ಕಿಚಿಡಿ ಸರ್ಕಾರಗಳಿಂದ ಒಕ್ಕೂಟ ವ್ಯವಸ್ಥೆಗೆ ಅಸಹ್ಯ ಹುಟ್ಟಿಸುವಂತಹ ಪರಿಸ್ಥಿತಿಗಳು ಇತ್ತಿಚಿನ ದಿನಮಾನಗಳಲ್ಲಿ ಕಾಣತೊಡಗಿದೆ.
ಪ್ರಬಲವಾದ ಪ್ರಾದೇಶಿಕ ಶಕ್ತಿ ಕರ್ನಾಟಕದಲ್ಲಿ ಮೂಡುವುದಾದರೆ ಜನತೆಯ ಪಕ್ಷವಾಗಿ, ಜನಹಿತವನ್ನೇ ಪ್ರಮುಖವಾಗಿಟ್ಟುಕೊಂಡು ಜನತೆಯನ್ನು ಪ್ರತಿನಿಧಿಸುವವರ ಜಾತಿರಹಿತ, ಭ್ರಷ್ಟಾಚಾರ ಮುಕ್ತ, ಸ್ವಜನಪಕ್ಷಪಾತ, ಕೋಮುವಾದ ವಿರೋಧಿ ಪ್ರಾದೇಶಿಕ ಶಕ್ತಿಯ ಅನಾವರಣ ಆಗಬೇಕಿದೆ.
ಜನಪ್ರತಿನಿಧಿ ಜನರ ಪ್ರತಿನಿಧಿಯಾಗಿರಬೇಕು. ಚುನಾವಣಾ ಅಖಾಡಕ್ಕೆ ಇಳಿಯುವ ಅಭ್ಯರ್ಥಿ ಸಮಾಜಕ್ಕೆ ಯೋಗ್ಯನಿರಬೇಕು. ಜನರ ಆಶೋತ್ತರಗಳನ್ನು ಈಡೇರಿಸುವಂತಾಗಬೇಕು. ಹಣಬಲ, ತೋಳ್ಬಲ ಉಳ್ಳವನನ್ನು, ಕೈಗಾರಿಕೋದ್ಯಮಿಯನ್ನು, ಸ್ವಾರ್ಥ ಸಾಧನೆಗಾಗಿ ರಾಜಕಾರಣ ಮಾಡುವವನನ್ನು ಪ್ರಾದೇಶಿಕ ಶಕ್ತಿಯಿಂದ ದೂರವಿಡಬೇಕು. ಈ ನಿಟ್ಟಿನಲ್ಲಿ ಹೊಸ ವಾತಾವರಣವನ್ನು ಪ್ರಾದೇಶಿಕ ಶಕ್ತಿ ಮೈಗೂಡಿಸಿಕೊಳ್ಳಬೇಕು.
ನಲ್ಲೂರು ಪ್ರಸಾದ್
ಕರ್ನಾಟಕದ ಭವಿಷ್ಯಕ್ಕೆ ಕಂಟಕವಾಗಿರುವ ಅನೈತಿಕ ಮಾರ್ಗಗಳನ್ನು ಹಿಡಿದಿರುವ ರಾಜಕೀಯ ಪಕ್ಷಗಳನ್ನು ಸರಿದಾರಿಗೆ ತರಲು ಅಥವಾ ಅವುಗಳಿಗೆ ಪರ‍್ಯಾಯವಾದ ವ್ಯವಸ್ಥೆಯನ್ನು ಕಲ್ಪಿಸಲು ಜನಪರವಾದಂತಹ ಚಳವಳಿ ನಡೆದು ಒಟ್ಟು ವ್ಯವಸ್ಥೆ ರಿಪೇರಿ ಆಗಬೇಕಿದೆ. ಅಂತಹ ಒಂದು ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಅಗತ್ಯತೆ ಇದೆ. ರಾಜ್ಯದ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು, ಶುದ್ಧೀಕರಣ ಮಾಡಲು ಸಮುದಾಯ-ಸಮಾಜ ಎಚ್ಚರಗೊಳ್ಳಬೇಕಿದೆ.
ಪ್ರಾದೇಶಿಕ ಪಕ್ಷ ಉದಯವಾಗಬೇಕೆಂಬ ಮಹಾದಾಸೆಯನ್ನು ಬಹುದಿನಗಳಿಂದ ಹೊಂದಿದ್ದೇನೆ. ಆದರೆ, ಪ್ರಾದೇಶಿಕ ಪಕ್ಷವು ಹೈಕಮಾಂಡ್ ಗುಲಾಮಗಿರಿಯಿಂದ ಹೊರತಾಗಿರುತ್ತದೆ ಎಂಬ ನಂಬಿಕೆಯಿಲ್ಲ. ಪ್ರಾದೇಶಿಕ ಪಕ್ಷಕ್ಕೂ ಇಂತಹ ಅಪಾಯ ಇದ್ದೇ ಇದೆ. ಜನರ ಆಶಯಗಳ ಈಡೇರಿಕೆಗಾಗಿ ಉದಯಿಸಿದ ನೆರೆ ರಾಜ್ಯಗಳ ಹಲವು ಪ್ರಾದೇಶಿಕ ಪಕ್ಷಗಳಲ್ಲೂ ಇಂದಿಗೂ ಭಿನ್ನತೆ ಇದೆ. ಆದರೆ, ಪ್ರಾದೇಶಿಕ ಪಕ್ಷಗಳನ್ನು ಮುನ್ನಡೆಸುವವರು ಯಾರು ಮತ್ತು ಯಾವ ನಡವಳಿಕೆ ಉಳ್ಳವರು ಎಂಬುದು ಪ್ರಮುಖವಾಗಿರುತ್ತದೆ. ಪ್ರತಿಯೊಂದು ಪಕ್ಷಗಳಲ್ಲೂ ಹೈಕಮಾಂಡ್ ಸಂಸ್ಕೃತಿ ಸಾಮಾನ್ಯವಾಗಿದ್ದು, ಸರಿ-ತಪ್ಪುಗಳ ಪ್ರಜ್ಞೆಯಿಂದ ಕೆಲಸ ಮಾಡಿದರೆ ಯಾವ ದುಷ್ಪರಿಣಾವೂ ಬೀರುವುದಿಲ್ಲ. ಇಂದು ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತೀವ್ರವಾಗಿದೆ.
ರಾಜ್ಯ ನಾಯಕರುಗಳು ಪಕ್ಷ ಬೇಧ ಮರೆತು ನಾಡಿನ ಹಿತರಕ್ಷಣೆಯನ್ನೇ ಪ್ರಮುಖವಾಗಿರಿಸಿಕೊಂಡು ಕಾರ್ಯನಿರ್ವಹಿಸಿದರೆ ಸರಿಯಾಗುತ್ತದೆ. ವೈವಿಧ್ಯತೆಯಲ್ಲಿ ಏಕತೆ ಕಾಣಬೇಕಿದೆ.
ಕೆಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದಲ್ಲಿ ಪಾಲುದಾರಿಕೆ ಹೊಂದಿ ಸಾಂದರ್ಭಿಕ ಚೌಕಾಶಿ ರಾಜಕಾರಣ ನಡೆಸುತ್ತಿರುವುದು ಬೇಸರದ ಸಂಗತಿ. ಚೌಕಾಶಿ ರಾಜಕಾರಣಕ್ಕಾಗಿ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷದ ಉದಯ ಆಗಬೇಕಾಗಿಲ್ಲ. ಪ್ರಾದೇಶಿಕ ಪಕ್ಷಗಳು ನಾಡಿಗೆ ದಕ್ಕಬೇಕಾದ ನ್ಯಾಯಯುತವಾದ ಹಕ್ಕುಗಳನ್ನು ಗಟ್ಟಿ ಧ್ವನಿಯಲ್ಲಿ ಕೇಳಿ ದಕ್ಕಿಸಿಕೊಳ್ಳುವಂತಾಗಬೇಕು. ಅಂತಹ ಒಂದು ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಗುಂಪು ರಾಜಕಾರಣ ಮತ್ತು ತಂತ್ರಗಾರಿಕೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ರಾಜ್ಯದ ಹಿತ ಕಾಯಬಲ್ಲ, ಸ್ಥಳೀಯ ಯೋಜನೆಗಳಿಗೆ ಅಭಿವೃದ್ಧಿ ಪೂರಕವಾದ ಪ್ರಾದೇಶಿಕ ಪಕ್ಷದ ಅಗತ್ಯತೆ ಹೆಚ್ಚಿದೆ.
ಸಮಗ್ರ ಕರ್ನಾಟಕವನ್ನು ಪ್ರಗತಿ ದಿಕ್ಕಿನತ್ತ ಕೊಂಡೊಯ್ಯಬಲ್ಲ, ತಳ ಸಮುದಾಯಗಳ ನೋವು-ನಲಿವುಗಳನ್ನು ಸರಿಪಡಿಸಬಲ್ಲ, ನಾಡಿನ ನೆಲ-ಜಲ-ಸಂಸ್ಕೃತಿ-ಉದ್ಯೋಗ-ಆರೋಗ್ಯ ಕಾಪಾಡಬಲ್ಲಂತಹ ಶುದ್ಧಾತಿಶುದ್ಧ ಉದ್ದೇಶಗಳನ್ನು ಮತ್ತು ವ್ಯಕ್ತಿಗಳನ್ನು ಒಳಗೊಂಡಂತಹ ಧ್ಯೆಯೋದ್ಧೇಶಗಳನ್ನು ಒಳಗೊಂಡ ಪ್ರಾದೇಶಿಕ ಶಕ್ತಿಯ ಉದಯವಾದರೆ ಕರ್ನಾಟಕದಲ್ಲಿ ಉಜ್ವಲ ಭವಿಷ್ಯವನ್ನು ನಿರೀಕ್ಷಿಸಬಹುದು.
ಭ್ರಷ್ಟ ರಾಜಕೀಯ ಪಕ್ಷಗಳನ್ನು ಎದುರಿಸುವ ಸದುದ್ದೇಶದಿಂದ ಪ್ರಾದೇಶಿಕ ಪಕ್ಷವೊಂದು ಉದಯವಾಗುವುದಾದರೆ ಮೊದಲನೆಯದಾಗಿ ಪ್ರಾದೇಶಿಕ ಅಸಮತೋಲನೆ ಸೇರಿದಂತೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದ ಇತ್ಯಾದಿ ಕುರಿತು ದೊಡ್ಡ ಮಟ್ಟದ ಜನಾಂದೋಲನ ಆಗಬೇಕಿದೆ ಮತ್ತು ವೈಚಾರಿಕ ಬದ್ಧತೆಯನ್ನು ಹೊಂದಬೇಕಿದೆ. ಭ್ರಷ್ಟ ಪಕ್ಷಗಳನ್ನು, ಜನಪ್ರತಿನಿಧಿಗಳನ್ನು ಎದುರಿಸುವ ತಾಕತ್ತು ಮತ್ತು ಮುಕ್ತ-ಪರಿಶುದ್ಧವಾದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಭಿನ್ನ ಪರಿಸರವನ್ನು ಪ್ರಾದೇಶಿಕ ಪಕ್ಷ ಸೃಷ್ಟಿಸಬೇಕಿದೆ. ಹಣಬಲವೇ ರಾಜಕೀಯ ಶಕ್ತಿಯಲ್ಲ ಎಂಬುದಾಗಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ.
ದ್ವಾರಕನಾಥ್
ಭ್ರಷ್ಟಚಾರ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದದಂತಹ ಪಿಡುಗುಗಳಿಂದ ಕರ್ನಾಟಕ ರಾಜ್ಯ ವಿಮುಖವಾಗಬೇಕಿದ್ದರೆ ಪರ್ಯಾಯ ವಿರೋಧ ಪಕ್ಷವೊಂದರ ತುರ್ತು ರಚನೆಯಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯವನ್ನು ಇದುವರೆಗೂ ಆಳಿರುವ ಎಲ್ಲಾ ರಾಜಕೀಯ ಪಕ್ಷಗಳು ವೈಫಲ್ಯಕಂಡಿವೆ. ಪ್ರಗತಿಪರವಾದಂತಹ ಪ್ರಬಲ ಸಂಘಟನೆ ಹೊಂದಿದಂತಹ ಪಕ್ಷ ಉದಯಿಸಬೇಕಿದೆ. ಹೀಗಾದಾಗ ಮಾತ್ರ ಕರ್ನಾಟಕ ರಾಜ್ಯಕ್ಕೊಂದು ಉಜ್ವಲ ಭವಿಷ್ಯ ದೊರಕಲು ಸಾಧ್ಯವಾಗಬಹುದು.
ಯಾವುದೇ ದೃಷ್ಟಿಯಲ್ಲಿ ಆಲೋಚಿಸಿದರೂ ರಾಜ್ಯದ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಉದಯವಾಗಲು ಸದ್ಯದ ಸ್ಥಿತಿ ಸೂಕ್ತವಾಗಿದೆ ಅನ್ನಿಸುತ್ತದೆ. ಎಲ್ಲಾ ರಾಜಕೀಯ ಪಕ್ಷಗಳು ಹೈಕಮಾಂಡ್ ಕಪಿಮುಷ್ಠಿಯಲ್ಲಿ ನಲುಗುತ್ತಿರುವುದು ಸಾರ್ವಜನಿಕವಾಗಿದೆ. ನೆರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದು ಕೆಲವು ಯಶಸ್ವಿಗೊಂಡಿದೆ. ಸಮಗ್ರ ಕರ್ನಾಟಕದ ಆಶಯಗಳು ಈಡೇರಬೇಕಾದರೆ ಪ್ರಾದೇಶಿಕ ಪಕ್ಷದ ಅಗತ್ಯತೆ ಅನಿವಾರ್ಯವಾಗಿದೆ.
ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿವೆ. ಕೆಲ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಚೌಕಾಶಿ ರಾಜಕಾರಣದ ಮೂಲಕ ಕೇಂದ್ರ ಸರ್ಕಾರಗಳಲ್ಲಿ ಹಿಡಿತ ಸಾಧಿಸಿವೆ. ಆದರೆ, ಇದು ಒಕ್ಕೂಟ ವ್ಯವಸ್ಥೆಗೆ ತದ್ವಿರುದ್ಧವಾದಂತಹ ಕ್ರಿಯೆ. ಇವೆಲ್ಲದರ ನಡುವೆ ರಾಜ್ಯವನ್ನು ಪ್ರತಿನಿಧಿಸಿರುವ ಮತ್ತು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಅಥವ ಮನವರಿಕೆ ಮಾಡಿ ನಾಡಿನ ಹಿತ ಕಾಪಾಡುತ್ತಿಲ್ಲ. ಹೀಗಾಗಿ, ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷದ ರಚನೆ ಅನಿವಾರ್ಯವಾಗಿದೆ.
ರಾಜ್ಯದಲ್ಲಿ ಅಧಿಕಾರ ನಡೆಸಿರುವ ರಾಜಕೀಯ ಪಕ್ಷಗಳು ಅನುಸರಿಸಿರುವ ಅನೈತಿಕ ಮಾರ್ಗಗಳಿಗೆ ವಿರುದ್ಧವಾದಂತಹ ಧ್ಯೇಯೋದ್ದೇಶಗಳನ್ನು ಹೊಂದಿದ ಪ್ರಾದೇಶಿಕ ಪಕ್ಷ ಉದಯಿಸಬೇಕಿದೆ. ಪ್ರಗತಿಪರ ಚಳವಳಿಗಳು, ರೈತ, ದಲಿತ, ಕನ್ನಡ ಮಹಿಳಾ, ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಪ್ರಾದೇಶಿಕ ಪಕ್ಷವನ್ನು ಬಲಗೊಳಿಸಬೇಕಾದ ತುರ್ತು ಸೃಷ್ಟಿಯಾಗಿದೆ.
ಆಸೆ-ಆಮಿಷಗಳಿಗೆ ಒಳಗಾಗಿ ಮತವನ್ನು ಮಾರಾಟಮಾಡಿಕೊಳ್ಳುತ್ತಿರುವ ಮತದಾರರನ್ನು ಜಾಗೃತಗೊಳಿಸುವಂತಹ ಜನಾಂದೋಲನದ ಮೂಲಕ ಪ್ರಾದೇಶಿಕ ಪಕ್ಷಕ್ಕೆ ಚಾಲನೆ ನೀಡಬೇಕಿದೆ. ರಾಜಕಾರಣಕ್ಕೆ ಹಣವೇ ಅನಿವಾರ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಈ ಬಗ್ಗೆ ಸಾಮಾನ್ಯ ಜನತೆಯಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಿದೆ. ಸಮಾಜದಿಂದ ಲೂಟಿಮಾಡಿದ ಹಣವನ್ನೇ ನೀಡಿ ಮತದಾರರನ್ನು ವಂಚಿಸುತ್ತಿರುವ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ.
ಪಟಾಪಟ್ ನಾಗರಾಜ್
ರಾಜ್ಯದ ಭವಿಷ್ಯಕ್ಕೆ ಕಂಟಕವಾಗಿರುವ ರಾಜಕೀಯ ಪಕ್ಷಗಳ ಅನೈತಿಕ ಮಾರ್ಗಗಳ ಕುರಿತು ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಪ್ರಮುಖವಾಗಿ ಮತದಾರರಲ್ಲಿ ಓಟಿನ ಮೌಲ್ಯವನ್ನು ಅರ್ಥಮಾಡಿಸಬೇಕಿದೆ. ಸಂವಿಧಾನಬದ್ಧವಾದ ಚುನಾವಣೆಗಳು ನಡೆಯುವಂತಾಗಬೇಕು. ರಾಜಕೀಯ ಅಧಿಕಾರದ ಮಹತ್ವ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಅರಿವಾದಾಗ ಮಾತ್ರ ಎಲ್ಲಾ ಬಿಡುಗಡೆಗಳಿಗೆ ಸಾಧ್ಯವಾಗುತ್ತದೆ.
ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ, ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ರಾಷ್ಟ್ರೀಯ ಮನೋಭಾವನೆ ಜೊತೆಯಲ್ಲೇ ಪ್ರಾಂತೀಯ ಅಭಿವೃದ್ಧಿಯನ್ನು ಬಯಸುವ ಪ್ರಾದೇಶಿಕ ಪಕ್ಷವೊಂದು ಮೂಡಿಬರಲು ಸಕಾಲವಾಗಿದ್ದು, ಹೈಕಮಾಂಡ್ ಗುಲಾಮಗಿರಿಯಿಂದ ನಲುಗಿರುವ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಿದೆ.
ಪ್ರಾದೇಶಿಕ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ನ್ಯಾಯಬದ್ಧವಾದ ಪರಿಹಾರವನ್ನು ಕಂಡುಕೊಳ್ಳಬೇಕಾದ ಪ್ರಾದೇಶಿಕ ಪಕ್ಷ ಅನಿವಾರ್ಯವಿದೆಯೇ ಹೊರತು ಚೌಕಾಶಿ ರಾಜಕಾರಣದ ಮೂಲಕ ಅನ್ಯ ರಾಜ್ಯಗಳಿಗೆ ದ್ರೋಹ ಮಾಡುವ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇಲ್ಲ. ಚೌಕಾಶಿ ರಾಜಕಾರಣದಲ್ಲಿ ವಿಶ್ವಾಸವಿಲ್ಲ. ಆದರೆ, ರಾಜ್ಯದಲ್ಲಿ ಸಮಗ್ರ ರಾಜಕೀಯ ಬದಲಾವಣೆ ಮತ್ತು ಅಭಿವೃದ್ಧಿ ಬದಲಾವಣೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಾಮೂಹಿಕ ನಾಯಕತ್ವದ ಪ್ರಾದೇಶಿಕ ಪಕ್ಷ ಉದಯವಾದರೆ ಅರ್ಥವಿರುತ್ತದೆ.
ರಾಷ್ಟ್ರದ ಏಕತೆಗೆ ಪೂರಕವಾದಂತಹ, ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡದ ರಾಜ್ಯ ಕಾಳಜಿ ಮತ್ತು ರಾಷ್ಟ್ರ ನಿಷ್ಠೆಯನ್ನು ಹೊಂದಿದ ಧ್ಯೆಯೋದ್ದೇಶಗಳನ್ನೇ ಪ್ರಮುಖವಾಗಿರಿಸಿಕೊಂಡು ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷ ಉದಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಲಿ.
ಭ್ರಷ್ಟ ರಾಜಕೀಯ ಪಕ್ಷಗಳನ್ನು ಎದುರಿಸಲು ಪ್ರಾದೇಶಿಕ ಪಕ್ಷ ಜನರ ನಡುವಿನ ಪಕ್ಷವಾಗಿ, ಜನತೆಯ ಪಕ್ಷವಾಗಿ ಜನಾಭಿಪ್ರಾಯವನ್ನೇ ಪ್ರಮುಖವಾಗಿಟ್ಟುಕೊಂಡು ಜನಶಕ್ತಿಯ ಮೇಲೆ ತನ್ನ ಕಾರ್ಯತಂತ್ರವನ್ನು ರೂಪಿಸಬೇಕು. ಜಾತೀಯತೆ-ಕೋಮುವಾದ, ಭ್ರಷ್ಟಾಚಾರ-ಸ್ವಜನಪಕ್ಷಪಾತ ಇವುಗಳಿಗೆ ತಕ್ಕ ಪಾಠ ಕಲಿಸುವಂತಹ ಪರಿಸರವನ್ನು ನಿರ್ಮಿಸಿಕೊಂಡರೆ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿದೆ.
ಕುಂ.ವೀರಭದ್ರಪ್ಪ
ಕಳೆದ ಒಂದು ದಶಕದಿಂದ ರಾಜ್ಯದ ರಾಜಕಾರಣಿಗಳು ಮತ್ತು ರಾಜ್ಯಾಧಿಕಾರ ನಡೆಸಿರುವ ರಾಜಕೀಯ ಪಕ್ಷಗಳು ಸಾರ್ವಜನಿಕವಾಗಿ ಮತದಾರರನ್ನು ಭ್ರಷ್ಟರನ್ನಾಗಿಸುವ ಮೂಲಕ ಮತದಾನ ಎಂಬುದು ಬಿಕರಿ ಆಗುತ್ತಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಟ ನಡೆಸುವಂತಹ ಸನ್ನಿವೇಶ ಆರಂಭವಾಗಬೇಕಿದೆ. ರಾಜಕೀಯ ಪಕ್ಷಗಳಿಗೆ ಸಮಾಜ ಮತ್ತು ದೇಶದ ಬಗ್ಗೆ ಕನಿಷ್ಟ ಪ್ರೀತಿ ಇಲ್ಲದೇ ಇರುವುದು ಎಲ್ಲಾ ಅರಾಜಕತೆಗೆ ದಾರಿಯಾಗಿದೆ. ಕರ್ನಾಟಕದ ಮಟ್ಟಿಗೆ ಕಡಿಮೆ ಹಣವನ್ನು ವಿನಿಯೋಗಿಸಿ ನಡೆಯುವ ಚುನಾವಣೆಗಳು ಅಸ್ತಿತ್ವಕ್ಕೆ ಬರಬೇಕಿದೆ. ಚುನಾವಣೆಗಳು ಇಂದು ವ್ಯಾಪಾರಿ ಕೇಂದ್ರಗಳಾಗಿ ಪರಿಣಮಿಸಿದ್ದು, ಇದಕ್ಕೆ ಭಿನ್ನವಾದ ಪರಿಸ್ಥಿತಿ ನಿರ್ಮಾಣವಾದಾಗ ಮಾತ್ರ ಕರ್ನಾಟಕದ ಭವಿಷ್ಯಕ್ಕೆ ಮಾರಕವಾಗಿರುವ ಕಂಟಕದಿಂದ ವಿಮುಕ್ತಿ ಪಡೆಯಲು ಸಾಧ್ಯವಾಗುತ್ತದೆ.
ಕರ್ನಾಟಕದ ಹಿತಾಸಕ್ತಿಗಳನ್ನು ಮರೆತಿರುವ ರಾಷ್ಟ್ರೀಯ ಪಕ್ಷಗಳಿಗೆ ಪರ‍್ಯಾಯವಾಗಿ ಪ್ರಾದೇಶಿಕ ಪಕ್ಷವೊಂದು ಮೂಡಿಬರಲು ಸಕಾಲವಾಗಿದ್ದರೂ ತೀವ್ರ ಸ್ವರೂಪದ, ಶಾಶ್ವತವಾದ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಬೇರೂರಬೇಕಿದೆ. ಭಾಷಾ ಚಳವಳಿ ನಾಡಿನಲ್ಲಿ ತೀವ್ರವಾಗಿದ್ದರೂ ಇಂತಹ ಒಂದು ಪ್ರಯತ್ನ ಇದುವರೆಗೂ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕವಾಗಿ ತಿಳಿವಳಿಕೆ ಮೂಡಿಸುವಂತಹ ತುರ್ತು ಕೆಲಸಗಳು ನಡೆಯಬೇಕಿದ್ದು, ಅಧಿಕಾರ ವಿಕೇಂದ್ರೀಕರಣ ಎಂಬುದು ಅನುಷ್ಠಾನಗೊಳ್ಳದಿರುವ ಸಂದರ್ಭದಲ್ಲಿ ದೆಹಲಿಯನ್ನೇ ಕೇಂದ್ರವಾಗಿಟ್ಟುಕೊಂಡು ರಾಜ್ಯ ನಾಯಕರು ರಾಜಕಾರಣ ಅವಲಂಬಿತರಾಗಿರುವುದರಿಂದ ಹೈ ಕಮಾಂಡ್ ಗುಲಾಮಗಿರಿಯಿಂದ ರಾಜ್ಯದ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ. ಓಟ್ ಬ್ಯಾಂಕ್ ರಾಜಕಾರಣವನ್ನೇ ಪ್ರಮುಖವಾಗಿರಿಸಿಕೊಂಡಿರುವ ರಾಷ್ಟ್ರೀಯ ಪಕ್ಷಗಳಿಗೆ ಯಾವ ರಾಜ್ಯದ ಹಿತಾಸಕ್ತಿಗಳು ಪ್ರಮುಖ ಎನಿಸುವುದಿಲ್ಲ. ಕರ್ನಾಟಕದ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳಿಗೆ ದಿಲ್ಲಿಯ ಪರಿಹಾರ ದೊರಕಬೇಕಾದರೆ ಇಂತಹ ಸಂದಿಗ್ಧತೆಯಲ್ಲೇ ಪ್ರಾದೇಶಿಕ ಪಕ್ಷವೊಂದು ಮೂಡಿಬರಬೇಕಿದೆ.
ಪ್ರಾದೇಶಿಕ ಪಕ್ಷ ರಚನೆಯ ಅನಿವಾರ್ಯತೆ ರಾಜ್ಯದಲ್ಲಿ ನಿಜಕ್ಕೂ ಇದೆ. ಪ್ರಾದೇಶಿಕ ಪಕ್ಷಗಳಿಗೆ ಅವಲಂಬಿತವಾಗಿ ಕೇಂದ್ರದಲ್ಲಿ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ಪ್ರಾತಿನಿಧಿಕ ಅವಕಾಶ ದೊರೆಯುವುದರಲ್ಲಿ ಅನುಮಾನವಿಲ್ಲ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರಿಕರಣದ ಧ್ಯೆಯೋದ್ದೇಶಗಳನ್ನು ಗಮನೀಕರಿಸಿ ಮುಂದಿನ ೨೦ವರ್ಷಗಳ ಸಾಮಾಜಿಕ ಪರಿಸ್ಥಿತಿಯನ್ನು ಆಲೋಚಿಸಿ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷ ರಚನೆಗೊಳ್ಳಬೇಕಿದೆ.
ಕರ್ನಾಟಕದಲ್ಲಿ ಪ್ರಾದೇಶಿಕ ಶಕ್ತಿಯೊಂದು ಮೂಡುವುದಾದರೆ ಗ್ರಾಮೀಣ ಪ್ರದೇಶಗಳ ಸಾಮಾನ್ಯ ಮತದಾರ ಭ್ರಷ್ಟಗೊಳ್ಳದಂತೆ ನೋಡಿಕೊಳ್ಳುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ರಾಷ್ಟ್ರೀಯ ಮತ್ತು ರಾಜ್ಯ ಪರ ಕಾಳಜಿಯನ್ನು ನಾಡಿನ ಸಾಮಾನ್ಯ ಜನತೆಯಲ್ಲೂ ಮೂಡಿಸಬೇಕಾದ ಅನಿವಾರ್ಯತೆ ಇದೆ. ಎಲ್ಲದಕ್ಕೂ ಮಿಗಿಲಾಗಿ ನಾಡಿನ ಪ್ರತಿ ಮತದಾರನಲ್ಲೂ ನೈತಿಕ ಶಕ್ತಿಯೊಂದನ್ನು ಸೃಷ್ಟಿಸುವ ನಿಟ್ಟಿನಲ್ಲಿ ಜನಾಂದೋಲನ ನಡೆದಾಗ ಮಾತ್ರ ಆ ಹಿನ್ನಲೆಯಲ್ಲಿ ಉದಯಿಸುವ ಪ್ರಾದೇಶಿಕ ಶಕ್ತಿಗೆ ಅರ್ಥವಿರುತ್ತದೆ.
ಹಣ ಮತ್ತು ಅಧಿಕಾರ ಎಂದರೆ ಭಯಪಡುವಂತಹ ವಾತಾವರಣವನ್ನು ಸೃಷ್ಟಿಸಬೇಕಿದ್ದು, ಇಂತಹ ಹಿನ್ನೆಲೆಯುಳ್ಳವರೇ ಪ್ರಾದೇಶಿಕ ಪಕ್ಷ ರಚನೆಗೆ ಮುಂದಾಗಬೇಕಿದೆ. ಲಜ್ಜಾರಹಿತ ರಾಜಕಾರಣ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿಯಾಗಿದ್ದು, ಇದಕ್ಕೆ ವಿರುದ್ಧವಾದಂತಹ ಎಲ್ಲಾ ಕ್ರಮಗಳನ್ನು ಪ್ರಾದೇಶಿಕ ಪಕ್ಷ ಅನುಸರಿಸಬೇಕಿದೆ.
ಎಸ್. ದೊರೆರಾಜ್
ಕೇಂದ್ರಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಭ್ರಷ್ಠಾಚಾರ ಅತಿರೇಕಕ್ಕೆ ಹೋಗಿದ್ದು, ಈ ಎರಡು ಸರ್ಕಾರಗಳ ಒಳ ಒಪ್ಪಂದದಿಂದಾಗಿ ಸಮಗ್ರ ದೇಶದ ಪ್ರಜಾಸತ್ತೆಗೆ ಮಾರಕವಾಗಿದೆ.
ರಾಜ್ಯದಲ್ಲಂತೂ ಎಲ್ಲವೂ ಶುದ್ಧ ಕ್ರಯಕ್ಕೆ ಒಳಗಾಗಿವೆ. ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ ಎಲ್ಲವೂ ಸಮ ಪ್ರಮಾಣದಲ್ಲಿ ಹೊಲಸೆದ್ದಿವೆ. ಇಂತಹ ನೀತಿಗಳನ್ನು ಧಿಕ್ಕರಿಸುವ ಕಾಲ ಸನ್ನಿಹಿತವಾಗಿದೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪ್ರಜ್ಞಾಪೂರಕವಾಗಿ ನಡೆದುಕೊಂಡರೆ-ಚಿಂತಿಸಿದರೆ ಮಾತ್ರ ಎಲ್ಲಾ ಕಂಟಕಗಳಿಂದ ರಾಜ್ಯ ಬಿಡುಗಡೆಗೊಳ್ಳಲು ಸಾಧ್ಯ.
ರಾಜ್ಯದಲ್ಲಿ ಕೇವಲ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದ ಮಾತ್ರ ಮೇರೆ ಮೀರಿಲ್ಲ. ಇದರೊಂದಿಗೆ ವಾಮಾಚಾರವೂ ಎಲ್ಲೆ ಮೀರಿದೆ. ಇಂತಹ ಸಂದಿಗ್ಧತೆಯಲ್ಲಿ ಪ್ರಾದೇಶಿಕ ಪಕ್ಷ ಮೂಡಿಬರಲು ಸಕಾಲವಾಗಿದೆ. ಅನೈತಿಕ ರಾಜಕಾರಣಕ್ಕೆ ತಿಲಾಂಜಲಿ ಹಾಡಬೇಕಿದೆ. ರಾಜ್ಯದ ಹಿತಾಸಕ್ತಿಯನ್ನು ಸಮಸ್ತ ಕನ್ನಡಿಗರು ಕಾಪಾಡಬೇಕಿದೆ.
ನೆರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಬಲಪ್ರಯೋಗಿಸಿ ಆಯಾ ರಾಜ್ಯಗಳ ಅಭಿವೃದ್ಧಿಗೆ ಪೂರಕವಾದಂತಹ ಯೋಜನೆಗಳನ್ನು ಧಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಹೈಕಮಾಂಡ್ ಸಂಸ್ಕೃತಿ ಸರ್ವಾಧಿಕಾರಿ ಮನೋಭಾವನೆ ಹೊಂದಿದ್ದು, ರಾಜ್ಯಗಳ ಸ್ಥಳೀಯ ಸಮಸ್ಯೆಗಳು ಅವರಿಗೆ ಮುಖ್ಯವಲ್ಲ. ಅಧಿಕಾರವಷ್ಟೇ ಮುಖ್ಯ ಎಂಬ ಉದ್ದೇಶಕ್ಕೆ ಬಲಶಾಲಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುತ್ತಿವೆ.
ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸುವ ರಾಜ್ಯ ನಾಯಕರುಗಳಿಗೆ ನಾಡಿನ ಹಿತಕ್ಕಿಂತ ಪಕ್ಷಗಳ ಹಿತವೇ ಮುಖ್ಯವಾಗಿರುತ್ತವೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಅಸಮತೋಲನವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬಲ್ಲ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ದೊರಕಿಸುವಂತಹ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ.
ಅನೈತಿಕ ರಾಜಕಾರಣಕ್ಕೆ ತಿಲಾಂಜಲಿ ಇಡಬಲ್ಲ ಎಲ್ಲಾ ಅನೈತಿಕ ಮಾರ್ಗಗಳಿಗೂ ಅವಕಾಶ ಕಲ್ಪಿಸದ ಜನಪ್ರತಿನಿಧಿಯನ್ನು ಜನರೇ ನಿರ್ಧರಿಸುವಂತಹ ಪ್ರಾದೇಶಿಕ ಪಕ್ಷ ಧ್ಯೆಯೋದ್ದೇಶಗಳನ್ನು ಹೊಂದಬೇಕಿದೆ. ಪ್ರಸ್ತುತ ರಾಜಕೀಯ ಪಕ್ಷಗಳಿಗೆ ಭಿನ್ನವಾಗಿ ಮೂಡಿಬರುವ ಪ್ರಾದೇಶಿಕ ಪಕ್ಷ ಪಕ್ಷಾಂತರ ಮಾಡುವ ಜನಪ್ರತಿನಿಧಿ ಮತ್ತು ರಾಜೀನಾಮೆ ನೀಡುವ ಜನಪ್ರತಿನಿಧಿ ಚುನಾವಣಾ ವೆಚ್ಚವನ್ನು ಭರಿಸುವಂತಹ ಹೊಸ ನೀತಿಯನ್ನು ಹೊಂದಬೇಕು. ಭ್ರಷ್ಟಾಚಾರ, ಅನಾಚಾರ ಎಸಗುವ ಜನಪ್ರತಿನಿಧಿಗಳನ್ನು ವಾಪಸ್ಸು ಕರೆಸಿಕೊಳ್ಳುವ ಬದ್ಧತೆಗೆ ಪ್ರಾದೇಶಿಕ ಪಕ್ಷ ಒಳಗಾಗಬೇಕು. ಉದ್ಯೋಗ ಆರ್ಥಿಕತೆ, ನೈತಿಕತೆಗೆ ಪ್ರಾಮುಖ್ಯತೆ ನೀಡಬೇಕು.
ಮೊದಲನೆಯದಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಬೇಕಿದೆ. ಹಣದ ಆಮಿಷಕ್ಕೆ ಮತದಾರ ಬಲಿಯಾಗದಂತೆ ಜನಾಂದೋಲನ ನಡೆಸಬೇಕಿದೆ. ಒಟ್ಟಾರೆ ಪ್ರಸ್ತುತ ಇರುವ ಸನ್ನಿವೇಶಕ್ಕೆ ವಿರುದ್ಧವಾದಂತಹ ವಾತಾವರಣವನ್ನು ನಿರ್ಮಿಸಬೇಕಿದೆ.
ಕೋಡಿಹಳ್ಳಿ ಚಂದ್ರಶೇಖರ್
ರಾಜ್ಯ ಕಟ್ಟುವ ಇಚ್ಛಾಶಕ್ತಿ, ನಾಡು, ನುಡಿ, ನಾಡಿನ ಜನರ ಸಂಕಷ್ಟಗಳ ಬಗ್ಗೆ ಈಗಿನ ರಾಜಕೀಯ ಪಕ್ಷಗಳಲ್ಲಿ ಸ್ವಲ್ಪವೂ ಕಾಳಜಿಯಿಲ್ಲ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸ್ವಾರ್ಥತೆಗಳೇ ತುಂಬಿರುವ ವ್ಯಕ್ತಿಗಳು ಇಂದು ನಮ್ಮನ್ನು ಆಳುತ್ತಿದ್ದಾರೆ, ಜಾತೀಯತೆ, ಕೋಮುವಾದಗಳು ರಾಜ್ಯದಲ್ಲಿ ವಿಜೃಂಭಿಸುತ್ತಿವೆ. ಇವೆಲ್ಲದಕ್ಕೂ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗಬೇಕು. ಹೊಸದೊಂದು ಬೆಳಕು ಮೂಡಬೇಕು. ಈ ಬೆಳಕು ಹೊತ್ತಿಸಲು ಒಬ್ಬ ವ್ಯಕ್ತಿಯಲ್ಲ, ಇಡೀ ಸಮುದಾಯವೇ ದುಡಿಯಬೇಕು. ಆಗಷ್ಟೇ ಇವುಗಳಿಂದ ಬಿಡುಗಡೆ ಸಾಧ್ಯ.
ರಾಜ್ಯದಲ್ಲಿ ಅನೈತಿಕತೆಯೇ ಮೆರೆಯುತ್ತಿರುವ ಈ ಕಾಲ ಘಟ್ಟದಲ್ಲಿ ಹೊಸದೊಂದು ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಇದಕ್ಕೆ ಚಾಲನೆ ನೀಡಲು ಇದು ಸಕಾಲವೂ ಹೌದು. ಕನ್ನಡ, ಕನ್ನಡ ಜನರ, ನಾಡಿನ ಕಾಯಕಲ್ಪಕ್ಕೆ ಬದ್ಧರಾಗಿರುವ, ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ವ್ಯಕ್ತಿತ್ವದ ಮುಂಚೂಣಿಯಲ್ಲಿ ಕನ್ನಡಪರ ಮನಸ್ಸುಗಳು ಒಗ್ಗೂಡಿ ಪಕ್ಷ ಕಟ್ಟುವ ಕಾಯಕಕ್ಕೆ ಮುಂದಾಗಬೇಕಿದೆ. ಕನ್ನಡ ಕಾಯಕದಲ್ಲಿ ನಾ ಮೇಲು, ನೀ ಕೀಳು ಎಂಬ ಭೇದ-ಭಾವ ತೊರೆದು ಕನ್ನಡ ಕಟ್ಟುವ ಕೆಲಸದಲ್ಲಿ ಒಗ್ಗೂಡಿ ಮುನ್ನುಗ್ಗಬೇಕಿದೆ.
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಬಹುಪಕ್ಷಗಳ ಕೇಂದ್ರ ಸರಕಾರಗಳೇ ಆಳ್ವಿಕೆ ನಡೆಸುತ್ತಿದ್ದು, ಕೆಲ ಪ್ರಬಲ ಪ್ರಾದೇಶಿಕ ಪಕ್ಷಗಳು ಚೌಕಾಶಿ ರಾಜಕಾರಣದಲ್ಲಿ ತೊಡಗಿವೆ. ಚೌಕಾಶಿ ರಾಜಕಾರಣದ ಸಲುವಾಗಿ ಪ್ರಾದೇಶಿಕ ಪಕ್ಷ ಎಂಬ ಭಾವನೆ ಬೇಡ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿರಿಸಿಕೊಂಡು ಪ್ರಾದೇಶಿಕ ಪಕ್ಷದ ಉದಯವಾಗಬೇಕಿದೆ.
ಭ್ರಷ್ಟತೆಯನ್ನು ಕಿತ್ತೊಗೆದು, ನಾಡಿನ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ನಮ್ಮಲ್ಲಿರುವ ಪ್ರಾಕೃತಿಕ ಸಂಪತ್ತು, ಅರಣ್ಯ ಸಂಪತ್ತು, ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕಿದೆ. ನಾಡಿನ ಜನರ ಹಿತದೃಷ್ಟಿಯನ್ನೇ ಗಮನದಲ್ಲಿರಿಸಿಕೊಂಡು ಅದಕ್ಕೆ ಪೂರಕವಾಗಿ ಕ್ರಿಯಾಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವ ದೀಕ್ಷೆ ತೊಟ್ಟು ಮುನ್ನಡೆಯಬೇಕಿದೆ.
ಭ್ರಷ್ಟಾಚಾರ, ಜಾತೀಯತೆ, ಕೋಮುವಾದ ಇವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಜರೂರತ್ತು ಇದೆ. ನಾಡಿನ ಜನರು ಅಭಿವೃದ್ಧಿ ಮಂತ್ರಕ್ಕೆ ಮಾತ್ರ ತಲೆ ಬಾಗುವಂತಹ ಸನ್ನಿವೇಶವನ್ನು, ವಾತಾವರಣವನ್ನು ಸೃಷ್ಟಿಸಬೇಕಿದೆ. ಇದು ಪ್ರತಿಯೊಬ್ಬ ಅಕ್ಷರಸ್ಥ ಕನ್ನಡಿಗನ ಮೇಲಿರುವ ಮಹತ್ವಪೂರ್ಣ ಜವಾಬ್ದಾರಿಯಾಗಿದೆ.
ಪ್ರಜಾಪ್ರಭುತ್ವದ ನಾಲ್ಕು ಮುಖ್ಯ ಅಂಗಗಳು ಇಂದು ಭ್ರಷ್ಟಗೊಂಡಿವೆ. ಅವುಗಳ ಮೌಲ್ಯಗಳು ಕುಸಿದಿವೆ. ಇವುಗಳನ್ನು ಮತ್ತೆ ಗಟ್ಟಿಗೊಳಿಸಬೇಕಿದೆ.
ದೊಡ್ಡ ಮಟ್ಟದ ಜನಾಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಇದು ಆದಾಗ ಮಾತ್ರ ರಾಷ್ಟ್ರೀಯ ಪಕ್ಷಗಳ ಹಣ ಬಲ, ಜಾತಿ ಬಲ ಮತ್ತಿತರ ಬಲಗಳ ಅಹಂ ಭಾವಗಳನ್ನು ಅಳಿಸಿ ಹೊಸ ನಾಡೊಂದನ್ನು ಕಟ್ಟಲು ಸಾಧ್ಯವಾಗುತ್ತದೆ.
ಈ ಕಾರ್ಯ ಅತಿ ಶೀಘ್ರ ಆಗಬೇಕಿದೆ.
ಎಂ. ವೆಂಕಟಸ್ವಾಮಿ
ಕರ್ನಾಟಕದಲ್ಲಿ ಆಡಳಿತ ನಡೆಸಿರುವ ಮೂರೂ ಪಕ್ಷಗಳು ಕರ್ನಾಟಕದ ಭವಿಷ್ಯಕ್ಕೆ ಕಂಟಕವಾಗಿರುವುದು ಸತ್ಯ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಸ್ವಾಭಿಮಾನಿ ಮತ್ತು ಸ್ವಾವಲಂಬನೆಯ ನವಕರ್ನಾಟಕವನ್ನು ಕಟ್ಟಬೇಕಾದಂತಹ ಅನಿವಾರ್ಯ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಭಾಷಾ ಚಳವಳಿ, ರೈತಚಳವಳಿ, ದಲಿತ ಚಳವಳಿ ಒಗ್ಗೂಡಿ ಪರ್ಯಾಯವಾದಂತಹ ಆಲೋಚನೆಗಳನ್ನು ಮಾಡುವ ಮೂಲಕ ಸಮಸ್ತ ಕರ್ನಾಟಕವನ್ನು ಹೊಸದಿಕ್ಕಿನತ್ತ ಕೊಂಡೊಯ್ಯಬೇಕಿದೆ.
ಪ್ರಸ್ತುತ ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ಪ್ರಾದೇಶಿಕ ಪಕ್ಷವೊಂದು ಮೂಡಿಬರಲು ಇದು ಸಕಾಲ ಅನ್ನಿಸುತ್ತದೆ. ಇದರಲ್ಲಿ ಅನುಮಾನವಿಲ್ಲ. ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರುಗಳು ಕರ್ನಾಟಕದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಷ್ಟ್ರದ ಹಿತಾಸಕ್ತಿ ಕಾಪಾಡುವ ನೆಪದಲ್ಲಿ ರಾಜ್ಯವನ್ನು ನಿರ್ದಾಕ್ಷಿಣ್ಯವಾಗಿ ಬಲಿಕೊಡುವ ಕೆಲಸ ಸ್ವತಂತ್ರಪೂರ್ವದಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರಾದೇಶಿಕ ಸಮಸ್ಯೆ, ಪ್ರಾದೇಶಿಕ ವಿಚಾರಗಳನ್ನು ಅವಲೋಕಿಸುವಂತಹ ಈ ಬಗ್ಗೆ ಕ್ರಿಯಾತ್ಮಕವಾದಂತಹ ಕೆಲಸಗಳು ಆಗಬೇಕಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳು ಪ್ರಾದೇಶಿಕ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ.
ರಾಜ್ಯದ ನೆಲ, ಜಲ, ಭಾಷೆ, ಉದ್ಯೋಗ, ಸಂಸ್ಕೃತಿಯನ್ನು ಕಾಪಾಡುವಂತಹ ಧ್ಯೇಯೋದ್ದೇಶಗಳನ್ನು ಹೊಂದಿದ ಒಂದು ಪ್ರಾದೇಶಿಕ ಶಕ್ತಿಯ ಅನಿವಾರ್ಯತೆ ರಾಜ್ಯಕ್ಕೆ ಇದೆ. ನಾಡಿನ ಬೆಳವಣಿಗೆಗೆ ಪೂರಕವಾದಂತಹ ಎಲ್ಲಾ ಅಂಶಗಳನ್ನು ಹೊಂದಿದ ಪ್ರಾದೇಶಿಕ ಶಕ್ತಿ ರಾಜ್ಯದಲ್ಲಿ ಉದಯವಾಗುವುದಾದರೆ ಸದ್ಯದ ಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಉತ್ತಮ ಭವಿಷ್ಯ ದೊರಕಲಿದೆ. ರಾಜ್ಯವನ್ನಾಳಿರುವ ಮೂರೂ ಪಕ್ಷಗಳ ವೈಫಲ್ಯತೆಯ ನೈಜ ಕಾರಣಗಳನ್ನು ಹುಡುಕಿ ನಾಡಿನ ಶ್ರೆಯೋಭಿವೃದ್ಧಿಗೆ ಅನುಕೂಲವಾಗುವಂತಹ ಧ್ಯೇಯೋದ್ದೇಶಗಳನ್ನು ಅಳವಳಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷವನ್ನು ರಚನೆಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವನ್ನು ನೆರೆರಾಜ್ಯಗಳ ಕೆಲ ಪ್ರಾದೇಶಿಕ ಪಕ್ಷಗಳು ಚೌಕಾಸಿ ರಾಜಕಾರಣದ ಮೂಲಕ ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತ ನಾಡಿನ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿವೆ. ಇವೆಲ್ಲವನ್ನು ರಾಜ್ಯವನ್ನು ಪ್ರತಿನಿಧಿಸುವ ಪಕ್ಷಗಳು ವಿರೋಧಿಸುವಲ್ಲಿ ಎಡವಿದ್ದು, ರಾಜ್ಯದ ಪ್ರಾದೇಶಿಕ ಪಕ್ಷವೊಂದು ಅಸ್ತಿತ್ವಕ್ಕೆ ಬಂದು ನಾಡಿನ ಹಿತಕಾಯಬೇಕಿದೆ.
ಸಮಾಜದ ಪ್ರಗತಿಗೆ ಮಾರಕವಾಗಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತಿಯತೆ, ಕೋಮುವಾದ ಇತ್ಯಾದಿಗಳನ್ನು ನಿರ್ಮೂಲನೆ ಮಾಡುವ ಪಣವನ್ನು ಪ್ರಾದೇಶಿಕ ಪಕ್ಷ ಹೊಂದಬೇಕಿದೆ. ಎಲ್ಲಾ ಕ್ಷೇತ್ರಗಳ ಅಸಮಾನತೆ ಹೋಗಲಾಡಿಸಬೇಕಿದೆ. ಗ್ರಾಮೀಣ ಪ್ರದೇಶ ಹಾಗು ನಗರ ಪ್ರದೇಶಗಳ ಭಿನ್ನ-ಭೇದವನ್ನು ಹೋಗಲಾಡಿಸುವ ಯೋಜನೆಗಳನ್ನು ಅಳವಡಿಸಿಕೊಂಡು ಕಾರ್ಮಿಕರ ಹಿತಕಾಪಾಡುವ ಕಾರ್ಯಸೂಚಿಯೂ ಸೇರಿದಂತೆ ಅರ್ಥಬದ್ಧ ದೇಯೋದ್ದೇಶಗಳನ್ನು ಹೊಂದಬೇಕು.
ಭ್ರಷ್ಟ ರಾಜಕೀಯ ಪಕ್ಷಗಳನ್ನು ಎದುರಿಸಬೇಕಾದ ಪ್ರಾದೇಶಿಕ ಪಕ್ಷ ಸಂವಿಧಾನಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸಬೇಕಿದೆ. ಒಂದು ಓಟು-ಒಂದು ನೋಟು ಎಂಬುದಾಗಿ ಜನಾಭಿಪ್ರಾಯವನ್ನು ಮೂಡಿಸುವ ಮೂಲಕ ರಾಜ್ಯದಲ್ಲಿ ಪ್ರಬಲವಾದ ರಾಜಕೀಯ ಜನಾಂದೋಲನ ಆರಂಭವಾಗಬೇಕಿದೆ. ಪ್ರಜಾಪ್ರಭುತ್ವ ಮೌಲ್ಯಗಳ ಅಡಿಯಲ್ಲಿ ಪ್ರಾದೇಶಿಕ ಪಕ್ಷ ಜನರ ದನಿಯಾಗಿ ಪ್ರತಿನಿಧಿಸುವ ಅಭ್ಯರ್ಥಿಗಳನ್ನು ಪ್ರತಿನಿಧಿಗಳನ್ನಾಗಿ ಆಯ್ಕೆಮಾಡಬೇಕಿದೆ. ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವ ತಳಹದಿಯ ಮೇಲೆ ಪ್ರಾದೇಶಿಕ ಪಕ್ಷವನ್ನು ಕಟ್ಟಬೇಕಿದೆ.
ರಾಜಶೇಖರ ಹತಗುಂದಿ
ಸಾರ್ವಜನಿಕ ಬದುಕಿನಿಂದ ಚುನಾವಣೆಗಳಿಗೆ ಅಭ್ಯರ್ಥಿಗಳು ಬರುವಂತಾಗಬೇಕು. ಬದ್ಧತೆಯಿರುವ ರಾಜಕಾರಣಿಗಳನ್ನಷ್ಟೇ ಮತದಾರರು ಬೆಂಬಲಿಸುವಂತಾಗಬೇಕು. ದುಬಾರಿ ಚುನಾವಣೆಗಳು ಕಣ್ಮರೆಯಾಗಬೇಕು. ಲಿಕ್ಕರ್, ಎಜುಕೇಶನ್ ಮುಂತಾದ ಮಾಫಿಯಾಗಳು ರಾಜಕಾರಣವನ್ನು ನಿರ್ಣಯಿಸುವಂತಹ ಪರಿಸ್ಥಿತಿ ನಿರ್ಮೂಲನವಾಗಬೇಕು. ಇತ್ತೀಚಿನ ದಿನಗಳಲ್ಲಿ ಗಣಿ ಮಾಫಿಯಾದಿಂದಾಗಿ ರಾಜ್ಯ ರಾಜಕಾರಣದ ಪರಿಸ್ಥಿತಿ ಬಿಗಡಾಯಿಸಿದೆ. ರಾಜ್ಯದ ಹಿತದೃಷ್ಟಿಯನ್ನೇ ಕೇಂದ್ರೀಕರಿಸಿಕೊಂಡು ಸಂಘ ಸಂಸ್ಥೆಗಳು ಎಚ್ಚರಗೊಂಡರೆ ಕರ್ನಾಟಕಕ್ಕೊಂದು ಹೊಸದಿಕ್ಕನ್ನು ಹುಡಕಬಹುದಾಗಿದೆ.
ಹೈಕಮಾಂಡ್ ಗುಲಾಮಗಿರಿಯಿಂದ ನರಳುತ್ತಿರುವ ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರು ಕರ್ನಾಟಕದ ಹಿತಾಸಕ್ತಿಗಳನ್ನು ಮರೆತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಸಂದಿಗ್ಧತೆಯಲ್ಲಿ ಪ್ರಾದೇಶಿಕ ಪಕ್ಷವೊಂದು ಮೂಡಿಬರಬೇಕಾದ ಅಗತ್ಯವಿದ್ದು ಅದಕ್ಕೆ ಸಾಮೂಹಿಕ ನಾಯಕತ್ವದ ಜೂರೂರತ್ತಿದೆ. ಕರ್ನಾಟಕದ ಹಿತವನ್ನೇ ಮುಖ್ಯವಾಗಿರಿಸಿಕೊಂಡು ಪ್ರಾದೇಶಿಕ ಪಕ್ಷವೊಂದು ಮೂಡಿಬರಬೇಕಿದೆ.
ಬಹುಪಕ್ಷಗಳ ಕೇಂದ್ರ ಸರ್ಕಾರಗಳೇ ಆಡಳಿತ ನಡೆಸುತ್ತಿರುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದ್ದು, ಇದು ರಾಜ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಿದೆ. ಕೆಲ ಪ್ರಬಲ ಪ್ರಾದೇಶಿಕ ಪಕ್ಷಗಳ ಬ್ಲ್ಯಾಕ್ ಮೇಲ್ ರಾಜಕಾರಣದಿಂದಾಗಿ ಕರ್ನಾಟಕದ ಅಭಿವೃದ್ಧಿ ಕಾರ್ಯಗಳಿಗೆ ಹಲವು ಅಡೆ ತಡೆಗಳು ಉಂಟಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಒಕ್ಕೂಟ ವ್ಯವಸ್ಥೆಯನ್ನೇ ಅಸ್ಥಿರಗೊಳಿಸುವಂತಹ ಪ್ರಾದೇಶಿಕ ಪಕ್ಷಗಳ ಅಗತ್ಯವಿಲ್ಲ. ಆದರೆ, ಪ್ರಾದೇಶಿಕ ಕಾಳಜಿಯೊಂದಿಗೆ ಪ್ರತಿನಿಧಿಸುವ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಬಹುಪಕ್ಷಗಳ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಧರ್ಮಕ್ಕೆ ಬದ್ಧವಾಗಿರಬೇಕು. ನಾಡಿನ ಹಿತಕ್ಕಾಗಿ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಉದಯವಾಗಲಿ.
ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿರಿಸಿಕೊಂಡು ಜಾತಿ-ಧರ್ಮ, ಪ್ರದೇಶವಾರು ಭಿನ್ನಬೇಧವಿಲ್ಲದೇ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯೂ ಸೇರಿದಂತೆ ಸಮಸ್ತ ಕರ್ನಾಟಕದ ಏಳಿಗೆಗೆ ಶ್ರಮಿಸಲು ಪೂರಕವಾದ ಉದ್ದೇಶಗಳನ್ನು ಒಳಗೊಂಡ ಪ್ರಾದೇಶಿಕ ಶಕ್ತಿ ರಾಜ್ಯದಲ್ಲಿ ಮೂಡಿಬರಲಿ.
ಪ್ರಾದೇಶಿಕ ಶಕ್ತಿಯಲ್ಲಿ ಬದ್ಧತೆಗೆ ಪ್ರಾಮುಖ್ಯತೆ ನೀಡಬೇಕು. ಚುನಾವಣೆಗಳನ್ನು ಹಣಬಲವೊಂದೇ ನಿಯಂತ್ರಿಸುವಂತಾಗಬಾರದು. ಪ್ರಾದೇಶಿಕ ಪಕ್ಷದ ಮೂಲೋದ್ದೇಶ ದುರಾಡಳಿತಕ್ಕೆ ವಿರಾಮ ಹಾಕುವ ನಿಟ್ಟಿನಲ್ಲಿರಬೇಕು. ರಾಜ್ಯದ ಮತದಾರರನ್ನು ಸರಿದಿಕ್ಕಿನಲ್ಲಿ ಕೊಂಡೊಯ್ಯುವ ಜನಾಂದೋಲನ ನಡೆಯಬೇಕಿದೆ.
Tuesday, May 17, 2011
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
May
(15)
- ಜಾತಿ ಪಕ್ಷಪಾತಿಗಳು ಪಾಪಿಗಳು, ದೇಶದ್ರೋಹಿಗಳು!
- ಇಲ್ಲಿ ದಲಿತರೂ ಜನಿವಾರ ತೊಡುತ್ತಾರೆ! ಮುಸ್ಲಿಮರು ಕೊಂಡ ಹಾಯ...
- ಕವಿ ಮುದ್ದಣನ ಅನನ್ಯತೆ
- ಗಡಿ ಕನ್ನಡ ಪ್ರದೇಶ ಸಮಸ್ಯೆಗಳು
- ಸದ್ದುಗದ್ದಲವಿರದೆ ಗದ್ದುಗೆಗೇರಿದ ಸಾಧನೆ
- ಸಮಗ್ರ ಕ್ರಾಂತಿಗೆ ಕರೆನೀಡುವ ಇಷ್ಟಲಿಂಗ
- ನನ್ನ ಕನಸಿನ ಕರ್ನಾಟಕ
- ಪ್ರಾದೇಶಿಕ ಪಕ್ಷ ಬೇಕೆ? ಬೇಡವೇ?
- ಮೇದಿನಿಗೆ ಹೊಸ ಬೆಳಕು ತಂದವರು
- ಶೂದ್ರ ತಪಸ್ವಿ ಎಂಬ ವಿಚಾರಪೂರಿತ ನಾಟಕವು
- ನೀನಾಸಂ ಶೂದ್ರತಪಸ್ವಿಯ ಆಶಯವೇನು?
- ಶಂಕರದಾಸಿಮಯ್ಯನವರ ವಚನಗಳ ವಿಶ್ಲೇಷಣೆ
- ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕುಗಳು
- "ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತ ವಿದ್ವತ್ತಿನ ಮಹಾ...
- ಕುಂ.ವೀರಭದ್ರಪ್ಪ ಅವರ ಕೂರ್ಮಾವತಾರ
-
▼
May
(15)
No comments:
Post a Comment