Tuesday, May 17, 2011

ನನ್ನ ಕನಸಿನ ಕರ್ನಾಟಕಟಿ.ಎ.ನಾರಾಯಣಗೌಡರು

‘ಕನಸಿನ ಕರ್ನಾಟಕ’ ಎಂಬ ವಿಷಯವೇ ರೋಮಾಂಚನಗೊಳಿಸುವಂಥದ್ದು, ಕನಸುಗಳು ಇಲ್ಲದೆ ಬದುಕಿಲ್ಲ. ಹಾಗಂತ ಕನಸುಗಳೆಲ್ಲಾ ನಿಜವಾಗದು. ಆದರೆ, ನಾವು ಹೊಸಹೊಸ ಕನಸುಗಳನ್ನು ಕಟ್ಟುವುದನ್ನು ನಿಲ್ಲಿಸುವುದಿಲ್ಲ. ಹೊಸ ಕನಸುಗಳು ಹಳೆಯ ಕೆಟ್ಟ ನೆನಪುಗಳನ್ನು ಕೈಬಿಟ್ಟು ಮುಂದೆ ಹೋಗಲು ಸ್ಫೂರ್ತಿ, ಪ್ರೇರಣೆಯನ್ನು ಒದಗಿಸುತ್ತವೆ. ಹೀಗಾಗಿ ಕನಸುಗಳು ಬೇಕು. ಈ ಕನಸುಗಳು ಲೌಕಿಕ ಭ್ರಮೆಗಳಿಂದ ಹೊರತಾಗಿರಬೇಕು, ಪ್ರಾಮಾಣಿಕವಾಗಿರಬೇಕು. ಕನಸು ಕಟ್ಟುವವರಿಗೆ ಅದನ್ನು ನನಸಾಗಿಸುವ ಇಚ್ಛಾಶಕ್ತಿಯೂ, ಕ್ರಿಯಾಶಕ್ತಿಯೂ, ಧೀಶಕ್ತಿಯೂ ಇರಬೇಕು.
ಈ ನಾಡನ್ನು ಕಟ್ಟಿದ ಲಕ್ಷಾಂತರ ಮಹನೀಯರು ಇಂಥ ಕನಸುಗಳನ್ನು ಕಂಡೇ, ಇವತ್ತಿನ ಅಖಂಡ, ಸಮೃದ್ಧ, ಸುಸಂಸ್ಕೃತ ನಾಡನ್ನು ನಿರ್ಮಿಸಿದ್ದಾರೆ. ಅವರುಗಳು ಹೊತ್ತಿಸಿದ ದೀವಿಗೆ ನಮ್ಮ ಕೈಯಲ್ಲಿದೆ. ದೀಪದಿಂದ ದೀಪವನ್ನು ಹಚ್ಚುತ್ತ ಬೆಳಕು ಎಂದೆಂದಿಗೂ ಆರದಂತೆ; ಕತ್ತಲು ಆವರಿಸಿಕೊಳ್ಳದಂತೆ ಕಾಪಾಡುವ ಹೊಣೆಗಾರಿಕೆ ನಮ್ಮದು.
ಕುವೆಂಪು ಅವರು ಹೇಳಿದ್ದರು:
ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿಕಣಾ!
ಋಷಿಯ ಕಾಣ್ಬಕಣ್ಣಿಗೆ!
ಹೌದು ಕರ್ನಾಟಕ ಎಂದರೆ ಬರಿಯ ಮಣ್ಣಲ್ಲ. ಅದು ಮಂತ್ರ, ಶಕ್ತಿ, ತಾಯಿ, ದೇವಿ, ಸಿಡಿಲು, ಬೆಂಕಿ... ಈ ಎಲ್ಲವೂ ಹೌದು. ಇಂಥ ತಪೋಭೂಮಿಯಲ್ಲಿ ಬದುಕಿರುವ ನಾವು ಪುಣ್ಯವಂತರು. ಆದರೆ, ಕನ್ನಡಿಗನ ಆಶೋತ್ತರಗಳೆಲ್ಲವೂ ಈಡೇರಿವೆಯೇ? ಕನ್ನಡ ನಾಡು ಎಲ್ಲ ಸಮಸ್ಯೆಗಳಿಂದ ಮುಕ್ತವಾಗಿದೆಯೇ? ಈಗಿರುವ ನಾಡು ನಮ್ಮ ಕನಸಿನ ಕರ್ನಾಟಕವೇ? ಖಂಡಿತವಾಗಿಯೂ ಅಲ್ಲ. ನಾವು ಸಾಗಬೇಕಾದ ಹಾದಿ ಬಹುದೂರವಿದೆ. ಆ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕಿದೆ.
ಕನಸಿನ ಕರ್ನಾಟಕದಲ್ಲಿ ಕನ್ನಡ ಭಾಷೆ:
ಕವಿ ಗೋಪಾಲಕೃಷ್ಣ ಅಡಿಗರ ಸಾಲುಗಳು ನೆನಪಾಗುತ್ತವೆ.
ನನ್ನ ನಿನ್ನ ಕನ್ನಡ,
ಎಲ್ಲ ಜನದ ಕನ್ನಡ;
ಈರ, ಬೋರ, ಭಟ್ಟ, ಶೆಟ್ಟಿ,
ಕೂಲಿಗಾರ, ರೈತರ;
ಸುಸಂಸ್ಕೃತರ, ಅಸಂಸ್ಕೃತರ,
ಮಾನ್ಯರ, ಸಾಮಾನ್ಯರ;
ಈ ನೆಲ ಈ ನುಡಿ ನುಡಿಸುವ
ಎಲ್ಲ ಎಲ್ಲ ಬಾಯಿಯೂ;
ಮಾಗಲೆಂದು ಕಾದಿರುವೀ
ಎಲ್ಲ ಎಲ್ಲ ಕಾಯಿಯೂ;
ಕನ್ನಡವೋ ಕನ್ನಡ.
ಕನ್ನಡ ಭಾಷೆಯನ್ನು ಆಡುವ ಕೋಟ್ಯಂತರ ಮಂದಿ ಕರ್ನಾಟಕದಲ್ಲೂ, ಕರ್ನಾಟಕದ ಹೊರಗೆಯೂ ವ್ಯಾಪಿಸಿಕೊಂಡಿದ್ದಾರೆ. ಇದು ಎಲ್ಲರ ಭಾಷೆ. ಧರ್ಮ, ಜಾತಿ, ಮತ, ಪಂಥಗಳನ್ನು ಮೀರಿ ನಿಂತ ಭಾಷೆ. ಕನ್ನಡ ಭಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಕವಿಗಳು, ಸಂತರು, ಶರಣರು, ದಾಸರು, ಸೂಫಿಗಳು ಎಲ್ಲರು ಸೇರಿಯೇ ಕನ್ನಡ ಭಾಷೆಯನ್ನು ಬೆಳೆಸಿದ್ದಾರೆ.
ಆದರೆ ಪರಭಾಷೆಗಳು ಇಂದು ಕನ್ನಡದ ಕತ್ತು ಹಿಸುಕಲು ಯತ್ನಿಸುತ್ತಿವೆ. ಸಾಮ್ರಾಜ್ಯಶಾಹಿ ಭಾಷೆಯಾಗಿ ಭಾರತದೊಳಗೆ ಕಾಲಿಟ್ಟ ಇಂಗ್ಲಿಷ್ ಇತರ ಭಾರತೀಯ ಭಾಷೆಗಳನ್ನು ದಮನ ಮಾಡುತ್ತಿರುವ ಹಾಗೆಯೇ ಕನ್ನಡದ ಮೇಲೆಯೂ ಸವಾರಿ ನಡೆಸುತ್ತಿದೆ. ಭಾರತದ ರಾಜಕಾರಣದಲ್ಲಿ ಮೇಲುಗೈ ಪಡೆಯುತ್ತಲೇ ಬಂದಿರುವ ಉತ್ತರಭಾರತೀಯರು ಇತರ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಆ ಕುತಂತ್ರದ ಪ್ರಯೋಗ ಕರ್ನಾಟಕದಲ್ಲೂ ಆಗುತ್ತಿದೆ.
ಈ ಹುನ್ನಾರಗಳನ್ನೆಲ್ಲ ನಾವು ವಿಫಲಗೊಳಿಸಬೇಕಿದೆ. ಕರ್ನಾಟಕದಲ್ಲಿ ಸಂಪೂರ್ಣ ಆಡಳಿತ ಕನ್ನಡಮಯವಾಗಬೇಕು. ಈ ಕೆಲಸ ವಿಧಾನಸೌಧದಿಂದಲೇ ಆರಂಭವಾಗಬೇಕು. ಕನ್ನಡವನ್ನು ಬಳಕೆಮಾಡದ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಂಥವರನ್ನು ಕರ್ನಾಟಕದಲ್ಲಿ ಇಟ್ಟುಕೊಳ್ಳದಿರುವುದೇ ಒಳ್ಳೆಯದು. ನ್ಯಾಯಾಂಗದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕು. ಸರ್ಕಾರಿ ಆದೇಶಗಳೆಲ್ಲವೂ ಕನ್ನಡದಲ್ಲೇ ಇರಬೇಕು. ಸರ್ಕಾರದ ಅಧೀನದಲ್ಲಿರುವ ಇತರ ಸ್ಥಳೀಯ ಸಂಸ್ಥೆಗಳು, ನಿಗಮ ಮಂಡಳಿಗಳು ಸಂಪೂರ್ಣ ಕನ್ನಡವನ್ನೇ ಬಳಸಬೇಕು.
ಕರ್ನಾಟಕದ ಯಾವ ಮೂಲೆಗೆ ಹೋದರೂ ಕನ್ನಡವೇ ಕಿವಿಗೆ ಬೀಳಬೇಕು. ಕನ್ನಡವೇ ಕಣ್ಣಿಗೆ ಕಾಣಬೇಕು. ಕನ್ನಡವನ್ನು ಹೊರತಾಗಿ ಇತರ ಮಾತೃಭಾಷೆಗಳನ್ನು ಹೊಂದಿರುವವರು ತಮ್ಮ ತಮ್ಮ ಮನೆಗಳಲ್ಲಿ ಆಯಾ ಭಾಷೆಗಳನ್ನು ಮಾತನಾಡಲಿ. ಆದರೆ ಕನ್ನಡ ನಾಡಲ್ಲಿ ಬದುಕುತ್ತಿರುವವರು ಸಾರ್ವಜನಿಕವಾಗಿ ಕನ್ನಡವನ್ನೇ ಬಳಸಬೇಕು. ಎಲ್ಲ ಅಂಗಡಿ-ಮುಂಗಟ್ಟು, ವಾಣಿಜ್ಯ ಸಂಸ್ಥೆಗಳ ಮುಂದೆ ಪ್ರದರ್ಶಿಸುವ ನಾಮಫಲಕಗಳು ಕನ್ನಡಮಯವಾಗಿರಬೇಕು. ಇದೇ ಮಾತು ಜಾಹೀರಾತು ಫಲಕಗಳಿಗೂ ಅನ್ವಯಿಸುತ್ತದೆ.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಲಭ್ಯವಾಗಿದೆ. ಕನ್ನಡ ಭಾಷೆಯ ಕುರಿತಾದ ಅಧ್ಯಯನ, ಸಂಶೋಧನೆ ಇತ್ಯಾದಿಗಳು ಈಗಲಾದರೂ ವೇಗ ಪಡೆದುಕೊಳ್ಳಬೇಕು. ಕನ್ನಡ ಸಾಹಿತಿಗಳನ್ನು ಪರಭಾಷಿಕರಿಗೆ ಪರಿಚಯಿಸುವ ದೃಷ್ಟಿಯಲ್ಲಿ ಕನ್ನಡ ಕೃತಿಗಳ ಅನುವಾದ ಕಾರ್ಯ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು.
ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ
ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಬೇರೆ ಬೇರೆ ರಾಜಕೀಯ ಕಾರಣಗಳಿಂದಾಗಿ ಹಿಂದುಳಿಯುವಂತಾಗಿದೆ. ಸಂಪನ್ಮೂಲಗಳ ಹಂಚಿಕೆಯಲ್ಲಿ ತಾರತಮ್ಯವಿದೆ. ನೆರೆ, ಬರದಂಥ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಪರಿಹಾರ ನೀಡುವಾಗಲೂ ಕೇಂದ್ರ ಸರ್ಕಾರ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ಪ್ರದರ್ಶಿಸುತ್ತದೆ.
ಕರ್ನಾಟಕದ ಪರವಾದ ಲಾಬಿ ಕೇಂದ್ರ ಸರ್ಕಾರದಲ್ಲಿ ಪ್ರಬಲವಾಗಿಲ್ಲದೇ ಇರುವುದು ಇದಕ್ಕೆ ಕಾರಣ. ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳೇ ಅಧಿಕಾರ ಅನುಭವಿಸಿದ್ದರ ಪರಿಣಾಮವಿದು. ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಶಕ್ತಿ ಜಾಗೃತಗೊಂಡು, ರಾಷ್ಟ್ರೀಯ ಪಕ್ಷಗಳ ಅನ್ಯಾಯಗಳಿಗೆ ಕಡಿವಾಣ ಹಾಕಬೇಕು. ನಮ್ಮ ಪಾಲನ್ನು ನಾವು ಪಡೆದುಕೊಳ್ಳುವಂತಾಗಬೇಕು.
ಕೇಂದ್ರ ಸರ್ಕಾರದ ಸಂಪುಟದಲ್ಲಿ ರಾಜ್ಯದ ಪಾಲು ಸಮರ್ಪಕವಾಗಿರಬೇಕು. ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆಯಾಗುವವರು ಕನ್ನಡಿಗರೇ ಆಗಿರಬೇಕು. ಕರ್ನಾಟಕದಿಂದ ಐಎಎಸ್, ಐಪಿಎಸ್‌ನಂಥ ಉನ್ನತ ಶ್ರೇಣಿಯ ಅಧಿಕಾರಿಗಳು ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾಗುವುದಕ್ಕೆ ತಕ್ಕ ವಾತಾವರಣವನ್ನು ನಾವು ನಿರ್ಮಿಸಬೇಕಿದೆ.
ಶಿಕ್ಷಣದಲ್ಲಿ ಕನ್ನಡ
ಕನ್ನಡ ಮಾಧ್ಯಮ ಶಾಲೆಗಳು ಇಂಗ್ಲಿಷ್ ಮಾಧ್ಯಮ ಶಾಲೆಗಳೊಂದಿಗೆ ಸೆಣಸಲಾಗದೆ ಸೊರಗಿಹೋಗುತ್ತಿವೆ. ಗೊಂದಲದ ಭಾಷಾ ನೀತಿಗಳಿಂದ, ಶಿಕ್ಷಣವನ್ನು ದಂಧೆಯನ್ನಾಗಿ ಮಾಡಿಕೊಂಡಿರುವ ಬಂಡವಾಳಶಾಹಿಗಳಿಂದ, ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಮಾತೃಭಾಷಾ ಶಿಕ್ಷಣ ನೀತಿ ಇನ್ನೂ ಜಾರಿಯಾಗಿಲ್ಲ.
ನಮ್ಮ ಕನಸಿನ ಕರ್ನಾಟಕದಲ್ಲಿ ಕನ್ನಡವೇ ಸರ್ವಮಾಧ್ಯಮವಾಗಬೇಕು. ಒಂದರಿಂದ ೧೦ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಕೇಂದ್ರೀಯ ಪಠ್ಯಕ್ರಮಗಳ ಮೂಲಕ ಕನ್ನಡವನ್ನು ಕೊಲ್ಲುವ ಚಟುವಟಿಕೆಗಳು ನಿಲ್ಲಬೇಕು. ಕರ್ನಾಟಕದ ಸರ್ವಭಾಗಗಳಲ್ಲಿ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಸೌಲಭ್ಯಗಳು ಲಭ್ಯವಾಗಬೇಕು.
ಆಧುನಿಕ ಶಿಕ್ಷಣ ವಲಯಕ್ಕೆ ಕನ್ನಡ ಭಾಷೆಯನ್ನು ಹಿಗ್ಗಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ನಮ್ಮ ಕನಸಿನ ಕರ್ನಾಟಕದಲ್ಲಿ ಕನ್ನಡಿಗರು, ಕನ್ನಡ ಮಾಧ್ಯಮದಲ್ಲೇ ಎಂ.ಬಿ.ಬಿ.ಎಸ್., ಬಿಇ ಮತ್ತಿತರ ತಾಂತ್ರಿಕ ಪದವಿಗಳನ್ನು ಪಡೆಯಬೇಕು. ಇದು ಅಸಾಧ್ಯವೇನೂ ಅಲ್ಲ. ಇದಕ್ಕೆ ತಕ್ಕ ತಾಂತ್ರಿಕ ಪದಕೋಶಗಳು ನಿರ್ಮಾಣವಾಗಬೇಕು.
ಈಗಲಾದರೂ ನಾವು ತ್ರಿಭಾಷಾ ಸೂತ್ರವನ್ನು ತಿರಸ್ಕರಿಸುವ ಧೈರ್ಯ ತೋರಬೇಕು. ತಮಿಳುನಾಡು ಮಾದರಿಯಲ್ಲಿ ದ್ವಿಭಾಷಾ ಸೂತ್ರವೇ ಸೂಕ್ತ. ತ್ರಿಭಾಷಾ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೇ ಆಗಿದೆ ಎಂದು ಕುವೆಂಪು ಹೇಳಿದ್ದರು. ರಾಜಕೀಯಪ್ರೇರಿತವಾದ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವುದು ಎಲ್ಲ ರೀತಿಯಲ್ಲೂ ಶ್ರೇಯಸ್ಕರ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಹಸಿಹಸಿ ಸುಳ್ಳು ಹೇಳುವುದನ್ನು ಬಿಡಬೇಕು.
ರೈತರು-ಕುಶಲಕರ್ಮಿಗಳ ಬಾಳು ಹಸನಾಗಬೇಕು
ಕನ್ನಡ ಭಾಷೆಯಷ್ಟೇ ಪ್ರಮುಖವಾಗಿರುವುದು ಕನ್ನಡಿಗರ ಬದುಕು. ಕನ್ನಡಿಗರು ಮೇಧಾವಿಗಳು, ಅಸಾಮಾನ್ಯ ಪ್ರೌಢಿಮೆ ಉಳ್ಳವರು, ವಿಚಾರಶೀಲರು, ಶ್ರಮಜೀವಿಗಳು ಆಗಿದ್ದಾರೆ. ಆದರೆ, ಭಾರತ ಒಕ್ಕೂಟದ ಒಂದು ರಾಜ್ಯವಾಗಿ ಕೆಲವು ಕಟ್ಟುಪಾಡುಗಳ ನಡುವೆ ಬದುಕಬೇಕಿರುವ ಕನ್ನಡಿಗರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಜಾಗತಿಕ ಉದಾರೀಕರಣ ನೀತಿಯಿಂದಾಗಿ ದೇಶದ ಎಲ್ಲೆಡೆ ರೈತರು ಬವಣೆ ಎದುರಿಸುತ್ತಿದ್ದಾರೆ. ಸಾವಿರಾರು ಮಂದಿ ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಸಾಲದ ಶೂಲಕ್ಕೆ ಸಿಕ್ಕಿ ರೈತ ಕಂಗಾಲಾಗಿದ್ದಾನೆ. ಮತ್ತೊಂದೆಡೆ ಬೃಹತ್ ಯೋಜನೆಗಳಿಗಾಗಿ, ಬಹುರಾಷ್ಟ್ರೀಯ ಕಂಪನಿಗಳಿಗಾಗಿ, ಉಳ್ಳವರ ಟೌನ್‌ಶಿಪ್‌ಗಳಿಗಾಗಿ, ದೊಡ್ಡದೊಡ್ಡ ರಸ್ತೆಗಳಿಗಾಗಿ, ವಿಶೇಷ ಆರ್ಥಿಕ ವಲಯಗಳಿಗಾಗಿ ರೈತರ ಫಲವತ್ತಾದ ಜಮೀನನ್ನು ಸರ್ಕಾರಗಳು ಕಿತ್ತುಕೊಳ್ಳುತ್ತಿವೆ. ವ್ಯವಸಾಯವನ್ನು ಹೊರತುಪಡಿಸಿ ಬೇರಿನ್ನೇನೂ ಮಾಡಿಗೊತ್ತಿಲ್ಲದ ರೈತರು ಸರ್ಕಾರಗಳು ಕೊಡುವ ಕವಡೆಕಾಸಿನ ಪರಿಹಾರ ಪಡೆದು ನಿರ್ಗತಿಕರಾಗುತ್ತಿದ್ದಾರೆ. ವ್ಯವಸಾಯವನ್ನು ನೆಚ್ಚಿಕೊಂಡ ಜನ ಬದುಕಲಾರದೆ ಹಳ್ಳಿಗಳಿಂದ ಬೃಹತ್ ನಗರಗಳಿಗೆ ವಲಸೆಹೋಗುತ್ತಿದ್ದಾರೆ. ಇದು ಭೀಕರ ಪರಿಣಾಮಗಳಿಗೆ ದಾರಿಮಾಡಿಕೊಟ್ಟಿದೆ.
ನಮ್ಮ ಕನಸಿನ ಕರ್ನಾಟಕದಲ್ಲಿ ರೈತರ ಬದುಕು ಹಸನಾಗಲೇಬೇಕು. ಅನ್ನದಾತ ಸುಖ, ನೆಮ್ಮದಿಯಿಂದಿಲ್ಲದಿದ್ದರೆ ನಾಡು ಸಮೃದ್ಧಿ, ಶಾಂತಿಯಿಂದ ಇರುವುದು ಸಾಧ್ಯವಿಲ್ಲ. ಕರ್ನಾಟಕದ ಕೃಷಿ ವಲಯ ಸದೃಢವಾಗಿ ಬೆಳೆಯಬೇಕಿದೆ. ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳುವ ಸರ್ಕಾರದ ನೀತಿಗಳು ಬದಲಾಗಬೇಕು. ರೈತ ಬೆಳೆದ ಬೆಳೆಗೆ ತಕ್ಕ ಬೆಲೆ ದೊರೆಯಲೇ ಬೇಕು. ರೈತನಿಗೆ ಕಾಲಕಾಲದ ಅಗತ್ಯಗಳಾದ ಬಿತ್ತನೆ ಬೀಜ, ಗೊಬ್ಬರ, ಆಧುನಿಕ ತಂತ್ರಜ್ಞಾನವನ್ನು ಒದಗಿಸುವ ಹೊಣೆಗಾರಿಕೆಯನ್ನು ಸರ್ಕಾರಗಳು ಸಮರ್ಪಕವಾಗಿ ನಿರ್ವಹಿಸಬೇಕು. ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಸರ್ಕಾರ ಮತ್ತು ಸಮಾಜ ರೈತನ ನೆರವಿಗೆ ನಿಲ್ಲಬೇಕು. ನಮ್ಮ ಕನಸಿನ ಕರ್ನಾಟಕದಲ್ಲಿ ನಾಡಿನ ರೈತರು ಎಲ್ಲಾ ಬಗೆಯ ಸಾಲ ಋಣಗಳಿಂದ ಮುಕ್ತವಾಗಬೇಕು.
ಜಾಗತೀಕರಣದ ಅಬ್ಬರದಲ್ಲಿ ಕುಶಲಕರ್ಮಿಗಳೂ ಸಹ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಹೊಣೆಯೂ ಸರ್ಕಾರ ಮತ್ತು ಸಮಾಜದ್ದಾಗಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಕುಶಲಕರ್ಮಿಗಳಿಗೆ ಸೂಕ್ತ ತರಬೇತಿ ನೀಡುವುದರ ಜತೆಗೆ, ಅವರ ಜೀವನೋಪಾಯಕ್ಕೆ ಮಾರ್ಗವನ್ನು ಕಲ್ಪಿಸಿಕೊಡಬೇಕಾಗಿದ್ದು ಸರ್ಕಾರದ ಕರ್ತವ್ಯ.
ಸಮಾಜದಲ್ಲಿ ಇನ್ನೂ ಹಿಂದುಳಿದಿರುವ ದುರ್ಬಲವರ್ಗಗಳ ಜನರನ್ನು ಮೇಲೆತ್ತುವ ಕಾರ್ಯ ಅಡೆತಡೆಯಿಲ್ಲದಂತೆ ನಡೆಯಬೇಕು. ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನೂ ಸರ್ಕಾರ ಕಲ್ಪಿಸಬೇಕು.
ನೀರಾವರಿ-ವಿದ್ಯುತ್
ಕರ್ನಾಟಕದ ಹಲವಾರು ನೀರಾವರಿ ಯೋಜನೆಗಳು ಇನ್ನೂ ಕುಂಟುತ್ತ ಸಾಗಿವೆ. ನಮ್ಮ ನಾಡನ್ನು ಸಮೃದ್ಧಗೊಳಿಸಿರುವ ಕೃಷ್ಣ, ಕಾವೇರಿ ಮತ್ತಿತರ ನದಿಗಳ ನೀರನ್ನು ನಾವೇ ಸಮರ್ಪಕವಾಗಿ ಬಳಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಸರ್ಕಾರಗಳ ನಿರುತ್ಸಾಹದಿಂದ ಹಸಿರಿನಿಂದ ಕಂಗೊಳಿಸಬೇಕಿದ್ದ ಸಾವಿರಾರು ಎಕರೆ ಜಮೀನು ಇನ್ನೂ ಪಾಳುಬಿದ್ದಿದೆ. ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ರೈತರ ಅನುಕೂಲಕ್ಕೆ ಮುಕ್ತಗೊಳಿಸುವ ಇಚ್ಛಾಶಕ್ತಿಯನ್ನು ಸರ್ಕಾರಗಳು ತೋರಬೇಕಿದೆ.
ವಿದ್ಯುತ್ ಉತ್ಪಾದನೆಯ ಕ್ಷೇತ್ರದಲ್ಲೂ ನಾವು ಹಿಂದೆ ಬಿದ್ದಿದ್ದೇವೆ. ಪ್ರತಿ ವರ್ಷ ವಿದ್ಯುತ್ ಕೊರತೆಯ ಬವಣೆಯನ್ನು ನಾವು ತೀವ್ರವಾಗಿ ಅನುಭವಿಸುತ್ತಿದ್ದೇವೆ. ಪರ್ಯಾಯ ಇಂಧನ ಸೃಷ್ಟಿಯ ಕಡೆ ನಾವು ಹೆಚ್ಚು ಗಮನ ಹರಿಸದ ಹೊರತು ಈ ಸಮಸ್ಯೆ ಪರಿಹಾರವಾಗುವುದಿಲ್ಲ. ಪ್ರತಿ ವರ್ಷ ದುಬಾರಿ ಬೆಲೆ ತೆತ್ತು ವಿದ್ಯುತ್ ಕೊಳ್ಳುವುದರ ಬದಲು ಸರ್ಕಾರ ವಿದ್ಯುತ್ ವಿಷಯದಲ್ಲಿ ಸ್ವಾವಲಂಬನೆಯೆಡೆಗೆ ಒತ್ತುಕೊಡಬೇಕು.
ಉದ್ಯೋಗ ಮತ್ತು ಉದ್ಯಮ
ಕರ್ನಾಟಕದಲ್ಲಿ ಉದ್ಯಮ ಮತ್ತು ಉದ್ಯೋಗ ಎರಡರಲ್ಲೂ ಕನ್ನಡಿಗರೇ ಸಾರ್ವಭೌಮರಾಗಬೇಕು. ಆದರೆ ಇಂದು ದಯನೀಯವಾದ ಸ್ಥಿತಿಯಲ್ಲಿ ನಾವಿದ್ದೇವೆ. ಕರ್ನಾಟಕದಲ್ಲಿರುವ ಉದ್ಯಮಗಳು ಪರಭಾಷಿಗರ ಕೈಗೆ ಹೋಗಿವೆ. ಉದ್ಯಮಗಳು ಪರಭಾಷಿಗರ ಕೈಗೆ ಹೋಗುತ್ತಿರುವ ಕಾರಣದಿಂದ ಉದ್ಯೋಗಗಳೂ ಸಹ ಪರಭಾಷಿಗರ ಪಾಲಾಗುತ್ತಿವೆ.
ಸರ್ಕಾರಿ ಉದ್ಯೋಗಗಳಲ್ಲಿ ಕನ್ನಡಿಗರು ಹೆಚ್ಚಿನ ಪಾಲು ಪಡೆದಿರಬಹುದು. ಆದರೆ ಖಾಸಗಿ ಕ್ಷೇತ್ರದಲ್ಲಿ ಇದೇ ಮಾತನ್ನು ಹೇಳುವಂತಿಲ್ಲ. ಕರ್ನಾಟಕದ ನೆಲ, ಜಲ, ವಿದ್ಯುತ್ ಬಳಸಿಕೊಳ್ಳುವ ಪರದೇಶಿ ಸಂಸ್ಥೆಗಳು ಕನ್ನಡಿಗರಿಗೆ ಉದ್ಯೋಗ ಕೊಡುವಲ್ಲಿ ಮಾತ್ರ ಅಸಡ್ಡೆಯಿಂದ ವರ್ತಿಸುತ್ತವೆ. ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಅನುಷ್ಠಾನವೇ ಆಗಿಲ್ಲ. ಈ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಬ್ಯಾಂಕುಗಳು ಪಾಲಿಸುತ್ತಿಲ್ಲ. ರೈಲ್ವೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಇದಕ್ಕೆ ಸ್ಪಷ್ಟ ಉದಾಹರಣೆ. ನಮ್ಮ ಹೋರಾಟದ ಫಲವಾಗಿ ಡಿ ದರ್ಜೆಯ ಉದ್ಯೋಗಗಳ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ನೀಡುವ ಹಾಗು ದೇಶದಲ್ಲಿ ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸುವ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಬಂದಿದೆ. ಆದರೆ ಉನ್ನತ ಸ್ಥಾನಗಳಲ್ಲಿ ಕುಳಿತಿರುವ ಪರಭಾಷಿಗ ಅಧಿಕಾರಿಗಳು ಕನ್ನಡಿಗರನ್ನು ವಂಚಿಸಿ, ಇತರ ಭಾಷಿಕರಿಗೆ ಅವಕಾಶ ಕಲ್ಪಿಸಲು ಪಿತೂರಿ ನಡೆಸುತ್ತ ಬಂದಿದ್ದಾರೆ.
ನಮ್ಮ ಕನಸಿನ ಕರ್ನಾಟಕದಲ್ಲಿ ಈ ನಾಡಿನ ಉದ್ಯಮಗಳು ಕನ್ನಡಿಗರಿಗೇ ದಕ್ಕಬೇಕು. ಉದ್ಯೋಗಗಳೂ ಕನ್ನಡಿಗರಿಗೇ ದೊರೆಯಬೇಕು. ರಾಜ್ಯದಲ್ಲಿ ಒಬ್ಬನೇ ಒಬ್ಬ ನಿರುದ್ಯೋಗಿ ಯುವಕ-ಯುವತಿಯೂ ಇರಬಾರದು. ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ್ದು ಬಸವಾದಿ ಶರಣರು. ಕನ್ನಡ ನಾಡಿನ ಎಲ್ಲರೂ ಶ್ರಮಜೀವಿಗಳಾಗಿ, ಕಾಯಕಯೋಗಿಗಳಾಗಬೇಕು. ಅದಕ್ಕೆ ತಕ್ಕ ವ್ಯವಸ್ಥೆ ನಿರ್ಮಾಣವಾಗಬೇಕು. ವೃತ್ತಿ ಕೌಶಲ್ಯವನ್ನು ಹೆಚ್ಚಿಸುವ, ಸ್ವಂತ ಉದ್ದಿಮೆ ಸ್ಥಾಪಿಸುವ ಕನ್ನಡಿಗರನ್ನು ಪ್ರೋತ್ಸಾಹಿಸುವ, ಒಟ್ಟಾರೆಯಾಗಿ ದುಡಿಯುವುದಕ್ಕೆ ಪ್ರೇರಣೆ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಬೇಕು.
ವಲಸೆ ನಿಯಂತ್ರಣಗೊಳ್ಳಬೇಕು
ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕಕ್ಕೆ ವಲಸೆ ಪ್ರಮಾಣ ಮಿತಿಮೀರಿದೆ. ಎಲ್ಲ ರಾಜ್ಯಗಳಿಂದಲೂ ಬದುಕನ್ನು ಅರಸಿಕೊಂಡು ರಾಜ್ಯಕ್ಕೆ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಇದು ಒಕ್ಕೂಟ ಮಾದರಿಯ ರಾಷ್ಟ್ರ. ಹೀಗಾಗಿ ವಲಸೆಯೂ ಕೂಡ ಕಾನೂನುಬದ್ಧ. ಆದರೆ ಈ ವಲಸೆ ಮಿತಿ ಮೀರಿದರೆ ಅಶಾಂತಿ, ಅರಾಜಕತೆ ನಿರ್ಮಾಣವಾಗುತ್ತದೆ. ವಿಶೇಷವಾಗಿ ಬೆಂಗಳೂರು, ಹುಬ್ಬಳ್ಳಿ, ಮೈಸೂರುಗಳಂಥ ದೊಡ್ಡ ನಗರಗಳಲ್ಲಿ ಈ ವಲಸೆಕೋರರಿಂದ ಆಗುತ್ತಿರುವ ಅಪಾಯಗಳು ಅಷ್ಟಿಷ್ಟಲ್ಲ. ಸರ್ಕಾರ ಈ ಅನಿಯಂತ್ರಿತ ವಲಸೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಕನ್ನಡಿಗರೂ ಉದ್ಯೋಗ ನಿಮಿತ್ತ ಬೇರೆ ಬೇರೆ ರಾಜ್ಯಗಳು ಮಾತ್ರವಲ್ಲ, ಬೇರೆ ರಾಷ್ಟ್ರಗಳಲ್ಲೂ ಬದುಕುತ್ತಿದ್ದಾರೆ. ಆದರೆ ಕನ್ನಡಿಗರು ಯಾರಿಗೂ ಸಮಸ್ಯೆ ತಂದೊಡ್ಡಿದವರಲ್ಲ. ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿಗಳನ್ನು ಗೌರವಿಸುತ್ತ ಅವರು ಬದುಕುತ್ತಿದ್ದಾರೆ. ಆದರೆ ಕರ್ನಾಟಕಕ್ಕೆ ವಲಸೆ ಬರುತ್ತಿರುವವರು ಹತ್ತು ಇಪ್ಪತ್ತು ವರ್ಷಗಳಾದರೂ ಕನ್ನಡ ಭಾಷೆ ಕಲಿಯದೆ, ಇಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳದೆ ಉಡಾಫೆಯಿಂದ ವರ್ತಿಸುತ್ತಾರೆ. ಇದು ವೈಷಮ್ಯಗಳಿಗೆ ಕಾರಣವಾಗುತ್ತದೆ. ಹೀಗಾಗಿ ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕಲೇಬೇಕಾಗಿದೆ.
ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು
ಕರ್ನಾಟಕ ಏಕೀಕರಣ ಇನ್ನೂ ಸಂಪೂರ್ಣವಾಗಿಲ್ಲ. ಕಾಸರಗೋಡಿನ ಕವಿ ಕಯ್ಯಾರ ಕಿಞ್ಞಣ್ಣ ರೈ ನೊಂದು ನುಡಿದ ಮಾತುಗಳಿವು:
ಕನ್ನಡದ ಕುಲಕೋಟಿಯೆಚ್ಚರೆಚ್ಚರವಿರಲಿ
ಸಿಂಹ, ಸ್ವಪ್ನವ ಬಿಟ್ಟು ಕೆರಳಿ ನಿಲಲಿ!
ಅನ್ನೆಯಕ್ಕೆಡೆಗೊಡದೆ,
ಅಂಗುಲ ನೆಲಂ ಬಿಡದೆ,
ಅನ್ಯರ ತಡೆ ಹಿಡಿದೆ
ನಾಡುಳಿಸಲಿ
ಆದರೆ ಕಾಸರಗೋಡು ಕರ್ನಾಟಕದ ಕೈ ತಪ್ಪಿ ಹೋಯಿತು. ಕಾಸರಗೋಡು ಮಾತ್ರವಲ್ಲ ಕನಿಷ್ಠ ೧೩ ಜಿಲ್ಲೆಗಳು ಕರ್ನಾಟಕದ ಕೈ ತಪ್ಪಿವೆ. ಈ ಎಲ್ಲವೂ ಕರ್ನಾಟಕದ ಒಳಗೆ ಬರುವಂತಾಗಬೇಕು. ಮಹಾಜನ್ ಆಯೋಗದ ವರದಿ ಅನುಷ್ಠಾನವೇ ಇದಕ್ಕೆ ಪರಿಹಾರ. ಆದರೆ ಮಹಾರಾಷ್ಟ್ರದ ಕುತಂತ್ರದಿಂದಾಗಿ ಮಹಾಜನ್ ವರದಿ ಧೂಳು ತಿನ್ನುತ್ತಿದೆ.
ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಬೇಕು
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಗಂಭೀರವಾದ ಸಮಸ್ಯೆ. ಇದು ಪರಿಹಾರವಾಗದ ಹೊರತು ಎಲ್ಲ ಕನ್ನಡಿಗರು ಭಾವನಾತ್ಮಕವಾಗಿ ಒಂದಾಗಲು ಸಾಧ್ಯವಾಗದು. ಆದರೆ ಸ್ವಾತಂತ್ರ್ಯೋತ್ತರ ಭಾರತದ ಎಲ್ಲ ಸರ್ಕಾರಗಳು ಈ ಕಡೆ ಗಮನ ಹರಿಸಲೇ ಇಲ್ಲ. ಈ ಸಂಬಂಧ ರಚನೆಯಾದ ಡಿ.ಎಂ.ನಂಜುಡಪ್ಪ ವರದಿ ಹಿಂದುಳಿದ, ಅತಿ ಹಿಂದುಳಿದ ಪ್ರದೇಶಗಳನ್ನು ಪಟ್ಟಿ ಮಾಡಿ, ಈ ಭಾಗಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳನ್ನೂ ಸೂಚಿಸಿತು. ಆದರೆ ಈ ವರದಿ ಪೂರ್ಣ ಅನುಷ್ಠಾನವಾಗಿಲ್ಲ.
ಕರ್ನಾಟಕವು ಕಳೆದುಕೊಂಡ ಗಡಿಭಾಗಗಳ ಬಗ್ಗೆ ನಾವು ಕೊರಗುತ್ತೇವೆ. ಆದರೆ ನಮ್ಮದೇ ರಾಜ್ಯದ ಗಡಿ ಪ್ರದೇಶವನ್ನು ಮರೆತಿದ್ದೇವೆ. ಗಡಿನಾಡಿನಲ್ಲಿ ಕನ್ನಡಿಗರು ನಿರಂತರ ಸಂಕಷ್ಟದಲ್ಲಿದ್ದಾರೆ. ಈ ಕುರಿತು ಹಲವು ವರದಿಗಳೂ ಬಂದಿವೆ. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಗಡಿಭಾಗ ಅಭಿವೃದ್ಧಿ ಹೊಂದುತ್ತಿಲ್ಲ. ಎಲ್ಲರೂ ಎಚ್ಚೆತ್ತು ನಮ್ಮ ಗಡಿಭಾಗಗಳ ಅಭಿವೃದ್ಧಿಗೆ ಗಮನಹರಿಸಬೇಕಿದೆ.
ಎಲ್ಲರಲ್ಲೂ ಕನ್ನಡಪ್ರಜ್ಞೆ ಜಾಗೃತಗೊಳ್ಳಲಿ.
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೆ!
ಕನ್ನಡ ಜನರೆಲ್ಲರ ಮೇಲಾಣೆ
ಕನ್ನಡ ನಾಡೊಂದಾಗದೆ ಮಾಣೆ
ತೊಡು ದೀಕ್ಷೆಯ! ಇಡು ರಕ್ಷೆಯ
ಕಂಕಣ ಕಟ್ಟಿಂದೇ!
ಇದು ಜಗದ ಕವಿ, ಯುಗದ ಕವಿ ಕುವೆಂಪು ಅವರ ಕರೆ. ಅವರ ಕರೆಯಂತೆ ನಾವೆಲ್ಲರೂ ಕನ್ನಡದ ದೀಕ್ಷೆ ತೊಡೋಣ. ನಮ್ಮ ಕನಸಿನ ಕರ್ನಾಟಕವನ್ನು ನಿರ್ಮಿಸೋಣ. ಮತಧರ್ಮಗಳ ಗೊಡವೆಗಳನ್ನು ಬಿಟ್ಟು, ಶಾಂತಿ ಸಾಮರಸ್ಯದ ಹೊಸ ನಾಡೊಂದನ್ನು ಕಟ್ಟೋಣ.

No comments:

Post a Comment

ಹಿಂದಿನ ಬರೆಹಗಳು