೯ನೇ ಶತಮಾನದ ’ಕವಿರಾಜಮಾರ್ಗ ಕೃತಿಯಲ್ಲಿ ಕನ್ನಡನಾಡು ದಕ್ಷಿಣದ ಕಾವೇರಿಯಿಂದ ಉತ್ತರದ ಗೋದಾವರಿಯವರೆಗೆ ವ್ಯಾಪಿಸಿತ್ತು ಎನ್ನಲಾಗಿದೆ. ಆದರೆ ಇಂದಿನ ಕರ್ನಾಟಕದ ಉತ್ತರ ಗಡಿಯಿಂದ ೪೦ ಮೈಲು ಆಚೆ ಗೋದಾವರಿ ಹರಿಯುತ್ತದೆ. ಆದರೆ ಆ ನದಿಯ ಆಚೆ-ಈಚೆ ಇರುವ ಶಾಸನಗಳು ಕನ್ನಡದಲ್ಲಿವೆ. ಅಂದರೆ ಹಿಂದೆ ಅದು ಕನ್ನಡನಾಡು ಆಗಿತ್ತು. ಈಗ ಆ ಭಾಗವೆಲ್ಲ ಮಹಾರಾಷ್ಟ್ರ-ಆಂಧ್ರಗಳಿಗೆ ಸೇರಿವೆ. ಮಹಾರಾಷ್ಟ್ರದ ಒಟ್ಟು ೧೦೦೦ ಶಾಸನಗಳಲ್ಲಿ ೩೦೦ ಶಾಸನಗಳು ಕನ್ನಡದಲ್ಲಿವೆ. ದಕ್ಷಿಣ ಮಹಾರಾಷ್ಟ್ರ ಮೂಲತಃ ಕರ್ನಾಟಕವೇ ಎಂದು ಮರಾಠಿ ವಿದ್ವಾಂಸರು ಒಪ್ಪಿಕೊಂಡಿದ್ದಾರೆ, ಕರ್ನಾಟಕದ ಅಂಚಿನ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ, ನಾಂದೇಡ ಜಿಲ್ಲೆಗಳು ಮೂಲತಃ ಅಚ್ಚಗನ್ನಡ ಪ್ರದೇಶಗಳು, ರಾಷ್ಟ್ರಕೂಟರು ದೇವಗಿರಿ ಯಾದವರು ಕನ್ನಡಿಗರು. ಔರಂಗಬಾದ್ ಜಿಲ್ಲೆಯಲ್ಲಿ ಕನ್ನಡ ಎಂಬ ಹೆಸರಿನ ತಾಲೂಕು ಇದೆ. ಅಜಾತ-ಎಲ್ಲೋರ ಗುಹೆ ನಿರ್ಮಾತರು ರಾಷ್ಟ್ರಕೂಟರು.
ಆಂಧ್ರದ ಕರ್ನೂಲ್, ಅನಂತಪುರ, ಚಿತ್ತೂರು, ನಿಜಾಮಬಾದ್ ಜಿಲ್ಲೆಗಳಲ್ಲಿ ಕನ್ನಡ ಶಾಸನಗಳು ಇವೆ. ಅಲ್ಲಿ ಕನ್ನಡ ಮಾತನಾಡುವ ಜನರಿದ್ದಾರೆ. ತಮಿಳುನಾಡಿನ ನೀಲಗಿರಿ ಪ್ರದೇಶದವರ ಭಾಷೆ ಬಡಗ ಭಾಷೆ. ಇದು ಕನ್ನಡದ ಪ್ರಬೇಧ ಎನ್ನಲಾಗಿದೆ. ಕೇರಳದ ಕಾಸರಗೋಡು ಕನ್ನಡ ಪ್ರದೇಶ.
ಕರ್ನಾಟಕದ ಗಡಿಗೆ ಹೊಂದಿಕೊಂಡ ರಾಜ್ಯಗಳ ಜೊತೆ ನಮಗೆ ಜಗಳವಿದೆ. ಅಥವಾ ಅವು ನಮ್ಮ ಜೊತೆ ಜಗಳ ಮಾಡುತ್ತಲೇ ಇವೆ. ಗಡಿ, ನೀರು, ಭಾಷೆ, ರಸ್ತೆ ಪ್ರದೇಶ ಇತ್ಯಾದಿ ಕಾರಣಗಳು.
ಕರ್ನಾಟಕ / ಮಹರಾಷ್ಟ್ರ:- ಈ ರಾಜ್ಯಗಳ ವಿವಾದದ ಕೇಂದ್ರ ಬೆಳಗಾವಿ. ಬೆಳಗಾವಿ ಮತ್ತು ಸುತ್ತಲಿನ ಮರಾಠಿ ಭಾಷಿಕ ಪ್ರದೇಶಗಳನ್ನು ತನಗೆ ನೀಡಬೇಕೆಂದು ಮಹಾರಾಷ್ಟ್ರದ ತಕರಾರು. ಅದಕ್ಕೆ ನೇಮಕವಾದದ್ದು ಮಹಾಜನ್ ಆಯೋಗ. ಆಗಸ್ಟ್ ೧೯೬೭ರಲ್ಲಿ ನ್ಯಾಯಮೂರ್ತಿ ಮಹಾಜನ್ ೧೯೬ ಪುಟಗಳ ವರದಿ ಸಲ್ಲಿಸಿದ್ದರು. ಮಹಾರಾಷ್ಟ್ರ, ಬೆಳಗಾವಿ ಸೇರಿ ೮೧೪ ಹಳ್ಳಿಗಳನ್ನು ಕೇಳಿತ್ತು. ಆದರೆ ೨೬೪ ಹಳ್ಳಿಗಳನ್ನು ೬೫೬೩ ಚದುರ ಮೈಲು ಪ್ರದೇಶದೊಂದಿಗೆ ವರ್ಗಾಯಿಸಲಾಯಿತು. ಇದಕ್ಕೊಪ್ಪದ ಮಹಾರಾಷ್ಟ್ರ ರಾಜಕೀಯ ಅನೇಕ ಹೋರಾಟಗಳನ್ನು ಮಾಡಿದೆ. ಬಳಿಕ ಈಗ ನ್ಯಾಯಾಲಯದ ಮೊರೆಹೋಗಿದೆ. ಈ ಎರಡು ರಾಜ್ಯಗಳ ಗಡಿವಿವಾದಕ್ಕೆ ೫೦ ವರ್ಷಗಳ ಇತಿಹಾಸವಿದೆ ೧೯೬೧ರಿಂದ ಎಂ.ಇ.ಎಸ್. ನಾಯಕತ್ವ ವಹಿಸಿದೆ. ೧೯೫೭ರಲ್ಲಿಯೇ ಮುಂಬೈ ಸರಕಾರದ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿ ಬೆಳಗಾವಿ ಕಾರವಾರ ನಿಪ್ಪಾಣಿ ಒಳಗೊಂಡು ೮೧೪ ಗ್ರಾಮಗಳನ್ನು ಮಹಾರಾಷ್ಟ್ರದಲ್ಲಿ ವಿಲೀನ ಮಾಡಬೇಕೆಂದು ಒತ್ತಡ ಹಾಕಿದ್ದರು. ಮಹಾರಾಷ್ಟ್ರ ಸರಕಾರ ಮಹಾಜನ್ ವರದಿಯನ್ನು ತಿರಸ್ಕರಿಸುವ ನಿರ್ಣಯ ಅಂಗೀಕರಿಸಿತು. ಕರ್ನಾಟಕ ಸರಕಾರ ಮಹಾಜನ್ ವರದಿ ಅಂತಿಮ ಎನ್ನುವ ನಿರ್ಣಯ ಅಂಗೀಕರಿಸಿವೆ. ರಾಜಕೀಯ ಷಡ್ಯಂತ್ರಗಳು ಫಲಿಸದಿದ್ದಾಗ ಮಹಾರಾಷ್ಟ್ರ ಕೇಂದ್ರ ಸರಕಾರವನ್ನು ಮೊದಲ ಮತ್ತು ಕರ್ನಾಟಕವನ್ನು ಎರಡನೇ ಪ್ರತಿವಾದಿಯನ್ನಾಗಿ ಮಾಡಿ ೨೯-೦೩-೨೦೦೪ರಂದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ದಾಖಲು ಮಾಡಿದೆ. ಮಹಾರಾಷ್ಟ್ರದ ದಾವೆಗೆ ಕರ್ನಾಟಕದಿಂದ ಸೆಪ್ಟೆಂಬರ್ ೨೦೦೫ರಲ್ಲಿ ಆಕ್ಷೇಪಣಾ ಪತ್ರ ಸಲ್ಲಿಕೆ. ೨೭-೪-೨೦೦೬ರಲ್ಲಿ ಮಹಾರಾಷ್ಟ್ರದಿಂದ ಗಡಿಯಲ್ಲಿ ಕೇಂದ್ರಾಡಳಿತ ಜಾರಿಗೆ ಆಗ್ರಹಿಸುವ ಮಧ್ಯಂತರ ಅರ್ಜಿ ಸಲ್ಲಿಕೆ. ಈ ಅರ್ಜಿ ಸುಪ್ರೀಂ ಕೋರ್ಟಿಗೆ ಸಲ್ಲಿಸಲು ೧೬-೧೧-೨೦೦೬ರಂದು ಪ್ರಮಾಣ ಪತ್ರ ಸಲ್ಲಿಕೆ. ೧೩-೦೨-೨೦೦೯ರಂದು ಮಹಾರಾಷ್ಟ್ರದಿಂದ ಎರಡನೇ ತಿದ್ದುಪಡಿ ಅರ್ಜಿ ಸಲ್ಲಿಕೆ. ಅದಕ್ಕೆ ಕೇಂದ್ರ ಸರಕಾರ ತನ್ನ ನಿಲುವಿನ ಪ್ರಮಾಣ ಪತ್ರ ಸಲ್ಲಿಸಿದೆ. ದಾವೆ ವಿಚಾರಣೆ ವಿಳಂಬಕ್ಕೆ ಮಹಾರಾಷ್ಟ್ರ ಕಾರಣ. ಜುಲೈ ೮, ೨೦೧೦ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರ ಸರಕಾರ ಪ್ರಮಾಣ ಪತ್ರ ಸಲ್ಲಿಸಿತು. ಅದು ರಾಜಕೀಯ ನಿರ್ಧಾರವನ್ನು ಸಂಸತ್ತಿನಲ್ಲಿ ಪ್ರಕಟಿಸಬೇಕಿದೆ.
ಕೃಷ್ಣಾನದಿ ನೀರಿನಲ್ಲಿ ಮಹಾರಾಷ್ಟ್ರದ ಪಾಲೂ ಇದ್ದು, ಆಂಧ್ರದ ಜೊತೆ ಸೇರಿ ನದಿ ನೀರು ಹಂಚಿಕೆಗಾಗಿ ನ್ಯಾಯಾಧೀಕರಣ ರಚನೆಯಾಗದಂತೆ ನೋಡಿಕೊಂಡು ಬಂದಿದೆ. ಈಗ ಕರ್ನಾಟಕದ ಪಾಲಿನ ನೀರಿನ ಮೇಲೂ ಕಣ್ಣು ಹಾಕಿ, ಅದನ್ನು ತನಗೆ ನೀಡುವಂತೆ ನ್ಯಾಯಾಧೀಕರಣದ ಮುಂದೆ ಅರ್ಜಿ ಹಾಕಿ ಕುಳಿತಿದೆ.
ಕರ್ನಾಟಕ / ಗೋವಾ:- ಪೋರ್ಚುಗೀಸರ ಕೈಯಿಂದ ವಾಪಸ್ಸು ಪಡೆದ ನಂತರ ಗೋವಾ ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸಬೇಕಾಗಿತ್ತು. ಗೋವಾ ರಚನೆಯಾದಾಗ ಭಾಷಾವಾರು ಅಂಶವನ್ನು ಪರಿಗಣಿಸಲಿಲ್ಲ. ಈಗ ಗೋವಾ, ಕರ್ನಾಟಕದಲ್ಲಿರುವ ಕೊಂಕಣಿ ಭಾಷಿಕರಿರುವ ಕಾರವಾರ ಜೊಮಿಡಾ, ಹಳಿಯಾಳ, ಬೆಳಗಾಂ ಪ್ರದೇಶವನ್ನು ತನಗೆ ಬಿಟ್ಟುಕೊಡಬೇಕೆಂದು ಹೇಳುತ್ತಿದೆ. ಇನ್ನೊಂದು ವಿವಾದವೂ ಇದೆ. ಮಹದಾಯಿ ನದಿಯ ೩೪ ಟಿಎಂಸಿ ನೀರನ್ನು ಗೋವಾ ಬಳಸುತ್ತಿದೆ. ಆದರೆ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರಿಗಾಗಿ ೭ ಟಿಎಂಸಿ ನೀರು ಬಳಸಲು ಕಳಸಾ ಬಂಡೂರಿ ಯೋಜನೆ ತೆಗೆದುಕೊಂಡರೆ ಅದಕ್ಕೆ ಅಡ್ಡಗಾಲು ಹಾಕುತ್ತಲಿದೆ. ಸಮಸ್ಯೆ ಪರಿಹಾರಕ್ಕೆ ನ್ಯಾಯಾಧೀಕರಣ ರಚನೆ ಮಾಡಲು ಗೋವಾ ಕೇಂದ್ರದ ಮೇಲೆ ಒತ್ತಡ ತರುತ್ತಿದೆ. ಕರ್ನಾಟಕ ಒಪ್ಪುತ್ತಿಲ್ಲ.
ಆಂಧ್ರ / ಕರ್ನಾಟಕ:- ಕೃಷ್ಣಾನದಿಯ ಹಂಚಿಕೆ ಪ್ರಮುಖ ವಿವಾದ. ಕೃಷ್ಣಾ ನ್ಯಾಯಾಧೀಕರಣವು ಆಂಧ್ರ, ಕರ್ನಾಟಕ, ಮಹಾರಾಷ್ಟ್ರಗಳಿಗೆ ಇಂತಿಷ್ಟು ನೀರು ಎಂದು ಸ್ಪಷ್ಟವಾಗಿ ಹಂಚಿಕೆ ಮಾಡಿದ್ದರೂ ತನ್ನ ಪಾಲು ಹೆಚ್ಚಿಸಿಕೊಳ್ಳಲು ಆಂಧ್ರ ಪ್ರಯತ್ನಿಸುತ್ತಿದೆ. ಈ ಮೂರು ರಾಜ್ಯಗಳು ಸೇರಿ ತಮಿಳುನಾಡಿನ ಚೆನ್ನೈಗೆ ತೆಲುಗು-ಗಂಗಾ ಯೋಜನೆಯಡಿ ಕುಡಿಯುವ ನೀರು ಪೂರೈಸಲು ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣವೂ ವಿವಾದದಲ್ಲಿದೆ.
ಆಂಧ್ರದ ಮೆಹಬೂಬನಗರ ಜಿಲ್ಲೆಯ ಜುರಾಲ ಎಂಬಲ್ಲಿ ಕೃಷ್ಣಾ ನದಿಗೆ ಪ್ರಿಯದರ್ಶಿನಿ ಅಣೆಕಟ್ಟು ಕಟ್ಟಲಾಗಿದ್ದು, ಅದರಿಂದ ರಾಯಚೂರು ಜಿಲ್ಲೆ ಹತ್ತೂರು ಗ್ರಾಮ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿ ಮುಳುಗಿದೆ. ಅಣೆಕಟ್ಟಿನಲ್ಲಿ ಹೆಚ್ಚಿನ ನೀರು ಸಂಗ್ರಹಿಸಬಾರದೆಂದು ಕರ್ನಾಟಕ ಎಷ್ಟು ಸಲ ಹೇಳಿದರೂ ಕಿವುಡಾಗಿದೆ.
ಪಾಲಾರ್ ಪೆನ್ನಾರ್ ನದಿ ಹರಿಯುವ ಕೋಲಾರ, ಚಿಕ್ಕಬಳ್ಳಾಪುರ, ಜಿಲ್ಲೆಗಳ ಬಂಜರು ಭೂಮಿಗೆ ನೀರುಣಿಸಲು ಕರ್ನಾಟಕ ರೂಪಿಸುವ ಪರಗೋಡು ಯೋಜನೆಗೆ ಆಂಧ್ರ ತಕರಾರು ತೆಗೆದಿದೆ.
ಗಣಿಧಣಿಗಳಿಗೆ ಅನುಕೂಲ ಮಾಡಿ ಕೊಡಲು ಆಂಧ್ರ ಕರ್ನಾಟಕಕ್ಕೆ ಸೇರಿದ ಬಳ್ಳಾರಿ ಜಿಲ್ಲೆಯ ಗಡಿ ಭಾಗವನ್ನು ಒತ್ತುವರಿ ಮಾಡಿ ವಿವಾದ ಸೃಷ್ಟಿಸಿದೆ.
ರಾಯಚೂರು ತಾಲೂಕಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸುತ್ತಿರುವ ’ಗೂಗಲ್ ಬ್ಯಾರೇಜ್ ಕೈಬಿಡಬೇಕೆಂದು ಆಂಧ್ರ ತಕರಾರು ಮಾಡಿದೆ. ಈ ಸಂಬಂಧ ಆಂಧ್ರ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಿ ಕೇಂದ್ರ ಪ್ರವೇಶಿಸುವಂತೆ ಆಗ್ರಹಿಸಲಾಗಿದೆ.
ಕರ್ನಾಟಕ / ಕೇರಳ:- ಬಂಡಿಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ವನ್ಯಮೃಗಗಳ ಸುರಕ್ಷತೆಗಾಗಿ ರಾತ್ರಿ ರಸ್ತೆ ಸಂಚಾರ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಹೊರಡಿಸಿದ ಆದೇಶದಿಂದ ಬಂಡೀಪುರ ಸುತ್ತ ಮುತ್ತ ರಾತ್ರಿ ಸಂಚಾರಕ್ಕೆ ಅವಕಾಶ ನೀಡಲು ಬಿಗಿಪಟ್ಟು ಹಾಕಿದೆ ಏಕೆಂದರೆ ಕೇರಳದ ಪ್ರವಾಸ, ವಾಣಿಜ್ಯವ್ಯವಹಾರಕ್ಕೆ ನಷ್ಟವಾಗಿದೆ. ಬೆಂಗಳೂರಿನಿಂದ ಕೇರಳಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಕರ್ನಾಟಕ / ತಮಿಳುನಾಡು:- ೧೨೦ ವರ್ಷಗಳ ಇತಿಹಾಸ ಹೊಂದಿದ ಕಾವೇರಿ ಜಲವಿವಾದಕ್ಕೆ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಹೊರಬಿದ್ದು ನ್ಯಾಯಾಧೀಕರಣದ ಅವಧಿ ಮುಗಿದಿದ್ದರೂ ವಿವಾದ ಬಗೆಹರಿದಿಲ್ಲ. ತಮಿಳುನಾಡು ಹೆಚ್ಚು ನೀರು ಕೇಳುತ್ತಲಿದೆ.
ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಹೊಗೇನಕಲ್ ತಮ್ಮದು ಎಂದು ಎರಡೂ ರಾಜ್ಯಗಳ ವಿವಾದ. ಹೊಗೇನಕಲ್‌ನಿಂದ ತನ್ನ ಅನೇಕ ಜಿಲ್ಲೆಗಳಿಗೆ ನೀರುಣಿಸುವ, ವಿದ್ಯುತ್ ಉತ್ಪಾದಿಸುವ ಯೋಜನೆಗೆ ತಮಿಳುನಾಡು ಚಾಲನೆ ನೀಡಿದೆ. ಕೇಂದ್ರದ ಸಹಕಾರ ಇದೆ. ಕರ್ನಾಟಕ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹಾಕಿದೆ.
ಚಾಮರಾಜನಗರದ ಸ್ವಲ್ಪ ದೂರದಲ್ಲಿರುವ ತಾಳವಾಡಿ ಕರ್ನಾಟಕಕ್ಕೆ ತೀರ ಹತ್ತಿರ ’ಕನ್ನಡಿಗರು ಸಾಕಷ್ಟು ಇದ್ದಾರೆ. ತಮಿಳುನಾಡಿನಲ್ಲಿದ್ದರೂ ಚಾಮರಾಜನಗರವೇ ಅತಿ ಪ್ರಿಯ. ವ್ಯವಹಾರ ಇಲ್ಲಿಯೇ’ ತಾಳವಾಡಿ ಬಿಟ್ಟುಕೊಡಿ ಎಂಬುದು ಕನ್ನಡಿಗರ ವಾದ.
ಹೀಗೆ ರಾಜ್ಯದೊಂದಿಗೆ ಬೆಸೆದ ಐದು ಗಡಿ ರಾಜ್ಯಗಳ ಜೊತೆಗೆ ಒಂದಿಲ್ಲೊಂದು ವಿವಾದಗಳು ಇವೆ. ರಾಜ್ಯಕ್ಕೆ ೧೮ ಗಡಿ ಜಿಲ್ಲೆಗಳು ೫೨ ತಾಲೂಕುಗಳಿವೆ. ನಂಜುಂಡಪ್ಪ ವರದಿ ಪ್ರಕಾರ ೪೨ ತಾಲೂಕುಗಳ ಗಡಿ ಭಾಗದಲ್ಲಿ ಬರುತ್ತವೆ. ೧೭ ಗಡಿ ಜಿಲ್ಲೆಗಳು ಯಾವುದೆಂದರೆ, ಗುಲ್ಬರ್ಗಾ, ಬೆಳಗಾವಿ, ಬೀದರ್, ರಾಯಚೂರು, ಬಿಜಾಪುರ, ಬಳ್ಳಾರಿ, ಉಡುಪಿ, ಮಂಗಳೂರು, ಉತ್ತರಕನ್ನಡ, ದಕ್ಷಿಣ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗಾ ಮತ್ತು ಕೊಡಗು. ಈ ಎಲ್ಲ ಜಿಲ್ಲೆ ಮತ್ತು ತಾಲೂಕುಗಳು ಮಾರ್ಚ್ ೨೦೧೦ರಂದು ರಚಿತವಾದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ. ಚಂದ್ರಕಾಂತ ಬೆಲ್ಲದ ಅವರು ಅಧ್ಯಕ್ಷರಾಗಿದ್ದಾರೆ.
ಪ್ರಾಧಿಕಾರ ಗಡಿ ಪ್ರದೇಶದಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಗಡಿಯ ಒಳಗೂ ಹೊರಗೂ ಇರುವ ಕನ್ನಡಿಗರ ಸ್ಥಿತಿ ಸುಧಾರಣೆ ಗಡಿಯಾಚೆ ಕನ್ನಡ ಮಾಧ್ಯಮಗಳ ಶಾಲೆಗಳ ಸ್ಥಾಪನೆ. ಗ್ರಂಥಾಲಯಗಳ ಸ್ಥಾಪನೆ. ಕನ್ನಡ ಪರ ಸಂಘಟನೆಗಳಿಗೆ ಭಾಷಾ ಚಟುವಟಿಕೆಗಳಿಗೆ ಅನುದಾನ ನೀಡುವುದು, ಉಪನ್ಯಾಸ ಮಾಲಿಕೆಗಳನ್ನು ನಡೆಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ, ಗಡಿಯಲ್ಲಿರುವ ಕಲೆ, ಸಂಸ್ಕೃತಿ ಉಳಿಸುವಿಕೆ. ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಳ್ಳುವುದು, ಜನರ ಸಾಂಸ್ಕೃತಿಕ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮ ವಹಿಸುವುದು ಸಾಂಸ್ಕೃತಿಕ ಭವನಗಳ ನಿರ್ಮಾಣ, ಇತ್ಯಾದಿ ಚಟುವಟಿಕೆಗಳನ್ನು ನಡೆಸುವುದು.
ಗಡಿಭಾಗದಲ್ಲಿರುವ ಗ್ರಾಮಗಳ ಜನರು ಹೊರ ರಾಜ್ಯಗಳ ಜನರಿಗೆ ಸಿಗುತ್ತಿರುವ ಸೌಲಭ್ಯ ನೋಡಿ ನಿರಾಶರಾಗುತ್ತಿದ್ದಾರೆ. ಆಂಧ್ರ ಸರಕಾರ ಕೃಷಿಕರಿಗೆ ಹೆಚ್ಚಿನ ಸೌಲಭ್ಯ ನೀಡುತ್ತದೆ. ವಸತಿ ಸೌಲಭ್ಯ, ನೀರಾವರಿ, ಗ್ಯಾಸ್, ರಸ್ತೆ ಅಭಿವೃದ್ಧಿ ಅಪಾರ. ಒಂದೇ ಹಳ್ಳಿಯಲ್ಲಿ ಅರ್ಧದಷ್ಟು ಜನ ಆಂಧ್ರಕ್ಕೂ ಇನ್ನರ್ಧ ಜನ ಕರ್ನಾಟಕಕ್ಕೂ ಸೇರಿದ ಉದಾಹರಣೆಗಳಿವೆ. ಇಲ್ಲಿ ಆಗುವ ತಾರತಮ್ಯ ನಿವಾರಣೆಯಾಗಬೇಕು. ಈ ದಿಶೆಯಲ್ಲಿ ಪ್ರಾಧಿಕಾರ ಸಫಲವಾಗಬೇಕು. ಗಡಿಯ ಜನರ ಬದುಕನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾರುಕಟ್ಟೆ, ಸಾರಿಗೆ-ಸಂಪರ್ಕ ರಸ್ತೆ, ಶಿಕ್ಷಣ, ವಸತಿ, ಆರೋಗ್ಯ ಮೂಲಭೂತ ಅವಶ್ಯಕತೆಗಳ ಪೂರೈಕೆ ಆಗಬೇಕು.
ಗಡಿನಾಡು ಕನ್ನಡಿಗರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಕನ್ನಡಿಗರು ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ. ಗಡಿಯ ಶಾಲೆಗಳು ಕನ್ನಡದ ಅಧ್ಯಾಪಕರ ಕೊರತೆ ಎದುರಿಸುತ್ತಿದೆ. ಕನ್ನಡ ಪಠ್ಯಪುಸ್ತಕಗಳು ಸಿಗದೆ ಪ್ರತಿವರ್ಷ ಮಕ್ಕಳು ಗೋಳಾಡುತ್ತಾರೆ. ಕನ್ನಡ ಓದಿದ ಮಕ್ಕಳು ಶಿಕ್ಷಣ ಮುಂದುವರಿಸಲು ಅವರಿರುವ ರಾಜ್ಯ ಸಹಾಯ ಮಾಡುವುದಿಲ್ಲ. ಕರ್ನಾಟಕ ಸರ್ಕಾರ ಗಮನ ಕೊಡುವುದಿಲ್ಲ. ಹೀಗಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಉದ್ಯೋಗದ ವಿಚಾರದಲ್ಲಿ ಗಡಿನಾಡ ಮಕ್ಕಳು ಯಾರಿಗೂ ಬೇಡವಾಗಿದ್ದಾರೆ. ಹೀಗಾಗಿ ಗಡಿನಾಡ ಕನ್ನಡಿಗರು ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ. ಗಡಿನಾಡ ಕನ್ನಡಿಗರ, ಕನ್ನಡ ಓದುವ ಮಕ್ಕಳಿಗೆ ಅಗತ್ಯವಾದ ಸೌಲಭ್ಯ ಕೊಡಲು ಸರಕಾರ ಮುಂದಾಗಬೇಕು.
ಗಡಿನಾಡು ಶಿಕ್ಷಣ ನಿರ್ದೇಶನಾಲಯ ಸ್ಥಾಪನೆ ಆಗಬೇಕು. ಗಡಿ ತಾಲೂಕುಗಳಲ್ಲಿ ಕನಿಷ್ಠ ಹೋಬಳಿಗೆ ಒಂದರಂತೆ ಕನ್ನಡ ಮಾಧ್ಯಮ ವಸತಿ ಶಾಲೆ ಸ್ಥಾಪನೆ ಆಗಬೇಕು. ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ, ಅಲ್ಪ ಸಂಖ್ಯಾತರಿಗೆ ಉಚಿತ ವಿದ್ಯಾರ್ಥಿ ನಿಲಯಗಳು ಸ್ಥಾಪನೆಯಾಗಬೇಕು. ಸಂಸದರು/ಶಾಸಕರು ತಮ್ಮ ನಿಧಿಯಿಂದ ಗಡಿನಾಡಿನ ಅಭಿವೃದ್ಧಿಗೆ ನಿರ್ದಿಷ್ಟ ಮೊತ್ತವನ್ನು ಕಡ್ಡಾಯವಾಗಿ ಮೀಸಲಿಡಬೇಕು. ಗಡಿನಾಡು ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಬೇಕು. ಕನ್ನಡದ ಆಸಕ್ತಿ ಇರುವ ಅಧಿಕಾರಿಗಳನ್ನು ನೇಮಿಸಬೇಕು/ವರ್ಗಾಯಿಸಬೇಕು. ಎಲ್ಲ ವರ್ಗದ ಸರಕಾರಿ ನೌಕರರು ಮೂರು ವರ್ಷ ಕಡ್ಡಾಯವಾಗಿ ಗಡಿಭಾಗದಲ್ಲಿ ಸೇವೆಯನ್ನು ಸಲ್ಲಿಸಬೇಕು. ಗಡಿಭಾಗದಲ್ಲಿ ಉತ್ತಮ ಸಾರಿಗೆ ಸಂಪರ್ಕ ಆರೋಗ್ಯ ಕಲ್ಪಿಸಬೇಕು. ಅಲ್ಲಿಯ ನೈಸರ್ಗಿಕ ಸಂಪತ್ತು/ಸಂಪನ್ಮೂಲಗಳನ್ನು ಆಧರಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಗಿರಿಜನರ ಅಭಿವೃದ್ಧಿಗೆ ಚಾಮರಾಜನಗರದಲ್ಲಿ ಅಭಿವೃದ್ಧಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಪ್ರತಿ ತಾಲೂಕಿನಲ್ಲಿ ’ಕನ್ನಡ ಸಂಸ್ಕೃತಿ ಭವನ’ ಸ್ಥಾಪಿಸಬೇಕು. ಕನ್ನಡ ಕರ್ನಾಟಕ ಸಂಸ್ಕೃತಿಗೆ ದುಡಿದ ಗಡಿನಾಡ ಪ್ರತಿಭೆಗಳಿಗೆ ಅಕಾಡೆಮಿ, ಪ್ರಾಧಿಕಾರ ಪ್ರಶಸ್ತಿ ಕೊಡಬೇಕು. ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ ಮಾಡಬೇಕು. ಕರ್ನಾಟಕ ಗಡಿನಾಡು ಚಲನಚಿತ್ರ ಕಲಾ ಕೇಂದ್ರ ಸ್ಥಾಪನೆ ಆಗಬೇಕು. ಕೋಲಾರದಲ್ಲಿ, ಬೆಳಗಾವಿಯಲ್ಲಿ ಸಾಮಾಜಿಕ ಅಭಿವೃದ್ಧಿ ಸಂಶೋಧನಾ ಕನ್ನಡ ಕೇಂದ್ರ ಸ್ಥಾಪನೆ ಆಗಬೇಕು. ಗುಡಿ ಕೈಗಾರಿಕೆ, ಹೈನುಗಾರಿಕೆ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ಕೊಡಬೇಕು.
ಸರಕಾರಗಳು ಗಡಿ ಕನ್ನಡಿಗರ ಬಗ್ಗೆ ಅನಾಸ್ಥೆ, ಅನಾಸಕ್ತಿ, ನಿರ್ಲಕ್ಷ್ಯ ವಹಿಸಿದರೆ ಅಖಂಡ ಕರ್ನಾಟಕದ ಪರಿಕಲ್ಪನೆ ಬರಿಯ ಕಲ್ಪನೆಯಾಗುವುದು.
ಯು.ಎನ್. ಸಂಗನಾಳಮಠ
ವಿಶ್ರಾಂತ ಉಪನ್ಯಾಸಕರು-ಲೇಖಕರು
’ಜ್ಯೋತಿರ್ಲಿಂಗ’ ೮ನೇ ತಿರುವು, ಹೈಸ್ಕೂಲ್ ಬಡಾವಣೆ
ಶಿವಮೊಗ್ಗ ರಸ್ತೆ, ಹೊನ್ನಾಳಿ-೫೭೭ ೨೧೭
ದಾವಣಗೆರೆ ಜಿಲ್ಲೆ
Wednesday, May 18, 2011
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
May
(15)
- ಜಾತಿ ಪಕ್ಷಪಾತಿಗಳು ಪಾಪಿಗಳು, ದೇಶದ್ರೋಹಿಗಳು!
- ಇಲ್ಲಿ ದಲಿತರೂ ಜನಿವಾರ ತೊಡುತ್ತಾರೆ! ಮುಸ್ಲಿಮರು ಕೊಂಡ ಹಾಯ...
- ಕವಿ ಮುದ್ದಣನ ಅನನ್ಯತೆ
- ಗಡಿ ಕನ್ನಡ ಪ್ರದೇಶ ಸಮಸ್ಯೆಗಳು
- ಸದ್ದುಗದ್ದಲವಿರದೆ ಗದ್ದುಗೆಗೇರಿದ ಸಾಧನೆ
- ಸಮಗ್ರ ಕ್ರಾಂತಿಗೆ ಕರೆನೀಡುವ ಇಷ್ಟಲಿಂಗ
- ನನ್ನ ಕನಸಿನ ಕರ್ನಾಟಕ
- ಪ್ರಾದೇಶಿಕ ಪಕ್ಷ ಬೇಕೆ? ಬೇಡವೇ?
- ಮೇದಿನಿಗೆ ಹೊಸ ಬೆಳಕು ತಂದವರು
- ಶೂದ್ರ ತಪಸ್ವಿ ಎಂಬ ವಿಚಾರಪೂರಿತ ನಾಟಕವು
- ನೀನಾಸಂ ಶೂದ್ರತಪಸ್ವಿಯ ಆಶಯವೇನು?
- ಶಂಕರದಾಸಿಮಯ್ಯನವರ ವಚನಗಳ ವಿಶ್ಲೇಷಣೆ
- ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕುಗಳು
- "ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತ ವಿದ್ವತ್ತಿನ ಮಹಾ...
- ಕುಂ.ವೀರಭದ್ರಪ್ಪ ಅವರ ಕೂರ್ಮಾವತಾರ
-
▼
May
(15)
No comments:
Post a Comment