Tuesday, May 17, 2011
ನೀನಾಸಂ ಶೂದ್ರತಪಸ್ವಿಯ ಆಶಯವೇನು?
ಈ ಬಾರಿಯ ನೀನಾಸಂ ತಿರುಗಾಟಕ್ಕಾಗಿ ಮಂಜುನಾಥ್ ಎಲ್.ಬಡಿಗೇರರ ನಿರ್ದೇಶನದಲ್ಲಿ ಕುವೆಂಪು ಅವರ ಶೂದ್ರತಪಸ್ವಿ ನಾಟಕವು ಪ್ರಯೋಗವಾಯಿತು. ಕನ್ನಡದ ಪ್ರಮುಖ ಸಂಸ್ಕೃತಿ ವಾಗ್ವಾದಗಳಲ್ಲಿ ಒಂದು ಉದಾಹರಣೆಯಾಗಿ ದಾಖಲಾಗಿರುವ ಕುವೆಂಪು-ಮಾಸ್ತಿಯವರ ವಾಗ್ವಾದಕ್ಕೆ ಕಾರಣವಾದ ನಾಟಕವಿದು.
ಶಂಬೂಕವಧಾ ಪ್ರಸಂಗವು ರಾಮಾಯಣದಲ್ಲಿ ಜೀವವಿರೋಧಿ ಧೋರಣೆಯನ್ನು ಬಿಂಬಿಸುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಇಲ್ಲಿ ಜ್ಞಾನಾಧಿಕಾರದ ಕಾರಣಕ್ಕೆ ಬ್ರಾಹ್ಮಣರ ತಪಸ್ಸಿನ ಅಧಿಕಾರವನ್ನು ಪ್ರಶ್ನಿಸುವ ಶಂಬೂಕನನ್ನು ರಾಮನ ಮೂಲಕ ವಧಿಸುವ ಪ್ರಸಂಗವಿದೆ. ಆದರೆ ಕುವೆಂಪುರವರು ಈ ಪ್ರಸಂಗದಲ್ಲಿ ಒಂದು ಮುಖ್ಯ ಬದಲಾವಣೆ ಮಾಡಿಕೊಂಡಿದ್ದಾರೆ. ತಪಸ್ಸಿನ ಅಧಿಕಾರವನ್ನು ಪ್ರಶ್ನಿಸುವ ಬ್ರಾಹ್ಮಣ-ರಾಮನ ಮೂಲಕ ಜ್ಞಾನಾಧಿಕಾರವನ್ನು ತನ್ನಲ್ಲೆ ಉಳಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸುವುದನ್ನು ಕುವೆಂಪುರವರು ನಿರ್ವಹಿಸುವ ಕ್ರಮ ಮುಖ್ಯವಾದುದು.
ತಪಸ್ಸು ಮಾಡಿದ ಕಾರಣಕ್ಕೆ ಶಂಬೂಕನು ಸಾವಿಗೆ ಈಡಾಗಬಾರದೆಂದು ಕುವೆಂಪುರವರ ಧೋರಣೆ. ಈ ಪರಿಣಾಮವಾಗಿ, ಅಂತಿಮವಾಗಿ ರಾಮ ಬಿಟ್ಟ ಬಾಣವು ಶಂಬೂಕನಿಗೆ ಪ್ರದಕ್ಷಿಣೆ ಹಾಕಿ ಬ್ರಾಹ್ಮಣನತ್ತ ಹೊರಡುತ್ತದೆ. ಆಗ ಬ್ರಾಹ್ಮಣ ರಾಮನ ಬಳಿ ರಕ್ಷಿಸಲು ಕೇಳಿಕೊಂಡಾಗ ರಾಮನು ಶಂಬೂಕನ ಬಳಿ ಕಳುಹಿಸುತ್ತಾನೆ. ಬ್ರಾಹ್ಮಣನು ಶಂಬೂಕ ಮಹರ್ಷಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಾನೆ. ನಂತರ ಎದುರಾದ ಅವಘಡ ದೂರವಾಗಿ ಬ್ರಾಹ್ಮಣ ಹೇಳಿದಂತೆ ಶೂದ್ರನ ತಪಸ್ಸಿನ ಕಾರಣದಿಂದ ಅಸುನೀಗಿರುವ ಅವನ ಮಗನು ಕೂಡ ಜೀವ ಪಡೆಯುತ್ತಾನೆ.
ಈ ಕೊನೆಯ ದೃಶ್ಯವು ರಾಮಯಣದಲ್ಲಿ ಇರುವ ಶಂಬೂಕವಧಾ ಪ್ರಸಂಗ ಪುನರ್ವ್ಯಾಖ್ಯಾನ. ಇದು ಏಕಕಾಲಕ್ಕೆ ಪುರೋಹಿತಶಾಹಿ ಹಾಗೂ ಜ್ಞಾನಾಧಿಕಾರದ ಪ್ರಶ್ನೆಗಳನ್ನು ಮಂಡಿಸುತ್ತದೆ. ಕುವೆಂಪುರವರ ಜೀವಪರವಾದ ಧೋರಣೆಗೆ ಈ ಪ್ರಸಂಗವು ಅತ್ಯುತ್ತಮ ಉದಾಹರಣೆಯಂತಿದೆ. ರಾಮನ ಬಾಣವು ಇಲ್ಲಿ ಶಂಬೂಕನೆಡೆಗೆ ಚಲಿಸಿದ್ದು, ಅನಂತರ ಬ್ರಾಹ್ಮಣನೆಡೆಗೆ ಬಂದರೂ ಬ್ರಾಹ್ಮಣನನ್ನು ಅದು ಕೊಲ್ಲುವುದಿಲ್ಲ. ಹಾಗೆಯೇ ಬ್ರಾಹ್ಮಣನ ಮಗ ಕೂಡ ಬದುಕುವುದು ಅವರ ಜೀವಪರವಾದ ಚಿಂತನೆಗಳನ್ನು ತೋರುತ್ತದೆ.
ಪ್ರಸ್ತುತ ನಾಟಕವನ್ನು ಪ್ರದರ್ಶಿಸುವ ಸಂದರ್ಭದಲ್ಲಿ ಈ ಬಗೆಯ ಅoಟಿಣಡಿಚಿಜiಛಿಚಿಣioಟಿ ಗಳನ್ನು ನಿರ್ವಹಿಸಬೇಕಾದ ಕ್ರಮ ಯಾವುದು? ಹಾಗೂ ನೀನಾಸಂ ಪ್ರಯೋಗಿಸಿದ ’ಶೂದ್ರ ತಪಸ್ವಿಯಲ್ಲಿ ಆದ ಬದಲಾವಣೆಗಳೇನು? ಎಂಬುದು ಮುಖ್ಯ ಪ್ರಶ್ನೆಯಾಗಿದೆ.
ಈ ನಾಟಕದ ಆಶಯವೇ ಪೌರೋಹಿತ್ಯದ ವಿರೋಧ. ಬ್ರಾಹ್ಮಣರ ವಿರೋಧವಲ್ಲ. ಆದರೆ, ನಿರ್ದೇಶಕರು ಇದನ್ನು ಮುಖ್ಯವಾಗಿಸಿಕೊಳ್ಳುವುದರ ಬದಲು, ಯಜ್ಞೋಪವೀತ ಧಾರಣೆಯ ಪ್ರಸಂಗವನ್ನು ತಂದಿರುವ ಕ್ರಮ ಪ್ರಶ್ನಾರ್ಹವಾಗಿದೆ. ನಂಬಿಕೆ ಮತ್ತು ಆಚರಣೆಗಳ ಲೋಕದಲ್ಲಿ ಆಚರಣೆಗೆ ಪ್ರಮುಖ ಪಾತ್ರವಾಗಿರುತ್ತದೆ. ಆಚರಣೆಯು ನಂಬಿಕೆಯನ್ನು ಪೋಷಿಸುತ್ತಿರುತ್ತದೆ. ಯಜ್ಞೋಪವೀತ ಧಾರಣೆಯು ಮೂಲ ಶೂದ್ರ ತಪಸ್ವಿ ನಾಟಕದಲ್ಲಿ ಇಲ್ಲ. ಹಾಗೂ ಅದನ್ನು ನಾಟಕದಲ್ಲಿ ಅಳವಡಿಸಿರುವ ಕ್ರಮ ಕುವೆಂಪು ಆಶಯಕ್ಕೆ ವಿರುದ್ಧವಾದುದು.
ರಂಗಪ್ರಯೋಗದಲ್ಲಿ ಶಂಬೂಕ ಪಾತ್ರಧಾರಿ ಕುವೆಂಪು ಆಗಿ ಬದಲಾಗಿದ್ದೇಕೆ? ಹಾಗೆಯೇ, ಕುವೆಂಪು-ಶಂಬೂಕ ಪಾತ್ರಧಾರಿ ರಂಗದ ಕ್ರಿಯೆಯಲ್ಲಿ ತೊಡಗಿದ್ದು, ಅಂತಿಮವಾಗಿ ಯಜ್ಞೋಪವೀತವನ್ನು ತೊರೆದ ಬ್ರಾಹ್ಮಣನಿಗೆ, ಕುವೆಂಪು ಹೊಸ ಯಜ್ಞೋಪವೀತವನ್ನು ತೊಡಿಸುವುದರ ಸಾರ್ಥಕತೆ ಏನೆಂಬುದನ್ನು ನಾಟಕದಲ್ಲಿ ಪ್ರತಿಪಾದಿಸಲು ಸಾಧ್ಯವಾಗುವುದಿಲ್ಲ. ಪ್ರಯೋಗದ ನಂತರ ಅವರು ತಮ್ಮ ಆಶಯ ಹೀಗೆ-ಹಾಗೆ ಇತ್ತೆಂದು ಹೇಳಿಕೊಂಡರೆ ಅದನ್ನು ಪ್ರಯೋಗದಲ್ಲಿ ತರಲು ಸಾಧ್ಯವಾಗಿಲ್ಲವೆಂದೇ ಅರ್ಥ. ಬ್ರಾಹ್ಮಣನು ಯಜ್ಞೋಪವೀತವನ್ನು ತ್ಯಜಿಸಿ ಶಂಬೂಕನ ಪಾದ ಸ್ಪರ್ಶಿಸುವುದೇಕೆ? ಯಜ್ಞೋಪವೀತ ಧರಿಸಿ ಬ್ರಾಹ್ಮಣನಾದವನು ಶೂದ್ರನನ್ನು ಸ್ಪರ್ಶಿಸಿ ಬ್ರಾಹ್ಮಣ್ಯವನ್ನು ಹಾಳುಮಾಡಬಾರದೆಂಬ ಉದ್ದೇಶವಿದೆಯೇ? ಅಂತೆಯೇ, ಶೂದ್ರ ಸ್ಪರ್ಶದ ನಂತರ ಶೂದ್ರನಿಂದಲೇ ಯಜ್ಞೋಪವೀತ ಧಾರಣೆ ಮಾಡಿಸಿಕೊಳ್ಳುವುದರ ಮೂಲಕ ಬ್ರಾಹ್ಮಣ್ಯದ ಪಾವಿತ್ರ್ಯವನ್ನು ರಕ್ಷಿಸುವ ಪ್ರಯತ್ನವೂ ಇರಬಹುದೇ?
ಪ್ರಯೋಗದ ಅನೇಕ ಭಾಗಗಳಲ್ಲಿ ರಾಮನಾಮದ ಜಪ ಏಕೆ ಬರುತ್ತಿತ್ತು? ಕುವೆಂಪುರವರ ’ಶ್ರೀ ರಾಮಾಯಣದರ್ಶನಂ’ ಆಗಲಿ, ಅವರ ಇತರ ಕೃತಿ ಭಾಷಣಗಳಲ್ಲಾಗಲಿ ಈ ಬಗೆಯ ರಾಮನಾಮ ಜಪವಿಲ್ಲ. ಅದರ ಬದಲಾಗಿ ವಿಶ್ವಮಾನವ ದೃಷ್ಟಿಯಿದೆ. ಪ್ರಖರವಾದ ವೈಚಾರಿಕ ಪ್ರಜ್ಞೆಯಿದೆ. ಸಂಸ್ಕೃತಿ ವಿಮರ್ಶೆಯ ದೃಷ್ಟಿಕೋನವಿದೆ. ಪಾಪಿಗಳಿಗೂ ಉದ್ಧಾರ ಸಾಧ್ಯವೆಂಬ ಮಾನವೀಯತೆಯಿದೆ. ಆದರೆ ಇವುಗಳೆಲ್ಲವುಗಳ ಬದಲು ಪ್ರಯೋಗದಲ್ಲಿ ’ಶ್ರೀರಾಮಾಯಣದರ್ಶನಂ’ ಹಾಗೂ ’ಅನಿಕೇತನ’ ಕವನಗಳನ್ನು ಮಾತ್ರ ಬಳಸಿಕೊಂಡು ಕುವೆಂಪುರವರ ಆಶಯಕ್ಕೆ ಭಂಗ ತಂದಿರುವುದನ್ನು ಮಾತ್ರ ಒಪ್ಪಲಾಗದು.
ಇನ್ನೊಂದು ವಿಷಯ ಗಮನಿಸಬೇಕಾದುದೆಂದರೆ, ಕುವೆಂಪು ಪಾತ್ರಧಾರಿಯ ದ್ವಿಜತ್ವ ಪಡೆಯುವ ಉದ್ದೇಶ. ಭಾರತದ ಜಾತಿ, ಧಾರ್ಮಿಕ ಸಂಬಂಧಿ, ಕರ್ಮದ ಆಚರಣೆಗಳನ್ನು ತಮ್ಮ ಕವನ, ಬರಹ ಭಾಷಣಗಳುದ್ದಕ್ಕೂ ಪ್ರಶ್ನಿಸುವ ಕುವೆಂಪುರವರು ಈ ಕೆಲಸ ಮಾಡುತ್ತಿದ್ದರೆ?
ಈ ಎಲ್ಲ ಪ್ರಶ್ನೆಗಳಿಗೆ ಕುವೆಂಪುರವರ ಧೋರಣೆಗಳನ್ನು ಇಟ್ಟುಕೊಂಡು ಮುಖಾಮುಖಿಯಾದಲ್ಲಿ, ಈ ಪ್ರಸಂಗವನ್ನು ಪ್ರಯೋಗದಲ್ಲಿ ತಂದಿರುವುದು ಕುವೆಂಪುರವರ ಆಶಯಕ್ಕೆ ವ್ಯತಿರಿಕ್ತವಾಗುತ್ತದೆ. ಆದ್ದರಿಂದ ಇಂತಹ ಪ್ರಯೋಗಗಳನ್ನು ಇನ್ನು ಮುಂದಾದರೂ ಮಾಡುವಾಗ ಸಾಂಸ್ಕೃತಿಕ ವಿವೇಕವನ್ನು ಪ್ರದರ್ಶಿಸಬೇಕಾಗುತ್ತದೆ.
ಇಪ್ಪತ್ತೊಂದನೆ ಶತಮಾನದಲ್ಲಿ ಮತ, ಧರ್ಮ, ದೇವರು, ಆಚರಣೆಗಳಿಗೆ ಸಂಬಂಧಿಸಿದಂತೆ ಹೊಸ ಮೌಢ್ಯಗಳು ಜಾರಿಗೆ ಬರುತ್ತಿರುವ ಸಂದರ್ಭದಲ್ಲಿ ಈ ಬಗೆಯ ನಾಟಕವನ್ನು ಪ್ರಯೋಗಕ್ಕೊಳಪಡಿಸುವಾಗ ಸಾಂಸ್ಕೃತಿಕ ತುರ್ತುಗಳನ್ನು ಅರಿತಿರಬೇಕಾಗುತ್ತದೆ. ಗೋಹತ್ಯೆ ನಿಷೇಧ ಕಾನೂನಿನ ಜಾರಿಯ ಚರ್ಚೆಗಳು ನಡೆಯುತ್ತಿರುವಾಗ, ಶೂದ್ರ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಾದ ಪ್ರಯೋಗವಾಗಬೇಕಿದ್ದ ಈ ನಾಟಕ ಪ್ರಯೋಗವು ಸಂಸ್ಕೃತೀಕರಣಗೊಳ್ಳುವಿಕೆಯನ್ನು ಎತ್ತಿಹಿಡಿಯುತ್ತಿರುವುದು ಏಕೆ?
ಅಲ್ಲದೇ, ಇಂದು ಈ ಸಂಸ್ಕೃತೀಕರಣಗೊಳ್ಳುವಿಕೆಯನ್ನು ಶೂದ್ರರು ಪ್ರಶ್ನಿಸುತ್ತಿರುವ/ವಿರೋಧಿಸುತ್ತಿರುವ ಸಂದರ್ಭದಲ್ಲಿ ಈ ಪ್ರಯೋಗ ರೂಪುಗೊಳ್ಳಲು ಉದ್ದೇಶಿಸಿರುವುದು ಏನನ್ನು?
ಪ್ರದೀಪ್ ಮಾಲ್ಗುಡಿ
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
May
(15)
- ಜಾತಿ ಪಕ್ಷಪಾತಿಗಳು ಪಾಪಿಗಳು, ದೇಶದ್ರೋಹಿಗಳು!
- ಇಲ್ಲಿ ದಲಿತರೂ ಜನಿವಾರ ತೊಡುತ್ತಾರೆ! ಮುಸ್ಲಿಮರು ಕೊಂಡ ಹಾಯ...
- ಕವಿ ಮುದ್ದಣನ ಅನನ್ಯತೆ
- ಗಡಿ ಕನ್ನಡ ಪ್ರದೇಶ ಸಮಸ್ಯೆಗಳು
- ಸದ್ದುಗದ್ದಲವಿರದೆ ಗದ್ದುಗೆಗೇರಿದ ಸಾಧನೆ
- ಸಮಗ್ರ ಕ್ರಾಂತಿಗೆ ಕರೆನೀಡುವ ಇಷ್ಟಲಿಂಗ
- ನನ್ನ ಕನಸಿನ ಕರ್ನಾಟಕ
- ಪ್ರಾದೇಶಿಕ ಪಕ್ಷ ಬೇಕೆ? ಬೇಡವೇ?
- ಮೇದಿನಿಗೆ ಹೊಸ ಬೆಳಕು ತಂದವರು
- ಶೂದ್ರ ತಪಸ್ವಿ ಎಂಬ ವಿಚಾರಪೂರಿತ ನಾಟಕವು
- ನೀನಾಸಂ ಶೂದ್ರತಪಸ್ವಿಯ ಆಶಯವೇನು?
- ಶಂಕರದಾಸಿಮಯ್ಯನವರ ವಚನಗಳ ವಿಶ್ಲೇಷಣೆ
- ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕುಗಳು
- "ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತ ವಿದ್ವತ್ತಿನ ಮಹಾ...
- ಕುಂ.ವೀರಭದ್ರಪ್ಪ ಅವರ ಕೂರ್ಮಾವತಾರ
-
▼
May
(15)
No comments:
Post a Comment