Tuesday, May 17, 2011

ಮೇದಿನಿಗೆ ಹೊಸ ಬೆಳಕು ತಂದವರು




ಸಾಧು ಸಾಧಲೆ ಬಸವ ಓದು ಕಲಿಯಿತು ಜನವು
ಹೋದ ಹೋದಲ್ಲಿ ಹೊಸಮಾತು| ಕೇಳಿದವು
ಮೇದಿನಿಗೆ ಬಂತು ಹೊಸಬೆಳಕು.

ಹೀಗೆ ನಮ್ಮ ಜನಪದರು ಬಸವಣ್ಣನವರ ಹೊಸಧರ್ಮವನ್ನು ಕೊಂಡಾಡಿದ್ದಾರೆ. ಬಸವಣ್ಣನವರ ಈ ಹೊಸಧರ್ಮ ಸುಸಂಸ್ಕೃತವಾಗಿದೆ, ಎಲ್ಲರೀತಿಯ ಮಾನವೀಯ ಶಿಷ್ಟಾಚಾರಗಳಿಂದ ಕೂಡಿದೆ. ಲಿಂಗವಂತ ಧರ್ಮದ ಶರಣರು ಎಲ್ಲೆಡೆ ಹೊಸಮಾತುಗಳನ್ನು ಆಡುವುದನ್ನು ಜನಪದರು ಕೇಳುತ್ತಿದ್ದಾರೆ. ಶರಣರ ಮಾತುಗಳು ಹೊಸಮಾತುಗಳಾಗಿದ್ದವು. ಏಕೆಂದರೆ ಆ ಮಾತುಗಳಲ್ಲಿ ಬಡವ- ಶ್ರೀಮಂತ, ಬ್ರಾಹ್ಮಣ-ದಲಿತ, ಪುರುಷ-ಮಹಿಳೆ ಎಂಬ ಮೇಲುಕೀಳು ಭಾವ ಇರಲಿಲ್ಲ. ಎಲ್ಲರೂ ಸಮಾನ ಎಂಬ ಹೊಸಮಾತು ಎಲ್ಲೆಡೆ ಕೇಳಿಬರುತ್ತಿತ್ತು. ಸದಾ ಅನ್ಯಾಯ, ಅತ್ಯಾಚಾರ, ಶೋಷಣೆ ಮತ್ತು ಅಸಮಾನತೆಯ ಕತ್ತಲಲ್ಲೇ ಮುಂದುವರಿದಿದ್ದ ಈ ಭೂಮಿಗೆ ಬಸವಣ್ಣನವರು ಸರ್ವಸಮತ್ವದ ಹೊಸಬೆಳಕನ್ನು ಕೊಟ್ಟು ಜನಕೋಟಿಯೆಲ್ಲ ನೆಮ್ಮದಿಯಿಂದ ಬದುಕುವಂಥ ವಾತಾವರಣ ಸೃಷ್ಟಿಸಿದರು. ಜನರಿಗೆ ಇಂಥ ಮಾನವಘನತೆಯ ಜ್ಞಾನ ಲಭ್ಯವಾಗುವ ಹಾಗೆ ಬಸವಣ್ಣನವರು ಓದು ಬರಹ ಕೂಡ ಕಲಿಸಿದರು ಎಂಬುದು ನಮ್ಮ ಜನಪದ ಕವಿ ನುಡಿದ ಈ ತ್ರಿಪದಿಯಿಂದ ತಿಳಿದುಬರುತ್ತದೆ.
ಬಸವಣ್ಣನವರು ಕಲ್ಯಾಣದ ಪ್ರಧಾನಿಯಾಗಿದ್ದುಕೊಂಡು ಎಂಥ ಅನುಪಮ ಕಾರ್ಯಗಳನ್ನು ಮಾಡಿದರು ಎಂಬುದಕ್ಕೆ ಇಂಥ ಸಾವಿರಾರು ಜನಪದ ಹಾಡುಗಳು ಸಾಕ್ಷಿಯಾಗಿವೆ. ಬಸವಣ್ಣನವರ ಬಹುದೊಡ್ಡ ಸಾಧನೆ ಎಂದರೆ ಜಾತಿವಾದಿಗಳಿಂದ, ಶೋಷಕರಿಂದ, ವೇಶ್ಯೆಯರಿಂದ ಹಾಗೂ ಅಸಹಾಯಕ ಜನಸಾಮಾನ್ಯರಿಂದ ಕೂಡಿದ ಬಿಜ್ಜಳನ ಕಲ್ಯಾಣದೊಳಗೆ ಶರಣಸಂಕುಲದಿಂದ ಕೂಡಿದ ಕಲ್ಯಾಣವನ್ನು ರಚಿಸಿದ್ದು! ಜಾತಿ ಸಂಕರವಾದ ಬಳಿಕ ಕುಲವನರಸುವರೆ? ಎಂದು ಪ್ರಶ್ನಿಸಿದ ಬಸವಣ್ಣನವರ ಶರಣಸಂಕುಲದಲ್ಲಿ ವರ್ಗಭೇದ, ವರ್ಣಭೇದ, ಲಿಂಗಭೇದ ಮತ್ತು ಕಾಯಕಭೇದಗಳಿರಲಿಲ್ಲ. ಮಧುವರಸರ ಮಂತ್ರಿ ಪದವಿಗೂ ಹರಳಯ್ಯನವರ ಸಮಗಾರ ಕಾಯಕಕ್ಕೂ ಯಾವುದೇ ಭೇದವಿರಲಿಲ್ಲ. ಬಿಜ್ಜಳನ ಕಲ್ಯಾಣದಲ್ಲಿದ್ದ ಈ ಭೇದಗಳು ಬಸವಣ್ಣನವರ ಕಲ್ಯಾಣದಲ್ಲಿ ನಿರ್ನಾಮಗೊಂಡವು. ಅಲ್ಲಿನ ದಾಸಿಯರು ಮತ್ತು ವೇಶ್ಯೆಯರು ಶರಣಸಂಕುಲಕ್ಕೆ ಬಂದು ಶರಣೆಯರಾಗಿ ಪವಿತ್ರ ಬಾಳನ್ನು ಬದುಕಿದರು. ಅವರ ಪುತ್ರರು ಇಷ್ಟಲಿಂಗ ದೀಕ್ಷೆ ಪಡೆದು ಇತರ ಶರಣರಂತೆ ಶಿವಸ್ವರೂಪಿಗಳಾದರು. ಬಸವಣ್ಣನವರ ಈ ಎಲ್ಲ ಸಾಧನೆಗಳು ಮೇದಿನಿಗೆ ಹೊಸ ಬೆಳಕಾಗಿ ಬಂದವು.
ಲೌಕಿಕದ ಬದುಕಿನ ಬಗ್ಗೆ ಕಾಳಜಿ ವಹಿಸುತ್ತ ಮತ್ತು ಸೌಲಭ್ಯ ವಂಚಿತರಾದವರಿಗೆ ಸೌಲಭ್ಯ ಕಲ್ಪಿಸುತ್ತ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿನ ಬಗ್ಗೆ ಪ್ರಜ್ಞೆ ಮೂಡಿಸುವ ’ಮಹಾಮನೆ’, ಮಾನವರೊಳಗಿನ ಘನದ ಬಗ್ಗೆ ಸೂಚಿಸುವ ’ಅರಿವಿನ ಮನೆ’ ಹಾಗೂ ಕಾಯಕದಿಂದ ಬರುವ ವೈಯಕ್ತಿಕ ಅನುಭವದ ಮೂಲಕವೇ ಸಾರ್ವತ್ರಿಕ ಅನುಭಾವದ ಆನಂದವನ್ನು ಸೃಷ್ಟಿಸುವ ’ಅನುಭವ ಮಂಟಪ’ಗಳು, ಬಸವಣ್ಣನವರು ವಿಶ್ವಕ್ಕೆ ನೀಡಿದ ಕಾಣಿಕೆಗಳಾಗಿವೆ. ’ಕಾಯಕದ ಜ್ಞಾನ’, ’ಪ್ರಸಾದದ ಅರಿವು’ ಮತ್ತು ’ದಾಸೋಹದ ಪ್ರಜ್ಞೆ’ಯೊಂದಿಗೆ ಮಾನವನನ್ನು ನಿಜಮಾನವನನ್ನಾಗಿಸುವ ಬಸವಣ್ಣನವರ ಕ್ರಮ ಅನುಪಮವಾಗಿದೆ. ಕಾಯಕ್ಕೆ ಆಹಾರ, ಬಟ್ಟೆ ಮತ್ತು ವಸತಿ ಬೇಕು. ಅದಕ್ಕಾಗಿ ಮಾನವರು ಉತ್ಪಾದನೆಯಲ್ಲಿ ತೊಡಗಬೇಕು. ಆದ್ದರಿಂದ ಬಸವಣ್ಣನವರು ಕಾಯಕ್ಕೆ ಕಾಯಕ ಕೊಟ್ಟರು. ಮನಸ್ಸಿಗೆ ತಿಳಿವಳಿಕೆ ಬೇಕು. ಅದಕ್ಕಾಗಿ ಬಸವಣ್ಣನವರು ವಚನಗಳನ್ನು ಕೊಟ್ಟರು. ಆತ್ಮಕ್ಕೆ ಧ್ಯಾನ ಬೇಕು. ಆ ಕಾರಣದಿಂದಲೇ ಬಸವಣ್ಣನವರು ಇಷ್ಟಲಿಂಗ ಕೊಟ್ಟರು. ಹೀಗೆ ಕಾಯಕ, ವಚನ ಮತ್ತು ಇಷ್ಟಲಿಂಗವೆಂಬುವು ಬಸವಧರ್ಮದ ಮೂರು ಮುಖಗಳಾಗಿವೆ. ಈ ಮೂರನ್ನೂ ಒಳಗೊಂಡವರು ನಿಜಮಾನವರಾಗುತ್ತಾರೆ. ಇಂಥ ನಿಜಮಾನವರೇ ಶರಣರು.
ಬಿಜ್ಜಳನ ಕಲ್ಯಾಣದ ಪ್ರಧಾನಿ ಬಸವಣ್ಣನವರು ಹೀಗೆ ಶರಣರ ಕಲ್ಯಾಣದ ರೂವಾರಿಗಳಾದರು. ಇಂಥ ಸಮತಾ ಕಲ್ಯಾಣದ ಸೃಷ್ಟಿಗಾಗಿ ಅವರು ಪ್ರತಿ ಕ್ಷಣವೂ ಚಿಂತನೆ ಮಾಡಿದರು. ಆ ಮೂಲಕ ಸದಾ ಹೊಸತಾದುದನ್ನೇ ಲೋಕಕ್ಕೆ ನೀಡಿದರು. ಪ್ರಜಾಪ್ರಭುತ್ವ, ಸಮಾನತೆ, ಮಾನವ ಸಹೋದರತ್ವ, ಸಕಲ ಜೀವಿಗಳ ಮೇಲಿನ ಪ್ರೇಮಭಾವ ಮತ್ತು ಪ್ರತಿಯೊಬ್ಬರು ತಮ್ಮೊಳಗಿನ ಘನವನ್ನು ಒಳನೋಟದೊಂದಿಗೆ ಕಾಣುವಂತೆ ಮಾಡುವ ಬೆಳಕೇ ಬಸವಣ್ಣನವರು ಮೇದಿನಿಗೆ ತಂದ ಹೊಸ ಬೆಳಕು.
ಪ್ರಜಾಪ್ರಭುತ್ವವು ಬಸವಣ್ಣನವರ ಉಸಿರಾಗಿತ್ತು. ಪ್ರಭುಗಳಿಗಿಂತ ಪ್ರಜೆಗಳೇ ದೊಡ್ಡವರು ಎಂಬುದರಲ್ಲಿ ಅವರಿಗೆ ಅಚಲವಾದ ನಂಬಿಕೆ ಇತ್ತು. ಪ್ರಭುವಿನ ಪರಸೇವೆಗೆ ಸಮಯ ನಿಗದಿಯಾಗಿರಬಹುದು ಆದರೆ ಪ್ರಜೆಗಳ ಸೇವೆಗೆ ಸಮಯದ ನಿಗದಿಯಾಗಿರುವುದಿಲ್ಲ. ತಮ್ಮ ಖಾಸಗಿ ಬದುಕಿನ ಸಮಯವನ್ನೂ ಬಸವಣ್ಣನವರು ಜನಸೇವೆಗಾಗಿ ಮುಡಿಪಾಗಿಟ್ಟಿದ್ದರು ಎನ್ನುವುದಕ್ಕೇ ಪರುಷ ಕಟ್ಟೆ ಸಾಕ್ಷಿಯಾಗಿದೆ.
ಕಲ್ಯಾಣದ ಪ್ರಧಾನಿ ಬಸವಣ್ಣನವರು ರಾಜದರ್ಬಾರಿಗೆ ಹೋಗುವ ಮೊದಲು ಜನರ ದರ್ಬಾರಾಗಿದ್ದ ಪರುಷಕಟ್ಟೆಗೆ ಬರುತ್ತಿದ್ದರು. ಹಾಗೆ ಅವರು ಬರುತ್ತಿದ್ದ ಸಮಯ ದರ್ಬಾರಿನ ಕಛೇರಿಯ ಸಮಯವಾಗಿರದೆ ಅವರ ಖಾಸಗಿ ಸಮಯವಾಗಿತ್ತು. ೧೦ ಗಂಟೆಗೆ ದರ್ಬಾರಿಗೆ ಹೋಗುವ ಒಂದು ಗಂಟೆ ಮೊದಲೇ ಬಸವಣ್ಣನವರು ಪರುಷಕಟ್ಟೆಗೆ ಬಂದು ಜನರ ಅಹವಾಲುಗಳನ್ನು ಕೇಳುತ್ತಿದ್ದರು. ಜನರ ಸಮಸ್ಯೆಗಳನ್ನು ತಾದಾತ್ಮ್ಯದಿಂದ ಆಲಿಸುತ್ತಿದ್ದರು. ಅವರ ಸಮಸ್ಯೆಗಳನ್ನು ಹೇಗೆ ಬಗೆಹರಿಸಲು ಸಾಧ್ಯ ಎಂಬುದರ ಬಗ್ಗೆ ಗಾಢವಾದ ಚಿಂತನೆ ಮಾಡುತ್ತಿದ್ದರು. ನಂತರ ದರ್ಬಾರಿಗೆ ಹೋಗಿ ರಾಜ ಬಿಜ್ಜಳನಿಗೆ ವಿವರಿಸಿ ಪರಿಹಾರ ಮಾರ್ಗಗಳನ್ನು ತಿಳಿಸುತ್ತಿದ್ದರು. ಪರುಷ ಎಂಬುದು ಕಬ್ಬಿಣವನ್ನು ಬಂಗಾರವಾಗಿಸುವ ಮಣಿ. ಹೀಗೆ ಬಸವಣ್ಣನವರೇ ಪರುಷಮಣಿಯಾಗಿ ಜನರ ಕಬ್ಬಿಣದಂಥ ಕಠಿಣ ಬದುಕನ್ನು ಮೃದುತ್ವದ ಹೊನ್ನಾಗಿಸಿ ಸಹ್ಯಗೊಳಿಸುತ್ತಿದ್ದರು. ಹೀಗೆ ಕಷ್ಟಪರಿಹರಿಸಿಕೊಳ್ಳುತ್ತಿದ್ದ ಜನರಿಗೆ ಬಸವಣ್ಣನವರು ದ್ವಿತೀಯ ಶಂಭುವಾಗೇ ಕಂಡರು. ’ಚನ್ನಮಲ್ಲಿಕಾರ್ಜುನಯ್ಯಾ ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೇ ದೇವರು’ ಎಂದು ಅಕ್ಕ ಹೇಳಿದಳು. ’ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯ ಎಂದು ಅಲ್ಲಮ ಪ್ರಭುಗಳು ತಿಳಿಸಿದರು. ’ಎಲ್ಲಿಯ ಶಿವಜ್ಞಾನ ಎಲ್ಲಿಯ ಮಾಟಕೂಟ ಬಸವನಲ್ಲದೆ’ ಎಂದು ಸಿದ್ಧರಾಮರು ಕೊಂಡಾಡಿದರು. ’ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು’ ಎಂದು ಚನ್ನಬಸವಣ್ಣನವರು ಹೇಳಿದರು. ಹೀಗೆ ಸಕಲ ಶರಣರು ಬಸವಣ್ಣನವರನ್ನು ದೇವಸ್ವರೂಪವಾಗೇ ಕಂಡಿದ್ದಾರೆ.
ಇಂಥ ಪರುಷಮಣಿ ಬಸವಣ್ಣನವರು ಕುಳಿತು, ಜನರ ಅಹವಾಲುಗಳನ್ನು ಕೇಳಿ ಪರಿಹಾರದ ಭರವಸೆ ನೀಡುತ್ತಿದ್ದ ಕಟ್ಟೆಯೇ ಪರುಷಕಟ್ಟೆ. ಬಸವಣ್ಣನವರು ರೂಪಿಸಿದ ಈ ಪರುಷಕಟ್ಟೆ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಜಗತ್ತಿಗೆ ಇಂಥ ವಿಶಿಷ್ಟವಾದ ಪ್ರಜಾಪ್ರಭುತ್ವದ ಕನಸು ಕೂಡ ಬಿದ್ದಿರಲಿಲ್ಲ. ಅಂಥ ೧೨ನೇ ಶತಮಾನದಲ್ಲಿ ಬಸವಣ್ಣನವರು ಪರುಷಕಟ್ಟೆ ನಿರ್ಮಿಸಿ ಪ್ರಜಾಪ್ರಭುತ್ವವೆಂಬ ಹೊಸ ಬೆಳಕಿಗೆ ನಾಂದಿ ಹಾಡಿದರು. ನಂತರ ಹಳ್ಳಿಹಳ್ಳಿಗಳಲ್ಲಿ ಪರುಷಕಟ್ಟೆಗಳು ನ್ಯಾಯತೀರ್ಮಾನದ ಮತ್ತು ಚಿಂತನೆಯ ಕಟ್ಟೆಗಳಾಗಿ ರೂಪುಗೊಂಡವು. ಎಲ್ಲರೀತಿಯ ಹೊಸತನಗಳಿಗೆ ಬಸವಣ್ಣನವರು ಕಾರಣರಾಗಿದ್ದನ್ನು ಇಂದು ಜಗತ್ತಿನ ಜನ ಅರಿತುಕೊಳ್ಳುವ ಸಮಯ ಬಂದಿದೆ.
ನಮ್ಮ ಜನಪದ ಕವಿಗಳು ಪರುಷಕಟ್ಟೆಯ ಬಗ್ಗೆ ಬರೆದ ಈ ಹಾಡು ನಮ್ಮೆಲ್ಲರ ಕಣ್ಣು ತೆರೆಸುವುದರಲ್ಲಿ ಸಂಶಯವಿಲ್ಲ. ಬಸವನೆಂಬ ಪರುಷ ಕೂಡುವ ಕಟ್ಟೆಯೆ ಪರುಷಕಟ್ಟೆ ಎಂಬುದು ನಮ್ಮ ಅಂತಃಕರಣ ಅರಿಯಲಿ.
ಪರುಷಕಟ್ಟೆ
ಕಲ್ಯಾಣ ಊರಾಗ ಪರುಷಕಟ್ಟಿ ಪವಿತ್ರ
ಬಸವಣ್ಣ ಮೆರೆದಂತ ಜಾಗದು ಕೋಲೆನ್ನ ಕೋಲೆ || ೧ ||
ಬಸವಣ್ಣ ಕುಂತಾರ ಸುತ್ತೆಲ್ಲಾ ಭಕುತರು
ಕಷ್ಟಸುಖ ಬಸವಗ ಹೇಳ್ಯಾರ ಕೋಲೆನ್ನ ಕೋಲೆ || ೨ ||
ದರಬಾರಕ ನಡೆದಾರ ಧರಿಮಗ ಬಸವಣ್ಣ
ದಾರ‍್ಯಾಗ ಇಳಿದು ಕುಂತ ನೆಲ ಅದು ಕೋಲೆನ್ನ ಕೋಲೆ || ೩ ||
ಬೇಡಿದ ಜನರಿಗಿ ಬೇಡಿದ್ದ ಕೊಟ್ಟಾರಲ್ಲಿ
ಬೇಡ್ಯಾರ ಭಕುತರು ಬಸವಗ ಕೋಲೆನ್ನ ಕೋಲೆ || ೪ ||
ಬೇಡ್ಯಾರ ಭಕುತರು ಬಸವಗ ತಾವಾಗಿ
ಉಡಿತುಂಬಿ ಕಳುವ್ಯಾರ ಬಸವಣ್ಣ ಕೋಲೆನ್ನ ಕೋಲೆ || ೫ ||
ಹತ್ತು ಬಡಿಲಾಕ ದರಬಾರಕ ಹೊಂಟಾರ
ಒಂದ ಗಂಟೆ ಮೊದಲ ಇಲ್ಲಿ ತಾ ಕುಂತಾರ ಕೋಲೆನ್ನ ಕೋಲೆ || ೬ ||
ಒಂಬತ್ತು ಬಡಿಲಾಕ ಅಲ್ಲಿಗೆ ಬರತಾರ
ಇಲ್ಲವ ಕತೆಯ ಕೇಳ್ಯಾರ ಅಲ್ಲಿ ಕೋಲೆನ್ನ ಕೋಲೆ || ೭ ||
ಕಾಲಜ್ಞಾನ ಮಾತೆಲ್ಲ ಅಲ್ಲಿ ನಿಂತು ನುಡಿತಾರ
ಜನರೆಲ್ಲ ಕೇಳಿ ಕೈಯ ಮುಗಿತಾರ ಕೋಲೆನ್ನ ಕೋಲೆ || ೮ ||
ಬಸವನ ನುಡಿಯೆಂಬುದ ಹುಸಿಹ್ಯಾಂಗ ಆಗ್ಯಾತು
ಧರಣೀಯ ಮ್ಯಾಲ ನಡದಾಗ ಸೋಜಿಗ ಕೋಲೆನ್ನ ಕೋಲೆ || ೯ ||

ಕಲ್ಯಾಣದ ಪ್ರಧಾನಿ ಬಸವಣ್ಣನವರು ಇಂಥ ಪರುಷಕಟ್ಟೆಯ ಮೇಲೆ ಕುಳಿತು ಜನರ ಆಶಯಗಳಿಗೆ ಸ್ಪಂದಿಸುತ್ತ ಅವರ ಬದುಕಿನಲ್ಲಿ ಹೊಸತನ ಕಾಣುವಂಥ ಅಭಿವೃದ್ಧಿ ಸಾಧಿಸುವತ್ತ ದಾಪುಗಾಲು ಹಾಕಿದರು. ಅಸ್ಪೃಶ್ಯತೆ, ಜಾತೀಯತೆ ಮತ್ತು ಬಡತನ ನಿವಾರಣೆಯಾಗದೆ ಹೊಸಬದುಕು ಸಾಧ್ಯವಿಲ್ಲ ಎಂಬುದು ಬಸವಣ್ಣನವರ ದೃಢನಿಲವಾಗಿತ್ತು. ಇವೆಲ್ಲ ಇದ್ದರೆ ಮಾತ್ರ ತಾವು ಸುಖದಿಂದ ಇರಲು ಸಾಧ್ಯ ಎಂಬುದನ್ನು ಪಟ್ಟಭದ್ರ ಹಿತಾಸಕ್ತಿಗಳಾದ ಮನುವಾದಿಗಳು ಅರಿತಿದ್ದರು. ಅಂತೆಯೆ ಅವರು ಬಸವಣ್ಣನವರ ಕ್ರಾಂತಿಕಾರಿ ವಿಚಾರಗಳನ್ನು ವಿರೋಧಿಸತೊಡಗಿದರು. ಶರಣರು ತಮ್ಮ ನಡೆ ನುಡಿ ಸಿದ್ಧಾಂತ ಹಾಗೂ ಆ ಸಿದ್ಧಾಂತದ ಪ್ರತಿಪಾದನೆ ಮಾಡುವ ವಚನಗಳ ಮೂಲಕ ಶೋಷಣೆಯ ಮನುಧರ್ಮದ ಬುಡಕ್ಕೇ ಕೊಡಲಿಪೆಟ್ಟು ಹಾಕಿ ಪಟ್ಟಭದ್ರ ಹಿತಾಸಕ್ತಿಗಳ ನಿದ್ದೆಗೆಡಿಸಿದ್ದರು. ಅಂತೆಯೆ ಬಸವಣ್ಣನವರ ಮತ್ತು ಶರಣರ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಮನುವಾದಿಗಳು ಬಿಜ್ಜಳನಿಗೆ ತಿಳಿಸುತ್ತ ಅವರ ತೋಜೋವಧೆಗೆ ಯತ್ನಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಹರಳಯ್ಯ ಮಧುವರಸರ ಮದುವೆ ಅವರಿಗೆ ದೊಡ್ಡ ನೆಪವಾಗಿ ಪರಿಣಮಿಸಿತು. ಬ್ರಾಹ್ಮಣ ಕನ್ಯೆ ಮತ್ತು ಸಮಗಾರ ವರನ ಮಧ್ಯೆ ಏರ್ಪಡುವುದು ಸನಾತನ ಧರ್ಮಬಾಹಿರ ಎಂದು ಸಾರಿದರು. ನಂತರ ಮಧುವರಸ ಮತ್ತು ಹರಳಯ್ಯ ಅವರಿಗೆ ಎಳೆಹೂಟೆ ಶಿಕ್ಷೆ ವಿಧಿಸಲಾಯಿತು. ತದನಂತರ ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡ ನಡೆಯಿತು. ಇಂಥ ಸಂದರ್ಭದಲ್ಲಿ, ಎಲ್ಲ ರೀತಿಯ ಹಿಂಸೆಯನ್ನು ಶರಣರು ಅನುಭವಿಸಿದರು. ಮನುವಾದಿಗಳು ವಚನಕಟ್ಟುಗಳನ್ನು ಸುಡತೊಡಗಿದಾಗ ಜೀವದ ಹಂಗುದೊರೆದು ಅವುಗಳ ರಕ್ಷಣೆಗಾಗಿ ಶರಣರು ದಟ್ಟ ಅರಣ್ಯದ ಮಧ್ಯದಲ್ಲಿರುವ ಮತ್ತು ಗೋವಾ ಕದಂಬರ ಆಡಳಿತದಲ್ಲಿದ್ದ ಉಳವಿಯ ಕಡೆಗೆ ಹೋಗಲು ನಿರ್ಧರಿಸಿದರು.
ತರ್ದವಾಡಿಯಲ್ಲಿ ಸಾಮಂತನಾಗಿದ್ದ ಕಲಚೂರಿ ಪೆರ್ಮಾಡಿಗೆ ಆರನೇ ವಿಕ್ರಮಾದಿತ್ಯ ತನ್ನ ಒಬ್ಬ ಮಗಳನ್ನು ಕೊಟ್ಟು ಮದುವೆ ಮಾಡಿದ್ದ. ಆತನ ಮಗನೇ ಬಿಜ್ಜಳ. ಗೋವೆಯ ಸಾಮಂತ ೨ನೇ ಜಯಕೇಶಿಗೆ ಇನ್ನೊಬ್ಬ ಮಗಳು ಮೈಲಳಾದೇವಿಯನ್ನು ಕೊಟ್ಟು ಮದುವೆ ಮಾಡಿದ್ದ. ಆತನ ಮಗ ಪೆರ್ಮಾಡಿದೇವ. ಹೀಗೆ ಕಲಚೂರಿ ಬಿಜ್ಜಳ ಮತ್ತು ಗೋವೆಯ ಕದಂಬ ಪೆರ್ಮಾಡಿದೇವ ಆರನೇ ವಿಕ್ರಮಾದಿತ್ಯನ ಮೊಮ್ಮಕ್ಕಳೇ ಆಗಿದ್ದಾರೆ. ಆದರೆ ಬಿಜ್ಜಳ ಚಾಳುಕ್ಯರಿಂದ ಅಧಿಕಾರ ಕಸಿದುಕೊಂಡು ಕಲ್ಯಾಣದ ಚಕ್ರವರ್ತಿಯಾದಮೇಲೆ ಅದನ್ನು ಪ್ರತಿಭಟಿಸಿದ ಪೆರ್ಮಾಡಿದೇವ ಸಾಮಂತನಾಗಿರಲು ಒಪ್ಪದೆ ಸ್ವತಂತ್ರನಾಗಿದ್ದ. ಆದ್ದರಿಂದ ವಚನಗಳ ರಕ್ಷಣೆಗಾಗಿ ಶರಣರು ಉಳವಿಗೆ ಹೊರಟರು.
ಚನ್ನಬಸವಣ್ಣ, ಮಡಿವಾಳ, ಮಾಚಿದೇವ, ಅಂಬಿಗರ ಚೌಡಯ್ಯ, ಸೊಡ್ಡಳ ಬಾಚರಸ, ಕಿನ್ನರಿ ಬೊಮ್ಮಯ್ಯ, ಕೂಗಿನ ಮಾರಿತಂದೆ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ ಮೊದಲಾದ ಶರಣರು ಮತ್ತು ಅಕ್ಕ ನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಲಿಂಗಮ್ಮ, ಕಲ್ಯಾಣಮ್ಮ, ಕಾಳವ್ವೆ, ಬಿಷ್ಟಾದೇವಿ ಮೊದಲಾದ ಶರಣೆಯರು, ಸಾವಿರಾರು ಶರಣ ಶರಣೆಯರು ಬೇರೆ ಬೇರೆ ಮಾರ್ಗಗಳ ಮೂಲಕ ಸೊಲ್ಲಾಪುರವನ್ನು ಸೇರಿದರು. ಅಲ್ಲಿಂದ ಹಲಸಂಗಿ, ನಿಂಬಾಳ, ವಿಜಾಪುರ, ಬಬಲೇಶ್ವರ, ಗುಂಡಾಳ, ಮಂಟೂರು ಮತ್ತು ಮುಧೋಳ ಮೂಲಕ ಯಾದವಾಡ ತಲುಪಿದರು.
ಶರಣರನ್ನು ಕೊಲ್ಲುವುದಕ್ಕಿಂತ ಮನುವಾದಿಗಳ ಬಯಕೆಯಂತೆ ವಚನ ಸಾಹಿತ್ಯವನ್ನು ನಾಶ ಮಾಡುವುದೇ ಬಿಜ್ಜಳನ ಸೈನ್ಯದ ಉದ್ದೇಶವಾಗಿತ್ತು. ಶರಣರು ವಚನ ಕಟ್ಟುಗಳನ್ನು ಅಲ್ಲಲ್ಲಿ ಕೊಡುತ್ತ ಬಂದಿದ್ದರು. ಅವರು ಎಲ್ಲೆಡೆ ಬಸವಧರ್ಮದ ತತ್ತ್ವಗಳನ್ನು ಸಾರುತ್ತ ಮತ್ತು ಮಾನವ ವಿಮೋಚನೆಗಾಗಿ ಬರೆದ ವಚನಗಳ ಕಟ್ಟುಗಳನ್ನು ಕೊಡುತ್ತ ಬಂದಿದ್ದರು. ಆದರೂ ಸಾಕಷ್ಟು ಸಂಗ್ರಹ ಉಳಿದಿತ್ತು. ವಚನಕಟ್ಟುಗಳನ್ನು ಬೇರೆ ಕಡೆಯಿಂದ ಕದಂಬರಾಜ್ಯಕ್ಕೆ ಸಾಗಿಸುವ ಏರ್ಪಾಟನ್ನು ಮಾಡಿ ತಾವು ನೇರವಾಗಿ ಸತ್ತಿಗೇರಿಗೆ ಹೋಗಿ, ಬಂದುದನ್ನು ಎದುರಿಸಬೇಕೆಂದು ನಿರ್ಧರಿಸಿದರು. ಪಕ್ಕದ ಕಡಕೋಳದಲ್ಲಿ ಬಿಜ್ಜಳನ ಸೈನ್ಯ ಬೀಡುಬಿಟ್ಟಿತ್ತು. ಶರಣರು ಸತ್ತಿಗೇರಿಯನ್ನು ತಲುಪಿದರು. ಕಡಕೊಳದಿಂದ ಬಂದ ಸೈನ್ಯ ಈಗ ಮುರುಗೋಡದಲ್ಲಿ ಬೀಡು ಬಿಟ್ಟಿತ್ತು. ಶರಣರು ಸತ್ತಿಗೇರಿಯಿಂದ ಮುರುಗೋಡಿಗೆ ಬಂದರು. ಗೋವೆಯ ಕದಂಬರ ಅರಸು ಪೆರ್ಮಾಡಿದೇವ ಮತ್ತು ಆತನ ತಮ್ಮ ವಿಜಯಾದಿತ್ಯ ಬಂದು ತಮ್ಮ ರಾಜ್ಯಕ್ಕೆ ಸ್ವಾಗತಿಸಿದರು. ಅಂತೆಯ ಮುರುಗೋಡು ಉಳಿವಿಯ ಬಾಗಿಲು ಎಂದು ಕರೆಯಿಸಿಕೊಳ್ಳುತ್ತದೆ. ನಂತರ ಶರಣರು ಬೈಲಹೊಂಗಲ, ಸಂಪಗಾಂವ, ತಿಗಡಿ, ಕಾದರವಳ್ಳಿ ಮತ್ತು ನಂದಿಹಳ್ಳಿ ದಾಟು ಕಿತ್ತೂರು ತಲುಪಿದರು.
ಶರಣರು ಕಿತ್ತೂರಿನಿಂದ ಎರಡು ತಂಡಗಳಲ್ಲಿ ಉಳವಿಯ ಕಡೆಗೆ ತೆರಳಿದರು. ಚನ್ನಬಸವಣ್ಣನವರ ತಂಡ ಧಾರವಾಡಕ್ಕೆ ಬಂದಿತು. ಆಮೇಲೆ ಈ ತಂಡ ಕಲಘಟಗಿ ಮೂಲಕ ಸಾಂಬ್ರಾಣಿ ತಲುಪಿತು. ಇನ್ನೊಂದು ತಂಡ ಕಿತ್ತೂರಿನಿಂದ ಅಳ್ನಾವರ, ಲಿಂಗನಮಠ, ಹಳಿಯಾಳ ಮಾರ್ಗವಾಗಿ ಸಾಂಬ್ರಾಣಿಗೆ ಬಂದು ಕಾಯುತ್ತಿತ್ತು. ಕಿತ್ತೂರಿನಿಂದ ಸಾಂಬ್ರಾಣಿಗೆ ಬರುವಾಗ ಮಾರ್ಗ ಮಧ್ಯೆ ಕಕ್ಕೇರಿಯಲ್ಲಿ ಶರಣ ಕಕ್ಕಯ್ಯ ಲಿಂಗೈಕ್ಯರಾದರು. ಅವರ ಪತ್ನಿ ಬಿಷ್ಟಾದೇವಿಯ ಕೂಡ ಅಂದೇ ರಾತ್ರಿ ಲಿಂಗೈಕ್ಯರಾದರು. ಅವರ ಸಮಾಧಿ ಅಲ್ಲೇ ಇದೆ. ನಂತರ ಶರಣರೆಲ್ಲ ಒಂದುಗೂಡಿ ಸಾಂಬ್ರಾಣಿಯಿಂದ ಕುಂಬಾರವಾಡಾಕ್ಕೆ ಬಂದರು. ಅಲ್ಲಿಂದ ಉಳವಿ ತಲುಪಿದರು.
ಕಲ್ಯಾಣದಿಂದ ಉಳವಿ ತಲಪುವವರೆಗೆ ಅದೆಷ್ಟೋ ಶರಣ ಶರಣೆಯರು ಲಿಂಗೈಕ್ಯರಾದರು. ಕಲ್ಲೂರಿನಲ್ಲಿ ಕಲ್ಯಾಣಮ್ಮ ಲಿಂಗೈಕ್ಯರಾದರು. ಸಮೀಪದ ತಿಗಡಿಯಲ್ಲಿ ಅವರ ಸಮಾಧಿ ಇದೆ. ತ್ರಿಗುಡಿಯ ಬಳಿಯ ಮಲಪ್ರಭೆಯ ನದಿ ಸಮೀಪ ಗಂಗಾಂಬಿಕೆ ಲಿಂಗೈಕ್ಯರಾದರು. ಮುರುಗೋಡದಲ್ಲಿ ಕೂಗಿನ ಮಾರಿತಂದೆ ಹುತಾತ್ಮರಾದರು. ಮುರುಗೋಡ ಸಮೀಪದ ಕಾರಿಮನಿಯಲ್ಲಿ ಮಡಿವಾಳ ಮಾಚಿದೇವರ ಸಮಾಧಿ ಇದೆ ಎಂದು ಹೇಳಲಾಗುತ್ತಿದೆ.
ಹೀಗೆ ಡೋಹರ ಕಕ್ಕಯ್ಯ, ಬಿಷ್ಟಾದೇವಿ ಸೇರಿದಂತೆ ಅನೇಕ ಶರಣರು ಹುತಾತ್ಮರಾದರು. ನುಡಿದಂತೆ ನಡೆಯುವುದಕ್ಕಾಗಿ ಹರಳಯ್ಯ ಮಧುವರಸರ ಮಕ್ಕಳ ಮದುವೆ ಮಾಡಿದರು. ನಡೆ ನುಡಿಯ ದಾಖಲೆಯಾದ ವಚನಗಳ ಸಂರಕ್ಷಣೆಗಾಗಿ ಪ್ರಾಣದ ಹಂಗುದೊರೆದು ಕಷ್ಟನಷ್ಟಗಳನ್ನು ಅನುಭವಿಸಿದರು. ಮಾನವ ವಿಮೋಚನೆಗಾಗಿ ಅವರು ಬರೆದಿಟ್ಟ ವಚನಸಂವಿಧಾನ ಲೋಕಮಾನ್ಯವಾಗಿದೆ.
ವಚನಸಂವಿಧಾನ ಶರಣಸಂಕುಲದ ಆತ್ಮನಾದ. ಸರ್ವಸಮತ್ವವನ್ನು ಸಾರುವ ಇಷ್ಟಲಿಂಗ ತತ್ತ್ವದ ಆಗರ. ನಮ್ಮ ಅರಿವನ್ನು ವಿಸ್ತರಿಸುತ್ತ ಅನುಭಾವದ ಬೆಳಕನ್ನು ನೀಡುವ ಜ್ಯೋತಿರ್ಲಿಂಗ. ನಮ್ಮನ್ನು ನಾವು ಅರಿತುಕೊಳ್ಳಲು ಇರುವ ಜ್ಞಾನಗನ್ನಡಿ. ಜೀವಿತಾವಧಿಯಲ್ಲೇ ಮುಕ್ತಿ ಸಾಧಿಸುವ ಪಥದಲ್ಲಿ ಮುನ್ನಡೆಸುವ ದೇವಸ್ವರೂಪ. ಸಕಲಜೀವಾತ್ಮರಿಗೆ ಲೇಸನೇ ಬಯಸುವಂಥ ಪ್ರಜ್ಞೆಯ ಪ್ರತೀಕ. ಮಾನವೀಯತೆಯ ಸಾಗರ. ನಮ್ಮೊಳಗಿನ ದೇವರ ಜೊತೆ ಮಾತನಾಡಲು ಕಲಿಸುವ ಗುರುದೇವ. ’ಅರಿವೇ ಗುರು; ಗುರುವೇ ದೇವರು’ ಎಂಬ ಸತ್ಯದ ಸಾಕಾರರೂಪ. ’ಒಬ್ಬನೇ ದೇವರು; ಒಂದೇ ವಿಶ್ವ; ಒಂದೇ ಮಾನವಕುಲ’ ಎಂದು ಸಾರುವ ಧೀರವಾಣಿ. ವಚನವೇ ಉಸಿರಾಗಿಸಿಕೊಂಡವರ ಕಾಮಧೇನು, ಕಲ್ಪವೃಕ್ಷ ಮತ್ತು ಪರುಷಮಣಿ. ಬಸವಾದಿ ಪ್ರಮಥರ ಅನುಭಾವ ಮತ್ತು ಇಷ್ಟಲಿಂಗದ ಅರಿವಿನ ಭಂಡಾರವೇ ವಚನ. ನಡೆ ನುಡಿ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳುವುದಕ್ಕಾಗಿ ವಚನಪಠಣ ಮಾಡುವವರೇ ವಚನಭಂಡಾರಿಗಳು. ಸರ್ವಜೀವದಯಾಭಾವವೇ ಈ ಭಂಡಾರದ ಬೀಗದ ಕೈ. ಶರಣರು ಹಚ್ಚಿದ ವಚನಜ್ಯೋತಿ ಅನಂತ ಕಾಲದ ವರೆಗೆ ಇಡೀ ಲೋಕವನ್ನು ಬೆಳಗುವುದರಲ್ಲಿ ಸಂಶಯವಿಲ್ಲ.
ಶರಣರು ತಮ್ಮೊಳಗಿನ ದೇವರೊಡನೆ ಆಡಿದ ಮಾತುಗಳೇ ವಚನಗಳು. ಶರಣರು ತಮ್ಮ ಅಂತಃಸಾಕ್ಷಿಗೆ ಒಪ್ಪಿಸಿದ ನಿಜದ ನಿಲವಿನ ವರದಿಗಳು. ಇವೇ ನಡೆ ನುಡಿ ಒಂದಾದ ಪ್ರಮಾಣಬದ್ಧ ಮಾತುಗಳು. ಇಂಥ ಮಾತುಗಳ ರಾಶಿಯಲ್ಲೇ ದೇವರಿದ್ದಾನೆ ಎಂದು ಬಸವಣ್ಣನವರೇ ಹೇಳಿದ್ದಾರೆ.
ವ್ಯಕ್ತಿಗಳಿಗೆ ಬದಲಾಗಿ ವಚನಗಳಿಗೆ ಪಟ್ಟ ಕಟ್ಟುವುದರ ಮೂಲಕ ಬಸವಾದಿ ಪ್ರಮಥರನ್ನು ಗೌರವಿಸುವುದು ಅರಿವುಳ್ಳವರ ಆದ್ಯ ಕರ್ತವ್ಯವಾಗಿದೆ. ಗುರುವಚನಕ್ಕೆ ಪಟ್ಟ ಕಟ್ಟುವುದೆಂದರೆ, ನಮ್ಮೊಳಗಿನ ಘನವು ಸಕಲಜೀವಾತ್ಮರೊಳಗೆ ಇದೆ ಎಂಬುದನ್ನು ಲೋಕಕ್ಕೆ ತಿಳಿಸುವುದರ ಮೂಲಕ ಆ ಘನಕ್ಕೇ ಪಟ್ಟ ಕಟ್ಟಿದಂತೆ. ನಮ್ಮೆಲ್ಲರೊಳಗಿನ ಘನದ ಸಂಕೇತವಾದ ಗುರುವಚನಕ್ಕೆ ಪಟ್ಟ ಕಟ್ಟುವುದರ ಮೂಲಕ ಬಸವಾದಿ ಪ್ರಮಥರ ’ಅರಿವೆಂಬ ಗುರುವಿನ ಪರಂಪರೆ’ಯನ್ನು ಮುಂದುವರಿಸಿಕೊಂಡುಹೋಗುವುದು ಇಂದಿನ ಅವಶ್ಯಕತೆಯಾಗಿದೆ. ಅರಿವೇ ಗುರು, ಆ ಅರಿವೆಂಬ ಗುರುವಿನ ಪ್ರತೀಕವಾದ ವಚನಗಳೇ ದೇವರು.
ನಮ್ಮ ಅರಿವು ಶರಣರ ವಚನಗಳೆಂಬ ಅರಿವಿನಿಂದ ವಿಸ್ತಾರಗೊಂಡು ಬೆಳಗುತ್ತ ಇಡೀ ಲೋಕವನ್ನೇ ಕಲ್ಯಾಣ ಮಾಡುವಂತಾಗಲಿ. ಲೋಕದ ಜನರೆಲ್ಲ ಸರ್ವ ಸಮತ್ವ ಭಾವದೊಂದಿಗೆ ಆನಂದಮಯವಾಗಿ ಬದುಕುವಂತಾಗಲಿ.

ರಂಜಾನ್ ದರ್ಗಾ
ನಿರ್ದೇಶಕ, ವಚನ ಅಧ್ಯಯನ ಕೇಂದ್ರ ಬಸವ ಸೇವಾ ಪ್ರತಿಷ್ಠಾನ, ಶರಣ ಉದ್ಯಾನ, ಶರಣ ನಗರ, ಬೀದರ -೫೮೫೪೦೧ ಮೊಬೈಲ್: ೯೨೪೨೪೭೦೩೮೪

No comments:

Post a Comment

ಹಿಂದಿನ ಬರೆಹಗಳು