Wednesday, May 18, 2011

ಸಮಗ್ರ ಕ್ರಾಂತಿಗೆ ಕರೆನೀಡುವ ಇಷ್ಟಲಿಂಗಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ,
ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು
ಅವರ ಲಿಂಗನೆಂಬೆ, ಸಂಗನೆಂಬೆ,
ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.
-ಬಸವಣ್ಣ

ಆರ್ಥಿಕ ಮತ್ತು ಪಾರಮಾರ್ಥಿಕ ಸಮಾನತೆಯ ಸಮಾಜದ ನಿರ್ಮಾಣಕ್ಕೆ ಬಸವಣ್ಣನವರು ಇಡೀ ಬದುಕನ್ನೇ ಮುಡಿಪಾಗಿಟ್ಟರು. ಈ ನವಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಒಳ್ಳೆಯವರನ್ನು ಸ್ವರ್ಗದಿಂದ ತರುವ ಕನಸು ಕಾಣಲಿಲ್ಲ. ದೇವರೇ ಬಂದು ಎಲ್ಲವನ್ನೂ ಸರಿಪಡಿಸಬೇಕೆಂದು ಪ್ರಾರ್ಥಿಸಲಿಲ್ಲ. ಒಳ್ಳೆಯವರನ್ನು ಈ ಭೂಮಿಯ ಮೇಲೆಯೆ ರೂಪಿಸಬೇಕೆಂಬುದು ಬಸವಣ್ಣನವರ ಆಶಯವಾಗಿದೆ.
ಮಾನವನ ಒಳಗೂ ಹೊರಗೂ ಮಾನವೀಯ ಪರಿಸರ ನಿರ್ಮಾಣ ಮಾಡಿದಾಗ ಎಂಥವರೂ ಒಳ್ಳೆಯವರಾಗುತ್ತಾರೆ. ಕೆಟ್ಟ ಮನುಷ್ಯರು ಹುಟ್ಟಿನಿಂದಲೇ ಕೆಟ್ಟವರಾಗಿರುವುದಿಲ್ಲ. ಅವರಿಗೆ ಲಭ್ಯವಾಗುವ ಅನಾಗರಿಕ ವಾತಾವರಣ ಮತ್ತು ಅದರಿಂದ ರೂಪುಗೊಳ್ಳುವ ಅಸಭ್ಯ ಮನಸ್ಸಿನ ಕಾರಣ ಅವರು ಹಾಗೆ ವರ್ತಿಸುತ್ತಿರುತ್ತಾರೆ. ಮನುಷ್ಯರ ಒಳಗನ್ನು ಸ್ವಚ್ಛಗೊಳಿಸುವುದರ ಜೊತೆಗೆ ಹೊರಗಿನ ಸಮಾಜವನ್ನೂ ಸ್ವಚ್ಛಗೊಳಿಸುವುದು ಈ ಶರಣರ ಪ್ರಮುಖ ಕಾಯಕವಾಗಿದೆ. ಚಾಕು ಚೂರಿ ಹಿಡಿದುಕೊಂಡು ಮಾಂಸ ತಿನ್ನುತ್ತ ಮತ್ತು ರಸ್ತೆಯ ಮೇಲೆಯೆ ಸಾರಾಯಿ ಕುಡಿಯುತ್ತ ಬರುವವರ ವಿಕೃತ ದೃಶ್ಯವನ್ನು ನೆನೆಪಿಸಿಕೊಳ್ಳಲೂ ಹೇಸಿಗೆ ಎನಿಸುತ್ತದೆ. ಆದರೆ ದಾರಿ ತಪ್ಪಿದವರನ್ನು ಸನ್ಮಾರ್ಗಕ್ಕೆ ತರಲೇಬೇಕು ಎಂಬ ದೃಢನಿರ್ಧಾರದವನ್ನು ಬಸವಣ್ಣನವರು ಹೊಂದಿದ್ದರು. ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಒಳ್ಳೆಯವರು ಬೇಕು. ಅಂಥ ಒಳ್ಳೆಯ ಸಮಾಜವೇ ಒಳ್ಳೆಯವರನ್ನು ರೂಪಿಸುತ್ತದೆ ಎಂಬುದನ್ನು ಬಸವಣ್ಣನವರು ಜಗತ್ತಿಗೆ ತೋರಿಸಿಕೊಟ್ಟರು. ಅವರು ಶರಣರೆಂಬ ಮಹೋನ್ನತ ವ್ಯಕ್ತಿಗಳನ್ನು ಜನಸಾಮಾನ್ಯರೊಳಗೆ ಗುರುತಿಸಿದರು. ಅಂಥ ಮಹಾನುಭಾವಿಗಳೊಂದಿಗೆ ಕಾಯಕಜೀವಿಗಳನ್ನು ಒಂದುಗೂಡಿಸಿದರು. ಅವರೆಲ್ಲರಿಗೆ ಸರ್ವಸಮತ್ವದ ಲಿಂಗತತ್ತ್ವದ ಮಹತ್ವವನ್ನು ಅರುಹಿದರು. ಆ ಮೂಲಕ ಶರಣ ಸಂಕುಲವೆಂಬ ಮಹೋನ್ನತ ಸಮಾಜವನ್ನು ಸೃಷ್ಟಿಸಿ ತೋರಿಸಿದರು. ಅಂತೆಯೆ ಬಸವಣ್ಣನವರಿಗೆ ’ಲಿಂಗಾನುಭಾವಿಗಳ ಮಧ್ಯೆ ಎಂಥವರೂ ಒಳ್ಳೆಯವರಾಗುತ್ತಾರೆ’ ಎಂಬುದರ ಬಗ್ಗೆ ಎಲ್ಲಿಲ್ಲದ ಆತ್ಮವಿಶ್ವಾಸವಿದೆ.
ಇಷ್ಟಲಿಂಗವು ಪರಿವರ್ತನೆಯ ಲಾಂಛನ ಎಂಬ ಅವರ ನಂಬಿಕೆ ಅನನ್ಯವಾದುದು. ವ್ಯಕ್ತಿಯೊಬ್ಬ ಎಷ್ಟೇ ಅಧೋಗತಿಗೆ ಇಳಿದರೂ ಇಷ್ಟಲಿಂಗದ ಜೊತೆ ಶರಣಸಂಕುಲದಲ್ಲಿ ಬದಲಾಗುತ್ತಾನೆ ಎಂಬುದನ್ನು ಅವರು ಸಾಧಿಸಿ ತೋರಿಸಿದರು. ತಾವು ಕಂಡುಹಿಡಿದ ಸರ್ವಸಮತ್ವ ಸಾರುವ ಇಷ್ಟಲಿಂಗತತ್ತ್ವದ ಬಗ್ಗೆ ಮತ್ತು ಜನರು ಬದಲಾಗುತ್ತಾರೆ ಎಂಬ ಸತ್ಯದ ಬಗ್ಗೆ ಅವರಿಗೆ ಎಂದೂ ಸಂಶಯ ಬರಲಿಲ್ಲ. ಆ ಕಾರಣದಿಂದಲೇ ಅವರು ಜಿಗುಪ್ಸೆ ಹುಟ್ಟಿಸುವಂಥ ಜನರ ಕೊರಳಿಗೂ ಇಷ್ಟಲಿಂಗ ಕಟ್ಟಲು ಮುಂದಾದರು. ಅಷ್ಟೇ ಅಲ್ಲ ಅವರಿಗೆ ಸಾಕ್ಷಾತ್ ಕೂಡಲಸಂಗಮದೇವ ಎಂದರು. ಅವರನ್ನು ಮಾತನಾಡುವ ದೇವರುಗಳೆಂದು ಹೇಳಿದರು. ಈ ’ಮಾತನಾಡುವ ದೇವರುಗಳು’ ಬಸವಣ್ಣನವರ ಜೀವನಪ್ರೇಮವನ್ನು ಕಂಡು ದಂಗಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.
ಬಸವಣ್ಣನವರಂಥ ಮಹಾಮಹಿಮರು ಇಷ್ಟೊಂದು ವಿಶ್ವಾಸವಿಟ್ಟು ಗೌರವ ತೋರಿಸುತ್ತಿರುವಾಗ ಮತ್ತು ಶರಣರು ಆದರ್ಶ ಸಮಾಜ ನಿರ್ಮಿಸುತ್ತಿರುವಾಗ ಆ ಸಮಾಜದಲ್ಲಿ ಘನತೆಯಿಂದ ಬದುಕುವುದಕ್ಕಿಂತ ಹೆಚ್ಚಿನ ಆನಂದವಿಲ್ಲ ಎಂಬುದರ ಅರಿವು ಆ ದಾರಿತಪ್ಪಿದ ಜನರಿಗೆ ಬಾರದೆ ಇರದು.
ಮನುವಾದಿಗಳ ಹಳೆಯ ಸಮಾಜದಲ್ಲಿ ಎಲ್ಲ ಘನತೆ ಗೌರವಗಳನ್ನು ಕಳೆದುಕೊಂಡು ಹೀಗೆ ಹೀನಸ್ಥಿತಿಗೆ ಇಳಿಸಲ್ಪಟ್ಟ ಅವರು, ಶರಣರ ಹೊಸ ಸಮಾಜದಲ್ಲಿ ಹೊಸ ಬದುಕನ್ನು ಪಡೆದು ಶಿವಸ್ವರೂಪಿಗಳಾಗಿ ಬದುಕುವುದನ್ನು ಅದು ಹೇಗೆ ನಿರಾಕರಿಸುತ್ತಾರೆ? ಇದೇ ಬಸವಣ್ಣನವರ ಮಹಾಸಾಧನೆ.
ಅನಿಷ್ಟಗಳನ್ನು ಹೊಡೆದೋಡಿಸುವ ಪರಿಕಲ್ಪನೆಯ ಇಷ್ಟಲಿಂಗವು ಶರಣಸಂಕುಲವೆಂಬ ನವಸಮಾಜ ನಿರ್ಮಿಸುವ ಮಹತ್ಕಾರ್ಯಕ್ಕೆ ಪ್ರೇರಕವಾಗುತ್ತದೆ. ಈ ವಾತಾವರಣ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳಲು ಸಮಾಜವು ಅವಶ್ಯವಾಗಿದೆ. ಸಾಮಾಜಿಕ ವಾತಾವರಣವು ಮಾನವನ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದೇ ರೀತಿ ಘನತೆಯುಳ್ಳ ವ್ಯಕ್ತಿಗಳು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಪ್ರೇರಕರಾಗುತ್ತಾರೆ.
ಇಷ್ಟಲಿಂಗವು ವ್ಯಕ್ತಿ ಮತ್ತು ಸಮಾಜದ ಮಧ್ಯದ ಸಂಬಂಧವನ್ನು ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸೃಷ್ಟಿಸುವ ತಾತ್ತ್ವಿಕ ಸಂಕೇತವಾಗಿದೆ. ಅದು ಮನುಷ್ಯರ ಒಳಗನ್ನು ಮತ್ತು ಹೊರಗನ್ನು ಸ್ವಚ್ಛಗೊಳಿಸುವ ಮನಸ್ಥಿತಿಯನ್ನು ಸೃಷ್ಟಿಸುವ ಸಾಧನ. ಈ ರೀತಿ ಮಾನವಕುಲವನ್ನು ಒಂದಾಗಿಸುತ್ತ ಸುಂದರ ಸಮಾಜವನ್ನು ನಿರ್ಮಿಸುವ ಉದ್ದೇಶ ಶರಣರದಾಗಿತ್ತು.
ಇಂಥ ಅನುಭಾವದ ಮನಸ್ಥಿತಿಗೆ ಶರಣರು ’ಅರಿವು’ ಎಂದು ಕರೆದರು. ಇಷ್ಟಲಿಂಗವೆಂಬ ಕುರುಹು ಇಂಥ ಅರಿವಿನ ಸಂಕೇತವಾಗಿದೆ ಎಂದು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಶರಣ ಸಂಕುಲದ ಪರಿಸರದಲ್ಲಿ ಮಾನವರು ಇಂಥ ಅರಿವು ಹೊಂದಿದಾಗ ಅವರಿಗೆ ಲಿಂಗಧ್ಯಾನದ ಹೊರತಾಗಿ ಮತ್ತೇನೂ ಹಿಡಿಸದು. ಅವರು ಲಿಂಗಸಾನಿಧ್ಯದಿಂದಾಗಿ ಮತ್ತು ಶರಣಸಂಕುಲದ ಕಾರಣ ಎಲ್ಲ ದೌರ್ಬಲ್ಯಗಳಿಂದ ಮುಕ್ತರಾಗುವರು ಎಂ ಅಚಲವಾದ ನಂಬಿಕೆ ಬಸವಣ್ಣನವರಿಗೆ ಇದ್ದುದರಿಂದಲೇ ಇಂಥ ಆತ್ಮವಿಶ್ವಾಸದ ವಚನ ಬರೆಯಲು ಸಾಧ್ಯವಾಯಿತು.
ಈ ವಚನದಲ್ಲಿ ಬರುವ ಕತ್ತಿ, ಮಾಂಸ ಮತ್ತು ಮದ್ಯ ಒಬ್ಬ ವ್ಯಕ್ತಿಯ ಹೀನಾಯ ಸ್ಥಿತಿಯನ್ನು ಸೂಚಿಸುತ್ತವೆ. ಆತ ತನ್ನ ಈ ಇರುವಿಕೆಯ ಬಗ್ಗೆ ಯಾವುದೇ ರೀತಿಯ ಪಶ್ಚಾತ್ತಾಪ ಪಡುವುದಿಲ್ಲ ಎಂಬುದನ್ನೂ ಈ ವಚನ ಸೂಚಿಸುತ್ತದೆ. ಆದರೆ ಆ ವ್ಯಕ್ತಿಯ ಬಗ್ಗೆ ಬಸವಣ್ಣನವರಿಗೆ ಇರುವ ಒಂದೇ ಒಂದು ಆಶಾಭಾವವೆಂದರೆ ಆತನ ಕೊರಳಲ್ಲಿ ಎಲ್ಲ ಅನಿಷ್ಟಗಳಿಗೆ ತದ್ವಿರುದ್ಧವಾದ ಇಷ್ಟಲಿಂಗವಿದೆ. ಇಷ್ಟಲಿಂಗವಂತೂ ಅವನ ಹಾಗೆ ಆಗುವುದಿಲ್ಲ. ಆದರೆ ಆತ ಇಷ್ಟಲಿಂಗದ ಹಾಗೆ ಆಗುವದರಲ್ಲಿ ಅಂದರೆ ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಕೂಡಿದ ಘನತೆವೆತ್ತ ಬದುಕನ್ನು ಪಡೆಯುವುದರಲ್ಲಿ ಬಸವಣ್ಣನವರಿಗೆ ನಂಬಿಕೆ ಇದೆ. ಮನುವಾದಿ ಸಮಾಜದಲ್ಲಿ ಅಧೋಗತಿಗೆ ಇಳಿಸಲ್ಪಟ್ಟ ಆತ ಬಸವವಾದಿ ಸಮಾಜದಲ್ಲಿ ಇಷ್ಟಲಿಂಗಧಾರಿ ಆಗಿರುವುದರಿಂದ ಸಹಜವಾಗಿಯೇ ಶರಣಸಂಕುಲದ ಭಾಗವಾಗಿದ್ದಾನೆ. ಶರಣಸಂಕುಲದ ಒಡನಾಟದಲ್ಲಿರುವ ಆತನ ಮೇಲೆ ಅಲ್ಲಿನ ಸಾತ್ವಿಕ ಬದುಕಿನ ವಾತಾವರಣ ಪರಿಣಾಮ ಬೀರದೆ ಇರದು. ಶರಣಸಂಕುಲದ ಒಡನಾಟ ಮತ್ತು ಇಷ್ಟಲಿಂಗದ ಸಂಬಂಧದಲ್ಲಿ ಆತನಿಗೆ ಅರಿವು ಮೂಡುವುದರಲ್ಲಿ ಸಂಶಯವಿಲ್ಲ. ಆ ಅರಿವು ಗುರುವಾಗುವುದು. ನಂತರ ಆ ಗುರುವೇ ದೇವರಾಗುವುದು. ಹೀಗೆ ಮನುವಾದಿ ಸಮಾಜದಲ್ಲಿ ಅಸಹ್ಯ ಬದುಕನ್ನು ಬದುಕುತ್ತಿರುವವರಿಗಾಗಿ ಕೂಡ ಬಸವಣ್ಣನವರು ಇಂಥ ಪವಿತ್ರ ಬದುಕಿನ ಮಾರ್ಗ ಕಂಡುಹಿಡಿದರು. ಅರಿವುಂಟಾದಾಗ ಇಂಥವರೂ ದೇವಸ್ವರೂಪರೇ ಆಗುವರು.
ಮಂದಿರಕ್ಕೆ ಪ್ರವೇಶ ಸಿಗದ ಶೂದ್ರರು, ಅಸ್ಪೃಶ್ಯರು ಮತ್ತು ಮಂದಿರ ಸಂಸ್ಕೃತಿಯನ್ನು ನಿರಾಕರಿಸಿ ಬಸವ ತತ್ತ್ವವನ್ನು ಎತ್ತಿಹಿಡಿದ ಸವರ್ಣೀಯರೇ ಎದೆಯ ಮೇಲೆ ಇಷ್ಟಲಿಂಗವುಳ್ಳವರ ಪೂರ್ವಜರು.
ಈ ರೀತಿಯಲ್ಲಿ ಬಸವಣ್ಣನವರು ಸಮಾಜದ ಕೆಳಸ್ತರದ ಜನರನ್ನು ಮತ್ತು ಮೇಲ್ ಸ್ತರದ ಪ್ರಜ್ಞಾವಂತರನ್ನು ಒಂದುಗೂಡಿಸಿದರು ಮತ್ತು ಅವರಿಗಾಗಿ ಹೊಸ ಸಮಾಜವೊಂದನ್ನು ಸೃಷ್ಟಿಸಿದರು. ಮನುವಾದಿ ಸಮಾಜದಲ್ಲಿ ಯಾರನ್ನು ತಮ್ಮ ಸಾಕುಪ್ರಾಣಿಗಳಿಗಿಂತ ಕೀಳು ಎಂದು ಭಾವಿಸಲಾಗುತ್ತಿತ್ತೋ ಮತ್ತು ನಿಷ್ಕರುಣೆಯಿಂದ ನೋಡಲಾಗುತ್ತಿತ್ತೋ ಅಂಥವರಿಗಾಗಿ ಬಸವಣ್ಣನವರು ದಯೆಯ ವಾತಾವರಣ ಸೃಷ್ಟಿಸಿ ಅವರಲ್ಲಿ ಅಗಾಧವಾದ ಪರಿವರ್ತನೆಯಾಗುವಂತೆ ನೋಡಿಕೊಂಡರು. ಹೀಗೆ ನಿಜಮನುಷ್ಯರಾಗ ಬಯಸಿದ ಎಲ್ಲರನ್ನೂ ಸೇರಿಸಿ ಶರಣಸಂಕುಲವನ್ನು ಸ್ಥಾಪಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ.
ಬಸವಣ್ಣನವರ ಇಂಥ ನವಸಮಾಜದ ಪರಿಕಲ್ಪನೆಯಿಂದಾಗಿ ನಾಡಿನ ವಿವಿಧ ಸ್ತರಗಳ ಜನಸಮಾನ್ಯರು ಸ್ವಾಭಿಮಾನದಿಂದ ದುಡಿದು ಬದುಕುವುದನ್ನು ಕಲಿತರು. ತಮ್ಮ ಕಾಯಕದೊಂದಿಗೆ ತತ್ತ್ವಚಿಂತನೆಯಲ್ಲಿ ತೊಡಗಿದರು. ಲೋಕಕ್ಕೆ ಮಾದರಿಯಾದರು.
ಇಷ್ಟಲಿಂಗವು ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸ್ತ್ರೀ ಮತ್ತು ಪುರುಷ ಸಮಾನತೆಯನ್ನು ಮನದಲ್ಲಿ ತುಂಬುವ ಅರಿವಿನ ಬೆಳಕಾಗಿದೆ. ಇಷ್ಟಲಿಂಗವನ್ನು ಧರಿಸುವವರು ಜಾತಿಭೇದ, ಲಿಂಗಭೇದ, ವರ್ಣಭೇದ, ವರ್ಗಭೇದ ಮತ್ತು ಕಾಯಕಭೇದಗಳನ್ನು ಮಾಡುವ ಹಾಗಿಲ್ಲ. ಲಿಂಗವಂತರಲ್ಲಿ ಒಳಪಂಗಡಗಳನ್ನು ಎತ್ತಿಕಟ್ಟುವಂತಿಲ್ಲ. ಒಳಪಂಗಡಗಳಲ್ಲಿನ ಮೇಲುಕೀಳುಗಳನ್ನು ಪರಿಗಣಿಸುವಂತಿಲ್ಲ. ಇಷ್ಟಲಿಂಗ ದೀಕ್ಷೆಯನ್ನು ತೆಗೆದುಕೊಂಡವರ ಮೂಲವನ್ನು ಹುಡುಕುವಮಂತಿಲ್ಲ. ಅವರು ದಾಸೀಪುತ್ರರಾದರೂ ಸರಿಯೆ, ವೇಶ್ಯಾಪುತ್ರರಾದರೂ ಸರಿಯೆ. ಲಿಂಗವಂತರಾದವರೆಲ್ಲ ಶಿವಸ್ವರೂಪಿಗಳೇ ಆಗಿರುತ್ತಾರೆ ಎಂಬ ದೃಢ ನಿಲುವನ್ನು ಮಹಾತ್ಮಾ ಬಸವೇಶ್ವರರು ಹೊಂದಿದ್ದರು.
ಇಷ್ಟಲಿಂಗಧಾರಿಗಳು ಸ್ಥಾವರಲಿಂಗವನ್ನು ಅಥವಾ ಅದರ ಕಿರಿಯ ಸ್ವರೂಪವಾದ ಚರಲಿಂಗವನ್ನು ಪೂಜಿಸುವಂತಿಲ್ಲ. ತಮ್ಮಲ್ಲೇ ದೇವರಿರುವ ಕಾರಣ ಯಾವುದೇ ಗುಡಿ ಗುಂಡಾರಗಳಿಗೆ ಹೋಗುವಂತಿಲ್ಲ. ಗುಡಿಗಳ ಶೋಷಣೆಗೆ ಬಲಿಯಾಗುವಂತಿಲ್ಲ.
ಮಂದಿರಗಳಿಗೆ ಹೋಗುವವರು ಮತ್ತು ಮೂರ್ತಿ ಪೂಜೆ ಮಾಡುವವರು ತಮಗರಿಯದಂತೆಯೆ ವೈದಿಕದ ಕಡೆಗೆ ಜಾರಿರುತ್ತಾರೆ. ನಮ್ಮ ಅರಿವಿಗೆ ಮತ್ತು ಸೃಷ್ಟಿಗೆ ಮೂಲವಾದ ಪರವಸ್ತುವಿನ ಕುರುಹು ಆದ ಇಷ್ಟಲಿಂಗದ ಯೌಗಿಕ ಮಹತ್ವವನ್ನು ಅರಿಯದೆ ಪೂಜಿಸುವವರು ಉಣ್ಣದ ಲಿಂಗಕ್ಕೆ ನೈವೇದ್ಯ ಹಿಡಿದಂತಾಗುತ್ತದೆ. ಆ ಮೂಲಕ ಮತ್ತೆ ವೈದಿಕದ ಕಡೆಗೇ ಹೋದಂತಾಗುತ್ತದೆ.
ಇಷ್ಟಲಿಂಗವು ಸಂಪೂರ್ಣವಾಗಿ ಅವೈದಿಕ ಪೂಜೆಯಾಗಿದೆ. ಅಂದರೆ ಅದು ಶಿವಯೋಗ, ಶಿವಧ್ಯಾನ ಮತ್ತು ನಿತ್ಯಲಿಂಗೈಕ್ಯಸ್ಥಿತಿಯನ್ನೇ ಹೊಂದುವ ಶಿವತಪಸ್ಸಾಗಿದೆ. ಶರಣರ ಶಿವ, ಸತ್ಯ ಮತ್ತು ಸೌಂದರ್ಯದಿಂದ ಕೂಡಿದ ಮಂಗಳಮಯ ಪರಮಾತ್ಮನಾಗಿದ್ದಾನೆ. ಅನಿಷ್ಟವನ್ನು ಕೊನೆಗಾಣಿಸುವ ’ಇಷ್ಟ’ವಾಗಿದ್ದಾನೆ. ಈ ಶಿವನಿಗೆ ಹೆಂಡಿರು ಮಕ್ಕಳಿಲ್ಲ. ಶೈವ ಬ್ರಾಹ್ಮಣರು, ಜಾತಿಜಂಗಮರು ಮತ್ತು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳದ ಪಂಚಾಚಾರ್ಯರು, ವೀರಶೈವ ಹಾಗೂ ಲಿಂಗಾಯತರು ಎಂದು ಕರೆಯಿಸಿಕೊಳ್ಳುವ ಅನೇಕರು ಪೂಜಿಸುವ ಸ್ಥಾವರಲಿಂಗವಾಗಲೀ ಶಿವಮೂರ್ತಿಯಾಗಲೀ ಶರಣರು ಧ್ಯಾನಿಸುವ ಶಿವನಲ್ಲ. ಇಷ್ಟಲಿಂಗದೇವನೇ ಶರಣರ ಶಿವ. ಪೂಜಿಸುವ ಇಷ್ಟಲಿಂಗಕ್ಕೆ ಮೂಲಾಧಾರವಾಗಿರುವವನೇ ಇಷ್ಟಲಿಂಗದೇವ. ಸರ್ವ ಶರಣರ ವಚನಾಂಕಿತಗಳ ಮೂಲ ಸ್ವರೂಪನೇ ಇಷ್ಟಲಿಂಗದೇವ. ನಮ್ಮ ಒಳ ಮತ್ತು ಹೊರಜಗತ್ತುಗಳನ್ನು ರೂಪಿಸಿದವನೇ ಇಷ್ಟಲಿಂಗದೇವ. ’ದೇವನೊಬ್ಬ ನಾಮ ಹಲವು’ ಎಂದು ಬಸವಣ್ಣನವರು ಹೇಳುವಂತೆ ಈ ನಿರಾಕಾರ ಮತ್ತು ನಿರ್ಗುಣನಾದ ದೇವನಿಗೆ ವಿವಿಧ ಧರ್ಮಗಳವರು ವಿವಿಧ ಹೆಸರುಗಳಿಂದ ಕರೆದು ವಿವಿಧ ರೀತಿಯಲ್ಲಿ ಆರಾಧನೆ ಮಾಡುತ್ತಾರೆ. ಅನೇಕರು ತಾವು ಪೂಜಿಸುವ ಕಲ್ಲು, ಕಾಷ್ಠ ಮತ್ತು ಲೋಹಗಳ ದೇವರನ್ನೇ ಸುಲಿಗೆಯ ಸಾಧನ ಮಾಡಿಕೊಂಡಿದ್ದಾರೆ. ಈ ಅನೀತಿಯನ್ನು ತಪ್ಪಿಸುವ ಮೂಲಕ ಜನರನ್ನು ದೇವರೊಡನೆ ಒಂದಾಗಿಸುವ ಘನ ಉದ್ದೇಶದಿಂದಲ್ಲೇ ಬಸವಣ್ಣನವರು ಮಂದಿರಗಳನ್ನು ತಿರಸ್ಕರಿಸಿ ಮತ್ತು ಮೂರ್ತಿ ಪೂಜೆಯನ್ನು ನಿಷೇಧಿಸಿ ಇಷ್ಟಲಿಂಗ ಪೂಜೆಯನ್ನು ಜಾರಿಗೊಳಿಸಿದರು.
ಇಷ್ಟಲಿಂಗ ಪೂಜೆಯು ಹೊರಗಿನ ಮೂರ್ತಿಗಳಿಗೆ ಮಾಡುವ ಪೂಜೆಯಲ್ಲ. ತಮ್ಮನ್ನು ತಾವು ಪೂಜೆ ಮಾಡಿಕೊಳ್ಳುವುದೂ ಅಲ್ಲ. ಆದರೆ ತಮ್ಮೊಳಗಿನ ತೋರಬಾರದ ಘನಕ್ಕೆ ಮಾಡುವ ಪೂಜೆಯೇ ಇಷ್ಟಲಿಂಗ ಪೂಜೆ. ಹೀಗೆ ಒಳಜಗತ್ತನ್ನು ಅರಿತುಕೊಳ್ಳುವ ಕ್ರಮ ಇದಾಗಿದೆ. ಹಾಗೆ ಅರಿತುಕೊಂಡ ಮೇಲೆ ಕಾಯಕ, ಪ್ರಸಾದ ಮತ್ತು ದಾಸೋಹ ತತ್ತ್ವದ ಮೂಲಕ ಹೊರಜಗತ್ತಿನಲ್ಲಿ ಸಮಾನತೆಯನ್ನು ತರುವುದಾಗಿದೆ.
’ಅರಿವಿನ ಮನೆ’ ಮತ್ತು ’ಮಹಾಮನೆ’ ಎಂಬುವು ಬಸವಕಲ್ಯಾಣದಲ್ಲಿ ಸಾಂಕೇತಿಕವಾಗಿ ಇದ್ದವು. ಆದರೆ ತಾತ್ತ್ವಿಕವಾಗಿ ನೋಡಿದಾಗ ಅರಿವಿನ ಮನೆ ಎಂಬುದು ನಮ್ಮ ಒಳಜಗತ್ತನ್ನು ಮತ್ತು ’ಮಹಾಮನೆ’ ಎಂಬುದು ನಮ್ಮ ಹೊರಗಿನ ಜಗತ್ತನ್ನು ಸೂಚಿಸುವ ಪದಗಳಾಗಿವೆ. ಅರಿವಿನ ಮನೆಯಲ್ಲಿ ಇಷ್ಟಲಿಂಗ ಪೂಜೆ ನಡೆಯಬೇಕು. ಅಂದರೆ ಇಷ್ಟಲಿಂಗದ ಮೂಲಕ ನಮ್ಮ ಒಳಗಿನ ಅರಿವು-ಅಂತಃಸಾಕ್ಷಿ ಎಂಬ ಘನದ ಪೂಜೆ ಮಾಡಬೇಕು. ಸೃಷ್ಟಿಕರ್ತನ ಸೃಷ್ಟಿಯೇ ಆಗಿರುವ ವಿಶ್ವವೆಂಬ ’ಮಹಾಮನೆ’ಯಲ್ಲಿ ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯೊಂದಿಗೆ ಸಮಾಜವೆಂಬ ಜಂಗಮಲಿಂಗದ ಪೂಜೆ ಮಾಡಬೇಕು. ಅಂದರೆ ಸರ್ವಸಮತ್ವದ ಸಮಾಜ ನಿರ್ಮಾಣದಲ್ಲಿ ತೊಡಗಬೇಕು. ಹೀಗೆ ಅರಿವಿನ ಮನೆಯಲ್ಲಿ ಇಷ್ಟಲಿಂಗ ಪೂಜೆ ಮತ್ತು ಮಹಾಮನೆಯಲ್ಲಿ ಜಂಗಮಲಿಂಗ ಪೂಜೆ ನಡೆಯಬೇಕು. ಇದುವೇ ಬಸವಣ್ಣನವರು ಹೇಳುವ ಉಭಯಕುಳ.
ಇಷ್ಟಲಿಂಗದ ಅರಿವು ಆಚರಣೆಯಲ್ಲಿ ಬಂದಾಗ ಮಾತ್ರ ಬಸವಣ್ಣನವರ ಕನಿಸಿನ ನವಸಮಾಜ ನಿರ್ಮಾಣ ಮಾಡಲು ಸಾಧ್ಯ. ಬಸವಣ್ಣನವರ ಅನುಭಾವದ ಅರಿವು ಮತು ಅನುಭವದ ಪ್ರಜ್ಞೆಯ ಕೂಡಲಸಂಗಮವಾದಾಗಲೇ ಇಷ್ಟಲಿಂಗದ ಜನನವಾಯಿತು. ನಂತರ ಬಸವಧರ್ಮದ ಲಾಂಛನವಾಯಿತು. ಅರಿವಿನ ಕುರುಹು ಆಗಿರುವ ಇಷ್ಟಲಿಂಗ ಸರ್ವಸಮತ್ವದ ಸಂಕೇತವಾಗಿ ಕಂಗೊಳಿಸುತ್ತಿದೆ. ಇಷ್ಟಲಿಂಗವು ಸಮಗ್ರ ಕ್ರಾಂತಿಯ ಮಾರ್ಗದರ್ಶಿ. ಸರ್ವರನ್ನು, ಅವರೊಳಗಿನ ಪರಮಾತ್ಮನೊಡನೆ ಒಂದುಗೂಡಿಸುವ ಸಾಧನ. ಆನಂದಮಯವಾಗಿ ಬದುಕಲೆಂದು ಬಸವಣ್ಣನವರು ಲೋಕಕ್ಕೆ ಕೊಟ್ಟ ಅನುಪಮ ಕಾಣಿಕೆ.

ರಂಜಾನ್ ದರ್ಗಾ
ನಿರ್ದೇಶಕ, ವಚನ ಅಧ್ಯಯನ ಕೇಂದ್ರ ಬಸವ ಸೇವಾ ಪ್ರತಿಷ್ಠಾನ, ಶರಣ ಉದ್ಯಾನ, ಶರಣ ನಗರ, ಬೀದರ -೫೮೫೪೦೧ ಮೊಬೈಲ್: ೯೨೪೨೪೭೦೩೮೪

No comments:

Post a Comment

ಹಿಂದಿನ ಬರೆಹಗಳು