Tuesday, March 15, 2011

ಕಾವ್ಯನಂದರ ವಚನಗಳ ಪ್ರಸ್ತುತತೆ



ಪೀಠಿಕೆ
"ವಚನ" ಎನ್ನುವ ಪದ ಬಹುಮುಖಿಯಾದುದಾಗಿದೆ. ಈ ಪದದ ಅರ್ಥಗಳು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತವೆ. ವಚನವೆಂದರೆ ಮಾತು, ನುಡಿ. ಆದರೆ ಹನ್ನೆರಡನೇ ಶತಮಾನದ ಶರಣರ ಅವಧಿಯಲ್ಲಿ "ವಚನ" ಬರಿ ಮಾತಾಗಿರದೆ, ಅದು ಕೊಟ್ಟ ಮಾತಾಗಿತ್ತು. ವಚನವೆಂದರೆ Pಡಿomise. ವಚನಕಾರರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದರು. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು, ನಡೆ-ನುಡಿ ಒಂದಾಗಿಸಲು ಪ್ರಯತ್ನಿಸುವುದು ಸಾತ್ವಿಕ ಸಂಸ್ಕೃತಿಯ ಲಕ್ಷಣ. ಹೀಗಾಗಿ "ವಚನ"ವೆಂಬುದು ಸಂಸ್ಕೃತಿಯಾಯಿತು. ಶರಣರು ಹನ್ನೆರಡನೇ ಶತಮಾನದಲ್ಲಿ ಅಸಮಾನತೆಯ ವ್ಯವಸ್ಥೆಯ ಬಗೆಗೆ, ಅನ್ಯಾಯದ ವಿರುದ್ಧ ಚಳವಳಿ ಮಾಡಿದರು. ಹೀಗಾಗಿ "ವಚನ"ವೆಂಬುದು ಚಳವಳಿಯಾಯಿತು. ಆ ಕಾಲ ಘಟ್ಟದಲ್ಲಿಯೇ ಶರಣರು ವಚನಗಳ ಮೂಲಕ ಅನೇಕ ವೈಜ್ಞಾನಿಕ ವಿಷಯಗಳನ್ನು ತಿಳಿಸಿದರು; ಹೀಗಾಗಿ ವಚನ ವಿಜ್ಞಾನವಾಯಿತು. ಹೀಗೆ ಹನ್ನೆರಡನೇ ಶತಮಾನದಲ್ಲಿ "ವಚನ"ವೆಂಬ ಪದವು ವಚನ ಸಾಹಿತ್ಯ ರೂಪವಾಗಿ, ವಚನ ಸಂಸ್ಕೃತಿಯಾಗಿ, ವಚನ ಚಳವಳಿಯಾಗಿ, ವಚನ ವಿಜ್ಞಾನವಾಗಿ ಅರ್ಥೈಸಲ್ಪಟ್ಟಿದೆ. ವಚನಕ್ಕೆ ಅನೇಕ ಅರ್ಥಗಳಿರುವಂತೆ, ಅನೇಕ ಆಶಯಗಳೂ ಇವೆ.
ವಚನ ಸಾಹಿತ್ಯ ಪರಂಪರೆಯನ್ನು ಬಸವಪೂರ್ವಯುಗ, ಬಸವಯುಗ, ಬಸವೋತ್ತರ ಯುಗ ಹಾಗೂ ಆಧುನಿಕ ಯುಗವೆಂದು ವಿದ್ವಾಂಸರು ಗುರುತಿಸಿದ್ದಾರೆ. ಆದರೆ ಬಸವ ಪೂರ್ವ ಯುಗದ ಪ್ರಸ್ತಾಪ ಅನಗತ್ಯವೆನಿಸುತ್ತದೆ. ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ ಮೊದಲಾದ ವಚನಕಾರರು ಬಸವಣ್ಣನವರಿಗಿಂತ ಬಹಳ ಹಿಂದಿನ ಕಾಲಘಟ್ಟದಲ್ಲಿರದೆ, ಅವರೆಲ್ಲ ಬಸವಣ್ಣನವರ ಹಿರಿಯ ಸಮಕಾಲೀನರಾಗಿದ್ದರೆಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಹೀಗಾಗಿ ವಚನ ಸಾಹಿತ್ಯ ಪರಂಪರೆಯನ್ನು ಬಸವಯುಗ-ಬಸವೋತ್ತರಯುಗ ಮತ್ತು ಆಧುನಿಕ ಯುಗ ಎಂದು ವರ್ಗೀಕರಿಸುವುದು ಸೂಕ್ತವೆನಿಸುತ್ತದೆ. ಯುಗಧರ್ಮಕ್ಕೆ ತಕ್ಕಂತೆ ಬಸವಯುಗದ ಸಾಮಾಜಿಕ ವ್ಯವಸ್ಥೆಗೂ, ಬಸವೋತ್ತರ ಯುಗದ ಸಾಮಾಜಿಕ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ಅದೇ ರೀತಿ ಇವೆರಡೂ ಯುಗಗಳಿಗಿಂತ ಆಧುನಿಕ ಯುಗ ತುಂಬ ಭಿನ್ನವಾಗಿ ಕಾಣಿಸುತ್ತದೆ. ಈ ಎಲ್ಲ ಕಾಲಘಟ್ಟಗಳಲ್ಲಿಯೂ "ವಚನ" ಸಾಹಿತ್ಯ ರೂಪವಾಗಿ ಬಳಕೆಯಾಗಿದೆ.
ಹನ್ನೆರಡನೇ ಶತಮಾನದ ವಚನ ಚಳವಳಿ, ಹದಿನೈದು ಹದಿನಾರನೇ ಶತಮಾನದ ಹೊತ್ತಿಗೆ ತಣ್ಣಗಾಯಿತು. ಈ ಕಾಲಘಟ್ಟ ಧಾರ್ಮಿಕ ಪುನರುತ್ಥಾನದ ಕಾಲ. ಹೀಗಾಗಿ ಇಲ್ಲಿ ವಚನ ಕ್ರಾಂತಿ, ವಚನ ಚಳವಳಿ, ವಚನ ವಿಜ್ಞಾನ, ಮಹಿಳಾ ಸಮಾನತೆ, ದಲಿತ ಚಿಂತನೆ ಕಾಣಸಿಗುವುದಿಲ್ಲ. ಈ ಕಾಲಘಟ್ಟದಲ್ಲಿ ಸಾಮಾಜಿಕ-ಹೋರಾಟದ ಬದಲು ಅಧ್ಯಾತ್ಮಿಕ ಸಾಧನೆ ಮುಖ್ಯವಾಯಿತು. ಹೀಗಾಗಿ ಬಸವೋತ್ತರ ಯುಗದ ವಚನಕಾರರ ಆಶಯಗಳು ಬೇರೆ ರೀತಿಯಲ್ಲಿಯೇ ವಿಕಾಸ ಹೊಂದಿದವು.
ಆಧುನಿಕ ಯುಗದಲ್ಲಿ "ವಚನ"ವೆಂಬುದು ಕೇವಲ ಒಂದು ಸಾಹಿತ್ಯ ರೂಪವಾಗಿ ಮಾತ್ರ ಉಳಿದುಕೊಂಡಿತು. ಭಾವಗೀತ, ಸುನೀತದ ಹಾಗೆ ’ವಚನ’ ಬಳಕೆಯಾಯಿತು. ಬಸವಯುಗದ ಕ್ರಾಂತಿಯಾಗಲಿ, ಬಸವೋತ್ತರ ಯುಗದ ಅಧ್ಯಾತ್ಮಿಕ ಚಿಂತನೆಯಾಗಲಿ ಇಲ್ಲಿ ಮುಖ್ಯವಾಗದೆ, ಸಾಮಾಜಿಕ ವಿಡಂಬನೆ-ಆದರ್ಶ ಬದುಕು ಮುಖ್ಯವಾದುದನ್ನು ಕಾಣಬಹುದಾಗಿದೆ. ಇದು ಯುಗಧರ್ಮ ಹಾಗೂ ಸಾಹಿತ್ಯ ಧರ್ಮಗಳಲ್ಲಿರುವ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ.
ಆಧುನಿಕ ಸಂದರ್ಭದಲ್ಲಿ ಎಸ್.ವಿ.ರಂಗಣ್ಣನವರು ವಚನ ರಚನೆಗೆ ಮೊದಲು ಪ್ರಯತ್ನಿಸಿದವರಾಗಿದ್ದಾರೆ. ಇವರನ್ನು ಆಧುನಿಕ ವಚನ ಸಾಹಿತ್ಯದ ಆದ್ಯ ಪ್ರವರ್ತಕರೆಂದು ವಿಮರ್ಶಕರು ಗುರುತಿಸಿದ್ದಾರೆ. ಇವರೊಂದಿಗೆ ಜಚನಿ, ಎಸ್.ವಿ.ಪರಮೇಶ್ವರಭಟ್ಟ, ಜೋಳದ ರಾಶಿ ದೊಡ್ಡನಗೌಡ, ಜೀರಿಗಿ ಕಟ್ಟಿ ಬಸವಪ್ಪ, ಮಹಾದೇವ ಬಣಕಾರ, ಮೂಜಗಂ ಮೊದಲಾದವರು ವಚನ ರಚನೆ ಮಾಡಿದವರಾಗಿದ್ದಾರೆ. ಈ ವಚನಕಾರರಲ್ಲಿ ಸಿದ್ಧಯ್ಯ ಪುರಾಣಿಕ ಹೆಸರು ತುಂಬ ವಿಶಿಷ್ಟವಾದುದು. ಸಿದ್ಧಯ್ಯ ಪುರಾಣಿಕರು ಕಾವ್ಯ-ಕಥೆ-ಕಾದಂಬರಿ-ನಾಟಕಗಳನ್ನು ರಚಿಸಿದ್ದರೂ, ವಿಮರ್ಶಕರು ಅವರನ್ನು ಗುರುತಿಸಿರುವುದು ಪ್ರಮುಖ ವಚನಕಾರರನ್ನಾಗಿ ಎಂಬ ವಿಷಯ ಬಹಳ ಮುಖ್ಯವಾದುದಾಗಿದೆ.
ವಚನೋಧ್ಯಾನ, ವಚನನಂದನ, ವಚನರಾಮ ಹೀಗೆ ಮೂರು ಬೃಹತ್ ವಚನ ಸಂಪುಟಗಳನ್ನು ಪ್ರಕಟಿಸಿರುವ ಕಾವ್ಯಾನಂದರ ವಿಶಿಷ್ಟ ಕೊಡುಗೆ ಇರುವುದೇ ವಚನಗಳಲ್ಲಿ. ಇವರು ಸುಮಾರು ೧೫೦೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವರದು ಸಮನ್ವಯ ದೃಷ್ಟಿ. ಪರಂಪರೆಯನ್ನು ಸಂಪೂರ್ಣವಾಗಿ ವಿರೋಧಿಸದೆ, ಆಧುನಿಕತೆಯನ್ನೂ ಯಥಾವತ್ತಾಗಿ ಸ್ವೀಕರಿಸದೆ ಎರಡರಲ್ಲಿರುವ ಉತ್ತಮಾಂಶಗಳನ್ನು ಹೀರಿಕೊಂಡು ಬದುಕುವ ಬರೆಯುವ ಆಶಯ ಕಾವ್ಯಾನಂದರದಾಗಿದೆ.
ಪುರಾಣಿಕರ ವಚನಗಳಲ್ಲಿ ವಸ್ತು ವೈವಿಧ್ಯತೆಯಿದೆ. ಲೌಕಿಕ-ಪಾರಮಾರ್ಥಿಕ, ಇಹ-ಪರ ಎರಡೂ ವಿಷಯಗಳು ಸಮನ್ವಯಗೊಂಡಿವೆ. ಅವರ ವಚನಗಳನ್ನು ವಿಷಯಾನುಕ್ರಮಣಿಕೆಯಲ್ಲಿ ಜೋಡಿಸುವುದಾದರೆ ಹೀಗೆ ಜೋಡಿಸಬಹುದಾಗಿದೆ. ೧. ಜೀವ-ದೇವ ಸಂಬಂಧ ೨. ಪ್ರಕೃತಿ ೩. ಚಿಂತನ-ಮಂಥನ ೪. ಸಾಮಾಜಿಕ ಪ್ರಜ್ಞೆ ೫. ಸಂಪ್ರದಾಯ-ಮೂಢನಂಬಿಕೆ ೬. ಸತಿ-ಪತಿಭಾವ ೭. ಪ್ರೀತಿಯ ಅನಂತತೆ ೮. ಮಹಿಳೆ, ಈ ವಿಷಯಗಳಲ್ಲದೆ ಇನ್ನೂ ಅನೇಕ ವಿಷಯಗಳನ್ನು ಅವರ ವಚನಗಳು ವಸ್ತುವನ್ನಾಗಿಸಿಕೊಂಡಿದೆ.
ಜೀವ-ದೇವ ಸಂಬಂಧ
ಜೀವ-ದೇವ ಪರಿಕಲ್ಪನೆ ಕೇವಲ ಆಸ್ತಿಕರಲ್ಲಿ ಮಾತ್ರ ಸಾಧ್ಯ. ಪುರಾಣಿಕರು ಆಸ್ತಿಕರು. ಆದರೆ ಸಂಪ್ರದಾಯ ವಿರೋಧಿಗಳು. ಈ ವಿಷಯದಲ್ಲಿ ಪುರಾಣಿಕರ ಮೇಲೆ ಹನ್ನೆರಡನೇ ಶತಮಾನದ ಶರಣರ ಪ್ರಭಾವ ದಟ್ಟವಾಗಿದೆ. ಜೀವ-ದೇವ ಸಂಬಂಧಗಳ ವಿಷಯ ಕುರಿತು ಮಾತನಾಡುವಾಗಲೆಲ್ಲ, ಆತ್ಮ ನಿವೇದನೆ ಪ್ರಮುಖ ಪಾತ್ರ ವಹಿಸುತ್ತದೆ. ಪುರಾಣಿಕರ ದೇವ ಎಲ್ಲಿಯೋ ಇರುವಂತವನಲ್ಲ, ಆತ ಅವರೊಳಗಡೆಯೇ ಇದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತುಂಬ ಕುತೂಹಲಕಾರಿಯಾದ ಸಂಗತಿಗಳನ್ನವರು ತಿಳಿಸಿದ್ದಾರೆ.
"ಶಬ್ದ ಹುಟ್ಟದ ಮುನ್ನಿನ ಅರ್ಥದಂತೆ
ವಾದ್ಯ ಹುಟ್ಟದ ಮುನ್ನಿನ ನಾದದಂತೆ
ಕುಂಚಹುಟ್ಟದ ಮುನ್ನಿನ ಚಿತ್ರದಂತೆ
ಉಳಿ ಹುಟ್ಟದ ಮುನ್ನಿನ ಪ್ರಾಣದಂತೆ ಇದ್ದೆಯಯ್ಯಾ!..."

ಅವರ ವಚನವೊಂದರ ಈ ಸಾಲುಗಳಲ್ಲಿ ಬರುವ ಉಪಮೆಗಳು, ಒಂದರ ನಂತರ ಒಂದು ಸೇರಿಕೊಂಡು ಸರಮಾಲೆಯಂತೆ ಕಾಣಿಸುತ್ತವೆ. ವಚನದ ಪ್ರಾರಂಭದಲ್ಲಿಯೇ "ನಾನು ಹುಟ್ಟುವ ಮುನ್ನ ನೀನು ಹೇಗಿದ್ದೆಯಯ್ಯಾ?" ಎಂದು ದೇವನನ್ನೇ ಪ್ರಶ್ನಿಸುತ್ತಾರೆ. ಅದಕ್ಕೆ ದೇವನಿಂದ ಉತ್ತರ ದೊರೆಯದೇ ಹೋದಾಗ ತಾವೇ ಆ ಉತ್ತರವನ್ನೂ ಹುಡುಕಿಕೊಳ್ಳುತ್ತಾರೆ. ಶಬ್ದ-ಅರ್ಥ, ವಾದ್ಯ-ನಾದ, ಕುಂಚ-ಚಿತ್ರ ಇಂತಹ ಜೋಡಿ ಪದಗಳನ್ನು ಜೋಡಿಸುತ್ತ ಅವಕ್ಕೆ ಜೀವ ತುಂಬುತ್ತಾರೆ.
ಶಬ್ದ ಹುಟ್ಟಿದ ನಂತರವಲ್ಲವೆ ಅರ್ಥ ಹುಟ್ಟುವುದು! ವಾದ್ಯ ಹುಟ್ಟಿದ ನಂತರವಲ್ಲವೆ ನಾದ ಕೇಳಿಸುವುದು! ಕುಂಚ ಹುಟ್ಟಿದ ನಂತರವಲ್ಲವೆ ಚಿತ್ರ ಕಾಣಿಸುವುದು! ಹೀಗೆ ಈ ಉಪಮಾಮಾಲೆಯನ್ನು ಬೆಳೆಸುತ್ತಾರೆ. ವಚನದ ಕೊನೆಯಲ್ಲಿ ಕೇಳುವ ಪ್ರಶ್ನೆ ಬಹಳ ಮುಖ್ಯವಾದುದಾಗಿದೆ.
"ನಾನು ಹುಟ್ಟಿದ ಮೇಲೆ ತಾನೆ
ಅರ್ಥಕ್ಕೆ ಶಬ್ದ, ನಾದಕ್ಕೆ ವಾದ್ಯ
ಚಿತ್ರಕ್ಕೆ ಕುಂಚ, ಶಿಲ್ಪಕ್ಕೆ ಉಳಿ
ನಿನಗೆ ಭಕ್ತ ದೊರೆತುದು?"

"ತಮ್ಮ ಹುಟ್ಟಿಗೆ ದೇವನೇ ಕಾರಣ"ವೆಂದು ಉಳಿದ ಆಸ್ತಿಕರೆಲ್ಲ ಭಾವಿಸಿದರೆ, "ನಾನು ಹುಟ್ಟಿದ ನಂತರವೇ ದೇವನ ಅಸ್ತಿತ್ವವೆಂದು ಪುರಾಣಿಕರು ಹೇಳುತ್ತಾರೆ. ಉಳಿದ ಆಸ್ತಿಕರಿಗೂ ಪುರಾಣಿಕರಿಗೂ ಇರುವ ವ್ಯತ್ಯಾಸ ಇಲ್ಲಿಯೇ; ’ಶಿವನಿಗಿಂತ ಶಿವಶರಣ ಮುಖ್ಯ ಎನ್ನುವ ಶರಣರ ಆಶಯ ಇಲ್ಲಿ ವ್ಯಕ್ತವಾಗಿದೆ. ಹಾಗೆ ನೋಡಿದರೆ ಇದು ನಾಸ್ತಿಕವಾದದ ಪ್ರಾರಂಭದ ಪರಿಕಲ್ಪನೆಯೇ ಆಗಿದೆ. ’ನಾನಿದ್ದರೆ ಜಗತ್ತು’ ಎಂದು ನಾಸ್ತಿಕರು ಹೇಳುತ್ತಾರೆ. ಅದನ್ನೇ ಪುರಾಣಿಕರು ಉಪಮೆಗಳ ಮೂಲಕ ಇಲ್ಲಿ ಹೇಳಿದ್ದಾರೆ. ಅಂದರೆ ಪುರಾಣಿಕರು ಆಸ್ತಿಕನೆಂದು ಹೇಳಿಕೊಳ್ಳುತ್ತಲೇ ನಾಸ್ತಿಕ ವಿಚಾರಗಳನ್ನೂ ಪ್ರತಿಪಾದಿಸುತ್ತಾರೆ. ಇವರ ವಚನದ ಅರ್ಥವ್ಯಾಪ್ತಿ ಆಸ್ತಿಕ-ನಾಸ್ತಿಕ ಚರ್ಚೆಯನ್ನು ದಾಟಿ ಮುಂದೆ ಹೋಗುತ್ತದೆ. ಮನುಷ್ಯ ಹುಟ್ಟಿದ ಮೇಲೆ ತಾನೆ ಅರ್ಥಕ್ಕೆ-ಶಬ್ದ, ನಾದಕ್ಕೆ-ವಾದ್ಯ, ಚಿತ್ರಕ್ಕೆ-ಕುಂಚ, ಶಿಲ್ಪಕ್ಕೆ-ಉಳಿ ದೊರೆತದ್ದು ಎಂದು ಹೇಳುವಲ್ಲಿ ವೈಜ್ಞಾನಿಕ ಚಿಂತನೆಯಿದೆ. ಮನುಷ್ಯ ಸಾಮರ್ಥ್ಯವನ್ನು ಅಲ್ಲಗಳೆಯುವ, ಕಾಣದ ದೇವನನ್ನು ವೈಭವೀಕರಿಸುವ ಆಸ್ತಿಕರೇ ತುಂಬಿರುವ ಸಮಾಜ ವ್ಯವಸ್ಥೆಯಲ್ಲಿ, ಪುರಾಣಿಕರು ದೇವನ ಪರಿಕಲ್ಪನೆಯನ್ನು ನಿರಾಕರಿಸದೆ, ಮನುಷ್ಯನ ಮಹತ್ವವನ್ನು ಕಟ್ಟಿಕೊಡುತ್ತಾರೆ.
ಪ್ರಕೃತಿ
ನವೋದಯ ಸಂದರ್ಭದಲ್ಲಿ ಬರವಣಿಗೆ ಪ್ರಾರಂಭಿಸಿದ ಸಿದ್ಧಯ್ಯ ಪುರಾಣಿಕರ ವಚನಗಳಲ್ಲಿ ಸಹಜವಾಗಿಯೇ ಪ್ರಕೃತಿಯ ಬಗೆಗೆ ಪ್ರಸ್ತಾಪವಿದೆ. ಶರಣರು ಸಕಲಜೀವಿಗಳಿಗೂ ಪ್ರಾಮುಖ್ಯತೆ ನೀಡಿದರು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮನುಷ್ಯ ಜೀವಕ್ಕೆ ಮಾತ್ರ ಪ್ರಾಧಾನ್ಯತೆಯಿದೆ. ಮನುಷ್ಯನ ಸಲುವಾಗಿ ಸಸ್ಯ-ಪ್ರಾಣಿ-ಪಕ್ಷಿ ಸಂಕುಲಗಳು ನಾಶವಾಗುತ್ತಲಿವೆ. ಆದರೆ ಶರಣ ಸಂಸ್ಕೃತಿಯಲ್ಲಿ ಮನುಷ್ಯನಷ್ಟೇ ಇತರ ಜೀವಿಗಳಿಗೂ ಪ್ರಾಧಾನ್ಯತೆ ಇದೆ. ಹೀಗಾಗಿ ಪಾಶ್ಚಾತ್ಯರದು ಮನುಷ್ಯ ಕೇಂದ್ರಿತ, ಅಹಂ ಪ್ರಧಾನವಿರುವ ಸಂಸ್ಕೃತಿಯಾದರೆ, ಶರಣರದು ಜೀವ ಕೇಂದ್ರಿತ, ಅಂತಃಕರಣದ ಸಂಸ್ಕೃತಿಯಾಗಿದೆ. ಕಾವ್ಯಾನಂದರು ಶರಣ ಸಂಸ್ಕೃತಿಯ ಪ್ರಭಾವಕ್ಕೊಳಗಾದವರು. ಹೀಗಾಗಿ ಅವರಲ್ಲಿ ಪ್ರಕೃತಿಯನ್ನು ಕುರಿತು ನಿಸರ್ಗವನ್ನು ಕುರಿತು, ಪಶು-ಪಕ್ಷಿ-ಪ್ರಾಣಿ ಸಂಕುಲವನ್ನು ಕುರಿತು ಆಸಕ್ತಿಯಿದೆ. ಅವರ ಅನೇಕ ವಚನಗಳಲ್ಲಿ ಈ ಪ್ರಕೃತಿ ಪ್ರೇಮ ಪರಿಸರ ಕಾಳಜಿ ಪ್ರಕಟವಾಗಿದೆ.
"ಹೂವು ತಮ್ಮದೆಯ ತೆರೆದರೆ
ಅಂದ, ಸುಗಂಧ, ಮಕರಂದಗಳ ಸುಗ್ಗಿ,
ಸಿಂಪುಗಳು ತಮ್ಮೆದೆಯ ತೆರೆದರೆ
ಮುತ್ತುಗಳು ಬರುವವು ನುಗ್ಗಿ,
ಹನುಮ ತನ್ನೆದೆಯ ತೆರೆದರೆ
ಸೀತಾ-ರಾಮರ ಚಿತ್ರ
ಇರುಳು ತನ್ನೆದೆಯ ತೆರೆದರೆ
ಕೋಟಿ ಕೋಟಿ ನಕ್ಷತ್ರ!...."

ಹೀಗೆ ಈ ವಚನ ದ್ವಿತೀಯ ಸಾಲಿನ ಅಂತ್ಯಾಕ್ಷರ ಪ್ರಾಸದ ಮೂಲಕ ಬೆಳೆದು ಕೊಂಡು ಹೋಗುತ್ತದೆ. ಹೂವಿನಿಂದ ಸುಗಂಧ, ಸಿಂಪುಗಳಿಂದ ಮುತ್ತುಗಳು, ಹನುಮನಿಂದ ಸೀತಾ-ರಾಮರು, ಇರುಳಿನಿಂದ ನಕ್ಷತ್ರಗಳು ಬಿಚ್ಚಿಕೊಳ್ಳುವ ಬಗೆಯನ್ನು ಕಾವ್ಯಾತ್ಮಕವಾಗಿ ಕಾವ್ಯಾನಂದರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಹನುಮನ ಮೂಲಕ ಸೀತಾ-ರಾಮರನ್ನು ಪರಿಚಯಿಸುವ, ಇರುಳಿನ ಮೂಲಕ ನಕ್ಷತ್ರಗಳನ್ನು ತೋರಿಸುವ ಕಾವ್ಯಾನಂದರ ಕಾವ್ಯಧೋರಣೆ ಜನಪರವಾಗಿದೆ, ಜೀವಪರವಾಗಿದೆ. ಇಂತಹ ಅನೇಕ ಸೂಕ್ಷ್ಮಗಳನ್ನು ಅವರ ವಚನಗಳಲ್ಲಿ ಕಾಣಬಹುದಾಗಿದೆ.
"ಗಿಡಗಂಟೆಗಳ ಕೊರಳೊಳಗಿಂದ ಹೊರಟಿತು ಹಕ್ಕಿಗಳ ಹಾಡು" ಎಂದು ಬೇಂದ್ರೆಯವರು ಗಿಡಗಂಟೆಗಳಿಗೆ ವ್ಯಕ್ತಿಯ ರೂಪಧಾರಣೆ ಮಾಡಿದರೆ, ಪುರಾಣಿಕರು ಬಳ್ಳಿಯ ಬಾಣಂತಿತನದ ಬಗೆಗೆ ತಮ್ಮ ವಚನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ. "ಹೂಹೆತ್ತ ಬಳ್ಳಿಯ ಬಾಣಂತಿತನ ಮಾಡುವವರಾಯ್ಯ!" ಎಂದು ಪ್ರಶ್ನಿಸಿದ್ದಾರೆ. ಕೊಯ್ಯುವರೆಂದು ಭತ್ತ ತೆನೆ ಬಿಡುವುದನ್ನು ನಿಲ್ಲಿಸುವುದಿಲ್ಲ. ಬಾಳೆಗೊನೆ ಬಿಡುವುದನ್ನು ನಿಲ್ಲಿಸುವುದಿಲ್ಲ. ಬಳ್ಳಿ ಹೂ ಬಿಡುವುದನ್ನು ನಿಲ್ಲಿಸುವುದಿಲ್ಲವೆಂದು ತಿಳಿಸುತ್ತಾರೆ. ಅದೇ ರೀತಿ ಮನುಷ್ಯರು ಕಲ್ಲಿನಿಂದ ಹೊಡೆಯುತ್ತಾರೆಂದು ಮರಫಲಬಿಡುವುದನ್ನು, ಜೇನುಹುಳ ಗೂಡಿಡುವುದನ್ನು ಹಕ್ಕಿ ಬಚ್ಚು ಕಟ್ಟುವುದನ್ನು ನಿಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಕಾವ್ಯಾನಂದರು, ನಿಸರ್ಗ ಮಾತೆಯನ್ನು ಕುರಿತು, ಆಕೆಯ ಅಂತಃಕರಣವನ್ನು ಕುರಿತು ತಮ್ಮ ಅನೇಕ ವಚನಗಳಲ್ಲಿ ಪ್ರಸ್ತಾಪ ಮಾಡಿದ್ದಾರೆ. ಮನುಷ್ಯ ಕೆಡಿಸುತ್ತ ಹೋದುದನ್ನು ನಿಸರ್ಗ ಮಾತೆ- ಸರಿಪಡಿಸುತ್ತ ಹೋಗುತ್ತಾಳೆ. ಆತ ಕಡಿಯುತ್ತ ಹೋದರೆ ಈಕೆ ಕೊನರುತ್ತಾ ನಿಲ್ಲುತ್ತಾಳೆ. ಆತ ಸುಟ್ಟು ಹಾಳು ಮಾಡಿದರೆ ಈಕೆ ಹುಟ್ಟಿಸಿ ಸಲಹುತ್ತಾಳೆ. ಆತ ತುಳಿಯುತ್ತಾ ಹೋದಲೆಲ್ಲ ಈಕೆ ಮೊಳೆಯುತ್ತ, ನಳನಳಿಸುತ್ತಾಳೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಹೇಗೆ ಪ್ರಕೃತಿಯನ್ನು ನಾಶ ಮಾಡುತ್ತಾ ನಡೆದಿದ್ದಾನೆಂದು ಅನೇಕ ಉಪಮೆಗಳ ಮೂಲಕ ತಿಳಿಸಿದ್ದಾರೆ. ಪ್ರಕೃತಿ ಕುರಿತ ಪುರಾಣಿಕರ ಧೋರಣೆಗಳು ಅಂದಿಗಿಂತಲೂ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ.
ಇಂದು ಮನುಷ್ಯ ಹಸಿರು ಕಾಡು ಕಡಿದು, ಕಾಂಕ್ರೀಟು ಕಾಡು ನಿರ್ಮಿಸುತ್ತಿದ್ದಾನೆ. ಇದನ್ನು ಪುರಾಣಿಕರು ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಮನುಷ್ಯ ನಿಸರ್ಗವನ್ನು ಕೆಡಿಸುತ್ತಾ ಹೋದಂತೆ ಅದು ಹೇಗೆ ಮತ್ತೆ ಮತ್ತೆ ಬೆಳೆದು ನಿಲ್ಲುತ್ತದೆಂಬುದನ್ನು ತಿಳಿಸಿದ್ದಾರೆ.
"ಎಲೆಯದುರಿ ಬರಿ ಮೈಯಾಗಿದ್ದರೂ
ಮತ್ತೆ ಚಿಗುರುವ ವಿಶ್ವಾಸ ಬೋಳು ಮರಗಳಿಗೆ,
ಬಿಸಿಲಿನ ಬೇಗೆಯಿಂದ ಬತ್ತಿ ಹೋಗಿದ್ದರೂ
ಮತ್ತೆ ತುಂಬಿ ಹರಿವಾಸೆ ತೊರೆಗಳಿಗೆ
ರೆಕ್ಕೆಗಳು ಉದುರುತ್ತಿದ್ದರೂ
ಮತ್ತೆ ಪಕ್ಕೆ ಪಡೆವ ನಂಬಿಕೆ ಪಕ್ಷಿಗಳಿಗೆ...!

ಚಿಂತನ-ಮಂಥನ
ಪುರಾಣಿಕ ವಚನಗಳಲ್ಲಿ ಚಿಂತನೆಗೆ ತೊಡಗಿಸುವ ಅನೇಕ ವಿಷಯಗಳು ಪ್ರಸ್ತಾಪವಾಗಿವೆ. ಆದರೆ ಈ ಚಿಂತನೆಗಳು ಯಾವುದೋ ಒಂದು ಪ್ರಗತಿಪರ ವಾದದ ಮಂಡನೆಯಾಗಿ ಅಭಿವ್ಯಕ್ತಗೊಳ್ಳದೆ, ಸಹಜವಾಗಿ ಮೂಡಿಬಂದವುಗಳಾಗಿವೆ. ಹೀಗಾಗಿ ಇಲ್ಲಿ ಹೊಸ ಸಿದ್ಧಾಂತದ, ಹೊಸ ಚಿಂತನೆಯ ಒಳ ನೋಟಗಳಿರದೆ, ಸಾಮಾನ್ಯ ಮನುಷ್ಯರ ಚಿಂತನೆಯ ಫಲಗಳು ವಚನ ರೂಪದಲ್ಲಿ ಪ್ರಕಟವಾಗಿದೆ. ಕವಿ ಆಧ್ಯಾತ್ಮದತ್ತ ಆಸಕ್ತಿವುಳ್ಳವರಾದುದರಿಂದ ಆ ಕ್ಷೇತ್ರದತ್ತ ಆಲೋಚನೆಗಳು ಗಟ್ಟಿಗೊಂಡಿವೆ.
ಆಧುನಿಕ ಬಂದಂತೆಲ್ಲ, ವೈಜ್ಞಾನಿಕ ಆವಿಷ್ಕಾರಗಳು ನಡೆದಂತೆಲ್ಲ ಸಮಾಜ ವ್ಯವಸ್ಥೆಯಲ್ಲಿ ಸಹಜವಾಗಿಯೇ ಬದಲಾವಣೆಯ ಗಾಳಿ ಬೀರುತ್ತದೆ. ಹೀಗೆ ಬದಲಾವಣೆಗೊಳ್ಳುವ ಪ್ರಕ್ರಿಯೆಯಲ್ಲಿ ಒಂದರ ಸ್ಥಾನದಲ್ಲಿ ಮತ್ತೊಂದು ಆಕ್ರಮಿಸಿಕೊಳ್ಳುತ್ತದೆ. ಬದಲಾವಣೆ ಅನಿವಾರ್ಯವೆಂದೂ ಒಪ್ಪಿಕೊಂಡರೂ ಹೊಸದನ್ನು ಅಪ್ಪಿಕೊಂಡರೂ ಕಳೆದುಹೋಗುತ್ತಿರುವ ಹಳೆಯದರ ಬಗೆಗೆ ಹಳಹಳಿಯೆನಿಸುತ್ತದೆ. ಅದನ್ನು ಕವಿ, ತರ್ಕಬದ್ಧವಾಗಿ ಹೇಳಿದ್ದಾರೆ.
"ವಿದ್ಯೆ ಬಂತು, ವಿನಯ ಹೋಯ್ತು
ಬುದ್ಧಿ ಬಂತು, ಶ್ರದ್ಧೆ ಹೋಯ್ತು
ಸಮೃದ್ಧಿ ಬಂತು, ಸಂಸ್ಕೃತಿ ಹೋಯ್ತು
ವಿಜ್ಞಾನ ಬಂತು, ಸಮಾಧಾನ ಹೋಯ್ತು
ಶರೀರ ಸ್ವಾಸ್ಥ್ಯ ಬಂತು, ಚಿತ್ತ ಸ್ವಾಸ್ಥ್ಯ ಹೋಯ್ತು
ದೀರ್ಘಾಯುಷ್ಯ ಬಂತು, ಜೀವನ ಸ್ವಾರಸ್ಯ ಹೋಯ್ತು
ಬೋಧನೆ ಬಂತು, ಸಾಧನೆ ಹೋಯ್ತು
ಮಾತು ಬಂತು, ಕೃತಿ ಹೋಯ್ತು
ಸ್ವಾತಂತ್ರ್ಯ ಬಂತು, ಸೌಜನ್ಯ ಹೋಯ್ತು
ಸಿದ್ಧಯ್ಯ ಪುರಾಣಿಕ ಬಂದ
ಸ್ವತಂತ್ರಧೀರ ಸಿದ್ಧೇಶ್ವರ ಹೋದ!

ತೀವ್ರ ಬದಲಾವಣೆಯಾಗುತ್ತಿರುವ ಜಾಗತೀಕರಣದ ಈ ಸಂದರ್ಭದಲ್ಲಿ ಈ ವಚನದ ಆಶಯ ಹೆಚ್ಚು ಪ್ರಸ್ತುತವೆನಿಸುತ್ತದೆ.
ವಿದ್ಯಾವಂತರಾಗುವುದು, ಬುದ್ಧಿವಂತರಾಗುವುದು, ವಿಜ್ಞಾನಿಗಳಾಗುವುದು ಒಳ್ಳೆಯ ಬೆಳವಣಿಗೆ. ಆದರೆ ವಿದ್ಯಾವಂತರಾದಾಕ್ಷಣ ವಿನಯವಂತಿಕೆಯನ್ನು ಕಳೆದುಕೊಳ್ಳುವುದು ತಪ್ಪು. ಇದರಿಂದ ಪಾಂಡಿತ್ಯದ ಅಹಂಭಾವ ಬೆಳೆಯುತ್ತದೆ. ಅದೇ ರೀತಿ ಬುದ್ಧಿವಂತರಾದ ತಕ್ಷಣ ಶ್ರದ್ಧೆ-ನಂಬಿಕೆಗಳನ್ನು ಬಿಟ್ಟು ಬಿಡುವುದು ಸೂಕ್ತವಾದುದಲ್ಲ. ವಿಜ್ಞಾನಿಯಾದ ತಕ್ಷಣ ಯಂತ್ರ ಜೀವನ ಸಾಗಿಸಬೇಕಾಗಿಲ್ಲ. ನಮ್ಮ ಸಂಸ್ಕೃತಿಯಲ್ಲಿರುವ ಮೌಲ್ಯಗಳನ್ನು ಬಿಟ್ಟುಕೊಟ್ಟು, ಇನ್ನೊಂದನ್ನು ಪಡೆದುಕೊಳ್ಳುವುದು ಸೂಕ್ತ ಮಾರ್ಗವಲ್ಲವೆಂದು ಕವಿ ಹೇಳಿದ್ದಾರೆ. ನಮ್ಮಲ್ಲಿರುವ ಒಳ್ಳೆಯ ಸಂಗತಿಗಳನ್ನುಳಿಸಿಕೊಂಡೇ ಹೊಸದನ್ನು ಬೆಳೆಸಿಕೊಳ್ಳುವಂತಾಗಬೇಕೆಂದು ಕಳಕಳಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ವಚನಕಾರ ಪ್ರಭಾವವನ್ನೂ ಕಾಣಬಹುದಾಗಿದೆ. "ಸಿದ್ಧಯ್ಯ ಪುರಾಣಿಕ ಬಂದ, ಸ್ವತಂತ್ರಧೀರ ಸಿದ್ಧೇಶ್ವರ ಹೋದ" ಎನ್ನುವ ಸಾಲಿನ ಮೂಲಕ ವಚನ ಮುಕ್ತಾಯವಾಗುತ್ತದೆ. ಇಲ್ಲಿ ಸಿದ್ಧಯ್ಯ ಪುರಾಣಿಕ ವ್ಯಕ್ತಿಯಾಗಿ, ಸ್ವತಂತ್ರಧೀರ ಸಿದ್ಧೇಶ್ವರ ಚೇತನವಾಗಿ-ಸಮಾಜವಾಗಿ ಕಾಣುತ್ತದೆ. ವ್ಯಕ್ತಿಗಿಂತ, ಸಮಾಜ ಅಥವಾ ಸಮುದಾಯ ಮುಖ್ಯ. ಸಮಾಜದ ಏಳ್ಗೆಗಾಗಿ, ಚೇತನದ ಚಲನಶೀಲತೆಗಾಗಿ ಎಲ್ಲ ವ್ಯಕ್ತಿಗಳು ಶ್ರಮಿಸಬೇಕಲ್ಲದೆ, ಸಮಾಜವನ್ನೇ ಕಡೆಗಣಿಸಿ ವ್ಯಕ್ತಿ ಬೆಳೆಯುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬ ಆಶಯ ಇಲ್ಲಿ ವ್ಯಕ್ತವಾಗಿದೆ.
ಪ್ರಕೃತಿಯಲ್ಲಿ ಎಲ್ಲವೂ ಇದೆ. ಆಕೃತಿಗಿಂತ ಪ್ರಕೃತಿ ದೊಡ್ಡದು, ವ್ಯಕ್ತಿಗಿಂತ ಸಮಾಜ ಮಹತ್ವದ್ದು. ಫಲ ಬಿಟ್ಟಿರುವ ರೆಂಬೆ ಬಾಗುತ್ತದೆ, ಗೊನೆ ಹೊತ್ತಿರುವ ಬಾಳೆ ಬಾಗುತ್ತದೆ. ತೆನೆ ಹೊತ್ತಿರುವ ದಂಟು ಬಾಗುತ್ತದೆ. ಏನೂ ಇಲ್ಲದ ಮನುಷ್ಯ ಬೀಗುತ್ತಾನೆಂದು ಹೇಳುವ ಮೂಲಕ ಪುರಾಣಿಕರು ಇಲ್ಲಿ ಸಮಷ್ಟೀ ಪ್ರಜ್ಞೆಯ ಮಹತ್ವವನ್ನು ಹೇಳಿದ್ದಾರೆ. ಏನೂ ಇಲ್ಲದ, ಏನೂ ಸಾಧಿಸದ ಮನುಷ್ಯ ಪ್ರಕೃತಿಯಿಂದ ಕಲಿಯುವುದು ಸಾಕಷ್ಟಿದೆ. ಇಲ್ಲಿ ಸಮಾಜವೇ ಜಂಗಮ, ಪ್ರಕೃತಿಯೇ ಚೇತನ. ಇಂತಹ ಚೇತನ ಶೀಲ ಜಂಗಮ ಪರಿಕಲ್ಪನೆಯನ್ನು ಬೆಳೆಸುತ್ತಲೇ ಸ್ಥಾವರಗಳನ್ನು ಪುರಾಣಿಕರು ವಿರೋಧಿಸಿದ್ದಾರೆ.
ಸಾಮಾಜಿಕ ವಿಡಂಬನೆ
ಪುರಾಣಿಕರಿಗೆ ಸಮಾಜದ ಬಗೆಗೆ ಜನಸಮುದಾಯದ ಬಗೆಗೆ ಅಪಾರ ಕಾಳಜಿಯಿದೆ. ಆಧುನಿಕ ವಚನಕಾರರಲ್ಲಿ ಕೆಲವರು ಬರೀ ಅಧ್ಯಾತ್ಮವನ್ನು ಹೇಳಿದರೆ, ಕೆಲವರು ಬರೀ ಸಾಮಾಜಿಕವನ್ನು ಕುರಿತು ಮಾತನಾಡಿದ್ದಾರೆ. ಆದರೆ ಪುರಾಣಿಕರು ಸಾಮಾಜಿಕ ಮೂಲಕ ಆಧ್ಯಾತ್ಮವನ್ನು ಹೇಳಿದ್ದಾರೆ. ಇದು ಈ ಕವಿಯ ವಿಶಿಷ್ಟತೆಯಾಗಿದೆ.
ಚಳವಳಿ, ಕ್ರಾಂತಿಯ ಮೂಲಕ ಈ ಸಮಾಜ ವ್ಯವಸ್ಥೆಯನ್ನೂ ಬದಲಾವಣೆ ಮಾಡಬೇಕೆಂಬ ಉದ್ದೇಶ ಈ ವಚನಕಾರನದಲ್ಲ. ಇವರು ಒಬ್ಬ ಐ.ಎ.ಎಸ್. ಅಧಿಕಾರಿಯಾಗಿದ್ದವರು. ಇಂತವರು ಸಮಾಜ ಪರಿವರ್ತನೆಯ ಬಗೆಗೆ, ಸಾಮಾಜಿಕ ಕ್ರಾಂತಿಯ ಬಗೆಗೆ ಸೈದ್ಧಾಂತಿಕವಾಗಿ ಚರ್ಚಿಸಲು ಸಾಧ್ಯವಾಗುವುದಿಲ್ಲ. ಆದರೆ ಪುರಾಣಿಕರಲ್ಲಿರುವ ಸಾಮಾಜಿಕ ಕಳಕಳಿಯ ತೀವ್ರತೆಯನ್ನು ಗಮನಿಸಲೇಬೇಕು. ಇವರು ಹೈಸ್ಕೂಲು ಓದುತ್ತಿದ್ದ ಕುಕನೂರಿನ ವಿದ್ಯಾನಂದ ಗುರುಕುಲ ಹೈಸ್ಕೂಲದಲ್ಲಿಯೇ ಆಗ ಅಸ್ಪೃಶ್ಯತಾ ನಿವಾರಣೆಯ ಬಗೆಗೆ ಕಳಕಳಿ ತೋರಿಸಿದವರು. ಇವರ ಮೇಲೆ ವಚನಕಾರರ ಜತೆಗೆ ಗಾಂಧೀಜಿ ಮತ್ತು ಹರ್ಡೇಕರ ಮಂಜಪ್ಪನಂತವರ ಪ್ರಭಾವವಾಗಿದೆ. ಹೀಗಾಗಿ ಇವರೊಬ್ಬ ದೊಡ್ಡ ಅಧಿಕಾರಿಯಾಗಿ ಎಲ್ಲ ಸವಲತ್ತುಗಳನ್ನು ಪಡೆದು ಸುಖೀಜೀವನ ನಡೆಸಿದರೂ ಇವರಿಗೆ ಬಡವರ ಬಗೆಗೆ, ಅಸ್ಪೃಶ್ಯರ ಬಗೆಗೆ, ದುಡಿದವರ ಬಗೆಗೆ ಅಪಾರವಾದ ಕಳಕಳಿಯಿದೆ, ಅಂತಃಕರಣದ ಮನಸ್ಸಿದೆ. ಹೀಗಾಗಿ ಇವರು ಸಾಮಾಜಿಕದ ಬಗೆಗೆ ಅಧಿಕೃತವಾಗಿ ಮಾತನಾಡಬಲ್ಲವರಗಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಹರಿಜನರಿಗೆ ಅನೇಕ ಮನೆಗಳನ್ನು ಸರಕಾರದ ಯೋಜನೆಗಳಿಂದ ಕಟ್ಟಿಸಿಕೊಟ್ಟಿದ್ದಾರೆ. ನಿಜಾಮರ ಆಡಳಿತದಲ್ಲಿ ಇವರು ಅಧಿಕಾರಿಗಳಾಗಿದ್ದರು. ಆಗ ಲೇವಿ ವಸೂಲಿ ಮಾಡುವ ಕಾರ್ಯ ಅಧಿಕಾರಿಗಳದಾಗಿತ್ತು. ಅಂತಹ ಸಂದರ್ಭದಲ್ಲಿ ಬಡವರ ಮನೆಗಳನ್ನು ಜಪ್ತ ಮಾಡದಂತೆ, ಬಡವರ ಪರವಾಗಿ ನಿಂತ ಅಧಿಕಾರಿಗಳಲ್ಲಿ ಪುರಾಣಿಕರೂ ಒಬ್ಬರು. ಹೀಗಾಗಿ ಈ ಕವಿಗೆ ಸಮಾಜದ ಬಗೆಗೆ ಕಳಕಳಿಯಿದೆ.
ಈ ಸಮಾಜ ವ್ಯವಸ್ಥೆಯಲ್ಲಿ ಮೂಢನಂಬಿಕೆಗಳಿರಬಾರದು. ಅಂಧ ಶ್ರದ್ಧೆಗಳಿರಬಾರದೆಂಬ ನಿಲುವು ಈ ವಚನಕಾರರದು. ಆದರೆ ಈ ಮೌಢ್ಯತೆಗೆ, ಇಲ್ಲಿಯ ಅನಕ್ಷರತೆಗೆ ಹಾಗೂ ಅಸಮಾನತೆಗೆ ಕಾರಣಗಳೇನೆಂಬುದನ್ನು ಕುರಿತು ಅವರು ಚಿಂತಿಸುವುದಿಲ್ಲ. ಹೀಗಾಗಿ ಅವರ ಸಾಮಾಜಿಕ ಕಳಕಳಿ ಮತ್ತು ಸಾಮಾಜಿಕ ವಿಡಂಬನೆ, ಸುಧಾರಣಾವಾದದ ಹಂತಕ್ಕೆ ನಿಂತುಬಿಡುತ್ತದೆ. ಆದರೂ ಸಮಾಜ ವ್ಯವಸ್ಥೆಯ ಮೇಲ್ವರ್ಗದ ಶಾಸ್ತ್ರಿ-ಪೂಜಾರಿಗಳ ಕಪಟತನವನ್ನು ಕುರಿತು ವಿಡಂಬಿಸಿರುವುದು, ಆ ಕಾಲದಲ್ಲಿ ಸ್ವಾಗತಾರ್ಹ ವಿಚಾರವೇ ಆಗಿದೆ.
"ಸಾಯುವವರೆಗೂ ಶಾಸ್ತ್ರ ಹೇಳಿದರೇನು
ಸುಳ್ಳು ಹೇಳುವುದ ಬಿಡಲಿಲ್ಲ ಶಾಸ್ತ್ರಿಗಳ ಬಾಯಿ,
ಸಾಯುವವರೆಗೆ ಪೂಜೆ ಮಾಡಿದರೇನು
ಭಕ್ತರ ಬೋಳಿಸುವುದ ಬಿಡಲಿಲ್ಲ ಪೂಜಾರಿಯ ಕೈ,
ಹಲವು ಅರಸೊತ್ತಿಗಳು ಬಂದು ಹೋದರೇನು
ಹಳ್ಳಿಗರ ಕೂಗ ಕೇಳಿರಲಿಲ್ಲ ಡಿಳ್ಳಿಯ ಕಿವಿ....."

ಇಂತಹ ವಚನಗಳ ಮೂಲಕ ಪುರಾಣಿಕರು ಸಾಮಾಜಿಕ ವಿಡಂಬನೆಗೆ ತೊಡಗುತ್ತಾರೆ. ಅವರು ಆಳುವ ವ್ಯವಸ್ಥೆಯನ್ನು ನೇರವಾಗಿ ವಿರೋಧಿಸುವುದಿಲ್ಲ. ಏಕೆಂದರೆ ಅದರಲ್ಲಿ ಅವರೂ ಒಬ್ಬ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು; ಹೀಗಾಗಿ ಅವರು ವೈದಿಕ ವ್ಯವಸ್ಥೆಯನ್ನು ಕುರಿತು ವಿಡಂಬನೆಗೆ ತೊಡುಗುತ್ತಾರೆ. ಇಂತಹ ಸಾಮಾಜಿಕ ಸುಧಾರಣೆಯ ತೇಪೆ ಕೆಲಸಗಳೂ ಕೂಡ ಆ ಕಾಲಘಟ್ಟದಲ್ಲಿ ಮುಖ್ಯವಾಗಿದ್ದವೆಂಬುದನ್ನು ಮರೆಯುವಂತಿಲ್ಲ. ಪುರಾಣಿಕರಿಂದ, ಸಮಾಜ ವ್ಯವಸ್ಥೆಯ ಬಗೆಗೆ ಪೂರ್ಣಪ್ರಮಾಣದ ಹೋರಾಟವನ್ನು ನಿರೀಕ್ಷೆ ಮಾಡದಿದ್ದರೂ ಕೂಡ, ಅವರಲ್ಲಿ ತೀವ್ರವಾಗಿದ್ದ ಸಾಮಾಜಿಕ ಕಳಕಳಿಯನ್ನು ಅಲ್ಲಗಳೆಯುವಂತಿಲ್ಲ. ಆ ಸಂದರ್ಭದಲ್ಲಿಯೇ ಅವರು ಮಠ-ಮಾನ್ಯಗಳನ್ನು ವಿರೋಧಿಸುವುದು ಇಂದಿಗೂ ಕೂಡ ಪ್ರಸ್ತುತವಾಗುತ್ತದೆ.
ಸಂಪ್ರದಾಯ-ಮೂಢನಂಬಿಕೆ
ಪುರಾಣಿಕರು ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದವರು, ಪುರಾಣಿಕರಾದುದರಿಂದ ಇವರ ಮನೆತನದಲ್ಲಿಯೇ ಅನೇಕ ಮೂಢನಂಬಿಕೆಗಳು ಮನೆಮಾಡಿದ್ದವು. ಆದರೆ ಪುರಾಣಿಕರು ಕಾವ್ಯಾನಂದರಾದ ಮೇಲೆ ತೀವ್ರತರವಾದ ಬದಲಾವಣೆಯಾಯಿತು. ಬಸವಣ್ಣನವರ ವಚನಗಳ ಓದಿನಿಂದ ಪ್ರಭಾವಿತರಾದ ಇವರು ಮೂಢನಂಬಿಕೆ-ಅಂಧಸಂಪ್ರದಾಯಗಳ ವಿರುದ್ಧ ದನಿಯೆತ್ತಿದರು. ಇದು ಪುರಾಣಿಕರ ಮನೆತನದಲ್ಲಾದ ಬಹು ಮಹತ್ವದ ಬೆಳವಣಿಗೆಯೆನ್ನಬಹುದಾಗಿದೆ. ಇವರ ಮನೆತನದ ಹಿರಿಯರೆಲ್ಲ ಮಡಿ-ಮೈಲಿಗೆ ಆಚರಿಸಿದವರೇ ಆಗಿದ್ದರು. ಜಂಗಮರ ಮನೆತನದಲ್ಲಿ ಹುಟ್ಟಿ ಮಂತ್ರ-ತಂತ್ರಗಳ ಪರಿಸರದಲ್ಲಿಯೇ ಪುರಾಣಿಕರು ಬೆಳೆದಿದ್ದರು. ಉದಗಿರಿಯ (ಮಹಾರಾಷ್ಟ್ರ) ಹಾವಗಿಸ್ವಾಮಿ ಮಠಕ್ಕೆ ಸ್ವಾಮಿಯಾಗುವಂತೆ ಪುರಾಣಿಕರಿಗೆ ಆಹ್ವಾನವೂ ಬಂದಿತ್ತು. ಇವರ ತಂದೆಯವರೂ ಕೂಡ ನಿರ್ಣಯ ತೆಗೆದುಕೊಳ್ಳುವುದನ್ನು ಪುರಾಣಿಕರ ಮೇಲೆ ಬಿಟ್ಟಿದ್ದರು. ಆಗ ಪುರಾಣಿಕರು ಸ್ವಾಮಿ ಸ್ಥಾನವನ್ನು ಖಡಾಖಂಡಿತವಾಗಿ ನಿರಾಕರಿಸಿದರು. ಅಂದು ಸಿದ್ಧಯ್ಯ, ಮಠದ ಸ್ವಾಮಿಯಾಗಿ ಹೋಗಿದ್ದರೆ, ಸಾಮಾಜಿಕ-ಕಳಕಳಿಯ ಕಾವ್ಯಾನಂದ ಹುಟ್ಟುತ್ತಿರಲಿಲ್ಲವೇನೊ ಅನಿಸುತ್ತದೆ.
ಅಂತಹ ಸಂಪ್ರದಾಯಸ್ಥ ಕುಟುಂಬದಿಂದ ಬೆಳೆದು ಬಂದ ಸಿದ್ಧಯ್ಯ ಪುರಾಣಿಕ, ಪ್ರಖರ ವಿಚಾರವಾದಿಯಾಗಿ ಬೆಳೆದು ನಿಂತರು. ಮಡಿ-ಮೈಲಿಗೆಯನ್ನು ವಿರೋಧಿಸಿದರು. ಮೂಢನಂಬಿಕೆಗಳನ್ನು ಅಲ್ಲಗಳೆದರು. ಮಠ-ಮಾನ್ಯಗಳಲ್ಲಿ ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಮೌಢ್ಯತೆಗಳನ್ನು ಕಿತ್ತೊಗೆಯುವಂತೆ ಕರೆ ನೀಡಿದರು. ಮಡಿ ಯಾವುದಯ್ಯಾ? ಮೈಲಿಗೆಯಾವುದಯ್ಯ? ತಿಳಿದು ನೋಡಿರಯ್ಯ ಎಂದು ತಿಳಿ ಹೇಳಿದರು. ಗೋವಿನ ಪೂಜೆ ಮಾಡುವುದಕ್ಕಿಂತ ಹಾವಿಗೆ ಹಾಲನ್ನೆರುವುದಕ್ಕಿಂತ ಹಸಿದ ಜೀವಿಗಳಿಗೆ ಆಶಯವೀಯಿರಯ್ಯ ಎಂದು ಸಾರಿ ಹೇಳಿದರು. ಹೀಗೆ ಮೌಢ್ಯತೆ- ಸಂಪ್ರದಾಯ ವಿರೋಧದ ಅನೇಕ ವಚನಗಳನ್ನು ಪುರಾಣಿಕರು ರಚಿಸಿದರು.
ಸತಿ-ಪತಿಭಾವ
ಸತಿ-ಪತಿ ಭಾವ ಹನ್ನೆರಡನೇ ಶತಮಾನದ ಶರಣರ ಮಹತ್ವದ ಪರಿಕಲ್ಪನೆ. ಲೌಕಿಕದ ಮೂಲಕ ಅಲೌಕಿಕವನ್ನೂ ಗುರುತಿಸುವ ಪ್ರಯತ್ನಗಳನ್ನವರು ಮಾಡಿದರು. ಇದೇ ಆದರ್ಶವನ್ನು ಒಪ್ಪಿಕೊಂಡ ಪುರಾಣಿಕರ ವಚನಗಳಲ್ಲಿ ಸತಿ-ಪತಿ ಭಾವದ ಆಶಯವಿರುವ ಅನೇಕ ರಚನೆಗಳಿವೆ. ಪುರಾಣಿಕರು ಪ್ರೇಮ-ವಿರಹದ ಭಾವನೆಗಳನ್ನು ಈ ಸತಿಪತಿ ಭಾವದ ಚೌಕಟ್ಟಿನಲ್ಲಿಯೇ ವಿಸ್ತರಿದ್ದಾರೆ. ಸ್ವತಂತ್ರಧೀರ ಸಿದ್ಧೇಶ್ವರ ಈ ಕವಿಯ ಪ್ರಿಯಕರ. ಬಸವಣ್ಣನವರ ಸತಿಪತಿ ಭಾವದ ವಚನಗಳ ನೇರ ಪ್ರಭಾವವನ್ನು ಇಲ್ಲಿ ಕಾಣಬಹುದಾಗಿದೆ.
"ನಲ್ಲ ಬರುವನೆಂಬ ಸಿಹಿ ಸುದ್ದಿ ಬಂದಿದೆ ಗೆಳತಿ, ನಂಬಲೆ ನಂಬದಿರಲೆ?" ಎಂಬಂತಹ ಸಾಲುಗಳಲ್ಲಿರುವ ತೀವ್ರತೆ ಹಾಗೂ ಕುತೂಹಲ ಗಮನಿಸುವಂತಿವೆ. "ಯಾರಿಗಾಗಿ ಮಿಂದು ಮುಡಿಯಲಿ? ಯಾರಿಗಾಗಿ ಸಿರಿಗಂಧವನ್ನು ಸವರಿಕೊಳ್ಳಲಿ?" ಎಂಬಂತಹ ನುಡಿಗಳು ಅಕ್ಕಮಹಾದೇವಿಯ ರಚನೆಗಳನ್ನು ನೆನಪಿಸುತ್ತವೆ. ಪುರಾಣಿಕರ ಕಾವ್ಯದ ಅನನ್ಯತೆಯನ್ನು ಇಂತಹ ವಚನಗಳು ಹಿಡಿದಿಟ್ಟಿವೆ.
"ಶರಣಸತಿ" ಎನ್ನುವ ಪದ ಅರ್ಥಪೂರ್ಣವಾದುದು. ಶರಣನಾಗಬೇಕಾದರೆ ತಪಸ್ಸು ಮಾಡಬೇಕಾಗಿಲ್ಲ, ಉಪವಾಸ ಇರಬೇಕಾಗಿಲ್ಲ. ಶರಣನಾಗಬೇಕಾದರೆ ಮೊದಲು ಸತಿಯಾಗಬೇಕು. ಸತಿಯೆಂದರೆ ಹೆಣ್ಣು, ಹೆಣ್ಣೆಂದರೆ ತಾಯಿ, ತಾಯಿಯೆಂದರೆ ಅಂತಃಕರಣ. ಅಂದರೆ ಸಂಪೂರ್ಣ ಅಂತಃಕರಣಿಯಾಗುವವರೆಗೆ ಶರಣ ಪಟ್ಟ ಸಿಗಲಾರದು. ಹೆಣ್ಣನ್ನೂ-ಸತಿಯನ್ನು ಆಧ್ಯಾತ್ಮ ಕ್ಷೇತ್ರದಿಂದ ಅತಿದೂರ ಇಟ್ಟಂತಹ ಕಾಲದಲ್ಲಿ ಹನ್ನೆರಡನೇ ಶತಮಾನದ ಶರಣರು ಹೊಸಕ್ರಾಂತಿಕಾರಕವಾದ ವಿಚಾರವನ್ನು ಮಂಡಿಸಿದರು. ಗಂಡಾಗಿ ಹುಟ್ಟಿದಾಗಲೇ ಮುಕ್ತಿಯೆಂದು ವೈದಿಕ ವ್ಯವಸ್ಥೆ ಸಾರಿದರೆ ಸತಿಯಾದಾಗಲೇ ಶರಣನಾಗಲು ಸಾಧ್ಯವೆಂದು ಬಸವಣ್ಣನವರು ಪ್ರತಿಪಾದಿಸಿದರು. ಬಸವಣ್ಣನವರ ನೇರ ಪ್ರಭಾವಕ್ಕೊಳಗಾಗಿರುವ ಪುರಾಣಿಕರೂ ಕೂಡ ಇದೇ ಆಶಯವನ್ನೂ ತಮ್ಮ ವಚನಗಳಲ್ಲಿ ವಿಸ್ತರಿಸಿದ್ದಾರೆ. ಅವರ ಸತಿ-ಪತಿ ಭಾವದ ವಚನಗಳು ಗಮನಿಸುವಂತಿದೆ.
ಪ್ರೀತಿಯ ಅನಂತತೆ
"ಪ್ರೀತಿ ಅನಂತವಾದುದು; ಅದರ ಅನಂತತೆಯನ್ನು ಗುರುತಿಸುವಲ್ಲಿ ಪುರಾಣಿಕರು ಯಶಸ್ವಿಯಾಗಿದ್ದಾರೆ. ಪ್ರೀತಿಯೆಂಬುದು ನಲ್ಲ-ನಲ್ಲೆಯರ, ಪ್ರಿಯಕರ-ಪ್ರೇಯಸಿಯರ ವಿಷಯಕ್ಕೆ ತಿರುಗಿದಾಗ, ಪ್ರಣಯವಾಗುತ್ತದೆ. ಅದೇ ಜೀವ-ದೇವರ ಸಂಬಂಧದಲ್ಲಿ ಅದು ಭಕ್ತಿಯಾಗುತ್ತದೆ. ಪುರಾಣಿಕರ ಪ್ರೀತಿಯ ಪರಿಕಲ್ಪನೆಯು ಪ್ರಣಯಕ್ಕೂ ಸಂಬಂಧಿಸಿದ್ದಲ್ಲ, ಭಕ್ತಿಗೂ ಸಂಬಂಧಿಸಿದ್ದಲ್ಲ. ಅವರ ಪ್ರೀತಿ ಸಮಾಜಕ್ಕೆ ಸಂಬಂಧಿಸಿದ್ದು, ಮಾನವೀಯತೆಯ ಬೆಳವಣಿಗೆಗೆ ಸಂಬಂಧಿಸಿದ್ದು, ಅದು ಅಂತಃಕರಣಕ್ಕೆ ಸಂಬಂಧಿಸಿದ್ದು, ಅಂತೆಯೇ ಪುರಾಣಿಕರ ಪ್ರೀತಿಯ ಪರಿಕಲ್ಪನೆ ಅನಂತವಾಗಿದೆ ಅದು ಅನನ್ಯವಾಗಿದೆ.
ಪ್ರೀತಿ ಮತ್ತು ನೀತಿಯನ್ನು ಅವರು ಕಸಿ ಮಾಡಿ ಕಟ್ಟುತ್ತಾರೆ. ಅವರ ದೃಷ್ಟಿಯಲ್ಲಿ ನಾಲ್ಕಾಕ್ಷರಗಳು "ಚತುರಕ್ಷರೀ ಮಂತ್ರವಾಗಿ ಕಾಣಿಸುತ್ತವೆ. ನೀತಿಯೆಂಬುದು ನಿಯಮಗಳ ಭಾರದಿಂದ, ಅವಾಸ್ತವಗಳ ಅಸಹಜತೆಯಿಂದ ಕೂಡಿರಬಾರದು ಅದು ಪ್ರೀತಿಯ ರಸದಲ್ಲಿ ಬೆಳೆದು ನಿಲ್ಲಬೇಕೆಂದವರು ಹೇಳುತ್ತಾರೆ. "ಪ್ರೀತಿಸುವ ಹೃದಯವೊಂದಿದ್ದರೆ ಎಲ್ಲ ಇದ್ದ ಹಾಗೆ, ಅದಿಲ್ಲದಿದ್ದರೆ ಎಲ್ಲ ಇದ್ದೂ ಇಲ್ಲದಂತಯ್ಯಾ! ಎಂಬ ಅವರ ವಚನಗಳ ಸಾಲುಗಳಲ್ಲಿ ಪ್ರೀತಿಯ ಮಹತ್ವವೆಂತಹದೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಪ್ರೀತಿ ಬಹುಮುಖಿಯಾದುದು, ಅದೊಂದು ಮಹತ್ವದ ಮೌಲ್ಯ. ಆ ಮೌಲ್ಯ ಬೆಳೆದಂತೆಲ್ಲ ಸಮಾಜ ಬೆಳೆಯುತ್ತದೆ. ಮಾತಿನ ಶಕ್ತಿ-ರೀತಿಯ ಶಕ್ತಿ ಎಲ್ಲ ಶಕ್ತಿಗಳಿಗಿಂತ ಪ್ರೀತಿಯ ಶಕ್ತಿ ದೊಡ್ಡದು.
ಪ್ರೀತಿಸುವವರನ್ನು ಪ್ರೀತಿಸುವವ ಮಾನವ, ಪ್ರೀತಿಸದವರನ್ನೂ ಪ್ರೀತಿಸುವವ ಮಹಾ ಮಾನವ, ದ್ವೇಷಿಸುವವರನ್ನೂ ಪ್ರೀತಿಸುವವ ದೇವ ಮಾನವ ನೋಡಯ್ಯಾ! ಎಂದು ಹೇಳುವ ಪುರಾಣಿಕರ ವಚನಗಳಲ್ಲಿ ಪ್ರೀತಿಯ ಆಳ-ಅಗಲ-ವಿಸ್ತಾರಗಳು ಸ್ಪಷ್ಟವಾಗುತ್ತವೆ. ಪ್ರೀತಿ ವಿಷಯದ ಅನಂತ ಸಾಧ್ಯತೆಗಳನ್ನು ಅವರು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಪ್ರಣಯ-ಪ್ರೇಮಗಳಿಗಿಂತ ಭಿನ್ನವಾದ ಸಾಧ್ಯತೆಗಳನ್ನು ಅವರು ತಮ್ಮ ’ಪ್ರೀತಿಯ’ ಹೊಸ ಪರಿಕಲ್ಪನೆಗಳನ್ನಾಗಿ ಕಟ್ಟಿಕೊಂಡಿದ್ದಾರೆ.
ಮಹಿಳೆ
’ಮಹಿಳೆ’ಯನ್ನು ಕುರಿತು ಅನೇಕ ವ್ಯಾಖ್ಯಾನಗಳಿವೆ. ಮಹಿಳೆಯನ್ನು ದೇವತೆಯೆಂದು ಪೂಜಿಸಿದವರಿದ್ದಾರೆ. ರಾಕ್ಷಸಿಯೆಂದು ದ್ವೇಷಿಸಿದವರಿದ್ದಾರೆ. ಹೆಣ್ಣು ತಾಯಿ, ಆಕೆ ಜೀವಕೊಟ್ಟವಳೆಂದು ಸಮೀಪ ಹೋದವರಿದ್ದಾರೆ. ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆಂದು ಹೇಳಿದವರೇ "... ಸ್ವಾತಂತ್ರಮರ್ಹತಿ" ಎಂದು ಆದೇಶ ಹೊರಡಿಸಿದವರೂ ಇದ್ದಾರೆ. ಆದರೆ ಶರಣರು ಹೆಣ್ಣಿನ ಬಗೆಗೆ ತಾಳಿದ್ದ ನಿಲುವು ಹೆಚ್ಚು ವೈಜ್ಞಾನಿಕವಾಗಿದೆ, ಮಾನವೀಯತೆಯಿಂದ ಕೂಡಿದೆ. ಶರಣರ ಪ್ರಭಾವಕ್ಕೊಳಗಾಗಿರುವ ಸಿದ್ಧಯ್ಯ ಪುರಾಣಿಕರು, ಮಹಿಳೆಯ ಬಗೆಗೆ ಅಪಾರ ಗೌರವ ಹೊಂದಿದವರಾಗಿದ್ದಾರೆ. "ಹೆಣ್ಣು ಸಹನೆಯಲ್ಲಿ ಪೃಥ್ವಿ, ಕ್ಷಮೆಯಲ್ಲಿ ಜಲ, ಕರುಣೆಯಲ್ಲಿ ಆಕಾಶ" ಎಂದು ಹೆಣ್ಣನ್ನು ವರ್ಣನಾತ್ಮಕ ರೀತಿಯಲ್ಲಿ ವ್ಯಾಖ್ಯಾನಿಸಿದ ಪುರಾಣಿಕರು ’ಸತಿ’ ತಪ್ಪಿದರೂ ಚಿತೆ ತಪ್ಪಲಿಲ್ಲ. ಈ ದೇಶದ ಸತಿಗೆ!" ಎಂದು ಕಟು ವಾಸ್ತವವನ್ನೂ ಬಿಚ್ಚಿಟ್ಟಿದ್ದಾರೆ. ಪುರಾಣಿಕರು ಹೆಣ್ಣಿನ ಬಗೆಗೆ ಪರ-ವಿರೋಧ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಸಮಾಜ ವ್ಯವಸ್ಥೆಯಲ್ಲಿ ಅವಳ ಅಸ್ಥಿತ್ವವೆಂತಹದೆಂಬುದನ್ನು ತಿಳಿಸುತ್ತ ಹೋಗುತ್ತಾರೆ.
ತಾಯಿ ದೇವರೆಂದು ನಮಿಸುವ ಗಂಡಸರೇ ಸತಿ, ಶೂದ್ರಗಳೆನ್ನುತ್ತಾರೆ. ಹೆಣ್ಣು ಮಾಯೆಯೆನ್ನುವವರು, ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟುವುದಿಲ್ಲವೆ? ಎಂದು ಪುರಾಣಿಕರು ಪ್ರಶ್ನಿಸಿದ್ದಾರೆ. ಹೆಣ್ಣಿನ ಮಹಿಮೆಯನ್ನು, ಅವಳ ಸಾಧ್ಯತೆಗಳನ್ನು ಗಂಡು ಅರ್ಥಮಾಡಿಕೊಳ್ಳಬೇಕು. ಅವಳ ವಿಮೋಚನೆಯಾಗಬೇಕು, ಮಹಿಳೆಯೂ ಕೂಡ ಪುರುಷನಿಗೆ ಸಮಸಾಟಿಯಾಗಿ ಬೆಳೆದು ನಿಲ್ಲಬೇಕೆಂದು ಪುರಾಣಿಕರು ಬಯಸುತ್ತಾರೆ. ಹೆಣ್ಣಿನ ಈ ಅಸಮಾನತೆಗೆ, ಅವರ ಶೋಷಣೆಗೆ ಕಾರಣವಾದ ಸಮಾಜ ವ್ಯವಸ್ಥೆಯ ಬಗೆಗೆ ಪುರಾಣಿಕರಲ್ಲಿ ಸಿಟ್ಟಿಲ್ಲ. ಹೀಗಾಗಿ ಅದು ಬಂಡಾಯದ ರೂಪ ಪಡೆಯುವುದಿಲ್ಲ. ಹೆಣ್ಣಿನ ಬಗೆಗೆ ಅವರಲ್ಲಿ ಅಪಾರ ಅಂತಃಕರಣವಿರುವುದರಿಂದ ಅವರು ಮಹಿಳೆಯನ್ನು ಕುರಿತು ಹೇಳಿರುವ ಮಾತುಗಳು ಗಮನಾರ್ಹವಾಗಿದೆ.
ಸಮಾರೋಪ
ಹನ್ನೆರಡನೇ ಶತಮಾನ-ಹದಿನಾರನೇ ಶತಮಾನ ಹಾಗೂ ಇಪ್ಪತ್ತನೇ ಶತಮಾನಗಳಲ್ಲಿ ರಚನೆಯಾದ ವಚನಗಳಿಗೆ ಸಂಬಂಧಿಸಿದಂತೆ ತೌಲನಿಕ ಅಧ್ಯಯನ ನಡೆಯಬೇಕಾಗಿದೆ. ಆಧುನಿಕ ವಚನಕಾರರಲ್ಲಿ ಸಿದ್ಧಯ್ಯ ಪುರಾಣಿಕರು ಮಹತ್ವದ ವಚನಕಾರರಾಗಿ ಕಾಣಿಸುತ್ತಾರೆ. ಹದಿನೈದುನೂರು ವಚನಗಳನ್ನು ರಚಿಸಿರುವ ಪುರಾಣಿಕರು ಕೇವಲ ಸಂಖ್ಯೆಯ ದೃಷ್ಟಿಯಿಂದ ಮಾತ್ರ ಗಮನ ಸೆಳೆಯದೆ ಸತ್ವದ ದೃಷ್ಟಿಯಿಂದಲೂ ಮುಖ್ಯರಾಗುತ್ತಾರೆ. ಹದಿನಾರನೇ ಶತಮಾನದ ಜೇವರ್ಗಿ ಷಣ್ಮುಖ ಶಿವಯೋಗಿಯ ವಚನಗಳಿಗೂ, ಪುರಾಣಿಕರ ವಚನಗಳಿಗೂ ಅನೇಕ-ವಿಷಯಗಳಲ್ಲಿ ಸಾಮ್ಯತೆಯನ್ನು ಕಾಣಬಹುದಾಗಿದೆ. ಜೇವರ್ಗಿ ಷಣ್ಮುಖ ಶಿವಯೋಗಿಗಳು ಮತ್ತು ಸಿದ್ಧಯ್ಯ ಪುರಾಣಿಕರು ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದವರು. ಈ ಪ್ರದೇಶದ ಧಾರ್ಮಿಕ ಆಶಯಗಳು ಇವರ ವಚನಗಳಲ್ಲಿ ಮರು ಹುಟ್ಟು ಪಡೆದಿವೆ.
ಆಧುನಿಕ ಸಂದರ್ಭದಲ್ಲಿ ವಚನಕಾರರೆಂದರೆ ಸಿದ್ಧಯ್ಯ ಪುರಾಣಿಕರು ಎಂಬುವಷ್ಟರ ಮಟ್ಟಿಗೆ ಇವರು ಗುರುತಿಸಿಕೊಂಡಿದ್ದಾರೆ. ಹೀಗೆಂದಾಕ್ಷಣ ಪುರಾಣಿಕರ ವಚನಗಳಲ್ಲಿ ಮಿತಿಗಳಿಲ್ಲವೆಂದರ್ಥವಲ್ಲ. ಅವರ ವಚನಗಳಲ್ಲಿಯೂ ಅನೇಕ ಮಿತಿಗಳಿವೆ. ಪ್ರಾಸವನ್ನು ಕಾಯ್ದುಕೊಳ್ಳುವ ಸಲುವಾಗಿಯೇ ಅನೇಕ ಪದಗಳು ವ್ಯರ್ಥವಾಗಿ ಬಂದು ಸೇರಿವೆ. ಅನೇಕ ವಚನಗಳಲ್ಲಿ ವಿಷಯ ಪುನರಾವರ್ತನೆಯಿದೆ. ಇವರ ವಚನಗಳಲ್ಲಿ ಧ್ವನಿಗಿಂತಲೂ ವಿವರಣೆ ಹೆಚ್ಚೆನಿಸುತ್ತದೆ. ಜೀವನಾನುಭವದಲ್ಲಿ ವೈವಿಧ್ಯತೆಯಿಲ್ಲ. ಒಬ್ಬ ಅಧಿಕಾರಿಯಾಗಿದ್ದ ಪುರಾಣಿಕರು ತಮ್ಮ ಸೀಮೀತ ಜೀವನಾನುಭವದ ಹಿನ್ನೆಲೆಯಲ್ಲಿಯೇ ಇಷ್ಟೊಂದು ವಚನಗಳನ್ನು ರಚಿಸಿದ್ದಾರೆ. ವಚನೋಧ್ಯಾನ, ವಚನನಂದನ, ವಚನರಾಮ-ಹೀಗೆ ಮೂರು ವಚನ ಸಂಕಲನಗಳು ಪ್ರಕಟವಾದರೂ, ಒಂದರಿಂದ ಮತ್ತೊಂದರಲ್ಲಿ ಕುತೂಹಲಕಾರಿಯಾದ ಬೆಳವಣಿಗೆಗಳು ಕಾಣಿಸುವುದಿಲ್ಲ. ಒಂದೇ ಅನುಭವವೇ ಬೇರೆ ಬೇರೆ ಸಂದರ್ಭಗಳ ಮೂಲಕ ಪ್ರಕಟವಾದುದನ್ನು ಕಾಣಬಹುದಾಗಿದೆ. ಇಂತಹ ಮಿತಿಗಳನ್ನು ಗಮನಿಸಿಯೂ ಇವರ ವಚನಗಳನ್ನು ಅಧ್ಯಯನ ಮಾಡಬೇಕಾದ ಅಗತ್ಯತೆಯಿದೆ.
ಪುರಾಣಿಕರ ವಚನಗಳಲ್ಲಿ ತೀವ್ರ ವಿಡಂಬನೆಗಿಂತ ವಿನಮ್ರವಾದ ಆತ್ಮನಿವೇದನೆಯಿದೆ. ಇವರ ಹೆಚ್ಚಿನ ವಚನಗಳಲ್ಲಿ ಈ ಆತ್ಮವಿಮರ್ಶೆಯ ವಿಚಾರ ಪ್ರಕಟವಾಗಿದೆ. ಕ್ರಾಂತಿಕಾರಿ ವಿಚಾರಗಳಿಗಿಂತ ಅಂತಃಕರಣದ ಮಾತುಗಳು ಹೆಚ್ಚಾಗಿವೆ. ಮಹಾತ್ವಾಕಾಂಕ್ಷೆಗಿಂತ ಮನಃಪರಿವರ್ತನೆಯ ಮಾರ್ಗವಿದೆ. ಮಹಾಕವಿಯ ಸಂಕೀರ್ಣ ಶೈಲಿಗಿಂತ, ಆಪ್ತಮಿತ್ರನಂತೆ ಕೈ ಹಿಡಿಯುವ ನಲ್ಮೆಯ ನುಡಿಯಿದೆ. ತನ್ನ ಬದುಕಿನ ಪುಟಗಳನ್ನು ವಿನಯದಿಂದ ತೆರೆದಿಡುವ ಸೌಜನ್ಯವಿದೆ. ಅಬ್ಬರಿಸಿ ಆರಿಹೋಗುವುದಕ್ಕಿಂತ, ಸಣ್ಣ ಮೇಣಬತ್ತಿಯ ತರಹ ತಣ್ಣಗೆ ಬೆಳಕು ನೀಡುವ ಗುಣವಿದೆ. ಈ ಎಲ್ಲ ಕಾರಣಗಳಿಂದ ಪುರಾಣಿಕರ ವಚನಗಳನ್ನು ಮತ್ತೆ ಮತ್ತೆ ಅಧ್ಯಯನ ಮಾಡಬೇಕೆನಿಸುತ್ತದೆ.
ಬದುಕಿನಲ್ಲಿ ಏನೂ ಇಲ್ಲ ಎಲ್ಲಾ ಮುಗಿದು ಹೋಯಿತು ಎಂಬ ಭಾವ ಬರುವಷ್ಟರಲ್ಲಿಯೇ, ಪ್ರಕೃತಿ ಮೈತುಂಬ ಹಸಿರುಟ್ಟು ಮೇಲೇಳುವ ಹಾಗೆ ಪುರಾಣಿಕರ ವಚನಗಳು ಅತ್ಯಂತ ಭರವಸೆಗಳ ಮೂಲಕ ಬದುಕಿನ ವಿಸ್ತಾರವನ್ನು ಹೆಚ್ಚಿಸತೊಡಗುತ್ತವೆ. ಅಲ್ಲಮನ ಅನುಭಾವ, ಬಸವಣ್ಣನ ಕಳಕಳಿ, ಅಕ್ಕನ ಅನನ್ಯತೆ-ಪುರಾಣಿಕರ ಅನೇಕ ವಚನಗಳಲ್ಲಿ ಕೂಡಿಕೊಂಡು ಬೆಳೆದಿವೆ.
ಪುರಾಣಿಕರ ವಚನಗಳ ಭಾಷೆಯಲ್ಲಿ ಹೈದ್ರಾಬಾದ ಕರ್ನಾಟಕದ ಅಸಲುತನ ಕಾಣಿಸುವುದಿಲ್ಲ. ಈ ನೆಲದ ಗಂಡು ಮೆಟ್ಟಿನ ಭಾಷೆ ಇಲ್ಲಿ ಕಾಣಸಿಗುವುದಿಲ್ಲ. ಗ್ರಾಂಥಿಕ ಭಾಷೆಯನ್ನವರು ಅನುಸರಿಸಿದ್ದಾರೆ. ಅಯ್ಯ, ಅಯ್ಯ ಎನ್ನುವಂತಹ ಪದಗಳು, ಹನ್ನೆರಡನೇ ಶತಮಾನದ ವಚನಕಾರ ಪ್ರಭಾವದ ಬೆಳವಣಿಗೆಯಾಗಿದೆ. ಧಿಮೀಗುಡುವ ಈ ಪ್ರದೇಶದ ಭಾಷೆ ಅಲ್ಲಿ ಕಾಣಿಸುವುದಿಲ್ಲ. ಆದರೆ ಅವರ ಕಾವ್ಯ ಭಾಷೆ ಸರಳವಾಗಿದೆ, ಸುಲಲಿತವಾಗಿದೆ. ಕರ್ನಾಟಕದ ಯಾವುದೇ ಪ್ರದೇಶದ ಸಾಮಾನ್ಯ ಓದುಗನೂ ಅವರ ವಚನಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ. ಅಷ್ಟೊಂದು ಸರಳತೆ, ಲಾಲಿತ್ಯ, ಅಂತ್ಯಪ್ರಾಸ ಅವರ ಭಾಷಾಶೈಲಿಯ ಆಕರ್ಷಣೆಗಳಾಗಿವೆ. ಈ ಪ್ರದೇಶದ ಹಿರಿಯ ಕವಿಗಳ ಕೃತಿಗಳನ್ನು ಹೊಸ ಬೆಳಕಿನಲ್ಲಿ ಚರ್ಚಿಸುವುದರ ಮೂಲಕ ಇಲ್ಲಿಯ ಸಾಧ್ಯತೆಗಳನ್ನು ಗುರುತಿಸಬಹುದಾಗಿದೆ.
-ಡಾ.ಬಸವರಾಜ ಸಬರದ, ಪ್ರಾಧ್ಯಾಪಕರು, ಗುಲ್ಬರ್ಗಾ

No comments:

Post a Comment