Saturday, July 3, 2010

ಅಮರ ಶಂಕರ


ಸ್ನೇಹ

ಶಂಕರ್‌ನಾಗ್ ಹೆಸರು ಕೇಳಿದಾಕ್ಷಣ ಇಂದಿಗೂ ಕನ್ನಡಿಗರಿಗೆ ಮೈ ರೋಮಾಂಚನವಾಗುತ್ತದೆ. ಶಂಕರ್‌ನಾಗ್ ನಿಧನ ಹೊಂದಿ ಮುಂದಿನ ನವೆಂಬರ್‌ಗೆ ೨೦ ವರ್ಷಗಳು ಸಂದುಹೋಗುತ್ತವೆ. ಆದರೂ ಜನಮನದಲ್ಲಿ ಶಂಕರ್ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದರೆ ಅದು ಆತನ ಪ್ರತಿಭೆಯನ್ನು ಈ ನಾಡಿನ ಜನ ಮರೆತಿಲ್ಲ ಎಂದಾಯಿತು.
ಶಂಕರ್ ತನ್ನದೇ ಆದ ಶೈಲಿಯಿಂದ ಕರ್ನಾಟಕದ ಜನರ ಮನಸ್ಸಿನಲ್ಲಿ ಗಟ್ಟಿಯಾದ ಛಾಪನ್ನು ಒತ್ತಿ ಹೋಗಿದ್ದಾರೆ. ಹಾಗೆ ನೋಡಿದರೆ ಶಂಕರ್‌ನಾಗ್ ತನ್ನ ಸುಂದರವಾದ ಮೈಕಟ್ಟಿನಿಂದ ಅಭಿಮಾನಿಗಳ ಮನಸ್ಸನ್ನು ಗೆದ್ದವರಲ್ಲ. ಏಕೆಂದರೆ ಶಂಕರ್‌ನಾಗ್ ಸ್ಫುರದ್ರೂಪಿಯಾಗಿರಲಿಲ್ಲ. ನಾಯಕನಟನಿಗೆ ಬೇಕಾದ ಚಾಕಲೇಟ್ ಮುಖಚಹರೆ ಅವರಿಗೆ ಇರಲಿಲ್ಲ. ಆದರೂ ಆಗುಪ್ಪೆ ಕೂದಲು, ದಟ್ಟವಾದ ಹುಬ್ಬು, ವಿಚ್ಚೇದನಗೊಂಡ ಜೋಲುಮೀಸೆ, ಮತ್ತು ಕುರುಚಲು ಗಡ್ಡದ ಈ ಒರಟು ವ್ಯಕ್ತಿ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಇದಕ್ಕೆ ಆವರ ತೆರೆಯ ಮೇಲಿನ ನಟನೆ ಮಾತ್ರ ಕಾರಣವಲ್ಲ, ಅವರ ಸರಳತೆ, ಸೃಜನಶೀಲ ವ್ಯಕ್ತಿತ್ವ ಮತ್ತು ಈ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಅವರ ತುಡಿತವೇ ಅವರನ್ನು ಚಿರಸ್ಥಾಯಿಯಾಗಿಸಿದೆ. ಹೀಗಾಗಿ ಇಂದಿಗೂ ತೆರೆಯ ಮೇಲೆ ಶಂಕರ್‌ನಾಗ್ ಅವರ ಕಂಠ ಕೇಳಿ ಬಂದರೆ ಅಭಿಮಾನಿಗಳು ಹರ್ಷೋದ್ಗಾರ ಮಾಡುತ್ತಾ ಸೀಳ್ಳೆ ಹೊಡೆಯುತ್ತಾರೆ. ಅಷ್ಟೇ ಅಲ್ಲ ಅವರ ಶೈಲಿಯಲ್ಲಿ ನಮ್ಮ ನಾಯಕ ನಟರು ಒಂದಲ್ಲ ಒಂದು ದೃಶ್ಯಗಳಲ್ಲಿ ವೇಗದಿಂದ ಕೈ ಬೀಸುತ್ತಾ ಶಂಕರ್ ಅನುಕರಣೆ ಮಾಡಿದಾಗಲೂ ಜನ ಚಪ್ಪಾಳೆ ಹೊಡೆಯುತ್ತಾರೆ. ಅಷ್ಟೇ ಯಾಕೆ ಇಂದಿಗೂ ಬೆಂಗಳೂರಿನ ಬಹುತೇಕ ಎಲ್ಲಾ ಆಟೋಗಳ ಹಿಂದೆ ಇದೆ ಶಂಕರ್‌ನಾಗ್ ಭಾವ ಚಿತ್ರ ರಾರಾಜಿಸುತ್ತದೆ. ೨೦ ವರ್ಷದ ನಂತರವೂ ನಟನೊಬ್ಬ ಈ ರೀತಿ ಜನಮನದ
ಹೃದಯದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ ಎಂದರೆ ಅದೊಂದು ಅಪರೂಪದ
ವಿಷಯವೇ ಸರಿ.
ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅಲ್ಪ ಸಮಯದಲ್ಲಿ ಇಷ್ಟೊಂದು ಅಪಾರ ಸಂಖ್ಯೆ ಅಭಿಮಾನಿಗಳ ಹೃದಯ ಗೆದ್ದ ಮತ್ತೊಬ್ಬ ನಟ ನಮ್ಮ ನಡುವೆ ಇಲ್ಲ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಕಾಲಿಕ ನಿಧನಕ್ಕೆ ಶಂಕರ್ ಒಳಗಾಗಿದ್ದರಿಂದಲೋ ಏನೋ ಅಂದು ನವೆಂಬರ್ ೩೦, ೧೯೯೦ ರಂದು ಶಂಕರ್ ನಿಧನ ಹೊಂದಿದಾಗ ಇಡೀ ಕರ್ನಾಟಕದ ಜನತೆ ಕಂಬನಿ ಮಿಡಿಯಿತು. ಅದು ಕನ್ನಡ ಚಿತ್ರರಂಗದ ಪಾಲಿಗೆ ಒಂದು ಕರಾಳ ದಿನವೇ ಸರಿ.
ಶಂಕರ್‌ನಾಗ್ ಬಗ್ಗೆ ಜನರಿಗೆ ಎಷ್ಟೊಂದು ಅಭಿಮಾನ ಮತ್ತು ಪ್ರೀತಿ ಇತ್ತು ಎಂದರೆ, ಎಷ್ಟೋ ಸಮಯ ಅವರ ಸಾವನ್ನು ಜನ ನಂಬಲೇ ಇಲ್ಲ. ಕೊನೆಗೆ ವಾಸ್ತವ ಸುದ್ದಿ ಗೊತ್ತಾದ ನಂತರ ಮರುಗಿದರು. ಇವರ ಬಗ್ಗೆ ಜನರಿಗೆ ಅಭಿಮಾನ ಯಾಕಿತ್ತು ಎಂಬ ಕುತೂಹಲವಾದ ಪ್ರಶ್ನೆ ಆಗಾಗ ಉದ್ಭವಿಸುವುದು ಸಹಜ. ಈತನನ್ನು ನಮ್ಮ ಜನ ಬೇರೆ ನಾಯಕ ನಟರಿಗಿಂತ ವಿಭಿನ್ನವಾಗಿ ನೋಡಿದರು ? ಇಂತಹ ಪ್ರಶ್ನೆಗಳಿಗೆಲ್ಲ ಉತ್ತರ ಸಿಗುವುದು ಕಷ್ಟ. ಆದರೂ ಒಂದು ಮಾತಂತೂ ಸತ್ಯ. ಶಂಕರ್‌ನಾಗ್ ಅವರಲ್ಲಿ ಮಹತ್ವಾಕಾಂಕ್ಷೆಯ ಕ್ರಿಯಾಶೀಲತೆಯ ಮನಸ್ಸು ಇತ್ತು. ಒಬ್ಬ ಸೃಜನಶೀಲತೆ ನಿರ್ದೇಶಕ, ಒಬ್ಬ ಶ್ರೇಷ್ಠ ಕಲಾವಿದ, ಮಿಂಚುವ ತಾರೆ, ಶ್ರೇಷ್ಠ ತಂತ್ರಜ್ಞ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಶ್ರೇಷ್ಠ ಮನುಷ್ಯ. . . . ಇವೆಲ್ಲದರ ಒಂದು ಸಂಗಮವೇ ಶಂಕರ್‌ನಾಗ್.
ಕನ್ನಡ ಚಿತ್ರರಂಗ ಅನೇಕ ಶ್ರೇಷ್ಠ ಅಭಿನಯ ಪಟುಗಳನ್ನು ಕಂಡಿದೆ. ಸೃಜನಶೀಲ ನಿರ್ದೇಶಕರನ್ನು ಈ ಗಾಂಧಿನಗರ ಹುಟ್ಟು ಹಾಕಿದೆ. ಎಲ್ಲರೂ ಬೆಚ್ಚಿ ಬೀಳುವಂತಹ ಸಾಹಸಿ ಮನೋಭಾವದ ತರುಣರನ್ನು ನಾವು ಕಂಡಿದ್ದೇವೆ. ಆಕಾಶಕ್ಕೆ ಏಣಿ ಹಾಕುವ ಕನಸುಗಾರರನ್ನು ಈ ಕನಸಿನ ಲೋಕದಲ್ಲಿ ನೋಡಿದ್ದೇವೆ. ರಾಜಕೀಯದ ಬಗ್ಗೆ ಒಲವು ವ್ಯಕ್ತಪಡಿಸಿರುವ ತಾರೆಗಳಿಗಂತೂ ಲೆಕ್ಕವೇ ಇಲ್ಲ. ಹಿಂದಿ ಚಿತ್ರರಂಗವನ್ನು ಬೆಚ್ಚಿ ಬೀಳಿಸುವ ರೀತಿಯಲ್ಲಿ ಯೋಜನೆಗಳನ್ನು ಹಾಕಿಕೊಂಡ ಉದ್ದಿಮೆಗಳು ಇದೇ ಗಾಂಧೀನಗರದಲ್ಲಿ ಗಲ್ಲಿ ಗಲ್ಲಿಗೂ ಸಿಗುತ್ತಾರೆ. ಇಲ್ಲಿ ಎಲ್ಲಾ ಅಂಶಗಳನ್ನು ಹೊಂದಿದ್ದ ಏಕೈಕ ವ್ಯಕ್ತಿ ಎಂದರೆ ಅದು ಶಂಕರ್‌ನಾಗ್ ಮಾತ್ರ.
ಶಂಕರ್‌ನಾಗ್ ವಿಶೇಷತೆ ಎಂದರೆ ಅವರು ಎಂದೂ ಪಲಾಯನ ಮಾಡಿದವರೇ ಅಲ್ಲ. ಸೋಲುಗಳಿಂದ ಜರ್ಝರಿತರಾದವರೂ ಅಲ್ಲ. ಅದರ ಬದಲಿಗೆ ಆ ಸೋಲನ್ನು ಆಹಾರವನ್ನಾಗಿಸಿಕೊಂಡು ಬೆಳೆಯುವ ಮನಸ್ಥಿತಿ ಹೊಂದಿದ್ದು, ಅವರ ಒಂದು ವಿಶೇಷ ಗುಣ.
ಒಂದು ದಿಕ್ಕಿನಲ್ಲಿ ನಿಶ್ಚಿತವಾದ ಗುರಿಯನ್ನು ಹಾಕಿಕೊಂಡು ಮತ್ತೊಂದು ದಿಕ್ಕಿನಲ್ಲಿ ಅದನ್ನು ಸಾಧಿಸುವ ಆತ್ಮವಿಶ್ವಾಸವನ್ನು ಹೊಂದಿದ್ದ ಶಂಕರ್‌ನಾಗ್ ಅನೇಕ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಒಬ್ಬ ರಾಜಕಾರಣಿ ಅಥವಾ ಅಧಿಕಾರಿಗಳಿಗಿಂತಲೂ ಹೆಚ್ಚು ಪ್ರಮಾಣದ ಪ್ರಯತ್ನವನ್ನು ಮಾಡಿದ್ದರು. ಆತ್ಮವಿಶ್ವಾಸ ಹಾಗೂ ಪ್ರಯತ್ನದ ಹಿಂದೆ ಪ್ರಾಮಾಣಿಕತೆ, ಶ್ರದ್ಧೆ, ಕ್ರಿಯಾಶೀಲತೆಗಳನ್ನು ಬಗಲಿಗೆ ಹಾಕಿಕೊಂಡು ಒಂದರ ಹಿಂದೆ ಒಂದರಂತೆ ಯೋಜನೆಗಳನ್ನು ಕೈಗೆತ್ತಿಕೊಂಡ ಶಂಕರ್‌ನಾಗ್ ಅವರ ಸಾಧನೆಯನ್ನು ಕಂಡು ಸಿನಿಮಾದವರ ಮಾತ್ರವಲ್ಲ ನಾಡಿನ ಜನತೆ ಕೂಡ ವಿಸ್ಮಯಗೊಂಡರು.
ಇದರ ಫಲವಾಗಿಯೇ ಕರ್ನಾಟಕದಲ್ಲಿ ಸ್ವಾಭಿಮಾನದ ಸಂಕೇತವಾಗಿ ಸಂಕೇತ್ ಸ್ಟುಡಿಯೋ ಸ್ಥಾಪಿಸಿದರು. ಇಂದು ಬೆಂಗಳೂರಿನ ಹೊರ ವಲಯದಲ್ಲಿ ಹಬ್ಬಿರುವ ರೆಸಾರ್ಟ್‌ಗಳಿಗೆಲ್ಲ ಶಂಕರ್ ಅಂದು ಆರಂಭಿಸಿದ ಕಂಟ್ರಿಕ್ಲಬ್ ಸ್ಫೂರ್ತಿ. ಮಾಲ್ಗುಡಿ ಡೇಸ್ ಟಿ.ವಿ. ಧಾರಾವಾಹಿ ಮುಖಾಂತರ ಶಂಕರ್‌ನಾಗ್ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದು, ಮಾತ್ರವಲ್ಲ ಆ ಕ್ಷೇತ್ರದಲ್ಲಿ ಇದ್ದ ಉತ್ತರ ಭಾರತದವರ ಪ್ರಾಬಲ್ಯಕ್ಕೆ ಒಂದು ಬ್ರೇಕ್ ಹಾಕಿದರು. ಅಷ್ಟೇ ಅಲ್ಲ ಕನ್ನಡದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ರಾಷ್ಟ್ರಮಟ್ಟದಲ್ಲಿ ಮಿಂಚಲು ಅವಕಾಶ ಮಾಡಿಕೊಟ್ಟರು. ಕರ್ಮಶಿಯಲ್ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆಯ ಜೊತೆಗೆ ಹಣವನ್ನು ಗಳಿಸಿದ ಶಂಕರ್‌ನಾಗ್ ಆತ್ಮ ತೃಪ್ತಿಗಾಗಿ ಕಲಾತ್ಮಕ ಚಿತ್ರಗಳನ್ನು ನಿರ್ಮಿಸುತ್ತಾ, ನಿರ್ದೇಶಿಸುತ್ತಾ ಮತ್ತು ಅದರಲ್ಲಿ ನಟಿಸುತ್ತಾ ತನ್ನ ಪ್ರತಿಭೆ ಪ್ರದರ್ಶಿಸಿದರು. ಅಷ್ಟಕ್ಕೆ ತೃಪ್ತಿಪಡೆಯದ ಶಂಕರ್‌ನಾಗ್ ಸಿನಿಮಾ ಗ್ಲಾಮರ್‌ನಿಂದ ಹೊರ ಬಂದು ನಾಟಕ ತಂಡ ಕಟ್ಟಿ, ರಂಗಭೂಮಿಯನ್ನು ಸಿಮಂತಗೊಳಿಸಿದರು. ರಾಮಕೃಷ್ಣ ಹೆಗಡೆ ಅವರಿಂದ ಪ್ರಭಾವಿತಗೊಂಡ ಶಂಕರ್‌ನಾಗ್ ತನ್ನ ಸಹೋದರ ಅನಂತ್‌ನಾಗ್ ಜೊತೆ ಸಕ್ರಿಯವಾಗಿ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದು, ಆ ಕಾಲದಲ್ಲಿ ಉಳಿದ ತಾರೆಯರು ಆಶ್ಚರ್ಯ ಪಡುವಂತಹ ವಿಷಯವಾಗಿತ್ತು. ಹೀಗೆ ಪಾದರಸದಂತೆ ಸದಾ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದ ಶಂಕರ್‌ನಾಗ್ ಸದಾಕಾಲ ಕನ್ನಡಿಗರ ಮನಸ್ಸಿನಲ್ಲಿ ಉಳಿಯುವಂತಾದರು.
ಶಂಕರ್ ಬರಿ ಒಬ್ಬ ಕಲಾವಿದ ಅಥವಾ ನಿರ್ದೇಶಕರಾಗಿದ್ದರೆ ಇಷ್ಟೊಂದು ಜನಪ್ರಿಯತೆ ಗಳಿಸಲು ಸಾಧ್ಯವಾಗುತ್ತಿರಲ್ಲ. ಈ ತಳಕು ಬಳಕಿನ ಬಣ್ಣದ ಲೋಕದಲ್ಲಿ ರಾರಾಜಿಸಿದರೂ ಕೂಡ ದಿನನಿತ್ಯದ ಜೀವನದಲ್ಲಿ ಸಾಮಾನ್ಯ ಮನುಷ್ಯನಂತೆ ಎಲ್ಲರೊಂದಿಗೆ ಬೆರೆತು ತನ್ನ ಸರಳತನವನ್ನು ಪ್ರದರ್ಶಿಸಿದ್ದು, ಅದಕ್ಕಿಂತ ಮುಖ್ಯವಾಗಿ ಕರ್ನಾಟಕದ ಬಡ ಜನರ ಪರವಾಗಿ ಅನೇಕ ಅನೇಕ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರಿಂದಲೇ ಸಮಸ್ತ ಕನ್ನಡಿಗರ ಪ್ರೀತಿ ಗಳಿಸಲು ಸಾಧ್ಯವಾಗಿತ್ತು. ಅದಕ್ಕೆ ೨೦ ವರ್ಷಗಳ ನಂತರ ಇಂದಿಗೂ ಶಂಕರ್‌ನಾಗ್ ಒಬ್ಬರ ಹೆಸರು ಕೇಳಿದಾಕ್ಷಣ ಅಭಿಮಾನಿಗಳು ರೋಮಾಂಚನಗೊಳ್ಳುತ್ತಾರೆ. ಕರ್ನಾಟಕದ ಜನತೆ ಆತನ ಸಾವಿಗಾಗಿ ಮರುಗುತ್ತಾರೆ. ಸಿನಿಮಾ ಜನರಂತೂ ಶಂಕರ್ ಹೆಸರು ಕೇಳಿದಾಕ್ಷಣ ಪುಳಕಿತರಾಗುತ್ತಾರೆ.
ಅಂತಹ ಮಹಾನ್ ಚೇತನಕ್ಕೆ ಇದು ನಮ್ಮ ಗೌರವರೂಪದ ಲೇಖನ.

ಮಲೆನಾಡ ಮಡಿಲಲ್ಲಿ ಮಳೆಗಾಲದಲ್ಲಿ ಎರಡು ದಿನ




೨೦೦೯ರ ಜೂನ್ ತಿಂಗಳ ಆದಿಭಾಗದಲ್ಲಿ ಮಲೆನಾಡಿನ ಕಾಡಿನಲ್ಲಿ ಚಾರಣ ಮಾಡಬೇಕೆಂದು ನನ್ನ ಮಗಳು ಬಯಸಿದಳು. ತನ್ನ ಕೆಲವು ಸಹೋದ್ಯೋಗಿ ಹುಡುಗಿಯರೊಂದಿಗೆ ಬೆಂಗಳೂರಿನಿಂದ ಹೊರಟು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಾ ತಾಲ್ಲೂಕಿನ ಜಯಪುರದ ಸುತ್ತಮುತ್ತಣ ಕಾಡುಗಳಲ್ಲಿ ಅಲೆದಾಡಬೇಕೆಂಬುದು ಅವಳ ಬಯಕೆ. ಅವಳಿಗೆ ನಾನು, "ಪುಟ್ಟೀ, ಈಗ ಮಲೆನಾಡಲಿನಲ್ಲಿ ಮಳೆ ಬೀಳ್ತಾ ಇದೆ. ಕಾಡಿನಲ್ಲಿ ಓಡಾಡುವುದು ಕಷ್ಟ. ನಕ್ಸಲೀಯರ ಕಾಟ ಬೇರೆ. ಅದಕ್ಕಿಂತ ಭಯಂಕರ ಸಂಗತಿ ಎಂದರೆ ಅವರ ಬೇಟೆಗೆ ಹೊರಟ ಪೊಲೀಸು ಪಡೆ! ಆದರೂ ಊರ ಸಮೀಪದ ಒಂದಿಷ್ಟು ಕಾಡು ತೋರಿಸ್ತೀನಿ." ಅಂದಿದ್ದೆ.
ಜಯಪುರ-ಅಗಳಗಂಡಿ ಗ್ರಾಮಗಳು ನಾನು ಓದಿದ, ಓಡಾಡಿದ ಜಾಗಗಳು. ಅಲ್ಲಿನ ಕಾಡು ಮೇಡುಗಳು, ದಾರಿಗಳು, ಜಾಗಗಳು, ಜನ-ಎಲ್ಲ ನನಗೆ ಚಿರಪರಿಚಿತ.
ನನ್ನ ಮಗಳೊಂದಿಗೆ ಮಲೆನಾಡಿಗೆ ಮೂವರು ಹುಡುಗಿಯರು ಬರುವುದೆಂದು ತೀರ್ಮಾನವಾಯಿತು. ಇವರೆಲ್ಲ ಬೆಂಗಳೂರಿನ ಹೆಸರಾಂತ ಐಟಿ ಕಂಪೆನಿಯೊಂದರ ಉದ್ಯೋಗಿಗಳು.
ನಾನು ಬಸ್ಸು ಹಿಡಿದು ರಾತ್ರಿಯ ವೇಳೆಗೆ ಜಯಪುರವನ್ನು ಸೇರಿಕೊಂಡೆ. ಅಲ್ಲಿ ನನ್ನ ಸ್ನೇಹಿತ ಶೇಷಗಿರಿಯ ಮನೆಯಲ್ಲಿ ಉಳಿದುಕೊಂಡೆ.
ನನ್ನ ಮಗಳು ಅರ್ಚನ ಮತ್ತವಳ ಸಹೋದ್ಯೋಗಿಗಳಾದ ಶ್ರೀ, ಶೀತಲ್ ಹಾಗೂ ಹೇಮಾ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ ಜಯಪುರ ತಲುಪಿದರು. ಜಿರ್ರೋ ಅಂತ ಮಳೆ ಸುರಿಯುತ್ತಿತ್ತು.
ಎಲ್ಲರೂ ತಿಂಡಿ ಮುಗಿಸಿ. ಛತ್ರಿ, ನೀರಿನ ಬಾಟಲ್, ಬಿಸ್ಕೆಟ್-ಇತ್ಯಾದಿಗಳೊಂದಿಗೆ ಹೊರಟೆವು.
ಮಕ್ಕಿಕೊಪ್ಪ ಕೈಮರ ತಲುಪಿದೆವು. ಅಲ್ಲಿಂದ ನೇರವಾಗಿ ಮುಂದೆ ಹೋದರೆ ಶೃಂಗೇರಿ ಸಿಗುತ್ತದೆ. ಎಡಕ್ಕೆ ತಿರುಗಿದರೆ ಕಳಸ. ಈ ದಾರಿಯಲ್ಲಿ ಸುಮಾರು ೩ ಕಿ.ಮೀ. ನಡೆದರೆ ಎಡಭಾಗದ ಗುಡ್ಡದಿಂದ ಧುಮ್ಮಿಕ್ಕುವ ಜಲಪಾತವೊಂದಿದೆ. ಬಲಗಡೆ ಆಳವಾದ ಕಣಿವೆಯಲ್ಲಿ ನೆಲ್ಲಿಗುಂಡಿ ಹಳ್ಳ ಹರಿಯುತ್ತದೆ. ಅದರ ಆಚೆ ಪುನಃ ಬೆಟ್ಟಗಳ ಸಾಲು. ಮುಂದೆ ಒಂದೆರಡು ಕಿ.ಮೀ. ಹೋದರೆ ಗುಡ್ಡೆತೋಟ ಎಂಬ ಹಳ್ಳಿ. ಬೆಟ್ಟಗಳ ಮೇಲೆ ಅಲ್ಲಲ್ಲೇ ಮನೆಗಳು, ಅಡಿಕೆತೋಟಗಳು-ಇದೇ ಗುಡ್ಡೆತೋಟ.
ಜಲಪಾತದ ದಾರಿ ಹಿಡಿದು ನಡೆಯತೊಡಗಿದೆವು. ಬಿಟ್ಟು ಬಿಟ್ಟು ಮಳೆ ಬರುತ್ತಿತ್ತು. ಆಕಾಶ ಪೂರ್ಣ ದಟ್ಟ ಮೋಡಗಳಿಂದಾವೃತವಾಗಿದ್ದಿತು. ಹಾಗಾಗಿ ಸೆಖೆ ಇರಲಿಲ್ಲ. ಸುಸ್ತೂ ಆಗಲಿಲ್ಲ. ಎಡಗಡೆ ಬೆಟ್ಟ-ಗುಡ್ಡ-ಕಾಡು. ಬಲಗಡೆ ಕಾಡು, ಕಣಿವೆ, ನದಿ.
ಮಳೆ ಜೋರಾಗಿ ಸುರಿಯತೊಡಗಿತ್ತು. ಛತ್ರಿಯನ್ನು ಹೇಗೆ ಹಿಡಿದುಕೊಂಡರೂ ಬಟ್ಟೆ ಒದ್ದೆ ಆಗುವಷ್ಟು ಆಗಿಯೇ ಹೋಯಿತು.
ಒಂದು ಕತೆ ಏನೆಂದರೆ ಯಾರನ್ನಾದರೂ ಎಲ್ಲಿಗಾದರೂ ಇನ್ನೆಷ್ಟು ದೂರವಿದೆ ಅಂತ ಕೇಳಿದರೆ, "ಇಲ್ಲೇ, ಒಂದು ಕಿಲೋ ಮೀಟರ್ ಅನ್ನುತ್ತಾರೆ. ಆದರೆ ನೀವು ಎರಡೂವರೆ ಕಿ.ಮೀ. ನಡೆದರೂ ಆ ಸ್ಥಳ ನಿಮ್ಮ ಕಣ್ಣಿಗೆ ಬೀಳುವುದಿಲ್ಲ! ಇದು ಮಲೆನಾಡಿನ ವೈಶಿಷ್ಟ್ಯ!
ದಾರಿಯಲ್ಲಿ ಸಿಕ್ಕುವ ಕುನ್ನೇರಳೆ ಹಣ್ಣುಗಳನ್ನು ಕಿತ್ತು ತಿನ್ನುತ್ತಾ ಮಳೆಯಲ್ಲಿ ಮುನ್ನಡೆಯತೊಡಗಿದೆವು. ಹೆಬ್ಬಲಸು, ಗೇರು, ಮತ್ತಿ- ಮುಂತಾದ ಮರಗಳನ್ನೂ ಹುಡುಗಿಯರಿಗೆ ಪರಿಚಯಿಸಿದೆ.
ಅಂತೂ ಆ ಜಲಪಾತ ಕಣ್ಣಿಗೆ ಬಿತ್ತು. ಹುಡುಗಿಯರ ಸಂಭ್ರಮ ಹೇಳತೀರದು. ಜಲಪಾತದ ಹತ್ತಿರ ನಿಂತು ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡರು. ಒಬ್ಬರಿಗೊಬ್ಬರು ನೀರೆರೆಚಾಡಿಕೊಂಡು ಖುಷಿಪಟ್ಟರು. ಸಾಕಷ್ಟು ಸಮಯ ಆ ಜಲಪಾತದ ಪದ ತಳದಲ್ಲಿ ಕಳೆದ ಮೇಲೆ ಎಲ್ಲರೂ ಹೊರಡಲನುವಾದೆವು.
ಈಗಾಗಲೇ ಸಾಕಷ್ಟು ನಡೆದ ಹುಡುಗಿಯರನ್ನು ಪುನಃ ಮಕ್ಕಿಕೊಪ್ಪದವರೆಗೆ ನಡೆಸುವುದು ತರವಲ್ಲವೆನಿಸಿತು ನನಗೆ.
ಮಳೆ ಸುರಿಯುತ್ತಲೇ ಇತ್ತು. ನಮ್ಮ ಮುಂದಿನ ಪಯಣ ಅಗಳಗಂಡಿ ಎಂಬ ಪುಟ್ಟ ಊರಿಗೆ. ಬೆಟ್ಟದ ಮೇಲೆ ಎತ್ತರದಲ್ಲಿದೆ. ಸುತ್ತಲೂ ದಟ್ಟ ಕಾಡಿನಿಂದಾವೃತವಾದ-ಸುತ್ತಮುತ್ತಲೂ ರಮ್ಯ ಗಿರಿಶೃಂಗಗಳಿಂದ ಕೂಡಿರುವ ರಮಣೀಯ ಪ್ರದೇಶ.
ಎತ್ತಿನಟ್ಟಿ ಗ್ರಾಮದ ಕಡೆಗೆ ಹೋಗುವ ರಸ್ತೆ ಹಿಡಿದು ಸ್ವಲ್ಪ ದೂರ ಹೋದರೆ ದಟ್ಟ ಅರಣ್ಯದ ನಡುವೆ ಮಾರಿಗುಡಿ ಇದೆ. ಅಲ್ಲಿಗೆ ಛತ್ರಿ ಬಿಡಿಸಿಕೊಂಡು ನಮ್ಮೆಲ್ಲರ ಪಯಣ ಮುಂದುವರಿಯಿತು. ಅಲ್ಲಿ ದೇವಿಗೆ ಎಲ್ಲರೂ ಅಡ್ಡಬಿದ್ದು ಹಣೆಗೆ ಕುಂಕುಮ ಇಟ್ಟುಕೊಂಡೆವು.
ನಂತರ ಕಾಡೊಳಗಿನ ಕಾಲುದಾರಿಯಲ್ಲಿ ಛತ್ರಿ ಹಿಡಿದು ಮುಂದೆ ಹೊರಟೆವು. ಮಳೆ ಝರ್ರೋ ಅಂತ ಸುರಿಯುತ್ತಲೇ ಇದೆ. ಇದರ ಮದ್ಯೆ ಹುಡುಗಿಯರು ತಕಥೈ, ತಕಥೈ ಅಂತ ಕುಣಿದು ಕಿರಿಚಾಡುತ್ತಿದ್ದಾರೆ!" ಮಾರೀಗುಡಿ ಎದುರಿನ ಕಾಡಿನಲ್ಲಿ ಹುಡುಗಿಯರದು ಇದೆಂಥಾ ಭರತನಾಟ್ಯವಪ್ಪಾ ಅಂತ ಆಶ್ಚರ್ಯವಾಯಿತು.
ಭರತನಾಟ್ಯವಲ್ಲ. ತಾಳಕ್ಕೆ ತಕ್ಕಂತೆಯೂ ಇವರ ಕುಣಿತ ಇರಲಿಲ್ಲ. ಇದೊಂಥರಾ ಅಡ್ಡಾದಿಡ್ಡಿ ಕುಣಿತ! ಈ ಕುಣಿತ ಇಂಬಳ (ಜಿಗಣಿ)ಗಳಿಂದ ತಪ್ಪಿಸಿಕೊಳ್ಳುವ ಕುಣಿತ! ಕಾಲಿನಲ್ಲೂ ಇಂಬಳ ಇರುವುದನ್ನು ಪತ್ತೆ ಮಾಡಿ ಕೆಲವರು ಸಮಾಧಾನಪಟ್ಟುಕೊಂಡರು. ಇಂಬಳಗಳನ್ನು ಕಾಲಿಂದ ಕೀಳುವ ಕಸರತ್ತು ನಡೆದಿತ್ತು. ಇಂಬಳಗಳು ಕಾಲಿಗೆ ಹತ್ತದ ಹಾಗೆ ನೋಡಿಕೊಳ್ಳಲು ತಕಥೈ ಪ್ರಾರಂಭವಾಗಿತ್ತು. ಒಂದು ಕೈಯಲ್ಲಿ ಛತ್ರಿ, ಇನ್ನೊಂದು ಕೈಯಲ್ಲಿ ಇಂಬಳಗಳನ್ನು ಕೀಳುವುದು. ಕಾಲಿನಿಂದ ಕಿತ್ತರೆ ಇವು ಕೈಯ್ಯನ್ನು ಹಿಡಿದುಕೊಳ್ಳುತ್ತವೆ. ಒಂದು ಕಿತ್ತರೆ ನಾಲ್ಕಾರು ಪುನಃ ಕಾಲಿಗೆ ಹತ್ತುತ್ತದೆ. ಇದೊಂಥರಾ ಮುಗಿಯದ ಕಥೆ!
ನಮ್ಮ ಕಥೆ ಏನೂ ಬೇರೆ ಥರ ಇರಲಿಲ್ಲ. ನಾವೂ ಇಂಬಳಗಳನ್ನು ಕಿತ್ತುಹಾಕುವುದರಲ್ಲಿ ಮಗ್ನರಾದೆವು.
ನಂತರ ಕೃಷ್ಣರಾವ್‌ರ ಮನೆಗೆ ಹೋಗಿ ಕೈಕಾಲು ತೊಳೆದು ಎಲ್ಲರೂ ಹರಟುತ್ತಾ ಕುಳಿತಿದ್ದೆವು. ಸ್ವಲ್ಪ ಹೊತ್ತಿಗೆ "ಎಲ್ಲರೂ ಊಟಕ್ಕೆ ಏಳಿ" ಎಂಬ ಕರೆ ಬಂದಿತು.
ಊಟಕ್ಕೆ ಕರೆಯುವುದನ್ನೇ ಕಾಯುತ್ತಿದ್ದ ಹಾಗೆ ಯಾವ ಸಂಕೋಚವೂ ಇಲ್ಲದೆ ಎಲ್ಲರೂ ಊಟದ ಮನೆ ಸೇರಿದೆವು. ಹಸಿವು ಹಾಗಿತ್ತು!
ಸಾರು, ಹರಿವೆ ದಂಟಿನ ಸಾಂಬಾರು, ದಿಂಡಿನ ಕಾಯಿ ಗೊಜ್ಜು, ಮೊಸರು, ಉಪ್ಪಿನಕಾಯಿ ಇವಿಷ್ಟು ಅಂದಿನ ಅಡುಗೆ.
ಅಡುಗೆ ರುಚಿ ಒಂದು ಬದಿಗಿರಲಿ. ಇಂದಿಗೂ ಮಲೆಯ ಮಲೆನಾಡಿಗರಲ್ಲಿ ಉಳಿದು ಬಂದಿರುವ ಅತಿಥಿಸತ್ಕಾರವು ಗಮನಿಸಬೇಕಾದಂತಹುದು.
ಶೇಷಗಿರಿಯ ಮನೆಯಲ್ಲಿ ಅಂದು ರಾತ್ರಿ-ಅಗಳಗಂಡಿಯಲ್ಲಿ ಇಂಬಳಗಳಿಗೆ ನಾವೆಲ್ಲ ನಡೆಸಿಕೊಟ್ಟ ರಕ್ತದಾನ ಶಿಬಿರದ ವರ್ಣನೆಯೇ ವರ್ಣನೆ! ಪಾಪದ ಪುಟ್ಟ ಜೀವಿಗಳಿಗೆ ತೊಟ್ಟು ರಕ್ತಕೊಟ್ಟರೆ ನಾವೇನು ಸಾಯೋದಿಲ್ಲ. ಆದರೆ, ಆ ಒಂದು ತೊಟ್ಟು ರಕ್ತವೇ ಅವುಗಳೀಗೆ ಜೀವಂತವಾಗಿರಲು ಅಗತ್ಯ!
ಹೋದಲೆಲ್ಲ ಎಡಬಲಗಳಲ್ಲಿ ದಟ್ಟವಾದ ಅರಣ್ಯ, ಕಾಫೀತೋಟಗಳು, ಎತ್ತರವಾದ ಬೆಟ್ಟಗಳ ಸಾಲು. ಆಗೊಂದು ಈಗೊಂದು ಆಟೋರಿಕ್ಷಾವೋ, ಟ್ರ್ಯಾಕ್ಟರೋ, ಜೀಪೋ ಓಡಾಡುತ್ತಿರುತ್ತವೆ. ರಿಂಯೋ, ರಿಂಯೋ, ರಿಂಯೋ ಎಂಬ "ಬಿಬ್ರಿ ಎಂಬ ಕೀಟಗಳ ಶೃತಿ ಕಾಡಿನಲ್ಲೆಲ್ಲಾ ಅನುರಣಿಸುತ್ತಿರುತ್ತದೆ. ಒಂದು ನಿಲ್ಲಿಸುವುದರೊಳಗೆ ಇನ್ನೊಂದು ಪ್ರಾರಂಭಿಸುತ್ತದೆ. ಹೀಗಾಗಿ ಈ ಶೃತಿಯು ನಿರಂತರ!ಅಖಂಡ! ಎಡೆಬಿಡದ ಮಳೆ, ನೇರವಾದ ಮಳೆಯ ಹನಿಗಳು ಮತ್ತು ಮರಗಳ ಎಲೆಗಳಿಂದ ಬೀಳುವ ದಪ್ಪ ಮಳೆಯ ಹನಿಗಳು ಛತ್ರಿಗಳ ಮೇಲೆ ತೊಪತೊಪನೆ ಬೀಳುವುದರಿಂದ ಉಂಟಾಗುವ ಶಬ್ದದಿಂದ ಒಬ್ಬರ ಮಾತು ಒಬ್ಬರಿಗೆ ಸರಿಯಾಗಿ ಕೇಳಿಸುತ್ತಿರಲಿಲ್ಲವಾದ್ದರಿಂದ ಏನಾದರೂ ಹೇಳಬೇಕಾದರೆ ಗಂಟಲಿನ ವಾಲ್ಯೂರಿ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಅದು ಟಾರು ರಸ್ತೆಯಾದ ಕಾರಣ ಜಾರುತ್ತದೆಂಬ ಭಯವಿರಲಿಲ್ಲ.
ಈ ವಿವಿಧ ಸನ್ನಿವೇಶದಲ್ಲಿ ಏರು ರಸ್ತೆಯನ್ನು ಎಷ್ಟು ಸವೆಸಿದರೂ ಟೀ ತೋಟಗಳಾಗಲೀ, ಟೀ ಫ್ಯಾಕ್ಟರಿಯಾಗಲೀ ಕಾಣಿಸಲಿಲ್ಲ. ದಾರಿಯಲ್ಲಿ ಸಿಕ್ಕಾ ಯಾರನ್ನೋ ಕೇಳೀದಾಗ, "ಇದೇ ರಸ್ತೇಲಿ ಹೋಗಿ, ೩ ಕಿ.ಮೀ. ದೂರದಲ್ಲಿ ಟೀ ಫ್ಯಾಕ್ಟರಿ ಇದೆ" ಅಂತಂದದ್ದು ನಮಗೊಂದು ಸಮಾಧಾನ, ೩ಕಿ.ಮೀ.ಗಿಂತ ಹೆಚ್ಚು ದೂರವಿಲ್ಲ ಅಂತ!
ಆದರೆ ಸುಮಾರು ೪ ಕಿ.ಮೀ. ನಡೆದರೂ ಟೀ ಫ್ಯಾಕ್ಟರಿಯ ದರ್ಶನವಾಗಲಿಲ್ಲ. ಬದಲಿಗೆ ಎಡ-ಬಲಗಳ ಇಳಿಜಾರಿನಲ್ಲಿ ಹಸಿರಿನಿಂದ ನಳನಳಿಸುವ ಟೀ ತೋಟಗಳ ದರ್ಶನವಾಯಿತು. ಬೆಟ್ಟಗಳಿಗೆ ಹಸಿರು ಶಾಲು ಹೊದ್ದಿಸಿದ ಹಾಗೆ ರಮ್ಯವಾಗಿ ಕಾಣಿಸುತ್ತದೆ. ಟೀ ತೋಟ. ಟೀ ತೋಟದ ನಡುನಡುವೆ ಅಲ್ಲೊಂದು-ಇಲ್ಲೊಂದು ಸಿಲ್ವರ್ ಓಕ್ ಅಥವಾ ನೆರಳು ನೀಡುವ ಇನ್ನಾವುದೋ ಮರವಿರುತ್ತದೆ.
ಟೀ ಗಿಡದ ಚಿಗುರನ್ನು ಬಾಯಿಗೆ ಹಾಕಿಕೊಂಡು ಅದರ ಒಗರನ್ನು ಸವಿಯುತ್ತಾ ಮುಂದೆ ಬಹಳ ದೂರ ಹೋದನಂತರ ಒಂದು ಚೆಕ್ ಪೋಸ್ಟ್ ಕಾಣಿಸಿತು. ಅಲ್ಲಿದ್ದ ಕಾವಲುಗಾರನಿಗೆ ಕೇಳಿದಾಗ, "ಇಲ್ಲೆ ಮುಂದೆ ಹೋಗಿ, ಒಂದು ಆಫೀಸು ಸಿಗುತ್ತೆ ಎಂಬ ಸೂಚನೆ ಸಿಕ್ಕಿತು.
ನಾನು ಆಫೀಸಿನೊಳಗೆ ಹೋಗಿ ಚೀಟಿ ಬರೆಸಿಕೊಂಡು ಬರಿದೆ. ನಂತರ ನಮ್ಮ ಪಯಣ ನಾಲೆಯಂತಹ ಕೊರಕಲು ದಾರಿ, ಅದರಲ್ಲಿ ಮೇಲೇರತೊಡಗಿದೆವು. ಮಳೆಯ ನೀರು ಮಣ್ಣಿನೊಡನೆ ಬೆರೆತು ಕೆಂಪಗೆ ಆ ಕೊರಕಲಿನಲ್ಲಿ ಮೇಲಿನಿಂದ ಕೆಳಕ್ಕೆ ರಭಸವಾಗಿ ಹರಿದು ಬರುತ್ತಿದ್ದುದರಿಂದ ಅದು ನಾಲೆಯ ಹಾಗೆಯೇ ಆಗಿತ್ತು. ಆ ನಾಲಾ ದಾರಿಯಲ್ಲೇ ಮೇಲೆ ಹೋದಾಗ ಸಮತಟ್ಟಾದ ಪ್ರದೇಶವೊಂದರಲ್ಲಿ ಅಗೋ ಕಂಡಿತು ಟೀ ಫ್ಯಾಕ್ಟರಿ! ಅಷ್ಟು ದೂರದಿಂದಲೇ ಚಹಾಪುಡಿಯ ಘಮಘಮ ಸುವಾಸನೆಯು ಮೂಗಿಗೆ ಹರಡುತ್ತಿತ್ತು.
ಟೀ ಫ್ಯಾಕ್ಟರಿಯನ್ನು ನೋಡಿದ ನಂತರ ಕೆಳಗಿಳಿಯತೊಡಗಿದೆವು ಸ್ವಲ್ಪ ಸಮಯದ ನಂತರ ಚೆಕ್‌ಪೋಸ್ಟ್ ಸಿಕ್ಕಿತು.
ನಂತರ ಶೇಷಗಿರಿಯ ಮನೆಗೆ ಹೋಗಿ ಊಟ ಮುಗಿಸಿದೆವು. ನಂತರ ಜಯಪುರವನ್ನು ಸುತ್ತಿಬರೋಣವೆಂದು ಹೊರಟೆವು.
ಸರಿ ಹುಡುಗಿಯರನ್ನು ಕರೆದುಕೊಂಡು ದೇವಸ್ಥಾನದ ಹಿಂದಿದ್ದ ನನ್ನ ಅಕ್ಕನ ಮನೆಗೆ ಹೋದೆವು.
ಆಮೇಲೆ ವರ್ತೆಕಲ್ಲು ಗಣಪತಿ ದೇವಸ್ಥಾನವನ್ನು ನೋಡಿಕೊಂಡು ಶೇಷಗಿರಿಯ ಮನೆಗೆ ಬಂದರೆ ಅದಾಗಲೇ ನಮ್ಮನ್ನು ತಮ್ಮ ಮನೆಗೆ ಕರೆದೊಯ್ಯಲು ಗುಡ್ಡೇತೋಟದ ಮಿತ್ರರೊಬ್ಬರು ಬಂದಿದ್ದರು. ಅವರ ಜೀಪಿನಲ್ಲಿ ನಾವೆಲ್ಲರೂ ಅವರ ಮನೆಯ್ನು ತಲುಪಿದ್ದಾಯಿತು. ಅವರ ಮನೆ ಬಹಳ ಚೆನ್ನಾಗಿದೆ, ವಿಶಾಲವಾಗಿದೆ. ಸುತ್ತಮುತ್ತಲೂ ಗುಡ್ಡಬೆಟ್ಟಗಳಿರುವ ರಮ್ಯವಾದ ಪರಿಸರದಲ್ಲಿದೆ. ಅವರ ಆತಿಥ್ಯವನ್ನು ಸ್ವೀಕರಿಸಿ ಬಸ್ ಹತ್ತಿ ಜಯಪುರ ತಲುಪಿ ನಂತರ ಬೆಂಗಳೂರಿಗೆ ಹಿಂತಿರುಗಿದೆವು.
ಹುಡುಗಿಯರಿಗೆ ಮಲೆನಾಡಿನ ಈ ಪ್ರವಾಸವು ಒಂದು ಅವಿಸ್ಮರಣೀಯ ಅನುಭವ ನೀಡಿತ್ತು. ಇದೊಂಥರಾ ಬೆಂಗ್ಳೂರ್ ಹುಡ್ಗೀರ್ ಮಲ್ನಾಡ್ ಲೈಫು!

ಜಿ.ವಿ.ಗಣೇಶಯ್ಯ

ಶಾಸ್ತ್ರ ಸಾಹಿತ್ಯಕ್ಕೆ ಸೇಡಿಯಾಪು ಕೊಡುಗೆಗಳು


ಪ್ರಸ್ತಾವನೆ
ಸಾಹಿತ್ಯ ಕ್ಷೇತ್ರದ ದಿಗ್ಗಜ ಸದೃಶ ಪಂಡಿತವರೇಣ್ಯ, ಭಾಷಾ ಕೋವಿದ, ಸರಳಜೀವಿ, ಛಂದಸ್ತತ್ತ್ವಜ್ಞ, ಸೃಜನಶೀಲ ಸಾಹಿತಿ, ವೈಯಾಕರಣ, ಸೂಕ್ಷ್ಮ ವಿಚಾರಶೀಲ, ಸತ್ಯೆತಕನಿಷ್ಠ, ತಥ್ಯೈಕ ದೃಷ್ಟಿಯ ಸತ್ಯಶ್ರದ್ದೆಯ ಗಾಂಧಿತ್ತ್ವಾನುಯಾಯಿಯಾದ, ಆಯುರ್ವೇದ ಪಂಡಿತ ಕರ್ನಾಟಕ ಸರಕಾರದ ಸರ್ವಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಮಹಾಮಾನವತಾವಾದಿ, ಅಪರೂಪದ ಮಹಾನ್ ವ್ಯಕ್ತಿಯಾದ ಸೇಡಿಯಾಪು ಕೃಷ್ಣಭಟ್ಟರು ಚಿಕಿತ್ಸಕ ಸಂಶೋಧನಾತ್ಮಕ ಮನೋವೃತ್ತಿಯ ಸಾಕಾರ ಮೂರ್ತಿಯಾಗಿದ್ದರು.
ಸೃಜನಾತ್ಮಕ ಅಸಂಖ್ಯ ಸಾಹಿತಿಗಳನ್ನು ನಮಗೆ ನೀಡಿದ ಕನ್ನಡಮ್ಮ ಸೃಜನ ಸಾಹಿತ್ಯದ ಜತೆ ಸೃಜನೇತರ ಭಾಷಾವಿಜ್ಞಾನ, ವ್ಯಾಕರಣಶಾಸ್ತ್ರ, ಛಂದಶಾಸ್ತ್ರಗಳಂತಹ ಕ್ಲಿಷ್ಟ-ಕಷ್ಟ ವಿಭಾಗಗಳಲ್ಲಿಯೂ ಸರ್ವಶ್ರೇಷ್ಠತೆಯನ್ನೇ ಮೆರೆದ ಶ್ರೀ ಸೇಡಿಯಾಪುರವರಂತಹ ಅಪರೂಪದ ಮಗುವನ್ನು ನಮಗೆ ನೀಡಿದ್ದಾರೆ.
ವ್ಯಕ್ತಿತ್ವ
ಕೇವಲ ಅಂಕೆ ಸಂಖ್ಯೆ, ಗಾತ್ರ ಪ್ರಮಾಣಗಳಿಂದ ಯೋಗ್ಯತೆಯನ್ನು, ಸಾಧನೆಯನ್ನು ತೃಣಮಾನ ನ್ಯಾಯಕ್ಕಿಂತ ಗುಣಾತ್ಮಕ ಮೌಲ್ಯಾಧಾರಿತ ಉತ್ಕೃಷ್ಟ ಸಾಹಿತ್ಯದ ಭಾರ ತುಂಬಾ ಶ್ರೇಷ್ಠವಾದದ್ದೆಂದು ರುಜುವಾತು ಪಡಿಸಿದ ಸತ್ಯ ಸಂಶೋಧಕರೇ ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಅವರೆಂದಂತೆ
ಹೆಚ್ಚು ಬರೆದವನಲ್ಲ
ನಿಚ್ಚ ಬರೆದವನಲ್ಲ
ಮೆಚ್ಚಿಸಲು ಬರೆಯುವ ಅಭ್ಯಾಸವಿಲ್ಲ
ಇಚ್ಚೆಗೆದೆಯೊಪ್ಪಿ ಬಗೆ
ಬಿಚ್ಚಿದರೆ ಕಣ್ಗೆ ಮೈ
ಎಚ್ಚುವಂದದಿ ತೀಡಿ ತಿದ್ದಿ ಬರೆವೆ

ಬರಿಯ ಪೇಜುಗಳನ್ನು ತುಂಬಿಸಲು ಸಂಖ್ಯೆಗಳನ್ನು ಸಂವರ್ಧಿಸಲು ಹೆಸರು, ಬಿರುದು-ಬಾವಲಿ, ಕೀರ್ತಿ ಬಾವುಟಗಳ ಎತ್ತರೆತ್ತರ ಹಾರಿಸುವ ಉದ್ದೇಶದಿಂದ ಎಂದೂ ಅವರು ಬರೆದವರಲ್ಲ. ಏನೂ ಹೊಸ ವಿಷಯಗಳಿಲ್ಲದ, ಬರಿಯ ಚರ್ವಿತಚರ್ವಣವೆನಿಸುವ, ಸಮಾಜಕ್ಕೆ ಏನನ್ನೂ ಹೊಸದಾದ ವಿಷಯವನ್ನೂ ನೀಡದ ಬರಿಯ ಸಂಖ್ಯಾ ಬಾಹುಲ್ಯದ ಲೇಖನ, ವಿಷಯ, ಗ್ರಂಥಗಳನ್ನು ಅವರೆಂದೂ ಬರೆದವರಲ್ಲ. ಹಾಗೆಯೇ ಏನೋ ತಲೆಯಲ್ಲಿ ಬಂತು, ಗೀಚಿ ಬಿಟ್ಟೆ, ಆದರೆ ಇದರಲ್ಲಿ ತುಂಬಾ ಅರ್ಥಗಳಿವೆ (ಬರೆದವರಿಗೂ-ಓದುಗರಿಗೂ ಅರ್ಥವೇ ಆಗದ) ಎಂದು ಏನೋ ಗೀಚಿ ಗರಿಮೆ ಮೆರೆಯುವ ಚಪಲ ಚಾಂಚಲ್ಯ ಅವರಲ್ಲಿ ಇಲ್ಲವೇ ಇಲ್ಲ. ಅವರ ಎಲ್ಲಾ ಲೇಖನಗಳೂ ಅಪರೂಪದವೇ ಅಪೂರ್ವವಾದುದೇ, ಪ್ರತಿಯೊಂದರ ಹಿಂದೆಯೂ ೫೦-೬೦ವರ್ಷಗಳ ಸತತ ಚಿಂತನ-ಮಂಥನ, ಆಳವಾದ ಅಧ್ಯಯನ ಮತ್ತು ಆಲೋಚನೆ ತುಳುಕುತ್ತಿರುತ್ತದೆ. ಪ್ರತಿಯೊಂದು ವಿಷಯವೂ ಶಾಸ್ತ್ರಾಧಾರಿತವೇ, ಶಾಸ್ತ್ರವೇ ಸಂಶೋಧನಾತ್ಮಕವೇ ಆಗಿವೆ.
ಹಳತು ಹೊಸದರ ಮೇಳ
ಹೊಳೆವ ಹಿರಿಹೊನ್ನು
ಎಂದೇ ನಂಬಿದ ಸೇಡಿಯಾಪು ಹಳೆದೆಲ್ಲವನ್ನೂ ಅತಿಯಾಗಿ ಹೊಗಳುವಂಥ ಸಂಪ್ರದಾಯವಾದಿಯಾಗಲೀ ಹಳೆದೆಲ್ಲ ಬರಿ ಕಳಪೆ ಎಂದಾಗಲೀ, ಹೊಸದೆಲ್ಲ ಹೊನ್ನೆಂಬ ಮೌಢ್ಯ ಮೆರೆದವರಾಗಲಿ, ಹಳೆಯ ಪರಂಪರೆಯ ತಥ್ಯವನ್ನು ಕಾಣ್ಕೆಯನ್ನು ಹೊಸಯುಗದ ಬೇಕುಗಳಿಗನುಗುಣವಾಗಿ ಅರ್ಥೈಸುವ, ವಿಶದೀಕರಿಸುವ ವಿಶಿಷ್ಟ ಗುಣವನ್ನು ಅವರು ಮೆರೆದಿದ್ದಾರೆ. ಹಳತು ಹೊಸದರ ಮೇಳ, ಎಸೆವ ಹೊನ್ನೆಂದು ನಂಬಿದ ಅವರು ಹಳೆಯ ಬೇರು, ಹೊಸ ಚಿಗುರುಗಳ ಸಂಕೇತವಾಗಿ, ಎರಡೂ ಕಾಲ-ಕಾಣ್ಕೆಗಳ ಸೇತುವಾಗಿ ಮೆರೆದಿದ್ದಾರೆ. ಪಂಡಿತ ಪರಂಪರೆಯ ಪ್ರಬಲ ಕೊಂಡಿ, ಪ್ರಧಾನಕೊಂಡಿಯಾದ ಶ್ರೀ ಸೇಡಿಯಾಪು ಅವರನ್ನು ಕುರಿತು ಸ್ವತಃ ಡಾ.ಶಿವರಾಮ ಕಾರಂತರ ಶ್ಲಾಘನೆ, ಪಂಡಿತರೆಂದರೆ ಹೀಗಿರಬೇಕು ಎಂದು ಬೆರಳೆತ್ತಿ ತೋರಿಸುವುದಾದರೆ, ಅದು ಸೇಡಿಯಾಪು ಅವರನ್ನು ನಿಜಕ್ಕೂ ಸಾರ್ವಕಾಲಿಕ ಸತ್ಯವೇ ಸರಿ. ಬರಿಯ ಪಾಂಡಿತ್ಯವಲ್ಲ, ಜತೆಯಲ್ಲಿ ಅದರ ಅಪೂರ್ವ ಲಕ್ಷಣಗಳಾದ ನಿಗರ್ವಿತನ, ಸಜ್ಜನಿಕೆ, ಸರಳತೆ, ಸರಳತೆಯ ಪ್ರಾಮಾಣಿಕತೆ, ಉತ್ತುಂಗ ವ್ಯಕ್ತಿತ್ವ, ಸಂತತ ಚಿಂತನ-ಮಂಥನ ಮನೋವೃತ್ತಿ, ತಳಸ್ಪರ್ಶಿ ಅಧ್ಯಯನ ತಥೈಕ ದೃಷ್ಟಿ, ಸತ್ಯಶ್ರದ್ಧೆ, ದೈವಶ್ರದ್ಧೆ, ತೀಡಿ ತಿದ್ದಿದ ಬರಹ, ಸಮೃತ ದೃಷ್ಟಿ-ಜೀವನ, ಬರಹ, ವ್ಯಕ್ತಿತ್ವಗಳಲ್ಲಿ ಸಾಕಾರತ್ವ ಇವು ಅವರನ್ನು ಪಂಡಿತ ಶ್ರೇಷ್ಠರನ್ನಾಗಿಸಿದುವು.
ಸಮದರ್ಶಿ ಸೇಡಿಯಾಪುರವರು ಸ್ಫಟಿಕಶುಭ್ರ ಆಚ್ಛೋದನಿರ್ಮಲ ವ್ಯಕ್ತಿತ್ವವನ್ನು ಹೊಂದಿದವರಾಗಿ ತಮ್ಮ ಜೀವನ-ಭಾವನೆ-ಬದುಕು ಬರೆಹಗಳೆರಡರಲ್ಲೂ ಸಂಪೂರ್ಣ ಶುದ್ಧ, ಸ್ವತಂತ್ರ, ಪ್ರತ್ಯೇಕ ನಡೆನುಡಿಗಳನ್ನೇ ಅಳವಡಿಸಿಕೊಂಡು ಬಂದವರು. ಪರಿಪರಿವಾದೇ ಮೂಕಃ-ಎನ್ನುವ ಮಹಾಪುರುಷರ ಆದರ್ಶವನ್ನು ಆಚರಣೆಯಲ್ಲಿ ತಂದ ಸೇಡಿಯಾಪು ಎಂದೂ ಇತರರನ್ನು ನಿಂದಿಸಿಲ್ಲ, ಇತರರನ್ನು ನಿಂದಿಸುವವರ ಮುಂದೆಯೂ ಮೂಕವೇದನೆಗೊಳಗಾದವರು. ಆದರೆ, ನಿಜವಾಗಿ ತನ್ನದೇನಾದರೂ ಪ್ರಮಾದವಾದಲ್ಲಿ ಅದನ್ನು ದೈನ್ಯಭಾವನೆಯಿಂದ ಸರಿಪಡಿಸಿಕೊಂಡವರು. ಅನಗತ್ಯವಾಗಿ ಬೇಕೆಂದೋ, ಅಜ್ಞಾನ, ಅಲ್ಪಜ್ಞಾನದಿಂದಲೋ, ತಮ್ಮ ಆಳವಾದ ಅಧ್ಯಯನ ಫಲಶ್ರುತಿಯ ವಿಷಯವನ್ನು, ಟೀಕಿಸಿದಾಗ ಎಂದೂ ಸಹಿಸಿಕೊಂಡವರಲ್ಲ. ಸರಳ ನಡೆಯ, ನೇರ ನುಡಿಯ ಸೇಡಿಯಾಪು ಅವರು ಎಂದೂ ಹಿಂದೆ ಮುಂದೆ ಆಲೋಚಿಸದೇ, ಒಮ್ಮೆಲೇ ಮನಸ್ಸಿಗೆ ಬಂತೆಂದು ಬರೆದು ಮುಗಿಸಿದವರಲ್ಲ. ಎಲ್ಲವನ್ನೂ ದೀರ್ಘಾವಧಿಯ ಆಲೋಚನೆ, ಚಿಂತನ-ಮಂಥನದ ಅನಂತರವೇ ಬರೆಯುವುದು, ಬರೆಯುವಾಗಲೂ ತೀಡಿ-ತಿದ್ದಿ ಬರೆದವುಗಳಾಗಿ, ಬರೆದುದು ಕಮ್ಮಿ ಸಂಖ್ಯೆಯದಾಗಲು, ಆದರೆ ಬರೆದುದೆಲ್ಲವೂ ಅಪ್ಪಟ ಚಿನ್ನವಾಗಿಯೂ ಹೊರಬರುವಂತಾಯಿತು. ಅವರ ವ್ಯಕ್ತಿತ್ವ ಸ್ಫಟಿಕ ಶುಭ್ರ, ಆಚ್ಛೋದ ನಿರ್ಮಲ, ಸರಳ ನಡೆ-ನುಡಿಯ ಸಮದರ್ಶಿತ್ವ ಎಲ್ಲವೂ ಅಹುದಹುದೆನಿಸಿದರೂ, ಅವರ ನೈಜ ವ್ಯಕ್ತಿತ್ವ ಇವೆಲ್ಲವನ್ನೂ ಸೇರಿಸಿ, ಇವಕ್ಕೂ ಮಿಗಿಲಾದ ವಿಶೇಷ, ವಿಶಿಷ್ಟ, ಅನುಪಮೇಯ ವ್ಯಕ್ತಿತ್ವ ಎನ್ನುವುದು ಅವರ ನೇರ ಸಂಪರ್ಕಕ್ಕೆ ಬಂದವರ ಅಭಿಪ್ರಾಯ ಎನ್ನುವುದು ನೂರಕ್ಕೆ ನೂರು ಸತ್ಯ ಎನ್ನುವುದು ಅವರ ಬದುಕು-ಬರಹಗಳ ಆಳ ಅಧ್ಯಯನದಿಂದ ಅರಿವಾಗುತ್ತದೆ.
ಶಾಸ್ತ್ರ ಸಾಹಿತ್ಯ
ನಮ್ಮಲ್ಲಿ ಅಸಂಖ್ಯ ಮಹಾ ಮಹಾ ಕವಿಗಳು, ಕತೆಗಾರರು, ಕಾದಂಬರಿಕಾರರು ನಾಟಕಕಾರರು ಆಗಿ ಹೋಗಿದ್ದಾರೆ. ಆದರೆ, ಇವೆಲ್ಲವುಗಳ ಜತೆ, ಇವೆಲ್ಲವುಗಳನ್ನು ಮೀರಿ, ಇವೆಲ್ಲವುಗಳಿಗಿಂತ ಬಲು ಕಷ್ಟವೂ, ಕ್ಲಿಷ್ಟವೂ ಆದ ಶಾಸ್ತ್ರ ಮತ್ತು ಸಂಶೋಧನ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ಕೊಟ್ಟವರೆಂದರೆ ಶ್ರೀ ಸೇಡಿಯಾಪು ಕೃಷ್ಣ ಭಟ್ಟರೇ ಸರಿ. ಅದಕ್ಕೆಂತಲೇ, ಯಾರನ್ನೂ ಹೊಗಳಿರಲಾರದ ಡಾ.ಶಿವರಾಮ ಕಾರಂತರೂ ಸಹ ಮುಕ್ತ ಕಂಠದಿಂದ ಪಂಡಿತರೆಂದರೆ ಹೇಗಿರಬೇಕೆಂದು ಯಾರನ್ನಾದರೂ ಬೆರಳೆತ್ತಿ ತೋರಿಸುವುದಾದರೆ (ನಾನು), ಅದು ಸೇಡಿಯಾಪು ಅವರನ್ನು ಎಂದು ಹೊಗಳಿದರೆಂದರೆ, ಸೃಜನೇತರ ಸಾಹಿತ್ಯದಲ್ಲೂ ಅವರ ಕೊಡುಗೆ ಕಡಿಮೆಯೇನಲ್ಲ, ಅದೂ ಅಮೂಲ್ಯವಾದುದೇ, ಅವರು ಬರೆದುದು ಒಟ್ಟೂ ೭೪ ಬಿಡಿ ಲೇಖನಗಳು, ಒಂದು ಕಥಾ ಸಂಕಲನ, ಕವನಸಂಕಲನ, ಹೀಗೆ ಗಾತ್ರ-ಪ್ರಮಾಣ ಲೆಕ್ಕ ಹಾಕಿದರೂ, ಅದು ಮೌಲ್ಯದ ದೃಷ್ಟಿಯಿಂದ ಏಕಂ ಕೋಟರ್ಭವಿಷ್ಯತಿ ಎಂದಂತೆಯೇ ಅವೆಲ್ಲವೂ ಅಪ್ಪಟ ಚಿನ್ನ, ಚೊಕ್ಕ ಹೊನ್ನು, ಆದರೂ ಹಲವಾರು ಅವರನ್ನು ಕತೆಗಾರ, ಕವಿ ಹೀಗೆಲ್ಲ ಗುರುತಿಸುವುದಕ್ಕಿಂತ ಅಧಿಕವಾಗಿ ಅವರೊಬ್ಬ ಶಾಸ್ತ್ರಜ್ಞ-ಛಂದಶಾಸ್ತ್ರಜ್ಞ, ವ್ಯಾಕರಣತಜ್ಞ, ಭಾಷಾತಜ್ಞ-ಭಾಷಾವಿಜ್ಞಾನಿ ಎಂದು ಗುರುತಿಸಿರಲು, ಆ ರಂಗದಲ್ಲಿಯೂ ಅವರ ಅಮೂಲ್ಯ ಕಾಣಿಕೆ, ಅದು ಅಪೂರ್ವ ಅನುಪಮೇಯ, ವಿರಳ ಕೊಡುಗೆಯಾದ್ದರಿಂದಲೇ.
ಪಂಚಮಿ ವಿಭಕ್ತಿ
ಸೇಡಿಯಾಪುರವರು ವ್ಯಾಕರಣ ತಜ್ಞರೆಂದು ಗುರುತಿಸಲ್ಪಟ್ಟಿದ್ದು, ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ೧೯೪೪ರಲ್ಲಿ ಪ್ರಕಟವಾದ ಅವರ ಪಂಚಮಿ ವಿಭಕ್ತಿ ಎನ್ನುವ ಲೇಖನದಿಂದ ನವಯುಗದ ವೈಕಾರಣರು ಈ ಕನ್ನಡಕ್ಕೆ ಪ್ರತ್ಯೇಕ ಪಂಚಮಿ ವಿಭಕ್ತಿ ಪ್ರತ್ಯಯವಿಲ್ಲವೆಂದು, ತೃತೀಯಾ ಪ್ರತ್ಯಯವಾಗಿ ತೋರುವುದೆಂದು ವಾದಿಸಿದ್ದರು. ಇದನ್ನು ಸಾಧಾರಣವಾಗಿ ಖಂಡಿಸಿ ಕನ್ನಡದಲ್ಲಿ ನಿಜವಾಗಿ ಇರುವುದು ಪಂಚಮಿ ವಿಭಕ್ತಿ ಪ್ರತ್ಯಯವೆಂದೂ ತೃತೀಯೆಗೆ ಪ್ರತ್ಯೇಕ ಪ್ರತ್ಯಯವಿರದೇ, ಪಂಚಮಿ ಪ್ರತ್ಯೇಕ ಪ್ರತ್ಯಯವಿರದೇ, ಪಂಚಮಿ ಪ್ರತ್ಯಯವೇ ಒಮ್ಮೆ ತೃತೀಯಾ ಆಗಿಯೂ, ಕೆಲವೊಮ್ಮೆ ಸಪ್ತಮಿಯನ್ನೂ ಅವಲಂಬಿಸುವುದೆಂದೂ, ವಿದ್ವಾಂಸರಿಗೆ ಅರಿವಾಗುವಂತೆ, ಮಾನ್ಯವಾಗುವಂತೆ, ಪ್ರತಿಪಾದಿಸಿದವರೇ ಸೇಡಿಯಾಪು ಅವರು. ಇದಮಿತ್ಥಂ ಎಂದು ಎಲ್ಲ ವಿದ್ವಾಂಸರು ಇದನ್ನು ಸಂಪೂರ್ಣ ಒಪ್ಪುವ ಮಟ್ಟಕ್ಕೆ ಬರಲಾಗದಿದ್ದರೂ, ಈ ವಾದವನ್ನು ತಳ್ಳಿ ಹಾಕುವ ಅಥವಾ ಇದನ್ನು ಗಮನಿಸದೇ ಮುಂದುವರಿಯುವ ಮಟ್ಟಕ್ಕೆ ಯಾರೂ ಹೋಗಲಾರದ್ದೂ ಇದರ ಮಹತ್ವವನ್ನು ಮೆರೆಯುತ್ತದೆ.
ವರ್ಣಗಳು
ಹಾಗೆಯೇ ೧೪೪೯-೫೦ರಲ್ಲಿ ಕನ್ನಡ ವ್ಯಾಕರಣದ ಕೆಲವು ಸಮಸ್ಯೆಗಳು ಎನ್ನುವ ವಿಷಯ ಕುರಿತು ಕರ್ನಾಟಕ ವಿವಿಯ ಕನ್ನಡ ಸಂಶೋಧನಾ ಸಂಸ್ಥೆಯಲ್ಲಿ ಸೇಡಿಯಾಪುರವರು ಮಾಡಿದ ಕನ್ನಡ ವರ್ಣಗಳು ಎನ್ನುವ ಅಮೂಲ್ಯ ಉಪನ್ಯಾಸ ಮುಂದೆ ೧೯೫೫ರಲ್ಲಿ ಕನ್ನಡ ವರ್ಣಗಳು ಎನ್ನುವ ಗ್ರಂಥ ರೂಪದಲ್ಲಿ ಹೊರಬಂದಿದ್ದೂ ನಿಜವಾಗಿ ಕನ್ನಡಶಾಸ್ತ್ರ ಸಾಹಿತ್ಯ ವ್ಯಾಕರಣ ಕ್ಷೇತ್ರಕ್ಕೆ ಒಂದು ಅಮೂಲ್ಯ ಕೊಡುಗೆಯೇ ಸರಿ. ಈ ಕನ್ನಡ ವರ್ಣಗಳು ಗ್ರಂಥಗಳು ತನ್ನ ಮೊದಲಭಾಗ ಪೀಠಿಕಾ ಪ್ರಕರಣವನ್ನು ಭಾಷಾವಿಜ್ಞಾನ ವ್ಯಾಕರಣ, ನವೀನರ ಪ್ರಯತ್ನಗಳು, ಹಳೆಗನ್ನಡದಲ್ಲಿ ತುಲನಾತ್ಮಕ ವಿಚಾರಗಳು-ಮೊದಲಾದವು ಅಲಂಕರಿಸಿವೆ-ಸ್ವರಪ್ರಕರಣವಾದ ಎರಡನೇ ಪ್ರಕರಣವು, ಕೈಮೈ ಸಾಧುರೂಪ, ಆಯ್, ಎಯ್ ವಿವೇಚನೆಗಳನ್ನು ಒಳಗೊಂಡಿದೆ. ಮೂರನೇಯದಾದ ವ್ಯಂಜನ ವಿಭಾಗದಲ್ಲಿ ಪ ಕಾರಕ್ಕೆ ಹ ಕಾರ ಬರುವಿಕೆ, ಸ ಕಾರ ವಿವೇಚನೆಯನ್ನು ಕಾಣಬಹುದಾಗಿದೆ. ನಾಲ್ಕನೇಯ ಪ್ರಕರಣವಾದ ಅನುಬಂಧ ವಿಭಾಗದಲ್ಲಿ ರಳ, ಕುಳ, ಕ್ಷಳ ವಿಚಾರಗಳು ತುಂಬಿವೆ. ನಂತರ ಮೂಡಿದ ವಿಚಾರ ಪ್ರಪಂಚದಲ್ಲಿ ಕನ್ನಡ ವ್ಯಾಕರಣದ ಕೆಲವು ಸಮಸ್ಯೆಗಳು ವಿಚಾರ ರಹಿತವಾಗಿದ್ದನ್ನೂ ನಾವು ಗಮನಿಸಬಹುದಾಗಿದೆ. ಕನ್ನಡ ವರ್ಣಗಳು ಕೃತೀಯ ಮದ್ರಾಸ್ ಸರ್ಕಾರದ ಪ್ರಶಸ್ತಿಯನ್ನು ಹೊತ್ತು ತಂದಿತು.
ಗಮಕ ಸಮಾಸ
ಇನ್ನೊಂದು ೧೯೯೧ರಲ್ಲಿ ಮೂಡಿಬಂದ ಗಮಕ ಸಮಾಸ ಎನ್ನುವ ಗ್ರಂಥವು ಕನ್ನಡದಲ್ಲಿ ಗಮಕ ಸಮಾಸ ಇದೆಯೋ ಇಲ್ಲವೋ ಎನ್ನುವ ವಿವಾದಕ್ಕೆ ಸೇಡಿಯಾಪುರವರಿಂದ ತೆರೆ ಎಳೆಸಿದೆ. ಬಹು ಅಮೂಲ್ಯ ವ್ಯಾಕರಣ ವಿಚಾರಗಳನ್ನು ತುಂಬಿಸಿಕೊಂಡ ಇದು, ಗಮಕ ಸಮಾಸ ಎನ್ನುವುದರ ಸಂರ್ವಾನಯವರ ರೂಪದಲ್ಲಿರುವ ಸರ್ವ ಶಬ್ಧಸ್ವರೂಪಗಳಿಗೆ ಕನ್ನಡದಲ್ಲಿ ಉಪಪದ ಎನ್ನುವುದರ ಸಂಜ್ಞೆಯನ್ನಿತ್ತರೆ ಗಮಕ ಸಮಾಸದ ಸಮಸ್ಯೆಯ ಪರಿಹಾರ ಎನ್ನುವ ಸೇಡಿಯಾಪುರವರ ಅಮೂಲ್ಯ ತಥ್ಯಾಂಶಗಳನ್ನಿದು ಹೊತ್ತು ತರುತ್ತದೆ. ಅಕ್ಷರ ಹಾಗೂ ವರ್ಣ ಋ ಇಗಳ ಸ್ವರ ವರ್ಣತ್ವ, ಸಂಬಂಧ ವಿಭಕ್ತಿ ವೈಯಾಕರಣದ ತೂಕಡಿಕೆ ಇವೆಲ್ಲವೂ ಇವರ ವ್ಯಾಕರಣಶಾಸ್ತ್ರ ಸಂಬಂಧಿತ ಲೇಖನಗಳೇ ಇರುತ್ತವೆ. ಸೇಡಿಯಾಪುರವರು ವಿಷಯಕ್ಕೆ ಪ್ರಾಧಾನ್ಯವಿರುತ್ತಂತೆ. ವ್ಯಾಕರಣ ವಿಷಯಕ್ಕೂ ಅಷ್ಟೇ ಪ್ರಾಧಾನ್ಯವಿತ್ತಿದ್ದಾರೆ. ಇದನ್ನು ಅವರ ಎಲ್ಲ ಲೇಖನಗಳಲ್ಲೂ ಕಾಣಬಹುದು. ಭಾಷೆಯಲ್ಲೂ ತಳಮಟ್ಟ ಸ್ಪರ್ಶಿ, ತಳಸ್ಪರ್ಶಿಯಾದ ಅಧ್ಯಯನ ನಡೆಸಿದಾಗ ಮಾತ್ರ ಭಾಷೆಯ ಸತ್ವ ಮತ್ತು ತತ್ತ್ವಗಳ ಅರಿವಾಗುತ್ತದೆ. ಪ್ರಾಚೀನರು ಬಹಳ ಜಾಗೃತೆಯಿಂದ ಭಾಷಾ ಪ್ರಯೋಗ, ವಿಷಯ ಪ್ರಸ್ತಾವನೆ ಮಾಡಿದ್ದಾರೆ. ಕಾರಣ ಎಲ್ಲವನ್ನೂ ತಪ್ಪೆಂದು ಸಾರಾಸಗಟಾಗಿ ತಿರಸ್ಕರಿಸುವುದು ನಮ್ಮ ಮೌಢ್ಯವಾಗುತ್ತದೆ; ಮೂರ್ಖತನವೂ ಆಗುತ್ತದೆ. ಹಾಗಂತ, ಯಾವುದನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವಂತೆಯೂ ಇಲ್ಲ. ಅಪ್ಪಿಕೊಳ್ಳುವಂತೆಯೂ ಇಲ್ಲ. ಅವರಿಂದಲೂ ಪ್ರಮಾದಗಳೂ ಆಗಿರಬಹುದು. ಅವುಗಳನ್ನು ಅರಿತು ಸರಿ ಮಾಡುವುದು ನಮ್ಮ ಅಂದರೆ ಮುಂದಿನ ಜನಾಂಗದವರ ಕರ್ತವ್ಯವೇ ಆಗುತ್ತದೆ. ಭಾಷಾಶಾಸ್ತ್ರದಲ್ಲಿ ಬಳಸುವ ಹೊಸ ಪರಿಭಾಷೆಗಳು ರೂಢವಾಗಿರುವ ಅರ್ಥ ವ್ಯವಸ್ಥೆಯನ್ನು ಯದ್ವಾತದ್ವಾ ಮಾಡುವಂತಾಗಬಾರದು. ಪರಿಭಾಷೆಗಳು ಸ್ಪಷ್ಟ ಅರ್ಥವನ್ನೀಯುವಂತೆ ಅವುಗಳ ಪ್ರಯೋಗವಾಗಬೇಕು. ಇಂತಹ ನಿಲುವನ್ನು ತಳೆದಿದ್ದರಿಂದಲೇ ಸೇಡಿಯಾಪು ಮಾದರಿಯ ಸಂಶೋಧಕರಾಗಿಯೇ ಮೆರೆದರು. ಅವರ ಈ ಖಚಿತ್ಯ ಸ್ಪಷ್ಟತೆಗೆ ಅವರ ಗುರುಗಳಾದವರಂತೆ ಬಗೆದ ಮುಳಿಯ ತಿಮ್ಮಪ್ಪಯ್ಯನವರ ಸ್ವಾಧ್ಯಾಯದಿಂದ ಸಾಧನೆ ಎನ್ನುವ ಮಾರ್ಗದರ್ಶನ ಅವರಿಗೆ ಅಧಿಕ ಪ್ರೇರಣೆಯನ್ನು ನೀಡಿತು.
ಛಂದಶಾಸ್ತ್ರ
ಸಂಬಂಧಿಸಿ ಸೇಡಿಯಾಪುರವರು ಬರೆದ ಛಂದೋಗತಿ(೧೯೮೫) ಮೇರು ಕೃತಿಯೇ ಸರಿ. ಇದು ಅವರ ಪ್ರತಿಭೆ, ಪಾಂಡಿತ್ಯಗಳನ್ನು ಪ್ರತಿಬಿಂಬಿಸುವ ಅದ್ಭುತ ಕೃತಿಯಾಗಿದೆ. ಇದೊಂದು ಶಾಸ್ತ್ರ ರಸ(ಕಾ)ಸಾರವಿದ್ದಂತೆ. ಇಲ್ಲಿ ಛಂದಸ್ತತ್ವ, ಗತಿಭೇದಗಳ ಕೂಲಂಕುಷ ವಿವೇಚನೆ ನಡೆದಿದೆ ಎಂದರೆ ಸರಿಯಾದೀತು. ಇಲ್ಲಿಯ ಒಂಭತ್ತು ಪರಿಚ್ಛೇದಗಳಲ್ಲಿ ಲಯ ಸಂಜ್ಞೆಯ ಅರ್ಥ, ಛಂದಶ್ಯಾಸ್ತ್ರಗಳಲಿ ಲಯದ ಅರ್ಥ ಮತ್ತು ವ್ಯಾಪ್ತಿ ರಿದಂ ಮತ್ತು ಗತಿ ಮತ್ತು ಲಯ ಛಂದಸ್ ಮತ್ತು ಗತಿ ಬಂಧ, ಗತಿರೂಪಗಳ ವಿವೇಚನೆ, ಪದಾರ್ಥ ವಿವೇಚನೆ, ಛಂದೋಗತಿ ಭೇದಗಳು, ಗತಿ ಮತ್ತು ಯತಿ ಅಪರ ಜಾತಿಗಳು ಮತ್ತು ವಿಷಮಗತಿ ಬಂಧಗಳು, ಅನುಷ್ಪುಪ ಶ್ಲೋಕ, ಉಪಜಾತಿಗಳು ಮತ್ತು ವೈದಿಕ ಛಂದಸ್ಸುಗಳ ಸ್ವರೂಪ, ಇವುಗಳ ವಿವೇಚನೆ ವಿಸ್ತೃತವೂ, ಸೂಕ್ಷ್ಮವೂ ಆಗಿ ಬಂದಿರುತ್ತದೆ. ಅಲ್ಲಲ್ಲಿ ಬೇರೆ ವಿದ್ವಾಂಸರ ಅಭಿಪ್ರಾಯಗಳ ವಿಮರ್ಶೆಯೂ ಕಂಡು ಬರುತ್ತದೆ. ತಾವು ತಪ್ಪು ಗ್ರಹಿಕೆಗಳು ಎಂದು ನಂಬಿದ ವಿಚಾರಗಳ ಖಂಡನೆಯೂ, ಸಮಾಧಾನಗಳೂ ಕಂಡು ಬರುತ್ತವೆ. ಗ್ರಂಥಗಳಲ್ಲಿ ಪದ್ಯ ಜಾತಿಗಳಲ್ಲಿ ಲಯ, ಯತಿ, ಗತಿ, ತಾಳ ಮೊದಲಾದವುಗಳ ಸ್ಥಾನ ವಿವೇಚನೆಯ ಜತೆಯಲ್ಲಿ, ಅಂತಹ ಸಂಜ್ಷೆಗಳನ್ನು ಲಕ್ಷಣಿಸುವ ವಿಧಿವಿಧಾನಗಳು, ವಾಚನ ಕ್ರಮಗಳು, ಇವುಗಳನ್ನೂ ಸಹ ವಿವರಿಸಲ್ಪಟ್ಟ ಅದ್ಭುತ ಕೃತಿ ಇದಾಗಿದೆ. ಆರ್.ಗಣೇಶರೆಂದಂತೆ ಇದು ಸರ್ವ ವಿಧದಲ್ಲೂ ವಿಶೇಷ ಗ್ರಂಥ.
ಸೇಡಿಯಾಪುರವರು ಛಂದಶ್ಯಾಸ್ತ್ರದಲ್ಲೂ ತಮ್ಮದೇ ಆದ ಅಮೂಲ್ಯ ಕಾಣಿಕೆಯನ್ನಿತ್ತಿದ್ದಾರೆ. ೧೯೨೭ರಲ್ಲಿ ಮಂಗಳೂರಿನಲ್ಲಿ ನಡೆದ ಸಾಹಿತ್ಯ ವಾರ್ಷಿಕ ಸಮ್ಮೇಳನದಲ್ಲಿ ಹಿರಿಯರೊಬ್ಬರು ಪಂಪನ ಹಿರಿಯಕ್ಕರಗಳನ್ನು ಹಾಡಿದಾಗ, ಅದರಲ್ಲಿ ಧಾಟಿ, ಭಾವ ಛಂದಸ್ಸು ಯಾವುದು ಸರಿಯಾಗಿ ಸ್ಫುರಿತವಾಗಲೇ ಇಲ್ಲ ಎಂದು ಅವರಿಗೆ ಅನಿಸಿತು. ಕಾರಣ, ಪಿರಿಯಕ್ಕರದ ನೈಜ ಧಾಟಿಯನ್ನು ಹುಡುಕ ಹೊರಟು, ನಾಗವರ್ಮನು ತನ್ನ ಛಂದೋಂಬುಧಿಯಲ್ಲಿ ತಿಳಿಸಿದ ಕರ್ಣಾಟ ವಿಷಯ ಜಾತಿ ಯಲ್ಲಿಯ ಬಂಧಗಳ ಬಗ್ಗೆ ಆಲೋಚಿಸಿದರು. ಯಕ್ಷಗಾನ ಹಳ್ಳಿಯ ಹಾಡುಗಳಲ್ಲಿ ತ್ರಿಮೂರ್ತಿಗಣ ಬಂಧಗಳ ಧಾಟಿಯನ್ನು ಕಂಡುಕೊಂಡರು. ನಾಗವರ್ಮನು ತಿಳಿಸಿರದ ಸಾಂಗತ್ಯ ಬಂಧವೂ ಇದೇ ವರ್ಗಕ್ಕೆ ಸೇರಿದ್ದೆಂದು ಅರಿತುಕೊಂಡರು. ಮೊದಲು ಲಘು ನಂತರ ಗುರು ಕನ್ನಡದಲ್ಲಿ ನಿಷಿದ್ಧ ಎನ್ನುವುದನ್ನೂ ತಿಳಿದರು. ಈ ಎಲ್ಲ ವಿಷಯ, ಯತಿ ಸ್ವರೂಪ, ಚತುರಸ್ರತೆಯ ಸಾಮಾನ್ಯ ನಿಯಮ-ಇವುಗಳನ್ನೆಲ್ಲ ಸೇರಿಸಿದ ಲೇಖನ ತಯಾರಿಸಿ, ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ, ಡಿ.ವಿ.ಜಿ.ಯವರ ಅಧ್ಯಕ್ಷತೆಯಲ್ಲಿ ನಡೆದಾಗ ಅಲ್ಲಿ ಕನ್ನಡ ಛಂದಸ್ಸು ಎನ್ನುವ ರೂಪದಲ್ಲಿ ಓದಿ, ವಿದ್ವಜ್ಜನರ ಪ್ರಶಂಸೆಗೆ ಕಾರಣರಾದರು. ಹಾಗೆಯೇ, ಗೀತಿಕೆ, ಛಂಧೋವತಂಸ, ತ್ರಿಪದಿಗಳಿಗೆ ಸಂಬಂಧಿಸಿದಂತೆ ವಿವಿಧ ಲೇಖನಗಳನ್ನೂ ಸೇಡಿಯಾಪು ಬರೆದರು. ಇವೆಲ್ಲವುಗಳನ್ನು ಒಳಗೊಂಡು, ಗತಿ ವಿನ್ಯಾಸ ವಿಚಾರ, ಯತಿ ವಿಚಾರ, ತ್ರಿಪದಿ-ತ್ರಿವಿಧಿ ವಿಚಾರ, ಬಾದಾಮಿ ಶಾಸನದ ತ್ರಿಪದಿಗಳ ಪಾಠ ವಿಚಾರ, ಮಾತ್ರ ಬಂಧಗಳ ಯತಿ ವಿಚಾರ, ಎಳೆಯ ವಿಚಾರ, ರಗಳೆಯ ವಿಷಯ, ಉದ್ದೇಶ ಪೂರ್ವಕ ಯತಿ ಭಂಗ ವಿಷಯ ಮುಂತಾದ ಛಂದಸ್ಸಮಸ್ಯೆ ಕುರಿತಾದ ವಿವೇಚನೆ ಪರಿಶಿಷ್ಟಗಳಲ್ಲಿ ಸೇರಿಸಿ, ಕನ್ನಡ ಛಂದಸ್ಸು (೧೯೮೮)ರಲ್ಲಿ ಅವರಿಂದ ಹೊರಬರುವಂತಾದುದು ಕನ್ನಡ ಛಂದಸ್ ಲೋಕದ ಭಾಗ್ಯವೆಂದೇ ಹೇಳಬೇಕಾಗುತ್ತದೆ.
೧೯೮೫ರಲ್ಲಿ ಪ್ರಕಟವಾದ ಸೇಡಿಯಾಪುರವರ ಛಂದೋಗತಿ ಎನ್ನುವ ಗ್ರಂಥವೂ ಅಷ್ಟೇ ಅದ್ಭುತವಾದುದು. ಲಯ ಎನ್ನುವುದನ್ನು ಇಂಗ್ಲೀಷಿನ ರಿದಮ್ ಎನ್ನುವ ಅರ್ಥದಲ್ಲಿ ಬಳಸುತ್ತಿರುವುದನ್ನು ಅವರು ಬಲವಾಗಿ ಖಂಡಿಸಿದರು. ಈ ಪದಗಳ ಸಮರ್ಪಕವಾದ ಪ್ರಯೋಗವನ್ನು ಕುರಿತಾಗಿ, ಛಂದಸತ್ವಗಳ ಮತ್ತು ಗತಿಭೇದಗಳ ವಿವೇಚನೆ ಮತ್ತು ನಿವೃತ್ತಿ ಸ್ವರೂಪದ ಗ್ರಂಥವಾಗಿಯೇ ಇದು ಮೂಡಿ ಬಂದಿತು. ಅವರು ಛಂದೋಗತಿ ಮತ್ತು ಕನ್ನಡ ಛಂದಸ್ಸು ವಿಷಯಗಳಿಗೆ ಸಂಬಂಧ ಪಟ್ಟ ವಿಚಾರವನ್ನು ಮಂಡಿಸುವಾಗ, ಅವರು ಕೇವಲ ಬೇರೆ ಪುಸ್ತಕಗಳ ಹೆಸರು ಉದ್ದರಣಗಳನ್ನು ಕೊಡುತ್ತಾ ಹೋಗುವುದು ಅವರ ಜಾಯಮಾನವಲ್ಲ. ವ್ಯಾಕರಣ ಛಂದಸ್ಸು ವಿಷಯಗಳಲ್ಲಿ ಅವರು ಆಕಾಶವಾಣಿಯವರ ಉಚ್ಚಾರ ಕ್ರಮ, ಲಯವಿನ್ಯಾಸ, ನಿಮಿಷ, ನಿಮೇಷ, ಪಂಚವಾದ್ಯ, ನನ್ನೀ ಶಬ್ದಾರ್ಥದ ಬಗ್ಗೂ ಅವರು ವ್ಯಾಖ್ಯಾನ, ಬರೆಹಗಳನ್ನು ನೀಡಿದ್ದಾರೆ, ಶಾಸ್ತ್ರ ಮತ್ತು ತತ್ವ ವಿಚಾರಗಳಲ್ಲಿ ಮಿತೃತ್ವ ಮತ್ತು ವ್ಯಕ್ತಿ ಮಹತ್ವಗಳಿಗೆ ಪ್ರಾಧಾನ್ಯವಿಲ್ಲ, ಅವು ಗಣನೀಯವಲ್ಲ ಎಂದು ತಿಳಿದ ಅವರು ಅಂತಹ ವಿಚಾರಗಳನ್ನು ಮಂಡಿಸುವಾಗ ಹಿಂದಿನ ವಿದ್ವಾಂಸರು, ಪಂಡಿತರು ಮಾಡಿದ ಘನಕಾರ್ಯ, ಕೊಡುಗೆಗಳನ್ನು ಗೌರವಿಸಿ, ಮನ್ನಿಸುವುದರ ಜೊತೆಯಲ್ಲಿ, ಅವರು ಮಾಡಿದ ತಪ್ಪುಗಳನ್ನು ವಿನಮ್ರವಾಗಿ ಖಂಡಿಸುವಲ್ಲೂ ಎಂದೂ ಹಿಂದೇಟು ಹಾಕುವವರಲ್ಲ. ಸಂಸ್ಕೃತ ಛಂದೋವಿದರಾದ ಎಚ್.ಡಿ.ವೇಲಣಕರ ಅವರ ಅಭಿಪ್ರಾಯವನ್ನೂ ಖಂಡಿಸುವ ಸಂದರ್ಭ ಒದಗಿದಾಗಲೂ ಸೇಡಿಯಾಪು ಹಿಂದೆ ಮುಂದೆ ನೋಡಲಿಲ್ಲ. ತಥ್ಯೈಕದೃಷ್ಟಿ, ಸತ್ಯಶ್ರದ್ದೇ, ಸರಳತೆ ಖಚಿತತೆ, ಸಾಧಾರ ನಿರೂಪಣೆ, ತತ್ತ್ವ ನಿಷ್ಠೆಗಳನ್ನು ತಮ್ಮ ಬದುಕು ಮತ್ತು ಬರೆಹಗಳ ಜೀವಾಳವಾಗಿಸಿಕೊಂಡ ಅವರು, ಅನಗತ್ಯ ಮಾತಿಗೂ, ನಿರಾಧಾರ ಬರೆಹಕ್ಕೂ ಅವಕಾಶವನ್ನೀಯಲಿಲ್ಲ. ಮಲ್ಲಿನಾಥ ಸೂರಿಯ ನಾಮೂಲಂ ಲಿಖ್ಯತೇ ಕಿಂಚಿನ್ನಾನಪೇಕ್ಷಿತ ಮುಚ್ಯತೇ ಸಾಧಾರವಿಲ್ಲದೇ ಏನನ್ನೂ ಬರೆಯಬಾರದು, ಬೇಡವಾದದ್ದನ್ನು ಹೇಳಬಾರದು ಎನ್ನುವ ಮಾತನ್ನು ನಂಬಿ, ಅದರಂತೆ ನಡೆದುಕೊಂಡರು.
ಸಂಶೋಧನ ರಂಗದಲ್ಲಿ ಮೇಲೆ ಹೇಳಿದ ಮಾತು ಸಾಕಾರಗೊಂಡಂತೆ, ಶಬ್ದಾರ್ಥ ಸಂಶೋಧನೆಯಲ್ಲಿಯೂ ಇದೇ ನಡೆ ನುಡಿಗಳನ್ನು ಕಾಣಬಹುದು. ಅಪೂರ್ವ ಸಹನೆ, ಅಗಾಧ ಶಾಸ್ತ್ರಜ್ಞಾನ, ತಥೈಕ ದೃಷ್ಟಿ ಸಂವೇದನಾಶೀಲತೆ ಭಾಷೆಯೆನ್ನುವ ಪ್ರಾಚೀನ ಸಂಪನ್ಮೂಲದಿಂದ ಸಾಂಸ್ಕೃತಿಕ ರತ್ನಗಳನ್ನು ಚಿನ್ನರಾಶಿಯನ್ನು ತೆಗೆಯಲು ಬೇಕಾಗುತ್ತದೆ ಎನ್ನುವುದು ಅವರ ಖಚಿತಾಭಿಪ್ರಾಯ. ಮಾತು ಖಚಿತ, ನಿಷ್ಟಾರ್ಥ ನೀಡುವ, ಅನುದ್ದೇಶಿತಾರ್ಥ ನೀಡದಂತೆ ಶಬ್ದ ಪ್ರಯೋಗವಾಗಬೇಕು. ಪ್ರಾಚೀನ ಸಂಪತ್ತೆನಿಸಿದ ಭಾಷೆಯನ್ನು ಆಳವಾಗಿ ಅಭ್ಯಸಿಸಿ, ಸಾಂಸ್ಕೃತಿಕ ಹಿನ್ನೆಲೆಯನ್ನೂ ಕಂಡುಕೊಳ್ಳಲೂ ಸಾಧ್ಯವಿದೆ. ಶಬ್ದಾರ್ಥ ವಿಜ್ಞಾನಕ್ಕೆ ಸೇರಿದಂತೆ ಅವರು ಬರೆದ ಕೆಲವು ದೇಶ ನಾಮಗಳು(೧೯೮೫) ಮತ್ತು ತಥ್ಯದರ್ಶನ (೧೯೯೧) ಹಾಗೂ ವಿಚಾರ ಪ್ರಪಂಚ(೧೯೯೨) ಇವುಗಳೆಲೆಲ್ಲ ಭಾಷಾ-ಶಬ್ದಾರ್ಥ ಸಂಬಂಧಿ ವಿಷಯಗಳು, ಭಾಷಾಧ್ಯಯನದಿಂದ ಸಾಂಸ್ಕೃತಿಕ, ಐತಿಹಾಸಿಕ ತಥ್ಯ ಲಭ್ರತೆಯನ್ನೂ ಕಾಣಬಹುದಾಗಿದೆ. ಇಂತಹ ಅಮೂಲ್ಯ, ಅಮರ ಕಾಣಿಕೆಗಳನ್ನು ನೀಡಿದ ಸೇಡಿಯಾಪು ನಿಜಕ್ಕೂ ಅಮರರೇ ಸರಿ.

ಪ್ರೊ.ಮಾರ್ಕಂಡೇಯ ಉಡುಪಿ.

ಮರಗಳ ಮಹಾತಾಯಿ ಸಾಲುಮರದ ತಿಮ್ಮಕ್ಕ



ಇತ್ತೀಚೆಗೆ ಅನಾರೋಗ್ಯದ ಕಾರಣದಿಂದಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಸಾಲುಮರದ ತಿಮ್ಮಕ್ಕನನ್ನು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಭೇಟಿ ಮಾಡಿ ಶೀಘ್ರ ಗುಣಮುಖರಾಗುವಂತೆ ಶುಭಕೋರಿದರು.



ಈಕೆ ನಿಜಕ್ಕೂ ಮಹಾಮಾತೆ. ಬಡತನದ ಬೇಗೆಯ ನಡುವೆಯೂ ಆದರ್ಶಯುತ ಜೀವನವನ್ನು ತನ್ನದಾಗಿಸಿಕೊಂಡ ಅಪರೂಪದ ಜೀವ. ತನಗೆ ಮಕ್ಕಳಾಗದಿದ್ದರೇನಂತೆ ನೆರಳು ನೀಡುವ ಮರಗಳೇ ತನಗೆ ಮಕ್ಕಳು. ಅವುಗಳನ್ನು ಪೋಷಿಸುವುದೇ ಜೀವಿತದ ಕರ್ತವ್ಯ ಎಂದು ಭಾವಿಸಿ ಮೌನಕ್ರಾಂತಿಗೆ ಮುಂದಾದ ‘ವೃಕ್ಷ ಮಾತೆ. ಅವರೇ ಸಾಲು ಮರದ ತಿಮ್ಮಕ್ಕ.
ಇದೀಗ ಈ ಹಿರಿಯ ಜೀವ ಹಾಸಿಗೆ ಹಿಡಿದು ಮಲಗಿದೆ. ಇವರು ಬೇಗ ಗುಣಮುಖರಾಗಲೆಂದು ಸಾವಿರಾರು ಹೃದಯಗಳು ಪ್ರಾರ್ಥನೆಯಿಟ್ಟಿವೆ.
‘ಸಾಲು ಮರದ ತಿಮ್ಮಕ್ಕರೆಂದೇ ರಾಜ್ಯದ ಜನಮಾನಸದಲ್ಲಿ ಜನಜನಿತರಾದ ಇವರು, ತಾವು ಮಾಡುವ ಕಾಯಕಕ್ಕೆ ಎಂದೂ ಪ್ರಚಾರ ಬಯಸಿದವರಲ್ಲ. ಪ್ರಶಸ್ತಿ-ಪುರಸ್ಕಾರಗಳನ್ನು ನಿರೀಕ್ಷಿಸಿದವರೂ ಅಲ್ಲ.
ತಮ್ಮ ಕಾಯಕವನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ, ಕರ್ತವ್ಯವೆಂಬಂತೆ ತಪಸ್ಸಿನ ರೀತಿಯಲ್ಲಿ ಮಾಡುತ್ತಾ ಬಂದ ನಿಸ್ವಾರ್ಥ ಜೀವಿ. ಅಕ್ಷರ ಕಲಿಯದಿದ್ದರು, ತಮ್ಮ ಉದಾತ್ತ ಕಾಯಕದ ಮೂಲಕ, ತತ್ವಾದರ್ಶಗಳನ್ನು ರೂಢಿಸಿಕೊಂಡು ಬದುಕಿನ ಮೂಲಕ ಅಕ್ಷರಸ್ಥರ ಕಣ್ಣಿಗೆ ಮಹಾಚೇತನವಾಗಿ ಬೆಳೆದು ನಿಂತರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಹುಳಿಕಲ್ ಗ್ರಾಮದವರಾದ ತಿಮ್ಮಕ್ಕ, ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆದವರಲ್ಲ. ಹುಳಿಕಲ್ ಗ್ರಾಮದ ಸಮೀಪವೇ ಇದ್ದ ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ತಿಮ್ಮಕ್ಕ, ದನ ಕಾಯುತ್ತಿದ್ದ ಚಿಕ್ಕಯ್ಯ ಎಂಬುವರನ್ನು ಮದುವೆಯಾದರು.
ದುರಾದೃಷ್ಟವಶಾತ್ ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಆಗ ತಿಮ್ಮಕ್ಕ ತಮ್ಮ ಮಕ್ಕಳಿಲ್ಲದ ಕೊರಗನ್ನು ಮರೆಯಲು ಸಾಲು ಸಾಲು ಆಲದ ಮರಗಳನ್ನು ನೆಡಲಾರಂಭಿಸಿದರು.
ತಿಮ್ಮಕ್ಕ ಅವರ ಹಳ್ಳಿಯಲ್ಲಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಇವರ ಪತಿ ಚಿಕ್ಕಯ್ಯ ಈ ಮರಗಳಿಂದ ಸಸಿಗಳನ್ನು ಕಸಿ ಮಾಡಲು ಶುರುವಿಟ್ಟುಕೊಂಡರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ಕುದೂರು ಹಳ್ಳಿಯ ಬಳಿ ೪ ಕಿ.ಮೀ. ಉದ್ದಳತೆಯ ದೂರ ನೆಡಲಾಯಿತು. ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ ೨೦ ಸಸಿಗಳನ್ನು ನೆಟ್ಟರು.
ಹೀಗೆ ಈ ದಂಪತಿಗಳು ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಈ ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನೀರನ್ನು ನಾಲ್ಕು ಕಿ.ಮೀ. ದೂರ ಸಾಗಿಸುತ್ತಿದ್ದರು. ಅಷ್ಟೇ ಅಲ್ಲ. ಸಸಿಗಳನ್ನು ಮೇವಿನ ಜಾನುವಾರುಗಳಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸಿ ಕಾಪಾಡಿದರು.
ಸಸಿಗಳು ಬೆಳೆಯಲು ನೀರಿನ ಅವಶ್ಯಕತೆಯಿರುವುದರಿಂದ, ಅವುಗಳನ್ನು ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ನೆಡಲಾಯಿತು. ಮುಂದಿನ ಮುಂಗಾರಿನಷ್ಟು ಹೊತ್ತಿಗೆ ಈ ಎಲ್ಲ ಸಸಿಗಳು ಚೆನ್ನಾಗಿ ಬೇರು ಬಿಟ್ಟಿದ್ದವು.
ಹೀಗೆ ತಿಮ್ಮಕ್ಕ ದಂಪತಿಗಳು ಮಕ್ಕಳ ಕೊರಗನ್ನು ನೀಗಲು ಅನುಸರಿಸಿದ ಹಾದಿಯಿಂದಾಗಿ ಇಂದು ನೂರಾರು ಮರಗಳು ಬೆಳೆದು ನಿಂತು ನೆಮ್ಮದಿಯ ನೆರಳು ನೀಡುತ್ತಿವೆ. ಇದೀಗ ಈ ಮರಗಳ ನಿರ್ವಹಣೆಯನ್ನು ರಾಜ್ಯ ಸರ್ಕಾರ ವಹಿಸಿಕೊಂಡಿದೆ.
ತಿಮ್ಮಕ್ಕ ಅಕ್ಕರೆಯಿಂದ, ಪ್ರೀತಿಯಿಂದ, ತಾಯಿಯಂತೆ ಸಸಿಗಳನ್ನು ಜೋಪಾನ ಮಾಡಿ ಮರಗಳೇ ತನ್ನ ಮಕ್ಕಳು ಎಂಬ ಮಾತನ್ನು ಸಾಬೀತು ಪಡಿಸಿದ್ದಾರೆ.
ಆತ್ಮ ಸಂತೋಷಕ್ಕಾಗಿ ಈ ಕಾಯಕವನ್ನು ತನ್ನದಾಗಿಸಿಕೊಂಡ ತಿಮ್ಮಕ್ಕ ಎಂದೂ ಪ್ರಚಾರ ಬಯಸಿದವರಲ್ಲ; ಪ್ರಶಸ್ತಿ-ಪುರಸ್ಕಾರವನ್ನೂ ನಿರೀಕ್ಷಿಸಿದವರಲ್ಲ.
ಬದಲಿಗೆ ತಿಮ್ಮಕ್ಕ ನಿಸ್ಪೃಹ ಸೇವೆ ತನ್ನಿಂತಾನೇ ಪಸರಿಸಿ ಜನಜನಿತರಾದರು. ನೂರಾರು ಪ್ರಶಸ್ತಿಗಳು, ಬಿರುದು-ಬಾವಲಿಗಳು ಅರಸಿ ಬಂದವು. ಆದರೆ ತಿಮ್ಮಕ್ಕ ಬೀಗಲಿಲ್ಲ. ತನ್ನ ಕಾಯಕವನ್ನು ಬಿಡಲಿಲ್ಲ. ನಿರಂತರವಾಗಿ ಮರಗಳೆಂಬ ಮಕ್ಕಳನ್ನು ಬೆಳೆಸುತ್ತಲೇ ಹೋದರು. ಈ ಕಾರ‍್ಯದಿಂದಲೇ ಆತ್ಮ ಸಂತೃಪ್ತಿಯನ್ನು ಪಟ್ಟುಕೊಂಡರು. ನೂರಾರು, ಸಾವಿರಾರು ಜನರಿಗೆ ಸ್ಪೂರ್ತಿಯ ಚಿಲುಮೆಯಾದರು. ಪರಿಸರ ಪ್ರೇಮಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಸಾಲು ಮರದ ತಿಮ್ಮಕ್ಕ ಇಂದು ಹೆದ್ದಾರಿಯ ೪ ಕಿ.ಮೀ ಉದ್ದಳತೆಯಲ್ಲಿ ನೆಟ್ಟಿರುವ ೨೮೪ ಮರಗಳ ಪೋಷಣೆಯನ್ನು ಗಮನಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಗೌರವಿಸಿವೆ.
೧೯೯೫ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, ೧೯೯೭ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ವೀರ ಚಕ್ರ ಪ್ರಶಸ್ತಿ, ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯಿಂದ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ ಹೀಗೆ ಹತ್ತಾರು ರಾಷ್ಟ್ರ ಮಟ್ಟದ, ರಾಜ್ಯ ಮಟ್ಟದ ಅಷ್ಟೇ ಏಕೆ ಅಂತರ್‌ರಾಷ್ಟ್ರೀಯ ಮಟ್ಟದ ಪ್ರಶಸ್ತಿ-ಪುರಸ್ಕಾರಗಳು ತಿಮ್ಮಕ್ಕನವರ ಮುಡಿಗೇರಿವೆ.
ಭಾರತದಲ್ಲಿ ಹಲವಾರು ಕಾಡು ಬೆಳೆಸುವ ಕಾರ್ಯಕ್ರಮಗಳಿಗೆ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗುತ್ತಿದೆ. ರಾಜ್ಯದಾದ್ಯಂತ ಸಸಿ ನೆಡುವ ಕಾರ್ಯಕ್ರಮಕ್ಕೆ ತಿಮ್ಮಕ್ಕನವರ ಅಮೃತಹಸ್ತವೇ ಬೇಕು.
ಹೀಗೆ ಸಾಲುಮರದ ತಿಮ್ಮಕ್ಕ ತನ್ನ ನಿಸ್ವಾರ್ಥ ಕರ್ಮದ ಮೂಲಕ ಜನಜನಿತರಾಗಿದ್ದಾರೆ. ಅಷ್ಟೇ ಅಲ್ಲ. ಪರಿಸರ ರಕ್ಷಣೆಯ ಕಾಯಕದ ಜತೆ ಜತೆಗೆ ಸಮಾಜ ಸೇವಾ ಕೈಂಕರ್ಯವನ್ನು ತಿಮ್ಮಕ್ಕ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಹಳ್ಳಿಯ ವಾರ್ಷಿಕ ಜಾತ್ರೆಗಾಗಿ ಮಳೆ ನೀರು ಶೇಖರಿಸಲು ದೊಡ್ಡ ತೊಟ್ಟಿಯ ನಿರ್ಮಾಣ, ಆಸ್ಪತ್ರೆ ನಿರ್ಮಾಣ ಹೀಗೆ ಸಮಾಜಮುಖಿಯಾಗಿಯೂ ತಿಮ್ಮಕ್ಕ ಕಾರ್ಯ ಪ್ರವೃತ್ತರಾಗಿದ್ದಾರೆ. ೧೯೯೧ರಲ್ಲಿ ತಮ್ಮ ಪತಿ ತೀರಿ ಹೋದ ಬಳಿಕ ತಿಮ್ಮಕ್ಕ ಬದುಕು ಸಮಾಜ ಕಾಯಕಕ್ಕೆ ಮೀಸಲಾಗಿದೆ.
ತಮಗೆ ಯಾರಾದರೂ ಹಣ ಸಹಾಯ ಮಾಡಿದರೆ ಅದನ್ನು ಸಮಾಜದ ಕೆಲಸಕ್ಕೆ ಉಪಯೋಗಿಸುವ ತಿಮ್ಮಕ್ಕ ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಒಂದು ಲಕ್ಷ ರೂ. ಹಣವನ್ನು ನೀಡಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಸಹಾಯಧನವನ್ನು ಆಸ್ಪತ್ರೆ ನಿರ್ಮಾಣಕ್ಕೆ ನೀಡಿದ್ದಾರೆ.
ಓರ್ವ ಅನಕ್ಷರಸ್ಥೆಯಾಗಿ, ಬದುಕಿನಲ್ಲಿ ನೊಂದು, ನೋವುಗಳನ್ನು ನುಂಗಿಕೊಂಡು ಸಮಾಜಕ್ಕೆ ಒಳಿತು ಮಾಡುವ ಸಂಸ್ಕಾರವಂತೆಯಾಗಿರುವ ತಿಮ್ಮಕ್ಕ ಇಂದಿನ ವಿದ್ಯಾವಂತರಿಗೆ ಮಾದರಿಯೇ ಸರಿ.
ತನಗೆ ಎಷ್ಟು ಬೇಕೋ ಅಷ್ಟನ್ನು ಪಡೆದುಕೊಂಡು ಉಳಿದುದನ್ನು ಸಮಾಜಕ್ಕೆ ಉಪಯೋಗಿಸುವ ತಿಮ್ಮಕ್ಕನವರ ಬದುಕು ಅರ್ಥಪೂರ್ಣವಾದುದು. ಇವರ ಬದುಕು, ಕಾಯಕ, ವಿಚಾರಧಾರೆ ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ.
ಇಂತಹ ವೃಕ್ಷಮಾತೆಯನ್ನು ಪಡೆದ ಕನ್ನಡಿಗರೇ ಧನ್ಯ.

ನಾಗೇಶ್

ಕನ್ನಡ ಹೋರಾಟದ ಕಾನೂನಿನ ಶಕ್ತಿ ಪ್ರೊ. ಬಿ. ಬಸವರಾಜ್


ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬ ಕನ್ನಡಿಗ ಜವಾಬ್ದಾರಿ. ಅದಕ್ಕೆ ಬಡವ, ಬಲ್ಲಿದ, ವಿದ್ಯಾವಂತ, ಅವಿದ್ಯಾವಂತ ಎಂಬ ಭೇದವಿಲ್ಲ. ವೈದ್ಯ, ಆರಕ್ಷಕ, ವಕೀಲ, ರಾಜಕಾರಣಿ, ಉದ್ಯಮಿ ಎಂಬ ಘನತೆಗಳ ಗೋಜಲುಗಳು ಇಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಈ ಬದ್ಧತೆ ಇರಲೇಬೇಕು.
ಇಂತಹದೊಂದು ಬದ್ಧತೆಯನ್ನು ಮೈಗೂಡಿಸಿಕೊಂಡು ಕನ್ನಡದ ಕೈಂಕರ್ಯಕ್ಕೆ ನಿಂತವರಲ್ಲಿ ಪ್ರೊ. ಬಿ.ಬಸವರಾಜು ಪ್ರಮುಖರು. ಮಳವಳ್ಳಿ ತಾಲೂಕಿನ ದಬ್ಬಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ ಬಸವರಾಜು ಅವರು ತಮ್ಮ ಬಾಲ್ಯ ದಿನಗಳನ್ನು ಹಳ್ಳಿಯಲ್ಲೇ ಕಳೆದವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರು ಮತ್ತು ಸುತ್ತ-ಮುತ್ತಲ ಹಳ್ಳಿಗಳ ಶಾಲೆಗಳಲ್ಲಿ ಪೂರೈಸಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರು ವಿಶ್ವ ವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ತದನಂತರದ ದಿನಗಳಲ್ಲಿ ಕಾನೂನು ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ತಮ್ಮದಾಗಿಸಿಕೊಂಡರು.
ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕೆಲ ಕಾಲ ಸೇವೆ ಸಲ್ಲಿಸಿದ ಬಸವರಾಜು ಅವರು ಹೋರಾಟದ ಮನೋಭಾವದವರಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಕನ್ನಡವನ್ನು, ಕನ್ನಡತನವನ್ನು ಮೈಗೂಡಿಸಿಕೊಂಡು ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಸವರಾಜು ಅವರು ವ್ಯಾಸಂಗ ಮಾಡುತ್ತಿರುವಾಗಲೇ ಕನ್ನಡ ಪರ ಸಂಘಟನೆಗಳಲ್ಲಿ ಪ್ರಬಲವಾಗಿದ್ದ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದೊಂದಿಗೆ ನಿಕಟ ಸಂಪರ್ಕವನ್ನು ಬೆಳೆಸಿಕೊಂಡರು. ನಾಡಿನ ನೆಲ, ಜಲ, ಭಾಷೆಗಳ ವಿಚಾರಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. ಅನೇಕ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಕನ್ನಡಮ್ಮನ ಸೇವೆಗೆ ನಿಂತವರು.
ನಾಯಕತ್ವ ಗುಣಗಳನ್ನು ಬಾಲ್ಯದಿಂದಲೇ ರೂಢಿಸಿಕೊಂಡಿದ್ದ ಬಸವರಾಜು ಅವರು, ವಿದ್ಯಾರ್ಥಿ ನಾಯಕರಾಗಿ ತದನಂತರ ವಕೀಲರಾದ ಮೇಲೆ ವಕೀಲರ ಸಂಘ ಹಾಗೂ ವಕೀಲರ ಸಹಕಾರ ಸಂಘದಲ್ಲಿ ತೊಡಗಿಸಿಕೊಂಡು ವಿವಿಧ ಜವಾಬ್ದಾರಿಗಳನ್ನು ಹನ್ನೆರಡು ವರ್ಷಗಳ ಕಾಲ ಯಶಸ್ವಿಯಾಗಿ ನಿರ್ವಹಿಸಿದರು.
ಸಾಧ್ಯವಾದಡೆಯಲ್ಲೆಲ್ಲಾ ಕನ್ನಡ ವಾತಾವರಣವನ್ನು ನಿರ್ಮಿಸಲು ಸದಾ ಜಾಗೃತರಾಗಿರುವ ಬಸವರಾಜು ಅವರು, ಸಹಜವಾಗಿಯೇ ನಾಡು, ನುಡಿ ಸೇವೆಗೆ ರೂಪುಗೊಂಡಿದ್ದ ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಗೆ ಪಾದಾರ್ಪಣೆಗೈದರು.
ಕನ್ನಡ ಪರ ಹೋರಾಟಗಾರರಿಗೆ ಕಾನೂನು ರಕ್ಷಣೆ ನೀಡಲು ಮುಂದಾದರು. ಎಲ್ಲೇ ಆಗಲಿ, ಯಾರಿಗೇ ಆಗಲಿ ಅಲ್ಲಿ ಬಸವರಾಜು ಅವರು ಪ್ರತ್ಯಕ್ಷ. ಹೋರಾಟಗಾರರಿಗೆ ಕಾನೂನು ರಕ್ಷಣೆ ನೀಡಿ ಅವರುಗಳ ಹೋರಾಟಕ್ಕೆ ಇಂಬು ನೀಡುತ್ತಾ ಬಂದಿದ್ದಾರೆ.
ಕನ್ನಡ ಪರ ಹೋರಾಟಗಾರರ ಜತೆ ಜತೆಗೆ ರೈತ ಪರ ಹೋರಾಟಗಾರರ ಬಗೆಗೂ ಅಭಿಮಾನ ಹೊಂದಿರುವ ಬಸವರಾಜು ಅವರು ಸಂಕಷ್ಟದಲ್ಲಿರುವ ರೈತರಿಗೆ, ಕೂಲಿ-ಕಾರ್ಮಿಕರಿಗೆ, ಹೋರಾಟಗಾರರಿಗೆ ಸದಾ ಸೇವೆಗೆ ಸಿದ್ದರಾಗಿರುತ್ತಾರೆ.
ಮಾನವೀಯ ಅನುಕಂಪವಿರುವ ಬಸವರಾಜು ಅವರು ಸದಾ ಬಡವರ ಪರ ಮಿಡಿಯುವ ಅಪರೂದ ವ್ಯಕ್ತಿ.
ಇದೀಗ ಕರ್ನಾಟಕ ರಕ್ಷಣಾ ವೇದಿಕೆಯ ಕಾನೂನು ಘಟಕದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜು ಅವರು ಅತ್ಯುತ್ತಮ ಸಂಘಟಕರೂ ಹೌದು. ಇವರು ಆತ್ಮೀಯರ ಪಾಲಿಗೆ ಪ್ರೊಫೆಸರ್ ಎಂದೇ ಹೆಸರುವಾಸಿಯಾದವರು.
ಅಪ್ಪಟ ಹೋರಾಟಗಾರರಾಗಿ, ಸಂಘಟಕರಾಗಿ, ಬಡವರ, ಹೋರಾಟಗಾರರ ರಕ್ಷಕರಾಗಿ, ತಮ್ಮ ಸಾಮಾಜಿಕ, ನಾಡಿನ ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಬಸವರಾಜು ಅವರು ಸಾಮಾಜಿಕ ಬದ್ಧತೆಯುಳ್ಳ ವ್ಯಕ್ತಿ.
ಇದೀಗ ಬಸವರಾಜು ಅವರು, ಕರ್ನಾಟಕ ರಕ್ಷಣಾ ವೇದಿಕೆ ಮುಖವಾಣಿಯಾದ ‘ಕರವೇ ನಲ್ನುಡಿ ಪತ್ರಿಕೆಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಸವರಾಜು ಅವರ ಸೇವೆ ಕನ್ನಡಪರ ಹೋರಾಟಗಾರರಿಗೆ, ರೈತರಿಗೆ ಹಾಗೂ ಹಿಂದುಳಿದವರಿಗೆ ನಿರಂತರವಾಗಿ ಸಿಗಲಿ.

`ನಲ್ನುಡಿ'ಯ ಯಶಸ್ಸಿನ ಓಟ

- ಪ.ಬ.ಜ್ಞಾನೇಂದ್ರಕುಮಾರ್


‘ಕನ್ನಡವೆಂದರೆ ಬರಿ ನುಡಿಯಲ್ಲ
ಹಿರಿದಿದೆ ಅದರರ್ಥ
ಎಂದಿದ್ದಾರೆ ನಿತ್ಯೋತ್ಸವದ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್.
ಆದರೆ ಹಿರಿದಾದ ಅರ್ಥವನ್ನು ಗ್ರಹಿಸಲು ನಮ್ಮ ಜನಪ್ರತಿನಿಧಿಗಳಿಂದ ಸಾಧ್ಯವೇ ಆಗುತ್ತಿಲ್ಲ ಎಂಬುದು ನಿಜವಾದ ದುರಂತ.
ಪದೇ ಪದೇ ಕನ್ನಡ-ಕನ್ನಡಿಗನ ಮೇಲೆ ದುಷ್ಪರಿಣಾಮ ಬೀರುವಂಥ ತೀರ್ಮಾನಗಳನ್ನೇ ಸರ್ಕಾರ ಕೈಗೊಳ್ಳುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಲೆಗಳನ್ನು ಸಿಬಿಎಸ್‌ಇ ಶಾಲೆಗಳನ್ನಾಗಿ ಪರಿವರ್ತಿಸುವ ಹುನ್ನಾರಗಳನ್ನು ನೋಡಿದರೆ, ಈ ಸರ್ಕಾರ ಕನ್ನಡವನ್ನು ಶಿಕ್ಷಣದಿಂದ ನಾಮಾವಶೇಷ ಮಾಡುವ ಹಾಗೆ ಕಾಣಿಸುತ್ತಿದೆ.
ಕರ್ನಾಟಕ ರಕ್ಷಣಾ ವೇದಿಕೆ ಇಂಥದ್ದನ್ನು ಎಂದಿಗೂ ಸಹಿಸಿಲ್ಲ, ಸಹಿಸುವುದೂ ಇಲ್ಲ. ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಮಹಾನಗರಪಾಲಿಕೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲರೂ ಪಾಲ್ಗೊಂಡಿದ್ದರು.
ಪ್ರತಿಭಟನೆಯ ನಂತರ ಮಹಾಪೌರ ಎಸ್.ಕೆ.ನಟರಾಜ್ ಮತ್ತವರ ಸಹೋದ್ಯೋಗಿಗಳು ಆಗ್ರಹ ಪತ್ರ ಸ್ವೀಕರಿಸಿ, ಈ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ತನ್ನ ನಿರ್ಧಾರದೊಂದಿಗೆ ಮುಂದುವರೆದರೆ, ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಗೌಡರು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಹೊಗೇನಕಲ್ ಚಳವಳಿಯನ್ನು ಚಾಮರಾಜನಗರ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರಗೊಳಿಸಿದೆ. ಗಡಿ ಬಂದ್ ಕಾರ್ಯಕ್ರಮ ನಡೆದಿದೆ. ಒಂದು ದಿನದ ಚಾಮರಾಜನಗರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಸರ್ಕಾರ ಇನ್ನೂ ಸುಮ್ಮನಿದ್ದರೆ ಹೊಗೇನಕಲ್ ಚಲೋ ನಡೆಸಬೇಕಾದೀತು ಎಂದು ಟಿ.ಎ.ನಾರಾಯಣಗೌಡರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕರ್ನಾಟಕ ರಕ್ಷಣಾ ವೇದಿಕೆ ಮತ್ತೊಂದು ಮಹತ್ವದ ಹೋರಾಟ ನಡೆಸಿದೆ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರ ರಾಜೀನಾಮೆಗೆ ಕಾರಣವಾದ ಭ್ರಷ್ಟ ಸರ್ಕಾರದ ವಿರುದ್ಧ ನಾರಾಯಣಗೌಡರ ನೇತೃತ್ವದಲ್ಲಿ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನೆ ನಡೆದಿದೆ. ಸಂತೋಷ್ ಹೆಗಡೆಯವರು ಲೋಕಾಯುಕ್ತ ಸಂಸ್ಥೆಯ ಬಲವೃದ್ಧಿಗೆ ಕೋರಿರುವ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು, ನ್ಯಾಯಮೂರ್ತಿಗಳ ಮನವೊಲಿಸಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮಾಡಬೇಕು ಎಂದು ನಾರಾಯಣಗೌಡರು ಒತ್ತಾಯಿಸಿದ್ದಾರೆ.
******
ಇದು ‘ಕರವೇ ನಲ್ನುಡಿಯ ಮೂರನೇ ಸಂಚಿಕೆ. ಪ್ರತಿ ಸಂಚಿಕೆಯೂ ವಿಭಿನ್ನವಾಗಿರಬೇಕು ಎಂಬುದು ನಮ್ಮ ಆಶಯ. ಹಾಗಾಗಿ ಈ ಬಾರಿ ಯಡಿಯೂರಪ್ಪರನವರ ನೇತೃತ್ವದ ಕರ್ನಾಟಕ ಸರ್ಕಾರದ ಎರಡು ವರ್ಷಗಳ ಪರಾಮರ್ಶೆಯನ್ನು ನಡೆಸಿದ್ದೇವೆ. ಈ ಸರ್ಕಾರ ತಳೆದ ಜನವಿರೋಧಿ ನೀತಿಯನ್ನು ಮುಚ್ಚುಮರೆಯಿಲ್ಲದೆ ಬಹಿರಂಗಪಡಿಸಿದ್ದೇವೆ. ಕನಿಷ್ಠ ಉಳಿದ ಮೂರು ವರ್ಷಗಳಲ್ಲಾದರೂ ಸರ್ಕಾರದ ಚಾಲಕ ಶಕ್ತಿಗಳು ಬದಲಾಗಲಿ, ಜನಪರವಾಗಿ ಚಿಂತಿಸಲಿ, ಕನ್ನಡಿಗರ ಆಶೋತ್ತರಗಳಿಗೆ ಕಿವಿಗೊಡಲಿ ಎಂಬುದು ನಮ್ಮ ಬಯಕೆ.
ಸಂಚಿಕೆಯಿಂದ ಸಂಚಿಕೆಗೆ ‘ನಲ್ನುಡಿಯ ಪ್ರಸಾರ ಸಂಖ್ಯೆ ಏರುತ್ತಲೇ ಇದೆ. ರಾಜ್ಯ ಹಾಗು ಹೊರರಾಜ್ಯಗಳಿಂದ ಪತ್ರಿಕೆಗೆ ಬೇಡಿಕೆಯ ಮಹಾಪೂರವೇ ಹರಿದು ಬರುತ್ತಿದೆ. ರಾಜ್ಯದ ಎಲ್ಲ ವಲಯದ ವಿದ್ವಜ್ಜನರು ಮುಕ್ತ ಮನಸ್ಸಿನಿಂದ ಈ ಪ್ರಯೋಗವನ್ನು ಮೆಚ್ಚಿ ಬರೆಯುತ್ತಿದ್ದಾರೆ.
ನಿಜ, ಕನ್ನಡ ಚಳವಳಿಯನ್ನು ಮುಖ್ಯ ಭೂಮಿಕೆಯಾಗಿಟ್ಟುಕೊಂಡು ಬರುವ ಪತ್ರಿಕೆಗಳು ಈಗ ಇಲ್ಲ. ‘ನಲ್ನುಡಿ ಆ ಕೊರತೆಯನ್ನು ನೀಗಿದೆ. ಅದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಕೂಡ.
ಕನ್ನಡ ಚಳವಳಿಯಲ್ಲಿ ಸದಾ ತೊಡಗಿಕೊಳ್ಳುವ ಹಿರಿಯ ಸಾಹಿತಿಗಳಾದ ಚಂದ್ರಶೇಖರ ಪಾಟೀಲರ ಚಂಪಾಂಕಣ ಈ ಸಂಚಿಕೆಯಿಂದ ಆರಂಭಗೊಂಡಿದೆ. ಕನ್ನಡ ರಂಗಭೂಮಿಯ ಬೆಳವಣಿಗೆ ಕುರಿತಾದ ಲೇಖನಮಾಲಿಕೆಯೊಂದನ್ನು ಡಾ.ರಾಜಪ್ಪ ದಳವಾಯಿ ಆರಂಭಿಸಿದ್ದಾರೆ. ಪತ್ರಿಕೆಯ ಪ್ರಧಾನ ಸಂಪಾದಕ ದಿನೇಶ್ ಕುಮಾರ್ ಅವರ ದೇಸೀಮಾತು ಅಂಕಣ ಪ್ರಾರಂಭವಾಗಿದೆ.
ಸಾಕಷ್ಟು ಸಲಹೆಗಳೂ ಕೂಡ ಬರುತ್ತಿವೆ. ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇವೆ ಎಂದು ವಿನಯದಿಂದ ಹೇಳಲು ಬಯಸುತ್ತೇವೆ. ಈ ಪೈಕಿ ಕೆಲವು ಸಲಹೆಗಳನ್ನು ಈಗಾಗಲೇ ಕಾರ್ಯಗತಗೊಳಿಸಿದ್ದೇವೆ. ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ಪ್ರಯೋಗಗಳನ್ನು ಮಾಡಲಿದ್ದೇವೆ.
ತಿಪಟೂರಿನಿಂದ ಡಾ.ಅಬ್ದುಲ್ ಹಮೀದ್ ಅವರು ಸಂಚಿಕೆಗಳಲ್ಲಿ ಕಣ್ತಪ್ಪಿನಿಂದ ಆಗಿರುವ ಸಣ್ಣಪುಟ್ಟ ದೋಷಗಳನ್ನು ಎತ್ತಿ ತೋರಿಸಿದ್ದಾರೆ. ಅವರಿಗೆ ಧನ್ಯವಾದಗಳು.
ಕನ್ನಡ ನಾಡು-ನುಡಿ ಕುರಿತಾಗಿ ನೂರಾರು ಕವಿತೆಗಳನ್ನು ರಾಜ್ಯದ ಮೂಲೆಮೂಲೆಗಳ ಕವಿ-ಕವಯತ್ರಿಯರು ಕಳುಹಿಸುತ್ತಿದ್ದಾರೆ. ಎಲ್ಲವನ್ನೂ ಪ್ರಕಟಿಸಲು ಸಾಧ್ಯವಿಲ್ಲದೇ ಇರುವ ನಮ್ಮ ಅಸಹಾಯಕತೆಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ.
ಆದರೆ ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿರುವ ಪ್ರಕಾಶನ ಸಂಸ್ಥೆ ‘ಗಂಗಾ ಪ್ರಕಾಶನ ತಿಂಗಳಿಗೊಂದು ಕೃತಿಯನ್ನು ಹೊರತರಲು ನಿರ್ಧರಿಸಿದೆ. ಈ ಪ್ರಕಾಶನದ ಮೂಲಕ ಕನ್ನಡ ನಾಡು-ನುಡಿ ಕುರಿತಾದ ಕವಿತೆಗಳದ್ದೇ ಒಂದು ಸಂಪುಟ ತರಲು ತೀರ್ಮಾನಿಸಿದ್ದೇವೆ. ಈ ಸಂಕಲನದಲ್ಲಿ ಕವಿತೆಗಳನ್ನು ಬಳಸಿಕೊಳ್ಳಲಾಗುವುದು.
ಚಂದಾದಾರರಿಗೆ ಒಂದು ಮಾಹಿತಿ: ಪತ್ರಿಕೆ ನಿಮಗೆ ಪ್ರತಿ ತಿಂಗಳ ೫ನೇ ತಾರೀಕಿನಿಂದ ೧೦ರೊಳಗೆ ತಲುಪುತ್ತದೆ. ಒಂದು ವೇಳೆ ತಲುಪದೇ ಇದ್ದ ಪಕ್ಷದಲ್ಲಿ ಒಂದು ದೂರವಾಣಿ ಕರೆ ಮಾಡಿ ತಿಳಿಸಿ.
ಪತ್ರಿಕೆಯನ್ನು ಓದಿದ ಮೇಲೆ ಅಭಿಪ್ರಾಯ ತಿಳಿಸಲು ಮರೆಯಬೇಡಿ.

Saturday, June 5, 2010

ಅಪಘಾತವಲ್ಲ, ಸಾಮೂಹಿಕ ಕೊಲೆ!


ವಿಶಾಲಾಕ್ಷಿ
ಸಂಪಾದಕಿ




ಮೇ ೨೨ರಂದು ಮಂಗ ಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ ದುರ್ಘಟನೆಯಿಂದಾಗಿ ೧೫೮ ಮಂದಿ ಮೃತಪಟ್ಟಿದ್ದಾರೆ. ೧೫೮ ಮಂದಿ ನತದೃಷ್ಟರು ಅಪಘಾತದಿಂದ ಸತ್ತರು ಎಂಬುದಕ್ಕಿಂದ ಕೊಲೆಗೀಡಾದರು ಎಂದರೆ ಸೂಕ್ತವೆನಿಸುತ್ತದೆ. ಮಂಗಳೂರು ವಿಮಾನ ನಿಲ್ದಾಣ ಕಳಪೆ ಗುಣಮಟ್ಟದ್ದು ಎಂಬುದು ಓಡಾಡುವ ಪ್ರಯಾಣಿಕರಿಗೇ ಗೊತ್ತಿರುವ ವಿಷಯ. ಈ ಬಗ್ಗೆ ನ್ಯಾಯಾಲಯಗಳಲ್ಲೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ದಾಖಲಾಗಿದ್ದವು. ಆದರೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ನ್ಯಾಯಾಲಯಗಳಲ್ಲಿ ಸುಳ್ಳು ಪ್ರಮಾಣಪತ್ರ ಸಲ್ಲಿಸಿ, ಮೊಕದ್ದಮೆಗಳು ವಜಾ ಆಗಲು ಕಾರಣರಾಗಿದ್ದರು.
ಇದೀಗ ಆಗಬಾರದ್ದು ಆಗಿಹೋಗಿದೆ, ೧೫೮ ಮಂದಿ ಅಮಾಯಕರು ಜೀವ ತೆತ್ತಿದ್ದಾರೆ. ಈ ಜೀವಗಳನ್ನು ಹಿಂದಿರುಗಿಸಲು ನಾಗರಿಕ ವಿಮಾನಯಾನ ಸಚಿವಾಲಯಕ್ಕಾಗಲಿ, ಏರ್ ಇಂಡಿಯಾಗಾಗಲಿ, ವಿಮಾನ ನಿಲ್ದಾಣ ಪ್ರಾಧಿಕಾರಕ್ಕಾಗಲಿ, ಕೇಂದ್ರ-ರಾಜ್ಯ ಸರ್ಕಾರಗಳಿಗಾಗಲಿ ಸಾಧ್ಯವಿಲ್ಲ. ಹೋದವರು ಹೋದರು, ಒಂದಷ್ಟು ದಿನ ಅದರ ಸುದ್ದಿ, ನಂತರ ಎಲ್ಲವೂ ತಣ್ಣಗಾಗುತ್ತದೆ; ಮುಂದಿನ ಅವಘಡ ಜರುಗುವವರೆಗೆ.
ಅಪಘಾತಕ್ಕೆ ಕಾರಣಗಳೇನು ಎಂಬುದು ಇಲ್ಲಿಯವರೆಗೆ ಗೊತ್ತಾಗಿಲ್ಲ. ಪೈಲೆಟ್ ದೋಷವೋ, ವಿಮಾನದ ದೋಷವೋ ಎಂಬುದು ಇನ್ನೂ ತೀರ್ಮಾನಕ್ಕೆ ಬರಲಾಗಿಲ್ಲ. ಎಲ್ಲ ರಹಸ್ಯಗಳನ್ನು ಬಯಲು ಮಾಡಬಹುದಿದ್ದ ‘ಕಪ್ಪು ಪೆಟ್ಟಿಗೆ’ಯೂ ಸುಟ್ಟು ಹೋಗಿರುವುದರಿಂದ ರಹಸ್ಯಗಳು ರಹಸ್ಯಗಳಾಗೇ ಉಳಿಯಲಿವೆ. ಆದರೆ ಒಂದಂತೂ ನಿಜ. ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ್ದರೆ, ಈ ಅಪಘಾತ ನಡೆಯುತ್ತಿರಲಿಲ್ಲ. ಬಜ್ಪೆ ವಿಮಾನ ನಿಲ್ದಾಣದ ಅಪಾಯಕಾರಿ ೨ನೇ ರನ್‌ವೇ ತುರ್ತು ವಿಮಾನಸ್ಪರ್ಶಕ್ಕೆ ಯೋಗ್ಯವಾಗಿರಲಿಲ್ಲ. ರನ್ ವೇ ಇನ್ನೂ ಉದ್ದವಿದ್ದಿದ್ದರೆ, ಅಪಘಾತ ನಡೆಯುತ್ತಿರಲಿಲ್ಲ.
ಇಂಥ ದುರಂತ ಸಂಭವಿಸಬಹುದು ಎಂಬ ಉದ್ದೇಶದಿಂದಲೇ ‘ವಿಮಾನ ನಿಲ್ದಾಣ ವಿಸ್ತರಣಾ ವಿರೋಧಿ ಸಮಿತಿ’ ಹಾಗು ಇತರ ಸಂಘಟನೆಗಳು ೧೯೯೦ರಿಂದಲೂ ಬಜ್ಪೆ ವಿಮಾನ ನಿಲ್ದಾಣವನ್ನು ಅವೈಜ್ಞಾನಿಕವಾಗಿ, ಅಪಾಯಕಾರಿಯಾಗಿ ವಿಸ್ತರಿಸುವುದನ್ನು ವಿರೋಧಿಸುತ್ತ ಬಂದಿದ್ದವು. ಮಾತ್ರವಲ್ಲ, ೧೯೯೭ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನೂ ಹೂಡಿದ್ದವು.
ಆದರೆ ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರು, ರನ್ ವೇ ಅಗಲ ಮತ್ತು ಉದ್ದ ಕಡಿಮೆ ಇದೆ ಎಂಬ ವಾದವನ್ನು ತಳ್ಳಿ ಹಾಕಿದ್ದರಲ್ಲದೆ, ಅಂತರಾಷ್ಟ್ರೀಯ ಗುಣಮಟ್ಟದಲ್ಲೇ ರನ್ ವೇ ನಿರ್ಮಿಸಲಾಗಿದೆ ಎಂದು ಹೇಳಿದ್ದರು. ನ್ಯಾಯಾಲಯವೂ ಸಹ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಮಾತನ್ನು ನಂಬಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ವಜಾ ಮಾಡಿತ್ತು. ಅದಾದ ನಂತರವೂ ಹಲವಾರು ವರ್ಷಗಳ ಕಾಲ ಮತ್ತೆ ಮತ್ತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡಲಾಯಿತು. ಈ ಮೊಕದ್ದಮೆಗಳನ್ನು ನ್ಯಾಯಾಲಯ ವಜಾಗೊಳಿಸುತ್ತಲೇ ಬಂದಿತಾದರೂ, ಪದೇಪದೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗು ಕೇಂದ್ರ ಸರ್ಕಾರಕ್ಕೆ ಅರ್ಜಿಯ ಗಂಭೀರತೆಯನ್ನು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆದೇಶಿಸುತ್ತ ಬಂದಿತ್ತು.
ಅವಘಡ ನಡೆದು ಹೋಗಿದೆ. ಇದನ್ನು ಅವಘಡ ಎನ್ನುವುದಕ್ಕಿಂತ ವಿಮಾನ ನಿಲ್ದಾಣ ಪ್ರಾಧಿಕಾರ, ಸರ್ಕಾರ, ಏರ್ ಇಂಡಿಯಾ ನಡೆಸಿದ ಸಾಮೂಹಿಕ ಕೊಲೆ ಎಂದರೂ ತಪ್ಪಾಗಲಾರದು. ಆದರೂ ದುರಂತವೆಂದರೆ ಯಾರೂ ಸಹ ಈ ದುರ್ಘಟನೆಯ ನೈತಿಕ ಜವಾಬ್ದಾರಿ ಹೊತ್ತುಕೊಳ್ಳಲು ಸಿದ್ಧರಿಲ್ಲ. ಒಬ್ಬರು ಮತ್ತೊಬ್ಬರ ಮೇಲೆ ಜವಾಬ್ದಾರಿ ಹೊರೆಸುವುದರಲ್ಲಿ ನಿಸ್ಸೀಮರು. ೧೫೮ ಕುಟುಂಬಗಳ ಆಕ್ರಂದನಕ್ಕೆ ಬೆಲೆ ತೆರುವವರು ಯಾರು ಎಂದರೆ ಯಾರ ಬಳಿಯೂ ಉತ್ತರವಿಲ್ಲ.
*****
ಯಾಕೋ, ಏನೋ ಮೇ ತಿಂಗಳು ರಾಜ್ಯದ ಪಾಲಿಗೆ ಕಹಿಯಾಗಿ ಹೋಯಿತು. ಚಳ್ಳೆಕೆರೆಯ ಬಳಿ ಮೇ.೩೦ರಂದು ನಡೆದ ಬಸ್ ದುರಂತದಲ್ಲಿ ೩೦ ಮಂದಿ ಅಸುನೀಗಿದರು. ಎಲ್ಲರೂ ಕೂಲಿ ಮಾಡಲೆಂದು ಬೆಂಗಳೂರಿಗೆ ಕೆಲಸ ಅರಸಿಕೊಂಡು ಬರುತ್ತಿದ್ದವರು. ನೆರೆಯಲ್ಲಿ ಎಲ್ಲವನ್ನು ಕಳೆದುಕೊಂಡ ಜನರೂ ಈ ಪೈಕಿ ಬಹಳಷ್ಟಿದ್ದರು. ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ೩೦ ಜೀವಗಳು ಬಲಿಯಾದವು. ಮತ್ತೆ ಹಲವರು ಮಾರಣಾಂತಿಕವಾಗಿ ಗಾಯಗೊಂಡರು. ಎಲ್ಲರೂ ಬಡಪಾಯಿಗಳೇ. ಯಥಾಪ್ರಕಾರ ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ಒಂದಷ್ಟು ಪರಿಹಾರ ಘೋಷಿಸಿದೆ. ಪರಿಹಾರಗಳು ಕಳೆದುಕೊಂಡವರನ್ನು ವಾಪಾಸು ತಂದುಕೊಡಲಾರವು.
*****
ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಯಿಂದಾಗಿ ಸಂತ್ರಸ್ತರಾದ ಜನರ ಬದುಕು ಕಟ್ಟಿಕೊಡುವುದಾಗಿ ಸರ್ಕಾರ ಘೋಷಣೆಗಳ ಮೇಲೆ ಘೋಷಣೆಗಳನ್ನು ಮಾಡಿತ್ತು. ಸ್ವತಃ ಮುಖ್ಯಮಂತ್ರಿಗಳೇ ಚಂದಾ ವಸೂಲಿ ಮಾಡಿ, ನೆರೆಯಲ್ಲಿ ನೊಂದವರ ಮೊಗಗಳಲ್ಲಿ ಮಂದಹಾಸ ಚಿಗುರಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಉತ್ತರ ಕರ್ನಾಟಕ ಭಾಗಗಳಲ್ಲಿ ಇನ್ನೂ ಮನೆಗಳ ನಿರ್ಮಾಣವಾಗಿಲ್ಲ. ಮನೆ, ಹೊಲ, ಗದ್ದೆ ಕಳೆದುಕೊಂಡ ಜನರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ನೆರೆ ಸಂತ್ರಸ್ತರ ಪುನರ್ ವಸತಿಗಾಗಿ ೧೦ ಕೋಟಿ ರೂ. ದೇಣಿಗೆ ನೀಡಿದ್ದ ಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು, ಕೊಟ್ಟ ಹಣ ಏನಾಯ್ತು, ಲೆಕ್ಕ ಕೊಡಿ ಎಂದು ಸರ್ಕಾರಕ್ಕೆ ಬಹಿರಂಗವಾಗಿಯೇ ಕೇಳಿದ್ದಾರೆ. ಎಲ್ಲ ದಾನಿಗಳೂ ಸಹ ಅದನ್ನೇ ಕೇಳುವ ದಿನಗಳು ಹತ್ತಿರವಾಗುತ್ತಿವೆ. ಸರ್ಕಾರ ನೆರೆ ಸಂತ್ರಸ್ತರನ್ನು ಮರೆತು ಎಷ್ಟೋ ದಿನಗಳಾಗಿ ಹೋದವು.
ಅಲ್ಲಿ ಸಾವಿರಾರು ಜನ ಪರಿಹಾರ ಶಿಬಿರಗಳಲ್ಲಿ ಭಿಕ್ಷುಕರಿಗಿಂತಲೂ ಕಡೆಯಾಗಿ ಬದುಕುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಸಮಾವೇಶದ ಹೆಸರಿನಲ್ಲಿ ಕರ್ನಾಟಕದ ಭೂಮಿಯನ್ನು, ನೀರನ್ನು, ಭೌಗೋಳಿಕ ಸಂಪತ್ತನ್ನು ಹರಾಜಿಗಿಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಹಿಂದಿನ ಮಸಲತ್ತುಗಳೇನು ಎಂಬುದರ ಕುರಿತು ಈ ಸಂಚಿಕೆಯಲ್ಲಿ ವಿಸ್ತ್ರತ ವರದಿಯಿದೆ. ಹಾಗೆಯೇ ಹೊಗೇನಕಲ್ ಕರ್ನಾಟಕಕ್ಕೆ ಸೇರಿದ್ದು ಎಂಬುದಕ್ಕೆ ಸಾಕ್ಷಿಯನ್ನೂ ಈ ಸಂಚಿಕೆಯಲ್ಲಿ ಒದಗಿಸಿದ್ದೇವೆ. ನಮ್ಮೆಲ್ಲರ ಪ್ರೀತಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ‘ನಲ್ನುಡಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ‘ನಲ್ನುಡಿ’ ಲೋಕಾರ್ಪಣೆ ಸಂದರ್ಭದಲ್ಲಿ ಡಾ.ಯು.ಆರ್.ಅನಂತಮೂರ್ತಿಯವರು ಆಡಿದ ಮಾತುಗಳ ಪೂರ್ಣಪಾಠವೂ ಈ ಸಂಚಿಕೆಯಲ್ಲಿದೆ. ಈ ಬಾರಿ ನೂರು ಪುಟಗಳ ‘ನಲ್ನುಡಿ’ ನಿಮ್ಮ ಮುಂದಿದೆ. ಓದಿ, ನಿಮ್ಮ ಅಭಿಪ್ರಾಯ ಹೇಳಲು ಮರೆಯಬೇಡಿ.
*****
ಮಂಗಳೂರು, ಚಳ್ಳೆಕೆರೆಗಳಲ್ಲಿ ನಡೆದ ದುರ್ಘಟನೆಗಳಲ್ಲಿ ನಮ್ಮನ್ನು ಅಗಲಿ ಹೋದ ಎಲ್ಲ ಜೀವಗಳಿಗೂ ‘ನಲ್ನುಡಿ’ ತನ್ನ ಕಂಬನಿಯನ್ನು ಸಮರ್ಪಿಸುತ್ತದೆ. ಅಸುನೀಗಿದವರ ಕುಟುಂಬಗಳು ಎಲ್ಲ ನೋವು ಮರೆತು ಮತ್ತೆ ಹೊಸ ಬದುಕನ್ನು ಎದುರುಗೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ.