Sunday, December 5, 2010

ಪಾತ್ರ ಮುಗಿಸಿ ಹೊರಟ ಅದಮ್ಯ ಸಂಘಟಕ ಕೋಡಿಹಳ್ಳಿ ಶ್ರೀನಿವಾಸ್





ಕಂಬನಿಯಲ್ಲಿ ಕೋಡಿಹಳ್ಳಿ

ಶ್ರೀ ಕೃಷ್ಣನ ವೇಷಧಾರಿಯಾಗಿ ಅಭಿನಯಿಸಿ
ರಂಗ ಭೂಮಿಗೆ ಕಲಾವಿದರಿಗೆ, ಕಲೆಗೆ ಗೌರವಿಸಿ
ರಾಜ್ಯದಲ್ಲೇ ಕೀರ್ತಿ ಗಳೀಸಿದ ನಲ್ಮೆಯ ಮಿತ್ರ
ಕಾಣದ ಊರಿಗೆ ಹೊರಟು ಹೋದೆಯ ನಂಬಿಸಿ

ದೀನರ ದುರ್ಬಲರ ನೋವು ನಲಿವುಗಳಿಗೆ ಸ್ಪಂದಿಸಿ
ನ್ಯಾಯ ನಿಷ್ಠೆ ಸೇವಾ ಕಾರ್ಯಗಳನ್ನು ತ್ಯಜಿಸಿ
ಕನ್ನಡ ನಾಡು ನುಡಿ ಜಲನೆಲದ ಹೋರಾಟಗಾರ ಎನಿಸಿ
ವೀರರ ಸಾಲಿಗೆ ಸೇರಿ ಹೋದೆಯ ನಮ್ಮನ್ನು ಬೆಂಬಲಿಸಿ

ಜಾತಿ ಮತ ಭೇದವ ತೊರೆದು ನಿಂತೆ ನೀ ಕನ್ನಡಕ್ಕಾಗಿ
ಎಲ್ಲರನ್ನು ಗೌರವಿಸಿ ಸಂಘಟನೆಗಳ ಸಂಘಟಿಸಿದ ತ್ಯಾಗಿ
ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದೆ ಛಲದಂಕ ಮಲ್ಲನಾಗಿ
ಹಸಿರಾಗಿ ಉಸಿರಾಗಿ ಸೇರಿ ಹೋದೆಯ ಪ್ರಕೃತಿಯಲ್ಲಿ ಲೀನವಾಗಿ

ನೂರಾರು ಸರಳ ವಿವಾಹ ಮಾಡಿಸಿ ಹೊಸ ಬದುಕು ನೀಡಿದೆ
ಹಳ್ಳಿ ಜನರ ಕಷ್ಟ ಕಾರ್ಪಣ್ಯಕ್ಕೆ ಸದಾಕಾಲ ಹೆಗಲು ನೀಡಿದೆ
ಮುಂದಿನ ಜನನಾಯಕನಾಗಿ ಜಿಲ್ಲೆಯ ಏಳಿಗೆಗಾಗಿ ಪಣ ತೊಟ್ಟು
ನೀಲಿ ಅಗಸದಿ ತೇಲುವ ಮೋಡಗಳಲ್ಲಿ ಅದೃಶ್ಯವಾಗಿ ಮರೆಯಾದೆ

ಕರ್ನಾಟಕ ರಕ್ಷಣಾ ವೇದಿಕೆಯ ನಾಯಕನಾಗಿ ನೀನು ಅಮರ
ಕನ್ನಡ ಚೇತನ ಕರುನಾಡ ಕಿಂಕರ ಕನ್ನಡದ ಶಿಖರ
ತಾಯಿ ಭುವನೇಶ್ವರಿಯ ಮಡಿಲಿನಲ್ಲಿ
ನಲಿದಾಡುತ ನೀಡು ಮಂದಹಾಸ,
ಮತ್ತೊಮ್ಮೆ ಹುಟ್ಟಿ ಬಾ, ನಮಗಾಗಿ, ನಮ್ಮೆಲ್ಲರಿಗಾಗಿ ಬಾರೋ ಶ್ರೀನಿವಾಸ



ಹೆಚ್.ಷೌಕತ್ ಅಲಿ
ಮದ್ದೂರು, ಮಂಡ್ಯ,

ಅವರೊಬ್ಬ ಅಪ್ಪಟ ಕಲಾಭಿಮಾನಿ. ಅತ್ಯುತ್ತಮ ನಟ, ಅದ್ಭುತ ವಾಗ್ಮಿ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಕನ್ನಡಪ್ರೇಮಿ, ಹೋರಾಟಗಾರ, ಅದಮ್ಯ ಸಂಘಟಕ. ಅವರೇ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೋಡಿಹಳ್ಳಿಯ ಶ್ರೀನಿವಾಸ್. ಕನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಅಧ್ಯಕ್ಷರು.
ಇವರು ಅಕಾಲಿಕ ಮರಣಕ್ಕೆ ಈಡಾದುದು ನಾಡಿನ ಜನತೆಯನ್ನು ದುಃಖದ ಮಡುವಿನಲ್ಲಿ ದೂಡಿದೆ. ಇವರ ನೆನಪಿಗೊಂಡು ಅಕ್ಷರ ನಮನ ಸಲ್ಲಿಸುವ ಸಲುವಾಗಿ ಅವರ ಬದುಕಿನ ಪುಟವನ್ನು ತಿರುವಿ ಹಾಕಲಾಗಿದೆ.
ಜಿಲ್ಲೆಯಾದ್ಯಂತ ಕೋಡಿಹಳ್ಳಿ ಶ್ರೀನಿವಾಸ್ ಎಂದೇ ಹೆಸರುವಾಸಿಯಾಗಿದ್ದ ಶ್ರೀನಿವಾಸ್ ಮದ್ದೂರು ತಾಲೂಕಿನಲ್ಲಿ ತಾಲೂಕು ಮಟ್ಟದ ರಂಗಭೂಮಿ ಕಲಾವಿದರ ಸಂಘ ಸ್ಥಾಪಿಸಿ ಈ ಮೂಲಕ ತಾಲೂಕಿನ ಕಲಾವಿದರನ್ನು ಗುರುತಿಸುತ್ತಾ ಪ್ರತಿವರ್ಷವೂ ನಾಟಕೋತ್ಸವಗಳನ್ನು ಆಯೋಜಿಸುತ್ತಾ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಬಂದವರು.
ರಾಜ್ಯದ ವಿವಿಧೆಡೆ ನಡೆಯುತ್ತಿದ್ದ ನಾಟಕ ಸ್ಪರ್ಧೆಗಳಲ್ಲಿ ತಮ್ಮ ಸಂಘದ ವತಿಯಿಂದ ಕಲಾ ತಂಡಗಳನ್ನು ಕೊಂಡೊಯ್ದು ಹಲವು ಬಹುಮಾನಗಳು ಸಂಘಕ್ಕೆ ಲಭಿಸುವಲ್ಲಿ ಯಶಸ್ವಿಯಾದವರು. ಸಾಮಾಜಿಕ ಸೇವೆಯ ಜೊತೆಗೆ ಕನ್ನಡದ ನಾಡು-ನುಡಿ-ಸಂಸ್ಕೃತಿಯ ಕುರಿತಂತೆಯೂ ಅಭಿಮಾನ ಬೆಳೆಸಿಕೊಂಡ ಶ್ರೀನಿವಾಸ್ ಕನ್ನಡ ಜಾಗೃತಿ ಕಾಯಕಕ್ಕೆ ಮುಂದಾಗುವ ಮೂಲಕ ಹೋರಾಟಗಾರರೆನಿಸಿದರು. ಇವರಲ್ಲಿನ ಹೋರಾಟಗಾರನನ್ನು ಗುರುತಿಸಿದ ಟಿ.ಎ.ನಾರಾಯಣಗೌಡರು ಮಂಡ್ಯ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಸ್ಥಿತ್ವಕ್ಕೆ ಬಂದ ತರುವಾಯ ಕೋಡಿಹಳ್ಳಿ ಶ್ರೀನಿವಾಸ್ ಅವರನ್ನು ಮದ್ದೂರು ತಾಲೂಕಿನ ಅಧ್ಯಕ್ಷರನ್ನಾಗಿ ನೇಮಿಸಿದರು. ರಂಗಚಟುವಟಿಕೆಯ ಜೊತೆಜೊತೆಯಲ್ಲೇ ಕನ್ನಡ ನಾಡು-ನುಡಿ, ನೆಲ-ಜಲ ರಕ್ಷಣೆಗೆ ಸಂಬಂಧಿಸಿದಂತೆ ತಮ್ಮ ಹೋರಾಟವನ್ನು ಪ್ರಾರಂಭಿಸಿದ ಇವರು ತಾಲೂಕಿನಾದ್ಯಂತ ಅತ್ಯಂತ ಪ್ರಭಾವವಾಗಿ ಸಂಘಟನೆಯನ್ನು ಬೆಳೆಸತೊಡಗಿದರು.
ಕೋಡಿಹಳ್ಳಿ ಶ್ರೀನಿವಾಸ್ ಅವರ ಕನ್ನಡಪರ ಕಾಳಜಿಯನ್ನು ಗುರುತಿಸಿ ಮಂಡ್ಯ ಜಿಲ್ಲಾ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ಹೊಗೇನಕಲ್ ಹೋರಾಟ, ಕಾವೇರಿ, ಗಡಿ ಸಮಸ್ಯೆ, ರೈಲ್ವೆ ಹೋರಾಟ ಹೀಗೆ ಹತ್ತು ಹಲವು ಹೋರಾಟಗಳ ಮುಂಚೂಣಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೀನಿವಾಸ್ ಸುಮಾರು ಐದು ಬಾರಿ ಸೆರೆವಾಸವನ್ನು ಅನುಭವಿಸಿದವರು. ಇವರ ಮೇಲೆ ಸುಮಾರು ಮೂವತ್ತು ಪ್ರಕರಣಗಳು ಚಳವಳಿ ರೂಪಿಸಿದ ಕಾರಣಕ್ಕೆ, ಪ್ರತಿಭಟಿಸಿದ ಕಾರಣಕ್ಕೆ ದಾಖಲಾಗಿದ್ದವು.
ಕೋಡಿಹಳ್ಳಿ ಶ್ರೀನಿವಾಸ್ ಕರ್ನಾಟಕ ರಕ್ಷಣಾ ವೇದಿಕೆ ಸೇರ್ಪಡೆಗೊಳ್ಳುವ ಮುನ್ನ ಕೆ.ಇ.ಬಿಯಲ್ಲಿ (ಚೆಸ್ಕಾಂ) ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದವರು. ಇದೇ ಸಂದರ್ಭದಲ್ಲಿ ಸದರಿ ಕಚೇರಿಯಲ್ಲಿ ವಿದ್ಯುತ್ ಪಾವತಿ ಬಿಲ್ಲನ್ನು ಕನ್ನಡದಲ್ಲಿ ನೀಡಲಿಲ್ಲ ಎಂಬ ಕಾರಣಕ್ಕೆ ಪ್ರತಿಭಟಿಸಿ ಕಛೇರಿಯ ಕಂಪ್ಯೂಟರ್ ಸೇರಿದಂತೆ ಹಲವು ಉಪಕರಣಗಳನ್ನು ಒಡೆದು ಹಾಕಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು. ಈ ಪರಿಣಾಮ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ ಶ್ರೀನಿವಾಸ್ ಕೆಲಸವನ್ನು ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಿಸಿದವರು.
ಕೋಡಿಹಳ್ಳಿ ಶ್ರೀನಿವಾಸ್ ಕೆ.ಇ.ಬಿ.ಯಲ್ಲಿ ಕನ್ನಡ ರಸೀತಿ ನೀಡಬೇಕೆಂದು ಪ್ರತಿಭಟಿಸಿ, ಸೆರೆವಾಸ ಅನುಭವಿಸುತ್ತಿರುವ ಸಂದರ್ಭದಲ್ಲೇ ಕೆ.ಇ.ಬಿಯಲ್ಲಿ ಕನ್ನಡ ರಸೀತಿ ನೀಡುವ ಪ್ರಕ್ರಿಯೆ ಆರಂಭವಾದುದು ಇತಿಹಾಸ. ಮದ್ದೂರು ತಾಲೂಕು ಸೇರಿದಂತೆ ಮಂಡ್ಯ ಜಿಲ್ಲೆಯ ಹಲವು ಗ್ರಾಮಗಳಲ್ಲಿ ತನ್ನ ಅಭಿಮಾನಿ ಬಳಗವನ್ನೇ ಹೊಂದಿದ್ದ ಶ್ರೀನಿವಾಸ್ ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಸಂಸ್ಥೆಗಳಲ್ಲಿಯೂ ಅವಿನಾಭಾವ ಸಂಬಂಧ ಹೊಂದಿದ್ದವರು. ಮೂಲತಃ ಕಲಾವಿದರಾದ ಶ್ರೀನಿವಾಸ್ ಕರ್ನಾಟಕ ರಕ್ಷಣಾ ವೇದಿಕೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದರಲ್ಲದೇ ತಮ್ಮ ರಂಗಾಸಕ್ತಿಯನ್ನು ಮುಂದುವರಿಸಿಕೊಂಡೇ ಬರುತ್ತಿದ್ದರು.
ಪ್ರತಿವರ್ಷ ರಂಗಚಟುವಟಿಕೆಗಳನ್ನು ನಡೆಸುತ್ತಿದ್ದ ಅವರು ಹಿರಿಯ ರಂಗನಟರು ಹಾಗೂ ಸಿನಿಮಾ ಕಲಾವಿದರನ್ನು ಸಮಾರಂಭಕ್ಕೆ ಆಹ್ವಾನಿಸಿ ಅವರನ್ನು ಪರಿಚಯಿಸುವ ಮತ್ತು ಗೌರವಿಸುವ ಸಂಪ್ರದಾಯವನ್ನು ನಿರಂತರವಾಗಿ ನಡೆಸಿಕೊಂಡು ಬಂದವರು. ಉತ್ತಮ ರಂಗಭೂಮಿ ನಟರೂ ಆಗಿದ್ದ ಕೋಡಿಹಳ್ಳಿ ಶ್ರೀನಿವಾಸ್ ೨೦೦೯ನೇ ಸಾಲಿನಲ್ಲಿ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣ ಪೌರಾಣಿಕ ನಾಟಕದಲ್ಲಿ ಶ್ರೀನಿವಾಸ ಪಾತ್ರವನ್ನು ವಹಿಸಿದ್ದರು. ೨೦೧೦ರ ಡಿಸೆಂಬರ್ ೧೧ರಂದು ಮಂಡ್ಯ ಜಿಲ್ಲಾ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಸತ್ಯ ಹರಿಶ್ಚಂದ್ರ ಪೌರಾಣಿಕ ನಾಟಕವನ್ನು ಆಯೋಜಿಸಿದ್ದ ಇವರು ಈ ಸಂಬಂಧ ವಿವಿಧ ತಯಾರಿಗಳನ್ನು ನಡೆಸಿದ್ದರಲ್ಲದೇ ಸತ್ಯ ಹರಿಶ್ಚಂದ್ರ ಪಾತ್ರವನ್ನು ತಾವೇ ಮಾಡುವವರಿದ್ದರು. ಇದೀಗ ಆ ಪಾತ್ರವನ್ನು ಅವರ ಅನುಪಸ್ಥಿತಿಯಲ್ಲಿ ಬೇರೆಯವರು ಮಾಡುತ್ತಿದ್ದಾರೆ.
ಅಸು ನೀಗುವ ಕೆಲವೇ ದಿನಗಳ ಹಿಂದೆ ಶ್ರೀನಿವಾಶರನ್ನು ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನಾರಾಯಣಗೌಡರು ನೇಮಿಸಿದ್ದರು. ಈ ನಿಮಿತ್ತ ಮಂಡ್ಯದಲ್ಲಿ ಅದ್ದೂರಿ ಸಮಾರಂಭವೂ ನಡೆದಿತ್ತು.ಹೋರಾಟಗಾರರಾಗಿ, ಕಲಾವಿದರಾಗಿ, ಸಾಮಾಜಿಕ ಸೇವಕರಾಗಿ ದುಡಿದ ಕೋಡಿಹಳ್ಳಿ ಶ್ರೀನಿವಾಸರು ಅರ್ಧಕ್ಕೆ ತಮ್ಮ ಪಾತ್ರ ಮುಗಿಸಿ ಬರಲಾರದ ಹಾದಿಯತ್ತ ನಡೆದಿದ್ದಾರೆ. ಅವರ ಚೇತನಕ್ಕೆ ಶಾಂತಿ ಸಿಗಲಿ ಎಂಬುದು ಕನ್ನಡ ಮನಸ್ಸುಗಳ ಹಾರೈಕೆ.

ಕನ್ನಡ ಜಾಗೃತಿ ರಥ ರೂಪಿಸಿದ ಕನ್ನಡ ಪ್ರೇಮಿ ಕಂಡಕ್ಟರ್ ನಟರಾಜ್




ನಾವು ಎಲ್ಲಿಗಾದರೂ ಬಸ್ಸಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಎಲ್ಲಿಗೆ? ಎಂದರೆ ನಾವು ಇಂತಲ್ಲಿಗೆಂದು ಹಣಕೊಟ್ಟರೆ ಮುಗಿತು. ಅವನಿಗೂ ನಮಗೂ ಮತ್ತೆ ಮಾತಿಲ್ಲ! ಆದರೆ... ನಮಗೆ ಈ ಬಸ್ಸು ಕಾಣುವ ರೀತಿ, ಇಲ್ಲಿನ ಕಂಡಕ್ಟರ್ ಸ್ಪಂದಿಸುವ ರೀತಿ, ಈತನ ಕನ್ನಡ ಪ್ರೀತಿ, ಕಾಳಜಿ ಎಂತವರನ್ನೂ ಚಕಿತಗೊಳಿಸುವಂತದ್ದು!
ಮೊದಲಿಗೆ ನಾವು ಕುಳಿತಿರುವುದು ಬಸ್ಸಿನಲ್ಲೋ ಅಥವಾ ಇನ್ನಾವುದೋ ಕನ್ನಡ ಮಾಹಿತಿ ಸಂಗ್ರಹ ಕೇಂದ್ರದಲ್ಲೊ ಎಂಬಂತ ಅನುಭವ. ಎತ್ತ ಕಣ್ಣಾಯಿಸಿದರೂ, ನಮ್ಮ ನಾಡು-ನುಡಿ, ನೆಲ-ಜಲಕ್ಕೆ ಸಂಬಂಧಿಸಿದ ವಿಷಯಗಳು. ಕನ್ನಡ ಕವಿಗಳ, ಕಲಿಗಳ, ಕಲಾವಿದರ, ಚಳವಳಿಗಾರರ ಭಾವಚಿತ್ರಗಳು, ಇವರ ಸಾಧನೆ, ಕ್ಷೇತ್ರಗಳ ಮಾಹಿತಿ ಹಾಗೂ ಕನ್ನಡ ಪರ ಘೋಷಣೆ ನುಡಿಮುತ್ತುಗಳು. ಹಬ್ಬದ ವಾತಾವರಣ ತೋರುವ ಕನ್ನಡ ಬಾವುಟಗಳ ತೋರಣ, ಸಾಲದೆಂಬಂತೆ ಕಿವಿಗಿಂಪೆನಿಸುವ ಕನ್ನಡ ಗೀತೆಗಳ ಮಧುರಗಾನ. ಹೀಗೆ ಒಟ್ಟಾರೆ, ಅಚ್ಚುಕಟ್ಟಾಗಿ ಸಂಪೂರ್ಣ ಕನ್ನಡದ ಜಾಗೃತಿ ರಥವಾಗಿ ರೂಪಿಸಿದ ಸಾರಥಿಯೇ ಎಂ.ನಟರಾಜ್. ಎಲ್ಲರಿಗೂ ಕನ್ನಡ ಪ್ರೇಮಿ ಕಂಡಕ್ಟರ್ ಎಂದೆ ಚಿರಪರಿಚಿತ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದ ನಟರಾಜ್ ಮೂಲತಃ ಬಡಕುಟುಂಬದಲ್ಲಿ ಬೆಳೆದು, ಬದುಕಿನ ಸಹಜ ಅನುಭವದ ಪಾಠ ಕಲಿತು ವಿದ್ಯಾಭ್ಯಾಸ ಮುಗಿಸಿದ ದಿನಗಳಲ್ಲೇ ಕನ್ನಡದ ಉಳಿವಿಗಾಗಿ ನಡೆಯುತ್ತಿದ್ದ ಚಳವಳಿಗಳಿಂದ ಪ್ರೇರಣೆ ಪಡೆದು, ಈ ದಿಸೆಯಲ್ಲೆ ಯೋಚಿಸುವ ಹೊತ್ತಿಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ರಾಜ್ಯಸಾರಿಗೆ ಸಂಸ್ಥೆ ಘಟಕದ ಕಂಡಕ್ಟರ್‌ರಾಗಿ ನೇಮಕವಾದರು. ಹೀಗಾಗಿ ಈ ವೃತ್ತಿಯನ್ನೇ ತನ್ನಲ್ಲಿ ಮೈಗೂಡಿದ್ದ ಅಪಾರ ಕನ್ನಡ ಪರ ಕಾಳಜಿಗೆ ಸೂಕ್ತವೇದಿಕೆಯಾಗಿಸಿಕೊಂಡು, ಜನರನ್ನು ಜಾಗೃತಿಗೊಳಿಸುವಂಥ ವಿವಿಧ ರೀತಿ ಕನ್ನಡದ ಸೇವೆಗಳನ್ನು ಹಲವಾರು ವರ್ಷಗಳಿಂದಲೂ ಚಾಚೂ ತಪ್ಪದೆ ಮಾಡುತ್ತ ಬರುತ್ತಿದ್ದಾರೆ.
ಇತರೆ ಬಸ್ ಕಂಡಕ್ಟರ್‌ಗಳು ಪ್ರಯಾಣಿಕರನ್ನು ಎಲ್ಲಿಗೆ ಎಂದಷ್ಟೇ ಕೇಳಬಹುದು. ಆದರೆ, ಈ ಕನ್ನಡದ ಕಂಡಕ್ಟರ್ ಎಲ್ಲಿಗೆ ಎಂದು ಕೇಳುವುದರ ಜೊತೆಗೆ ನಮ್ಮ ನಾಡು-ನುಡಿಯ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಪ್ರಯಾಣಿಕರು ಸರಿ ಉತ್ತರ ಕೊಟ್ಟರೆ ಬಹುಮಾನವಾಗಿ ಅತ್ಯುತ್ತಮ ಪುಸ್ತಕವನ್ನು ಕೊಡುತ್ತಾರೆ. ಈ ವಿಶೇಷ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಪ್ರಯಾಣಿಕರಿಗೂ ಸಿಹಿ-ತಿಂಡಿ ಹಂಚಿ ಖುಷಿ ಪಡಿಸಿ ಅಲ್ಲೊಂದು ಸೌಹಾರ್ದ ವಾತಾವರಣ ನಿರ್ಮಾಣ ಮಾಡುವುದರೊಂದಿಗೆ, ನಾವು ಮರೆತ ಅನೇಕ ನಾಡುನುಡಿಯ ವಿಷಯದ ಮಹತ್ವವನ್ನು ಮತ್ತೊಮ್ಮೆ ಮನದಟ್ಟು ಮಾಡುತ್ತಾರೆ ಕನ್ನಡದ ಕಂಡಕ್ಟರ್.
ಮೊದಲಿಗೆ ಈ ರಸಪ್ರಶ್ನೆ ಕಾರ್ಯಕ್ರಮ ಮಾಡಿದ ನಟರಾಜ್‌ಗೆ ಪ್ರಯಾಣಿಕರಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ. ಆದರೆ, ನಟರಾಜ್ ಆಸಕ್ತಿ ಕುಂದಲಿಲ್ಲ. ಸದಾ ಸಹನೆ, ಸಂಯಮದಿಂದ ಪ್ರತಿಯೊಬ್ಬ ಪ್ರಯಾಣಿಕರೊಂದಿಗೂ ಬೆರೆಯುವ ಈತನ ಶಿಸ್ತು ನಡೆ, ನುಡಿ ವಿಶೇಷವಾಗಿ ಕನ್ನಡ ಭಾಷೆ ಏಳಿಗೆಗಾಗಿ ತಳೆದಿರುವ ಪ್ರಾಮಾಣಿಕ ಕಾಳಜಿ ಪ್ರಯತ್ನಗಳು ಕ್ರಮೇಣ ಪ್ರಯಾಣಿಕರ ಸಹಜ ಮೆಚ್ಚುಗೆಗೆ ಪಾತ್ರವಾಯಿತು.
ಇದರಿಂದ ಮತ್ತಷ್ಟು ಉತ್ಸಾಹಿಯಾದ ನಟರಾಜ್ ಮುಂದೆ ತನ್ನ ಪ್ರಯಾಣಿಕರೊಂದಿಗೆ ಅನೇಕ ಬಗೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದರು. ಪ್ರತಿ ತಿಂಗಳ ತನ್ನ ವೇತನದಲ್ಲಿ ೪೦೦ ರೂ.ಗಳನ್ನು ರಾಜ್ಯೋತ್ಸವದ ವಿವಿಧ ಕಾರ್ಯಕ್ರಮಗಳಿಗಾಗಿ ಮೀಸಲಿಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
ಪ್ರತೀ ಅಕ್ಟೋಬರ್ ೩೧ ನವೆಂಬರ್ ೧ ಹಾಗೂ ೨ರಂದು ಮೂರು ದಿನಗಳ ಕಾಲ ತನ್ನ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಕನ್ನಡದ ಹಬ್ಬವನ್ನು ಅತ್ಯಂತ ಅಭಿಮಾನದಿಂದ ನಡೆಸುತ್ತ ಯಶಸ್ಸು ಕಂಡಿರುವ ನಟರಾಜ್ ಪ್ರಯತ್ನಕ್ಕೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಸಹಕಾರವು ಸಿಗುತ್ತಿದೆ. ಸಹಜವಾಗಿ ಪ್ರಯಾಣಿಕರಿಗೆ ಹೆಚ್ಚಿನದಾಗಿ, ಇವರ ಕನ್ನಡ ಸೇವೆ ಕಾಳಜಿ ಕೆಲಸಗಳ ಪರಿಚಯವಾಗಿ ಮೆಚ್ಚುಗೆ ಆದ್ದರಿಂದ ಗ್ರಾಮಾಂತರ ವಿಭಾಗದ ಡಿಸಿ ಮಲ್ಲಿಕಾರ್ಜುನ ಅವರ ಗಮನಕ್ಕೆ ಬಂದು ಮತ್ತಷ್ಟು ಪ್ರೋತ್ಸಾಹ ನೀಡಿದರು. ನಟರಾಜ್‌ರ ಈ ವಿಶೇಷ ಸೇವೆಗೆಂದೇ ಪ್ರತ್ಯೇಕ ಬಸ್ ಒಪ್ಪಿಸಿ ೧೦ ದಿನ ಕನ್ನಡ ಜಾಗೃತಿ ರಥವಾಗಿ ರೂಪಿಸಿ ಅನೇಕ ಮಾರ್ಗಗಳಲ್ಲಿ ಸಂಚರಿಸಿ ಕಾರ್ಯಕ್ರಮ ಮಾಡಲು ಸೂಚಿಸಿ ಹೆಚ್ಚಿನ ಉತ್ಸಾಹ ತುಂಬಿದರು. ಇದರಿಂದ ಮೈಸೂರು, ಬೆಂಗಳೂರು, ಹಾಸನ, ಕುಶಾಲನಗರ, ಚಾಮರಾಜನಗರ, ಮಂಡ್ಯ ಹೀಗೆ ಹಲವೆಡೆ ನಟರಾಜ್ ಕನ್ನಡ ಜಾಗೃತಿ ರಥ ಸಂಚರಿಸುವ ಮೂಲಕ ಮತ್ತಷ್ಟು ಕನ್ನಡಿಗರ ಜಾಗೃತಿ ಅಭಿಮಾನ ಪುಟಿದೇಳಲು ಕಾರಣವಾಯಿತು ಎಂಬುದು ಖುದ್ದು ನಟರಾಜ್‌ರಲ್ಲಿ ಸಾರ್ಥಕ ಧನ್ಯತಾಭಾವ ಮೂಡಿಸಿದೆ.
ಕನ್ನಡ ಕಾಂiiಕ್ರಮಗಳ ಜತೆಗೆ ರಾಜ್ಯದಲ್ಲಿ ಸಂಭವಿಸುವ "ನೆರೆ ಸಂತ್ರಸ್ತ"ರು ಎಂಬಂತ ದುರಂತ ಸಂಗತಿಗಳ ಕುರಿತಾಗಿಯೂ ಅಷ್ಟೇ ಕಾಳಜಿಯ ಕಾರ್ಯಕ್ರಮಗಳನ್ನು ರೂಪಿಸುವ ಜವಬ್ದಾರಿಯನ್ನು ಮರೆಯುವುದಿಲ್ಲ!
"ನೆರೆಯಿಂದ ನೆರೆಯವರ ಬಾಳಲ್ಲಿ, ನೋವು ಚಿಂತೆ ಬೇಡ ನಿಮ್ಮೊಂದಿಗೆ ಇರುವೆವು ಎಂದೆಂದೂ ನಾವು ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಬದುಕು ಬೆಳಕಾಗಲಿ" ಎಂದು ನಾವೆಲ್ಲರೂ ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸೋಣ ಹೀಗೆ ಬ್ಯಾನರ್ ಬರೆಸಿ ತನ್ನ ಸೇವೆಯ ಬಸ್ ಮುಂದೆ ಕಟ್ಟಿ ತನ್ನ ಕಾಳಜಿ ತೋರುವ ಈ ನಟರಾಜ್ ಹಲವು ಸಮಸ್ಯೆಗಳ ಬಗ್ಗೆಯೂ ಚಿಂತಿಸುವತ್ತ ಕಾರ್ಯೋನ್ಮುಖರಾಗುವುದಿದೆ! ಪ್ರತಿನಿತ್ಯವೂ ಕನ್ನಡದ ಮಂತ್ರವನ್ನು ಜಪಿಸುವ ನಟರಾಜ್, ಪ್ರಸಕ್ತ ದಿನಮಾನದಲ್ಲಿ ಕನ್ನಡ ಎದುರಿಸುತ್ತಿರುವ, ಹಾಗೆ ಮುಂದೆ ಎದುರಾಗಲಿರುವ, ಸಮಸ್ಯೆಗಳ ಬಗ್ಗೆ ಸದಾ ಮುಂಜಾಗೃತೆಯಿಂದ ಯೋಚಿಸಿ ನಡೆಯುವ ರೀತಿಯೇ ಅಪರೂಪದ್ದು. ಬಿಡುವಿನ ವೇಳೆಯಲ್ಲೂ ತನ್ನದೇ ಆದ ಉತ್ತಮ ಹವ್ಯಾಸಗಳ ಮುಖೇನ ಇತರರಿಗೆ ಮಾದರಿಯಾಗುತ್ತಾರೆ. ಈವರೆಗೂ ನಾಡಿನ ನೆಲ-ಜಲ ಭಾಷೆ, ಸಂಸ್ಕೃತಿ ಉಳಿವಿಗೆ, ಶ್ರೇಯಸ್ಸಿಗೆ ದುಡಿದ ಸಮಸ್ತ ಸಾಧಕರ ಭಾವಚಿತ್ರಗಳು ಕ್ಷೇತ್ರದ ಸಮಗ್ರ ಪರಿಚಯದ ಮಹತ್ವದ ಮಾಹಿತಿಗಳನ್ನು ನಮ್ಮ ನಾಡಿನ ಪತ್ರಿಕೆಗಳಿಂದ, ಜನತೆಯಿಂದ ಸಂಗ್ರಹಿಸಿರುವ ನಟರಾಜ್ ಅವರಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ನಾಡಿನ ವಿವಿಧ ಕ್ಷೇತ್ರದ ಕನ್ನಡ ಕಣ್ಮಣಿಗಳ ಭಾವಚಿತ್ರಗಳು ಲಭ್ಯವುಂಟು. ತನ್ನ ಇಲಾಖೆಯಿಂದ ರಜೆ ಸಿಕ್ಕ ಸಂದರ್ಭದಲ್ಲೂ ಸ್ಥಳೀಯ ಶಾಲಾ-ಕಾಲೇಜುಗಳೀಗೆ ಭೇಟಿ ನೀಡಿ ಆ ಮಕ್ಕಳಿಗೆ ವಿಶೇಷವಾಗಿ ರಾಜ್ಯೋತ್ಸವ ಆಚರಿಸುವ ಕುರಿತು ಹಾಗೂ ನಾಡು ನುಡಿ ಸಂಸ್ಕೃತಿ ಸದಾಚಾರಗಳ ಕುರಿತಾಗಿ, ನಾಡು ಕಂಡ ಸಾಧಕರ ಮಹತ್ವದ ವಿವರಗಳ ಕುರಿತಾಗಿ ಬೋಧಿಸುವ ಹಾಗೆ ಪ್ರಸ್ತುತ ಕನ್ನಡ ಎದುರಿಸುತ್ತಿರುವ ಸಮಸ್ಯೆ ಬಗ್ಗೆ, ಜವಾಬ್ದಾರಿಯ ಬಗ್ಗೆ ಮಕ್ಕಳಲ್ಲಿ ಮನದಟ್ಟಾಗುವಂತೆ, ಭೋದಿಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಲೇ ಇದೆ.
ಇದೆ ಸಂದರ್ಭದಲ್ಲಿ "ಕನ್ನಡ ರಸ ಪ್ರಶ್ನೆ" ಕಾರ್ಯಕ್ರಮವನ್ನು ನಡೆಸಿ, ಸರಿಯುತ್ತರ ನೀಡಿದ ವಿದ್ಯಾರ್ಥಿಗಳಿಗೆ ಅಲ್ಲೇ ಸಾಹಿತ್ಯ ಪುಸ್ತಕಗಳ ಬಹುಮಾನ ಕೊಡುತ್ತಾ ಈ ಮುಖೇನವೂ ನಟರಾಜ್ ಕನ್ನಡ ಪರಿಚಾರಕರಾಗಿಯೂ ಸೇವೆ ಸಲ್ಲಿಸುತ್ತಿರುವುದು
ಗಮನಾರ್ಹ ಸಂಗತಿ! ಇದರೊಂದಿಗೆ ಕನ್ನಡ ಸಾಹಿತ್ಯ
ಓದುವ ಮತ್ತು ಅನೇಕ ಹನಿಗವಿತೆಗಳನ್ನು ಬರೆದಿರುವ ನಟರಾಜ್
ಈ ದಿಸೆಯಲ್ಲೂ ಮೆಚ್ಚುಗೆ ಪಡೆದಿದ್ದಾರೆ.
ಹೀಗೆ ನಟರಾಜ್ ಯೋಚಿಸುವ, ಕೈಗೊಳ್ಳುವ ಪ್ರತಿಯೊಂದು ಪ್ರಯತ್ನದಲ್ಲೂ ಕನ್ನಡ ಸೇವೆಯದ್ದೇ ಪ್ರಾಧಾನ್ಯ ಎಂಬುದು ಪ್ರಮುಖಾಂಶ.
ಕನ್ನಡ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜೊತೆಗೆ ಜಾಗತೀಕರಣದ ಪರಿಣಾಮ ಸೇರಿದಂತೆ ಹಲವು ಆಧುನಿಕ ವಿದ್ಯಮಾನಗಳು ಕನ್ನಡವನ್ನು ಮೂಲೆಗುಂಪು ಮಾಡಿರುವ ಈ ಕಾಲ ಸಂದರ್ಭದಲ್ಲಿ ಕನ್ನಡಕ್ಕೆ ಮಾತ್ರವಲ್ಲ ಯಾವುದೇ ಸ್ಥಳೀಯ ಭಾಷೆಗೆ ಮತ್ತು ಸಂಸ್ಕೃತಿಗೂ ಮಾರಕವೇ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಎದುರಾಗುವ ತೊಂದರೆಗಳನ್ನು ತಡೆಯುವ ನಿಟ್ಟಿನಲ್ಲಿ "ಕರ್ನಾಟಕ ರಕ್ಷಣಾ ವೇದಿಕೆ"ಯಂತ ಹಲವಾರು ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಆಡಳಿತದಲ್ಲಿ ಕನ್ನಡ ಭಾಷೆ ಜಾರಿಗೆ ಬಂದರೂ ಅದು ಸಮರ್ಪಕವಾಗಿ ಫಲಕಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗರ ನಡೆ ನುಡಿ ಅತ್ಯಂತ ಜವಾಬ್ದಾರಿಯುತವಾದದ್ದು. ಈ ದಿಸೆಯಲ್ಲಿ ಪ್ರಾಮಾಣಿಕವಾಗಿ ತನ್ನ ಕಂಡಕ್ಟರ್ ವೃತ್ತಿ ಬದುಕಿನ ಹಾಗೂ ಇತರೆ ಹವ್ಯಾಸಗಳ ಮೂಲಕವೇ ತನ್ನದೇ ಆದ ಕನ್ನಡ ಸೇವೆಯನ್ನು ಸಲ್ಲಿಸುತ್ತಿರುವ ಈ ಕನ್ನಡದ ಕಂಡಕ್ಟರ್ ನಟರಾಜ್ ನಿಜಕ್ಕೂ ಅಭಿನಂದನಾರ್ಹರು. ಹೀಗಾಗಿ ಇವರ ಸೇವಾ ಕಾರ್ಯಗಳು ಅನೇಕ ಕನ್ನಡ ಪರ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.
೨೦೧೦ರಲ್ಲಿ ಗಡಿನಾಡ ಧ್ವನಿರಾಜ್ಯ ಪ್ರಶಸ್ತಿ ಕಾಸರಗೋಡು ಇವರಿಂದ ೨೦೦೮ರಲ್ಲಿ ಕೆ.ಆರ್.ನಗರ, ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ಇದೇ ವರ್ಷ ತುಮಕೂರು ಅಭಿಮಾನಿ ಸಂಘದ ವತಿಯಿಂದ ಅಪ್ಪಟ ಕನ್ನಡ ಅಭಿಮಾನಿ ಪ್ರಶಸ್ತಿ ಹಾಗೂ ವಿಶೇಷವಾಗಿ ಪ್ರಯಾಣಿಕರಿಂದಲೇ "ಕನ್ನಡ ಪ್ರೇಮಿ ನಟರಾಜ್ ಎಂದೇ ಪ್ರೀತಿಗೆ ಪಾತ್ರದ ಪ್ರಶಸ್ತಿ ಸ್ವೀಕಾರ ೨೦೦೯ರಲ್ಲಿ ನವಕರ್ನಾಟಕ ಸಾಂಸ್ಕೃತಿಕ ವೇದಿಕೆಯಿಂದ ಸಮಾಜ ಸೇವಾ ಭೂಷಣ ಪ್ರಶಸ್ತಿ, ಬೆಂಗಳೂರು ಚೇತನ್ ಕಲಾ ಸಂಸ್ಥೆ ಇವರಿಂದ ವಿಶ್ವ ಚೈತನ್ಯ ರತ್ನ, ಪ್ರಶಸ್ತಿ ೨೦೧೦ರಲ್ಲಿ ಸುವರ್ಣ ಕರ್ನಾಟಕ ಕಾಮಧೇನು ಪ್ರಶಸ್ತಿ, ಇದಲ್ಲದೆ ಸಾರಿಗೆ ಇಲಾಖೆ, ಕನ್ನಡ ಕ್ರಿಯಾ ಸಮಿತಿಯಿಂದಲೂ ಹಲವಾರು ಸನ್ಮಾನ ಪುರಸ್ಕಾರಗಳನ್ನು ಸ್ವೀಕರಿಸಿರುವ ನಟರಾಜ್ ಅವರಿಗೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರೊಂದಿಗೆ ಒಂದೇ ವೇದಿಕೆಯಲ್ಲೆ ಪ್ರಶಸ್ತಿ ಹಂಚಿಕೊಂಡ ಹೆಗ್ಗಳಿಕೆಯೂ ಇದೆ. ಇನ್ನೂ ಅನೇಕ ದೃಶ್ಯ ಮತ್ತು ಶ್ರವಣ ಮಾಧ್ಯಮಗಳಲ್ಲೂ ಇವರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಹಾಗೂ ಸಂದರ್ಶನಗಳು ಬಿತ್ತರವಾಗಿರುವುದು ನಟರಾಜ್‌ರ ಸಾಧನೆಗೆ ಹಿಡಿದ ಕನ್ನಡಿ. ತಾನು ನಡೆಸುವ ಯಾವುದೇ ಕಾರ್ಯಕ್ರಮದಲ್ಲೂ ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ನಟರಾಜ್ ತಪ್ಪದೆ ಕೋರಿಕೊಳ್ಳುವ ಕಳಕಳಿ ಎಂದರೆ,
* ಪ್ರಯಾಣಿಕರೇ ಧೈರ್ಯದಿಂದ ಹೇಳಿಕೊಳ್ಳಿ ನಾವು ಕನ್ನಡಿಗರು ಎಂದು.
* ನೀವು ಎಲ್ಲೇ ಇರಿ, ಹೇಗೇ ಇರಿ ನಿಮ್ಮ ಮನೆ ಮತ್ತು ಮನ ಸದಾ ಕನ್ನಡಮಯವಾಗಲಿ.
* ದೀಪಾವಳಿ ದಿನ ಯಾವ ರೀತಿ ಮನೆಗಳ ಮೇಲೆ ಆಕಾಶ ಬುಟ್ಟಿಯನ್ನು ಹಾಕುತ್ತಿರೋ ಅದೇ ರೀತಿ ನವೆಂಬರ್ ತಿಂಗಳು ಮುಗಿಯುವರೆಗೂ ನಿಮ್ಮ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಿ.
* ಇದು ನಟರಾಜ್ ಪ್ರತಿಯೊಬ್ಬರಲ್ಲೂ ಕೇಳಿಕೊಳ್ಳುವ ಕನ್ನಡ ಪರವಾದ ಪ್ರೀತಿಯ ಕಳಕಳಿ.
ಅಂದ್ಹಾಗೆ ಈ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಟರಾಜ್ ಕೈಗೊಂಡಿರುವ ಜಾಗೃತಿ ರಥದ ವಿಶೇಷತೆಗಳು ಹೀಗಿವೆ;
"ಭವ್ಯ ಕರ್ನಾಟಕ ದಿವ್ಯ ದರ್ಶನ" ಇದು ಬಸ್ಸಿನ ಮುಂಭಾಗ ನಾಮಫಲಕ, ಇದರೊಂದಿಗೆ ಇತ್ತೀಚೆಗಷ್ಟೇ ನಮ್ಮನ್ನಗಲಿದ ಡಾ||ಪುಟ್ಟರಾಜಗವಾಯಿ, ಡಾ||ರಾಜ್‌ಕುಮಾರ್, ಡಾ||ವಿಷ್ಣುವರ್ಧನ್, ಸಿ.ಅಶ್ವಥ್, ಭಾವಚಿತ್ರದ ಮೂಲಕ "ಪ್ರಯಾಣಿಕರೇ ನಾವೆಲ್ಲರೂ ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸೋಣ ಈ ಮಹಾನ್ ಕನ್ನಡಿಗರು ಮತ್ತೆ ಹುಟ್ಟಿಬರಲೆಂದು ಎಂಬ ವಿನಮ್ರ ಅಭಿಮಾನದ ಘೋಷಣೆ".
ಇನ್ನು ಜಾಗೃತಿ ರಥದ ಒಳಗೆ: ಎಲ್ಲಾ ಕನ್ನಡದ ಕವಿಗಳು, ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳ ಮಾಹಿತಿ, ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಭಾವಚಿತ್ರಗಳು, ಡಾ||ವಿಷ್ಣು, ಡಾ||ರಾಜ್, ಸಿ.ಅಶ್ವಥ್‌ರವರ ಕನ್ನಡ ಪ್ರೇಮ ಗೀತೆಗಳು ಮತ್ತು ಸಾಹಿತ್ಯ ಪುಸ್ತಕಗಳು. ಕುಡಿಯುವ ನೀರಿನ ವ್ಯವಸ್ಥೆ, ಧ್ವನಿವರ್ಧಕಗಳು. ಈ ಅಭಿಮಾನಿ ಕನ್ನಡಿಗ ನಟರಾಜ್ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಿ ಈ ವರ್ಷದ ಕನ್ನಡ ಜಾಗೃತಿ ರಥವನ್ನು ಎಳೆಯಬೇಕಿದೆ.
ಒಟ್ಟಾರೆ, ತನ್ನ ಪ್ರತಿ ಹೆಜ್ಜೆಯಲ್ಲೂ ಕನ್ನಡ ಸೇವೆಯ ಗುರುತು ಅಚ್ಚೊತ್ತಲು ಹಪಹಪಿಸುವ ನಟರಾಜ್ ಅವರನ್ನು ಅಭಿನಂದಿಸಬೇಕಾದರೆ ಅವರ ಜಂಗಮವಾಣಿ ೯೯೦೦೪೭೮೮೬೮ನ್ನು ಸಂಪರ್ಕಿಸಿ.

ಸಿದ್ಧಾಪುರ ಶಿವಕುಮಾರ್
ಸಿದ್ಧಾಪುರ, ಚಳ್ಳೇಕೆರೆ ತಾಲೂಕು-೫೭೭ ೫೨೨

ಕನ್ನಡಮ್ಮನಿಗೆ ಪ್ರಾಣ ದೀವಿಗೆ ಹೊತ್ತಿಸಿದ ಮು.ಗೋವಿಂದರಾಜು




ಕನ್ನಡ ಕಲಿಗಳ ಸಂಕಲ್ಪವೇ ಅಂತಹುದು.
ಕನ್ನಡವನ್ನೇ ಉಸಿರಾಗಿಸಿಕೊಂಡ ಜೀವ ಯಾವ ತ್ಯಾಗಕ್ಕೂ ಬೇಕಾದರು ಸದಾ ಸಿದ್ದವಾಗಿರುತ್ತೆ. ಏಕೆಂದರೆ ಕನ್ನಡದ ಧೀ ಶಕ್ತಿಯ ತಾಕತ್ತೇ ಅಂತಹುದು. ಕನ್ನಡ ನಾಡ ಸೊಬಗು, ಐತಿಹ್ಯ, ಸಂಸ್ಕೃತಿ, ಹೋರಾಟ ಮನೋಭಾವ, ಕಲಿಗಳ ಕೆಚ್ಚುತನ ನಿಜಕ್ಕೂ ಮಾದರಿಯೇ ಸರಿ.
ಇದು ಕನ್ನಡಿಗನ ರಕ್ತದಲ್ಲೇ ಹುಟ್ಟಿ ಬರುವ ಗುಣ. ಇದನ್ನು ಹಿಂದಿನ ಇತಿಹಾಸಗಳು ಸಾಕ್ಷೀಕರಿಸಿವೆ.
ಕನ್ನಡಕ್ಕೆ ಅಪಾಯ ಒದಗಿದಾಗಲೆಲ್ಲ ನೂರಾರು, ಸಾವಿರಾರು ಕನ್ನಡದ ಕಲಿಗಳು ಕನ್ನಡಮ್ಮನ ರಕ್ಷಣೆಗೆ ನಿಂತು, ಅವಿರತವಾಗಿ ಸೆಣಸಿ, ಕಷ್ಟ ಕೋಟಲೆಗಳ ಸಹಿಸಿ ಹೋರಾಡಿದ್ದಾರೆ, ಹೋರಾಡುತ್ತಲೇ ಇದ್ದಾರೆ.
ಈ ಹಿಂದಿನ ಕಲಿಗಳ ಅನನ್ಯ ಹೋರಾಟ ಗಾಥೆ ಇಂದಿನ ಪೀಳಿಗೆಯ ಕನ್ನಡಿಗನ ಎದೆಯಲ್ಲಿ ಹೊಸದೊಂದು ಹುರುಪು, ಅಭಿನವವಾದುದೊಂದು ಆದರ್ಶ, ಶಕ್ತಿಯನ್ನು ಸ್ಫುರಿಸುತ್ತಿದೆ; ಈ ಸ್ಫೂರ್ತಿಯೇ ಹೋರಾಟದ ಸಾಗರಕ್ಕೆ ನೂರಾರು ನದಿಗಳನ್ನು ಧುಮುಕಿಸುತ್ತಲೇ ಇದೆ. ಇಂತಹ ಅನನ್ಯ ಸ್ಫೂರ್ತಿದಾಯಕ, ಆದರ್ಶಪ್ರಾಯ, ದಿಟ್ಟ ಕಲಿಯೇ ಮು.ಗೋವಿಂದರಾಜು. ಕನ್ನಡ ಚಳವಳಿಯ ಅಮರ, ಅನನ್ಯ ಹೋರಾಟಗಾರ.
ಅದು ೭೦ರ ದಶಕ. ಕನ್ನಡ ಚಳವಳಿ ತೀವ್ರಗೊಂಡಿದ್ದ ಕಾಲಘಟ್ಟವದು.
ಮ.ರಾಮಮೂರ್ತಿ ನೇತೃತ್ವದಲ್ಲಿನ ‘ಕನ್ನಡ ಪಕ್ಷ ಕಟ್ಟಾಳುಗಳ ಸದೃಢ ಸಂಘಟನೆಯಾಗಿತ್ತು. ಬೆಳಗಾವಿ ನಗರವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸುವ ಕುರಿತಾಗಿ ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ನಿರ್ಣಯ ಮಂಡಿತವಾಗಿ ಚರ್ಚೆ ನಡೆಯುತ್ತಿದ್ದ ಸಂದರ್ಭ.
ಮು.ಗೋವಿಂದರಾಜು ಅವರು, ಕನ್ನಡದ ಕೈಂಕರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾದರು. ಕೃಷ್ಣಪ್ಪ ಕೋಶಾಧಿಕಾರಿಯಾಗಿದ್ದರು. ಮು.ಸಂಪಂಗಿರಾಮಯ್ಯ ಕಾರ‍್ಯದರ್ಶಿಯಾಗಿದ್ದರು.
ಆಗ ಮಹಾಜನ್ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆಗಳು, ಹೋರಾಟ, ಧರಣಿ, ಹರತಾಳ ಎಲ್ಲವೂ ರಭಸದಿಂದ ನಡೆಯುತ್ತಿದ್ದವು.
ಈ ಕುರಿತಾಗಿ ಇಡೀ ದೇಶದ ಜನರ ಗಮನ ಸೆಳೆಯುವ ಸಲುವಾಗಿ ‘ಕನ್ನಡ ಪಕ್ಷವು ಬೆಂಗಳೂರಿನಿಂದ ಪೂನಾಗೆ ಹೊರಡುವ ರೈಲನ್ನು ತಡೆದು ನಿಲ್ಲಿಸುವ ಪ್ರತಿಭಟನೆ ಹಮ್ಮಿಕೊಂಡಿತ್ತು. ಡಿಸೆಂಬರ್ ೧೩, ೧೯೭೦ರಂದು ಕನ್ನಡ ಹೋರಾಟಗಾರರಾದ ಮು.ಸಂಪಂಗಿರಾಮಯ್ಯ, ಕರ್ಲಮಂಗಲಂ ಶಂಕರಪ್ಪ, ಜಗದೀಶ್‌ರೆಡ್ಡಿ, ಬೆ.ತಿ.ರಾಜಣ್ಣ, ಮು.ಗೋವಿಂದರಾಜು ಇವರ ತಂಡ ಮೊದಲ ದಿನದ ಹೋರಾಟಕ್ಕೆ ಸಿದ್ಧವಾಯಿತು. ಇದು ಕನ್ನಡ ಪಕ್ಷ ಹಮ್ಮಿಕೊಂಡಿದ್ದ ಸತತ ೧೫ ದಿನಗಳ ಹೋರಾಟವಾಗಿತ್ತು. ಇದಕ್ಕಾಗಿ ಮೂರು ಬಾರಿ ಸಭೆ ನಡೆದು ಸಾಕಷ್ಟು ಜನಬೆಂಬಲ ಸಿಕ್ಕಿತ್ತು.
ಬೆಂಗಳೂರಿನ ಶ್ರೀರಾಮಪುರ ರೈಲ್ವೇ ಬ್ರಿಡ್ಜ್ ಹತ್ತಿರ ರೈಲು ಬರುತ್ತಿದ್ದ ಸಂದರ್ಭದಲ್ಲಿ ದಿಢೀರ್ ಎಂದು ಒಂದು ಮನೆಯಲ್ಲಿ ಅಡಗಿ ಕುಳಿತಿದ್ದ ಕನ್ನಡ ಚಳವಳಿಗಾರರಾದ ಮು.ಸಂಪಂಗಿರಾಮಯ್ಯ ಹಾಗೂ ಕರ್ಲಮಂಗಲಂ ಶಂಕರಪ್ಪ ಹಳಿಗಳ ಮೇಲೆ ಮೊದಲು ಮಲಗಿದರು. ಈ ಇಬ್ಬರನ್ನೂ ರೈಲು ಇಂಜಿನ್ನಿನ ಬಂಪರ್ ಎತ್ತಿ ಹೊರಗೆ ಒಗೆಯಿತು. ಆನಂತರ ಮಲಗಿದ್ದ ಮು. ಗೋವಿಂದರಾಜು, ಅವರು ರೈಲಿಗೆ ಸಿಕ್ಕಿ ಬಲಿಯಾದರು. ಎರಡು ದಿನಗಳ ಹಿಂದೆ ನಾಯಿ ಕಚ್ಚಿ ಕಾಲು ನೋವಾಗಿದ್ದರೂ ಮನೆಯಲ್ಲಿ ಕೂರದೆ ಹೋರಾಟಕ್ಕಿಳಿದಿದ್ದ ಕೆಚ್ಚೆದೆಯ ಹೋರಾಟಗಾರ ಮು.ಗೋವಿಂದರಾಜು. ನಾಡಿಗೆ ತಮ್ಮ ಜೀವವನ್ನೇ ಬಲಿಕೊಟ್ಟು ಆತ್ಮಾರ್ಪಣೆ ಮಾಡಿಕೊಂಡು ಅಮರರಾದರು. ಇಡೀ ದೇಶದಲ್ಲಿ ಮು.ಗೋವಿಂದರಾಜುರವರ ಬಲಿದಾನ ಸುದ್ದಿಯಾಗಿ ಬೆಳಗಾವಿಯ ವಿಚಾರದಲ್ಲಿ ಕರ್ನಾಟಕಕ್ಕೆ ಕಾರ್ಯಸಾಧನೆಯಾಯಿತು.
ಮೂಲತ: ತೆಲುಗು ಭಾಷಿಗರಾದ ಮು.ಗೋವಿಂದರಾಜು ಅವರು, ಕನ್ನಡಕ್ಕಾಗಿ ಪ್ರಾಣ ತ್ಯಾಗ ಮಾಡಿ ಭಾಷಾ ಸಾಮರಸ್ಯ, ಕನ್ನಡದೆಡೆಗಿನ ಅಪ್ರತಿಮ ಪ್ರೀತಿಯನ್ನು ಸಾಕ್ಷೀಕರಿಸಿದ್ದಾರೆ.
ಮು.ಗೋವಿಂದರಾಜು ಅವರ ಅಂತಿಮ ಯಾತ್ರೆಯಲ್ಲಿ ಇಡೀ ಕನ್ನಡ ನಾಡಿನ ಸಮಸ್ತ ಜನತೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಮನಸ್ಸು ಪೂರ್ತಿಯಾಗಿ ಕಂಬನಿ ಮಿಡಿಯಿತು. ಯಾತ್ರೆಯೊಂದಿಗೆ ಅನಕೃ ಅವರಂತಹ ನಾಡಿನ ಗಣ್ಯರು ಹೆಜ್ಜೆ ಹೆಜ್ಜೆಗೆ ಹಾಕಿ ಅಗಲಿದ ಕಲಿಗೆ ಗೌರವ ನಮನ ಸಲ್ಲಿಸಿದರು.
ಮು.ಗೋವಿಂದರಾಜು ಅವರ ಬಲಿದಾನದ ನಂತರ ಸುಮಾರು ಹತ್ತಕ್ಕೂ ಹೆಚ್ಚು ಕನ್ನಡದ ಹೋರಾಟಗಾರರು ಬೆಂಗಳೂರು ನಗರಸಭೆಗೆ ವಿವಿಧ ವಾರ್ಡ್‌ಗಳಿಂದ ಆಯ್ಕೆಯಾದರು. ಗೋವಿಂದರಾಜು ಅವರ ಬಲಿದಾನ ಕನ್ನಡಿಗರೆದೆಯಲ್ಲಿ ಹೊಸದೊಂದು ಚಿಂತನೆಗೆ ಹುಟ್ಟಿ ಹಾಕಿತ್ತು. ಕನ್ನಡದೆಡೆಗಿನ ಅಭಿಮಾನಕ್ಕೆ, ಔನ್ನತ್ಯಕ್ಕೆ, ಅಂತ:ಕರಣ ಸ್ಫೂರ್ತಿಗೆ ಸಾಕ್ಷಿಯಾಗಿ ಮತದಾರರು ವಿಜಯಮಾಲೆ ಹಾಕಿದರು.
ಗೋವಿಂದರಾಜು ಅವರು ಸಹ ರಾಮಚಂದ್ರಪುರ ವಾರ್ಡ್‌ನಿಂದ ಸ್ಪರ್ಧಿಸಿದ್ದರು. ಇವರು ಕೇವಲ ಹೋರಾಟಗಾರರಷ್ಟೇ ಅಲ್ಲ. ಕನ್ನಡಕ್ಕಾಗಿ ಏನೆಲ್ಲ ಮಾಡಬಹುದು, ಯಾವೆಲ್ಲ ಕ್ಷೇತ್ರಗಳಲ್ಲಿ ದುಡಿಯಬಹುದು ಎಂಬುದು ಅರಿತು ಸದಾ ಕ್ರಿಯಾಶೀಲರಾದವರು.
ಇಂದಿಗೂ ಇವರ ಧರ್ಮಪತ್ನಿ ಧನಲಕ್ಷ್ಮೀ ಬೆಂಗಳೂರಿನ ಪ್ರಕಾಶನಗರದಲ್ಲಿ ವಾಸವಾಗಿದ್ದಾರೆ. ಹೋರಾಟಕ್ಕೆ ತಮ್ಮನ್ನೇ ಮುಡುಪಾಗಿರಿಸಿದ್ದ ಚೇತನದಲ್ಲಿ ಖಾಸಗಿ ಬದುಕಿನ ಔನ್ನತ್ಯದ ಚಿಂತೆ ಎಲ್ಲಿಯದು? ಸಹಜವಾಗಿ ಬಡತನ ತನ್ನ ನೆರಳು ಬೀರಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರು ಸಮಾರಂಭವೊಂದರಲ್ಲಿ ಧನಲಕ್ಷ್ಮಿಯವರಿಗೆ ೨೫ಸಾವಿರ ರೂ.ಗಳ ಚೆಕ್ ನೀಡಿ ಗೌರವಿಸಿದರು. ನಾಡಿಗಾಗಿ ಪ್ರಾಣ ತೆತ್ತ ಮಹನೀಯರ ಜೀವನ ಕಷ್ಟದಲ್ಲಿದ್ದಾಗ ನೆರವು ನೀಡುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ಆದರೆ ಕೆಲವರು ಹಣ ನೀಡದೆ ಬರೀಯ ಕವರ್ ನೀಡಿರುವ ಉದಾಹರಣೆ ಉಂಟು. ಸಹಾಯ ಮಾಡುವುದಾಗಿ ಹೇಳಿ ನಂಬಿಸಿ ಮೋಸ ಮಾಡಿರುವುದು ಉಂಟು. ಇದು ನಿಜಕ್ಕೂ ಅಮರವಾದ ಆ ಚೇತನಕ್ಕೆ ನಾವು ಮಾಡುವ ದ್ರೋಹ. ಕನ್ನಡಕ್ಕೆ, ಕನ್ನಡದ ಔದಾರ್ಯಕ್ಕೆ ಮಾಡುವ ಅಪಚಾರವೇ ಸರಿ.
ಇಂತಹ ಧೀರೋದಾತ್ತ ವ್ಯಕ್ತಿಗಳ ಕುಟುಂಬದವರಿಗೆ ಅಗತ್ಯ ನೆರವು ನೀಡಬೇಕಿದೆ. ಒಂದು ಪಕ್ಷದಲ್ಲಿ ಸಹಾಯ ನೀಡಲು ಸಾಧ್ಯವಾಗದಿದ್ದರೆ ಮಾಡಬಾರದ ಚೇಷ್ಟೆಗಳನ್ನು ಮಾಡುವುದು ಸಲ್ಲದು.
ಅನೇಕ ಸಂಘ ಸಂಸ್ಥೆಗಳು ನೆರವು ನೀಡಿವೆ, ನೀಡುತ್ತಿವೆ. ಕನ್ನಡಕ್ಕಾಗಿ ಜೀವವನ್ನೇ ಬಲಿಗೊಟ್ಟ ನಾಯಕನ ಕುಟುಂಬಕ್ಕೆ ನಾವು ಇಂತಿನಿತಾದರು ನೆರವು ನೀಡಬೇಕಲ್ಲವೆ?
ಮು.ಗೋವಿಂದರಾಜು ಅವರಂತಹ ನಿಷ್ಕಳಂಕ, ಅಪ್ಪಟ ಕನ್ನಡ ಪ್ರೇಮಿಗಳ ಬದುಕು, ಹೋರಾಟ ನಮ್ಮ ಮುಂದಿನ ದಾರಿಯ ದೀಪವಾಗಲಿ.

ಗೋ.ಮೂರ್ತಿ ಯಾದವ್

ನಲ್ನುಡಿ ಕಥಾ ಸ್ಪರ್ಧೆ ವಿಜೇತರಿಗೆ ಸತ್ಕಾರ,ಅಭಿನಂದನೆ




ಅಲ್ಲಿ ‘ಶುದ್ಧ ಕನ್ನಡಿಗರ’ ಕಕ್ಕುಲತೆ ಇತ್ತು, ಜಾನಪದ ಜಗತ್ತಿನ ಬೆರಗಿತ್ತು...ಅದಮ್ಯ ಕನ್ನಡ ಪ್ರೇಮ ಮೇಳೈಸುತ್ತಿತ್ತು...ಎಲ್ಲೆಲ್ಲೂ ಕನ್ನಡ ಕನ್ನಡ ಮತ್ತು ಕನ್ನಡ...
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಕಲಾಕ್ಷೇತ್ರದಲ್ಲಿ ಅಕ್ಷರಶಃ ಕನ್ನಡದ ಹಬ್ಬ. ನ.೨೪ ರಂದು ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾ ಘಟಕ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯೋತ್ಸವ ಸಮಾರಂಭ ಹಾಗೂ ಕರವೇ ನಲ್ನುಡಿ ಕಥಾ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ವಿತರಣೆ, ಸತ್ಕಾರ ಸಮಾರಂಭದಲ್ಲಿ ಕನ್ನಡದ್ದೇ ಕಲರವ.
ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಬದ್ನೂರ, ತಾಲೂಕ ಅಧ್ಯಕ್ಷ ಅಮೃತ್ ಇಜಾರಿ, ಕರವೇ ಪದಾಧಿಕಾರಿಗಳು ಹಾಗೂ ಕಾರ‍್ಯಕರ್ತರು ಅತ್ಯಂತ ಅಚ್ಚುಕಚ್ಚಾಗಿ ಸಮಾರಂಭ ವ್ಯವಸ್ಥೆಗೊಳಿಸಿದ್ದರು. ಸಮಾರಂಭಕ್ಕೂ ಮುನ್ನ ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ಮೆರವಣಿಗೆ ಏರ್ಪಡಿಸಲಾಗಿತ್ತು. ಜಾನಪದ ನೃತ್ಯ ಕಲಾವಿದರು ಮೆರವಣಿಗೆಯುದ್ದಕ್ಕೂ ವಿವಿಧ ಜಾನಪದ ಕಲಾಪ್ರಕಾರಗಳನ್ನು ಪ್ರಸ್ತುತಪಡಿಸಿ ಮೆರವಣಿಗೆಗೆ ರಂಗು ಮೂಡಿಸಿದರು.
ಬರೋಬ್ಬರಿ ೫ ಸಾವಿರಕ್ಕೂ ಹೆಚ್ಚು ಕನ್ನಡ ಕಾರ‍್ಯಕರ್ತರು ಪಾಲ್ಗೊಂಡಿದ್ದ ಮೆರವಣಿಗೆ ನಗರವಿಡೀ ಸಂಚಲನ ಮೂಡಿಸಿತ್ತು. ಎಲ್ಲೆಲ್ಲೂ ಕನ್ನಡದ ಬಾವುಟ...ಕನ್ನಡದ ಶಾಲು...ಕನ್ನಡದ ಜಯಘೋಷ...ಹುಬ್ಬಳ್ಳಿ ನಗರವಿಡೀ ಕನ್ನಡಮಯವಾಗಿದ್ದು ಅಂದಿನ ವಿಶೇಷ.
ದಿನವಿಡೀ ಹುಬ್ಬಳ್ಳಿ ನಗರ ಮತ್ತು ಸವಾಯಿ ಗಂಧರ್ವ ಕಲಾಕ್ಷೇತ್ರದಲ್ಲಿ ಕರವೇ ಕಾರ‍್ಯಕರ್ತರ ಓಡಾಟವೋ ಓಡಾಟ. ಬಂದಿದ್ದ ಅತಿಥಿಗಳನ್ನು ಆಹ್ವಾನಿಸುವ, ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆಗೊಳಿಸುವ, ಊಟ-ತಿಂಡಿ ಕಲ್ಪಿಸುವ ಧಾವಂತ.
ಭಾಷೆಯ ವಿಸ್ತಾರತೆ ಅನಿವಾರ‍್ಯ
ಸಂಜೆ ೫ ಗಂಟೆ ನಡೆದ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದವರು ಧಾರವಾಡ ಮುರುಘಾಮಠದ ಮ.ನಿ.ಪ್ರ. ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ನಾಡೋಜ ಪಾಟೀಲ ಪುಟ್ಟಪ್ಪ , ಕನ್ನಡ ಭಾಷೆಯ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗನೂ ಕಂಕಣ ತೊಡಬೇಕು. ನಾಡು ಉಳಿದರೆ ಮಾತ್ರ ನಾವುಗಳು ಉಳಿಯಲು ಸಾಧ್ಯ ಎಂದು ಭಾಷೆಯ ವಿಸ್ತಾರತೆ ಮತ್ತು ಅಸ್ತಿತ್ವದ ಅನಿವಾರ‍್ಯತೆ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ಬಹುಮಾನ ವಿತರಣೆ
ನಲ್ನುಡಿ ಕಥಾಸ್ಫರ್ಧೆ-೨೦೧೦ರ ಪ್ರಥಮ ಬಹುಮಾನ ಪಡೆದ ಸಂಧ್ಯಾ ಹೊನಗುಂಟಿಕರ್ ಅವರಿಗೆ ೨೫ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಪುರಸ್ಕರಿಸಲಾಯಿತು. ದ್ವಿತೀಯ ಬಹುಮಾನ ಪಡೆದ ಅಬ್ಬಾಸ್ ಮೇಲಿನಮನಿ ಅವರಿಗೆ ೧೫.೦೦೦ ರೂ. ನಗದು, ತೃತೀಯ ಬಹುಮಾನ ಪಡೆದ ಶಂಕರರಾವ್ ಉಭಾಳೆ ಅವರಿಗೆ ೧೦ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಪುರಸ್ಕರಿಸಲಾಯಿತು.
ಕಥಾ ಸ್ಪರ್ಧೆಯ ತೀರ್ಪುಗಾರರ ಮೆಚ್ಚುಗೆ ಗಳಿಸಿದ ೧೧ ಮಂದಿ ಪೈಕಿ ಡಾ.ಸೋಮಣ್ಣ ಹೊಂಗಳ್ಳಿ, ಡಾ.ಆನಂದ ಋಗ್ವೇದಿ, ಭವ್ಯಾ ಎಚ್.ಸಿ., ವೈ.ಮಂಜುಳಾ, ಹಣಮಂತ ಹಾಲಿಗೆರಿ, ಬಿ.ಟಿ.ರುಹುಲ್ಲಾ ಸಾಹೇಬ್, ಕಲ್ಲೇಶ್ ಕುಂಬಾರ್, ವಿಶ್ವನಾಥ ಪಾಟೀಲ ಗೋನಾಳ ಅವರಿಗೆ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾರಾಯಣಗೌಡರು, ಕನ್ನಡ ಕಥಾ ಕ್ಷೇತ್ರ ಶ್ರೀಮಂತವಾಗಿದೆ. ಹೊಸ ಹೊಸ ತಲ್ಲಣಗಳನ್ನು, ಗ್ರಹಿಕೆಗಳನ್ನು ಒಳಗೊಂಡ ಕಥೆಗಾರರು ರೂಪುಗೊಳ್ಳುತ್ತಲೇ ಇದ್ದಾರೆ. ಕರವೇ ನಲ್ನುಡಿ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯೇ ಇದಕ್ಕೆ ಸಾಕ್ಷಿ ಎಂದರು.
ಕಥಾ ಸ್ಪರ್ಧೆಗೆ ಸಾವಿರಕ್ಕೂ ಹೆಚ್ಚು ಕಥೆಗಾರರು ಪಾಲ್ಗೊಂಡಿದ್ದರು. ಇದು ನಿಜಕ್ಕೂ ಹೆಮ್ಮೆ ಪಡುವ ವಿಚಾರ. ನಮ್ಮ ಕಥಾ ಕ್ಷೇತ್ರ ದಿನದಿನಕ್ಕೂ ವಿಸ್ತಾರಗೊಳ್ಳುತ್ತಲೇ ಇದೆ. ಹೊಸ ಅನುಭವಗಳನ್ನು ಮೂಡಿಸುವ ಕಥೆಗಾರರು ನಮ್ಮಲ್ಲಿ ಹೇರಳವಾಗಿದ್ದಾರೆ. ಇಂಥವರನ್ನು ಗುರುತಿಸುವ ಕೆಲಸ ಆಗಬೇಕು. ಪ್ರಭಾವಿ ಮಾಧ್ಯಮವೇ ಆಗಿರುವ ಕನ್ನಡ ಚಿತ್ರರಂಗ ಇಂಥ ಕಥೆಗಾರರತ್ತ ಕಣ್ಣು ಹಾಯಿಸಬೇಕು. ಸದಾ ಅನ್ಯಭಾಷೆಯ ಚಿತ್ರಗಳನ್ನು ನೋಡಿ ಅಲ್ಲಿಂದ ಕತೆಗಳನ್ನು ಕದಿಯುವ ಅಥವಾ ಅದನ್ನೇ ರೀಮೇಕ್ ಮಾಡುವ ವ್ಯವಸ್ಥೆಗೆ ತಿಲಾಂಜಲಿ ಹೇಳಿ ನಮ್ಮಲ್ಲೇ ಇರುವ ಅತ್ಯುತ್ತಮ ಕತೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಚಿತ್ರಗಳನ್ನಾಗಿಸುವ ಮನಸ್ಸು ಮಾಡಬೇಕು ಎಂದು ಹೇಳಿದರು.
ಹುಬ್ಬಳ್ಳಿಯಲ್ಲೇ ಏಕೆ?
ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲೇ ಏಕೆ ಆಯೋಜಿಸಲಾಯಿತು ಎಂಬುದಕ್ಕೆ ಸ್ಪಷ್ಟನೆಯನ್ನು ಪ್ರಾಸ್ತಾವಿಕವಾಗಿ ಮಾತನಾಡಿದ ‘ಕರವೇ ನಲ್ನುಡಿ’ ಸಂಪಾದಕ ದಿನೇಶ್ ಕುಮಾರ್ ಎಸ್.ಸಿ. ನೀಡಿದರು. ‘ನಲ್ನುಡಿ ಬಿಡುಗಡೆ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಮಾತನಾಡುತ್ತ ಪ್ರತಿ ಗ್ರಾಮದಲ್ಲಿ ಭಾರತದ ಕೇಂದ್ರ ಇದೆ ಎಂದಿದ್ದರು. ಈ ಮಾತುಗಳನ್ನು ಕರ್ನಾಟಕದ ಮಟ್ಟಿಗೆ ಅನ್ವಯಿಸಿ ಹೇಳುವುದಾದರೆ ಪ್ರತಿ ಗ್ರಾಮದಲ್ಲೂ ಕರ್ನಾಟಕದ ಕೇಂದ್ರವಿದೆ. ಬೆಂಗಳೂರಿನ ಸುತ್ತಲೇ ಗಿರಕಿ ಹೊಡೆಯುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಹುಬ್ಬಳ್ಳಿಗೆ ಬಂದಿದ್ದೇವೆ.
ಕಥಾಸ್ಪರ್ಧೆಗೆ ಹೆಚ್ಚು ಸ್ಪಂದನೆ ದೊರೆತಿದ್ದು ಉತ್ತರ ಕರ್ನಾಟಕದಿಂದ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದಿಂದ. ಅತಿ ಹೆಚ್ಚು ಶಕ್ತಿಯುತವಾದ ಕಥೆಗಳು ಬಂದಿದ್ದೂ ಈ ಭಾಗದಿಂದಲೇ. ಅತಿ ಹೆಚ್ಚು ಬಹುಮಾನಗಳೂ ಸಹ ಈ ಭಾಗಕ್ಕೇ ಸಂದಿದೆ. ಹೀಗಾಗಿ ಇಲ್ಲಿ ಕಾರ್ಯಕ್ರಮ ನಡೆಸುವುದು ಅರ್ಥಪೂರ್ಣವೆನಿಸಿತು.
ಎಲ್ಲಕ್ಕೂ ಮಿಗಿಲಾಗಿ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಆದ್ಯತೆ ನೀಡುತ್ತಲೇ ಬಂದಿದೆ. ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರಿಗೆ ಹುಬ್ಬಳ್ಳಿ ಅತ್ಯಂತ ಪ್ರೀತಿಯ ನಗರ. ಹೀಗಾಗಿ ಈ ಕಾರ್ಯಕ್ರಮ ಇಲ್ಲಿ ನಡೆದಿದೆ ಎಂದು ದಿನೇಶ್ ವಿವರಿಸಿದರು.
ಕಥೆಗಳನ್ನು ಕೇಳಿಸಿ...
‘ನಾವೆಲ್ಲಾ ಅಜ್ಜಿಯಂದಿರ ಕಥೆ ಕೇಳಿ ಬೆಳೆದವರು. ಈಗ ಕಥೆ ಹೇಳಲು ಅಜ್ಜಿಯರಿಲ್ಲ. ಕೇಳುವ ವ್ಯವಧಾನವೂ ಮಕ್ಕಳಲಿಲ್ಲ. ಕಥೆ ಹೇಳುವ, ಮತ್ತು ಅದನ್ನು ಕೇಳುವ ಪರಿಸರ ಬೆಳೆಯಬೇಕು, ಕಥೆ ಹೇಳುವ ಮತ್ತು ಕೇಳುವ ಸ್ಪರ್ಧೆಗಳು ಏರ್ಪಡುವಂತಾಗಬೇಕು. ದಯಮಾಡಿ ನಾರಾಯಣಗೌಡರು ಕಥೆ ಹೇಳುವವರನ್ನು ಮತ್ತು ಕೇಳುವವರನ್ನು ಒಂದೇ ವೇದಿಕೆಯಡಿ ತರುವಂತಾಗಲಿ’ ಎಂದು ಪ್ರಥಮ ಬಹುಮಾನ ಪಡೆದ ಸಂಧ್ಯಾ ಹೊನಗುಂಟಿಕರ್ ಅಭಿಪ್ರಾಯಿಸಿದರು.
ಇದಕ್ಕೂ ಮುನ್ನ ರಂಗಭೂಮಿ ಕಲಾವಿದೆ ಸುಮಂಗಲಾ ಹೊಸಪೇಟೆ, ಗೋವಿಂದ ಮಣ್ಣೂರು, ಜಾನಪದ ಕಲಾವಿದ ವಸಂತ ರಣ್ಣನವರ್, ವೈದ್ಯಕೀಯ ತಜ್ಞ, ಪದ್ಮಶ್ರೀ ಪುರಸ್ಕೃತ ಆರ್.ಬಿ.ಪಾಟೀಲ್ ಅವರನ್ನು ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ೫೦ ಕ್ಕೂ ಹೆಚ್ಚು ಅಂಗವಿಕಲ ಮಕ್ಕಳಿಗೆ ಉಚಿತವಾಗಿ ತ್ರಿಚಕ್ರ ಬೈಸಿಕಲ್ ವಿತರಿಸಲಾಯಿತು.
ಸಮಾರಂಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ‍್ಯದರ್ಶಿ ಎನ್.ಎಚ್.ಕೋನರೆಡ್ಡಿ, ಮಾಜಿ ಶಾಸಕ ಜಿ.ಎಸ್.ಶಿವಳ್ಳಿ, ಧಾರವಾಡ ಹೈಕೋರ್ಟ್ ಸಂಚಾರಿ ಪೀಠದ ವಕೀಲರ ಸಂಘದ ಅಧ್ಯಕ್ಷ ಆರ್.ಡಿ.ದೇಸಾಯಿ, ಕ್ರೈಸ್ತ ಧರ್ಮ ಗುರು ಫಾದರ್ ರೋಟರಿಸ್, ಮುಸ್ಲಿಂ ಧರ್ಮಗುರು ಮೌಲಾನ ಖಿಬ್ಲ, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಸಮಾರಂಭಕ್ಕೆ ಮೆರುಗು ತಂದರು.

ಆಗಿದ್ದೇಕೆ ನಮ್ಮವರು ಹೀಗೆ



ಟಿ.ಎ.ನಾರಾಯಣಗೌಡ




ಎಂಥ ಪ್ರಕೃತಿಯು ನಿನ್ನ ಮಡಿಲ ಸಿರಿಯು ತಾಯೆ, ಧರೆ ಕಂಗೊಳಿಸುತ್ತಿತ್ತು. ಹಸಿರಿನ ಸಿಂಗಾರ ಹೊತ್ತು ನಿಂತಿದ್ದೇ ನೀ ಅಂದು, ಬಗೆದರು ನಿನ್ನ ಒಡಲ ಅಗೆದು ಸಾಗಿಸಿದರು ಹೊನ್ನ ಸಿರಿಯ, ಬರಿದಾಯಿತು ಬಂಗಾರದ ನಿನ್ನ ಒಡಲು, ಶಿಕ್ಷಿಸು ತಾಯೇ ಇಂಥ ಭಕ್ಷಕರ -ಭಕ್ಷಕರ.
ಅಖಂಡ ಕರ್ನಾಟಕ ಕನ್ನಡದ ಕುಲಬಾಂದವರೆ, ಇದು ಕರುನಾಡಿನ ಕಥೆಯೋ? ಇಲ್ಲ ವ್ಯಥೆಯೋ? ಇಲ್ಲಿ ಹೇಳಲೇ ಬೇಕಾಗಿದೆ. ನನ್ನಾಡಿನ ಭಕ್ಷಕರ ಇತಿಹಾಸ ಗಾಥೆಯ! ಸಿರಿಸಂಪತ್ತಿನಿಂದ ತುಂಬಿದ ವಿಜಯನಗರದ ಅರಸರ ಕಾಲದಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿ ರಾಶಿರಾಶಿಯಾಗಿ ಸೇರುಗಳಲ್ಲಿ ಅಳೆಯುತ್ತಿದ್ದ ಭವ್ಯ ಶ್ರೀಮಂತ ಸಾಮ್ರಾಜ್ಯವೊಂದು ಎಷ್ಟೊಂದು ಶ್ರೀಮಂತಿಕೆಯಿಂದ ಪ್ರಜ್ವಲಿಸಿದ ಐತಿಹಾಸಿಕ ಸತ್ಯವೋ ಹಸಿರು ಸಿರಿಯ ನಾಡಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಿರುವ ನಮಗೆ ಅಷ್ಟೇ ಸತ್ಯವಾಗಿ ಗೋಚರಿಸುತ್ತಿದೆ ಈ ಗಣಿಗಾರಿಕೆ.
ಕುವೆಂಪು ಕವಿವಾಣಿ ಹೇಳಿದಂತೆ ಕರ್ನಾಟಕ ಎಂಬುದು ಬರೇ ಹೆಸರೇ? ಈ ಮಣ್ಣಿಗೆ ಶಕ್ತಿಕಣಾ! ತಾಯಿಕಣಾ! ಸಿಡಿಲುಕಣಾ! ಛಲವ ಕೊಲುವ ಚಾಮುಂಡಿಕಣಾ! ಎನ್ನುವ ಕವಿವಾಣಿ ಒಂದು ಕಡೆಯಾದರೆ, ಯಾವ ಸಂಪತ್ತಿಗೂ ಕೊರತೆ ಇಲ್ಲದ ಕನ್ನಡ ನಾಡಲ್ಲಿ ಖನಿಜಸಂಪತ್ತು, ವನಸಂಪತ್ತು, ಜಲಸಂಪತ್ತು, ಪ್ರಕೃತಿ ಸಂಪತ್ತು ಒಳಗೊಂಡ ಅಖಂಡ ಕರ್ನಾಟಕ ಕರಗುತ್ತಿರುವ ದಿನಗಳಲ್ಲಿ ನೊಂದ ಕನ್ನಡಿಗನ ಮುಂದೆ ಮತ್ತೊಂದು ಕವಿ ಕೈಯಾರ ಕಿಯಣ್ಣರೈರವರು ಹೇಳುವಂತೆ ಕನ್ನಡದ ಮನೆಗೆ ಬೆಂಕಿ ಬಿದ್ದಿದೆ ಆರಿಸ ಬನ್ನಿ.
"ನುಡಿಕಾಯೋ, ಗುಡಿಕಾಯೋ, ಗಡಿಕಾಯೋ, ಕಾಯಲಾಗದೆ ಹೋದರೆ ನೀ ಸಾಯೋ" ಎನ್ನೊ ಮಾತುಗಳು ಕವಿವಾಣಿ, ಇಂದು ಕನ್ನಡ ನಾಡಿನ ಮುಂದಿದೆ. ಎಲ್ಲಾ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮತ್ತೊಂದು ಆಘಾತಕಾರಿ ವಿಚಾರ ನಿಮ್ಮೆದುರಿಗೆ ತರುತ್ತಿದ್ದೇನೆ.
ಈ ನಾಡಿನ ಲಕ್ಷಾಂತರ ಅನ್ನದಾತ ರೈತರಿಗೆ ಬದುಕುಕಟ್ಟಿಕೊಟ್ಟಿದ್ದ. ತೋಟಗಾರಿಕೆಯನ್ನು ಇಂದು, ನಾಡಿನ ಜೀವಾಳವಾಗಿರುವ ರೈತರಿಂದ ಕಿತ್ತು, ಬಂಡವಾಳಶಾಹಿಗಳ ಕರಾಳಹಸ್ತದ ಪಾಲು ಮಾಡಲಾಗುತ್ತಿದೆ. ಇಂತಹ ತೋಟಗಾರಿಕೆಯನ್ನು ಖಾಸಗೀಕರಣಗೊಳಿಸುವುದಕ್ಕೆ ಬಿಡದೆ, ರಕ್ಷಿಸುವ ಹೊಣೆ ಪ್ರತಿಯೊಬ್ಬ ಕನ್ನಡಿಗನ ಹೆಗಲಿಗಿದೆ.
ನಾಡಿನ ಹಸಿರು ಕ್ರಾಂತಿಯ ರೂವಾರಿ, ತೋಟಗಾರಿಕೆಯ ರತ್ನ ಡಾ||ಎಂ.ಎಚ್.ಮರೀಗೌಡರ ಕನಸಿನ ಕೂಸಾದ ತೋಟಗಾರಿಕೆಯನ್ನು ಪರಕೀಯರ ಪಾಲು ಮಾಡಲು ಹೊರಟಿರುವ ಇಂದಿನ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ. ನನ್ನದು ರೈತ ಸರ್ಕಾರ, ನಾನು ರೈತ ನಾಯಕ ಎಂದು ವಿಧಾನಸೌದದ ಮುಂದೆ ಹಸಿರು ಶಾಲು ಹೊದ್ದು, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅಂತಹ ಯಡಿಯೂರಪ್ಪನವರು ತಮ್ಮ ಅಧಿಕಾರವಧಿಯಲ್ಲಿ ರೈತರ ಪಾಲಿಗೆ ಸಂಜೀವಿನಿಯಾಗಿರುವ ತೋಟಗಾರಿಕೆಯನ್ನು ಇಂದು ಖಾಸಗಿ ಕಂಪೆನಿಗಳ ಮಾಲೀಕತ್ವಕ್ಕೆ ನೀಡಲಾಗುತ್ತಿರುವ ಈ ಹುನ್ನಾರದ ಹಿಂದೆ ಕಾಂಚಾಣವು ಕುಣಿಯುತ್ತಿದೆ.
ಸಾವಿರಾರು ಹಣ್ಣಿನ ಸಸಿಗಳು, ಗಿಡಮೂಲಿಕೆ ಸಸಿಗಳು, ಸುಗಂಧ ದ್ರವ್ಯಗಳ ಸಸಿಗಳು, ಅಲಂಕಾರಿಕ ಗಿಡಗಳು, ಉತ್ತಮ ತಳಿಯ ಹಣ್ಣು ತರಕಾರಿ ಬೀಜಗಳನ್ನು ನೀಡುವ ಸಾವಿರಕ್ಕೂ ಹೆಚ್ಚು ಮರಗಿಡಗಳಿರುವ ತೋಟಗಾರಿಕೆ, ರೈತನ ಜೀವನಾಡಿಯಾಗಿದೆ. ಅಂತಹ ರೈತನ ಜೀವಂತ ಸಮಾಧಿಯ ಮೇಲೆ ಬಂಡವಾಳ ಶಾಹಿಗಳು ಮಹಲುಗಳನ್ನು ಕಟ್ಟಿ ಮೆರೆಸುವ ದುಸ್ಸಾಹಸಕ್ಕೆ ಸರ್ಕಾರ ಅಸ್ತು ಎನ್ನುತ್ತಿರುವ ಈ ಸಂದರ್ಭದಲ್ಲಿ ನಾಡಿನ ಕೋಟ್ಯಾಂತರ ಅನ್ನದಾತರ ದುರಂತದ ಕಥನ ಇಲ್ಲಿದೆ.
ನಾಡಿನ ಪ್ರಜ್ಞಾವಂತ, ವಿಚಾರವಂತ ಹೋರಾಟಗಾರರೆ ಎಚ್ಚೆತ್ತು ಬನ್ನಿ! ಭೂತಾಯಿಯ ಮಣ್ಣಿನ ಸುವಾಸನೆ ಬೀರುತ್ತಾ ಹಸಿರುಟ್ಟು ನಿಂತಿರುವ ಸಸ್ಯಕಾಶಿಯಿಂದ ತೋಟಗಾರಿಕೆಯನ್ನು ರಕ್ಷಿಸೋಣ! ನಾಡನ್ನು ಉಳಿಸೋಣ! ರೈತನ ಬದುಕು ಕಟ್ಟಲು ಮುಂದಾಗೋಣ!
"ನಮಗೆ ಬೇಕಾದುದು ಸಿರಿವಂತರ ಮಾಳಿಗೆಯ ಕೃತಕ ಪ್ರದರ್ಶನ ಅಲ್ಲ, ಕಂಗೊಳಿಸುತ್ತಿರುವ ನಾಡಿನ ಪ್ರಕೃತಿಯ ಜೀವಂತ ನಿದರ್ಶನ".
೧೯೬೦ರ ದಶಕದಲ್ಲಿ ಪ್ರಾರಂಭವಾದ ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ "ತೋಟಗಾರಿಕೆಯ ರತ್ನ" ಡಾ|| ಎಂ.ಎಚ್.ಮರೀಗೌಡರು ತಮ್ಮ ಅಧಿಕಾರಾವಧಿಯಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಮಣ್ಣಿನ ಮಕ್ಕಳನ್ನು, ರಾಜಕಾರಣಿಗಳನ್ನು ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರನ್ನು ಪ್ರೇರೇಪಿಸಿ, ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಯೋಗ್ಯವಾದ ಸಂಯೋಜಿತ ಯೋಜನೆಗಳನ್ನು ರೂಪಿಸಿ, ಈ ಕ್ಷೇತ್ರವನ್ನು ಲಾಭದಾಯಕ ಕ್ಷೇತ್ರವನ್ನಾಗಿ ಮಾಡಿದ್ದರು. ತೋಟಗಾರಿಕೆಯ ದಿಗ್ಗಜ ಎಂಬ ಕೀರ್ತಿ ತೋಟಗಾರಿಕೆ ತಜ್ಞರಾದ ದಿವಂಗತ ಡಾ||ಎಂ.ಎಚ್.ಮರೀಗೌಡರಿಗೆ ಸಲ್ಲುತ್ತದೆ.
ತಾಲ್ಲೂಕು, ಜಿಲ್ಲೆ, ಹೋಬಳಿ, ಪಟ್ಟಣಗಳ ಸಮೀಪದ ಮತ್ತು ಹಳ್ಳಿಗಾಡಿನ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರು ತೋಟಗಾರಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಲು ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಒತ್ತು ಕೊಟ್ಟು ರಾಜ್ಯಾದ್ಯಂತ ೩೯೪ ತೋಟಗಾರಿಕೆ ಕ್ಷೇತ್ರವನ್ನು ಅವರ ಅವಧಿಯಲ್ಲೇ ಸ್ಥಾಪಿಸಿದರು. ಅವುಗಳಲ್ಲೊಂದಾದ ದೊಡ್ಡಸಗ್ಗೆರೆ ತೋಟಗಾರಿಕಾ ಕ್ಷೇತ್ರದಲ್ಲಿ ಇಂದಿಗೂ ಡಾ||ಎಂ.ಹೆಚ್ ಮರೀಗೌಡರು ತೋರಿಸಿಕೊಟ್ಟ ದಾರಿಯಲ್ಲೇ ಲಕ್ಷಾಂತರ ಹಣ್ಣಿನ ಸಸಿಗಳನ್ನು ಕಸಿ ಮಾಡಿ, ರೈತರಿಗೆ ಗಿಡಗಳನ್ನು ಯಾವುದೇ ಲಾಭನಷ್ಟವಿಲ್ಲದೇ ವಿತರಿಸಲಾಗುತ್ತಿದೆ. ಇದರ ಅರ್ಥ ಇಲಾಖೆ ನಷ್ಟದಲ್ಲಿದೆ ಎಂದಲ್ಲ ಎನ್ನುವುದನ್ನು ಸರ್ಕಾರ ಮನಗಾಣಬೇಕು.
ಇದೇ ವರ್ಷದ ’ಆಗಸ್ಟ್ ೮ರಂದು ತೋಟಗಾರಿಕೆಯ ದಿನಾಚರಣೆ’ಯ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಇಲಾಖೆಯು ಎರಡು ಕೋಟಿ ಸಸಿ-ಕಸಿ ಗಿಡಗಳನ್ನು ಉತ್ಪಾದಿಸುತ್ತಿದೆ ಎಂದು ತಿಳಿಸಿದರು. ಇದು ಕಸಿ ಗಿಡಗಳ ಮಾರಾಟದ ಅಂಕಿ ಅಂಶವಾಗಿದೆ. ಅಷ್ಟೇ ಸಂಖ್ಯೆಯ ಸಸಿಗಳನ್ನು ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಹಾಗೂ ಸಣ್ಣ ರೈತರಿಗೆ ಉಚಿತವಾಗಿ ವಿತರಿಸುತ್ತಿದೆ ಎಂದು ತಿಳಿಸಿದರು.
ಇದುವರೆಗೂ ಡಾ||ಎಂ.ಹೆಚ್.ಮರಿಗೌಡರ ಕಾರ್ಯಯೋಜನೆಯನ್ನು, ಎಲ್ಲಾ ಸರ್ಕಾರಗಳು ಅನುಷ್ಠಾನದಲ್ಲಿಟ್ಟುಕೊಂಡೇ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಸರ್ಕಾರವು ಇಲಾಖೆಯನ್ನು ಖಾಸಗೀಕರಣಗೊಳಿಸುವ ನಿಲುವನ್ನು ತಳೆದು ಅವರ ಧ್ಯೇಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.
ದೊಡ್ಡಸಗ್ಗೆರೆ ತೋಟಗಾರಿಕೆ ಇಲಾಖೆಯಲ್ಲಿ ಮಾವಿನ ಸಸಿಗಿಡಗಳನ್ನು ಒಂದಕ್ಕೆ ೨೨ ರೂಗಳಂತೆ ಮಾರಾಟ ಮಾಡುತ್ತಿದೆ. ಮತ್ತು ಇಲ್ಲಿಯ ನರ್ಸರಿಮೆನ್ ಕೋ-ಆಪರೇಟಿವ್ ಸೊಸೈಟಿಯಿಂದ ಆಲ್ಫಾಂಜೋ ಕಸಿ, ಮಾವಿನ ಸಸಿಗೆ ೧೫೦ ರೂ.ನಂತೆ ಮಾರಾಟ ಮಾಡುತ್ತಿದೆ. ಆದರೆ ಖಾಸಗಿಯವರು ಲಾಭವಿಲ್ಲದೆ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಅವರಿಗೆ ಕಾಂಚಾಣದ ಮಹಿಮೆ ಮಾತ್ರ ಗೊತ್ತು. ಅವರು ಸಸಿಯೊಂದಕ್ಕೆ ೧೫೦ ರೂ.ನಿಂದ ೫೦೦ ರೂ.ಗೆ ಮಾರಿದರೆ, ಯಾವ ರೈತ ತಾನೇ ಕೊಂಡ್ಯಾನು? ಕೊಳ್ಳಲು ಬಂದಾನು? ರೈತ ಪರವಾಗಿ ಹುಟ್ಟಿಕೊಂಡ ಈ ಇಲಾಖೆ, ರೈತನ ಬಗ್ಗೆಯೇ ಕಾಳಜಿ ಇಲ್ಲದಂತಾದರೆ ಇನ್ನಾವ ಅಭಿವೃದ್ಧಿ ಕಂಡೀತು. ಅಧಿಕಾರಿಗಳು ಜಾಣಕುರುಡನಿಂದ ನೀಡಿದ ಮಾಹಿತಿಗಳನ್ನು ಅನುಸರಿಸಿ ಸರ್ಕಾರ ದಿನಾಂಕ: ೦೨-೧೧-೨೦೧೦ ಪತ್ರಿಕಾ ಗೋಷ್ಠಿಯಲ್ಲಿ "ಖಾಸಗಿಗೆ ಫಾರಂ ನೀಡಿದರಷ್ಟೇ ಅಭಿವೃದ್ಧಿ" ಎಂದು ತಿಳಿಸಿದುದನ್ನು ನೋಡಿದರೆ ರೈತರ ಎದೆಯ ಮೇಲೆ ನಿಲ್ಲುವ ದುಃಸ್ಸಾಹಸಕ್ಕೆ ಕೈ ಹಾಕಿದಂತೆ ಕಾಣುತ್ತದೆ.
ಧೀಮಂತ ಡಾ||ಎಂ.ಎಚ್.ಮರೀಗೌಡರ ಯೋಜನೆಗಳನ್ನೇ ಆಧರಿಸಿ ಇಲಾಖೆಯು ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕರ್ನಾಟಕವು ತೋಟಗಾರಿಕೆಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು "ತೋಟಗಾರಿಕಾ ರಾಜ್ಯ ಎನ್ನುವ ಹೆಸರು ಉಳಿಸಿಕೊಂಡಿದೆ. "ತೋಟಗಾರಿಕೆ ಎಂದರೆ ಮರೀಗೌಡರು, ಮರೀಗೌಡರು ಎಂದರೆ ತೋಟಗಾರಿಕೆ" ಎಂದು ಸುಖಾ-ಸುಮ್ಮನೆ ಸಭೆ ಸಮಾರಂಭಗಳಲ್ಲಿ ಅವರ ಧ್ಯೇಯಗಳನ್ನು ಹೊಗಳಿದರೆ ಸಾಲದು, ಹಿಂದೆಯೇ ಅವರ ನೀತಿಗಳನ್ನು ಬದಿಗೊತ್ತುವ ಆಷಾಡಭೂತಿತನ ಸಲ್ಲದು. ತೋಟಗಾರಿಕೆಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ಹುನ್ನಾರದಿಂದ ಅನ್ನದಾತನಿಗೆ ಅನ್ಯಾಯವಾಗಿ, ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ.
ಸರ್ಕಾರವು ಸೃಷ್ಟಿಸಿಕೊಂಡಿರುವ ಇಂತಹ ಪರಿಸ್ಥಿತಿಯಲ್ಲಿ ದೊಡ್ಡಸಗ್ಗೆರೆ ಡಾ||ಎಂ.ಎಚ್.ಮರೀಗೌಡರ ತೋಟಗಾರಿಕೆ ಕ್ಷೇತ್ರದ ಅಂಕಿ-ಅಂಶಗಳ ಸೂಕ್ಷ್ಮ ಪರಿಚಯ ಕನ್ನಡನಾಡಿನ ಮುಂದಿಡಬೇಕಾಗಿದೆ.
ಆ ಕ್ಷೇತ್ರದ ಒಟ್ಟು ವಿಸ್ತೀರ್ಣ ೧೦೫೯ ಎಕರೆಗಳು, ಅಭಿವೃದ್ಧಿಯಾದ ವಿಸ್ತೀರ್ಣ ೨೬೫ ಎಕರೆ, ಈಗ ಗುತ್ತಿಗೆ ಆಧಾರದ ಮೇಲೆ ನೀಡಲು ಹೊರಟಿರುವ ವಿಸ್ತೀರ್ಣ ೬೫೦ ಎಕರೆ, ಇಲ್ಲಿ ಸಪೋಟ, ಮಾವು, ಹುಣಸೆ, ಹಾಗೂ ಇತರೆ ೭೮೫೬ ಮಣ್ಣಿನ ಮರಗಳು ಪ್ರಸ್ತುತ ಇದೆ. ಭೂಮಿಯನ್ನು ಹೊರತುಪಡಿಸಿ, ಈ ಹಣ್ಣಿನ ಮರಗಳ ಬೆಲೆ ಮೂರು ಕೋಟಿ. ಭೂಮಿಯ ಸದ್ಯದ ಬೆಲೆ ಎಕರೆಗೆ ಎಂಟು ಲಕ್ಷದಂತೆ ನೋಡಿದರೆ ೫೨ ಕೋಟಿ ರೂಪಾಯಿಗಳು ಇದನ್ನು ತಾಳೆ ಮಾಡಿ ನೋಡಿದರೆ ಮುಂದಿನ ಮೂವತ್ತು ವರ್ಷಗಳಲ್ಲಿ ಇದರ ಬೆಲೆ ನೂರರಷ್ಟು ಅಂದರೆ ಎಕರೆಗೆ ಎಂಟು ಕೋಟಿಯಷ್ಟು ಹೆಚ್ಚಾಗಬಹುದು. ಒಟ್ಟು ೫೨೦೦ ಕೋಟಿಯಾಗುತ್ತದೆ. ಆದರೆ ಗುತ್ತಿಗೆದಾರರು ನೀಡುತ್ತಿರುವುದು. ಮೂವತ್ತು ವರ್ಷಕ್ಕೆ ೩೩.೩೦ಲಕ್ಷ, ಒಂದು ವರ್ಷಕ್ಕೆ ತೆಗೆದುಕೊಂಡರೆ ೫೦೭೭ ರೂ ಎಕರೆಗೆ ನೀಡಿದಂತಾಗುತ್ತದೆ.
ಮೂವತ್ತು ವರ್ಷಕ್ಕೆ ಖಾಸಗಿಯವರಿಗೆ ಗುತ್ತಿಗೆ ನೀಡಿ ಹಿಂಪಡೆದ ಒಂದೇ ಒಂದು ನಿದರ್ಶನವು ಇಲ್ಲಿ ಇದುವರೆಗೂ ಇಲ್ಲವೇ ಇಲ್ಲ. ಇನ್ನು ಇದೆಲ್ಲಿಯ ಮಾತು? ಖಾಸಗೀಕರಣದ ಹುನ್ನಾರದ ಹಿಂದಿರುವ ತಂತ್ರಗಳು ಗೋಚರಿಸುತ್ತಿದೆ. ತೋಟಗಾರಿಕಾ ಕ್ಷೇತ್ರವು ನಷ್ಟದಲ್ಲಿದೆ ಎಂದು ಕಪೋಲಕಲ್ಪಿತ ಕಾರಣಗಳನ್ನು ನೀಡುತ್ತ ಭಂಡತನದ ಧೈರ್ಯ ಪ್ರದರ್ಶಿಸುವ ಸಾಹಸವನ್ನು ಸರ್ಕಾರ ನಿಲ್ಲಿಸಲಿ, ಇಲ್ಲದಿದ್ದರೆ ಈ ನಾಡಿನ ಬೆನ್ನೆಲುಬಾದ ರೈತನಿಗೆ ಅನ್ಯಾಯವಾಗುವುದನ್ನು ಖಂಡಿಸುತ್ತ, ಕನ್ನಡ ನಾಡಿನ ಮಕ್ಕಳು ಸರ್ಕಾರದ ಈ ನಿರ್ಧಾರಕ್ಕೆ ಕಡಿವಾಣ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಬೇಕಾಗಿದೆ. ಹಾಗೂ ಮತ್ತೊಂದು ಕಡೆ ಬಿ.ಜೆ.ಪಿ. ನೇತೃತ್ವದ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ತೋಟಗಾರಿಕಾ ವಿ.ವಿ.ಮಾಡುವ ಉದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿರುವ ಪದವೀಧರರ ಗತಿಯೇನು ಹಾಗೂ ಸರ್ಕಾರದ ಸಾವಿರಾರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ನೀಡುವ ಪ್ರಯತ್ನಕ್ಕೆ ನಾಡಿನ ಎಲ್ಲಾ ಭಾಗದ ತೋಟಗಾರಿಕಾ ಕ್ಷೇತ್ರದ ರೈತ ಬಂಧುಗಳು ಹಾಗೂ ರೈತಪರ ಹೋರಾಟಗಾರರು ಮುಂದಾಗಿ ಯಾವುದೇ ಕಾರಣಕ್ಕೂ ಸರ್ಕಾರದ ತೋಟಗಾರಿಕಾ ಕ್ಷೇತ್ರ ಖಾಸಗಿಯವರ ಪಾಲಾಗದಂತೆ ತಡೆಯುವ ಹೋರಾಟಕ್ಕೆ ಮುಂದಾಗಬೇಕುಂಬುದೆ ನಮ್ಮ ಸಂಘಟನೆಯ ಮನವಿ.

Friday, November 26, 2010

ಕಥಾಸ್ಪರ್ಧೆ ವಿಜೇತರಿಗೆ ಪುರಸ್ಕಾರ





ನ.೨೪ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಕ್ಷೇತ್ರದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ‘ಕರವೇ ನಲ್ನುಡಿ ಕಥಾಸ್ಪರ್ಧೆ-2010' ವಿಜೇತರಿಗೆ ಪ್ರಶಸ್ತಿ, ಪುರಸ್ಕಾರ ನೀಡಲಾಯಿತು. ‘ಹಾರಲಾರದ ನೊಣ ಎಂಬ ಕಥೆಗೆ ಪ್ರಥಮ ಬಹುಮಾನ(೨೫,೦೦೦ ರೂ. ನಗದು) ಪಡೆದ ಸಂಧ್ಯಾ ಹೊನಗುಂಟಿಕರ್, ‘ಗಾಂಧಿ ಕಾಲನಿಯೂ ಮಂಜನೆಂಬ ಸ್ಲಂ ಬಾಲನೂ ಎಂಬ ಕಥೆಗೆ ದ್ವಿತೀಯ ಬಹುಮಾನ(೧೫,೦೦೦ ರೂ. ನಗದು) ಪಡೆದ ಅಬ್ಬಾಸ್ ಮೇಲಿನಮನಿ, ‘ನಂಜಾದ ನಾಯಿ ಹಾಲು ಎಂಬ ಕಥೆಗೆ ತೃತೀಯ ಬಹುಮಾನ (೧೦,೦೦೦ ರೂ. ನಗದು) ಪಡೆದ ಶಂಕರ್ ರಾವ್ ಉಭಾಳೆ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದ ಡಾ. ಸೋಮಣ್ಣ ಹೊಂಗಳ್ಳಿ, ಡಾ. ಆನಂದ್ ಋಗ್ವೇದಿ, ಭವ್ಯ ಎಚ್.ಸಿ., ವೈ. ಮಂಜುಳಾ, ಹಣಮಂತ ಹಾಲಿಗೆರಿ, ಬಿ.ಟಿ.ರುಹುಲ್ಲಾ ಸಾಹೇಬ್, ಕಲ್ಲೇಶ್ ಕುಂಬಾರ್, ವಿಶ್ವನಾಥ ಪಾಟೀಲ ಗೋನಾಳ ಅವರುಗಳನ್ನು ಕರವೇ ರಾಜ್ಯಾಧ್ಯಕ್ಷರಾ ಟಿ.ಎ.ನಾರಾಯಣಗೌಡರು ಸತ್ಕರಿಸಿದರು. ಈ ಕಾರ್ಯಕ್ರಮದ ಕೆಲವು ಚಿತ್ರಗಳು ಇಲ್ಲಿವೆ.