Sunday, December 5, 2010

ಪಾತ್ರ ಮುಗಿಸಿ ಹೊರಟ ಅದಮ್ಯ ಸಂಘಟಕ ಕೋಡಿಹಳ್ಳಿ ಶ್ರೀನಿವಾಸ್

ಕಂಬನಿಯಲ್ಲಿ ಕೋಡಿಹಳ್ಳಿ

ಶ್ರೀ ಕೃಷ್ಣನ ವೇಷಧಾರಿಯಾಗಿ ಅಭಿನಯಿಸಿ
ರಂಗ ಭೂಮಿಗೆ ಕಲಾವಿದರಿಗೆ, ಕಲೆಗೆ ಗೌರವಿಸಿ
ರಾಜ್ಯದಲ್ಲೇ ಕೀರ್ತಿ ಗಳೀಸಿದ ನಲ್ಮೆಯ ಮಿತ್ರ
ಕಾಣದ ಊರಿಗೆ ಹೊರಟು ಹೋದೆಯ ನಂಬಿಸಿ

ದೀನರ ದುರ್ಬಲರ ನೋವು ನಲಿವುಗಳಿಗೆ ಸ್ಪಂದಿಸಿ
ನ್ಯಾಯ ನಿಷ್ಠೆ ಸೇವಾ ಕಾರ್ಯಗಳನ್ನು ತ್ಯಜಿಸಿ
ಕನ್ನಡ ನಾಡು ನುಡಿ ಜಲನೆಲದ ಹೋರಾಟಗಾರ ಎನಿಸಿ
ವೀರರ ಸಾಲಿಗೆ ಸೇರಿ ಹೋದೆಯ ನಮ್ಮನ್ನು ಬೆಂಬಲಿಸಿ

ಜಾತಿ ಮತ ಭೇದವ ತೊರೆದು ನಿಂತೆ ನೀ ಕನ್ನಡಕ್ಕಾಗಿ
ಎಲ್ಲರನ್ನು ಗೌರವಿಸಿ ಸಂಘಟನೆಗಳ ಸಂಘಟಿಸಿದ ತ್ಯಾಗಿ
ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದೆ ಛಲದಂಕ ಮಲ್ಲನಾಗಿ
ಹಸಿರಾಗಿ ಉಸಿರಾಗಿ ಸೇರಿ ಹೋದೆಯ ಪ್ರಕೃತಿಯಲ್ಲಿ ಲೀನವಾಗಿ

ನೂರಾರು ಸರಳ ವಿವಾಹ ಮಾಡಿಸಿ ಹೊಸ ಬದುಕು ನೀಡಿದೆ
ಹಳ್ಳಿ ಜನರ ಕಷ್ಟ ಕಾರ್ಪಣ್ಯಕ್ಕೆ ಸದಾಕಾಲ ಹೆಗಲು ನೀಡಿದೆ
ಮುಂದಿನ ಜನನಾಯಕನಾಗಿ ಜಿಲ್ಲೆಯ ಏಳಿಗೆಗಾಗಿ ಪಣ ತೊಟ್ಟು
ನೀಲಿ ಅಗಸದಿ ತೇಲುವ ಮೋಡಗಳಲ್ಲಿ ಅದೃಶ್ಯವಾಗಿ ಮರೆಯಾದೆ

ಕರ್ನಾಟಕ ರಕ್ಷಣಾ ವೇದಿಕೆಯ ನಾಯಕನಾಗಿ ನೀನು ಅಮರ
ಕನ್ನಡ ಚೇತನ ಕರುನಾಡ ಕಿಂಕರ ಕನ್ನಡದ ಶಿಖರ
ತಾಯಿ ಭುವನೇಶ್ವರಿಯ ಮಡಿಲಿನಲ್ಲಿ
ನಲಿದಾಡುತ ನೀಡು ಮಂದಹಾಸ,
ಮತ್ತೊಮ್ಮೆ ಹುಟ್ಟಿ ಬಾ, ನಮಗಾಗಿ, ನಮ್ಮೆಲ್ಲರಿಗಾಗಿ ಬಾರೋ ಶ್ರೀನಿವಾಸಹೆಚ್.ಷೌಕತ್ ಅಲಿ
ಮದ್ದೂರು, ಮಂಡ್ಯ,

ಅವರೊಬ್ಬ ಅಪ್ಪಟ ಕಲಾಭಿಮಾನಿ. ಅತ್ಯುತ್ತಮ ನಟ, ಅದ್ಭುತ ವಾಗ್ಮಿ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಕನ್ನಡಪ್ರೇಮಿ, ಹೋರಾಟಗಾರ, ಅದಮ್ಯ ಸಂಘಟಕ. ಅವರೇ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೋಡಿಹಳ್ಳಿಯ ಶ್ರೀನಿವಾಸ್. ಕನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಅಧ್ಯಕ್ಷರು.
ಇವರು ಅಕಾಲಿಕ ಮರಣಕ್ಕೆ ಈಡಾದುದು ನಾಡಿನ ಜನತೆಯನ್ನು ದುಃಖದ ಮಡುವಿನಲ್ಲಿ ದೂಡಿದೆ. ಇವರ ನೆನಪಿಗೊಂಡು ಅಕ್ಷರ ನಮನ ಸಲ್ಲಿಸುವ ಸಲುವಾಗಿ ಅವರ ಬದುಕಿನ ಪುಟವನ್ನು ತಿರುವಿ ಹಾಕಲಾಗಿದೆ.
ಜಿಲ್ಲೆಯಾದ್ಯಂತ ಕೋಡಿಹಳ್ಳಿ ಶ್ರೀನಿವಾಸ್ ಎಂದೇ ಹೆಸರುವಾಸಿಯಾಗಿದ್ದ ಶ್ರೀನಿವಾಸ್ ಮದ್ದೂರು ತಾಲೂಕಿನಲ್ಲಿ ತಾಲೂಕು ಮಟ್ಟದ ರಂಗಭೂಮಿ ಕಲಾವಿದರ ಸಂಘ ಸ್ಥಾಪಿಸಿ ಈ ಮೂಲಕ ತಾಲೂಕಿನ ಕಲಾವಿದರನ್ನು ಗುರುತಿಸುತ್ತಾ ಪ್ರತಿವರ್ಷವೂ ನಾಟಕೋತ್ಸವಗಳನ್ನು ಆಯೋಜಿಸುತ್ತಾ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಬಂದವರು.
ರಾಜ್ಯದ ವಿವಿಧೆಡೆ ನಡೆಯುತ್ತಿದ್ದ ನಾಟಕ ಸ್ಪರ್ಧೆಗಳಲ್ಲಿ ತಮ್ಮ ಸಂಘದ ವತಿಯಿಂದ ಕಲಾ ತಂಡಗಳನ್ನು ಕೊಂಡೊಯ್ದು ಹಲವು ಬಹುಮಾನಗಳು ಸಂಘಕ್ಕೆ ಲಭಿಸುವಲ್ಲಿ ಯಶಸ್ವಿಯಾದವರು. ಸಾಮಾಜಿಕ ಸೇವೆಯ ಜೊತೆಗೆ ಕನ್ನಡದ ನಾಡು-ನುಡಿ-ಸಂಸ್ಕೃತಿಯ ಕುರಿತಂತೆಯೂ ಅಭಿಮಾನ ಬೆಳೆಸಿಕೊಂಡ ಶ್ರೀನಿವಾಸ್ ಕನ್ನಡ ಜಾಗೃತಿ ಕಾಯಕಕ್ಕೆ ಮುಂದಾಗುವ ಮೂಲಕ ಹೋರಾಟಗಾರರೆನಿಸಿದರು. ಇವರಲ್ಲಿನ ಹೋರಾಟಗಾರನನ್ನು ಗುರುತಿಸಿದ ಟಿ.ಎ.ನಾರಾಯಣಗೌಡರು ಮಂಡ್ಯ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಸ್ಥಿತ್ವಕ್ಕೆ ಬಂದ ತರುವಾಯ ಕೋಡಿಹಳ್ಳಿ ಶ್ರೀನಿವಾಸ್ ಅವರನ್ನು ಮದ್ದೂರು ತಾಲೂಕಿನ ಅಧ್ಯಕ್ಷರನ್ನಾಗಿ ನೇಮಿಸಿದರು. ರಂಗಚಟುವಟಿಕೆಯ ಜೊತೆಜೊತೆಯಲ್ಲೇ ಕನ್ನಡ ನಾಡು-ನುಡಿ, ನೆಲ-ಜಲ ರಕ್ಷಣೆಗೆ ಸಂಬಂಧಿಸಿದಂತೆ ತಮ್ಮ ಹೋರಾಟವನ್ನು ಪ್ರಾರಂಭಿಸಿದ ಇವರು ತಾಲೂಕಿನಾದ್ಯಂತ ಅತ್ಯಂತ ಪ್ರಭಾವವಾಗಿ ಸಂಘಟನೆಯನ್ನು ಬೆಳೆಸತೊಡಗಿದರು.
ಕೋಡಿಹಳ್ಳಿ ಶ್ರೀನಿವಾಸ್ ಅವರ ಕನ್ನಡಪರ ಕಾಳಜಿಯನ್ನು ಗುರುತಿಸಿ ಮಂಡ್ಯ ಜಿಲ್ಲಾ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ಹೊಗೇನಕಲ್ ಹೋರಾಟ, ಕಾವೇರಿ, ಗಡಿ ಸಮಸ್ಯೆ, ರೈಲ್ವೆ ಹೋರಾಟ ಹೀಗೆ ಹತ್ತು ಹಲವು ಹೋರಾಟಗಳ ಮುಂಚೂಣಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೀನಿವಾಸ್ ಸುಮಾರು ಐದು ಬಾರಿ ಸೆರೆವಾಸವನ್ನು ಅನುಭವಿಸಿದವರು. ಇವರ ಮೇಲೆ ಸುಮಾರು ಮೂವತ್ತು ಪ್ರಕರಣಗಳು ಚಳವಳಿ ರೂಪಿಸಿದ ಕಾರಣಕ್ಕೆ, ಪ್ರತಿಭಟಿಸಿದ ಕಾರಣಕ್ಕೆ ದಾಖಲಾಗಿದ್ದವು.
ಕೋಡಿಹಳ್ಳಿ ಶ್ರೀನಿವಾಸ್ ಕರ್ನಾಟಕ ರಕ್ಷಣಾ ವೇದಿಕೆ ಸೇರ್ಪಡೆಗೊಳ್ಳುವ ಮುನ್ನ ಕೆ.ಇ.ಬಿಯಲ್ಲಿ (ಚೆಸ್ಕಾಂ) ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದವರು. ಇದೇ ಸಂದರ್ಭದಲ್ಲಿ ಸದರಿ ಕಚೇರಿಯಲ್ಲಿ ವಿದ್ಯುತ್ ಪಾವತಿ ಬಿಲ್ಲನ್ನು ಕನ್ನಡದಲ್ಲಿ ನೀಡಲಿಲ್ಲ ಎಂಬ ಕಾರಣಕ್ಕೆ ಪ್ರತಿಭಟಿಸಿ ಕಛೇರಿಯ ಕಂಪ್ಯೂಟರ್ ಸೇರಿದಂತೆ ಹಲವು ಉಪಕರಣಗಳನ್ನು ಒಡೆದು ಹಾಕಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು. ಈ ಪರಿಣಾಮ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ ಶ್ರೀನಿವಾಸ್ ಕೆಲಸವನ್ನು ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಿಸಿದವರು.
ಕೋಡಿಹಳ್ಳಿ ಶ್ರೀನಿವಾಸ್ ಕೆ.ಇ.ಬಿ.ಯಲ್ಲಿ ಕನ್ನಡ ರಸೀತಿ ನೀಡಬೇಕೆಂದು ಪ್ರತಿಭಟಿಸಿ, ಸೆರೆವಾಸ ಅನುಭವಿಸುತ್ತಿರುವ ಸಂದರ್ಭದಲ್ಲೇ ಕೆ.ಇ.ಬಿಯಲ್ಲಿ ಕನ್ನಡ ರಸೀತಿ ನೀಡುವ ಪ್ರಕ್ರಿಯೆ ಆರಂಭವಾದುದು ಇತಿಹಾಸ. ಮದ್ದೂರು ತಾಲೂಕು ಸೇರಿದಂತೆ ಮಂಡ್ಯ ಜಿಲ್ಲೆಯ ಹಲವು ಗ್ರಾಮಗಳಲ್ಲಿ ತನ್ನ ಅಭಿಮಾನಿ ಬಳಗವನ್ನೇ ಹೊಂದಿದ್ದ ಶ್ರೀನಿವಾಸ್ ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಸಂಸ್ಥೆಗಳಲ್ಲಿಯೂ ಅವಿನಾಭಾವ ಸಂಬಂಧ ಹೊಂದಿದ್ದವರು. ಮೂಲತಃ ಕಲಾವಿದರಾದ ಶ್ರೀನಿವಾಸ್ ಕರ್ನಾಟಕ ರಕ್ಷಣಾ ವೇದಿಕೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದರಲ್ಲದೇ ತಮ್ಮ ರಂಗಾಸಕ್ತಿಯನ್ನು ಮುಂದುವರಿಸಿಕೊಂಡೇ ಬರುತ್ತಿದ್ದರು.
ಪ್ರತಿವರ್ಷ ರಂಗಚಟುವಟಿಕೆಗಳನ್ನು ನಡೆಸುತ್ತಿದ್ದ ಅವರು ಹಿರಿಯ ರಂಗನಟರು ಹಾಗೂ ಸಿನಿಮಾ ಕಲಾವಿದರನ್ನು ಸಮಾರಂಭಕ್ಕೆ ಆಹ್ವಾನಿಸಿ ಅವರನ್ನು ಪರಿಚಯಿಸುವ ಮತ್ತು ಗೌರವಿಸುವ ಸಂಪ್ರದಾಯವನ್ನು ನಿರಂತರವಾಗಿ ನಡೆಸಿಕೊಂಡು ಬಂದವರು. ಉತ್ತಮ ರಂಗಭೂಮಿ ನಟರೂ ಆಗಿದ್ದ ಕೋಡಿಹಳ್ಳಿ ಶ್ರೀನಿವಾಸ್ ೨೦೦೯ನೇ ಸಾಲಿನಲ್ಲಿ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣ ಪೌರಾಣಿಕ ನಾಟಕದಲ್ಲಿ ಶ್ರೀನಿವಾಸ ಪಾತ್ರವನ್ನು ವಹಿಸಿದ್ದರು. ೨೦೧೦ರ ಡಿಸೆಂಬರ್ ೧೧ರಂದು ಮಂಡ್ಯ ಜಿಲ್ಲಾ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಸತ್ಯ ಹರಿಶ್ಚಂದ್ರ ಪೌರಾಣಿಕ ನಾಟಕವನ್ನು ಆಯೋಜಿಸಿದ್ದ ಇವರು ಈ ಸಂಬಂಧ ವಿವಿಧ ತಯಾರಿಗಳನ್ನು ನಡೆಸಿದ್ದರಲ್ಲದೇ ಸತ್ಯ ಹರಿಶ್ಚಂದ್ರ ಪಾತ್ರವನ್ನು ತಾವೇ ಮಾಡುವವರಿದ್ದರು. ಇದೀಗ ಆ ಪಾತ್ರವನ್ನು ಅವರ ಅನುಪಸ್ಥಿತಿಯಲ್ಲಿ ಬೇರೆಯವರು ಮಾಡುತ್ತಿದ್ದಾರೆ.
ಅಸು ನೀಗುವ ಕೆಲವೇ ದಿನಗಳ ಹಿಂದೆ ಶ್ರೀನಿವಾಶರನ್ನು ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನಾರಾಯಣಗೌಡರು ನೇಮಿಸಿದ್ದರು. ಈ ನಿಮಿತ್ತ ಮಂಡ್ಯದಲ್ಲಿ ಅದ್ದೂರಿ ಸಮಾರಂಭವೂ ನಡೆದಿತ್ತು.ಹೋರಾಟಗಾರರಾಗಿ, ಕಲಾವಿದರಾಗಿ, ಸಾಮಾಜಿಕ ಸೇವಕರಾಗಿ ದುಡಿದ ಕೋಡಿಹಳ್ಳಿ ಶ್ರೀನಿವಾಸರು ಅರ್ಧಕ್ಕೆ ತಮ್ಮ ಪಾತ್ರ ಮುಗಿಸಿ ಬರಲಾರದ ಹಾದಿಯತ್ತ ನಡೆದಿದ್ದಾರೆ. ಅವರ ಚೇತನಕ್ಕೆ ಶಾಂತಿ ಸಿಗಲಿ ಎಂಬುದು ಕನ್ನಡ ಮನಸ್ಸುಗಳ ಹಾರೈಕೆ.

No comments:

Post a Comment

ಹಿಂದಿನ ಬರೆಹಗಳು