Sunday, December 5, 2010

ಕನ್ನಡಮ್ಮನಿಗೆ ಪ್ರಾಣ ದೀವಿಗೆ ಹೊತ್ತಿಸಿದ ಮು.ಗೋವಿಂದರಾಜು




ಕನ್ನಡ ಕಲಿಗಳ ಸಂಕಲ್ಪವೇ ಅಂತಹುದು.
ಕನ್ನಡವನ್ನೇ ಉಸಿರಾಗಿಸಿಕೊಂಡ ಜೀವ ಯಾವ ತ್ಯಾಗಕ್ಕೂ ಬೇಕಾದರು ಸದಾ ಸಿದ್ದವಾಗಿರುತ್ತೆ. ಏಕೆಂದರೆ ಕನ್ನಡದ ಧೀ ಶಕ್ತಿಯ ತಾಕತ್ತೇ ಅಂತಹುದು. ಕನ್ನಡ ನಾಡ ಸೊಬಗು, ಐತಿಹ್ಯ, ಸಂಸ್ಕೃತಿ, ಹೋರಾಟ ಮನೋಭಾವ, ಕಲಿಗಳ ಕೆಚ್ಚುತನ ನಿಜಕ್ಕೂ ಮಾದರಿಯೇ ಸರಿ.
ಇದು ಕನ್ನಡಿಗನ ರಕ್ತದಲ್ಲೇ ಹುಟ್ಟಿ ಬರುವ ಗುಣ. ಇದನ್ನು ಹಿಂದಿನ ಇತಿಹಾಸಗಳು ಸಾಕ್ಷೀಕರಿಸಿವೆ.
ಕನ್ನಡಕ್ಕೆ ಅಪಾಯ ಒದಗಿದಾಗಲೆಲ್ಲ ನೂರಾರು, ಸಾವಿರಾರು ಕನ್ನಡದ ಕಲಿಗಳು ಕನ್ನಡಮ್ಮನ ರಕ್ಷಣೆಗೆ ನಿಂತು, ಅವಿರತವಾಗಿ ಸೆಣಸಿ, ಕಷ್ಟ ಕೋಟಲೆಗಳ ಸಹಿಸಿ ಹೋರಾಡಿದ್ದಾರೆ, ಹೋರಾಡುತ್ತಲೇ ಇದ್ದಾರೆ.
ಈ ಹಿಂದಿನ ಕಲಿಗಳ ಅನನ್ಯ ಹೋರಾಟ ಗಾಥೆ ಇಂದಿನ ಪೀಳಿಗೆಯ ಕನ್ನಡಿಗನ ಎದೆಯಲ್ಲಿ ಹೊಸದೊಂದು ಹುರುಪು, ಅಭಿನವವಾದುದೊಂದು ಆದರ್ಶ, ಶಕ್ತಿಯನ್ನು ಸ್ಫುರಿಸುತ್ತಿದೆ; ಈ ಸ್ಫೂರ್ತಿಯೇ ಹೋರಾಟದ ಸಾಗರಕ್ಕೆ ನೂರಾರು ನದಿಗಳನ್ನು ಧುಮುಕಿಸುತ್ತಲೇ ಇದೆ. ಇಂತಹ ಅನನ್ಯ ಸ್ಫೂರ್ತಿದಾಯಕ, ಆದರ್ಶಪ್ರಾಯ, ದಿಟ್ಟ ಕಲಿಯೇ ಮು.ಗೋವಿಂದರಾಜು. ಕನ್ನಡ ಚಳವಳಿಯ ಅಮರ, ಅನನ್ಯ ಹೋರಾಟಗಾರ.
ಅದು ೭೦ರ ದಶಕ. ಕನ್ನಡ ಚಳವಳಿ ತೀವ್ರಗೊಂಡಿದ್ದ ಕಾಲಘಟ್ಟವದು.
ಮ.ರಾಮಮೂರ್ತಿ ನೇತೃತ್ವದಲ್ಲಿನ ‘ಕನ್ನಡ ಪಕ್ಷ ಕಟ್ಟಾಳುಗಳ ಸದೃಢ ಸಂಘಟನೆಯಾಗಿತ್ತು. ಬೆಳಗಾವಿ ನಗರವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿಸುವ ಕುರಿತಾಗಿ ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ನಿರ್ಣಯ ಮಂಡಿತವಾಗಿ ಚರ್ಚೆ ನಡೆಯುತ್ತಿದ್ದ ಸಂದರ್ಭ.
ಮು.ಗೋವಿಂದರಾಜು ಅವರು, ಕನ್ನಡದ ಕೈಂಕರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾದರು. ಕೃಷ್ಣಪ್ಪ ಕೋಶಾಧಿಕಾರಿಯಾಗಿದ್ದರು. ಮು.ಸಂಪಂಗಿರಾಮಯ್ಯ ಕಾರ‍್ಯದರ್ಶಿಯಾಗಿದ್ದರು.
ಆಗ ಮಹಾಜನ್ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆಗಳು, ಹೋರಾಟ, ಧರಣಿ, ಹರತಾಳ ಎಲ್ಲವೂ ರಭಸದಿಂದ ನಡೆಯುತ್ತಿದ್ದವು.
ಈ ಕುರಿತಾಗಿ ಇಡೀ ದೇಶದ ಜನರ ಗಮನ ಸೆಳೆಯುವ ಸಲುವಾಗಿ ‘ಕನ್ನಡ ಪಕ್ಷವು ಬೆಂಗಳೂರಿನಿಂದ ಪೂನಾಗೆ ಹೊರಡುವ ರೈಲನ್ನು ತಡೆದು ನಿಲ್ಲಿಸುವ ಪ್ರತಿಭಟನೆ ಹಮ್ಮಿಕೊಂಡಿತ್ತು. ಡಿಸೆಂಬರ್ ೧೩, ೧೯೭೦ರಂದು ಕನ್ನಡ ಹೋರಾಟಗಾರರಾದ ಮು.ಸಂಪಂಗಿರಾಮಯ್ಯ, ಕರ್ಲಮಂಗಲಂ ಶಂಕರಪ್ಪ, ಜಗದೀಶ್‌ರೆಡ್ಡಿ, ಬೆ.ತಿ.ರಾಜಣ್ಣ, ಮು.ಗೋವಿಂದರಾಜು ಇವರ ತಂಡ ಮೊದಲ ದಿನದ ಹೋರಾಟಕ್ಕೆ ಸಿದ್ಧವಾಯಿತು. ಇದು ಕನ್ನಡ ಪಕ್ಷ ಹಮ್ಮಿಕೊಂಡಿದ್ದ ಸತತ ೧೫ ದಿನಗಳ ಹೋರಾಟವಾಗಿತ್ತು. ಇದಕ್ಕಾಗಿ ಮೂರು ಬಾರಿ ಸಭೆ ನಡೆದು ಸಾಕಷ್ಟು ಜನಬೆಂಬಲ ಸಿಕ್ಕಿತ್ತು.
ಬೆಂಗಳೂರಿನ ಶ್ರೀರಾಮಪುರ ರೈಲ್ವೇ ಬ್ರಿಡ್ಜ್ ಹತ್ತಿರ ರೈಲು ಬರುತ್ತಿದ್ದ ಸಂದರ್ಭದಲ್ಲಿ ದಿಢೀರ್ ಎಂದು ಒಂದು ಮನೆಯಲ್ಲಿ ಅಡಗಿ ಕುಳಿತಿದ್ದ ಕನ್ನಡ ಚಳವಳಿಗಾರರಾದ ಮು.ಸಂಪಂಗಿರಾಮಯ್ಯ ಹಾಗೂ ಕರ್ಲಮಂಗಲಂ ಶಂಕರಪ್ಪ ಹಳಿಗಳ ಮೇಲೆ ಮೊದಲು ಮಲಗಿದರು. ಈ ಇಬ್ಬರನ್ನೂ ರೈಲು ಇಂಜಿನ್ನಿನ ಬಂಪರ್ ಎತ್ತಿ ಹೊರಗೆ ಒಗೆಯಿತು. ಆನಂತರ ಮಲಗಿದ್ದ ಮು. ಗೋವಿಂದರಾಜು, ಅವರು ರೈಲಿಗೆ ಸಿಕ್ಕಿ ಬಲಿಯಾದರು. ಎರಡು ದಿನಗಳ ಹಿಂದೆ ನಾಯಿ ಕಚ್ಚಿ ಕಾಲು ನೋವಾಗಿದ್ದರೂ ಮನೆಯಲ್ಲಿ ಕೂರದೆ ಹೋರಾಟಕ್ಕಿಳಿದಿದ್ದ ಕೆಚ್ಚೆದೆಯ ಹೋರಾಟಗಾರ ಮು.ಗೋವಿಂದರಾಜು. ನಾಡಿಗೆ ತಮ್ಮ ಜೀವವನ್ನೇ ಬಲಿಕೊಟ್ಟು ಆತ್ಮಾರ್ಪಣೆ ಮಾಡಿಕೊಂಡು ಅಮರರಾದರು. ಇಡೀ ದೇಶದಲ್ಲಿ ಮು.ಗೋವಿಂದರಾಜುರವರ ಬಲಿದಾನ ಸುದ್ದಿಯಾಗಿ ಬೆಳಗಾವಿಯ ವಿಚಾರದಲ್ಲಿ ಕರ್ನಾಟಕಕ್ಕೆ ಕಾರ್ಯಸಾಧನೆಯಾಯಿತು.
ಮೂಲತ: ತೆಲುಗು ಭಾಷಿಗರಾದ ಮು.ಗೋವಿಂದರಾಜು ಅವರು, ಕನ್ನಡಕ್ಕಾಗಿ ಪ್ರಾಣ ತ್ಯಾಗ ಮಾಡಿ ಭಾಷಾ ಸಾಮರಸ್ಯ, ಕನ್ನಡದೆಡೆಗಿನ ಅಪ್ರತಿಮ ಪ್ರೀತಿಯನ್ನು ಸಾಕ್ಷೀಕರಿಸಿದ್ದಾರೆ.
ಮು.ಗೋವಿಂದರಾಜು ಅವರ ಅಂತಿಮ ಯಾತ್ರೆಯಲ್ಲಿ ಇಡೀ ಕನ್ನಡ ನಾಡಿನ ಸಮಸ್ತ ಜನತೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಮನಸ್ಸು ಪೂರ್ತಿಯಾಗಿ ಕಂಬನಿ ಮಿಡಿಯಿತು. ಯಾತ್ರೆಯೊಂದಿಗೆ ಅನಕೃ ಅವರಂತಹ ನಾಡಿನ ಗಣ್ಯರು ಹೆಜ್ಜೆ ಹೆಜ್ಜೆಗೆ ಹಾಕಿ ಅಗಲಿದ ಕಲಿಗೆ ಗೌರವ ನಮನ ಸಲ್ಲಿಸಿದರು.
ಮು.ಗೋವಿಂದರಾಜು ಅವರ ಬಲಿದಾನದ ನಂತರ ಸುಮಾರು ಹತ್ತಕ್ಕೂ ಹೆಚ್ಚು ಕನ್ನಡದ ಹೋರಾಟಗಾರರು ಬೆಂಗಳೂರು ನಗರಸಭೆಗೆ ವಿವಿಧ ವಾರ್ಡ್‌ಗಳಿಂದ ಆಯ್ಕೆಯಾದರು. ಗೋವಿಂದರಾಜು ಅವರ ಬಲಿದಾನ ಕನ್ನಡಿಗರೆದೆಯಲ್ಲಿ ಹೊಸದೊಂದು ಚಿಂತನೆಗೆ ಹುಟ್ಟಿ ಹಾಕಿತ್ತು. ಕನ್ನಡದೆಡೆಗಿನ ಅಭಿಮಾನಕ್ಕೆ, ಔನ್ನತ್ಯಕ್ಕೆ, ಅಂತ:ಕರಣ ಸ್ಫೂರ್ತಿಗೆ ಸಾಕ್ಷಿಯಾಗಿ ಮತದಾರರು ವಿಜಯಮಾಲೆ ಹಾಕಿದರು.
ಗೋವಿಂದರಾಜು ಅವರು ಸಹ ರಾಮಚಂದ್ರಪುರ ವಾರ್ಡ್‌ನಿಂದ ಸ್ಪರ್ಧಿಸಿದ್ದರು. ಇವರು ಕೇವಲ ಹೋರಾಟಗಾರರಷ್ಟೇ ಅಲ್ಲ. ಕನ್ನಡಕ್ಕಾಗಿ ಏನೆಲ್ಲ ಮಾಡಬಹುದು, ಯಾವೆಲ್ಲ ಕ್ಷೇತ್ರಗಳಲ್ಲಿ ದುಡಿಯಬಹುದು ಎಂಬುದು ಅರಿತು ಸದಾ ಕ್ರಿಯಾಶೀಲರಾದವರು.
ಇಂದಿಗೂ ಇವರ ಧರ್ಮಪತ್ನಿ ಧನಲಕ್ಷ್ಮೀ ಬೆಂಗಳೂರಿನ ಪ್ರಕಾಶನಗರದಲ್ಲಿ ವಾಸವಾಗಿದ್ದಾರೆ. ಹೋರಾಟಕ್ಕೆ ತಮ್ಮನ್ನೇ ಮುಡುಪಾಗಿರಿಸಿದ್ದ ಚೇತನದಲ್ಲಿ ಖಾಸಗಿ ಬದುಕಿನ ಔನ್ನತ್ಯದ ಚಿಂತೆ ಎಲ್ಲಿಯದು? ಸಹಜವಾಗಿ ಬಡತನ ತನ್ನ ನೆರಳು ಬೀರಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರು ಸಮಾರಂಭವೊಂದರಲ್ಲಿ ಧನಲಕ್ಷ್ಮಿಯವರಿಗೆ ೨೫ಸಾವಿರ ರೂ.ಗಳ ಚೆಕ್ ನೀಡಿ ಗೌರವಿಸಿದರು. ನಾಡಿಗಾಗಿ ಪ್ರಾಣ ತೆತ್ತ ಮಹನೀಯರ ಜೀವನ ಕಷ್ಟದಲ್ಲಿದ್ದಾಗ ನೆರವು ನೀಡುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ಆದರೆ ಕೆಲವರು ಹಣ ನೀಡದೆ ಬರೀಯ ಕವರ್ ನೀಡಿರುವ ಉದಾಹರಣೆ ಉಂಟು. ಸಹಾಯ ಮಾಡುವುದಾಗಿ ಹೇಳಿ ನಂಬಿಸಿ ಮೋಸ ಮಾಡಿರುವುದು ಉಂಟು. ಇದು ನಿಜಕ್ಕೂ ಅಮರವಾದ ಆ ಚೇತನಕ್ಕೆ ನಾವು ಮಾಡುವ ದ್ರೋಹ. ಕನ್ನಡಕ್ಕೆ, ಕನ್ನಡದ ಔದಾರ್ಯಕ್ಕೆ ಮಾಡುವ ಅಪಚಾರವೇ ಸರಿ.
ಇಂತಹ ಧೀರೋದಾತ್ತ ವ್ಯಕ್ತಿಗಳ ಕುಟುಂಬದವರಿಗೆ ಅಗತ್ಯ ನೆರವು ನೀಡಬೇಕಿದೆ. ಒಂದು ಪಕ್ಷದಲ್ಲಿ ಸಹಾಯ ನೀಡಲು ಸಾಧ್ಯವಾಗದಿದ್ದರೆ ಮಾಡಬಾರದ ಚೇಷ್ಟೆಗಳನ್ನು ಮಾಡುವುದು ಸಲ್ಲದು.
ಅನೇಕ ಸಂಘ ಸಂಸ್ಥೆಗಳು ನೆರವು ನೀಡಿವೆ, ನೀಡುತ್ತಿವೆ. ಕನ್ನಡಕ್ಕಾಗಿ ಜೀವವನ್ನೇ ಬಲಿಗೊಟ್ಟ ನಾಯಕನ ಕುಟುಂಬಕ್ಕೆ ನಾವು ಇಂತಿನಿತಾದರು ನೆರವು ನೀಡಬೇಕಲ್ಲವೆ?
ಮು.ಗೋವಿಂದರಾಜು ಅವರಂತಹ ನಿಷ್ಕಳಂಕ, ಅಪ್ಪಟ ಕನ್ನಡ ಪ್ರೇಮಿಗಳ ಬದುಕು, ಹೋರಾಟ ನಮ್ಮ ಮುಂದಿನ ದಾರಿಯ ದೀಪವಾಗಲಿ.

ಗೋ.ಮೂರ್ತಿ ಯಾದವ್

No comments:

Post a Comment

ಹಿಂದಿನ ಬರೆಹಗಳು