Sunday, December 5, 2010
ಕನ್ನಡ ಜಾಗೃತಿ ರಥ ರೂಪಿಸಿದ ಕನ್ನಡ ಪ್ರೇಮಿ ಕಂಡಕ್ಟರ್ ನಟರಾಜ್
ನಾವು ಎಲ್ಲಿಗಾದರೂ ಬಸ್ಸಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಎಲ್ಲಿಗೆ? ಎಂದರೆ ನಾವು ಇಂತಲ್ಲಿಗೆಂದು ಹಣಕೊಟ್ಟರೆ ಮುಗಿತು. ಅವನಿಗೂ ನಮಗೂ ಮತ್ತೆ ಮಾತಿಲ್ಲ! ಆದರೆ... ನಮಗೆ ಈ ಬಸ್ಸು ಕಾಣುವ ರೀತಿ, ಇಲ್ಲಿನ ಕಂಡಕ್ಟರ್ ಸ್ಪಂದಿಸುವ ರೀತಿ, ಈತನ ಕನ್ನಡ ಪ್ರೀತಿ, ಕಾಳಜಿ ಎಂತವರನ್ನೂ ಚಕಿತಗೊಳಿಸುವಂತದ್ದು!
ಮೊದಲಿಗೆ ನಾವು ಕುಳಿತಿರುವುದು ಬಸ್ಸಿನಲ್ಲೋ ಅಥವಾ ಇನ್ನಾವುದೋ ಕನ್ನಡ ಮಾಹಿತಿ ಸಂಗ್ರಹ ಕೇಂದ್ರದಲ್ಲೊ ಎಂಬಂತ ಅನುಭವ. ಎತ್ತ ಕಣ್ಣಾಯಿಸಿದರೂ, ನಮ್ಮ ನಾಡು-ನುಡಿ, ನೆಲ-ಜಲಕ್ಕೆ ಸಂಬಂಧಿಸಿದ ವಿಷಯಗಳು. ಕನ್ನಡ ಕವಿಗಳ, ಕಲಿಗಳ, ಕಲಾವಿದರ, ಚಳವಳಿಗಾರರ ಭಾವಚಿತ್ರಗಳು, ಇವರ ಸಾಧನೆ, ಕ್ಷೇತ್ರಗಳ ಮಾಹಿತಿ ಹಾಗೂ ಕನ್ನಡ ಪರ ಘೋಷಣೆ ನುಡಿಮುತ್ತುಗಳು. ಹಬ್ಬದ ವಾತಾವರಣ ತೋರುವ ಕನ್ನಡ ಬಾವುಟಗಳ ತೋರಣ, ಸಾಲದೆಂಬಂತೆ ಕಿವಿಗಿಂಪೆನಿಸುವ ಕನ್ನಡ ಗೀತೆಗಳ ಮಧುರಗಾನ. ಹೀಗೆ ಒಟ್ಟಾರೆ, ಅಚ್ಚುಕಟ್ಟಾಗಿ ಸಂಪೂರ್ಣ ಕನ್ನಡದ ಜಾಗೃತಿ ರಥವಾಗಿ ರೂಪಿಸಿದ ಸಾರಥಿಯೇ ಎಂ.ನಟರಾಜ್. ಎಲ್ಲರಿಗೂ ಕನ್ನಡ ಪ್ರೇಮಿ ಕಂಡಕ್ಟರ್ ಎಂದೆ ಚಿರಪರಿಚಿತ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದ ನಟರಾಜ್ ಮೂಲತಃ ಬಡಕುಟುಂಬದಲ್ಲಿ ಬೆಳೆದು, ಬದುಕಿನ ಸಹಜ ಅನುಭವದ ಪಾಠ ಕಲಿತು ವಿದ್ಯಾಭ್ಯಾಸ ಮುಗಿಸಿದ ದಿನಗಳಲ್ಲೇ ಕನ್ನಡದ ಉಳಿವಿಗಾಗಿ ನಡೆಯುತ್ತಿದ್ದ ಚಳವಳಿಗಳಿಂದ ಪ್ರೇರಣೆ ಪಡೆದು, ಈ ದಿಸೆಯಲ್ಲೆ ಯೋಚಿಸುವ ಹೊತ್ತಿಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ರಾಜ್ಯಸಾರಿಗೆ ಸಂಸ್ಥೆ ಘಟಕದ ಕಂಡಕ್ಟರ್‌ರಾಗಿ ನೇಮಕವಾದರು. ಹೀಗಾಗಿ ಈ ವೃತ್ತಿಯನ್ನೇ ತನ್ನಲ್ಲಿ ಮೈಗೂಡಿದ್ದ ಅಪಾರ ಕನ್ನಡ ಪರ ಕಾಳಜಿಗೆ ಸೂಕ್ತವೇದಿಕೆಯಾಗಿಸಿಕೊಂಡು, ಜನರನ್ನು ಜಾಗೃತಿಗೊಳಿಸುವಂಥ ವಿವಿಧ ರೀತಿ ಕನ್ನಡದ ಸೇವೆಗಳನ್ನು ಹಲವಾರು ವರ್ಷಗಳಿಂದಲೂ ಚಾಚೂ ತಪ್ಪದೆ ಮಾಡುತ್ತ ಬರುತ್ತಿದ್ದಾರೆ.
ಇತರೆ ಬಸ್ ಕಂಡಕ್ಟರ್‌ಗಳು ಪ್ರಯಾಣಿಕರನ್ನು ಎಲ್ಲಿಗೆ ಎಂದಷ್ಟೇ ಕೇಳಬಹುದು. ಆದರೆ, ಈ ಕನ್ನಡದ ಕಂಡಕ್ಟರ್ ಎಲ್ಲಿಗೆ ಎಂದು ಕೇಳುವುದರ ಜೊತೆಗೆ ನಮ್ಮ ನಾಡು-ನುಡಿಯ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಪ್ರಯಾಣಿಕರು ಸರಿ ಉತ್ತರ ಕೊಟ್ಟರೆ ಬಹುಮಾನವಾಗಿ ಅತ್ಯುತ್ತಮ ಪುಸ್ತಕವನ್ನು ಕೊಡುತ್ತಾರೆ. ಈ ವಿಶೇಷ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಪ್ರಯಾಣಿಕರಿಗೂ ಸಿಹಿ-ತಿಂಡಿ ಹಂಚಿ ಖುಷಿ ಪಡಿಸಿ ಅಲ್ಲೊಂದು ಸೌಹಾರ್ದ ವಾತಾವರಣ ನಿರ್ಮಾಣ ಮಾಡುವುದರೊಂದಿಗೆ, ನಾವು ಮರೆತ ಅನೇಕ ನಾಡುನುಡಿಯ ವಿಷಯದ ಮಹತ್ವವನ್ನು ಮತ್ತೊಮ್ಮೆ ಮನದಟ್ಟು ಮಾಡುತ್ತಾರೆ ಕನ್ನಡದ ಕಂಡಕ್ಟರ್.
ಮೊದಲಿಗೆ ಈ ರಸಪ್ರಶ್ನೆ ಕಾರ್ಯಕ್ರಮ ಮಾಡಿದ ನಟರಾಜ್‌ಗೆ ಪ್ರಯಾಣಿಕರಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ. ಆದರೆ, ನಟರಾಜ್ ಆಸಕ್ತಿ ಕುಂದಲಿಲ್ಲ. ಸದಾ ಸಹನೆ, ಸಂಯಮದಿಂದ ಪ್ರತಿಯೊಬ್ಬ ಪ್ರಯಾಣಿಕರೊಂದಿಗೂ ಬೆರೆಯುವ ಈತನ ಶಿಸ್ತು ನಡೆ, ನುಡಿ ವಿಶೇಷವಾಗಿ ಕನ್ನಡ ಭಾಷೆ ಏಳಿಗೆಗಾಗಿ ತಳೆದಿರುವ ಪ್ರಾಮಾಣಿಕ ಕಾಳಜಿ ಪ್ರಯತ್ನಗಳು ಕ್ರಮೇಣ ಪ್ರಯಾಣಿಕರ ಸಹಜ ಮೆಚ್ಚುಗೆಗೆ ಪಾತ್ರವಾಯಿತು.
ಇದರಿಂದ ಮತ್ತಷ್ಟು ಉತ್ಸಾಹಿಯಾದ ನಟರಾಜ್ ಮುಂದೆ ತನ್ನ ಪ್ರಯಾಣಿಕರೊಂದಿಗೆ ಅನೇಕ ಬಗೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದರು. ಪ್ರತಿ ತಿಂಗಳ ತನ್ನ ವೇತನದಲ್ಲಿ ೪೦೦ ರೂ.ಗಳನ್ನು ರಾಜ್ಯೋತ್ಸವದ ವಿವಿಧ ಕಾರ್ಯಕ್ರಮಗಳಿಗಾಗಿ ಮೀಸಲಿಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
ಪ್ರತೀ ಅಕ್ಟೋಬರ್ ೩೧ ನವೆಂಬರ್ ೧ ಹಾಗೂ ೨ರಂದು ಮೂರು ದಿನಗಳ ಕಾಲ ತನ್ನ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಕನ್ನಡದ ಹಬ್ಬವನ್ನು ಅತ್ಯಂತ ಅಭಿಮಾನದಿಂದ ನಡೆಸುತ್ತ ಯಶಸ್ಸು ಕಂಡಿರುವ ನಟರಾಜ್ ಪ್ರಯತ್ನಕ್ಕೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಸಹಕಾರವು ಸಿಗುತ್ತಿದೆ. ಸಹಜವಾಗಿ ಪ್ರಯಾಣಿಕರಿಗೆ ಹೆಚ್ಚಿನದಾಗಿ, ಇವರ ಕನ್ನಡ ಸೇವೆ ಕಾಳಜಿ ಕೆಲಸಗಳ ಪರಿಚಯವಾಗಿ ಮೆಚ್ಚುಗೆ ಆದ್ದರಿಂದ ಗ್ರಾಮಾಂತರ ವಿಭಾಗದ ಡಿಸಿ ಮಲ್ಲಿಕಾರ್ಜುನ ಅವರ ಗಮನಕ್ಕೆ ಬಂದು ಮತ್ತಷ್ಟು ಪ್ರೋತ್ಸಾಹ ನೀಡಿದರು. ನಟರಾಜ್‌ರ ಈ ವಿಶೇಷ ಸೇವೆಗೆಂದೇ ಪ್ರತ್ಯೇಕ ಬಸ್ ಒಪ್ಪಿಸಿ ೧೦ ದಿನ ಕನ್ನಡ ಜಾಗೃತಿ ರಥವಾಗಿ ರೂಪಿಸಿ ಅನೇಕ ಮಾರ್ಗಗಳಲ್ಲಿ ಸಂಚರಿಸಿ ಕಾರ್ಯಕ್ರಮ ಮಾಡಲು ಸೂಚಿಸಿ ಹೆಚ್ಚಿನ ಉತ್ಸಾಹ ತುಂಬಿದರು. ಇದರಿಂದ ಮೈಸೂರು, ಬೆಂಗಳೂರು, ಹಾಸನ, ಕುಶಾಲನಗರ, ಚಾಮರಾಜನಗರ, ಮಂಡ್ಯ ಹೀಗೆ ಹಲವೆಡೆ ನಟರಾಜ್ ಕನ್ನಡ ಜಾಗೃತಿ ರಥ ಸಂಚರಿಸುವ ಮೂಲಕ ಮತ್ತಷ್ಟು ಕನ್ನಡಿಗರ ಜಾಗೃತಿ ಅಭಿಮಾನ ಪುಟಿದೇಳಲು ಕಾರಣವಾಯಿತು ಎಂಬುದು ಖುದ್ದು ನಟರಾಜ್‌ರಲ್ಲಿ ಸಾರ್ಥಕ ಧನ್ಯತಾಭಾವ ಮೂಡಿಸಿದೆ.
ಕನ್ನಡ ಕಾಂiiಕ್ರಮಗಳ ಜತೆಗೆ ರಾಜ್ಯದಲ್ಲಿ ಸಂಭವಿಸುವ "ನೆರೆ ಸಂತ್ರಸ್ತ"ರು ಎಂಬಂತ ದುರಂತ ಸಂಗತಿಗಳ ಕುರಿತಾಗಿಯೂ ಅಷ್ಟೇ ಕಾಳಜಿಯ ಕಾರ್ಯಕ್ರಮಗಳನ್ನು ರೂಪಿಸುವ ಜವಬ್ದಾರಿಯನ್ನು ಮರೆಯುವುದಿಲ್ಲ!
"ನೆರೆಯಿಂದ ನೆರೆಯವರ ಬಾಳಲ್ಲಿ, ನೋವು ಚಿಂತೆ ಬೇಡ ನಿಮ್ಮೊಂದಿಗೆ ಇರುವೆವು ಎಂದೆಂದೂ ನಾವು ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಬದುಕು ಬೆಳಕಾಗಲಿ" ಎಂದು ನಾವೆಲ್ಲರೂ ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸೋಣ ಹೀಗೆ ಬ್ಯಾನರ್ ಬರೆಸಿ ತನ್ನ ಸೇವೆಯ ಬಸ್ ಮುಂದೆ ಕಟ್ಟಿ ತನ್ನ ಕಾಳಜಿ ತೋರುವ ಈ ನಟರಾಜ್ ಹಲವು ಸಮಸ್ಯೆಗಳ ಬಗ್ಗೆಯೂ ಚಿಂತಿಸುವತ್ತ ಕಾರ್ಯೋನ್ಮುಖರಾಗುವುದಿದೆ! ಪ್ರತಿನಿತ್ಯವೂ ಕನ್ನಡದ ಮಂತ್ರವನ್ನು ಜಪಿಸುವ ನಟರಾಜ್, ಪ್ರಸಕ್ತ ದಿನಮಾನದಲ್ಲಿ ಕನ್ನಡ ಎದುರಿಸುತ್ತಿರುವ, ಹಾಗೆ ಮುಂದೆ ಎದುರಾಗಲಿರುವ, ಸಮಸ್ಯೆಗಳ ಬಗ್ಗೆ ಸದಾ ಮುಂಜಾಗೃತೆಯಿಂದ ಯೋಚಿಸಿ ನಡೆಯುವ ರೀತಿಯೇ ಅಪರೂಪದ್ದು. ಬಿಡುವಿನ ವೇಳೆಯಲ್ಲೂ ತನ್ನದೇ ಆದ ಉತ್ತಮ ಹವ್ಯಾಸಗಳ ಮುಖೇನ ಇತರರಿಗೆ ಮಾದರಿಯಾಗುತ್ತಾರೆ. ಈವರೆಗೂ ನಾಡಿನ ನೆಲ-ಜಲ ಭಾಷೆ, ಸಂಸ್ಕೃತಿ ಉಳಿವಿಗೆ, ಶ್ರೇಯಸ್ಸಿಗೆ ದುಡಿದ ಸಮಸ್ತ ಸಾಧಕರ ಭಾವಚಿತ್ರಗಳು ಕ್ಷೇತ್ರದ ಸಮಗ್ರ ಪರಿಚಯದ ಮಹತ್ವದ ಮಾಹಿತಿಗಳನ್ನು ನಮ್ಮ ನಾಡಿನ ಪತ್ರಿಕೆಗಳಿಂದ, ಜನತೆಯಿಂದ ಸಂಗ್ರಹಿಸಿರುವ ನಟರಾಜ್ ಅವರಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ನಾಡಿನ ವಿವಿಧ ಕ್ಷೇತ್ರದ ಕನ್ನಡ ಕಣ್ಮಣಿಗಳ ಭಾವಚಿತ್ರಗಳು ಲಭ್ಯವುಂಟು. ತನ್ನ ಇಲಾಖೆಯಿಂದ ರಜೆ ಸಿಕ್ಕ ಸಂದರ್ಭದಲ್ಲೂ ಸ್ಥಳೀಯ ಶಾಲಾ-ಕಾಲೇಜುಗಳೀಗೆ ಭೇಟಿ ನೀಡಿ ಆ ಮಕ್ಕಳಿಗೆ ವಿಶೇಷವಾಗಿ ರಾಜ್ಯೋತ್ಸವ ಆಚರಿಸುವ ಕುರಿತು ಹಾಗೂ ನಾಡು ನುಡಿ ಸಂಸ್ಕೃತಿ ಸದಾಚಾರಗಳ ಕುರಿತಾಗಿ, ನಾಡು ಕಂಡ ಸಾಧಕರ ಮಹತ್ವದ ವಿವರಗಳ ಕುರಿತಾಗಿ ಬೋಧಿಸುವ ಹಾಗೆ ಪ್ರಸ್ತುತ ಕನ್ನಡ ಎದುರಿಸುತ್ತಿರುವ ಸಮಸ್ಯೆ ಬಗ್ಗೆ, ಜವಾಬ್ದಾರಿಯ ಬಗ್ಗೆ ಮಕ್ಕಳಲ್ಲಿ ಮನದಟ್ಟಾಗುವಂತೆ, ಭೋದಿಸುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಲೇ ಇದೆ.
ಇದೆ ಸಂದರ್ಭದಲ್ಲಿ "ಕನ್ನಡ ರಸ ಪ್ರಶ್ನೆ" ಕಾರ್ಯಕ್ರಮವನ್ನು ನಡೆಸಿ, ಸರಿಯುತ್ತರ ನೀಡಿದ ವಿದ್ಯಾರ್ಥಿಗಳಿಗೆ ಅಲ್ಲೇ ಸಾಹಿತ್ಯ ಪುಸ್ತಕಗಳ ಬಹುಮಾನ ಕೊಡುತ್ತಾ ಈ ಮುಖೇನವೂ ನಟರಾಜ್ ಕನ್ನಡ ಪರಿಚಾರಕರಾಗಿಯೂ ಸೇವೆ ಸಲ್ಲಿಸುತ್ತಿರುವುದು
ಗಮನಾರ್ಹ ಸಂಗತಿ! ಇದರೊಂದಿಗೆ ಕನ್ನಡ ಸಾಹಿತ್ಯ
ಓದುವ ಮತ್ತು ಅನೇಕ ಹನಿಗವಿತೆಗಳನ್ನು ಬರೆದಿರುವ ನಟರಾಜ್
ಈ ದಿಸೆಯಲ್ಲೂ ಮೆಚ್ಚುಗೆ ಪಡೆದಿದ್ದಾರೆ.
ಹೀಗೆ ನಟರಾಜ್ ಯೋಚಿಸುವ, ಕೈಗೊಳ್ಳುವ ಪ್ರತಿಯೊಂದು ಪ್ರಯತ್ನದಲ್ಲೂ ಕನ್ನಡ ಸೇವೆಯದ್ದೇ ಪ್ರಾಧಾನ್ಯ ಎಂಬುದು ಪ್ರಮುಖಾಂಶ.
ಕನ್ನಡ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜೊತೆಗೆ ಜಾಗತೀಕರಣದ ಪರಿಣಾಮ ಸೇರಿದಂತೆ ಹಲವು ಆಧುನಿಕ ವಿದ್ಯಮಾನಗಳು ಕನ್ನಡವನ್ನು ಮೂಲೆಗುಂಪು ಮಾಡಿರುವ ಈ ಕಾಲ ಸಂದರ್ಭದಲ್ಲಿ ಕನ್ನಡಕ್ಕೆ ಮಾತ್ರವಲ್ಲ ಯಾವುದೇ ಸ್ಥಳೀಯ ಭಾಷೆಗೆ ಮತ್ತು ಸಂಸ್ಕೃತಿಗೂ ಮಾರಕವೇ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಎದುರಾಗುವ ತೊಂದರೆಗಳನ್ನು ತಡೆಯುವ ನಿಟ್ಟಿನಲ್ಲಿ "ಕರ್ನಾಟಕ ರಕ್ಷಣಾ ವೇದಿಕೆ"ಯಂತ ಹಲವಾರು ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಆಡಳಿತದಲ್ಲಿ ಕನ್ನಡ ಭಾಷೆ ಜಾರಿಗೆ ಬಂದರೂ ಅದು ಸಮರ್ಪಕವಾಗಿ ಫಲಕಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗರ ನಡೆ ನುಡಿ ಅತ್ಯಂತ ಜವಾಬ್ದಾರಿಯುತವಾದದ್ದು. ಈ ದಿಸೆಯಲ್ಲಿ ಪ್ರಾಮಾಣಿಕವಾಗಿ ತನ್ನ ಕಂಡಕ್ಟರ್ ವೃತ್ತಿ ಬದುಕಿನ ಹಾಗೂ ಇತರೆ ಹವ್ಯಾಸಗಳ ಮೂಲಕವೇ ತನ್ನದೇ ಆದ ಕನ್ನಡ ಸೇವೆಯನ್ನು ಸಲ್ಲಿಸುತ್ತಿರುವ ಈ ಕನ್ನಡದ ಕಂಡಕ್ಟರ್ ನಟರಾಜ್ ನಿಜಕ್ಕೂ ಅಭಿನಂದನಾರ್ಹರು. ಹೀಗಾಗಿ ಇವರ ಸೇವಾ ಕಾರ್ಯಗಳು ಅನೇಕ ಕನ್ನಡ ಪರ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.
೨೦೧೦ರಲ್ಲಿ ಗಡಿನಾಡ ಧ್ವನಿರಾಜ್ಯ ಪ್ರಶಸ್ತಿ ಕಾಸರಗೋಡು ಇವರಿಂದ ೨೦೦೮ರಲ್ಲಿ ಕೆ.ಆರ್.ನಗರ, ಗ್ರಾಮಾಂತರ ಬುದ್ಧಿಜೀವಿಗಳ ಬಳಗದಿಂದ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ಇದೇ ವರ್ಷ ತುಮಕೂರು ಅಭಿಮಾನಿ ಸಂಘದ ವತಿಯಿಂದ ಅಪ್ಪಟ ಕನ್ನಡ ಅಭಿಮಾನಿ ಪ್ರಶಸ್ತಿ ಹಾಗೂ ವಿಶೇಷವಾಗಿ ಪ್ರಯಾಣಿಕರಿಂದಲೇ "ಕನ್ನಡ ಪ್ರೇಮಿ ನಟರಾಜ್ ಎಂದೇ ಪ್ರೀತಿಗೆ ಪಾತ್ರದ ಪ್ರಶಸ್ತಿ ಸ್ವೀಕಾರ ೨೦೦೯ರಲ್ಲಿ ನವಕರ್ನಾಟಕ ಸಾಂಸ್ಕೃತಿಕ ವೇದಿಕೆಯಿಂದ ಸಮಾಜ ಸೇವಾ ಭೂಷಣ ಪ್ರಶಸ್ತಿ, ಬೆಂಗಳೂರು ಚೇತನ್ ಕಲಾ ಸಂಸ್ಥೆ ಇವರಿಂದ ವಿಶ್ವ ಚೈತನ್ಯ ರತ್ನ, ಪ್ರಶಸ್ತಿ ೨೦೧೦ರಲ್ಲಿ ಸುವರ್ಣ ಕರ್ನಾಟಕ ಕಾಮಧೇನು ಪ್ರಶಸ್ತಿ, ಇದಲ್ಲದೆ ಸಾರಿಗೆ ಇಲಾಖೆ, ಕನ್ನಡ ಕ್ರಿಯಾ ಸಮಿತಿಯಿಂದಲೂ ಹಲವಾರು ಸನ್ಮಾನ ಪುರಸ್ಕಾರಗಳನ್ನು ಸ್ವೀಕರಿಸಿರುವ ನಟರಾಜ್ ಅವರಿಗೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರೊಂದಿಗೆ ಒಂದೇ ವೇದಿಕೆಯಲ್ಲೆ ಪ್ರಶಸ್ತಿ ಹಂಚಿಕೊಂಡ ಹೆಗ್ಗಳಿಕೆಯೂ ಇದೆ. ಇನ್ನೂ ಅನೇಕ ದೃಶ್ಯ ಮತ್ತು ಶ್ರವಣ ಮಾಧ್ಯಮಗಳಲ್ಲೂ ಇವರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಹಾಗೂ ಸಂದರ್ಶನಗಳು ಬಿತ್ತರವಾಗಿರುವುದು ನಟರಾಜ್‌ರ ಸಾಧನೆಗೆ ಹಿಡಿದ ಕನ್ನಡಿ. ತಾನು ನಡೆಸುವ ಯಾವುದೇ ಕಾರ್ಯಕ್ರಮದಲ್ಲೂ ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ನಟರಾಜ್ ತಪ್ಪದೆ ಕೋರಿಕೊಳ್ಳುವ ಕಳಕಳಿ ಎಂದರೆ,
* ಪ್ರಯಾಣಿಕರೇ ಧೈರ್ಯದಿಂದ ಹೇಳಿಕೊಳ್ಳಿ ನಾವು ಕನ್ನಡಿಗರು ಎಂದು.
* ನೀವು ಎಲ್ಲೇ ಇರಿ, ಹೇಗೇ ಇರಿ ನಿಮ್ಮ ಮನೆ ಮತ್ತು ಮನ ಸದಾ ಕನ್ನಡಮಯವಾಗಲಿ.
* ದೀಪಾವಳಿ ದಿನ ಯಾವ ರೀತಿ ಮನೆಗಳ ಮೇಲೆ ಆಕಾಶ ಬುಟ್ಟಿಯನ್ನು ಹಾಕುತ್ತಿರೋ ಅದೇ ರೀತಿ ನವೆಂಬರ್ ತಿಂಗಳು ಮುಗಿಯುವರೆಗೂ ನಿಮ್ಮ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಿ.
* ಇದು ನಟರಾಜ್ ಪ್ರತಿಯೊಬ್ಬರಲ್ಲೂ ಕೇಳಿಕೊಳ್ಳುವ ಕನ್ನಡ ಪರವಾದ ಪ್ರೀತಿಯ ಕಳಕಳಿ.
ಅಂದ್ಹಾಗೆ ಈ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಟರಾಜ್ ಕೈಗೊಂಡಿರುವ ಜಾಗೃತಿ ರಥದ ವಿಶೇಷತೆಗಳು ಹೀಗಿವೆ;
"ಭವ್ಯ ಕರ್ನಾಟಕ ದಿವ್ಯ ದರ್ಶನ" ಇದು ಬಸ್ಸಿನ ಮುಂಭಾಗ ನಾಮಫಲಕ, ಇದರೊಂದಿಗೆ ಇತ್ತೀಚೆಗಷ್ಟೇ ನಮ್ಮನ್ನಗಲಿದ ಡಾ||ಪುಟ್ಟರಾಜಗವಾಯಿ, ಡಾ||ರಾಜ್‌ಕುಮಾರ್, ಡಾ||ವಿಷ್ಣುವರ್ಧನ್, ಸಿ.ಅಶ್ವಥ್, ಭಾವಚಿತ್ರದ ಮೂಲಕ "ಪ್ರಯಾಣಿಕರೇ ನಾವೆಲ್ಲರೂ ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸೋಣ ಈ ಮಹಾನ್ ಕನ್ನಡಿಗರು ಮತ್ತೆ ಹುಟ್ಟಿಬರಲೆಂದು ಎಂಬ ವಿನಮ್ರ ಅಭಿಮಾನದ ಘೋಷಣೆ".
ಇನ್ನು ಜಾಗೃತಿ ರಥದ ಒಳಗೆ: ಎಲ್ಲಾ ಕನ್ನಡದ ಕವಿಗಳು, ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳ ಮಾಹಿತಿ, ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಭಾವಚಿತ್ರಗಳು, ಡಾ||ವಿಷ್ಣು, ಡಾ||ರಾಜ್, ಸಿ.ಅಶ್ವಥ್‌ರವರ ಕನ್ನಡ ಪ್ರೇಮ ಗೀತೆಗಳು ಮತ್ತು ಸಾಹಿತ್ಯ ಪುಸ್ತಕಗಳು. ಕುಡಿಯುವ ನೀರಿನ ವ್ಯವಸ್ಥೆ, ಧ್ವನಿವರ್ಧಕಗಳು. ಈ ಅಭಿಮಾನಿ ಕನ್ನಡಿಗ ನಟರಾಜ್ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಿ ಈ ವರ್ಷದ ಕನ್ನಡ ಜಾಗೃತಿ ರಥವನ್ನು ಎಳೆಯಬೇಕಿದೆ.
ಒಟ್ಟಾರೆ, ತನ್ನ ಪ್ರತಿ ಹೆಜ್ಜೆಯಲ್ಲೂ ಕನ್ನಡ ಸೇವೆಯ ಗುರುತು ಅಚ್ಚೊತ್ತಲು ಹಪಹಪಿಸುವ ನಟರಾಜ್ ಅವರನ್ನು ಅಭಿನಂದಿಸಬೇಕಾದರೆ ಅವರ ಜಂಗಮವಾಣಿ ೯೯೦೦೪೭೮೮೬೮ನ್ನು ಸಂಪರ್ಕಿಸಿ.
ಸಿದ್ಧಾಪುರ ಶಿವಕುಮಾರ್
ಸಿದ್ಧಾಪುರ, ಚಳ್ಳೇಕೆರೆ ತಾಲೂಕು-೫೭೭ ೫೨೨
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
December
(12)
- ಅಂಥ ನಿಜಲಿಂಗಪ್ಪ ಮತ್ತು ಇಂಥ ಯಡಿಯೂರಪ್ಪ
- ಸಾರ್ಥಕ ದಶಕ ಒಂದು ನೋಟ
- ಗಡಿ ಧೋತರದ ಧಡಿ ಇದ್ದಂಗ!
- ನಾನು ಕಂಡ ತೇಜಸ್ವಿ...
- ಜಾಗತೀಕರಣ ಸಂದರ್ಭದಲ್ಲಿ ಇತ್ತೀಚಿನ ಕನ್ನಡ ಸಾಹಿತ್ಯದ ಧೋರಣೆಗಳು
- ದೋಷಪೂರಿತ ಕಾವೇರಿ ನ್ಯಾಯಮಂಡಳಿಯ ಅಂತಿಮ ವರದಿ
- ವಚನಕಾರರು ಅಚ್ಚಕನ್ನಡದ ಬೇಸಾಯಗಾರರು
- ಪಾತ್ರ ಮುಗಿಸಿ ಹೊರಟ ಅದಮ್ಯ ಸಂಘಟಕ ಕೋಡಿಹಳ್ಳಿ ಶ್ರೀನಿವಾಸ್
- ಕನ್ನಡ ಜಾಗೃತಿ ರಥ ರೂಪಿಸಿದ ಕನ್ನಡ ಪ್ರೇಮಿ ಕಂಡಕ್ಟರ್ ನಟರಾಜ್
- ಕನ್ನಡಮ್ಮನಿಗೆ ಪ್ರಾಣ ದೀವಿಗೆ ಹೊತ್ತಿಸಿದ ಮು.ಗೋವಿಂದರಾಜು
- ನಲ್ನುಡಿ ಕಥಾ ಸ್ಪರ್ಧೆ ವಿಜೇತರಿಗೆ ಸತ್ಕಾರ,ಅಭಿನಂದನೆ
- ಆಗಿದ್ದೇಕೆ ನಮ್ಮವರು ಹೀಗೆ
-
▼
December
(12)
No comments:
Post a Comment