Saturday, December 11, 2010

ಗಡಿ ಧೋತರದ ಧಡಿ ಇದ್ದಂಗ!

ನವೆಂಬರ್ ೨೪ರಂದು ಹುಬ್ಬಳ್ಳಿಯಲ್ಲಿ ‘ಕರವೇ ನಲ್ನುಡಿ ಕಥಾಸ್ಪರ್ಧೆ-೨೦೧೦’ರ ವಿಜೇತರಿಗೆ, ಮೆಚ್ಚುಗೆ ಪಡೆದ ಕಥೆಗಾರರಿಗೆ ಸತ್ಕರಿಸುವ ಕಾರ್ಯಕ್ರಮ. ೨೨ರ ರಾತ್ರಿಯೇ ಹುಬ್ಬಳ್ಳಿಯೆಡೆಗೆ ನಮ್ಮ ಪಯಣ. ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದ ನಾರಾಯಣಗೌಡರು ಸಾಧ್ಯವಾದರೆ ಚಿಂಚಣಿ ಮಠಕ್ಕೆ ಭೇಟಿ ಕೊಟ್ಟು ಬನ್ನಿ. ಅಲ್ಲಿ ಅಪರೂಪದ ‘ಕನ್ನಡದ ಸ್ವಾಮಿ’ ಇದ್ದಾರೆ. ಗಡಿಭಾಗದಲ್ಲಿ ಕನ್ನಡದ ಕಾರ್ಯವನ್ನೇ ಧರ್ಮದ ಕಾರ್ಯ ಎಂದುಕೊಂಡು ಕೆಲಸ ಮಾಡುತ್ತಿದ್ದಾರೆ. ಯಾವ ಗಡಿ ಭಾಗವನ್ನು ಮರಾಠಿಗರು ತಮ್ಮದೆಂದು ವಾದಿಸುತ್ತಿದ್ದಾರೋ ಆ ಭಾಗದಲ್ಲಿ ಶತಮಾನದ ಹಿಂದೆ ಸಂಪೂರ್ಣ ಕನ್ನಡ ವಾತಾರವಣವಿತ್ತು, ಕನ್ನಡವೇ ಆಡಳಿತ ಭಾಷೆಯಾಗಿತ್ತು ಎಂಬುದಕ್ಕೆ ಅವರ ಬಳಿ ದಾಖಲೆಗಳಿವೆ. ಒಂದಷ್ಟು ಚಿತ್ರಗಳನ್ನೂ ಸಂಗ್ರಹಿಸಬಹುದು.’ ಎಂದಿದ್ದರು.
ಚಿಕ್ಕೋಡಿ ತಾಲ್ಲೂಕಿನ ಗಡಿಯಲ್ಲಿರುವ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿಗಳನ್ನು ಬಹುತೇಕ ಕನ್ನಡದ ಸಾಹಿತಿಗಳು ಬಲ್ಲರು. ಯಾಕೆಂದರೆ ಅವರು ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಕನ್ನಡ ಜಾಗೃತಿ ಪುಸ್ತಕಮಾಲೆಯ ಮೂಲಕ ೨೭ ಪುಸ್ತಕಗಳನ್ನು ಹೊರತಂದಿದ್ದಾರೆ. ಹೀಗಾಗಿ ನನಗೂ ಈ ಮಠದ ಕುರಿತು ಕುತೂಹಲವಿತ್ತು.
೨೨ರ ರಾತ್ರಿ ಬೆಂಗಳೂರಿನಿಂದ ಹೊರಟು ೨೩ರ ಬೆಳಿಗ್ಗೆ ಹುಬ್ಬಳ್ಳಿ ತಲುಪಿಕೊಂಡಿದ್ದಾಗಿತ್ತು. ಮತ್ತೆ ಅಲ್ಲಿಂದ ಬೆಳಗಾವಿಯ ಮೂಲಕ ಚಿಂಚಣಿಯತ್ತ ಪಯಣ. ಚಿಂಚಣಿಯಿರುವುದು ಚಿಕ್ಕೋಡಿಯಿಂದ ಆಚೆ. ಮರಾಠಿಗರ ಪ್ರಾಬಲ್ಯವಿರುವ ನಿಪ್ಪಾಣಿಯ ಸಮೀಪ.
ಬೆಳಗಾವಿಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಮಹದೇವ ಕೂಡಿಕೊಂಡರು. ನಂತರ ಚಿಕ್ಕೋಡಿಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವ್ ಬಡಿಗೇರ್, ಉಪಾಧ್ಯಕ್ಷ ಶಿವಾನಂದ ಗರಬುಡೆ ನಮ್ಮೊಂದಿಗೆ ಸೇರಿಕೊಂಡರು. ಚಿಕ್ಕೋಡಿಯಿಂದ ಸುಮಾರು ಹತ್ತು ಕಿ.ಮೀ ಸಾಗಿದರೆ ಸಿಗುವುದೇ ಚಿಂಚಣಿ.
ಸ್ವಾಮೀಜಿಯವರಿಗೆ ನಾವು ಬರುವುದನ್ನು ಮೊದಲೇ ತಿಳಿಸಿದ್ದರಿಂದ ಅವರು ನಮಗಾಗಿ ನಿರೀಕ್ಷಿಸುತ್ತಿದ್ದರು. ಇತ್ತ ಬೆಂಗಳೂರಿನಲ್ಲಿ ಬೇರೆಡೆಗಳಲ್ಲಿ ‘ಯಡಿಯೂರಪ್ಪ ಉಳಿತಾರಾ, ಹೋಗ್ತಾರಾ?’ ಎಂಬ ಧಾವಂತದಲ್ಲಿ ನಮ್ಮ ಮಠಪೀಠಗಳ ಸ್ವಾಮಿಗಳು ಧಗಧಗಿಸುತ್ತಿದ್ದರೆ ಅಲ್ಲಮಪ್ರಭು ಸ್ವಾಮಿಗಳು ಅಲ್ಲಿ ತಣ್ಣಗೆ, ಪ್ರಸನ್ನವದನರಾಗಿ ಕುಳಿತಿದ್ದರು.
ರಾಜಧಾನಿಯಿಂದ ಇಷ್ಟು ದೂರವಿರುವ ಈ ಗಡಿಯ ಹಳ್ಳಿಯಲ್ಲಿ ಕನ್ನಡದ ಕಾಯಕ ನಡೆಸುತ್ತಿರುವ ಸ್ವಾಮೀಜಿಯವರ ಕರ್ತೃತ್ವಶಕ್ತಿಯ ಕುರಿತು ಅಭಿಮಾನವೆನಿಸಿತು, ಅಚ್ಚರಿಯೆನಿಸಿತು.
‘ನನ್ನ ಗುರುಗಳು ತೋಂಟದ ಸಿದ್ಧಲಿಂಗ ಸ್ವಾಮಿಗಳು. ಧರ್ಮದ ಕಾಯಕ ನಡೆಸಲು ಸಾವಿರಾರು ಮಠಗಳಿವೆ. ಅವು ಆ ಕೆಲಸ ಮಾಡುತ್ತವೆ. ನೀವು ನಾಡಿನ ಗಡಿಯಲ್ಲಿದ್ದೀರಿ. ಅಲ್ಲಿ ಆಗಬೇಕಿರುವುದು ಕನ್ನಡದ ಕೆಲಸ. ಅದನ್ನು ನೀವು ಮಾಡಿ, ಎಂದು ಹೇಳಿದ್ದರು. ಅವರು ಹೇಳಿದಂತೆಯೇ ಮಾಡುತ್ತಾ ಬಂದಿದ್ದೇನೆ, ಅದರಲ್ಲಿ ಹೆಚ್ಚುಗಾರಿಕೆ ಏನೂ ಇಲ್ಲ ಎಂದು ವಿನಯವಂತಿಕೆ ಮೆರೆದರು ಸ್ವಾಮೀಜಿ.
ನನಗೆ ನಿಜಕ್ಕೂ ಕುತೂಹಲ ಅನಿಸಿದ್ದು ಸ್ವಾಮೀಜಿಯವರು ನಡೆಸುತ್ತಿರುವ ಪ್ರಕಾಶನ ಸಂಸ್ಥೆ. ನಿಮ್ಮ ಕುತೂಹಲಕ್ಕಾಗಿ ಅವರು ಪ್ರಕಟಿಸಿರುವ ಕೆಲವು ಕೃತಿಗಳ ಪಟ್ಟಿಯನ್ನು ನೀಡುತ್ತೇನೆ, ಗಮನಿಸಿ. ಆಧುನಿಕ ಕರ್ನಾಟಕದ ಆತಂಕಗಳು, ಕನ್ನಡತನ ಮತ್ತು ಭಾರತೀಯತೆ, ಮಹಾಜನ ವರದಿ ಒಂದು ಅವಲೋಕನ, ಕನ್ನಡ ಕೋಟೆ ಕೆಎಲ್‌ಇ, ನಾಥ ಸಂಪ್ರದಾಯದ ಇತಿಹಾಸ, ರಂಗಭೂಮಿಯ ಕನ್ನಡದ ಸಂವೇದನೆ, ಸೀಮೆ, ಕನ್ನಡಪರ ಚಿಂತನೆ ಮತ್ತು ಪರಂಪರೆ, ನಮ್ಮ ನಾಡು ನುಡಿ ಮತ್ತು ಗಡಿ, ಕನ್ನಡ ಕಟ್ಟೋಣ, ಕರ್ನಾಟಕದ ಹಿಂದೂಸ್ತಾನಿ ಸಂಗೀತಗಾರರು, ಕನ್ನಡದ ಕೂಲಿ ರಾಮ ಜಾಧವ, ಸಿರಿಗನ್ನಡ ತೇರು, ದತ್ತ ಸಂಪ್ರದಾಯದ ಇತಿಹಾಸ, ಚೆಲುವ ಕನ್ನಡ ನಾಡು, ಕರ್ನಾಟಕದ ಗಂಧರ್ವರು, ಕವಿ ಕಣವಿ ಸಂದರ್ಶನ, ಜ್ಞಾನ ಒಂದು ಇದ್ದ ಮ್ಯಾಲ ಮಾನಕೇನ ಕಡ್ಮಿ ಇಲ್ಲ, ಕನ್ನಡ ಜಗದ್ಗುರು, ಕರ್ನಾಟಕ ಏಕೀಕರಣ ಚಳವಳಿ ಮತ್ತು ಮಹಿಳೆ, ಕನ್ನಡ-ಕನ್ನಡಿಗ-ಕರ್ನಾಟಕ... ಈ ಕೃತಿಗಳನ್ನು ಬರೆದಿರುವವರ ಪಟ್ಟಿಯನ್ನೂ ಒಮ್ಮೆ ಗಮನಿಸಿ. ಎಸ್.ವಿ.ಪಾಟೀಲ, ವಿಜಯಲಕ್ಷ್ಮಿ ಬೋಸಲೆ, ಸದಾನಂದ ಕನವಳ್ಳಿ, ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಡಾ. ಅನಿಲ ಕಮತಿ, ಚಂದ್ರಕಾಂತ ಪೋಕಳೆ, ಡಾ.ರಾಮಕೃಷ್ಣ ಮರಾಠೆ, ಪ್ರೊ.ಚಂದ್ರಶೇಖರ ವಸ್ತ್ರದ, ಡಾ. ರತ್ನಶೀಲ ಶಿವಲಿಂಗಪ್ಪ ಗುರಡ್ಡಿ, ಡಾ. ಪಿ.ಜಿ.ಕೆಂಪಣ್ಣವರ, ಡಾ. ಪಿ.ವಿ.ನಾರಾಯಣ, ಡಾ. ಜಿ.ಎಂ.ಹೆಗಡೆ, ಶಿರೀಷ ಜೋಷಿ, ಡಾ. ಓಂಕಾರ ಕಾಕಡೆ, ರಾ.ನಂ.ಚಂದ್ರಶೇಖರ, ಸುರೇಶ ವೆ. ಕುಲಕರ್ಣಿ, ಶ್ರೀಪಾದ ಕುಂಬಾರ, ಬಿ.ಎಸ್.ಗವಿಮಠ.
ಇವತ್ತಿನ ಕಾಲದಲ್ಲಿ ಮಠಗಳ ಆದ್ಯತೆಯೇನು? ಅವು ಎತ್ತ ಸಾಗಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಹೀಗಿರುವಾಗ ಅಲ್ಲಮಪ್ರಭು ಸ್ವಾಮೀಜಿಗಳು ಇಂಥ ಕೃತಿಗಳನ್ನು ಹೊರತರುವ ಮನಸ್ಸು ಮಾಡಿದ್ದಾದರೂ ಹೇಗೆ ಎಂಬುದೇ ಸೋಜಿಗ. ಯಾವ ಕೃತಿಯಲ್ಲೂ ಸ್ವಾಮೀಜಿಯ ಒಂದು ಸಣ್ಣ ಫೋಟೋ ಸಹ ಇಲ್ಲ. ಎಲ್ಲೂ ಮಠದ ಕುರಿತು ವಿವರಣೆಗಳಿಲ್ಲ.
ಈ ಪ್ರಕಾಶನ ಸಂಸ್ಥೆ ಆರಂಭಿಸುವ ಸಂದರ್ಭದಲ್ಲಿ ಡಾ.ಎಂ.ಎಂ.ಕಲಬುರ್ಗಿಯವರು ಸ್ವಾಮೀಜಿಯವರಿಗೆ ಒಂದು ಮಾತು ಹೇಳಿದ್ದರಂತೆ. ‘ನೀವು ಪ್ರಕಾಶನ ಆರಂಭಿಸುತ್ತಿರುವುದೇನೋ ಸರಿ. ಆದರೆ ಅಲ್ಲಿ ನಿಮ್ಮದೇ ವೈಭವೀಕರಣವಿದ್ದರೆ ಅದಕ್ಕೆ ಅರ್ಥವಿರುವುದಿಲ್ಲ. ಇದನ್ನು ನೀವು ನಿಮ್ಮ ಮಠದ ಪ್ರಚಾರಕ್ಕೆ ಬಳಸಕೂಡದು. ಹಾಗೇನಾದರೂ ಆದರೆ ನಿಮ್ಮ ಉದ್ದೇಶಕ್ಕೆ ಕಳಂಕ ಬಂದಂತಾಗುತ್ತದೆ.’
ಕಲಬುರ್ಗಿಯವರ ಮಾತನ್ನು ಸ್ವಾಮೀಜಿ ಯಥಾವತ್ತಾಗಿ ಆಚರಣೆಗೆ ತಂದರು. ಅದೇ ಪ್ರಕಾರವೇ ಒಂದೊಂದೇ ಕೃತಿಗಳನ್ನು ಹೊರತಂದರು. ನಿಜಕಾಳಜಿ ಇದ್ದಲ್ಲಿ ಮಾತ್ರ ಇಂಥದ್ದು ಸಾಧ್ಯವಾಗುತ್ತದೆಯಲ್ಲವೆ?
ಸ್ವಾಮೀಜಿ ತಮ್ಮ ಸಹಾಯಕರಿಗೆ ಹೇಳಿ ಒಂದಷ್ಟು ಪುಸ್ತಕಗಳನ್ನು ತರಿಸಿ ನಮ್ಮ ಮುಂದೆ ಹರವಿದರು. ಎಲ್ಲ ಪುಸ್ತಕಗಳ ಬಗೆಯೂ ಹೇಳಲು ಅವರ ಬಳಿ ಸಾಕಷ್ಟು ವಿಷಯಗಳಿದ್ದವು. ಒಂದೊಂದನ್ನೂ ಕೈಯಲ್ಲಿ ಹಿಡಿದು ಆಸ್ಥೆಯಿಂದ ವಿವರಿಸಿತೊಡಗಿದರು. ಆಯಾ ಪುಸ್ತಕ ಪ್ರಕಟಣೆಗೊಂಡ ಸಂದರ್ಭದಿಂದ ಹಿಡಿದು ಅವುಗಳ ಸಾಂಸ್ಕೃತಿಕ ಮಹತ್ವವನ್ನು ಬಿಡಿಸಿ ಹೇಳತೊಡಗಿದರು. ಆ ಕೃತಿಗಳು ಅವರಿಗೆ ಕೇವಲ ಪುಸ್ತಕಗಳಲ್ಲ, ಕನ್ನಡ ಬೆಳೆಸುವ ಸಾಧನಗಳು.
‘ನೋಡಿ, ಮರಾಠಿಯ ಕೆಲವು ಪುಸ್ತಕಗಳನ್ನು ಅನುವಾದ ಮಾಡಿಸಿದ್ದೇವೆ. ಕನ್ನಡದ ಕೃತಿಗಳನ್ನೂ ಮರಾಠಿಯಲ್ಲಿ ತರುವ ಉದ್ದೇಶವಿದೆ. ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯಿಂದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು.’ ಎಂದು ಸ್ವಾಮೀಜಿ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದರು.
ಸ್ವಾಮೀಜಿ ಕೇವಲ ಪುಸ್ತಕ ಪ್ರಕಟಣೆ ಮಾಡಿಕೊಂಡು ಕುಳಿತುಕೊಳ್ಳಲಿಲ್ಲ. ಗಡಿ ಭಾಗದ ಹಳ್ಳಿ ಹಳ್ಳಿಗಳಿಗೂ ತೆರಳಿ ಕನ್ನಡದ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ. ಕನ್ನಡದ ಕಾರ್ಯಕ್ರಮ ಎಲ್ಲಿದ್ದರೂ, ಯಾರು ಮಾಡಿದರೂ ಸ್ವಾಮೀಜಿ ಅಲ್ಲಿಗೆ ಹೋಗುತ್ತಾರೆ. ನಮ್ಮದೇ ನಾಡಿನಲ್ಲಿ ತಬ್ಬಲಿತನ ಅನುಭವಿಸುತ್ತಿರುವ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಾರೆ. ಮರಾಠಿಗಳಲ್ಲಿರುವ ತಪ್ಪು ಕಲ್ಪನೆಗಳನ್ನು, ದ್ವೇಷವನ್ನು ಕಿತ್ತುಹಾಕಲು ಯತ್ನಿಸುತ್ತಾರೆ.
ಅಷ್ಟು ಮಾತ್ರವಲ್ಲ, ಕನ್ನಡಕ್ಕೆ, ಕನ್ನಡತನಕ್ಕೆ ಅನ್ಯಾಯವಾದಾಗ, ಅಪಮಾನವಾದಾಗ ಸ್ವಾಮೀಜಿ ಬೀದಿಗಿಳಿದು ಹೋರಾಡುತ್ತಾರೆ. (ಯಡಿಯೂರಪ್ಪ ಅವರ ಕುರ್ಚಿ ಉಳಿಸಲು ಬೀದಿಗಿಳಿದ ಸ್ವಾಮಿಗಳು ಕನ್ನಡಕ್ಕಾಗಿ ಒಮ್ಮೆಯೂ ಬೀದಿಗಿಳಿದಿದ್ದನ್ನು ನಾವು ನೋಡಿಲ್ಲ ಬಿಡಿ) ಕನ್ನಡಪರ ಸಂಘಟನೆಗಳಿಗೆ ಸ್ವಾಮೀಜಿಯೇ ಇಲ್ಲಿ ಸ್ಫೂರ್ತಿ. ಚಳವಳಿಗಳಿಗೆ ಅವರೇ ಮಾರ್ಗದರ್ಶಿ. ಚಳವಳಿ ಅತಿರೇಕಕ್ಕೆ ಹೋಗಬಾರದು ಎಂಬ ಎಚ್ಚರವೂ ಸ್ವಾಮೀಜಿಗಿದೆ. ಇಂಥ ಅತಿರೇಕಗಳು ಕನ್ನಡ-ಮರಾಠಿ ಜನರಲ್ಲಿ ಶಾಶ್ವತ ಕಂದರ ನಿರ್ಮಿಸಬಾರದು ಎಂಬುದು ಅವರ ಅಭಿಪ್ರಾಯ. ಹೀಗಾಗಿ ಅವರು ಅನುನಯದಿಂದಲೇ ಹೆಚ್ಚಿನದನ್ನು ಸಾಧಿಸಬಹುದು ಎಂದು ನಂಬಿದ್ದಾರೆ. ಆ ಮಾರ್ಗದಲ್ಲೇ ಸಾಕಷ್ಟು ಯಶಸ್ಸನ್ನು ಗಳಿಸಿದ್ದಾರೆ.
ಇತರೆಡೆಗಳಲ್ಲಿ ಮಠಪೀಠಗಳು ರಾಜ್ಯೋತ್ಸವ ಆಚರಿಸುವುದು ವಿರಳ. ಆದರೆ ಅಲ್ಲಮಪ್ರಭು ಮಠದಲ್ಲಿ ಪ್ರತಿವರ್ಷವೂ ಅದ್ದೂರಿ ರಾಜ್ಯೋತ್ಸವ ಜರುಗುತ್ತದೆ. ಸಾಧಕರಿಗೆ ಸನ್ಮಾನ ನಡೆಯುತ್ತದೆ. ಈ ವರ್ಷ ನವೆಂಬರ್ ೨ರಂದು ರಾಜ್ಯೋತ್ಸವ ನಡೆದಿದೆ. ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಕಾರ್ಯಕ್ರಮಕ್ಕೆ ಕರೆಸಲಾಗಿದೆ. ಈ ಕಾರ್ಯಕ್ರಮದಲ್ಲೇ ಕರವೀರ ನಿವಾಸಿ ಶ್ರೀ ಮಹಾಲಕ್ಷ್ಮಿ ಎಂಬ ಕೃತಿಯ ಲೋಕಾರ್ಪಣೆಯೂ ನಡೆದಿದೆ. ಮೂಲ ಕೃತಿ ಮರಾಠಿಯದ್ದು. ಅದನ್ನು ರಾಮಚಂದ್ರ ಮರಾಠೆ ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಕೃತಿಯ ಕುರಿತು ಮಾತನಾಡುತ್ತ ಸ್ವಾಮೀಜಿ ಮರಾಠಿ ಜನರು ಆರಾಧಿಸುವ ಪಂಚದೇವತೆಗಳ ಬಗ್ಗೆ ಹೇಳುತ್ತ ಹೋದರು. ಖಂಡೋಬ, ಜಿಜೋಬ, ಕೊಲ್ಲಾಪುರ ಲಕ್ಷ್ಮಿ, ತುಳಜಾ ಭವಾನಿ ಮತ್ತು ಪಂಡರಾಪುರ ವಿಠಲ ಈ ಎಲ್ಲ ಐದು ದೇವತೆಗಳೂ ಅಪ್ಪಟ ಕನ್ನಡದ ದೇವತೆಗಳು ಎಂದು ಹೇಳಿ ನಕ್ಕರು ಸ್ವಾಮೀಜಿ. ( ಈ ಕುರಿತ ವಿಸ್ತ್ರತ ಲೇಖನ ಕರವೇ ನಲ್ನುಡಿಯ ಮೇ ಸಂಚಿಕೆಯಲ್ಲಿ ಪ್ರಕಟಗೊಂಡಿದೆ ಲೇಖಕರು ಪ್ರೊ. ಸಂಗನಾಳಮಠ ಯು.ಎನ್.)
ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಕೊಡು-ಕೊಳ್ಳುವಿಕೆ, ಒಂದರೊಳಗೆ ಒಂದಾಗಿ ಇರುವ ರೀತಿಯ ಕುರಿತು ಸ್ವಾಮೀಜಿಗೆ ಸ್ಪಷ್ಟ ಚಿತ್ರಣವಿದೆ. ಹೀಗಾಗಿಯೇ ಅಕ್ಷರ ಮಾಧ್ಯಮದ ಮೂಲಕ ಜನರನ್ನು ಒಂದುಗೂಡಿಸಲು ಅವರು ಯತ್ನಿಸುತ್ತಿದ್ದಾರೆ.
‘ಭಾಷೆ ದೇವರುಗಳಿಂತ ಪವರ್‌ಫುಲ್ ನೋಡ್ರೀ, ಭಾಷೆಯ ಹೆಸರಲ್ಲಿ ಜನರು ಬೇಗ ಒಂದಾಗುತ್ತಾರೆ, ಬೇಗ ಕೆರಳುತ್ತಾರೆ. ಹುಡುಗರಿಲ್ಲಾಂದ್ರೂ ಮರಾಠಿ ಶಾಲೆಗಳಿಗೆ ಮೇಷ್ಟ್ರುಗಳನ್ನು ನಮ್ಮ ಜನಪ್ರತಿನಿಧಿಗಳೇ ತಂದು ಹಾಕಿಸ್ತಾರೆ. ಆದರೆ ಕನ್ನಡ ಶಾಲೆಗಳನ್ನು ಕೇಳುವವರೇ ಇಲ್ಲ.’ ಎಂದು ಸ್ವಾಮೀಜಿ ಗಡಿಭಾಗದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಡತೊಡಗಿದರು.
‘ಶಾಲೆಯೊಂದರಲ್ಲಿ ಕನ್ನಡ ಸಾಹಿತಿಗಳ ಬಗ್ಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದೆವು. ಬೇಂದ್ರೆ ಬಗ್ಗೆ ಭಾಷಣ ಮಾಡಿದ ಹುಡುಗ ಮೊದಲ ಬಹುಮಾನ ಪಡೆದ. ಆದರೆ ದುರಂತವೆಂದರೆ ಆತನಿಗೆ ಕನ್ನಡದಲ್ಲಿ ಬರೆಯಲು ಬರುವುದಿಲ್ಲ. ಯಾಕೆಂದರೆ ಆತ ಅನಿವಾರ್ಯವಾಗಿ ಓದುತ್ತಾ ಇರುವುದು ಮರಾಠಿ ಶಾಲೆಯಲ್ಲಿ. ಆದರೂ ಅವನಿಗೆ ಕನ್ನಡ ಅಭಿಮಾನ. ಹೀಗಾಗಿ ಮರಾಠಿಯಲ್ಲಿ ಬರೆದುಕೊಂಡುಬಂದು ಕನ್ನಡದಲ್ಲಿ ಭಾಷಣ ಮಾಡಿದ’ ಎಂದು ಮನಸ್ಸಿಗೆ ಕಸಿವಿಸಿಯಾಗುವ ಘಟನೆಯೊಂದನ್ನು ವರ್ಣಿಸಿದರು.
‘ಇಲ್ಲಿ ಕನ್ನಡ. ಮರಾಠಿ ಜನರ ನಡುವೆ ದ್ವೇಷವೇನೂ ಇಲ್ಲ. ಆದರೆ ರಾಜಕೀಯ ಸ್ವಾರ್ಥಕ್ಕಾಗಿ ದ್ವೇಷದ ಬೆಂಕಿಯನ್ನು ಹಚ್ಚಲಾಗುತ್ತದೆ. ಇದರ ಪರಿಣಾಮ ಒಟ್ಟು ಸಮಾಜದ ಮೇಲಾಗುತ್ತದೆ ಎಂಬ ಗಂಭೀರ ಅಪಾಯವೂ ಬೆಂಕಿ ಹಚ್ಚುವ ಜನರಿಗೆ ಗೊತ್ತಾಗೋದಿಲ್ಲ.’
‘ಗಡಿಯಿಂದ ಆಚೆ ಎಲ್ಲವೂ ಮರಾಠಿಮಯವಾಗಿದೆ. ಅಲ್ಲಿನ ಕನ್ನಡಿಗರನ್ನೂ ಮರಾಠೀಕರಣಗೊಳಿಸಲಾಗಿದೆ. ಅಪ್ಪಟ ಕನ್ನಡದ ಹಳ್ಳಿಗಳಲ್ಲಿ ಈಗ ಕನ್ನಡದ ಶಾಲೆಗಳೇ ಇಲ್ಲ. ಕನ್ನಡದ ಕಂದಮ್ಮಗಳಿಗೆ ಕನ್ನಡದ ಪರಿಚಯವೇ ಇಲ್ಲದಂತೆ ಮಾಡಲಾಗಿದೆ. ಆದರೆ ಇಲ್ಲಿ ಅದರ ತದ್ವಿರುದ್ಧ ಸ್ಥಿತಿಯಿದೆ’
‘ಸರ್ಕಾರ ಮೊದಲು ಇಲ್ಲಿ ಅತ್ಯುತ್ತಮ ವಸತಿ ಶಾಲೆಗಳನ್ನು ತೆರೆಯಬೇಕು. ಕನಿಷ್ಠ ತಾಲ್ಲೂಕಿಗೊಂದರಂತೆಯಾದರೂ ಈ ಶಾಲೆಗಳು ಆರಂಭಗೊಳ್ಳಬೇಕು. ಶಾಲೆಯೊಳಗೆ ಕಾಲಿಡುತ್ತಿದ್ದಂತೆ ಮಕ್ಕಳಿಗೆ ರಾಣಿ ಚನ್ನಮ್ಮ, ಬಸವಣ್ಣ, ಕುವೆಂಪು, ಬೇಂದ್ರೆಯವರ ಪರಿಚಯವಾಗಬೇಕು. ಹಾಗಾದಾಗ ಮಾತ್ರ ಕನ್ನಡೀಕರಣವಾಗೋದು ಸಾಧ್ಯ. ಇಲ್ಲವಾದಲ್ಲಿ ಮಾಸ್ತರುಗಳಿಲ್ಲದ ಕನ್ನಡ ಶಾಲೆಗಳಲ್ಲಿ ಕನ್ನಡದ ಮಕ್ಕಳು ಏನನ್ನು ಕಲಿಯುತ್ತಾರೆ?
‘ಈಗೀಗ ನಿಧಾನವಾಗಿ ಪರಿಸ್ಥಿತಿ ತಿಳಿಯಾಗುತ್ತಿದೆ. ಮರಾಠಿಯಲ್ಲಿ ಮದುವೆ ಮುಂಜಿ ಇತ್ಯಾದಿಗಳ ಆಮಂತ್ರಣ ಪತ್ರಿಕೆ ಹೊರಡಿಸುವವರಿಗೆ ನಾನು ಹಲವು ವಿಧಾನಗಳ ಮೂಲಕ ತಿಳಿಹೇಳಿ ಮರಾಠಿಯ ಜತೆಯಲ್ಲಿ ಕನ್ನಡದಲ್ಲೂ ಮುದ್ರಣ ಮಾಡುವಂತೆ ಮನವೊಲಿಸಿದ್ದೇನೆ. ಹಲವರು ಈಗೀಗ ಎರಡೂ ಭಾಷೆಗಳನ್ನು ಬಳಸುತ್ತಿದ್ದಾರೆ. ಹಲವೆಡೆ ಮರಾಠಿ ಹುಡುಗರೇ ಕನ್ನಡ ಸಂಘಟನೆಗಳಲ್ಲಿ ಕೆಲಸ ಮಾಡುವಂತಾಗಿದೆ. ಇದು ಹೀಗೇ ಮುಂದುವರೆಯಬೇಕು.’
‘ಸಾಹಿತ್ಯ ಸಮ್ಮೇಳನಗಳು, ಸರ್ಕಾರ ನಡೆಸುವ ವಿವಿಧ ಸಾಂಸ್ಕೃತಿಕ ಸಮಾವೇಶಗಳನ್ನು ಹೆಚ್ಚು ಹೆಚ್ಚು ಗಡಿಭಾಗದಲ್ಲೇ ಮಾಡಬೇಕು. ತನ್ಮೂಲಕ ಇಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗುವಂತೆ ಮಾಡಬೇಕು.’
‘ಕನ್ನಡ ಸಂಸ್ಕೃತಿ ಮರಾಠಿ ಭಾಷೆಗೆ, ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರವಾದದ್ದು. ಕನ್ನಡವನ್ನು ಹೊರತುಪಡಿಸಿ ಮರಾಠಿ ಸಂಸ್ಕೃತಿಗೆ ಅಸ್ಮಿತೆಯೇ ಇಲ್ಲ. ಇದನ್ನು ದೌರ್ಜನ್ಯಕ್ಕೆ ಇಳಿಯುವ ಮರಾಠಿಗರಿಗೆ ಮನವರಿಕೆ ಮಾಡುವ ಕೆಲಸವನ್ನು ಎಲ್ಲರೂ ಕೂಡಿ ಮಾಡಬೇಕು. ಇತಿಹಾಸದ ಅರಿವು ಅವರಿಗೆ ಮೂಡಿದರೆ ತನ್ನಿಂತಾನೇ ಸಮಸ್ಯೆಗಳು ಬಗೆಹರಿಯುತ್ತದೆ.’
ಹೀಗೆ ಸ್ವಾಮೀಜಿಯವರ ಚಿಂತನೆಗಳು ಒಂದೊಂದಾಗಿ ಹರಿಯುತ್ತಿದ್ದವು.
ಬನ್ನಿ, ಇಲ್ಲೊಂದು ಕನ್ನಡ ಭವನ ಕಟ್ಟಿದ್ದೇನೆ ಎಂದು ಸ್ವಾಮೀಜಿ ಮಠದ ಪಕ್ಕದ ಕಟ್ಟಡಕ್ಕೆ ಕರೆದೊಯ್ದರು. ಅಲ್ಲಿ ಕನ್ನಡದ್ದೇ ಕಲರವ. ಕನ್ನಡದ್ದೇ ಪೂಜೆ. (ಚಿತ್ರಗಳನ್ನು ಗಮನಿಸಿ) ‘ನೋಡಿ, ನಿಮ್ಮ ರಕ್ಷಣಾ ವೇದಿಕೆಯ ಘೋಷಣೆಗಳನ್ನೂ ಬರೆಸಿದ್ದೇನೆ ಎಂದು ಸ್ವಾಮೀಜಿ ತೋರಿಸಿದರು. ದಾರಿಯಲ್ಲಿ ಹೋಗೋ ಶಾಲೆ ಮಕ್ಕಳು ದಿನವೂ ಇದನ್ನು ನೋಡುತ್ತಾರೆ. ಈ ಘೋಷಣೆಗಳನ್ನು ಓದುತ್ತಾರೆ. ಅವು ಆ ಮಕ್ಕಳ ಎದೆಗಳಲ್ಲಿ ಇಳಿಯಲಿ ಎಂಬುದು ನನ್ನ ಉದ್ದೇಶ’ ಎಂದು ಅವರು ಹೇಳುವಾಗ ಅವರ ಕಣ್ಣುಗಳಲ್ಲಿ ವಿಶ್ವಾಸದ ಬೆಳಕು.
ಸ್ವಾಮೀಜಿ ಹಲವು ಮನೆಬಳಕೆಯ ಅಪರೂಪದ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಅವುಗಳಿಗಾಗಿ ಒಂದು ಮ್ಯೂಸಿಯಂ ಮಾಡುವ ಉದ್ದೇಶವೂ ಅವರಿಗಿದೆ. ಇತ್ತೀಚಿಗೆ ಒಂದು ಭುವನೇಶ್ವರಿಯ ವಿಗ್ರಹವೊಂದನ್ನು ಮಾಡಿಸಿದ್ದಾರೆ. ಅದನ್ನು ತಾವು ಕುಳಿತುಕೊಳ್ಳುವ ಪೀಠದ ಪಕ್ಕದಲ್ಲೇ ಇಟ್ಟುಕೊಂಡಿದ್ದಾರೆ.
ಚಿಕ್ಕೋಡಿಯ ಗಡಿಯ ಹಳ್ಳಿಗಳಾದ ಚಾಂದ ಶಿರದವಾಡ, ಜನವಾಡ, ಬೋರಗಾವ, ಕುನ್ನೂರು, ಕಾರದಗಾ, ಕಾಣಕಾಪೂರ, ಮಾಂಗೂರು, ಕಸನಾಳ ಇತ್ಯಾದಿ ಹಳ್ಳಿಗಳು ಮರಾಠಿ ಪ್ರಾಬಲ್ಯ ಹೊಂದಿವೆ. ಇಲ್ಲೆಲ್ಲ ಸ್ವಾಮೀಜಿ ಅಡ್ಡಾಡಿ ಪರಿಸ್ಥಿತಿಯನ್ನು ಬದಲಿಸಿದ್ದಾರೆ. ಕನ್ನಡದ ಕೆಚ್ಚನ್ನು ಬೆಳೆಸಿದ್ದಾರೆ. ಚಿಕ್ಕೋಡಿ ಮಾತ್ರವಲ್ಲ, ನಿಪ್ಪಾಣಿಯಲ್ಲೂ ಸಾಕಷ್ಟು ಬದಲಾವಣೆ ತಂದಿದ್ದಾರೆ. ನಿಪ್ಪಾಣಿಯಲ್ಲಿ ಈ ಬಾರಿ ರಾಜ್ಯೋತ್ಸವವೂ ಅದ್ದೂರಿಯಾಗಿ ನಡೆದಿದೆ. ಅದರ ನೇತೃತ್ವವನ್ನೂ ಸ್ವಾಮೀಜಿಯವರೇ ವಹಿಸಿಕೊಂಡಿದ್ದಾರೆ.
ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಮೂಲಕ ಚಿಕ್ಕೋಡಿಯಲ್ಲಿ ಕೈಗಾರಿಕಾ ತರಬೇತಿ ಕೇಂದ್ರವನ್ನು ಆರಂಭಿಸಿ, ನೂರಾರು ಮಕ್ಕಳು ವೃತ್ತಿಪರ ಶಿಕ್ಷಣ ಪಡೆದುಕೊಂಡು ಸ್ವಾವಲಂಬನೆಯ ಬದುಕು ನಡೆಸಲು ದಾರಿ ಮಾಡಿಕೊಟ್ಟಿದ್ದಾರೆ. ಮಠದಲ್ಲಿಯೇ ಬಾಳಬುತ್ತಿ ಎಂಬ ಕಲಿಕಾ ಕೇಂದ್ರವನ್ನು ತೆರೆದಿದ್ದಾರೆ. ಶಾಲೆ ಮುಗಿದ ನಂತರ ಮಕ್ಕಳು ಇಲ್ಲಿ ಬಂದು ಇನ್ನಷ್ಟು ಕಲಿಯುತ್ತಾರೆ. ಮುಸ್ಲಿಂ ಸಮುದಾಯದ ನಿವೃತ್ತ ಶಿಕ್ಷಕರೊಬ್ಬರು ಈ ಮಕ್ಕಳಿಗೆ ಕಲಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತ ಬಂದಿದ್ದಾರೆ. ನಾನು ಸೂಕ್ಷ್ಮವಾಗಿ ಗಮನಿಸಿದ್ದು, ಗುರುತಿಸಿದ್ದು ಸ್ವಾಮೀಜಿಯವರ ಬದ್ಧತೆ ಮತ್ತು ಕ್ರಿಯಾಶೀಲತೆಯನ್ನು. ಈ ಬದ್ಧತೆಗೆ ಸೈದ್ಧಾಂತಿಕ ತಳಹದಿಯೂ ಇದೆ. ತಾವು ಏನನ್ನು ಪ್ರತಿಪಾದಿಸುತ್ತಿದ್ದಾರೋ ಅದರ ಕುರಿತು ಅವರಿಗೆ ಸ್ಪಷ್ಟ ಕಲ್ಪನೆಯಿದೆ, ಅದಕ್ಕೆ ತಕ್ಕ ಅಧ್ಯಯನವೂ ಅವರಿಗಿದೆ. ಇದೆಲ್ಲವನ್ನೂ ಪ್ರಚಾರದ ಗೀಳಿಲ್ಲದೆ ಮಾಡುವ ಸ್ವಾರ್ಥ ಮನೋಭಾವವೂ ಅವರಿಗಿದೆ. ಅಲ್ಲಮಪ್ರಭು ಸ್ವಾಮೀಜಿಗಳೇ ಇಲ್ಲಿ ಏಕಕಾಲಕ್ಕೆ ಸರ್ಕಾರ ಮತ್ತು ಅದರ ಅವಯವಗಳು ನಡೆಸುವ ಕೆಲಸಗಳನ್ನು ಮಾಡುತ್ತಿದ್ದಾರೆ, ಕನ್ನಡಪರ ಸಂಘಟನೆಗಳು ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.
ಕಳೆದ ನವೆಂಬರ್ ೨ರಂದು ಮಠದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಪಾಟೀಲ ಪುಟ್ಟಪ್ಪನವರು ಈ ಸಂಸ್ಥೆಗೆ ಸರ್ಕಾರ ವಾರ್ಷಿಕ ೨೫ ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ ಸರ್ಕಾರ ಇಂಥ ಮಠಗಳಿಗೆ ಹಣ ನೀಡುತ್ತದೆಯೇ? ಅದು ಹಣ ನೀಡುವುದು ಸಮುದಾಯದ ಮತಗಳನ್ನು ಕೊಡಿಸುವ, ಆಪತ್ತು ಬಂದಾಗ ಕುರ್ಚಿ ಉಳಿಸುವ, ಹಗರಣಗಳನ್ನು ಮಾಡಿಕೊಂಡಾಗ ಬೀದಿಗಿಳಿದು ಸಮರ್ಥನೆ ಮಾಡಿಕೊಳ್ಳುವ ಸ್ವಾಮಿಗಳಿಗಲ್ಲವೇ?
ಹೊರಡುವಾಗ ಸ್ವಾಮೀಜಿ ನನಗೆ ಹೇಳಿದ್ದು: ‘ನನ್ನ ಬಗ್ಗೆ ಏನು ಬರೆಯೋದು ಬ್ಯಾಡ್ರಿ. ಈ ದಾಖಲೆಗಳು ಇವೆಯಲ್ಲ, ಇವು ಬಹಳ ಮುಖ್ಯವಾದವು. ಅವುಗಳ ಬಗ್ಗೆ ಬರೀರಿ’ ಎಂದು.
ಅಲ್ಲಮಪ್ರಭು ಸ್ವಾಮೀಜಿಗಳಿಗೆ ವಂದಿಸಿ ಹೊರಟಾಗ ರಾತ್ರಿಯಾಗಿತ್ತು. ಪ್ರಸಾದ ತಗೊಂಡು ಹೋಗ್ರೀ ಎಂದರು. ಪ್ರಸಾದ ತೆಗೆದುಕೊಂಡು ಹುಬ್ಬಳ್ಳಿಯ ಹಾದಿ ಹಿಡಿದೆವು.
ಹುಬ್ಬಳ್ಳಿಯಲ್ಲಿ ೨೪ರಂದು ಕಥಾಸ್ಪರ್ಧೆ ವಿಜೇತರಿಗೆ ಬಹುಮಾನ, ಸತ್ಕಾರ. ಅದೊಂದು ಹಬ್ಬ. ಹದಿನಾಲ್ಕು ಮಂದಿಯ ಪೈಕಿ ಮೂವರು ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗಿರಲಿಲ್ಲ. ಉಳಿದ ಹನ್ನೊಂದು ಮಂದಿಯೂ ಬಂದರು. ಎಲ್ಲರನ್ನೂ ನಮ್ಮ ಬಳಗ ಮೊದಲ ಬಾರಿ ನೋಡಿದ್ದು. ಎಲ್ಲರೂ ಹೊಸದಾಗಿ ಪರಿಚಯವಾದವರು. ಕನ್ನಡದ ಸಮರ್ಥ ಉದಯೋನ್ಮುಖ ಕಥೆಗಾರರನ್ನು ಒಟ್ಟೊಟ್ಟಿಗೆ ನೋಡುವುದೇ ಒಂದು ಸಂಭ್ರಮ. ನಮ್ಮ ಕಥಾಸ್ಪರ್ಧೆ ಸಾರ್ಥಕತೆ ಪಡೆದ ಅನುಭೂತಿ ನಮ್ಮದು. ಆ ಕುರಿತು ಇನ್ನೊಮ್ಮೆ ಬರೆದೇನು.
ಕಾರ್ಯಕ್ರಮದ ನಡುವೆಯೂ ಅಲ್ಲಮಪ್ರಭು ಸ್ವಾಮೀಜಿ ಹೇಳಿದ್ದ ಒಂದು ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು: ಸೀರೆಗೆ ಅದರ ಧಡಿ ಹೇಗೆ ಮುಖ್ಯವೋ ಹಾಗೆ ಒಂದು ರಾಜ್ಯಕ್ಕೆ ಅದರ ಗಡಿ ಪ್ರದೇಶವೂ ಮುಖ್ಯವಾಗಬೇಕು. ಗಡಿ ಧೋತರದ ಧಡಿ ಇದ್ದಂಗ!
ಈ ಮಾತು ನಮ್ಮನ್ನು ಆಳುವ ಮಹಾನುಭಾವರಿಗೆ ಅರ್ಥವಾದೀತೇ? ಅರ್ಥವಾದರೂ ಎಂದು ಅರ್ಥವಾದೀತು? ಅರ್ಥವಾಗುವ ಹೊತ್ತಿಗೆ ಗಡಿಯ ಜನರ ಬದುಕು ಸರ್ವನಾಶವಾಗಬಾರದು ಅಲ್ಲವೇ?

No comments:

Post a Comment

ಹಿಂದಿನ ಬರೆಹಗಳು