Tuesday, February 8, 2011

ನಾನು ಕಂಡ ತೇಜಸ್ವಿ...



(ಹಿಂದಿನ ಸಂಚಿಕೆಯಿಂದ)

ಪ್ರಸಾದ್ ರಕ್ಷಿದಿ

ನಾವು ಇಷ್ಟೆಲ್ಲ ಮಾತನಾಡಿದರೂ ನಾರಾಯಣ ಮಾತ್ರ ಮೈಯೆಲ್ಲ ಮುಳ್ಳಾಗಿಸಿಕೊಂಡು ಹಲಸಿನಕಾಯಿಯಂತೆ ಕೂತಿದ್ದ.
ಆಗ ನಾನು ನಿರ್ವಾಹವಿಲ್ಲದೆ ನಾನು ಇವತ್ತು ಇಲ್ಲಿಗೆ ಬರುವ ಉದ್ದೇಶವಿರಲಿಲ್ಲವೆಂದೂ, ಈ ನಾರಾಯಣ ನನ್ನನ್ನು ಕರೆದುಕೊಂಡು ಬಂದನೆಂದೂ ಹೇಳಿದೆ.
ಆಗ ನಾರಾಯಣ ಅನಿವಾರ್ಯವೆಂಬಂತೆ ಬಾಯಿ ತೆರೆದ "ಅಣ್ಣಾ ನಿಮ್ಮಂತೋರೆಲ್ಲ ಕಷ್ಟಪಟ್ಟು ನಮ್ಮ ಈ ಹಾಳುಬಿದ್ದ ಮೂಡಿಗೆರೆಗೆ ಒಂದು ಕೃಷಿ ಬ್ಯಾಂಕು ತಂದ್ರಿ, ಅದ್ರಿಂದ ಇದು ಒಂದು ಊರು ಅಂತ ಆಯ್ತು. ಇಂದ್ರಾಗಾಂಧಿ ಬ್ಯಾಂಕನ್ನೆಲ್ಲ ರಾಷ್ಟ್ರೀಕರಣ ಮಾಡಿದ್ರಂದ ನಮ್ಮಂತೋರೆಲ್ಲ ಬ್ಯಾಂಕೊಳಗೆ ಕಾಲಿಡೋಹಂಗಾಯ್ತು, ಇಲ್ಲಾಂದ್ರೆ ಮೂಡಿಗೆರೇಲಿ ಬರೀ ಹತ್ತು ಹನ್ನೆರಡು ಜನರಿಗೆ ಮಾತ್ರ ಬ್ಯಾಂಕೊಳಗೆ ನುಗ್ಗೋಕೆ ಅವಕಾಶ ಇತ್ತು. ಆದ್ರೆ ಈಗ ನೀವೆಲ್ಲ ಇತ್ತೀಚೆಗೆ ಆ ಕಡೆಗೆ ಬರೋದು ಕಡಿಮೆ ಮಾಡಿದ್ರಿ. ಇವ್ರುನೆಲ್ಲಾ ವಿಚಾರಿಸ್ಕೊಳಣಾ ಅಂದ್ರೆ ರೈತಸಂಘನೂ ಇಲ್ಲ ಅದ್ಕೇ ಈ ಬ್ಯಾಂಕಿನೋರೆಲ್ಲ ಹಿಂಗ್ ಹೆಚ್ಚಿಕೊಂಡಿದ್ದಾರೆ. ನಾನೇನೋ ನ್ಯಾಯ ಮಾತಾಡಕ್ಕೋದ್ರೆ ಬ್ಯಾಂಕ್ ಮೇನೇಜರ್ ನಿನ್ ಮ್ಯಾಲೆ ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅಂದ. ಅಲ್ಲೇ ಇದ್ದ ಚಂದ್ರೇಗೌಡ್ರು ಮತ್ ಆ ಮಕಾನಳ್ಳಿ ಕಡೆಯೋರೆಲ್ಲಾ ಬ್ಯಾಂಕಿನ ಪರನೇ ಮಾತಾಡಿದ್ರು, ನೀವಿಲ್ದೇ ಹೋಗಿದ್ರೆ ಈ ಮೂಡಿಗೆರೆಗೆ ಕೃಷಿ ಬ್ಯಾಂಕೆಲ್ಲಿ ಬರ‍್ತಿತ್ತಣ್ಣ ಎಂದು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಹಲವು ವಿಷಯಗಳನ್ನೆಲ್ಲಾ ಜೋಡಿಸಿ ಹೇಳುತ್ತಾ, ತೇಜಸ್ವಿಯವರನ್ನು ಯದ್ವಾತದ್ವಾ ಹೊಗಳತೊಡಗಿದ.
"ಅದೇನು ಹೇಳ್ಬೇಕೋ ಹೇಳು ಸುಮ್ನೆ ಸುತ್ತಿ ಬಳಸಿ ಮಾತಾಡ್ಬೇಡ" ಎಂದರು ತೇಜಸ್ವಿ. ಧ್ವನಿಯಲ್ಲಿ ಸಣ್ಣ ಅಸಹನೆಯಿತ್ತು.
"ಅದೇ ಅಣ್ಣ ಬ್ಯಾಂಕಲ್ಲಿ ಸ್ವಲ್ಪ ಲೋನ್ ಬಾಕಿ ಆಗಿತ್ತು. ಹಂಗಂತ ಇಡೀ ಬ್ಯಾಂಕಿಗೆ ನಾನೊಬ್ನೇ ಸುಸ್ತಿದಾರ ಅನ್ನೋತರ ಎಲ್ರ ಎದ್ರಿಗೆ, ಮ್ಯಾನೇಜರು, ಕೋರ್ಟು ಕಛೇರಿ, ಜಪ್ತಿ, ಅಂದ್ರೆ, ಹೆಂಗ್ಹೇಳಿ?. ನಂಗೂ ಸಿಟ್ಬಂತು. ನಾನೂ ಒಂದ್‌ಸೊಲ್ಪ ರಾಂಗಾದೆ. ಅಷ್ಟಕ್ಕೇ ಪೋಲಿಸಿಗೆ ಫೋನ್ ಮಾಡ್ತೀನಿ ಅಂದ್ರು. ನಾನೂ ’ಹಂಗಾದ್ರೆ ನನ್ ಮನೆ ಜಪ್ತಿ ಮಾಡೇ ತಗಳಿ ನಿಮ್ ಹಣವ’ ಅಂದೆ. ಅಲ್ಲಾ ಅಲ್ಲಿದ್ದೋರೆಲ್ಲಾ ನನ್ನಂಗೆ ಸುಸ್ತಿದಾರ್ರೇ, ಅವ್ರೆಲ್ಲಾ ನಂದೇ ತಪ್ಪು ಅನ್ನೋತರ ಮಾತಾಡದ, ಅದ್ಕೇ ನೀವೊಂಸೊಲ್ಪ ಬುದ್ದಿ ಹೇಳಿ ಆ ಮ್ಯಾನೇಜರಿಗೆ ಅವುಂದ್ಯಾಕೋ ಅತಿಯಾಯ್ತು" ಎಂದ. ಮ್ಯಾನೇಜರ್ ಬಗ್ಗೆ ಹೇಳುವಾಗ ನಾರಾಯಣನ ಮಾತು ಅವನ ಸಿಟ್ಟಿಗೆ ಅನುಗುಣವಾಗಿ ಏಕವಚನ ಬಹುವಚನಗಳ ಮಧ್ಯೆ ಹೊಯ್ದಾಡುತ್ತಿತ್ತು.
"ಅಲ್ಲ ಕಣಯ್ಯ ನಂಗೀಗ ಅರ್ಥ ಆಯ್ತು ಆ ಮೇನೇಜರ್ ನಂಗೂ ಫೋನ್ ಮಾಡಿದ್ರು, ನೀನು ಅವ್ರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡ್ತೀನಿ ಅಂದ್ಯಂತೆ, ’ತೇಜಸ್ವಿ ನಂ ನೆಂಟ್ರು ಗೊತ್ತಾ’ ಅಂತ ಹೆದರ‍್ಸೋತರ ಹೇಳಿದಿಯಂತೆ. ನಾನೇ ಹೇಳ್ದೆ ನನ್ನ ಹೆಸರು ಹೇಳ್ಕೊಂಡು ಏನಾದರೂ ಬೇಡದ್ದು ಮಾಡಿದ್ರೆ ಪೊಲೀಸಿಗೆ ಕೊಡಿ ಅಂತ, ನಿಂಗೇನಾದ್ರು ತಲೆಗಿಲೆಕೆಟ್ಟಿದಿಯೇನಯ್ಯ, ಬ್ಯಾಂಕಿನೋರು ಸಾಲ ಕೊಡಬೇಕಾದ್ರೆ ನಿನ್ನತ್ರ ಎಲ್ಲಾದಕ್ಕೂ ಸೈನ್ ತಗೊಂಡೇ ಅಲ್ವಾ ಕೊಟ್ಟಿರೋದು ಸುಮ್ನೆ ಗಲಾಟೆಮಾಡಿ ಒಂದೆರಡು ಕೇಸು ಮೈಮೇಲೆ ಎಳ್ಕೊಳ್ತೀಯಾ ಅಷ್ಟೆ, ಏನಾದ್ರೂ ಮಾಡಿ ಸಾಲ ತಿರ‍್ಸೋಕ್ಕಾಗುತ್ತೋ ನೋಡು" ಎಂದು ಹೇಳಿ, ಸ್ವಲ್ಪ ಯೋಚಿಸಿ, "ಈ ದೇಶದಲ್ಲಿ ರೈತ ಒಂದುಸಾರಿ ಸಾಲಮಾಡಿದ್ರೆ ಅದು ತೀರಿದ್ದೇ ಕಾಣೆ, ಅದ್ಯಾಕಯ್ಯ ಅಷ್ಟೊಂದು ಸಾಲ ಮಾಡಿದ್ದೀಯಂತೆ" ಎಂದರು.
"ಅಣ್ಣಾ ಅದೊಂದು ಕತೆ. ಈಗ ಮೂರನೇ ವರ್ಷದಲ್ಲಿ ಒಂದೂವರೆ ಲಕ್ಷ ಲೋನ್ ಮಾಡಿ ಹೊಳೆಪಕ್ಕದ ನಾಕೆಕರೆಗೆ ಪಚ್ಚಬಾಳೆ ಹಾಕಿದ್ದೆ, ಎಂತಾ ಚನ್ನಾಗಿ ಬಂದಿತ್ತೂ ಅಂತೀರಿ, ಹಂಗೇ ಮೈನ್ ರೋಡಿಗೆ ಕಾಣದಲ್ಲ, ಎಲ್ಲಾರೂ ಕೇಳೋರೆ ’ಅದುಯಾರ‍್ದು ಮಾರಾಯ್ರೆ ಪಚ್ಚಬಾಳೆ, ಒಂದೊಂದು ಗೊನೆ ಏನಿಲ್ಲ ಅಂದ್ರೂ ಇಪ್ಪತೈದ್ ಕೇಜಿ ಮೇಲೆ ಬೀಳುತ್ತೆ’ ಅನ್ನೋರು. ಹಂಗ್ ಬಂದಿತ್ತು ಬಾಳೆ. ನೋಡೀ ನೋಡೀ ಜನಗಳ್ದೇ ಕಣ್ಣಾಯ್ತೋ ಏನೋ, ಆ ವರ್ಷ ಡಿಸೆಂಬರಲ್ಲಿ ಬಿತ್ತಲ್ಲ ಚಳಿ, ಒಂದೇವಾರದ ಚಳೀಗೆ ಬಾಳೆ ಎಲ್ಲಾ ಕೆಂಪಾಗಿ ಬತ್ತಿದಂಗಾಯ್ತು, ಆ ಮೇಲೆ ಏನೆಲ್ಲಾ ಮಾಡ್ದೆ, ಕೊನೀಗ್ ನೋಡಿದ್ರೆ ಗೊನೆಗಳೆಲ್ಲ ಪೀಚಾಗಿ ಏಳ್ ಕೇಜಿ ಎಂಟು ಕೇಜಿ ಮೇಲ್ ಬರ‍್ಲೇ ಇಲ್ಲ. ಪೂರಾ ಲಾಸಾಯ್ತು. ಇನ್ನು ಬ್ಯಾಂಕಿನ ಕಂತೆಲ್ಲಿ ಕಟ್ಟಲಿ" ಎಂದ.
ಚಳಿ ತೀರಾ ಹೆಚ್ಚಾದರೆ ನಮ್ಮಲ್ಲಿರುವ ಅನೇಕ ಜಾತಿಯ ಸಸ್ಯಗಳ ಬೇರುಗಳು ಕೆಲಸವನ್ನೇ ನಿಲ್ಲಿಸಿಬಿಡುವುದರಿಂದ ಈ ರೀತಿ ಆಗುತ್ತದೆಂದೂ, ಇದು ಯಾರ ಕಣ್ಣಿನ ಪ್ರಭಾವವೂ ಅಲ್ಲವೆಂದೂ ತೇಜಸ್ವಿ ವಿವರಿಸಿದರು.
ಆ ವರ್ಷ ನಾನೂ ಕೂಡಾ ಸ್ವಲ್ಪ ಪಚ್ಚಬಾಳೆ ಬೆಳೆದಿದ್ದೆನೆಂದೂ, ಆ ಸಂದರ್ಭದಲ್ಲಿ ಬಾಳೆಗೆ ಚೆನ್ನಾಗಿ ನೀರು ಹಾಯಿಸಿದರೆ ಚಳಿಯ ಪ್ರಭಾವ ಕಮ್ಮಿಯಾಗುತ್ತದೆಂದೂ ನನಗೆ ಹಿರಿಯರೊಬ್ಬರು ಹೇಳಿದ್ದರು. ಅದರಂತೆ ನಾನೂ ಬಾಳೆಗೆ ಏಳೆಂಟು ದಿನಗಳ ಕಾಲ ಸ್ಪ್ರಿಂಕ್ಲರ್ ಮೂಲಕ ನೀರಾವರಿ ಮಾಡಿಸಿದ್ದೆ. ಇದರಿಂದ ಬಾಳೆಗೆ ಆದಹಾನಿ ಬಹಳಷ್ಟು ಕಡಿಮೆಯಾಗಿತ್ತು. ಈ ವಿಚಾರವನ್ನು ನಾನು ಅವರಿಗೆ ತಿಳಿಸಿದೆ.
ಹೌದು ಅದೂ ಒಂದು ಪರಿಣಾಮಕಾರಿ ವಿಧಾನವೇ ಎಂದರು.
"ಅಣ್ಣ ಅಲ್ಲಿಗೇ ನಿಂತಿಲ್ಲ ನನ್ ಕತೆ, ಹೆಂಗೂ ಇನ್ನು ಈ ಬಾಳೆಕಾಯಿ ಮಾರಿ ಬ್ಯಾಂಕ್ ಸಾಲ ತೀರ‍್ಸದು ಕನಸು ಅಂದ್ಕಂಡು ಇನ್ನೂ ಒಂದು ಲಕ್ಷ ಸಾಲ ತಗಂಡು, ಸಕಲೇಶಪುರದಲ್ಲಿ ಕೃಷ್ಣ ಅಂತಿದ್ದಾನೆ ನನ್ ಫ್ರೆಂಡು, ಚಕ್ಕೆ ವ್ಯಾಪಾರ ಮಾಡ್ತಾನೆ. ಅವುನು ಜೊತೆ ಪಾರ್ಟನರ್ ಆಗಿ ಸುಂಡೆಕೆರೆ ಹತ್ರ ಒಂದು ಸಾಬರ ಎಸ್ಟೇಟಿನ ಚಕ್ಕೆ ಕಂಟ್ರಾಕ್ಟ್ ಮಾಡುದ್ವು, ಎಲ್ಲಾ ಸರಿಯಾಗಿದ್ರೆ ನಾಕ್-ನಾಕ್ ಲಕ್ಷ ಲಾಭ ಉಳ್ದಿರೋದು. ಚಕ್ಕೆ ಎಲ್ಲಾ ಕೆತ್ತಿ ಇನ್ನೇನು ಪರ್ಮಿಟ್ ಸಿಕ್ಕೋ ಹೊತ್ತಿಗೆ ಅದೇನೋ ಕಾಂಪ್ಲಿಕೇಷನ್ ಆಗಿ ಚಕ್ಕೆ ಎಲ್ಲಾ ಪಾರೆಸ್ಟ್‌ನೋರು ಸೀಜ್ ಮಾಡಿದ್ರು. ಅದೆಲ್ಲಾ ಸರಿಮಾಡಿ ನಾವು ಬಚಾವಾಗಿ ಚಕ್ಕೆ ಮಾರೋಹೊತ್ತಿಗೆ ಅಲ್ಲಿಗಲ್ಲಿಗೆ ಸರಿಯಾಗಿ, ಕೈ ಕಾಲಿಯಾಯ್ತಣ್ಣ. ಅಲ್ಲಾ ಆ ಬ್ಯಾಂಕ್ ಮ್ಯಾನೇಜರು ಎಲ್ರ ಎದುರಿಗೆ ನನ್ ಮರ‍್ಯಾದಿ ಕಳುದ್ರೆ ಸಿಟ್ ಬರಲ್ವಣ್ಣ, ಅದ್ಕೇ ನಿಮ್ ಹೆಸರು ಹೇಳ್ದೆ, ಅವಾಗ ಸ್ವಲ್ಪ ಸುಮ್ನಾದ" ಎಂದು ಕರುಣಾಜನಕವಾಗಿ ತನ್ನ ಕತೆಯನ್ನು ಹೇಳಿದ.
"ಸರಿ ಮಾರಾಯ ಮತ್ತೀಗ ಸಾಲಕ್ಕೆಂತ ಮಾಡ್ತೀಯಾ" ಎಂದು ತೇಜಸ್ವಿ.
"ಇನ್ನೆಂತದು ಮಾಡ್ಳಿ, ನನ್ನ ಹೊಳೆ ಸಾಲು ಗದ್ದೆ ಮೇಲೆ ತುಂಬಾ ಜನಕ್ಕೆಕಣ್ಣಿರಾದು, ಅದರಲ್ಲೇ ಎರಡು ಎಕರೆ ಮಾರ‍್ಬೇಕು ಅಂತಿದ್ದೀನಿ. ಅಲ್ಲಿವರ‍್ಗೂ ಸ್ವಲ್ಪ ಸುಮ್ನಿರೋಕೇ ಆ ಮ್ಯಾನೇಜರಿಗೆ ಹೇಳಿ" ಎಂದ.
"ಸರಿ ಆದ್ರೆ ಪದೇ ಪದೇ ನನ್ನ ಹೆಸರು ಹೇಳಕೊಂಡು ತಿರುಗ್ಬೇಡಾ, ನೀವೆಲ್ಲ ಒಂದು ಶಿಸ್ತು ಕಲೀಬೇಕು ಕಣ್ರಯ್ಯ ಇಲ್ಲಾಂದರೆ ಯಾರೂ ನಮ್ಮ ಸಹಾಯಕ್ಕೆ ಬರೋದೇ ಇಲ್ಲ, ಸರ್ಕಾರವಂತೋ ಬರೋದೇ ಇಲ್ಲ, ತಿಳ್ಕಳಿ" ಎಂದರು.
ನಂತರ ಅವರೇ ಒಂದಷ್ಟು ಕಾಫಿ ಮಾಡಿ ತಂದು ಕೊಟ್ಟರು. ಕಾಫಿ ಕುಡಿದು ನಾವು ಹೊರಡುವಾಗ ನಾರಾಯಣನಿಗೆ. "ಹೆಂಗಾದ್ರು ಒಂದ್ಸಾರಿ ಬಚಾವಾಗೋ ದಾರಿ ಹುಡ್ಕು" ಎಂದರು.
ಆಗಲೇ ಗಂಟೆ ಆರಾಗುತ್ತ ಬಂದಿತ್ತು. ನಾರಾಯಣ ನನಗೆ ಕೊಟ್ಟ ಮಾತಿನಂತೆ ನನ್ನನ್ನು ಬೈಕಿನಲ್ಲಿ ಹೇರಿಕೊಂಡು ಸಕಲೇಶಪುರದ ಹಾದಿ ಹಿಡಿದ. ಹಾನುಬಾಳಿಗೆ ಬರುತ್ತಿದ್ದಂತೆ ಇಲ್ಲೇ ’ಸಾಯಂಕಾಲದ ಕಾರ್ಯಕ್ರಮ’ ಮುಗಿಸೋಣವೆಂದೂ, ನಿನ್ನನ್ನು ಊರಿಗೆಬಿಟ್ಟು ತಾನು ಸಕಲೇಶಪುರಕ್ಕೆ ಬದಲಾಗಿ ಹೆಗ್ಗದ್ದೆಗೆ ನೆಂಟರಮನೆಗೆ ಹೋಗುವುದಾಗಿಯೂ ತಿಳಿಸಿದ. ಸಾಯಂಕಾಲದ ಕಾರ್ಯಕ್ರಮಕ್ಕೆ ಕುಳಿತಿದ್ದಾಗ ನಾರಾಯಣನಿಂದ ತಿಳಿದ ಸತ್ಯವೆಂದರೆ ಚಕ್ಕೆ ವ್ಯಾಪಾರದಲ್ಲಿ ಆದನಷ್ಟವನ್ನು ತುಂಬಿಕೊಳ್ಳಲು ಅವನು ಇಸ್ಪೀಟಾಡಲು ಪ್ರಾರಂಭಿಸಿ ಈಗ ಅದೇ ಚಟವಾಗಿ ಬಿಟ್ಟಿತ್ತು. ಎಲ್ಲೆಲ್ಲಿ ’ರಮ್ಮಿ ನಾಕೌಟ್ ಜಾತ್ರೆಗಳಾಗಲೀ ಅಲ್ಲೆಲ್ಲ ಹೋಗಿ ಇಸ್ಪೀಟಾಡುತ್ತಿದ್ದ. ಮತ್ತಷ್ಟು ಹಣವನ್ನು ಕಳೆದುಕೊಂಡಿದ್ದ. ಇದರಿಂದ ಅವನ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟು ಹೋಗಿತ್ತು. ಅವನು ಹತಾಶನಾದಂತಿದ್ದ. ಏನೇನೋ ಸುಳ್ಳುಗಳನ್ನು ಹೇಳುತ್ತಾ ಎಲ್ಲರನ್ನೂ ನಂಬಿಸಲು ಪ್ರಯತ್ನಿಸುತ್ತಿದ್ದ.
ಇದನ್ನು ಊಹಿಸಿಯೇ ತೇಜಸ್ವಿಯವರು "ಶಿಸ್ತು ಕಲೀಬೇಕು ಕಣ್ರಯ್ಯ ಎಂದಿರಬೇಕು.
*****
೨೦೦೨ ನೇ ಇಸವಿಯಲ್ಲಿ ’ಮಹಾವೀರರ ೨೦೦೦ವರ್ಷದ ಜನ್ಮ ಕಲ್ಯಾಣ ಮಹೋತ್ಸವ’ ವೆಂದು ಘೋಷಿಸಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಂತೆ ಮೈಸೂರಿನ ರಂಗಾಯಣ ಆ ವರ್ಷ ಅಹಿಂಸೆಯನ್ನು ಪ್ರತಿಪಾದಿಸುವ ನಾಟಕವೊಂದನ್ನು ಆರಿಸಿಕೊಂಡು ಅದನ್ನು ಎರಡು ಬೇರೆ ಬೇರೆ ತಂಡಗಳಿಂದ ಸಿದ್ಧ ಪಡಿಸಿ ಅನೇಕ ಕಡೆಗಳಲ್ಲಿ ಪ್ರದರ್ಶನ ಮಾಡುವ ಯೋಜನೆ ಮಾಡಿಕೊಂಡಿತ್ತು. ಎರಡು ಹವ್ಯಾಸಿ ತಂಡಗಳಲ್ಲಿ ಒಂದನ್ನು ಚಾಮರಾಜನಗರದಲ್ಲಿ ಅವರು ಈಗಾಗಲೇ ಆರಿಸಿದ್ದರು. ಇನ್ನೊಂದು ತಂಡವನ್ನಾಗಿ ನಮ್ಮನ್ನು ಆಯ್ಕೆಮಾಡಿದ್ದರು.
ನಾಟಕದ ನಿರ್ದೇಶಕರು ಮತ್ತು ಇನ್ನಿತರ ತಾಂತ್ರಿಕ ವರ್ಗವನ್ನು ರಂಗಾಯಣ ಕಳುಹಿಸಿಕೊಡಲಿತ್ತು. ಈ ಕಾರ್ಯಕ್ರಮಕ್ಕಾಗಿಯೇ ರಂಗಾಯಣದ ರಾಮನಾಥ್- ’ಅರಹಂತ’ ಎನ್ನುವ ನಾಟಕವನ್ನು ಬರೆದಿದ್ದರು. ಹುಲುಗಪ್ಪ ಕಟ್ಟೀಮನಿಯವರು ನಿರ್ದೇಶಕರಾಗಿ ನಮ್ಮಲ್ಲಿಗೆ ಬಂದರು. ಕಾರ್ಯಕ್ರಮದಲ್ಲಿನ ಒಪ್ಪಂದದಂತೆ ನಾವು ನಾಟಕವನ್ನು ಬೇರೆ ಬೇರೆ ಕಡೆಗಳಲ್ಲಿ ಕನಿಷ್ಠ ಎಂಟು ಪ್ರದರ್ಶನಗಳನ್ನು ಮಾಡಬೇಕಿತ್ತು. ನಮ್ಮಲ್ಲೂ ರಂಗ ಶಿಬಿರಗಳಾಗದೆ ಸ್ವಲ್ಪ ಸಮಯವಾಗಿತ್ತು. ಹೊಸಬರಿಗೆ ತರಬೇತಿಯ ಅಗತ್ಯವಿತ್ತು.
ಸುಮಾರು ಒಂದು ತಿಂಗಳ ತರಬೇತಿಯ ನಂತರ ಅರಹಂತ ಪ್ರದರ್ಶನಕ್ಕೆ ಸಿದ್ಧವಾಯಿತು. ಈ ನಾಟಕವನ್ನು ಹಾಸನಜಿಲ್ಲೆಯೊಳಗಲ್ಲದೆ, ಮೈಸೂರು, ಬೆಂಗಳೂರು, ಹೂವಿನಹಡಗಲಿ, ಮುಂತಾದ ಕಡೆಗಳಲ್ಲೂ ಪ್ರದರ್ಶಿಸಿದೆವು. ಈ ನಾಟಕಕ್ಕೆ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಬಂತು. ಮೂಡಿಗೆರೆಯಲ್ಲೂ ಈ ನಾಟಕದ ಪ್ರದರ್ಶನವಾಯಿತು. ಮೂಡಿಗೆರೆಯ ನೇಚರ್ ಕ್ಲಬ್‌ನ ಧನಂಜಯ ಮತ್ತು ಗೆಳೆಯರು ನಾಟಕ ಪ್ರದರ್ಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ನಾಟಕ ನೋಡಲು ತೇಜಸ್ವಿಯವರೂ ಬಂದಿದ್ದರು. ನಾಟಕ ಮುಗಿದನಂತರ ಮಾತನಾಡುತ್ತಾ, ನಾಟಕದ ಅಭಿನಯವೇನೋ ಚೆನ್ನಾಗಿತ್ತು ಎಂದು, "ಅಲ್ಲ ಕಣ್ರಯ್ಯ ಎಲ್ಲಾ ವಿಚಾರವನ್ನೂ ಚರಿತ್ರೆಯ ಘಟನೆಗಳ ಮೂಲಕವೇ ಹೇಳ್ಬೇಕು ಅನ್ನೋ ಹುಚ್ಚು ನಿಮಗೆ-ನಾಟಕದವ್ರಿಗೆ ಈ ಹುಚ್ಚು ಯಾವಾಗ ಬಿಡುತ್ತೋ ಗೊತ್ತಿಲ್ಲ ಎಂದು ಛೇಡಿಸಿದರು.
ನಮ್ಮ ರಂಗ ಚಟುವಟಿಕೆಗಳ ಬೆಳ್ಳಿಹಬ್ಬದ ಸಮಯದಲ್ಲಿ ನಾಟಕೋತ್ಸವ ಏರ್ಪಡಿಸಿದ್ದೆವು. ನಾಲ್ಕು ದಿನಗಳಕಾಲ ನಮ್ಮ ತಂಡದ ಮಕ್ಕಳ-ದೊಡ್ಡವರ ನಾಟಕಗಳಲ್ಲದೆ, ಮುದ್ರಾಡಿ, ಬೆಂಗಳೂರು(ಪ್ರಯೋಗರಂಗ) ತಂಡಗಳ ನಾಟಕವೂ ನಮ್ಮಲ್ಲಿ ಪ್ರದರ್ಶಿತವಾಯಿತು. ಆಗ ತೇಜಸ್ವಿಯವರನ್ನು ಆಹ್ವಾನಿದ್ದೆವು. ಆದರೆ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ನಂತರ ನಮ್ಮೂರಲ್ಲಿ ರಂಗ ಮಂದಿರ ಕಟ್ಟಬೇಕೆನ್ನುವವವರ ಸಂಖ್ಯೆ ಹೆಚ್ಚಾಗಿ ಅದರ ಕೆಲಸವನ್ನು ಪ್ರಾರಂಭಿಸಿದೆವು. ಆ ಸಮಯದಲ್ಲಿ ಒಮ್ಮೆ ಮೂಡಿಗೆರೆಯಲ್ಲಿ ತೇಜಸ್ವಿಯವರನ್ನು ಭೇಟಿಯಾದಾಗ ನಮ್ಮಲ್ಲಿ ರಂಗ ಮಂದಿರವನ್ನು ಕಟ್ಟುವ ವಿಚಾರವನ್ನು ತಿಳಿಸಿದೆವು. ಅದಕ್ಕವರು "ಸೆಕೆಂಡ್ ಲೈನ್ ಲೀಡರ್‌ಶಿಪ್ ಇದಿಯೇನ್ರಯ್ಯ ನಿಮ್ಮೂರಲ್ಲಿ, ನಿಮ್ಮ ನಂತರ ಅದು ಹಾಳು ಬೀಳೋ ಹಂಗಿದ್ರೆ ಮಾಡ್ಬೇಡಿ. ಎಷ್ಟೋ ಕಡೆಗಳಲ್ಲಿ ಹಂಗೇ ಆಗಿದೆ. ಅದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ಬೇಕು. ಆ ನೀನಾಸಂನವರನ್ನು ನೋಡು, ಆ ಥರ ಮುಂದುವರ‍್ಸಿಕೊಂಡು ಹೋಗೋಕೆ ಏನಾದ್ರು ವ್ಯವಸ್ಥೆ ಇರ‍್ಬೇಕು" ಎಂದರು.
*****
೨೦೦೪ ನೇ ಇಸವಿಯ ವೇಳೆಗೆ ಮಲೆನಾಡಿನ ಕಾಫಿವಲಯ ತತ್ತರಿಸಿಹೋಗಿತ್ತು. ಒಂದು ಕಡೆ ಅನೇಕ ವರ್ಷಗಳಿಂದ ಇದ್ದ ಕಾಫೀಬೋರ್ಡಿನ ಏಕಸ್ವಾಮ್ಯದಿಂದ ಕಳಚಿಕೊಂಡು ಮುಕ್ತವಾದ ಕಾಫಿ ಉದ್ಯಮ, ಸ್ವಾತಂತ್ರ್ಯ ದೊರೆತ ಹುಮ್ಮಸ್ಸಿನಲ್ಲಿದ್ದರೆ, ಇನ್ನೊಂದು ಕಡೆ ಕಾಫಿಗೆ ದೊರೆತ-ಅದುವರೆಗೆ ಯಾರೂ ಕನಸಿನಲ್ಲೂ ಊಹಿಸದಿದ್ದಂತಹ ಹೆಚ್ಚಿನ ಬೆಲೆ ದಿಢೀರನೆ ಕುಸಿದು ನೆಲಕಚ್ಚಿತ್ತು. ಅದರೊಂದಿಗೆ ಕಳೆದೆರಡು ವರ್ಷಗಳಿಂದ ಮಳೆಯೂ ಅತ್ಯಂತ ಕಡಿಮೆಯಾಗಿ ನೀರಿನಮೂಲಗಳೆಲ್ಲ ಒಣಗಿಹೋಗಿ ಕಾಫಿತೋಟಗಳೆಲ್ಲ ನಾಶವಾಗುವ ಸ್ಥಿತಿಗೆ ಬಂದಿದ್ದವು. ಪ್ರಥಮಬಾರಿಗೆ ಕಾಫಿತೋಟಗಳ ಮಾಲೀಕರು ಮತ್ತು ಕಾರ್ಮಿಕರು ಒಟ್ಟಾಗಿ ತಮ್ಮ ಉಳಿವಿಗಾಗಿ ಹೋರಾಡಲು ಬೀದಿಗಿಳಿದಿದ್ದರು.
ಬೆಂಗಳೂರು ದೂರದರ್ಶನದಿಂದ ಗೆಳೆಯ ಸುಬ್ಬುಹೊಲೆಯಾರ್ ಫೋನ್ ಮಾಡಿದರು "ಕಾಫಿ ಉದ್ಯಮದ ಸಮಸ್ಯೆಗಳ ಬಗ್ಗೆ ದೂರದರ್ಶನದಲ್ಲಿ ಒಂದು ಕಾರ್ಯಕ್ರಮ ಮಾಡೋಣ. ಕಾಫೀ ಬೆಳೆಗಾರರ, ತೋಟಕಾರ್ಮಿಕರ, ವ್ಯಾಪಾರಿಗಳ ಹೀಗೆ ಕಾಫಿ ಉದ್ಯಮಕ್ಕೆ ಸಂಬಂಧಪಟ್ಟ ಎಲ್ಲರ ಸಂದರ್ಶನಗಳೂ ಇರಲಿ, ಜನರ ಆಯ್ಕೆ ಮತ್ತು ಸಂದರ್ಶನಗಳ ಜವಾಬ್ದಾರಿ ನಿಮ್ಮದು" ಎಂದು ಎಲ್ಲವನ್ನೂ ನನ್ನ ತಲೆಗೆ ಕಟ್ಟಿದರು.
ಸಾಧ್ಯವಿದ್ದರೆ ತೇಜಸ್ವಿಯವರ ಸಂದರ್ಶನ ಮಾಡಬೇಕೆಂದು ಆಗಲೇ ಅಂದುಕೊಂಡೆ. (ಅವರು ಕೂಡಾ ಕಾಫಿ ಬೆಳೆಗಾರರೇ). ದೂರದರ್ಶನದ ಕ್ಯಾಮರಾ ತಂಡ ನಮ್ಮೂರಿಗೆ ಬಂದಿಳಿಯಿತು. ಮೊದಲನೇ ದಿನ ಸಕಲೇಶಪುರದ ಸುತ್ತಮುತ್ತ ಬೆಳೆಗಾರರಿಂದ ಹಿಡಿದು ಕೂಲಿ ಕಾರ್ಮಿಕರತನಕ, ಕಾಫಿಕೃಷಿ ಮತ್ತು ಉಧ್ಯಮಕ್ಕೆ ಸಂಬಂಧಿಸಿದ ಅನೇಕರ ಸಂದರ್ಶನ ಮಾಡಿದೆವು. ಮಾರನೇ ದಿನ ಬೆಳಗ್ಗೆ ತೇಜಸ್ವಿಯವರನ್ನು ಕಾಣಲು ಹೋಗುವ ಯೋಜನೆಯಿತ್ತು. ಫೋನ್ ಮಾಡಿ ತೇಜಸ್ವಿಯವರ ಸಂದರ್ಶನಕ್ಕೆ ಅನುಮತಿಯನ್ನು ಪಡೆದುಕೊಳ್ಳಲು ನಮಗೆ ಕೆಲವರು ಸಲಹೆ ನೀಡಿದರು. ಆದರೆ ಅವರ ಸ್ವಭಾವದ ಸ್ವಲ್ಪ ಪರಿಚಯವಿದ್ದ ನಾನು, ಫೋನ್ ಮಾಡಿ ಅವರಿಗೆ ತಿಳಿಸುವುದು ಬೇಡವೆಂದು ವಾದ ಮಾಡಿದೆ.
ನಾವೇನಾದರೂ ಪೋನ್ ಮಾಡಿದಾಗ ಅವರು ಸಂದರ್ಶನ ನೀಡಲು ನಿರಾಕರಿಸಿದ್ದರೆ ನಾವು ಅವರಲ್ಲಿಗೆ ಹೋಗುವ ಆಸೆಯನ್ನೇ ಕೈಬಿಡಬೇಕಾಗುತ್ತಿತ್ತು!. (ಅವರು ಯಾವುದೇ ಟಿ.ವಿ.ಗೆ ಸಂದರ್ಶನ ನೀಡದೇ ಕೆಲವು ವರ್ಷಗಳಾಗಿದ್ದವೆಂಬ ವಿಚಾರ ನನಗೆ ತಿಳಿದಿದ್ದುದರಿಂದ ಸಮ್ಮತಿಸುತ್ತಾರೋ ಇಲ್ಲೋ ಎಂಬ ಸಣ್ಣ ಅಳುಕಿತ್ತು)
ಮಾರನೇದಿನ ಬೆಳಗ್ಗೆ, ನಮ್ಮ ತಂಡ ನೇರವಾಗಿ ತೇಜಸ್ವಿಯವರ ಮನೆಗೆ ಹೋಯಿತು. ಉಳಿದವರನ್ನೆಲ್ಲ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿ ನಾನೊಬ್ಬನೇ ಅವರ ಮನೆಗೆ ಹೋದೆ. ರಾಜೇಶ್ವರಿಯವರು ಮನೆಯಲ್ಲಿದ್ದರು. ಅವರಿಗೆ ನಾವು ಬಂದ ಉದ್ದೇಶವನ್ನು ತಿಳಿಸಿದೆ. ಅದಕ್ಕವರು "ನೀವೇ ಹೋಗಿ ಕೇಳಿ, ತೋಟದಲ್ಲಿ ಏನೋ ಕೆಲಸ ಮಾಡುತ್ತಿದ್ದಾರೆ" ಎಂದರು.
ತೋಟದಲ್ಲಿ ತೇಜಸ್ವಿಯವರು ಸಣ್ಣ ಕವಲಿಯೊಂದರಲ್ಲಿ ಇಳಿದು ನಿಂತಿದ್ದರು. ಜೊತೆಯಲ್ಲಿ ಒಬ್ಬ ಗಾರೆಯವನಿದ್ದ. ಕವಲಿಯಲ್ಲಿ ನೀರು ಸಣ್ಣದಾಗಿ ಹರಿಯುತ್ತಿತ್ತು. ಅವರಿಬ್ಬರೂ ಸೇರಿ ಕವಲಿಗೆ ಕಟ್ಟುಹಾಕಿ ನೀರುನಿಲ್ಲಿಸುವ ಪ್ರಯತ್ನದಲ್ಲಿದ್ದರು.
"ನಮಸ್ಕಾರ ಸಾರ್ ಎಂದೆ. ಅಲ್ಲಿಂದಲೇ ತಲೆಯೆತ್ತಿನೋಡಿ
"ಓಹೋ ಬಾರಯ್ಯ, ನೋಡು ನಮ್ಮ ಮೂಡಿಗೆರೆಲೂ ನೀರಿಗೆ ಈ ಗತಿ ಬಂತು. ಇದನ್ನೇ ಕಟ್ಟಿನಿಲ್ಸೋಕೆ ಒದ್ದಾಡ್ತಾ ಇದ್ದೀನಿ. ಬಾ ಅಂತ ಹೇಳಿಕಳ್ಸಿದ್ರೆ, ಈ ಗಾರೆಯವ್ನು ಹದಿನೈದು ದಿನ ತಡಮಾಡ್ದ, ಅಷ್ಟರಲ್ಲಿ ನೀರೇ ಅರ್ಧ ಕಮ್ಮಿಯಾಗಿಹೋಯ್ತು" ಎಂದರು. ಅದಕ್ಕೆ ಗಾರೆಯವನು "ಅವತ್ತು ನೀರು ಜಾಸ್ತಿ ಇತ್ತು ಕಟ್ಟಂಗಿರ‍್ಲಿಲ್ಲಎಂದು ತನ್ನನ್ನು ಸಮರ್ಥಿಸಿಕೊಂಡ.
ನಾವು ಕಳೆದ ವರ್ಷ ’ಶ್ರೀ ಪಡ್ರೆ ಯವರನ್ನು ಕರೆಸಿ ಹಾನಬಾಳು, ಸಕಲೇಶಪುರ, ಬೆಳ್ಳೇಕೆರೆಗಳಲ್ಲಿ ನೀರಿಂಗಿಸುವ ಬಗ್ಗೆ ಜಾಗ್ರತಿ ಮೂಡಿಸುವ ಒಂದು ಕಾರ್ಯಕ್ರಮ ಮಾಡಿದ್ದೆವೆಂದೂ, ಅದರಿಂದ ಈಗ ಕೆಲವರು ತಮ್ಮ ಜಮೀನಿನಲ್ಲಿ ನೀರಿಂಗಿಸುವ ಕೆಲಸ ಮಾಡುತ್ತಿದ್ದಾರೆಂದೂ, ನಾನೂ ನಮ್ಮ ತೋಟದಲ್ಲಿ ನೀರಿಂಗಿಸಲು ಪ್ರಾರಂಭಮಾಡಿ ನನಗೆ ಸ್ವಲ್ಪ ಅನುಕೂಲವಾಗಿದೆಯೆಂದೂ ಹೇಳಿದೆ.
" ಈ ನಮ್ಮ ಮೂಡಿಗೆರೆಲೂ ಅಂಥಾದ್ದೇನಾದ್ರೂ ಮಾಡ್ಬೇಕಪ್ಪಎಂದರು.
"ಸಾರ್ ಇಲ್ಲೂ ಒಂದು ಕಾರ್ಯಕ್ರಮ ಮಾಡೋಣ ಜನರಿಗೆ ಸ್ವಲ್ಪ ಮಾಹಿತಿನಾದ್ರೂ ಸಿಗುತ್ತೆ"ಎಂದೆ.
"ಯಾರಿಗೆ ಹೇಳೋದು, ನಂಗಂತೂ ಸಾಕಾಗಿಹೋಗಿದೆ ಕಣಯ್ಯ, ಬಾ ಒಂದು ಕಾಫಿ ಕುಡ್ದು ಬರೋಣ" ಎಂದು ಕವಲಿಯಿಂದ ಮೇಲೆಹತ್ತಿ ಮನೆಯ ಕಡೆ ಹೊರಟರು.
ನಾವು ಮನೆಯತ್ತ ತಿರುಗುತ್ತಿದ್ದಂತೆ "ನಂಗೆ ಇಲ್ಲೇ ಕಳ್ಸ್‌ಬುಡಿ ಕಾಫಿ ಕವಲಿಯಿಂದ ಧ್ವನಿ ಕೇಳಿಬಂತು. ಪಕ್ಕನೆ ತೇಜಸ್ವಿಯವರ ಗೆಳೆಯ ರಾಮದಾಸರ ಧ್ವನಿಯಂತಿತ್ತು. ಮತ್ತೊಮ್ಮೆ ಹೊರಳಿ ಯಾರೆಂದು ನೋಡಿದೆ. ಇಲ್ಲ, ಹಾಗೆಂದವನು ಗಾರೆಯವನೇ!.
"ಸರಿ ಹಾಗಾದ್ರೆ ನೀನಿಲ್ಲೇ ಇರ‍್ತೀಯ?" ಎಂದು ಗಾರೆಯವನಿಗೆ ಹೇಳಿ ತೇಜಸ್ವಿ ಮನೆಯತ್ತ ಹೆಜ್ಜೆ ಹಾಕಿದರು. ನಾನು ಹಿಂಬಾಲಿಸಿದೆ. ಮಾತು ಕಾಫಿಯತ್ತ ತಿರುಗಿದ್ದರಿಂದ, ಇದೇ ತಕ್ಕ ಸಮಯವೆಂದುಕೊಂಡು "ಕಾಫಿ ಸಮಸ್ಯೆಯ ಬಗ್ಗೆ ದೂರದರ್ಶನಕ್ಕೊಂದು ಕಾರ್ಯಕ್ರಮ ಮಾಡ್ತಾ ಇದ್ದೀವಿ. ಅದಕ್ಕೆ ಸಂಬಂಧಪಟ್ಟಂತೆ ಹಲವರ ಸಂದರ್ಶನ ಮಾಡಿದ್ದೀವಿ ಈಗ ನಿಮ್ದೊಂದು ಸಂದರ್ಶನ ಬೇಕಿತ್ತು" ಎಂದೆ.
"ನನಗೆ ಅದಕ್ಕೆಲ್ಲ ಬರೋಕಾಗಲ್ಲ ಕಣಯ್ಯ, ಪುರುಸೊತ್ತಿಲ್ಲಎಂದರು.
"ನೀವು ಬರ‍್ಬೇಡಿ ಸಾರ್ ಇಲ್ಲೇ ಮಾಡೋಣ"
"ಎಂದೋ ಮಾರಾಯ"
"ಇವತ್ತೇ ಸಾರ್ ಈಗಲೇ"
"ಎಲ್ಲಿದ್ದಾರೆ ಅವರೆಲ್ಲ ಸಂಚಿನ ವಾಸನೆ ಹಿಡಿದವರಂತೆ ಕೇಳಿದರು.
"ಇಲ್ಲೇ ಮೇಲೆ ಕಾಯ್ತಾ ಇದ್ದಾರೆ" ಕದ್ದು ದಕ್ಕಿಸಿಕೊಂಡವನಂತೆ ಹೇಳಿದೆ!
"ನೀವೆಲ್ಲ ಒಳ್ಳೆ ಕಿರಾತಕರು-ಕರಿ ಅವರನ್ನೂ ಕಾಫಿಗೆ!"
ಎಲ್ಲರನ್ನೂ ಮನೆಗೆ ಕರೆದು ಕಾಫಿ ಸಮಾರಾಧನೆ ಆಯಿತು. ಆಮೇಲೆ ದೂರದರ್ಶನದವರ ಕ್ಯಾಮರಾ, ಕ್ಯಾಮರಾ ಸ್ಟಾಂಡ್, ಇತ್ಯಾದಿಗಳ ಬೆಲೆ ಅದರ ಸೂಕ್ಷ್ಮತೆ ಇವುಗಳನ್ನೆಲ್ಲ ವಿವರವಾಗಿ ಕೇಳಿ ತಿಳಿದುಕೊಂಡರು. ಎಲ್ಲವನ್ನೂ ನೋಡಿ "ಈ ಕ್ಯಾಮರಾ ಇರ‍್ಲಿ ಅದರ ಸ್ಟಾಂಡನ್ನು ಕೊಳ್ಳೋಕ್ಕಗಾಲ್ಲ ಎಂದವರೇ "ನಂಗಂತೂ ನಿಮ್ಮ ದೂರದರ್ಶನ ಒಂಚೂರೂ ಇಷ್ಟ ಇಲ್ಲ. ಇಷ್ಟೊಳ್ಳೆ ಕ್ಯಾಮರ ಇಟ್ಕೊಂಡಿದ್ದೀರ ಟಿ.ವಿ.ಲಿ ಚಿತ್ರ ನೋಡಿದ್ರೆ ಸರಿಯಾಗಿ ಬರೋದೆ ಇಲ್ಲಎಂದರು.
ಆ ಮೇಲೆ ಅವರ ತೋಟದ ಮಧ್ಯದಲ್ಲೇ ನಿಂತು, ಸಂದರ್ಶನವೂ ನಡೆಯಿತು. ತೇಜಸ್ವಿ ಕಾಫಿ ಬೆಳೆಗಾರರ ಬಗ್ಗೆ ಮಾತನಾಡುತ್ತಾ ’ನಾವು ಕಳೆದ ನಲುವತ್ತು ವರ್ಷಗಳಿಂದ ಕಾಫಿ ಮಾರಾಟದ ಸಂಪೂರ್ಣ ಜವಾಬ್ದಾರಿಯನ್ನು ಕಾಫಿಬೋರ್ಡನ ಕೈಗೊಪ್ಪಿಸಿ ಕುಳಿತುಬಿಟ್ಟಿದ್ದೆವು. ಕಾಫಿಗೆ ತಕ್ಕಮಟ್ಟಿನ ಒಳ್ಳೆಯಬೆಲೆ ದೊರಕುತ್ತಿದ್ದುದರಿಂದ ಈ ಸ್ಥಿತಿ ಶಾಶ್ವತ ಎಂಬಂತೆ ನಿರಾಳವಾಗಿದ್ದೆವು. ಈಗ ನಮ್ಮ ಉತ್ಪನ್ನದ ಮಾರಾಟದ ಜವಾಬ್ದಾರಿಯನ್ನು ಸಮರ್ಥವಾಗಿ ನಾವೇ ನಿರ್ವಹಿಸಲು ಕಲಿಯಬೇಕಾಗಿದೆ.’ ಕೃಷಿಯಲ್ಲಿನ ಅನಿಶ್ಚಿತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅದಕ್ಕೆ ಹೊಂದಿಕೊಂಡು ಬದುಕಲು ಅಗತ್ಯವಾದ ಆರ್ಥಿಕ ಶಿಸ್ತನ್ನು ಕಲಿಯುವ ಬಗ್ಗೆ ಮಾತ್ರವಲ್ಲ ಸಮಗ್ರವಾಗಿ ರೈತರ ಬಗ್ಗೆ, ಅದರಲ್ಲೂ ಕಾಫಿ ಬೆಳೆಗಾರರಿಗಿಂತಲೂ ಇನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಬದುಕುವ-ಹಣ್ಣು ತರಕಾರಿ ಬೆಳೆಯುವ ರೈತರ ಬಗ್ಗೆಯೂ ಮಾತನಾಡಿದರು. ಆ ರೈತರಿಗೆ ಹೋಲಿಸಿದರೆ ಕಾಫಿ ಬೆಳೆಗಾರರ ಸ್ಥಿತಿ ಅವರಷ್ಟು ಚಿಂತಾಜನಕವಲ್ಲವೆಂದು ನನ್ನ ಅಭಿಪ್ರಾಯ ಎಂದರು. ನಂತರ "ಯಾವ ಸರ್ಕಾರನೂ ರೈತನ ನೆರವಿಗೆ ಬರೋದಿಲ್ಲ, ಹೆಚ್ಚೆಂದರೆ ಸಾಲ ವಸೂಲಿಯನ್ನು ಮುಂದೂಡೋದೋ ಇಲ್ಲಾ ಬಡ್ಡಿ ಒಂದ್ಸೊಲ್ಪ ಕಡಿಮೆ ಮಾಡೋದೋ ಇಂಥಾ ಸಣ್ಣಪುಟ್ಟ ರಿಯಾಯಿತಿ ಕೊಡಬಹುದಷ್ಟೆ ನಮ್ಮನ್ನು ನಾವೇ ನೋಡಿಕೊಳ್ಳಲು ಕಲೀಬೇಕು" ಎಂದರು. ಇವೆಲ್ಲ ದೂರದರ್ಶನದಲ್ಲಿ ಪ್ರಸಾರವೂ ಆಯಿತು.
ಕಾರ್ಯಕ್ರಮವನ್ನು ಟಿ.ವಿ.ಯಲ್ಲಿ ನೋಡಿದ ಕೆಲವರು ಕಾಫಿ ಬೆಳೆಗಾರರು, ನನ್ನಲ್ಲಿ "ನೀನು ನಮ್ಮೆಲ್ಲರ ಸಂದರ್ಶನ ಮಾಡಬೇಕಿತ್ತು. ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿಯವರನ್ನು ಸಂದರ್ಶನ ಮಾಡಿದ್ದೀಯ ಅವರು ನಮ್ಮ ವಿರುದ್ದವೇ ಮಾತಾಡಿದರು" ಎಂದು ಜಗಳಕ್ಕೆ ಬಂದರು! ಅವರೆಲ್ಲರಿಗೆ ನಿಜವನ್ನು ಒಪ್ಪಿಕೊಳ್ಳುವುದು ಕಷ್ಟವಾಗಿ ಕಂಡಿರಬೇಕು.
*****
ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ಹಾಸನ ಜಿಲ್ಲಾಡಳಿತ ಉದ್ಘಾಟನಾ ಸಮಾರಂಭಕ್ಕೆಂದು ಕುವೆಂಪು ಅವರ ನಾಟಕವೊಂದನ್ನು ಪ್ರದರ್ಶಿಸಲು ನಮ್ಮ ರಂಗತಂಡಕ್ಕೆ ಆಹ್ವಾನ ನೀಡಿತ್ತು. ಕುವೆಂಪು ಅವರ ಸಣ್ಣ ಕಥೆ ’ಧನ್ವಂತರಿಯಚಿಕಿತ್ಸೆಯನ್ನು ರಂಗಕ್ಕೆ ಆಳವಡಿಸಿ ನಾಟಕವೊಂದನ್ನು ಸಿದ್ಧಪಡಿಸಿಕೊಂಡಿದ್ದೆವು. ನಾಟಕದಲ್ಲಿ ಕುವೆಂಪು ಅವರೇ ಒಂದು ಪಾತ್ರವಾಗಿ ಬರುವಂತೆ, ಆ ಮೂಲಕ ಕುವೆಂಪು ಅವರ ವಿಚಾರಗಳು ಮತ್ತು ಕಾಳಜಿಗಳು ಸ್ವಲ್ಪಮಟ್ಟಿಗೆ ನಾಟಕದಲ್ಲಿ ಚರ್ಚಿತವಾಗುವಂತೆ ರಂಗಪಠ್ಯವೊಂದನ್ನು ತಯಾರಿಸಲಾಗಿತ್ತು. ಆ ಸಂದರ್ಭದಲ್ಲೇ ಒಮ್ಮೆ ಮೂಡಿಗೆರೆಗೆ ಹೋದಾಗ, ತೇಜಸ್ವಿಯವರನ್ನು ಕಂಡು ನಾಟಕದ ವಿಚಾರವನ್ನೂ, ಹಾಗೇ ತಾಲೀಮಿನ ಸಂದರ್ಭದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ತೋರಿಸಿದೆ. ’ಧನ್ವಂತರಿಯಚಿಕಿತ್ಸೆಗೆ ಕುವೆಂಪು ಪಾತ್ರ ಅಗತ್ಯ ಇತ್ತೇನ್ರಿ? ಎಂದರು.
ಸಾಧ್ಯವಾದರೆ ಮೂಡಿಗೆರೆಯಲ್ಲಿ ಒಂದು ಪ್ರದರ್ಶನ ಮಾಡಬೇಕೆಂದಿದ್ದೇವೆ. ಆಗ ತಿಳಿಸುತ್ತೇನೆ ಬನ್ನಿ ಎಂದೆ.. ಕೆಲವು ದಿನಗಳ ನಂತರ ಮೂಡಿಗೆರೆಯ ನೇಚರ್ ಕ್ಲಬ್‌ನವರು ನಾಟಕ ಪ್ರದರ್ಶನದ ವ್ಯವಸ್ಥೆ ಮಾಡಿದರು. ಆಗಲೇ ಈ ನಾಟಕ ಒಂದೆರಡು ಕಡೆ ಪ್ರದರ್ಶನಗಳಾಗಿತ್ತು. ಪ್ರದರ್ಶನಕ್ಕೆ ತೇಜಸ್ವಿಯವರು ಬಂದಿದ್ದರು. ಅಂದು ಪ್ರದರ್ಶನ ಅನೇಕ ಕಾರಣಗಳಿಂದ ಚೆನ್ನಾಗಿರಲಿಲ್ಲ.
ಕೆಲವು ದಿನಗಳನಂತರ ಅವರನ್ನು ಭೇಟಿಯಾದಾಗ ಸ್ವಲ್ಪ ಆಳುಕುತ್ತಲೇ ನಾಟಕದ ಬಗ್ಗೆ ಕೇಳಿದೆ. "ಯಾಕೆ ಏನಾಯ್ತು ನಿಮಗೆ ಅವತ್ತು" ಎಂದರು. ಅಂದು ಬಾಡಿಗೆಗೆ ತಂದಿದ್ದ ಜನರೇಟರ್‌ನ ತೊಂದರೆಯಿಂದಾಗಿ ನಮ್ಮ ಡಿಮ್ಮರ್ ಒಂದು ಸುಟ್ಟು ಹೋಯಿತು, ಧ್ವನಿ ವ್ಯವಸ್ಥೆಯೂ ಹಾಳಾಯಿತು. ಜೊತೆಗೆ ಒಂದಿಬ್ಬರು ನಟರೂ ಬದಲಿಯಿದ್ದರು ಎಂದು ವಿವರಿಸಿದೆ. "ಅವೆಲ್ಲ ಸಬೂಬು ಕಣ್ರಿ ಜನರ ಮುಂದೆ ಬರಬೇಕಾದ್ರೆ ಎಲ್ಲ ಸಿದ್ಧತೆ ಮಾಡಿಕೊಂಡೇ ಬರಬೇಕು, ಏನನ್ನಾದರೂ ಬರೀಬೇಕಾದ್ರೂ ಅಷ್ಟೇ, ಸರಿಯಾಗಿ ಯೋಚ್ನೆಮಾಡಿ ಕೂತ್ಕೊಂಡು ಬರೀಬೇಕು, ಅರೆಬರೆ ಕೆಲಸ ನಡಿಯೋಲ್ಲ ಎಂದರು.
"ಹೋರಾಟಗಳಂತೇ ನಮಗೆ ಇದೊಂದು ತರಾ ಅಭ್ಯಾಸ ಆಗ್ಬಿಟ್ಟಿದೆ ಸಾರ್, ಮಧ್ಯದಲ್ಲಿ ಯಾರೋ ಕೈಕೊಡೋದು, ಇನ್ನೇನೋ ತೊಂದ್ರೆ ಆಗೋದು, ಹೀಗೆ ಮುಂದುವರಿತಾ ಇದ್ದೀವಿ" ಎಂದೆ.
"ಅದ್ಕೇ ಕಣ್ರಿ ನನಗೆ ಜನರ ಗುಂಪು ಕಟ್ಟಿಕೊಂಡು ಮಾಡೋಕೆಲಸನೇ ಬೇಡಾ ಅನ್ನಿಸಿಬಿಟ್ಟಿದೆ ಏನಿದ್ರೂ ನಾನೊಬ್ನೇ ಮಾಡ್ಬೇಕು ಅಷ್ಟೆ" (ಇದೇ ಮಾತನ್ನು ಬೇರೊಂದು ಸಂದರ್ಭದಲ್ಲಿ ಕವಿ ಸುಬ್ರಾಯ ಚೊಕ್ಕಾಡಿಯವರೂ ಹೇಳಿದ್ದರು)
"ಸಾರ್ ನಾಟಕದಲ್ಲಿನ ಕುವೆಂಪು ಪಾತ್ರ........." ರಾಗವೆಳೆದೆ
" ಹೇಗೂ ಮಾಡ್ತಾ ಇದ್ದೀರಲ, ಇರ‍್ಲಿ ಬಿಡಿ" ಎಂದರು.
"ಸಾರ್ ಆಕಡೆ ಬಂದಾಗ ನೋಡಿ ದಾರಿ ಪಕ್ಕದಲ್ಲೇ, ಕಾಣ್ಸುತ್ತೆ ಗುಡ್ದ ಮೇಲೆ ನಾವು ಕಟ್ತಾಇರೋ ರಂಗಮಂದಿರ" ಎಂದೆ.
"ತುಂಬಾ ಹೆವಿಯಾಗಿ ಮಾಡ್ಕೋಬೇಡಿ, ಕೆಲವು ಸಾರಿ ಕಾರ್ಯಕ್ರಮಗಳಿಗಿಂತ ಕಟ್ಟಡಗಳೇ ಭಾರವಾಗಿಬಿಡ್ತವೆ" ಎಂದು ಕಿವಿಮಾತು ಹೇಳಿದರು.
*****
ಹಾಸನದಿಂದ ಕೆಲವರು ಗೆಳೆಯರು ನಮ್ಮೂರಿನ ಪಕ್ಕದ ’ಮೂರುಕಣ್ಣುಗುಡ್ಡ’ದಲ್ಲಿ ಚಾರಣಕ್ಕೆಂದು ಬಂದಿದ್ದರು. ಅವರಲ್ಲಿ ಒಂದಿಬ್ಬರು ಸರ್ಕಾರಿ ನೌಕರರರಿದ್ದುದರಿಂದ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಸಿಕೊಂಡು ಅವರು ಕಾರ್ಯಕ್ರಮ ಹಾಕಿಕೊಂಡಿದ್ದರು. ಚಾರಣ ಮುಗಿಸಿ ಭಾನುವಾರ ಮಧ್ಯಾಹ್ನ ನಮ್ಮೂರಿಗೆ ಬಂದರು. ಇನ್ನೂ ಅರ್ಧದಿನ ಸಮಯ ಉಳಿದಿರುವುದರಿಂದ ಮೂಡಿಗೆರೆಗೆ ಹೋಗಿ ತೇಜಸ್ವಿಯವರಲ್ಲಿ ಕೆಲವು ಪುಸ್ತಕಗಳನ್ನು ಖರೀದಿಸುವ ಯೋಜನೆ ಹಾಕಿ ಜೊತೆಯಲ್ಲಿ ಬರುವಂತೆ ನನ್ನನ್ನು ಆಹ್ವಾನಿಸಿದರು. ನನಗೂ ಅಂದು ಬೇರೇನು ಕೆಲಸವಿಲ್ಲದ್ದರಿಂದ ಅವರೊಂದಿಗೆ ಹೊರಟೆ. ಅವರಲ್ಲಿ ಒಂದಿಬ್ಬರು ರೈತಸಂಘದ ಹಾಗೂ ಸಾಕ್ಷರತಾ ಆಂದೋಲನದ ಕಾಲದ ನನ್ನ ಮಿತ್ರರಿದ್ದುದೂ ಇದಕ್ಕೆ ಕಾರಣವಾಗಿತ್ತು.
ನಾವೆಲ್ಲರೂ ’ನಿರುತ್ತರ’ವನ್ನು ತಲಪುವಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ತೇಜಸ್ವಿಯವರು ಮನೆಯಲ್ಲಿರಲಿಲ್ಲ. ಆದರೆ ಅವರ ಹಲವು ವರ್ಷಗಳ ಸಂಗಾತಿಯಾಗಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ರಾಘವೇಂದ್ರ ಇದ್ದರು. ನಮ್ಮ ಗೆಳೆಯರು ಮನೆಯ ಸುತ್ತ ತಿರುಗಿ ಫೋಟೋಗಳನ್ನು ತೆಗೆದುಕೊಂಡು, ನಂತರ ಪುಸ್ತಕಗಳನ್ನು ನೋಡಿ ಹಲವು ಪುಸ್ತಕಗಳನ್ನು ಕೊಂಡುಕೊಂಡರು. ಆವೇಳೆಗೆ ಮೂಡಿಗೆರೆಗೆ ಹೋಗಿದ್ದ ತೇಜಸ್ವಿಯವರೂ ಮನೆಗೆ ಬಂದರು. ಆಗಷ್ಟೇ ಅವರ ತೆಗೆದ ಛಾಯಾಚಿತ್ರಗಳನ್ನು ಒಳಗೊಂಡ ಶುಭಾಶಯ ಪತ್ರಗಳು ಬಂದಿದ್ದವು. ಅವುಗಳನ್ನು ನೋಡಿ ಚೆನ್ನಾಗಿರುವ ಕೆಲವನ್ನು ಆರಿಸಿಕೊಡುವಂತೆ ಹಾಸನದ ಗೆಳೆಯರೊಬ್ಬರು ನನ್ನಲ್ಲಿ ಕೇಳಿದರು. ನಾನು ಆರಿಸತೊಡಗಿದೆ ಅಷ್ಟರಲ್ಲಿ ರಾಘವೇಂದ್ರ ಇನ್ನೊಂದಿಷ್ಟನ್ನು ತಂದುಕೊಟ್ಟರು. ಅದರಲ್ಲಿ ನಾನಾಬಗೆಯ ಹಕ್ಕಿಗಳ ಚಿತ್ರಗಳಿದ್ದವು. ಕೆಲವರಿಗೆ ಯಾವುದನ್ನು ಆರಿಸಿಕೊಳ್ಳುವುದೆಂದು ತಿಳಿಯದಾಯಿತು. ಆಗ ತೇಜಸ್ವಿ "ಅದು ಹಂಗೇ ಕಣ್ರೀ ಒಂದು ನೋಡುವಾಗ ಇನ್ನೊಂದು ಚೆನ್ನಾಗಿ ಕಾಣುತ್ತೆ ನಿಮಗೆ ಬೇಕಾದಷ್ಟು ಸುಮ್ನೆ ಆರಿಸಿಕೊಳ್ಬೇಕಷ್ಟೆ" ಎಂದರು.
ಎಲ್ಲರ ಪರಿಚಯ ಮಾಡಿಕೊಂಡ ನಂತರ ಮಾತು ಮತ್ತೊಮ್ಮೆ ರೈತ ಚಳವಳಿ, ಸಾಕ್ಷರತಾ ಆಂದೋಲನ, ಇವುಗಳತ್ತವೂ ಸಾಗಿತು. ಇವರೆಲ್ಲರೂ ಚಾರಣಕ್ಕೆ ಬಂದವರೆಂದು ತಿಳಿದಾಗ ನೀವು ಮೂರುಕಣ್ಣು ಗುಡ್ಡಕ್ಕಿಂತ ಇನ್ನೂ ಜೇನುಕಲ್ಲು ಗುಡ್ಡ, ಅಥವಾ ಚಾರ್ಮಾಡಿ ಇಲ್ಲವೇ ಕಬ್ಬಿನಾಲೆ -ಬಿಸಲೆ ಇಂಥ ಕಡೆ ಹೋಗ್ಬೇಕು, ಅಲ್ಲ ಮೂರುಕಣ್ಣು ಗುಡ್ಡಕ್ಕೆ ಹೋಗ್ಬಾರ‍್ದು ಅಂತೇನೂ ಅಲ್ಲ," ಎಂದರು.
ಆಗ ಹಾಸನದವರೊಬ್ಬರು "ಸಾರ್ ಅಲ್ಲಿಗೇ ಹೋಗ್ಬೋದಾಗಿತ್ತು (ನನ್ನನ್ನು ತೋರಿಸಿ) ಇವ್ರಜೊತೇಲಿ ಹೋದ್ರೆ ನಮ್ಮನ್ನ ನಕ್ಸಲೈಟರು ಅಂದ್ಕೊಂಡಬಿಟ್ಟಾರು ಅಂತ ನಾವು ಅಲ್ಲಿಗೆಲ್ಲ ಹೋಗಲಿಲ್ಲ ಎಂದರು. ಉಳಿದವರೆಲ್ಲ ಜೋರಾಗಿ ನಕ್ಕರು. ತೇಜಸ್ವಿ ನಗಲಿಲ್ಲ.
ಆ ಸಮಯದಲ್ಲಿ ಪ್ರತಿದಿನವೆಂಬಂತೆ ಪತ್ರಿಕೆಗಳಲ್ಲಿ ನಕ್ಸಲೀಯರ ಚಟುವಟಿಕೆಗಳು ವರದಿಯಾಗುತ್ತಿದ್ದವು. ಒಂದೆರಡು ಎನ್‌ಕೌಂಟರುಗಳೂ ಆಗಿದ್ದವು. ತೀರ್ಥಹಳ್ಳಿ, ಉಡುಪಿ, ಮೂಡಿಗೆರೆಯ ಕೆಲವು ಭಾಗಗಳಲ್ಲಿ ಅವರ ಚಟುವಟಿಕೆ ವಿಸ್ತರಿಸಿದೆಯೆಂದು ಆ ವರದಿಗಳು ತಿಳಿಸಿದ್ದವು.
ಅಷ್ಟರಲ್ಲಿ ಹಳೆಯ ರೈತ ಸಂಗಾತಿಗಳೊಬ್ಬರು "ಇವತ್ತಿನ ಪರಿಸ್ಥಿತಿ ನೋಡಿದ್ರೆ ಅವ್ರು ಮಾಡೋದೇ ಸರಿ ಅನ್ಸುತ್ತೆ, ಬೇರೆ ದಾರೀಲಿ ಈ ಸರ್ಕಾರಗಳನ್ನ ಎಚ್ಚರಿಸೋಕೇ ಆಗೋಲ್ವೇನೋ" ಎಂದರು.
ಆ ಮಾತಿನಿಂದ ತೇಜಸ್ವಿಯವರು ಸ್ವಲ್ಪ ಸಿಟ್ಟಿಗೆದ್ದಂತೆ ಕಂಡರು. "ರೀ ನಾವೆಲ್ಲ ಸ್ವಲ್ಪ ಜವಾಬ್ದಾರಿಯಿಂದ ಮಾತಾಡ್ಬೇಕ್ರಿ, ಅಲ್ಲಾ ಬೇರೆ ದಾರೀನೇ ಇಲ್ಲಾ ಅಂದರೆ ಏನಾದ್ರೂ ದಾರಿ ಕಂಡ್ಕೋಬೇಕಪ್ಪ, ಈತರ ಹೇಳಿ ಹೇಳಿ ಪಾಪ ಆ ಸಣ್ಣವಯಸ್ಸಿನ ಹುಡುಗ್ರು ಅಲ್ಲಿ ಕಾಡಲ್ಲಿ ಕೂತ್ಕೊಂಡು ಹುಚ್ಚುಚ್ಚಾಗಿ ಏನೋ ಮಾಡೋಕ್ಕೋಗಿ ಗುಂಡೇಟು ತಿಂದು ಸಾಯ್ತಾ ಇದಾರಲ್ರಿ, ಅವ್ರಿಗೆಲ್ಲಾ ನೀವು ಕಾಡುಬಿಟ್ಟು ಈಚೆಗೆ ಬನ್ನಿ ಹೋರಾಟಕ್ಕೆ ಬೇರೆ ದಾರಿಗಳಿವೆ ಅಂತ ಹೇಳೋರ‍್ಯಾರು." ಎಂದರು. ನಮ್ಮ ಗೆಳೆಯರೆಲ್ಲ ಎರಡು ನಿಮಿಷ ಮೌನವಾಗಿಬಿಟ್ಟರು.
ಮತ್ತೆ ಅವರೇ ಮುಂದುವರಿದು "ನಾನ್ಹೀಗೆ ಅಂದೆ ಅಂತ ಬೇಜಾರು ಮಾಡ್ಕೋಬೇಡಿ ಇದ್ರಲ್ಲಿ ನಮ್ಮೆಲ್ರ ಜವಾಬ್ದಾರಿ ಇದೆ ನಾವು ಆಡುವ ಮಾತು, ನಮ್ಮ ನಡವಳಿಕೆಗಳು ಅಂತಾ ಹುಡುಗರನ್ನು ಇನ್ನಷ್ಟು ಹುಚ್ಚು ಸಾಹಸಕ್ಕೆ ಉತ್ತೇಜಿಸುವಂತೆ ಇರಬಾರದು. ಈ ಆಧುನಿಕ ಕಾಲದ ರಾಜ್ಯ ಶಕ್ತಿಯ ವಿರುದ್ಧ ಇಂತಾ ಹೋರಾಟಗಳು ಪ್ರತಿಹಿಂಸೆಯನ್ನ ಹುಟ್ಟುಹಾಕ್ತವೆ ಅಷ್ಟೆ. ಬೇರೆ ಶಾಂತಿಯುತ ದಾರಿಗಳನ್ನು ಹುಡುಕ್ಬೇಕು" ಎಂದರು.
*****
೨೦೦೭ ರ ಜನವರಿಯಲ್ಲಿ ಒಂದು ಕಲಾಶಿಬಿರ, ಸಂಸ್ಕೃತಿಶಿಬಿರ ಮತ್ತು ನಾಟಕೋತ್ಸವವನ್ನು ಜೊತೆಯಾಗಿ ಮಾಡಿದ್ದೆವು. ಕಲಾವಿದ ಮೋಹನಸೋನ ಅವರ ನೇತೃತ್ವದಲ್ಲಿ ಬೇರೆ ಬೇರೆ ಊರುಗಳಿಂದ ಬಂದ ಅನೇಕ ಯುವಕಲಾವಿದರು ನಮ್ಮೂರಿನ ಹಲವು ಆಸಕ್ತ ಮಕ್ಕಳನ್ನೂ ದೊಡ್ಡವರನ್ನೂ ಜೊತೆಗೂಡಿಸಿಕೊಂಡು ಊರತುಂಬೆಲ್ಲ ಚಿತ್ರಗಳನ್ನು ರಚಿಸುವುದರೊಂದಿಗೆ ತರಬೇತಿಯನ್ನೂ ನೀಡಿದ್ದರು. ಸಾವಯವ ಕೃಷಿ, ಪರಿಸರ ರಕ್ಷಣೆ, ನಕ್ಷತ್ರವೀಕ್ಷಣೆ, ಚಲನಚಿತ್ರ ಪ್ರದರ್ಶನಗಳಲ್ಲದೆ, ಮಕ್ಕಳಿಗೆ ಮತ್ತು ದೊಡ್ಡವರಿಗೆ ರಂಗತರಬೇತಿ, ನಾಟಕ ಪ್ರದರ್ಶನಗಳೂ ಇದ್ದವು.
ಮುಕ್ತಾಯ ಸಮಾರಂಭಕ್ಕೆ ಅತಿಥಿಯಾಗಿ ಬರುವಂತೆ ತೇಜಸ್ವಿಯವರನ್ನು ಆಹ್ವಾನಿಸಲು ನಾವು ಕೆಲವರು ಮೂಡಿಗೆರೆಗೆ ಹೋದೆವು, ಜೊತೆಯಲ್ಲಿ ಖ್ಯಾತ ಮಕ್ಕಳ ರಂಗನಿರ್ದೇಶಕ ಮೂರ್ತಿ ದೇರಾಜೆಯವರೂ ಇದ್ದರು. ತೇಜಸ್ವಿಯವರು ಅನಾರೋಗ್ಯಕ್ಕೊಳಗಾಗಿ ಮೈಸೂರಿನಲ್ಲಿ ಚಿಕಿತ್ಸೆ ಪಡೆದು ಬಂದು ಕೆಲವು ದಿನಗಳಾಗಿದ್ದುವಷ್ಟೆ. ನಾವು ಹೋದಾಗ ಅವರಿನ್ನೂ ಜ್ವರದಿಂದ ನರಳುತ್ತಿದ್ದರು.
ಮನೆಯಂಗಳಕ್ಕೆ ನಾವು ತಲಪಿದಾಗ ಹೊರಗೆ ಬಂದು ನಮ್ಮನ್ನು ನೋಡಿ "ಯಾಕ್ರಯ್ಯ ಈಗ ಬಂದ್ರಿ ಬೇರೆ ಕೆಲ್ಸ ಇಲ್ಲ ನಿಮ್ಗೆ" ಎಂದು ಗದರುತ್ತಾ ಮನೆಯೊಳಗೆ ಹೋದರು.
ನಾನು ಮೂರ್ತಿಯವರಿಗೆ ನನ್ನನ್ನು ಹಿಂಬಾಲಿಸುವಂತೆ ಕಣ್ಣಿನಲ್ಲೇ ಸೂಚಿಸಿ ಅವರ ಹಿಂದೆಯೇ ಮನೆಯೊಳಕ್ಕೆ ಹೋದೆ.
ಅವರು ಮೆಲ್ಲನೆ ಕುರ್ಚಿಯಲ್ಲಿ ಕುಳಿತು. "ಅಲ್ಲಾ ಇದು ವೈರಲ್ ಫಿವರ್ ಕಣ್ರಯ್ಯ, ನಿಮ್ಗೆ ಅಂಟಿಕೊಂಡ್ರೆ ಏನ್ಮಾಡ್ತೀರಾ? ಸಿಕ್ಕಾಬಟ್ಟೆ ಮೈಕೈ ನೋವು ಬರುತ್ತೆ ಈಗ ನಾನು ಅನುಭವಿಸ್ತಾ ಇದ್ದೀನಿ, ಆಮೇಲ್ ನೀವೂ ಅನುಭವಿಸ್ಬೇಕಾ?" ಎಂದರು!.
ಹೀಗೇ ಮಾತು ಮುಂದುವರಿಯಿತು. ಮಾತು ಕಂಪ್ಯೂಟರ್‌ನತ್ತ ಹೊರಳಿತು.
"ನಾವಿನ್ನೂ ಕಂಪ್ಯೂಟರ್‌ನ ಸರಿಯಾಗಿ ಉಪಯೋಗ ಮಾಡೋದೇ ಕಲ್ತಿಲ್ಲ ಕಣ್ರಿ. ನೋಡಿ ಈ ಮಕ್ಕಳ ಕಥೆಗಳನ್ನೂ ಅಷ್ಟೂ ಚಿತ್ರ ಕಥೆಗಳನ್ನಾಗಿ ಮಾಡಿ ಪುಸ್ತಕ ತರ‍್ಬೋದು, ಹಾಗೇ ಎನಿಮೇಷನ್‌ನಲ್ಲಿ ಎಂತಾ ಕೆಲ್ಸ ಮಾಡ್ಬೋದು, ಇವೆಲ್ಲ ಮಾಡ್ಬೇಕು. ಇಂಗ್ಲಿಷ್‌ನಲ್ಲಿ ಏನೇನ್ ಮಾಡಿದ್ದಾರೆ ಆ ಥರಾ ನಾವೂ ಮಾಡದೇ ಹೋದ್ರೆ ಉಳಿಯೋಲ್ಲ ಕಣ್ರಿ..." ಎಂದು ಮುಂದುವರೆದು... "ಕವಿಶೈಲದಲ್ಲೊಂದು ನಾಟ್ಕ ಮಾಡ್ರೀ" ಎಂದರು. ಮಾತುಕಥೆ ಹೀಗೇ ಅರ್ಧಗಂಟೆ ಮುಂದುವರಿಯಿತು. "ಜ್ವರ ಕಮ್ಮಿಯಾದ್ರೆ ಖಂಡಿತ ಕಾರ್ಯಕ್ರಮಕ್ಕೆ ಬರ‍್ತೀನಿ" ಎಂದರು.
ಅಲ್ಲಿಂದ ಹೊರಡುವಾಗ "ಅಂತೂ ಒಟ್ಟೂ ನಿಮ್ಮ ಆರೋಗ್ಯ ಹೇಗಿದೆ ಸಾರ್ ಈಗ, ಪರವಾಗಿಲ್ವೆ?’ಎಂದೆ.
"ಹೋಗೋಕೊಂದು ಕಾರಣ ಬೇಕಲ್ಲಪ್ಪಾ ಏನೇನೋ ಬರ‍್ತಾ ಇದೆ" ಎಂದರು ನಗುತ್ತಾ.
ನಮ್ಮ ಕಾರ್ಯಕ್ರಮಗಳ ಮುಕ್ತಾಯದ ದಿನ ತೇಜಸ್ವಿಯವರ ಹಲವು ವರ್ಷಗಳ ಒಡನಾಡಿ ರಾಘವೇಂದ್ರರಿಗೆ ಫೋನ್ ಮಾಡಿ ನೆನಪಿಸಿದೆ. ಕಾರ್ಯಕ್ರಮಕ್ಕೆ ಅವರೂ ಬರುವವರಿದ್ದರು. ಆದರೆ ತೇಜಸ್ವಿಯವರ ಆರೋಗ್ಯ ಸ್ವಲ್ಪ ಮಾತ್ರವೇ ಸುಧಾರಿಸಿದೆಯೆಂದೂ ಅಲ್ಲದೆ ಅಂದು ಅವರ ಮಗಳು ಮನೆಗೆ ಬರುವವಳಿದ್ದಾಳೆಂದೂ ಆ ಕಾರಣದಿಂದ ಇಂದು ಬರಲಾಗುತ್ತಿಲ್ಲವೆಂದು ರಾಘವೇಂದ್ರ ತಿಳಿಸಿದರು.
ತೇಜಸ್ವಿಯವರು ಹೋದರೆಂದು ನಮ್ಮ ತಂಡದ ನಟ ಸತೀಶ್ ಬೆಳ್ಳೇಕೆರೆ ಫೋನ್ ಮಾಡಿ ತಿಳಿಸಿದಾಗ ಟಿ.ವಿ. ನೋಡಲು ನಮ್ಮಲ್ಲಿ ಕರೆಂಟಿರಲಿಲ್ಲ. ಮಾರನೇದಿನ ಬೆಳಗ್ಗೆ ಸಕಲೇಶಪುರದಲ್ಲಿ ನಾವೊಂದಷ್ಟು ಜನರು ಹೊರಟು ಮೊದಲು ಮೂಡಿಗೆರೆಗೆ ನಂತರ ಕುಪ್ಪಳ್ಳಿಗೆ ಹೋಗುವ ಯೋಜನೆ ಹಾಕಿದೆವು. ಎಲ್ಲರೂ ಹೊರಟು ಸಿದ್ಧರಾದಾಗ ಸಕಲೇಶಪುರದ ಗೆಳೆಯರೊಬ್ಬರು "ನಾವು ಹೋಗೋದು ಬೇಡ ತೇಜಸ್ವಿಯವರನ್ನು ಇದುವರೆಗೆ ಹೇಗೆ ನೋಡಿದ್ದೆವೋ ಆ ನೆನಪು ನಮ್ಮಲ್ಲಿ ಹಾಗೇ ಉಳೀಲಿ" ಎಂದರು. ಹೆಚ್ಚಿನವರೆಲ್ಲರ ಮನಸ್ಸಿನಲ್ಲೂ ಅದೇ ಭಾವನೆ ಇತ್ತು. ಪ್ರಯಾಣ ರದ್ದು ಮಾಡಿದೆವು.
"ಕವಿಶೈಲದಲ್ಲಿ ಒಂದು ನಾಟಕ ಮಾಡಿ" ಎಂದಿದ್ದರು ತೇಜಸ್ವಿ.
ನಮ್ಮ ನಾಟಕ ತಂಡ ಅಲ್ಲಿಗೆ ತಲಪುವ ಮೊದಲೇ ಕವಿಶೈಲದಲ್ಲಿ ಲೀನವಾಗಿ ಹೋಗಿದ್ದರು.
ಇದರೊಂದಿಗೆ ಒಂದೆರಡು ವಿಷಯಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವೆಂದು ನನ್ನ ಭಾವನೆ.
೨೦೦೯ ರಲ್ಲಿ ತೇಜಸ್ವಿಯವರ ನೆನಪಿನಲ್ಲಿ ಒಂದು ನಾಟಕೋತ್ಸವವನ್ನು ಮಾಡಿದೆವು. ನಾಲ್ಕುದಿನಗಳ ಕಾಲ ನಡೆದ ನಾಟಕೋತ್ಸವದಲ್ಲಿ, ತೇಜಸ್ವಿಯವರ ’ಪಾಕಕ್ರಾಂತಿ’ಯನ್ನು ರಂಗ ಅಳವಡಿಸಿ ಪ್ರದರ್ಶನವನ್ನು ನೀಡಿದ್ದೆವು. ನಾಲ್ಕು ದಿನಗಳ ಅಡಿಗೆ ಮತ್ತು ಊಟದ ವ್ಯವಸ್ಥೆಯನ್ನು ಬಿರಿಯಾನಿ ಕರಿಯಪ್ಪ ವಹಿಸಿಕೊಂಡಿದ್ದರು. ನಾಟಕೋತ್ಸವದ ಕೊನೆಯ ದಿನ ವೇದಿಕೆಯಲ್ಲಿ ಕರಿಯಪ್ಪನವರನ್ನು ಸನ್ಮಾನಿಸಲಾಯಿತು.
ನಮ್ಮೂರಲ್ಲಿ ಕಟ್ಟುತ್ತಿರುವ ರಂಗಮಂದಿರ, ಗ್ರಂಥಾಲಯ, ವಾಚನಾಲಯ, ಮತ್ತು ಅತಿಥಿಗೃಹಗಳ ಸಂಕೀರ್ಣಕ್ಕೆ "ಪೂರ್ಣಚಂದ್ರ ತೇಜಸ್ವಿ ರಂಗಮಂದಿರ ಸಂಕೀರ್ಣವೆಂದು ಹೆಸರಿಡಲಾಗಿದೆ.
(ಮುಗಿಯಿತು)

ದಿಟ್ಟ ಕನ್ನಡ ಹೋರಾಟಗಾರ ಈಶ್ವರಪ್ಪ



ಕನ್ನಡ ತನ್ನ ಉಳಿವಿಗಾಗಿ ಏನೆಲ್ಲ ಬೇಡುತ್ತದೆ. ಒಂದು ಬಾರಿ ಕನ್ನಡದ ಕಿಚ್ಚು ಹೊತ್ತಿಕೊಂಡರೆ ಸಾಕು ಅದು ಇಡೀ ಬದುಕನ್ನೇ ಆವರಿಸಿಕೊಂಡು ಬಿಡುತ್ತದೆ. ಹೋರಾಟದ ಬದುಕೇ ಹಾಗೇ.
ಹೋರಾಟದ ಮಜಲುಗಳು ಭಿನ್ನ ಭಿನ್ನವಾಗಿರುವಂತೆಯೇ ಹೋರಾಟದ ಪರಿಮಿತಿಯು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಹೋರಾಟದ ಸಾಗರದಲ್ಲಿ ನೂರಾರು, ಸಾವಿರಾರು ಕಲಿಗಳು ಬಂದು ಹೋಗಿದ್ದಾರೆ. ಹಲವರು ತಮ್ಮ ಕಾಯಕದ ಮೂಲಕ ಚಿರಸ್ಥಾಯಿಯಾದರೆ, ಮತ್ತೆ ಕೆಲವರು ಅಂಧಕಾರದಲ್ಲೇ ಉಳಿದುಹೋಗುತ್ತಾರೆ. ಆದರೆ, ಇಂಥವರು ಮಾಡಿರುವ ತ್ಯಾಗ ಬಲಿದಾನಗಳು ಕನ್ನಡವನ್ನು, ಕನ್ನಡತನವನ್ನು ಇಂದಿಗೂ ಜೀವಂತವಾಗಿರಿಸಿದೆ.
ಇಂತಹ ಕನ್ನಡದ ಕಡುಗಲಿಗಳಲ್ಲಿ ಬೆ.ನಿ.ಈಶ್ವರಪ್ಪ ಕೂಡ ಒಬ್ಬರು. ಕನ್ನಡದ ಕೇಸರಿ ಮ.ರಾಮಮೂರ್ತಿ ಹಾಗೂ ಸಾಹಿತಿ ಅ.ನ.ಕೃ ಒಡನಾಟದಲ್ಲಿ ಪಳಗಿದ್ದ ಈಶ್ವರಪ್ಪ ಅವರು ಕನ್ನಡ ಪಕ್ಷದ ಸ್ಥಾಪಕರಲ್ಲಿ ಒಬ್ಬರು. ಕನ್ನಡಕ್ಕಾಗಿ, ಕನ್ನಡಿಗರಿಂದ, ಕನ್ನಡಿಗರಿಗೋಸ್ಕರ ಪಕ್ಷವೊಂದರ ಅಗತ್ಯ ಇದೆ ಎಂಬುದನ್ನು ಮನಗಂಡ ಈಶ್ವರಪ್ಪ ಕನ್ನಡ ಪಕ್ಷದ ಸ್ಥಾಪನೆ ಮಾಡಿ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡರು. ಮ.ರಾಮಮೂರ್ತಿಯವರ ಪ್ರತಿಮೆಯಿರುವ ಸ್ಥಳವಾದ ಕಾಟನ್‌ಪೇಟೆಯಲ್ಲಿ ಉಮಾಶಂಕರ ಕಾಫಿ ಪುಡಿಯ ಅಂಗಡಿಯ ಮಹಡಿ ಮೇಲೆ ಕರ್ನಾಟಕ ಮಿತ್ರ ಮಂಡಳಿಯನ್ನು ಸ್ಥಾಪಿಸುವ ಮೂಲಕ ಬೆಂಗಳೂರಿನಲ್ಲಿ ಮೊಟ್ಟಮೊದಲ ಕನ್ನಡ ಸಂಘದ ಕಛೇರಿ ಸ್ಥಾಪನೆ ಮಾಡಿದ ಕೀರ್ತಿ ಇವರದಾಗಿದೆ.

ಕಛೇರಿಯಲ್ಲಿ ಕನ್ನಡ ಪಕ್ಷದ ಕಾರ್ಯಕಾರಿ ಸಭೆಗಳು ನಡೆಯುತ್ತಿದ್ದವು. ಮ.ರಾಮಮೂರ್ತಿ, ಜಿ.ನಾರಾಯಣಕುಮಾರ್, ಮು.ಗೋವಿಂದರಾಜ್, ಸಿ.ಕೃಷ್ಣಪ್ಪ, ನಾಗೇಶ್ ಕಬ್ಬನ್‌ಪೇಟೆ, ಬೆತಿ ರಾಜಣ್ಣ, ರೂಪಲೇಖನ್ ರಾಮನ್, ಜಗದೀಶ್ ರೆಡ್ಡಿ, ತಿ.ಶ್ರೀನಿವಾಸ, ಲಿಂಗಪ್ಪ ಮಾಧು, ನ.ದಾಸಪ್ಪ, ವೆ.ಶ್ರೀನಿವಾಸ, ಬಸವರಾಜು ಇನ್ನೂ ಅನೇಕ ಕನ್ನಡದ ಕಟ್ಟಾಳುಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಕನ್ನಡ ನೆಲ, ಜಲ, ಕನ್ನಡಿಗರಿಗೆ ಅನ್ಯಾಯವಾದಾಗಲೆಲ್ಲಾ ಇದೇ ಕಛೇರಿಯಲ್ಲಿಯೇ ಹೋರಾಟದ ರೂಪುರೇಷೆಗಳ ನೀಲನಕ್ಷೆ ತಯಾರಾಗುತ್ತಿತ್ತು. ನಿಜಕ್ಕೂ ಈಶ್ವರಪ್ಪನವರು ಸ್ಥಾಪಿಸಿದ ಕಛೇರಿ ಕರ್ನಾಟಕದ ಹಲವು ಘಟನೆಗಳಿಗೆ ಸಾಕ್ಷೀಭೂತವಾಗಿದೆ.
ಕನ್ನಡದ ಕಾಯಕಕ್ಕಾಗಿ ಕೆಲಸವನ್ನೇ ಕಳೆದುಕೊಂಡು ಬಡತನವನ್ನು ಅಪ್ಪಿಕೊಂಡ ಈಶ್ವರಪ್ಪನವರ ಕನ್ನಡಪರ ಕಾಳಜಿ ನಿಜಕ್ಕೂ ಶ್ಲಾಘನೀಯ. ಬಿನ್ನಿಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಈಗಿನ ಚಿಕ್ಕಲಾಲ್‌ಬಾಗ್ ಬಳಿ ವಾಸವಿದ್ದರು. ಇವರಿಗೆ ಪತ್ನಿ ಲಿಂಗಮ್ಮ ಹಾಗೂ ನಾಲ್ಕು ಜನ ಮಕ್ಕಳು ಬಡತನದ ಬೇಗೆಯಿಂದ ಬೇಯುತ್ತಿದ್ದರೂ ಕನ್ನಡದ ಹೋರಾಟದಿಂದ ಎಂದೂ ಹಿಂದಡಿಯಿಟ್ಟವರಲ್ಲ.
ಮಹಾನ್ ವಿಚಾರವಾದಿಯಾದ ಈ.ವಿ.ರಾಮಸ್ವಾಮಿ ನಾಯಕರ್ (ಪೆರಿಯಾರ್) ಕುವೆಂಪು, ಬಸವಣ್ಣನವರಿಂದ ಪ್ರಭಾವಿತರಾಗಿದ್ದ ಈಶ್ವರಪ್ಪನವರು ಓರ್ವ ವಿಚಾರವಾದಿಯಾಗಿದ್ದರು. ಜಾತಿ ಭೇದ, ಧರ್ಮಾಂಧತೆಯನ್ನು ಖಂಡಿಸುತ್ತ ಮಾನವತೆಯನ್ನು ಪ್ರತಿಪಾದಿಸುತ್ತಾ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಂಕಷ್ಟವನ್ನು ಅನುಭಾವಿಸಿ ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದ ಅಪರೂಪದ ಚಿಂತಕ.
ಕನ್ನಡಿಗರಿಗೆ ಕನ್ನಡವೇ ಧರ್ಮ, ಕನ್ನಡವೇ ದೇವರು, ಕನ್ನಡವೇ ಮತ ಎಂಬ ಸಿದ್ಧಾಂತವನ್ನು ಪಾಲಿಸಿಕೊಂಡು ಬಂದ ಈಶ್ವರಪ್ಪನವರು ಕನ್ನಡ ಪರ ಹೋರಾಟಗಳಲ್ಲಿ ಕನ್ನಡ ಜಾಗೃತಿ ಸಭೆಗಳಲ್ಲಿ ಭಾಗವಹಿಸಿ ಕನ್ನಡದ ಸಾರ್ವಭೌಮತೆಗೆ ಅವಿರತವಾಗಿ ದುಡಿದರು.
ಕೇಂದ್ರ ಸರ್ಕಾರ ಹಿಂದಿ ಕಡ್ಡಾಯ ಮಾಡಿದಾಗ ಇದನ್ನು ವಿರೋಧಿಸಿ ನಡೆದ ಚಳವಳಿಯ ಮುಂಚೂಣಿ ನಾಯಕರಾಗಿದ್ದರು. ದಿ.ಕರ‍್ಲವುಂಗ ಶ್ರೀ ಕಂಠಯ್ಯನವರ ಜೊತೆಯಲ್ಲಿ ದ್ರಾವಿಡ ಚಳವಳಿಯ ನೇತಾರ ಈ.ವಿ.ರಾಮಸ್ವಾಮಿ ನಾಯಕರ್‌ರವರನ್ನು ಭೇಟಿಯಾಗಿ ಸಿರಿ ಭೂ ವಲಯ ಗ್ರಂಥದ ಬಗ್ಗೆ ಅವರಿಗೆ ತಿಳಿಸಿ ಅವರೊಂದಿಗೆ ಚರ್ಚಿಸಿದ ಸಮಾಜಮುಖಿ ವ್ಯಕ್ತಿಯಾಗಿದ್ದರು. ೧೯೮೪ರಲ್ಲಿ ಮ.ರಾಮಮೂರ್ತಿ ಕನ್ನಡ ಬಳಗದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಶಿವರುದ್ರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಈಶ್ವರಪ್ಪನವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈಶ್ವರಪ್ಪನವರ ಕನ್ನಡ ಪರ ಹೋರಾಟದ ಬದ್ಧತೆಯನ್ನು ಗುರುತಿಸಿ ನಗರದ ಗೆಳೆಯರ ಬಳಗದ ವತಿಯಿಂದ ಡಾ.ಎಲ್.ಚಿದಾನಂದ ಮೂರ್ತಿಯವರು ಬಿ.ಎಂ.ಪ್ರತಿಷ್ಠಾನದಲ್ಲಿ ನಡೆದ ಸಮಾರಂಭದಲ್ಲಿ ೨೦,೦೦೦ ರೂಪಾಯಿಗಳ ನಿಧಿಯನ್ನು ಅರ್ಪಿಸಿ ಗೌರವಿಸಲಾಯಿತು. ಅನೇಕ ಕನ್ನಡ ಪರ ಹೋರಾಟಗಳಲ್ಲಿ ಅನೇಕ ಕನ್ನಡ ಪರ ಹೋರಾಟಗಳಿಲ್ಲಿ ರಾಜ್ಯೋತ್ಸವದ ಸಂದರ್ಭಗಳಲ್ಲಿ ನಾನು ಅವರ ಜೊತೆಯಲ್ಲಿ ಭಾಗವಹಿಸಿದೆ. ಅವರ ನನ್ನ ಗೆಳತನ ಅಪ್ಯಾಯಮಾನವಾಗಿತ್ತು. ಪರಸ್ಪರ ವಿಚಾರವಿನಿಮಯವನ್ನು ಕನ್ನಡಪರ, ಜನಪರ ವಿಷಯದ ಬಗ್ಗೆ ಅವರು ತಿಳಿಸುತ್ತಾ ಇದ್ದರು. ಅವರ ನಿಧನ ನಂತರ ಕೆಲಕಾಲ ಕನ್ನಡ ಹೋರಾಟಕ್ಕೆ ಮಂಕು ಹಿಡಿಯಿತೇನು ಎನಿಸುತ್ತಿದೆ. ಪ್ರಾಮಾಣಿಕ ಹೋರಾಟಕ್ಕೆ, ಬದ್ಧತೆಗೆ, ಕನ್ನಡ ಚಳವಳಿಗೆ ಹೆಸರಾಗಿದ್ದರು. ಬೆ.ನಿ.ಈಶ್ವರಪ್ಪ.
ಬೆ.ನಿ.ಈಶ್ವರಪ್ಪನವರ ಬಗ್ಗೆ ಅಪಾರ ಗೌರವ ಹೊಂದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರು ನೆ.ಭ.ರಾಮಲಿಂಗಶೆಟ್ಟರು ಬರೆದ ‘ಸಿಂಹ ಗರ್ಜನೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಈಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ಲಿಂಗಮ್ಮನವರಿಗೆ ೨೫ ಸಾವಿರ ರೂಪಾಯಿಗಳನ್ನು ಧನಸಹಾಯ ಮಾಡಿದರು. ಅವರ ಕನ್ನಡ ಸೇವೆಯನ್ನು ನಾರಾಯಣಗೌಡರು ಸ್ಮರಿಸಿದರು. ಹಾಗೂ ಹುತಾತ್ಮರಾದ ಮು.ಗೋವಿಂದರಾಜುರವರ ಧರ್ಮಪತ್ನಿ ಧನಭಾಗ್ಯಮ್ಮನವರಿಗೆ ಸಹ ೨೫,೦೦೦/- ರೂಪಾಯಿಗಳನ್ನು ನೀಡಿ ಸನ್ಮಾನಿಸಿದರು.

Saturday, January 8, 2011

ಪರಿಶುಭ್ರ ಜನನಾಯಕ: ಗೋವಿಂದಗೌಡರು



ಟಿ.ಎ.ನಾರಾಯಣಗೌಡರು

“ನಾನು ಕಂಡಂತೆ ಗೋವಿಂದಗೌಡರು ಬಹುಶಃ ಕರ್ನಾಟಕದ ರಾಜಕಾರಣದಲ್ಲಿದ್ದ ನಿಜವಾದ ಕೊನೆಯ ಗಾಂಧಿವಾದಿ ಎಂದು ಅನಿಸುತ್ತದೆ. ಅವರ ಪ್ರಾಮಾಣಿಕತೆಯನ್ನು ನಿಸ್ಪೃಹತೆಯನ್ನು ಒಂದು ಸಾರಿಯೂ ಸಂಶಯದಿಂದ ನಾನು ನೋಡಲಿಲ್ಲ. ಅಲ್ಲದೆ ಪಟೇಲರ ಸಂಪುಟದಲ್ಲಿ ಇದ್ದಷ್ಟು ದಿನ ತಮ್ಮ ಶಕ್ತಿ ಮೀರಿ ದುಡಿದ ಮೂರು ನಾಲ್ಕು ಮಂತ್ರಿಗಳಲ್ಲಿ ಗೋವಿಂದಗೌಡರು ಪ್ರಮುಖರೆಂದು ಹೇಳಬಹುದು. ಇಂಥವರು ರಾಜಕೀಯಕ್ಕೆ ವಿದಾಯ ಹೇಳಲು ತೀರ್ಮಾನಿಸಿದಾಗ ನನಗೆ ವಿಷಾದವಾಯಿತು. ಆದರೆ ಅದಕ್ಕಿಂತ ಹೆಚ್ಚು ವಿಷಾದವಾಗಿದ್ದು ಇಂಥವರು ನಿರ್ಗಮಿಸಿದಾಗ ರಾಜಕಾರಣಿಗಳು ಜನರೂ ಇದನ್ನು ಬಹುದಿನಗಳಿಂದ ನಿರೀಕ್ಷಿಸಿದ್ದವರಂತೆ ಪ್ರತಿಕ್ರಿಯೆ ತೋರಿಸಿದ್ದಕ್ಕಾಗಿ.
ಹೀಗೆ ಹೇಳಿದವರು ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು.
ತೇಜಸ್ವಿಯವರ ಮಾತುಗಳಲ್ಲಿ ಎರಡು ಅಂಶಗಳನ್ನು ಪ್ರಮುಖವಾಗಿ ಗುರುತಿಸಬಹುದು. ಗೋವಿಂದಗೌಡರ ಪ್ರಾಮಾಣಿಕತೆಯನ್ನು ಗುರುತಿಸುತ್ತ ರಾಜ್ಯಕ್ಕೆ ಅವರ ಕೊಡುಗೆಯನ್ನು ಕೊಂಡಾಡುತ್ತಾರೆ. ಎರಡನೆಯದಾಗಿ ಗೋವಿಂದಗೌಡರು ರಾಜಕೀಯದಿಂದ ನಿರ್ಗಮಿಸಿದಾಗ ಸಮಾಜ ತೋರಿದ ತಣ್ಣಗಿನ ಪ್ರತಿಕ್ರಿಯೆಯನ್ನು ಅವರು ಆತಂಕದಿಂದ ಗಮನಿಸುತ್ತಾರೆ.
ಕರ್ನಾಟಕದಲ್ಲಿ ಪ್ರಾಮಾಣಿಕ ರಾಜಕಾರಣಿಗಳಿಗೆ ಕೊರತೆ ಏನೂ ಇರಲಿಲ್ಲ. ಆದರೆ ಒಬ್ಬರಾದ ಮೇಲೆ ಒಬ್ಬರು ನೇಪಥ್ಯಕ್ಕೆ ಸರಿದು ಹೋದರು. ಹೀಗೆ ಅವರು ತೆರೆಯ ಮರೆಗೆ ಸರಿಯುವಾಗ ನಮ್ಮ ಪ್ರತಿಕ್ರಿಯೆ ಹೇಗಿರಬೇಕಿತ್ತು? ಗೋವಿಂದಗೌಡರಂಥ ಜನನಾಯಕರನ್ನು ಸಕ್ರಿಯ ರಾಜಕಾರಣದಲ್ಲಿ ಉಳಿಯದಂತೆ ಮಾಡಿದ್ದು ಸಹ ನಾವೇ, ನಮ್ಮ ಸಮಾಜವೇ. ಇವತ್ತು ರಾಜಕೀಯ ಕ್ಷೇತ್ರ ಸಂಪೂರ್ಣ ಕಲುಷಿತವಾಗಲು ಕಾರಣ ಗೋವಿಂದಗೌಡರಂಥವರು ಅಲ್ಲಿ ಇಲ್ಲದೇ ಇರುವುದು. ಇಂಥ ಪರಿಸ್ಥಿತಿಯನ್ನು ಸೃಷ್ಟಿಸಿದ್ದಕ್ಕಾಗಿ ನಮ್ಮನ್ನು ನಾವು ಹಳಿದುಕೊಳ್ಳಬೇಕು ಅಷ್ಟೆ.
“ಕೈ ಶುದ್ಧವಿಟ್ಟುಕೊಳ್ಳಬೇಕು. ಮೇಲಿರುವ ಪರಮಾತ್ಮ ಮೆಚ್ಚುವ ಹಾಗೆ ಕೆಲಸ ಮಾಡಬೇಕು. ಒಂದು ತುತ್ತು ಅನ್ನ ತಿನ್ನುವುದಕ್ಕೆ ಕೈಯನ್ನು ಏಕೆ ಹೇಸಿಗೆ ಮಾಡಿಕೊಳ್ಳಬೇಕು. ಏನಾದರೂ ಆಗಲಿ. ಜನಗಳಿಗೆ ಒಳ್ಳೆಯದು ಮಾಡುವುದು ನಮ್ಮ ಗುರಿಯಾಗಬೇಕು. ನನಗೆ ವ್ಯಕ್ತಿ ಜಾತಿ ಪ್ರಾಂತ ಲಿಂಗ ಹಾಗು ಬಣ್ಣಗಳು ಮುಖ್ಯವಲ್ಲ, ಕೆಲಸ ಮುಖ್ಯ. ಎಂದು ಗೋವಿಂದಗೌಡರು ಪದೇ ಪದೇ ಹೇಳುತ್ತಿದ್ದರು. ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಅವರ ಕಾಳಜಿ ಪ್ರಾಮಾಣಿಕವಾಗಿತ್ತು. ಈಗಿನವರಂತೆ ಜನ ಹಾಳಾದರೇನು, ತಾವು ಉದ್ಧಾರವಾಗಬೇಕು ಎಂಬುವರ ಪೈಕಿ ಅವರಾಗಿರಲಿಲ್ಲ.
ಒಂದು ಉದಾಹರಣೆಯನ್ನು ನಿಮಗೆ ಹೇಳಬೇಕು. ಗೋವಿಂದಗೌಡರ ಸಂಬಂಧಿ ಸಣ್ಣಕೆರೆ ಸಂಜಯ್ ತಮಗಾದ ಅನುಭವವನ್ನು ಹೀಗೆ ಹೇಳಿಕೊಂಡಿದ್ದಾರೆ.
“೧೯೯೬ರಲ್ಲಿ ನಾನು ವೆಂಕಟೇಶಣ್ಣ, ಕಳಸಪ್ಪ ಹಾಗು ಇತರ ಆಸಕ್ತ ಮಿತ್ರರು ಕೊಪ್ಪದಲ್ಲಿ ಆಫ್‌ಸೆಟ್ ಮುದ್ರಣಯಂತ್ರವನ್ನು ಪ್ರಾರಂಭಿಸಿದ್ದೆವು. ಇದರ ಉದ್ಘಾಟನೆಗೆ ಬಿ.ಎಲ್.ಶಂಕರ್ ಅವರನ್ನು ಕರೆಸಿದೆವು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಮುದ್ರಣ ಯಂತ್ರವಿರಬೇಕೆಂದು ನಮ್ಮ ಉದ್ದೇಶವಾಗಿತ್ತು. ಇದಕ್ಕಾಗಿ ಬ್ಯಾಂಕ್ ಇತರೆ ಕಡೆ ಸಾಲ ಸೌಲಭ್ಯಗಳನ್ನು ಪಡೆದೆವು. ನಮಗೆ ಮುದ್ರಣ ವಿಚಾರದಲ್ಲಿ ಪ್ರಾಯೋಗಿಕ ಅನುಭವ ಇಲ್ಲದಿದ್ದರೂ ಕೆಲಸಗಾರರಿಂದ ಉತ್ತಮ ಕೆಲಸವನ್ನೇ ಮಾಡುತ್ತಿದ್ದೆವು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಣ ಇಲಾಖೆ ಆಫ್‌ಸೆಟ್‌ನ ಕೆಲಸಕ್ಕೆ ಟೆಂಡರ್ ಕರೆಯಿತು. ಕಡಿಮೆ ದರ ಸೂಚಿಸಿದ ನಮಗೆ ನಿಯಮಾವಳಿಯಂತೆ ಕೆಲಸ ದೊರೆಯಿತು. ಸಮರ್ಪಕವಾಗಿ ಕೆಲಸ ಮಾಡಿಕೊಟ್ಟೆವು. ಒಂದು ವಾರದ ನಂತರ ಈ ವಿಚಾರ ಅಯ್ಯ ಅವರಿಗೆ ತಿಳಿಯಿತು. ಈ ಮೂವರಲ್ಲಿ ನಾನು ಚಿಕ್ಕವ. ಒಂದು ಭಾನುವಾರ ನನ್ನನ್ನು ಕರೆಸಿ ಈ ಕೆಲಸ ನಿಮಗೆ ಹೇಗೆ ಸಿಕ್ಕಿತೆಂದು ವಿವಿಧ ರೀತಿಯ ಪ್ರಶ್ನೆಗಳನ್ನು ಹಾಕಿದರು. ನನಗೆ ಅವರ ಮಾತು ಕೇಳಿ ಶಾಕ್ ಆಯಿತು. ಅರ್ಧ ಗಂಟೆಯ ವಾದ ವಿವಾದದ ನಂತರ ನೀವು ಸಾಮಾನ್ಯರಾಗಿದ್ದರೆ ಈ ಕೆಲಸ ನಿಮಗೆ ದೊರೆಯುತ್ತಿತ್ತೆ? ನಿಮ್ಮ ಅಂತರಂಗಕ್ಕೆ ಇದನ್ನು ಕೇಳಿಕೊಳ್ಳಿ ಎಂದರು ಅಯ್ಯ. ನಾನು ಏನೂ ಮಾತನಾಡದೆ ನಿಂತೆ. ಒಂದು ಹಿಡಿ ಅನ್ನ ತಿನ್ನುವುದಕ್ಕೆ ಉಸಾಬರಿ ಏಕೆ? ಇದೇ ಕೊನೆ. ನೀವುಗಳು ಇನ್ನೆಂದೂ ಶಿಕ್ಷಣ ಇಲಾಖೆ ಅಥವಾ ಸರ್ಕಾರದ ಬೇರೆ ಯಾವ ಇಲಾಖೆಯ ಪ್ರಿಂಟಿಂಗ್ ಕೆಲಸ ಮಾಡಬಾರದು. ನೀವೆಲ್ಲ ನನ್ನ ಮಾತು ಕೇಳದಿದ್ದರೆ ನಾನು ಮಂತ್ರಿ ಸ್ಥಾನದಲ್ಲಿ ಇರೋಲ್ಲ ಎಂದರು. ಆಮೇಲೆ ನಾವು ಸರ್ಕಾರದ ಇಲಾಖೆಯಿಂದ ಯಾವುದೇ ಮುದ್ರಣದ ಆದೇಶ ಪಡೆಯಲಿಲ್ಲ. ಪ್ರಿಂಟಿಂಗ್ ಪ್ರೆಸ್ ತನಗೆ ತಾನೇ ಬಾಗಿಲು ಮುಚ್ಚಿಕೊಂಡಿತು.
ರಾಜ್ಯದಲ್ಲಿ ಸ್ವಜನ ಪಕ್ಷಪಾತ, ಸ್ವಜಾತಿ ಪ್ರೇಮ, ಮಕ್ಕಳು ಮರಿಗಳ ಉದ್ಧಾರದ ಕೈಂಕರ್ಯಗಳು ಎಗ್ಗಿಲ್ಲದೆ ಸಾಗುತ್ತಿರುವಾಗ ಇಂಥದ್ದೊಂದು ನೆನಪೇ ರೋಮಾಂಚನ ತರುತ್ತದೆ. ನೀವು ನನ್ನ ಹೆಸರನ್ನು ಬಳಸಿಕೊಳ್ಳುವುದಾದರೆ ನಾನು ಮಂತ್ರಿಯಾಗಿ ಇರುವುದೇ ಇಲ್ಲ ಎಂದು ಹೇಳುವ ಗೋವಿಂದಗೌಡರ ಪ್ರಾಮಾಣಿಕತೆ ಯಾರಿಗಿದೆ ಇಂದು? ಯಾರಾದರೂ ಬೆನ್ನು ತಟ್ಟಿಕೊಂಡು ಹೇಳುವರೆ?
ಗೋವಿಂದಗೌಡರು ತಾವು ಮಂತ್ರಿಯಾದ ನಂತರ ಈ ಬಗೆಯ ಧೋರಣೆಯನ್ನು ಬೆಳೆಸಿಕೊಂಡವರಲ್ಲ. ಅವರ ಬದುಕೇ ತೆರೆದಿಟ್ಟ ಪುಸ್ತಕ. ಸಾರ್ವಜನಿಕ ಜೀವನದಲ್ಲಿ ಎಂದೂ ಹೆಸರು ಕೆಡಿಸಿಕೊಂಡವರಲ್ಲ. ಕೊಪ್ಪ ಟೌನ್ ಮುನಿಸಿಪಾಲಿಟಿಯ ಅಧ್ಯಕ್ಷರಾಗಿದ್ದಾಗ ನಡೆದ ಒಂದು ಘಟನೆ ಅವರ ಆದರ್ಶದ ಬದುಕಿಗೆ ಸಾಕ್ಷಿ. ಗೋವಿಂದಗೌಡರ ಪರಿಚಯಸ್ಥರಾಗಿದ್ದ ಕೆ.ದುಗ್ಗಪ್ಪಗೌಡ ಅವರು ಘಟನೆಯೊಂದನ್ನು ನೆನಪಿಸಿಕೊಳ್ಳುತ್ತಾರೆ.
‘ಎಚ್.ಜಿ.ಗೋವಿಂದಗೌಡರು ಕೊಪ್ಪ ಮುನಿಸಿಪಾಲಿಟಿ ಅಧ್ಯಕ್ಷರಾಗಿದ್ದಾಗ ನಾನು ಮತ್ತು ನನ್ನ ಸ್ನೇಹಿತ ಲಿಂಗಪ್ಪ ಎನ್ನುವವರು ಇಬ್ಬರೂ ನಮಗೆ ಕೊಪ್ಪ ಟೌನಿನಲ್ಲಿ ಒಂದು ಸೈಟನ್ನು ಮಂಜೂರು ಮಾಡಿಸಿಕೊಡಿ ಎಂದು ಅರ್ಜಿ ಕೊಟ್ಟೆವು. ಕೊಟ್ಟು ಎರಡು ವರ್ಷಗಳೇ ಆದರೂ ಜಾಗ ಮಂಜೂರಾಗಿರಲಿಲ್ಲ. ಬೇರೆ ಎಲ್ಲರಿಗೂ ಆಗುತ್ತೆ. ನಮಗೆ ಯಾಕೆ ಆಗಲಿಲ್ಲ? ಎಂದು ಒಮ್ಮೆ ವಿಚಾರಿಸಿದೆ. ಅದಕ್ಕೆ ಅವರು ನೀವು ನಮ್ಮ ಹುಡುಗರು. ನಮ್ಮ ಮನೆಯಲ್ಲಿಯೇ ಇರುವವರು. ನಿಮಗೆ ಜಾಗ ಮಂಜೂರು ಮಾಡಿಕೊಟ್ಟರೆ ಜನ ಅಧ್ಯಕ್ಷರ ಮನೆಯಲ್ಲಿ ಇರುವ ಹುಡುಗರ ಹೆಸರಿಗೆ ಎಲ್ಲಾ ಸೈಟು ಮಂಜೂರು ಮಾಡಿದ್ದಾರೆ ಎಂದು ಆಡಿಕೊಳ್ಳುತ್ತಾರೆ. ಮಂಜೂರು ಮಾಡುವುದು ಸರಿಯಲ್ಲ. ಎಂದು ಹೇಳಿ ನನಗೆ ಸಮಾಧಾನ ಮಾಡಿದರು. ಇದು ಅವರ ಪ್ರಾಮಾಣಿಕತನಕ್ಕೆ ಸಣ್ಣ ನಿದರ್ಶನ ಅಷ್ಟೆ.
ಗೋವಿಂದಗೌಡರ ಬದುಕಿನ ಪೂರ್ತಿ ಇಂಥದ್ದೇ ಘಟನೆಗಳು ತುಂಬಿ ಹೋಗಿವೆ. ಸಣ್ಣ ಮಟ್ಟದ ಭ್ರಷ್ಟಾಚಾರವನ್ನೂ ಅವರು ಸಹಿಸುತ್ತಿರಲಿಲ್ಲ. ಯಾರಿಂದಲೂ ಕೊಡುಗೆಗಳನ್ನು ನಿರೀಕ್ಷಿಸುತ್ತಿರಲಿಲ್ಲ. ಭ್ರಷ್ಟಾಚಾರಕ್ಕೆ ಹಲವು ಮುಖಗಳಿರುತ್ತವೆ ಎಂಬುದನ್ನು ಗೋವಿಂದಗೌಡರು ಬಲ್ಲವರಾಗಿದ್ದರು. ಹೀಗಾಗಿ ಅವರನ್ನು ದಾರಿ ತಪ್ಪಿಸುವುದು ಅಷ್ಟು ಸುಲಭವಾಗಿರಲಿಲ್ಲ.
ಗೋವಿಂದಗೌಡ ಅವರು ಶಿಕ್ಷಣ ಸಚಿವರಾದ ನಂತರ ಕೊಪ್ಪದಲ್ಲಿ ಅವರಿಗೆ ನಾಗರಿಕ ಸನ್ಮಾನವೊಂದು ಏರ್ಪಟ್ಟಿತ್ತು. ಸಮಾರಂಭ ಅದ್ದೂರಿಯಾಗಿ ಜರುಗಿತು. ಸಮಾರಂಭದ ಮಧ್ಯೆ ಜಿಲ್ಲೆಯ ಪ್ರಮುಖ ವ್ಯಾಪಾರಿ ಮಾರವಾಡಿಯೊಬ್ಬರು ವೇದಿಕೆಯ ಮೇಲೆ ಬಂದು ಗೋವಿಂದಗೌಡ ಅವರಿಗೆ ದಪ್ಪ ಕೊರಳಿನ ಸರವೊಂದನ್ನು ಹಾಕಿದರಂತೆ. ಅಚಾನಕ್ಕಾಗಿ ನಡೆದ ಈ ಘಟನೆಯಿಂದ ಎಲ್ಲರಿಗೂ ಒಂದು ರೀತಿ ವಿಸ್ಮಯ. ಆಗ ಗೋವಿಂದಗೌಡ ಅವರು ಹಿಂದೆ ಮುಂದೆ ನೋಡದೆ ಚಿನ್ನದ ಸರ ತೆಗೆದು ‘ನಾನೆಂದೂ ಯಾರಿಂದಲೂ ಇಂಥ ಕೊಡುಗೆ ನಿರೀಕ್ಷಿಸಿಲ್ಲ. ಅವರ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ಅವರು ಇದನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿ ಮಾರವಾಡಿಗೆ ಸರವನ್ನು ವಾಪಾಸು ಕೊಟ್ಟರಂತೆ.
೧೯೯೫ರಲ್ಲಿ ಗೋವಿಂದಗೌಡರು ಶಿಕ್ಷಣ ಸಚಿವರಾಗಿದ್ದಾಗ ಹಂಪಿ ವಿಶ್ವವಿದ್ಯಾಲಯಕ್ಕೆ ಅಧಿಕೃತ ಕಾರ್ಯಕ್ರಮಕ್ಕೆ ಹೋಗಿದ್ದರು. ಹೊಸಪೇಟೆಯ ವೈಕುಂಠ ಅತಿಥಿ ಗೃಹದಲ್ಲಿ ತಂಗಿದ್ದರು. ಎರಡು ದಿನ ಗೋವಿಂದಗೌಡರು ಹಾಗು ಅವರ ಸಿಬ್ಬಂದಿ ಅವರ ಊಟ ತಿಂಡಿ ವಗೈರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಹಣ ಕೊಟ್ಟುಬಿಟ್ಟಿದ್ದರು. ಗೋವಿಂದಗೌಡ ಅವರು ಕುಲಪತಿಗಳಿಗೆ ‘ನೀವ್ಯಾಕೆ ವಿಶ್ವವಿದ್ಯಾಲಯದಿಂದ ನಮ್ಮ ಊಟ ತಿಂಡಿಗೆ ಹಣ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು. ‘ಇಲ್ಲಾ ಸರ್, ನಾನೇ ಸ್ವಂತವಾಗಿ ಕೊಟ್ಟಿದ್ದೇನೆ ಎಂದರು ಕುಲಪತಿಗಳು.
‘ಹೀಗೆ ಬರೋ ಮಂತ್ರಿಗಳಿಗೆಲ್ಲ ಊಟ ಹಾಕಿಸುವುದಕ್ಕೆ ನಿಮಗೆ ಬರೋ ಸಂಬಳವೆಷ್ಟು? ಹೀಗೆ ಹಣ ಖರ್ಚು ಮಾಡಿದರೆ ಮನೆಯವರಿಗೆ ಏನು ಕೊಡುತ್ತೀರ? ನನಗೆ ಸರ್ಕಾರ ಪ್ರವಾಸ ಮಾಡಲು ಭತ್ಯೆ ಕೊಡುತ್ತದೆ. ಎನ್ನುತ್ತ ಮೇಟಿಯನ್ನು ಕರೆದು ಕುಲಪತಿ ಕೊಟ್ಟ ಹಣ ಹಿಂದಿರುಗಿಸಿ ತಾವೇ ಪೂರ್ಣ ಹಣ ನೀಡಿದರು.
ಈ ಬಗೆಯ ಪ್ರಾಮಾಣಿಕತೆಯನ್ನು ಇಂದು ಯಾರಲ್ಲಿ ಗುರುತಿಸುವುದು? ಈ ಮಟ್ಟದ ಪ್ರಾಮಾಣಿಕತೆಯನ್ನು ಇಟ್ಟುಕೊಂಡು ಯಾರಾದರೂ ರಾಜಕಾರಣದಲ್ಲಿ ಇರಲು ಸಾಧ್ಯವೇ ಎಂಬ ಪ್ರಶ್ನೆಗೂ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ಗೋವಿಂದಗೌಡರಂಥವರ ರಾಜಕೀಯ ನಿರ್ಗಮನದೊಂದಿಗೆ ಭ್ರಷ್ಟಾಚಾರ ರಹಿತವಾದ ರಾಜಕಾರಣದ ಎಲ್ಲ ಮಾರ್ಗಗಳೂ ಮುಚ್ಚಿ ಹೋದವೇನೋ?
ವೈಯಕ್ತಿಕ ಚಾರಿತ್ರ್ಯವನ್ನು ಇಷ್ಟು ಶುದ್ಧವಾಗಿಟ್ಟುಕೊಂಡಿದ್ದರಿಂದಲೇ ಗೋವಿಂದಗೌಡರು ಜನ ಮೆಚ್ಚುವಂತ ಕಾರ್ಯ ನಡೆಸಲು ಸಾಧ್ಯವಾಯಿತು. ಕೆ.ವಿ.ಶಂಕರೇಗೌಡರ ನಂತರ ಶಿಕ್ಷಣ ಇಲಾಖೆಯನ್ನು ಗೋವಿಂದಗೌಡರಷ್ಟು ಸಮರ್ಥವಾಗಿ ನಿಭಾಯಿಸಿದವರಿಲ್ಲ.
ಜೆ.ಎಚ್.ಪಟೇಲರ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ಗೋವಿಂದಗೌಡರು ಒಂದು ಲಕ್ಷ ಮಂದಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡರು. ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಈ ಪ್ರಕ್ರಿಯೆಯನ್ನು ಕಳಂಕರಹಿತವಾಗಿ ನಡೆಸಿದ ಕೀರ್ತಿ ಗೋವಿಂದಗೌಡರದು. ಒಂದೇ ಒಂದು ರೂಪಾಯಿ ಖರ್ಚು ಮಾಡದೆ ಶಿಕ್ಷಕರು ಉದ್ಯೋಗ ಗಿಟ್ಟಿಸಿಕೊಂಡರು. ಆ ಎಲ್ಲರೂ ಇಂದಿಗೂ ಸಹ ಗೋವಿಂದಗೌಡರನ್ನು ನೆನಪಿಸಿಕೊಳ್ಳುತ್ತಾರೆ.
ಶಿಕ್ಷಣ ಇಲಾಖೆಯಲ್ಲಿ ಎಲ್ಲೆಡೆ ಹಣದ್ದೇ ಪ್ರಭಾವ ನಡೆಯುತ್ತಿದ್ದಾಗ ಗೋವಿಂದಗೌಡರು ಇಡೀ ವ್ಯವಸ್ಥೆಯನ್ನೇ ಬದಲಿಸುವ ಸಂಕಲ್ಪ ತೊಟ್ಟರು. ವರ್ಗಾವಣೆ ಹೆಸರಿನಲ್ಲಿ ನಡೆಯುತ್ತಿದ್ದ ದಂಧೆಯನ್ನು ತಡೆಗಟ್ಟುವ ಸಲುವಾಗ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ತಂದರು. ವರ್ಗಾವಣೆ ಬಯಸುವ ಇಲಾಖೆ ಸಿಬ್ಬಂದಿ, ಶಿಕ್ಷಕರು ನಿಟ್ಟುಸಿರು ಬಿಡುವಂತಾಯಿತು.
ಸೀಟು ಹಂಚಿಕೆಯಲ್ಲಿ ಅನ್ಯಾಯವಾಗದಂತೆ ಸಿಇಟಿ ಪದ್ಧತಿ ಕೌನ್ಸಿಲಿಂಗ್ ಗೋವಿಂದಗೌಡರ ಕಾಲದಲ್ಲಿ ಮುಂದುವರೆಯಿತಲ್ಲದೆ, ಗೌಡರು ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಟ್ಟಿಗೆ ಗುರಿಯಾದರೂ ತಮ್ಮ ನಿಲುವು ಸಡಿಲಿಸದ ಗೌಡರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾದರು.
ಗೌಡರು ತಾವು ಮಾತ್ರ ಪರಿಶುದ್ಧತೆಯಿಂದ ಬದುಕುತ್ತಿರಲಿಲ್ಲ. ಇತರರಿಗೂ ಹಾಗೆ ಬದುಕುವ ಪ್ರೇರಣೆ ನೀಡುತ್ತಿದ್ದರು. ತಾವು ಸಚಿವರಾಗಿ ಸೇವೆ ಸಲ್ಲಿಸಿದ ಇಲಾಖೆಗಳಲ್ಲಿ ಭ್ರಷ್ಟಾಚಾರಿಗಳನ್ನು ಅವರು ಎಂದಿಗೂ ಸಹಿಸಿದವರಲ್ಲ. ಭ್ರಷ್ಟಾಚಾರ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಂದೂ ಹಿಂಜರಿಯುತ್ತಿರಲಿಲ್ಲ.
೧೯೯೩ರಲ್ಲಿ ರಾಷ್ಟ್ರಪತಿಗಳ ಒಪ್ಪಿಗೆ ಪಡೆದ ಕರ್ನಾಟಕ ಸಮಗ್ರ ಶಿಕ್ಷಣ ಮಸೂದೆಯ ನಿಯಮಾವಳಿಗಳನ್ನು ರಚಿಸಿ, ಅನುಷ್ಠಾನಗೊಳಿಸಿದ ಕೀರ್ತಿ ಗೋವಿಂದಗೌಡರಿಗೆ ಸಲ್ಲುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕ್ರಿಯಾಶೀಲತೆ, ಪಾರದರ್ಶಕತೆ, ವಿಶ್ವಾಸಾರ್ಹತೆಯನ್ನು ತಂದವರು ಗೋವಿಂದಗೌಡರು. ಅವರು ಖಾಸಗಿ ಶಾಲೆಗಳ ಕನ್ನಡ ವಿರೋಧಿ ನಿಲುವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಈ ಶಾಲೆಗಳ ಹಣಬಾಕತನವನ್ನು ಕಂಡು ಸಿಡಿದೇಳುತ್ತಿದ್ದರು.
ಹೇಳಿ ಕೇಳಿ ಗೋವಿಂದಗೌಡರು ಕಡಿದಾಳ್ ಮಂಜಪ್ಪನವರ ಶಿಷ್ಯರು. ತಾವು ರಾಜಕಾರಣದಿಂದ ನಿರ್ಗಮಿಸುವಾಗ ನನ್ನ ಉತ್ತರಾಧಿಕಾರಿ ಗೋವಿಂದಗೌಡರು ಎಂದು ಮಂಜಪ್ಪನವರೇ ಸಾರ್ವಜನಿಕವಾಗಿ ಘೋಷಿಸಿದ್ದರು. ಮಂಜಪ್ಪನವರು ಇಟ್ಟ ನಂಬುಗೆಗೆ ಮುಕ್ಕಾಗದಂತೆ ಗೋವಿಂದಗೌಡರು ರಾಜಕಾರಣವನ್ನು ನಿರ್ವಹಿಸಿದರು.
ಜೆ.ಎಚ್.ಪಟೇಲರ ಸರ್ಕಾರ ಕುಸಿದ ಸಂದರ್ಭದಲ್ಲಿ ನಡೆದ ರಾಜಕೀಯ ಮೇಲಾಟ, ನಾಯಕರ ಪರಸ್ಪರ ದ್ವೇಷ ಇದೆಲ್ಲದರಿಂದ ರೋಸಿ ಹೋದ ಗೋವಿಂದಗೌಡರು ರಾಜಕಾರಣದ ಕುರಿತೇ ಜಿಗುಪ್ಸೆ ಪಡುವಂತಾಯಿತು. ಇನ್ನು ಇಲ್ಲಿ ನಾನು ಇರುವುದು ತರವಲ್ಲ ಎಂದು ಅವರು ಸಕ್ರಿಯ ರಾಜಕಾರಣ ತೊರೆದರು.
ಹಾಗೆ ರಾಜಕಾರಣ ತೊರೆದಕ್ಕಾಗಿ ಅವರು ಹಳಹಳಿಸಲಿಲ್ಲ. ತುಂಬ ನೆಮ್ಮದಿಯ ಜೀವನವನ್ನೇ ಮುಂದುವರೆಸಿದರು. ಮಾಜಿ ಸಚಿವ ಎಂಬ ಹಮ್ಮು ಜತೆಗಿಟ್ಟುಕೊಳ್ಳದೆ ಜನಸಾಮಾನ್ಯರಂತೆ ಬಸ್ಸುಗಳಲ್ಲಿ ಓಡಾಡಿದರು. ಜನರ ಮಧ್ಯೆಯೇ ಇದ್ದರು. ಕೃಷಿಯಲ್ಲಿ ತೊಡಗಿಕೊಂಡರು.
ಗೋವಿಂದಗೌಡರು ಮಲೆನಾಡ ಮೂರು ನಕ್ಷತ್ರಗಳೆಂದೇ ಹೆಸರಾದ ಕುವೆಂಪು, ಗೋಪಾಲಗೌಡರು ಮತ್ತು ಕಡಿದಾಳ್ ಮಂಜಪ್ಪನವರ ನಂತರ ಉದಿಸಿದ ನಾಲ್ಕನೇ ನಕ್ಷತ್ರ. ಅದಕ್ಕಾಗಿಯೇ ಅವರನ್ನು ಮಲೆನಾಡ ಗಾಂಧಿ ಎಂದು ಕರೆಯಲಾಗುತ್ತದೆ.
ಸಾಯುವ ಕೊನೆ ಕ್ಷಣದವರೆಗೆ ರಾಜಕಾರಣ ಮಾಡುವ ಹಂಬಲವೇ ಇಂದಿನ ರಾಜಕಾರಣಿಗಳದ್ದು. ರಾಜಕೀಯವಿಲ್ಲದೇ ಹೋದರೆ ಅವರು ಒಂದು ಕ್ಷಣವೂ ಬದುಕಲಾರರು. ಅಂಥದ್ದರಲ್ಲಿ ಗೋವಿಂದಗೌಡರಂಥವರು ಅಪರೂಪದ ಜನನಾಯಕ.
ಅಂಥವರ ಸಂತತಿ ಹೆಚ್ಚಬೇಕಿದೆ. ಆದರೆ ಅದು ಅಷ್ಟು ಸುಲಭವಲ್ಲ ಎಂಬುದು ಈ ಕ್ಷಣದ ಸತ್ಯ.

ಒಲಿದ ಕೃಷ್ಣೆ: ಮುಂದೇನು?



ಚಾರ್ವಾಕ

ದೊಡ್ಡದೊಂದು ಹೊರೆ ಇಳಿದಂತಾಗಿದೆ.
ಆಂಧ್ರಪ್ರದೇಶದ ನಿರಂತರ ಕಿರಿಕಿರಿ, ಅನವಶ್ಯಕ ತಕರಾರು, ಆಕ್ರಮಣಕಾರಿ ನಡೆಗಳಿಂದ ಕರ್ನಾಟಕಕ್ಕೆ ನ್ಯಾಯ ದೊರೆಯುತ್ತದೋ ಇಲ್ಲವೋ ಎಂಬ ಅನುಮಾನದಲ್ಲೇ ಇಡೀ ರಾಜ್ಯದ ಜನತೆ ಕೃಷ್ಣಾ ನ್ಯಾಯಾಧಿಕರಣದ ಐತೀರ್ಪು ಏನಾಗಬಹುದೆಂದು ಕಾಯುತ್ತಿದ್ದರು. ಆತಂಕ ಮರೆಯಾಗಿದೆ. ಕನ್ನಡಿಗರ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜನರ ಬಹುವರ್ಷಗಳ ಬೇಡಿಕೆ ಈಡೇರಿದೆ.
ಗುರುವಾರ ಹೊರಬಿದ್ದ ಕೃಷ್ಣಾ ಜಲವಿವಾದ ನ್ಯಾಯಾಧಿಕರಣದ ಐತೀರ್ಪು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ೫೨೪.೨೫೬ ಮೀಟರುಗಳಿಗೆ ಏರಿಸಿರುವುದು ನಿರಾಳತೆಯನ್ನು ತಂದಿದೆ.
ಕನ್ನಡಿಗರ ಆತಂಕಕ್ಕೂ ಕಾರಣವಿತ್ತು. ಈ ಹಿಂದೆ ಆಂಧ್ರಪ್ರದೇಶ ಸರ್ವೋಚ್ಚ ನ್ಯಾಯಾಲಯದ ಮುಂದೆ ತಕರಾರು ಅರ್ಜಿ ಸಲ್ಲಿಸಿ ಆಲಮಟ್ಟಿಯ ಎತ್ತರವನ್ನು ೫೧೯ ಮೀಟರುಗಳನ್ನು ಮೀರದಂತೆ ನೋಡಿಕೊಂಡಿತ್ತು. ಆದರೆ ಕೃಷ್ಣಾ ಕಣಿವೆಯಲ್ಲಿ ತನಗೆ ಸಲ್ಲಬೇಕಿರುವ ನೀರಿನ ಸಂಪೂರ್ಣ ಪಾಲಿನ ಶೇಖರಣೆಗೆ ೫೨೪ ಮೀಟರುಗಳಿಗೆ ಆಲಮಟ್ಟಿ ಅಣೆಯ ಎತ್ತರವನ್ನು ಏರಿಸದೆ ಅನ್ಯ ಮಾರ್ಗವಿಲ್ಲ ಎಂದು ಅರಿತಿದ್ದ ರಾಜ್ಯ ಸರ್ಕಾರ ತನಗೆ ಹೆಚ್ಚು ನೀರು ಸಂಗ್ರಹಿಸಲು ಅವಕಾಶ ನೀಡುವಂತೆ ನ್ಯಾಯಾಧಿಕರಣದ ಮುಂದೆ ಸಮರ್ಥವಾಗಿ ವಾದ ನಡೆಸಿತ್ತು.
ಆದರೆ ನ್ಯಾಯಾಧಿಕರಣಗಳ ತೀರ್ಪುಗಳಲ್ಲಿ ಕರ್ನಾಟಕ ಪದೇ ಪದೇ ಹಿನ್ನೆಡೆಯನ್ನು ಅನುಭವಿಸುತ್ತಾ ಬಂದಿರುವ ಇತಿಹಾಸವೇ ಕಣ್ಣ ಮುಂದಿರುವಾಗ ಈ ಬಾರಿ ನಮ್ಮ ನ್ಯಾಯಯುತ ಬೇಡಿಕೆ ಈಡೇರುವ ಕುರಿತು ಯಾವುದೇ ನಂಬುಗೆ ಇರಲಿಲ್ಲ. ಆದರೆ ಈಗ ಕರಿಮೋಡಗಳು ಕರಗಿ ಹೋಗಿವೆ. ಭರವಸೆಯ ಬೆಳಕಿನ ಕಿರಣಗಳು ಮೂಡಿವೆ.
ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿ ನಡೆಸಿದ್ದ ಕೃಷ್ಣಾ ನದಿ ನೀರು ಹಂಚಿಕೆ ಅವೈಜ್ಞಾನಿಕವಾಗಿದ್ದರಿಂದ ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಮನವಿ ಮೇರೆಗೆ ಕೇಂದ್ರಸರ್ಕಾರ ನ್ಯಾಯಮೂರ್ತಿ ಬಚಾವತ್ ನೇತೃತ್ವದಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣವನ್ನು ೧೯೬೯ರ ಏಪ್ರಿಲ್ ೧೦ ರಂದು ರಚಿಸಿತ್ತು. ಸುಮಾರು ೪ ವರ್ಷಗಳ ಕಾಲ ಅಧ್ಯಯನ ನಡೆಸಿ, ಮೂರೂ ರಾಜ್ಯಗಳ ವಾದವನ್ನು ಆಲಿಸಿ ನ್ಯಾಯಾಧಿಕರಣವು ೧೯೭೩ರ ಡಿ.೨೪ರಂದು ತನ್ನ ಮೊದಲ ವರದಿ ನೀಡಿತ್ತು. ಮತ್ತೆ ಮೂರು ವರ್ಷಗಳ ನಂತರ ೧೯೭೬ರ ಮೇ ೨೭ರಂದು ಎರಡನೆಯ ವರದಿ ಸಲ್ಲಿಸಿತು.
ನ್ಯಾಯಾಧಿಕರಣ ಕೃಷ್ಣ ಕಣಿವೆಯಲ್ಲಿ ಪ್ರತಿವರ್ಷ ಲಭ್ಯವಾಗುವ ನೀರಿನ ಪ್ರಮಾಣವನ್ನು ಅಂದಾಜು ಮಾಡಿ ಎ ಮತ್ತು ಬಿ ಸ್ಕೀಂಗಳ ಅಡಿಯಲ್ಲಿ ನೀರು ಹಂಚಿಕೆಯನ್ನು ಆಖೈರುಗೊಳಿಸಿತು. ಎ ಸ್ಕೀಂನಡಿಯಲ್ಲಿ ಅದು ಪರಿಗಣನೆಗೆ ತೆಗೆದುಕೊಂಡಿದ್ದು ೨೦೬೦ ಟಿಎಂಸಿ ನೀರು. ಇಷ್ಟನ್ನು ಮೂರು ರಾಜ್ಯಗಳಿಗೆ ಹಂಚಿಕೆ ಮಾಡಿ ನ್ಯಾಯಾಧಿಕರಣ ತೀರ್ಪು ನೀಡಿತ್ತು.
ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ ೭೩೪ ಟಿಎಂಸಿ ನೀರು ದೊರೆತರೆ ಮಹಾರಾಷ್ಟ್ರಕ್ಕೆ ೫೬೦ ಟಿಎಂಸಿ, ಹಾಗು ಆಂಧ್ರಪ್ರದೇಶಕ್ಕೆ ೮೦೦ ಟಿಎಂಸಿಯಷ್ಟು ನೀರು ಹಂಚಿಕೆ ಮಾಡಲಾಯಿತು. ಮಹಾರಾಷ್ಟ್ರಕ್ಕೆ ಕೃಷ್ಣಾ ಮೇಲ್ದಂಡೆ, ಘಟಪ್ರಭಾ ಹಾಗೂ ಭೀಮಾ ಉಪಕಣಿವೆಗಳಲ್ಲಿ ನಿರ್ಬಂಧ ವಿಧಿಸಲಾದರೆ ಕರ್ನಾಟಕಕ್ಕೆ ತುಂಗಭದ್ರಾ, ವೇದಾವತಿ ಮತ್ತು ಭೀಮಾ ಕೆಳದಂಡೆ ಉಪಕಣಿವೆಗಳಲ್ಲ್ಲಿ ನಿರ್ಬಂಧ ಹೇರಲಾಯಿತು.
ಇದಾದ ನಂತರ ಹೆಚ್ಚುವರಿಯಾಗಿ ಲಭ್ಯವಾಗುವ ನೀರಿನ ಹಂಚಿಕೆಗೆ ಬಿ ಸ್ಕೀಂ ರೂಪಿಸಲಾಯಿತು. ಆದರೆ ಬಚಾವತ್ ಆಯೋಗ ಟಿಎಂಸಿಗಳ ಲೆಕ್ಕದಲ್ಲಿ ಬಿ ಸ್ಕೀಂನ ನೀರನ್ನು ಹಂಚಿಕೆ ಮಾಡಲಿಲ್ಲ. ಬಿ ಸ್ಕೀಂನಡಿಯಲ್ಲಿ ಶೇ.೫೦ರಷ್ಟು ನೀರು ಕರ್ನಾಟಕಕ್ಕೆ, ಉಳಿದ ಶೇ.೫೦ರಷ್ಟನ್ನು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳು ಸಮಾನವಾಗಿ ಹಂಚಿಕೊಳ್ಳುವಂತೆ ಆಯೋಗ ಆದೇಶ ನೀಡಿತ್ತು.
ಇತ್ತ ಆಂಧ್ರಪ್ರದೇಶ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲೆಂದೇ ಹಲವು ಅಕ್ರಮ ನೀರಾವರಿ ಯೋಜನೆಗಳನ್ನು ಆರಂಭಿಸಿತು. ಇದು ಕರ್ನಾಟಕದ ಪಾಲಿಗೆ ಸಮಸ್ಯೆಗಳನ್ನು ಹುಟ್ಟುಹಾಕಿತು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಅಕ್ರಮ ನೀರಾವರಿ ಯೋಜನೆಗಳಿಗೆ ತಡೆಯಾಜ್ಞೆ ವಿಧಿಸುವುದರ ಜತೆಗೆ ಸ್ಕೀಂ ಬಿ ಅಡಿಯಲ್ಲಿ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರ ೧೯೯೭ರಲ್ಲಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಯಿತು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ೨೦೦೦ದ ಏ.೨೫ ರಂದು ತೀರ್ಪು ನೀಡಿ ಎರಡನೆಯ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಿತು. ಕೇಂದ್ರ ಸರ್ಕಾರ ೨೦೦೪ರ ಏಪ್ರಿಲ್ ೨ರಂದು ಎರಡನೆಯ ಕೃಷ್ಣಾ ನ್ಯಾಯಾಧಿಕರಣ ರಚಿಸಿ ಮೂರೂ ರಾಜ್ಯಗಳ ಅಹವಾಲುಗಳನ್ನು ವಿಚಾರಣೆಗೆ ಹಸ್ತಾಂತರಿಸಿತು.
ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ.ಬ್ರಿಜೇಶ್‌ಕುಮಾರ್ ನೇತೃತ್ವದಲ್ಲಿ ೨೦೦೪ರ ಏ.೨ ರಂದು ಕೇಂದ್ರ ಸರ್ಕಾರ ಎರಡನೆಯ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ ರಚಿಸಲಾಯಿತು.
ಈ ನ್ಯಾಯಾಧಿಕರಣದ ಸದಸ್ಯರನ್ನಾಗಿ ಅಂದು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾ|ಎಸ್.ಪಿ.ಶ್ರೀವಾಸ್ತವ ಹಾಗೂ ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಡಿ.ಕೆ.ಸೇಥ್ ಅವರನ್ನು ನೇಮಿಸಲಾಯಿತು. ಸೂಕ್ತ ಸೌಲಭ್ಯಗಳನ್ನು ಒದಗಿಸದ ಕಾರಣಕ್ಕೆ ನ್ಯಾಯಾಧಿಕರಣ ಕೆಲಸ ಆರಂಭಿಸಿದ್ದೇ ಎರಡು ವರ್ಷ ತಡವಾಗಿ!
ನ್ಯಾಯಾಧಿಕರಣದ ಮುಂದೆ ಕರ್ನಾಟಕ ಸರ್ಕಾರವು ಬಲವಾಗಿ ಮಂಡಿಸಿದ ವಾದ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದ್ದಾಗಿತ್ತು. ಹೆಚ್ಚುವರಿ ನೀರನ್ನು ಶೇಖರಿಸಿ ಬಳಕೆ ಮಾಡಿಕೊಳ್ಳಲು ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು ೫೨೪.೨೫೬ ಮೀಟರುಗಳಿಗೆ ಹೆಚ್ಚಿಸಲು ಅನುಮತಿ ಕೊಡುವಂತೆ ಒತ್ತಾಯಿಸಲಾಯಿತು. ಅದೇ ರೀತಿ ನ್ಯಾಯಮೂರ್ತಿ ಬಚಾವತ್ ಅಧ್ಯಕ್ಷತೆಯ ಮೊದಲನೆಯ ಕೃಷ್ಣಾ ನ್ಯಾಯಾಧಿಕರಣವು ತನ್ನ ತೀರ್ಪಿನಲ್ಲಿ ಹೇಳಿದ್ದಂತೆ ಬಿ ಸ್ಕೀಂನ ಶೇ.೫೦ರಷ್ಟು ನೀರನ್ನು ತನಗೇ ನೀಡಬೇಕು ಎಂದು ಕರ್ನಾಟಕ ವಾದ ಮಂಡಿಸಿತು. ಕೃಷ್ಣಾ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರಿನ ಪ್ರಮಾಣ ೫೧೭ ಟಿಎಂಸಿ ಆಗಿದ್ದು, ಆ ಪೈಕಿ ೨೬೦ ಟಿಎಂಸಿ ನೀರು ನಮಗೆ ಸಿಗಬೇಕು ಎಂಬುದು ಸರ್ಕಾರದ ಬೇಡಿಕೆಯಾಗಿತ್ತು.
ನ್ಯಾಯಾಧಿಕರಣವು ಇದೀಗ ಅಂತಿಮ ತೀರ್ಪು ನೀಡಿದೆ. ಆಂಧ್ರಪ್ರದೇಶದ ಅನ್ಯಾಯದ ಬೇಡಿಕೆಗಳನ್ನು ತಿರಸ್ಕರಿಸಿದೆ. ಕರ್ನಾಟಕದ ಬಹುದಿನಗಳ ಬೇಡಿಕೆಗಳು ಈಡೇರಿವೆ. ಇನ್ನು ಮುಂದೆಯಾದರೂ ಆಂಧ್ರಪ್ರದೇಶ ಅನಗತ್ಯ ತಗಾದೆಗಳನ್ನು ತೆಗೆಯದೆ, ತನ್ನ ಪಾಲನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು.
ಇತ್ತ ಕರ್ನಾಟಕವು ತನ್ನ ಪಾಲಿನ ನೀರಿನ ಬಳಕೆಗೆ ಕುಂಟುತ್ತ ಸಾಗಿರುವ ಯೋಜನೆಗಳನ್ನು ಕೂಡಲೇ ಮುಗಿಸಿ, ರೈತರ ಜಮೀನಿಗೆ ನೀರು ಹರಿಯುವಂತೆ ನೋಡಿಕೊಳ್ಳಬೇಕು. ಬಿ ಸ್ಕೀಂನಡಿ ಮಂಜೂರಾಗಿರುವ ಹೆಚ್ಚುವರಿ ನೀರಿನ ಸದ್ಬಳಕೆಗೆ ಹೊಸ ಯೋಜನೆಗಳನ್ನು ರೂಪಿಸಿ ಬರಪೀಡಿತ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿಯನ್ನು ಕಲ್ಪಿಸಲು ಕಾರ್ಯಪ್ರವೃತ್ತವಾಗಬೇಕು.
ಸರ್ಕಾರ ಇಚ್ಛಾಶಕ್ತಿಯನ್ನು ತೋರಿದರೆ ಇದೇನು ಕಷ್ಟದ ಕೆಲಸವೇನೂ ಅಲ್ಲ. ಆದರೆ ರಾಜಕೀಯ ಮೇಲಾಟಗಳಲ್ಲೇ ಮುಳುಗಿರುವ ಆಡಳಿತ-ವಿರೋಧ ಪಕ್ಷಗಳು ರಾಜ್ಯದ ಪ್ರಗತಿಯ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಹೆಜ್ಜೆಗಳನ್ನು ಇಡುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕ ಇಟ್ಟ ಹೆಸರು ಕೊಟ್ಟ ಮಂತ್ರ



ಕುವೆಂಪು

ಕಡೆಗೂ ಕನ್ನಡ ಜನಕೋಟಿಯ ಹೊಂಗನಸು ಇಂದು ನನಸಾಗಿದೆ; ಅನೇಕ ದಶಕಗಳ ತೀವ್ರ ನಿರೀಕ್ಷೆ ಇಂದು ಕೈಗೂಡಿದೆ; ಹಲವಾರು ಚೇತನಗಳ ನೋಂಪಿ ಫಲಿಸಿದೆ. ನಾಡಿಗೆ ’ಕರ್ನಾಟಕ’ ಎಂಬ ಹೆಸರನ್ನು ಸರಕಾರ ಅಧಿಕೃತವಾಗಿ ಘೋಷಿಸಿದ್ದರಿಂದ. ಯಾವುದು ಚಿರಕಾಲದಿಂದಲೂ ಒಂದು ’ಮಂತ್ರವಾಗಿತ್ತೋ ಅದು ಇಂದು ’ತಂತ್ರವಾಗಿಯೂ ಸಾರ್ಥಕತೆಯನ್ನು ಆರ್ಜಿಸಿಕೊಂಡಿದೆ; ಯಾವುದು ಮನೋಮಯ ಸಾಂಸ್ಕೃತಿಕ ಭೂಮಿಕೆಯಲ್ಲಿ ಶಾಶ್ವತವೂ ಸುದೃಢವೂ ಆದ ಭಾವಸತ್ಯವಾಗಿ ಎಂದೋ ಸಿದ್ಧವಾಗಿತ್ತೋ ಅದು ಇಂದು ರಾಜಕೀಯ ಶಕ್ತಿಯ ಮೂಲಕ ಭವಸತ್ಯವಾಗಿಯೂ ಸಾಕ್ಷಾತ್ಕಾರಗೊಂಡು ಮತ್ತೂ ಅಪ್ರತಿಹತವಾಗಿ ಪರಿಣಮಿಸಿದೆ. "ಕರ್ಣಾಟಕ ಎಂಬ ಹೆಸರು ಅತ್ಯಂತ ಸಮಂಜಸವೂ ಉಚಿತವೂ ಆಗಿರುವುದರಿಂದ ಇಂದೊ ನಾಳೆಯೊ ಅದು, ರಾಜಕೀಯ ಸ್ಪರ್ಧಾಭಾವದಿಂದಲ್ಲದೆ ಸಾಂಸ್ಕೃತಿಕವಾದ ಮೈತ್ರಿಯಿಂದಲೆಯೆ, ಸರ್ವ ಸಂತೋಷದಿಂದ ಸರ್ವಸಮ್ಮತವಾಗಿ ಘೋಷಿತವಾಗುತ್ತದೆ ಎಂಬುದು ಕವಿಯ ಶ್ರದ್ಧೆ" ಎಂದು ಹಿಂದೊಮ್ಮೆ ನಾನು ಹೇಳಿದ್ದೆ. ತುದಿಗೆ ಆ ಶ್ರದ್ಧೆಯ ಗೆದ್ದುದಕ್ಕಾಗಿ ಕವಿಗೆ ಅಪರಿಮಿತ ಹೆಮ್ಮೆಯುಂಟಾಗಿದೆ. ನಮ್ಮ ನಾಡಿಗೆ ’ಕರ್ಣಾಟಕ’ ಎಂದು ನಾಮಕರಣವಾಗಬೇಕು ಎಂಬ ಅಭೀಪ್ಸೆ ಎಷ್ಟು ಸಾರ್ವತ್ರಿಕವೂ ಶಕ್ತಿ ಸಮ್ಮನಿತವೂ ಆಗಿತ್ತೆಂಬುದಕ್ಕೆ ವಿಧಾನಸಭೆ ವಿಧಾನ ಪರಿಷತ್ತುಗಳೆರಡೂ ನಾಮಾಂತರವನ್ನು ಏಕಕಂಠದಿಂದ ಹರ್ಷೋತ್ಸಾಹಸಹಿತ ಸ್ವಾಗತಿಸಿದ್ದೇ ಭೂಮ ಬಂಧುರ ಸಾಕ್ಷಿ.
ನಾನು ’ಕರ್ಣಾಟಕ ರಾಷ್ಟ್ರಗೀತೆ’ ಎಂಬ ಹೆಸರಿನಲ್ಲಿ ಒಂದು ಕವನವನ್ನು ೧೯೨೪ರಲ್ಲಿ ಎಂಟ್ಸೆನ್ಸ್ ವಿದ್ಯಾರ್ಥಿಯಾಗಿದ್ದಾಗಲೇ ರಚಿಸಿದೆ. ಅದೇ ಗೀತೆ ಪರಿಷ್ಕೃತವಾಗಿ ೧೯೨೮ರಲ್ಲಿ ದಿ.ವೆಂಕಟಕೃಷ್ಣಯ್ಯನವರು ಹೊರಡಿಸುತ್ತಿದ್ದ ’ಸಂಪದಭ್ಯುದಯ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಮತ್ತೂ ಸಂಸ್ಕಾರಗೊಂಡು ’ಕೊಳಲು’ ಸಂಕಲನದಲ್ಲಿ (೧೯೩೦) ’ಜಯ ಹೇ ಕರ್ಣಾಟಕ ಮಾತೆ’ ಎಂಬ ಹೆಸರಿನಲ್ಲಿ ಸೇರಿದೆ. (ಈಗ ಅದು ಸಂಗ್ರಹಗೊಂಡು, ಕಿಂಚಿತ್ ಮಾರ‍್ಪಾಟಿನೊಡನೆ ನಾಡಗೀತೆಯಾಗಿ ಸ್ವೀಕೃತವಾಗಿದೆ.) ವಿದ್ಯಾರ್ಥಿ ದೆಶೆಯ ಆ ಕಾಲದಿಂದಲೂ ನಾನು ಕರ್ಣಾಟಕವನ್ನು ಭರತ ಖಂಡದ ಒಂದು ಅವಿಭಾಜ್ಯ ಅಂಗವಾಗಿ ಪರಿಕಲ್ಪಿಸಿಕೊಂಡಿದ್ದೇನೆಯೆ ಹೊರತು, ಪ್ರತ್ಯೇಕತಾಭಾವನೆಗೆ ಎಂದೂ ಲೇಶ ಮಾತ್ರವೂ ಅವಕಾಶವಿತ್ತಿಲ್ಲ. ಆದ್ದರಿಂದಲೇ ಕರ್ಣಾಟಕ ಮಾತೆಯನ್ನು ಕುರಿತು ಹಾಡುವಾಗ ’ಜಯ್ ಭಾರತ ಜನನಿಯ ತನುಜಾತೆ’ ಎಂದೇ ಪ್ರಾರಂಭಿಸಿದ್ದು. ಬೇರೊಂದೆಡೆ ನಾನು ಹೇಳಿರುವಂತೆ "ಕರ್ಣಾಟಕ ಮಾತೆಗೆ ಸಲ್ಲುವ ಜಯಕಾರ ಆಕೆ ಭಾರತ ಜನನಿಯ ತನುಜಾತೆಯಾಗಿರುವುದರಿಂದಲೇ. ಅಂಗೋದ್ಭವೆಯಾಗಿ ವಿನಾ ಕರ್ನಾಟಕಕ್ಕೆ ಬೇರೆಯೇ ಅಸ್ತಿತ್ವವೆಲ್ಲಿ? ನಾನು ರಾಜ್ಯದೃಷ್ಟಿಯಿಂದ ಕರ್ಣಾಟಕದವನು; ಭಾಷಾದೃಷ್ಟಿಯಿಂದ ಕನ್ನಡಿಗನು; ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ್ರ ದೃಷ್ಟಿಯಿಂದ ಭಾರತೀಯನು. ನನ್ನ ಕರ್ಣಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ."
ಆದರೆ ಬ್ರಿಟಿಷ್ ಪ್ರಭುತ್ವದ ಅಂದಿನ ದಿನಗಳಲ್ಲಿ ‘ಕರ್ಣಾಟಕ’ ಎನ್ನುವುದು ಭೌಗೋಳಿಕವಾಗಿ ಅಸಿತ್ವಗೊಂಡಿರಲಿಲ್ಲ. ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಭಾಗಗಳು ಒಂದುಗೂಡುತ್ತವೆ ಎಂಬುದು ಆಗ ಕನಸಿನ ಮಾತಾಗಿತ್ತು. ಏಕೆಂದರೆ ಭರತ ಖಂಡ ಸ್ವತಂತ್ರವಾಗುತ್ತದೆ ಎಂಬ ಕಲ್ಪನೆಯೆ ಆಗ ಯಾರಿಗೂ ಇರಲಿಲ್ಲ. ಬ್ರಿಟಿಷ್ ಚಕ್ರಾಧಿಪತ್ಯದ ಸುಭದ್ರತೆ, ನಿತ್ಯತೆಗಳಲ್ಲಿ ಎಲ್ಲರೂ ಭರವಸೆಯಿಟ್ಟಿದ್ದ ಕಾಲವದು. ಆದ್ದರಿಂದಲೇ ನಾನು ’ಕರ್ಣಾಟಕ ಮಾತೆ’ಯನ್ನು ಕೀರ್ತಿಸಿದರೂ ಅದು ಭೌಗೋಳಿಕವಾದುದಕ್ಕಿಂತ ವಿಶೇಷವಾಗಿ ಸಾಂಸ್ಕೃತಿಕವಾಗಿತ್ತು. ಈ ಸಾಂಸ್ಕೃತಿಕ ಕರ್ಣಾಟಕದ ನಿಲುವನ್ನು ಮತ್ತೂ ಖಚಿತ ಸ್ಪಷ್ಟವಾಗಿ ನಾನು ಪ್ರತಿಪಾದಿಸಿದೆ, ’ಮೈಸೂರು’ ಎಂಬ ಹೆಸರಿನಡಿಯಲ್ಲೆ ಕನ್ನಡ ನಾಡು ಒಂದಾದಾಗ:
"ನಮ್ಮ ಕರ್ಣಾಟಕ ಬರಿಯ ದೇಶವಿಸ್ತೀರ್ಣಕ್ಕೆ ಮಾತ್ರ ಸಂಬಂಧಪಟ್ಟದ್ದಲ್ಲ; ಕಾಲ ವಿಸ್ತೀರ್ಣವನ್ನೂ ನಾನು ಪ್ರಮುಖವಾಗಿ ಭಾವಿಸುತ್ತೇನೆ. ಅದನ್ನು ಚದರಮೈಲಿಗಳಿಂದ ಅಳೆದರೆ ಸಾಲದು; ಚದರ ವರ್ಷಗಳಿಂದಲೂ ಗುರುತಿಸಬೇಕು. ವ್ಯಷ್ಟಿರೂಪವಾದ ವ್ಯಕ್ತಿಗೆ ಕೋಶಗಳಿರುವಂತೆ ಸಮಷ್ಟಿ ರೂಪವಾದ ದೇಶಕ್ಕೂ ಕೋಶಗಳಿವೆ ಎಂದು ಭಾವಿಸುವುದಾದರೆ ಕರ್ಣಾಟಕಕ್ಕೆ ಅನ್ನಮಯ ರೂಪವಾದ ಭೂ ಪ್ರದೇಶವಿರುವಂತೆಯೆ ಪ್ರಾಣಮನೋಮಯ ರೂಪವಾದ ಚಿತ್ ಪ್ರದೇಶವೂ ಇದೆ. ಚಿನ್ಮಯವೂ ಆಧ್ಯಾತ್ಮಿಕವೂ ಆಗಿರುವ ಆ ಸಂಸ್ಕೃತಿ ಕೋಶವೇ ಕರ್ಣಾಟಕ ದೇವಿಯ ಸೂಕ್ಷ್ಮ ಶರೀರ. ನಶ್ವರವೂ ಚಂಚಲವೂ ಕಾಲ ಸನ್ನಿವೇಶವೂ ಆಗಿರುವ ಭೂ ವಿಸ್ತೀರ್ಣ ರೂಪವಾದ ಲೀಲಾಸ್ಥೂಲ ಶರೀರವನ್ನು ಸರ್ವದಾ ಧಾರಣೆ ಮಾಡುತ್ತಿರುತ್ತದೆ ಆ ನಿತ್ಯ ಭಾವತನು. ಆ ಜ್ಯೋತಿಶ್ಯರೀರಿಯೆ ದೇವಿ. ಆ ದೇವಿಯ ಉಪಾಸನೆಯೆ ಕವಿ ಕಲಾವಿದ ತತ್ವಜ್ಞ ಸಾಧಕರಾದಿಯಾಗಿ ಸಕಲರ ಗಂತವ್ಯ ಮತ್ತು ಗಮ್ಯ. ಕರ್ಣಾಟಕದ ಕಾವ್ಯ ಸಂಗತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಳಿಕವಾದ ಎಲ್ಲೆಗಳಿಂದ ಹೆದರಬೇಕಾದ್ದಿಲ್ಲ.... ಕನ್ನಡ ಕಾವ್ಯಗಳನ್ನೋದುವಾತನು ಅಮೇರಿಕಾದಲ್ಲಿದ್ದರೂ ಅದು ’ಕರ್ಣಾಟಕವೆ’ ’ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೆ. ’ಕುಮಾರವ್ಯಾಸನನಾಲಿಪ ಕಿವಿ’ ಆಂಡಿಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೆ. ’ಕಾವೇರಿಯಿಂದಮಾ ಗೋದಾವರಿವಮಿರ್ದ ನಾಡು’ ಎಂದು ನೃಪತುಂಗನು ಬಣ್ಣಿಸಿದ ಕರ್ನಾಟಕ ನೆಲದ ಎಲ್ಲೆ ಇಂದು ಭೌಗೋಳಿಕವಾಗಿ ವ್ಯತ್ಯಸ್ತವಾಗಿರುವುದಕ್ಕಾಗಿ ಪರಿತಪಿಸುವುದು ಅನಾವಶ್ಯಕ. ಕಾವೇರಿ ಮತ್ತು ಗೋದಾವರಿಗಳು ನಿತ್ಯವೂ ನಿರ್ದಿಗಂತವಾಗಿ ವಿಸ್ತರಿಸುತ್ತಿರುವ ಕರ್ಣಾಟಕದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಕ ಭೂಮಿಕೆಯ ಗಡಿಗಳಿಗೆ ಸಂಕೇತ ಮಾತ್ರಗಳಾಗಿರಲಿ, ಅವು ಭಾವೋಪಯೋಗಿಗಳೇ ಹೊರತು ಲೋಕೋಪಯೋಗಿಗಳಾಗುವುದಿಲ್ಲ. ಏಕೆಂದರೆ ಮೈಸೂರಿನ ಎಲ್ಲೆ ರಾಜಕೀಯದಿಂದ ಭೌಗೋಳಿಕವಾಗಿ ನಿರ್ಣಯವಾಗಿದ್ದರೂ ಕರ್ಣಾಟಕದ ಸಾಂಸ್ಕೃತಿಕ ಮೇರೆ ನಮ್ಮೆಲ್ಲರಿಂದ ಮಾನಸಿಕವಾಗಿ ನಿರಂತರವೂ ನಿರ್ಣಯವಾಗುತ್ತಿರುತ್ತದೆ. ಕನ್ನಡಿಗರ ಸಂಸ್ಕೃತಿಗೆ ಪ್ರತಿಮಾರೂಪವಾಗಿರುವ ಕರ್ಣಾಟಕದ ವಿಸ್ತಾರ ನಿರ್ದಿಂಗತವಾದದ್ದು: ಅದರ ಔನ್ನತ್ಯ ನಿಶ್ಶಿಖರವಾದದ್ದು. ಅಂತಹ ಸಾಂಸ್ಕೃತಿಕ ಕರ್ಣಾಟಕದ ಸ್ಥಾಪನೆ ರಕ್ಷಣೆ, ಪೋಷಣೆ ಮತ್ತು ವಿಸ್ತರಣೆಗಳಿಗಾಗಿಯೆ ಸಹೃದಯ ಸಮಷ್ಟಿರೂಪವಾದ ಸಾಹಿತ್ಯ ಪರಿಷತ್ತು ನಿರಂತರವೂ ತಪಸ್ವಿಯಾಗಿ ದುಡಿಯಬೇಕಾಗಿದೆ. ಏಕೆಂದರೆ ಭೌಗೋಳಿಕವಾಗಿ ಕರ್ಣಾಟಕ ರಾಜ್ಯಸ್ಥಾಪನೆಯಾಯಿತು ಎಂದು ನಾವು ಸಡಿಲ ಬಾಳಿಗರಾಗಿ ಸುಮ್ಮನಾದರೆ ರಾಜ್ಯ ಸ್ಥಾಪನೆಯ ಮೂಲೋದ್ದೇಶವೇ ವಿಫಲವಾಗುತ್ತದೆ."
೧೯೪೯ರಲ್ಲಿ ಒಮ್ಮೆ ನಾನು ಮಹಾರಾಜ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಏಕೀಕರಣದ ಪರವಾಗಿ ಮಾತನಾಡಿದಾಗ, ಸಚಿವರೊಬ್ಬರಿಂದ ಎಚ್ಚರಿಕೆಯ ’ನೋಟೀಸ್ ಬಂತು. ಅದಕ್ಕೆ ಪ್ರತ್ಯುತ್ತರವಾಗಿ ಮೊಳಗಿದ ಕವನ ’ಅಖಂಡ ಕರ್ಣಾಟಕ.’ ಅದರಲ್ಲಿ ಕೂಡ ಉದ್‌ಘೋಷಿತವಾಗಿರತಕ್ಕದ್ದು ಸಂಸ್ಕೃತಿ ಕರ್ಣಾಟಕವೆ ವಿನಾ ಭೌಗೋಳಿಕ ಕರ್ಣಾಟಕವಲ್ಲ;
ಅಖಂಡ ಕರ್ಣಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರಕರ್ಣ ಕುಂಡಲ!

ಅಖಂಡ ಕರ್ಣಾಟಕ:
ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ!

ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ!

ಹೀಗೆ, ನಾನು ಪರಿಭಾವಿಸುವ, ಆರಾಧಿಸುವ ಕರ್ಣಾಟಕ ಯಾವಾಗಲೂ ಸಂಸ್ಕೃತಿ ಕರ್ಣಾಟಕವೆ ಆಗಿದೆ. "ಎಲ್ಲಾದರೂ ಇರು; ಎಂತಾದರು ಇರು; ಎಂದೆಂದಿಗೂ ನೀ ಕನ್ನಡವಾಗಿರು" ಎಂಬುದೆ ಅದರ ಅಧಿಷ್ಠಾನ ಸೂತ್ರ.
ಮೈಸೂರಿನ ಪ್ರಜಾಪ್ರತಿನಿಧಿ ಸಭೆಯಲ್ಲಿ ’ಏಕೀಕರಣಕ್ಕೆ ಇದು ಸಕಾಲವಲ್ಲ ಎಂಬ ನಿರ್ಣಯ ಅಂಗೀಕೃತವಾದಾಗ (ನವೆಂಬರ್ ೧೯೪೯) ’ಕರ್ಣಾಟಕ ಮಂತ್ರದೀಕ್ಷೆ ಎಂಬ ಕವಿತೆ ಉದ್ಭವಿಸಿ ಕನ್ನಡಿಗರಿಗೆ ಕರೆ ಕೊಟ್ಟಿತು:
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೆ!
ಅಂತೂ ಕಡೆಗೊಮ್ಮೆ ಏಕೀಕರಣವಾಯಿತು. ಆದರೆ ನಾಡಿಗೆ ಅಧಿಕೃತವಾಗಿ ’ಮೈಸೂರು’ ಎಂಬ ನಾಮಧೇಯ ಉಳಿಯಿತೆ ಹೊರತು ಕರ್ಣಾಟಕ ಪ್ರಾಪ್ತವಾಗಲಿಲ್ಲ. ಉತ್ತರ ಕರ್ನಾಟಕದ ಜನತೆ ’ಕರ್ನಾಟಕ’ವೆಂಬ ಹೆಸರಿಗೆ ಅನುಕೂಲವಾಗಿದ್ದರೂ, ಹಳೆಯ


ಮೈಸೂರಿನ ರಾಜನಿಷ್ಠ ಸಮುದಾಯದವರು ಅದನ್ನು ವಿರೋಧಿಸಿ ಹಟ ಹಿಡಿದುದರಿಂದ ’ಮೈಸೂರು’ ಎಂಬುದೇ ಮುಂದುವರಿಯಬೇಕಾಯಿತು. ಹಳೆಯ ಮೈಸೂರಿನ ಇಂತಹ ಜನ ಏಕೀಕರಣಕ್ಕೂ ಸುಮುಖವಾಗಿರಲಿಲ್ಲವೆಂಬುದನ್ನೂ ಜ್ಞಾಪಿಸಿಕೊಳ್ಳಬಹುದು. ಇನ್ನೊಂದು ಅಂಶವನ್ನೂ ನೆನೆಯಬೇಕು; ಸ್ವಾತಂತ್ರ್ಯೋದಯಕ್ಕೆ ಮುನ್ನ ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ಪ್ರಾಂತಗಳನ್ನು ಭಾಷಾನುಗುಣವಾಗಿ ವಿಂಗಡಿಸಿ, ಕನ್ನಡನಾಡಿನ ಕಾಂಗ್ರೆಸ್ಸನ್ನು ’ಕರ್ಣಾಟಕ ಪ್ರಾಂತೀಯ ಕಾಂಗ್ರೆಸ್ ಎಂದು ಕರೆದಿತ್ತು. ರಾಷ್ಟ್ರ ಸ್ವತಂತ್ರವಾದ ಮೇಲೆ ಅದು ’ಮೈಸೂರು ಪ್ರದೇಶ ಕಾಂಗ್ರೆಸ್ ಆಗಿಹೋಯಿತು. ಮೈಸೂರಿನ ಕೆಲವರ ಹಟಮಾರಿತನದಿಂದ ಈ ವಾಗ್ವಾದದ ಬಿರುಗಾಳಿ ಬಹುಕಾಲ ಮುಂದುವರಿಯುತ್ತ ಬಂತು.
ಏಕೀಕರಣವಾದ ಸಂದರ್ಭದಲ್ಲಿ ನಾನು ’ಕರ್ಣಾಟಕ ರಾಜ್ಯೋದಯ ಶ್ರೀಗೀತೆ’ಯನ್ನು ರಚಿಸಿದೆ. ಅದರಲ್ಲೂ ಎಲ್ಲಿಯೂ ಮೈಸೂರು ಎಂಬ ಪದವನ್ನು ಬಳಸಿಲ್ಲ. ಅಲ್ಲಿಯೂ ನಾನು ಎತ್ತಿಹಿಡಿದಿರುವುದು ಸಂಸ್ಕೃತಿ ಕರ್ಣಾಟಕತ್ವವನ್ನೇ:
ಬರಿಯ ಚದರ ಮೈಲಿಗಳಲ್ತು ಕರ್ಣಾಟಕದ ದೇಶ ವಿಸ್ತೀರ್ಣಂ
ನೆನೆ, ನೆನೆ, ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಂ
ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಂ
ಪ್ರಾಣಮಯ ಭಾವಮಯ ವಿಸ್ತೀರ್ಣಮಂ, ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ!
ಈ ದೃಷ್ಟಿಯಿಂದ, ಏಕೀಕರಣಕ್ಕೆ ಬಹುಪೂರ್ವದಲ್ಲಿಯೇ ನಾನು ಆಡಿದ್ದ ಈ ಮಾತುಗಳನ್ನೂ ಸ್ಮೃತಿಗೆ ತಂದುಕೊಳ್ಳಬಹುದು: "ರಾಜಕೀಯ ದೃಷ್ಟಿಯಿಂದ ಭೌಗೋಳಿಕ ಕರ್ನಾಟಕವು ಹರಿದುಹಂಚಿಹೋಗಿದ್ದರೂ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಇವುಗಳ ದೃಷ್ಟಿಯಿಂದ ಕನ್ನಡನಾಡಿನ ನಿಜಬೆಸುಗೆ ಇನ್ನೂ ಬಿಚ್ಚಿ ಬಿರಿದಿಲ್ಲ. ಕನ್ನಡ ನೆಲವು ನಾಲ್ಕಾರು ಸರಕಾರಗಳ ಬೇರೆ ಬೇರೆ ಆಧಿಪತ್ಯಕ್ಕೆ ಈಡಾಗಿ ಬಿರಿದಿದ್ದರೂ ಕನ್ನಡಿಗರ ಒಲವು ಏಕಚ್ಛತ್ರಾಶ್ರಯದಲ್ಲಿದೆ. ಕರ್ಣಾಟಕಕ್ಕೆ ಅಖಂಡವಾದ ಭೂ ಸಾಮ್ರಾಜ್ಯವಿನ್ನೂ ಸಿದ್ಧವಾಗದಿದ್ದರೂ ಸಾಹಿತ್ಯ ಸಾಮ್ರಾಜ್ಯವೇನೋ ಸಿದ್ಧವಾಗಿದೆ. ಎಲ್ಲಿಯವರೆಗೆ ಕನ್ನಡಿಗರೆಲ್ಲರೂ, ಅವರು ಎಲ್ಲಿಯೆ ಇರಲಿ, ಪಂಪ, ರನ್ನ, ನಾಗವರ್ಮ, ರಾಘವಾಂಕ, ನಾರಣಪ್ಪ, ಲಕ್ಷ್ಮೀಶ ಮೊದಲಾದ ಕವಿವರ‍್ಯರ ಸಾಹಿತ್ಯ ಸಿಂಹಾಸನಕ್ಕೆ ತಲೆಬಾಗುತ್ತಾರೊ ಅಲ್ಲಿಯವರೆಗೆ ಕನ್ನಡ ಸಾಮ್ರಾಜ್ಯಕ್ಕೆ ಚ್ಯುತಿಯಿಲ್ಲ. ನುಡಿಯೊಲ್ಮೆಯೊಂದಿದ್ದರೆ ದೇಶ ದೇವಿಯ ಗುಡಿಯ ಕಟ್ಟಡದ ಕಲ್ಲುಗಳ ಬೆಸುಗೆಗೆ ವಜ್ರಗಾರೆಯಾಗುತ್ತದೆ. ಆ ಒಲ್ಮೆ ಮಡಿದಂದು ಕಟ್ಟಡದ ಕಲ್ಲುಗಳು ಸಡಿಲಗೊಂಡು ಗುಡಿಕೆಳಕ್ಕುರುಳಿ ನೆಲಸಮವಾಗುತ್ತದೆ...... ಕೃತಕವಾದ ರಾಜಕೀಯ ವಿಭಜನೆ ನೈಜವಾದ ಸಂಸ್ಕೃತಿಯ ಏಕತೆಯನ್ನು ಎಂದಿಗೂ ಶಾಶ್ವತವಾಗಿ ನಾಶಮಾಡಲಾರದು. ಇಂದಲ್ಲ ನಾಳೆ ನೈಜಕ್ಕೆ ಜಯವಿದೆ, ಕೃತಕಕ್ಕೆ ಪತನವಿದೆ. ಆದ್ದರಿಂದ ವಿವಿಧ ರಾಜಕೀಯ ವಿಭಾಗಗಳಲ್ಲಿ ಹರಿಹಂಚಿಹೋದ ಕರ್ನಾಟಕದ ಉದಾರ ಹೃದಯದ ಜನರಲ್ಲಿ ನುಡಿಯೊಲ್ಮೆಯ ಕಿಡಿ ಕೆಡದಂತೆ ನಿರಂತರವೂ ಸಾವೇಶ ಪ್ರೋತ್ಸಾಹವೀಯಬೇಕಾದುದು ಕರ್ನಾಟಕದ ಪುನರುತ್ಥಾನಕ್ಕಾಗಿ ದುಡಿಯಲು ದೀಕ್ಷೆಗೊಂಡ ತಪಸ್ವಗಳೆಲ್ಲರ ಕರ್ತವ್ಯ. ಏಕೆಂದರೆ, ನುಡಿ ಬಿಟ್ಟರೆ ನಾಡು ಬಿಟ್ಟಂತೆ. ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ. ಅನಿವಾರ್ಯ ಈ ನುಡಿ ಇಂದಿಗೂ, ಎಂದಿಗೂ ಸತ್ಯಸ್ಯ ಸತ್ಯ.
ಶ್ರೀ ಸಿದ್ಧವನಹಳ್ಳಿ ನಿಜಲಿಂಗಪ್ಪನವರು ವಿಶಾಲ ಕರ್ಣಾಟಕದ ಮುಖ್ಯ ಮಂತ್ರಿಗಳಾಗುವುದಕ್ಕೆ ಮುನ್ನ ಅವರನ್ನೊಮ್ಮೆ ಸಂಧಿಸಿದ್ದೆ. ಅವರು ಕರ್ಣಾಟಕ ಏಕೀಕರಣಕ್ಕೆ ಇಂಬು ಬೆಂಬಲಗಳನ್ನು ಕೊಟ್ಟ ಪ್ರಮುಖರಲ್ಲಿ ಒಬ್ಬರು. ಮುಖ್ಯ ಮಂತ್ರಿಗಳಾದ ಮೇಲೆ ನೀವು ನಾಲ್ಕು ಮಹಾಕಾರ್ಯಗಳನ್ನು ಸಾಧಿಸಬೇಕೆಂದು ಅವರಿಗೆ ಹೇಳಿದ್ದೆ:
೧) ಕರ್ಣಾಟಕಕ್ಕೆ ರಾಜ್ಯಪಾಲರನ್ನು ನೇಮಕ ಮಾಡುವಾಗ ರಾಜ್ಯಾಂಗದ ಪ್ರಕಾರ, ಪ್ರಜಾಪ್ರಭುತ್ವದ ತತ್ತ್ವಕ್ಕನುಗುಣವಾಗಿ ಮಾಡಬೇಕು.
೨) ರಾಜ್ಯಕ್ಕೆ ’ಕರ್ಣಾಟಕ’ ಎಂದು ನಾಮಕರಣ ಮಾಡಬೇಕು.
೩) ರಾಜ್ಯದ ಅಧಿಕೃತ ಭಾಷೆಯಾಗಿ ಕನ್ನಡವನ್ನು ಜಾರಿಗೆ ತರಬೇಕು.
೪) ವಿದ್ಯಾಭ್ಯಾಸದ ಎಲ್ಲ ಹಂತಗಳಲ್ಲೂ ಕನ್ನಡ ಮಾಧ್ಯಮವಾಗಬೇಕು. ಇವುಗಳಲ್ಲಿ ಎರಡು ಅಭೀಷ್ಟಗಳು ಈಡೇರಿದುವು: ರಾಜ್ಯಪಾಲರನ್ನು ಪ್ರಜಾಸತ್ತೆಗೆ ಅನುಸಾರವಾಗಿ ನೇಮಕ ಮಾಡಲಾಯಿತು; ಕನ್ನಡವನ್ನು ಆಡಳಿತ ಭಾಷೆಯೆಂದು ಅಧಿಕೃತವಾಗಿ ಘೋಷಿಸಲಾಯಿತು. ಕನ್ನಡ ಮಾಧ್ಯಮಕ್ಕೂ ಶ್ರೀ ನಿಜಲಿಂಗಪ್ಪನವರು ಬೆಂಬಲ ಪ್ರೋತ್ಸಾಹಗಳನ್ನು ನೀಡಿದರು. ನಾನಂತೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಯಾಗಿ ಸರ್ವಾಧಿಕಾರ ಮನೋಭಾವದಿಂದಲೇ ಕನ್ನಡ ಮಾಧ್ಯಮವನ್ನು ಅನುಷ್ಠಾನಕ್ಕೆ ತಂದೆ. ಒಮ್ಮೆ ಸೆನೆಟ್ ಸಭೆಯಲ್ಲಿ ಹೇಳಿದ್ದುಂಟು: "ಕನ್ನಡದ ವಿಷಯದಲ್ಲಿ ನಾನು ಟ್ಯಾಂಕಿನಂತೆ ಮುನ್ನುಗ್ಗುತ್ತೇನೆ; ನೀವು ದಾರಿಬಿಟ್ಟುಕೊಟ್ಟಿರೋ ಸರಿ, ಇಲ್ಲವೋ ಅಪ್ಪಚ್ಚಿಯಾಗುತ್ತೀರಿ!"
ಇಷ್ಟೆಲ್ಲ ಆದರೂ, ಶ್ರೀ ನಿಜಲಿಂಗಪ್ಪನವರ ಸರ್ಕಾರವಾಗಲಿ ಶ್ರೀ ವೀರೇಂದ್ರ ಪಾಟೀಲರ ಸರ್ಕಾರವಾಗಲಿ ರಾಜ್ಯಕ್ಕೆ ’ಕರ್ನಾಟಕ’ವೆಂದು ಹೆಸರಿಡಬೇಕೆಂಬ ಆಸೆ ಉತ್ಕಟವಾಗಿದ್ದರೂ ತಮ್ಮ ಸರ್ಕಾರ ಉರುಳಿ ಹೋದೀತೆಂಬ ಭೀತಿಯಿಂದ ಅವರು ಹಾಗೆ ಮಾಡಲಿಲ್ಲಷ್ಟೆ.
ಆಗ ಅಸಾಧ್ಯವಾಗಿದ್ದುದು ಈಗ ವಿಘ್ನಪರಂಪರೆಯನ್ನು ದಾಟಿ, ಭರತಖಂಡದ ಸದ್ಯೋಜಾತ ಕ್ರಾಂತಿಕಾರಕ ಪರಿವರ್ತನೆಯ ಕಾವಿನಲ್ಲಿ ಸುಸಾಧ್ಯವಾಗಿದೆ. ಬಂಡವಾಳಗಾರಿಕೆ, ಪಟ್ಟಭದ್ರಹಿತಗಳಿಗೆ ಪರಾಭವವೊದಗಿ, ಪ್ರಜಾಪ್ರಭುತ್ವ ಹಾಗೂ ಸಮಾಜವಾದಿ ಶಕ್ತಿಗಳು ಗೆದ್ದು ಆ ಪಕ್ಷ ಎಲ್ಲ ರಾಜ್ಯಗಳಲ್ಲೂ ತನ್ನ ಸರ್ಕಾರವನ್ನು ಸ್ಥಾಪಿಸಿದ ಮೇಲೆ, ’ಮೈಸೂರು’ ಎಂಬ ಹೆಸರನ್ನು ಬಿಟ್ಟುಕೊಡಲು ಕೆಲವರಿಗೆ ಇಷ್ಟವಿಲ್ಲದಿದ್ದರೂ ಜನಮನದ ಪ್ರಚಂಡಶಕ್ತಿಗೆ ಮಣಿದು ’ಕರ್ಣಾಟಕ’ವೆಂಬ ಹೆಸರನ್ನು ಎಲ್ಲರೂ ಒಮ್ಮತದಿಂದ ಒಕ್ಕೊರಲಿನಿಂದ ಅಂಗೀಕರಿಸಿದರು. ನಾಮಪರಿವರ್ತನೆಗೆ ಹಿಂದೆ ಬದ್ಧವೈರಿಗಳಾಗಿದ್ದವರಿಂದಲೇ ಈಗ ಆ ಕೆಲಸವಾದುದು ಒಂದು ದೈವೀ ಪವಾಡವೆ ಸರಿ.
’ಕರ್ಣಾಟಕ’ ನಾಮಕರಣಕ್ಕಾಗಿ ಹಾರೈಸಿದವರು, ಹೋರಾಡಿ ದುಡಿದವರು ರಾಜಕಾರಣಿಗಳಿಗಿಂತ ವಿಶೇಷವಾಗಿ ಕವಿಗಳು ಮತ್ತು ಸಾಹಿತಿಗಳು. ಕರ್ಣಾಟಕತ್ವ ಮುಖ್ಯವಾಗಿ ಅವರ ವಿಜಯವಾಗಿದೆ. ’ಕರ್ಣಾಟಕ’ ಎಂಬ ಹೆಸರನ್ನಾಗಲಿ ಏಕೀಕರಣವನ್ನಾಗಲಿ ನಾವು ಸಾಹಿತಿಗಳು ಬಯಸಿದ್ದು ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಶ್ರೇಯೋಭ್ಯುದಯಗಳ ದೃಷ್ಟಿಯಿಂದಲೆ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ. ಆದರೆ ಏಕೀಕರಣವನ್ನು ರಾಜಕಾರಣ ಪಟುಗಳು ತಮ್ಮ ಉತ್ಕರ್ಷಕ್ಕೆ ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೆಂಬುದು ದುರದೃಷ್ಟಕರ ಸಂಗತಿ.
ಈ ’ಕರ್ಣಾಟಕ’ ನಾಮಕರಣದ ಮಹತ್ತರ ಪವಿತ್ರ ಕಾರ್ಯ ಶ್ರೀ ದೇವರಾಜ ಅರಸು ಅವರ ಮುಖ್ಯಮಂತ್ರಿತ್ವದಲ್ಲಿ ನೆರವೇರಿದೆ. ಇದಕ್ಕಾಗಿ ಅವರು ಅತ್ಯಂತ ಅಭಿನಂದನಾರ್ಹರಾಗಿದ್ದಾರೆ. ಆದರೆ ಪೂರ್ಣದೃಷ್ಟಿಯಿಂದ ನೋಡಿದಾಗ, ಇವರು ನಿಮಿತ್ತವಷ್ಟೇ. ಎಷ್ಟೋ ಮಂದಿ ಸಾಹಿತಿಗಳು, ಕವಿಗಳು, ರಾಜಕಾರಣಿಗಳು, ಮಂತ್ರಿಗಳು-ಇವರಲ್ಲಿ ಅನೇಕರು ಈಗ ದಿವಂಗತರಾಗಿದ್ದಾರೆ-ಎಲ್ಲರೂ ಇದಕ್ಕಾಗಿ ಪಟ್ಟು ಹಿಡಿದು ಪ್ರಯತ್ನಿಸಿ ಒಂದೊಂದೇ ಉಳಿಪೆಟ್ಟು ಹಾಕಿ ಈ ಪೂರ್ಣ ವಿಗ್ರಹ ಸಿದ್ಧವಾಲು ನೆರವಾಗಿದ್ದಾರೆಂಬುದನ್ನು ಮರೆಯುವಂತಿಲ್ಲ. "ಹೆಸರಿನಲ್ಲೇನಿದೆ?" ಎಂದು ಯಾರಾದರೂ ಕೇಳಬಹುದು. ನಾನು ಹೇಳುತ್ತೇನೆ, "ಹೆಸರಿನಲ್ಲಿ ಎಲ್ಲವೂ ಇದೆ" ಎಂದು. "ಇಟ್ಟ ಹೆಸರು ಕೊಟ್ಟ ಮಂತ್ರ ಎಂದೊಮ್ಮೆ ’ಮಾನಸಗಂಗೋತ್ರಿಯನ್ನು ಪ್ರಾರಂಭಿಸುವಾಗ ಹೇಳಿದ್ದೆ; ಅದು ಇಲ್ಲಿಯೂ ಸತ್ಯ. ’ಕರ್ಣಾಟಕ’ ಎಂಬುದು ಅಧಿಕೃತವಾಗಿ ಜಾರಿಗೆ ಬಂದ ಮೇಲೆ ಗೊತ್ತಾಗುತ್ತದೆ. ಅದರಿಂದ ಎಂಥ ಭಾವೈಕ್ಯ ಸಾಧಿತವಾಗುತ್ತದೆ, ಅದು ಎಂತಹ ಅದ್ಭುತ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬುದು.
ಹೆಸರೇನೋ ಬಂತು. ಆದರೆ ಇನ್ನೂ ಸಾಧಿತವಾಗಬೇಕಾದ ಒಂದೆರಡು ಬಹಳ ಮುಖ್ಯವಾದ ಕಾರ್ಯಗಳಿವೆ:
೧) ರಾಜ್ಯಮಟ್ಟದಲ್ಲಿ ಅಧಿಕೃತ ಭಾಷೆಯಾಗಿ ಕನ್ನಡ ಜಾರಿಗೆ ಬರಬೇಕು.
೨) ಕರ್ಣಾಟಕದ ಹೊರಗೆ ಉಳಿದಿರುವ ನಿಜವಾದ ಕನ್ನಡ ಪ್ರದೇಶಗಳು ಮಾತ್ರ ರಾಜ್ಯದಲ್ಲಿ ವಿಲೀನಗೊಂಡು, ಅಲ್ಲಿನ ಜನಗಳ ಹಾರೈಕೆ ಹಂಬಲಗಳು ಸಫಲವಾಗಬೇಕು.
೩) ವಿದ್ಯಾಭ್ಯಾಸದ ಎಲ್ಲ ಸ್ತರಗಳಲ್ಲಿಯೂ ಕನ್ನಡ ಪ್ರಥಮ ಭಾಷೆಯೂ ಶಿಕ್ಷಣ ಮಾಧ್ಯಮವೂ ಆಗಬೇಕು. ಜನತೆಯ ಆಶೋತ್ತರಗಳ ಆಧ್ಯಾತ್ಮಿಕ ಪ್ರತಿನಿಧಿಯಾದ ಕವಿ ಲೌಕಿಕ ಪ್ರತಿನಿಧಿಗಳಾದ ಶಾಸಕರಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸುವ ಒತ್ತಾಯಪೂರ್ವಕವಾದ ಬೇಡಿಕೆಯಿದು. ಜನ ಬಯಸುವ ಈ ಕೆಲಸಗಳು ಎಂದಾದರೂ ಆಗಿಯೇ ತೀರುತ್ತವೆ; ಕಾರಣಮಾತ್ರರಾಗಿ ನೀವೇ ಆ ಪುಣ್ಯಕ್ಕೆ ಭಾಜನರಾಗಿ ಎಂದು ನಾನು ಸಂಬಂಧಪಟ್ಟವರಿಗೆಲ್ಲ ಸೂಚಿಸುತ್ತೇನೆ.
ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎಂಬುದನ್ನು ನಾನು ಪದೇ ಪದೇ ಒತ್ತಿ ಹೇಳುತ್ತ ಬಂದಿದ್ದೇನೆ; ಹಾಗೆ ಹೇಳುವ ಯಾವ ಅವಕಾಶವನ್ನೂ ಕಳೆದುಕೊಂಡಿಲ್ಲ. ದೇಹಪೋಷಣೆಗೆ ಪ್ರತಿನಿತ್ಯವೂ ಅನ್ನ ಹೇಗೆ ಅವಶ್ಯವೋ ಶ್ರೇಯಸ್ಕರವಾದ ವಿಚಾರಗಳೂ ಹಾಗೆಯೆ ಅವಶ್ಯ; ಅವು ಎಷ್ಟು ಸಲ ಉಕ್ತವಾದರೂ ಹಳೆಯವಾಗುವುದಿಲ್ಲ. ರೋಗನಿವಾರಣೆಯಾಗುವ ತನಕವೂ ಮದ್ದುಕೊಡುತ್ತಲೇ ಇರಬೇಕು; ಚರ್ವಿತಚರ್ವಣವೆಂದು ಅದನ್ನು ನಿಲ್ಲಿಸುವಂತಿಲ್ಲ.
ಇಂಗ್ಲಿಷ್ ಮಾಧ್ಯಮ ಭರತಖಂಡದಲ್ಲಿ ಎಂತಹ ದುರಂತ ಪರಿಣಾಮಗಳನ್ನುಂಟು ಮಾಡಿದೆ ಎಂಬುದನ್ನು, ದೇಶಭಾಷಾ ಮಾಧ್ಯಮ ಹೇಗೆ ತಾರಕವಾಗಬಲ್ಲದೆಂಬುದನ್ನು ಪೂಜ್ಯ ಮಹಾತ್ಮಾ ಗಾಂಧಿಯವರು ತಮ್ಮ ಅಸ್ಖಲಿತವಾದ ಜ್ಯೋತಿರ್ವಾಣಿಯಿಂದ ಘೋಷಿಸಿದ್ದಾರೆ. ಆ ನಿಲುವನ್ನು ಎಲ್ಲ ಶಿಕ್ಷಣತಜ್ಞರೂ ನಿಸ್ಸಂದಿಗ್ಧವಾಗಿ ಎತ್ತಿ ಹಿಡಿದಿದ್ದಾರೆ. ಇಷ್ಟಾದರೂ ಇಂಗ್ಲೀಷ್ ಮಾಧ್ಯಮವನ್ನುಳಿಸಿ ಕೊಳ್ಳಬೇಕೆಂಬುದು ಪಟ್ಟಭದ್ರಹಿತಾಸಕ್ತಿಗಳ ಹತಾಶ ಪ್ರಯತ್ನವಾಗಿದೆ. ಇಂಗ್ಲಿಷ್ ಬೇಡವೆಂದಲ್ಲ; ಯಾರಿಗೆ ಬೇಕು, ಎಷ್ಟು ಬೇಕು ಎಂಬುದು ಮುಖ್ಯವಾದ ಪ್ರಶ್ನೆ. ಕೇವಲ ಹಿಡಿ ಮಂದಿಯ ಸುಖಸ್ವಾರ್ಥಗಳಿಗಾಗಿ ಇಂಗ್ಲೀಷಿನ ವದ್ಯಪೀಠದ ಮೇಲೆ ಕೋಟ್ಯಂತರ ಜನತೆಯ ಕಲ್ಯಾಣದ ಮಾರಣ ಹೋಮವಾಗುತ್ತಿರುವುದು ಪ್ರಜಾಪ್ರಭುತ್ವ ತತ್ತ್ವದ ಬುಡಕ್ಕೇ ಕುಠಾರಪ್ರಾಯವಾಗಿದೆ.
ಪ್ರತಿಯೊಬ್ಬರಿಗೂ ಬರಿಯ ಅನ್ನ ಬಟ್ಟೆಗಳನ್ನೊದಗಿಸುವಷ್ಟರಲ್ಲೇ ಪರ‍್ಯವಸಾನವಾಗುವುದಿಲ್ಲ, ಸಮಾಜವಾದ ಮತ್ತು ಸರ್ವೋದಯ. ಸಮಷ್ಟಿ ಜೀವನಕ್ಕೆ ಎಲ್ಲ ಭೂಮಿಕೆಗಳಲ್ಲೂ ವಿಕಾಸ ತುಷ್ಟಿಪುಷ್ಟಿಗಳ ಅವಕಾಶವನ್ನೊದಗಿಸಬೇಕು. ದೇಶಭಾಷಾ ಮಾಧ್ಯಮವೆ ಅದಕ್ಕೆ ಏಕೈಕ ಸಾಧನ. ಇಂಗ್ಲೀಷ್ ಮಾಧ್ಯಮ ಸರ್ವೋದಯಕ್ಕೆ ಹಿಡಿದ ಶನಿಯಾಗಿದೆ, ಬಡಿದ ಅಶನಿಯಾಗಿದೆ. ಕನ್ನಡ ಮಾಧ್ಯಮ ಸಂಪೂರ್ಣವಾಗಿ ಯಶಸ್ವಿಯಾಗಿ ಪ್ರತಿಷ್ಠಾಪಿತವಾಗುವ ತನಕ ಕನ್ನಡಿಗರಿಗೆ ಉದ್ದಾರವಿಲ್ಲ, ಮೋಕ್ಷವಿಲ್ಲ, ಇಂಗ್ಲೀಷಿನ ಮೂಲಕ ಪಡೆಯುವ ಶಿಕ್ಷಣ ಗಾಳಿಗೋಪುರವಲ್ಲದೆ ಮತ್ತೇನೂ ಆಗಲಾರದು. ಪಠ್ಯಪುಸ್ತಕಗಳ ಅಭಾವ, ಪಾರಿಭಾಷಿಕ ಶಬ್ದಗಳ ಕೊರತೆ, ವೈಜ್ಞಾನಿಕ-ತಾಂತ್ರಿಕ ವಿಚಾರಗಳನ್ನು ಬೋಧಿಸುವಲ್ಲಿ ಕನ್ನಡದ ಅಸಾಮರ್ಥ್ಯ ಮುಂತಾದ ನೆಪಗಳನ್ನು ಮೇಲಿಂದ ಮೇಲೆ ಒಡ್ಡುವ ಕಿಸುಬಾಯಿದಾಸರ ವಾದಕ್ಕೆ ಬಾಲಿಶಜಲ್ಪ ಅಥವಾ ತಲೆಹರಟೆಗಿಂತ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲ. ಕನ್ನಡದ ಶ್ರೀಮಂತಿಕೆಯನ್ನೇ ಅರಿಯದ ಮಂದಪ್ರಜ್ಞರವರು.
ಇತ್ತೀಚೆಗೆ ಬಹಳ ಕೇಳಿಬರುತ್ತಿರುವ ತ್ರಿಭಾಷಾ ಸೂತ್ರದ ವಿಷಯದಲ್ಲಿ ಆಳುವ ಕಾಂಗ್ರೆಸ್ ಪಕ್ಷಕ್ಕೆ ನನ್ನದೊಂದು ಸವಿನಯ ಸೂಚನೆ. ಸಾಮಾನ್ಯವಾಗಿ ಮಂತ್ರಿಗಳೆಲ್ಲ ತ್ರಿಭಾಷಾ ಸೂತ್ರವನ್ನು ನಿಶ್ಶಂಕೆಯಿಂದ ಸಾರುತ್ತಾರೆ; ಅದರ ಅಪಾಯಗಳನ್ನು ಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ನಾವು ಹಗಲುಗುರುಡರಾಗಿ ವರ್ತಿಸಬಾರದು. ತ್ರಿಭಾಷಾ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೆ ಆಗಿದೆ. ಈ ಆತಂಕಕ್ಕೆ ಕವಿವಾಣಿ ಹೀಗೆ ಅಭಿವ್ಯಕ್ತಿ ಕೊಟ್ಟಿದೆ:
ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ;
ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ!
ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ!
ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲೀಷುಗಳು ಬಲಾತ್ಕಾರ ಭಾಷೆಗಳಾಗುತ್ತದೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು. ಎಲ್ಲರಿಗೂ ಎಲ್ಲ ಭಾಷೆಗಳೂ ಏತಕ್ಕೆ ಬೇಕು? ಪ್ರತಿಯೊಬ್ಬರು ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ? ಭರತ ಖಂಡಕ್ಕೀಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾದುದು ಇಂಗ್ಲಿಷನ್ನು ಮಾತ್ರವಲ್ಲ, ವೈಜ್ಞಾನಿಕ ಅವಶ್ಯಕತೆಗಳಿಗಾಗಿ ರಷ್ಯನ್, ಜರ್ಮನ್ ಮುಂತಾದ ಭಾಷೆಗಳನ್ನು ಕೂಡ.
ಆದ್ದರಿಂದ ನನ್ನ ವಾದ ಇಷ್ಟು: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ದ್ವಿಭಾಷಾ ಸೂತ್ರ; ’ಬಹುಭಾಷೆಗಳಲ್ಲಿ ದ್ವಿಭಾಷೆ’ ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು. ತಮ್ಮ ಅವಶ್ಯಕತೆಗೆ, ಸಾಮರ್ಥ್ಯಕ್ಕೆ ತಕ್ಕಂತೆ ಅವರೇ ನಿರ್ಧರಿಸಿಕೊಳ್ಳಲಿ. ಇದರಿಂದ ಬಲಾತ್ಕಾರದ ಅಂಶ ತೊಲಗುತ್ತದೆ.
ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ ’ಬಹುಭಾಷೆಗಳಲ್ಲಿ ದ್ವಿಭಾಷಾ’ ಸೂತ್ರ ತ್ರಿಭಾಷಾ ಸೂತ್ರಕ್ಕಿಂತ ಪರಿಣಾಮಕಾರಿಯಾಗಿ, ಎಲ್ಲ ಪ್ರದೇಶಗಳಿಗೂ ಸಮಾಧಾನವೊದಗಿಸಿ, ಸ್ವಭಾಷಾಭಿಮಾನ ಜನ್ಯವಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.
ಇಂಗ್ಲಿಷಿನ ಸ್ಥಾನದಲ್ಲಿ ಹಿಂದಿಯನ್ನು ತಂದು ಕೂರಿಸಬೇಕೆಂಬುದು ಹಿಂದಿವಾದಿಗಳ ಸಂಚು. ಇದನ್ನು ಕನ್ನಡಿಗರ ಪ್ರತಿಭಟನೆ ವಿಫಲಗೊಳಿಸಬೇಕು. ಕೇಂದ್ರ ಸರ್ಕಾರವನ್ನು ಮೆಚ್ಚಿಸುವುದಕ್ಕಾಗಿ ರಾಜ್ಯಸರ್ಕಾರ ಹಿಂದಿ ವಿಶ್ವವಿದ್ಯಾನಿಲಯ ಸ್ಥಾಪನೆಯೇ ಮುಂತಾದ ಅವಿವೇಕದ ಕಾರ್ಯಗಳಿಗೆ ಕೈ ಹಾಕಿ ಕನ್ನಡಿಗರ ಹಿತವನ್ನು ಬಲಿಕೊಡಬಾರದು. ಈ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಎಚ್ಚರಬೇಕು ಒಂದು ಕ್ಷಣ ಕಣ್ಣು ಮುಚ್ಚಿಕೊಳ್ಳುವ ತಪ್ಪಿಗೆ ಯುಗ ಯುಗಗಳ ಅಂಧಕಾರ ಫಲವನ್ನು ಅನುಭವಿಸಬೇಕಾದೀತು.
ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ. ಶೇಕಡ ಒಂದರಷ್ಟು ಜನಕ್ಕೆ ಅರ್ಧಮರ್ಧ ಇಂಗ್ಲಿಷ್ ಕಲಿಸಿ ಬ್ರಿಟಿಷರು ಇನ್ನೂರು ವರ್ಷಕ್ಕೂ ಮೇಲೆ ಸಮರ್ಥವಾಗಿ ರಾಜ್ಯಭಾರ ನಡೆಸಲಿಲ್ಲವೆ?
ಕಡೆಯದಾಗಿ ಕವಿಯ ಕಳಕಳಿಯ ಮೊರೆ ಇದು: "ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಅಧ್ಯಾಪಕ ಮಹಾಶಯ, ಓ ನೇಗಿಲಯೋಗಿ, ನೀನು ಯಾರೆ ಆಗಿರು, ಎಲ್ಲಿಯೆ ಇರು, ಕನ್ನಡವನ್ನು ಕೈಬಿಡದಿರು... ಇದು ನಿನ್ನ ಭಾಷೆ; ಇದು ದೇಶ ಭಾಷೆ; ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ; ಇದು ಮಹಾ ಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರರನ್ನೂ ರಸಋಷಿ ದಾರ್ಶಕರಿನ್ನೂ ಹಡೆದಿರುವ ಭಾಷೆ.... ನಿನ್ನ ತಾಯಿ ರಾಣಿಯಾಗಿದ್ದಳೆಂಬುದನ್ನು ಮರೆತು ಬಿಡುವೆಯ? ಸ್ವತಂತ್ರನಾದ ಮೇಲೆಯೂ ಆಕೆಯನ್ನು ತೊತ್ತಾಗಿರಿಸುವೆಯ?"
ಪ್ರತಿಯೊಬ್ಬ ಕನ್ನಡಿಗನಿಗೂ ಕವಿ ಕೊಡುವ ದೀಕ್ಷೆ ಇದು; ಕನ್ನಡಕ್ಕಾಗಿ ಕೈಯೆತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ ಸಾಕು, ಇಂದು ಅದೇ ಗೋವರ್ಧನ ಗಿರಿಧಾರೆಯಾಗುತ್ತದೆ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
ಜಯ್ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ,
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯರಾಮ:
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ,
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ:
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ಣಾಟಕ ಮಾತೆ!
[ಈ ಲೇಖನ ಕುವೆಂಪುರವರ ಸೂಚನೆ ಮೇರೆಗೆ ಸಿ.ಪಿ.ಕೆ.ಯವರೇ ಮೈಸೂರು ದಸರಾ ಸ್ಮರಣಾ ಸಂಚಿಕೆಗಾಗಿ ಸಿದ್ದಪಡಿಸಿದ್ದು. ಇಲ್ಲಿ ಇರುವ ನಾಡಗೀತೆಯ ಆವೃತ್ತಿಯನ್ನು ಪರಿಷ್ಕರಿಸದೆ ಉಳಿಸಿಕೊಂಡಿರುವುದು ಚಾರಿತ್ರಿಕ ದಾಖಲೆಯಾಗಿಯೇ ಹೊರತು ಅದು ನಾಡಗೀತೆಯ ಅಧಿಕೃತ ಆವೃತ್ತಿ ಎಂದಲ್ಲ. ಈ ಕುರಿತು ಶ್ರೀ ಸಿಪಿಕೆಯವರು ಕೊಟ್ಟಿರುವ ವಿವರಣೆಯನ್ನು ಕೆಳಗೆ ಕೊಡಲಾಗಿದೆ.
"ವಿಚಾರಕ್ರಾಂತಿಗೆ ಆಹ್ವಾನದಲ್ಲಿರುವ ಈ ಲೇಖನ ವಾಸ್ತವವಾಗಿ ಕುವೆಂಪುರವರು ಸ್ವತಃ ಬರೆದದ್ದಲ್ಲ. (ಇದೊಂದು ಮಹತ್ವದ ಅಂಶ). ದಸರಾ ಸ್ಮರಣಾ ಸಂಚಿಕೆಗಾಗಿ ಅದರ ಸಂಪಾದಕರಾದ ಚದುರಂಗರು ಕುವೆಂಪು ಅವರಿಂದ ಕರ್ನಾಟಕದ ಬಗೆಗೆ ಲೇಖನ ಒಂದನ್ನು ಬಯಸಿದರು. ಆ ವೇಳೆಗೆ ಕುವೆಂಪುರವರು ಬರವಣಿಗೆ ನಿಲ್ಲಿಸಿದ್ದರು. ಆದ್ದರಿಂದ ನನಗೆ ಕೆಲವು ಸೂಚನೆಗಳನ್ನು ಕೊಟ್ಟು ಅವುಗಳನ್ನು ವಿಸ್ತರಿಸಿ ಲೇಖನವೊಂದನ್ನು ಸಿದ್ಧಪಡಿಸುವಂತೆ ನನಗೆ ಹೇಳಿದರು. ಅದರಂತೆ ನಾನು ಈ ಲೇಖನ ಬರೆದೆ.
ನಾನು ಬರೆದ ಲೇಖನ ಕುವೆಂಪುರವರು ಓದಿ, ಪ್ರಕಟಣೆಗೆ ಒಪ್ಪಿಗೆ ಕೊಟ್ಟರು. ಅದರ ಕಡೆಯಲ್ಲಿದ್ದ ನಾಡಗೀತೆಯನ್ನು ಸರಿಯಾಗಿ ಲಕ್ಷಿಸಲಿಲ್ಲವೆಂದು ತೋರುತ್ತದೆ. ಲಕ್ಷಿಸಿದ್ದರೆ ಅಥವಾ ಲೇಖನವನ್ನು ಅವರೇ ಸ್ವತಃ ಬರೆದಿದ್ದರೆ ಮಧ್ವರ ಹೆಸರನ್ನು ಅವು ಉಳಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ’ಮಧ್ವಾಚಾರ್ಯರದು ಜesಠಿiಛಿಚಿbಟe ಠಿhiಟosoಠಿhಥಿ, ಅದು ’ಫಿಲಾಸಫಿಯೇ ಅಲ್ಲ. ಪರಿಷತ್ತು ನಾಡಗೀತೆಗಾಗಿ ಬೇಕಾದರೆ ಸೇರಿಸಿಕೊಳ್ಳಲಿ. ನನ್ನ ಪುಸ್ತಕದಲ್ಲಿ ಅದು ಸೇರುವುದಿಲ್ಲ.’ ಎಂದು ಸ್ಪಷ್ಟವಾಗಿ ಹೇಳಿದ್ದನ್ನು ನಾನು ’ಮಹಾಕವಿಯೊಡನೆ ಮಾತುಕತೆ’ ಪುಸ್ತಕದಲ್ಲಿ ದಾಖಲಿಸಿದ್ದೇನೆ.
ಈಗ ವಿಷಯ ಇಷ್ಟೇ ಅವರ ಕೊಳಲು ಸಂಕಲನದಲ್ಲಿ ಪ್ರಕಟವಾಗಿರುವ ನಾಡಗೀತೆಯನ್ನು ಮಾತ್ರ ನಾವು ಅಧಿಕೃತ ಎಂದು ಭಾವಿಸಬೇಕು. ನಾಡಗೀತೆಯಲ್ಲಿ ಮಧ್ವರ ಹೆಸರಿನ ಸೇರ್ಪಡೆ ಕುವೆಂಪುರವರ ಆಶಯಕ್ಕೆ ನಿಶ್ಚಿತವಾಗಿಯೂ ವಿರುದ್ಧವಾದದ್ದು."]

ಕನ್ನಡ ಮೊದಲ ಸೂಫಿ ಕವಿ ಖಾದರಿ ಪೀರಾ



ರಂಜಾನ್ ದರ್ಗಾ

ಕನ್ನಡದ ಮೊದಲ ಸೂಫಿ ಕವಿ ಗುರು ಖಾದರಿಪೀರಾ (೧೮೨೨-೧೮೯೬) ಅವರು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಸಾಲಗುಂದಾ ಗ್ರಾಮದವರು. ಕನ್ನಡದ ಮೊದಲ ಮುಸ್ಲಿಂ ತತ್ತ್ವಪದಕಾರರಾದ ಗುಲಬರ್ಗಾ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಚೆನ್ನೂರು ಜಲಾಲಸಾಹೇಬರು ಇವರ ಹಿರಿಯ ಸಮಕಾಲೀನರು. (೧೭೭೦-೧೮೫೦) ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಜನಮನ ಸೂರೆಗೊಂಡ ತತ್ತ್ವಪದಕಾರ ಶಿಶುನಾಳ ಶರೀಫರು (೧೮೧೯-೧೮೮೯) ಇವರ ಸಮಕಾಲೀನರು. ಈ ಮೂವರು ಕನ್ನಡದಲ್ಲಿ ಬರೆದ ಮೊದಲ ಮುಸ್ಲಿಂ ಕವಿಗಳಾಗಿದ್ದಾರೆ.
ಚೆನ್ನೂರ ಜಲಾಲಸಾಹೇಬರ ಮೂರು ತತ್ತ್ವಪದಗಳು ಸಿಕ್ಕಿವೆ. ಹಿಂದುಗಳು ಮತ್ತು ಮುಸಲ್ಮಾನರನ್ನು ಅವರು ಭಾವೈಕ್ಯದ ಕಡೆಗೆ ಸೆಳೆದರು. ’ಮಾನವಕುಲದ ಮೂಲ ಒಂದೇ’ ಎಂದು ತಿಳಿಸಿದರು. ಸೂಫಿ ಇಸ್ಲಾಂ ತತ್ತ್ವ, ಶರಣರ ನಡೆ ನುಡಿ ಸಿದ್ಧಾಂತ ಮತ್ತು ಕಳಸದ ಗುರು ಗೋವಿಂದಭಟ್ಟರಿಂದ ಸಂಪಾ ದಿಸಿದ ಉಪನಿಷತ್ ಜ್ಞಾನದ ಮೂಲಕ ಶಿಶುನಾಳ ಶರೀಫರು ನಿರ್ಗುಣ ನಿರಾಕಾರ ಬ್ರಹ್ಮನೆನಿಸಿದ ಪರಮಾತ್ಮನನ್ನು ಅನುಭಾವಿಸಿದರು. ’ಬೋಧ ಒಂದೇ ಬ್ರಹ್ಮನಾದ ಒಂದೇ’ ಎಂದು ಸಾರಿದರು. ಗುರು ಖಾದರಿ ಪೀರಾ ಅವರು ಶರಣ ಮತ್ತು ಸೂಫಿ ತತ್ತ್ವದ ಮೂಲಕ ಅದ್ವೈತವನ್ನು ಸಾಧಿಸಿದರು. ’ಮಾನವಕುಲದ ಏಕತೆ ಮತ್ತು ಮಾನವರ ಒಳಗೇ ದೇವರಿದ್ದಾನೆ’ ಎಂಬುದರ ಕುರಿತು ಅವರು ಮನಮುಟ್ಟುವಂತೆ ಬರೆದ ೨೫೫ ತತ್ತ್ವಪದಗಳು ಸಿಕ್ಕಿವೆ. ಅವುಗಳಲ್ಲಿ ಕೆಲವೊಂದು ಉರ್ದು ಭಾಷೆಯಲ್ಲಿವೆ ಕೆಲವೊಂದು ಉರ್ದು ಮಿಶ್ರಿತ ಕನ್ನಡ ಭಾಷೆಯಲ್ಲಿವೆ. ಉಳಿದ ಬಹುಪಾಲು ತತ್ತ್ವಪದಗಳು ರಾಯಚೂರು ಭಾಗದ ಜನಪದ ಕನ್ನಡದಲ್ಲಿವೆ. ನಿಜಾಂ ಆಡಳಿತದಿಂದಾಗಿ ಅಂದಿನ ದಿನಗಳಲ್ಲಿ ಉರ್ದು ಭಾಷೆಯ ಪ್ರಭಾವವಿರುವ ಆ ಪ್ರದೇಶದಲ್ಲಿ ಈ ಸೂಫಿಸಂತ ಕನ್ನಡದಲ್ಲಿ ಬರೆದದ್ದು ಕನ್ನಡವನ್ನು ಕಡೆಗಣಿಸುವವರ ಕಣ್ಣುತೆರೆಸುವಂಥದ್ದಾಗಿದೆ.
ಈ ಮೂವರು ತತ್ತ್ವಪದಕಾರರ ಆಶಯ ಒಂದೇ ಆಗಿತ್ತು. ಆದರೆ ಗುರು ಖಾದರಿಪೀರಾ ಅವರು ಇಸ್ಲಾಂ ತತ್ತ್ವಗಳ ರಹಸ್ಯವನ್ನು ಭೇದಿಸಿ ಕನ್ನಡಿಗರಿಗೆ ಮಾನವ ಏಕತೆಯ ಮಹತ್ವವನ್ನು ತಿಳಿಸಿದ್ದು ವಿಶಿಷ್ಟವಾಗಿದೆ. ಅಹಂ ಬ್ರಹ್ಮಾಸ್ಮಿ (ನಾನೇ ದೇವರು) ಎಂದು ಶಂಕರಾಚಾರ್ಯರು ಹೇಳಿದರೆ. ’ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ ಎಂದು ಬಸವಣ್ಣನವರು ತಿಳಿಸಿದರು. ’ನಾನು ದೇವರಲ್ಲ ಆದರೆ ನನ್ನೊಳಗಿನ ದೇವರ ದಾಸ ನಾನು’ ಎಂಬದು ಇದರ ಅರ್ಥ. ಇದೇ ವಿಚಾರವನ್ನು ಪವಿತ್ರ ಕುರಾನ್ ತಿಳಿಸುತ್ತದೆ ಎಂಬುದನ್ನು ನಮಗೆ ತೋರಿಸಿಕೊಟ್ಟವರು ಮತ್ತು ಆ ಮೂಲಕ ಸೂಫಿಗಳ ಪ್ರೇಮತತ್ತ್ವವನ್ನು ಸಾರಿದವರು ಗುರು ಖಾದರಿಪೀರಾ ಅವರು.
"ವನಹನು ಅಕ್ರಬಮಿನ್ ಹಬ್‌ಲಿಲ್ ವರೀದ್ ಎಂಬ ಕುರಾನ್ ವಾಕ್ಯ ’ದೇವರು ಕಾಯದಲ್ಲಿ ಇದ್ದಾನೆ’ ಎಂಬ ಭಾವಾರ್ಥವನ್ನು ಕೊಡುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನೇ ಗುರು ಪೀರಾ ಅವರು ಕನ್ನಡದಲ್ಲಿ ಹೀಗೆ ಹೇಳಿದ್ದಾರೆ: "ನನ್ನ ಮನೆಯಲ್ಲಿ ಇದ್ದಾನೊ ನಲ್ಲಾ; ಇವನೇ ಅವನೆಂದು ತಿಳಿಯಲಿಲ್ಲಾ
ಗುರು ಖಾದರಿಪೀರಾ ಅವರು ಕನ್ನಡ, ಹಿಂದಿ, ಉರ್ದು, ಸಂಸ್ಕೃತ, ಪಾರ್ಸಿ ಮತ್ತು ಅರಬಿ ಭಾಷೆ ಮತ್ತು ಸಾಹಿತ್ಯದಲ್ಲಿ ಪರಿಣತರಾಗಿದ್ದರು. ಆದರೆ ಕನ್ನಡದಲ್ಲಿ ಸೂಫಿ ಸಿದ್ಧಾಂತವನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಬಹಳ ಆಸಕ್ತಿ ವಹಿಸಿದರು.
ಅನ ಅಲ್ ಹಖ್ (ನಾನೇ ಸತ್ಯ) ಎಂದು ಹೇಳಿದ ಇರಾನಿನ ಸೂಫಿ ಸಂತ ಮನಸೂರ್ ಅಲ್ ಹಲ್ಲಾಜ್ (೮೫೮-೯೨೨) ನನ್ನು ದೈವನಿಂದನೆಯ ಆರೋಪ ಹೊರಿಸಿ ಇರಾಕ್ ರಾಜಧಾನಿ ಬಗದಾದ್‌ನಲ್ಲಿ ಗಲ್ಲಿಗೇರಿಸಲಾಯಿತು. ’ಸತ್ಯ ಎಂಬುದು ಅಲ್ಲಾಹನ ೯೯ ಹೆಸರುಗಳಲ್ಲಿ ಒಂದಾಗಿರುವುದರಿಂದ ಮನಸೂರ್ ಹೇಳುವ ಸಾಲಿನ ಅರ್ಥ ’ನಾನೇ ದೇವರು’ ಎಂದು ಆಗುತ್ತದೆ ಎಂದು ಮೂಲಭೂತವಾದಿಗಳು ಪ್ರತಿಪಾದಿಸಿದರು. ಈ ಕಾರಣದಿಂದಲೇ ಅವನನ್ನು ಗಲ್ಲಿಗೇರಿಸಲಾಯಿತು. ಗುರು ಖಾದರಿಪೀರಾ ಕೂಡ ಇಂಥ ಪರಂಪರೆಗೆ ಸೇರಿದ ಸೂಫಿಸಂತ. ಈ ಹಿನ್ನೆಲೆಯಲ್ಲೇ ಅವರು ಇಸ್ಲಾಂ ತತ್ತ್ವಜ್ಞಾನವನ್ನು ವ್ಯಾಖ್ಯಾನಿsಸಿದರು.
ಒಬ್ಬನೇ ದೇವರು. ಆದರೆ ಮಾನವರೆಲ್ಲರಲ್ಲಿ ಆತ ಇರುವುದರಿಂದ ಎಲ್ಲರೂ ದೇವರು. ಎಲ್ಲರಲ್ಲಿ ದೇವರಿರುವುದರಿಂದ ಅವನನ್ನು ಸ್ವರ್ಗದಲ್ಲಿ, ಕಾಬಾ-ಕಾಶಿಯಲ್ಲಿ ಅಥವಾ ಮಂದಿರ-ಮಸೀದಿಗಳಲ್ಲಿ ಹುಡುಕಬೇಕಿಲ್ಲ. ಆತ ಇರುವುದು ದೇಹ ಎಂಬ ಮಂದಿರದೊಳಗೆ ಎಂಬುದು ಖಾದರಿಪೀರಾ ಅವರ ಅಚಲ ನಂಬಿಕೆಯಾಗಿತ್ತು. ಹೀಗೆ ಅವರ ಏಕದೇವೋಪಾಸನೆಯ ಪರಿಕಲ್ಪನೆ ಪ್ರತಿಯೊಬ್ಬ ಮಾನವನೊಳಗಿನ ಘನದ ಮೂಲಕ ಮಾನವನ ಘನತೆಯನ್ನು ಎತ್ತಿಹಿಡಿಯುವಂಥದ್ದಾಗಿದೆ.
ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮಗ್ರಂಥ ಕುರಾನ್ ಮತ್ತು ಮುಹಮ್ಮದ್ ಪೈಗಂಬರರ ವಚನಗಳಾದ ಹದೀಸ್ ಅನ್ನು ಅವರು ಕೂಲಂಕಷವಾಗಿ ಅಧ್ಯಯನ ಮಾಡಿದರು. ಆ ಮೂಲಕ ಇಸ್ಲಾಮಿನ ಮಾನವೀಯ ಪರಂಪರೆಯ ವಕ್ತಾರರಾದರು. ಆ ಮೂಲಕ ಸೂಫಿ ಜೀವಕಾರುಣ್ಯ ಮತ್ತು ಪ್ರೇಮತತ್ತ್ವವನ್ನು ತಮ್ಮ ತತ್ತ್ವಪದಗಳ ಮೂಲಕ ಸಾರಿದರು. ಶರಣರ ವಚನಗಳ ಅಧ್ಯಯನದೊಂದಿಗೆ ವೇದೋಪನಿಷತ್ತುಗಳ ಅಧ್ಯಯನವನ್ನೂ ಮಾಡಿದರು. ವೈದಿಕರ ಜಡ ವಿಚಾರಗಳನ್ನು ದೂರ ಸರಿಸಿ, ಮಾನವೀಯ ಚಿಂತನೆಗಳನ್ನು ಸ್ವೀಕರಿಸಿ, ಶರಣರ ತತ್ತ್ವಕ್ಕೆ ಮಾರುಹೋಗಿ ಸೂಫಿ ತತ್ತ್ವದ ಜೊತೆ ಸಮೀಕರಿಸಿದರು. ಸೂಫಿ, ಶರಣ, ಸಂತ ಮತ್ತು ದಾಸರ ತತ್ತ್ವಗಳೊಳಗಿನ ಜೀವಪರ ನಿಲವನ್ನು ಎತ್ತಿಹಿಡಿದ ಗುರು ಖಾದರಿಪೀರಾ ಅವರು ಈ ನಾಲ್ಕೂ ವಿಚಾರಧಾರೆಗಳನ್ನು ತತ್ತ್ವಪದಕಾರರಾಗಿ ಸ್ವೀಕರಿಸಿದ್ದಾರೆ. ಇವುಗಳ ಒಳತೋಟಿಯ ಪ್ರಜ್ಞೆಯೊಂದಿಗೆ ಅನೇಕ ಕಡೆಗಳಲ್ಲಿ ಇವುಗಳನ್ನು ಸಮಾನಾರ್ಥದಲ್ಲಿ ಬಳಸಿದ್ದಾರೆ. ಅಷ್ಟೇ ಅಲ್ಲದೆ ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ. ಹೀಗಾಗಿ ಅವರ ತತ್ತ್ವಪದಗಳು ಸೂಫಿ ಮತ್ತು ಶರಣ ತತ್ತ್ವಗಳ ಮಹಾಸಂಗಮವಾಗಿವೆ.
೧೯ನೇ ಶತಮಾನದ ಅಂತ್ಯದವರೆಗೆ ಕನ್ನಡಿಗರಿಗೆ ವಚನಗಳು ಪ್ರಕಟಿತ ಗ್ರಂಥರೂಪದಲ್ಲಿ ಲಭ್ಯವಿರಲಿಲ್ಲ. ವಚನಕಟ್ಟುಗಳು ಪೂಜೆಯ ವಸ್ತುಗಳಾಗಿ ಪರಿಣಮಿಸಿದ್ದವು. ಇಂಥ ಸ್ಥಿತಿಯಲ್ಲಿ ಗುರು ಖಾದರಿಪೀರಾ ಅವರು ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅವುಗಳಲ್ಲಿನ ತತ್ತ್ವ ಎಲ್ಲ ದೃಷ್ಟಿಯಿಂದಲೂ ಸೂಫಿತತ್ತ್ವಕ್ಕೆ ಸಮನಾಗಿದೆ ಎಂಬುದನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ತಾವೊಬ್ಬ ಬಸವಣ್ಣನ ಅನುಯಾಯಿಯಾಗಿದ್ದು ಬಸವಣ್ಣನೇ ತಮ್ಮ ಪ್ರಾಣ ಎಂದು ಸಾರಿದ್ದಾರೆ. ಅವರ ವಿಚಾರಗಳು ಮುಖ್ಯವಾಗಿ ಬಸವಣ್ಣನವರ ವಿಚಾರಗಳೊಂದಿಗೆ ಬಹಳಷ್ಟು ಸಾಮ್ಯತೆಯನ್ನು ಹೊಂದಿವೆ. ’ನಮ್ಮೊಳಗಿನ ಘನದ ಪೂಜೆ ಮಾತ್ರ ನಿಜವಾದ ಪೂಜೆ’ ಎಂಬುದು ಇವರಿಬ್ಬರ ನಿಲವಾಗಿದೆ.
"ಖಾದರಿಪೀರಾ ಅವರ ಪೂರ್ವಜರು ಪೈಗಂಬರರ ಅಳಿಯ ಹಜರತ್ ಅಲಿ ಅವರ ವಂಶಸ್ಥರು. ’೭೦೦ ವರ್ಷಗಳಷ್ಟು ಹಿಂದೆ ಇರಾಕ್ ರಾಜಧಾನಿ ಬಗದಾದ್‌ನಿಂದ ಖ್ಯಾತ ಸೂಫಿಸಂತ ಮಹಬೂಬೇ ಸುಬಹಾನಿ ಅವರ ಮೊಮ್ಮಗ ಸೈಯ್ಯದ್ ವಲಿ ಉಲ್ಲಾ ಷಾ ಖಾದರಿ ಅವರು ತಮ್ಮ ೧೩ನೇ ವಯಸ್ಸಿನಲ್ಲಿ ಒಂಟಿಯಾಗಿ ಭಾರತಕ್ಕೆ ಬಂದರು...
... .. ಸಾಲಗುಂದಾ ಗ್ರಾಮದಲ್ಲಿ ಸೈಯದ್ ಷಾ ಮೊಹಿಯುದ್ದೀನ್ ಖಾದರಿ ಮತ್ತು ಬಿಜಾಪುರದ ಸೂಫಿ ಹಾಷಂಪೀರ ಸಂತತಿಯ ಯೂಸುಫ್ ಹುಸೇನಿಯವರ ಪುತ್ರಿ ಸೈಯದಾ ಸೋಗರಾಬೀ ಸಾಹೇಬಬೀಬಿ ಪುಣ್ಯ ದಂಪತಿಗಳ ಉದರದಲ್ಲಿ ದಿನಾಂಕ ೧೧.೫.೧೮೨೨ ಸೋಮವಾರದಂದು ಆಲಾ ಹಜರತ್ ಇಮಾಮ್ ಸೈಯದ್ ಅಬ್ದುಲ್ ಖಾದಿರ್ ಖಾದರಿ ಹಸನಿ ಉಲ್ ಹುಸೈನಿ ಹಾಷಮಿ (ಗುರು ಖಾದರಿಪೀರಾ) ಅವರು ಜನಿಸಿದರು.. .. .. .. ಸಹಾನುಭೂತಿ, ಮಾನವತಾವಾದ, ಸರ್ವಧರ್ಮ ಸಮಾನತೆ ಮತ್ತು ಜಾತ್ಯತೀತತೆಯನ್ನು ಮೈಗೂಡಿಸಿಕೊಂಡ ಜ್ಞಾನಾಕಾಂಕ್ಷಿಗಳಾದ ಇವರು ತಂದೆಯವರಿಂದ ಖಿಲಾಪತ್ (ಜ್ಞಾನದೀಕ್ಷೆ) ಪಡೆದು ಗುರುಪೀಠವನ್ನು ಅಲಂಕರಿಸಿದರು.
.. .. ತಮ್ಮ ೨೨ನೇ ವಯಸ್ಸಿನಲ್ಲಿ ಬಿಜಾಪುರದ ಮಹಾನ್ ಸೂಫಿಯಾದ ಅಮೀನುದ್ದೀನ್ ಆಲಾ ಶೇರ್ ಏ ಖುದಾ ಬಿಜಾಪುರಿ ಅವರ ಸಂತತಿಯ ಅಸದುಲ್ಲಾ ಹುಸೈನಿಯವರ ಪುತ್ರಿ ಸೈಯದಾ ಬೀಬಿ ಜೈನಬ್ ಅವರ ಸಂಗಡ ಇವರ ವಿವಾಹ ನೆರವೇರಿತು...
.. .. ಉರ್ದು ಭಾಷೆಯಲ್ಲಿ ’ಫೈಜುಲ್ ಹೈದರಿಯಾ’, ಕನ್ನಡ ಭಾಷೆಯಲ್ಲಿ ’ಜ್ಞಾನಸಮುದ್ರ ಮತ್ತು ಹಿಂದಿ ಭಾಷೆಯಲ್ಲಿ ’ಸಾಕ್ಷಾತ್ಕಾರ’ ಎಂಬ ಪದ್ಯರೂಪದ ಮಹಾನ್ ಕೃತಿಗಳನ್ನು ರಚಿಸಿದರು. ಈ ಗ್ರಂಥಗಳಲ್ಲಿ ವ್ಯಕ್ತವಾದ ಎಲ್ಲಾ ಪದ್ಯಗಳ ಕೊನೆಯಲ್ಲಿ ಗುರುಪೀರಾ ಎಂಬ ಅಂಕಿತನಾಮದಿಂದ ಮಹಬೂಬೇ ಸುಬಹಾನಿ ಪೀರಾನೇಪೀರ್ ದಸ್ತಗೀರ್ ಅವರಿಗೆ ಅರ್ಪಣೆ ಮಾಡಿ ಕೊನೆಗೊಳಿಸಿದ್ದಾರೆ" ಎಂದು ಅವರ ಮೊಮ್ಮಗ ಡಾ. ಎಸ್.ಎ. ಖಾದರಿ (ಹಾಷಮಿ) ಅವರು ’ಜ್ಞಾನಸಮುದ್ರ ಗ್ರಂಥದ ಆರಂಭದಲ್ಲಿ ಗ್ರಂಥಕರ್ತ ಶ್ರೀಗುರು ಖಾದರಿಪೀರಾ ಅವರ ಕುರಿತು ಬರೆದ ಪರಿಚಯ ಲೇಖನದಲ್ಲಿ ತಿಳಿಸಿದ್ದಾರೆ.
"ಜ್ಞಾನಸಮುದ್ರ ಗ್ರಂಥದಲ್ಲಿನ ತತ್ತ್ವಪದಗಳನ್ನು ಗುರು ಖಾದರಿಪೀರಾ ಅವರ ಶಿಷ್ಯರಾಗಿದ್ದ ದಿವಂಗತ ಮದಿರೆ ತಿಮ್ಮಪ್ಪ ಮತ್ತು ಅವರ ಮಗ ರಂಗಪ್ಪ ಸಾಲಗುಂದ ಅವರು ಏಕತಾರದೊಂದಿಗೆ ಸುಶ್ರಾವ್ಯವಾಗಿ ಹಾಡುವುದನ್ನು ೧೯೭೧ರಲ್ಲಿ ಕಂಡು ಎಸ್.ಎ. ಖಾದರಿ ಅವರು ಅಕರ್ಷಿತರಾದರು. ೧೯೭೩ರಲ್ಲಿ ಶಿಷ್ಯವೃಂದದ ಸಹಕಾರದಿಂದ ಭಜನಾ ಮಂಡಳಿ ರಚಿಸಿ ಈ ತತ್ತ್ವಪದಗಳನ್ನು ಸಿಂಧನೂರು, ಆಲೂರು, ಆದವಾನಿ, ಹೊಸಪೇಟೆ ಮತ್ತು ಬಳ್ಳಾರಿ ತಾಲ್ಲೂಕುಗಳಲ್ಲಿ ಜನಪ್ರಿಯಗೊಳಿಸಿದರು. ಕ್ರಿಸ್ತ ಶಕ ೨೦೦೦ದಲ್ಲಿ ಜ್ಞಾನಸಮುದ್ರ ಗ್ರಂಥವನ್ನು ಪ್ರಕಟಿಸಿದರು" ಎಂದು ಆರ್. ಅಬ್ದುಲ್ ವಾಹಬ್ ಖಾದರಿ ಅವರು ಜ್ಞಾನಸಮುದ್ರ ಗ್ರಂಥದ ಬೆನ್ನುಡಿಯಲ್ಲಿ ಬರೆದಿದ್ದಾರೆ.

’ಇಸ್ಲಾಂ ಎಂದರೆ ಶಾಂತಿಯೊ ಜಾಣ|
ತಿಳಿದು ನುಡಿಯುವುದೇ ಸುಜ್ಞಾನ|
ಹುರುಫೆ ಮುಖತ್ತಿಯಾತ ತಿಳಿಯದೆ
ಹೆಂಗ ತಿಳಿಯತೈತೊ ಖುರಾನ||’
ಎಂದು ಗುರು ಖಾದರಿಪೀರಾ ಅವರು ಬರೆದು ಮುಲ್ಲಾ ಮೌಲ್ವಿಗಳಿಗೆ ಸವಾಲು ಹಾಕಿದ್ದಾರೆ. ’ಮೌಲ್ವಿಗಳಿಗೆ ಗೊತ್ತಿದೆ; ಖರಾನಿನಲ್ಲಿ ಹುರುಫೇ ಮುಖತ್ತಿಯಾತ ಎನ್ನುವ ೨೯ ಸಂಕೇತ ಅಕ್ಷರಗಳಿವೆ. ಅಲೀಫ್, ಲಾಮ್, ಮೀಂ, ಯಾಸೀನ್ ಮುಂತಾದ ಈ ಸಂಕೇತ ಅಕ್ಷರಗಳಿಗೆ ಎಲ್ಲಿಯೂ ಅರ್ಥ ಸಿಗುವುದಿಲ್ಲ. ಸೂಫೀಜಂನಲ್ಲಿ ಇವುಗಳಿಗೆ ಗೌಪ್ಯವಾಗಿ ಅರ್ಥ ತಿಳಿಸಲಾಗುವುದು. ಇದರಿಂದ ನಮಗೆ ತಿಳಿಯುವುದೇನೆಂದರೆ ಗುರುಪೀರಾರವರಿಗೆ ಇವುಗಳ ಅರ್ಥ ತಿಳಿದಿದೆ ಎಂದು. ಆದುದರಿಂದ ಹುರಫೇ ಮುಕತ್ತಿಯಾತ ತಿಳಿಯದೆ ಖುರಾನ ತಿಳಿಯುವುದಿಲ್ಲಾ ಎಂದು ಸಾಧಿಕ್ ಹುಸೇನ್ ಖಾದರಿ ಅಲ್ ಅನ್ಸಾರಿ ಅವರು ’ಜ್ಞಾನಸಮುದ್ರಕ್ಕೆ ಬರೆದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
"ಮಾನವಧರ್ಮಕ್ಕೆ ಜಯವಾಗಲಿ; ಮಾನವರಿಂದ ಮಾನವರು ಉದ್ಧಾರವಾಗಲಿ" ಎಂಬ ಸಂದೇಶದೊಂದಿಗೆ ಗುರು ಖಾದರಿಪೀರಾ ಅವರು ಗ್ರಾಮ್ಯಭಾಷೆಯಲ್ಲಿ ತತ್ತ್ವಪದಗಳನ್ನು ಬರೆದು ಖುರಾನ್ ತಿರುಳನ್ನು ಮತ್ತು ಶರಣರ ವಚನಗಳ ತಿರುಳನ್ನು ಒಂದಾಗಿಸಿ ಲೋಕಾರ್ಪಣೆ ಮಾಡಿದ್ದಾರೆ.
ತತ್ತ್ವಪದಗಳು ಜನಪದ ತತ್ತ್ವಜ್ಞಾನವನ್ನೂ ಒಳಗೊಂಡಿರುತ್ತವೆ. ವಿಶ್ವಮಾನ್ಯವಾದ ಧರ್ಮತತ್ತ್ವಗಳನ್ನು ಜನಪದ ತತ್ತ್ವಜ್ಞಾನದೊಂದಿಗೆ ಕೂಡಿಸುವುದರ ಮೂಲಕ ರಾಯಚೂರು ಭಾಗದ ಕನ್ನಡ ಜನರ ಆಡುಭಾಷೆಯಲ್ಲಿ ಸಾಮರಸ್ಯದ ಸಾಹಿತ್ಯ ಸೃಷ್ಟಿಸಿದ ಕೀರ್ತಿ ಗುರು ಖಾದರಿಪೀರಾ ಅವರಿಗೆ ಸಲ್ಲುತ್ತದೆ. ಆ ಮೂಲಕ ಮೂಲಭೂತಿವಾದಿಗಳು ಅರಿಯದಂಥ ಧರ್ಮದ ತಿರುಳನ್ನು ಜನಸಾಮಾನ್ಯರಿಗೆ ನೀಡಿ ಅವರ ಬದುಕನ್ನು ಅರ್ಥಪೂರ್ಣಗೊಳಿಸಿದ್ದಾರೆ.

"ಗುಡಿಗುಂಡಾರದ ಜಗಳವ್ಯಾಕೊ ಯಪ್ಪ ಮಾನವಗೆ ಮಾನವನು ತಾ ತಿಳಿಯಬೇಕು|
ಎಲ್ಲರೊಳಗೆ ಜೀವ ಶಿವನಾಗಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ||
ಶಿವ ಕಾಣಲಿಲ್ಲ ನೀ ಶಿವನು; ನಿನ್ನ ದೇಹದ ಗುಡಿಯೊಳಗೆ ಕುಂತಾನು ಅವನು|
ನೀನೆ ಗುಡಿಯಾಗಿ ಗುಡಿ ಕಟ್ಟುವದ್ಯಾಕೊ ಸಾಕಪ್ಪ ಸಾಕು ನಿನ್ನ ಗುಡಿಜನಗಳ ಸಾಕು||
ನಿರಾಕಾರ ನಿರಾಹಾರ ಶಿವಗ ಯಪ್ಪ ನಿನ್ನಂತೆ ರೂಪ ಮಾಡಿ ಅವಗ|
ಎಲ್ಲ ನಿನ್ನ ಲಾಭಕ್ಕಾಗಿ ಮಾಡಿಟ್ಟು ಅವಗ ಮೋಸ ವಂಚನೆಯ ಮಂತ್ರ ಹೇಳುವುದ್ಯಾಕೊ||
ಎಲ್ಲರಿಗೆ ಗುರು ಒಬ್ಬ ಸಾಕೊ ಭೇದ ಮಾಡುವ ಕೆರಗುರು ನಮಗ್ಯಾಕಬೇಕು|
ಭೇದ ಮಾಡುವ ಜಗದ್ಘಾತಕರ‍್ಯಾಕೊ ಮಾನವ ಪ್ರೀತಿಯೆ ಮಾನವ ತಿಳಿಯಬೇಕು||
ಪ್ರೀತಿಯ ರೂಪಧಾರಿ ಅವನು; ನೀವು ಪ್ರೀತಿ ಮಾಡಿರಿ ಸಿಗುವನವನು|
ಪ್ರೀತಿಯಿಂದಲೇ ಭಕುತಿ, ಪ್ರೀತಿಯಿಂದಲೇ ಮುಕುತಿ, ಪ್ರೀತಿ ಇಲ್ಲದ ಬದುಕು ಬಾಳುವುದ್ಯಾಕೊ||
ಜಾತಿಭೇದಗಳಿಲ್ಲ ಶಿವಗ ಯಪ್ಪಾ ಹೆಂಡರಿಲ್ಲ ಮಕ್ಕಳಿಲ್ಲ ಅವಗ|
ನೋಡಿಬಂದವರಿಲ್ಲಿ ಹೇಳಲಿಲ್ಲ ನಮಗ; ಕರುಣಾಳು ಗುರುಪೀರ ಭೇದಬುದ್ಧಿ ನಮಗ್ಯಾಕೊ||
ಸಾಲಗುಂದಿಪುರದೊಳಗೆ ಖಾತ್ರಿ ನೀವು ಮರಿಯದೆ ಮಾಡಬೇಕು ಪ್ರೀತಿ|
ಗುರುಪೀರ ಖಾದರಿಯ ಪ್ರೀತಿಯೇ ಬಲು ಖಾತ್ರಿ; ಪ್ರೀತಿ ಇಲ್ಲದ ಬದುಕು ಬಾಳುವದ್ಯಾಕೊ||"
ಭೇದ ಮೂಡಿಸುವ ಯಾವುದನ್ನೂ ಖಾದರಿಪೀರಾ ಅವರು ಸ್ವೀಕರಿಸುವುದಿಲ್ಲ. ಸೌಹಾರ್ದಕ್ಕಾಗಿ ಅವರು ಏನನ್ನಾದರೂ ತ್ಯಾಗ ಮಾಡಲು ಸಿದ್ಧರಿದ್ದಾರೆ. ಪ್ರೀತಿಯಿಂದ ಮಾತ್ರ ಸಹಾರ್ದ ಸಾಧ್ಯ ಎಂಬುದನ್ನು ಅವರು ಪದೆ ಪದೆ ಒತ್ತಿ ಹೇಳಿದ್ದಾರೆ. ಕುಲ, ಗೋತ್ರ, ಜಾತಿಗಳು ಮಾನವನ ಏಕತೆಗೆ ಬಹುದೊಡ್ಡ ಕಂಟಕಗಳಾಗಿವೆ ಎಂಬುದನ್ನು ಮನಂಬುಗುವಂತೆ ತಿಳಿಸಿದ್ದಾರೆ.
೧೫೦ ವರ್ಷಗಳಷ್ಟು ಹಿಂದೆಯೇ ಅವರು ಗುಡಿಗುಂಡಾರಗಳ ಜಗಳಗಳ ಕುರಿತು ಪ್ರಸ್ತಾಪಿಸಿದ್ದಾರೆ. ಗುಡಿವಿವಾದಗಳಿಂದ ಈ ದೇಶ ಇನ್ನೂ ಮುಕ್ತವಾಗಿಲ್ಲ. ಸಾವಿರಾರು ಜನರು ಈ ಘರ್ಷಣೆಗಳಿಗೆ ಬಲಿಯಾಗಿದ್ದಾರೆ. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ಹಾನಿಯಾಗಿದೆ. ವಿವಿಧ ಸಮಾಜಗಳನ್ನು ಒಂದುಗೂಡಿಸದೆ ದೇಶದ ಉದ್ಧಾರವಾಗುವುದಿಲ್ಲ. ಅದಕ್ಕಾಗಿ ಗುರು ಖಾದರಿಪೀರಾ ಅವರಂತೆ ಪ್ರತಿಯೊಬ್ಬರಲ್ಲಿ ದೇವರನ್ನು ಕಂಡು ಪ್ರತಿಯೊಬ್ಬರ ಘನತೆ ಗೌರವಗಳನ್ನು ಮಾನ್ಯ ಮಾಡುತ್ತ. ’ಮಾನವಕುಲ ಒಂದೇ’ ಎಂದು ದಯಾಭಾವ ಮತ್ತು ಪ್ರೇಮಭಾವದೊಂದಿಗೆ ಬದುಕುವುದರಿಂದ ಮಾತ್ರ ಈ ದೇಶ ಔನ್ನತ್ಯಕ್ಕೆ ಏರಲು ಸಾಧ್ಯ.

"ಬಂಗಾರ ಗಟ್ಟಿಯಿಂದ ತಮ್ಮ ಇಲ್ಲಿ ವಸ್ತ ಮಾಡ್ಯಾರಲ್ಲ|
ಬಂಗಾರ ಬ್ಯಾರೆ ವಸ್ತ ಬ್ಯಾರೆ ಎಂದು ಹೇಳತಾರ ಜನರೆಲ್ಲ|
ಬಂಗಾರವೆ ವಸ್ತ ವಸ್ತವೆ ಬಂಗಾರ ಮೂಲ ತಿಳಿಯಲಿಲ್ಲ||
ಸಾಲಗುಂದಿಪುರದೊಳಗೆ ಸೇರಿ ನೀ ನೋಡು ನಿನ್ನ ಮೊದಲ|
ಗುರುಪೀರಖಾದರಿ ಕೇಳಿ ತಿಳಿದು ತಾವು ನೋಡಿ ಹೇಳ್ಯಾರಲ್ಲಾ|
ಮನುಷ್ಯರೇ ದೇವರು, ದೇವರೇ ಮನುಷ್ಯರು ಬಿಚ್ಚಿ ಹೇಳಿದರೆಲ್ಲ||"
ಮನುಷ್ಯರೊಳಗೆ ದೇವರಿದ್ದಾನೆ. ಆ ದೇವರು ಮನುಷ್ಯ ರೂಪದಲ್ಲಿದ್ದಾನೆ. ಇದನ್ನು ತಿಳಿದವ ತನ್ನೊಳಗಿನ ದೇವರ ಜೊತೆ ಒಂದಾಗುತ್ತಾನೆ. ಹೀಗೆ ಒಂದಾದಾಗ ಆತ ಅಂತಃಕರಣ ಮತ್ತು ಪ್ರೇಮ ಭಾವವನ್ನು ತಾಳುತ್ತಾನೆ. ಆ ಮೂಲಕ ದೇವಸ್ವರೂಪನೇ ಆಗುತ್ತಾನೆ. ಈ ಪ್ರಕ್ರಿಯೆಯನ್ನು ಅನುಭವಿಸುವ ಮೊದಲು ಮಾನವ ರೂಪದಲ್ಲಿರುವ ನಾವು ನಿಜ ಮಾನವರಾಗಬೇಕಾಗುತ್ತದೆ. ನಿಜಮಾನವರಾದ ಮನುಷ್ಯರೇ ದೇವರು. ಹೀಗೇ ದೇವರೇ ಮನುಷ್ಯರೂಪದಲ್ಲಿರುವ ಕ್ರಮವನ್ನು ಗುರು ಖಾದರಿಪೀರಾ ಅವರು ತಿಳಿಸಿದ್ದಾರೆ.

ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕಂಡು|
ಸತ್ಯವನು ತಿಳಿದುಕೊಂಡೆನೊ ನಾ ನಿನ್ನೊಳು ಕೂಡಿ||
ಸತ್ಯವನು ನಾ ತಿಳಕೊಂಡೆ ಜನರಿಗೆ ನಾ ಕೆಟ್ಟವ ಕಂಡೆ|
ಪ್ರೀತಿ ಮಾಡಿ ಎಲ್ಲ ಪಡಕೊಂಡೆ ಸದ್ಗುರುವಿನ ಕಂಡೆ||
ಮಾನವರು ಉನ್ನತಿಯನ್ನು ಸಾಧಿಸಬೇಕಾದರೆ ತಮ್ಮೊಳಗಿನ ದೇವರಲ್ಲಿ, ಅಂದರೆ ತಮ್ಮ ಆತ್ಮಸಾಕ್ಷಿಯಲ್ಲಿ ತಮ್ಮ ನಿಜಸ್ವರೂಪವನ್ನು ಕಂಡುಕೊಳ್ಳಬೇಕು. ಅಲ್ಲದೆ ತಮ್ಮೊಳಗಿನ ದೇವರು ಹೇಳಿದಂತೆ ಕೇಳುವುದರ ಮೂಲಕ ಆ ದೇವರೊಡನೆ ಕೂಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಸಕಲಜೀವಾತ್ಮರಿಗೆ ಲೇಸನೇ ಬಯಸುವಂಥ ಮನಸ್ಸು ರೂಪುಗೊಳ್ಳುವುದು. ಆಗ ಜಾತಿ, ವರ್ಣ, ಮೇಲು, ಕೀಳು ಮುಂತಾದ ಮಾನಸಿಕ ಹೊಲಸು ಮಾಯವಾಗುವವು. ಹೀಗೆ ಮಾನವ ಉದಾತ್ತವಾಗುವನು. ಆದರೆ ವರ್ಣವ್ಯವಸ್ಥೆಯಿಂದ ಲಾಭ ಪಡೆಯುವವರು ಇಂಥ ಮಾನಸಿಕ ಸ್ಥಿತಿಗೆ ವಿರುದ್ಧವಾಗಿರುತ್ತಾರೆ. ಎಲ್ಲರೂ ಸಮಾನರಾದಾಗ ಅವರ ಅಸ್ತಿತ್ವವೇ ಉಳಿಯುವುದಿಲ್ಲ. ಹೀಗಾಗಿ ಅಂಥವರ ದೃಷ್ಟಿಯಲ್ಲಿ ಇಂಥ ಉತ್ತಮರು ಕೆಟ್ಟವರಾಗಿ ಕಾಣುತ್ತಾರೆ. ಆದರೆ ಉತ್ತಮರು ಯಾವುದಕ್ಕೂ ಎದೆಗುಂದದೆ ಜಗತ್ತನ್ನು ಪ್ರೀತಿಸುತ್ತಲೇ ಮುಂದೆ ಮುಂದೆ ಸಾಗುತ್ತ ತಮ್ಮೊಳಗಿನ ಅರಿವೆಂಬ ಸದ್ಗುರುವಾದ ದೇವರನ್ನು ಕಾಣುತ್ತಾರೆ. ಅರಿವು ಎಂದರೆ ಬೇರೆ ಅಲ್ಲ. ನಮ್ಮೊಳಗೇ ದೇವರಿದ್ದಾನೆ ಎಂಬುದೇ ಅರಿವು. ಸಕಲ ಜೀವಿಗಳಲ್ಲಿ ದೇವರಿದ್ದಾನೆ ಎಂಬುದೇ ಅರಿವು. ಈ ಕಾರಣದಿಂದ ಸಕಲಜೀವಾತ್ಮರಿಗೆ ಲೇಸನ್ನೇ ಬಯಸಬೇಕು. ಸಕಲರ ಜೊತೆ ಪ್ರೇಮಭಾವದಿಂದ ಇರಬೇಕು. ದಯೆಯೇ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕು ಎಂದು ನಾವು ನಿರ್ಧರಿಸುವಂತೆ ಮಾಡುವುದೇ ಅರಿವು.

"ದೇವರು ಒಬ್ಬನಲ್ಲೊ ಯಪ್ಪ ಬಹಳ ಬಹಳ ಮಂದಿ ಹಾರ|
ದೇವರು ಅಲ್ಲೆ ಅಲ್ಲೊ ಜಾಣ ಅವರು ಇಲ್ಲೆ ಇಲ್ಲೆ ಹಾರ||
ತೆತ್ತೀಸ ಕೋಟಿ ಎಣಿಸಿ ಹೇಳಿದರು; ಎಲ್ಲರೂ ಇಲ್ಲೇ ಹಾರ ಅವರೆ|
ನಾವಾಗಿ ಇರುತಾರ; ಹೇಳಬ್ಯಾಡ ಸತ್ಯ ಹೊಡಿಯುತಾರ||
ಹೂವಿನೊಳ್ ವಾಸನೆ, ಹಾಲಿನೊಳಗೆ ತುಪ್ಪ ಎಲ್ಲರೂ ಒಪ್ತಾರ|
ಗುರುಪೀರಾ ಖಾದರಿ ಬಿಚ್ಚಿ ಹೇಳಿದರೆ ಎಗರಿ ಬೀಳತಾರ||"
ದೇವರು ಬಹಳ ಮಂದಿ ಇದ್ದಾರೆ ಎಂದರೆ ಬಹುದೇವೋಪಾಸನೆ ಮಾಡಬೇಕೆಂದಲ್ಲ. ಪ್ರತಿಯೊಬ್ಬರು ತಮ್ಮೊಳಗಿನ ದೇವರನ್ನು ಆರಾಧಿಸಬೇಕು ಎಂದು ಅರ್ಥ. ಪ್ರತಿಯೊಬ್ಬರು ತಮ್ಮೊಳಗಿನ ದೇವರ ಜೊತೆ ಬದುಕಲು ಕಲಿತರೆ ಇಡೀ ವಿಶ್ವ ಸುಲಿಗೆಯಿಂದ, ಮೇಲುಕೀಳು ಭಾವನೆಯಿಂದ, ಹಿಂಸೆ, ಅತ್ಯಾಚಾರ, ಕೊಲೆ ಮತ್ತು ಯುದ್ಧಗಳಿಂದ ಮುಕ್ತವಾಗುತ್ತದೆ. ಹೂವಿನಲ್ಲಿ ವಾಸನೆ ಇರುವಂತೆ, ಹಾಲಿನೊಳಗೆ ತುಪ್ಪ ಇರುವಂತೆ ದೇವರು ನಮ್ಮೊಳಗೆ ಇರುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಅವರವರ ಒಳಗಿರುವ ದೇವರ ಉಪಾಸನೆ ಮಾಡಬೇಕು ಮತ್ತು ಕೊನೆಗೆ ಆ ದೇವರೇ ಆಗಬೇಕು. ಆದರೆ ವಿಶ್ವಮಾನವರಾಗದೇ ಎಲ್ಲರೀತಿಯ ಶೋಷಣೆಯನ್ನು ಮಾಡುತ್ತ ಬದುಕ ಬಯಸುವವರು ಈ ಸತ್ಯ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರು ಇಂಥ ನಿಜತತ್ತ್ವಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಇರುತ್ತಾರೆ.

"ಹೇ ತೊಗಲಿನ ಕಾಯ ಭೇದವೇಕೊ ಮಹಾರಾಯ|
ಮೈಯಲ್ಲಾ ನಿನಗೆ ಗಾಯ ನಿನ್ನಂತೆ ಅವರ ಕಾಯ||"
ಶಿವನಿರುವ ಗುಡಿಯೇ ತೊಗಲು ಮುಂದೆ ಕುಂತ ನಂದಿಯೇ|
ತೊಗಲು; ಇವನು ತೊಗಲು, ಶಿವನು ತೊಗಲು, ಅರಿವು ಎಂಬ|
ಗುರುಪೀರನೆ ತೊಗಲು||
ಇಲ್ಲಿ ಗುರು ಖಾದರಿಪೀರಾ ಅವರು ತೊಗಲನ್ನು ನಶ್ವರ ವಸ್ತುವಿನ ಸಂಕೇತವಾಗಿ ಬಳಸಿದ್ದಾರೆ. ದೇಹ ಎಂಬುದು ವಸ್ತು, ಅರಿವಿನ ಮೂಲಕ ಆ ದೇಹದೊಳಗಿನ ಚೈತನ್ಯವನ್ನು ದೇವರೆಂಬುದನ್ನು ಮನಗಾಣಬೇಕು ಎಂದು ಸೂಚಿಸಿದ್ದಾರೆ. ಈ ಸತ್ಯವನ್ನು ಹೇಳುವ ಗುರು ಕೂಡ ಇತರರಂತೆ ವಸ್ತುವೇ ಆಗಿದ್ದಾನೆ. ಆದರೆ ಪ್ರತಿಯೊಂದು ವಸ್ತುವಿನ ಒಳಗೆ ದೇವರಿದ್ದಾನೆ.

"ಪರಮ ಸುಂದರ ನೀನು, ನಿನ್ನ ಮಂದಿರ ನಾನು|
ಸುಂದರ ಮಂದಿರವು ಎರಡು ಒಂದಾಗಿರಲು||
ಕಲ್ಲು ಮೂರುತಿ ಮಾಡಿ ನಲ್ಲನೆಂದೆನುತಿರಲು|
ನಲ್ಲ ಬಂದೊಡೆ ಕಲ್ಲು ಮೂರುತಿ ಸರಿಸಲು||
ನಿನ್ನ ರಥವು ನಾನು, ರಥಕೆ ಸಾರಥಿ ನೀನು
ಎರಡು ಚಕ್ರದ ಆಟ ಇರಿಸು ಒಂದಾಗಿರಲು"
ವಸ್ತುವೆಂಬದು ಮಂದಿರ; ಅದರೊಳಗಿನ ಚೈತನ್ಯವೇ ಪರಮ ಸುಂದರ. ಅದುವೇ ಸತ್ಯ. ಅದುವೇ ಶಿವ. ಆ ಚೈತನ್ಯವೇ ಎಲ್ಲ ದೇವರುಗಳ ಮೂಲ. ಅದುವೇ ಪರಮ ಸುಂದರ. ವಸ್ತು ಎಂಬದು ಮತ್ತು ಮಾನವಕುಲ ಎಂಬದು ರಥ ಮಾತ್ರ. ಆ ಪರಮ ಸುಂದರ ಚೈತನ್ಯವೇ ಸಾರಥಿ. ಈ ವಸ್ತು ಮತ್ತು ಚೈತನ್ಯದ ಅಭೇದ್ಯ ಸಂಬಂಧವೇ ಅದ್ವೈತ.

"ಪಂಚಭೂತ ರಂಗಮಂಟಪ ರಚಿಸಿ; ಇದರೊಳು ಆತ್ಮದ ಪೀಠವ ಇರಿಸಿ ಕುಂತು|
ಕಾಣದಂತೆ ನನ್ನೊಳು ಸೂತ್ರಧಾರಿಯಾಗಿ ನೀನು ನಾನಾಗಿ ಪಾತ್ರ ಮಾಡಿದ್ಯಾ||"
ಪ್ರತಿಯೊಂದು ಜೀವ ಪಂಚಮಹಾಭೂತಗಳಿಂದಲೇ ಸೃಷ್ಟಿಯಾಗಿದೆ. ಆ ಜೀವಿಗಳೊಳಗಿನ ಆತ್ಮದ ಪೀಠದ ಮೇಲೆ ಚೈತನ್ಯವೆಂಬ ದೇವರು ಕಾಣದಂತೆ ಆತ್ಮಸಾಕ್ಷಿಯಾಗಿ ಕುಳಿತು ಬದುಕಿನ ಸೂತ್ರಧಾರಿಯಾಗಿದ್ದಾನೆ. ಆತ ಆ ಜೀವಿಯ ಪಾತ್ರ ಮಾಡುತ್ತಿದ್ದಾನೆ. ಆದ್ದರಿಂದ ಆತ್ಮಸಾಕ್ಷಿಯೇ ದೇವರು. ಜೀವಿಯು ತನ್ನ ಆತ್ಮಸಾಕ್ಷಿಯ ಆದೇಶವನ್ನು ಪಾಲಿಸಿದರೆ ದುಃಖಕ್ಕೆ ಈಡಾಗುವುದಿಲ್ಲ.

"ಎಲ್ಲ ಮಾನವರು ಒಂದೇ ಎಂಬ ನಿಜತತ್ತ್ವ ನೀ ತಿಳಿಬೇಕು|
ಭೇದ ಮಾಡದೆ ಸರ್ವ ಜನರಲ್ಲಿ ರಬ್ಬಿಲಾಲನ ನೀ ಕಾಣಬೇಕು||"
ಹೀಗೆ ಎಲ್ಲರೊಳಗೂ ಒಂದೇ ತೆರನಾದ ಆತ್ಮಸಾಕ್ಷಿ ಇರುತ್ತದೆ. ಆ ಮೂಲಕ ಎಲ್ಲರಲ್ಲೂ ಒಬ್ಬನೇ ದೇವರಿದ್ದಾನೆ. ಆ ದೇವರನ್ನು ನಮ್ಮ ಅರಿವಿನ ಕಣ್ಣುಗಳಿಂದ ಕಾಣುವುದರ ಮೂಲಕ ’ಎಲ್ಲ ಮಾನವರು ಒಂದೇ’ ಎಂಬ ಸತ್ಯವನ್ನು ಅರಿಯಬೇಕು. ಈ ನಿಜತತ್ತ್ವವನ್ನು ಅರಿತವನು ಜಾತಿ, ಧರ್ಮ, ದೇಶ ಮತ್ತು ಭಾಷೆಗಳ ಹೆಸರಿನಲ್ಲಿ ಜನರಲ್ಲಿ ಭೇದಭಾವ ಮಾಡದೆ ಎಲ್ಲರಲ್ಲೂ ದೇವರನ್ನೇ ಕಾಣುವನು. ’ತಾನು ಎಲ್ಲರೊಳಗೆ ಎಲ್ಲರೂ ತನ್ನೊಳಗೆ’ ಎಂದು ಬದುಕುವನು. ಹೀಗೆ ಬದುಕುವ ಅರಿವನ್ನು ಮೂಡಿಸುವುದೇ ನಮಾಜ (ಪ್ರಾರ್ಥನೆ) ಎಂದು ಖಾದರಿಪೀರಾ ತಿಳಿಸಿದ್ದಾರೆ. ಪ್ರಾರ್ಥನೆ ಎಂಬುದು ಸಕಲಜೀವಾತ್ಮರನ್ನು ಪ್ರೀತಿಸುವ ಮನಸ್ಸನ್ನು ರೂಪಿಸುವಂಥದ್ದು.

"ಹೊಂದಿಕೊಂಡು ಒಂದಾಗಿರಲಿಲ್ಲಾ; ಕೂಡಿ ಬಾಳಲಿಲ್ಲಾ|
ಶಾಂತಿ ಎಂಬುದೇ ಸಿಗಲಿಲ್ಲಾ ಪ್ರೀತಿ ಮಾಡಲಿಲ್ಲಾ||
ಭೇದ ಮಾಡುವರೆಲ್ಲಾ ಬಲವಿದ್ದಲ್ಲಿ ಬಾಗುವರೆಲ್ಲಾ|
ಪ್ರೀತಿ ಏನೆಂಬುದು ತಿಳೀಲಿಲ್ಲಾ ಹಾಳಾದರೆಲ್ಲಾ||"
ಪ್ರೀತಿ ಇಲ್ಲದೆ ಮಾನವನ ಮನಸ್ಸಿನಲ್ಲಿ ಶಾಂತಿ ಲಭಿಸದು. ಭಾವೈಕ್ಯದಿಂದ ಬದುಕುವ ಪ್ರಜ್ಞೆ ಮೂಡದು. ಭೇದಭವದಿಂದಾಗಿ ಬಲವುಳ್ಳವರು ಬಲಹೀನರನ್ನು ಗುಲಾಮಗಿರಿಗೆ ತಳ್ಳುವರು. ಲೋಕದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವುದು. ಹೀಗೆ ಪ್ರೀತಿಯ ಮಹತ್ವವನ್ನು ಅರಿಯದೇ ಜನರು ಹಾಳಾಗಿಹೋಗುವರು ಎಂದು ಖಾದರಿಪೀರಾ ಅವರು ಖೇದ ವ್ಯಕ್ತಪಡಿಸುತ್ತಾರೆ.

ರಾಜಭೋಗದ ದರ್ಪ ಸಿರಿ ಸಂಪತ್ತಿನ ದರ್ಪ|
ಬುದ್ಧಿವಂತಿಕೆಯ ದರ್ಪ ದೊಡ್ಡವನೆಂಬುವ ದರ್ಪ|
ಜೀವ ಹೋದಮ್ಯಾಲೆ ಏನಿಲ್ಲೊ ಮರುಳೆ||
ಪ್ರತಿಯೊಬ್ಬರು ಪ್ರತಿಕ್ಷಣವೂ ಸಾವಿನ ದವಡೆಯ ಕಡೆಗೆ ಸಾಗುತ್ತಿರುತ್ತಾರೆ. ಇದನ್ನು ಅರಿಯದೆ ಅಧಿಕಾರ, ಶ್ರೀಮಂತಿಕೆ, ಬುದ್ಧಿವಂತಿಕೆ ಮತ್ತು ದೊಡ್ಡಸ್ತಿಕೆಯ ದರ್ಪದಿಂದ ಬದುಕುವವರು ಕೂಡ ಎಲ್ಲವನ್ನೂ ಇಲ್ಲೇ ಬಿಟ್ಟು ಸಾಯುವರು. ಅವರ ಸೊಕ್ಕು ಧಿಮಾಕುಗಳೆಲ್ಲ ಅರ್ಥಹೀನವಾಗುತ್ತವೆ ಎಂಬುದನ್ನು ಆ ಧಿಮಾಕಿನವರು ಅರಿಯುವಂತೆ ಎಚ್ಚರಿಸುತ್ತಾರೆ.

"ಸಾಧು ಆಗಿ ನೀ ಸಾಧನೆ ಇಲ್ಲದೆ ಭೋಗವ ಭೋಗಸೈತಿ ನಿನ್ನ ಮನ|
ಯೋಗದ ತೋರಿಕೆ, ಜಾಗದ ಮಹಿಮೆ ಮನಸೆಲ್ಲಿ ಜಾರೈತಿ|
ಹೇಳು ನಿನ್ನ ಮನಸೆಲ್ಲಿ ಜಾರೈತಿ||"
ಇಂಥ ವಿಷಮಸ್ಥಿತಿಯಲ್ಲಿ ಜನರಿಗೆ ಮಾರ್ಗದರ್ಶನ ಮತ್ತು ತತ್ತ್ವದರ್ಶನ ಮಾಡಿಸಬೇಕಾದ ಧರ್ಮಗುರುಗಳು ಕೂಡ ಯಾವುದೇ ಸಾಧನೆ ಇಲ್ಲದೆ ಭೋಗಕ್ಕೆ ಮನಸೋತು ಅದರಲ್ಲೇ ನಿತ್ಯಾನಂದವನ್ನು ಕಾಣುತ್ತಿದ್ದಾರೆ. ತೋರಿಕೆಯ ಯೋಗ ಮತ್ತು ಧ್ಯಾನ ಹಾಗೂ ತಾವು ಪ್ರತಿನಿಧಿಸುತ್ತಿರುವ ಸುಕ್ಷೇತ್ರದ ಮಹಿಮೆಯಿಂದಾಗಿ ಇಂಥ ಧರ್ಮಗುರುಗಳು ವರ್ಚಸ್ಸನ್ನು ಬೆಳೆಸಿಕೊಂಡು ಮನೋ ಕಾಮನೆಗಳನ್ನು ಈಡೇರಿಸಿಕೊಳ್ಳುವುದರಲ್ಲೇ ಮಗ್ನರಾಗಿರುತ್ತಾರೆ. ಇಂಥವರನ್ನು ಪ್ರಶ್ನಿಸುವ ಕ್ರಮವಿದು.

"ದುಷ್ಟಶಕ್ತಿ ಹೇಳಿದಾ ಮಾತು ವೇದವಾಕ್ಯ ಬಡವನಿಗಾಯ್ತು|
ಬಡವ ಹೇಳಲಾರದಂಗಾಯ್ತು ಹೇಳಿದರೆ ಹೆಣ ಸಿಗದಂಗಾಯ್ತು||
ಶಕ್ತಿಶಾಲಿ ನೀನಾಗಬೇಕು ಸತ್ಸಂಗ ನಿನ್ನ ಉಸಿರಾಗಬೇಕು|
ಮಾನವಂತರ ಮಾನ ನಿನ್ನಯ ಮಾನವಾಗಿ ತಿಳಿಯಬೇಕೊ||"
ಈ ದುಷ್ಟಶಕ್ತಿಗಳೆಲ್ಲ ಕೂಡಿ ಬಡವರ ಜೀವ ತಿನ್ನುತ್ತವೆ. ಇಂಥ ಅಧಿಕಾರಬಲ, ಧನಬಲ, ಅಂತಸ್ತುಬಲ ಮತ್ತು ಧರ್ಮಬಲ ಇದ್ದವರು ಹೇಳಿದ ಮಾತುಗಳನ್ನು ಬಡವರು ವೇದವಾಕ್ಯವೆಂಬಂತೆ ಸ್ವೀಕರಿಸುವುದು ಅನಿವಾರ್ಯವಾಗಿದೆ. ಒಂದುವೇಳೆ ಸ್ವೀಕರಿಸದೆ ಇದ್ದರೆ ಆತನ ಹೆಣವೂ ಸಿಗದಂಥ ಪರಿಸ್ಥಿತಿ ಅನೇಕ ಕಡೆಗಳಲ್ಲಿ ಇಂದಿಗೂ ಮುಂದುವರಿದಿದೆ. ಇಂಥ ಸ್ಥಿತಿಯಲ್ಲಿ ಬಡವರು ಸತ್ಸಂಗ ಮಾಡುತ್ತ ದುಷ್ಟಶಕ್ತಿಗಳನ್ನು ಎದುರಿಸುವ ಕ್ರಮವನ್ನು ಅವರು ಬಹಳ ಮಾರ್ಮಿಕವಾಗಿ ಸೂಚಿಸಿದ್ದಾರೆ.
ಸದಾ ನೋವು ಮತ್ತು ಅಪಮಾನಕ್ಕೆ ಒಳಗಾಗುವ ಬಡವರು ಒಂದಾಗದೆ ಇದ್ದಾಗ ಅವರನ್ನು ಬಲವುಳ್ಳವರು ಬಹಳ ಹೀನಾಯವಾಗಿ ಕಾಣುತ್ತಾರೆ ಎಂಬುದನ್ನು ಗುರು ಖಾದರಿಪೀರಾ ಅವರು ’ಕೋತಿ ಕರಡಿ ರಾಕ್ಷಸರು’ ತತ್ತ್ವಪದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

"ಕೋತಿ ಕರಡಿ ರಾಕ್ಷಸರು ನಾವು ಹಿಂದೆ ಉಳಿದವರು|
ದೇವಿ ದೇವತರೆಲ್ಲ ಮುಂದೊರೆದ ಹಾರುವರು||
ಗುಡಿಗಳು ಹುಟ್ಟಲು ಕಾರಣರ‍್ಯಾರು; ಅದಕೆ ಪೂಜಾರಿ ಅವರು|
ದಾನ ನೀಡಲು ಹಿಂದುಳಿದವರು; ಬೇಡುವವರೇ ಹಿರಿಯರು||
ಸಹಾಯ ಮಾಡಿದ ಜಾಂಬುವಂತಗೆ ಕರಡಿಯೆಂದು ಕರೆದವರ‍್ಯಾರು|
ಅಪಕಾರ ಮಾಡಿದವರು ದೇವರಾಗಿ ಮೆರಿತಿಹರು||
ಜಾನಕಿಯ ತಂದವರ‍್ಯಾರು; ಕಪಿಸೈನ್ಯ ನಮ್ಮವರ ಹೆಸರು|
ಕಷ್ಟದಿಂದ ಪಾರು ಮಾಡಲು ನಾವೇ ಪ್ರಜೆಗಳು, ಅವರೆ ರಾಜರು||
ಯಲ್ಲಮ್ಮ ಯಾರವರು; ಹಿಂದುಳಿದ ನಾವೇ ಜೋಗಮ್ಮನವರು|
ಕೊರಳಲ್ಲಿ ಕೆರು ಕಟ್ಟಿಕೊಂಡು ಬೆತ್ತಲಾಗಿ ನಮ್ಮವರು||
ದೇವರ ಹೆಸರಿನಲ್ಲಿ ವ್ಯಭಿಚಾರ ಮಾಡುವರ‍್ಯಾರು; ಯಾಗದ ನೆಪದಲ್ಲಿ|
ಕುರಿಕೋಣಕೋಳಿ ನುಂಗಿ ಮಂತ್ರ ಹೇಳಿದವರ‍್ಯಾರು||
ಹಕ್ಕು ಕೇಳಬಾರದು ಯಾರು, ಹಿಂದುಳಿದ ನಾವೇ ಶೂದ್ರ ಜನರು|
ಸತ್ತರೆ ಸುಡುವರ‍್ಯಾರು ನಾವೆ ಸಂಕಟರಮಣರು||
ಗುರುಪೀರ ನಮ್ಮವರು ಬೈಲುಮಾಡಿ ತೋರಿದರು ಶೂದ್ರರಲ್ಲಾ|
ನಾವೇ ರಾಜರು ಎಂದು ಸತ್ಯ ಹೇಳಿದವರು ಇವರೆ ನಮ್ಮ ಗುರುಗಳು||"
ದುಡಿಯುವ ಬಹುಪಾಲು ಶೂದ್ರ ಜನರೇ ರಾಜರು ಎಂಬ ಸತ್ಯವನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಗುರು ಖಾದರಿ ಪೀರಾ ಅವರು ಕಾರ್ಲ್ ಮಾರ್ಕ್ಸ್ ಮತ್ತು ಸ್ವಾಮಿ ವಿವೇಕಾನಂದರ ಸಮಕಾಲೀನರು ಕೂಡ ಆಗಿದ್ದಾರೆ. ಕಾರ್ಲ್ ಮಾರ್ಕ್ಸ್ ಅವರು ಕಾರ್ಮಿಕ ಸರ್ವಾಧಿಕಾರದ ಬಗ್ಗೆ ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದ ಅವರು ಶೂದ್ರರು ಈ ಜಗತ್ತನ್ನು ಆಳಬೇಕು ಎಂದು ತಿಳಿಸಿದ್ದಾರೆ. ಇದೇ ರೀತಿಯಲ್ಲಿ ಖಾದರಿಪೀರಾ ಅವರು ’ಶೂದ್ರರಲ್ಲಾ; ನಾವೇ ರಾಜರು’ ಎಂದು ಹೇಳಿದ್ದು ಸಹಸ್ರಾರು ವರ್ಷಗಳಿಂದ ಶೋಷಣೆಗೆ ಒಳಗಾಗುತ್ತ ಬಂದ ಶೂದ್ರ ಜನಾಂಗದ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ.
ಸೌಹಾರ್ದ ಎಂಬುದು ತೋರಿಕೆಯ ಮಾತುಗಳಿಂದ ಸೃಷ್ಟಿಯಾಗುವಂಥದ್ದಲ್ಲ. ಮೇಲ್ಜಾತಿ ಮತ್ತು ಮೇಲ್ವರ್ಗದ ದೌರ್ಜನ್ಯವನ್ನು ಅಲ್ಲಗಳೆಯುತ್ತ, ಕೆಳಜಾತಿ ಮತ್ತು ಕೆಳವರ್ಗಗಳ ಜನಸಮುದಾಯಗಳ ಬಗ್ಗೆ ಅಂತಃಕರಣದ ವಾತಾವರಣ ಸೃಷ್ಟಿಸುತ್ತ ಸರ್ವಧರ್ಮ ಸಮಭಾವದ ಪ್ರಜ್ಞೆಯೊಂದಿಗೆ ಮಾನವೀಯ ಚಿಂತನೆಗಳನ್ನು ಹರಡಿದಾಗ ಸೌಹಾರ್ದದ ವಾತಾವರಣ ಸೃಷ್ಟಿಯಾಗುತ್ತದೆ. ಸೌಹಾರ್ದ ಸೃಷ್ಟಿಯಲ್ಲಿ ಕಾಳಜಿ, ಹೋರಾಟ, ಇದ್ದದ್ದನ್ನು ಇದ್ದ ಹಾಗೆ ಹೇಳುವ ನೈತಿಕ ಶಕ್ತಿ, ಸರ್ವಧರ್ಮ ಸಮಭಾವ ಮತ್ತು ಮಾನವ ಏಕತೆಯ ಪ್ರಜ್ಞೆ ಹೆಚ್ಚಿನ ಪಾತ್ರ ವಹಿಸುತ್ತವೆ. ಗುರು ಖಾದರಿಪೀರಾ ಅವರು ತಮ್ಮ ಬದುಕಿನಲ್ಲಿ ಸಾಧಿಸಿದ್ದು ಇದನ್ನೇ. ಅವರ ಸಾಧನೆಯ ಸಂಕೇತವಾಗಿ ’ಜ್ಞಾನಸಮುದ್ರ ನಮ್ಮ ಕಣ್ಣೆದುರಿಗಿದೆ.
ಶಿಶುನಾಳ ಶರೀಫರು ನಮಗೆ ಭಾವಪೂರ್ಣ ತತ್ತ್ವಪದಕಾರರಾಗಿ ಕಂಡುಬಂದರೆ ಸೂಫಿ ದೃಷ್ಟಿಕೋನದ ಇಸ್ಮಾಮಿನ ಧರ್ಮಗುರು ಖಾದರಿಪೀರಾ ಅವರು ಪ್ರಜ್ಞಾಪೂರ್ಣ ತತ್ತ್ವಪದಕಾರರಾಗಿ ಕಂಡುಬರುತ್ತಾರೆ. ’ದೇವರು ಎಲ್ಲರಲ್ಲಿ ಇದ್ದಾನೆ’ ಎಂದು ಪ್ರತಿಪಾದಿಸುವ ಅವರು ಗುಡಿ ಮಸೀದಿಗಳ ಬಗ್ಗೆ ಉದಾಸೀನ ಭಾವ ತಾಳುತ್ತಾರೆ. ನಮ್ಮ ದೇಹಗಳೇ ಗುಡಿ ಮಸೀದಿಗಳು ಎಂದು ಸಾರುವ ಅವರು ಜಾತಿ, ವರ್ಣ, ಶೋಷಣೆ ಮುಂತಾದ ಅನಿಷ್ಟಗಳ ಬಗ್ಗೆ ಸಾತ್ವಿಕ ಕೋಪವನ್ನು ವ್ಯಕ್ತಪಡಿಸುತ್ತಾರೆ. ಅಸ್ಪೃಶ್ಯರ ಮತ್ತು ಶೂದ್ರರ ಪರವಾಗಿ ನಿಲ್ಲುತ್ತಾರೆ. ತೋರಿಕೆಯ ದೇವರುಗಳನ್ನು ನಿರಾಕರಣೆ ಮಾಡುವ ಅವರು ಗಣಪತಿ, ದೇವಿ ಮುಂತಾದ ದೇವತೆಗಳನ್ನು ಕೂಡ ಸಂಕೇತಾರ್ಥದಲ್ಲಿ ನೋಡಿ ಪ್ರೇಮಭಾವದಿಂದಲೇ ಬರೆದಿದ್ದಾರೆ. ಸೂಫಿ ಪ್ರೇಮತತ್ತ್ವವು ಯಾವುದನ್ನೂ ನಿರಾಕರಿಸುವುದಿಲ್ಲ. ಆದರೆ ಮಾನವಘನತೆಗೆ ಕುಂದು ತರುವ ಯಾವುದನ್ನೂ ಸ್ವೀಕರಿಸುವುದಿಲ್ಲ.

"ದಾನಧರ್ಮದ ನೆಪಕಾಗಿ ಜನರಲ್ಲಿ ತನ್ನಯ ಹಿತಕ್ಕಾಗಿ|
ಕ್ವಾಣ ಕಡಿಯುವ ಧರ್ಮವೆ ಅಲ್ಲಾ; ಮಾರೆಮ್ಮನಿಗೆ ಅದು| ಬೇಕಿಲ್ಲಾ||"
ಪ್ರಾಣಿಬಲಿ ಕೊಡುವುದು ಧರ್ಮ ಅಲ್ಲ ಎಂದು ಹೇಳುವ ಅವರು, ಇದ್ದವರು ಜನರಿಂದ ತಮಗೆ ಲಾಭವಾಗುವ ಉದ್ದೇಶದಿಂದಲೇ ದಾನಧರ್ಮದ ನೆಪದೊಂದಿಗೆ ಇಂಥ ಸಂಪ್ರದಾಯಗಳನ್ನು ತಂದಿದ್ದಾರೆ ಎಂದು ತಿಳಿಸಿದ್ದಾರೆ. ಇದು ಅವರ ಸೂಕ್ಷ್ಮಪ್ರಜ್ಞೆಯ ಪ್ರತೀಕವಾಗಿದೆ.
"ಮಾರೆಮ್ಮಾ ಅಲ್ಲಾ ತಮ್ಮಾ ಮಾ ಅಮ್ಮ ಎಂದು ತಿಳಿಸುತ್ತಾರೆ. "ಅಮ್ಮನಿಗೆ ನೀ ತಿಳಿ ತಮ್ಮ; ಮನ್ಯಾಗ ಐದಾಳ ನಿಮ್ಮಮ್ಮ ಎಂದು ಹೇಳಿ ಮನೆಯೊಳಗಿನ ಅಮ್ಮನ ಸೇವೆ ಮಾಡಬೇಕೆನ್ನುತ್ತಾರೆ. "ಅಮ್ಮನಂಥ ದೇವರು ಇಲ್ಲಾ; ಅಮ್ಮನಿಂದಲೇ ದೇವರು ಎಲ್ಲಾ ಎಂದು ಸಾರುತ್ತಾರೆ. ಹೀಗೆ ಮಾನವೀಯತೆ ಮತ್ತು ದೈವತ್ವದ ಮಧ್ಯೆ ಅಭೇದ್ಯ ಕಲ್ಪಸುವ ಅವರ ಕ್ರಮ ವಿಶಿಷ್ಟವಾಗಿದೆ.
ಅವರು ಮಾನವೀಯ ತತ್ತ್ವನ್ನು ಸಾರುತ್ತಲೇ ಸಮಾಜದ ನಿಜಸ್ವರೂಪವನ್ನು ಅನಾವರಣಗೊಳಿಸುತ್ತ ಕಾವ್ಯರಚನೆ ಮಾಡಿದ್ದಾರೆ. ’ಒಳಗಿನ ಮಾತು ಸಂಗಯ್ಯನೇ ಬಲ್ಲ ಎಂಬ ತತ್ತ್ವಪದದಲ್ಲಿ ಅವರು ನಮ್ಮ ಸಮಾಜದ ನಿಜಸ್ವರೂಪವನ್ನು ಹೀಗೆ ತೋರಿಸಿದ್ದಾರೆ.

"ಒಳಗಿನ ಮಾತು ಸಂಗಯ್ಯನೇ ಬಲ್ಲ; ಲಿಂಗಯ್ಯ ತಾನಾಗಿ ನೋಡ್ಯಾನ|
ಲಿಂಗಸಂಗದ ಕೂನಾವು ತಾನಾಗಿ ಗುರುಪೀರಾ ಖಾದರಿ ಹೇಳ್ಯಾನ||
ಸುಳ್ಳರಂಗ ನೀ ಇರದಿದ್ದರ ಇಲ್ಲಿ ಹುಚ್ಚನೆನ್ನುವರು ತಿಳಿ ನೀನಾ|
ಬಟ್ಟೆತೊಟ್ಟು ಬಿಚ್ಚಿಡುವ ಜನರಿಗೆ ಸತ್ಯ ಕೆಟ್ಟ ಸಂಕಟರಮಣ||
ಪ್ರೀತಿ ಮಾಡುವ ಜನರಿಗೆ ಜಗದಲ್ಲಿ ಅಸುರರೆಂದರು ತಿಳಿ ನೀನಾ|
ಕುಡಿತ ಕಡಿತ ಜಡಿತೆಲ್ಲಾ ಮಾಡಿ ಇಲ್ಲಿ ದೇವರಾದರು ತಿಳಿ ಜಾಣಾ||
ಕಾಲಿಗೆ ತಲೆಯೆಂದು ತಲೆಗೆ ಕಾಲೆಂದು ಪಂಡಿತರಾಗ್ಯಾರೊ ತಿಳಿ ನೀನಾ|
ಸುರ ಅಸುರರ ಮೂಲಾ ಗುಟ್ಟು ತಿಳಿದ ಶರಣರಿಗಾಯಿತು ಅವಮಾನ||
ಎಲ್ಲ ಧರ್ಮದಲ್ಲಿ ಮಣ್ಣಿಗೆ ಸುಣ್ಣ ಹೊಡೆದು ಸುಳ್ಳು ಹೇಳಿದವರಿಗೆ ಘನಸ್ಥಾನ|
ಸತ್ಯ ಹೇಳಿದ ಸೂಫಿಸಂತರಿಗೆ ಗಲ್ಲಿಗೇರಿಸ್ಯಾರೊ ತಿಳಿ ನೀನಾ||
ಮೂರು ಕಾಲದೊಳು ಬದಲಾಗುವ ಜನ ನೋಡಿ ತಿಳಿಯೊ ನೀ ಅವರ ಗುಣ|
ಸಾಲಗುಂದಿಪುರದೊಳು ನೀ ಹಸನಾಗಿ ವೆಸನ ಮಾಡಿ ತಿಳಿ ನಿನ್ನ ನೀನಾ||
ಗುರುವೇ ಖಾದರಿ ಪೀರನಾಗಿ ಹೇಳೋ ಇದ್ದದ್ದು ಇದ್ದಾಂಗ ಜಗದ ಗುಣ|
ಸತ್ಯಶರಣರಿಗೆ ಕಾಡಿಸಿ ಕೊಲೆಮಾಡಿ ಬೆಂಕಿಯಂಥ ಶರಣೆಂದ ಜನ||
ಇನ್ನೊಂದು ತತ್ತ್ವಪದದಲ್ಲಿ "ಇಲ್ಲಿ ಧರ್ಮ ಎಂಬುದು ಬಂದೀಖಾನೆ ಅಲ್ಲಿ ನರಕ ಎಂಬುವ ಬಂದೀಖಾನೆ ... .. ಪ್ರೀತಿಯೇ ನಿಜಧರ್ಮ ನನ್ನ ಗುರುವಿನಾಣೆ|" ಎಂದು ಪ್ರೇಮದ ಉತ್ಕಟ ಭಾವವನ್ನು ಮೆರೆದಿದ್ದಾರೆ. ಎಲ್ಲ ಸೂಫಿಗಳಂತೆ ಅವರಿಗೆ ಪ್ರೇಮವೇ ಧರ್ಮವಾಗಿತ್ತು. ಬಸವಣ್ಣನವರ ದಯೆ ಮತ್ತು ಭಕ್ತಿಯನ್ನು ಅವರು ಪೇಮದ ಆದಿ ಮತ್ತು ಅಂತ್ಯವಾಗಿ ಕಾಣುತ್ತಾರೆ. ಅವರ ’ಬಡವರ ಬಸವ’ ಕವನ ಇದಕ್ಕೆ ಸಾಕ್ಷಿ.

"ಬಸವ ಬಡವರ ಬಸವ ಕರುಣಾಸಾಗರ ಬಸವ|
ಅಲ್ಲಮನ ಪ್ರಾಣ ಬಸವ ಅಕ್ಕನ ಮಾನ ಬಸವ|
ಸರ್ವರೊಳು ಗುರುಸಂಗನ ಕಂಡ ಕಲ್ಯಾಣ ಬಸವ||
ಬಸವ ನಿನ್ನಯ ವಾಸ ಕೂಡಲಸಂಗನ ಧ್ಯಾಸ|
ಸತ್ಯ ಸಾರುವ ಧೀಶ ನಿನ್ನ ನೆನೆಯುವ ಧ್ಯಾಸ|
ಮರೆತು ಬಾಳೆನಯ್ಯಾ ಬಸವ ನನ್ನುಸಿರು ನನ್ನ ಬಸವ||
ಭೇದ ಅಳಿದವನೆ ಬಸವ ಪ್ರೀತಿ ತಿಳಿಸಿದವನೆ ಬಸವ|
ಜಾತಿ ಧರ್ಮಕೆ ಅತೀತನಾಗಿ ಮಾನವತೆಯ ಪ್ರಾಣ ಬಸವ||
ಎಲ್ಲಾ ನನ್ನವರೆಂದು ಭೇದವಿಲ್ಲದ ಬಂಧು|
ಎಲ್ಲಾ ಮಾನವರೊಂದು ಎಲ್ಲರೂ ಶರಣರೆಂದು|
ಎಲ್ಲರೊಳು ತಾ ಕಿರಿಯನೆಂದು ತನ್ನ ತಾನು ತಿಳಿದ ಬಸವ||
ಬಿಜ್ಜಳನಿಗೆ ಬಸವನೇ ಮಂತ್ರ ಹಾರವನ ಸ್ಥಾನ ಅತಂತ್ರ|
ಕೊಂಡಿ ಮಂಚಣ್ಣನ ಕುತಂತ್ರ ಮಂತ್ರಿಪದವಿ ಬಿಟ್ಟುನಿಂತ|
ದೀನರಾ ಮಾನ ಬಸವ ಬಡವರ ಪ್ರಾಣ ಬಸವ||
ಬಡಜಂಗಮರು ಶಿವನೆಂದು ಸಾರಿದ ಧೀರಬಸವ|
ಸಾಲಗುಂದಿಪುರದ ಜನರ ಪ್ರೀತಿಪ್ರಾಣವೆ ಬಸವ|
ಗುರುಪೀರಾ ಖಾದರಿಯ ಜೀವದಾಜೀವ ಬಸವ||
೧೯ನೇ ಶತಮಾನದಲ್ಲಿ ಬಸವಣ್ಣ ಎಂದರೆ ಎತ್ತು ಎಂದು ತಿಳಿದಂಥ ವಾತಾವರಣವಿತ್ತು. ಕನ್ನಡಿಗರಲ್ಲಿ ವಚನಪ್ರಜ್ಞೆಯೇ ಮೂಡಿರಲಿಲ್ಲ. ಇಂಥ ಸ್ಥಿತಿಯಲ್ಲಿ ಖಾದರಿಪೀರಾ ಅವರು ಬಸವಣ್ಣನವರ ಬಗ್ಗೆ ಸೂಕ್ಷ್ಮ ವಿವರಣೆಗಳೊಂದಿಗಿನ ಒಳನೋಟವನ್ನು ಹೊಂದಿದ ಪದರಚನೆ ಮಾಡಿದ್ದು ಇಂದಿನ ವಚನತಜ್ಞರನ್ನು ಕೂಡ ಬೆರಗುಗೊಳಿಸುವಂಥದ್ದಾಗಿದೆ.
ಬಸವಣ್ಣ ಹುಟ್ಟಿದ ವಿಜಾಪುರದಲ್ಲೇ ಹುಟ್ಟಿದ ಪ್ರಖ್ಯಾತ ಸೂಫಿ ಸಂತರಾಗಿದ್ದ ಹಾಗೂ ತಮ್ಮ ಪತ್ನಿ ಸಯ್ಯದಾ ಬೀಬಿ ಜೈನಬ್‌ರವರ ಪೂರ್ವಜರಾಗಿದ್ದ ಖಾಜಾ ಅಮೀನುದ್ದೀನ ಆಲಾ (೧೫೯೭-೧೬೭೫) ಅವರ ಬಗ್ಗೆ ಖಾದರಿಪೀರಾ ಅವರು ಬರೆದದ್ದು ಶರಣ ಮತ್ತು ಸೂಫಿ ಬದುಕಿನಲ್ಲಿ ಯಾವುದೇ ಭೇದವಿಲ್ಲ ಎಂಬುದನ್ನು ಸೂಚಿಸುತ್ತದೆ.

"ಸದ್ಗುರು ಅಮೀನ್ ಆಲಾ ಭೇದ ತೊರೆದು ನೀನೇ ಮೌಲಾ|
ಕರುಣಿಸಿ ನನ್ನ ಮ್ಯಾಲೆ ನೀನಾದಿ ನನ್ನ ಶೀಲಾ||
ಅಜ್ಞಾನಿಗಳಿಗೆ ನೀನು ಜ್ಞಾನದಾನ ಮಾಡುವಾತ|
ಧರ್ಮಜಾತಿಭೇದ ಅತೀತಾ ಖ್ವಾಜಾ ಅಮೀನ್ ಆಲಾ||
ದೊರೆಗಳಿಗೆ ದೊರೆಯಾದಾತ ಬಡವರಿಗೆ ನೀ ವಿಧಾತ|
ಸರ್ವರಲಿ ನೀನೆ ಪ್ರಾಣ ಆಖಾ ಅಮೀನ್ ಆಲಾ||
ಪ್ರೀತಿ ಒಂದೇ ನಿನ್ನ ಮಾತ; ಸಿದ್ಧ ನಾಥರಿಗೆ ನೀ ನಾಥ|
ಭೇದವಿಲ್ಲೊ ನಿನಗೆ ತಾತಾ ಮೌಲಾ ಅಮೀನ್ ಆಲಾ||
ಶೂನ್ಯ ಮರ್ಮ ತಿಳಿಸಿದಾತ ಭಯ ಬಯಲು ಮಾಡುವಾತ|
ಧ್ಯಾನ ಜಪತಪಿಲ್ಲದಂತೆ ಮಮಾ ಮೋಕ್ಷ ಅಮೀನ್ ಆಲಾ||
ಶಿರಹಟ್ಟಿ ಫಕೀರಸ್ವಾಮಿಗಳು ಖಾಜಾ ಅಮೀನುದ್ದೀನ ಅವರ ಶಿಷ್ಯರಾಗಿದ್ದರು. ಫಕೀರಸ್ವಾಮಿಗಳು ಹುಟ್ಟಿದಾಗ ಖಾಜಾ ಅಮೀನರು ಇಟ್ಟ ಹೆಸರೇ ಭಾವೈಕ್ಯದ ಪ್ರತೀಕವಾದ ಫಕೀರಸ್ವಾಮಿ. ಈ ಹೆಸರಿನಲ್ಲಿ ಸೂಫಿ ಮತ್ತು ಶರಣ ತತ್ತ್ವದ ಸಂಗಮವಾಗಿದೆ. ಇದು ಅಮೀನರ ಕನಸಾಗಿತ್ತು.
ತಮ್ಮ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರ ತತ್ತ್ವಗಳ ಜೊತೆ ಬಸವಣ್ಣ ಮತ್ತು ಖಾಜಾ ಅಮೀನರ ತತ್ತ್ವಗಳನ್ನು ಒಂದಾಗಿಸಿ ಮಾನವ ಏಕತೆಯ ತತ್ತ್ವಪದಗಳನ್ನು ಬರೆದ ಖಾದರಿಪೀರಾ ಅವರು ’ಈ ಧರ್ಮವ್ಯಾಕೊ ಈ ಜಾತಿಯಾಕೊ’ ಎಂಬ ಪದ್ಯದಲ್ಲಿ ಮೊದಲು ಮಾನವನಾಗು ಎಂಬುದನ್ನು ಒತ್ತಿಹೇಳಿದ್ದಾರೆ.

"ಈ ಧರ್ಮವ್ಯಾಕೊ ಈ ಜಾತಿಯಾಕೊ|
ಮೊದಲಿಗೆ ಮಾನವ ನೀನಾಗು ಸಾಕು||
ಕುರಣೆಯೇ ನಿಜಧರ್ಮ ತಿಳಿದರೆ ಸಾಕು; ಪ್ರೀತಿಯೇ ನಿಜಪೂಜೆ ಈ ಭೇದವ್ಯಾಕೊ|
ಸ್ನೇಹದಿ ನೀ ಸನಿಹ ಬರಲಿಲ್ಲವ್ಯಾಕೊ ಮೊದಲಿಗೆ ಮಾನವ ನೀನಾಗು ಸಾಕು||
ತಿಳಿಯದೆ ಏನೇನು ನೀ ಮಾಡಿ ಕೆಟ್ಟಿ; ದೇವರ ಹೆಸರೇಳಿ ನೀನೆ ತಿಂದಿಟ್ಟಿ|
ನಿರಾಕಾರ ನಿರಾಹಾರ; ಇಲ್ಲದವನಿಗ್ಯಾಕೊ, ಕಲ್ಲಿಗೆ ಎಡೆಮಾಡಿ ಕೆಡಿಸುವುದ್ಯಾಕೊ||
ಮಾನವರೆಲ್ಲರೊಂದೆ ಎಂದ್ಹೇಳುವುದ್ಯಾಕೊ; ನಾಲ್ಕು ವರ್ಣದ ಭೇದ ಬಿಡುನೀ ಸಾಕು|
ಮಾನವನೇ ನಿಜಧರ್ಮ ತಿಳಿದರೆ ಸಾಕೊ; ಸತ್ಯವೇ ಶಿವರೂಪ ನೀನಾಗಬೇಕು||
ಹಸಿದ ಹೊಟ್ಟಿಗೆ ಹಿಟ್ಟು ಕೊಡಲಿಲ್ಲವ್ಯಾಕೊ ಕಲ್ಲುದೇವರಿಗೆಂದು ಯಡೆ ಮಾಡುವದ್ಯಾಕೊ|
ಬೇಡುವವನಿಗೆ ನೀಡು ಕೆಡಸುವುದ್ಯಾಕೊ; ಉಡುವ ತಿನ್ನುವ ವಸ್ತು ನೀ ಸುಡುವುದ್ಯಾಕೊ||
ಈ ಗೊಳ್ಳು ಧರ್ಮ ಈ ಜೊಳ್ಳು ಜಾತಿ: ಪ್ರೀತಿ ತಿಳಿಯದೆ ನೀನು ಹೀಂಗ್ಯಾಕ ಸಾಯ್ತಿ|
ಈ ಕ್ರೋಧವ್ಯಾಕೊ ಈ ಭೇದ ಸಾಕೊ; ಮೊದಲಿಗೆ ಮಾನವ ನೀನಾಗು ಸಾಕು||
ಕೈಯೊಳಗಿನ ಗಂಟೆ ನೋಡಲಿಲ್ಲವ್ಯಾಕೊ; ಆರತಿ ಬೆಳಕಲ್ಲಿ ಶಿವ ಕಾಣಲಿಲ್ಯಾಕೊ|
ನೀ ದೇವನಾಗಿರುವಿ ತಿಳಿದರೆ ಸಾಕೊ; ಕಣ್ಣು ಮುಚ್ಚಿ ಬೆಕ್ಕಿನಂತೆ ಹಾಲು ಕುಡಿಯುವುದ್ಯಾಕೊ||
ಪುರ ಸಾಲಗುಂದದೊಳಗೆ ಕೂಡಲಿಲ್ಲವ್ಯಾಕೊ; ತಿಳಿದು ಮತ್ತಿದರೊಳಗೆ ಬೆರಿಲಿಲ್ಲವ್ಯಾಕೊ|
ಗುರುಪೀರ ಖಾದರಿಯ ದಯವೊಂದೇ ಸಾಕೊ; ಪ್ರೀತಿಯೆ ನಿಜಧರ್ಮ ತಿಳಿದೆಡುವೂದ್ಯಾಕೊ||"
ಮಾನವೀಯತೆ ಇಲ್ಲದ್ದು ಏನೇ ಇದ್ದರೂ ಅರ್ಥಹೀನ ಎಂಬ ಅವರ ದೃಢನಿಲವು ಸದಾಕಾಲ ಮಾನವರನ್ನು ಎಚ್ಚರಗೊಳಿಸುವಂಥದ್ದಾಗಿದೆ. ಮಾನವೀಯತೆಯ ಅಭಾವದಿಂದಾಗಿಯೇ ನಮಗೆ ಮಂದಿರ ಮಸೀದಿ ವಿವಾದಗಳು ದೊಡ್ಡದಾಗುತ್ತವೆ. ಅಂದಿನ ದಿನಗಳಲ್ಲೇ ಇಂಥ ಸಮಸ್ಯೆಗಳು ಕುರಿತು "ಗುಡಿಗುಂಡಾರದ ಜಗಳವ್ಯಾಕೊ ಯಪ್ಪ; ಮಾನವಗೆ ಮಾನವನು ತಾ ತಿಳಿಯಬೇಕು. ಎಲ್ಲರೊಳಗೆ ಜೀವಶಿವನಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ" ಎಂದು ಬುದ್ದಿ ಹೇಳಿದ್ದಾರೆ. ಈ ಬುದ್ಧಿ ನಮಗೆಲ್ಲ ಬಂದಿದ್ದರೆ ರಾಮಜನ್ಮಭೂಮಿ ವಿವಾದದಲ್ಲಿ ಸಹಸ್ರಾರು ಜನರು ಪ್ರಾಣ ಕಳೆದುಕೊಂಡು ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗುವ ಪ್ರಸಂಗ ಬರುತ್ತಿರಲಿಲ್ಲ.

"ಇವನ ಎಲ್ಲೆಲ್ಲಿ ಹುಡುಕಿದೆನಲ್ಲ ಅವನು ನನ್ನೊಳಗೆ ತಾನಿದ್ದನಲ್ಲ|
ಸುಮ್ಮಸುಮ್ಮನೆ ತಿರುಗಿ ಸತ್ತೆನಲ್ಲ; ನನ್ನ ಒಡೆಯನ ನಾ ತಿಳಿಯಲಿಲ್ಲ|
ಯವ್ವ ನನ್ನ ಗಂಡನ ನಾ ತಿಳಿಯಲಿಲ್ಲ||
ಕಾಬಾ ಕಾಶಿಯೊಳಗೆ ಕಾಣಲಿಲ್ಲ; ವ್ಯರ್ಥ ಕಲ್ಲುಪೂಜೆ ಮಾಡಿ ಸತ್ತೆನಲ್ಲ|
ಭೇದ ನಾ ಮಾಡಿ ಮೋಸ ಹೋದೆನಲ್ಲ; ನನ್ನ ಪ್ರಿಯಕರನ ನಾ ತಿಳಿಯಲಿಲ್ಲ||"
ದೇವರನ್ನು ಮಂದಿರ ಮಸೀದಿಗಳಲ್ಲಿ ಹುಡಕದೆ ನಮ್ಮೊಳಗೆ ಹುಡುಕಿದ್ದರೆ ಈ ಪರಿಸ್ಥಿತಿ ಬಂದೊದಗುತ್ತಿರಲಿಲ್ಲ.
"ಈ ಸೃಷ್ಟಿಗೆ ನೀನೊಡೆಯನಂತ ಸೃಷ್ಟಿಕರ್ತನ ಪ್ರತಿರೂಪವಂತ|
ಕಲ್ಲುದೇವರು ಹೆಂಗ ಹುಟ್ಯಾರಂತ ಇವರಪ್ಪ ಅಮ್ಮ ಯಾರಂತ|
ಈ ದೇವರಿಗೆ ನೀ ದೇವರಂತ ನಿನ್ನ ಬಿಟ್ಟು ದೇವರಿಲ್ಲಂತ ಭಗವಂತ||
ಎಂಬ ತೀಕ್ಷ್ಣ ಮಾತುಗಳಿಂದ ಖಾದರಿಪೀರಾ ಅವರು ನಮ್ಮನ್ನು ಜಾಗೃತಗೊಳಿಸುತ್ತಾರೆ. ಕಣ್ಣಿಗೆ ಕಾಣುವ ಎಲ್ಲ ದೇವರುಗಳನ್ನು ಮಾನವನೇ ಸೃಷ್ಟಿ ಮಾಡಿದ್ದಾನೆ. ಅವು ಕಾಲದ ತುಳಿತಕ್ಕೆ ಒಳಗಾಗುವ ದೇವರುಗಳು! ಆದರೆ ಆತ ತನ್ನೊಳಗಿನ ಅಗಮ್ಯ ಅಗೋಚರ ಮತ್ತು ಅಪ್ರತಿಮನಾದ ದೇವರನ್ನು ಕಾಣುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಹೀಗಾಗಿ ಜಾತಿ ಧರ್ಮಗಳ ಹೆಸರಿನಲ್ಲಿ ಭೇದಭಾವ ಮಾಡುವುದರಲ್ಲೇ ಮಾನವ ಆಯುಷ್ಯವನ್ನು ಕಳೆದುಕೊಳ್ಳುತ್ತಾನೆ.
"ಅಲ್ಲಾಕೇ ಬಂದೇ ತೊಗಲೆಲ್ಲ ಒಂದೆ; ಯೋಚಿಸು ನೀನ್ಯಾರು ಎಲ್ಲಿಂದ ಬಂದೆ. ನಿನ್ನ ನೀನು ತಿಳಿದುಕೊಂಡು ನಡಿಯಬೇಕು ಮುಂದೆ" ಎಂದು ಅವರು ಮುಸ್ಲಿಮರಿಗೆ ಹೇಳಿದರೆ, ಹಿಂದುಗಳಿಗೆ ಹೀಗೆ ಹೇಳುತ್ತಾರೆ:

"ಬ್ರಾಹ್ಮಣ ವೈಶ್ಯ ಕ್ಷತ್ರಿಯ ಶೂದ್ರ ನಾಲ್ಕರಿಂದ ವೇದ ಭದ್ರ|
ಶೂದ್ರ ಸಣ್ಣ ವಸ್ತು ಎಂದು ತಿಳಿಯಬ್ಯಾಡೊ ನೀ ದರಿದ್ರ||
ತಿನ್ನುವ ಅನ್ನ ಶೂದ್ರ, ಕುಡಿಯುವ ನೀರು ಶೂದ್ರ|
ತಿಳಿದು ಹೇಳಿದವನು ಇದ್ರ ಕೇಳಿದವನು ಬಲು ಭದ್ರ||
ಹನಿಯಾಗಿ ಇರು ನೀ ಇದ್ರ ಸಾಲಗುಂದಿ ಬಲು ಭದ್ರ|
ಪಿಂಡ ಅಂಡದೊಳಗೆ ಸೇರಿ ಒಳಗಿನಿಂದ ಬಂದ ಶೂದ್ರ||"

ಈ ಎಲ್ಲ ತಾರತಮ್ಯಗಳು ದೇಹದಲ್ಲಿ ಜೀವವಿರುವ ವರೆಗೆ ಮಾತ್ರ. ಆ ಜೀವವೇ ಪರಮಾತ್ಮ. ಆ ಪರಮಾತ್ಮ ನಮ್ಮಿಂದ ದೂರ ಹೋದ ಮೇಲೆ ನಾವು ಹೆಣವಾಗುವೆವು. "ಅವ ನಿನ್ನಲ್ಲಿರುವತನಕ ಆನಂದ ಸಿಗುವುದು ನಿನಗ. ಅವ ಬಿಟ್ಟು ಹೋದ ಮ್ಯಾಗ ಹೆಣವೆಂದು ಕರಿವರು ನಿನಗ" ಎಂದು
ಖಾದರಿಪೀರಾ ಅವರು ಮಾನವದೇಹದ ನಶ್ವರತೆಯ ಬಗ್ಗೆ ಹೇಳುತ್ತಾರೆ. ನಮ್ಮ ಎಲ್ಲ ಮೇಲುಕೀಳುಗಳು ದೇಹಕ್ಕೆ ಅಂಟಿಕೊಂಡು ಮನಸ್ಸಿಗೆ ಕಿರಿಕಿರಿ ಮಾಡುತ್ತವೆ. ದೇಹವು ಐಹಿಕ ಸುಖವನ್ನು ಬಯಸುತ್ತದೆ. ಐಹಿಕ ಸುಖ ನೀಡುವ ವಸ್ತುಮೋಹದಿಂದಾಗಿ ವರ್ಗಗಳು ಮತ್ತು ವರ್ಣಗಳು ಸೃಷ್ಟಿಯಾಗಿವೆ. ಮಾನವ ಐಹಿಕ ಸುಖವನ್ನು ಮೀರಿ ಒಳನೋಟದ ಅರಿವನ್ನು ಪಡೆದು ಜೀವಪರವಾದಾಗ ಸಹಜವಾಗಿಯೇ ಸರ್ವರಿಗೂ ಸಮಾನವಾದ ಬದುಕನ್ನು ಬಯಸುತ್ತಾನೆ. ಹೀಗೆ ಮಾನವರು ಸರ್ವಸಮತ್ವದಿಂದ ಬದುಕಬೇಕೆನ್ನುವುದೇ ಖಾದರಿಪೀರಾ ಅವರ ಆಶಯವಾಗಿದೆ.

"ಇರಬೇಕವ್ವಾ ಇರಬೇಕು ಗುರು ಎಲ್ಲರಿಗಿರಬೇಕು. ಜಾತಿಧರ್ಮಗಳಿಗತೀತನಾದ ಸದ್ಗುರು ನಮಗೆ|
ಇರಬೇಕು ಇರಬೇಕು ಗುರು ಇರಬೇಕು"
ಎಂದು ಅವರು ಇಂಥ ಸದುದ್ದೇಶದಿಂದಲೇ ಹೇಳಿದ್ದಾರೆ.

"ನಮ್ಮ ದೇಶಕ್ಕೆ ಮತ್ತು ನಮ್ಮ ಜನಗಳಿಗೆಲ್ಲ. ಸೌಖ್ಯವಾಗಿರುವಂಥ ಸುಬುದ್ಧಿ ಕೊಡು ಅಲ್ಲಾ. ಈಶ್ವರನು ನೀನಾಗಿ ರಕ್ಷಿಸು ನಮಗೆಲ್ಲಾ
ಎಂದು ಅವರು ಪ್ರಾರ್ಥಿಸಿದ್ದಾರೆ. ಅವರ ದೇಶಪ್ರೇಮ ಅನುಕರಣೀಯವಾಗಿದೆ. ಅವರು ಬದುಕಿದ ಕಾಲದಲ್ಲಿ ಭಾರತ ಎಂಬುದು ಅನೇಕ ದೇಶಗಳ ದೇಶವಾಗಿತ್ತು. ಇಂದಿನ ಭಾರತದೇಶದ ಕಲ್ಪನೆ ಅಂದು ಇರಲಿಲ್ಲ. ಆದರೆ ಖಾದರಿಪೀರಾ ಅವರು ಭವ್ಯಭಾರತದ ಕನಸುಕಂಡಿದ್ದರು.

"ನಮಿಸುವೆ ಭಾರತಿ ತಾಯಿಗೆ ಸಿರಬಾಗಿ ತಲೆಬಾಗಿ ಮಮತೆಯ ಮೂರುತಿ ನೀನೆಂದ|
ಪುಣ್ಯ ಬೇಕು ಈ ಭೂಮಿಯಲು ಹುಟ್ಟಲು ಭಾಗ್ಯವಂತರು ನಾವೆಂದ||"
ಸೂಫಿಸಂತನ ಈ ದೇಶಪ್ರೇಮ ನಮಗೆಲ್ಲ ಮಾರ್ಗದರ್ಶಿಯಾಗಬೇಕಲ್ಲವೆ? ಅಷ್ಟೇ ಅಲ್ಲ ಮುಹಮ್ಮದ್ ಪೈಗಂಬರರು ಕೂಡ ಭಾರತದೇಶವನ್ನು ಪ್ರೀತಿಸಿದ್ದರು ಎಂಬುದನ್ನು ನಮ್ಮ ನೆನಪಿಗೆ ತರುತ್ತಾರೆ.

"ಮಹ್ಮದ್ ಶರಣರು ಪ್ರೀತಿ ಮಾಡುವ ದಿಕ್ಕದು ಭಾರತ ದೇಶೆಂದ|
ಅರಬ್ ದೇಶದಲ್ಲಿ ಹುಟ್ಟಿದೆ ಮನಸಿಲ್ಲಾ ನನ್ನ ಮನಸು ಭಾರತವೆಂದ|
ಅಲೆನಬಿ ಅನ್ಸಾರಿಗಳೆಲ್ಲ ನೆಲೆಸಿದ ಈ ದೇಶ ಬಲು ಛಂದ||"
ಮುಹಮ್ಮದ್ ಪೈಗಂಬರರ ವಚನಗಳಾದ ಹದೀಸ್‌ನಲ್ಲಿ ಹಿಂದ್ (ಭಾರತ) ದೇಶದ ಬಗ್ಗೆ ಪ್ರಸ್ತಾಪವಿದೆ. ಹಿಂದ್‌ನಿಂದ ತಂಪುಗಾಳಿ ಬೀಸುತ್ತಿದೆ. ನಾನು ಹಿಂದ್‌ನಲ್ಲಿ ಇಲ್ಲ; ಹಿಂದ್ ನನ್ನೊಳಗೆ ಇದೆ ಎಂದು ಮುಂತಾಗಿ ಪೈಗಂಬರರು ಹೇಳಿದ ವಿಚಾರಗಳು ಹದೀಸ್‌ನಲ್ಲಿ ಇವೆ. ಈ ತಂಪುಗಾಳಿ ಶಾಂತಿತತ್ತ್ವದ ಪ್ರತೀಕವಾಗಿದೆ. ಉಪನಿಷತ್ತಿನ ಶಾಂತಿಮಂತ್ರಗಳು ಮತ್ತು ನಿರ್ಗುಣ ನಿರಾಕಾರ ಬ್ರಹ್ಮತತ್ತ್ವ ೧೪೦೦ ವರ್ಷಗಳಷ್ಟು ಹಿಂದೆಯೆ, ಅಂದರೆ ಪೈಗಂಬರರ ಜೀವಿತಾವಧಿಯಲ್ಲೇ ಅರಬ್ ದೇಶವನ್ನು ತಲುಪಿದ ಸಾಧ್ಯತೆಗಳಿವೆ. ಇಂಥ ಮಹತ್ವದ ಚಿಂತನೆಗಳನ್ನು ಖಾದರಿಪೀರಾ ಅವರು ನಮ್ಮ ಮುಂದೆ ಇಟ್ಟು ವಿಶ್ವಬಂಧುತ್ವದಲ್ಲಿ ಭಾರತದೇಶದ ಮಹತ್ವವನ್ನು ೧೯ನೇ ಶತಮಾನದಲ್ಲೇ ಸಾರಿದ್ದಾರೆ.
ಸುಳ್ಳುದೇವರುಗಳೆಲ್ಲ ನಾಶವಾಗಿ ’ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವ ಕುಲ’ ಎಂದು ಮಾನವರು ನಂಬುವುದರ ಮೂಲಕ ಎಲ್ಲ ಅಡ್ಡಗೋಡೆಗಳನ್ನು ಕೆಡವುತ್ತ ಒಂದಾಗುವ ಕಾಲ ಬರುತ್ತದೆ ಎಂಬುದರಲ್ಲಿ ಅವರಿಗೆ ನಂಬಿಕೆ ಇದೆ. ಸಾಲಗುಂದಾದಂಥ ಹಳ್ಳಿಯ ಮೂಲೆಯೊಂದರಲ್ಲಿ ಕುಳಿತಿದ್ದ ಅವರು, ಕೈಗಾರಿಕೀಕರಣದಿಂದಾಗಿ ಜಗತ್ತಿನ ರೂಪು ಬದಲಾಗುತ್ತಿರುವುದನ್ನು ಮಾಧ್ಯಮದ ಸಹಾಯವಿಲ್ಲದೆ ಅರ್ಥೈಸಿಕೊಂಡಿದ್ದಾರೆ. ಟಿ.ವಿ. ಜನಕ ಲೋಗಿ ಬಿಯಾರ್ಡ್ ಹುಟ್ಟುವ ಮೊದಲೇ ಟಿ.ವಿ. ಬರುವ ಬಗ್ಗೆ ಅವರು ನಿಖರವಾಗಿ ತಿಳಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸೃಷ್ಟಿಯಾಗುತ್ತಿರುವ ಹೊಸ ಕಾಲದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ದೇವರು ಧರ್ಮಗಳ ಕುರಿತ ಆಚಾರ ವಿಚಾರಗಳಲ್ಲಿ, ಜಾತಿ ಮತ್ತು ವರ್ಗಗಳಲ್ಲಿ, ಆಹಾರ ಧಾನ್ಯಗಳ ಉತ್ಪಾದನಾ ಮತ್ತು ಸಂಸ್ಕರಣಾ ವ್ಯವಸ್ಥೆಯಲ್ಲಿ, ಹೆಣ್ಣು ಗಂಡಿನ ಸಂಬಂಧಗಳಲ್ಲಿ ಅಗಾಧ ಬದಲಾವಣೆಗಳಾಗುವ ಬಗ್ಗೆ ಅವರು ತರ್ಕಬದ್ಧವಾದ ಭವಿಷ್ಯ ನುಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ’ಕಾಲ ಬಲುಬೇಗ ಬರುತೈತೆ’ ಎಂದು ಬರೆದ ತತ್ತ್ವಪದವಿದು.

"ಕಾಲ ಬಲುಬೇಗ ಬರತೈತೆ ಈ ದೇವರೆಲ್ಲ ನಾಶವಾಗುವ ಕಾಲ|
ಬಲುಬೇಗ ಬರತೈತೆ||
ಗೊತ್ತಿಲ್ಲದೆ ಗಳಿಸಿದ ಆಸ್ತಿ ಬಡವರ ಪಾಲಾಗುವ ಕಾಲ|
ಜಾತಿಭೇದಗಳು ನಾಶವಾಗಲು ದ್ವೇಷವಿಲ್ಲದೆ ಬದುಕುವ ಕಾಲ||
ಮಠದಲ್ಲಿಯ ಘಟದ ದೇವರಿಗೆ ಹಟದಿಂದ ಕಡಿಯುವ ಕಾಲ|
ಹೊಗಳುತಿದ್ದ ನಾಯಿಗಳೆಲ್ಲ ಹಡಪತ್ತಿ ಅವು ಸಾಯುವ ಕಾಲ||
ಹೆಚ್ಚಿನ ಬೆಳೆಯನು ತಂತ್ರಜ್ಞಾನದಿ ಯಂತ್ರದಿಂದ ಬೆಳೆಯುವ ಕಾಲ|
ಧಾನ್ಯ ರಸವನು ಮಾನ್ಯ ಮಾಡಿಸಿ ಗುಳಿಗೆ ಮಾಡಿ ನುಂಗಿ ಬದುಕುವ ಕಾಲ||
ಗಂಡು ಹೆಣ್ಣುಗಳ ಭೇದ ಅಳಿಯುವುದು; ಹೆಣ್ಣು ತನ್ನ ತಾ|
ತಿಳಿದು ಬಾಳುವುದು; ಕೃತಕ ಗರ್ಭಧಾರಣದಿಂದ ಮಕ್ಕಳು ಜನ್ಮಪಡೆಯುವ ಕಾಲ||
ದೇವರಿಂದ ಆಗದ ಕೆಲಸಕೆ ಮಾನವ ಸಾಧಿಸಿ ತೋರುವ ಕಾಲ|
ಒಂದೆ ಕ್ಷಣದಿ ನಿರ್ಜೀವ ಲೋಹದಿ ಅಲ್ಲೆ ವಸ್ತು ಇಲ್ಲಿ ಕಾಣುವ ಕಾಲ||
ಬಡವರು ಶ್ರೀಮಂತರಾಗುವರು, ಶ್ರೀಮಂತರು ಬಡವರಾಗುವರು|
ಕಷ್ಟ ಪಟ್ಟವರು ಸುಖಭೋಗಿಸುವ ಸತ್ಯವೆಂಬ ನಿತ್ಯದ ಕಾಲ||
ಉತ್ತರದಿಂ ನಾಶವಾಗುವರು ದಕ್ಷಿಣದಿಂ ರಾಜ್ಯವಾಳುವರು|
ಚಪಲ ಮೋಸ ವಂಚನೆಯಲ್ಲ ಹಾಳಾಗಿ ಹಲ್ ಕಿಸಿಯುವ ಕಾಲ||
ಸತ್ಯ ಮಿಥ್ಯಕೆ ಜಗಳಾಗುವುದು ಮಿಥ್ಯ ನಿತ್ಯ|
ನಾಶ ಆಗುವುದು ಸತ್ಯಗುರು ಖಾದರಿ ಪೀರನು|
ಹೇಳಿದ ಸತ್ಯ ನೋಡುವ ಕಾಲ||
ಇಂಥ ಬದಲಾವಣೆಗಳೊಳಗಿನ ವೈರುಧ್ಯಗಳನ್ನೂ ಅವರು ಗುರುತಿಸಿದ್ದಾರೆ. ೧೫೦ ವರ್ಷಗಳಿಗೂ ಹಿಂದೆಯೆ ಪ್ರಜಾಪ್ರಭುತ್ವದಲ್ಲಿನ ಸಮಸ್ಯೆಗಳನ್ನು ಗುರುತಿಸಿದ್ದಾರೆ.

"ಪ್ರಜೆಗಳೆಲ್ಲ ಪ್ರಭುಗಳು ಎಂದು ಹೇಳುವರು ಜನರಲ್ಲಿ|
ಸುಳ್ಳು ಮೋಸ ವಂಚನೆ ಮಾಡಿ ಪ್ರಭುಗಳು ಆಗುವರು ಇಲ್ಲಿ||
ಸತ್ಯವೆಂಬಾ ಬಡತನದಲ್ಲಿ ಸುಳ್ಳಿಗೆ ಶ್ರೀಮಂತಿಕೆಯಿಲ್ಲಿ|
ನೂರಾರು ಮನೆಗಳು ಮುರಿದು ಧರ್ಮಛತ್ರ ಕಟ್ಟುವರಲ್ಲಿ||"
ಎಂದು ಅವರು ಹೇಳುವಲ್ಲಿ ಇಂದಿನ ಭ್ರಷ್ಟಸಮಾಜದ ಬೇರುಗಳಿವೆ. ‘ಎಷ್ಟೊಂದು ತರ್ಕಬದ್ಧ ಮುಂದಾಲೋಚನೆಯ ವಿಶಿಷ್ಟ ಸೂಫಿ ಈ ಖಾದರಿಪೀರಾ’ ಎಂಬುದು ಅವರ ತತ್ತ್ವಪದಗಳ ಓದುಗರಿಗೆ ಅನಿಸದೆ ಇರದು.

"ಉಳಿಯದೊ ಯಪ್ಪಾ ಈ ದೇಶ ಹಿಂಗಾದರೆ ದಿವಸಾ|
ಜಾತಿಯ ಜಗಳವೆದ್ದು ಬಿದ್ದಾರೊ ತಾವೆ ಎದ್ದು ದಿವಸಾ|
ನ್ಯಾಯಾದ ಮೂಲ ಈ ಖೋಡಿ ಜಗಳ||"
ಹೀಗೆ ಅವರು ಜನಸಮುದಾಯಗಳ ಮಧ್ಯದ ವೈರುಧ್ಯಗಳು ದೇಶದ ಏಕತೆಗೆ ಹೇಗೆ ಕಂಟಕವಾಗುತ್ತವೆ ಎಂಬುದನ್ನು ತಿಳಿಸಿಹೇಳಿದ್ದಾರೆ. ಜಾತಿ ಧರ್ಮಗಳ ಮಧ್ಯದ ವೈರುಧ್ಯ ಹೆಚ್ಚಾದಂತೆಲ್ಲ ಪರಿಸ್ಥಿತಿ ಉಲ್ಬಣಗೊಂಡು ಇಂದು ದೇಶ ಭಯೋತ್ಪಾದಕರ ಮತ್ತು ಕೋಮುಗಲಭೆಕೋರರ ಸ್ಥಾನವಾಗಿದೆ. ಈ ದೇಶ ದುರ್ದಿನಗಳನ್ನು ಕಾಣಬಾರದು ಎಂಬುದು ಅವರ ಕಳಕಳಿಯಾಗಿತ್ತು. ಸೌಹಾರ್ದ ಬದುಕಿನಿಂದ ಮಾತ್ರ ಈ ದುರಂತವನ್ನು ತಪ್ಪಿಸಲು ಸಾಧ್ಯ ಎಂಬುದು ತಮ್ಮ ಬಹುಪಾಲು ತತ್ತ್ವಪದಗಳಲ್ಲಿ ಸೂಚಿಸಿದ್ದಾರೆ.

"ಎಲ್ಲಾ ನೀನೇ ಮಾಡಿ ಅವನ ಹೆಸರು ಹೇಳಬೇಕು ಪುಣ್ಯವಂತನವನು|
ಅವನೇ ನಾನೆಂದು ಹೇಳಿದ ಮನಸೂರಗೆ ಗಲ್ಲಿಗೇರಿಸಿಲ್ಲೇನು?
ಬ್ಯಾಡೆಂದು ಹೇಳಲಿಲ್ಲ ಕಾರಣೇನು?"
ಸೂಫಿಸಂತ ಮನಸೂರ್ ’ನಾನೇ ಸತ್ಯ ಎಂದು ಹೇಳಿದ್ದಕ್ಕೆ ದೈವನಿಂದನೆಯ ಆರೋಪ ಹೊರಿಸಿ ಗಲ್ಲಿಗೇರಿಸಲಾಯಿತು. ಸಮಾಜ ಅದನ್ನು ವಿರೋಧಿಸಲಿಲ್ಲ. ಮನುಷ್ಯರು ತಮ್ಮೊಳಗಿನ ಶಕ್ತಿಸಾಮರ್ಥ್ಯದಿಂದ ಎಲ್ಲವನೂ ಸಾಧಿಸುತ್ತಾರೆ. ಆದರೆ ಅದೆಲ್ಲದಕ್ಕೆ ತಮ್ಮೊಳಗಿನ ದೇವರೇ ಕಾರಣ ಎಂದು ತಿಳಿಯದೆ ಇಲ್ಲದ ದೇವರ ಹೆಸರು ಹೇಳುತ್ತಾರೆ ಎಂದು ಖಾದರಿಪೀರಾ ಬೇಸರ ವ್ಯಕ್ತಪಡಿಸುತ್ತಾರೆ.

"ದೇವರ ಹೆಸರೇಳಿ ನೀನು ಮಾಡಬ್ಯಾಡೊ ಕದನ|
ಭೇದ ಅಳೆದು ಪ್ರೀತಿ ಮಾಡಿದರೆ ನೀನೇ ದೇವರು ಗೊತ್ತಿಲ್ಲೇನಾ|
ಯೋಚಿಸಿ ನೋಡಪ್ಪಾ ನೀನಾ; ಬಿಡು ನಿನ್ನ ಕೆಟ್ಟ ಗುಣಾ||"
ನಮ್ಮ ದೇಶದ ದುರಂತವೆಂದರೆ ಮಾನವರು ತಮ್ಮ ದೇವರು ಮತ್ತು ಧರ್ಮದ ಹೆಸರಿನಲ್ಲೇ ಗಲಭೆಗಳನ್ನು ಸೃಷ್ಟಿಸುತ್ತಾರೆ. ಆದರೆ ಭೇದ ಅಳಿಸಿ ಪ್ರೀತಿ ಭಾವದ ಮೂಲಕ ತಾವೇ ದೇವರಾಗಬೇಕೆಂಬ ತೀವ್ರತೆಯನ್ನು ಅವರು ಹೊಂದಿರುವುದಿಲ್ಲ. ಅಂದರೆ ತಮ್ಮೊಳಗಿನ ಸದ್ಭಾವನೆಗಳ ಜೊತೆ ಬದುಕುವುದನ್ನು ಅವರು ಕಲಿಯಲು ಪ್ರಯತ್ನ ಮಾಡುವುದಿಲ್ಲ. ಇದೇ ಎಲ್ಲ ಭೇದಭಾವಗಳ ಮತ್ತು ಶೋಷಣೆಯ ಮೂಲವಾಗಿದೆ. ಈ ನೋವು ಖಾದರಿಪೀರಾ ಅವರಿಗೆ ಕಾಡುತ್ತಲೇ ಇದೆ. ಸತ್ಯ ಹೇಳಿದ ಹುತಾತ್ಮ ಸೂಫಿಸಂತ ಮನಸೂರರನ್ನು ಅವರು ಅನೇಕ ಕಡೆ ನೆನಪಿಸಿಕೊಳ್ಳುತ್ತಾರೆ. "ಸತ್ಯ ಹೇಳಿದವರಿಲ್ಲಿ ಉಳೀಲಿಲ್ಲ ಮನಸೂರ್‌ಗ ಗಲ್ಲಿಗೇರಿಸಿರ‍್ಯಾರೆಲ್ಲ ಎಂದು ದುಃಖಪಡುತ್ತಾರೆ.
ಯಾವುದೇ ಧರ್ಮ ತನ್ನತನವನ್ನು ಉಳಿಸಿಕೊಳ್ಳಬೇಕಾದರೆ ಅದು ಅಹಿಂಸೆ, ಸಮಾನತೆ ಮತ್ತು ಶಾಂತಿಯ ಮೇಲೆ ನಿಂತಿರಬೇಕಾಗಿರುತ್ತದೆ. ವಿಶ್ವಶಾಂತಿ ಮತ್ತು ಸತ್ಯದರ್ಶನಕ್ಕೆ ಇವೇ ಮೂಲವಾಗಿರುತ್ತವೆ. ಹಿಂಸೆಯನ್ನು ಮುಂದಿಟ್ಟುಕೊಟ್ಟು ಯಾವುದೇ ಧರ್ಮ ಸತ್ಯದರ್ಶನ ಮಾಡಿಸಲಾರದು. ಮಾನವ ಅಹಿಂಸೆಯನ್ನು ಪಾಲಿಸಬೇಕು. ಅಹಿಂಸೆಯು ಆತ್ಮಸಾಕ್ಷಾತ್ಕಾರದೆಡೆಗೆ ಒಯ್ಯುತ್ತದೆ. ಆತ್ಮಸಾಕ್ಷಾತ್ಕಾರದಿಂದ ಶಾಂತಿ ಲಭಿಸುತ್ತದೆ. ಈ ಒಳಗಿನ ಶಾಂತಿಯೇ ವಿಶ್ವಶಾಂತಿಗೆ ಮೂಲಾಧಾರವಾಗುತ್ತದೆ. ಆ ಮೂಲಕ ಸಮಾನತೆಯಿಂದ ಕೂಡಿದ ವಿಶ್ವಭ್ರಾತೃತ್ವ ಶಾಶ್ವತವಾಗುತ್ತದೆ. ಇಂಥ ವಾತಾವರಣದಲ್ಲಿ ಮಾನವರೇ ದೇವರಾಗುತ್ತಾರೆ. ಹೀಗೆ ಮಾನವರನ್ನು ಉದ್ಧರಿಸುವುದು ಧರ್ಮದ ಕಾರ್ಯವಾಗಿದೆ.
ಹಿಂಸೆ ಎಂಬುದು ಧರ್ಮಕ್ಕೆ ಅಂಟಿದ ಕಳಂಕ. ಅದು ಧರ್ಮನಿಂದನೆಯ ಆರೋಪದ ಮೇಲೆ ನಡೆಯಬಹುದು. ಧರ್ಮಯುದ್ಧದ ನೆಪದಲ್ಲಿ ನಡೆಯಬಹುದು. ಧರ್ಮರಕ್ಷಣೆಯ ನೆಪದಲ್ಲಿ ನಡೆಯಬಹುದು. ಈ ಹಿಂಸಾ ಪ್ರವೃತ್ತಿ ಕೊನೆಯಲ್ಲಿ ಕೋಮುಹಿಂಸೆ ಮತ್ತು ಭಯೋತ್ಪಾದನೆಯಲ್ಲಿ ಕೊನೆಗೊಳ್ಳುವುದು. ಆದ್ದರಿಂದ ಧರ್ಮದ ಹೃದಯವನ್ನು ಅರಿಯುವುದು ಅವಶ್ಯವಾಗಿದೆ. ಆ ಹೃದಯವಂತಿಕೆಯ ಆಧಾರದ ಮೇಲೆ ಧರ್ಮದ ಬುದ್ಧಿಯ ಮಹತ್ವವನ್ನು ತಿಳಿದುಕೊಳ್ಳಬೇಕಿದೆ. ಆದರೆ ಮೂಲಭೂತವಾದಿಗಳು ತಮ್ಮ ಧರ್ಮದ ಭುಜಭಲವನ್ನು ಮಾತ್ರ ನೋಡಲು ಬಯಸುತ್ತಾರೆ. ಹೀಗಾಗಿ ಅವರಿಗೆ ಅವರ ಧರ್ಮಗ್ರಂಥಗಳ ಅಂತರಾಳ ಗೊತ್ತೇ ಆಗುವುದಿಲ್ಲ. ಜಗತ್ತಿನ ದೇವರುಗಳಿಗೆ ಇಟ್ಟ ಹೆಸರುಗಳೆಲ್ಲ ಮನುಷ್ಯರು ಇಟ್ಟ ಹೆಸರುಗಳೇ ಆಗಿವೆ. ದೇವರು ಅಖಂಡ ಪ್ರೇಮಸ್ವರೂಪದಲ್ಲಿ ಮಾತ್ರ ಇರುತ್ತಾನೆ. ಅಲ್ಲಿ ಹಿಂಸೆ, ಅನ್ಯಾಯ, ಶೋಷಣೆ, ಅಸಮಾನತೆ ಮತ್ತು ಗುಲಾಮಗಿರಿಗೆ ಅವಕಾಶವಿಲ್ಲ.
ಒಬ್ಬ ಗುರು ತನ್ನ ಕಿರಿಯ ಶಿಷ್ಯನಿಗೆ ’ಕುದುರೆಗೆ ನೀರು ತೋರಿಸಿಕೊಂಡು ಬಾ’ ಎಂದು ಹೇಳುತ್ತಾನೆ. ಆತ ಕುದುರೆಯನ್ನು ನದಿ ದಂಡೆಗೆ ಒಯ್ದು, ಕುದುರೆಗೆ ನೀರು ಕುಡಿಯಲು ಅವಕಾಶ ಕಲ್ಪಿಸದೆ ಬರಿ ತೋರಿಸಿಕೊಂಡು ಬರುತ್ತಾನೆ. ಇದನ್ನು ಅರಿತ ಗುರು ತನ್ನ ಹಿರಿಯ ಶಿಷ್ಯನನ್ನು ಕರೆದು ’ಕುದುರೆಗೆ ನೀರು ತೋರಿಸಿಕೊಂಡು ಬಾ’ ಎಂದು ಹೇಳುತ್ತಾನೆ. ಆ ಹಿರಿಯ ಶಿಷ್ಯ ಕುದುರೆಯನ್ನು ನದಿ ದಂಡೆಗೆ ಒಯ್ದು ಬಿಡುತ್ತಾನೆ. ಆಗ ಕುದುರೆ ನೀರು ಕುಡಿಯುತ್ತದೆ. ಕುದುರೆಯು ಎಮ್ಮೆಯ ಹಾಗೆ ಅಲ್ಲ. ಅದು ನೀರು ಕಂಡಲ್ಲಿ ಮುಳುಗುವುದಿಲ್ಲ. ನೀರಡಿಕೆಯಾದಾಗ ಮಾತ್ರ ನೀರಿನ ಬಳಿ ಹೋಗುತ್ತದೆ. ಕುದುರೆಗೆ ನೀರು ಕುಡಿಯಲು ಕೂಡ ಒತ್ತಾಯಿಸಬಾರದು. ನೀರು ತೋರಿಸಬೇಕು ಅಷ್ಟೆ. ಅಂದರೆ ಅದಕ್ಕೆ ನೀರಿನ ಬಳಿ ಬಿಡಬೇಕು. ಅದು ಕುಡಿಯಬಹುದು ಅಥವಾ ಬಿಡಬಹುದು. ಒತ್ತಾಯವಿಲ್ಲ.
ಕಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥಮಾಡಿಕೊಂಡಂತೆ ಮೂಲಭೂತವಾದಿಗಳು ಧರ್ಮಗ್ರಂಥಗಳನ್ನು ಅರ್ಥೈಸುತ್ತಾರೆ. ಆದರೆ ಸೂಫಿಗಳು, ಶರಣರು, ಸಂತರು, ದಾಸರು ಮತ್ತು ತತ್ತ್ವಪದಕಾರರು ಹಿರಿಯ ಶಿಷ್ಯ ಗುರುವಿನ ಮಾತನ್ನು ಅರ್ಥಮಾಡಿಕೊಂಡಂತೆ ಧರ್ಮದ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹೀಗೆ ಎಲ್ಲ ಸೂಫಿಗಳ ಹಾಗೆ ಖಾದರಿಪೀರಾ ಅವರು ಪವಿತ್ರ ಖುರಾನ್‌ಅನ್ನು ಅರ್ಥ ಮಾಡಿಕೊಂಡರು. ತುಳಿತಕ್ಕೊಳಗಾದವರು ಮತ್ತು ಅಪಮಾನಕ್ಕೆ ಒಳಗಾದವರು ಈ ಜಗತ್ತನ್ನು ಆಳಬೇಕೆಂದು ಖುರಾನ್ ಬಯಸುತ್ತದೆ. ಈ ಖುರಾನ್ ಆಶಯಗಳೊಂದಿಗೆ ಸಾಲಗುಂದಾದಲ್ಲಿ ಬದುಕಿದ ಖಾದರಿಪೀರಾ ಅವರು ಶರಣರ ಮಾರ್ಗದಲ್ಲಿ ನಡೆಯುತ್ತ ಜನರಿಗೆ ಹೊಸ ಬದುಕಿನ ಬೆಳಕನ್ನು ನೀಡಿದ್ದು ಒಂದು ಅಪೂರ್ವ ಸಾಧನೆಯಾಗಿದೆ. ಅಂತೆಯ ಅವರು ಮೇಲೆ ತಿಳಿಸಿದ ಕಿರಿಯ ಶಿಷ್ಯನಂತಿರುವ ಮುಲ್ಲಾ ಮೌಲಾನರನ್ನು ಪ್ರಶ್ನಿಸುತ್ತಾರೆ.

"ನಿನ್ನ ನೀನು ತಿಳಿಯೋ ಮುಲ್ಲಾ, ದಯವಿಲ್ಲದೆ ಧರ್ಮವಿಲ್ಲ|
ನಲ್ಲನ ನೀ ಎಂದು ನೋಡಲಿಲ್ಲ, ಬರೆ ಕೂಗಿದೋ ಮುಲ್ಲಾ|
ನೋಡಿ ನಿನಗೆ ನಗುತಾನ ಅಲ್ಲಾ; ನೀ ನೋಡಲಿಲ್ಲ||"
ಎಂದು ಹೇಳುವ ಮೂಲಕ ಅವರು ಮುಸ್ಲಿಂ ಮೂಲಭೂತವಾದಿಗಳನ್ನು ಎದುರು ಹಾಕಿಕೊಳ್ಳುತ್ತಾರೆ. ದೇವರಲ್ಲಿ ಅಚಲವಾದ ನಂಬಿಕೆ ಇರುವ ಅವರು ಆತನನ್ನು ಮನುಷ್ಯನ ಒಳಗೇ ಕಾಣಲು ಲೋಕಕ್ಕೆ ತಿಳಿಸುತ್ತಾರೆ. ಸೂಫಿಗಳಿಂದ ಆರಂಭವಾದ ಈ ಕ್ರಮ ಶರಣರಲ್ಲಿ ಅಂತಿಮ ಘಟ್ಟವನ್ನು ತಲುಪಿದೆ. ಇವೆರಡೂ ತತ್ತ್ವಗಳ ಸಂಗಮವಾಗಿರುವುದರಿಂದಲೇ ಖಾದರಿಪೀರಾ ಅವರಿಗೆ ಇಂಥ ಪ್ರಖರ ತಾತ್ತ್ವಿಕ ವೈಚಾರಕತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ.

"ಅಲ್ಲಾ ನೀನೆಲ್ಲಾ ಸೃಷ್ಟಿ ಮಾಡಿದ್ಯೋ ನಮಗೆಲ್ಲಾ|
ನಮ್ಮೊಳಗೆಲ್ಲಾ ನೀನೇ ಇರಲು ಹೇಗೆ ಹೇಳಲಿ ನೀನಿಲ್ಲಾ||
ನಿನ್ನ ಹೆಸರಿಲೆ ಧರ್ಮವ ರಚಿಸಿ ಭೇದ ಮಾಡುವ ಜನರೆಲ್ಲಾ|
ಭೇದ ಮಾಡುತಾ ಭವಿಗಳಾಗಿ ಅವು ತಿರುಗಿ ತಿರುಗಿ ಸಾಯುವರೆಲ್ಲಾ||"
ಎಂದು ಅವರು ಧರ್ಮಗಳ ಹೆಸರಲ್ಲಿ ಭೇದ ಸೃಷ್ಟಿಸುವ ಜನರ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಶರಣರ ಹಾಗೆ ಸ್ವರ್ಗ ನರಕಗಳನ್ನು ತಿರಸ್ಕರಿಸುತ್ತ "ಸ್ವರ್ಗ ನರ್ಕದ ಆಸೆಯ ಭಯದಲ್ಲಿ ಎಲ್ಲರೂ ಮುಳುಗ್ಯಾರ. ಸ್ವರ್ಗ ಎಲ್ಲೈತೆ ನರ್ಕ ಎಲ್ಲೈತೆ ಹೇಳದೆ ಸಾಯ್ತಾರ ಯಪ್ಪ ಎಂದು ಅವರು ಹೇಳತ್ತಾರೆ.

"ಮಸೀದಿ ಎಂಬುದು ಹಾಳಾದ ಜಾಗ ಅದರ ಗೊಡವಿ ನಿನಗ್ಯಾಕಂತೆ|
ಮಾನವನಿಗೆ ಮಾನವ ತಾ ತಿಳಿದರೆ ಎಲ್ಲ ನಿನ್ನೊಳಗಡಗೈತಂತೆ||"
ಎಂದು ಹೇಳಲು ಕೂಡ ಅವರು ಹಿಂಜರಿಯುವುದಿಲ್ಲ. ದೇವರು ಮಸೀದಿಯಲ್ಲಿ ಇಲ್ಲ ಆತ ನಮ್ಮೊಳಗೇ ಇದ್ದಾನೆ. ಆತನ ಜೊತೆಗೇ ಇದ್ದು ಪ್ರತಿಯೊಬ್ಬ ಮಾನವ ವಿಶ್ವಮಾನವ ಆಗುವ ಮೂಲಕ ದೇವರೇ ಆಗಬೇಕು ಎಂಬುದು ಅವರ ಆಶಯವಾಗಿದೆ. ಆದ್ದರಿಂದ ಅವರಿಗೆ ’ಸೂಫಿಗಳ ಮತ್ತು ಶರಣರ ದೃಷ್ಟಿಕೋನದ ಧರ್ಮವೇ ಸತ್ಯ ಎಂಬುದು ಸಿದ್ಧವಾಗುತ್ತದೆ.

"ಯಾಕಬೇಕು ನಮಗೆ ಇಂಥ ಸ್ವಾರ್ಥದಿಂದ ಕೂಡಿದ ಧರ್ಮ|
ಪಶು ನಾಯಿ ಹಂದಿಗಿಂತ ಕೀಳಾದ ಶೂದ್ರ ಧರ್ಮ|
ನಾಲ್ಕು ವರ್ಣದ ವಿರುದ್ಧ ಹುಟ್ಟಿಬಂತು ಸತ್ಯ ಬಸವಧರ್ಮ||"
ಜನರು ಕೀಳಾಗಿರುವುದಿಲ್ಲ. ಆದರೆ ಜನರನ್ನು ಕೀಳು ಮಾಡುವ ಧರ್ಮಗಳು ನಾಯಿ ಹಂದಿಗಳಿಗಿಂತಲೂ ಕೀಳಾಗಿರುತ್ತವೆ. ಇಂಥ ಕೀಳುವರ್ಣವ್ಯವಸ್ಥೆಯನ್ನು ಹೊಂದಿರುವ ಧರ್ಮದ ವಿರುದ್ಧ ಸತ್ಯ ಬಸವಧರ್ಮ ಹುಟ್ಟಿಬಂದಿತು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಯಾವ ಪಂಚಮರನ್ನು ಮತ್ತು ಶೂದ್ರರನ್ನು ವರ್ಣವ್ಯವಸ್ಥೆಯ ಧರ್ಮ ಕೀಳಾಗಿ ಕಂಡಿತೋ ಅಂಥವರನ್ನು ಒಂದುಗೂಡಿಸಿದ ಬಸವಣ್ಣನವರು ಸತ್ಯಧರ್ಮವನ್ನು ಲೋಕಕ್ಕೆ ನೀಡಿದರು. ಪವಿತ್ರ ಖುರಾನ್ ಮತ್ತು ಪೈಗಂಬರರ ಹದೀಸ್ ಮೂಲಕ ಸೂಫಿಗಳು ಅರ್ಥೈಸಿದ ಇಸ್ಲಾಂ ಧರ್ಮಕ್ಕೂ ಬಸವಧರ್ಮಕ್ಕೂ ಅವರು ಭೇದವನ್ನೇ ಕಾಣುವುದಿಲ್ಲ. ಹೀಗಾಗಿ ಅವರು ತಮ್ಮ ತತ್ತ್ವಪದಗಳಲ್ಲಿ ಪೈಗಂಬರರನ್ನು ಮತ್ತು ಸೂಫಿಗಳನ್ನು ಶರಣರೆಂದೇ ಕರೆದಿದ್ದಾರೆ.

"ಸಾಲಗುಂದಿಪುರ ಸೇರಿ ಹೇಳು ಅವ ಇಲ್ಲ ನಾನೇ ನಾನು|
ಗುರುಪೀರಾ ಖಾದರಿ ಬೆಳಕಾಗಿ ತಾ ಬಂದು ಕತ್ತಲೋಡುವುದು ಇನ್ನೇನು?|
ತಿಳಿದು ಎಲ್ಲಾ ನೋಡು ನೀನು||"
ಸಾಲಗುಂದಿಪುರ ಎಂಬುದು ಅವರಿಗೆ ಒಂದು ’ದರ್ಶನ’ವಾಗಿ ಕಾಣುತ್ತದೆ. ಅವರ ದೃಷ್ಟಿಯಲ್ಲಿ ಗುರುಪೀರಾ ಖಾದರಿ ಎಂದರೆ ಅವರ ಪೂರ್ವಜ ಹಜರತ್ ಮಹಬೂಬೇ ಸುಬಹಾನಿ ಪೀರಾನೇ ಪೀರ ದಸ್ತಗೀರ ಅಬ್ದುಲ್ ಖಾದಿರ್ ಜೀಲಾನಿ, ಬಗದಾದಿ ಅವರೇ ಆಗಿದ್ದಾರೆ. ಅವರ ತತ್ತ್ವಪದಗಳಲ್ಲಿ ಬರುವ ‘ಗುರುಪೀರಾ ಖಾದರಿ’ ಅಂಕಿತನಾಮವು ಮಹಬೂಬೇ ಸುಬಹಾನಿ ಅವರಿಗೇ ಸಂಬಂಧಿಸಿದೆ.

"ಅಲ್ಲನಿಗೊಂದು ಮನೆಯೆಂದು ಹೇಳಿ ನೀನೆ ಕಟ್ಟಿ ಕೊಟ್ಟಿಲ್ಲೇನು?|
ಕಲ್ಲಿನ ಮನೆಯೊಳು ಅಲ್ಲನಿಲ್ಲೆಂದು ಗುರುಪೀರ ಅಂದೇ ಹೇಳಲಿಲ್ಲೇನು||
ಸಾಲಗುಂದಿಯೊಳು ಹೋಗಿ ನೋಡುನೀ ಕಂಡನು ಅವ ನೋಡಿಲ್ಲೇನೊ|
ನಿನ್ನೊಳು ಅವ ತಾ ನೆಲೆಸ್ಯಾನಲ್ಲಾ ಇನ್ನೊರಿಗೆ ನೋಡಿಲ್ಲೇನು?||
ಎಂದು ಹೇಳವ ಅವರು ದೇವರು ನಮ್ಮೊಳಗೇ ಇರುವ ಈ ರಹಸ್ಯವನ್ನು ಮಹಬೂಬೇ ಸುಹಬಾನಿ ಅವರಿಂದ ಕಂಡುಕೊಂಡಿರುವುದಾಗಿ ಸೂಚಿಸಿದ್ದಾರೆ. ‘ನಿಮ್ಮೊಳಗಿರುವ ಆ ದೇವರನ್ನು ಇಲ್ಲಿಯವರೆಗೆ ನೋಡಿಲ್ಲೇನು’ ಎಂದು ನಮ್ಮನ್ನು ಪ್ರಶ್ನಿಸುತ್ತಾರೆ.
ಇಸ್ಲಾಂ ಮೂಲಭೂತವಾದಿಗಳು ಸೂಫಿ ಸಂತರ ಸಮಾಧಿಗಳ ಬಗ್ಗೆ ವಿಮುಖ ಧೋರಣೆ ಹೊಂದಿದ್ದಾರೆ. ಈ ಧೋರಣೆಯನ್ನು ಖಾದರಿ ಪೀರಾ ವಿರೋಧಿಸಿದ್ದಾರೆ.

"ಗೋರಿಯೊಳಗೆ ಏನಿಲ್ಲವೆಂದು ನೀನು ಹೇಳತಿಯೊ ಮೌಲಾನಾ|
ಮಸೀದಿಯಲ್ಲಿ ಅಲ್ಲನೆ ಇಲ್ಲ; ಹೆಂಗ್ ಹೇಳ್ತಿನೀ ಐದಾನಲ್ಲಿ ನೀನಾಗು ಮೋಮಿನೀನಾ||
ನನ್ನ ಶರಣರು ನಿತ್ಯ ಬದುಕ್ಯಾರ ಹೇಳುತೈತಿ ಖರಾನಾ|
ತಪ್ಪು ಹೇಳಿದರೆ ಕಿವಿ ಹಿಡಿಯೊ ನೀನ ನಿಮ್ಮಪ್ಪ ಈಗ ಒಪ್ತಾನ||"
ಎಂದು ಅವರು ಮೂಲಭೂತವಾದಿ ಧರ್ಮಪಂಡಿತರಿಗೆ ಸವಾಲು ಹಾಕುತ್ತಾರೆ. ಖಾದರಿಪೀರಾ ಅವರು ಹಿಂದು ಮೂಲಭೂತವಾದಿಗಳನ್ನೂ ಬಿಟ್ಟಿಲ್ಲ.

"ಯಾಕಪ್ಪ ಈ ಔತಾರ ಬೆತ್ತಲಾಗಿ ಹುಟ್ಟಿದರೆಲ್ಲಾರ|
ಹುಟ್ಟಿದಾಗ ಇರಲಿಲ್ಲಪ್ಪೊ ಹಾರವನಿಗೆ ಜನಿವಾರ||
ಎಲ್ಲರಿಗೆ ಒಬ್ಬನೆ ದೇವರ, ತಿಳಿದು ತಿಳಿಯಲಿಲ್ಲೊ ಜನರ|
ನಿನ್ನೊಳಗಿನ ಆರು ಕಳ್ಳರ ಜೊತೆಗೂಡಿ ನೀ ಆದಿಯೊ ಚೋರಾ||"
ಎಂದು ಅವರು ಟೀಕಿಸಿದ್ದಾರೆ. ಈ ಟೀಕೆಯ ಹಿಂದೆ ಅಖಂಡ ಮಾನವಪ್ರೇಮ ಇದೆ. ತಪ್ಪು ಮಾಡುವವರಿಗೆ ತಿಳಿಸಿಹೇಳುವ ಕ್ರಮವಿದೆ. ಹಾಳಾಗಬೇಡಿರಿ ಎಂಬ ಎಚ್ಚರಿಕೆಯ ಮಾತಿದೆ.
ಗುರು ಖಾದರಿಪೀರಾ ಅವರ ದೃಷ್ಟಿಕೋನ ವಿಶಿಷ್ಟವಾಗಿದೆ. ಅವರು ಧರ್ಮವನ್ನು, ಸಮಾಜವನ್ನು, ಸಮಾಜದೊಳಿಗಿನ ವೈರುಧ್ಯಗಳನ್ನು, ಮತ್ತು ಧರ್ಮವನ್ನು ಕಡೆಗಣಿಸಿ ನಿಲ್ಲುವ ಮಾನಸಿಕ ತುಮುಲಗಳನ್ನು ಬಹಳ ತೀಕ್ಷ್ಣವಾಗಿ ಗಮನಿಸಿದ್ದಾರೆ. ಆ ಕುರಿತು ಬಹಳ ಆಳವಾಗಿ ಚಿಂತಿಸಿದ್ದಾರೆ. ಭೌತಿಕ ಸ್ಥಿತಿಗತಿಗಳು ಮಾನವನನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಕಂಡುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ’ಮಾನವ ಕುಲದಲ್ಲಿಯ ಗುಟ್ಟು’ ನಮ್ಮನ್ನು ವಾಸ್ತವದ ಕಡೆಗೆ ಸೆಳೆಯುತ್ತದೆ.

"ಮನುಕುಲದಲ್ಲಿಯ ಗುಟ್ಟು ಹೇಳತೀನಿ ಮಾಡಬ್ಯಾಡ್ರಿ|
ತಾಸ್ಚಾರ ಚತುರ್ ವರ್ಣದ ಚಕ್ರದಿಂದ ಇದು ಹುಟ್ಯಾದ ಔತಾರಾ ಹಾಂ ಹಾಂ||
ಬಲಸ್ಯ ಪೃಥ್ವಿ ಎಂಬುದು ತಿಳಿದರೆ ರಾಜರಾಗುತಾರ; ಸುಳ್ಳಿನ ಗುಟ್ಟು|
ತಿಳಿದರೆ ಚೂಟಿಯ ಶ್ರೀಮಂತರಾಗುತಾರ ತಮ್ಮಾ ಶ್ರೀಮಂತರಾಗುತಾರ||
ಸುಳ್ಳು ಮೋಸ ವಂಚನೆ ಮಾಡಲು ದೇವರಾಗುತಾರ|
ಸತ್ಯಧರ್ಮದಿಂದ ಇದ್ದವರೆಲ್ಲ ಶೂದ್ರರಾಗುತಾರ ತಮ್ಮ ಶೂದ್ರರಾಗುತಾರ||
ಇಲ್ಲದ್ದು ಇದ್ದಾಂಗ ಹೇಳಿದವರೆಲ್ಲ ಆರ್ಯರಾಗುತಾರ|
ನ್ಯಾಯನೀತಿಯಿಂದ ಇದ್ದವರೆಲ್ಲ ದರಿದ್ರರಾಗುತಾರ ತಮ್ಮಾ||
ಗೊಡವೆ ಇಲ್ಲದ ಜನರಿಗೆ ಹೊಡೆದರೆ ಕ್ಷತ್ರಿಯರಾಗುತಾರ|
ಕೆಲಸವಿಲ್ಲದೆ ಗಳಿಕೆ ಮಾಡಿದವರು ವೈಶ್ಯರಾಗುತಾರ ತಮ್ಮ||
ಕಂಗೆಟ್ಟು ವಲಸೆ ಬಂದವರೆಲ್ಲ ಸೂತ್ರ ಹಿಡಿಯತಾರ|
ಅನುಕೂಲ ನೋಡಿ ಜೈ ಎಂದವರೆಲ್ಲ ಬ್ರಾಹ್ಮಣರಾಗುತಾರ ತಮ್ಮಾ||
ಭೇದವಿಲ್ಲದೆ ಬೋಧ ಮಾಡುವವರು ಉಪವಾಸ ಸಾಯ್ತಾರ ದುಡಿದು|
ದುಡಿದು ಮುಪ್ಪಾದ ಎತ್ತಿಗೆ ಸಂತಿಗೆ ಹೊಡಿತಾರ ತಮ್ಮಾ||
ಶಾಸ್ತ್ರದ ಪಟ್ಟಿನ ಗುಟ್ಟು ತಿಳಿದರೆ ಜ್ಞಾನಿಗಳಾಗುತಾರ; ಅನ್ಯಾಯ|
ನೋಡಿ ಸುಮ್ಮನಾಗಬೇಕು ತಮ್ಮ ಯೋಗ್ಯರಾಗುತಾರ ತಮ್ಮಾ||
ಸತ್ಯ ಇದ್ದರೆ ಹಾಗೆ ಹೇಳಬೇಡ ಖೋಡಿ ದಡ್ಡರಾಗತಾರ|
ಅನ್ಯಾಯ ತಡಿಯಲು ಹೋದವರೆಲ್ಲಾ ಸತ್ತುಹೋಗತಾರ||
ಧರ್ಮದ ಸತ್ಯ ಮುಚ್ಚಿ ಹೇಳಿದರೆ ಋಷಿ ಮುನಿಗಳಾಗುತಾರ|
ನ್ಯಾಯ ನೀತಿಯಿಂದ ಇದ್ದವರೆಲ್ಲಾ ಅಸ್ಪೃಶ್ಯರಾಗುತಾರ ತಮ್ಮಾ||"
ಗುರು ಖಾದರಿಪೀರಾ ಅವರಿಗೆ ಆ ಕಾಲದ ಬಹುಸಂಖ್ಯಾತ ಬಡ ನಿರಕ್ಷರಿ ಕನ್ನಡಿಗರ ಬಗ್ಗೆ ತೀವ್ರ ಕಾಳಜಿ ಇತ್ತು. ಅಂತೆಯೆ ಅವರು ತಮ್ಮ ಭಾಗದ ಹಳ್ಳಿಗರು ಆಡುವ ಕನ್ನಡದಲ್ಲಿ ’ಜ್ಞಾನಸಮುದ್ರ ಸೃಷ್ಟಿಸಿದರು. ತಾವು ಕಂಡುಕೊಂಡ ತತ್ತ್ವಜ್ಞಾನವನ್ನು ಹಳ್ಳಿಗಾಡಿನ ಕನ್ನಡಿಗರಿಗೆ ತಲುಪಿಸುವುದಕ್ಕಾಗಿ ತಮ್ಮ ತತ್ತ್ವಪದಗಳನ್ನು ಅವರ ಮುಂದೆ ಹಾಡಿ ತೋರಿಸಿದರು. ಆ ಮೂಲಕ ಕನ್ನಡವನ್ನು ಎತ್ತಿ ಹಿಡಿದರು. ಆ ನಿರಕ್ಷರಿ ಕನ್ನಡಿಗರು ತಮ್ಮ ಸ್ಮೃತಿಯಲ್ಲಿ ಗುರು ಖಾದರಿಪೀರಾ ಅವರ ತತ್ತ್ವಗಳನ್ನು ಸಂರಕ್ಷಿಸಿದರು. ಅಂಥ ಬಡ ಕನ್ನಡಿಗರು ೧೯ನೇ ಶತಮಾನದಿಂದ ಉಳಿಸಿಕೊಂಡು ಬಂದ ತತ್ತ್ವಪದಗಳೇ ಇಂದು ’ಜ್ಞಾನಸಮುದ್ರವಾಗಿ ಮುದ್ರಣಗೊಂಡು ನಮ್ಮ ಅರಿವಿನ ವಿಸ್ತಾರಕ್ಕೆ ಕಾರಣವಾಗಿವೆ.
"ಕನ್ನಡಾಂಬೆಗೆ ರವಿಯು ತಾನಾಗಿ ಬೆಳಕು ನೀಡುತಿತ್ತ; ಅಜ್ಞಾನದ ಕತ್ತಲು|
ತಾ ಕಳಿದು ದಾರಿ ತೋರಿಸಿತ್ತ ಭಕ್ತರ ಮನದಲಿ ತಾ ಕುಂತ||"
ಕನ್ನಡಾಂಬೆಗೆ ದರ್ಶನಸೂರ್ಯನು ಬೆಳಕಿನ ಸೇವೆ ಮಾಡುತ್ತಿದ್ದಾನೆ. ಆ ಮೂಲಕ ಕನ್ನಡಾಂಬೆಯ ಕಂಡು ಜನರ ಅಜ್ಞಾನದ ಕತ್ತಲು ಕಳೆಯುತ್ತಿದೆ. ಆ ದರ್ಶನದ ಬೆಳಕೇ ನಿಜದ ನಿಲವಿನ ಭಕ್ತರ ಮನದಲ್ಲಿ ಕುಳಿತು ವಿಶ್ವಮಾನವ ಪಥವನ್ನು ತೋರಿಸುತ್ತಿದೆ. ಭಕ್ತರೇ ದೇವರಾಗುವ ರಹಸ್ಯವನ್ನು ಬಯಲು ಮಾಡುತ್ತಿದೆ! ಗುರು ಖಾದರಿಪೀರಾ ಅವರು ಕನ್ನಡ ಜನಪದ ಪರಂಪರೆಯೊಂದಿಗೆ ಸೂಫಿಗಳ ಹಾಗೂ ಶರಣರ ಮಾನವಧರ್ಮ ಪರಂಪರೆಯನ್ನು ಒಂದಾಗಿಸಿ ಪ್ರೇಮತತ್ತ್ವವನ್ನು ಸಾರುತ್ತ ವಿಶ್ವಮಾನವನ ಕನಸುಕಂಡಿದ್ದು ಸರ್ವರಿಗೂ ಮಾರ್ಗದರ್ಶಿಯಾಗಿದೆ.
ತಾವು ಸಾಕ್ಷಾತ್ಕರಿಸಿಕೊಂಡ ಮಾನವರಿಂದ ಮಾನವರನ್ನು ಉದ್ಧಾರ ಮಾಡುವ ಮಾನವಧರ್ಮದ ಪ್ರಚಾರಕ್ಕಾಗಿ, ವಾಹನ ಸೌಲಭ್ಯವಿಲ್ಲದ ಅಂದಿನ ದಿನಗಳಲ್ಲಿ ಕುದುರೆ ಮೇಲೆ ಕುಳಿತು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಅನೇಕ ಕಡೆಗಳಲ್ಲಿ ಸುತ್ತಾಡಿದರು. ಲೋಕಕಲ್ಯಾಣದ ತತ್ತ್ವವನ್ನು ಪ್ರಚಾರ ಮಾಡಿದರು. ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರಷ್ಟೇ ಅಲ್ಲದೆ ಮಾನವತಾವಾದಿ ಬ್ರಾಹ್ಮಣರಿಗೂ ಅವರು ಸರ್ವ ಸಮತ್ವದಿಂದ ಕೂಡಿದ ಸೂಫಿ ಶರಣರ ಮಾನವಧರ್ಮದ ದೀಕ್ಷೆ ಕೊಟ್ಟರು. ವಂಶಪಾರಂಪರ್ಯವಾಗಿ ಬಂದ ಜಹಗೀರನ್ನು ನಿರಾಕರಿಸಿದ್ದ ಅವರು ಕೊನೆಯವರೆಗೂ ಸಾಮಾನ್ಯರ ಮಧ್ಯೆಯೆ ಬದುಕುತ್ತ ೨೫.೭.೧೮೯೬ರಂದು ಗುರುವಾರ ಸಾಲ್ಗುಂದಾ ಗ್ರಾಮದಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಅವರ ದರ್ಗಾ (ಸಮಾಧಿ) ಸಾಲಗುಂದಾ ಗ್ರಾಮದಲ್ಲಿದೆ.