Friday, June 4, 2010
ಮರೆಯಲಾಗದ ವಿಷ್ಣು
ಡಾ. ರಾಜ್‌ಕುಮಾರ್ ನಿಧನಹೊಂದಿದ ನಂತರ ಅರ್ಧದಷ್ಟು ಜನ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದನ್ನೇ ಬಿಟ್ಟುಬಿಟ್ಟರು. ಇದೀಗ ವಿಷ್ಣುವರ್ಧನ್ ನಿಧನ ಹೊಂದಿದ ನಂತರ ಇನ್ನರ್ಧದಷ್ಟು ಜನ ಥಿಯೇಟರ್‌ಗೆ ಹೋಗುವುದನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಹಿರಿಯರೊಬ್ಬರು ಹೇಳಿದ ಮಾತು ನಿಜಕ್ಕೂ ಅರ್ಥಪೂರ್ಣವಾಗಿದೆ.
ಯಾಕೆಂದರೆ ಕನ್ನಡ ಚಿತ್ರರಂಗವೆಂದರೆ ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಎನ್ನುವಷ್ಟರ ಮಟ್ಟಿಗೆ ಅವರಿಬ್ಬರು ಜನಮನವನ್ನು ಗೆದ್ದಿದ್ದರು. ಡಾ. ರಾಜ್ ೨೦೬ ಚಿತ್ರಗಳ ಒಡೆಯನಾದರೆ, ವಿಷ್ಣುವರ್ಧನ್ ೨೦೦ ಚಿತ್ರಗಳನ್ನು ಮುಗಿಸಿದ್ದರು. ಚಿತ್ರರಂಗದ ಅರ್ಧದಷ್ಟು ಚಿತ್ರಗಳನ್ನು ಈ ಇಬ್ಬರು ಮಹಾನ್ ಕಲಾವಿದರೇ ಮಾಡಿದ್ದಾರೆ ಎಂದರೆ ಇವರಿಬ್ಬರು ಕನ್ನಡ ಚಿತ್ರರಂಗದ ಆಧಾರಸ್ತಂಭ ಎನ್ನದೆ ಬೇರೆ ದಾರಿಯೇ ಇಲ್ಲ.
ವಿಷ್ಣುವರ್ಧನ್ ಮತ್ತು ಡಾ. ರಾಜ್‌ಕುಮಾರ್ ಅವರ ನಡುವಿನ ತುಲನಾತ್ಮಕ ಲೇಖನ ಇದಲ್ಲ. ಆದರೂ ವಿಷ್ಣು ಬಗ್ಗೆ ಮಾತನಾಡುವಾಗ ರಾಜ್ ವಿಷಯ ಬಂದೇ ಬರುತ್ತದೆ. ಹಾಗೆಯೇ ರಾಜ್ ವಿಷಯ ಮಾತನಾಡುವಾಗ ವಿಷ್ಣು ವಿಷಯವು ಬಂದೇ ಬರುತ್ತದೆ. ಇದೆಲ್ಲ ಆರಂಭವಾಗಿದ್ದು, ಗಂಧದಗುಡಿ ಚಿತ್ರದ ಶೂಟಿಂಗ್ ಪ್ರಕರಣದಿಂದ. ಅದ್ಯಾವ ಗಳಿಗೆಯಲ್ಲಿ ಆ ಪ್ರಕರಣ ನಡೆಯಿತೋ ಅಲ್ಲಿಂದಾಚೆಗೆ ವಿಷ್ಣು ಅಭಿಮಾನಿಗಳ ಮತ್ತು ರಾಜ್ ಅಭಿಮಾನಿಗಳ ನಡುವೆ ಯಾವಾಗಲೂ ಸಮರ ನಡೆಯುತ್ತಲೇ ಇತ್ತು. ಆದರೆ ವಿಶೇಷವೆಂದರೆ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ನಡುವಿನ ವೈಯಕ್ತಿಕ ಸಂಬಂಧ ಮಾತ್ರ ಚೆನ್ನಾಗಿತ್ತು. ಅದೆಲ್ಲ ಈಗ ತೀರಾ ಅಪ್ರಸ್ತುತ. ಹೀಗಾಗಿ ಹಳೆಯ ವಿವಾದಗಳು, ಗಲಾಟೆಗಳು, ಮೈಪರಚುವಿಕೆ ಇವೆಲ್ಲವೂ ಇತಿಹಾಸದಲ್ಲಿ ಹುದುಗಿಹೋಗಿರುವುದಿಂದ ಅದರ ಹೊರತಾಗಿ ವಿಷ್ಣು ವ್ಯಕ್ತಿ ಜೀವನವನ್ನು ಅವಲೋಕಿಸುವುದೇ ಅವರಿಗೆ ನೀಡಬಹುದಾದ ಶ್ರದ್ಧಾಂಜಲಿ ಎನ್ನಬಹುದು.
ವಿಷ್ಣುವರ್ಧನ್ ನಾಯಕನಟನಾಗಿ ನಾಗರಹಾವು ಚಿತ್ರದಲ್ಲಿ ನಟಿಸಿದ ನಂತರ ಕನ್ನಡ ಚಿತ್ರರಂಗದ ಚಿತ್ರಣವೇ ಬದಲಾಗಿಹೋಯಿತು. ಆಂಗ್ರಿ ಯಂಗ್ ಮ್ಯಾನ್ ಕನ್ನಡ ಚಿತ್ರರಂಗಕ್ಕೆ ದೊರಕಿದ ಎಂದು ಎಲ್ಲರೂ ಸಂತೋಷಪಟ್ಟರು. ಯಾಕೆಂದರೆ ಆ ಚಿತ್ರದ ರಾಮಾಚಾರಿಯ ಪಾತ್ರಕ್ಕೆ ವಿಷ್ಣುವರ್ಧನ್ ಜೀವತುಂಬಿದ ರೀತಿ ಹಾಗಿತ್ತು. ಹೀಗಾಗಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾದಲ್ಲೆಲ್ಲ ಜಯಭೇರಿ ಭಾರಿಸಿತು.
ಮಾತ್ರವಲ್ಲ ವಿಷ್ಣುವರ್ಧನ್ ಎಂಬ ಅನಾಮಿಕ ದಿನ ಬೆಳಗಾಗುವುದೊರಳಗೆ ಕರ್ನಾಟಕದ ಮನೆಮಾತಾದರು. ಅಲ್ಲಿಂದಾಚೆಗೆ ಮುಂದಿನ ೩೫ ವರ್ಷಗಳ ಕಾಲ ವಿಷ್ಣು ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ನಂತರದ ಸ್ಥಾನವನ್ನು ಭದ್ರವಾಗಿ ತನ್ನದಾಗಿಸಿಕೊಂಡಿದ್ದರು.
ನಾಗರಹಾವು ಚಿತ್ರದ ಬೆನ್ನಿಗೆ ಬಂದ ಭೂತಯ್ಯನಮಗ ಅಯ್ಯು ಚಿತ್ರ ವಿಷ್ಣು ವ್ಯಕ್ತಿ ಜೀವನಕ್ಕೆ ಹೊಸ ರೂಪು ನೀಡಿತು. ವಿಷ್ಣು ಕಲಾತ್ಮಕ ಚಿತ್ರಗಳಲ್ಲಿ ಸೈ ಎನಿಸಿಕೊಳ್ಳುವ ನಟ ಎಂದು ಆರಂಭದಲ್ಲೇ ಗುರುತಿಸಿಕೊಂಡರು. ಅಲ್ಲಿಂದಾಚೆಗೆ ವಿಷ್ಣುವರ್ಧನ್ ತನ್ನ ವ್ಯಕ್ತಿ ಜೀವನದ ಉದ್ದಕ್ಕೂ ಹತ್ತುಹಲವು ಅವತಾರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಕೋಟ್ಯಂತರ ಅಭಿಮಾನಿಗಳನ್ನು ತಮ್ಮದಾಗಿಸಿಕೊಂಡರು. ವಿಶೇಷತೆಯೆಂದರೆ ನಾಗರಹಾವಿನಲ್ಲಿ ಆಂಗ್ರಿ ಯಂಗ್‌ಮ್ಯಾನ್ ಆಗಿ ಎಲ್ಲರ ಮನಸ್ಸು ಗೆದ್ದ ವಿಷ್ಣು, ಬಂಧನ ಚಿತ್ರದಲ್ಲಿ ತನ್ನ ಮೋಹಕ ಮತ್ತು ಭಾವನಾತ್ಮಕ ಪಾತ್ರದಿಂದ ಎಲ್ಲರಿಗೂ ಇಷ್ಟವಾದರು. ಅದಾದ ನಂತರ ಗಾಂಧಿನಗರದ ನಿರ್ಮಾಪಕರು ಇಷ್ಟಪಡುವ ಹೊಡೆದಾಟದ ಚಿತ್ರಗಳಲ್ಲಿ ಕಾಣಿಸಿಕೊಂಡು ಸಾಹಸಸಿಂಹ ಎಂಬ ಬಿರುದನ್ನು ಪಡೆದರು. ಅಷ್ಟಕ್ಕೇ ತೃಪ್ತಿಯಾಗದ ವಿಷ್ಣು ಚಿತ್ರರಂಗದ ಕುಳ್ಳ ಎಂದೇ ಖ್ಯಾತಿಪಡೆದ ದ್ವಾರಕೀಶ್ ಅವರ ಜತೆ ಸೇರಿ ಅನೇಕಾನೇಕ ಹೊಸ ದಾಖಲೆಗಳನ್ನು ಮಾಡುತ್ತಾ ಹೋದರು. ದ್ವಾರಕೀಶ್ ಗರಡಿಯಲ್ಲಿ ವಿಷ್ಣುಗೆ ಮತ್ತೆ ಇನ್ನೊಂದು ತರಹದ ಇಮೇಜ್ ಬಂತು. ಇವರಿಬ್ಬರ ಕಳ್ಳಕುಳ್ಳ ಜೋಡಿ ಅನೇಕ ಹಾಸ್ಯ ಮತ್ತು ಥ್ರಿಲ್ಲರ್ ಚಿತ್ರಗಳನ್ನು ನೀಡಿತು. ಅಲ್ಲಿಗೆ ವಿಷ್ಣು ನಕ್ಕುನಲಿಸುವ ಪಾತ್ರಗಳಲ್ಲೂ ನಟಿಸಿ ಮನೆಮಂದಿಗೆ ಇಷ್ಟವಾದರು.
ಅದಾದ ನಂತರ ವಿಷ್ಣು ವೃತ್ತಿ ಜೀವನ ಮತ್ತೊಂದು ಮಜಲಿಗೆ ಸಾಗಿತು. ಅವರ ಬಾಲ್ಯ ಸ್ನೇಹಿತ ರಾಜೇಂದ್ರ ಸಿಂಗ್ ಬಂಧನ ಚಿತ್ರದ ನಂತರ ‘ಮುತ್ತಿನ ಹಾರ ಎಂಬ ಚಿತ್ರದ ಮುಖಾಂತರ ವಿಷ್ಣುಗೆ ಮತ್ತೊಂದು ತಾರಾ ಮೌಲ್ಯವನ್ನು ತಂದುಕೊಟ್ಟರು.. ಸಿಂಗ್‌ಬಾಬು ನಂತರ ದಿನೇಶ್‌ಬಾಬು ಎಂಬ ನಿರ್ದೇಶಕ ವಿಷ್ಣುವರ್ಧನ್ ಪ್ರತಿಭೆಯನ್ನು ಸಮರ್ಥವಾಗಿ ಬಳಸುತ್ತ ಸುಪ್ರಭಾತ ಚಿತ್ರದ ಮುಖಾಂತರ ವಿಷ್ಣು ವರ್ಚಸ್ಸನ್ನು ಬೆಳೆಸಿದರು. ಇದೇ ಬಾಬು ನಿರ್ದೇಶಿಸಿದ ‘ಲಾಲಿ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ ವಿಷ್ಣುಗೆ ರಾಜ್ಯ ಪ್ರಶಸ್ತಿಯೂ ಬಂತು.
ಅಷ್ಟೊತ್ತಿಗೆಲ್ಲ ಸುಮಾರು ಕಾಲು ಶತಮಾನವನ್ನು ಈ ಉದ್ಯಮದಲ್ಲಿ ಕಳೆದ ವಿಷ್ಣುವರ್ಧನ್ ಪ್ರೇಕ್ಷಕರ ಪಾಲಿಗೆ ಮಾಮೂಲಿ ಎನಿಸತೊಡಗಿದರು. ಅದನ್ನು ಗಮನಿಸಿದ ವಿಷ್ಣು ತುಂಬ ಜಾಣತನದಿಂದ ಹೊಸ ಪಾತ್ರಗಳ ಆಯ್ಕೆ ಮುಖಾಂತರ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಿ ಅಚ್ಚರಿಪಡಿಸುತ್ತಾ ಹೋದರು. ಮರ ಸುತ್ತುವ ಪಾತ್ರಗಳು, ಸಾಹಸಸಿಂಹನ ಆರ್ಭಟ, ಮನೋಜ್ಞ ಪ್ರೇಮಿಯ ಪಾತ್ರಗಳ ನಂತರ ವಿಷ್ಣು ಗಿರಿಜಾಮೀಸೆಯನ್ನು ಹೊತ್ತುಕೊಂಡು ಯಜಮಾನನ ಪಾತ್ರಗಳಲ್ಲಿ ನಟಿಸಲು ಶುರುಮಾಡಿದ್ದು ಅವರ ವೃತ್ತಿ ಜೀವನದ ಬದುಕನ್ನೇ ಬದಲಾಯಿಸಿತು. ಆ ಸಂದರ್ಭದಲ್ಲಿ ಬಂದ ಯಜಮಾನ, ‘ಸಿಂಹಾದ್ರಿಯ ಸಿಂಹ ಮುಂತಾದ ಅನೇಕಾನೇಕ ಗಿರಿಜಾಮೀಸೆಯ ಪಾತ್ರಗಳ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಜಯಭೇರಿ ಬಾರಿಸಿದವು.
ಹೀಗೆ ಸಾಗುತ್ತಾ ವಿಷ್ಣು ಮತ್ತೊಮ್ಮೆ ಇಡೀ ಚಿತ್ರರಂಗ ಬೆಚ್ಚಿ ಬೀಳುವಂತೆ ಮಾಡಿದ್ದು ‘ಆಪ್ತಮಿತ್ರ ಚಿತ್ರದ ಪಾತ್ರದಲ್ಲಿ ನಟಿಸುವ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ. ಆ ಚಿತ್ರ ಬಿಡುಗಡೆಯಾಗುವ ತನಕ ಅದು ಕನ್ನಡ ಚಿತ್ರರಂಗದಲ್ಲಿ ದಾಖಲೆಗಳ ಹೊಸ ಅಧ್ಯಾಯವನ್ನು ಬರೆಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ‘ಆಪ್ತಮಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಣವನ್ನು ಕೊಳ್ಳೆಹೊಡೆದ ನಂತರ ವಿಷ್ಣು ಬೇಡಿಕೆ ಒಮ್ಮೆಲೆ ಇಮ್ಮಡಿಯಾಯಿತು. ಆದರೆ ಆ ನಂತರ ಬಂದ ಚಿತ್ರಗಳು ಆಪ್ತಮಿತ್ರದ ತರಹ ದಾಖಲೆಮಾಡಲು ಸಾಧ್ಯವಾಗಲಿಲ್ಲ. ವಿಷ್ಣು ಚಿತ್ರಗಳು ಒಂದರ ಹಿಂದೆ ಒಂದರಂತೆ ಸೋಲುತ್ತಿದ್ದಾಗ, ಜತೆಗೆ ಗೋಲ್ಡನ್‌ಸ್ಟಾರ್ ಗಣೇಶ್‌ನಂತಹ ಹೊಸ ಯುವಕರು ಚಿತ್ರರಂಗದಲ್ಲಿ ಜಯಭೇರಿಯ ಬಾರಿಸುತ್ತಿದ್ದಾಗ. ಸಾಹಸಸಿಂಹನ ಅಧ್ಯಾಯ ಮುಗಿದೇ ಹೋಯಿತು ಎಂದೇ ಗಾಂಧಿನಗರದ ಜನ ಭಾವಿಸಿದ್ದರು. ಅಷ್ಟೊತ್ತಿಗೆಲ್ಲ ವಿಷ್ಣು ಹೃದಯದಲ್ಲಿ ಶಕ್ತಿ ಮತ್ತು ಚೇತನ ಅನೇಕ ಕಾರಣಗಳಿಗಾಗಿ ಕುಂದಿಹೋದಂತೆ ಕಾಣಿಸುತ್ತಿತ್ತು. ‘ಆಪ್ತರಕ್ಷಕ ಚಿತ್ರ ವಿಷ್ಣು ನಟಿಸಿದ ಕೊನೆಯ ಚಿತ್ರ. ಆ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಅವರದಾಗಿತ್ತು. ಅವರು ಹೇಳಿದಂತೆ ಚಿತ್ರ ಗೆದ್ದಿದೆ ಕೂಡ. ಆದರೆ ಆ ಗೆಲುವಿನ ಸಂಭ್ರಮವನ್ನು ಅನುಭವಿಸುವ ಮೊದಲೇ ವಿಷ್ಣು ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದಾರೆ.
ಈ ಹಿಂದೆ ಅನೇಕ ಸಂದರ್ಭಗಳಲ್ಲಿ ವಿಷ್ಣು ಹೇಳಿದ ಮಾತು ಈಗ ನೆನಪಾಗುತ್ತದೆ. ಒಬ್ಬ ತಾರೆಯ ಎಂಟ್ರಿ ಮತ್ತು ಎಗ್ಸಿಟ್ ಅದ್ಭುತವಾಗಿರಬೇಕು; ನೆನಪಿನಲ್ಲಿಡುವಂತಿರಬೇಕು ಎಂದೇ ವಿಷ್ಣು ಹೇಳುತ್ತಿದ್ದರು. ಅವರ ಮಾತಿನಂತೆ ನಾಗರಹಾವಿನಿಂದ ಎಂಟ್ರಿ ಪಡೆದ ವಿಷ್ಣು ಆಪ್ತರಕ್ಷಕದಿಂದ ಎಗ್ಸಿಟ್ ಆಗಿದ್ದಾರೆ. ಎರಡೂ ಚಿತ್ರಗಳು ಚತುಷ್ಕೋಟಿ ಕನ್ನಡಿಗರು ಮರೆಯಲಾಗದಂತಹ ಚಿತ್ರಗಳಾಗಿವೆ.
ವಿಷ್ಣುವರ್ಧನ್ ಅವರ ಯೌವ್ವನದ ಪರಾಕಾಷ್ಠೆಯ ದಿನಗಳಲ್ಲಿ ಅತ್ಯಂತ ಮೋಹಕ ಮೈಕಟ್ಟು ಹೊಂದಿದ್ದರು. ಹೀಗಾಗಿ ಸಹಜವಾಗಿಯೇ ಬೇರೆ ಭಾಷೆಯ ನಿರ್ಮಾಪಕ, ನಿರ್ದೇಶಕರು ಕೂಡ ಅವರ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಹೀಗಾಗಿ ವಿಷ್ಣುವರ್ಧನ್ ಕರ್ನಾಟಕದ ಗಡಿದಾಟಿ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ರಾಷ್ಟ್ರಮಟ್ಟದ ತಾರೆಯಾಗಿ ಗುರುತಿಸಿಕೊಂಡರು. ಡಾ. ರಾಜ್‌ಕುಮಾರ್ ಕನ್ನಡವೇ ಸರ್ವಸ್ವ ಎಂದರೆ ವಿಷ್ಣು ಕಲಾವಿದರಿಗೆ ಭಾಷೆಯ ಚೌಕಟ್ಟು ಇರಬಾರದು ಎಂಬ ಸಿದ್ಧಾಂತ ನಂಬಿದವರಾಗಿದ್ದರು. ಇವರಿಗೆ ರಾಷ್ಟ್ರಮಟ್ಟದಲ್ಲಿ ಧರ್ಮೇಂದ್ರ, ಶತ್ರುಘ್ನಸಿನ್ಹಾ, ಕಮಲಹಾಸನ್, ರಜನಿಕಾಂತ್, ಮುಮ್ಮುಟ್ಟಿ ಹೀಗೆ ಅನೇಕ ಮಹಾನ್ ಕಲಾವಿದರ ನಿಕಟ ಸಂಪರ್ಕವಿತ್ತು. ವಿಶೇಷವೆಂದರೆ ಕಾಲೇಜು ದಿನಗಳಿಂದಲೂ ವಿಷ್ಣು ಶಮ್ಮಿಕಪೂರ್ ಅವರ ಮಹಾನ್ ಅಭಿಮಾನಿ. ಅದೊಂದು ದಿನ ಶಮ್ಮಿಕಪೂರ್ ಅವರ ಮನೆಗೆ ಬಂದಾಗ ಪುಟ್ಟಣ್ಣಾಜೀ, ಅಂಬರೀಷ್ ಮೊದಲಾದವರನ್ನು ಮನೆಗೆ ಕರೆಯಿಸಿ ಬೆಳಗ್ಗಿನ ಜಾವ ತನಕ ಪಾರ್ಟಿ ಮಾಡಿದ್ದರು. ಪತ್ರಕರ್ತರ ಸಮ್ಮುಖದಲ್ಲಿ ಒಂದೆರಡು ಬಾರಿ ಶಮ್ಮಿಕಪೂರ್ ತರಹ ನರ್ತಿಸಿ ತನ್ನ ಅಭಿಮಾನವನ್ನು ಪ್ರದರ್ಶಿಸಿದ್ದರು.
ಡಾ. ರಾಜ್‌ಕುಮಾರ್ ಥರ ವಿಷ್ಣುವರ್ಧನ್ ಉದ್ಯಮದ ನಾಯಕನ ಸ್ಥಾನವನ್ನು ಅಲಂಕರಿಸದಿದ್ದರೂ ಗೋಕಾಕ್ ಚಳವಳಿಯ ಸಮೇತ ಬಹುತೇಕ ಎಲ್ಲಾ ಚಳವಳಿಯಲ್ಲಿ ಡಾ. ರಾಜ್ ಜೊತೆಗೆ ಇದ್ದರು. ವಿಷ್ಣು ವ್ಯಕ್ತಿತ್ವಕ್ಕೆ ಮೊದಲೇ ಹೇಳಿದಂತೆ ಹತ್ತುಹಲವು ಮುಖಗಳಿವೆ. ವಿಷ್ಣು ಮೂಲತಃ ಭಾವಜೀವಿ. ಆದರೆ ಹೊರನೋಟಕ್ಕೆ ಸಾಹಸಸಿಂಹನ ತರಹ ಕಾಣಿಸುತ್ತಿದ್ದರು. ಕ್ರಿಕೆಟ್ ಎಂದರೆ ಅವರಿಗೆ ಅಚ್ಚುಮೆಚ್ಚು ಮಾತ್ರವಲ್ಲ ಪಂಚಪ್ರಾಣ. ಆ ಕಾರಣಕ್ಕೆ ಸ್ನೇಹಲೋಕ ಎಂಬ ತಾರೆಯರ ಕ್ರಿಕೆಟ್ ತಂಡವನ್ನು ಹುಟ್ಟು ಹಾಕಿದ್ದರು. ಅಂಬರೀಷ್ ಅವರ ಜೀವದ ಗೆಳೆಯ. ಯಾವುದೇ ಪತ್ರಿಕಾಗೋಷ್ಠಿ ಇರಲಿ ಅಥವಾ ಗುಂಡು ಪಾರ್ಟಿ ಇರಲಿ ಅಂಬರೀಷ್ ಹೆಸರು ಹೇಳುವುದನ್ನು ಮರೆಯುತ್ತಿರಲಿಲ್ಲ. ಹಾಡು, ಸಂಗೀತ ಎಂದರೂ ವಿಷ್ಣುಗೆ ಅಷ್ಟೇ ಇಷ್ಟ. ಎಷ್ಟೋ ಬಾರಿ ಪತ್ರಕರ್ತರ ಬೇಡಿಕೆಯನ್ನು ಮನ್ನಿಸಿ ರಾತ್ರಿ ಪಾರ್ಟಿಗಳಲ್ಲಿ ವಿಷ್ಣು ಹಾಡಿದ್ದೂ ಉಂಟು. ಇತ್ತೀಚೆಗೆ ಕರೋಕೆ ಹಾಡಿನ ಸಂಸ್ಥೆಯನ್ನು ಹುಟ್ಟು ಹಾಕಿದ್ದೂ ಕೂಡ ಅವರ ಸಂಗೀತ ಪ್ರೇಮಕ್ಕೆ ಸಾಕ್ಷಿ. ಡಾ. ರಾಜ್ ತರಹ ರಾಜಕೀಯವೆಂದರೆ ವಿಷ್ಣುಗೆ ಅಷ್ಟಕ್ಕಷ್ಟೇ. ಪ್ರತಿಬಾರಿ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ವಿಷ್ಣು ಸ್ಪರ್ಧಿಸುತ್ತಾರೆ ಎಂಬ ಗುಲ್ಲು ಹುಟ್ಟುತ್ತಿತ್ತು. ಆ ನಂತರ ಅದನ್ನು ನಿರಾಕರಿಸುವ ಸರದಿ ಅವರದಾಗಿತ್ತು. ಯಾವತ್ತೂ ಯಾವುದೇ ಹುದ್ದೆ ಅಥವಾ ಅಂತಸ್ತಿಗಾಗಿ ವಿಷ್ಣು ಇಷ್ಟಪಟ್ಟವರೇ ಅಲ್ಲ. ಡಾ. ರಾಜ್ ನಿಧನದ ನಂತರ ಉದ್ಯಮ ಕೆಲವರು ಅವರಿಗೆ ಯಜಮಾನನ ಸ್ಥಾನ ತುಂಬಲು ಒತ್ತಾಯಿಸಿದಾಗ, ನಾನು ಸಾಮಾನ್ಯ ಸೈನಿಕನಂತೆ ನಿಮ್ಮ ಹಿಂದೆ ಇರುತ್ತೇನೆ, ನಿಮ್ಮ ಆದೇಶವನ್ನು ಪಾಲಿಸುತ್ತೇನೆ ಎಂದು ವಿನಯಪೂರ್ವಕವಾಗಿ ತಿರಸ್ಕರಿಸುತ್ತಿದ್ದರು. ತೀರಾ ಇತ್ತೀಚೆಗೆ ಅಂದರೆ ೬-೭ ವರ್ಷಗಳ ಹಿಂದೆ ಅವರು ಅಧ್ಯಾತ್ಮದ ಕಡೆಗೆ ವಾಲಿದರು. ಅದ್ಯಾಕೋ ಈ ಮಾಯಾಲೋಕದಲ್ಲಿ ರಂಗುರಂಗಿನ ಜನರ ನಡುವೆ ಇದ್ದರೂ ವಿಷ್ಣು ಮಾತ್ರ ಅಧ್ಯಾತ್ಮದ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಲು ಆರಂಭಿಸಿದ್ದರು.
ಇತ್ತೀಚೆಗೆ ಕಳೆದ ಮೂರ‍್ನಾಲ್ಕು ವರ್ಷಗಳಿಂದ ಅಂದರೆ ಡಾ. ರಾಜ್‌ಕುಮಾರ್ ನಿಧನ ಹೊಂದಿದ ನಂತರ ವಿಷ್ಣು ಅದ್ಯಾಕೋ ಸಪ್ಪೆಯಾಗಿದ್ದರು. ಮಾತುಮಾತಿಗೂ ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತಿದ್ದರು. ಒಂದು ಪತ್ರಿಕಾಗೋಷ್ಠಿಯಲ್ಲಂತೂ ನಾನು ಡಾ. ರಾಜ್‌ರವರ ಆತ್ಮದ ಜತೆ ನಿತ್ಯವೂ ಮಾತನಾಡುತ್ತಿರುತ್ತೇನೆ, ಅವರೊಂದಿಗೆ ಹೀಗೆ ಮಾತನಾಡಿದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ ಎಂದು ಫಿಲಾಸಫಿಕಲ್ ರೀತಿಯಲ್ಲಿ ಹೇಳಿದಾಗ ಎಲ್ಲರೂ ಅಚ್ಚರಿಪಟ್ಟಿದ್ದರು. ಕೊನೆಗೆ ಯಾರಿಗೂ ಹೇಳದೆ ಕೇಳದೆ ವಿಷ್ಣು ಕೂಡ ಮೌನವಾಗಿ ಡಾ. ರಾಜ್‌ಕುಮಾರ್ ಇದ್ದಲ್ಲಿಗೆ ಹೊರಟುಹೋದರು. ವಿಷ್ಣು ನಿಧನ ಕನ್ನಡ ಚಿತ್ರರಂಗದ ಜನರಿಗೆ ಮಾತ್ರವಲ್ಲ ಕರ್ನಾಟಕದ ಜನತೆಗೆ ಒಂದು ದೊಡ್ಡ ದಿಗ್ಭ್ರಮೆ. ಯಾಕೆಂದರೆ ೫೯ ಖಂಡಿತವಾಗಿಯೂ ಸಾಯುವ ವಯಸ್ಸಲ್ಲ. ಅದರಲ್ಲೂ ಉತ್ತಮ ಮೈಕಟ್ಟನ್ನು ಹೊಂದಿದ್ದ ವಿಷ್ಣು ಇಷ್ಟು ಬೇಗ ನಮ್ಮನ್ನೆಲ್ಲಾ ಅಗಲಿ ದೂರ ಹೋಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಹೀಗಾಗಿ ಡಾ. ರಾಜ್ ನಿಧನದ ನೋವು ಇನ್ನೂ ಹಸಿಯಾಗಿರುವಾಗಲೇ ವಿಷ್ಣು ನಿಧನ ಹೊಂದಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಪ್ರೇಕ್ಷಕರು ಮರೆಯಲಾಗದ ಮುತ್ತು ಹೇಗೋ ಹಾಗೆಯೇ ವಿಷ್ಣುವರ್ಧನ್ ಕೂಡ ಕನ್ನಡ ಜನತೆಯ ಪ್ರೀತಿ, ಗೌರವ ಮತ್ತು ಅಭಿಮಾನವನ್ನು ಪಡೆದಿರುವ ಒಬ್ಬ ಅಪರೂಪದ ಪ್ರತಿಭಾವಂತ ಹಾಗು ಸಜ್ಜನ ನಟನೆಂದೇ ಹೇಳಬೇಕು. ಹೀಗಾಗಿ ಕನ್ನಡ ಚಿತ್ರ ರಂಗದ ಆಧಾರ ಸ್ತಂಭಗಳಾದ ಡಾ. ರಾಜ್ ಮತ್ತು ಡಾ. ವಿಷ್ಣು ಕನ್ನಡ ಚಿತ್ರರಂಗದ ಮಿನುಗು ತಾರೆಗಳು.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
June
(18)
- ಅಪಘಾತವಲ್ಲ, ಸಾಮೂಹಿಕ ಕೊಲೆ!
- ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು
- ಪ್ರತಿಗ್ರಾಮದಲ್ಲಿ ಭಾರತದ ಕೇಂದ್ರ ಇದೆ
- ಹೊಗೇನಕಲ್ ನಮ್ಮದು ಸಾಕ್ಷಿ ಇಲ್ಲಿದೆ!
- ಚಾಮರಾಜನಗರದಲ್ಲಿ ರಣಘೋಷ
- ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆಗಳ ವಾಪಸಾತಿ ಮುಖ್ಯಮಂತ್...
- ಕರ್ನಾಟಕ ಮಾರಾಟಕ್ಕಿದೆ!
- ಹೊರನಾಡಲ್ಲಿ ಕನ್ನಡದ ತೇರನೆಳೆವರು
- ಮುಗಿಯದ ಯುದ್ಧ ಬೆಳಗಾವಿ ನಮ್ಮದು
- ಈ ಸಾವು ನ್ಯಾಯವೇ?
- ರಂಗದಲ್ಲಿ ಮದುಮಗಳು
- ಭರವಸೆ ಭಿತ್ತಿದ ಮಹಾಬೆಳಕು ಸಿದ್ಧಗಂಗಾ ಡಾ.ಶ್ರೀ ಶಿವಕುಮಾರ ...
- ಸೇವಾ ಕೈಂಕರ್ಯಗಳ ಹರಿಕಾರ ಆದಿಚುಂಚನಗಿರಿ ಶ್ರೀ
- ಕರವೇಯಿಂದ ಕಂಕಣಭಾಗ್ಯ
- ರೈತರ ಕಿಂದರಿಜೋಗಿಯ ಇನ್ನಷ್ಟು ನೆನಪುಗಳು...
- ಸಿ.ಬಿ.ಎಸ್.ಇ ಹೇರುವ ಹುನ್ನಾರ!
- ಮರೆಯಲಾಗದ ವಿಷ್ಣು
- ‘ನಲ್ನುಡಿಗೆ ನೀವೇ ಸ್ಫೂರ್ತಿ...
-
▼
June
(18)
No comments:
Post a Comment