Friday, June 4, 2010

‘ನಲ್ನುಡಿಗೆ ನೀವೇ ಸ್ಫೂರ್ತಿ...

ಕನ್ನಡ ನಾಡಿನ ಮುಂಬಾನೊಳು ಚೆಂ
ಬಣ್ಣದ ಬೆಳಕು ಇದೇತರದು?
ಹೊನ್ನಗದಿರ ಬರಲಿಹನೆಂದೊರೆಯಲು
ಮುನ್ನವೆ ಬಂದರುಣನದೆ ಇದು?
ನನ್ನಿಯು! ಅರುಣನದೆ ಇದು!
-ಆನಂದಕಂದ
‘ನಲ್ನುಡಿಯ ಮೊದಲ ಸಂಚಿಕೆಗೆ ದೊರೆತ ಪ್ರತಿಕ್ರಿಯೆ, ಪ್ರೋತ್ಸಾಹ, ಪ್ರೀತಿಯನ್ನು ನೋಡಿ ನಮ್ಮ ಮನ ತುಂಬಿಬಂದಿದೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಕನಸು, ದೂರದೃಷ್ಟಿ, ಪರಿಶ್ರಮದ ಸಾಕಾರ ರೂಪವೇ ‘ನಲ್ನುಡಿ. ಗುಣಮಟ್ಟದಲ್ಲಿ ರಾಜಿ ಬೇಡ ಎಂಬ ಅವರ ಮಾತುಗಳೇ ನಮಗೆ ಸ್ಫೂರ್ತಿ. ಕರ್ನಾಟಕ ರಕ್ಷಣಾ ವೇದಿಕೆಯ ವೀರಸೇನಾನಿಗಳೇ ನಮಗೆ ಪ್ರೇರಣೆ. ಅಸಂಖ್ಯಾತ ಕನ್ನಡಿಗರ ಅಭಿಮಾನದ ಸಿಂಚನವೇ ನಮಗೆ ಒತ್ತಾಸೆ.
ಇಷ್ಟು ಒಳ್ಳೆಯ ಮುದ್ರಣ, ಇಷ್ಟು ಒಳ್ಳೆಯ ಕಾಗದ ಇದೆಲ್ಲವೂ ದುಬಾರಿಯಾಯಿತಲ್ಲವೆ? ಎಂಬುದು ಹಲವರ ಪ್ರಶ್ನೆ. ಕನ್ನಡ ಸಂಸ್ಕೃತಿ ಶ್ರೀಮಂತವಾಗಿದೆ, ಈ ಸಂಸ್ಕೃತಿಯನ್ನು ಬಿಂಬಿಸುವ ಪತ್ರಿಕೆಯೂ ಶ್ರೀಮಂತ ವಾಗಿಯೇ ರೂಪಿಸಿದ್ದೇವೆ ಎಂಬುದು ನಮ್ಮ ಉತ್ತರ. ಪತ್ರಿಕೆಗೆ ಶೋಭೆ ತಂದಿರುವುದು ಕರ್ನಾಟಕದ ಸಮಕಾಲೀನ ಜಗತ್ತಿನ ದಿಗ್ಗಜರ ಲೇಖನಗಳು. ಅವರು ತಮ್ಮ ಬರೆಹಗಳನ್ನು ‘ನಲ್ನುಡಿಗೆ ನೀಡುವ ಮೂಲಕ ನಮ್ಮನ್ನು ಪೊರೆದಿದ್ದಾರೆ. ಅವರ ಪ್ರೀತಿಗೆ ನಾವು ಸದಾ ಋಣಿಗಳು.
‘ನಲ್ನುಡಿಗೆ ರಾಜ್ಯದ ಎಲ್ಲ ಭಾಗಗಳಿಂದಲೂ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರುತ್ತಿದೆ. ಅದನ್ನು ನೀವು ‘ನಿಮ್ಮ ನುಡಿ ಪುಟದಲ್ಲೇ ಗಮನಿಸಬಹುದು. ಒಂದು ಪುಟದಲ್ಲಿ ಮುಗಿಯಬೇಕಾದ ‘ನಿಮ್ಮ ನುಡಿ ನಾಲ್ಕು ಪುಟಗಳವರೆಗೆ ವಿಸ್ತರಿಸಿಕೊಂಡಿರುವುದು ನಮ್ಮ ನಾಡಜನರ ಸಾಹಿತ್ಯ-ಸಂಸ್ಕೃತಿ ಆರಾಧನೆಗೆ ಸಾಕ್ಷಿ. ವಿಶೇಷವಾಗಿ, ಹೊರನಾಡ ಕನ್ನಡಿಗರು ‘ನಲ್ನುಡಿಗೆ ತಮ್ಮ ವಿಶೇಷ ಪ್ರೀತಿ ತೋರಿದ್ದಾರೆ. ಹೊರನಾಡಿನಿಂದ ವಿಶೇಷವಾಗಿ ಮಹಾರಾಷ್ಟ್ರದ ಹಲವು ನಗರಗಳಿಂದ ಪತ್ರಿಕೆಯ ವಿತರಣೆಗಾಗಿ ಬೇಡಿಕೆಗಳು ಬಂದಿವೆ. ಕರ್ನಾಟಕವೆಂದರೆ ಕೇವಲ ಒಂದು ನಿರ್ದಿಷ್ಟ ಭೂಭಾಗವಲ್ಲ; ಅದನ್ನು ಮೀರಿದ್ದು ಎಂಬ ಕುವೆಂಪು ಅವರ ಮಾತಿಗೆ ಇದು ಸಾಕ್ಷಿ.
ಈ ಸಂಚಿಕೆಯಲ್ಲಿ ಪುಟಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಈ ಸಂಚಿಕೆಯಿಂದ ಒಟ್ಟು ನೂರು ಪುಟಗಳ ‘ನಲ್ನುಡಿ ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತಿದೆ. ಕನ್ನಡ-ಕರ್ನಾಟಕ-ಕನ್ನಡಿಗರ ಕುರಿತಾದ ಚರ್ಚೆಗೆ ಎಷ್ಟು ಪುಟಗಳಿದ್ದರೂ ಸಾಲದು. ಈ ನೂರು ಪುಟಗಳಲ್ಲಿ ಕನ್ನಡದ ಸಾಹಿತ್ಯ, ಸಮಾಜ, ಸಂಸ್ಕೃತಿ, ಕಲೆ, ಇತಿಹಾಸ, ಸಿನಿಮಾ, ರಂಗಭೂಮಿ ಕುರಿತಾದ ಗಂಭೀರ ಅವಲೋಕನಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದೇವೆ. ಸಹಜವಾಗಿಯೇ ಸಮಕಾಲೀನ ರಾಜಕೀಯ ಜಗತ್ತೂ ಸಹ ಇಲ್ಲಿ ಚರ್ಚೆಗೆ ಒಳಗಾಗುತ್ತದೆ.
ನಾರಾಯಣಗೌಡರು ಮೊದಲ ಸಂಚಿಕೆಯ ‘ನೇರನುಡಿಯಲ್ಲೇ ಹೇಳಿದಂತೆ ನಮಗೆ ಯಾರೂ ಶತ್ರುಗಳಲ್ಲ. ಯಾರನ್ನೂ ನಾವು ವೈಯಕ್ತಿಕವಾಗಿ ದ್ವೇಷಿಸುವುದಿಲ್ಲ. ನಮ್ಮ ವಿರೋಧವೇನಿದ್ದರೂ ಕನ್ನಡತನದ ವಿರುದ್ಧ ನಿಲ್ಲುವ ಶಕ್ತಿ, ಸಂಸ್ಥೆ, ವ್ಯಕ್ತಿಗಳ ವಿರುದ್ಧ. ‘ನಲ್ನುಡಿ ದಿಟವಾಗಿಯೂ ಇಂಥ ಶಕ್ತಿಗಳ ವಿರುದ್ಧ ಕಿಡಿನುಡಿಯಾಗಲಿದೆ.
‘ನಲ್ನುಡಿಯಲ್ಲಿ ಪ್ರಕಟಗೊಳ್ಳುವ ಲೇಖನಗಳಲ್ಲಿ ಮೂಡಿಬರುವ ಅಭಿಪ್ರಾಯಗಳೇ ಅಂತಿಮ ಎಂದು ಯಾರೂ ಭಾವಿಸಬೇಕಾಗಿಲ್ಲ. ಭಿನ್ನ ಧ್ವನಿಗಳನ್ನು ನಾವು ಗೌರವಿಸುತ್ತೇವೆ. ಅವುಗಳನ್ನು ಪ್ರಕಟಿಸಲಾಗುವುದು ಮತ್ತು ಚರ್ಚೆಗೆ ಅವಕಾಶ ನೀಡಲಾಗುವುದು. ಚರ್ಚೆ, ವಿಶ್ಲೇಷಣೆ, ವಾದಗಳಿಂದಲೇ ಸಂಸ್ಕೃತಿಯ ಬೇರುಗಳು ಗಟ್ಟಿಯಾಗುತ್ತವೆ ಎಂದು ಬಲವಾಗಿ ನಂಬಿದವರು ನಾವು. ಹೀಗಾಗಿ ಮುಕ್ತ ಚರ್ಚೆಗೆ ಇಲ್ಲಿ ಅವಕಾಶವಿದೆ. ಚರ್ಚೆ ಕಾಡುಹರಟೆಯಾಗಬಾರದು, ವಿಶ್ಲೇಷಣೆಗಳು ಏಕಮುಖವಾಗಬಾರದು, ವಾದ ವಿತಂಡವಾಗಬಾರದು ಎಂಬುದಷ್ಟೇ ನಮ್ಮ ಮನವಿ.
ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಕುರಿತಾದ ಲೇಖನದೊಂದಿಗೆ ‘ನೆನೆಯುತ್ತೇವೆ ನಿಮ್ಮನ್ನು ಎಂಬ ಮಾಲಿಕೆ ಆರಂಭಗೊಂಡಿದೆ. ಕನ್ನಡದ ಜಗತ್ತನ್ನು ಬೆಳೆಸಿದ, ಪೋಷಿಸಿದ, ಕನ್ನಡಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದ, ಕನ್ನಡಿಗರನ್ನು, ಕರ್ನಾಟಕವನ್ನು ಮಾನಸಿಕವಾಗಿ, ಭೌಗೋಳಿಕವಾಗಿ ಒಂದುಮಾಡಿದ ಮಹಾನುಭಾವರಿಗೆ ನುಡಿನಮನವೇ ಈ ಮಾಲಿಕೆ. ಇಂಥ ಮಹಾಚೇತನಗಳ ಕುರಿತಾದ ಮಾಹಿತಿಯನ್ನು ಒದಗಿಸಲು ನಮ್ಮ ಓದುಗರಲ್ಲಿ ಮನವಿ ಮಾಡುತ್ತೇವೆ. ನಂತರ ಈ ಲೇಖನಗಳು ಕೃತಿ ರೂಪದಲ್ಲಿಯೂ ಹೊರಬರಲಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಘಟಕಗಳು ನಾಡಿನ ಎಲ್ಲ ಭಾಗಗಳಲ್ಲಿ ಕ್ರಿಯಾಶೀಲವಾಗಿ ಚಟುವಟಿಕೆ ನಡೆಸುತ್ತಿವೆ. ಈ ಚಟುವಟಿಕೆಗಳ ಪೂರ್ಣ ಮಾಹಿತಿ ಒದಗಿಸುವುದು ಕಷ್ಟಸಾಧ್ಯ. ಹೀಗಾಗಿ ಪ್ರಮುಖ ಚಟುವಟಿಕೆಗಳ ವರದಿಗಳು ಮಾತ್ರ ‘ನಲ್ನುಡಿಯಲ್ಲಿರುತ್ತವೆ. ತಾವು ನಡೆಸುವ ಚಟುವಟಿಕೆಗಳ ಕುರಿತಾದ ಮಾಹಿತಿಯನ್ನು ಭಾವಚಿತ್ರ ಸಮೇತ ಕಳುಹಿಸಲು ರಕ್ಷಣಾ ವೇದಿಕೆಯ ಸಮಸ್ತ ಘಟಕಗಳ ಪದಾಧಿಕಾರಿಗಳಿಗೂ ಮನವಿ ಮಾಡುತ್ತೇವೆ.
ಮತ್ತೊಮ್ಮೆ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಹರಕೆ ‘ನಲ್ನುಡಿಗಿರಲಿ ಎಂದು ಹೃದಯಪೂರ್ವಕವಾಗಿ ಮನವಿ ಮಾಡುತ್ತೇನೆ. ‘ನಲ್ನುಡಿಯ ಎರಡನೇ ಸಂಚಿಕೆ ಓದಿದ್ದೀರಿ; ನಿಮ್ಮ ಅಭಿಪ್ರಾಯಗಳಿಗಾಗಿ ನಾವು ಕಾದಿದ್ದೇವೆ.
ಪ.ಬ.ಜ್ಞಾನೇಂದ್ರಕುಮಾರ್

2 comments:

  1. ಕರವೇ ನಲ್ನುಡಿ ಉತ್ತಮವಾದ ಲೇಖನಗಳೊಂದಿಗೆ ಬರುತ್ತಿದೆ. ಇದು ಕನ್ನಡಿಗನಿಗಾಗಿ ಇರುವ ಏಕೈಕ ಪತ್ರಿಕೆಯೆಂದೇ ಹೇಳಬಹುದು. ಈ ಲೇಖನಗಳ ಪ್ಯಾರಾಗ್ರಾಫ್ ಗಳು ಒಂದಕ್ಕೊಂದು ಅಂಟಿಕೊಂಡಿವೆ. ಮಧ್ಯೆ ಒಂದು ಲೈನ್ ಬಿಟ್ಟರೆ ಚೆನ್ನಾಗಿರುತ್ತೆ.

    -ವಾಸು

    ReplyDelete
  2. male male male
    tumbihariva hole
    tegeya banni kale
    toleyudu bhuvia,manasa kole

    ReplyDelete

ಹಿಂದಿನ ಬರೆಹಗಳು