Friday, June 4, 2010

ಪ್ರತಿಗ್ರಾಮದಲ್ಲಿ ಭಾರತದ ಕೇಂದ್ರ ಇದೆ
ಇವತ್ತಿನ ಕರ್ನಾಟಕದ ಸಂದರ್ಭದಲ್ಲಿ ಕನ್ನಡಿಗರ ಆತ್ಮಸಾಕ್ಷಿಯಂತೆ ಮಾತನಾಡುವ ಡಾ.ಯು.ಆರ್.ಅನಂತಮೂರ್ತಿ ‘ಕರವೇ ನಲ್ನುಡಿ’ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿದರು. ನಂತರ ಅವರ ಮಾತುಗಳು ಚೌಡಯ್ಯ ಸ್ಮಾರಕ ಭವನದಲ್ಲಿ ಅನುರಣಿಸಿದವು. ಕನ್ನಡವನ್ನು ಉಳಿಸುವ ಬಗೆ ಹೇಗೆ ಎಂಬುದು ಅವರ ಒಟ್ಟು ಭಾಷಣದ ಕೇಂದ್ರಪ್ರಜ್ಞೆಯಾಗಿತ್ತು. ಅನಂತಮೂರ್ತಿಯವರ ಮಾತುಗಳು ಕನ್ನಡ ಚಳವಳಿಗಾರರಿಗೆ, ಕನ್ನಡ ಶ್ರೀಸಾಮಾನ್ಯನಿಗೆ ಹೊಸ ಮಾರ್ಗವೊಂದರ ದರ್ಶನವನ್ನು ಮಾಡಿಸಿತು. ಅವರ ಭಾಷಣದ ಯಥಾವತ್ತು ಇಲ್ಲಿದೆ.

ಕನ್ನಡದ ಮಾತನ್ನ ಎತ್ತುವುದೇ ಅಪಾಯಕಾರಿಯಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿದ ಹಿರಿಯರ ಸಂಸ್ಥಾನಕ್ಕೆ ಸೇರಿದ ಪೂಜ್ಯರಾದ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರೇ, ಇಂಥ ಒಂದು ಬೃಹತ್ ಸಭೆಯನ್ನು ಬೆಂಗಳೂರಿನಲ್ಲಿ ಕನ್ನಡಕ್ಕಾಗಿ ಏರ್ಪಾಡು ಮಾಡುವುದನ್ನು ಸಾಧ್ಯವಾಗುವಂತೆ ಮಾಡಿದ ಶ್ರೀ ಟಿ.ಎ. ನಾರಾಯಣಗೌಡರೇ, ಮಹಾಪೌರರಾದ ಎಸ್.ಕೆ ನಟರಾಜ್ ಅವರೇ, ನಮಗೆಲ್ಲರಿಗೂ ಬಹಳ ಪ್ರೀತಿಪಾತ್ರರಾದ ಶ್ರೀಮತಿ ಮೋಟಮ್ಮ ನವರೇ, ನಮ್ಮ ಅತ್ಯಂತ ಮುಖ್ಯವಾದ ಕನ್ನಡದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಲ್ಲೂರು ಪ್ರಸಾದ್‌ರವರೇ, ನನಗೆ ಬಹಳ ಕಾಲದಿಂದ ವಿಶ್ವಾಸವನ್ನು ಇಟ್ಟಿರುವ ಮನುಬಳಿಗಾರ್ ಅವರೇ, ಪತ್ರಿಕೆಯ ಸಂಪಾದಕರಾದ ಶ್ರೀಮತಿ ವಿಶಾಲಾಕ್ಷಿ ಅವರೆ ಮತ್ತು, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಪರಮೇಶ್ವರ್‌ರವರೆ,
ಯಾವ ಬಂಗಾಳಿ ಆದರೂ ಪ್ರಪಂಚದಲ್ಲಿ ಎಲ್ಲೇ ಇದ್ದರೂ, ನೀನು ಯಾರು ಅಂದರೆ, ನಾನು ಬಂಗಾಳಿ ಅಂತಾನೆ. ಇಂಥ ಜಾತಿ ಅಂಥ ಹೇಳಲ್ಲ. ಒಬ್ಬ ತಮಿಳರವನು ಎಲ್ಲಿದ್ದರು ನೀನು ಯಾರು ಅಂದರೆ ನಾನು ತಮಿಳವನು ಎನ್ನುತ್ತಾನೆ. ಕನ್ನಡದವರ ಮಟ್ಟಿಗೆ ಅಮೆರಿಕದಲ್ಲಿದ್ದರೆ ನೀವು ಯಾರು ಅಂದರೆ, ನಾವು ವೀರಶೈವರು, ನಾವು ಗೌಡರು, ನಾವು ಬ್ರಾಹ್ಮಣರು ಅಂತಾರೆ. ಆಮೇಲಿಂದ ಒತ್ತಾಯಪೂರ್ವಕವಾಗಿ ನೋಡಿದರೆ ಐ ಆಮ್ ಎ ಕನ್ನಡಿಗ ಅಂಥ ಇಂಗ್ಲಿಷ್‌ನಲ್ಲಿ ಹೇಳ್ತಾರೆ. ಇದು ಬಹಳ ದುರದೃಷ್ಟದ ವಿಷಯ. ನಾವು ಮೊದಲು ಗುರುತಿಸಿಕೊಳ್ಳಬೇಕಾದುದು ನಮ್ಮನ್ನ ಕನ್ನಡಿಗರು ಅಂಥ. ಯಾಕೆಂದರೆ ಭಾರತದಲ್ಲಿ ಇರೋದು ಫೆಡರಲ್ ವ್ಯವಸ್ಥೆ, ಕೇಂದ್ರ ಸರ್ಕಾರ ಅಂತೀವಲ್ಲ ಅದು ತಪ್ಪು ಶಬ್ದ, ಭಾರತ ಬಹುಕೇಂದ್ರಿತ ರಾಷ್ಟ್ರ, ಎಲ್ಲಾ ರಾಜ್ಯಗಳಲ್ಲೂ ಭಾರತದ ಕೇಂದ್ರ ಇದೆ. ಗಾಂಧೀಜಿ ಅವರು ಕಲ್ಪಿಸಿದ್ದು ಸಹ ಇದನ್ನೇ. ಭಾರತದ ಪ್ರತಿ ಗ್ರಾಮದಲ್ಲೂ ಭಾರತದ ಕೇಂದ್ರ ಇದೆ. ಕೊನೆಪಕ್ಷ ನಾವು ಪ್ರತಿ ರಾಜ್ಯದಲ್ಲೂ ಭಾರತದ ಕೇಂದ್ರ ಇದೆ ಅಂಥ ಅರ್ಥಮಾಡಿಕೊಳ್ಳಬೇಕು. ಇದು ಫೆಡರಲ್ ಆದ್ದರಿಂದಲೇ ರೈಲ್ವೆಯಲ್ಲಿ ಇತ್ಯಾದಿ ನೌಕರಿಯಲ್ಲಿ ಪ್ರತಿಯೊಂದರಲ್ಲೂ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಗಲೇಬೇಕು.
ಇಲ್ಲದೇ ಹೋದರೆ ಏನಾಗತ್ತೆ ಅಂದರೆ, ನೀವು ಅಸ್ಸಾಂನಲ್ಲಿ ನೋಡಿದ್ರೆ, ಅಸ್ಸಾಂನಲ್ಲಿ ಅಸ್ಸಾಂನ ಜನರೇ ಇಲ್ಲದಂತ ರಾಜಕಾರಣ ನಡೀತಿದೆ. ನನ್ನನ್ನ ೨-೩ ವರ್ಷಗಳ ಹಿಂದೆ ನಮ್ಮಲ್ಲಿ ಸಾಹಿತ್ಯ ಸಮ್ಮೇಳನ ನಡೆಯತ್ತಲ್ಲ ಅಂಥದ್ದೇ ಒಂದು ಅಸ್ಸಾಂ ಭಾಷೆಯ ಸಮ್ಮೇಳನಕ್ಕೆ ನನ್ನನ್ನ ಉದ್ಘಾಟನೆ ಮಾಡೋದಕ್ಕೆ ಕರೆದಿದ್ದರು. ನಾನು ಹೋಗಿ ನೋಡಿದರೆ ಒಂದು ದೊಡ್ಡ ಮೈದಾನದಲ್ಲಿ ಲಕ್ಷೋಪಲಕ್ಷ ಅಸ್ಸಾಮಿ ಜನರು ಸೇರಿದ್ದರು. ಅಸ್ಸಾಂನಲ್ಲಿ ಅವರು ನಿಜವಾಗಲೂ ತಮ್ಮನ್ನ ಗುರುತಿಸಿಕೊಳ್ಳುವುದು ನಾವು ಅಸ್ಸಾಮಿ ಎಂದೇ. ಯಾಕೆಂದರೆ ಅಸ್ಸಾಮಿನ ಭಾಷೆಗೆ ಒಂದು ದೊಡ್ಡ ಅಪಾಯ ಬಂದೊದಗಿದೆ. ಬೆಂಗಳೂರಿನಲ್ಲಿ ಕನ್ನಡಕ್ಕೆ ಇಂಥ ಅಪಾಯ ಬಂದೊದಗಿದೆ. ನನ್ನ ಸ್ನೇಹಿತರು, ನನ್ನ ಮಗುವನ್ನ ಒಂದು ಒಳ್ಳೆಯ ಕನ್ನಡ ಶಾಲೆಗೆ ಕಳಿಸಬೇಕು, ಕನ್ನಡ ಮಾಧ್ಯಮದ ಶಾಲೆಗೆ ಕಳಿಸಬೇಕು ಅಂದರೆ ಇಲ್ಲಿ ಒಂದೆ ಒಂದು ಕನ್ನಡ ಮಾಧ್ಯಮ ಶಾಲೆ ಸಿಗುತ್ತಿಲ್ಲ; ಬೆಂಗಳೂರಿನಲ್ಲಿ ಎನ್ನುತ್ತಾರೆ. ಹೀಗೆ ಆಗಬಾರದು. ಇದು ನಮ್ಮ ರಾಜಧಾನಿ ಮತ್ತು ಕೆಲವು ವಿಷಯಗಳಲ್ಲಿ ನಾರಾಯಣಗೌಡರಿಗೆ ಸಂಪೂರ್ಣ ಬೆಂಬಲ ನಿಂತು ನಾವು, ನಾವು ಅಂದರೆ ಪ್ರಜ್ಞಾವಂತರಾದವರು ಕೆಲಸ ಮಾಡಬೇಕು.
ಉದಾಹರಣೆಗೆ ಇಲ್ಲಿ ಯಾವ ಬಹುರಾಷ್ಟ್ರೀಯ ಕಂಪನಿ ಬಂದರೂ ಕನ್ನಡವನ್ನೂ ಒಂದು ಭಾಷೆಯನ್ನಾಗಿ ಅವರು ಬಳಸಬೇಕು, ಕನ್ನಡವನ್ನೇ ಅಲ್ಲ. ಕನ್ನಡವನ್ನೂ ಒಂದು ಭಾಷೆಯಾಗಿ. ಯಾಕೆಂದರೆ ಅವರಿಗೆ ಬೇರೆ ಭಾಷೆ ಗೊತ್ತಿಲ್ಲ. ಯಾಕೆಂದರೆ ಇದೇ ಬಹುರಾಷ್ಟ್ರೀಯ ಕಂಪನಿ ಹಾಲೆಂಡ್‌ಗೆ ಹೋದರೆ ಅಲ್ಲಿನ ಭಾಷೆಯನ್ನ ಉಪಯೋಗಿಸುತ್ತಾರೆ. ಫ್ರಾನ್ಸ್‌ಗೆ ಹೋದರೆ ಅಲ್ಲಿನ ಭಾಷೆ ಉಪಯೋಗಿಸುತ್ತಾರೆ. ಕರ್ನಾಟಕಕ್ಕೆ ಬಂದರೆ, ಅವರು ಕನ್ನಡವನ್ನು ಬಳಸಲ್ಲ. ನಮ್ಮ ಸರ್ಕಾರ ಇಂಥಹ ಒಂದು ಒತ್ತಾಯವನ್ನು ಅವರ ಮೇಲೆ ಹಾಕಬೇಕು. ನಿಮಗೆ ಜಾಗ ಕೊಡಬೇಕಾದರೆ ನಿಮ್ ಆಫೀಸಿನಲ್ಲಿ ಕನ್ನಡವನ್ನೂ ಒಂದು ಭಾಷೆಯಾಗಿ ಬಳಸಬೇಕು ಎಂದು ಕಟ್ಟಳೆ ಹೇರಬೇಕು. ಕನ್ನಡವನ್ನೂ ಅಂತೀನಿ,ಕನ್ನಡವನ್ನೇ ಅಲ್ಲ .ಯಾಕೆಂದರೆ ಬೇರೆ ಬೇರೆ ಕಡೆ ಅವರು ವ್ಯವಹಾರ ಮಾಡಬೇಕಾಗುತ್ತೇ. ಕನ್ನಡವಿಲ್ಲದೇ ಅಲ್ಲ.
ಹಾಗೇನೆ ಇಷ್ಟು ಜನ ಕನ್ನಡಿಗರಿಗೆ ಕೆಲಸ ಸಿಗಲೇಬೇಕು ಅನ್ನೋದನ್ನ ಮಾಡಬೇಕು. ಜೊತೆಗೆ ಇದೊಂದು ದೊಡ್ಡ ಚಳವಳಿ ಅಂಥ ತಿಳಿದುಕೊಂಡಿದ್ದೇನೆ ನಾನು. ಕರವೇ ಅವರು ಕನ್ನಡಿಗರನ್ನ ಎಲ್ಲಾ ಕೆಲಸವನ್ನು ಮಾಡಬಲ್ಲಂತಹ ತರಬೇತಿ ಕೊಡುವಂತಹ ಒಂದು ಚಳವಳಿಯನ್ನ ಮಾಡಬೇಕು. ನಮ್ಮಲ್ಲಿ ಮನೆ ಕಟ್ಟಬೇಕು ಅಂದರೆ ತಮಿಳರೆ ಸಿಗೋದು, ಇವತ್ತೇನಾದರು, ನಾವು ಮರಗೆಲಸ ಮಾಡಬೇಕು ಅಂದರೆ ರಾಜಸ್ಥಾನಿಗಳೇ ಸಿಗೋದು. ಹಿಂದಿನ ಕಾಲದಲ್ಲಿ ಚಿನ್ನದ ಕೆಲಸ, ಮರಗೆಲಸವನ್ನ, ಮಡಿಕೆಗಳನ್ನ ಏನನ್ನಾದರು ಮಾಡಬಲ್ಲಂಥ ಶಕ್ತಿ ಕರ್ನಾಟಕದಲ್ಲಿತ್ತು. ಅದು ಹೋಗ್ತಾ ಇದೆ, ನಾವು ಸೋಮಾರಿಗಳಾಗುತ್ತಿದ್ದೇವೆ. ಅದು ಎಲ್ಲಾ ದೇಶದಲ್ಲೂ ಆಗುತ್ತೆ, ಏನಾಗತ್ತೆ ಅಂದರೆ ನಾವು ಅನೇಕ ಸಲ ಸ್ವಲ್ಪ ಶ್ರೀಮಂತರಾಗಿಬಿಟ್ಟರೆ ಸೋಮಾರಿಗಳಾಗಿಬಿಡುತ್ತೇವೆ. ಬಂಗಾಳದಲ್ಲಿ ಏನಾದರೂ ಬೇರೆ ಕೆಲಸ ಮಾಡಬೇಕು ಅಂದರೆ ಬಿಹಾರಿಗಳು ಅಲ್ಲಿಗೆ ಹೋಗಬೇಕು. ಬೇರೆಯವರು ಹೋದರೆ ಆಗಲ್ಲ. ನಾನು ಕೇರಳದಲ್ಲಿ ವೈಸ್ ಚಾನ್ಸಲರ್ ಆಗಿದ್ದೆ, ಅಲ್ಲಿ ಒಂದು ಎಲೆಕ್ಟ್ರಿಕ್ ರಿಪೇರಿ ವರ್ಕ್ ಮಾಡಕ್ಕೆ ಮಾಲಯಾಳಿ ಸಿಗೋದಿಲ್ಲ. ಯಾವುನೋ ತಮಿಳೋನೋ ಬಂದು ಮಾಡ್ತಾನೆ. ಕಷ್ಟದ ಕೆಲಸವನ್ನ ನಾವು ಮಾಡಲ್ಲ. ಹಾಗೇನೆ ಪಾಪ ಬೀದರ್ ಕಡೆಯವರು ಗೋವಾಗೆ ಹೋಗದೆ ಇದ್ದರೆ ಯಾವ ಕೆಲಸವೂ ಆಗಲ್ಲ.
ಹೀಗೆ ನಾವು ನಮ್ಮ ಎಲ್ಲ ಕೆಲಸವನ್ನು ಮಾಡೋದಕ್ಕೆ ಇನ್ನೊಂದು ಭಾಷೆ ಜನರನ್ನು ಬಳಸಿಕೊಳ್ಳುತ್ತೇವೆ. ಆದ್ದರಿಂದಲೇ ಇನ್ನೊಂದು ಭಾಷೆ ಜನರು ಹೆಚ್ಚೆಚ್ಚು ನಮ್ಮೊಳಗೆ ಬರಬೇಕಾಗತ್ತೆ. ನಾವು ಸ್ವಲ್ಪ ಸ್ವತಂತ್ರವಾಗಿ ಒಂದು ರಾಜ್ಯವಾಗಿ ಗಟ್ಟಿಯಾಗಿ ಇರಬೇಕು ಅಂದರೆ ನಮ್ಮಲ್ಲೇ ಎಲ್ಲಾ ಕೆಲಸವನ್ನ ಮಾಡುವಂತಹ ಸೋಮಾರಿಗಳಲ್ಲದಂತಹ, ನೆಚ್ಚಿಕೆ ಉಳ್ಳಂತಹ ಜನರನ್ನು ತಯಾರಿಮಾಡುವ ಒಂದು ಚಳವಳಿಯೂ ಈ ಕರವೇ ಮೂಲಕ ಆಗಬೇಕು ಅಂತ ನಾನು ಬಯಸುತ್ತೇನೆ. ಕನ್ನಡ ಸ್ವಾಭಿಮಾನ ಬೆಳೆಯೋದಕ್ಕೆ ನಾವು ಎಲ್ಲಾ ಕೆಲಸವನ್ನೂ ಮಾಡಬಲ್ಲವೆ ಅನ್ನೋದು ಕೂಡ ಬಹಳ ಮುಖ್ಯ. ಕನ್ನಡದವರನ್ನು ಬೇರೆಯವರು ಕರೆಯಬೇಕು, ಆ ರೀತಿಯ ಕೆಲಸವನ್ನು ಮಾಡಬಲ್ಲಂತಹವರು ನಮ್ಮಲ್ಲಿ ಇರಬೇಕು.
ಜ್ಞಾನದ ಮೂಲಕ ಮಾತ್ರದ ಕೆಲಸವಲ್ಲ, ದೇಹದ ಮೂಲಕ ಮಾಡುವ ಕೆಲಸಗಳನ್ನು ಮಾಡುವಂತಹವರು ದೊರೆಯುವಂತೆ ನೋಡಬೇಕು. ಅವರಿಗೆ ಬೇಕಾದಂತಹ ಶಿಕ್ಷಣವನ್ನು ಕೊಡುವುದನ್ನು ನಾರಾಯಣಗೌಡರು ಶುರು ಮಾಡಿದ್ದಾರೆ. ಅದು ಬರೀ ಹೋರಾಟ ಅಲ್ಲ. ಗಾಂಧೀಜಿ ಮಾಡ್ತಾ ಇದ್ರಲ್ಲ ಚರಕ, ಅದು ಇದು ಅಂಥ ಈ ರೀತಿಯ ಸಮಾಜವನ್ನೂ ಬೆಳೆಸುವಂತಹ ಕೆಲಸಗಳನ್ನು ಹಚ್ಚಿಕೊಳ್ಳಬೇಕು. ಆಗ ನಿಮ್ಮ ಶಕ್ತಿಯೂ ಹೆಚ್ಚಾಗುತ್ತೆ. ನಿಮಗೆ ಇರುವ ಶಕ್ತಿಯೂ ಹೆಚ್ಚಾಗುತ್ತೆ. ನಿಮಗೆ ಇರೋ ಗೌರವವೂ ಹೆಚ್ಚಾಗತ್ತೆ, ಕನ್ನಡದ ಸ್ವಾಭಿಮಾನವೂ ಬೆಳೆಯುತ್ತೆ. ನಾವು ಇವತ್ತು ಅನಕೃ ಅವರಿಂದ ಪ್ರಾರಂಭವಾದ ಕನ್ನಡ ಚಳವಳಿಯನ್ನ ನೆನೆಯಬೇಕು. ಬಹಳ ದೊಡ್ಡವರಿಂದ ಶುರುವಾಗಿದೆ. ಕುವೆಂಪು ಇದ್ದಾರೆ. ನಿಮ್ಮ ಮ್ಯಾಗಜಿನ್ ನೋಡಿದರೆ ಗೊತ್ತಾಗತೆ.
ರಾಜ್‌ಕುಮಾರ್ ಇದ್ದರು. ಅನಕೃರವರು ಇದ್ದರು. ಮಾಸ್ತಿ, ಬೇಂದ್ರೆ ಇದ್ದರು. ರಾಜ್‌ಕುಮಾರ್ ಎಷ್ಟು ಮುಖ್ಯ ಅಂಥ ನಾನು ಒಂದು ಕಡೆ ಬರೆದೆ. ಇಡೀ ಕರ್ನಾಟಕದಲ್ಲಿ ನಾವು ಎಲ್ಲರೂ ಬೇರೆ ಬೇರೆ ಕನ್ನಡಗಳನ್ನು ಮಾತನಾಡುತ್ತೀವಿ. ಬೆಳಗಾವಿಗೆ ಒಂದು ಕನ್ನಡ ಇದೆ, ನಮಗೊಂದು ಕನ್ನಡ ಇದೆ, ಬೀದರ್‌ಗೆ ಒಂದು ಕನ್ನಡ ಇದೆ. ರಾಜ್‌ಕುಮಾರ್ ಖ್ಯಾತರಾದ ಮೇಲೆ ಅವರು ಎಲ್ಲರಿಗೂ ಆಗಬಹುದಾದ ಒಂದು ಕನ್ನಡವನ್ನು ಮಾತನಾಡುತ್ತಿದ್ದರು. ಈಗ ಜರ್ಮನಿಯಲ್ಲಿ ಅಂತ ಒಂದು ಜರ್ಮನ್ ಸೃಷ್ಟಿ ಯಾಯಿತು, ಇಂಗ್ಲೆಂಡ್‌ನಲ್ಲಿ ನೂರು ಇಂಗ್ಲಿಷ್ ಇವೆ. ಆದರೆ ಒಂದು ಇಂಗ್ಲಿಷ್ ಬೇಕು ಅದೊಂದು ಭಾಷೆಯಾಗಬೇಕಾದರೆ, ಅದೊಂದು ರಾಜ್ಯವಾಗಬೇಕಾದರೆ, ಸಾರ್ವಜನಿಕ ಭಾಷೆಯಾಗಬೇಕಾದರೆ ಏನು ಮಾಡಬೇಕು ಎನ್ನುವುದನ್ನು ಬೇಂದ್ರೆ ಹೇಳಿದರು.
ನಮಗೆ ಅನೇಕ ಒಳದಾರಿಗಳಿವೆ, ಬೇರೆ ಬೇರೆ ಕನ್ನಡಗಳಿವೆ. ಅದನ್ನ ದೊಡ್ಡ ಹಾದಿಯಾಗುವ ಕನ್ನಡವನ್ನ ನಮ್ಮ ಕವಿಗಳು ಮಾಡಿದರು. ಅದನ್ನ ಭಾಷೆಯಲ್ಲಿ ಮಾಡಿದವರು ರಾಜ್‌ಕುಮಾರ್. ಆದರಿಂದ ಕರ್ನಾಟಕ ಅನ್ನೋದಕ್ಕೆ ಭಾಷೆಯ ಶಕ್ತಿಯನ್ನು ತಂದವರು ರಾಜ್‌ಕುಮಾರ್. ಅವರನ್ನೆಲ್ಲಾ ಇಂದು ನೆನಪಿಸಿಕೊಳ್ಳೋಣ. ಮತ್ತು ಇದು ಬಹುಕೇಂದ್ರಿತ ರಾಷ್ಟ್ರವಾದ್ದರಿಂದ ಭಾರತದ ರಾಷ್ಟ್ರಕ್ಕೆ ಕರ್ನಾಟಕವು ಒಂದು ಕೇಂದ್ರ, ಸ್ವಾಭಿಮಾನ ಕೇಂದ್ರ ಹೇಗಾಗಬಲ್ಲದು? ಕುವೆಂಪು ಅವರು ಹೇಳಿದ ಹಾಗೆ ಅದರ ಜೊತೆ ಹೊಂದಿಕೊಂಡು. ಭಾರತದ ಜೊತೆ ಹೊಂದಿಕೊಂಡು ನಮ್ಮನ್ನು ನಾವು ಬಿಟ್ಟುಕೊಡದೆ ಇರೊದನ್ನ ನಾವು ಕಲಿಯಬೇಕು. ನಾವು ಹೊಂದಿಕೊಳ್ಳುತ್ತಾ ಹೋಗಿ ಕನ್ನಡವನ್ನೆ ಬಿಡೋದು, ಕನ್ನಡವನ್ನೆ ಕಟ್ಟಿಕೊಂಡು ಭಾರತವನ್ನು ಮರೆಯೋದು, ಎರಡೂ ಕೂಡ ಅಪಾಯಕಾರಿ. ಈ ಹೊಂದಾಣಿಕೆಯನ್ನು ಮಾಡೋದು ಹೇಗೆ ಅನ್ನೋದು ಇದೆಯಲ್ಲಾ ಅದು ಬಹಳ ಕಷ್ಟ ಸಾಧ್ಯವಾದದ್ದು.
ಈ ಸಂದರ್ಭದಲ್ಲಿ ಎಲ್ಲಾ ಕನ್ನಡಿಗರಿರೋದ್ರಿಂದ ನನ್ನ ಕನಸನ್ನು ನಾನು ಹೇಳಿಬಿಡ್ತೀನಿ. ನನಗೆ ವಯಸ್ಸಾಗಿದೆ. ಸಾಯೋದ್ರೋಳಗೆ ನೋಡಬೇಕು ಅಂತ ಬಯಸೋದು ಏನನ್ನ ಅಂದ್ರೆ ಎಲ್ಲಾ ಮಕ್ಕಳಿಗೂ ಸಮಾನವಾದ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಸಿಗುವಂತೆ ಆಗಬೇಕು. ಎಲ್ಲಾ ಮಕ್ಕಳಿಗೂ ಅಂದ್ರೆ ಇಲ್ಲಿ ಫ್ರಾನ್ಸ್‌ನವನು ಒಬ್ಬ ಬಂದು ೧೦-೨೦ ವರ್ಷ ಇಲ್ಲಿ ಇರೋದಾದ್ರೆ, ಅವನ ಮಗು ಇಲ್ಲಿ ಬೆಳೆಯೋದಾದ್ರೆ ಫ್ರಾನ್ಸ್‌ನವನ ಮಗು ಕೂಡ ಕನ್ನಡವನ್ನ ಕಲಿಯಬೇಕು. ಯಾಕೆಂದರೆ ಒಂದು ಮಗು ಜ್ಞಾನವನ್ನ ಕಲಿಯೋದು ಶಾಲೆಯಲ್ಲಿ ಮಾತ್ರವಲ್ಲ, ಬೀದಿಯಲ್ಲಿ ಕೂಡ. ಯಾವುದು ಬೀದಿಯ ಭಾಷೆಯೋ ಅದನ್ನ ಕಲಿಯದೇ ಇದ್ದರೆ ಮಗುವಿನ ಜ್ಞಾನ ಬೆಳೆಯೋಲ್ಲ. ಆದರೆ ನನ್ನ ಮಗುವೊಂದು ತಮಿಳುನಾಡಿನಲ್ಲಿದ್ದರೆ ಅದು ತಮಿಳಿನಲ್ಲಿ ಕಲಿಯಬೇಕು. ನಾನು ಕನ್ನಡಿಗನಿರಬಹುದು ನಾನು ತಮಿಳುನಾಡಿನಲ್ಲಿ ಇದ್ದರೆ ತಮಿಳಿನಲ್ಲಿ ಕಲಿಯಬೇಕು. ತಮಿಳಿನವನೊಬ್ಬ ಕನ್ನಡನಾಡಿನಲ್ಲಿ ಇದ್ದರೆ ಕನ್ನಡದಲ್ಲಿ ಕಲಿಯಲಿ. ಯಾಕೆಂದರೆ ಇದು ಸಾರ್ವತ್ರಿಕವಾಗಿ ಒಬ್ಬ ಶಿಕ್ಷಣ ವೇದಿತನಾಗಿ ನಾನು ಹೇಳೋದು. ನಾನು ಸ್ಪೇನ್‌ನಲ್ಲಿದ್ದರೆ ಸ್ಪ್ಯಾನಿಷ್‌ನಲ್ಲಿ ಕಲಿಯಬೇಕು. ಏಕೆಂದರೆ ಇಡೀ ಬೀದಿಯಲ್ಲಿ ಸ್ಪ್ಯಾನಿಷ್ ಮಾತಾಡುತ್ತಾರೆ. ನನ್ನ ಮಗುಗೆ ಸ್ಪ್ಯಾನಿಷ್ ಬರದೇ ಇದ್ದರೆ?
ಇದನ್ನ ಹೆಂಗಸರು ಕಲಿತಿರುತ್ತಾರೆ, ಅವರು ಅಂಗಡಿಯಲ್ಲಿ ಸಾಮಾನು ತಗೋಬೇಕಾಗಿರೋತ್ತೆ. ಹಾಗಾಗಿ ಅವರು ಯಾವ ಭಾಷೆಯವರಾಗಿದ್ದರೂ ಸ್ವಲ್ಪ ಕನ್ನಡ ಕಲಿತಿರುತ್ತಾರೆ. ಆದರೆ ಈಗ ಬಹುರಾಷ್ಟ್ರೀಯ ಕಂಪನಿಗಳ ದೊಡ್ಡ ದೊಡ್ಡ ಮಾಲ್‌ಗಳು ಬರೋದಕ್ಕೆ ಶುರುವಾಗಿರೋದರಿಂದ ಆ ಅಗತ್ಯವೂ ಕೂಡ ಹೋಗಿ ಬಿಟ್ಟಿದೆ. ಈಗ ಹೆಂಗಸರು ಕೂಡ ಕನ್ನಡವನ್ನು ಕಲಿಯೋದಿಲ್ಲ. ಮಕ್ಕಳು ಕಲಿಯೋದಿಲ್ಲ. ಹಿಂದೆ ಹಾಗಲ್ಲ, ತರಕಾರಿಯವನ ಹತ್ತಿರ ವಾದ ಮಾಡೊದಕ್ಕೆ ಅವನು ೧೦ ರೂಪಾಯಿ ಅಂದರೆ ೫ ರೂಪಾಯಿಗೆ ಇಳಿಸೋದಕ್ಕೆ ಉತ್ತರ ಭಾರತದವರಿಗೂ ಕನ್ನಡ ಬರುತ್ತಿತ್ತು, ತಮಿಳರಿಗೂ ಕನ್ನಡ ಬರುತಿತ್ತು. ಈಗ ಕನ್ನಡದ ಅಗತ್ಯವೇ ಇಲ್ಲದಂತಹ ಸ್ಥಿತಿ ಬಂದಿದೆ. ಆದ್ದರಿಂದ ಇವತ್ತು ಹುಟ್ಟುವ ಮಕ್ಕಳಿಗೆಲ್ಲಾ ಎಷ್ಟು ಶ್ರೀಮಂತನ ಮಗುವಾಗಿರಲಿ, ಯಾವ ಭಾಷೆಯವನ ಮಗುವಾಗಿರಲಿ ಸಮಾನ ಶಿಕ್ಷಣ ಸಾಮಾನ್ಯ ಶಾಲೆಯಲ್ಲಿ ಸಿಗಬೇಕು. ಮನೆಮಾತಾಗಿ ಎಲ್ಲಾ ಭಾಷೆಗಳು ಉಳಿಯಬೇಕು.
ಕರ್ನಾಟಕದ ಒಂದು ಹೆಚ್ಚುಗಾರಿಕೆ ಏನು ಅಂಥ ನೀವು ನನ್ನ ಕೇಳಿದರೆ, ಬೇರೆ ಎಲ್ಲಾ ಭಾಷೆಗಳಿಗಿಂತಲೂ ಹೆಚ್ಚುಗಾರಿಕೆ ಏನಂದರೆ ನಾನು ಒಬ್ಬ ಬರಹಗಾರನಾಗಿ ನಿಮಗೆ ಹೇಳ್ತೀನಿ ಇವತ್ತು ಕನ್ನಡದ ಒಂದು ನಾವೆಲ್ ತಗೊಂಡರೆ, ಆ ನಾವೆಲ್‌ನನ್ನು ಒಬ್ಬ ಕೊಂಕಣಿ ಮಾತನಾಡುವವನು ಬರೆದಿದ್ದರೆ, ಈ ಯಶವಂತ ಚಿತ್ತಾಲರು ಅಂಥವರು ಬರೆದಿದ್ದರೆ ಅಲ್ಲಿರುವ ಪಾತ್ರಗಳೆಲ್ಲಾ ಮಾತನಾಡುತ್ತಿರುವುದು ಕೊಂಕಣಿಯಲ್ಲೇ. ಆದರೆ ಅದು ಬರೆದಿರುವುದು ಕನ್ನಡದಲ್ಲಿ. ಕೊಂಕಣಿ ಕನ್ನಡದಲ್ಲಿ ಸಾನ್ನಿಧ್ಯವನ್ನು ಪಡೆದಿದೆ. ಚೋಮನದುಡಿ ಬಹಳ ದೊಡ್ಡ ಕಾದಂಬರಿ ಕಾರಂತರದ್ದು. ಚೋಮನದುಡಿಯಲ್ಲಿ ಎಲ್ಲಾ ನಡೆಯುವ ಘಟನೆಗಳು, ಅಲ್ಲಿರುವ ಪಾತ್ರಗಳೆಲ್ಲಾ ಮಾತನಾಡುತ್ತಿರುವುದು ತುಳುವಿನಲ್ಲಿ, ಆದರೆ ಅದು ಇರೋದು ಕನ್ನಡದಲ್ಲಿ. ಮರಾಠಿ ಮಾತು ಕನ್ನಡದ ಒಳಗೆ ಬಂದಿದೆ. ತುಳುವಿನ ಮಾತು ಕನ್ನಡದ ಒಳಗೆ ಬಂದಿದೆ. ಕೊಂಕಣಿ ಮಾತು ಕನ್ನಡದ ಒಳಗೆ ಬಂದಿದೆ, ಅಂದರೆ ಕನ್ನಡ ಹಲವು ಭಾಷೆಗಳನ್ನ ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡಿದೆ. ಇದು ತಮಿಳಿನ ಬಗ್ಗೆ ಅಥವಾ ಮರಾಠಿ ಬಗ್ಗೆ ನಿಜವಲ್ಲ. ಇದು ಕನ್ನಡದ ಬಗ್ಗೆ ನಿಜ. ಆದ್ದರಿಂದ ಕನ್ನಡವನ್ನು ನಾನು ಮಿನಿ ಇಂಡಿಯಾ ಅಂತ ಕರೆಯುತ್ತೇನೆ. ನಿಜವಾಗಿಯೂ ನಾನು ಒಬ್ಬ ಭಾಷಾತಜ್ಞನಾಗಿ ಹೇಳ್ತಾ ಇದೀನಿ. ಒಂದು ಸರಿ ಈ ಚೋಮನ ದುಡಿ ತುಳುವಿಗೆ ಟ್ರಾನ್ಸ್‌ಲೇಟ್ ಆಯ್ತು. ಟ್ರಾನ್ಸ್‌ಲೇಟ್ ಆದಾಗ ನಾನು ಹೇಳಿದೆ, ಇದು ಮೂಲ ಭಾಷೆಗೆ ಹೋಯ್ತು ಅಂತ. ಮೂಲ ಇರುವುದು ತುಳುವಿನಲ್ಲಿ ಆದರೆ ಇರೋದು ಕನ್ನಡದಲ್ಲಿ. ಆದ್ದರಿಂದ ಈ ಕನ್ನಡಕ್ಕೆ ಇರುವ ವಿಶಿಷ್ಟತೆಯನ್ನ ಕನ್ನಡ ಚಳವಳಿಗಾರರು ಅರಿಯಬೇಕು. ಏಕೆಂದರೆ ಕನ್ನಡ ಒಳಗೊಳ್ಳುವ ಭಾಷೆ. ಇದನ್ನ ನನ್ನ ಸ್ನೇಹಿತರೊಬ್ಬರು ಬರೆಯುತ್ತಾರೆ. ಸಾವಿರ ವರ್ಷದ ಹಿಂದೆ ನಮ್ಮಲ್ಲಿ ಕವಿರಾಜಮಾರ್ಗ ಹುಟ್ಟಿಕೊಂಡಿತು.
ಸುಮಾರು ಒಂದು ಸಾವಿರ ವರ್ಷದ ಹಿಂದೆ ನಮ್ಮ ಭಾಷೆಯಲ್ಲಿ ಬರೆಯೋದೆ ಆದರೆ ಬರವಣಿಗೆ ಹೇಗಿರಬೇಕು, ಅದರ ಲಕ್ಷಣಗಳೇನು? ಎನ್ನುವ ಗ್ರಂಥ ಪ್ರಪಂಚದ ಯಾವ ಭಾಷೆಯಲ್ಲೂ ಇಲ್ಲ. ತಮಿಳಿನಲ್ಲೊಂದು ತೊಲಕಾಪಿಯಂ ಅಂತಿದೆ. ಆದರೆ ಆ ಗ್ರಂಥದ ಲಕ್ಷಣ ಬೇರೆ. ನಮ್ಮದು ಹೇಗೆ ಬರೆಯಬೇಕು ಅಂತಿದೆ, ಅದು ಕವಿರಾಜಮಾರ್ಗ; ಸಾವಿರ ವರ್ಷದ ಹಿಂದಿನದು. ನೀವು ಅದನ್ನು ತಗೊಂಡು ದೊಡ್ಡ ಸಭೆಯನ್ನು ಮಾಡಬೇಕು. ಕವಿರಾಜಮಾರ್ಗನಿಗೆ ಜೈ ಎನ್ನಬೇಕು. ಏಕೆಂದರೆ ಕನ್ನಡ ಕೊಟ್ಟವನು ಅವನು. ಆ ಸಾವಿರ ವರ್ಷ ಹಿಂದೆ ಹುಟ್ಟಿಕೊಂಡ ಕನ್ನಡದ ಬೆಳವಣಿಗೆ ಸತತವಾಗಿ ನಡೆದುಕೊಂಡು ಬಂದಿದೆ.
ಇವತ್ತು ಭಾರತೀಯ ಭಾಷೆಗಳಲ್ಲಿ ಅತ್ಯಂತ ಮೇಲಿರುವ ಭಾಷೆಗಳ ಪೈಕಿ ಕನ್ನಡವೂ ಒಂದು. ಹಿಂದೆ ಬಂಗಾಳಿಗೆ ಆ ಸ್ಥಾನವಿತ್ತು. ಈಗ ನಾವು ಹೆಚ್ಚು ಕಡಿಮೆ ಆ ಸ್ಥಾನದಲ್ಲಿದ್ದೇವೆ. ಏಕೆಂದರೆ ನಮ್ಮದು ಸ್ವೀಕಾರದ ಭಾಷೆ. ಆ ಸ್ವೀಕಾರದ ಭಾಷೆ ಅನ್ನೋದಕ್ಕೆ ಒಂದೇ ಒಂದು ಉದಾಹರಣೆ ಕೊಡುತ್ತೇನೆ. ತಮಿಳಿನಲ್ಲಿ ಕ್ಲಿಂಟನ್ ಅಂತ ಬರೆಯೋಕೆ ಆಗಲ್ಲ, ಗ್ಲಿಂಟನ್ ಆಗ್ತಾನೆ. ತಮಿಳಿನಲ್ಲಿ ಗಾಂಧಿ ಕಾಂತಿ ಆಗ್ತಾನೆ. ಕನ್ನಡದಲ್ಲಿ ಗಾಂಧಿ ಅಂತ ಬರೀಬಹುದು ಕ್ಲಿಂಟನ್ ಅಂತ ಬರಿಬಹುದು, ಯಾಕೆಂದರೆ ನಮಗೆ ಬೇಕಾಗಿಲ್ಲದ ಅಕ್ಷರಗಳನ್ನು ಮೊದಲೇ ತೆಗೆದುಕೊಂಡಿದ್ದೀವಿ. ಕನ್ನಡ ಭಾಷೆಯನ್ನ ಬರೆಯೋದಕ್ಕೆ ಅಗತ್ಯವಿಲ್ಲದ ಅಕ್ಷರಗಳೂ ಕೂಡ ನಮ್ಮ ೫೨ ಅಕ್ಷರದಲ್ಲಿ ಇದೆ.
ಆದ್ದರಿಂದ ಯಾವ ಭಾಷೆ, ಯಾವ ಶಬ್ದವನ್ನಾದರೂ ಕನ್ನಡದಲ್ಲಿ ಬರೆಯೋದಕ್ಕೆ ಸಾಧ್ಯ. ಇದು ಕನ್ನಡದ ಸ್ವೀಕಾರದ ಶಕ್ತಿಯನ್ನ ಹೆಚ್ಚಿಸಿದೆ. ನಾನು ಭಾಷೆಗಳಲ್ಲಿ ಎರಡು ತರಹ ಅಂತೀನಿ: ಒಂದು ಚಲಿಸುವ ಭಾಷೆ, ಇನ್ನೊಂದು ಚಲಿಸದ ಭಾಷೆ. ನಮ್ಮದು ಚಲಿಸುವ ಭಾಷೆಯಲ್ಲ. ಇದು ಕರ್ನಾಟಕಕ್ಕೆ ಸೀಮಿತವಾದದ್ದು. ಕೆಲವು ಭಾಷೆಗಳು ಊರಿಂದ ಊರಿಗೆ ಚಲಿಸುತ್ತಾ ಹೋಗುತ್ತವೆ. ಆದರೆ ಚಲಿಸದ ಭಾಷೆಯಾದರೂ ಕೂಡ ಕವಿರಾಜ ಮಾರ್ಗ ಕನ್ನಡದ ಕಾವೇರಿಯಿಂದ ಗೋದಾವರಿವರೆಗೂ ಹರಡಿ ಇಡೀ ಪ್ರಪಂಚದಲ್ಲೇ ಪ್ರತಿಫಲಿತವಾಗಿದೆ. ನಮ್ಮ ಗೋವಿನ ಹಾಡು ಬರೆದವರು ‘ಧರಣಿ ಮಂಡಲ ಮದ್ಯದೊಳಗೆ ಮೆರೆಯುತಿಹ ಕರ್ನಾಟಕದೊಳು ದೇಶವನು’ ಎಂದರು. ಅಂದರೆ ಪ್ರಪಂಚದ ನಡುವಿನಲಿ ಕರ್ನಾಟಕ ಇದೆ ಅಂತ. ಆ ರೀತಿಯ ಒಂದು ಭಾವನೆ ನಮ್ಮಲ್ಲಿದೆ.
ನಮ್ಮಲ್ಲಿ ನೊಬೆಲ್ ಪ್ರೈಜ್ ಬರುವಂತಹ ಯೋಗ್ಯತೆಯುಳ್ಳ ಬಹಳಷ್ಟು ರೈಟರ್ ಬಂದಿದ್ದಾರೆ. ಅವರಿಗೆ ಸಿಗದೆ ಇರೋದು ಮುಖ್ಯ ಅಂತ ನೀವು ತಿಳಿಯಬಾರದು. ಆ ಯೋಗ್ಯತೆ ಇರೋರು ಇದಾರಾ? ಇದ್ದಾರೆ. ಕನ್ನಡ ಬೆಳೆದಿದೆಯಾ ಬೆಳೆದಿದೆ. ಭಾರತದ ಬಹುಮುಖ್ಯ ಭಾಷೆಗಳಲ್ಲಿ ಒಂದಾ? ಹೌದು. ಹಾಗೆ ಉಳಿದಿದೆಯೋ ಇಲ್ಲೋ.. ಯಾಕೆಂದರೆ ನಮಗೆ ಕನ್ನಡ ಶಾಲೆಗಳಿಲ್ಲ. ನಾವೆಲ್ಲಾ ಕನ್ನಡ ಶಾಲೆಗಳಲ್ಲಿ ಓದಿ ಬಂದವರು, ನಾನು ಕನ್ನಡ ಮಾದ್ಯಮದಲ್ಲಿ ಓದಿದವನು. ಆಮೇಲೆ ಇಂಗ್ಲೆಂಡ್‌ನಲ್ಲಿ ಹೋಗಿ ಓದಿ ಬಂದವನು. ನಾನು ಇಂಗ್ಲೆಂಡ್‌ನಲ್ಲಿ ಇಂಗ್ಲಿಷ್ ಫ್ರೊಫೆಸರ್ ಆಗಬಹುದಾದಷ್ಟು ವಿದ್ಯೆಯನ್ನು ಪಡೆದವನು. ಇದು ಒಂದು ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇದು ಸಾಧ್ಯವಿತ್ತು. ಮೂರ್ತಿರಾಯರು, ಬಿ.ಎಂ ಶ್ರೀಕಂಠಯ್ಯನವರಿದ್ದರು, ಮಾಸ್ತಿ ಅವರಿದ್ದರು, ಎಲ್ಲರೂ ಇದ್ದರು. ಇವತ್ತು ಅದು ಸಾಧ್ಯವೇ ಆಗದೆ ಇರೋ ಹಾಗೆ ಆಗ್ತಿದೆ. ಈ ತಪ್ಪಿಗೆ ಕಾರಣ ಬೇರೆ ಯಾರು ಅಲ್ಲ, ನಮ್ಮ ಅಭಿಮಾನ ಶೂನ್ಯತೆ. ನಮ್ಮ ಮಕ್ಕಳು ಕನ್ನಡವನ್ನು ಕನ್ನಡದಲ್ಲಿ ಬರೆಯಬೇಕು.
ನಾನು ಇಂಗ್ಲಿಷ್ ಕಲಿಯಿರಿ ಕನ್ನಡದಲ್ಲಿ ಕಲಿಸಿರಿ ಅಂದಿದ್ದೆ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಿರಿ ಅಂದಿದ್ದೆ. ಕನ್ನಡದಲ್ಲಿ ಕಲಿತಾಗ ಜ್ಞಾನ ಕೂಡ ಚೆನ್ನಾಗಿ ಬೆಳೆಯುತ್ತೆ. ಇನ್ನೊಂದು ಬಹಳ ಮುಖ್ಯವಾದ ವಿಷಯವನ್ನು ಹೇಳಿಬಿಡ್ತೀನಿ. ಆಮೇಲೆ ನನ್ನ ಮಾತು ಸಾಕು. ಇಲ್ಲಿ ಮನುಬಳಿಗಾರ್ ಇದ್ದಾರೆ. ಅವರಲ್ಲೂ ಕೂಡ ನಾನು ಸಂಕಟವನ್ನು ತೊಡಿಕೊಂಡಿದ್ದೇನೆ. ೮೦ ಎಕರೆ ಭೂಮಿಯನ್ನು ಕನ್ನಡ ವಿಶ್ವವಿದ್ಯಾಲಯದಿಂದ ಅವರು ತೆಗೆದುಕೊಂಡು ಬಿಟ್ಟಾಗ ಒಂದು ಚಳವಳಿ ಆಯ್ತು, ಆ ಚಳವಳಿಗೆ ನಿಜವಾಗಲು ಬೆನ್ನೆಲುಬಾಗಿ ನಿಂತವರು ಕರ್ನಾಟಕ ರಕ್ಷಣಾ ವೇದಿಕೆಯವರು. ಅದರ ಜೊತೆಯಲ್ಲೇ ನಾನು ಹೇಳಬೇಕು; ನಮ್ಮ ಮುಖ್ಯಮಂತ್ರಿಗಳು ಬಹಳ ದೊಡ್ಡ ಮನಸ್ಸು ಮಾಡಿ ಇದಕ್ಕೆ ಸ್ಪಂದಿಸಿ ೮೦ ಎಕರೆಯನ್ನು ಹಿಂದಕ್ಕೆ ಕೊಟ್ಟರು. ಅವರಿಗೆ ನಮ್ಮ ವಂದನೆಯನ್ನು ಹೇಳಬೇಕು. ಇದು ನಾನು ಯಾಕೆ ಹೇಳ್ತಿದೀನಿ, ಅಂದರೆ ಕನ್ನಡಕ್ಕೆ ಒಂದು ದನಿ ಇದೆ. ಅದನ್ನು ನಾವು ಉಳಿಸಿಕೊಳ್ಳಬೇಕು.
ನಾನು ಒಂದು ಮಾತು ಹೇಳಿ ಮುಗಿಸುತ್ತೇನೆ. ಕರ್ನಾಟಕದಲ್ಲಿ ಅಪಾರವಾದ ಆಸ್ತಿ ಇದೆ. ಅಂದರೆ ಅದನ್ನ ನಮ್ಮ ಗಣಿಗಾರಿಕೆ ಮಾಡುವ ನಮ್ಮ ಮಂತ್ರಿಗಳು ಸತತವಾಗಿ ಚೀಪಾಗಿ ಮಾರಿ, ಮೋಸ ಮಾಡಿ ಕನ್ನಡದ ಸಂಪತ್ತನ್ನೆಲ್ಲಾ ಲೂಟಿ ಮಾಡಿದ್ದಾರೆ. ಕನ್ನಡದ ಇಡೀ ಸಂಘಟನೆ ಇದಕ್ಕೆ ವಿರೋಧವಾಗಬೇಕು.
ಯಾಕೆ ಈ ಕರೆಯನ್ನು ನಾನು ಕೋಡುತ್ತಿದ್ದೇನೆ ಅಂದರೆ, ಲ್ಯಾಟಿನ್ ಅಮೆರಿಕದಲ್ಲಿ ನೀವು ಕೇಳಿರಬೇಕು ಕೆನಡಾ ಮತ್ತು ಅಮೆರಿಕದವರು ಗಣಿಗಾರಿಕೆ ಸಂಸ್ಥೆಗಳು ಪೆರುವಿನಲ್ಲಿ, ಚಿಲಿಯಲ್ಲಿ ಅವರ ಪ್ರತಿಯೊಂದು ಊರಿನಲ್ಲಿ ಎಲ್ಲಿ ಬಂಗಾರ ಸಿಗತ್ತೋ, ಪೆಟ್ರೋಲ್ ಸಿಗತ್ತೋ ಎಲ್ಲಿ ಯಾವ ಅದಿರು ಸಿಗತ್ತೋ ಅದನ್ನ ಅಗೆದು ಬಗೆದು ಅದನ್ನ ಚೀಪಾಗಿ ಮಾರಿ ಆ ದೇಶದಲ್ಲಿ ಜನ ವೇಶ್ಯಾವೃತ್ತಿಯಿಂದಲೇ ಬದುಕುವ ಹಾಗೆ ಮಾಡಿ ಅವರನ್ನ ದರಿದ್ರರನ್ನಾಗಿ ಮಾಡಿದ್ದಾರೆ. ಇವತ್ತು ಲ್ಯಾಟಿನ್ ಅಮೆರಿಕ ಮತ್ತೆ ತಲೆಎತ್ತಿ ನಿಂತು ಜಗಳವಾಡಕ್ಕೆ ಸಿದ್ಧವಾಗಿದೆ. ಲ್ಯಾಟಿನ್ ಅಮೆರಿಕದ ಇಡೀ ಸಂಸ್ಕೃತಿಯನ್ನ ಅಮೆರಿಕ ಮತ್ತು ಕೆನಡಾ ನಾಶ ಮಾಡಿತು. ಕರ್ನಾಟಕದ ಸಂಸ್ಕೃತಿಯನ್ನ ಇವತ್ತು ಗಣಿಗಾರಿಕೆಯವರು ನಾಶ ಮಾಡುತ್ತಿದ್ದಾರೆ. ನಮ್ಮ ಸಂಪತ್ತನ್ನ ನಾಶ ಮಾಡುತ್ತಿದ್ದಾರೆ. ಇನ್ನೊಂದು ೧೦ ವರ್ಷದಲ್ಲಿ ಏನು ಉಳಿದಿರೋಲ್ಲ.
ಇದನ್ನು ನಿಲ್ಲಿಸಬೇಕು. ನಮ್ಮ ಮೊಮ್ಮಕ್ಕಳಿಗೆ ಕನ್ನಡನೂ ಉಳಿಬೇಕು, ಗಣಿ ಅದಿರೂ ಸಹ ಉಳಿಬೇಕು ಅನ್ನೋದಾದರೆ ಗಣಿಗಾರಿಕೆಯನ್ನು ನಿಷೇಧ ಮಾಡಬೇಕು. ಒಂದು, ಗಣಿಗಾರಿಕೆ ನಡೆಸುವುದು ಅಗತ್ಯವಾದರೆ ಅದನ್ನ ಸರ್ಕಾರವೇ ನಡೆಸಬೇಕು. ಎರಡನೇದು ಅನಿವಾರ‍್ಯವಾಗಿ ಗಣಿಗಾರಿಕೆ ಮಾಡಬೇಕಾಗಿ ಬಂದರೆ ನಾವೇ ಉಕ್ಕನ್ನು ತಯಾರಿಸುವ ಸಾಧ್ಯತೆಯನ್ನು ನೋಡಿಕೊಳ್ಳಬೇಕು. ಅಥವಾ ನಮಗೆ ಯಾವುದೋ ಒಂದು ಅದಿರು ಬೇಕಾಗಿರುತ್ತೆ, ಅದು ನಮ್ಮಲ್ಲಿ ಇಲ್ಲದಿದ್ದರೆ ನಮ್ಮ ಅದಿರನು ಕೊಟ್ಟು ಇನ್ನೊಂದು ಅದಿರನ್ನು ತೆಗೆದುಕೊಳ್ಳಬೇಕು. ಒಂದು ರಾಜ್ಯಕ್ಕೆ ನೈತಿಕವಾದ ಸ್ವಾರ್ಥವು ಇರಬೇಕು. ಇದು ನೈತಿಕವಾದ ಸ್ವಾರ್ಥದಿಂದ ನಾನು ಹೇಳುತ್ತಿದ್ದೇನೆ. ನಮ್ಮ ನಾಡು ಗಟ್ಟಿಯಾಗಿ ಉಳಿಯಬೇಕು ಅನ್ನುವ ಆಸೆಯಿಂದ ಹೇಳುತ್ತಿದ್ದೇನೆ. ಆದ್ದರಿಂದ ಇವತ್ತು ನಡೆಯುತ್ತಿರೋ ಗಣಿ ಲೂಟಿಯಿಂದ ನಮ್ಮ ಡೆಮಾಕ್ರಸಿ ಕೂಡ ಅರ್ಥಹೀನವಾಗಿ ಕೆಟ್ಟುಹೋಗಿದೆ. ನಮ್ಮ ಡೆಮಾಕ್ರಸಿಯನ್ನ ಮತ್ತೆ ನಾವು ಸ್ಕ್ಯಾನರ್ ಕೆಳಗೆ ಇಟ್ಟು ನೋಡಬೇಕಾಗುತ್ತೆ.
ನಕ್ಸಲೈಟರು ಅಲ್ಲಿ ವಿಜೃಂಭಿಸುತ್ತಿದ್ದಾರೆ ಯಾಕೆ ? ಅಲ್ಲೂ ಕೂಡ ಗಣಿಗಾರಿಕೆ, ಬಾಕ್ಸೈಟ್ ಅದಿರಿದೆ. ಅದು ಸಿಗೋದು ಗುಡ್ಡದಲ್ಲಿ ಹಾಗಾಗಿ ಗುಡ್ಡಗಳಲ್ಲಿ ಹೋಗಿ ಅಗೆಯಬೇಕು. ಆದ್ದರಿಂದ ಅಲ್ಲಿರುವ ಟ್ರೈಬಲ್ಸ್‌ನ ಅವರು ಓಡಿಸಬೇಕು. ಅವರು ಹೋಗಲ್ಲ ಅಂತಾರೆ, ಅಲ್ಲಿ ಹೋಗಿ ಇವರು ಕೂತಿದ್ದಾರೆ. ಯಾಕೆಂದರೆ ಅವರಿಗೆ ಆ ಬೆಟ್ಟಗಳು ದೇವತೆಗಳು. ನಾವು ಎಲ್ಲಾ ದೇವರನ್ನು ನಾಶಮಾಡುತ್ತಿದ್ದೇವೆ.
ಮುಸ್ಲಿಂರ ಮಸೀದಿಯನ್ನು ನಾಶ ಮಾಡಿದ್ರು.. ಸಿಕ್ಕರ ದೇವಸ್ಥಾನದ ಮೇಲೆ ದಾಳಿ ಆಯಿತು. ಈಗ ಆದಿವಾಸಿಗಳ ದೇವರನ್ನು ನಾಶ ಮಾಡಕ್ಕೆ ಹೊರಟಿದ್ದಾರೆ. ಆ ಹಕ್ಕು ನಮಗಿಲ್ಲ, ಅವರ ಜೀವನ ಕ್ರಮವನ್ನು ಬದಲಿಸುವ ಹಕ್ಕು ನಮಗಿಲ್ಲ. ಆದ್ದರಿಂದ ಪ್ರಪಂಚದಲ್ಲೆಲ್ಲಾ ಒಂದು ಎಚ್ಚರ ಇದೆ, ಅದು ಗಣಿಗಾರಿಕೆ ನಡೆಯುವುದು ಅನಿವಾರ‍್ಯವಾದರೆ ಅದು ಹೇಗೆ ನಡೆಯಬೇಕು, ಎಷ್ಟು ಶುದ್ಧವಾಗಿ ನಡೆಯಬೇಕು, ಯಾವ ಹದದಲ್ಲಿ ನಡೆಯಬೇಕು, ಯಾವ ಕಾರಣಕ್ಕಾಗಿ ನಡೆಯಬೇಕು. ಅದು ಎಷ್ಟು ಕಾಲ ಉಳಿದಿರಬೇಕು. ಇದೆಲ್ಲವನ್ನೂ ನಾವು ಯೋಚಿಸಬೇಕು. ಸಂಪತ್ತು ನಮ್ಮ ಮೊಮ್ಮಕ್ಕಳ ಕಾಲಕ್ಕೂ ಉಳಿದಿರೋ ಹಾಗೆ ನೋಡಬೇಕು.
ಅಮೆರಿದಲ್ಲಿ ಸಿಕ್ಕಾಪಟ್ಟೆ ಪೆಟ್ರೋಲ್ ಇದೆ. ಅವರು ಅದನ್ನು ತೆಗೆದು ಮಾರುತ್ತಾರೇನು? ಯಾಕೆಂದರೆ ಮುಂದೆ ಆಪತ್ತು ಕಾಲ ಬಂದರೆ ಅಂತ ಪೆಟ್ರೋಲ್ ಅನ್ನು ಉಳಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಮತ್ತೆ ಆರೀತಿಯ ನೈತಿಕವಾದ ಸ್ವಾರ್ಥದ ಚಿಂತೆ ಬೇಕು. ಅದನ್ನ ಕನ್ನಡಿಗರು ಒತ್ತಾಯ ಮಾಡಿ ನಮ್ಮ ಸರ್ಕಾರದ ಮೇಲೆ ಹೇರಬೇಕು. ಕನ್ನಡ ಉಳಿಯುವುದೇ ಆದರೆ, ಕನ್ನಡದ ಅದಿರು ಉಳಿದಿರಬೇಕು, ಕನ್ನಡದ ಮಾನವು ಉಳಿದಿರಬೇಕು.
ಕೊನೆ ಮಾತು; ನಂದೊಂದು ಆಸೆ ಇದೆ, ಒಂದು ಕಾಲದಲ್ಲಿ ಕರ್ನಾಟಕದವರು ಗವರ್ನರ್‌ಗಳು ಆಗುತ್ತಿದ್ದರು, ಐಎಎಸ್ ಆಫೀಸರ್‌ಗಳಾಗುತ್ತಿದ್ದರು, ಹೀಗೆಲ್ಲಾ ಆಗೊದ್ರಿಂದ ಅಲ್ಲಿ ನಮ್ಮ ದೆಹಲಿಯಲ್ಲಿ ನಮ್ಮದೊಂದು ಶಕ್ತಿ ಇರುತ್ತೆ, ಬಲ ಇರುತ್ತೆ. ಈಗ ಬಿಹಾರ್‌ನವರಿಗೆ ಬಲ ಇದೆ, ನಮ್ಮ ಕೇರಳದವರಿಗೆ ಬಲ ಇದೆ, ತಮಿಳವರಿಗೆ ಬಲ ಇದೆ. ಕನ್ನಡದವರಿಗೆ ಬಲವೇ ಇಲ್ಲ. ನಮ್ಮ ಮಾತನ್ನು ಆಡುವವರು ಬಹಳ ಕಡಿಮೆ ಆಗಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚುವ ಹಾಗೆ ಮಾಡಬೇಕು. ಯಾಕೆಂದರೆ ಭಾರತ ಬಹು ಕೇಂದ್ರೀತ ರಾಷ್ಟ್ರ ಅಂದರೆ ಫೆಡರಲ್ ವ್ಯವಸ್ಥೆ ಇದೆ, ಈ ರಾಜ್ಯಕ್ಕೂ ಒಂದು ಬೆಲೆ ಬರಬೇಕು ಅಂದರೆ ಫೆಡರಲ್ ವ್ಯವಸ್ಥೆಯಲ್ಲಿ ನಮ್ಮವರು ದೆಹಲಿಯಲ್ಲಿ ಕೂಡ ಇರಬೇಕು. ಅದಕ್ಕೋಸ್ಕರವಾಗಿ ಈ ಸಂಘಟನೆ ಹೋರಾಡಲಿ, ಮತ್ತು ಬೇರೆ ಭಾಷೆಯ ಜನರನ್ನು ಕನ್ನಡಿಗರನ್ನಾಗಿ ಮಾಡುವ ಕೆಲಸ ಮಾಡಲಿ.
ಒಂದೇ ಒಂದು ಡೆಫನೇಷನ್ ಕನ್ನಡಿಗ ಅಂದರೆ ಕನ್ನಡ ಬಲ್ಲವನು ಕನ್ನಡಿಗ. ತಮಿಳಿನವನಿಗೆ ಕನ್ನಡ ಬಂದರೆ, ಅವನು ಕನ್ನಡ ಮಾತನಾಡಿದರೆ ಅವನು ಕನ್ನಡಿಗ. ಯಾವ ಭಾಷೆಯವನೇ ಆಗಲಿ ಕನ್ನಡ ಭಾಷೆ ಕಲಿತಕೂಡಲೇ, ಬಳಸೋದಕ್ಕೆ ಶುರು ಮಾಡಿದ್ರೆ ಅವನು ಕನ್ನಡಿಗ. ಆವಾಗ ಅನಗತ್ಯವಾದ ಹಿಂಸೆ ಯಾವುದು ಇರೋದಿಲ್ಲ. ಆದರೆ, ಕನ್ನಡ ಮಾತ್ರ ಕಡ್ಡಾಯ. ಅದು ನಮ್ಮ ಘೋಷಣೆ ಆಗಬೇಕು.
ಈ ಪತ್ರಿಕೆ ಬಹಳ ಚೆನ್ನಾಗಿ ಬಂದಿದೆ. ನನ್ನದೇ ಎರಡು ಲೇಖನ ಬಳಸಿಕೊಂಡಿದ್ದಾರೆ. ನಾರಾಯಣಗೌಡರು ಈ ಪತ್ರಿಕೆಯನ್ನು ತುಂಬಾ ಚೆನ್ನಾಗಿ ಸಿದ್ಧಪಡಿಸಿದ್ದಾರೆ. ಅದರ ಸಂಪಾದಕ ವರ್ಗದವರು ಬಹಳ ಚೆನ್ನಾಗಿ ದುಡಿದಿದ್ದಾರೆ. ಇದು ಪ್ರತಿ ತಿಂಗಳು ಬಂದು ಕನ್ನಡದವರನ್ನು ಬರೀ ಹೋರಾಟಕ್ಕೆ ಮಾತ್ರ ಎಚ್ಚರಿಸದೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಕೂಡ ಮೂಡಿಸುವಂತಹ ಕೆಲಸವನ್ನು ಮಾಡಲಿ ಅಂತ ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಜೈ ಕರ್ನಾಟಕ.

ಡಾ.ಯು.ಆರ್.ಅನಂತಮೂರ್ತಿ

No comments:

Post a Comment

ಹಿಂದಿನ ಬರೆಹಗಳು