Friday, June 4, 2010

ರಂಗದಲ್ಲಿ ಮದುಮಗಳು
ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಕನ್ನಡ ಸಾಹಿತ್ಯದ ಮೊದಲ ಮಟ್ಟದ ಕಾದಂಬರಿ. ಈ ಕಾದಂಬರಿಯಿಂದ ಪ್ರೇರಣೆ ಪಡೆದು ಎಷ್ಟೋ ಜನಕ್ಕೆ ಕತೆ, ಕಾದಂಬರಿ ಬರೆಯುವುದನ್ನು ಕಲಿಸಿರುವ ಹಿನ್ನೆಲೆಯಲ್ಲಿ ಅದೊಂದು ’ಕರತಲ ರಂಗಭೂಮಿ’. (ಇದು ಕುವೆಂಪು ಅವರದೇ ಮಾತು) ಇದನ್ನು ತೀಕ್ಷ್ಣವಾಗಿ ವಿಮರ್ಶಿಸಿ ಕುವೆಂಪು ಅಂಥಾ ಏನು ದೊಡ್ಡ ಕಾದಂಬರಿಕಾರರಲ್ಲ ಎಂದು ಹೇಳಲಿಕ್ಕೆ ಹತ್ತಾರು ಜನ ಕನ್ನಡ ನವ್ಯ ವಿಮರ್ಶಕರು ಕಚ್ಚೆಕಟ್ಟಿ ನಿಂತದ್ದೂ ಇದೆ. ಕರ್ನಾಟಕದಿಂದ-ಅಮೆರಿಕಾದ ವಿಶ್ವವಿದ್ಯಾಲಯದವರೆಗೆ. ಆದಾಗ್ಯೂ ಆ ಕೃತಿಯ ಸತ್ವ ಉಂಟುಮಾಡಿದ ಒಳ್ಳೆಯ, ಸೃಜನಶೀಲ ಪರಿಣಾಮಗಳನ್ನು ಯಾರೂ ತಪ್ಪಿಸಿಕೊಳ್ಳಲೂ ಆಗಿಲ್ಲ. ಅಲ್ಲಗಳೆಯಲೂ ಆಗಿಲ್ಲ. ಅದೊಂದು ದ್ವೇಷಿಸುವವರೂ ಕದ್ದು ಮುಚ್ಚಿ ಓದುವಂಥ ಕಾದಂಬರಿ. ಕನ್ನಡದಲ್ಲಿ ಇಂದಿಗೂ ನಿರಂತರವಾಗಿ ಖರ್ಚಾಗುತ್ತಿರುವ ಕಾದಂಬರಿಗಳಲ್ಲಿ ಅದು ಅಗ್ರ ಸ್ಥಾನದಲ್ಲೇ ಇದೆ.
ಇಂಥ ಸಾಹಿತ್ಯಕ ಮಹತ್ವದ ಕಾದಂಬರಿಯನ್ನು ರಂಗಕೃತಿಯನ್ನಾಗಿ ರಂಗಾಯಣ ಮೈಸೂರು ಅಭಿನಯಿಸಿ ಕನ್ನಡ ರಂಗಭೂಮಿಯ ಹೊಸ ಚೈತನ್ಯಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ರಂಗಪ್ರಯೋಗಶೀಲತೆ ನಿರಂತರವಾದುದು. ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರು, ನೀನಾಸಂನಲ್ಲಿ ಕಲಿತವರು, ಶಿವಸಂಚಾರ, ಬೆಂಗಳೂರಿನ ವಿವಿಧ ಹವ್ಯಾಸಿ ತಂಡಗಳು, ರಂಗಾಯಣ ಮುಂತಾದ ಅನೇಕ ಸಂಸ್ಥೆ, ಸಂಘಟನೆಗಳು ಇಂದು ಕನ್ನಡ ರಂಗಭೂಮಿಯನ್ನು ಜೀವಂತವಾಗಿಟ್ಟಿವೆ. ಆಗೊಮ್ಮೆ ಹೀಗೊಮ್ಮೆ ತೂಕಡಿಸಿದಂತಿದ್ದರು, ಹೊಸ ಪ್ರಯೋಗಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅದಕ್ಕೆ ಸದ್ಯದ ಸಾಕ್ಷಿ ಸಿ. ಬಸವಲಿಂಗಯ್ಯನವರು ನಿರ್ದೇಶಿಸಿರುವ ’ಮಲೆಗಳಲ್ಲಿ ಮದುಮಗಳು’ ನಾಟಕ.
ಬಸವಲಿಂಗಯ್ಯನವರು ಬೆಲ್ಚಿ ಬೀದಿ ನಾಟಕದ ಕಲಾವಿದರಾಗಿ ರಂಗಪ್ರವೇಶ ಮಾಡಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತು, ನಂತರ ಫೆಲೋ ಆಗಿ ಉತ್ತರ ಕರ್ನಾಟಕದ ಪ್ರದರ್ಶನ ಕಲೆಗಳ ಬಗ್ಗೆ ಹೆಚ್ಚಿನ ವ್ಯಾಸಂಗ ಮಾಡಿದವರು. ರಾಜ್ಯ ಮತ್ತು ರಾಷ್ಟ್ರದ ಅನೇಕ ಕಡೆಗಳಲ್ಲಿ ರಂಗಶಿಬಿರಗಳಲ್ಲಿ ನಾಟಕ ಕಲಿಸಿದವರು. ರಂಗಾಯಣದ ಅಧ್ಯಾಪಕರಾಗಿ ಬಿ.ವಿ. ಕಾರಂತರಿಗೆ ಹೆಗಲುಕೊಟ್ಟು ಬೆಳೆಸಿದವರು. ಮುಂದೆ ರಂಗಾಯಣದ ನಿರ್ದೇಶಕರಾಗಿ ಎರಡು ಬಾರಿ ಇದ್ದು ಕನ್ನಡಕ್ಕೆ ಮಹತ್ವದ ನಾಟಕಗಳನ್ನು ಪ್ರಯೋಗಿಸಿದವರು. ಬಸವಲಿಂಗಯ್ಯ ನಿರಂತರ ರಂಗ ಹುಡುಕಾಟದ ಜಂಗಮ. ಮಾದಾರಿ, ಕುಸುಮಬಾಲೆ, ಗಾಂಧಿ v/s ಗಾಂಧಿ, ಜನಪದ ಮಹಾಭಾರತ, ಮನುಷ್ಯ ಜಾತಿ ತಾನೊಂದೆ ವಲಂ ಮುಂತಾಗಿ ಎಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ಪ್ರಯೋಗಿಸಿದ್ದಾರೆ. ಕುವೆಂಪು ಶೂದ್ರ ತಪಸ್ವಿ, ಕಾರ್ನಾಡರ ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳು ಸಾಹಿತ್ಯ ಸೀಮೆ ಮೀರಿ ಬೆಳೆದ ಕೃತಿಗಳಾಗಿವೆ. ಬಸವಲಿಂಗಯ್ಯ ಒಂದು ಪಠ್ಯವನ್ನು ನೋಡುವ ಬಗೆಯೇ ಬೇರೆ. ಕನ್ನಡದ ಮತ್ತು ಈ ದೇಶದ ದೊಡ್ಡ ನಿರ್ದೇಶಕರಲ್ಲಿ, ಚಿಂತಕರಲ್ಲಿ ಅವರೂ ಒಬ್ಬರು. ರಾಜ್ಯದ ಸಾಂಸ್ಕೃತಿಕ ರಾಯಭಾರಿಯಾಗಿಯೂ ಅನೇಕ ಪ್ರಾತಿನಿಧ್ಯ ವಹಿಸಿದ್ದಾರೆ. ಅನೇಕ ಯೋಜನೆಗಳಲ್ಲಿ ಬೀದಿ ನಾಟಕ, ಹಾದುಗಳ ಮೂಲಕ ಜನಾಧಿಕಾರ, ನೀರು ನೈರ್ಮಲ್ಯದಂಥ ಯೋಜನೆಗಳನ್ನು ಜನರ ಬಳಿಗೊಯ್ಯುವ ಕೆಲಸ ಮಾಡಿದ್ದಾರೆ. ಅವರ ರಂಗಪಯಣಕ್ಕೆ ಮದುಮಗಳು ಒಂದು ಪಕ್ವ ಪ್ರಯೋಗ.
ಕಾದಂಬರಿ ಗಾಥಿಕ್ ಶೈಲಿಯದು. ಅಂದರೆ ಮಹಾಕಾದಂಬರಿ ರಷ್ಯನ್ ಕಾದಂಬರಿಗಳಂತೆ. ಇದನ್ನು ಒಂಬತ್ತು ಗಂಟೆಗೆ ಭಟ್ಟಿ ಇಳಿಸುವುದು ನಿಜಕ್ಕೂ ಕಷ್ಟಕರ. ಆದರೆ ಡಾ. ಕೆ.ವೈ. ನಾರಾಯಣಸ್ವಾಮಿ ಮತ್ತು ಟೀಮು ಅದನ್ನು ಅಂದಗೆಡದಂತೆ, ಕುವೆಂಪು ಆಶಯಗಳಾವೂ ಮುಕ್ಕಾಗದಂತೆ ರಂಗರೂಪಕಕ್ಕೆ ಅಳವಡಿಸಿದ್ದಾರೆ. ನಾರಾಯಣಸ್ವಾಮಿ ಪಾದರಸದಂಥ ಕ್ರಿಯಾಶೀಲ ವ್ಯಕ್ತಿ. ಅವರಿಂದ ಕನ್ನಡದ ಅನೇಕ ಮಹತ್ವದ ಕೃತಿಗಳು ಹೀಗೆ ರಂಗರೂಪವಾಗಿ ಮೈದಳೆದಿವೆ. ಈಗಾಗಲೆ ಪಂಪಭಾರತದ ಮೂಲಕ ಭರವಸೆ ಮೂಡಿಸಿರುವ ನಾರಾಯಣಸ್ವಾಮಿ ಬ್ರೆಕ್ಟ್ ನಾಟಕ ಮಾಡುವಾಗಿನ ಸವಾಲುಗಳಂತೆಯೇ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಆ ಮೂಲಕ ಕನ್ನಡ ರಂಗಭೂಮಿಗೆ ಪ್ರಯೋಗಶೀಲತೆಯ ಸತ್ವವನ್ನೂ ತಂದುಕೊಟ್ಟಿದ್ದಾರೆ.
ಒಂದು ಕಾಲದಲ್ಲಿ ರಂಗಕ್ಕೆ ಗೆಜ್ಜೆಕಟ್ಟಿದ್ದ ಹಂಸಲೇಖ ಪ್ರೇಮಲೋಕದಿಂದ ಮಾಯಾಲೋಕದಲ್ಲಿ ಮುಳುಗಿದ್ದರು. ಆದರೆ ಅವರ ರಂಗಸ್ಮೃತಿಗಳು ಈ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ಪುನಃ ಹೊಸ ಟ್ಯೂನ್, ಸಾಂದರ್ಭಿಕ ಹಾಡುಗಳ ಬಳಕೆ ಪ್ರಯೋಗಕ್ಕೆ ಹೊಸತನವನ್ನು ತಂದುಕೊಟ್ಟಿದೆ. ರಂಗಾಯಣದಲ್ಲೇ ಪಳಗಿದ ಕೈ ಶ್ರೀನಿವಾಸ್ ಕೂಡ ಸಂಗೀತ ನಿರ್ವಹಣೆಯಲ್ಲಿ ಮನದಲ್ಲಿ ಉಳಿಯುತ್ತಾರೆ. ದ್ವಾರಕಾನಾಥ್ ಅವರು ಹೊಸದಾಗಿ ರಂಗಾಯಣದಲ್ಲೇ ಮಲೆನಾಡನ್ನು ಸೃಷ್ಟಿಸಿದ್ದಾರೆ. ರಂಗಾಯಣ ಕಲಾವಿದರ ಜತೆ ಅನೇಕ ಹೊಸ ಕಲಾವಿದರು ಮೂರು ಭಾಗಗಳಲ್ಲಿ, ಮೂರು ಸ್ಥಳಗಳಲ್ಲಿ ಹಿಡಿಯಾಗಿ ಮಲೆಗಳಲ್ಲಿ ಮದುಮಗಳನ್ನು ಕಟ್ಟಿಕೊಡುವುದು ತುಂಬಾ ವಿಶೇಷ ಎನಿಸುತ್ತದೆ.
ಮಹಾಭಾರತವನ್ನು ಪೀಟರ್‌ಬ್ರಾಕ್ ಈಗಾಗಲೇ ಹೀಗೆ ಮೆಗಾ ಪ್ರೊಡಕ್ಷನ್ ಮಾಡಿರುವ ಉದಾಹರಣೆ ಇದ್ದಾಗ್ಯೂ, ರಾತ್ರಿಯಿಡೀ ಹಳ್ಳಿಗಳಲ್ಲಿ ನಾಟಕಗಳು ಯಕ್ಷಗಾನಗಳು ನಡೆದರೂ ಅವಕ್ಕೂ ಈ ಪ್ರಯೋಗಕ್ಕೂ ವ್ಯತ್ಯಾಸವಿದೆ. ಸಮಯವೊಂದೆ ಮುಖ್ಯವಲ್ಲ. ಕಾದಂಬರಿಕಾರನ ಬದುಕಿನ ದರ್ಶನ ಇಲ್ಲಿ ಮುಖ್ಯ. ಕಾದಂಬರಿ ಓದದಿರುವವರಿಗಂತೂ ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಓದಿದವರಿಗೆ ಸ್ಮರಿಸುವ ಮತ್ತು ವಿವರಗಳನ್ನು ರೂಪಕಗೊಳಿಸುವ ಹೊಸ ಸಾಧ್ಯತೆಗಳು ನಾಟಕಕ್ಕಿವೆ. ಇಂಥ ಪ್ರಯೋಗವನ್ನು ಆಗು ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಹಸವನ್ನು ಮೆಚ್ಚಲೇ ಬೇಕು.
ಉತ್ತಮ ಪ್ರಯೋಗಶೀಲತೆ ನಡೆದಾಗ ಸಣ್ಣ ಮಾತುಗಳಿಗೆ ಬೆಲೆ ಕೊಡಬೇಕಾಗಿಲ್ಲ. ಕೆಲವರು ಅಪಸ್ವರವೆತ್ತಿದ್ದಾರೆ. ಮಾನಸಿಕ ಕೊಳಕುತನಕ್ಕೆ ಅವು ಸಾಕ್ಷಿ. ಕುವೆಂಪು-ಬಸವಲಿಂಗಯ್ಯ-ನಾರಾಯಣಸ್ವಾಮಿ-ಹಂಸಲೇಖ ಇವೆಲ್ಲ ಕೇವಲ ಹೆಸರುಗಳಲ್ಲ; ವ್ಯಕ್ತಿಗಳಷ್ಟೆ ಅಲ್ಲ ಬೃಹತ್ ಸಂಸ್ಥೆಗಳು, ಪ್ರತಿಭೆಯ ಶಿಖರಗಳು. ಇವು ಜೋಡಿಯಾಗಿರುವುದು ರಂಗಾಯಣಕ್ಕೆ ಹೊಸ ನವಿಲುಗರಿ ಮೂಡಿಸಿದೆ. ರಂಗ ಕನಸುಗಳ ಸಾಕಾರಕ್ಕೆ ಮದುಮಗಳು ಒಂದು ಹೊಸ ಸೇರ್ಪಡೆ. ಈ ಪ್ರಯೋಗ ನೋಡಿದ ಮೇಲೆ ಸೃಷ್ಟಿಯಾಗುವ ರಂಗಭೂಮಿ ಹೊಟ್ಟೆಕಿಚ್ಚಿನಿಂದಲಾದರೂ ಕನ್ನಡದಲ್ಲಿ ಇನ್ನಷ್ಟು ಹೊಸ ಪ್ರಯೋಗಗಳು ರೂಪು ಪಡೆಯಲಿ. ಜಡದೊಳಗೊಂದು ಜಂಗಮ ಇದ್ದೇ ಇರುತ್ತದೆ.
ಮದುಮಗಳು ಕನ್ನಡ ರಂಗಭೂಮಿ ಯನ್ನು ಒಂದು ಹೆಜ್ಜೆ ಮುನ್ನಡೆಸಿದೆ ಎಂದರೆ ಖಂಡಿತ ಅತಿಶಯೋಕ್ತಿಯಲ್ಲ.
ರಂಗಾಯಣದ ಕಲಾವಿದರೆಲ್ಲ ಎಂದಿನಂತೆ ನಮ್ಮ ಮನದಲ್ಲಿ ಉಳಿಯುತ್ತಾರೆ. ಗುತ್ತಿ ಪಾತ್ರದ ಕೃಷ್ಣಕುಮಾರ್, ನಾಯಿ ಪಾತ್ರಧಾರಿ ಎಂದಿಗೂ ಮರೆಯಲಾಗದ ಪಾತ್ರ. ಒಬ್ಬೊಬ್ಬರದೂ ಒಂದೊಂದು ಲೋಕ. ಮಂಜುನಾಥ ಬೆಳಕೆರೆ ವೈವಿಧ್ಯಮಯ ಅಭಿನಯ ಮಾಡಿದ್ದಾರೆ. ಭಾವಕ್ಕೆ ತಕ್ಕ ಅಭಿನಯ ಅವರದು. ಹೊಸ ಕಲಾವಿದರನೇಕರು ಭರವಸೆಯ ನಟ-ನಟಿಯರಾಗುವವರಿದ್ದಾರೆ. ಒಂದು ರೀತಿಯಲ್ಲಿ ನಾಟಕ ಅಭಿನಯದ ಸವಾಲನ್ನು ಕೇಳುತ್ತದೆ. ಜೋಗಪ್ಪಗಳ ಪಾತ್ರದಲ್ಲಿ ರಾಮು, ಹಿರೇಮಠ, ರಾಮನಾಥ ಇವರನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ.
ಕಾದಂಬರಿ ಮೂಲತಃ ಒಂದು ಹೊಸ ವೈಚಾರಿಕತೆಯನ್ನು ಹೇಳುತ್ತದೆ. ಬದುಕಿನ ನಾನಾ ವಿನ್ಯಾಸಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಂತೆ ಸಂಪ್ರದಾಯಗಳನ್ನು ಪರಿಚಯಿಸುತ್ತಲೇ ಸಮಕಾಲೀನವಾದ ಮತ್ತು ಹೊಸ ವೈಚಾರಿಕತೆಯ ದೃಷ್ಟಿಯಿಂದ ಬದುಕನ್ನು ನೋಡುತ್ತದೆ.

ಡಾ.ರಾಜಪ್ಪ ದಳವಾಯಿ

No comments:

Post a Comment

ಹಿಂದಿನ ಬರೆಹಗಳು