Friday, June 4, 2010

ಚಾಮರಾಜನಗರದಲ್ಲಿ ರಣಘೋಷ

ಯಾರೋ ಮುಠ್ಠಾಳರು ಚಾಮರಾಜನಗರವನ್ನು ಶಾಪಗ್ರಸ್ಥ ನಗರವೆಂದರು. ಆ ನಗರಕ್ಕೆ ಕಾಲಿಟ್ಟವರೆಲ್ಲ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದರು. ಕಾಕತಾಳೀಯ ಎಂಬಂತೆ ಹಲವರು ಹಾಗೆಯೇ ಅಧಿಕಾರ ಕಳೆದುಕೊಂಡರು. ಇನ್ನು ನಮ್ಮ ಜನಪ್ರತಿನಿಧಿಗಳನ್ನು ಕೇಳಬೇಕೆ? ಗಿಣಿಶಾಸ್ತ್ರ, ಕವಡೆ ಶಾಸ್ತ್ರದಿಂದ ಹಿಡಿದು ಹೈಟೆಕ್ ಜ್ಯೋತಿಷಿಗಳ ಒಡ್ಡೋಲಗದಲ್ಲಿ ಕೈ ಚಾಚಿ ನಿಲ್ಲುವುದರಲ್ಲಿ ಸದಾ ಮುಂದು. ಇನ್ನು ಇಂಥದ್ದೊಂದು ಮೂಢನಂಬಿಕೆಯನ್ನು ನಂಬದೇ ಇರುತ್ತಾರೆಯೇ? ಚಾಮರಾಜನಗರಕ್ಕೆ ಮಂತ್ರಿಗಳು ಬರುವುದನ್ನೇ ನಿಲ್ಲಿಸಿದರು. ಮುಖ್ಯಮಂತ್ರಿಗಳಂತೂ ಚಾಮರಾಜನಗರದ ಹೆಸರನ್ನು ಕೇಳಿದರೆ ಹೆದರುತ್ತಾರೆ.
ಆದರೆ ನಿಜವಾಗಿಯೂ ಶಾಪಗ್ರಸ್ಥರು ಚಾಮರಾಜನಗರಕ್ಕೆ ಬಾರದೇ ಹೋಗುವವರು ಮಾತ್ರ. ಡಾ.ರಾಜಕುಮಾರ್, ಪ್ರೊ.ಎಂ.ಡಿ.ನಂಜುಂಡಸ್ವಾಮಿಯಂಥವರನ್ನು ನೀಡಿದ ಪುಣ್ಯಭೂಮಿ ಅದು. ಗಡಿಭಾಗದಲ್ಲಿದ್ದರೂ ಕನ್ನಡತನವನ್ನು ಮೈಗೂಡಿಸಿಕೊಂಡು ಕನ್ನಡವನ್ನೇ ಉಸಿರಾಡುವ ಜನರಿರುವ ನಾಡು ಇದು. ಇಲ್ಲಿನ ಜನರು ರಾಗವಾಗಿ ಆಡುವ ಕನ್ನಡದ ಮಾತುಗಳನ್ನು ಕೇಳದವನೇ ಪಾಪಿ. ಇಲ್ಲಿನ ಜನರು ತಾವು ನಂಬಿದವರನ್ನು ಅತಿಯಾಗಿ ಪ್ರೀತಿಸುತ್ತಾರೆ, ಆರಾಧಿಸುತ್ತಾರೆ.
ಮೇ. ೨೫ರಂದು ಕರ್ನಾಟಕ ರಕ್ಷಣಾ ವೇದಿಕೆ ಚಾಮರಾಜನಗರದಲ್ಲಿ ಆಯೋಜಿಸಿದ್ದ ‘ಹೊಗೇನಕಲ್ ಉಳಿಸಿ’ ಹೋರಾಟದ ಬೃಹತ್ ಬಹಿರಂಗ ಸಭೆಯಲ್ಲಿ ನಿಜವಾದ ಕನ್ನಡಿಗರು ಎದ್ದು ನಿಂತಿದ್ದರು. ಇಡೀ ನಗರವೇ ಅಂದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಆಗಮನಕ್ಕೆ ಕಾದು ನಿಂತಿತ್ತು. ರಥಬೀದಿಯಲ್ಲಿ ಬಹಿರಂಗ ಸಭೆ ಏರ್ಪಾಡಾಗಿತ್ತು. ಚಾಮರಾಜನಗರದ ಹೆಬ್ಬಾಗಿಲಿನಿಂದ ರಥಬೀದಿಯವರೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಕಾದು ನಿಂತಿದ್ದರು. ಸಂಜೆ ನಾರಾಯಣಗೌಡರು ಆಗಮಿಸುತ್ತಿದ್ದಂತೆ ಇಡೀ ನಗರದಲ್ಲಿ ವಿದ್ಯುತ್ ಸಂಚಲನ. ವೇದಿಕೆಗೆ ಗೌಡರನ್ನು ಕರೆದೊಯ್ಯುವುದೇ ಹರಸಾಹಸವಾಗಿತ್ತು; ಕಾರ್ಯಕರ್ತರಿಗೆ.
ಆಗ ಅಲ್ಲಿದ್ದವರಿಗೆ ಅನ್ನಿಸಿದ್ದು; ಇಲ್ಲಿನ ಜನರ ಪ್ರೀತಿಯನ್ನು, ಅಭಿಮಾನವನ್ನು ಸ್ವೀಕರಿಸದವನೇ ನಿಜವಾದ ಪಾಪಿ ಎಂದು. ಚಾಮರಾಜನಗರ ಶಾಪಗ್ರಸ್ಥನಲ್ಲ; ಇಲ್ಲಿಗೆ ಬಾರದವನೇ ಶಾಪಗ್ರಸ್ಥ ಎಂದು.
‘ಒಂದು ಇಂಚು ಭೂಮಿಯನ್ನೂ ಯಾರಿಂದಲೂ ಕಿತ್ತುಕೊಳ್ಳಲು ಬಿಡುವುದಿಲ್ಲ; ಇದು ನಮ್ಮ ಶಪಥ’ ಎಂದು ನಾರಾಯಣಗೌಡರು ಗುಡುಗಿದರು. ನಾಡಿನ ಗಡಿಯನ್ನು ರಕ್ಷಿಸಬೇಕಾದವರು ಎಲ್ಲವನ್ನೂ ಮರೆತು ಕುಳಿತಿದ್ದಾರೆ. ಇಂಥವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಅನುಸರಿಸುತ್ತಿದೆ. ಹೊಗೇನಕಲ್ ಪ್ರದೇಶ ವಿವಾದದಲ್ಲಿರುವ ವಿಷಯ ಗೊತ್ತಿದ್ದರೂ ಯೋಜನೆಗೆ ಹಸಿರು ನಿಶಾನೆ ತೋರುವುದರ ಜತೆಗೆ ವಿದೇಶಿ ಸಾಲಕ್ಕೆ ಗ್ಯಾರೆಂಟಿ ನೀಡಿದೆ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಗುಡುಗಿದ ಗೌಡರು, ಎರಡೂ ರಾಜ್ಯ ಸರ್ಕಾರಗಳು ಹಾಗು ಕೇಂದ್ರ ಸರ್ಕಾರ ಇದಕ್ಕೆ ಭಾರಿ ಬೆಲೆ ತೆರಬೇಕಾದೀತು ಎಂದು ನುಡಿದರು.
ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ಹೊಗೇನಕಲ್‌ನಲ್ಲಿ ದೋಣಿ ವಿಹಾರ ನಡೆಸಿ, ಯಾವುದೇ ಕಾರಣಕ್ಕೂ ಈ ಪ್ರದೇಶವನ್ನು ತಮಿಳುನಾಡು ಕಬಳಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದ ಯಡಿಯೂರಪ್ಪನವರು, ಈಗ ಜಾಣ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ತಿರುವಳ್ಳುವರ್ ಪ್ರತಿಮೆ ಅನಾವರಣ ಸಂಬಂಧದಲ್ಲಿ ಕರುಣಾನಿಧಿ ಜತೆ ನಡೆದ ಕಳ್ಳ ಒಪ್ಪಂದದಲ್ಲಿ ಏನೇನು ನಡೆದಿದೆ ಎಂಬುದನ್ನು ಬಹಿರಂಗಪಡಿಸಲು ಆಗ್ರಹಿಸಿದರು.
ನಾವು ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂದು ಸಾರಿ ಸಾರಿ ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ. ಒಂದು ವೇಳೆ ತಮಿಳುನಾಡು ಸರ್ಕಾರ ಮೊಂಡುಹಠಕ್ಕೆ ಬಿದ್ದರೆ, ನಾವು ತಮಿಳುನಾಡಿನೊಂದಿಗಿನ ಎಲ್ಲ ಸಂಪರ್ಕ, ವ್ಯವಹಾರಗಳನ್ನು ನಿಲ್ಲಿಸಬೇಕಾಗುತ್ತದೆ. ಕರ್ನಾಟಕದಲ್ಲಿ ತಮಿಳು ಚಲನಚಿತ್ರಗಳನ್ನು ನಿಷೇಧಿಸಲಾಗುವುದು, ತಮಿಳು ಕೇಬಲ್‌ಗಳನ್ನು ಬಂದ್ ಮಾಡಲಾಗುವುದು. ಗಡಿಯನ್ನು ಮುಚ್ಚಲಾಗುವುದು ಎಂದು ಎಚ್ಚರಿಸಿದರು.
ನಾರಾಯಣಗೌಡರ ಪ್ರತಿ ಮಾತಿಗೂ ಅಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆಯ ಜನರು ಚಪ್ಪಾಳೆ ತಟ್ಟಿ ಅನುಮೋದಿಸಿದರು. ೧೦ ದಿನಗಳ ಒಳಗಾಗಿ ಎರಡೂ ರಾಜ್ಯ ಸರ್ಕಾರಗಳು ಕುಳಿತು ಮಾತನಾಡಬೇಕು, ಕೂಡಲೇ ಜಂಟಿ ಸರ್ವೆ ಆರಂಭಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗೌಡರು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಯಡಿಯೂರಪ್ಪ ಸರ್ಕಾರ ಹೊಗೇನಕಲ್ ವಿಚಾರದಲ್ಲಿ ಅವಿವೇಕ, ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಒಂದು ವೇಳೆ ಕನ್ನಡದ ಭೂಪ್ರದೇಶವನ್ನು ತಮಿಳುನಾಡು ಕಿತ್ತುಕೊಳ್ಳಲು ಯತ್ನಿಸಿದರೆ ರಾಜ್ಯದ ರೈತರೂ ಸಹ ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.
ಸಮತಾ ಸೈನಿಕ ದಳ ಹಾಗು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ರಾಜ್ಯದ ಗಡಿಯನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಳ್ಳಾರಿಯಲ್ಲಿ ರಾಜ್ಯದ ಗಡಿ ಒತ್ತುವರಿಯಾಗಿದೆ. ಬೆಳಗಾವಿಯಲ್ಲಿ ರಾಜ್ಯದ ಹಳ್ಳಿಗಳನ್ನು ಕಬಳಿಸುವ ಯತ್ನ ನಡೆದಿದೆ. ಹೊಗೇನಕಲ್‌ನಲ್ಲಿ ತಮಿಳುನಾಡು ಅಕ್ರಮವಾಗಿ ಯೋಜನೆ ನಡೆಸುತ್ತಿದೆ. ರಾಜ್ಯ ಸರ್ಕಾರ ಇದೆಲ್ಲವನ್ನು ನೋಡಿಕೊಂಡು ಸುಮ್ಮನಿದೆ ಎಂದು ಆರೋಪಿಸಿದರು. ಮೊದಲು ಜಂಟಿ ಸರ್ವೆ ನಡೆಯಲಿ, ಆನಂತರ ಯೋಜನೆ ಆರಂಭಿಸಲಿ ಎಂದು ಅವರು ಆಗ್ರಹಿಸಿದರು.
ಪ್ರಜಾ ವಿಮೋಚನಾ ಚಳವಳಿಯ ರಾಜ್ಯಾಧ್ಯಕ್ಷ ಪಟಾಪಟ್ ನಾಗರಾಜ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಡಾ.ರಾಜ್‌ಕುಮಾರ್‌ರಂಥ ವಿಶ್ವಮಾನವರಿಗೆ ಜನ್ಮ ನೀಡಿದ ತಪೋಭೂಮಿ. ಈ ಭೂಮಿಯ ಒಂದು ಅಡಿ ಜಾಗವನ್ನೂ ಕಬಳಿಸಲು ಅವಕಾಶ ನೀಡುವುದಿಲ್ಲ ಎಂದು ನುಡಿದರು.
‘ಕರವೇ ನಲ್ನುಡಿ’ಯ ಪ್ರಧಾನ ಸಂಪಾದಕ ದಿನೇಶ್ ಕುಮಾರ್ ಎಸ್.ಸಿ. ಮಾತನಾಡಿ, ಹಿಂದೆ ರಾಜ್ಯಪಾಲರ ಆಡಳಿತವಿದ್ದ ಸಂದರ್ಭದಲ್ಲಿ ಮೋಸದಿಂದ ಯೋಜನೆ ಆರಂಭಿಸಲು ತಮಿಳುನಾಡು ಸರ್ಕಾರ ಹುನ್ನಾರ ನಡೆಸಿತ್ತು. ಆದರೆ ಅಂದು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟದ ಪರಿಣಾಮವಾಗಿ ತನ್ನ ನಿರ್ಧಾರದಿಂದ ಕರುಣಾನಿಧಿ ಹಿಂದೆ ಸರಿದಿದ್ದರು. ಇದೀಗ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ನಿಷ್ಕಿಯತೆ, ಬೇಜವಾಬ್ದಾರಿತನಗಳನ್ನು ಗಮನಿಸಿಯೇ ಮತ್ತೆ ಅಕ್ರಮ ಯೋಜನೆ ಆರಂಭಿಸುವ ಹುನ್ನಾರ ನಡೆಸಿದೆ ಎಂದರು.
ಬಹಿರಂಗ ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಮಲ್ಲಪ್ಪ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ಗೌಡ, ಪ್ರಧಾನಕಾರ್ಯದರ್ಶಿ ಶೇಷಪ್ರಸಾದ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಚಾರ್ವಾಕ

No comments:

Post a Comment

ಹಿಂದಿನ ಬರೆಹಗಳು