Friday, June 4, 2010
ಹೊಗೇನಕಲ್ ನಮ್ಮದು ಸಾಕ್ಷಿ ಇಲ್ಲಿದೆ!
ದಿನೇಶ್ ಕುಮಾರ್ ಎಸ್.ಸಿ.
ಯಾಕೆ ತಮಿಳುನಾಡು ಸರ್ಕಾರ ದುರಹಂಕಾರದಿಂದ ವರ್ತಿಸುತ್ತಿದೆ? ಯಾಕೆ ಹಠಕ್ಕೆ ಬಿದ್ದಿದೆ? ಯಾಕೆ ಹೊಗೇನಕಲ್‌ನಲ್ಲೇ ತನ್ನ ಕುಡಿಯುವ ನೀರು ಯೋಜನೆಯನ್ನು ಆರಂಭಿಸುತ್ತಿದೆ? ೧೯೯೫ರಿಂದ ಈಚೆ ಹಲವು ಬಾರಿ ಕರ್ನಾಟಕ-ತಮಿಳುನಾಡು ಜಂಟಿ ಸರ್ವೆಗೆ ಅಡ್ಡಿ-ಆತಂಕಗಳನ್ನು ಒಡ್ಡುತ್ತಿದೆ? ಕಾವೇರಿ ನ್ಯಾಯಾಧಿಕರಣದ ಅನುಮತಿಯೂ ಇಲ್ಲದಂತೆ ಯೋಜನೆ ಆರಂಭಿಸಲು ಹೊರಟಿದ್ದೇಕೆ?
ಪ್ರಶ್ನೆಗಳು ಸಾವಿರ ಸಂಖ್ಯೆಯಲ್ಲಿದೆ. ಕೇಳಬೇಕಾದ ನಮ್ಮ ರಾಜ್ಯ ಸರ್ಕಾರ ಬಾಯಿ ಕಳೆದುಕೊಂಡಿದೆ.
ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡುತ್ತೇವೆ, ಬನ್ನಿ ಎಂದು ಕರುಣಾನಿಧಿ ಮುಂದೆ ಯಡಿಯೂರಪ್ಪ ಕೈಕಟ್ಟಿ ನಿಂತುಕೊಂಡಾಗಲೇ ನಮ್ಮ ಸರ್ಕಾರದ ಹುಳುಕುಗಳು ಅಲ್ಲಿನ ಜನರಿಗೆ ಗೊತ್ತಾಗಿ ಹೋಗಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಏಕಮಾತ್ರ ಉದ್ದೇಶದಿಂದ ಯಡಿಯೂರಪ್ಪ ಚೆನ್ನೈಗೆ ಓಡಿ ಹೋಗಿ ತಮಿಳುನಾಡು ಮುಖ್ಯಮಂತ್ರಿ ಎದುರು ಬೆನ್ನು ಬಾಗಿಸಿ ನಿಂತುಕೊಂಡರು. ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡುತ್ತೇವೆ, ಬನ್ನಿ ಎಂದು ವೀಳ್ಯ ಕೊಟ್ಟು ಬಂದರು. ಒಂದು ವಾರ ಮೊದಲೇ ಬೆಂಗಳೂರಿಗೆ ಬಂದು ಕುಳಿತ ಕರುಣಾನಿಧಿಗೆ ರಾಜಾತಿಥ್ಯ. ಕೆಂಪು ಹಾಸಿನ ಸ್ವಾಗತ.
ಪ್ರತಿಮೆ ಅನಾವರಣವನ್ನು ವಿರೋಧಿಸಿದ ಎಲ್ಲರನ್ನು ಬಂಧಿಸಿ ಜೈಲಿಗಟ್ಟಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರೂ ಸೇರಿದಂತೆ ವೇದಿಕೆಯ ಸಹಸ್ರಾರು ಕಾರ್ಯಕರ್ತರನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬಂಧಿಸಿ ಜೈಲಿಗೆ ತಳ್ಳಲಾಯಿತು. ತಿರುವಳ್ಳುವರ್ ಪ್ರತಿಮೆ ಅನಾವರಣ ನಡೆದೇ ಹೋಯಿತು. ಅತ್ತ ಚೆನ್ನೈ ನಗರದ ಒಂದು ಮೂಲೆಯಲ್ಲಿ ಸರ್ವಜ್ಞಮೂರ್ತಿಯ ಪ್ರತಿಮೆಯೂ ತೋರಿಕೆಗೆಂದು ಅನಾವರಣಗೊಳಿಸಲಾಯಿತು.
ತಮಿಳರಿಗೆ ಮಾಡಿದ ಈ ಮಹದುಪಕಾರಕ್ಕೆ ಪ್ರತಿಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಲವೆಡೆ ತಮಿಳರು ಬಿಜೆಪಿಯನ್ನು ಬೆಂಬಲಿಸಿದರು. ಕಾಲಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದ ತಮಿಳರು ಈ ಬಾರಿ ಬಿಜೆಪಿಗೆ ಒಲಿದರು. ಬಿಜೆಪಿ ಅಭ್ಯರ್ಥಿಗಳು ತಮ್ಮ ಕರಪತ್ರದಲ್ಲಿ ತಿರುವಳ್ಳುವರ್ ಭಾವಚಿತ್ರವನ್ನೂ ಛಾಪಿಸಿ ತಮಿಳರಿರುವ ಬಡಾವಣೆಗಳಲ್ಲಿ ಮತ ಕೇಳಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರಥಮ ಮೇಯರ್ ಸ್ಥಾನ ಬಿಜೆಪಿಗೇ ಲಭಿಸಿತು.
ತಿರುವಳ್ಳುವರ್ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಯಡಿಯೂರಪ್ಪ ಹೇಳಿದ್ದೇನು? ಎರಡೂ ರಾಜ್ಯಗಳ ನಡುವೆ ಇರುವ ಮನಸ್ತಾಪ ಕರಗಿಸಲು ಇದು ಸರಿಯಾದ ಕಾಲ ಎಂದರು. ಪರಸ್ಪರ ಸಹೋದರತ್ವ ಈ ಪ್ರತಿಮೆ ಅನಾವರಣದಿಂದ ನಡೆಯುತ್ತದೆ ಎಂದು ಕೊಚ್ಚಿಕೊಂಡಿದ್ದರು. ನಾವೆಲ್ಲರೂ ಒಂದಾಗಿ ಹೋಗೋಣ ಎಂದು ಸಂತನ ಹಾಗೆ ಮಾತನಾಡಿದ್ದರು. ಕರುಣಾನಿಧಿ ಸಹ ಯಡಿಯೂರಪ್ಪ ಅವರನ್ನು ‘ಚಿನ್ನ ತಂಬಿ’ ಎಂದು ಬಾಯ್ತುಂಬ ಕೊಂಡಾಡಿದ್ದರು.
ಆದರೆ ಹೊಗೇನಕಲ್‌ನಲ್ಲಿ ಯೋಜನೆ ಆರಂಭಿಸಲು ಹೊರಟ ಗಳಿಗೆಯಲ್ಲಿ ಅವರಿಗೆ ಯಡಿಯೂರಪ್ಪ ಎಂಬ ಕಿರಿಯ ಸಹೋದರ ನೆನಪಾಗಲೇ ಇಲ್ಲ, ಆತನೊಂದಿಗೆ ಒಂದು ಸುತ್ತು ಮಾತನಾಡಬೇಕು ಎಂದೆನಿಸಲೇ ಇಲ್ಲ. ಯಾಕೆ, ಸಹೋದರತ್ವದ ಭಾವ ಅಷ್ಟು ಬೇಗ ಕರಗಿ ಹೋಯಿತೆ? ಭ್ರಾತೃತ್ವದ ಪರ್ವ ತಿರುವಳ್ಳುವರ್ ಪ್ರತಿಮೆ ಅನಾವರಣದೊಂದಿಗೇ ಮುಗಿದುಹೋಯಿತೆ?
ಅಷ್ಟಕ್ಕೂ ಯಡಿಯೂರಪ್ಪ ಹಾಗು ಕರುಣಾನಿಧಿ ನಡುವೆ ಏನೇನು ಮಾತುಕತೆ ನಡೆದಿತ್ತು ಎಂಬುದನ್ನು ಅರಿಯಲು ರಾಜ್ಯದ ಜನತೆ ಬಯಸುತ್ತಿದ್ದಾರೆ. ಒಪ್ಪಂದವಾಗಿದ್ದು ತಿರುವಳ್ಳುವರ್-ಸರ್ವಜ್ಞ ಪ್ರತಿಮೆಗಳ ಅನಾವರಣದ ವಿಷಯ ಮಾತ್ರವೇ ಅಥವಾ ಅದರಿಂದಾಚೆಗೂ ಮಾತುಕತೆ ನಡೆದಿದೆಯೇ? ಹೊಗೇನಕಲ್‌ನಲ್ಲಿ ಕೆಲಕಾಲ ಬಿಟ್ಟು ಯೋಜನೆ ಆರಂಭಿಸಿ, ನಾವು ನಿಮಗೆ ಯಾವುದೇ ವಿರೋಧ ಮಾಡುವುದಿಲ್ಲ ಎಂದು ಯಡಿಯೂರಪ್ಪ ಮಾತು ಕೊಟ್ಟಿದ್ದಾರೆಯೇ? ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಹೂಡಲಾಗಿರುವ ದಾವೆಯ ವಿಚಾರಣೆ ಸಂದರ್ಭದಲ್ಲೂ ನಮ್ಮ ವಕೀಲರು ಮಗುಮ್ಮಾಗಿ ಇದ್ದುಬಿಡುತ್ತಾರೆ ಎಂದು ಯಡಿಯೂರಪ್ಪ ಏನಾದರೂ ಮಾತು ಕೊಟ್ಟಿರಬಹುದೇ? ಶಿವನಸಮುದ್ರ ವಿದ್ಯುತ್ ಯೋಜನೆಗೆ ಕಿತಾಪತಿ ಮಾಡಿ, ನಾವು ನಿಮಗೆ ತಲೆಬಾಗುತ್ತೇವೆ ಎಂದೇನಾದರೂ ಆಣೆ ಮಾಡಿರಬಹುದೇ? ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು, ಕರ್ನಾಟಕದಲ್ಲಿ ತಮಿಳನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂಬ ನಿಮ್ಮ ಬೇಡಿಕೆಗೆ ನಾವು ಒಪ್ಪಿಕೊಳ್ಳುತ್ತೇವೆ ಎಂದೇನಾದರೂ ಪ್ರಮಾಣ ಮಾಡಿರಬಹುದೇ?
ಯಡಿಯೂರಪ್ಪ ತನ್ನ ಹಿರಿಯ ಸಹೋದರನೊಂದಿಗೆ ಒಂದು ದೂರವಾಣಿ ಕರೆ ಮಾಡಿ ಮಾತೂ ಆಡುತ್ತಿಲ್ಲವೆಂದರೆ ಅನುಮಾನಗಳು ಸಾವಿರ ಹುಟ್ಟುತ್ತವೆ. ‘ಕರ್ನಾಟಕ ರಕ್ಷಣಾ ವೇದಿಕೆಯೋರು ಪ್ರತಿಭಟನೆ ಮಾಡಿದರೆ ವಿವಾದ ಬಗೆಹರಿಯೋದಿಲ್ಲ, ಮಾತುಕತೆ ಮಾಡಬೇಕು, ಮಾತುಕತೆ ಮೂಲಕ ವಿವಾದ ಪರಿಹರಿಸಬೇಕು’ ಎಂದು ಮೇ.೨೫ರಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
‘ಅಲ್ಲಾ ಸ್ವಾಮಿ, ನಾವು ಹೇಳ್ತಾ ಇರೋದೂ ಸಹ ಅದನ್ನೇ. ನಮಗೇನು ಅನುದಿನವೂ ಹೋರಾಟ ಮಾಡಿಕೊಂಡಿರಲು ಹುಚ್ಚು ಹಿಡಿದಿಲ್ಲ. ಮಾತುಕತೆ ಮಾಡೋದು ನಮ್ಮ ಕೆಲಸವಲ್ಲ. ಮಾತುಕತೆ ಆಡ್ರೀ ಅಂತನೇ ನಿಮ್ಮನ್ನು ಆಯ್ಕೆ ಮಾಡಿ ವಿಧಾನಸೌಧದಲ್ಲಿ ಕೂರಿಸಿರೋದು. ನೀವು ಅದನ್ನೂ ಮಾಡದೇ ಇದ್ರೆ ನಿಮ್ಮನ್ನು ನಿದ್ರೆಯಿಂದ ಎಬ್ಬಿಸಲು ಹೋರಾಟ ಮಾಡದೇ ಮತ್ತೇನು ಆಯ್ಕೆ ನಮ್ಮ ಮುಂದಿದೆ’ ಎಂದು ನಾರಾಯಗೌಡರು ಪ್ರತಿಕ್ರಿಯೆ ನೀಡಿದರು.
ಯಡಿಯೂರಪ್ಪ ಸರ್ಕಾರದ ಮಂತ್ರಿಗಳಿಗೆ ಹೊಗೇನಕಲ್ ವಿವಾದದ ತಲೆ ಬುಡವೇ ಗೊತ್ತಿದ್ದಂತೆ ಇಲ್ಲ. ಮುಖ್ಯಮಂತ್ರಿಯ ನಂತರ ಸ್ಥಾನದಲ್ಲಿರುವ ಗೃಹ ಸಚಿವ ವಿ.ಎಸ್.ಆಚಾರ‍್ಯ ಇತ್ತೀಚಿಗೆ ಒಂದು ಹೇಳಿಕೆ ನೀಡಿದರು. ಹೊಗೇನಕಲ್‌ನಲ್ಲಿ ಅವರು ಕುಡಿಯುವ ನೀರು ಯೋಜನೆ ಮಾಡಿಕೊಳ್ಳಲಿ, ನಾವು ಇಲ್ಲಿ ಜಲವಿದ್ಯುತ್ ಯೋಜನೆ ಮಾಡಿಕೊಳ್ಳುತ್ತೇವೆ. ಇದೊಂದು ರೀತಿಯಲ್ಲಿ ಕೊಟ್ಟು-ಕೊಳ್ಳುವ ವ್ಯವಹಾರ’ ಎಂದರು.
ಒಬ್ಬ ಗೃಹಮಂತ್ರಿಗೆ ವಿವಾದ ಏನು ಎಂಬುದೇ ಗೊತ್ತಿಲ್ಲದಿದ್ದರೆ ಇಂಥ ಬೇಜವಾಬ್ದಾರಿ ಹೇಳಿಕೆಗಳು ಹೊರಬರುತ್ತವೆ. ತಮಿಳುನಾಡು ಸರ್ಕಾರ ತನ್ನ ಯೋಜನೆಯನ್ನು ಆರಂಭಿಸಿರುವುದು ಕರ್ನಾಟಕದ ಭೂಭಾಗದಲ್ಲಿ. ಹೀಗಿರುವಾಗ ಅವರು ಮಾಡಿಕೊಳ್ಳಲಿ ಎಂದು ರಾಜ್ಯದ ಗೃಹಮಂತ್ರಿ ಹೇಗೆ ಹೇಳುತ್ತಾರೆ? ರಾಜ್ಯದ ಭಾಗವನ್ನು ಇನ್ನೊಂದು ರಾಜ್ಯಕ್ಕೆ ಮಾರಲು, ಪರಭಾರೆ ಮಾಡಲು ಆಚಾರ್ಯ ಯಾರು?
ಅಸಲಿಗೆ ಹೊಗೇನಕಲ್‌ನಲ್ಲಿ ತಮಿಳುನಾಡು ಸರ್ಕಾರ ಯೋಜನೆ ಆರಂಭಿಸುತ್ತಿರುವ ಜಾಗ ಕರ್ನಾಟಕಕ್ಕೆ ಸೇರಿದ್ದು ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ೧೯೭೪-೭೫ರಲ್ಲಿ ನಡೆದ ಸರ್ವೆಯ ಪ್ರಕಾರ ಹೊಗೇನಕಲ್ ನಡುಗಡ್ಡೆಯ ಮೂರನೇ ಎರಡು ಭಾಗ ಕರ್ನಾಟಕಕ್ಕೆ ಸೇರುತ್ತದೆ. (ನಕ್ಷೆ ನೋಡಿ) ಕರ್ನಾಟಕದ ಭೂಭಾಗದಲ್ಲೇ ಹೊಗೇನಕಲ್ ಫಾಲ್ಸ್ ಇರುವುದು ಈ ನಕ್ಷೆಯ ಪ್ರಕಾರ ಸತ್ಯ. ಈ ಸಮೀಕ್ಷೆಯನ್ನು ಕೇವಲ ಕರ್ನಾಟಕ ನಡೆಸಿದ್ದೇನು ಅಲ್ಲ, ಎರಡೂ ರಾಜ್ಯಗಳೂ ಸೇರಿದ ನಡೆಸಿದ ಸಮೀಕ್ಷೆ ಪ್ರಕಾರವೇ ಸಿದ್ಧಗೊಳಿಸಿದ ನಕ್ಷೆ ಇದು. ಇದನ್ನು ಯಾಕೆ ತಮಿಳುನಾಡು ಒಪ್ಪುತ್ತಿಲ್ಲ?
ವಿಶೇಷವೆಂದರೆ ಯಾವ ಹೊಗೇನಕಲ್ ಕರ್ನಾಟಕದಲ್ಲಿ ಸೇರಿದೆಯೋ ಅಲ್ಲಿ, ತಮಿಳುನಾಡು ಸರ್ಕಾರ ಬಂದು ಕುಳಿತು ಹಲವು ವರ್ಷಗಳೇ ಕಳೆದುಹೋದವು. ಅಲ್ಲಿ ತಮಿಳುನಾಡು ಸರ್ಕಾರದ ಪ್ರವಾಸೋದ್ಯಮ ಇಲಾಖೆ ಬಂದಿದೆ. ತಮಿಳು ಬೋರ್ಡ್‌ಗಳಿವೆ. ಬೋಟ್‌ಗಳನ್ನು ನಡೆಸುವ ತಮಿಳು ಜನರಿದ್ದಾರೆ. ಇಡೀ ಜಾಗವೇ ತಮ್ಮದು ಎಂಬಂತೆ ಬಿಂಬಿಸಿಕೊಳ್ಳುವ ಸಲುವಾಗಿ ಹಲವು ವರ್ಷಗಳಿಂದ ಅಲ್ಲಿ ತಮಿಳುನಾಡು ಸರ್ಕಾರ ಠಿಕಾಣಿ ಹೂಡಿದೆ. ಅವರನ್ನು ಎಬ್ಬಿಸಬೇಕಾದ ನಮ್ಮ ಸರ್ಕಾರಕ್ಕೆ ಜಾಣ ನಿದ್ರೆ.
ಹೀಗೆ ಬಂದು ಕುಳಿತ ಮೇಲೆ, ಅಲ್ಲಿ ಯೋಜನೆ ಆರಂಭಿಸುವ ಮಾತುಗಳನ್ನು ಆಡತೊಡಗಿತು ತಮಿಳುನಾಡು ಸರ್ಕಾರ. ಜೆ.ಎಚ್.ಪಟೇಲರ ಕಾಲದಲ್ಲಿ ಆದ ಒಪ್ಪಂದದಲ್ಲಿ ಹೊಗೇನಕಲ್‌ನ ತನ್ನ ಭಾಗದಲ್ಲಿ ಕುಡಿಯುವ ನೀರು ಯೋಜನೆ ಆರಂಭಿಸುವುದಾಗಿ ತಮಿಳುನಾಡು ಹೇಳಿತ್ತು. ಆದರೆ ಈಗ ಕುಳಿತಿರುವುದು ಕರ್ನಾಟಕದ ಭಾಗದಲ್ಲಿ. ಇದು ತಮಿಳುನಾಡು ಸರ್ಕಾರಕ್ಕೂ ಗೊತ್ತಿದೆ, ಕರ್ನಾಟಕ ಸರ್ಕಾರಕ್ಕೂ ಗೊತ್ತಿದೆ. ಮಾತನಾಡಲು ಇವರಿಗೆ ಬಾಯಿ ಇಲ್ಲ, ಇವರ ಜೀವ ಇರುವುದು ತಮಿಳರ ಓಟಿನಲ್ಲಿ ಎಂದು ತಮಿಳುನಾಡು ಸರ್ಕಾರ ಅರ್ಥಮಾಡಿಕೊಂಡು ಬಿಟ್ಟಿದೆ. ಹೀಗಾಗಿ ಕರುಣಾನಿಧಿ ರಾಜಾರೋಷವಾಗಿ ಹೊಗೇನಕಲ್‌ನಲ್ಲಿ ಯೋಜನೆ ಮಾಡೇ ಮಾಡ್ತೀವಿ ಅಂತ ಕೇಂದ್ರ ಸರ್ಕಾರದ ಬೆಂಬಲವನ್ನೂ ಗಿಟ್ಟಿಸಿಕೊಂಡು ಹೂಂಕರಿಸುತ್ತಿದ್ದಾರೆ.
ಇತ್ತ ಇಲ್ಲಿ ಯಡಿಯೂರಪ್ಪ ಸರ್ಕಾರ ಈಗೀಗ ಹತ್ತಿರವಾಗಿರುವ ತಮಿಳು ಮತದಾರರನ್ನು ಯಾಕೆ ಕಳೆದುಕೊಳ್ಳುವುದು ಎಂದು ನಿರ್ಧರಿಸಿದಂತಿದೆ. ಕಳೆದುಕೊಂಡ ತಮಿಳು ಮತಗಳನ್ನು ಗಿಟ್ಟಿಸುವ ಸಲುವಾಗಿ ಕಾಂಗ್ರೆಸ್-ಜೆಡಿಎಸ್ ಮುಖಂಡರೂ ಸಹ ಹೊಗೇನಕಲ್ ವಿಷಯದಲ್ಲಿ ಬಾಯಿ ತೆರೆಯುತ್ತಿಲ್ಲ.
ಆದರೆ ಎಲ್ಲರ ಬಾಯಿ ತೆರೆಸುವ ಕೆಲಸವನ್ನು ಅಂತಿಮವಾಗಿ ಕರ್ನಾಟಕ ರಕ್ಷಣಾ ವೇದಿಕೆಯೇ ಮಾಡಬೇಕಾಗುತ್ತದೆ. ಅದಕ್ಕೆ ಕಾಲ ಈಗ ಪಕ್ವವಾಗಿದೆ.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
June
(18)
- ಅಪಘಾತವಲ್ಲ, ಸಾಮೂಹಿಕ ಕೊಲೆ!
- ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು
- ಪ್ರತಿಗ್ರಾಮದಲ್ಲಿ ಭಾರತದ ಕೇಂದ್ರ ಇದೆ
- ಹೊಗೇನಕಲ್ ನಮ್ಮದು ಸಾಕ್ಷಿ ಇಲ್ಲಿದೆ!
- ಚಾಮರಾಜನಗರದಲ್ಲಿ ರಣಘೋಷ
- ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆಗಳ ವಾಪಸಾತಿ ಮುಖ್ಯಮಂತ್...
- ಕರ್ನಾಟಕ ಮಾರಾಟಕ್ಕಿದೆ!
- ಹೊರನಾಡಲ್ಲಿ ಕನ್ನಡದ ತೇರನೆಳೆವರು
- ಮುಗಿಯದ ಯುದ್ಧ ಬೆಳಗಾವಿ ನಮ್ಮದು
- ಈ ಸಾವು ನ್ಯಾಯವೇ?
- ರಂಗದಲ್ಲಿ ಮದುಮಗಳು
- ಭರವಸೆ ಭಿತ್ತಿದ ಮಹಾಬೆಳಕು ಸಿದ್ಧಗಂಗಾ ಡಾ.ಶ್ರೀ ಶಿವಕುಮಾರ ...
- ಸೇವಾ ಕೈಂಕರ್ಯಗಳ ಹರಿಕಾರ ಆದಿಚುಂಚನಗಿರಿ ಶ್ರೀ
- ಕರವೇಯಿಂದ ಕಂಕಣಭಾಗ್ಯ
- ರೈತರ ಕಿಂದರಿಜೋಗಿಯ ಇನ್ನಷ್ಟು ನೆನಪುಗಳು...
- ಸಿ.ಬಿ.ಎಸ್.ಇ ಹೇರುವ ಹುನ್ನಾರ!
- ಮರೆಯಲಾಗದ ವಿಷ್ಣು
- ‘ನಲ್ನುಡಿಗೆ ನೀವೇ ಸ್ಫೂರ್ತಿ...
-
▼
June
(18)
No comments:
Post a Comment