Friday, June 4, 2010
ಮುಗಿಯದ ಯುದ್ಧ ಬೆಳಗಾವಿ ನಮ್ಮದು
ಇದು ಇನ್ನೂ ಮುಗಿಯದ ಕಥೆ. ಮುಗಿಯದ ಯುದ್ಧ ಕೂಡ. ಬೆಳಗಾವಿ ಯಾರಿಗೆ ಸೇರಬೇಕೆಂಬ ಬಗ್ಗೆ ಜಗಳ-ಕದನ, ಆರೋಪ-ಪ್ರತ್ಯಾರೋಪ ನಿರಂತರ. ಇದಕ್ಕೊಂದು ಇತಿಶ್ರೀ ಹಾಡುವ ಇಚ್ಛಾಶಕ್ತಿಯನ್ನು ಯಾವ ರಾಜಕೀಯ ಪಕ್ಷದವರೂ ಪ್ರದರ್ಶಿಸಿಲ್ಲ. ಕನ್ನಡಿಗರು-ಮರಾಠಿಗರ ಮಧ್ಯೆ ಮನಸ್ತಾಪ, ಮಡುಗಟ್ಟುತ್ತಿರುವ ದ್ವೇಷ ಭಾವನೆಗೆ ಇದು ಇಂಬು ಕೊಡುತ್ತಿದೆ.
ಇದೇ ಅಂತಿಮ ಎಂದು ಎಲ್ಲಾ ಆಯೋಗಗಳ ವರದಿಗಳು ಸ್ಪಷ್ಟವಾಗಿ, ನಿಖರವಾಗಿ ದಾಖಲೆ ಸಮೇತ ಹೇಳಿದ ಮೇಲೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಭಾಗವೆಂಬುದನ್ನು ಮಹಾರಾಷ್ಟ್ರದ ನಾಯಕರು ಒಪ್ಪಿಕೊಳ್ಳಲು ಸುತಾರಾಂ ತಯಾರಿಲ್ಲ. ಮತಗಳಿಕೆಯ ಕಾರಣಕ್ಕಾಗಿ ಮರಾಠ ನಾಯಕರಿಗೆ ಬೆಳಗಾವಿಯ ವಿಷಯ ಜೀವಂತವಾಗಿರಬೇಕು. ಹಲವು ರಾಜ್ಯಗಳನ್ನೊಳಗೊಂಡ ಒಕ್ಕೂಟದ ದೇಶವಾಗಿರುವ ಭಾರತದಲ್ಲಿ ಇಂತಹ ವಿವಾದಗಳನ್ನು ನಿರ್ವಿವಾದವಾಗಿ ಪರಿಹರಿಸಬೇಕಾದ ಕೇಂದ್ರ ಸರ್ಕಾರ ತನ್ನದೇ ಆದ ರಾಜಕೀಯ ಕಾರಣಕ್ಕಾಗಿ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನೂ ಮಾಡುತ್ತಲೇ ಇದೆ.
ದೇಶ ಸ್ವಾತಂತ್ರ್ಯವಾಗುವ ಪೂರ್ವದಲ್ಲಿ ರಾಜರು, ಪಾಳೆಯಗಾರರು ತಮ್ಮ ಗಡಿ ಯಾವುದೆಂಬುದರ ನಿಷ್ಕರ್ಷೆಗೆ ಕಚ್ಚಾಡುತ್ತಿದ್ದಂತೆ, ಆಗಾಗ್ಗೆ ಯುದ್ಧ ಮಾಡುತ್ತಿದ್ದಂತೆ ಸ್ವಾತಂತ್ರ್ಯಾನಂತರದ ೬೩ ವರ್ಷ ಕಳೆದರೂ ನಾವಿನ್ನೂ ಜಗಳವಾಡುತ್ತಿದ್ದೇವೆ. ಬೆಳಗಾವಿ ಯಾರಿಗೆ ಸೇರಬೇಕೆಂಬ ಇತ್ಯರ್ಥವಾಗಿಬಿಟ್ಟರೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ಒಂದು ಕಸುಬು ಕೊರತೆಯಾಗುತ್ತದೆ. ಚುನಾವಣೆ ಹತ್ತಿರವಾದಾಗ ಮತ ಸೆಳೆಯಲು ಅಡ್ಡಿಯಾಗುತ್ತದೆ. ಹಾಗಾಗಿ ಅದನ್ನು ಬಗೆಹರಿಸುವ ಇರಾದೆ ರಾಜಕೀಯ ಪಕ್ಷಗಳಿಗೆ ಇಲ್ಲ.
ಆಕ್ರಮಣಕಾರಿ:
ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳು ಆಕ್ರಮಣಕಾರಿ ಯಾಗಿಯೇ ವರ್ತಿಸುತ್ತಿವೆ. ಅದರಲ್ಲೂ ೧೯೬೭ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮೆಹರ್‌ಚಂದ್ ಮಹಾಜನ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯ ನಂತರ ಮಹಾರಾಷ್ಟ್ರದ ಎಲ್ಲಾ ಧುರೀಣರೂ ಬೆಳಗಾವಿ ನಮ್ಮದೆಂಬ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ.
ಮರಾಠಿಗರಲ್ಲಿ ಇರುವ ಅಭಿಮಾನ ಕನ್ನಡಿಗರಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದ ರಾಜಕೀಯ ನೇತಾರರಲ್ಲಿ, ಸಂಸದರಲ್ಲಿ ಇರದೇ ಇರುವುದರಿಂದ ಬೆಳಗಾವಿಯ ವಿಷಯ ಇನ್ನೂ ಇತ್ಯರ್ಥವಾಗಿಲ್ಲ.
ಮರಾಠಿಗರು ಗಡಿ ತಂಟೆ ಶುರುವಿಟ್ಟಾಗ ಅಥವಾ ಮಹಾರಾಷ್ಟ್ರದ ಯಾವುದಾದರೂ ಮಂತ್ರಿ ಬೆಳಗಾವಿ ನಮ್ಮದೆಂದು ಅಬ್ಬರಿಸಿದಾಗ ಅಥವಾ ಮಹಾರಾಷ್ಟ್ರ ಏಕೀಕರಣ ಸಮಿತಿ ಮಹಾಮೇಳಾವ ನಡೆಸಲು ಮುಂದಾದಾಗ ಅಥವಾ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದೆಂಬ ವಿವರ ಒಳಗೊಂಡ ಪತ್ರ ಕೇಂದ್ರದಿಂದ ರವಾನೆಯಾದಾಗ ಕರ್ನಾಟಕದ ರಣಹೇಡಿ ರಾಜಕಾರಣಿಗಳು ತಮ್ಮ ಇಷ್ಟಗಲ ಬಾಯನ್ನು ತೆರೆದುಕೊಂಡು ಬಿಡುತ್ತಾರೆ. ತಾವೇ ಕರ್ನಾಟಕ ಉದ್ಧಾರಕರು, ಗಡಿ ರಕ್ಷಕರು ಎಂದು ಬೀಗುತ್ತಾರೆ. ಮಾಧ್ಯಮಗಳಲ್ಲಿ ಮಿಂಚಿ ಮರೆಯಾದ ಅವರು ಮಹಾರಾಷ್ಟ್ರದ ಕಡೆಯಿಂದ ಮತ್ತೊಂದು ಕಲ್ಲು ಎಸೆಯುವವರೆಗೂ ಸುಮ್ಮನಿರುತ್ತಾರೆ. ತಮ್ಮ ಬಾಯಿಗೆ ಚರ್ಮದ ದಾರಗಳನ್ನು ಹೊಲಿದು ಕೊಂಡು ಕುಳಿತು ಬಿಡುವ ಕರ್ನಾಟಕದ ರಾಜಕಾರಣಿಗಳಿಂದಲೇ ಬೆಳಗಾವಿ ಸಮಸ್ಯೆ ಜೀವಂತವಾಗಿ ಉಳಿದಿದೆ ಎಂಬುದರಲ್ಲಿ ಅನುಮಾನವೇ ಬೇಡ.
ಮಹಾಮೇಳಾವ ನಡೆಸಿ ಬೆಳಗಾವಿಯ ಮೇಲೆ ಪ್ರಭುತ್ವ ಸಾಧಿಸಲು ಮರಾಠಿಗರು ಮುಂದಾದಾಗ ಮಾತ್ರ ನಮ್ಮ ಸರ್ಕಾರ ಕಣ್ಣು ತೆರೆಯುತ್ತದೆ. ಕಣ್ಣಿಗೆ ಖಾರದ ಪುಡಿ ಹಾಕಿಕೊಂಡ ರೀತಿ ಅರಚುತ್ತದೆ. ಆಮೇಲೆ ಸ್ಮಶಾನದಲ್ಲಿ ಹೆಣ ಮಲಗಿದಂತೆ ಮಲಗಿ ಬಿಡುತ್ತದೆ. ಇದು ಯಡಿಯೂರಪ್ಪನವರ ಸರ್ಕಾರ ಕತೆ ಮಾತ್ರವಲ್ಲ. ಇಲ್ಲಿವರೆಗೆ ಆಗಿ ಹೋದ ಎಲ್ಲಾ ಸರ್ಕಾರಗಳು ಮಾಡಿಕೊಂಡು ಬಂದಿದ್ದು ಇದನ್ನೇ. ಈ ಆಪಾದನೆಗೆ ಯಾವುದೇ ರಾಜಕೀಯ ಪಕ್ಷಗಳೂ ಹೊರತಲ್ಲ.
ಐದು ವರ್ಷಗಳ ಅವಧಿಯಲ್ಲಿ ನಮ್ಮ ರಾಜ್ಯದ ಹಿತ ಕಾಪಾಡಲಿ ಎಂದು ನಾವು ಆರಿಸಿಕಳಿಸುವ ಸಂಸದರಾದರೂ ಇದರ ಬಗ್ಗೆ ಧ್ವನಿಯೆತ್ತುತ್ತಾರಾ ಎಂದರೆ ಅವರು ಮೈಯ ಸುತ್ತ ಮಂಜುಗಡ್ಡೆ ಹಾಕಿಕೊಂಡು ಮರಗಟ್ಟಿ ಹೋಗಿ ಬಿಡುತ್ತಾರೆ. ಸಂಸತ್‌ಗೆ ಆರಿಸಿ ಹೋಗುವವರೇನೂ ಸಾಮಾನ್ಯರಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ, ಪ್ರಮುಖ ಖಾತೆಗಳ ಸಚಿವರಾಗಿ, ಕರ್ನಾಟಕದಲ್ಲಿ ಕಾನೂನು ಮಂತ್ರಿಯಾಗಿ ಬೆಳಗಾವಿ ವಿಷಯವನ್ನು ಅರೆದು ಕುಡಿದವರೇ ಆಗಿರುತ್ತಾರೆ. ಅಂದರೆ ಅವರೆಲ್ಲರಿಗೂ ಬೆಳಗಾವಿಯ ಕುರಿತು ಮರಾಠಿಗರು ತೆಗೆಯುವ ತಂಟೆ ತಕರಾರುಗಳ ಸ್ಪಷ್ಟ ಅರಿವಿದೆ. ಮಾತನಾಡಲು ಅವರಿಗೆ ಬಾಯಿಲ್ಲ ಅಷ್ಟೆ!
ಇತಿಹಾಸದ ದಾಖಲೆ ಬಗೆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಬಹುತೇಕರು ನಂತರ ಅಥವಾ ಮೊದಲು ಸಂಸದರಾಗಿದ್ದವರು. ವೀರೇಂದ್ರಪಾಟೀಲ್, ಎಸ್.ಆರ್.ಬೊಮ್ಮಾಯಿ, ದೇವೇಗೌಡ, ಜೆ.ಎಚ್.ಪಟೇಲ್, ಎಸ್. ಬಂಗಾರಪ್ಪ, ಎಚ್.ಡಿ. ಕುಮಾರಸ್ವಾಮಿ, ವೀರಪ್ಪ ಮೊಯಿಲಿ ಹೀಗೆ ಎಲ್ಲರೂ ಸಂಸದರಾಗಿದ್ದವರು. ರಾಮಕೃಷ್ಣಹೆಗಡೆ, ಎಸ್.ಎಂ. ಕೃಷ್ಣ ರಾಜ್ಯಸಭೆ ಸದಸ್ಯರಾಗಿ ಕರ್ನಾಟಕವನ್ನು ಪ್ರತಿನಿಧಿಸಿದವರು. ಈ ಮಹಾಮಹಿಮರ‍್ಯಾರೂ ಸಂಸತ್‌ನಲ್ಲಿ ಬೆಳಗಾವಿಯ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ ನಿದರ್ಶನ, ದಾಖಲೆಗಳೇ ಇಲ್ಲ. ಇದೆಂತಾ ದುರಂತ ಕನ್ನಡಿಗರದು.
೧೯೫೬ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯ ತರುವಾಯ ಬೆಳಗಾವಿ ಯಾರಿಗೆ ಸೇರಬೇಕೆಂಬ ಕ್ಯಾತೆ ಶುರುವಾಯಿತೇ ವಿನಃ ಅಲ್ಲಿಯವರೆಗೂ ಅದರ ಸುದ್ದಿಯೇ ಇರಲಿಲ್ಲ. ದಶಕದಿಂದೀಚೆಗೆ ಮರಾಠಿಗರು ಆಕ್ರಮಣಕಾರಿಯಾಗಿ ವರ್ತಿಸುತ್ತಾ, ಬೆಳಗಾವಿ ತಮ್ಮದೇ ಎಂಬ ಹಠಕ್ಕೆ ಬಿದ್ದಿದ್ದಾರೆ ವಿನಃ ಅದಕ್ಕೂ ಮೊದಲು ಅವರೂ ಹಕ್ಕು ಪ್ರತಿಪಾದಿಸುತ್ತಿರಲಿಲ್ಲ.
ಟಿ.ಎ. ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ವಿಷಯದಲ್ಲಿ ಮಧ್ಯಪ್ರವೇಶಿಸಿ, ಅದು ಕರ್ನಾಟಕದ ಅವಿಭಾಜ್ಯ ಅಂಗವೆಂದು ಪ್ರತಿಪಾದಿಸಿ, ಹೋರಾಟ ಕಟ್ಟುವವರೆಗೆ ಕರ್ನಾಟಕದಲ್ಲಿ ಪ್ರಬಲ ಧ್ವನಿಯೂ ಇರಲಿಲ್ಲ. ಕರ್ನಾಟಕದ ಸ್ವಾಭಿಮಾನ ಹೋರಾಟಕ್ಕೆ ಹೊಸ ಕಸುವು ತಂದುಕೊಟ್ಟ ರಕ್ಷಣಾ ವೇದಿಕೆ ಬೆಳಗಾವಿ ರಕ್ಷಣೆಗೆ ಸಂತತ ಹೋರಾಟ ನಡೆಸಿದ್ದರಿಂದಾಗಿ ಇಂದು ಬೆಳಗಾವಿ ಕರ್ನಾಟಕದಲ್ಲೇ ಉಳಿದಿದೆ. ಕನ್ನಡಿಗರಲ್ಲಿ ಬೆಳಗಾವಿ ರಕ್ಷಣೆಯ ಕಿಚ್ಚು ಹೊತ್ತಿಸಿದ ರಕ್ಷಣಾ ವೇದಿಕೆ ಅದಕ್ಕಾಗಿ ನಡೆಸಿದ ಹೋರಾಟ ಅನೇಕ. ಅದಕ್ಕಾಗಿ ಜೈಲು ಸೇರಿದ್ದು, ಹತ್ತಾರು ಮೊಕದ್ದಮೆಗಳನ್ನು ಮೈಮೇಲೆ ಹಾಕಿಕೊಂಡು ದಿನವೂ ಕೋರ್ಟಿಗೆ ಅಲೆಯುತ್ತಿರುವುದರಿಂದಲೇ ಬೆಳಗಾವಿ ಇನ್ನೂ ಕರ್ನಾಟಕದ ಭಾಗವಾಗಿದೆ ಎಂದರೆ ಉತ್ಪೇಕ್ಷೆಯಾಗಲಾರದು.
ಎನ್.ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ನಗರಪಾಲಿಕೆಯ ಆಡಳಿತ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೈಯಲ್ಲಿತ್ತು. ನಗರ ಪಾಲಿಕೆಯ ಮೇಲೆ ಎಂ ಇ ಎಸ್ ಬಾವುಟ ಹಾರಿಸಲಾಗುತ್ತಿತ್ತು. ಅಲ್ಲದೇ ಪಾಲಿಕೆಯ ನಿರ್ಣಯಗಳನ್ನೂ ಮರಾಠಿಯಲ್ಲೇ ಬರೆಯಲು ಒತ್ತಾಯಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಬೆಳಗಾವಿ ಮೇಯರ್ ಆಗಿದ್ದವರು ವಿಜಯ ಮೋರೆ ಎಂಬ ಮರಾಠಿ ಭಾಷಾಂಧ. ಒಮ್ಮೆ ಬೆಳಗಾವಿ ಮಹಾನಗರಪಾಲಿಕೆಯ ಸಭೆಯಲ್ಲಿ ಎಂಇಎಸ್ ಸದಸ್ಯರು ಕುತಂತ್ರ ನಡೆಸಿ, ಬೆಳಗಾವಿ ನಗರವು ಮಹಾರಾಷ್ಟ್ರಕ್ಕೆ ಸೇರಬೇಕೆಂಬ ನಿರ್ಣಯ ಅಂಗೀಕರಿಸಿದರು.
ಈ ಘಟನೆ ನಡೆಯುತ್ತಿದ್ದಂತೆ ಇಡೀ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಡೀ ರಾಜ್ಯಾದ್ಯಂತ ಹೋರಾಟ ಸಂಘಟಿಸಿದರು. ಈ ಸಂದರ್ಭದಲ್ಲಿ ವಿಜಯ ಮೋರೆ ಇತರ ಎಂಇಎಸ್ ಮುಖಂಡರೊಂದಿಗೆ ಬೆಂಗಳೂರಿಗೆ ಬಂದರು. ಶಾಸಕರ ಭವನದಲ್ಲಿ ವಿಜಯ್ ಮೋರೆ ಇರುವುದನ್ನು ಖಚಿತಪಡಿಸಿಕೊಂಡ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಲ್ಲಿಗೆ ತೆರಳಿ ಮೋರೆ ಮೂತಿಗೆ ಮಸಿ ಬಳಿದರು.
ಮೋರೆ ಮುಖಕ್ಕೆ ಮಸಿ ಇಡೀ ರಾಜ್ಯವ್ಯಾಪಿ ಪ್ರಚಾರ ಪಡೆಯಿತು. ಮಸಿ ಬಳಿದ ಪ್ರಕರಣದಿಂದಾಗಿ ನಿಜವಾಗಿಯೂ ಕನ್ನಡಿಗರಲ್ಲಿ ಸ್ವಾಭಿಮಾನ ಪ್ರಜ್ಞೆ ಜಾಗೃತವಾಯಿತು. ಬೆಳಗಾವಿಯ ವಿಷಯ ರಾಜ್ಯದಾದ್ಯಂತ ಪ್ರತಿಧ್ವನಿಸಿತು. ರಕ್ಷಣಾ ವೇದಿಕೆಯ ವರ್ತನೆಯನ್ನು ಕೆಲವು ಮಂದಿ ಟೀಕಿಸಿದರೂ ಕೂಡ ಬಹುಸಂಖ್ಯಾತರೂ ಬೆಂಬಲಿಸಿದರು. ಅದೇ ಉತ್ಸಾಹದಲ್ಲೇ ನಗರಪಾಲಿಕೆಯ ಮೇಲೆ ಹಾರಿಸಲಾಗಿದ್ದ ಎಂ.ಇ.ಎಸ್. ಬಾವುಟವನ್ನೂ ಕಿತ್ತೆಸೆದು, ಕನ್ನಡ ಬಾವುಟವನ್ನು ಹಾರಿಸಲಾಯಿತು.
ಆನಂತರ ನಿರಂತರ ಹೋರಾಟ ನಡೆಯಿತು. ಹೋರಾಟದ ಫಲವಾಗಿ ರಾಜ್ಯ ಸರ್ಕಾರ ನಗರಪಾಲಿಕೆ ಆಡಳಿತವನ್ನು ಸೂಪರ್ ಸೀಡ್ ಮಾಡಿತು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವ ಮೂಲಕ ಬೆಳಗಾವಿ ಕರ್ನಾಟಕದ ಅವಿಚ್ಛಿನ್ನ ಅಂಗವೆಂದು ಸಾರಿದರು. ಕಿತ್ತೂರು ಚೆನ್ನಮ್ಮರಂತ ಸ್ವಾಭಿಮಾನಿ ಮಹಿಳೆಯ ತವರು ಕರ್ನಾಟಕದ್ದೆಂಬ ಸ್ಪಷ್ಟ ಸಂದೇಶವನ್ನು ಮರಾಠಿಗರಿಗೆ ಕುಮಾರಸ್ವಾಮಿ ರವಾನಿಸಿದರು.
ಬೆಳಗಾವಿ ಕರ್ನಾಟಕದ ಉತ್ತರದ ರಾಜಧಾನಿ ಎಂದು ಬಿಂಬಿಸಲು ಈ ವಿಧಾನಸಭಾಧಿವೇಶನ ದಾರಿ ಮಾಡಿಕೊಟ್ಟಿತು. ಈ ಸತ್‌ಸಂಪ್ರದಾಯವನ್ನು ಮುಂದುವರೆಸಿದ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸಿದರು. ಬೆಳಗಾವಿ ಪರವಾದ ನಿರ್ಣಯವನ್ನೂ ಕೈಗೊಂಡಿದ್ದಲ್ಲದೇ, ಅಲ್ಲಿಯೇ ವಿಧಾನಸೌಧದಂತಹ ಕಟ್ಟಡ ನಿರ್ಮಾಣಕ್ಕೂ ಮುಂದಾದರು.
ರಕ್ಷಣಾ ವೇದಿಕೆಯ ಹೋರಾಟದ ಫಲ, ಸರ್ಕಾರಗಳು ತೋರಿದ ಇಚ್ಛಾಶಕ್ತಿಯಿಂದ ಇತ್ತೀಚೆಗೆ ನಡೆದ ಬೆಳಗಾವಿ ನಗರಪಾಲಿಕೆ ಚುನಾವಣೆಯಲ್ಲಿ ಕನ್ನಡಿಗರೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮರಾಠಿಗರ ಬೆಂಬಲ ಪಡೆದಿದ್ದ ಎಂ ಇ ಎಸ್ ಮಣ್ಣು ಮುಕ್ಕಿದ್ದು, ಕನ್ನಡಿಗರು ಪ್ರಾಬಲ್ಯ ಮೆರೆದಿದ್ದಾರೆ. ಅಷ್ಟರಮಟ್ಟಿಗೆ ರಕ್ಷಣಾ ವೇದಿಕೆಯ ಹೋರಾಟ ಸಾಫಲ್ಯ ಕಂಡಿದೆ.
ಹಾಗಿದ್ದೂ ಬೆಳಗಾವಿಯ ವಿಷಯ ಇತ್ಯರ್ಥವಾಗಿಲ್ಲ. ಗಡಿ ಭಾಗದಲ್ಲಿ ಮೇಳಾವ, ಮಹಾಮೇಳಾವ ನಡೆಸುತ್ತಿರುವ ಎಂ ಇ ಎಸ್ ಬೆಳಗಾವಿಯ ಹಕ್ಕು ಪ್ರತಿಪಾದಿಸಲು ಯತ್ನಿಸುತ್ತಲೇ ಇದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಛಗನ್ ಭುಜಬಲ್, ಗೃಹಸಚಿವ ಪಾಟೀಲ್ ಮೊದಲಾದವರು ಕ್ಯಾತೆಯನ್ನು ಮುಂದುವರೆಸುತ್ತಲೇ ಇದ್ದಾರೆ. ಮಹಾರಾಷ್ಟ್ರ ಕ್ಯಾತೆ ತೆಗೆದಾಗಲಷ್ಟೇ ಗರ್ಜಿಸುವ ರಾಜ್ಯ ಸರ್ಕಾರ ನಂತರ ಸುಮ್ಮನಾಗಿದೆ. ಮೊದಲ ವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದ ಯಡಿಯೂರಪ್ಪನವರು ಕಳೆದ ವರ್ಷ ಕುಂಟುನೆಪವೊಡ್ಡಿ ಬೆಳಗಾವಿ ಅಧಿವೇಶನವನ್ನು ರದ್ದುಗೊಳಿಸಿದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಚುನಾವಣೆಯಲ್ಲಿ ಅಲ್ಲಿನ ಬಿಜೆಪಿಗೆ ಹಿನ್ನಡೆಯಾಗದಿರಲಿ ಎಂದೇ ಅಧಿವೇಶನ ನಡೆಸಿರಲಿಲ್ಲ ಎಂಬುದು ಬೇರೆ ಮಾತು.
ಮಹಾಜನ್ ವರದಿ: ಏನು ಎತ್ತ?
ಬೆಳಗಾವಿ ವಿಷಯದಲ್ಲಿ ಐತೀರ್ಪು ಅಥವಾ ಇದಮಿತ್ಥಂ ಎಂದು ಹೇಳಬಹುದಾಗಿದ್ದು ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ಆಯೋಗದ ವರದಿ. ಕರ್ನಾಟಕ-ಕೇರಳ-ಮಹಾರಾಷ್ಟ್ರ ಗಡಿ ತಕರಾರಿನ ಬಗ್ಗೆ ಅಧ್ಯಯನ ನಡೆಸಿ ಮಹಾಜನ್ ರೂಪಿಸಿದ ವರದಿ ಐತಿಹಾಸಿಕ ದಾಖಲೆಯಾಗಿದೆ. ಮಹಾಜನ್ ವರದಿ ಸಲ್ಲಿಸುವವರೆಗೆ ಅದೇ ಅಂತಿಮ ತೀರ್ಪೆಂದು ಹೇಳುತ್ತಿದ್ದ ಮಹಾರಾಷ್ಟ್ರ ’ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದೆಂದು ಮಹಾಜನ್ ದಾಖಲೆ ಸಮೇತ’ ಋಜುವಾತು ಪಡಿಸಿದ ತರವಾಯ ವರಸೆ ಬದಲಿಸಲು ಆರಂಭಿಸಿತು. ಅದೇ ಈಗ ವಿವಾದಕ್ಕೆ ಕಾರಣವಾಗಿರುವ ಸಂಗತಿಯಾಗಿದೆ.
ಮಹಾಜನ್ ಆಯೋಗವನ್ನು ನೇಮಿಸಲು ಒತ್ತಾಯಿಸಿದ್ದು ಕರ್ನಾಟಕವಲ್ಲ. ಬದಲಿಗೆ ಮಹಾರಾಷ್ಟ್ರವೇ. ಕರ್ನಾಟಕವೆಂಬುದು ಘೋಷಣೆಯಾಗದೇ ಇದ್ದ ಹೊತ್ತಿನಲ್ಲಿ ಅಸ್ತಿತ್ವದಲ್ಲಿದ್ದ ಮೈಸೂರು ಸರ್ಕಾರ ಹಾಗೂ ಆಗಿನ ವಿರೋಧ ಪಕ್ಷಗಳ ಪ್ರಬಲ ವಿರೋಧದ ಮಧ್ಯೆಯೂ ಕೇಂದ್ರ ಸರ್ಕಾರ ಮಹಾಜನ್ ನೇತೃತ್ವದ ಆಯೋಗವನ್ನು ರಚಿಸಿ, ಕರ್ನಾಟಕ-ಮಹಾರಾಷ್ಟ್ರ-ಕೇರಳದ ಮಧ್ಯೆ ಇದ್ದ ಗಡಿ ತಕರಾರಿನ ಬಗ್ಗೆ ಸಮಗ್ರ ವರದಿ ಸಲ್ಲಿಸಲು ನಿವೇದಿಸಿಕೊಂಡಿತ್ತು.
ಸ್ವಾತಂತ್ರ್ಯಪೂರ್ವದಲ್ಲಾಗಲಿ, ಮಹಾತ್ಮಗಾಂಧಿ ಸಮ್ಮುಖದಲ್ಲಿ ನಡೆದ ೧೯೨೪ರ ಐತಿಹಾಸಿಕ ಬೆಳಗಾವಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ ಕೂಡ ಬೆಳಗಾವಿಯ ವಿಷಯ ಚರ್ಚೆಯ ಸಂಗತಿಯಾಗಿರಲೇ ಇಲ್ಲ. ಎಐಸಿಸಿ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣ ಹೋರಾಟದ ಮುಂಚೂಣಿಯ ಕರ್ತೃಗಳಲ್ಲಿ ಒಬ್ಬರಾದ ಹುಯಿಲಗೋಳ ನಾರಾಯಣರು ರಚಿಸಿದ ’ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಹಾಡು ಮಾರ್ದನಿಸಿತ್ತು. ಆಗ ೧೦ ವರ್ಷದವರಾಗಿದ್ದ ಗಂಗೂಬಾಯಿ ಹಾನಗಲ್ ಗಾಂಧೀಜಿ ಸಮ್ಮುಖದಲ್ಲೇ ಈ ಗೀತೆಯನ್ನು ಹಾಡಿದ್ದರು. ಕರ್ನಾಟಕದ ಹೆಮ್ಮೆಯನ್ನು ಸಾರಿದ್ದರು. ಆಗಲೂ ಯಾವುದೇ ತಕರಾರು ಮೂಡಿರಲಿಲ್ಲ.
ಆ ಕಾಲದಲ್ಲಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು ರಚನೆಯಾಗಿರಲಿಲ್ಲ. ಮಹಾರಾಷ್ಟ್ರ ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿದ್ದರೆ, ಕರ್ನಾಟಕ ಮೈಸೂರು ಹಾಗೂ ಹೈದರಾಬಾದ್ ಪ್ರಾಂತ್ಯಗಳಲ್ಲಿ ಹಂಚಿಹೋಗಿತ್ತು.
ಕನ್ನಡಿಗರ ಸ್ವಾಭಿಮಾನದ ಹೋರಾಟದ ಫಲವಾಗಿ ೧೯೫೬ರ ನವೆಂಬರ್ ೧ರಂದು ಮೈಸೂರು ಸ್ವತಂತ್ರ್ಯ ರಾಜ್ಯವೆಂದು ಕರೆಸಿಕೊಂಡಿತು. ಕರ್ನಾಟಕ ಏಕೀಕರಣದ ಮೊದಲ ಮಜಲು ಇದಾಗಿತ್ತು. ಆಗಲೂ ಕೂಡ ಮಹಾರಾಷ್ಟ್ರ ಉದಯವಾಗಿರಲಿಲ್ಲ.
ಫಜಲ್ ಅಲಿ ಕಮೀಶನ್ ಅಥವಾ ರಾಜ್ಯ ಪುನರ್ವಿಂಗಡಣಾ ಆಯೋಗದ ಶಿಫಾರಸ್ಸಿನ ಮೇರೆಗೆ ೧೯೫೬ರಲ್ಲಿ ರಾಜ್ಯಗಳು ಪುನರ್ವಿಂಗಡಣೆಯಾದ ಮೇಲೆ ಯಾವ ಭಾಗ ಯಾವ ರಾಜ್ಯಕ್ಕೆ ಸೇರಬೇಕೆಂಬ ಚರ್ಚೆ ಶುರುವಾಯಿತು. ಜನರಾಡುವ ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯಾದಾಗ ಕನ್ನಡ, ಮಲೆಯಾಳಿ, ಮರಾಠಿ, ತೆಲುಗು ಮಾತನಾಡುವ ಅನೇಕ ಪ್ರದೇಶಗಳ ಜನ ಗಡಿ ಭಾಗದ ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿ ಹೋದರು. ಫಜಲ್ ಅಲಿ ಆಯೋಗ ಕೂಡ ಬೆಳಗಾವಿಯನ್ನು ಕರ್ನಾಟಕದಲ್ಲೇ ಉಳಿಸಿತ್ತು.
ಆನಂತರ ಶುರುವಾದ ತಕರಾರುಗಳನ್ನು ಪರಿಶೀಲಿಸಿ, ಜನರನ್ನು ಸಮಾಧಾನ ಮಾಡಲು ಧಾರ್ ಆಯೋಗ ಹಾಗೂ ಜೆವಿಪಿ ಕಮೀಶನ್ ಎಂದೇ ಖ್ಯಾತವಾದ ಜವಾಹರ್ ಲಾಲ್ ನೆಹರು, ವಲ್ಲಭಬಾಯ್ ಪಟೇಲ್ ಹಾಗೂ ಪಟ್ಟಾಭಿ ಸೀತಾರಾಮಯ್ಯ ಅವರನ್ನೊಳಗೊಂಡ ಆಯೋಗಗಳು ರಚನೆಗೊಂಡವು. ಧಾರ್ ಹಾಗೂ ಜೆವಿಪಿ ಆಯೋಗಗಳು ಬೆಳಗಾವಿಯು ಕರ್ನಾಟಕದ್ದೇ ಎಂದು ಸ್ಪಷ್ಟವಾಗಿ ಹೇಳಿವೆ.
ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಉಂಟಾದ ತಕರಾರನ್ನು ಎರಡೂ ರಾಜ್ಯಗಳೂ ಬಗೆಹರಿಸಿಕೊಳ್ಳಲಾಗದೇ ಇದ್ದ ಪರಿಸ್ಥಿತಿ ನಿರ್ಮಾಣವಾಯಿತು. ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮುಂಚೂಣಿ ಪಾತ್ರವಹಿಸಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಎಲ್ಲಾ ವಿಷಯಗಳಲ್ಲೂ ನಿರ್ಣಾಯಕವಾಗಿತ್ತು. ಎ ಐ ಸಿಸಿ ತೀರ್ಮಾನಕ್ಕೆ ಎಲ್ಲಾ ರಾಜ್ಯಗಳೂ ತಲೆಬಾಗುತ್ತಿದ್ದವು.
೧೯೬೫-೬೬ರ ಆಸುಪಾಸಿನಲ್ಲಿ ಮಹಾರಾಷ್ಟ್ರ-ಕರ್ನಾಟಕದ ಗಡಿ ತಕರಾರು ಎರಡೂ ಸರ್ಕಾರಗಳಲ್ಲಿ, ಕಾಂಗ್ರೆಸ್ ಸಭೆಗಳಲ್ಲಿ ತೀವ್ರ ಚರ್ಚೆಗೆ ಒಳಗಾಯಿತು. ೧೯೬೫ರಲ್ಲಿ ಬೆಂಗಳೂರಿನಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಚರ್ಚೆಗೆ ನಡೆದು, ಎರಡೂ ರಾಜ್ಯಗಳು ಸರ್ವಸಮ್ಮತ ತೀರ್ಮಾನಕ್ಕೆ ಬರಲು ಸಾಧ್ಯವಾಗದೇ ಇರುವುದರಿಂದ ಎ ಐ ಸಿಸಿಯೇ ಇದಕ್ಕೆ ಪರಿಹಾರ ಕಲ್ಪಿಸಬೇಕೆಂಬ ನಿರ್ಣಯವನ್ನೂ ಕೈಗೊಳ್ಳಲಾಯಿತು.
೧೯೬೬ರಲ್ಲಿ ಮುಂಬೈಯ ಷಣ್ಮುಗಾನಂದ ಭವನನಲ್ಲಿ ತಮಿಳುನಾಡು ಮುಖ್ಯಮಂತ್ರಿಯೂ ಆಗಿದ್ದ ಎಐಸಿಸಿ ಅಧ್ಯಕ್ಷ ಕೆ. ಕಾಮರಾಜ್ ಅಧ್ಯಕ್ಷತೆಯಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ಆಯೋಜನೆಗೊಂಡಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ವಸಂತ್ ಪಿ ನಾಯಕ್, ಕೇಂದ್ರ ರಕ್ಷಣಾ ಸಚಿವರಾಗಿದ್ದ ಮಹಾರಾಷ್ಟ್ರದವರೇ ಆದ ವೈ.ಬಿ. ಚವ್ಹಾಣ್, ಸದೋಬ ಪಾಟೀಲ್ ಮತ್ತಿತರ ಮಹಾರಾಷ್ಟ್ರ ನಾಯಕರು ಸಮಸ್ಯೆ ಇತ್ಯರ್ಥಕ್ಕೆ ಏಕಸದಸ್ಯ ಆಯೋಗವನ್ನು ರಚಿಸುವಂತೆ ಆಗ್ರಹಿಸಿದರು. ರಾಷ್ಟ್ರೀಯ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟ ಎಐಸಿಸಿ ಏಕಸದಸ್ಯ ಆಯೋಗವನ್ನು ರಚಿಸುವುದಾಗಿ ನಿರ್ಣಯ ಕೈಗೊಂಡಿತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಿದ್ದವನಹಳ್ಳಿ ನಿಜಲಿಂಗಪ್ಪ ಇದನ್ನು ಸ್ಪಷ್ಟವಾಗಿ ವಿರೋಧಿಸಿದ್ದರು.
ಎಐಸಿಸಿ ಶಿಫಾರಸ್ಸಿನ ಮೇರೆಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಮೆಹರ್‌ಚಂದ್ ಮಹಾಜನ್‌ರ ನೇತೃತ್ವದ ಏಕ ಸದಸ್ಯ ಆಯೋಗವನ್ನು ಕೇಂದ್ರ ಸರ್ಕಾರ ರಚಿಸಿತು. ಮಹಾಜನ್‌ರವರು ಈ ಹಿಂದೆ ಕಾಶ್ಮೀರ ಗಡಿಯನ್ನು ನಿರ್ಣಯಿಸುವ ಆಯೋಗದ ನೇತೃತ್ವವನ್ನೂ ವಹಿಸಿದ್ದವರು.
ಮೂರು ರಾಜ್ಯಗಳ ಗಡಿಭಾಗದಲ್ಲಿ ಓಡಾಡಿದ ಮಹಾಜನ್‌ರವರು, ವಿವಾದಿತ ಪ್ರದೇಶಗಳ ಜನರನ್ನು, ರಾಜಕೀಯ ನಾಯಕರನ್ನು, ಸಂಘಸಂಸ್ಥೆಗಳ ಪ್ರಮುಖರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ಬ್ರಿಟಿಶರ ಆಡಳಿತಾವಧಿಯಲ್ಲಿ ರವಾನೆಯಾಗಿದ್ದ, ದಾಖಲಾಗಿದ್ದ ಸರ್ಕಾರಿ ಕಡತಗಳನ್ನು ಪರಿಶೀಲಿಸಿ ಸಂಗ್ರಹಿಸಿದರು. ಎಲ್ಲವನ್ನೂ ಆಮೂಲಾಗ್ರವಾಗಿ ಅಧ್ಯಯನ ಮಾಡಿ ೧೯೬೭ರ ಆಗಸ್ಟ್ ೨೭ರಂದು ಕೇಂದ್ರ ಗೃಹಖಾತೆಗೆ ವರದಿಯನ್ನು ಸಲ್ಲಿಸಿದರು.
ಏಕಸದಸ್ಯ ಆಯೋಗದ ರಚನೆಗಾಗಿ ಒತ್ತಾಯಿಸಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ವಸಂತ್ ಪಿ ನಾಯಕ್, ಕೇಂದ್ರ ರಕ್ಷಣಾ ಸಚಿವ ವೈ.ಬಿ. ಚವ್ಹಾಣ್ ಮೊದಲಾದವರು ಮಹಾರಾಷ್ಟ್ರವು ಮಹಾಜನ್ ವರದಿಯ ಶಿಫಾರಸ್ಸಿಗೆ ಶಿರಬಾಗಿ ಬದ್ಧವಾಗಿರುತ್ತದೆ ಎಂದು ಘೋಷಿಸಿದ್ದರಲ್ಲದೇ, ಎಐಸಿಸಿ ತೀರ್ಮಾನಕ್ಕೆ ಉಭಯರಾಜ್ಯಗಳು ಬದ್ಧವಾಗಿರಬೇಕೆಂದು ಕರೆ ನೀಡಿದ್ದರು.
ಆಯೋಗದ ರಚನೆಯನ್ನು ವಿರೋಧಿಸಿದ್ದ ಕರ್ನಾಟಕದ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಆ ತರುವಾಗ ಮಹಾಜನ್ ವರದಿಯನ್ನು ಪಾಲಿಸುವುದಾಗಿ ಹೇಳಿದ್ದರು. ಅದರಂತೆ ೧೯೬೭ ಡಿಸೆಂಬರ್ ೨೦ರಂದು ನಡೆದ ಕರ್ನಾಟಕ ವಿಧಾನ ಮಂಡಲದ ಅಧಿವೇಶನವು ಸರ್ವಾನುಮತದ ನಿರ್ಣಯ ಕೈಗೊಂಡು, ಮಹಾಜನ್ ವರದಿಯನ್ನು ಅನುಷ್ಠಾನ ಮಾಡುವಂತೆ ಕೇಂದ್ರವನ್ನು ಕೋರಿತು.
ಏನಿತ್ತು ವರದಿ?
ಮಹಾಜನ್ ನೀಡಿದ ವರದಿ ಪ್ರಕಾರ ಕನ್ನಡಿಗರೇ ಹೆಚ್ಚಾಗಿರುವ ಸೊಲ್ಲಾಪುರ, ಅಕ್ಕಲಕೋಟೆ, ಜತ್ ಸೇರಿದಂತೆ ೩೦೦ ಹಳ್ಳಿಗಳು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸೇರಬೇಕು. ಅದೇ ರೀತಿ ಅರಣ್ಯ ಸಂಪತ್ತಿನ ಆಗರವಾಗಿರುವ ಕರ್ನಾಟಕದಲ್ಲಿರುವ ಖಾನಾಪುರ, ನಿಪ್ಪಾಣಿ, ವೀರರಾಣಿ ಚೆನ್ನಮ್ಮನ ತವರು ಕಿತ್ತೂರು ಸೇರಿದಂತೆ ೨೪೦ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹೇಳಲಾಗಿತ್ತು.
ಆದರೆ ಬೆಳಗಾವಿಯನ್ನು ಭೌಗೋಳಿಕವಾಗಿ ಅಚ್ಚ ಕನ್ನಡ ಪ್ರದೇಶಗಳು ಸುತ್ತುವರೆದಿದ್ದು, ಅದು ಕರ್ನಾಟಕಕ್ಕೆ ಸೇರಬೇಕೆಂದು ಮಹಾಜನ್ ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಬೆಳಗಾವಿಯ ದಾಖಲೆಗಳೆಲ್ಲಾ ಕನ್ನಡದಲ್ಲಿದ್ದು, ಆಗಿನ ಅಮಲ್ದಾರ್, ಕಲೆಕ್ಟರ್ ಕನ್ನಡದಲ್ಲೇ ರೆಕಾರ್ಡ್ಸ್ ಆಫ್ ರೈಟ್ಸ್‌ಗಳನ್ನು ಬರೆದಿಟ್ಟಿದ್ದಾರೆಂದು ವಿವರಿಸಿದ್ದರು.
ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವುದಿಲ್ಲವೆಂಬ ಖಚಿತ ವರದಿಯನ್ನು ನೋಡಿದ ಮಹಾರಾಷ್ಟ್ರದ ಮುಖ್ಯಮಂತ್ರಿ ವಸಂತ್ ಪಿ ನಾಯಕ್ ಹಾಗೂ ಆಗಿನ ರಕ್ಷಣಾ ಸಚಿವ ವೈ.ಬಿ. ಚವ್ಹಾಣ್ ಮಾತು ಬದಲಿಸಿದರು. ಅದೇ ಅಂತಿಮ ಎಂದು ಹೇಳುತ್ತಿದ್ದವರು ಅದನ್ನು ಒಪ್ಪುವುದಿಲ್ಲವೆಂದರು. ಮಹಾರಾಷ್ಟ್ರದ ಸೇನಾಪತಿ ಬಾಪಟ್ ಎಂಬುವರು ೧೯೬೭ರ ಅಕ್ಟೋಬರ್‌ನಲ್ಲಿ ಹೋರಾಟವನ್ನು ಆರಂಭಿಸಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮಹಾಜನ್ ವರದಿ ಉಲ್ಲೇಖಿಸಬೇಕೆಂದು ಒತ್ತಾಯಿಸಿದ್ದೂ ನಡೆಯಿತು.
ಅಂದಿನಿಂದ ಶುರುವಾದ ಮರಾಠಿಗರ ಉಪಟಳ ಇಂದೂ ಕೂಡ ಮುಂದುವರೆದಿದೆ. ಆಗಿನ ಮುಖ್ಯಮಂತ್ರಿ ವಸಂತ್ ನಾಯಕ್‌ರಿಂದ ಹಿಡಿದು ಈಗಿನ ಮುಖ್ಯಮಂತ್ರಿ ಅಶೋಕ್ ಚವ್ಹಾಣ್‌ವರೆಗೆ ಎಲ್ಲರೂ ಬೆಳಗಾವಿಯ ವಿಷಯದಲ್ಲಿ ತಮ್ಮ ನಿಲುವು ಬದಲಿಸಲಿಲ್ಲ. ಮಹಾಜನ ವರದಿಯನ್ನು ಒಪ್ಪಿಕೊಂಡೇ ಇಲ್ಲ.
ಕರ್ನಾಟಕ ಮಾತ್ರ ತನ್ನ ಭಾಗವನ್ನೂ ಉಳಿಸಿಕೊಳ್ಳಲು ಹೆಣಗಾಡುತ್ತಲೇ ಇದೆ. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ, ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ ತಮ್ಮದೇ ಪಕ್ಷದ ಸರ್ಕಾರವಿದ್ದಾಗ ಕೇಂದ್ರದ ಮೇಲೆ ಒತ್ತಡವನ್ನು ಹಾಕಿದ್ದಾರೆ. ಮಹಾರಾಷ್ಟ್ರದ ಸಂಸದರು, ಕೇಂದ್ರ ಸರ್ಕಾರದಲ್ಲಿ ಪ್ರಾಬಲ್ಯ ಹೊಂದಿರುವ ಸಚಿವರು ಕೇಂದ್ರ ಸರ್ಕಾರದಲ್ಲಿ ಈವರೆಗೂ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬೆಳಗಾವಿಯ ಸಂಗತಿ ಇನ್ನೂ ಇತ್ಯರ್ಥವಾಗಿಲ್ಲ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎಂ ಇ ಎಸ್, ಎನ್‌ಸಿಪಿ ಹೀಗೆ ಎಲ್ಲಾ ಪಕ್ಷದವರೂ ಬೆಳಗಾವಿಗಾಗಿ ಪಟ್ಟು ಹಿಡಿದಿದ್ದಾರೆ. ಅವಶ್ಯಕತೆ ಬಿದ್ದಾಗಲೆಲ್ಲಾ ಕೇಂದ್ರದ ಮೇಲೆ ಒತ್ತಡ ಹಾಕುತ್ತಲೇ ಇದ್ದಾರೆ.
ಆದರೆ ನಮ್ಮ ರಾಜ್ಯದ ಸಂಸದರ ನಿರ್ಲಕ್ಷ್ಯ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಬೆಳಗಾವಿಯ ಹಿತ ಕಾಪಾಡುವಲ್ಲಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿಗಳಾಗಿದ್ದವರು ಪತ್ರ ಬರೆವ ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕಿದರೆ ಸಾಲದು. ಕೇಂದ್ರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಜನಾಂದೋಲನ ಅಥವಾ ದೆಹಲಿ ಮಟ್ಟದ ಲಾಬಿ ಮಾಡಬೇಕು. ರಾಜ್ಯದಲ್ಲಿರುವ ಸರ್ಕಾರಗಳು ಅದನ್ನು ಮಾಡುವುದರಿಂದ ಮಾತ್ರ ಬೆಳಗಾವಿ ಉಳಿಯಬಲ್ಲದು.
ಯಾರು ಹೊಣೆ?
ಕರ್ನಾಟಕದಲ್ಲಿ ೧೯ ಸಂಸದರನ್ನು ಹೊಂದಿರುವ ಬಿಜೆಪಿ ಈಗಲಾದರೂ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಸಂಸತ್‌ನಲ್ಲಿ ಬೆಳಗಾವಿಯ ಪರವಾದ ಧ್ವನಿ ಎತ್ತಬೇಕು. ಆಗ ಮಾತ್ರ ಕರ್ನಾಟಕದ ಜನತೆ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ಸಾರ್ಥಕತೆ ಅನುಭವಿಸಿಯಾರು. ಕೇಂದ್ರ ಮಟ್ಟದಲ್ಲಿ ಪ್ರಭಾವಿಯಾಗಿರುವ, ಕೇಂದ್ರ ಸಚಿವರೂ ಆಗಿದ್ದ ಅನಂತಕುಮಾರ್, ಮಾಜಿ ಕಾನೂನು ಸಚಿವ ಡಿ.ಬಿ. ಚಂದ್ರೇಗೌಡ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರಾದರೂ ಎಲ್ಲಾ ಸಂಸದರನ್ನು ಒಗ್ಗೂಡಿಸಿ ಕೇಂದ್ರವನ್ನು ಮಣಿಸುವ ಕೆಲಸ ಮಾಡಬೇಕು.
ಅದು ಅವರ ಹೊಣೆ ಮಾತ್ರವಲ್ಲ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕಕ್ಕೆ ಸಿಗದಷ್ಟು ಪ್ರಾತಿನಿಧ್ಯ ಈ ಬಾರಿಯ ಕೇಂದ್ರ ಸಚಿವ ಸಂಪುಟದಲ್ಲಿ ಇದೆ. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಕೇಂದ್ರ ವಿದೇಶಾಂಗ ಸಚಿವರಾಗಿದ್ದಾರೆ. ಮತ್ತೋರ್ವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಬೆಳಗಾವಿಯ ವಿಷಯವನ್ನು ಕಾನೂನು ಪ್ರಕಾರ ಇತ್ಯರ್ಥ ಪಡಿಸುವ ಅಧಿಕಾರ ಹೊಂದಿದ ಕಾನೂನು ಸಚಿವರಾಗಿದ್ದಾರೆ. ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಸಚಿವರಾಗಿದ್ದು, ಕೋಲಾರದ ಹಿರಿಯ ರಾಜಕಾರಣಿ ಮುನಿಯಪ್ಪ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ.
ಎಐಸಿಸಿಯಲ್ಲಿ ತನ್ನದೇ ಆದ ಪ್ರಭಾವಹೊಂದಿರುವ ಆಸ್ಕರ್ ಫರ್ನಾಂಡೀಸ್, ಬಿ.ಕೆ. ಹರಿಪ್ರಸಾದ್ ರಾಜ್ಯಸಭಾ ಸದಸ್ಯರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಸಂಸದರಾಗಿದ್ದಾರೆ. ಇವರೆಲ್ಲರೂ ಒಕ್ಕೊರಲಿನಿಂದ ಕೂಗಿದರೆ ಎಐಸಿಸಿ ಮಹಾರಾಷ್ಟ್ರ ಸರ್ಕಾರವನ್ನು ಮಣಿಸುವುದು ಅಸಾಧ್ಯದ ಸಂಗತಿಯಲ್ಲ. ರಾಜ್ಯದ ಹಿತದೃಷ್ಟಿಯಿಂದ ಎಐಸಿಸಿ ಮೇಲೆ ಒತ್ತಡ ಹಾಕುವ ಗೈರತ್ತನ್ನು ಕಾಂಗ್ರೆಸ್ ಮುಖಂಡರು ತೋರಬೇಕಾಗಿದೆ.
ಜೆಡಿಎಸ್ ಪಕ್ಷದಲ್ಲಿ ಕೂಡ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಸದರಾಗಿದ್ದಾರೆ. ದೇವೇಗೌಡರು, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಅನುಭವ ಹೊಂದಿದವರು. ತಮ್ಮ ಅನುಭವ, ಹೋರಾಟದ ಛಲವನ್ನು ಕೇಂದ್ರ ಮಟ್ಟದಲ್ಲಿ ರಾಜ್ಯದ ಹಿತಕ್ಕಾಗಿ ಬಳಸುವ ಕಾಳಜಿಯನ್ನು ದೇವೇಗೌಡರು ತೋರಬೇಕಾಗಿದೆ.
ಬೆಳಗಾವಿ ಕರ್ನಾಟಕದ್ದೇ. ಕರ್ನಾಟಕದ್ದೇ ಆಗಿ ಉಳಿಯಬೇಕು. ಮರಾಠಿಗರ ಸೊಲ್ಲು ಅಡಗಬೇಕು. ಅದಕ್ಕೆ ರಾಜಕಾರಣಿಗಳು, ಹೋರಾಟಗಾರರು, ಸಂಘಸಂಸ್ಥೆಗಳು, ಆಡಳಿತಾರೂಢರು, ಸಮಸ್ತ ಕನ್ನಡಿಗರು ಒಂದಾಗಿ, ಒಮ್ಮನಸ್ಸಿನಿಂದ ಕೂಡಿ ಹೋರಾಡಬೇಕಿದೆ.
ಖುಷಿ. ಜೆ.ಎಸ್.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
June
(18)
- ಅಪಘಾತವಲ್ಲ, ಸಾಮೂಹಿಕ ಕೊಲೆ!
- ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು
- ಪ್ರತಿಗ್ರಾಮದಲ್ಲಿ ಭಾರತದ ಕೇಂದ್ರ ಇದೆ
- ಹೊಗೇನಕಲ್ ನಮ್ಮದು ಸಾಕ್ಷಿ ಇಲ್ಲಿದೆ!
- ಚಾಮರಾಜನಗರದಲ್ಲಿ ರಣಘೋಷ
- ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆಗಳ ವಾಪಸಾತಿ ಮುಖ್ಯಮಂತ್...
- ಕರ್ನಾಟಕ ಮಾರಾಟಕ್ಕಿದೆ!
- ಹೊರನಾಡಲ್ಲಿ ಕನ್ನಡದ ತೇರನೆಳೆವರು
- ಮುಗಿಯದ ಯುದ್ಧ ಬೆಳಗಾವಿ ನಮ್ಮದು
- ಈ ಸಾವು ನ್ಯಾಯವೇ?
- ರಂಗದಲ್ಲಿ ಮದುಮಗಳು
- ಭರವಸೆ ಭಿತ್ತಿದ ಮಹಾಬೆಳಕು ಸಿದ್ಧಗಂಗಾ ಡಾ.ಶ್ರೀ ಶಿವಕುಮಾರ ...
- ಸೇವಾ ಕೈಂಕರ್ಯಗಳ ಹರಿಕಾರ ಆದಿಚುಂಚನಗಿರಿ ಶ್ರೀ
- ಕರವೇಯಿಂದ ಕಂಕಣಭಾಗ್ಯ
- ರೈತರ ಕಿಂದರಿಜೋಗಿಯ ಇನ್ನಷ್ಟು ನೆನಪುಗಳು...
- ಸಿ.ಬಿ.ಎಸ್.ಇ ಹೇರುವ ಹುನ್ನಾರ!
- ಮರೆಯಲಾಗದ ವಿಷ್ಣು
- ‘ನಲ್ನುಡಿಗೆ ನೀವೇ ಸ್ಫೂರ್ತಿ...
-
▼
June
(18)
No comments:
Post a Comment