Friday, June 4, 2010
ಕರವೇಯಿಂದ ಕಂಕಣಭಾಗ್ಯ
ಉತ್ತರ ಕರ್ನಾಟಕದ ಹೃದಯ ಭಾಗದಲ್ಲಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಮೇ ೧೫ರಂದು ಕರ್ನಾಟಕ ರಕ್ಷಣಾ ವೇದಿಕೆಯು ನಡೆಸಿಕೊಟ್ಟ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಸಮಾರಂಭ, ನೆರೆ ಸಂತ್ರಸ್ತರಾಗಿದ್ದ ಹಾಗೂ ಬಡತನದಲ್ಲಿರುವ ಆ ಭಾಗದ ಜನರಿಗೆ ಸಂತಸ ಹಾಗೂ ನೆಮ್ಮದಿಯನ್ನು ನೀಡಿದೆ. ವಧು-ವರರ ಪಾಲಕರಿಗೆ ಒಂದಿಷ್ಟು ಧೈರ್ಯತುಂಬಿ ಸಹಾಯ ಮಾಡಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿರುವ ಕರ್ನಾಟಕ ರಕ್ಷಣಾ ವೇದಿಕೆಯ ಈ ಕೆಲಸ ಅಲ್ಲ್ಲಿ ಸೇರಿದ್ದ ೪೦-೫೦ಸಾವಿರ ಜನರ ಮನದಲ್ಲಿ ಕೃತಜ್ಞತಾ ಭಾವ ಮೂಡಿಸಿದೆ.
ಸದಾ ಕಷ್ಟದಲ್ಲಿರುವ ಗದಗ ಜಿಲ್ಲೆಯ ಜನರಿಗೆ ಮದುವೆಯೆಂದರೆ ಗಾಯದ ಮೇಲೆ ಬರೆ ಎಳೆದಂತೆ. ಮನೆಯಲ್ಲಿ ಮದುವೆಯ ವಯಸ್ಸಿಗೆ ಬಂದ ಮಗ-ಮಗಳ ಮದುವೆ ಮಾಡುವುದೆಂದರೆ ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಈ ಜನತೆಗೆ ಕಷ್ಟಸಾಧ್ಯ. "ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು" ಎನ್ನುವ ಮಾತು ಮದುವೆ ಹಾಗೂ ಮನೆ ಕಟ್ಟುವ ಕೆಲಸದಲ್ಲಿ ಹಣ ಲೆಕ್ಕವಿಲ್ಲದಷ್ಟು ಖರ್ಚಾಗುವುದು ಒಂದೆಡೆಯಾದರೆ, ಆ ಕಾರ್ಯಕ್ಕೆ ಮೀಸಲಿಡುವ ಸಮಯ ವ್ಯರ್ಥವಾಗುವುದು ಇನ್ನೊಂದು ಕಡೆ ಅಂತಹದರಲ್ಲಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೋಣ ತಾಲೂಕಿನಲ್ಲಿ ಆದ ನಷ್ಟ ಬೇರೆ ಯಾವ ತಾಲೂಕಿನಲ್ಲೂ ಕಾಣಲು ಸಾಧ್ಯವಿಲ್ಲ. ಅನೇಕ ಹಳ್ಳಿಯಲ್ಲಿ ಜನರು ತಮ್ಮ ಆಸ್ತಿ-ಪಾಸ್ತಿ ಜಾನುವಾರುಗಳನ್ನು ಕಳೆದುಕೊಳ್ಳುವುದರ ಜೊತೆಗೆ
ಪ್ರಾಣಹಾನಿಯಾಗಿರುವುದನ್ನು ನಾವು ಕಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಕರವೇ ನಡೆಸಿಕೊಟ್ಟ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಕಷ್ಟದಲ್ಲಿರುವ
ಇಲ್ಲಿನ ಜನರ ಮನಸ್ಸಿಗೆ ಧ್ಯೆರ್ಯ ತುಂಬಿದೆ.
ಹಸಿರು ತೋರಣಗಳಿಂದ ಸಿಂಗಾರಗೊಂಡ ನಿಡಗುಂದಿ ಗ್ರಾಮ ಮದುವಣಗಿತ್ತಿಯಂತೆ ಕಾಣುತ್ತಿತ್ತು. ರೋಣ ತಾಲೂಕಿನಾದ್ಯಂತ ಸ್ವಾಗತಕ್ಕಾಗಿ ಹಾಕಿದ ಪೋಸ್ಟರ್ ಮತ್ತು ಬ್ಯಾನರ್‌ಗಳು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿತ್ತು. ವಿಶಾಲವಾದ ಮೈದಾನದಲ್ಲಿ ಮದುವೆ ಮಂಟಪ ನಿರ್ಮಾಣಗೊಂಡಿತ್ತು.
ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಆಗಮಿಸುತ್ತಿದ್ದರೆಂದು ವೇದಿಕೆಯಲ್ಲಿದ್ದ ವಧು-ವರರು ಸೇರಿದಂತೆ ಜಮಾಯಿಸಿದ್ದ ಅಸಂಖ್ಯಾ ಜನತೆ ಎದ್ದು ನಿಂತು ಚಪ್ಪಾಳೆ ಮೂಲಕ ಸ್ವಾಗತಿಸಿದ್ದು ಉರಿಯುತ್ತಿರುವ ಬಿಸಿಲಿನಲ್ಲಿ ಬೆಂದ ಜನತೆಗೆ ಮನಸ್ಸಿನಲ್ಲಿಯೇ ತಣ್ಣನೇ ಗಾಳಿ ಬೀಸುವಂತಾಗಿತ್ತು. ಇದಾದ ನಂತರ ಒಬ್ಬರ ಹಿಂದೆ ಮತ್ತೊಬ್ಬ ಸ್ವಾಮಿಗಳೂ ವೇದಿಕೆಯತ್ತ ಆಗಮಿಸುತ್ತಿದ್ದಂತೆ ಜನತೆಯ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಕರವೇಯ ದಶಮಾನೋತ್ಸವದ ಸವಿನೆನಪಿಗಾಗಿ ೭೧ ಜೋಡಿಗಳ ಉಚಿತ ಸರಳ ಸಾಮೂಹಿಕ ಮದುವೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ದುಂದು ವೆಚ್ಚದಿಂದ ಮಾಡಿಕೊಳ್ಳುವ ಮದುವೆಯಿಂದಾಗಿ ಅನೇಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ, ಅದನ್ನು ನಿವಾರಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ದಯವೇ ಧರ್ಮದ ಮೂಲವಯ್ಯಾ ಎಂದು ಬಸವಣ್ಣನವರು ಹೇಳಿದ ಹಾಗೆಯೇ, ಕರವೇ ಒಂದೆಡೆ ನಾಡಿನ ಹೋರಾಟ, ಇನ್ನೊಂದೆಡೆ ಕಷ್ಟದಲ್ಲಿರುವ ಕನ್ನಡಿಗರಿಗೇ ಧೈರ್ಯ, ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಪೂಜ್ಯರಾದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಹೋರಾಟ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯು ಪ್ರತಿ ವರ್ಷ ನಾಡಿನಾದ್ಯಂತ ಧರ್ಮ, ಜಾತಿಯನ್ನು ಮೀರಿ ಸಾವಿರಕ್ಕೂ ಹೆಚ್ಚು ಉಚಿತ ಸಾಮೂಹಿಕ ವಿವಾಹಗಳನ್ನು ಮಾಡುತ್ತಿರುವುದು ಈ ನಾಡಿನ ಮುಂಚೂಣಿಯಲ್ಲಿರುವ ಜನಪ್ರತಿನಿಧಿಗಳಿಗೆ ಆದರ್ಶವಾಗಬೇಕಾಗಿದೆ ಎಂದರು. ಮತೀಯವಾದವನ್ನು ಬಿಂಬಿಸುವ ಸಂಘಟನೆಗಳನ್ನು ತಿರಸ್ಕರಿಸಿ ನಾಡಪ್ರೇಮತ್ವ ಹೊಂದಿದ ಕರ್ನಾಟಕ ರಕ್ಷಣಾ ವೇದಿಕೆಯನ್ನು ಪ್ರತಿಯೊಬ್ಬರು ಸೇರುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಗಜೇಂದ್ರಗಡ, ಮೈಸೂರು ಮಠದ ಜಗದ್ಗುರು ಶ್ರೀಶ್ರೀಶ್ರೀ ವಿಜಯ ಮಹಾಂತ ಸ್ವಾಮಿಗಳು ಮಾತನಾಡಿ, ನಾಡಿನ ಜನತೆ ನಾರಾಯಣಗೌಡರ ಕೈಬಲ ಪಡಿಸಲು ಮುಂದಾದರೆ, ಈ ನಾಡಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ವೇದಿಕೆ ರಾಜ್ಯ ಉಪಾಧ್ಯಕ್ಷ ಹೆಚ್.ಎಸ್.ಸೋಂಪುರ ಮಾತನಾಡಿ, ಗದಗ ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಪ್ರತಿವರ್ಷ ಒಂದಲ್ಲ ಒಂದು ಜನಪರ ಕಾರ್ಯ ಮಾಡುತ್ತಿರುವುದಕ್ಕೆ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಸ್ಫೂರ್ತಿಯಾಗಿದ್ದಾರೆ ಎಂದರು.
ಅವರು ವಿಭಿನ್ನ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿ ಕರವೇ ಅತ್ಯಂತ ಬಲಿಷ್ಠ ಸಂಘಟನೆಯಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ನಿಡಗುಂದಿತೊಪ್ಪದ ಶಿವಯೋಗಮಂದಿರದ ಶಾಖಾಮಠದ ಪರಮಪೂಜ್ಯ ಶ್ರೀಶ್ರೀಶ್ರೀ ಶಿವಬಸವ ಮಹಾಸ್ವಾಮಿಗಳು ನರೇಗಲ್‌ದ ಹಿರೇಮಠದ ಶ್ರೀಶ್ರೀಶ್ರೀ ಷ.ಬ್ರ.ಮಲ್ಲಿಕಾರ್ಜುನ ಸ್ವಾಮಿಗಳು, ಇಡಗಿ ಧರ್ಮದ ಮಠದ ಶ್ರೀಶ್ರೀಶ್ರೀ ಷಣ್ಮಖಪ್ಪಜ್ಜನವರು, ಕರವೇ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಮಮತಾ, ಗದಗ ಜಿಲ್ಲಾಧ್ಯಕ್ಷ ದೀಪಕ್ ರಾಯಚೂರ್, ಬೆಂಗಳೂರು ಗಾರ್ಮೆಂಟ್ ನೌಕರ ಸಂಘದ ರಘುಗೌಡ, ಕೊಪ್ಪಳ ಜಿಲ್ಲಾಧ್ಯಕ್ಷ ಬಸವನಗೌಡ ಪೊಲೀಸ್ ಪಾಟೀಲ. ಹುಬ್ಬಳ್ಳಿ ನಗರ ಅಧ್ಯಕ್ಷ ಅಮೃತ ಇಜಾರೆ, ರೋಣ ತಾಲೂಕಾಧ್ಯಕ್ಷ ವಿರೇಶ ಬಿಚ್ಯೂರ, ನಿಡಗುಂದಿ ಗ್ರಾಮ ಘಟಕದ ಅಧ್ಯಕ್ಷ ಸಂಗಯ್ಯ ಬೂಸನೂರ ಮಠದವರಲ್ಲದೇ ಅನೇಕ ಕರವೇ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೊದಲಿಗೆ ಎಲ್ಲರನ್ನು ಶಿಕ್ಷಕ ಪಿ.ಕ. ಕರಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಬಿ.ತೆ.ಮಾದಿ ನಿರ್ವಹಿಸಿದರು.ಕೊನೆಯಲ್ಲಿ ಎಲ್ಲರಿಗೂ ಶರಣಪ್ಪ ಅಭಿನಂದಿಸಿದರು. ಮದುವೆ ಕಾರ್ಯದಲ್ಲಿ ಡಾ||ರಾಜ್‌ಕುಮಾರ್ ಧ್ವನಿಯಲ್ಲಿಯೇ ಜಿಲ್ಲಾ ಸಾಂಸ್ಕೃತಿಕ ಘಟಕದ ಕಾರ್ಯದರ್ಶಿ ಡಿ.ಜಿ.ಮೊಮಿನ ಹಾಡುಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು.
ವೇದಿಕೆಯ ಮೇಲೆ ಯಾವೊಬ್ಬ ರಾಜಕೀಯ ವ್ಯಕ್ತಿಗಳನ್ನು ಆಹ್ವಾನಿಸದಿರುವುದು ಜನರ ಪ್ರಶಂಸೆಗೆ ಕಾರಣವಾಯಿತು.
ವ್ಯವಸ್ಥಿತವಾದ ಪೆಂಡಾಲನ್ನು ಹಾಕಿ ಜನತೆಯ ಸಹಕಾರದಿಂದ ಯಶಸ್ವಿಯಾಗಿ ನಡೆದ ಮದುವೆಕಾರ್ಯ ಜಿಲ್ಲಾದ್ಯಂತ ಜನರ ಮೆಚ್ಚುಗೆಗೆ ಕಾರಣವಾದರೆ, ನಿಡಗುಂದಿ ಗ್ರಾಮದ ಎಲ್ಲ ಯುವಕ ಮಂಡಳಿಗಳು ಒಗ್ಗಟ್ಟಾಗಿ ಬಂದಂತಹ ಜನರಿಗೆ ಪ್ರೀತಿಯಿಂದ ಊಟ ಬಡಿಸಿ ಸತ್ಕರಿಸಿದ್ದು ವಿಶೇಷವಾಗಿತ್ತು.
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2010
(112)
-
▼
June
(18)
- ಅಪಘಾತವಲ್ಲ, ಸಾಮೂಹಿಕ ಕೊಲೆ!
- ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು
- ಪ್ರತಿಗ್ರಾಮದಲ್ಲಿ ಭಾರತದ ಕೇಂದ್ರ ಇದೆ
- ಹೊಗೇನಕಲ್ ನಮ್ಮದು ಸಾಕ್ಷಿ ಇಲ್ಲಿದೆ!
- ಚಾಮರಾಜನಗರದಲ್ಲಿ ರಣಘೋಷ
- ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆಗಳ ವಾಪಸಾತಿ ಮುಖ್ಯಮಂತ್...
- ಕರ್ನಾಟಕ ಮಾರಾಟಕ್ಕಿದೆ!
- ಹೊರನಾಡಲ್ಲಿ ಕನ್ನಡದ ತೇರನೆಳೆವರು
- ಮುಗಿಯದ ಯುದ್ಧ ಬೆಳಗಾವಿ ನಮ್ಮದು
- ಈ ಸಾವು ನ್ಯಾಯವೇ?
- ರಂಗದಲ್ಲಿ ಮದುಮಗಳು
- ಭರವಸೆ ಭಿತ್ತಿದ ಮಹಾಬೆಳಕು ಸಿದ್ಧಗಂಗಾ ಡಾ.ಶ್ರೀ ಶಿವಕುಮಾರ ...
- ಸೇವಾ ಕೈಂಕರ್ಯಗಳ ಹರಿಕಾರ ಆದಿಚುಂಚನಗಿರಿ ಶ್ರೀ
- ಕರವೇಯಿಂದ ಕಂಕಣಭಾಗ್ಯ
- ರೈತರ ಕಿಂದರಿಜೋಗಿಯ ಇನ್ನಷ್ಟು ನೆನಪುಗಳು...
- ಸಿ.ಬಿ.ಎಸ್.ಇ ಹೇರುವ ಹುನ್ನಾರ!
- ಮರೆಯಲಾಗದ ವಿಷ್ಣು
- ‘ನಲ್ನುಡಿಗೆ ನೀವೇ ಸ್ಫೂರ್ತಿ...
-
▼
June
(18)
No comments:
Post a Comment