Tuesday, February 8, 2011

ನಡೆದಾಡುವ ನಿಘಂಟು ಶಬ್ದರ್ಷಿ ಪ್ರೊ. ಜಿ.ವೆಂಕಟಸುಬ್ಬಯ್ಯಬನ್ನೂರು ಕೆ. ರಾಜು
ಸಾವಿರದ ಒಂಭೈನೂರ ಅರವತ್ತರ ದಶಕದ ಸಮಯ. ಸಾಹಿತಿಗಳ ಮಾತೃಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದ ಕಾಲವದು. ಪರಿಷತ್‌ನ ಆರ್ಥಿಕ ಪರಿಸ್ಥಿತಿ ಬಹಳ ಹೀನಾಯ ಸ್ಥಿತಿಯಲ್ಲಿತ್ತು. ಪರಿಷತ್‌ನಲ್ಲಿದ್ದ ನೌಕರರಿಗೆ ಕನಿಷ್ಟ ಸಂಬಳ ನೀಡುವುದಕ್ಕೂ ಆಗದಂತಹ ದುರ್ಗತಿ. ಆಗ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪೀಠದಲ್ಲಿ ಕುಳಿತು ಅದರ ಚುಕ್ಕಾಣಿ ಹಿಡಿದಿದ್ದ ವ್ಯಕ್ತಿಗೆ ಪರಿಷತ್‌ನ ಇಂತಹ ಪರಿಸ್ಥಿತಿ ಕಂಡು ಸಹಿಸಲಾಗಲಿಲ್ಲ. ಆಳುವ ಸರ್ಕಾರದತ್ತ ಇವರ ಕೋಪ ಬಿಡುಬೀಸಾಗಿ ನುಗ್ಗಿತು. ಅದೊಂದುರೀತಿ ಸಾತ್ವಿಕಸಿಟ್ಟು. ಆ ಕ್ಷಣವೇ ಮನವಿಯೊಂದನ್ನು ಗೀಚಿ ಕೈಲಿಡಿದುಕೊಂಡು ವಿಧಾನಸೌಧದತ್ತ ದಾಪುಗಾಲಿಟ್ಟು ನಡೆದೇ ಬಿಟ್ಟರು. ಹೀಗೆ ಹೋದವರು ಬರಿಗೈಲಿ ಬರಲಿಲ್ಲ. ಆಗಿನ ಅರ್ಥ ಸಚಿವರ ಮುಂದೆ ಆರ್ಭಟಿಸಿ ಯಾರ ಸ್ವಂತಕ್ಕೂ ನಾವು ಸರ್ಕಾರದಿಂದ ಹಣ ಕೇಳುತ್ತಿಲ್ಲ, ಕನ್ನಡದ ಕೆಲಸಕ್ಕೆ, ಸರಸ್ವತಿ ಸೇವೆಗೆ ಹಣ ಕೇಳುತ್ತಿದ್ದೇವೆ ಎಂದು ಪಟ್ಟುಹಿಡಿದು ಆ ಗಳಿಗೆಯಲ್ಲೇ ಸಾಹಿತ್ಯ ಪರಿಷತ್‌ಗೆ ಬೇಕಿದ್ದ ಹಣವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದರು. ಆಗ ಇಡೀ ಕನ್ನಡ ಸಾರಸ್ವತ ಲೋಕವೇ ಸಾಹಿತ್ಯ ಪರಿಷತ್‌ನ ಅಧ್ಯಕ್ಷರ ಕಾರ್ಯ ವೈಖರಿಗೆ ಶಹಭಾಶ್ ಎಂದಿತ್ತು.
ಅಂದು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಇಂಥ ಶಹಭಾಶ್‌ಗಿರಿ ಪಡೆದಿದ್ದವರು ಬೇರಾರೂ ಅಲ್ಲ. ಇಂದಿಗೂ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಪ್ರಕಾಂಡ ಪಾಂಡಿತ್ಯದಿಂದ ಮಿರಮಿರನೆ ಮಿಂಚುತ್ತಿರುವ ವಿದ್ವತ್ತಿನ ಗುಪ್ತನಿಧಿ, ಶಬ್ದಗಾರುಡಿಗ ಪ್ರೊ|| ಜಿ. ವೆಂಕಟಸುಬ್ಬಯ್ಯ. ಕನ್ನಡಕ್ಕಾಗಿ ಮೊದಲಿನಿಂದಲೂ ಮುನ್ನುಗ್ಗುವ ಜಾಯಮಾನ ಇವರದು. ನೋಡಲಿಕ್ಕೆ ಇವರು ಟಿ.ಪಿ. ಕೈಲಾಸಂ, ಗೋಪಾಲಕೃಷ್ಣ ಅಡಿಗ, ಎಲ್.ಎಸ್. ಶೇಷಗಿರಿರಾಯರಂತೆ ಅಷ್ಟೇನೂ ಎತ್ತರವಿಲ್ಲದ ಕುಳ್ಳನೆಯ ವ್ಯಕ್ತಿಯಾದರೂ ಸಹ ಸಾಧನೆಯಲ್ಲಿ ವಾಮನನನ್ನೂ ಮೀರಿಸಿದ ಎತ್ತರ, ಸಾಹಿತ್ಯದಲ್ಲಿ ತ್ರಿವಿಕ್ರಮ ಸಾಹಸಿ.

ಚಿಕ್ಕದಾಗಿ ಜಿ.ವಿ ಎಂದೇ ಆಪ್ತರಾಗಿರುವ ಇವರು ಶಿಕ್ಷಣ, ಸಂಶೋಧನೆ, ಅನುವಾದ, ವಿಮರ್ಶೆಯ ವಿಷಯಗಳಲ್ಲಿ ಅದ್ಭುತ ಸಾಧನೆ ಮಾಡಿದ್ದರೂ ಸಹ ನಿಘಂಟು ನಿರ್ಮಾಣದಲ್ಲಿ ಇವರ ಸಾಧನೆಯೊಂದು ಹಿಮಾಲಯವೇ ಸರಿ. ಅಷ್ಟರಮಟ್ಟಿಗೆ ಇವರು ನಿಘಂಟಿನ ದೊಡ್ಡಗಂಟನ್ನೇ ಕನ್ನಡಕ್ಕೆ ನೀಡಿ ಕನ್ನಡದ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ಇವರ ಇಂಗ್ಲೀಷ್-ಕನ್ನಡ ನಿಘಂಟು ಮತ್ತು ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ ಇವೆರಡೂ ಅಮೂಲ್ಯ ಗ್ರಂಥಗಳಾಗಿದ್ದು ಇವನ್ನು ದೂರದ ಅಮೆರಿಕದಲ್ಲಿರುವ ಬೆಂಗಳೂರಿನ ಕೆ.ಟಿ. ಚಂದ್ರಶೇಖರ್ ಅವರ ಪುತ್ರ ಶೇಷಾದ್ರಿ ವಾಸು ಅವರ ಬರೆಹ ಅಂತರ್ಜಾಲದಲ್ಲಿ ಸೇರಿಸಲಾಗಿದ್ದು ಬರೆಹ ತಂತ್ರಾಂಶದಲ್ಲಿ ಭಾರತೀಯ ಭಾಷೆಗಳಲ್ಲೆಲ್ಲಾ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಜೊತೆಗೆ ಕಣ್ಣು ಕಾಣದ ಅಂಧರಿಗೆ ಅನುಕೂಲವಾಗಲೆಂದು ಬ್ರೈಲ್ ಲಿಪಿಯನ್ನೂ ಕೂಡ ಈ ಬರೆಹ ತಂತ್ರಾಂಶದಲ್ಲಿ ಸೇರಿಸಿರುವುದರಿಂದ ಲಕ್ಷಾಂತರ ಮಂದಿಗೆ ಇದರ ಉಪಯೋಗವಾಗುತ್ತಿದೆ. ಇಂಗ್ಲೀಷ್-ಕನ್ನಡ ನಿಘಂಟು ಹಾಗೂ ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ ಇವೆರಡು ಗ್ರಂಥಗಳೇ ಸಾಕು ವೆಂಕಟಸುಬ್ಬಯ್ಯನವರ ಅಕ್ಷರಪಾಂಡಿತ್ಯವನ್ನು ಜಗತ್ತಿಗೆ ಸಾರಲು.
ಕನ್ನಡ ಭಾಷೆಯನ್ನೇ ಬದುಕಾಗಿಸಿಕೊಂಡು, ಕನ್ನಡ ಪದಗಳನ್ನೇ ಉಸಿರಾಗಿಸಿಕೊಂಡು ಕನ್ನಡ ಕಟ್ಟುವ ಕೈಂಕರ್ಯದಲ್ಲಿ ಅಕ್ಷರಶಃ ಪದಕಲ್ಪವೃಕ್ಷವೇ ಆಗಿರುವ ಇಂಥ ಅಕ್ಷರಬ್ರಹ್ಮ ಜಿ. ವೆಂಕಟಸುಬ್ಬಯ್ಯ ಅವರನ್ನು ನಾಡಿಗೆ ನೀಡಿದ್ದು ಪು.ತಿ.ನ, ಕೆ.ಎಸ್.ನ, ಬಿ.ಎಂ.ಶ್ರೀ, ಎಂ.ಆರ್.ಶ್ರೀ, ತ್ರಿವೇಣಿ, ವಾಣಿ, ಎ.ಎನ್.ಮೂರ್ತಿರಾಯರು, ಎಚ್.ಎಲ್.ನಾಗೇಗೌಡರಂಥ ಸಾಹಿತ್ಯದಿಗ್ಗಜರು ಜನ್ಮವೆತ್ತಿದ ಮಂಡ್ಯದ ಮಣ್ಣೆಂಬುದೇ ಒಂದು ವಿಶೇಷ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ಗ್ರಾಮ ಇವರ ಮೂಲ ಸ್ಥಳ. ಕನ್ನಡ ಮತ್ತು ಸಂಸ್ಕೃತ ಪಂಡಿತರಾದ ಶಿಕ್ಷಕ ಗಂಜಾಂ ತಿಮ್ಮಣ್ಣಯ್ಯ ಇವರ ತಂದೆ. ತಾಯಿ ಸುಬ್ಬಮ್ಮ ಈ ದಂಪತಿಗಳ ಜೇಷ್ಠಪುತ್ರರಾಗಿ ಇವರು ಸಾವಿರದ ಒಂಭೈನೂರ ಹದಿಮೂರರ ಆಗಸ್ಟ್ ಇಪ್ಪತ್ಮೂರರಂದು ತಾಯಿಯ ಊರಾದ ಇದೇ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿಯಲ್ಲಿ ಜನಿಸಿದರು. ಆರು ಮಂದಿ ಸಹೋದರರು, ಓರ್ವ ಸಹೋದರಿ ಇವರ ಒಡಹುಟ್ಟಿದವರು. ಅರಮನೆಯ ವಿದ್ವಾಂಸರೂ ಆಗಿದ್ದ ಇವರ ತಂದೆ ಗಂಜಾಂ ತಿಮ್ಮಣ್ಣಯ್ಯ ಆ ಕಾಲದಲ್ಲೇ ಪತ್ರಕರ್ತರೂ ಆಗಿ ಪುರಾಣ ಕಥಾವಳಿ ಎಂಬ ಮಾಸಪತ್ರಿಕೆಯನ್ನು ನಡೆಸುತ್ತಿದ್ದರು. ಸ್ವತಃ ಸಾಹಿತಿಯೂ ಆಗಿದ್ದ ಅವರು ಶಿವಮಹಾಪುರಾಣ ಮತ್ತು ವಿಷ್ಣುಪುರಾಣ ಮುಂತಾದ ಪುರಾಣಗಳನ್ನು ಅಚ್ಚುಕಟ್ಟಾಗಿ ಅನುವಾದ ಮಾಡಿ ಪ್ರಕಟಿಸಿದ್ದರು. ವೆಂಕಟಸುಬ್ಬಯ್ಯನವರು ಇಂಥವರ ಮಗನೆಂದರೆ ಕೇಳಬೇಕೆ? ಜೊತೆಗೆ ಮೂಲತಃ ಇವರು ಸಂಸ್ಕೃತ ಮತ್ತು ಕನ್ನಡದಲ್ಲಿ ವಿದ್ವಾಂಸರಾಗಿದ್ದ ವೇದೋಪನಿಷತ್ತುಗಳ ಪಾರಂಗತ ಮನೆತನದಿಂದ ಬಂದವರು. ಹಾಗಾಗಿ ಬಾಲ್ಯದಿಂದಲೂ ಬಹುಬುದ್ಧಿವಂತರೇ ಆಗಿದ್ದ ಇವರು ದಿನಕಳೆದು ಬೆಳೆದಂತೆ ಜ್ಞಾನಭಂಡಾರವನ್ನು ಅಗಾಧವಾಗಿ ಬೆಳೆಸಿಕೊಂಡು ೧೯೩೭ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಸುವರ್ಣ ಪದಕ ಸಹಿತ ಹೊನ್ನಶೆಟ್ಟಿ ಬಹುಮಾನದೊಡನೆ ಪಡೆದಿದ್ದರು. ಆ ನಂತರ ೧೯೩೮ ರಲ್ಲಿ ಬಿ.ಟಿ. ಮಾಡಿ ಶಿಕ್ಷಣ, ಸಂಶೋಧನೆ, ಅನುವಾದ, ವಿಮರ್ಶೆ ಮತ್ತು ನಿಘಂಟು ನಿರ್ಮಾಣ ಕಾರ್ಯಗಳತ್ತ ತಮ್ಮ ಲೇಖನಿಯನ್ನು ಹರಿಯಬಿಟ್ಟರು. ೧೯೩೯ ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡ ಇವರು ನಂತರ ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ ನಾಲ್ಕು ದಶಕಗಳ ಸುದೀರ್ಘ ಕಾಲದವರೆಗೆ ವಿದ್ಯಾರ್ಥಿಗಳ ಜ್ಞಾನಪರಿಧಿ ಹೆಚ್ಚಿಸಲು ಶ್ರಮಿಸಿ ೧೯೭೩ ರಲ್ಲಿ ನಿವೃತ್ತರಾದರು. ಈ ಅವಧಿಯಲ್ಲಿ ಶಿಕ್ಷಣ ಸೇವೆಯ ಜೊತೆ ಜೊತೆಗೆ ಇವರ ಸಾಹಿತ್ಯ ಸೇವೆಯೂ ನಿರಂತರವಾಗಿ ಹರಿದು ಬಂದು ಇವರಿಂದ ಹಲವಾರು ಮಹತ್ವದ ಕೃತಿಗಳು ಸೃಷ್ಟಿಯಾದವು.
ವೆಂಕಟಸುಬ್ಬಯ್ಯನವರು ಸೃಜನಶೀಲ ಸಾಹಿತ್ಯಕ್ಕಿಂತ ಸೃಜನೇತರ ಸಾಹಿತ್ಯದಲ್ಲಿ ಹೆಚ್ಚು ಒಲವು ಹೊಂದಿದ್ದು ಇದನ್ನು ಅವರ ಬರೆಹಗಳಲ್ಲಿ ಕಾಣಬಹುದಾಗಿದೆ. ಹಾಗಾಗಿ ಇವರ ಲೇಖನಿಯಿಂದ ಅರಳಿದ ಸಾಹಿತ್ಯ ಕುಸುಮಗಳಲ್ಲಿ ಹೆಚ್ಚಿನವು ಸೃಜನೇತರ ಕೃತಿಗಳೇ ಆಗಿವೆ. ನಯನಸೇನ, ಅನುಕಲ್ಪನೆ, ನಳಚಂಪು, ಅಕ್ರೂರ ಚರಿತ್ರೆ, ಲಿಂಡನ್ ಜಾನ್ಸನ್ ಕಥೆ, ಸಂಯುಕ್ತ ಸಂಸ್ಥಾನ ಪರಿಚಯ, ಶಂಕರಾಚಾರ್ಯ, ಕಬೀರ್, ಇದು ನಮ್ಮ ಭಾರತ, ಸರಳಾದಾಸ್, ರತ್ನಾಕರವರ್ಣಿ, ದಾಸಸಾಹಿತ್ಯ, ವಚನಸಾಹಿತ್ಯ, ಶಾಸನ ಸಾಹಿತ್ಯ, ಷಡಕ್ಷರ ದೇವ, ಸರ್ವಜ್ಞ, ಕನ್ನಡ-ಕನ್ನಡ ಇಂಗ್ಲೀಷ್ ನಿಘಂಟು, ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ, ಇಂಗ್ಲೀಷ್-ಕನ್ನಡ ನಿಘಂಟು, ಹೊಯ್ಸಳ ಕರ್ನಾಟಕ ರಜತೋತ್ಸವ ಸಂಪುಟ, ಮುದ್ದಣ ಭಂಡಾರ ಭಾಗ-೧, ಮುದ್ದಣ ಭಂಡಾರ ಭಾಗ-೨, ಕಾವ್ಯಲಹರಿ, ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳೆಸಿದವರು, ಪ್ರೊ|| ಟಿ.ಎಸ್. ವೆಂಕಣ್ಣಯ್ಯನವರು, ಕವಿ ಜನ್ನ, ಡಿ.ವಿ.ಗುಂಡಪ್ಪನವರು, ಕನ್ನಡದ ನಾಯಕಮಣಿಗಳು, ಕರ್ಣಕರ್ಣಾಮೃತ, ನಾಗರಸನ ಭಗವದ್ಗೀತೆ, ತಮಿಳು ಕತೆಗಳು, ಇಗೋ ಕನ್ನಡ-೧, ಇಗೋ ಕನ್ನಡ-೨, ಮುದ್ದಣ ಪದಪ್ರಯೋಗಕೋಶ, ಎರವಲು ಪದಕೋಶ, ಕುಮಾರವ್ಯಾಸನ ಅಂತರಂಗ ಮುಂತಾದವು ಇವರ ಪ್ರಮುಖ ಕೃತಿಗಳು. ಇವರ ಇಗೋ ಕನ್ನಡ ಅಂಕಣವಂತೂ ನಾಡಿನ ಮನೆಮಾತು.
ಕೇವಲ ಸಾಹಿತ್ಯ ರಚನೆಗಷ್ಟೇ ಇವರು ತಮ್ಮನ್ನು ಸೀಮಿತಗೊಳಿಸಿಕೊಂಡವರಲ್ಲ. ಇವರದು ಸಮಾಜಮುಖಿ ವ್ಯಕ್ತಿತ್ವ ಮತ್ತು ಬಹುಮುಖಿ ಸಾಧನೆ. ಹಾಗಾಗಿ ವೆಂಕಟಸುಬ್ಬಯ್ಯನವರ ಹೆಸರು ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಕನ್ನಡ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡಿರುವ ಇವರ ಶೈಕ್ಷಣಿಕ ಸಾಧನೆ ಏನೂ ಕಮ್ಮಿಯಲ್ಲ. ೧೯೭೩ ರಿಂದ ೧೯೯೨ ರವರೆಗೆ ಕನ್ನಡ ಕನ್ನಡ ಬೃಹತ್ ಕೋಶದ ಪ್ರಧಾನ ಸಂಪಾದಕರಾಗಿ ಈ ದಿಶೆಯಲ್ಲಿ ಏಳು ಬೃಹತ್ ಸಂಪುಟಗಳನ್ನು ಹೊರತಂದ ಹೆಗ್ಗಳಿಕೆ ಇವರದು. ೧೯೬೪-೧೯೬೯ ರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಇವರು ಇದಕ್ಕೂ ಮುನ್ನ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿಯಾಗಿಯೂ ಹಲವಾರು ವರ್ಷಗಳು ಪರಿಷತ್‌ನ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದಿದ್ದರು. ಕನ್ನಡ ನುಡಿ ಪತ್ರಿಕೆಯ ಸಂಪಾದಕರಾಗಿ, ಕನ್ನಡ-ಕನ್ನಡ ಕೋಶದ ಸಮಿತಿಯ ಅಧ್ಯಕ್ಷರು ಮತ್ತು ಪ್ರಧಾನ ಸಂಪಾದಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಅಖಿಲ ಭಾರತ ನಿಘಂಟುಕಾರರ ಸಂಘದ ಉಪಾಧ್ಯಕ್ಷರಾಗಿ, ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿಯ ಕನ್ನಡ ಪ್ರತಿನಿಧಿಗಳಾಗಿ, ಕನ್ನಡ ಭಾಷೆ, ನಿಘಂಟು ರಚನೆಯ ಹಲವಾರು ಸಮಿತಿಗಳ ವಿವಿಧ ಪ್ರಮುಖ ಸ್ಥಾನಗಳಲ್ಲಿ ಕುಳಿತು ಕನ್ನಡಕ್ಕಾಗಿ ದುಡಿದಿರುವ ಇವರ ಪ್ರಾಮಾಣಿಕ ಕನ್ನಡ ಕಾಯಕ ನಿಜಕ್ಕೂ ನಾಡು ಮೆಚ್ಚುವಂತಾದ್ದು.
ನಿಘಂಟು ಸಾರ್ವಭೌಮ, ಸಂಚಾರಿಜೀವಂತಪದಕೋಶ, ಭಾಷಾವಿಜ್ಞಾನ ಪ್ರವೀಣ, ಪದಗಳಕಣಜ, ನಿಘಂಟು ನಿಸ್ಸೀಮ, ಶಬ್ಧರ್ಷಿ, ಪದಜೀವಿ, ಪದಗುರು, ನಡೆದಾಡುವ ನಿಘಂಟು, ಶಬ್ದಸಂಜೀವಿನಿ, ಶಬ್ದಬ್ರಹ್ಮ, ಶಬ್ದಸಾಗರ, ಶಬ್ದಸಹಾಯವಾಣಿ, ಶಬ್ದಗಾರುಡಿಗ, ಶಬ್ದಶಿಲ್ಪಿ, ಚಲಿಸುವ ಜ್ಞಾನಭಂಡಾರ, ಕನ್ನಡದ ಕಿಟ್ಟಲ್..... ಹೀಗೆ ಹಲವಾರು ಬಿರುದುಗಳ ಮಳೆಯಲ್ಲಿ ಮಿಂದಿರುವ ಶತಕದ ಅಂಚಿನಲ್ಲಿರುವ ಸಾಹಿತ್ಯಭೀಷ್ಮ ಪ್ರೊ|| ಜಿ. ವೆಂಕಟಸುಬ್ಬಯ್ಯನವರ ಸಾಧನೆಯ ತೂಕಕ್ಕೆ ಯಾವ ಬಿರುದುಗಳೂ ಭಾರವೆನಿಸದು.
ಇವರ ಮುದ್ದಣ ಭಂಡಾರ ಗ್ರಂಥಕ್ಕೆ ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಇವರ ಸಾಹಿತ್ಯ ಸಾಧನೆಗಾಗಿ ೧೯೯೧ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೨ ರಲ್ಲಿ ಮಾಂಟ್ರಿಯಲ್ ಕೆನಡದಲ್ಲಿ ನಡೆದ ಕನ್ನಡ ಸಮ್ಮೇಳನದ ಗೌರವ ಆತಿಥ್ಯ, ೧೯೯೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ೧೯೯೮ ರಲ್ಲಿ ಶಂಬಾ ಪ್ರಶಸ್ತಿ, ೧೯೯೯ ರಲ್ಲಿ ಸೇಡಿಯಾಪು ಪ್ರಶಸ್ತಿ, ಅದೇ ವರ್ಷ ಶಿವರಾಮ ಕಾರಂತ ಪ್ರಶಸ್ತಿ, ೨೦೦೦ ದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ವಿಶೇಷ ಪ್ರಶಸ್ತಿ, ೨೦೦೧ ರಲ್ಲಿ ವನಮಾಲಿ ಪ್ರಶಸ್ತಿ, ೨೦೦೩ ರಲ್ಲಿ ಮುದ್ದಣ ಪುರಸ್ಕಾರ, ೨೦೦೫ ರಲ್ಲಿ ಮಾಸ್ತಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ೨೦೦೭ ರಲ್ಲಿ ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವ, ೨೦೦೮ ರಲ್ಲಿ ಪ್ರತಿಷ್ಠಿತ ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ, ೨೦೦೯ ರಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ, ೨೦೧೦ ರಲ್ಲಿ ಗೋಕಾಕ್ ವಾಙ್ಮಯ ಟ್ರಸ್ಟ್‌ನ ವಿ.ಕೃ. ಗೋಕಾಕ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ-ಪುರಸ್ಕಾರ, ಗೌರವ-ಸನ್ಮಾನಗಳಿಗೆ ಇವರು ಭಾಜನರಾಗಿದ್ದಾರೆ. ಅಂತೆಯೇ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಜಿ.ವಿ.ಯವರನ್ನು ಕುರಿತು ನಿರ್ದೇಶಕ ಸುಚೇಂದ್ರ ಪ್ರಸಾದ್, ಸಾಕ್ಷ್ಯಚಿತ್ರ (೨೦೧೦) ತೆಗೆದಿರುವುದು ಇವರಿಗೆ ಸಂದ ದೊಡ್ಡ ಗೌರವವೇ ಆಗಿದೆ. ಈಗ ಇವೆಲ್ಲಕ್ಕೂ ಕಳಶಪ್ರಾಯವಾಗಿ ಕನ್ನಡ ಸಾಹಿತ್ಯ ಪರಿಷತ್ತು ೭೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಪ್ರೊ|| ಜಿ. ವೆಂಕಟಸುಬ್ಬಯ್ಯ ಅವರಿಗೆ ನೀಡಿ ಗೌರವಿಸಿದೆ.

No comments:

Post a Comment

ಹಿಂದಿನ ಬರೆಹಗಳು