Tuesday, February 8, 2011
ನಿರೀಕ್ಷಿಸದೇ ಬಂದ ಭಾಗ್ಯವಿದು
ಸಂದರ್ಶನ: ಕಾವೆಂಶ್ರೀ
ಜೀವಿ ಕನ್ನಡದ ಆಸ್ತಿ. ಕನ್ನಡ ಶಬ್ದ ದ್ರವ್ಯದ ದೃಷ್ಟಾರ. ಕನ್ನಡವೇ ಉಸಿರು. ಶಬ್ದ ಮಾಣಿಕ್ಯದ ಸಂಶೋಧನೆ, ಹುಡುಕಾಟವೇ ಜೀವನದ ಕಾಯಕ. ಇಗೋ ಕನ್ನಡದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು. ಇವರು ಕನ್ನಡದ ನಡೆದಾಡುವ ಶಬ್ದ ಕೋಶ. ಅವರಿಗೀಗ ೯೮ರ ಇಳಿವಯಸ್ಸು. ಕನ್ನಡ ಸಾಹಿತ್ಯ ಪರಿಷತ್‌ಗಿಂತಲೂ ಒಂದು ವರ್ಷ ದೊಡ್ಡವರು. ಗದುಗಿನ ಕಲಾಚೇತನ ಸಾಂಸ್ಕೃತಿಕ ಅಕಾಡಮಿಯು ನೀಡಿರುವ ಅಂಕಣಶ್ರೀ ಗೆ ಭಾಜನರಾಗಿರುವ ನಿಘಂಟುತಜ್ಞ, ವಿದ್ವಾಂಸ, ಸಂಶೋಧಕ ಹೀಗೆ ಬಹುಮುಖಿಯಾಗಿರುವ ಕನ್ನಡ ಶಬ್ದದ್ರವ್ಯದ ಜೀವಿಗೆ ೭೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನುಡಿತೇರಿನ ಪೀಠವನ್ನೇರುವ ಸೌಭಾಗ್ಯ.
ಒಂದು ದಶಕದ ಹಿಂದಿನಿಂದಲೂ ಜೀವಿಯವರ ಹೆಸರು ಅಧ್ಯಕ್ಷಗಿರಿಗೆ ಕೇಳಿಬಂದರೂ ಜಾತಿ, ಲಾಬಿ, ಇನ್ನಿತರ ವಿಚಾರಗಳಿಂದಾಗಿ ಜೀವಿಯವರನ್ನು ದೂರ ಸರಿಸಿಬಿಡುತ್ತಿದ್ದರು. ಆದರೆ ಈ ಬಾರಿ ಅಂತಹ ಪ್ರಶ್ನೆಗಳು ಉದ್ಭವಿಸದೇ ಜೀವಿ ಹೆಸರನ್ನು ಎಲ್ಲರೂ ಅನುಮೋದಿಸಿದ್ದರಿಂದ ನುಡಿತೇರಿನ ಪೀಠವೇರುವ ಭಾಗ್ಯ ಜೀವಿಯವರ ಪಾಲಿನದಾಯಿತು.
ಇಗೋ ಕನ್ನಡ ಎನ್ನುವ ಸಾಪ್ತಾಹಿಕ ಅಂಕಣವೊಂದನ್ನು ಸತತ ಹತ್ತುವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೆಯೊಂದರಲ್ಲಿ ಬರೆದ ಪ್ರೊ|| ಜಿ. ವೆಂಕಟಸುಬ್ಬಯ್ಯನವರ ಕಾರ್ಯವ್ಯಾಪ್ತಿ ಬಹುದೊಡ್ಡದು. ಶಿಕ್ಷಣ, ಸಂಶೋಧನೆ, ಅನುವಾದ, ವಿಮರ್ಶೆ ಮತ್ತು ನಿಘಂಟುಗಳ ನಿರ್ಮಾಣ......ಹೀಗೆ. ಸುಮಾರು ೧೯೭೩ರಿಂದ ೧೯೯೨ರವರೆಗೆ ಕನ್ನಡ-ಕನ್ನಡ ಬೃಹತ್ ಕೋಶದ ಪ್ರಧಾನ ಸಂಪಾದಕರಾಗಿ ಅವರು ಕೆಲಸ ನಿರ್ವಹಿಸಿದ್ದಾರೆ. ೨೦೦೦ ಪುಟಗಳ ನಿಘಂಟು ಸಿದ್ಧವಾಗಿದೆ. ಸಂಶೋಧನೆ, ವಿಮರ್ಶೆ, ಅನುವಾದ, ಗ್ರಂಥಸಂಪಾದನೆಯಲ್ಲಿ ೬೫ಕ್ಕೂ ಹೆಚ್ಚು ಗ್ರಂಥ ರಚನೆ ಮಾಡಿದ್ದಾರೆ. ೧೯೩೯ರಿಂದ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಬೋಧನಾ ವರ್ಗಗಳ ವಿಶೇಷ ಪ್ರಾಧ್ಯಾಪಕರಾಗಿ, ಸಂದರ್ಶಕರಾಗಿ, ಮೈಸೂರು-ಬೆಂಗಳೂರು ವಿಶ್ವವಿದ್ಯಾಲಯದ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಜೀವಿ ಅವರು ಸಲ್ಲಿಸಿದ ಸೇವೆ ಅನುಪಮ. ಸಾಹಿತ್ಯ ಕ್ಷೇತ್ರದಲ್ಲೂ ಕನ್ನಡ ಸಾಹಿತ್ಯ ಪರುಷತ್ತಿನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕನ್ನಡ ನುಡಿಯ ಸಂಪಾದಕರಾಗಿ, ಕನ್ನಡ-ಕನ್ನಡ ವಿಶ್ವಕೋಶದ ಪ್ರಧಾನ ಸಂಪಾದಕರಾಗಿ, ಬಹುಭಾಷಾ ನಿಘಂಟಿನ ಸಲಹೆಗಾರರಾಗಿ, ತೆಲಗು ಅಕಾಡಮಿಯ ಶಬ್ದಸಾಗರದ ಸಮಾಲೋಚನ ಸಮಿತಿಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
ಕನ್ನಡ ಸಾಹಿತ್ಯದ ಜೀವಿಯವರೊಂದಿಗೆ ಕರವೇ ನಲ್ನುಡಿಗಾಗಿ ನಡೆಸಿದ ಮಾತುಕತೆಯ ಆಯ್ದ ಭಾಗ
ನುಡಿತೇರಿನ ಪೀಠವನ್ನೇರುವ ಭಾಗ್ಯ ನಿಮ್ಮದಾದಾಗ?
ನಿರೀಕ್ಷಿಸದೇ ಬಂದ ಭಾಗ್ಯವಿದು. ಅಧ್ಯಕ್ಷ ಪೀಠವನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದೇನೆ. ಸಂತೋಷ-ಖುಷಿಗಳೆರಡೂ ಮನತುಂಬಿ ಬಂದಿದೆ. ನನ್ನ ಎಲ್ಲಾ ಸಾಧನೆಗಳ ಹಿಂದೆ ಮಡದಿ ಲಕ್ಷ್ಮೀಯ ಪಾತ್ರ ದೊಡ್ಡದು. ನಿಮ್ಮೆಲ್ಲರ ಸಹಕಾರಕ್ಕೆ ಋಣಿ.
ಅತಂತ್ರ ಸ್ಥಿತಿ ಅನುಭವಿಸುತ್ತಿರುವ ಕನ್ನಡ ಭಾಷೆಯ ಬಗ್ಗೆ ನಿಮ್ಮ ವಿಚಾರವೇನು?
ಮೊದಲು ಯಾಕೆ ಹೀಗಾಯ್ತು ಅಂತ ಯೋಚನೆ ಮಾಡ್ಬೇಕು. ೫೦ ವರ್ಷದ ಹಿಂದೆ ಈ ಸ್ಥಿತಿ ಇರಲಿಲ್ಲ. ಕನ್ನಡ ಮಾತ್ನಾಡೋರು, ಬರೆಯೋರು ಯಾವುದೇ ಒಂದು ವ್ಯಾಕರಣ ಬದ್ಧತೆ, ಶುಭ್ರತೆ, ಸಂಸ್ಕೃತಿ ಎಲ್ಲವನ್ನೂ ಗಮನಿಸ್ತಾ ಇದ್ರು. ಯಾರು ಸಿದ್ಧತೆ ಇಲ್ದೆ ಇರುವಾಗ ಬರೆಯೋಕೆ ಶುರು ಮಾಡ್ತಾರೋ ಆವಾಗ ಭಾಷೆಯ ಪ್ರಭಾವ ಕಡಿಮೆಯಾಗ್ತದೆ. ನಾನು ಇಲ್ಲಿ ಎಲ್ಲರನ್ನೂ ಬೈತಾ ಇಲ್ಲ. ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿ, ಚೆನ್ನಾಗಿ ಬರೆಯೋರು ಸಾಕಷ್ಟು ಜನ ನಮ್ಮಲ್ಲಿ ಇದ್ದಾರೆ. ಬಹುಶಃ ಭಾರತ ದೇಶದಲ್ಲಿಯೇ ಆಗ್ದೇ ಇರೋವಷ್ಟು ಸಂಸ್ಕೃತ ಸಾಹಿತ್ಯ ರಚನೆ ನಮ್ಮಲ್ಲಿ ಆಗಿದೆ. ಬಂಗಾಲದಲ್ಲೂ ಕೂಡ ಅಷ್ಟಿಲ್ಲ. ನಮಗನಿಸುತ್ತೆ ಮರಾಠಿ ಭಾಷೆ, ಕನ್ನಡ ಭಾಷೆ, ತಮಿಳು ಭಾಷೆ ಬೆಳೆದಿರುವಷ್ಟು ಇತರೆ ಭಾಷೆ ಬೆಳೆಯಲೇ ಇಲ್ಲ. ಹಿಂದಿಯಲ್ಲಿ ಬೇಕಾದಷ್ಟು ಸವಲತ್ತುಗಳಿವೆ. ಸರ್ಕಾರದ ಸವಲತ್ತಿನಿಂದ ಬೆಳವಣಿಗೆ ಹೆಚ್ಚಾಗಿದೆ. ಗೌರವವೂ ಹೆಚ್ಚಾಗಿದೆ. ಕನ್ನಡದಲ್ಲಿ ಇವೆಲ್ಲ ಕಡಿಮೆಯಾಗಿದೆ.
ಬಿ.ಎಂ.ಶ್ರೀಯವರ ಬರವಣಿಗೆಯ ನಂತರ ೨೦-೩೦ ವರ್ಷ ಕನ್ನಡ ಬರವಣಿಗೆ ತುಂಬಾ ಚೆನ್ನಾಗಿ ಆಯ್ತು. ನವೋದಯ ಕಾಲದಲ್ಲಿ ಬಂದಂತಹವು ಇಂದಿಗೂ ಕೂಡ ಅಚ್ಚುಕಟ್ಟಾಗಿವೆ. ನವ್ಯ ಕಾಲದಲ್ಲಿ ಕನ್ನಡಕ್ಕೆ ಇನ್ನಷ್ಟು ವೈವಿಧ್ಯ ತಂದುಕೊಟ್ಟರು. ಅಂದ್ರೆ ಹೊಸಹೊಸ ಶಬ್ದಗಳನ್ನು ತುಂಬುವುದು, ಹಳೆ ಶಬ್ದಗಳ ರೀತಿಯಲ್ಲಿ ಬದಲಾವಣೆ ಮಾಡುವುದು ಇತ್ಯಾದಿ. ಅಡಿಗರ ಮೂಲಕ ನಮ್ಮ ಭಾಷೆಗೆ ನಾವೀನ್ಯವೇನೋ ಬಂತು. ಆದರೆ ನವ್ಯವನ್ನು ಆರಿಸಿಕೊಂಡ ರೀತಿ ಎಲ್ಲರನ್ನೂ ಮುಟ್ಟುವಂಥ ರೀತಿಯಾಗಿರಲಿಲ್ಲ. ಆದರೆ ನವೋದಯ ಬಂದರೂ ಕೂಡ ಅದಕ್ಕೆ ಪೋಷಕವಾದಂತಹ, ವಿರುದ್ಧವಲ್ಲದ ಒಂದು ಆಂದೋಲನ ನಡೆಯಿತು. ಅದೇ ಪ್ರಗತಿಪರ ಚಳುವಳಿ. ಆಗ ಜನಸಾಮಾನ್ಯರ ಭಾಷೆ ಉಪಯೋಗ ಮಾಡಿಕೊಂಡರು. ನಮ್ಮ ಕನ್ನಡ ಕಾದಂಬರಿಯಲ್ಲಿ ಸಂಭಾಷಣೆಗಳಲ್ಲೆಲ್ಲ ಆ ಭಾಷೆಯ ಉಪಯೋಗ ಮಾಡಿಕೊಂಡ್ರು. ದಲಿತರ ಉದ್ಧಾರಕ್ಕೋಸ್ಕರವಾಗಿ ಆಂದೋಲನ ಆಯಿತು. ಆದ್ರೆ ಸಾಹಿತ್ಯದಲ್ಲಿ ದಲಿತರ ಉದ್ಧಾರ ಎನ್ನುವುದು ದಲಿತರ ಭಾಷೆಯ ಉದ್ಧಾರವಲ್ಲ. ಕಾರಂತರು ಚೋಮನದುಡಿಯನ್ನು ಬರೆದ್ರೆ ಅಲ್ಲಿ ಚೋಮನ ಉದ್ದಾರ ಆಗ್ಬೇಕಂತ ಅವರ ದೃಷ್ಟಿ ಇತ್ತು. ಚೋಮನ ಭಾಷೆ ಗಮನಕ್ಕೆ ಬರಲಿಲ್ಲ. ಚೋಮ ಸಮಾಜದಲ್ಲಿ ಯೋಗ್ಯನಾಗಿ ಬದುಕಬೇಕು ಅನ್ನೋ ಆಸೆಯಿಂದ ಬರೆದದ್ದು. ಆದ್ರೆ ಅವನು ಹಾಗೆ ಬದುಕಲು ಆಗಲೇ ಇಲ್ಲ. ಆ ಕಾದಂಬರಿಯ ಕೊನೆಯಲ್ಲಿ ದುರಂತ ಆಗುತ್ತೆ. ಆಮೇಲೆ ದಲಿತರೇ ಬರೆಯೋಕೆ ಪ್ರಾರಂಭ ಮಾಡಿದ್ರು. ಆಗ ಸಾಹಿತ್ಯದಲ್ಲಿ ಕ್ರೋಧ, ಉದ್ವೇಗ, ರೋಷ ಎಲ್ಲಾ ತುಂಬಿಕೊಂಡಿತು. ಭಾಷೆ ಸ್ವಲ್ಪ ನೀರಾಯಿತು. ಈಗ ಅವರೂ ಬದಲಾಗಿದ್ದಾರೆ.
ನಮ್ಮ ಮಾಧ್ಯಮಗಳು ಆಕಾಶವಾಣಿ, ದೂರದರ್ಶನ, ಪತ್ರಿಕೆಗಳು ಎಲ್ಲವೂ ಸೇರಿ ಭಾಷೆಯನ್ನು ಇನ್ನಷ್ಟು ನೀರಾಗಿ ಮಾಡುತ್ತಿವೆ. ಕಾರಣವೇನೆಂದರೆ ಅವರಿಗೆ ಯಾವ ಪದ ಸರಿ, ಯಾವ ಪದ ತಪ್ಪು ಅನ್ನುವುದು ಗೊತ್ತಿರುವುದಿಲ್ಲ. ಭಾಷೆಯನ್ನು ಬೆಳೆಸುವ ಮಾರ್ಗದಲ್ಲಿ ತಪ್ಪುಗಳಿಗೆ ಅವಕಾಶ ಮಾಡ್ತಾ ಇದ್ದಾರೆ. ಉದಾಹರಣೆಗೆ ಆಧುನೀಕರಣ ಅನ್ನುವ ಪದ ಪದವೇ ಆಗೊಲ್ಲ. ಅಚ್ಚುಕಟ್ಟಾದಂಥ ಪದ "ಸೃಜನಶೀಲ" ನಿಜವಾಗಿ ವ್ಯಾಕರಣಬದ್ಧ ಪದ ಅಲ್ಲವೇ ಅಲ್ಲ. ಸೃಜನಶೀಲ ಅನ್ನೋದನ್ನು ಸೃಷ್ಟಿಶೀಲ ಅನ್ನಬಹುದು. ಆಧುನೀಕರಣವನ್ನು ಆಧುನಿಕಗೊಳಿಸು ಅಂತಾ ಮಾಡಬಹುದಲ್ಲವೇ! ಯಾರೋ ನಾಲ್ಕು ಜನ "ಈಕರಣ" ಸೇರಿಸಿಕೊಂಡು "ಸಬಲೀಕರಣ", ’ಅಗಲೀಕರಣ’ ಗಳು ನುಸುಳಿವೆ. ನಾವು ಸರಿಯಾಗಿ ವ್ಯಾಕರಣ ಅಭ್ಯಾಸ ಮಾಡಬೇಕು. ಪ್ರೌಢಶಾಲೆಯಲ್ಲೂ ಅಚ್ಚುಕಟ್ಟಾದಂತಹ ಅಧ್ಯಾಪಕರು ಇರಬೇಕು. ಪ್ರತಿಯೊಂದು ಪತ್ರಿಕೆಯಲ್ಲೂ ಕೂಡ ತನ್ನ ತಪ್ಪನ್ನು ಕಂಡುಹಿಡಿದು ತೋರಿಸತಕ್ಕಂಥ ಒಬ್ಬ ವಿದ್ವಾಂಸನನ್ನು
ಇಟ್ಟುಕೊಳ್ಳಬೇಕಾಗುತ್ತದೆ. ಆಗ ತಪ್ಪು ತಿದ್ದಿಕೊಳ್ಳಲು ಸಾಧ್ಯ.
ಕ್ರಿಯಾಪದ ಇಲ್ಲದೆ ವಾಕ್ಯರಚನೆ ಮಾಡುತ್ತಿರುವ ಕುರಿತು ನಿಮ್ಮ ಅನಿಸಿಕೆ ಏನು ?
ಸಿದ್ಧವನಹಳ್ಳಿ ಕೃಷ್ಣಶರ್ಮ ಬರೆದಾಗ ಈ ಶೈಲಿ ಒಂದುರೀತಿ ಪ್ರಾರಂಭವಾಯ್ತು. ಅವರು ಕ್ರಿಯಾಪದವಿಲ್ಲದೆ ವಾಕ್ಯ ಮಾಡಿಕೊಂಡು ಹೋದ್ರು. ಬುದ್ಧಿವಂತರು ತಮ್ಮದೇ ಆದ ಒಂದು ಮಾರ್ಗವಿಟ್ಟುಕೊಂಡು ಬರೀತಾರೆ. ಅದೇ ಎಲ್ಲರೂ ಹಾಗೇ ಮಾಡ್ತೀವಿ ಅಂತಾ ಹೋದ್ರೆ ಆಗೋದಿಲ್ಲ. ಈ ವಿಷಯದಲ್ಲಿ ವರ್ತಮಾನ ಪತ್ರಿಕೆಗಳು ಕೂಡ ಬಹಳ ಎಚ್ಚರಿಕೆಯಿಂದ ಇರ‍್ಬೇಕು.
ಕನ್ನಡ ನಿಘಂಟು ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಅನುಭವಗಳು?
ನಿಘಂಟು ಕ್ಷೇತ್ರ ತುಂಬಾ ವ್ಯಾಪಕವಾದದ್ದು. ನನ್ನ ನಿಘಂಟಿನ ಬಗ್ಗೆ ನನ್ನ ಅಭಿಪ್ರಾಯವೇನೆಂದರೆ ಇಪ್ಪತ್ತು ವರ್ಷ ಕೆಲಸ ಮಾಡಿದ ನನಗೆ ಇವತ್ತೂ ಆ ನಿಘಂಟನ್ನು ನೋಡಿದ್ರೆ ಅದರಲ್ಲಿ ಅನೇಕ ತಪ್ಪುಗಳು ಕಂಡುಬರುತ್ತವೆ. ಅದನ್ನು ತಿದ್ದಬೇಕು ಅಂತ ನನಗನ್ನಿಸುತ್ತದೆ. ನಿಘಂಟಿಗೋಸ್ಕರ ಒಂದು ಶಾಶ್ವತವಾದ ಇಲಾಖೆ ಇರಬೇಕು. ಅದು ಆಗದೇ ಹೋದರೆ ನಮ್ಮ ತಪ್ಪನ್ನು ತಿದ್ದುತ್ತಾ ಹೋಗಬೇಕು. ಆಕ್ಸಫರ್ಡ್ ವಿಶ್ವವಿದ್ಯಾಲಯದ ನಿಘಂಟು ಈಗ ೧೫೦ನೇ ವರ್ಷ ದಾಟಿದೆ. ಅದಕ್ಕೆ ದೊಡ್ಡ ಕಛೇರಿ ಇದೆ. ಒಟ್ಟು ಪ್ರಪಂಚದಲ್ಲಿ ಸುಮಾರು ೬೦೦ ಜನ ಅದಕ್ಕೆ ಸಹಾಯ ಮಾಡುತ್ತಿದ್ದಾರೆ. ಕಛೇರಿಯೊಳಗೆ ಸುಮಾರು ೧೨೦ ಎಡಿಟರ‍್ಸ್ ಇದ್ದಾರೆ.
ನಮ್ಮಲ್ಲಿ ನಿಘಂಟು ಕ್ಷೇತ್ರಕ್ಕೆ ಬರೋರು ಯಾರಿದ್ದಾರೆ! ಅದಕ್ಕೆ ದುಡ್ಡು ಇಲ್ಲ, ಗೌರವ ಇಲ್ಲ. ಆ ಕಡೆ ಯಾರೂ ತಿರುಗಿ ನೋಡೋದಿಲ್ಲ. ನನ್ನಂಥೋರು ಇರ‍್ಬೇಕು ಅಷ್ಟೇ! ಈಗ ಆಗಿರುವ ಕೆಲಸ ಒಂದೊಂದು ಶತಮಾನದಲ್ಲಿ ಆಗುವ ಬೆಳವಣಿಗೆ. ಹೀಗೊಬ್ರು ಹೇಳ್ತಾ ಇದ್ರು- "ನೀನು ಬದುಕಿರುವಾಗ ನಿಘಂಟನ್ನು ಮುಗಿಸಿದ್ರೆ ನೀನೇ ಪುಣ್ಯವಂತ." ಸರ್ಕಾರ, ಜನ ಈ ಕಡೆ ಗಮನ ಕೊಟ್ಟು ಶಾಶ್ವತವಾದ ನಿಘಂಟು ಕಛೇರಿ, ಸರಿಯಾದ ವಿದ್ವಾಂಸರನ್ನು ತಂದು ಹಾಕಿದ್ರೆ ಒಳ್ಳೆ ಸೊಗಸಾದ ಸಾಧನೆ ಮಾಡಬಹುದು.
ಕನ್ನಡ ಪಠ್ಯಪುಸ್ತಕಗಳ ರಚನೆಯಲ್ಲಿ ಯಾವ ಮಾರ್ಗ ಕಂಡುಕೊಂಡರೆ ಯಶಸ್ವಿಯಾಗಲು ಸಾಧ್ಯ?
ಕನ್ನಡ ಪಠ್ಯಪುಸ್ತಕ ಈ ಮಟ್ಟಕ್ಕೆ ಅವನತಿ ಹೊಂದಲು ಕಾರಣವೇನೆಂದರೆ ಪಾಠ ಮಾಡದೇ ಇರುವವರನ್ನು, ತಿಳುವಳಿಕೆ ಇಲ್ಲದಿದ್ದವರನ್ನು ಪಠ್ಯಪುಸ್ತಕ ಸಮಿತಿಗೆ ಆಯ್ಕೆ ಮಾಡುತ್ತಾರೆ. ಸಮಿತಿಯನ್ನು ಮಾಡುವಾಗ ಅವರಿಗೆ ಪಠ್ಯಪುಸ್ತಕ ಚೆನ್ನಾಗಿರಬೇಕು ಅನ್ನೋ ದೃಷ್ಟಿ ಇರುವುದಿಲ್ಲ. ಕರ್ನಾಟಕದ ಯಾವ ಜಿಲ್ಲೆಯ, ಯಾವ ಜಾತಿಯ ಜನ ಅಲ್ಲಿ ಇರ‍್ಬೇಕು, ಯಾವ ಕಛೇರಿಗೆ ಶಿಕ್ಷಣ ಕ್ಷೇತ್ರದವರು ಎಷ್ಟಿರಬೇಕು, ಬಾಕಿಯವರು ಎಷ್ಟಿರಬೇಕು ಅಂತಾ ಪಠ್ಯಪುಸ್ತಕಕ್ಕೆ ಸಂಬಂಧಪಡದೇ ಇದ್ದ ಮಾಪನಗಳನ್ನು ಹುಡುಕಿ ಸಮಿತಿ ಮಾಡುತ್ತಾರೆ. ಪಠ್ಯಪುಸ್ತಕವನ್ನು ಪಾಠ ಹೇಳುವವರೇ ಮಾಡಬೇಕು. ಪಠ್ಯಪುಸ್ತಕಕ್ಕೆಂದೇ ಲೇಖನಗಳನ್ನು ಬರೆಸಬಾರದು. ಹಿಂದಿನವರು ಬರೆದ ಲೇಖನಗಳನ್ನು ಆರಿಸಬೇಕು. ಪಠ್ಯಪುಸ್ತಕಗಳನ್ನು ತಿದ್ದುವವರು ಒಂದು ಶಬ್ದವನ್ನೂ ಸರಿಯಾಗಿ ಓದಿರುವುದಿಲ್ಲ.
ಸಾಹಿತ್ಯ ಜೀವನದಲ್ಲಿ ತಾವು ಕಂಡ ತೃಪ್ತಿಯ ಕ್ಷಣ ಯಾವುದು?
ನಾನು ಸೃಷ್ಟಿಶೀಲ ಕಥೆ ಬರೆದಿಲ್ಲ. ಸಾಹಿತ್ಯ ಬರೆದಿಲ್ಲ. ಪ್ರಾರಂಭ ಮಾಡಿದ್ದು ಸಾಹಿತ್ಯ ವಿಮರ್ಶಕನಾಗಿ, ಸಾಹಿತ್ಯ ಚರಿತ್ರೆಯನ್ನು ಬರೆದವನು. ನಿಘಂಟು ಕ್ಷೇತ್ರಕ್ಕೆ ಹೋದಾಗ ೪೦ ವರ್ಷ. ಬಿ.ಎಡ್.ಕಾಲೇಜಿನಲ್ಲಿ ಶಿಕ್ಷಕರಿಗೆ ೧೦ ವರ್ಷ ಪಾಠ ಮಾಡಿದ್ದೀನಿ. ಪ್ರೈಮರಿ ತರಗತಿಯಿಂದ ಎಂ.ಎ.ವರೆಗೆ ಪಾಠ ಮಾಡಿದ್ದೀನಿ. ಪ್ರಿನ್ಸಿಪಾಲ್ ಆಗಿ ನಿವೃತ್ತನಾಗಿದ್ದೀನಿ. ಬೋಧನಾ ಸಮಯದಲ್ಲಿ ಪಟ್ಟಂಥ ಸಂತೋಷ, ತೃಪ್ತಿ ನನಗೆ ಮತ್ತೆಲ್ಲೂ ಸಿಕ್ಕಿಲ್ಲ. ಬರವಣಿಗೆ, ಸಂಶೋಧನೆ ಅವೆಲ್ಲಾ ನಿಘಂಟಿನೊಳಗೆ ಸೇರಿಹೋಗಿವೆ. ೨೦ ವರ್ಷ ಮಾಡಿದ ಸಂಶೋಧನೆಯಲ್ಲಿ ಏನ್ ಮಾಡಿದ್ರಿ ಅಂತಾ ನನ್ನ ಯಾರಾದ್ರೂ ಕೇಳಿದ್ರೆ ನಿಘಂಟು ಮಾಡಿದ್ದೇನೆ ಅನ್ನುತ್ತೇನೆ.
ಇಂದಿನ ಕನ್ನಡ ಪತ್ರಿಕಾ ಕ್ಷೇತ್ರದಲ್ಲಿ ಅಂಕಣ ಬರೆಹಗಳಿಗೆ ದೊರೆಯುತ್ತಿರುವ ಮನ್ನಣೆ ಮತ್ತು ಭವಿಷ್ಯ ಹೇಗಿದೆ?
ಈಗ ವೃತ್ತಪತ್ರಿಕೆಗಳು ರಾಜಕೀಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿವೆ. ಅಂಕಣ ಬರೆಹ ರಾಜಕೀಯಕ್ಕೆ ಸೇರಿದ್ದಲ್ಲ. ಇದಕ್ಕೆ ವಿಶಿಷ್ಟವಾದ ಸ್ಥಾನವಿದೆ. ಇದು ಬೇರೆಬೇರೆ ವಿಚಾರಗಳಿಗೆ, ಸಂಸ್ಕೃತಿಗೆ, ಭಾಷೆಗೆ, ವಿಮರ್ಶೆಗೆ ಸಂಬಂಧಿಸಿದ್ದಾಗಿರುತ್ತದೆ. ಅವುಗಳ ಬೆಲೆ ಎಂದೆಂದಿಗೂ ಕಮ್ಮಿಯಾಗುವದಿಲ್ಲ. ಉದಾಹರಣೆಗೆ ಎಚ್ಚೆಸ್ಕೆಯವರ ಅಂಕಣ ಬರೆಹ. ಈಚೆಗೆ ಅಂಕಣ ಬರೆಹ ಸ್ವಲ್ಪ ಕಡಿಮೆ ಆಗ್ತಾ ಇದೆ. ಕೆಲವು ಪತ್ರಿಕೆಗಳಲ್ಲಿ ಒಂದೊಂದು ವಾರ ಇಂಥಾದ್ದೇ ಬರಬೇಕೆಂದು ವಿಷಯ ಇಟ್ಕೊಂಡಿದ್ದಾರೆ. ಬೇರೆಬೇರೆ ವಿದ್ವಾಂಸರು ಇದಕ್ಕೆ ಬರೆಯುತ್ತಾರೆ. ಹೊಸದಾಗಿರುವ ಪುಸ್ತಕಗಳ ಪರಿಚಯಕ್ಕಾಗಿ ಕೆಲವು ಅಂಕಣಗಳಿವೆ. ಇಂಥಾದ್ದು ಹೆಚ್ಚಬೇಕು. ಅಂಕಣ ಬರಹವನ್ನು ತುಂಬಾ ಅಚ್ಚುಕಟ್ಟು ಮಾಡಬೇಕು. ಹಾ.ಮಾ.ನಾ.
ಬರೆಯುತ್ತಿದ್ದ ಅಂಕಣ ಜ್ಞಾಪಿಸಿಕೊಂಡರೆ ಅವರು ಎಷ್ಟು ಅಭ್ಯಾಸ ಮಾಡುತ್ತಾ ಇದ್ರು ಅಂತ ಗೊತ್ತಾಗುತ್ತದೆ. ಅಂಕಣ ಬರೆಹ ಅಷ್ಟು ಸುಲಭ ಅಲ್ಲ.
ವಿಳಾಸ : ಕಾವೆಂಶ್ರೀ ನೇಸರ ಉಪಾಹಾರ
ತೋಂಟದಾರ್ಯ ರಥಬೀದಿ ಗದಗ - ೫೮೨೧೦೧
ಸಂಚಾರಿ : ೯೪೪೮೪೩೬೪೬೬
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
February
(14)
- ಕೆಂಪೇಗೌಡರು ಕಟ್ಟಿದ ನಾಡಲ್ಲಿ ನುಡಿಹಬ್ಬ
- ಉದ್ಯಾನ ನಗರಿಯ ಒಡಲಿಲ್ಲ ಅಕ್ಷರ ಜಾತ್ರೆಯ ಪುಳಕ...
- ಕನ್ನಡ ಮತ್ತು ಸಾಹಿತ್ಯ ಸಮ್ಮೇಳನ
- ನಿರೀಕ್ಷಿಸದೇ ಬಂದ ಭಾಗ್ಯವಿದು
- ನಡೆದಾಡುವ ನಿಘಂಟು ಶಬ್ದರ್ಷಿ ಪ್ರೊ. ಜಿ.ವೆಂಕಟಸುಬ್ಬಯ್ಯ
- ನಿಜಾಮರ ಆಡಳಿತದಲ್ಲಿ ಕನ್ನಡಕ್ಕೆ ಹೋರಾಡಿದವರು
- ನೆನಪುಗಳ ಬಿಚ್ಚಿಟ್ಟ ನಾಡೋಜ
- ಸಾಧಿಸಿರುವ ಕಾರ್ಯಗಳ ಬಗ್ಗೆ ಹೆಮ್ಮೆ ಮತ್ತು ತೃಪ್ತಿ
- ಕನ್ನಡ ಭಾರತರತ್ನ ಪಂಡಿತ್ ಭೀಮಸೇನ ಜೋಶಿ
- ಯಾಕೆ ಮೂಕನಾದ್ಯೋ ಗುರುವೆ...
- ಗಾನಲೋಕದ ಭೀಮಸೇನ
- ಕರ್ನಾಟಕ ಏಕೀಕರಣದಲ್ಲಿ ಕರ್ನಾಟಕ ಸಂಘಗಳ ಪಾತ್ರ
- ನಾನು ಕಂಡ ತೇಜಸ್ವಿ...
- ದಿಟ್ಟ ಕನ್ನಡ ಹೋರಾಟಗಾರ ಈಶ್ವರಪ್ಪ
-
▼
February
(14)
No comments:
Post a Comment