Tuesday, February 8, 2011

ಕರ್ನಾಟಕ ಏಕೀಕರಣದಲ್ಲಿ ಕರ್ನಾಟಕ ಸಂಘಗಳ ಪಾತ್ರಜಯದೇವಪ್ಪ ಜೈನಕೇರಿ

ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆ, ಕರ್ನಾಟಕ ರಾಜ್ಯ, ಸಾಂಸ್ಕೃತಿಕವಾಗಿ ಅಖಂಡವಾದದ್ದು. ಆದರೆ ರಾಜಕೀಯವಾಗಿ ಅನೇಕ ಏರಿಳಿತಗಳನ್ನು ಕಂಡಿದೆ. ಭಾರತದ ಇತಿಹಾಸದೊಂದಿಗೆ ಅನೇಕ ರಾಜರ, ಆಳ್ವಿಕೆಗೆ ಒಳಪಟ್ಟರೂ ಸಂಸ್ಕೃತಿ ಮತ್ತು ಭಾಷೆ ಮೂಲಕ ತನ್ನ ಅಸ್ಮಿತೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ. ಉತ್ತರದಲ್ಲಿ ಬಹುಮನಿ ಸುಲ್ತಾನರು, ದಕ್ಷಿಣದಲ್ಲಿ ವಿಜಯನಗರ ರಾಜ್ಯ ಸ್ಥಾಪನೆಗೊಂಡಾಗ ಸ್ವಲ್ಪ ಮಟ್ಟಿಗೆ ವಿಭಿನ್ನತೆ ಕಾಣಿಸಿದರೂ ವಿಜಯನಗರ ಪತನಾನಂತರ ಕನ್ನಡ ನಾಡು ಅನೇಕ ಪಾಳೆಪಟ್ಟುಗಳಾಯಿತು. ಟಿಪ್ಪುವಿನ ಕಾಲದಲ್ಲಿ ಈ ತುಂಡರಸರ ಪ್ರಾಬಲ್ಯ ಕಡಿಮೆಯಾಗಿದ್ದು ಕಂಡುಬರುತ್ತದೆ. ನಂತರ ಬಂದ ಬ್ರ್ರಿಟಿಷರು ತಮ್ಮ ಆಡಳಿತದ ಅನುಕೂಲಕ್ಕಾಗಿ, ಕನ್ನಡನಾಡನ್ನು ೨೨ ಭಾಗಗಳನ್ನಾಗಿಸಿದರು. ರಾಜಕೀಯವಾಗಿ ಈ ಎಲ್ಲ ದೌರ್ಜನ್ಯಗಳನ್ನು, ಎದುರಿಸಿಯೂ ಕನ್ನಡ ಭಾಷೆ ತನ್ನತನವನ್ನು ಉಳಿಸಿಕೊಂಡು ಬಂದಿತು.
ಭಾರತದ ಸಂದರ್ಭದಲ್ಲಿ ಭಾಷಾವಾರು ಪ್ರಾಂತ್ಯರಚನೆ ಚಳವಳಿ ೧೮೫೦ ರಿಂದಲೇ ಕಂಡು ಬರುತ್ತದೆ, ೧೮೭೪ರಿಂದ ಬಂಗಾಳ, ಅಸ್ಸಾಂ, ೧೮೭೬ರಿಂದ ಒರಿಸ್ಸಾದಲ್ಲಿ, ಭಾಷಾಚಳವಳಿಗಳು ಆರಂಭವಾದವು. ಕರ್ನಾಟಕದಲ್ಲಿ ೧೮೫೬ರಲ್ಲಿಯೇ ಕರ್ನಾಟಕದ ಏಕೀಕರಣ ಚಳವಳಿಗೆ ಚಾಲನೆ ನೀಡಿದವರು ಚನ್ನಬಸಪ್ಪನವರು. ಧಾರವಾಡವನ್ನು ಕೇಂದ್ರವನ್ನಾಗಿ, ಉತ್ತರ ಕನ್ನಡ, ಬೆಳಗಾವಿ, ಬಿಜಾಪುರ ಜಿಲ್ಲೆಗಳಲ್ಲಿ ಏಕೀಕರಣ ಚಳವಳಿ ಪ್ರಾರಂಭವಾಯಿತು. ೧೮೯೦ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯೊಂದಿಗೆ ಏಕೀಕರಣ ಚಳುವಳಿಗೆ ಸಂಘಟನಾತ್ಮಕ ಬೆಂಬಲ ದೊರಕಿತು. ಬೆನಗಲ್ ರಾಮರಾಯರು ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಕುರಿತು ಉಪನ್ಯಾಸಗಳು ಲೇಖನಗಳ ಮೂಲಕ ಜನ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು. ೧೮೯೮ ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ರಾಯಲ್ ಕಮಿಷನ್ ಮುಂಬೆ ಭಾಷಾವಾರು ಪ್ರಾಂತ್ಯ ರಚನೆಯ ಅಗತ್ಯತೆಯನ್ನು ಮಂಡಿಸಿದರು.
೧೯೧೫ ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಯೊಂದಿಗೆ ದಕ್ಷಿಣ ಕರ್ನಾಟಕದಲ್ಲಿಯೂ ಏಕೀಕರಣ ಚಳವಳಿಗೆ ಚಾಲನೆ ದೊರಕಿತು. ಕನ್ನಡ ಮಾತಾಡುವ ಎಲ್ಲಾ ಪ್ರಾಂತ್ಯಗಳ ಸದಸ್ಯರನ್ನು ಹೊಂದುವ ಮೂಲಕ ಅಖಂಡ ಕರ್ನಾಟಕದ ಕಲ್ಪನೆಗೆ ದಾರಿಯಾಯಿತು. ಕರ್ನಾಟಕ ಏಕೀಕರಣ ಚಳವಳಿಗೆ ಸಾಂಸ್ಕೃತಿಕ ಸ್ವರೂಪ ಬಂದಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮೊಟ್ಟ ಮೊದಲ ಸಮ್ಮೇಳನದಲ್ಲಿಯೇ ಕರ್ನಾಟಕ ಪ್ರಾಂತ್ಯ ರಚನೆಗೆ ಬಲವಾದ ಒತ್ತಾಯ ಕಂಡುಬಂದಿತು. ಎಲ್ಲರ ಗುರಿ ಏಕೀಕರಣದತ್ತ ಹರಿಯುವಂತಾಯಿತು. ೧೯೧೭ರಲ್ಲಿ ಈ ಉದ್ದೇಶ ಸಾಧನೆಗೆ ಕರ್ನಾಟಕ ಸಭೆ ಸ್ಥಾಪನೆಯಾಯಿತು. ಕರ್ನಾಟಕ ಪ್ರಾಂತ್ಯ ರಚನೆಗೆ ಅಂದಿನ ಬ್ರಿಟಿಷ್ ಭಾರತದ ಕಾರ್ಯದರ್ಶಿ ಮಾಂಟಿಗ್ಯೂ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ವಿದ್ಯಾವರ್ಧಕ ಸಂಘ (೧೮೯೦) :
ಕಳೆದ ೧೧೯ ವರ್ಷಗಳಿಂದ ಕನ್ನಡ-ಕನ್ನಡಿಗ-ಕರ್ನಾಟಕ ನಾಡಿನ ಸರ್ವತೋಮುಖ ಉನ್ನತಿಗಾಗಿ ಶ್ರಮಿಸುತ್ತಾ ಬಂದಿರುವ ಇಂದಿಗೂ ಕ್ರಿಯಾಶೀಲವಾಗಿರುವ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘ ಇದು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಕವಿ-ಸಾಹಿತಿ, ಕಲಾವಿದರನ್ನು ಬೆಳೆಸುತ್ತಾ ಬಂದಿದೆ. ನಾಡಿನಾದ್ಯಂತ, ಹೊರನಾಡುಗಳಲ್ಲಿಯೂ ಕನ್ನಡ ಡಿಂಡಿಮವನ್ನು ವಿಸ್ತಾರಗೊಳಿಸಿರುವ ಸಂಘ, ಗ್ರಂಥ ಪ್ರಕಟನೆಯಲ್ಲಿಯೂ ತೊಡಗಿದೆ. ಸುಮಾರು ೧೦೦ ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ಧಾರವಾಡದ ಕೇಂದ್ರ ಸ್ಥಳದಲ್ಲಿರುವ ಸಂಘದ ಸಭಾಭವನಗಳು, ಕಛೇರಿ, ಗ್ರಂಥಾಲಯ ಎಲ್ಲರ ಗಮನ ಸೆಳೆದಿದೆ. ರಾಜ್ಯ ಸರ್ಕಾರದ ಅನುದಾನ ಹೊಂದಿರುವ, ತನ್ನದೆ ಆದ ಸ್ವಂತ ಭವನ, ವಾಣಿಜ್ಯ ಸಂಕೀರ್ಣ ಹೊಂದಿರುವ ಸಂಸ್ಥೆಯಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರದಲ್ಲೇ ಘನತೆವೆತ್ತ ಸಂಸ್ಥೆಯಾಗಿದೆ. ಅತ್ಯಂತ ಹಿರಿದಾದ ಈ ಸಾಹಿತ್ಯಕ ಸಂಸ್ಥೆ, ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ್ ಚಳವಳಿ, ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಲು, ಧಾರವಾಡ ಆಕಾಶವಾಣಿ ನಿಲಯ, ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಗೊಳ್ಳಲು ಪ್ರೇರಣೆಯಾಗಿ ದುಡಿದಿದೆ. ನಾಡಿನ ಹೊರನಾಡಿನ ಸಂಘ ಸಂಸ್ಥೆಗಳಿಗೆ ಮಾದರಿಯೆನಿಸಿದೆ, ಸ್ಪೂರ್ತಿ ನೀಡಿದೆ. ನಾಡಿನ ಹೊರನಾಡಿನ ಕನ್ನಡ ಸಂಸ್ಥೆಗಳಿರುವಲ್ಲ್ಲಿಗೇ ಹೋಗಿ ಸಂಯುಕ್ತ ಆಶ್ರ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕನ್ನಡ ಕಟ್ಟುವ ಕೆಲಸದಲ್ಲಿ ಮುಂಚೂಣಿಯಲ್ಲಿದೆ.
ಶ್ರೀ ರಾ.ಲ.ದೇಶಪಾಂಡೆ ಅಧ್ಯಕ್ಷರಾಗಿ ಆರಂಭವಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಸ್ತುತ ಅಧ್ಯಕ್ಷರಾಗಿ ನಾಲ್ಕು ದಶಕಗಳಿಂದ ನಾಡೋಜ ಪಾಟೀಲ ಪುಟ್ಟಪ್ಪನವರು, ಉಪಾಧ್ಯಕ್ಷರಾಗಿ ಶ್ರೀ. ಎಂ.ಎಂ.ಹೂಲಿ ವಕೀಲರು ಹುಬ್ಬಳ್ಳಿ, ಗೌರವ ಕಾರ್ಯದರ್ಶಿಯಾಗಿ ಪ್ರೊ. ಬಿ.ವಿ. ಗುಂಜೆಟ್ಟಿ ಅವರು ಸಂಘವನ್ನು ಮುನ್ನಡೆಸುತ್ತಿದ್ದಾರೆ.
೧೯೧೮ ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಮೊದಲ ಕರ್ನಾಟಕ ಸಂಘದ ಸ್ಥಾಪನೆಯಾಯಿತು. ನಂತರ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಕರ್ನಾಟಕ ಸಂಘ ಸ್ಥಾಪನೆಯಯಿತು. ಇದರಿಂದಾಗಿ ನಾಡು ನುಡಿಗಳ ಸೇವೆಗೆ ಚಾಲನೆ ದೊರೆಯಿತು. ನಂತರದಲ್ಲಿ ಒಂದು ಚಳವಳಿಯೋಪಾದಿಯಲ್ಲಿ ಹಳೆ ಮೈಸೂರಿನ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕ ಸಂಘಗಳು ಸ್ಥಾಪನೆಯಾದವು. ಕನ್ನಡ ಸಾಹಿತ್ಯ ಪರಿಷತ್ತು ಅಂದಿನ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಸ್ಥಾಪನೆಯಾಗಿ ರಾಜ ಪೋಷಿತವಾಗಿದ್ದರಿಂದಾಗಿ, ಜನ ಸಾಮಾನ್ಯರು ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರ ದೇಣಿಗೆಯಿಂದ ಮತ್ತು ತಮ್ಮದೇ ಆದ ಸಂಪನ್ಮೂಲಗಳಿಂದ ಕನ್ನಡ ಭಾಷಾ ಚಳವಳಿ ಮತ್ತು ಕರ್ನಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಕರ್ನಾಟಕ ಸಂಘಗಳು ವೇದಿಕೆಗಳಾದವು. ಅಂದಿನ ಖ್ಯಾತ ಸಾಹಿತಿಗಳ, ಭಾಷಾ ವಿದ್ವಾಂಸರ ಬೆಂಬಲವೂ ಕರ್ನಾಟಕ ಸಂಘಗಳಿಗೆ ದೊರಕಿತು.
ಭಾರತದ ಸ್ವಾತಂತ್ರ್ಯ ಚಳವಳಿಯ ಜೊತೆಗೆ ಕರ್ನಾಟಕ ಏಕೀಕರಣ ಚಳವಳಿಯೂ ೧೯೨೦ರಲ್ಲಿ ನಾಗಪುರ ಕಾಂಗ್ರೆಸ್ ಅಧಿವೇಶನದ ಮುಖ್ಯ ವಿಷಯಗಳಾದವು. ಕಡಪ ರಾಘವೇಂದ್ರರಾಯರ ನೇತ್ರತ್ವದಲ್ಲಿ ಕನ್ನಡನಾಡಿನ ಎಲ್ಲ ಪ್ರಾಂತ್ಯಗಳಿಂದ ೮೦ ಪ್ರತಿನಿಧಿಗಳು ಭಾಗವಹಿಸಿದ್ದು ವಿಶೇಷ. ೧೯೨೪ ರಲ್ಲಿ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶದಲ್ಲಿ ಚರ್ಚಿತವಾಗಿ ಕರ್ನಾಟಕ ಏಕೀಕರಣ ಸಭಾ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಕಮಿಟಿ ಸಹ ಏಕೀಕರಣ ಚಳವಳಿ ನೇತೃತ್ವ ವಹಿಸಿತು. ನಂತರದಲ್ಲಿ ಚಳವಳಿ ತೀವ್ರರೂಪ ಪಡೆಯಿತು. ೧೯೩೬ ರಿಂದ ೪೦ ರವರೆಗೆ ಅಖಿಲ ಕರ್ನಾಟಕ ಏಕೀಕರಣ ಸಮ್ಮೇಳನಗಳನ್ನು ಬೆಳಗಾವಿ, ಧಾರವಾಡ ಮತ್ತು ಸೊಲ್ಲಾಪುರಗಳಲ್ಲಿ ನೆಡೆಸಿ ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. ೧೯೩೬ ರಲ್ಲಿ ಸಿಂಧ್ ಮತ್ತು ಒರಿಸ್ಸಾ ಪ್ರಾಂತ್ಯ ರಚನೆಯೊಂದಿಗೆ, ದಕ್ಷಿಣದಲ್ಲಿ ಆಂಧ್ರ, ಕೇರಳ, ಕರ್ನಾಟಕಗಳಲ್ಲಿ ಭಾಷಾವಾರು ಪ್ರಾಂತ್ಯ ಚಳವಳಿಗೆ ಹೆಚ್ಚಿನ ಬೆಂಬಲ ದೊರಕಿತು. ಮುಂಬಯಿ ಮತ್ತು ಮದ್ರಾಸ್ ಶಾಸನ ಸಭೆಗಳಲ್ಲಿ ಕಾಂಗ್ರೆಸ್ ಬಹುಮತ ಪಡೆಯಿತು. ಈ ಎರಡೂ ಕಡೆ ಭಾಷಾವಾರು ಪ್ರಾಂತ್ಯ ರಚನೆಗೆ ಗೊತ್ತುವಳಿಯನ್ನು ಕಾಂಗ್ರೆಸ್ ಅಂಗೀಕರಿಸಿತು.
ಕಾಂಗ್ರೆಸ್‌ನ ಈ ಕರೆಗೆ ವಿವಿಧ ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು ತೀವ್ರವಾಗಿ ಸ್ಪಂದಿಸಿದರು. ರಾಜಕೀಯವಾಗಿ ಮಾತ್ರವಲ್ಲದೆ ಧಾರ್ಮಿಕ ಮುಖಂಡರು ಸಾಹಿತಿಗಳು, ಕಲಾವಿದರು ಕರ್ನಾಟಕ ಏಕೀಕರಣದ ಕನಸು ಕಂಡರು. ಸಾಮಾನ್ಯರು, ಕೃಷಿಕರು, ಕಾರ್ಮಿಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಕವಿಗಳು ಕವನಗಳ ಮೂಲಕ ಜನತೆಯಲ್ಲಿ ಸ್ಪೂರ್ತಿ ತುಂಬಿದರು. ಡಾ.ಡಿ.ಎಸ್. ಕರ್ಕಿ ಅವರ "ಹಚ್ಚೇವು ಕನ್ನಡದ ದೀಪ ಸಿರಿನುಡಿಯ ದೀಪ" ಜನಪ್ರಿಯವಾಯಿತು. ಹುಯಿಲುಗೋಳ ನಾರಾಯಣರಾಯರ "ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು", ಗೀತೆಯಂತೂ ಪ್ರತಿಯೊಬ್ಬ ಕನ್ನಡಿಗರ ಮಂತ್ರವಾಯಿತು. ರಾಷ್ಟ್ರಕವಿ ಕುವೆಂಪು ಅವರ "ಬಾರಿಸು ಕನ್ನಡ ಡಿಂಡಿಮವ" ಕವನ ಕನ್ನಡ ಭಾಷಿಕರ ಸ್ಪೂರ್ತಿಯ ಚಿಲುಮೆಯಾಯಿತು. ನೂರಾರು ಕವಿಗಳು, ಸಾಹಿತಿಗಳು ಕನ್ನಡ ಏಕೀಕರಣದ ಕನಸನ್ನು ನನಸಾಗಿಸುವ ಕವನಗಳನ್ನು ರಚಿಸಿ ವೇದಿಕೆಗಳಲ್ಲಿ ವಾಚಿಸಿದರು.
ಈ ಎಲ್ಲ ಕಾರ್ಯಗಳಿಗೆ ವೇದಿಕೆಯಾಗಿದ್ದು ೧೮೯೦ ರಲ್ಲಿ ಆರಂಭವಾದ ಕರ್ನಾಟಕ ವಿದ್ಯಾವರ್ಧಕ ಸಂಘ ೧೯೧೪-೧೫ ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು. ೧೯೧೬ ರಲ್ಲಿ ಕನಸಿನ "ಕರ್ನಾಟಕ" ಹೆಸರನ್ನು ಹೊತ್ತು ಕನ್ನಡ ನಾಡಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕ ಕೇಂದ್ರಗಳಲ್ಲಿ, ಗ್ರಾಮ ಮಟ್ಟದಲ್ಲಿ ಆರಂಭವಾದ ಕರ್ನಾಟಕ ಸಂಘಗಳಲ್ಲಿ ೧೯೧೮ ರಲ್ಲಿ ಪ್ರಾರಂಭವಾದ ಬೆಂಗಳೂರು ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘವೇ ದಾಖಲೆಗಳ ಪ್ರಕಾರ ಮೊದಲನೆಯದು ಎಂದು ಗುರುತಿಸಲಾಗಿದೆ. ಇದರಿಂದ ಸ್ಪೂರ್ತಿಗೊಂಡ ಅನೇಕ ಕರ್ನಾಟಕ ಸಂಘಗಳು ನಾಡಿನಾದ್ಯಂತ ಜನತೆಯನ್ನು ಏಕೀಕರಣಕ್ಕೆ ಮಾನಸಿಕವಾಗಿ ಸಿದ್ಧಗೊಳಿಸುವುದರಲ್ಲಿ ಮಹತ್ವದ ಪಾತ್ರವಹಿಸಿದವು. ಸ್ವಾತಂತ್ರ್ಯಾಂದೋಲನದ ಜೊತೆ ಜೊತೆಗೆ ಕರ್ನಾಟಕ ಏಕೀಕರಣಕ್ಕೂ ರಾಜಕೀಯವಾಗಿ ಪ್ರಾಮುಖ್ಯತೆ ದೊರೆಯಿತು.
ಕನ್ನಡ ಸಾಹಿತ್ಯ ಪರಿಷತ್ತು :
ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ಸ್ಥಾಪಿತವಾದ ಕರ್ನಾಟಕ ಸಾಹಿತ್ಯ ಪರಿಷತ್ತು ದಿನಾಂಕ : ೦೩-೦೫-೧೯೧೫ ರಂದು ಬೆಂಗಳೂರಲ್ಲಿ ಆರಂಭವಾಯಿತು. "ಕಂಠೀರವ ನರಸಿಂಹರಾಜ ಒಡೆಯರ್ ಸ್ಥಾಪಕ ಅಧ್ಯಕ್ಷರಾಗಿದ್ದರು. ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರಾಜಮಂತ್ರ ಪ್ರವೀಣ ಶ್ರೀ ಹೆಚ್.ವಿ. ನಂಜುಂಡಯ್ಯನವರನ್ನು ಆರಿಸಲಾಯಿತು. ಆರಂಭದಲ್ಲಿ ರಾಜರು ಮಂತ್ರಿಗಳು ಅಧಿಕಾರಿಗಳು ಸಮಾಜದ ಮೇಲ್ವರ್ಗದವರು ಮಾತ್ರ ಪದಾಧಿಕಾರಿಗಳೂ, ಸದಸ್ಯರು ಆಗಿದ್ದರಿಂದ ಜನ ಸಾಮಾನ್ಯರು ದೂರವೇ ಉಳಿದಿದ್ದರು. ಕಾಲಧರ್ಮಕ್ಕನುಗುಣವಾಗಿ ಪ್ರಸಿದ್ಧ ವಿದ್ವಾಂಸರು, ಸಾಹಿತಿಗಳು, ಸಂಶೋಧಕರು ಸದಸ್ಯರಾದರು. ಮೈಸೂರು ರಾಜ್ಯದ ಆರ್ಥಿಕ ಸಾಂಸ್ಕೃತಿಕ ಅಭಿವೃದ್ಧಿಗಾಗಿ ಸ್ಥಾಪಿತವಾದ ಸಂಸ್ಥೆ ಕ್ರಮೇಣ ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯದ ಸರ್ವತೋಮುಖ ಬೆಳವಣಿಗೆ, ಕನ್ನಡದ ಸ್ಥಾನಮಾನ ಹಾಗೂ ಕನ್ನಡ ಏಕೀಕರಣಕ್ಕಾಗಿ ಜನಜಾಗೃತಿ ಮೂಡಿಸಿ, ಮಹತ್ಕಾರ್ಯಗಳನ್ನು ಸಾಧಿಸುವ ಉದ್ದೇಶಹೊಂದಿತ್ತು. ಹಳೆ ಮೈಸೂರು ಪ್ರಾಂತ್ಯದಲ್ಲಿ ಕನ್ನಡ ವಾತಾವರಣ ನಿರ್ಮಿಸುವ ಸಲುವಾಗಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಲು ಆಳುವ ಸರ್ಕಾರದ ಮೇಲೆ ಒತ್ತಡ ತರಲಾಯಿತು. ಶಾಲೆಗಳ ಸ್ಥಾಪನೆಯೊಂದಿಗೆ ಕನ್ನಡ ಭಾಷೆಯ ಹುಟ್ಟು ಪ್ರಾಚೀನತೆ ಕುರಿತು ಜಿಜ್ಞಾಸೆ, ಚರ್ಚೆಗಳು ಆರಂಭವಾದವು ವಿಚಾರ ಸಂಕಿರಣಗಳು ನಡೆದವು. ಪ್ರಾಚೀನ ಗ್ರಂಥಗಳ ಪರಿಷ್ಕರಣ, ಅನುವಾದ, ಟೀಕುಗಳು, ಪ್ರಕಟವಾದವು. ನಾಡುನುಡಿಯ ಕುರಿತು ಜನ ಸಾಮಾನ್ಯರೂ ಅಭಿಮಾನ ತಾಳುವಂತಹ ಪರಿಸ್ಥಿತಿ ನಿರ್ಮಾಣವಾಯು. ಕನ್ನಡ ಮಾತನಾಡುವ ಅರ್ಧಕ್ಕಿಂತ ಹೆಚ್ಚು ಕನ್ನಡಿಗರು ಮೈಸೂರು ಸಂಸ್ಥಾನದಿಂದ ಹೊರಗಿದ್ದಾರೆಂಬ ತಿಳಿವಳಿಕೆ ಮೂಡಿಬಂದಿತು. ವಿದ್ವಾಂಸರ ನೆಲೆಯಲ್ಲಿ, ಸಾಹಿತಿಗಳ ಮನದಲ್ಲಿಯೂ ಏಕೀಕರಣದತ್ತ ಒಲವು ಆರಂಭವಾಯಿತು. ಅನ್ಯಭಾಷೆಗಳಲ್ಲಿ ಉಂಟಾಗಿರುವ ಎಚ್ಚರವನ್ನು ಅರಿಯುವಂತಾಯಿತು. ಸಂಸ್ಕೃತದ ಹಲವಾರು ಗ್ರಂಥಗಳನ್ನು ಕನ್ನಡಕ್ಕೆ ತರುವ ಪ್ರಯತ್ನಕ್ಕೆ ರಾಜಕೀಯವಾಗಿ, ಆರ್ಥಿಕವಾಗಿ ಬೆಂಬಲ ದೊರೆಯಿತು. ಇಂಗ್ಲಿಷ್ ಭಾಷೆಯಲ್ಲಿರುವ ಅಪಾರ ಸಾಹಿತ್ಯ ರಾಶಿ ಕನ್ನಡಕ್ಕೆ ಭಾಷಾಂತರಗೊಂಡಿತು. ಶೇಕ್ಸ್‌ಪಿಯರ್‌ನ ನಾಟಕಗಳನ್ನು, ಆಂಗ್ಲ ಪ್ರಸಿದ್ಧ ಕವಿಗಳ ಗೀತೆಗಳನ್ನು ಕನ್ನಡಕ್ಕೆ ತಂದ ಕೀರ್ತಿ ೧೯೨೦-೩೦ ರ ದಶಕದ ನಮ್ಮ ಕವಿಗಳಿಗೆ ಸಲ್ಲುತ್ತದೆ. ಈ ಎಲ್ಲ ಘಟನಾವಳಿಗಳ ಹಿಂದೆ ಕನ್ನಡ ಭಾಷಿಕರನ್ನು ಒಂದೆಡೆ ತರುವ, ರಾಜಕೀಯವಾಗಿ ಕರ್ನಾಟಕ ಏಕೀಕರಣ ಸಾಧಿಸುವ ಉದ್ದೇಶವಿದ್ದುದು ಸ್ಟಷ್ಟ. ಆರಂಭದ ಕಾಲದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಬಳಿಗೆ ಬಾರದೆ ರಾಜರ. ಅಧಿಕಾರಿಗಳ, ವಿದ್ವಾಂಸರ ಸೊತ್ತಾಗಿದ್ದರಿಂದಾಗಿ ಜನ ಸಾಮಾನ್ಯರಿಂದ ಅಲ್ಲಲ್ಲಿ ಸ್ಥಳೀಯವಾಗಿ "ಕನ್ನಡ ಸಂಘಗಳು" "ಕರ್ನಾಟಕ ಸಂಘಗಳು" ತಮ್ಮದೇ ಆದ ಮಿತಿಯಲ್ಲಿ ಸ್ಥಳೀಯರ ನೆರವಿನಿಂದ ಕನ್ನಡ ಭಾಷೆ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಕರ್ನಾಟಕ ಸಂಘಗಳನ್ನು ಸ್ಥಾಪಿಸಿ ತನ್ಮೂಲಕ ಜನ ಸಾಮಾನ್ಯರಲ್ಲಿ ಕನ್ನಡ ಪ್ರೀತಿಯನ್ನು ಉದ್ಧೀಪನಗೊಳಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿದ್ದ ಉಲ್ಲೇಖಗಳು ಕಂಡುಬರುತ್ತವೆ.
ಬಳ್ಳಾರಿ ವಿದ್ಯಾವಧಕ ಸಂಘ :
೧೯೦೯ ರಲ್ಲಿ ನಡೆದ ೫ನೇ ಅಖಿಲ ಭಾರತ ವೀರಶೈವ ಸಮ್ಮೇಳನದಲ್ಲಿ ತೀರ್ಮಾನವಾದಂತೆ ಪೂಜ್ಯ ಹಾನಗಲ್ ಕುಮಾರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಬಳ್ಳಾರಿಯಲ್ಲಿ "ಮದರಾಸು ವೀರಶೈವ ವಿಧ್ಯಾವರ್ದಕ ಸಂಘ" ೭-೩-೧೯೧೮ ರಲ್ಲಿ ಸ್ಥಾಪಿತವಾಯಿತು. ಅಧ್ಯಕ್ಷರಾಗಿ ಶ್ರೀ ಕೌತಳಿ ವೀರಭದ್ರಪ್ಪ ಆಯ್ಕೆ ಆದರು. ೧೯೩೩ ರಲ್ಲಿ ಸಂಘದ ಹೆಸರನ್ನು "ವೀರಶೈವ ವಿದ್ಯಾವಧಕ ಸಂಘ" ವೆಂದು ಮರು ನಾಮಕರಣ ಮಾಡಲಾಯಿತು. ೧೯೨೪ ರಲ್ಲಿ ಸಂಘವು ಮೊದಲ ಪ್ರಾಥಮಿಕ ಶಾಲೆ ಪ್ರಾರಂಭಿಸಿತು. ಕರ್ನಾಟಕ ಏಕೀಕರಣ ಚಳವಳಿಗೆ ಚಾಲನೆ ನೀಡಿ ಸಭೆಗಳನ್ನು ನಡೆಸಿತು. ೧೯೩೫ ರಲ್ಲಿ ವೀರಶೈವ ಕಾಲೇಜು ಆರಂಭವಾಯಿತು. ಪ್ರೌಢ ಶಾಲೆಯನ್ನೂ ಆರಂಭಿಸಲಾಯಿತು. ೧೯೨೮ ರಲ್ಲಿ ಕಡಪ ರಾಘವೇಂದ್ರರಾವ್ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸುವ ಚಳವಳಿಗೆ ನಾಂದಿ ಹಾಡಿದರು. ಅನಂತರ ಏಕೀಕರಣ ಚಳವಳಿ ಬಳ್ಳಾರಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ತೀವ್ರಗೊಂಡಿತು. ವೈ. ನಾಗೇಶ ಶಾಸ್ತ್ರಿ, ಅಳವಂಡಿ ಶಿವಮೂರ್ತಿ, ಚಂದ್ರಶೇಖರ ಶಾಸ್ತ್ರಿ, ಅಲ್ಲಂ ಸುಮಂಗಲಮ್ಮ, ಉತ್ತಂಗಿ ಚನ್ನಪ್ಪ, ಕೋ.ಚೆ. ಜಂತಕಲ್ ಗಾದಿಲಿಂಗಪ್ಪ ಮುಂತಾದವರು ಏಕೀಕರಣ ಚಳವಳಿಯ ಮೂಂಚೂಣಿ ನಾಯಕರು, "ಬಳ್ಳಾರಿ ಕರ್ನಾಟಕದ ಗಡಿನಾಡಲ್ಲ, ನಡುನಾಡು, ಅಚ್ಚ ಕನ್ನಡನಾಡು ಬಳ್ಳಾರಿ ಜಿಲ್ಲೆಯ ತರುಣರೇ ಕನ್ನಡ ಸಂಸ್ಕೃತಿಯನ್ನು ಕಾಪಾಡಲು ನಡುಕಟ್ಟೆ ನಿಲ್ಲಿರಿ" ಎಂಬ ಸಿಂಹಗರ್ಜನೆಯನ್ನು ಮುದುವೀಡು ಕೃಷ್ಣರಾಯರು ಮೊಳಗಿಸಿದ್ದು, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದಲ್ಲೇ ಎನ್ನುವುದು ವಿಶೇಷ. ೧೪-೧-೧೯೩೫ ರಲ್ಲಿ ವೈ. ನಾಗೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಬಳ್ಳಾರಿಯಲ್ಲಿ "ಕರ್ನಾಟಕ ಸಂಘ" ಪ್ರಾರಂಭವಾಯಿತು. ಅಧ್ಯಕ್ಷರಾಗಿ ವೈ ಮಹಾಬಲೇಶ್ವರಪ್ಪ, ಕಾರ್ಯದರ್ಶಿಯಾಗಿ ಸದಾಶಿವಯ್ಯನವರು ಆಯ್ಕೆ ಆದರು. ಏಕೀಕರಣ ಚಳವಳಿಗೆ ಆಶ್ರಯ ನೀಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಕಲಾ ಪರಿಷತ್ ಸ್ಥಾಪನೆಯೊಂದಿಗೆ ಚಳುವಳಿ ತೀವ್ರಗೊಂಡಿತು. ಬಳ್ಳಾರಿ ಜಿಲ್ಲಾದ್ಯಾಂತ ವಿ.ವಿ. ಸಂಘದ ಶಾಲೆಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸಿ ಜನ ಜಾಗೃತಿ ಮೂಡಿಸಿದರು. ಏಕೀಕರಣ ಚಳವಳಿಯ ಫಲವಾಗಿ ೧೯೫೩ ರಲಿಯ್ಲೇ ಕರ್ನಾಟಕಕ್ಕೆ ಸೇರ್ಪಡೆಗೊಂಡ ಮೊದಲ ಜಿಲ್ಲೆ ಬಳ್ಳಾರಿ ಎಂಬ ಕೀರ್ತಿಗೆ ಪಾತ್ರವಾಯಿತು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಪಾತ್ರ ಮಹತ್ವದ್ದು ಎನ್ನಬಹುದು.
ರಾಯಚೂರು ಕರ್ನಾಟಕ ಸಂಘ :
೮೧ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ರಾಯಚೂರಿನ ಕರ್ನಾಟಕ ಸಂಘ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಜನ ಜೀವನದ ಅವಿಭಾಜ್ಯ ಅಂಗವಾಗಿ ನಾಡು-ನುಡಿಯ ಸೇವೆಯಲ್ಲಿ ತೊಡಗಿದೆ. ರಾಷ್ಟ್ರಿಯ ಜಾಗೃತಿ ಮೂಡಿಸುತ್ತಾ ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಮಹತ್ತರವಾದ ಸೇವೆ ಸಲ್ಲಿಸಿದೆ. ೧೯೨೮ ರ ರಾಮನವಮಿಯಂದು ಶ್ರೀ ವೀರಣ್ಣ ಮಾಸ್ತರು, ಜಗನ್ನಾಥರಾವ್ ಫಡ್ನಾವೀಸ್, ಡಿ. ಮಾಣಿಕರಾವ್, ರಾ.ಗು. ಜೋಶಿ, ಮುಂತಾದ ತರುಣರು ಸೇರಿ ಕರ್ನಾಟಕ ತರುಣ ಸಂಘವನ್ನು ಸ್ಥಾಪಿಸಿದರು. ಮಾಧ್ವರಾವ್ ಮೊದಲ ಅಧ್ಯಕ್ಷರಾಗಿ, ವೀರಣ್ಣ ಮಾಸ್ತರ ಕಾರ್ಯದರ್ಶಿಗಳಾಗಿ ಆಯ್ಕೆ ಆದರು. ಮುಂದೆ ತರುಣ ಸಂಘವನ್ನು ಕರ್ನಾಟಕ ಸಂಘ (ರಿ) ಎಂದು ಹೆಸರಿಸಲಾಯಿತು. ಸಾಹಿತ್ಯ, ಕವಿಗೋಷ್ಠಿ ನಾಟಕಗಳನ್ನು ಏರ್ಪಡಿಸಿ, ಉರ್ದುಮಯವಾಗಿದ್ದ ರಾಯಚೂರಿನಲ್ಲಿ ಕನ್ನಡದ ಕಂಪನ್ನು ಹರಡುವ ಕಾರ್ಯದಲ್ಲಿ ತೊಡಗಿತು. ಆರಂಭದಲ್ಲಿ ಸಂಘ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ೧೯೩೪ ರಲ್ಲಿ ಪಂಜೆಮಂಗೇಶರಾಯರ ಅಧ್ಯಕ್ಷತೆಯಲ್ಲಿ ನಡೆದ ೨೦ ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಯಚೂರಿನಲ್ಲಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಕರ್ನಾಟಕದ ಸಂಘಕ್ಕೆ ಸಲ್ಲುತ್ತದೆ. ೧೯೫೫ ರಲ್ಲಿ ಶ್ರೀ ಆದ್ಯರಂಗಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಘದ ಹಿಂದಿನ ವಿಶಾಲವಾದ ಬಯಲಿನಲ್ಲಿದ್ದ ಗುಬ್ಬಿ ವೀರಣ್ಣನವರ ನಾಟಕ ಮಂದಿರದಲ್ಲಿಯೇ ನಡೆಸಿತು. ಹೈದ್ರಾಬಾದ್ ಸಂಸ್ಥಾನದ ಮಂತ್ರಿಗಳಾಗಿದ್ದ ಸರ್‌ಮಿರ್ಜಾ ಇಸ್ಮಾಯಿಲ್ ಅವರು ೧೯೪೬ ರಲ್ಲಿ ಸಂಘದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ೧೯೫೩ರ ಹೊತ್ತಿಗೆ ರಾಯಚೂರು ಕರ್ನಾಟಕ ಸಂಘದ ಭವನ ಸಿದ್ಧವಾಯಿತು. ಮುದುವೀಡು ಕೃಷ್ಣರಾಯರು, ಗರೂಡ ಸದಾಶಿವರಾಯರು, ಆಲೂರು ವೆಂಕಟರಾಯರು, ಬಿ.ಎಂ. ಶ್ರೀ, ಡಿ.ವಿ. ಗುಂಡಪ್ಪನವರು, ದ.ರಾ. ಬೇಂದ್ರೆ, ಜಿ.ಪಿ. ರಾಜರತ್ನಂ ಮುಂತಾದ ಖ್ಯಾತಸಾಹಿತಿಗಳ, ವಿದ್ವಾಂಸರ ಉಪನ್ಯಾಸಗಳನ್ನು ಏರ್ಪಡಿಸಿ, ಕನ್ನಡದ ಕಹಳೆಯನ್ನು ಮೊಳಗಿಸಲಾಯಿತು. ತಮ್ಮ ಸರಳ-ಸಜ್ಜನಿಕೆಗೆಯಿಂದ ಪ್ರತಿಭೆಯಿಂದ ಜನಮನ ಗೆದ್ದ ಬಿ.ಎಂ. ಶ್ರೀಕಂಠಯ್ಯನವರು ಕನ್ನಡನಾಡಿನಾದ್ಯಂತ, ಹೊರನಾಡುಗಳಲ್ಲಿಯೂ ಸಂಚರಿಸಿ ಕರ್ನಾಟಕ ಏಕೀಕರಣದ ರೂವಾರಿ ಎನಿಸಿದ್ದಾರೆ. ಅಲ್ಲಲ್ಲಿ ಕರ್ನಾಟಕ ಸಂಘಗಳನ್ನು ಸ್ಥಾಪಿಸಿ ಹಿಂದೆ ಇದ್ದ ಕನ್ನಡ ಸಂಸ್ಥೆಗಳಿಗೆ ಪುನರ್‌ಚೇತನ ನೀಡಿ, ಕನ್ನಡ ಸಾಹಿತ್ಯ ಪರಿಷತ್‌ನ ಅಂಗಸಂಸ್ಥೆಗಳನ್ನಾಗಿ ಮಾಡಿಕೊಂಡು ಕನ್ನಡ ಪ್ರಜ್ಞೆಯನ್ನು ಮೂಡಿಸಿದರು. ತನ್ಮೂಲಕ ಕರ್ನಾಟಕ ಏಕೀಕರಣಕ್ಕೆ ಜನಮಾನಸವನ್ನು ಅಣಿಗೊಳಿಸಿದರು. ಇಂದಿಗೂ ಕರ್ನಾಟಕ ಸಂಘ ರಾಯಚೂರು ನಗರದ, ಜಿಲ್ಲೆಯ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಗಿದೆ.
ರಾಯಚೂರು ಕರ್ನಾಟಕ ಸಂಘ ಏಕೀಕರಣ ಚಳುವಳಿ ಜೊತೆಗೆ ಹೈದರಾಬಾದ್ ವಿಮುಕ್ತಿ ಚಳವಳಿಕಾರರಿಗೂ ಆಶ್ರಯ ನೀಡಿದೆ. ಸಾಹಿತ್ಯದ ಜೊತೆಗೆ ಸಂಗೀತ, ನೃತ್ಯ, ನಾಟಕಗಳಿಗೂ ಪ್ರೋತ್ಸಾಹಿಸಿದೆ. ನಾಟಕ ಪ್ರದರ್ಶನಕ್ಕಾಗಿ ಬಯಲುರಂಗ ಮಂದಿರವನ್ನು ನಿರ್ಮಿಸಿದೆ. ಸುಮಾರು ಹತ್ತು ಸಾವಿರ ಪುಸ್ತಕಗಳ ಗ್ರಂಥ ಭಂಡಾರವನ್ನು ಹೊಂದಿದೆ. ೧೯೬೨ ರಲ್ಲಿ ಸಂಘದ ಬೆಳ್ಳಿ ಹಬ್ಬವನ್ನು ಆಚರಿಸಿ ಸ್ಮರಣ ಸಂಚಿಕೆ ಪ್ರಕಟಿಸಿ, ರಾಯಚೂರು ನಗರದ, ಜಿಲ್ಲೆಯ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರವಾಯಿತು. ೧೯೫೭ ರಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಬಳಗವಂತರಾವ್ ದಾತಾರ ಕರ್ನಾಟಕ ಸಂಘದ ಕಟ್ಟಡವನ್ನು ಉದ್ಘಾಟಿಸಿದರು. ಪ್ರಸ್ತುತ ರಾಯಚೂರು ಕರ್ನಾಟಕ ಸಂಘದ ಅಧ್ಯಕ್ಷರಾಗಿ ಶ್ರೀ ನರಸಣ್ಣ ಕೆ. ಕುಲಕರ್ಣಿ, ಶ್ರೀಗಟ್ಟು ಶ್ರೀನಿವಾಸ್ ಗೌರವಕಾರ್ಯದರ್ಶಿಯಾಗಿ ಸಂಘವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದಾರೆ.
ಶಿವಮೊಗ್ಗ ಕರ್ನಾಟಕ ಸಂಘ :
೧೯೩೦ ರ ನವರಾತ್ರಿ ಸಮಯದಲ್ಲಿ ಮೈಸೂರಿನಲ್ಲಿ ನಡೆದ ೧೬ನೇ ಕರ್ನಾಟಕ ಸಾಹಿತ್ಯ ಪರಿಷತ್, (ಕನ್ನಡ ಸಾಹಿತ್ಯ ಪರಿಷತ್‌ನ ಮೊದಲ ಹೆಸರು) ನ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡ ಜನಮನ ಗೆದ್ದ ಧಾರವಾಡದ ಪ್ರಸಿದ್ಧ ಕವಿ ಡಾ.ದ.ರಾ.ಬೇಂದ್ರೆ ಅವರನ್ನು ಡಾ. ಮಾಸ್ತಿಯವರು ಶಿವಮೊಗ್ಗಕ್ಕೆ ಕರೆತಂದು ಬೇಂದ್ರೆಯವರ ಕಾವ್ಯವಾಚನ ಏರ್ಪಡಿಸಿದರು. ಆಗ ಈ ಈರ್ವರು ಮಹನೀಯರೂ ಶಿವಮೊಗ್ಗದಲ್ಲಿ "ಕರ್ನಾಟಕ ಸಂಘದ" ಅವಶ್ಯಕತೆಯನ್ನು ಕನ್ನಡದ ಅಭಿಮಾನಿಗಳಲ್ಲಿ ಮೂಡಿಸಿದರು. ಶ್ರೀ ದೇಶಪಾಂಡೆ ಗುರುರಾವ್, ಸೀತಾರಾಮ್.ಎ. ಕೂಡಲಿ ಚಿದಂಬರಂ, ಭೂಪಾಳಂ ಪುಟ್ಟನಂಜಪ್ಪ ಮುಂತಾದವರು ಪ್ರೇರಿತರಾಗಿ ೮.೧೧.೧೯೩೦ ರಂದು, ಅಂದಿನ ಯುವಕವಿ ಶ್ರೀ ಕೆ.ವಿ. ಪುಟ್ಟಪ್ಪನವರಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು. ಶ್ರೀ ಪುಟ್ಟಪ್ಪನವರು ಭಾಷಣದಲ್ಲಿ ಸಾಹಿತ್ಯ ಸಂಸ್ಕೃತಿ, ಕಲೆ, ನಾಟಕ, ಸಂಗೀತಗಳಿಗೆ ಪ್ರೋತ್ಸಾಹ ನೀಡಲು ಸೂಚಿಸಿದರು. ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು ಅಧ್ಯಕ್ಷರಾಗಿ, ಶ್ರೀ ಡಿ. ಗುರುರಾವ್ ಪ್ರಥಮ ಕಾರ್ಯದರ್ಶಿಯಾಗಿ ಕಾರ್ಯಕಾರಿ ಸಮಿತಿ ರೂಪಿತವಾಯಿತು. ಕನ್ನಡ ನಾಡಿನ ಶ್ರೇಷ್ಠ ವಿದ್ವಾಂಸರನ್ನು ಶಿವಮೊಗ್ಗಕ್ಕೆ ಬರಮಾಡಿಕೊಂಡು ಉಪನ್ಯಾಸಗಳನ್ನು ಕವಿತಾವಾಚನ, ಕಾವ್ಯವಾಚನ, ಗಮಕವಾಚನ, ಸಂಗೀತಗೋಷ್ಠಿ, ನಾಟಕ, ಮುಂತಾದವುಗಳನ್ನು ಏರ್ಪಡಿಸುವುದು. ಗ್ರಂಥ ಪ್ರಕಟನೆ, ಗ್ರಂಥ ಭಂಡಾರ ಸ್ಥಾಪನೆ, ಕರ್ನಾಟಕ ಏಕೀಕರಣ ಕುರಿತು ವಿಚಾರ ವಿನಿಮಯ ಮಾಡಲಾಯಿತು. ಕನ್ನq, ಜೈನ ಸಾಹಿತ್ಯ , ವಚನ ಸಾಹಿತ್ಯ ಕುರಿತು ಉಪನ್ಯಾಸಮಾಲೆಗಳನ್ನು ಏರ್ಪಡಿಸಲಾಯಿತು. ಆರಂಭದಲ್ಲಿ ಕೆಲಕಾಲ ಜಿಲ್ಲಾಧಿಕಾರಿಗಳು ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು, ನಗರ ಸಭೆಯ ಒಂದು ಕೊಠಡಿಯಲ್ಲಿ ಸಂಘದ ಕಚೇರಿ ನಡೆಯುತ್ತಿತ್ತು. ಅಲ್ಲಿ ಸ್ಥಳ ಸಾಲದ್ದರಿಂದ ೧೯೩೬ ರಲ್ಲಿ ನಗರ ಸಭೆಯಿಂದ ಈಗಿರುವ ಸ್ಥಳವನ್ನು ಕರ್ನಾಟಕ ಸಂಘಕ್ಕಾಗಿ ಪಡೆಯಲಾಯಿತು. ಅಡಿಕೆ ಮಂಡಿ ವರ್ತಕರೂ, ಸಾಹಿತ್ಯಾಭಿಮಾನಿಗಳೂ ಆಗಿದ್ದ ಶ್ರೀ ಹಸೂಡಿ ವೆಂಕಟಶಾಸ್ತ್ರಿಗಳ ಉದಾರ ಕೊಡುಗೆಯಿಂದ ಈಗಿರುವ ಸಭಾಭವನವನ್ನು ನಿರ್ಮಿಸಲಾಯಿತು. ಕನ್ನಡದ ಕಣ್ವ ಬಿ.ಎಂ. ಶ್ರೀ ಅವರು ೧೯೪೨ ರಲ್ಲಿ ಭವನದ ಶಂಕು ಸ್ಥಾಪನೆ ನೆರವೇರಿಸಿದರು. ೧೧.೨.೧೯೪೩ ರಂದು ಅಂದಿನ ಮೈಸೂರು ಅರಸು ಶ್ರೀ ಜಯ ಚಾಮರಾಜೇಂದ್ರ ಒಡೆಯರು ಭವನದ ಆರಂಭೋತ್ಸವ ನೆರವೇರಿಸಿದರು. ಕನ್ನಡ ಸಾರಸ್ವತ ಲೋಕಕ್ಕೆ, ಸಾಂಸ್ಕೃತಿಕ ಹಿರಿಮೆಗೆ, ಕರ್ನಾಟಕ ಸಂಘದ ಕೊಡುಗೆ ಅಪಾರವಾದದ್ದು. ೧೯೪೩ ರಲ್ಲಿ ಶಿವಮೊಗ್ಗದಲ್ಲಿ ಡಾ.ದ.ರಾ.ಬೇಂದ್ರೆ ಅವರ ಅಧ್ಯಕ್ಷತೆಯಲ್ಲಿ ನೆಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸಂಘವೇ ಹೊತ್ತು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ೧೯೭೬ ರಲ್ಲಿ ಶ್ರೀ ಎಸ್.ವಿ. ರಂಗಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವೂ ಶಿವಮೊಗ್ಗ ಕರ್ನಾಟಕ ಸಂಘದ ಹಿಂದಿನ ಮೈದಾನದಲ್ಲಿ ನೆಡೆಸಿಕೊಟ್ಟ ಹೆಗ್ಗಳಿಕೆ ಸಂಘದ್ದು. ಸಂಘದ ರಜತ ಮಹೋತ್ಸವ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವಗಳನ್ನು ಆಚರಿಸಲಾಗಿದೆ. ಹಸೂಡಿ ವೆಂಕಟಶಾಸ್ತ್ರಿಗಳ ಹೆಸರನ್ನು ಹೊತ್ತ ಸಭಾಭವನದ ೬೦ ವರ್ಷದ ನೆನಪಿನ ಸಂಪುಟ ಪ್ರಕಟವಾಗಿದೆ. ಕರ್ನಾಟಕ ಸಂಘವು ಕರ್ನಾಟಕದ ಹೆಸರಾಂತ ಸಾಹಿತಿಗಳ ಸುಮಾರು ೨೬ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ. ಕನಾಟಕ ಸಂಘ ಶಿವಮೊಗ್ಗ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿರುವುದನ್ನು ಗುರುತಿಸಿ ೨೦೦೬ ನೇ ಸಾಲಿನಲ್ಲಿ ಕರ್ನಾಟಕ ಏಕೀಕರಣವಾಗಿ ೫೦ ವರ್ಷ ತುಂಬಿದ ಸಂದರ್ಭದಲ್ಲಿ "ಕರ್ನಾಟಕ ಏಕೀಕರಣ ಪ್ರಶಸ್ತಿ" ಮತ್ತು ಬಂಗಾರದ ಪದಕ ನೀಡಿ ಗೌರವಿಸಿದೆ. ಕರ್ನಾಟಕ ಸಂಘದ ಆರಂಭದ ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಸಂಚರಿಸಿ, ಉಪನ್ಯಾಸಗಳನ್ನು ಏರ್ಪಡಿಸಿ ಏಕೀಕರಣಕ್ಕೆ ಜನರನ್ನು ಸಜ್ಜುಗೊಳಿಸಿತು. ಸ್ಪೂರ್ತಿಗೊಂಡ ಕನ್ನಡಾಭಿಮಾನಿಗಳು, ಸಾಗರ, ಶಿರಾಳಕೊಪ್ಪ, ಶಿಕಾರಿಪುರ, ಆನವಟ್ಟಿ, ಸೊರಬ, ಹೊನ್ನಾಳಿ, ಕುಂಸಿ, ತೀರ್ಥಹಳ್ಳಿ ಮುಂತಾದ ಸ್ಥಳಗಳಲ್ಲಿ ಕರ್ನಾಟಕ ಸಂಘಗಳನ್ನು ಸ್ಥಾಪಿಸಿದ ಉಲ್ಲೇಖಗಳು ಕಂಡುಬರುತ್ತವೆ. ೧೯೫೬ ರಲ್ಲಿ ಕರ್ನಾಟಕ ಏಕೀಕರಣವಾದ ನಂತರ ಶಿವಮೊಗ್ಗ ಕರ್ನಾಟಕ ಸಂಘದ ಬಹುಮುಖಿ ಸೇವೆಯಲ್ಲಿ ತೊಡಗಿದೆ, ಆರ್ಥಿಕವಾಗಿ ಸ್ವಾಯತ್ತ ಸಂಸ್ಥೆಯಾಗಿದೆ. ಪ್ರಸ್ತುತ ಶ್ರೀಮತಿ ವಿಜಯ ಶ್ರೀಧರ್ ಅವರು ಅಧ್ಯಕ್ಷರಾಗಿ, ಶ್ರೀ ಹೆಚ್.ಡಿ. ಉದಯಶಂಕರ ಶಾಸ್ತ್ರಿ ಅವರು ಗೌರವ ಕಾರ್ಯದರ್ಶಿಗಳಾಗಿ ಶಿವಮೊಗ್ಗ ಕರ್ನಾಟಕ ಸಂಘವನ್ನು ಮುನ್ನಡೆಸಿದ್ದಾರೆ.
ಮಂಡ್ಯ ಕರ್ನಾಟಕ ಸಂಘ :
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ವರ್ಷವೇ ಪ್ರಾರಂಭವಾದ ಮಂಡ್ಯ ಕರ್ನಾಟಕ ಸಂಘಕ್ಕೀಗ ೬೦ ವರ್ಷ, ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂಘ, ಸಂಕ್ಷಿಪ್ತ ಮೌಖಿಕ ಇತಿಹಾಸವನ್ನು ಮಾತ್ರ ಉಳಿಸಿಕೊಂಡಿದೆ. ಸ್ವಂತ ಕಟ್ಟಡ ಹೊಂದಿರುವ ಕರ್ನಾಟಕದ ಕೆಲವೇ ಸಂಘಗಳಲ್ಲಿ ಮಂಡ್ಯ ಕರ್ನಾಟಕ ಸಂಘವೂ ಒಂದು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ವಾತಂತ್ರ್ಯಕ್ಕಾಗಿ ಮತ್ತು ಏಕೀಕರಣಕ್ಕಾಗಿ ಹೊರಾಡಿದ ಇಂಡುವಾಳು ಹೆಚ್. ಹೊನ್ನಯ್ಯ ಎಂ. ಮಹಾಬಲರಾವ್, ಶಿಂಗ್ಲಾಚಾರ್ ಮುಂತಾದವರ ದೂರದೃಷ್ಟಿಯ ಫಲವಾಗಿ ಜನ್ಮತಳೆದ ಸಂಸ್ಥೆ "ಮಂಡ್ಯ ಕರ್ನಾಟಕ ಸಂಘ". ಜಿಲ್ಲೆಯ, ಸಾಹಿತ್ಯ ಸಂಸ್ಕೃತಿ, ಕಲೆ ಸಂಗೀತ, ನಾಟಕ, ಭಾಷೆಗಳ ಅಭಿವೃದ್ಧಿಗಾಗಿ ಹೋರಾಟ ನೆಡೆಸಿದ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಆ ಕಾಲದ ರಾಜಕೀಯ ಧುರೀಣರಾದ ದಿ. ಎಂ.ಬಿ. ಬೋರೇಗೌಡ, ಕೆ.ವಿ. ಶಂಕರಗೌಡ, ಕೆ. ಶಿಂಗಾರಿಗೌಡ ಬಿ.ಪಿ. ನಾಗರಾಜಮೂರ್ತಿ ಪಿ.ಎನ್. ಜವರಪ್ಪ ಗೌಡ ಮುಂತಾದವರು ಕರ್ನಾಟಕ ಸಂಘದ ಪದಾಧಿಕಾರಿಗಳಾಗಿ ಸಂಘವನ್ನು ಮುನ್ನಡೆಸಿದ್ದಾರೆ.
ಭಾರತದ ಸ್ವಾತಂತ್ರ್ಯದೊಂದಿಗೆ, ಮೈಸೂರು ಚಲೋ ಚಳುವಳಿ ಮತ್ತು ನಂತರದ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಂಘದ ಸದಸ್ಯರು ಪ್ರತ್ಯಕ್ಷವಾಗಿ ಪಾಲ್ಗೊಂಡು ಅನೇಕರು ಜೈಲು ಸೇರಿದರು. ಕರ್ನಾಟಕ ಸಂಘದ ವೇದಿಕೆ ಮೂಲಕ ಸ್ಪೂರ್ತಿಪಡೆದು ಏಕೀಕರಣಕ್ಕೆ ಬೆಂಬಲ ನೀಡಿದ್ದಾರೆ. ೧೯೫೪ ರಲ್ಲಿ ಕುವೆಂಪುರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಅವರನ್ನು ಮಂಡ್ಯಕ್ಕೆ ಆಹ್ವಾನಿಸಿ ಗೌರವಿಸಲಾಯಿತು. "ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ" ಗೀತೆಯನ್ನು ವಾಚಿಸುವ ಮೂಲಕ ಹಳೆ ಮೈಸೂರಿನಲ್ಲಿ ಕರ್ನಾಟಕ ಏಕೀಕರಣದತ್ತ ಜನಾಭಿಪ್ರಾಯವನ್ನು ರೂಪಿಸಿದರು. ಡಾ ಮಾಸ್ತಿ, ಜಿ.ಪಿ. ರಾಜರತ್ನಂ, ಎಸ್.ವಿ. ಪರಮೇಶ್ವರ ಭಟ್ಟರು. ಡಾ.ಡಿ.ವಿ. ಗುಂಡಪ್ಪನವರು, ಡಾ ಶಿವರಾಮ ಕಾರಂತರು, ಡಾ ಹಾ ಮಾ ನಾಯಕ, ಡಾ ದೇಜಗೌ ಮುಂತಾದ ಖ್ಯಾತ ಸಾಹಿತಿಗಳು ಮಂಡ್ಯ ಕರ್ನಾಟಕ ಸಂಘದ ವೇದಿಕೆ ಮೂಲಕ ಕನ್ನಡ ಭಾಷೆಯ ಗೌರವವನ್ನು ಎತ್ತಿಹಿಡಿದು ಕರ್ನಾಟಕ ಏಕೀಕರಣಕ್ಕೆ ಹೋರಾಡಿದ್ದಾರೆ. ಖ್ಯಾತ ವಿದ್ಯಾಂಸರಾದ ಡಾ.ಜಿ. ವೆಂಕಟ ಸುಬ್ಬಯ್ಯ ನವರು ಮಂಡ್ಯ ಕರ್ನಾಟಕ ಸಂಘದ ಕಾರ್ಯದರ್ಶಿಗಳಾಗಿ ಕೆಲಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅಧ್ಯಕ್ಷರಾಗಿ ಪ್ರೊ.ಬಿ ಜಯಪ್ರಕಾಶಗೌಡ ಕಾರ್ಯದರ್ಶಿಯಾಗಿ ಶ್ರೀ ಮಲ್ಲರಾಧ್ಯಪ್ರಸನ್ನ ಕರ್ನಾಟಕ ಸಂಘವನ್ನು ಸಕ್ರಿಯವಾಗಿ ಮುನ್ನಡೆಸಿದ್ದಾರೆ.
ಕರ್ನಾಟಕ ಸಂಘ ಅಂಕೋಲ :
೧೯೫೦ ರ ದಶಕದ ಆರಂಭದಲ್ಲಿ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಅಂಕೋಲದಲ್ಲಿ ಕರ್ನಾಟಕ ಏಕೀಕರಣರ ಚಳವಳಿಗೆ ಚಾಲನೆ ನೀಡಿದವರು ಹಿರಿಯ ಕವಿ ದಿನಕರ ದೇಸಾಯಿ ಅವರು. ಮುಂಬೈ ಸರಕಾರದಲ್ಲಿ ಉಪಸಚಿವರಾಗಿದ್ದ ಅಂಕೋಲೆಯ ಕವಿ ಸ,ಪ, ಗಾಂವಕಾರ ಅವರು ಸ್ಥಾಪಕ ಅಧ್ಯಕ್ಷರಾಗಿ ಸಂಘ ಸ್ಥಾಪಿತವಾಯಿತು. ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಒಟ್ಟಾಗಿಸಿ ಒಂದು ಆಡಳಿತದಡಿ ತರಬೇಕೆಂಬ ಹಿರಿಯರ ಕನಸನ್ನು ಸಾಕಾರಗೊಳಿಸಲು, ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಅಭಿವ್ಯಕ್ತಿಸಲು ಒಂದು ವೇದಿಕೆಯನ್ನು ಹುಟ್ಟು ಹಾಕಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಶ್ರೀ.ಎಂ.ಆರ್. ಶ್ರೀನಿವಾಸಮೂರ್ತಿ ಅವರು ಅಂಕೋಲೆಗೆ ಬಂದಾಗ ಕರ್ನಾಟಕ ಸಂಘ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು. ೧೯೫೨ ರಲ್ಲಿ ಖ್ಯಾತ ಸಾಹಿತಿಗಳಾದ ಶ್ರೀ ತೀ.ನಂ ಶ್ರೀಕಂಠಯ್ಯವರಿಂದ ಸಂಘದ ಉದ್ಘಾಟನೆ ನಡೆಯಿತು. ಕನ್ನಡ ನಾಡಹಬ್ಬ, ವಸಂತ ಸಾಹಿತ್ಯೋತ್ಸವಗಳನ್ನು ನಡೆಸಿ, ಕನ್ನಡ ಸಾಹಿತ್ಯ ಕಲೆ, ಸಂಸ್ಕೃತಿಗಳ ಕುರಿತು ಪ್ರೀತಿ ಹೆಚ್ಚುವಂತೆ ಮಾಡಿದರು. ಶ್ರೀ ಯು. ರಾಜಗೋಪಾಲಚಾರ್ ಅವರು, ಗೌರವ ಕಾರ್ಯದರ್ಶಿಗಳಾಗಿ ಸಂಘವನ್ನು ಮುನ್ನಡೆಸಿದರು. ೧೯೫೨ರಿಂದಲೂ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯಕ್ಕೆ, ಜೀವ ತುಂಬುವ ಕಾರ್ಯದಲ್ಲಿ ತೊಡಗಿದೆ.
ಕನ್ನಡ ನಾಡಿನ ಕವಿ, ಸಾಹಿತಿ ಕಲಾವಿದರನ್ನು ಅಂಕೋಲಕ್ಕೆ ಅಹ್ವಾನಿಸಿ, ಉಪನ್ಯಾಸಗಳನ್ನು, ನಾಟಕ, ಕವಿಗೋಷ್ಠಿ ಏರ್ಪಡಿಸಿ ಕರ್ನಾಟಕ ಏಕೀಕರಣಕ್ಕೆ ಒತ್ತು ನೀಡಿದರು. ೧೯೫೬ ರಲ್ಲಿ ಏಕೀಕರಣವಾದ ನಂತರವೂ ಕ್ರಿಯಾಶೀಲವಾಗಿ ಕನ್ನಡ ಕೈಂಕರ್ಯದಲ್ಲಿ ಅಂಕೋಲ ಕರ್ನಾಟಕ ಸಂಘ ತೊಡಗಿದೆ. ೧೯೭೮ ರಲ್ಲಿ ಬೆಳ್ಳಿಹಬ್ಬ ಆಚರಿಸಿತು. ೨೦೦೩ರಲ್ಲಿ ಸಂಘದ ಚಿನ್ನದ ಹಬ್ಬ ನೆರವೇರಿತು. ಈ ಸಂದರ್ಭದಲ್ಲಿ "ಚಿನ್ನದತೇರು" ಸ್ಮರಣ ಸಂಚಿಕೆ ಪ್ರಕಟಿಸಿದೆ. ಗೋಕಾಕ್ ವರದಿ ಜಾರಿಗೆ ಬರಲಿ ಚಳವಳಿಯನ್ನು ೧೯೮೨ ರಲ್ಲಿ ನಡೆಸಿತು. ಪುಸ್ತಕ ಮೇಳಗಳನ್ನು ಸಂಘಟಸಿ ಜನಸಾಮಾನ್ಯರಲ್ಲಿ ಪುಸ್ತಕ ಪ್ರೀತಿಯನ್ನು ಹುಟ್ಟುಹಾಕಿದೆ. ಕನ್ನಡ ರಂಗಭೂಮಿಗೂ ಅನುಪಮ ಸೇವೆ ಸಂದಿದೆ. ಪ್ರಸ್ತುತ ಅಂಕೋಲ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಶ್ರೀ ವಿಷ್ಣು ನಾಯಕ ಗೌರವ ಕಾರ್ಯದರ್ಶಿಯಾಗಿ ಬಾಲಚಂದ್ರನಾಯಕ, ಮಾಜಿ ಅಧ್ಯಕ್ಷರಾಗಿ ಮಹೋತ್ಸವ ಸಮಿತಿ ಸದಸ್ಯರಾಗಿ ಶ್ರೀ ಮೊಹನ ಹಬ್ಬು ಕನ್ನಡ ತಾಯಿಯ ಸೇವೆಯನ್ನು ಮುನ್ನಡೆಸಿದ್ದಾರೆ.
ಮುಂಬೈ ಕರ್ನಾಟಕ ಸಂಘ :
ಬದುಕನ್ನು ಅರಸಿ ಮುಂಬಯಿಗೆ ಹೋದ ಬಹುಪಾಲು ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿಯನ್ನೂ ತಮ್ಮೊಂದಿಗೆ ಕೊಂಡ್ಯೊಯ್ದಿದ್ದಾರೆ. ದೂರದ ದೆಹಲಿ, ಕಲ್ಕತ್ತಾ, ಪಕ್ಕದ ಚನ್ನೆ, ಮುಂಬಯಿಗಳಲ್ಲಿ ಕರ್ನಾಟಕ ಸಂಘಗಳನ್ನು ಸ್ಥಾಪಿಸಿ, ಕನ್ನಡ ಸಂಸ್ಕೃತಿಯ ರಾಯಭಾರಿಗಳಾಗಿದ್ದಾರೆ. ಮುಂಬಯಿ ಮಹಾನಗರ ಒಂದರಲ್ಲಿಯೇ ನೂರಕ್ಕೂ ಹೆಚ್ಚು ಕನ್ನಡ ಸಂಘಗಳಿವೆ, ಹಲವು ಕರ್ನಾಟಕ ಸಂಘಗಳೂ ಇವೆ. ಅವಕಾಶವಾದಲೆಲ್ಲ ಕನ್ನಡ ರಾತ್ರಿ ಶಾಲೆಗಳನ್ನು ಆರಂಭಿಸಿ ಕನ್ನಡ ಕಟ್ಟಿದ್ದಾರೆ. ಆರಂಭದಲ್ಲಿಯೇ ಮುಂಬಯಿಗರ ನಾಲಿಗೆರುಚಿಯನ್ನು ಗೆದ್ದ ಕನ್ನಡಿಗರು, ಹೋಟೆಲ್ ಆರಂಭಿಸಿದರು. ಕೆಲಸಕ್ಕೆ ತಮ್ಮ ನಂಬಿಗೆಯ ಯುವಕರನ್ನು ಕರ್ನಾಟಕದಿಂದಲೇ ಬರಮಾಡಿಕೊಂಡರು. ಇಂದು ಸುಮಾರು ೧೦ ಲಕ್ಷಕ್ಕಿಂತಲೂ ಹೆಚ್ಚು ಕನ್ನಡಿಗರು ಮುಂಬಯಿಯಲ್ಲಿದ್ದಾರೆಂದು ತಿಳಿದುಬರುತ್ತದೆ. ವಾಣಿಜ್ಯ ಉದ್ಯಮಗಳಲ್ಲಿಯೂ ಕನ್ನಡಿಗರು ೩ನೇ ಸ್ಥಾನದಲ್ಲಿದ್ದಾರೆ. ಹೋಟೇಲ್ ಉದ್ಯಮ, ಟ್ಯಾಕ್ಸಿ ಉದ್ಯಮಗಳಲ್ಲಿ ಕನ್ನಡಿಗರದೇ ಸಿಂಹಪಾಲು. ೬೦೦೦ ಕ್ಕೂ ಹೆಚ್ಚು ಹೋಟೆಲ್‌ಗಳ ಒಡೆಯರು ಕನ್ನಡಿಗರು. ತಮ್ಮ ಜೀವಂತಿಕೆಗೆ ಸಾಕ್ಷಿಯಾಗಿ ಕನ್ನಡ ಸಂಘಗಳನ್ನು ಕಟ್ಟಿಕೊಂಡಿದ್ದಾರೆ.
ಇವುಗಳಲ್ಲಿ ಈ ವರ್ಷ ಅಮೃತಮಹೋತ್ಸವ ಆಚರಿಸಿದ ಕರ್ನಾಟಕ ಸಂಘವೆಂದರೆ ಮಾತುಂಗದಲ್ಲಿರುವ ಸರ್.ಎಂ.ವಿ. ಸ್ಮಾರಕ ರಂಗಮಂದಿರ. ಸ್ವಂತ ಕಟ್ಟಡ, ಅಪೂರ್ವ ಗ್ರಂಥಾಲಯ, ೮೦೦ ಆಸನಗಳ ವಾತಾನುಕೂಲಿ ಸಭಾಭವನ ಹೊಂದಿದೆ. ಅಲ್ಲದೆ ಮೈಸೂರು ಅಸೋಸಿಯೇಷನ್, ಬಿಲ್ಲವರ ಸಂಘ, ಮೊಗವೀರ ಸಂಘ ಮುಂತಾದ ನೂರಾರು ಕನ್ನಡ ಸಂಘಗಳು ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಾ ಕನ್ನಡ ಭಾಷೆಯನ್ನು ಹೊರನಾಡಿನಲ್ಲಿಯೂ ಜೀವಂತವಾಗಿರಿಸಿವೆ. ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ಸಂಸ್ಕೃತಿಯನ್ನು ದಾಟಿಸುತ್ತಿವೆ. ೧೯೩೩ ರಲ್ಲಿ ಗಿರ್‌ಗಾಂವ್‌ನ ಸಂಜಯ್ ಸಮರದ ಚಿಕ್ಕಕೋಣೆಯಲ್ಲಿ ಪ್ರಾರಂಭವಾದ ಕರ್ನಾಟಕ ಸಂಘವು ಈಗಿರುವ ಮಾತುಂಗಾ ಸರ್.ಎಂ.ವಿ. ಸ್ಮಾರಕ ಭವನಕ್ಕೆ ನಡೆದು ಬಂದ ದಾರಿ ರೋಚಕವಾದದ್ದು. ಮುಂಬಯಿಯಲ್ಲಿ ನಡೆದ ನಾಲ್ಕು ಸಾಹಿತ್ಯ ಸಮ್ಮೇಳನಗಳನ್ನೂ ಯಶಸ್ವಿಯಾಗಿ ನಡೆಸಿದ ಕೀರ್ತಿ ಸಂಘಕ್ಕೆ ಸಲ್ಲುತ್ತದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡ ಅಸ್ಮಿತೆಯನ್ನು ಗಟ್ಟಿಗೊಳಿಸುತ್ತಾ ಕಾಲಕಾಲಕ್ಕೆ ಮುಂಬಯಿ ಕನ್ನಡಿಗರ ಜೊತೆ ಸ್ಪಂದಿಸುತ್ತಾ ವೈವಿಧ್ಯಮಯ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಕರ್ನಾಟಕ ಏಕೀಕರಣ ಚಳವಳಿಗೆ, ಮುಂಬೈ ರಾಜ್ಯದಲ್ಲಿ ಸೇರಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಕರ್ನಾಟಕದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಗಮನಾರ್ಹ ಸೇವೆಸಲ್ಲಿಸಿದೆ. ಏಕೀಕರಣದ ನಂತರವೂ ಕನ್ನಡನಾಡು ನುಡಿಯನ್ನು ಹೊರ ನಾಡಿನಲ್ಲಿ ಅದರಲ್ಲಿಯೂ ಭಾರತದ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ ಜೀವಂತವಾಗಿರಿಸಿರುವ ಸಂಸ್ಥೆಗಳಲ್ಲಿ ಅಗ್ರಸ್ಥಾನದಲ್ಲಿದೆ ಮುಂಬಯಿ ಕರ್ನಾಟಕ ಸಂಘ. ಪ್ರಸ್ತುತ ಶ್ರೀ ಎಂ.ಎಂ. ಕೋರಿ ಅವರು ಅಧ್ಯಕ್ಷರಾಗಿ, ಶ್ರೀ ಓಂದಾಸ್ ಕಣ್ಣಂಗಾರ್ ಗೌರವ ಕಾರ್ಯದರ್ಶಿಯಾಗಿ ಮುಂಬಯಿ ಕನ್ನಡಿಗರ ಹೆಮ್ಮೆಯ ಪ್ರತೀಕವನ್ನಾಗಿ ಮುಂಬಾಯಿ ಕರ್ನಾಟಕ ಸಂಘವನ್ನು ಮುನ್ನಡೆಸಿದ್ದಾರೆ. ಭಾರತದ ಸ್ವಾತಂತ್ರ್ಯ ಚಳುವಳಿಗೆ, ಕರ್ನಾಟಕ ಏಕೀಕರಣ ಚಳುವಳಿಗೆ ಮುಂಬೈ ಕನ್ನಡ ಸಂಘಗಳು ಮತ್ತು ಕರ್ನಾಟಕ ಸಂಘಗಳ ಕೊಡುಗೆ ಅಪಾರವಾದದ್ದು.
ಹೊರನಾಡಿನಲ್ಲಿರುವ ಕರ್ನಾಟಕ ಸಂಘಗಳು:
ಮುಂಬೈ, ಚೆನ್ನೈ, ಮಧುರೈ, ಹೈದ್ರಾಬಾದ್, ಸೇಲಂ, ದೆಹಲಿ, ವಾರಣಾಸಿ, ಪಣಜಿ, ಭೋಪಾಲ್, ಬರೋಡಾ, ಲಖನೌ, ಪುಣೆ, ಕಾಸರಗೋಡು, ಚೆಂಬೂರು, ಪನವೇಲ, ಗೋರೆಗಾಂವ್, ನಾರ್‌ಘರ್, ಕಲ್ಯಾಣ್, ಭಾಂಡುಪ್ ಮುಂತಾದ ಕಡೆ ಕರ್ನಾಟಕ ಸಂಘಗಳು ಕರ್ನಾಟಕ ಏಕೀಕರಣ ಚಳವಳಿಗೆ ಪೂರ್ವದಲ್ಲಿ ಸ್ಥಾಪಿತವಾಗಿ ಇಂದಿಗೂ ಕಾರ್ಯಶೀಲವಾಗಿವೆ.
ಕನ್ನಡನಾಡಿನಲ್ಲಿ ಸ್ಥಾಪಿತವಾದ ಕರ್ನಾಟಕ ಸಂಘಗಳು:
ಮೈಸೂರು, ತಿಪಟೂರು, ರಾಯಚೂರು, ಮಂಡ್ಯ, ಪುತ್ತೂರು, ರಾಣಿಬೆನ್ನೂರು, ಅರಸೀಕೆರೆ, ಬೀರೂರು, ಅಂಕೋಲೆ ದಾಂಡೇಲಿ, ಶಿವಮೊಗ್ಗ ಮುಂತಾದ ಸ್ಥಳಗಳಲ್ಲಿ ಕರ್ನಾಟಕ ಸಂಘಗಳು ಸ್ಥಾಪಿತವಾಗಿವೆ. ಕನ್ನಡ ನಾಡಿನಾದ್ಯಂತ ಮತ್ತು ಹೊರನಾಡುಗಳ ನೂರಾರು ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕ ಸಂಘಗಳು ಏಕೀಕರಣ ಪೂರ್ವದಲ್ಲೇ ಸ್ಥಾಪಿಸಲ್ಪಟ್ಟು ಕರ್ನಾಟಕ ಏಕೀಕರಣ ಚಳವಳಿಗೆ ಪೂರಕವಾಗಿ ಸ್ಪಂದಿಸಿವೆ. ಎಲ್ಲ ಕರ್ನಾಟಕ ಸಂಘಗಳನ್ನು ಪರಿಚಯಿಸಬೇಕೆಂಬ ಮಹದಾಸೆಯಿಂದ ವಿಳಾಸ ತಿಳಿದ ಕೆಲವು ಸಂಘಗಳಿಗೆ ಪತ್ರ ಬರೆದು ವಿನಂತಿಸಿದೆ. ಮಾಹಿತಿಗಳು ಲಭ್ಯವಾದ ಕೆಲವು ಕರ್ನಾಟಕದ ಸಂಘಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ. ಏಕೀಕರಣ ಪೂರ್ವದಲ್ಲಿ ಸ್ಥಾಪಿತವಾಗಿ, ಇಂದಿಗೂ ಕ್ರಿಯಾ ಶೀಲವಾಗಿರುವ ಕರ್ನಾಟಕ ಸಂಘಗಳ ಕುರಿತು ತಮಗೆ ತಿಳಿದ ಪರಿಚಯಾತ್ಮಕ ವರದಿಯನ್ನು ಓದುಗರು ನೀಡಿದರೆ ಮುಂದಿನ ಲೇಖನದಲ್ಲಿ ಸೇರಿಸುವ ಪ್ರಯತ್ನ ಮಾಡುತ್ತೇನೆ ಪ್ರಸ್ತುತ ನನ್ನ ಮನವಿಗೆ ಸ್ಪಂದಿಸಿ, ತಕ್ಷಣ ಉತ್ತರಿಸಿದ ರಾಯಚೂರಿನ ಗೌರವ ಕಾರ್ಯದರ್ಶಿ ಶ್ರೀಗಟ್ಟು ಶ್ರೀನಿವಾಸ್, ಮಂಡ್ಯದ ಪ್ರೊ|| ಜಯಪ್ರಕಾಶ್ ಗೌಡ ಮತ್ತು ಅಂಕೋಲಾ ಕರ್ನಾಟಕ ಸಂಘದ ಶ್ರೀ ಮೋಹನ ಹಬ್ಬು, ಧಾರವಾಡ ವಿದ್ಯಾವರ್ಧಕ ಸಂಘದ ಉಪಧ್ಯಕ್ಷರಾದ ಶ್ರೀ ಎಂ.ಎಂ. ಹೂಲಿ ಅವರಿಗೆ ಕೃತಜ್ಞತೆಗಳು.
ಆಕರಗಳು
೧. ನಿಜಲಿಂಗಪ್ಪ ಎಸ್.: "ಕರ್ನಾಟಕದ ಪರಂಪರೆ" ಸಂಪುಟ ೨, ೧೯೯೨ ಪ್ರ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
೨. ಜಯದೇವಪ್ಪ ಜೈನಕೇರಿ : ಸಂ ಅಮೃತ ವರ್ಷ-೭೫, ೨೦೦೫ ಪ್ರ ಕರ್ನಾಟಕ ಸಂಘ (ರಿ) ಶಿವಮೊಗ್ಗ, ವರದಿ ೧೯೩೦ ರಿಂದ ೩೬ ಪುಟ ೨೯೮-೩೭೯
೩. ಪ್ರೊ.ಬಿ.ವಿ.ಗುಂಜೆಟ್ಟೆ : ಸಂ. ಸ್ನೇಹ ಸೌರಭ ೨೦೦೪ ಪ್ರ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ
೪. ವಿ.ಜೆ. ನಾಯಕ: ಸಂ. ಚಿನ್ನದ ಗೆರೆ ೨೦೦೪ ಪ್ರ. ಕರ್ನಾಟಕ ಸಂಘ, ಅಂಕೋಲಾ.
೫. ಗಟ್ಟು ಶ್ರೀನಿವಾಸ್ : ಗೌರವ ಕಾರ್ಯದರ್ಶಿ ರಾಯಚೂರು ಕರ್ನಾಟಕ ಸಂಘ
೬. ಪ್ರೊ.ಜಯಪ್ರಕಾಶ ಗೌಡ : ಸಂ. ಅಭಿವೃಕ್ತಿ ಸಂ ೧, ೨೦೦೮ ಕರ್ನಾಟಕ ಸಂಘ, ಮಂಡ್ಯ.
೭. ಟಿ.ಹೆಚ್.ಎಂ.ಬಸವರಾಜ : ಸಂ. ಡಾ.ವಿದ್ಯಾಶಂಕರ ಸ್ವಪ್ನಲೋಕ ಮಾಸಿಕ ಫೆಬ್ರವರಿ ೨೦೦೯
೮. ಸೀತಾರಾಮಯ್ಯ ಎಂ.ವಿ : ಸಂ. ಕೌಸ್ತುಭ ೧೯೯೭ ಪ್ರ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.
೯. ಶ್ರೀನಿವಾಸ ಜೋಕಟ್ಟೆ : ಸಂ. ಸ್ನೇಹ ಸಂಬಂಧ ಡಿಸೆಂಬರ್ ೨೦೦೮, ಕರ್ನಾಟಕ ಸಂಘ ಮುಂಬೈ. ನಂ : ೮೭ ಶಾಂತಲಾ, ಕುವೆಂಪು ರಸ್ತೆ, ಜಯದೇವಪ್ಪ ಜೈನಕೇರಿ ಶಿವಮೊಗ್ಗ -೫೭೭ ೨೦೧ ಮೊ : ೯೮೮೬೩೭೬೭೯೫

No comments:

Post a Comment

ಹಿಂದಿನ ಬರೆಹಗಳು