Tuesday, February 8, 2011

ನಿಜಾಮರ ಆಡಳಿತದಲ್ಲಿ ಕನ್ನಡಕ್ಕೆ ಹೋರಾಡಿದವರು


ಒಂದು ಕಾಲದಲ್ಲಿ ನೃಪತುಂಗನಾಳಿದ ಸಾಮ್ರಾಜ್ಯ ಹತ್ತೊಂಭತ್ತನೆಯ ಶತಮಾನದಲ್ಲಿ ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದು ಚರಿತ್ರೆಯ ದುರಂತ. ಕ್ರಿ.ಶ.೧೮೦೦ರಲ್ಲಿ ನಿಜಾಮನಿಗೂ ಹಾಗೂ ಬ್ರಿಟಿಷರಿಗೂ ಆದ ಒಪ್ಪಂದದಂತೆ, ರಾಯಚೂರು, ಗುಲಬರ್ಗಾ ಹಾಗೂ ಬೀದರ್ ಜಿಲ್ಲೆಗಳು ನಿಜಾಮನಿಗೆ ಲಭಿಸಿದವು. ಶೋಚನೀಯ ಸಂಗತಿ ಎಂದರೆ ಆದಿಲ್‌ಷಾಹಿ ನಿಜಾಂ ಹಾಗೂ ಪೇಶ್ವೆಯವರ ಆಡಳಿತಾವಧಿಗಳಲ್ಲಿ ಫಾರ್ಸಿ, ಉರ್ದು ಮತ್ತು ಮರಾಠಿ ಭಾಷೆಗಳ ದರ್ಪದಿಂದಾಗಿ ಕನ್ನಡ ಭಾಷೆಗೆ ಹೀನ ದಿಶೆ ಉಂಟಾಯಿತು. ಏಕೆಂದರೆ ಈ ಅವಧಿಯಲ್ಲಿ ಕನ್ನಡ ಕೇವಲ ಮನೆಯೊಳಗೆ ಮಾತ್ರ ಮಾತನಾಡುವ ಭಾಷೆಯಾಯಿತು. ಈ ಸಂಕಷ್ಟ ಸಮಯದಲ್ಲಿ ಭಾಷೆಯನ್ನು ಉಳಿಸಿ ಬೆಳೆಸಿದವರೆಂದರೆ ಶ್ರೀಸಾಮಾನ್ಯರು. ಹೀಗೆ ಕನ್ನಡ ಭಾಷೆಯನ್ನು ಸಶಕ್ತವಾಗಿ ಬೆಳೆಸಿಕೊಂಡು ಬಂದ ಕೀರ್ತಿ ಅಲ್ಲಿನ ಗ್ರಾಮೀಣ ಜನತೆಗೆ ಸಲ್ಲಬೇಕು. ಅಂದಿನ ಹಲವಾರು ಗಣ್ಯರು. ಸಂಘ-ಸಂಸ್ಥೆಗಳ ಪಾತ್ರ ಅಪಾರ. ಹೀಗಾಗಿ ನಾವು ಸ್ಮರಿಸಲೇ ಬೇಕಾದ ಮಹನೀಯರೆಂದೆ, ಪಂಡಿತ ತಾರಾನಾಥರು, ಪೂಜ್ಯ ದೊಡ್ಡಪ್ಪಅಪ್ಪ, ಬಾಲ್ಕಿಯ ಚೆನ್ನಬಸವ ಪಟ್ಟದೇವರು, ಉದ್ಗೀರ್ ಸಂಗ್ರಾಮಪ್ಪ, ಹೆರೂರು ಮಾಸ್ತರ, ಪ್ರಭುರಾವ್ ಕಂಬಳಿವಾಲೆ ಹಾಗೂ ಮಾನ್ಷಿ ನರಸಿಂಗರಾವ್ ಮುಂತಾದವರು. ಪ್ರಸ್ತುತ ಲೇಖನ ಕನ್ನಡ ಭಾಷೆಯ ಉಳಿವಿಗಾಗಿ ತಮ್ಮ ಜೀವನವನ್ನೇ ಧಾರೆ ಎರೆದ ಬೀದರಿನ ಪ್ರಭುರಾವ್ ಕಂಬಳಿವಾಲೆಯವರನ್ನು ಕುರಿತ್ತದ್ದಾಗಿದೆ.
ಈಗ ಮಹಾರಾಷ್ಟ್ರದಲ್ಲಿರುವ ಲಾತೂರು ಜಿಲ್ಲೆಯ ಉದ್ಗೀರ್‌ನಲ್ಲಿ ಪ್ರಭುರಾವ್ ಅವರು ಜನಿಸಿದರು. ಅವರು ಸಾಮಾನ್ಯ ಕುಟುಂಬದವರು. ಅವರ ವಿದ್ಯಾಭ್ಯಾಸ ಉರ್ದು ಹಾಗೂ ಮರಾಠಿಯಲ್ಲಿಯಾದರೂ ಅವರು ಪ್ರೀತಿಸಿದ್ದು ಕನ್ನಡವನ್ನೇ. ಪ್ರಚಾರ ಮಾಡಿದ್ದು ಕನ್ನಡವನ್ನೇ. ವೃತ್ತಿಯಲ್ಲಿ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ಅವರು ಮಾಡಿದ್ದು ಕನ್ನಡ ಕಾರ್ಯಗಳನ್ನೇ. ೧೯೨೬ರಿಂದ ೧೯೩೪ರವರೆಗೂ ಅವರು ಉದ್ಗೀರದಲ್ಲಿ ಸಮಾಜದ ಕಾರ್ಯಕರ್ತರಾಗಿ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯಕರ್ತರಾಗಿ ಸೇವೆ ಮಾಡಿದರು. ಅಂದಿನ ದಿನಗಳಲ್ಲಿಯೇ ಅ.ನ.ಕೃ. ಜಯದೇವಿ ಲಿಗಾಡೆ ಮುಂತಾದವರನ್ನು ಉದ್ಗೀರಿಗೆ ಕರೆಯಿಸಿ ಕನ್ನಡದಲ್ಲಿ ವಚನ ಸಪ್ತಾಹ ನಡೆಸಿದರು. ೧೯೩೫ರಲ್ಲಿಯೇ ಉದ್ಗೀರ್, ಲಾತೂರು ಮುಂತಾದ ಪ್ರದೇಶಗಳಲ್ಲಿ ಹರ್ಡೇಕರ್ ಮಂಜಪ್ಪ, ಬ್ಯಾರಿಷ್ಪರ್ ಎಂ.ಎನ್.ಸರದಾರ ಮುಂತಾದವರನ್ನು ಕರೆಯಿಸಿ ಕನ್ನಡದ ಕಾರ್ಯ ಮಾಡಿದರು. ೧೯೫೨ರಲ್ಲಿ ಸಾರ್ವಜನಿಕ ಗಣಪತಿ ಉತ್ಸವವನ್ನು ಮಾಡಿದರು. ಇದಕ್ಕೆ ಅವರು ಮಾನ್ಷಿನರ ಸಿಂಗರಾವ್ ಅವರನ್ನು ಕರೆಯಿಸಿದ್ದರು. ಆದರೆ ಮರಾಠಿಗರು, ಬೀದರ್‌ನಲ್ಲಿ ಉಪನ್ಯಾಸಕ್ಕೆ ಅಡ್ಡಿಮಾಡಿದರು. ಬೀದರನಂತಹ ಅಚ್ಚಗನ್ನಡ ಪ್ರದೇಶದಲ್ಲಿ ಮರಾಠಿಗರು ವಿರೋಧಿಸಿದ ಈ ಘಟನೆ ಅವರ ಬದುಕನ್ನೇ ಬದಲಾಯಿಸಿತು. ಏಕೆಂದರೆ ಅವರು ಉದ್ಗೀರಲ್ಲಿನ ತಮ್ಮ ವಕೀಲ ವೃತ್ತಿಯನ್ನೇ ತೊರೆದು ಬೀದರಿಗೆ ಬಂದು ಕನ್ನಡದ ಜಾಗೃತಿಗಾಗಿ ತಮ್ಮ ಬದುಕನ್ನೇ ಮುಡುಪಿಟ್ಟರು. ಹೀಗೆ ಬೀದರಿಗೆ ಬಂದು ೧೯೫೩ರಲ್ಲಿ ಕನ್ನಡಿಗರ ಸಭೆಯೊಂದನ್ನು ಕರೆದು ಕನ್ನಡದ ಏಳಿಗೆಗಾಗಿ "ಬೀದರ ಜಿಲ್ಲಾ ಕನ್ನಡ ಶಿಕ್ಷಣ ಸಮಿತಿ"ಯನ್ನು ಸ್ಥಾಪಿಸಿದರು. ಬೀದರ ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಸ್ಥಾಪನೆ, ಕನ್ನಡ ಭಾಷಾ ಪ್ರಚಾರ, ನಾಡಹಬ್ಬ ಆಚರಣೆ, ಸಾಹಿತಿಗಳ ಹಾಗೂ ವಿದ್ವಾಂಸರ ಉಪನ್ಯಾಸ ಕಾರ್ಯಗಳೇ ಈ ಸಮಿತಿಯ ಗುರಿಯಾಗಿತ್ತು. ಅವರ ಈ ಕಾರ್ಯದಲ್ಲಿ ಸರ್ವ ಶ್ರೀ ಕೆ.ಎಸ್.ರಾಜಾ, ಆರ್.ಆರ್.ದಿಗ್ಗಾವಿ, ಭೀಮಶೇನರಾವ್ ತಾಳೀಕೋಟೆ ಮುಂತಾದವರ ಸಹಕಾರದಿಂದ ನಾಡಹಬ್ಬ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮಕ್ಕೆ ಕೇಂದ್ರದಲ್ಲಿ ಉಪಗೃಹ ಮಂತ್ರಿಗಳಾದ ಬಿ.ಎನ್.ದಾತಾರರನ್ನು ಕರೆಯಿಸಿದ್ದರು.
ಈ ಕಾರ್ಯಕ್ರಮಕ್ಕೆ ಅಣ್ಣಾರಾವ್ ಗಣಮುಖಿ, ಸಿದ್ಧಯ್ಯ ಪುರಾಣಿಕ, ವಿ.ಬಿ.ನಾಯಕ, ಬಿ.ಶಿವಮೂರ್ತಿ ಸ್ವಾಮಿಗಳು ಬಂದು ಭಾಷಣ ಮಾಡಿದರು. ಈ ನಾಡಹಬ್ಬದ ಕಾರ್ಯಕ್ರಮಕ್ಕೆ ಸುಮಾರು ಹತ್ತು ಸಾವಿರ ಜನ ಜಮಾಯಿಸಿದ್ದರು. ೧೯೫೪ರಲ್ಲಿ ನಡೆದ ನಾಡಹಬ್ಬಕ್ಕೆ ಕೋಳೂರು ಮಲ್ಲಪ್ಪ, ಜಯದೇವಿ ತಾಯಿ ಲಿಗಾಡೆಯವರು, ೧೯೫೫ರಲ್ಲಿ ನಡೆದ ಮೂರನೇ ನಾಡಹಬ್ಬಕ್ಕೆ ಅ.ನ.ಕೃ., ಶಿವರಾಮಕಾರಂತರು ಆಗಮಿಸಿದ್ದರು. ಈ ಕಾರ್ಯಕ್ರಮಗಳಿಂದಾಗಿ ಜನರಲ್ಲಿ ಕನ್ನಡದ ಬಗೆಗೆ ಅಭಿಮಾನ ಮೂಡಿತು. ನಾಡಹಬ್ಬ ಹಾಗೂ ಕನ್ನಡ ಶಾಲೆಗಳ ಸ್ಥಾಪನೆಯೊಂದಿಗೆ ೧೯೫೫ರಲ್ಲಿ ಗೋದಾವರಿ ನದಿ ತೀರದಲ್ಲಿ ಮೊದಲ ಬಾರಿಗೆ ನಾಂದೇಡ ಜಿಲ್ಲೆಯ ದೇಗಲೂರು ಎಂಬ ಪಟ್ಟಣದಲ್ಲಿ ಕನ್ನಡ ಸಮ್ಮೇಳನ ನಡೆಸಿದರು. ಕುತೂಹಲದ ಸಂಗತಿಯೆಂದರೆ ದೇಗಲೂರಿನ ಮರಾಠಿಗರ ಮನಗೆಲ್ಲಲು ಸಮ್ಮೇಳನ ಮೊದಲ ದಿನ ಎಲ್ಲಾ ಕಾರ್ಯಕ್ರಮಗಳನ್ನು ಹಿಂದಿ ಭಾಷೆಯಲ್ಲಿಯೇ ನಡೆಸಿದರು. ಎರಡನೆಯ ದಿನದಂದು ಸಿದ್ಧಯ್ಯ ಪುರಾಣಿಕ ಹಾಗೂ ಮಾನ್ಷಿನರ ಸಿಂಗರಾವ್ ಅವರು ಕನ್ನಡದಲ್ಲಿಯೇ ಮಾತನಾಡಿದ್ದನ್ನು ಮರಾಠಿಗರು ಮನಸಾರೆ ಒಪ್ಪಿದರು. ಇದು ಪ್ರಭುರಾಯರ ಸಾಧನೆಯಿಂದ ಮಾತ್ರ ಸಾಧ್ಯವಾಯಿತು. ಗೋದಾವರೀ ತೀರದಲ್ಲಿ ಕನ್ನಡ ಕಾರ್ಯಕ್ರಮ ನಡೆಸಿದ್ದು ಒಂದು ಐತಿಹಾಸಿಕ ದಾಖಲೆ ಎಂದೇ ಹೇಳಬೇಕು ಏಕೆಂದರೆ ಈ ಕಾರ್ಯಕ್ಕೆಂದೇ ಪ್ರಭುರಾವ್ ಅವರು ಮೂರು ತಿಂಗಳು ಮುಂಚೆ ಹೋಗಿ ಜನರ ಮನ ಒಲಿಸಿ ಚಂದಾ ಕೂಡಿಸಿ ಈ ಸಮ್ಮೇಳನ ಮಾಡಿದ್ದು ಸಾಮಾನ್ಯ ವಿಷಯವಲ್ಲ.
ಪ್ರಭುರಾವ್ ಅವರು ಬೀದರ ಜಿಲ್ಲೆಯ ಭಾತಮ್ರಾ ಎಂಬ ಹಳ್ಳಿಯಲ್ಲಿ ೧೯೫೪ರಲ್ಲಿಯೇ ಹೈದರಾಬಾದ್ ಪ್ರದೇಶದ ಕನ್ನಡ ಸಾಹಿತ್ಯ ಪರಿಷತ್ತಿನ ಐದನೆಯ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದರು. ಸೋಜಿಗದ ಸಂಗತಿ ಎಂದರೆ ನಾಲ್ಕು ಅಥವಾ ಐದು ಸಾವಿರ ಜನಸಂಖ್ಯೆ ಇದ್ದ ಹಳ್ಳಿಯಲ್ಲಿ ಈ ಸಮ್ಮೇಳನಕ್ಕೆಂದೇ ಹೊರಗಿನಿಂದ ಬಂದ ಸುಮಾರು ಹತ್ತು ಹದಿನೈದು ಸಾವಿರ ಮಂದಿಗೆ ಅಲ್ಲಿನ ಕನ್ನಡಾಭಿಮಾನಿಗಳು ಊಟ ಉಪಚಾರ ಮಾಡಿ ಮೂರು ದಿನ ಸಮ್ಮೇಳನ ಮಾಡಿದರು. ಈ ಸಮ್ಮೇಳನ ಉದ್ಘಾಟನೆಯನ್ನು ಡಾ|ಪದ್ಮನಾಭ ಪುರಾಣೀಕರು ನೆರವೇರಿಸಿದ್ದರು. ಈ ಸಮ್ಮೇಳನದ ಅಂಗವಾಗಿ ಪಂಚಭಾಷಾ ಕವಿ ಸಮ್ಮೇಳನ ಒಂದನ್ನು ಏರ್ಪಡಿಸಲಾಗಿತ್ತು. ಅದರಂತೆ ೧೯೬೦ರಲ್ಲಿ ೪೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ಇವರೇ ಡಾ||ಡಿ.ಎಲ್.ನರಸಿಂಹಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆಸಿದರು. ಬೀದರಿನಂಥ ಗಡಿ ಪ್ರದೇಶದಲ್ಲಿ ಮರಾಠಿ, ಉರ್ದು, ತೆಲುಗು ಭಾಷೆಗಳ ದಬ್ಬಾಳಿಕೆಗೆ ಗುರಿಯಾದ ಪ್ರದೇಶದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಡೆಸಿದ್ದು ಇವರ ಶ್ರದ್ಧೆ ಹಾಗೂ ಸಾಮರ್ಥ್ಯಕ್ಕೆ ಸಾಕ್ಷಿ. ಮೆಚ್ಚಲೇಬೇಕಾದ ವಿಷಯ ಎಂದರೆ ಬೀದರ ಭಾಗದಲ್ಲಿ ನಾಡಹಬ್ಬ. ಕನ್ನಡ ಶಾಲೆಗಳೊಂದಿಗೆ ಬೀದರ ಜಿಲ್ಲೆಯಲ್ಲಿ ಪ್ರಥಮ ದರ್ಜೆಯ ಪದವಿ ಕಾಲೇಜ್ ಆದ ಭೂಮರೆಡ್ಡಿ ಕಾಲೇಜನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹೀಗೆ ಕನ್ನಡ ಪುನರುತ್ಥಾನದ ಪ್ರಮುಖರೆಂದರೆ ಪ್ರಭುರಾವ್ ಕಂಬಳಿವಾಲೇ.

ಪ್ರೊ.ಎಂ.ಧ್ರುವನಾರಾಯಣ
೧೦/೨ ೧೩ಎ ಕ್ರಾಸ್,
೨ನೇ ಬ್ಲಾಕ್, ಜಯನಗರ, ಬೆಂಗಳೂರು-೧೧
ದೂ: ೨೬೫೬೧೬೦೮

No comments:

Post a Comment

ಹಿಂದಿನ ಬರೆಹಗಳು