Tuesday, February 8, 2011

ನೆನಪುಗಳ ಬಿಚ್ಚಿಟ್ಟ ನಾಡೋಜಸಂದರ್ಶನ: ಆಶಾ ಶಂಕರೇಗೌಡ

ನಲವತ್ತು ವರ್ಷಗಳ ನಂತರ ಮತ್ತೆ ಒದಗಿದೆ ಉದ್ಯಾನನಗರಿಗೆ ಭಾರತಾಂಬೆಯ ಹಿರಿಮಗಳ್ ಕನ್ನಡಾಂಬೆಯ ಹಬ್ಬದ ಸಿರಿ ಆಚರಿಸುವ ಭಾಗ್ಯ, ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮನೆಮಗಳ ಮದುವೆಗೆ ಅಣಿಯಾಗುವಂತೆ ಮನೆಮನವನ್ನೆಲ್ಲ ಸಿಂಗರಿಸುವ ಭರಾಟೆಯಲ್ಲಿ ತೊಡಗಿದೆ ಬೆಂಗಳೂರು. ಅರಿಶಿನ ಕೆಂಪುವರ್ಣಗಳ ಸಂಗಮದ ಕನ್ನಡಮ್ಮನ ಧ್ವಜ ಎಲ್ಲೆಲ್ಲು ರಾರಾಜಿಸುತ್ತಿದೆ. ಇಂತಹ ಸಮಯದಲ್ಲಿ ತಾವು ಅಧ್ಯಕ್ಷರಾಗಿದ್ದ ಸಮ್ಮೇಳನದ ಹಳೆಯ ನೆನಪನ್ನು ಮೆಲುಕುಹಾಕುವಂತೆ ನಾಡೋಜ ದೇಜಗೌ ಅವರನ್ನು ಕೋರಿದೆವು. ಸ್ವಲ್ಪ ಅನಾರೋಗ್ಯವಿದ್ದರೂ ಮಂದಸ್ಮಿತರಾಗಿ ಎದ್ದು ಕುಳಿತು ಉತ್ಸಾಹ ತುಂಬಿದ ಕಂಗಳಿಂದ, ಮತ್ತೊಬ್ಬ ನಾಡೋಜ ಜಿ.ನಾರಾಯಣ್ ಕನ್ನಡ ಸಾಹಿತ್ಯ ಪರಿಷತನ್ನು ಬೆಳಕಿಗೆ ತಂದ ಮಹಾಚೇತನ. ಈ ಸಂದರ್ಭದಲ್ಲಿ ಅವರು ಸ್ಮರಣೀಯರು ಎಂದು ತಮ್ಮ ಮಾತು ಶುರುವಿಟ್ಟರು.
ಕ.ಸಾ.ಪ ಬಿ.ಎಂ.ಶ್ರೀ ಮತ್ತು ಎಂ.ಆರ್.ಶ್ರೀನಿವಾಸಮೂರ್ತಿಯವರ ಕಾಲದಲ್ಲಿ ಚೆನ್ನಾಗಿತ್ತು. ಆದರೆ ನಮ್ಮವರಲ್ಲಿ ಸಾಹಿತ್ಯ ಅಭಿರುಚಿ ಹುಟ್ಟಿಸಿ ಕನ್ನಡ ಸಾಹಿತ್ಯದ ಕಂಪು ಜನರಿಗೆ ತಲುಪುವಂತೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಆಲದಮರದಂತೆ ಬೃಹದಾಕಾರವಾಗಿ ಬೆಳೆಸಿ ಸಾಂಸ್ಕೃತಿಕ ನಗರಿ, ಸಾಹಿತ್ಯ ನಗರಿ ಸೇರಿದಂತೆ ಮೂವತ್ತು ಜಿಲ್ಲೆಗಳಲ್ಲಿ ಅದರ ಬೇರೂರುವಂತೆ ಭದ್ರಬುನಾದಿ ಹಾಕಿಕೊಟ್ಟವರು ಜಿ.ನಾರಾಯಣ್‌ರವರು. ಆ ಕಾಲದಲ್ಲಿ ಸರ್ಕಾರ ಸೇರಿದಂತೆ ಎಲ್ಲರಿಂದಲೂ ಕನ್ನಡ ಸಾಹಿತ್ಯ ಪರಿಷತ್ ಬೆಳವಣಿಗೆಗಾಗಿ ಉತ್ತಮ ಸಹಕಾರ ನೀಡಿದ್ದನ್ನು ಸದ್ವಿನಿಯೋಗ ಪಡಿಸಿಕೊಂಡು ತಮ್ಮ ಯೋಜನೆಗಳನ್ನು ಅನುಷ್ಠಾನ ತರುವಲ್ಲಿ ಯಶಸ್ವಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕಲಾಕೃತಿಗೆ ಒಂದು ರೂಪವಿತ್ತವರು ನಾಡೋಜ ಜಿ.ನಾರಾಯಣ್‌ರವರು.
ಬಯಸದೇ ಬಂದ ಭಾಗ್ಯ
ನಾನು ಯಾವುದನ್ನು ಬಯಸಿ ಹೋಗಲಿಲ್ಲ. ಎಲ್ಲವು ಅರಸಿ ಬಂದವು ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ನಾರಾಯಣ್ ಅದೊಂದು ದಿನ ಹಾರ ಹಾಕಿ ನನ್ನನ್ನು ಬರಮಾಡಿಕೊಂಡರು ಏಕೆ ಎಂದಾಗ ನಿಮ್ಮನ್ನು ಈ ಬಾರಿಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು. ನನ್ನಲ್ಲಿ ಆನಂದಾಶ್ಚರ‍್ಯಗಳು ಒಟ್ಟಿಗೆ ಘಟಿಸಿದವು. ಬಯಸದೇ ಬಂದ ಭಾಗ್ಯ ಅದಾಗಿತ್ತು. ತತ್‌ಕ್ಷಣ ನನ್ನ ಗುರುಗಳಾದ ಎಸ್.ವಿ.ರಂಗಣ್ಣನವರ ನಂತರ ನನ್ನ ಪಾಲಾಗಬೇಕಿತ್ತು ಅದು ಎಂದೆನಿಸದಿರಲಿಲ್ಲ. ಮೆರವಣಿಗೆಯ ಮುನ್ನ ನನ್ನ ಗುರುಗಳು ಬಂದು ನನ್ನನ್ನು ಹರಸಿ ಆಶೀರ್ವದಿಸಿದ್ದು ಅವರ ಹಿರಿಮೆಗೆ ಒಂದು ಸಾಕ್ಷಿ.
ಮೆರವಣಿಗೆ (ಮದುಮಗನ ದಿಬ್ಬಣ!)

ಸಾಹಿತ್ಯ ಸೌರಭದ ಆ ಮೆರವಣಿಗೆ ಸೆಂಟ್ರಲ್ ಕಾಲೇಜಿನಿಂದ ಹೊರಡುವಾಗ ಸಾರೋಟಿನಲ್ಲಿ ಮದುಮಗನಂತೆ ರಾರಾಜಿಸುತ್ತಿದ್ದೆ. ದಾರಿಯುದ್ದಕ್ಕೂ ಜನಜಾತ್ರೆಯಂತೆ ನಿಂತಿತ್ತು. ಹಾರ ತುರಾಯಿಗಳ ಮೇಳ ನಡೆಯುತ್ತಲೇ ಇತ್ತು. ಮೆರವಣಿಗೆ ಸಾಗುತ್ತಿದ್ದಂತೆ ಚಾಮರಾಜಪೇಟೆಯ ಬಳಿ ಬಂದಾಗ, ಅಲ್ಲಿನ ಪಡಸಾಲೆಯ ಮೇಲೆ ನಿಂತು ಈ ಸವಾರಿಯನ್ನು ವೀಕ್ಷಿಸುತ್ತಿದ್ದ ಬೇಂದ್ರೆಯವರನ್ನು ಕಂಡು ಮನದಲ್ಲಿ ಸಾರ್ಥಕ ಭಾವ ಮೂಡಿತು. ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಜನ ದಿಬ್ಬಣವೇನೋ ವೈಭವೋಪೇತವಾಗಿದೆ ಆದರೆ ಮದುಮಗನಿಗೆ ವಯಸ್ಸಾದಂತೆ ಕಾಣುತ್ತದೆ ಎಂದು ೫೧ರ ಪ್ರಾಯದ ಬಗ್ಗೆ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದುದನ್ನು ಮರುದಿನ ಪತ್ರಿಕೆಗಳು ವರದಿ ಮಾಡಿದ್ದವು.
ಫೋರ್ಟ್‌ಹೈಸ್ಕೂಲಿನ ಮೈದಾನದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಸಮಾರಂಭದಲ್ಲಿ ವೇದಿಕೆಯ ಉಸ್ತುವಾರಿಯನ್ನು ಅ.ನ.ಕೃಷ್ಣರಾಯರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಅವರು ಆಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದರು. ಅವರು ತಮ್ಮ ಭಾಷಣದಲ್ಲಿ ದೇಜಗೌ ನಮ್ಮ ಇಂದಿನ ಕನ್ನಡದ ನಾಯಕರು ಎಂದು ಸಂಭೋದಿಸಿದ್ದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅಂದಿನ ಮುಖ್ಯಮಂತ್ರಿಗಳಾದ ವೀರೇಂದ್ರಪಾಟೀಲರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕನ್ನಡದ ವಿಷಯದಲ್ಲಿ ನಾವು ದೇಜಗೌರವರ ಮಾತನ್ನು ಕೇಳಬೇಕಿತ್ತು ಎಂದರು. ನಗರಸಭೆಯಲ್ಲಿ ತಮಿಳರ ಆಯ್ಕೆ ಬಗ್ಗೆ ಕುಲಪತಿಯಾಗಿದ್ದ ನಾನು ತೀಕ್ಷ್ಣವಾಗಿ ಮಾತನಾಡಿದ್ದರ ಪರಿಣಾಮ ತೀವ್ರವಾದ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಆ ವಿಷಯವನ್ನು ಮುಖ್ಯಮಂತ್ರಿಗಳು ವೇದಿಕೆಯಲ್ಲಿ ಸಮರ್ಥಿಸಿಕೊಂಡಿದ್ದು ಅವಿಸ್ಮರಣೀಯ. ೧ ರಿಂದ ೨ ಕೋಟಿ ರೂ.ಗಳ ವೆಚ್ಚದೊಂದಿಗೆ ಹಮ್ಮಿಕೊಂಡಿದ್ದ ಅದ್ದೂರಿ ಸಮ್ಮೇಳನದಲ್ಲಿ ಮುಗಳಿ ಹಾಗೂ ಹಿರಿಯ ಸಾಹಿತಿಗಳು, ಎಲ್ಲಾ ಕ್ಷೇತ್ರದ ದಿಗ್ಗಜರು ಹಾಜರಿದ್ದ ಸಮಾರಂಭವು ನನ್ನ ಪಾಲಿಗೆ ಒಂದು ಐತಿಹಾಸಿಕ ದಿನ. ಈ ಸಮ್ಮೇಳನದಲ್ಲಿ ಅನೇಕ ನಿರ್ಣಯಗಳನ್ನು ತೆಗೆದುಕೊಂಡಿತು. ಆದರೆ ಯಾವುದನ್ನು ಸರ್ಕಾರವು ಪರಿಗಣಿಸಲಿಲ್ಲ. ಅಂದಿನ ಸಮ್ಮೇಳನಕ್ಕೂ ಇಂದಿನ ಸಮ್ಮೇಳನದ ಸ್ವರೂಪ ವಿನ್ಯಾಸದಲ್ಲಿ ಅಜಗಜಾಂತರ. ಕಾಲಕ್ಕೆ ತಕ್ಕಂತೆ ಸಮ್ಮೇಳನಗಳು ದರ್ಬಾರಿನಂತೆ ನಡೆಯುತ್ತವೆ. ಈ ಬಾರಿ ಬದ್ಧತೆಯುಳ್ಳ ಕರವೇಯ ನಾರಾಯಣಗೌಡರು ಇನ್ನಿತರರು ಜವಾಬ್ದಾರಿ ಹೊತ್ತಿದ್ದಾರೆ.
ಸಮ್ಮೇಳನವು ವಿಜೃಂಭಣೆಯಿಂದ ನಡೆಯುತ್ತದೆ. ಸಾಹಿತ್ಯ ಪರಿಷತ್ತಿನ ವ್ಯಾಪ್ತಿ ವಿಸ್ತಾರವಾಗಿದೆ. ಜನರು ಸಾಗರೋಪಾದಿಯಲ್ಲಿ ಸೇರುತ್ತಾರೆ. ಅಗಾಧ ಆರ್ಥಿಕ ಸಂಪತ್ತಿನ ವಿನಿಯೋಗವಾಗುತ್ತಿದೆ. ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಾವ್ಯ, ಕವಿಗಳ ಸಂಪತ್ತಿನಿಂದ ಆಗರ್ಭ ಶ್ರೀಮಂತಳಾಗಿರುವ ತಾಯಿ ಭುವನೇಶ್ವರಿಯ ಈ ಉತ್ಸವವು ಎಲ್ಲರನ್ನು ಮೈಮರೆಸುವಂತೆ ಮಾಡುತ್ತದೆ. ಸಾಹಿತ್ಯಲೋಕದಲ್ಲಿ ಸಂಚಲನ ಮೂಡಿಸುತ್ತದೆ. ಈ ಮಾಗಿದ ವಯಸ್ಸಲ್ಲಿ ಆ ರಸಕ್ಷಣಗಳನ್ನು ಸವಿಯುವಾಸೆಯೂ ನನಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ
ಸಮಾರಂಭದಲ್ಲಿ ಪ್ರತಿಯೊಬ್ಬರ ಭಾಷಣಗಳನ್ನು ಅಚ್ಚಾಕಿಸಬೇಕು. ಅಲ್ಲಿರುವ ವಿಷಯವೆಲ್ಲ ಕನ್ನಡದ ಬಗ್ಗೆ ಇರುವುದರಿಂದ ಅವುಗಳ ಸ್ಥೂಲವಾದ ಚರ್ಚೆ ನಡೆಸಿ ವಿಸ್ತೃತವಾದ ಫಲಿತಾಂಶವನ್ನು ಸರ್ಕಾರಕ್ಕೆ ತಲುಪಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ.
ಯಾವುದೇ ಸರ್ಕಾರಗಳು ಕನ್ನಡವನ್ನು ನಿರ್ಲಕ್ಷಿಸಿಲ್ಲ. ಎಷ್ಟು ಹಣ ಬೇಕಾದರೂ ಬಿಡುಗಡೆ ಮಾಡುತ್ತವೆ.
ಆದರೆ ಸ್ಥಾನಮಾನ ಕಲ್ಪಿಸಿಕೊಡುವಲ್ಲಿ ನಿರರ್ಥಕವಾಗಿದೆ. ಕನ್ನಡವು ಸರ್ವಮಾಧ್ಯಮವಾಗಿ, ಸರೋಜಿನಿ ಮಹಿಷಿ ವರದಿ ಜಾರಿಗೆ ಬಂದು ಕನ್ನಡ ಮಾಧ್ಯಮದವರಿಗೆ ಉದ್ಯೋಗ ನೀಡಿದಾಗ ಮಾತ್ರ ಕರ್ನಾಟಕ ಕನ್ನಡಮಯವಾಗುತ್ತದೆ.
ಪಾಲಿಸುವುದಾದರೆ ಮಾತ್ರ ನಿರ್ಣಯಗಳನ್ನು ತೆಗೆದುಕೊಳ್ಳಿ ಇಲ್ಲದಿದ್ದರೆ ಖಂಡಿತ ಬೇಡ.
ನಾರಾಯಣಗೌಡರು ಮನಸ್ಸು ಮಾಡಿದರೆ ಈ ಕೆಲಸವನ್ನು ಸಾಧಿಸಬಹುದು. ಕನ್ನಡ ಸಾಹಿತ್ಯ ಪರಿಷತ್ತಿಗೆ ಇದರ ಬಗ್ಗೆ ಹೆಚ್ಚಿನ ಹೊಣೆಗಾರಿಕೆ ಇದೆ, ಪರಿಷತ್ತು ಇರುವುದೇಕೆ? ಮಾತನಾಡಿ ಅದನ್ನು ದೊರಕಿಸುವ ಪ್ರಯತ್ನ ಮಾಡಲಿ. ಕನ್ನಡಿಗರ ಒಕ್ಕೊರಲಿನ ಕೂಗು ಎಲ್ಲರನ್ನು ಮುಟ್ಟಲಿ ಎಂದು ಭಾವುಕರಾದ ಆ ಹಿರಿಜೀವ ಅಂದಿನ ನೆನಪನ್ನು ಮೆಲ್ಲುತ್ತ ಮುಂದಿನ ಉತ್ಸವದ ನಿರೀಕ್ಷೆಯೊಂದಿಗೆ ಮಾತು ಮುಗಿಸಿದರು.
ಸಾಹಿತ್ಯ ಲೋಕದ ಶಿಖರ ಸದೃಶ ಶಕ್ತಿಯು ನಮ್ಮೊಂದಿಗೆ ಇರುವುದೆ ಹೆಮ್ಮೆ. ತನ್ನ ಗುರು ರಸಋಷಿ ಕುವೆಂಪುರವರನ್ನು ಆರಾಧಿಸುವ ಈ ಕನ್ನಡ ಸುತನ ಹೆಬ್ಬಯಕೆ ಈಡೇರುವಂತಾಗಲಿ. ಇದು ಎಲ್ಲರ ಚಿತ್ತ.

No comments:

Post a Comment

ಹಿಂದಿನ ಬರೆಹಗಳು