Tuesday, February 8, 2011

ಕನ್ನಡ ಭಾರತರತ್ನ ಪಂಡಿತ್ ಭೀಮಸೇನ ಜೋಶಿ
ಡಾ.ನಾಗರಾಜರಾವ್ ಹವಾಲ್ದಾರ್

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಸಂಗೀತ-ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಕನ್ನಡಿಗರ ಕೊಡುಗೆ ಅಂದು-ಇಂದು-ಎಂದೆಂದೂ ಮುಂಚೂಣಿಯಲ್ಲಿದೆ. ವಚನಕಾರರು-ಹರಿದಾಸರು ನೀಡಿದ ಅಮೋಘ ಸಾಹಿತ್ಯವನ್ನು ಜನಮನ-ಮನೆಗೆ ತಲುಪಿಸಿದವರು. ನಮ್ಮ ಕಲಾವಿದರಾದ ಪಂ|| ಭೀಮಸೇನ ಜೋಶಿ, ಪಂ|| ಮಲ್ಲಿಕಾರ್ಜುನ ಮನ್ಸೂರ್, ಆರ್.ಕೆ.ಶ್ರೀಕಂಠನ್ (ಇವರಿಗೆ ಈ ಸಾಲಿನ ಪದ್ಮಭೂಷಣ ಗೌರವ ಸಂದಿದೆ) ಮುಂತಾದವರು.
ಕಲೆ ಮತ್ತು ಕಲಾವಿದ ಎಲ್ಲಾ ಗಡಿಗಳನ್ನು ಮೀರಿದವರು. ಗದಗ ತಾಲ್ಲೂಕಿನ ರೋಣದಲ್ಲಿ ಜನಿಸಿದ ಪಂ. ಭೀಮಸೇನ ಜೋಶಿ ಕಲಿಕೆಯ ದಿನಗಳ ನಂತರ ನೆಲೆಸಿದ್ದು ಪುಣೆಯಲ್ಲಿ. ಒಮ್ಮೆ ಪಂ.ರಾಜೀವ ತಾರಾನಾಥ (ಮತ್ತೊಬ್ಬ ಕನ್ನಡದ ಸರೋದ್ ವಾದಕ) ಪುಣೆಗೆ ಹೋಗಿದ್ದರು. ಜೋಶಿಯವರ ಮನೆಗೆ ಪೋನಾಯಿಸಿ, ‘ನೀವು ಇದ್ದೀರ? ನಿಮ್ಮ ಭೇಟಿಗೆ ಬರಬಹುದೆ..?’ ಅಂದರಂತೆ. ‘ಅದಕ್ಕೇನ್ರೀ, ಬಂದೆಬಿಡ್ರಿ, ಕನ್ನಡದ ಬಗ್ಗೆ, ಸಂಗೀತದ ಬಗ್ಗೆ ಚರ್ಚೆ ಮಾಡೋಣ, ಊಟ ಮಾಡಿ ಸಂಜೆ ಮುಂದ ಹೋಗೀರಂತೆ’ ಅಂದರು ಭೀಮಸೇನ್‌ಜೀ. ಟ್ಯಾಕ್ಸಿ ಡ್ರೈವರ್‌ಗೆ ಭೀಮಸೇನ ಜೋಶಿಯವರ ಮನೆ ಅಡ್ರಸ್ ಕೊಡಲಿಕ್ಕೆ ಹೋದರೆ, ‘ನನಗೆ ಅವರ ಮನೆ ಗೊತ್ತದರೀ, ಕರಕೊಂಡು ಹೋಗ್ತೀನಿ’ ಅಂದರು. ಪಂಡಿತಜೀ ಅವರ ಮನೆ ಬಂತು. ರಾಜೀವ್ ಅವರು ಟ್ಯಾಕ್ಸಿ ದುಡ್ಡು ಕೊಡಲಿಕ್ಕೆ ಹೋದರೆ... ಅವನಿಗೆ ಸಿಟ್ಟೆ ಬಂದುಬಿಡ್ತು. ‘ಏನ್ರೀ ನಮ್ಮ ಭೀಮಸೇನ ಜೋಶಿ ಮನೆಗೆ, ನಾನು ನಿಮ್ಮನ್ನು ಕರೆದುಕೊಂಡು ಬಂದರೆ, ನನಗೇ ದುಡ್ಡು ಕೊಡ್ತೀರೇನ್ರೀ... ನೀವೊಬ್ಬರೇನಾ ದುಡ್ಡು ಕಂಡಿರೋದು?’ ಅಂತ ಹೇಳಿ ದುಡ್ಡು ಇಸಗೊಳ್ಳದೇ ಹೋದ ಟ್ಯಾಕ್ಸಿ ಡ್ರೈವರ್. ಇದು ನಮ್ಮ ಕನ್ನಡದ ಭೀಮಣ್ಣನ, ಪಂಡಿತಜೀ ಅವರ ಸಂಗೀತ ಹಾಗೂ ವ್ಯಕ್ತಿತ್ವದ ಒಂದು ಚಿಕ್ಕ ಝಲಕ್.
ಜೋಶಿಯವರ ಗುರುಗಳಾದ ಪಂ. ಸವಾಯಿ ಗಂಧರ್ವರೂ ಮೂಲತಃ ಹುಬ್ಬಳ್ಳಿ ತಾಲ್ಲೂಕಿನ ಕುಂದಗೋಳದವರಾಗಿದ್ದರೂ, ಕೆಲಕಾಲ ಪುಣೆಯಲ್ಲೇ ನೆಲೆಸಿದ್ದರು. ಹಿಂದೂಸ್ತಾನಿ ಸಂಗೀತ, ಮರಾಠೀ ರಂಗಸಂಗೀತದಲ್ಲೂ ಅವರು ದೊಡ್ಡ ಹೆಸರಾಗಿದ್ದರು. ಕನ್ನಡಿಗರ ನಿಸ್ವಾರ್ಥ ಔದಾರ್ಯವೋ ಅಥವಾ ಅಭಿಮಾನ ಶೂನ್ಯತೆಯೋ, ಹಲವಾರು ಕಲಾವಿದರ ಜೀವನದ ಆರಂಭದ ದಿನಗಳಲ್ಲಿ ನಾವು ಅವರನ್ನು ಗಮನಿಸುವುದೇ ಇಲ್ಲ, ಪೋಷಿಸುವುದಿಲ್ಲ. ಬೆಳಗಾವಿ ಜಿಲ್ಲೆಯ ಶಿವಪುತ್ರಯ್ಯ ಕೊಂಕಾಳಿಮಠ ನಂತರದ ವಿಶ್ವ ವಿಖ್ಯಾತ ಪಂ.ಕುಮಾರಗಂಧರ್ವ ನೆಲೆಸಿದ್ದು ಮಧ್ಯಪ್ರದೇಶದ ‘ದೇವಾಸ್’ ನಗರದಲ್ಲಿ ಪಂ. ಜೋಶಿಯವರು ಪುಣೆಯಲ್ಲಿ ನೆಲೆಸಿ, ಮರಾಠಿ ಭಕ್ತಿ ಸಂಗೀತದ ಸಂಕೇತ ಹಾಗೂ ಆದ್ಯ ಪುರುಷರಾಗಿದ್ದು, ಕನ್ನಡಿಗರು ಹೆಮ್ಮೆ ಪಡುವ ವಿಷಯವೇ. ಅವರು ಹಾಡಿದ ಮರಾಠಿ ಅಭಂಗ (ತುಕಾರಾಮ, ನಾಮದೇವ ಮುಂತಾದವರ ಭಕ್ತಿ ರಚನೆಗಳು) ಇಂದಿಗೂ-ಎಂದೆಂದಿಗೂ ಜನಪ್ರಿಯ. ನೀವು ಮಹಾರಾಷ್ಟ್ರದ ಯಾವುದೇ ದೇವಸ್ಥಾನದಲ್ಲಿ ಕಾಲಿರಿಸಿದರೂ ಮೊದಲು ಕೇಳುವುದು ಭೀಮಸೇನರ ದನಿ; ನಂತರ ಘಂಟೆ ಜಾಗಟೆಯ ಸದ್ದು. ಪಂಡಿತಜೀಯವರು ಕನ್ನಡದವರೆಂದು ಗೊತ್ತಿದ್ದರೂ ‘ಏ ಮೂಝಾ ಜೋಶಿ ಆಹೇ.." ಇವರು ನಮ್ಮವರು ಎಂದು ಮಹಾರಾಷ್ಟ್ರದ ಸಂಗೀತ ಪ್ರೇಮಿಗಳು ಅವರನ್ನು ಅಪ್ಪಿಕೊಳ್ಳುತ್ತಾರೆ, ಒಪ್ಪಿಕೊಳ್ಳುತ್ತಾರೆ.
ಕನ್ನಡದ ದಾಸರ ಪದಗಳನ್ನು, ಅವರ ಸಂದೇಶವನ್ನು ಜಗತ್ತಿಗೆ ಸಾರಿದ ಕೀರ್ತಿ ಸಹ ಪಂ|| ಜೋಶಿಯವರಿಗೆ ಸಲ್ಲಬೇಕು. ಶುದ್ಧ ಶಾಸ್ತ್ರೀಯ ಸಂಗೀತದ ವಲಯದಲ್ಲಿ ಅವರಿಗೆ ಎಷ್ಟು ಗೌರವಿತ್ತೋ, ಅಷ್ಟೇ ಪ್ರೀತಿ-ಅಭಿಮಾನ ಅವರ ‘ದಾಸವಾಣಿ’ಗೂ ಇತ್ತು. ಭಕ್ತಿ ಸಮರ್ಪಣಾ ಭಾವದ ಸಾಕಾರ ಮೂರ್ತಿಯಾಗುತ್ತಿದ್ದರು ಪಂಡಿತಜೀ. ಒಂದು ಇಡೀ ಸಂಗೀತ ಕಾರ್ಯಕ್ರಮ, ೪ ಗಂಟೆಯಷ್ಟು ಬರೀ ‘ದಾಸವಾಣಿ’ಯನ್ನು ದೇಶ-ಹೊರದೇಶದಲ್ಲೂ ಹಾಡಿದ ಮೊದಲ ಕನ್ನಡಿಗ ಪಂ.ಜೋಶಿಯವರು. ‘ಕರುಣಿಸೋ ರಂಗಾ..’ ಅಂದರೆ ರಂಗ ಬರಲೇಬೇಕು. ಅವರು ಹಾಡಿದ ಭಾಗ್ಯದ ಲಕ್ಷ್ಮೀ ಬಾರಮ್ಮಾ ಮಕ್ಕಳಿಂದ, ಹಿರಿಯರವರೆಗೆ ಎಲ್ಲರ ಮನ ಗೆದ್ದಿತ್ತು. ಪುರಂದರ-ಕನಕದಾಸರ ಸಾಹಿತ್ಯದ ಪುನರುತ್ಥಾನಕ್ಕೆ ಕೆಲನಾಯಕರು ಬರೀ ಮಾತನಾಡಿದರೆ, ಕರ್ನಾಟಕದಿಂದ ಹೊರಗುಳಿದಿದ್ದರೂ, ಪಂಡಿತ ಜೀಯವರು ತಮ್ಮ ಕನ್ನಡಾಭಿಮಾನವನ್ನು, ಸಾಹಿತ್ಯ ಪ್ರೇಮವನ್ನು ಮುಂದುವರೆಸಿದ್ದರು. ಶುದ್ಧ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲೇ ಜೋಶಿಯವರು ಹಾಡಲೆಂದೇ ವರಕವಿ ಬೇಂದ್ರೆಯವರು ಕನ್ನಡದಲ್ಲೇ ಶಾಸ್ತ್ರೀಯ ಸಂಗೀತಕ್ಕೆ ಗೀತೆ ರಚನೆ ಮಾಡಿದರು. ಇದು ಬೇಂದ್ರೆ, ಜೋಶಿಯವರು ಕನ್ನಡಮ್ಮನಿಗೆ-ಸಂಗೀತಕ್ಕೆ ಅಮೋಘ ಕೊಡುಗೆ.
ಜೋಶಿಯವರೆಂದರೆ ನಮಗೆ ಯಮನ್-ದರಬಾರಿ-ತೋಡಿ ಮುಂತಾದ ರಾಗಗಳ ಸಾಕಾರ ಮೂರ್ತಿಯೆಂದೆನಿಸುತ್ತದೆ. ಆದರೆ ಅವರು ಹಾಡಿದ ಕುವೆಂಪುರವರ ನಾನೇ ವೇಣೆ ನೀನೆ ತಂತಿ, ಬೇಂದ್ರೆಯವರ ಉತ್ತರಧ್ರುವದಿಂ ದಕ್ಷಿಣ ಧ್ರುವಕ್ಕೂ, ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಗೀತೆಗಳ ಧ್ವನಿಮುದ್ರಿಕೆಗಳು ಯಾವುದೇ ಸುಗಮಸಂಗೀತಗಾರನಿಗೆ ಮಾರ್ಗದರ್ಶಿಯಂತಿವೆ. ಸ್ಪಷ್ಟ ಉಚ್ಚಾರ, ನಿಖರವಾದ ಪದಚ್ಛೇದ, ವಾದ್ಯಗಳ ಅಬ್ಬರವಿಲ್ಲದೇ ಕೇವಲ ದನಿ-ಸಾಹಿತ್ಯದ ಸುಂದರ ಸಮ್ಮೇಳನ ಈ ಗೀತೆಗಳ ಸೌಂದರ್ಯ ಹಾಗೂ ಅರ್ಥವನ್ನು ಇಮ್ಮಡಿಗೊಳಿಸುತ್ತವೆ.
ಸಿನಿಮಾ ಹಾಗೂ ಹಿನ್ನೆಲೆ ಗಾಯನದ ಕ್ಷೇತ್ರದಲ್ಲೂ ಜೋಶಿಯವರು ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಸಂಧ್ಯಾರಾಗ ಚಿತ್ರದ ‘ನಂಬಿದೆ ನಿನ್ನ ನಾದ ದೇವತೆಯೇ’ ಹಾಗೂ ಕನ್ನಡತಿ ತಾಯೇ ಬಾ, ಎಂತಹಾ ಕನ್ನಡಿಗನಿಗೂ ಹೆಮ್ಮೆ. ಉತ್ಸಾಹದ ಚಿಲುಮೆಯಾಗುವಂತ ಹಾಡುಗಳು. ಮತ್ತೆ ಹಲವಾರು ದಶಕಗಳ ನಂತರ ಪಂಡಿತಜೀಯವರು ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡಿನ ಮೂಲಕ ಚಲನಚಿತ್ರ ಸಂಗೀತ ಪ್ರೇಮಿಗಳ ಹೃದಯವನ್ನು ಗೆದ್ದರು. ಪಂಡಿತ್‌ಜೀಯವರು ಸಾಕಷ್ಟು ಹಿಂದಿ ಚಿತ್ರಗೀತೆಗಳಿಗೆ ದನಿಯಾಗಿದ್ದರು. ಆನ್ ಕಹಿ ಚಿತ್ರಗೀತೆಗೆ ಶ್ರೇಷ್ಠ ಹಿನ್ನೆಲೆಗಾಯಕ ಪ್ರಶಸ್ತಿಯೂ ಲಭಿಸಿತ್ತು. ಒಮ್ಮೆ ಗುರುಗಳನ್ನು ನಾ ಕೇಳಿದೆ. ‘ನೀವ್ಯಾಕೆ ಹೆಚ್ಚು ಸಿನಿಮಾಕ್ಕೆ ಹಾಡಲಿಲ್ಲ?’ ಅಂತ. ‘ನಾವು ಹಾಡುವಂತಹ ಹಾಡು, ಹೆಚ್ಚು ಇರ‍್ತಿರಲಿಲ್ಲ’ ಅಂತ ಚಿಕ್ಕ ಉತ್ತರದಲ್ಲೇ ಸಂಭಾಷಣೆ ಮುಗಿಸಿಬಿಟ್ರು.
ಪಂಡಿತಜೀಯವರ ಶಿಷ್ಯ, ಮಾಧವಗುಡಿಯವರ ಶಿಷ್ಯನಾಗಿ, ಭೀಮಸೇನರ ಆಶೀರ್ವಾದದಿಂದ ಸಂಗೀತ ಪ್ರಪಂಚದ ವಿಧೇಯ ವಿದ್ಯಾರ್ಥಿಯಾಗಿ, ಈ ಪರಂಪರೆಯಲ್ಲೇ ನಾನು ಮುಂದುವರೆದಿದ್ದೇನೆ. ಹಲವಾರು ಬಾರಿ ಜೋಶಿಯವರ ಜೊತೆ ಕೊಲ್ಕತ್ತಾ, ಚೆನ್ನೈ, ಮುಂಬಯಿ, ದೆಹಲಿ, ಬೆಂಗಳೂರು ಮುಂತಾದ ಕಡೆ ತಂಬೂರಿ, ಸಹಗಾಯನಕ್ಕೆ ಕುಳಿತಿದ್ದೇನೆ. ಅವರ ಸಂಗೀತ ದೇವ ಭಾಷೆ, ವಿಶ್ವಭಾಷೆಯಾಗಿದ್ದರೂ, ಅವರ ಮಾತೃಭಾಷೆ ಕನ್ನಡವೇ ಆಗಿರುತ್ತಿತ್ತು. ಕನ್ನಡಿಗರು ಇಲ್ಲದ ಸಭೆಯಲ್ಲೂ ಕನ್ನಡದ ದಾಸರ ಪದಗಳನ್ನು ಹಾಡ್ತಿದ್ರು. ವೇದಿಕೆಯ ಮೇಲೆ ನಮ್ಮೊಡನೆ ಕನ್ನಡದಲ್ಲೇ ಮಾತಾಡ್ತಿದ್ರು. ಆ ಗಂಭೀರ ಮುಖಭಾವ, ವ್ಯಕ್ತಿತ್ವ, ಧ್ವನಿ, ಸಂಗೀತ, ಅವರ ವಿಶ್ವಮಾನವ ಪ್ರೀತಿ ಎಂದೆಂದಿಗೂ ನಿರಂತರ, ಅಜರಾಮರ. ‘ಏನಪ್ಪಾ ನಾಗರಾಜ ಹೆಂಗಿದ್ದೀರಿ..?’ ಅಂತ ಅವರು ಇಂದೂ ಕೇಳಿದ್ಹಾಂಗ ಅನಿಸ್ತದೆ. ಅವರು ತಮ್ಮ ಹಾಡಿನ ಮೂಲಕ, ಶಿಷ್ಯರ ಮೂಲಕ ಎಂದೆಂದೂ ನಮ್ಮೊಡನೆ ಇದ್ದಾರ, ಇರತಾರ.ಪಂಡಿತಜೀಯವರ ೯೦ ವರ್ಷದ ಸಾರ್ಥಕ ಬದುಕು, ಸಂಗೀತದ ಪಯಣವನ್ನು ಕೇವಲ ಕೆಲವು ಪುಟಗಳಲ್ಲಿ, ಸಾಲುಗಳಲ್ಲಿ ಏನಂತ ಬರೆಯೋದು? ಎಷ್ಟಂತಾ ಬರೆಯೋದು...?
ಆದರೂ ‘ಭೀಮಣ್ಣ ಮತ್ತೊಮ್ಮೆ ಹುಟ್ಟಿ ಬಾ..." ಅಂತ ನಾವೆಲ್ಲಾ ಹಾಡ್ತಾ ಇರೋಣ.

No comments:

Post a Comment

ಹಿಂದಿನ ಬರೆಹಗಳು