Tuesday, February 8, 2011

ಕೆಂಪೇಗೌಡರು ಕಟ್ಟಿದ ನಾಡಲ್ಲಿ ನುಡಿಹಬ್ಬ
ಟಿ.ಎ.ನಾರಾಯಣಗೌಡರು


ಆಕೆ ಲಕ್ಷ್ಮಿದೇವಿ, ನಾಡಪ್ರಭು ಕೆಂಪೇಗೌಡರ ಸೊಸೆ. ಸೋಮಣ್ಣ ಗೌಡರ (ದೊಡ್ಡವೀರಪ್ಪಗೌಡರು) ಪತ್ನಿ. ಬೆಂಗಳೂರೆಂಬ ಅದ್ಭುತ ನಾಡನ್ನು ಕಟ್ಟುವ ಸಂದರ್ಭದಲ್ಲಿ ಮಾವನವರು ಕೊನೆಯ ಕಾರ್ಯವಾಗಿ ಕಟ್ಟಿದ ಕೋಟೆ ಹೆಬ್ಬಾಗಿಲು ಪದೇ ಪದೇ ಕುಸಿದು ಬೀಳುತ್ತಿದ್ದಾಗ ಅದನ್ನು ಉಳಿಸಲೆಂದು ನಾಡಿಗೆ ಸಮರ್ಪಿಸಿಕೊಂಡ ವೀರಮಹಿಳೆ.
ನಾಡಪ್ರಭು ಕೆಂಪೇಗೌಡರು ಒಂದು ಬೃಹತ್ ನಗರಿಯನ್ನು ಕಟ್ಟುವ ಕಾರ್ಯವನ್ನು ಆರಂಭಿಸಿ ಅದನ್ನು ಸಂಪೂರ್ಣಗೊಳಿಸಿದ್ದರು. ಆದರೆ ಕೋಟೆಯ ಹೆಬ್ಬಾಗಿಲು ಮಾತ್ರ ಕಟ್ಟಿದಂತೆ ಕುಸಿದು ಬೀಳುತ್ತಿತ್ತು. ಹೀಗೆ ಕೋಟೆ ಹೆಬ್ಬಾಗಿಲು ಪದೇ ಪದೇ ಹಾಳಾಗುವುದಕ್ಕೆ ತಮ್ಮ ವಿರೋಧಿಗಳ ಕುತಂತ್ರ ಕಾರಣ ಎಂಬುದನ್ನು ಅವರು ಅರಿಯದಾಗಿದ್ದರು.
ಈ ಸಂದರ್ಭದಲ್ಲಿ ತುಂಬು ಗರ್ಭಿಣಿಯನ್ನು ಬಲಿ ಕೊಟ್ಟರೆ ಹೆಬ್ಬಾಗಿಲು ಉಳಿದುಕೊಳ್ಳುತ್ತದೆ ಎಂದು ಕ್ಷುಲ್ಲಕ ಉಪದೇಶ ನೀಡಿದವರು ಪುರೋಹಿತರು. ಇದನ್ನು ಕೆಂಪೇಗೌಡರು ಒಪ್ಪಲಿಲ್ಲ. ಇಂಥ ಅಮಾನವೀಯ ಕೃತ್ಯವನ್ನು ನಾನು ನಡೆಸಲಾರೆ ಎಂದು ಸಾರಾಸಗಟಾಗಿ ಹೇಳಿದರು. ಆದರೆ ಪ್ರಭುವಿನ ಸಂಕಟ ನೋಡಲಾಗದ ನಾಗರಿಕರು ಇಂಥ ಬಲಿಗೆ ತಾವು ಸಿದ್ಧರಿದ್ದೇವೆ ಎಂದರು. ಆದರೆ ಕೆಂಪೇಗೌಡರು ನಾಡಿನ ಯಾವುದೇ ತುಂಬುಗರ್ಭಿಣಿಯನ್ನೂ ನಾನು ಬಲಿಗೊಡಲಾರೆ, ಹೆಬ್ಬಾಗಿಲು ನಿಲ್ಲದಿದ್ದರೂ ಚಿಂತೆಯಿಲ್ಲ ಎಂದು ತೀರ್ಮಾನ ಕೈಗೊಂಡರು.
ಆದರೆ ವಿಧಿ ಬೇರೆಯದೇ ಆಟ ಹೂಡಿತ್ತು. ಕೆಂಪೇಗೌಡರ ಮನೆಯಲ್ಲೇ ಇದ್ದ ಜೀವವೊಂದು ಬಲಿಯಾಗಲು ತಯಾರಾಗಿ ನಿಂತಿತ್ತು. ಕೋಟೆ ಹೆಬ್ಬಾಗಿಲು ನಿಲ್ಲಲಿಲ್ಲವೆಂಬ ಕಾರಣಕ್ಕೆ ಸಂಕಟಪಟ್ಟು ಹಾಸಿಗೆ ಹಿಡಿದಿದ್ದ ಮಾವನವರ ಯಾತನೆಯನ್ನು ಸಹಿಸಲಾಗದ ಸೊಸೆ ಲಕ್ಷ್ಮಿದೇವಿ ನಿರ್ಧಾರವೊಂದಕ್ಕೆ ಬಂದಿದ್ದಳು. ಅದೊಂದು ದಿನ ನಸುಕಿನಲ್ಲೇ ಎದ್ದು ಕೋಟೆ ಹೆಬ್ಬಾಗಿಲ ಬಳಿ ತೆರಳಿ ತನ್ನ ಕತ್ತನ್ನೇ ಸೀಳಿಕೊಂಡು ಆತ್ಮಾರ್ಪಣೆ ಮಾಡಿಕೊಂಡರು. ಕೆಂಪೇಗೌಡರ ವಂಶದ ಕುಡಿಯೊಂದಿಗೆ ಮಹಾತಾಯಿ ಲಕ್ಷ್ಮಿದೇವಿ ಇಹಲೋಕ ತ್ಯಜಿಸಿದ್ದರು. ನಾಡಪ್ರಭು ಕೆಂಪೇಗೌಡರ ಇಡೀ ಕುಟುಂಬವೇ ಹೇಗೆ ಜನಾನುರಾಗಿಯಾಗಿತ್ತು ಎಂಬುದಕ್ಕೆ ಇದು ಸಾಕ್ಷಿ. ಕೆಂಪೇಗೌಡರ ತಂದೆ ಕೆಂಪನಂಜೇಗೌಡರು ವಿಜಯನಗರ ಅರಸರ ಬಲಗೈಯಂತಿದ್ದವರು. ವಿಜಯನಗರದ ಅರಸರ ಸಾಮಂತರಾಗಿದ್ದರೂ ಯಲಹಂಕದ ನಾಡಪ್ರಭುಗಳು ದಕ್ಷಿಣ ಭಾಗದಲ್ಲಿ ಸಾಮ್ರಾಟರಂತಿದ್ದರು. ದಂಗೆಯೆದ್ದ ಸಾಮಂತರನ್ನು ಹಣಿದು, ವಿಜಯನಗರ ಅರಸರಿಗೆ ಒಪ್ಪಿಸುತ್ತಿದ್ದ ಯಲಹಂಕ ನಾಡಪ್ರಭುಗಳು ಜನರಿಗಾಗಿಯೇ ಬದುಕಿದರು. ಕೆಂಪೇಗೌಡರು ಅತ್ಯಂತ ಸಾಹಸಿಗಳು. ಅವರ ಸಾಹಸದ ಫಲವೇ ಇವತ್ತಿನ ಬೆಂಗಳೂರು. ಹೊಸದಾದ ನಗರವೊಂದನ್ನು ಕಟ್ಟುವ ಕಲ್ಪನೆಯೇ ಸಾಹಸಮಯವಾದ್ದು. ಕೆಂಪೇಗೌಡರಿಗೆ ಆ ಇಚ್ಛಾಶಕ್ತಿಯಿತ್ತು. ಹೀಗಾಗಿಯೇ ಅವರು ನಗರ ನಿರ್ಮಾಣಕ್ಕೆ ಹೊರಟರು. ತಮ್ಮ ಕಲ್ಪನೆಯ ನಗರದಲ್ಲಿ ಎಲ್ಲ ಸಮುದಾಯ, ಕಸುಬಿನವರೂ ಗೌರವಯುತ ಜೀವನ ನಡೆಸಬೇಕು, ಈ ಉದ್ದೇಶಿತ ನಗರಿಯಲ್ಲಿ ಯಾವುದಕ್ಕೂ ಕೊರತೆಯಿರಬಾರದು ಎಂದು ಕೆಂಪೇಗೌಡರು ಮುಂದಾಲೋಚನೆ ಮಾಡಿದ್ದರು.
ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ಹೀಗೆ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗಡಿ ನಿಷ್ಕರ್ಷಾ ಮಂಟಪ ಗೋಪುರಗಳನ್ನು ನಿರ್ಮಿಸಿದರು. ಹಾಗೆಯೇ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಿದರು.
ಒಟ್ಟು ೬೪ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರದ್ದು. ಬಹುಶಃ ಇಂಥ ಪೇಟೆಗಳನ್ನು ಇತಿಹಾಸದಲ್ಲಿ ಯಾವುದೇ ರಾಜ-ಮಹಾರಾಜರೂ ಇಷ್ಟು ದೂರದೃಷ್ಟಿಯಲ್ಲಿ ನಿರ್ಮಿಸಿರಲಾರರು.
ಅರಳೆಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಗೊಲ್ಲರಪೇಟೆ, ಹೂವಾಡಿಗರ ಪೇಟೆ, ಮಂಡಿಪೇಟೆ, ಅಂಚೆಪೇಟೆ, ಬಳೇಪೇಟೆ, ತರಗುಪೇಟೆ, ಸುಣ್ಣಕಲ್ ಪೇಟೆ, ಮೇದಾರ ಪೇಟೆ, ಕುರುಬರ ಪೇಟೆ, ಮುತ್ಯಾಲಪೇಟೆ, ಕುಂಚಿಟಿಗರ ಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಕಲ್ಲಾರಪೇಟೆ, ತಿಗಳರ ಪೇಟೆ, ಮಾಮೂಲ್ ಪೇಟೆ, ನಗರ್ತಪೇಟೆ, ಸುಲ್ತಾನಪೇಟೆ, ಮನವರ್ತಪೇಟೆ, ಕಬ್ಬನ್‌ಪೇಟೆ, ಬಿನ್ನಿಪೇಟೆ.... ಹೀಗೆ ಸಾಗುತ್ತವೆ ಈ ಪಟ್ಟಿ. ಈ ಎಲ್ಲ ಪೇಟೆಗಳಿಗೆ ಕುಲಕಸುಬುದಾರರನ್ನು ಕರೆದುಕೊಂಡು ಬಂದು, ಅವರಿಗೆ ಸ್ಥಳ ನೀಡಿ ಅವರ ಜೀವನಕ್ಕೆ ಆಧಾರವಾದರ. ಒಂದು ನಗರವನ್ನು ಹೇಗೆ ಕಟ್ಟಬೇಕು ಎಂಬುದನ್ನು ಕೆಂಪೇಗೌಡರು ಹೀಗೆ ತೋರಿಸಿಕೊಟ್ಟಿದ್ದರು.
ಕೆರೆಕಟ್ಟೆಗಳಿಲ್ಲದೆ ಊರು-ಜನ ಇರಲಾಗದು. ಕೆರೆಗಳನ್ನು ಕಟ್ಟಿಸುವುದು ಕೆಂಪೇಗೌಡರ ವಿಶೇಷ ಆದ್ಯತೆಯಾಗಿತ್ತು. ಈ ಕಾರಣದಿಂದಲೇ ಅವರು ನೂರಾರು ಕೆರೆಗಳನ್ನು ಕಟ್ಟಿಸಿದರು. ಹೊಸ ನಗರದಲ್ಲಿ ಕುಡಿಯುವ ನೀರಿಗೆ, ಕೃಷಿ ಬಳಕೆಯ ನೀರಿಗೆ ಯಾವುದೇ ಕೊರತೆಯಾಗದಂತೆ ಈ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಕಟ್ಟಿಸಿದ್ದರು.
ಇಂದಿನ ಟ್ಯಾಂಕ್‌ಬಂಡ್, ರೈಲ್ವೆ ನಿಲ್ದಾಣ, ಸುಭೇದಾರ್ ಛತ್ರ ರಸ್ತೆಯಿಂದ ಗಾಂಧಿನಗರದವರೆಗಿನ ಪ್ರದೇಶದಲ್ಲಿ ಬೃಹತ್ ಪ್ರಮಾಣದ ಕೆರೆಯನ್ನು ಕೆಂಪೇಗೌಡರು ನಿರ್ಮಿಸಿದ್ದರು. ಧರ್ಮದೇವತೆ ಧಮಾಂಬುದಿಯ ಹೆಸರನ್ನು ಕೆರೆಗೆ ಇಡಲಾಗಿತ್ತು. ಕೆರೆಗೆ ಎರಡು ವಿಶಿಷ್ಟ ತೂಬುಗಳನ್ನು ಕಲ್ಪಿಸಲಾಗಿತ್ತು. ಒಂದು ತೂಬಿನ ಮೂಲಕ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಇನ್ನೊಂದು ತೂಬಿನಿಂದ ಅರಮನೆಗೆ ನೀರು ಸೌಕರ್ಯ ಕಲ್ಪಿಸಲಾಗಿತ್ತು. ಕೆರೆಯ ಪಕ್ಕದಲ್ಲೇ ನಾಡದೇವಿ ಅಣ್ಣಮ್ಮ ದೇವಿಯ ದೇಗುಲವನ್ನು ಕೆಂಪೇಗೌಡರು ನಿರ್ಮಿಸಿ, ಕೆರೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಗೋಪುರಗಳನ್ನು ರಚಿಸಿದ್ದರು. ಧರ್ಮಾಂಬುದಿ ಕೆರೆಯೇ ಈಗ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಸುತ್ತಲಿನ ಜನವಸತಿ ಪ್ರದೇಶವಾಗಿದೆ.
ಇವತ್ತು ಸಂಪಂಗಿರಾಮ ನಗರವೆಂದು ಕರೆಯಲಾಗುವ ಮಹಾನಗರಪಾಲಿಕೆ ಬಳಿಯ ಪ್ರದೇಶದಲ್ಲಿ ಕೆಂಪೇಗೌಡರು ಇನ್ನೊಂದು ಕರೆಯನ್ನು ಕಟ್ಟಿದ್ದರು, ಅದೇ ಸಂಪಂಗಿ ಕೆರೆ. ಇನ್ನು ತಮ್ಮ ಕುಲದೇವತೆ ಕೆಂಪಮ್ಮನವರ ಹೆಸರಿನಲ್ಲಿ ಈಗಿನ ಬಸವನಗುಡಿಯಲ್ಲಿ ಕೆಂಪೇಗೌಡರು ಕಟ್ಟಿದ್ದು ಕೆಂಪಾಂಬುದಿ ಕೆರೆ. ೧೫೭೦ರಲ್ಲಿ ಈ ಕೆರೆ ಅಂಗಳದಲ್ಲೇ ಬಂಡಿಮಾಂಕಾಳಿ ದೇವಸ್ಥಾನವನ್ನು ಅವರು ನಿರ್ಮಿಸಿದ್ದರು. ಈ ಬೃಹತ್ ಕೆಂಪಾಂಬುದಿ ಕೆರೆಯ ಬಹುಪಾಲು ಈಗ ಗವಿಪುರ, ಹನುಮಂತನಗರ, ಶ್ರೀನಗರ ಮತ್ತು ರಾಘವೇಂದ್ರ ಕಾಲನಿ ಎಂಬ ಜನವಸತಿ ಪ್ರದೇಶಗಳಾಗಿ ಮಾರ್ಪಾಡಾಗಿವೆ.
ಕೆಂಪೇಗೌಡರು ಬೆಂಗಳೂರು ದಕ್ಷಿಣದ ಕೋಟೆಯ ಸಮೀಪ ಕಟ್ಟಿದ್ದು ಕಾರಂಜಿ ಕೆರೆ. ಇದು ಈಗ ಸಂಪೂರ್ಣ ನಾಶವಾಗಿದೆ. ಈ ದಕ್ಷಿಣದ ಹಲವು ಭಾಗಗಳಿಗೆ ನೀರು ಸರಬರಾಜಾಗುತ್ತಿತ್ತು.
ಹಲಸೂರು ಕೆರೆ ಇಂದು ಬೇರೆ ಬೇರೆ ಕಾರಣಗಳಿಗೆ ಖ್ಯಾತಿಯಾಗಿದೆ. ಆದರೆ ಇದನ್ನು ನಿರ್ಮಿಸಿದ ಕೆಂಪೇಗೌಡರು ಪಕ್ಕದಲ್ಲೇ ಸೋಮೇಶ್ವರ ದೇವಸ್ಥಾನವನ್ನು ಸ್ಥಾಪಿಸಿ, ಯಾತ್ರಾರ್ಥಿಗಳಿಗೆ ತಂಗುದಾಣ, ಸ್ನಾನಘಟ್ಟಗಳನ್ನು ನಿರ್ಮಿಸಿದ್ದರು.
ಇವಿಷ್ಟೇ ಅಲ್ಲದೆ, ಚನ್ನಮ್ಮನ ಕೆರೆ, ಗಿಡ್ಡಪ್ಪನ ಕೆರೆ, ಕೆಂಪಾಪುರ ಅಗ್ರಹಾರ ಕೆರೆ, ಮಾವಳ್ಳಿ ಸಿದ್ಧಾಪುರ ಕೆರೆ, ಯಡಿಯೂರು ಕೆರೆ, ವೈಯಾಲಿಕಾವಲ್ ಕೆರೆ, ವರ್ತೂರು ಕೆರೆ, ಅಕ್ಕಿತಿಮ್ಮನಹಳ್ಳಿ ಕೆರೆ, ಸ್ಯಾಂಕಿ ಕೆರೆ (ಹಿಂದೆ ಅದು ಗಂಧದ ಕೋಟಿ ಕೆರೆ) ಇತ್ಯಾದಿ ಕೆರೆಗಳನ್ನು ನಿರ್ಮಿಸಿದ್ದರು.
ಇಂಥ ಕೆರೆಗಳೇ ಬೆಂಗಳೂರು ನಗರದ ಅಂತರ್ಜಲವನ್ನು ವೃದ್ಧಿಸಿದವು. ಎಲ್ಲೆಡೆ ಹಸಿರು ಕಂಗೊಳಿಸಿತು. ಇವತ್ತು ಬೆಂಗಳೂರನ್ನು ಉದ್ಯಾನನಗರಿ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕೆಂಪೇಗೌಡರ ದೂರದರ್ಶಿತ್ವ.
ಬಸವನಗುಡಿಯಲ್ಲಿ ಪ್ರತಿವರ್ಷವೂ ನಡೆಯುವ ಕಡಲೆಕಾಯಿ ಪರಿಶೆಯ ಕಾರಣಕರ್ತರೂ ಕೆಂಪೇಗೌಡರು. ಆ ದಿನಗಳಲ್ಲಿ ಕಡಲೆಕಾಯಿಯನ್ನು ಬೆಳೆಯುತ್ತಿದ್ದ ರೈತರು ತಮ್ಮ ಬೆಳೆಯೆಲ್ಲ ರಾತ್ರೋರಾತ್ರಿ ನಾಶವಾಗುತ್ತಿದ್ದುದರಿಂದ ಗಾಬರಿಗೊಂಡಿದ್ದರು. ಇದು ಕೆಂಪೇಗೌಡರ ಗಮನಕ್ಕೆ ಬಂದಿತು. ಕೆಂಪೇಗೌಡರು ಸ್ಥಳದಲ್ಲಿ ಬಸವಣ್ಣನ ಮೂರ್ತಿಯನ್ನು ಸ್ಥಾಪಿಸಿ, ಕಡಲೆಕಾಯಿ ನೈವೇದ್ಯವನ್ನು ಸಮರ್ಪಿಸಿ ತನ್ನ ರೈತರನ್ನು ಕಾಪಾಡುವಂತೆ ಪ್ರಾರ್ಥಿಸಿದರಂತೆ. ನಂತರ ರೈತರ ಬೆಳೆಗಳು ಉಳಿದವು. ತಮ್ಮ ಬೆಳೆ ಉಳಿಸಿದ ಕೃತಜ್ಞತೆ ಸಲ್ಲಿಸಲು ರೈತರು ಪ್ರತಿವರ್ಷ ಬಂದು ಕಡಲೆಕಾಯಿ ನೈವೇದ್ಯ ಸಮರ್ಪಿಸಿ, ಸುತ್ತಲ ಪ್ರದೇಶಗಳಿಂದ ಬರುವ ಜನರಿಗೆ ಕಡಲೆಕಾಯಿಯನ್ನು ಮಾರಾಟ ಮಾಡುವ ಪರಿಪಾಠ ಆರಂಭಿಸಿದರು.
ಕೆಂಪೇಗೌಡರು ಎಂಥ ಜನಾನುರಾಗಿಗಳಾಗಿದ್ದರು ಎಂಬುದಕ್ಕೆ ನೂರಾರು ಉದಾಹರಣೆಗಳಿವೆ. ಒಮ್ಮೆ ಮಳೆಯಾಗದೆ ಬರ ಬಂದು, ಜನ ಸಂಕಟದಲ್ಲಿ ಒದ್ದಾಡುತ್ತಿದ್ದಾಗ ಇಡೀ ಕೋಶವನ್ನೇ ಬರಿದುಮಾಡಿ ಜನರ ಸಹಾಯಕ್ಕೆ ನಿಂತ ಕೆಂಪೇಗೌಡರು ಆ ಮೂಲಕ ಅವರ ಕಣ್ಣೀರು ಒರೆಸಲು ಯತ್ನಿಸುತ್ತಾರೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಾಡಿನ ಶ್ರೀಮಂತರ ಮುಂದೆ ಬೊಗಸೆಯೊಡ್ಡಲೂ ನಾಡಪ್ರಭುಗಳು ಹಿಂಜರಿಕೆ ಮಾಡಲಿಲ್ಲ. ಒಟ್ಟಿನಲ್ಲಿ ಜನರ ಸಂಕಟ ಬಗೆಹರಿಸಲು ಸಾಧ್ಯವಿರುವ ಯಾವ ಅವಕಾಶವನ್ನೂ ಅವರು ಕಳೆದುಕೊಳ್ಳುತ್ತಿರಲಿಲ್ಲ.
ಬೆಂಗಳೂರು ನಗರ ನಿರ್ಮಾಣದ ಸಂದರ್ಭದಲ್ಲಿ ಕೆಂಪೇಗೌಡರ ದೂರಾಲೋಚನೆ ಹಾಗು ಸಾಹಸಪ್ರವೃತ್ತಿಯನ್ನು ಗಮನಿಸಿದ್ದ ವಿಜಯನಗರದ ಅರಸರು, ನಗರ ನಿರ್ಮಾಣವಾಗುವವರೆಗೂ ಕಪ್ಪ-ಕಾಣಿಕೆ ಕೊಡುವ ಅಗತ್ಯವಿಲ್ಲ ಎಂದು ಕೆಂಪೇಗೌಡರಿಗೆ ಪ್ರೀತಿಯಿಂದ ಹೇಳಿದ್ದರಂತೆ. ಮಾತ್ರವಲ್ಲದೆ, ನಾಡಿನ ದಕ್ಷಿಣ ಭಾಗವನ್ನು ಅನ್ಯರ ಆಕ್ರಮಣಗಳಿಂದ ಕಾಯುವ ಹೊಣೆ ನಿಮ್ಮದು, ಆ ಶಕ್ತಿ ನಿಮಗೆ ಮಾತ್ರ ಇದೆ ಎಂದು ಬೆನ್ನುತಟ್ಟಿದ್ದರು. ಇಂಥ ಮಹೋನ್ನತ ಇತಿಹಾಸ ಬೆಂಗಳೂರಿನದ್ದು, ಕೆಂಪೇಗೌಡರದ್ದು.
ಬೆಂಗಳೂರಿನಲ್ಲಿ ೪೦ ವರ್ಷಗಳ ಬಳಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಹೊತ್ತಿನಲ್ಲಿ ಈ ನಮ್ಮ ವೈಭವದ ಬೆಂಗಳೂರು ಹುಟ್ಟಿದ ದಿನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೆಂದು ಈ ವಿಷಯಗಳನ್ನು ಪ್ರಸ್ತಾಪಿಸಿದೆ.
ದುರಂತವೆಂದರೆ ಕೆಂಪೇಗೌಡರ ಕುರಿತು ಇನ್ನೂ ಸರಿಯಾದ ಅಧ್ಯಯನಗಳು ನಡೆದಿಲ್ಲ. ಹಿಂದೆಯೇ ಕುತ್ಸಿತ ಮನಸ್ಸಿನವರು ಶಾಸನಗಳನ್ನು ನಾಶಪಡಿಸಿದ ಪರಿಣಾಮವಾಗಿ ಸಾಕಷ್ಟು ಮಾಹಿತಿಗಳು ಇತಿಹಾಸದ ಗರ್ಭದಲ್ಲೇ ಹೂತು ಹೋಗಿವೆ. ಆದರೂ ಸಮಕಾಲೀನ ಸಂಶೋಧಕರನೇಕರು ಕೆಂಪೇಗೌಡರ ಕಾಲದ ಶಾಸನಗಳು, ದತ್ತಿ ಪತ್ರಗಳು ಇತ್ಯಾದಿಗಳನ್ನು ಸಂಗ್ರಹಿಸಿ ಸಾಕಷ್ಟು ಬೆಳಕು ಚೆಲ್ಲಿದ್ದಾರೆ.
ಇವತ್ತು ಕೆಂಪೇಗೌಡರ ಸಾಧನೆಗಳ ಕುರಿತು ಹೇಳಲು ಹೊರಟರೆ ಅದನ್ನು ಜಾತಿಯ ಕಣ್ಣಲ್ಲಿ ನೋಡುವ ಜನರಿದ್ದಾರೆ. ಇಂಥ ಜನರೇ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿಯನ್ನು ಬಲಿತೆಗೆದುಕೊಂಡವರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕೆಂಬುದು ನಮ್ಮ ಹಲವು ದಿನಗಳ ಬೇಡಿಕೆ. ಹಾಗೆಯೇ ಮಂಗಳೂರು ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕನ ಹೆಸರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮನ ಹೆಸರು, ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿಯ ಹೆಸರು ಇಡಬೇಕೆಂಬ ಬೇಡಿಕೆಗಳನ್ನು ಇಟ್ಟುಕೊಂಡು ಬಂದಿದ್ದೇವೆ. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿದೆ. ನಮ್ಮ ಇತಿಹಾಸವನ್ನು ಉಳಿಸುವ ದೃಷ್ಟಿಯಿಂದ ನಾವು ಇಂಥ ಹೆಸರುಗಳನ್ನು ಸ್ಮರಿಸಿಕೊಳ್ಳುವ ಕಾರ್ಯ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಇತಿಹಾಸವೇ ನಾಶವಾಗುತ್ತದೆ. ನಮಗೆ ಇಂಥ ಸುಂದರ ನಾಡನ್ನು ಕಟ್ಟಿಕೊಟ್ಟು ಹೋದ ಪ್ರಾತಃಸ್ಮರಣೀಯರಿಗೆ ನಾವು ಕೃತಘ್ನರಾಗಿಬಿಡುತ್ತೇವೆ.
ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಸಂದರ್ಭದಲ್ಲಾದರೂ ರಾಜ್ಯ-ಕೇಂದ್ರ ಸರ್ಕಾರಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವ ಘೋಷಣೆಯನ್ನು ಮಾಡಬೇಕು. ಇದಿಷ್ಟೇ ಅಲ್ಲ, ರಾಜ್ಯವನ್ನು ಕಾಡುವ ಎಲ್ಲ ಸಮಸ್ಯೆಗಳ ಕುರಿತು ಪರಿಷತ್ತು ಸಮ್ಮೇಳನದಲ್ಲಿ ತೆಗೆದುಕೊಳ್ಳುವ ಹೊಸ-ಹಳೆಯ ನಿರ್ಣಯಗಳನ್ನು ಜಾರಿ ಮಾಡುವ ಇಚ್ಛಾಶಕ್ತಿಯನ್ನು ತೋರಬೇಕು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೇ ಹೆಸರಾಗಿದೆ. ಸಾಹಿತಿಗಳು ಮಾತ್ರವಲ್ಲದೆ ಪ್ರತಿಯೊಬ್ಬ ಕನ್ನಡಾಭಿಮಾನಿಯೂ ಈ ಸಂಸ್ಥೆಯನ್ನು ಪ್ರೀತಿಸುತ್ತಾನೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ - ಇವುಗಳ ಬೆಳವಣಿಗೆ ಹಾಗೂ ಸಂರಕ್ಷಣೆ ಮತ್ತು ಸಂವರ್ಧನೆಯ ಆಶಯದಿಂದ ದಿನಾಂಕ ೫-೫-೧೯೧೫ರಲ್ಲಿ ಕನ್ನಡಿಗರ ಈ ಸಂಸ್ಥೆ ಸ್ಥಾಪನೆಯಾಗಿದೆ. ಈ ಸಂಸ್ಥೆ ರೂಪುಗೊಳ್ಳಲು ಪ್ರೇರಣೆಯಾದವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾದ ಅಂದಿನ ’ಕರ್ಣಾಟಕ ಸಾಹಿತ್ಯ ಪರಿಷತ್ತು’ ಇಂದು ಕನ್ನಡ ಸಾಹಿತ್ಯ ಪರಿಷತ್ತು ಆಗಿದೆ, ವಿಶಾಲವಾಗಿ ಬೆಳೆದಿದೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಘಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಾವಿರಾರು ಕಾರ್ಯಕರ್ತರು ಉತ್ಸಾಹದಿಂದ ತೊಡಗಿಕೊಂಡಿದ್ದಾರೆ. ಸಮ್ಮೇಳನದ ಮೆರವಣಿಗೆಯನ್ನು ರೂಪಿಸುವ ಸಮಿತಿಯ ಅಧ್ಯಕ್ಷನ ಹೊಣೆಯನ್ನು ನನಗೆ ನೀಡಲಾಗಿದೆ. ಅಭೂತಪೂರ್ವವಾದ ಮೆರವಣಿಗೆಯನ್ನು ದಸರಾ ಮೆರವಣಿಗೆ ಮಾದರಿಯಲ್ಲಿ ರೂಪಿಸುವ ಕನಸು ನನ್ನದು. ನುಡಿಹಬ್ಬದ ಕೈಂಕರ್ಯದಲ್ಲಿ ಇದು ನಮ್ಮ ಅಳಿಲು ಸೇವೆ.
ಈ ಸಮ್ಮೇಳನ ಹಿಂದೆಂದಿಗಿಂತಲೂ ಹೆಚ್ಚು ಯಶಸ್ವಿಯಾಗಿ ನಡೆಯಬೇಕಿದೆ. ಪರಭಾಷಿಗರ ಆರ್ಭಟದಿಂದ ಕಂಗಾಲಾಗಿರುವ ಬೆಂಗಳೂರಿನಲ್ಲಿ ಕನ್ನಡಿಗರು ತಮ್ಮತನವನ್ನು ಮೆರೆಸುವ, ನಮ್ಮ ಸಂಸ್ಕೃತಿ-ಪರಂಪರೆಯನ್ನು ಮೆರೆಸುವ ಸಂಭ್ರಮದ ಅವಕಾಶ ಇದಾಗಿದೆ. ಕನ್ನಡನಾಡಿನಲ್ಲಿ, ಅದರಲ್ಲೂ ವಿಶೇಷವಾಗಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ನಾವು ಸಾರಬೇಕಿದೆ.
ಹೀಗಾಗಿ ಈ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರು ಪ್ರೀತಿ, ಅಭಿಮಾನದಿಂದ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇನೆ.

No comments:

Post a Comment

ಹಿಂದಿನ ಬರೆಹಗಳು