ನಮ್ಮ ಕಾಲದ ತಾನಸೇನ... ಈ ಭೀಮಸೇನ...
ದಿಟ
ನಿನ್ನ ವಯಸ್ಸೆಷ್ಟು?
ಹನ್ನೆರಡು
ಎಲ್ಲಿಂದ ಬಂದಿ?
ಗದಗಿನಿಂದ
ಗದಗ? ಎಲ್ಲಿದೆ ಅದು?
ಕರ್ನಾಟಕದಲ್ಲಿ..
ಕರ್ನಾಟಕದಿಂದ ಜಲಂಧರ ತನಕ ಬಂದ್ಯಾ? ಅಷ್ಟು ಹಾಡಿನ ಹುಚ್ಚು ಇದ್ಯಾ? ನಿನ್ನ ತಂದೆ ತಾಯಿ ಹೆಂಗ್ ಕಳಿಸಿದ್ರು?
ಓಡಿ ಬಂದೇನಿ...
ಹೀಗೆ ದೂರದ ಜಲಂಧರನಲ್ಲಿ ನಿಂತು ಮಾತಾಡುತ್ತಿದ್ದಾತನ ಹೆಸರು ಭೀಮ ಸೇನ ಜೋಶಿ. ಸಂಗೀತ ಕೇಳಿದರೆ ಸಾಕು ಮೋಡಿಗೊಳಗಾದವನಂತೆ ಸ್ವರದ ಜಾಡು ಹಿಡಿದು ಹೊರಟು ಬಿಡುತ್ತಿದ್ದ ಭೀಮಸೇನ ಹುಟ್ಟುತ್ತಲೇ ಸ್ವರಗಳೊಂದಿಗೆ ಧರೆಗೆ ಬಂದರೇನೊ!
ಗದಗದ ಕೀರ್ತನಕಾರರ ಕುಟುಂಬದಲ್ಲಿ ಜನಿಸಿದ ಅವರಿಗೆ ಮಾತು ಬರುವ ಹೊತ್ತಿಗೆ ಸರೆಗಮ ಕೂಡ ಗೊತ್ತಾಗಿತ್ತು. ತಾಯಿ ಹಾಡುವ ಭಜನೆಗಳಲ್ಲಿ, ದೇವಸ್ಥಾನದಲ್ಲಿ ಹಾಡುತ್ತಿದ್ದ ಭಕ್ತಿಗೀತೆಗಳಲ್ಲಿ, ಮಸೀದಿಯಿಂದ ಕೇಳುತ್ತಿದ್ದ ಪ್ರಾರ್ಥನೆಯಲ್ಲಿನ ಸ್ವರ-ತಾಳಗಳಿಗೆ ಭೀಮಣ್ಣ ಮೈಯೆಲ್ಲಾ ಕಿವಿಯಾಗಿಸಿಕೊಳ್ಳುತ್ತಿದ್ದ. ಗದಗದ ಕ್ಯಾಸೆಟ್ ಅಂಗಡಿಯ ಪಕ್ಕ ಉಸ್ತಾದ್ ಅಬ್ದುಲ್ ಕರೀಂ ಖಾನ್‌ರ ಬಸಂತ್ ರಾಗದ ರೆಕಾರ್ಡಿಂಗ್ ಕೇಳುತ್ತಿದ್ದ. ಈ ಕರೀಂ ಖಾನ್ ಬೇರಾರು ಅಲ್ಲ, ಮುಂದೆ ಭೀಮಸೇನರು ಮಿಂಚಲಿದ್ದ ಕಿರಾಣಾ ಘರಾಣಾದ ಜನಕರು.
ಹೀಗೆ ತನ್ನ ಸುತ್ತಲಿನ ಸಂಗೀತವನ್ನು ತನ್ನ ಉಸಿರಾಗಿಸಿಕೊಂಡ ಬೆಳೆದ ಭೀಮಸೇನ ತಾನು ಸಂಗೀತ ಲೋಕದಲ್ಲಿ ಏನು ಮಾಡುತ್ತೇನೆಂದು ಊಹಿಸಿರಲಿಲ್ಲ. ಆದರೆ ಆಗುವುದು ಬಹಳಿತ್ತು..
ಊರ ತೊರೆದು ಸ್ವರವ ಹಿಡಿದು..
ಅಮ್ಮ ಊಟಕ್ಕೆ ಹೆಚ್ಚು ತುಪ್ಪ ಹಾಕಲಿಲ್ಲವೆಂದು ಸಿಟ್ಟಿನಿಂದ ಮನೆ ತೊರೆದ ಭೀಮಸೇನ ಎರಡು ವರ್ಷ ಕಾಲ ಅಲೆದಾಡಿದ. ಹಾಗೇ ಮನೆ ಬಿಟ್ಟ ಮೇಲೆ ಸಂಗೀತ ಕಲಿಯಲು ಮೊದಲು ಕಾಲಿಟ್ಟಿದ್ದು ಬಿಜಾಪುರದಲ್ಲಿ. ಅಲ್ಲಿಂದ ಪುಣೆಗೆ. ಅಲ್ಲಿಂದ ಗ್ವಾಲಿಯರ್‌ಗೆ. ಅಲ್ಲಿ ಮಾಧವ ಸಂಗೀತ ವಿದ್ಯಾಲಯದಲ್ಲಿ ಗುರುವಿನ ದರ್ಶನವಾಯಿತು. ಸಿಂದಿಯಾ ದರ್ಬಾರಿನ ಪ್ರಸಿದ್ಧ ಸಂಗೀತಗಾರ ಉಸ್ತಾದ್ ಹಫೀಜ್ ಅಲಿ ಖಾನ್ ಭೀಮಸೇನನಿಗೆ ಆಶ್ರಯವಿತ್ತರು. ಮಾರ್ವಾ ಮತ್ತು ಪುರಿಯಾ ರಾಗಗಳ ಮೊದಲ ಪಾಠವಾಯಿತು.
ಗ್ವಾಲಿಯರ್‌ನಿಂದ ಭೀಮಣ್ಣನ ಪಯಣ ಕೊಲ್ಕತಾಕ್ಕೆ. ಅಲ್ಲಿ ಈ ಬಾಲಕನನ್ನು ನೋಡಿ ಮೆಚ್ಚಿದ ಗಾಯಕ ಪಹರಿ ಸನ್ಯಾಲ್ ತಮ್ಮಲ್ಲಿ ಕೆಲಸಕ್ಕಿಟ್ಟುಕೊಂಡರು. ಕೊಲ್ಕತಾದಲ್ಲೂ ತುಂಬಾ ಕಾಲ ಇರಲಿಲ್ಲ. ಅಲ್ಲಿಂದ ಗುರುವಿನ ಹುಡುಕಾಟದಲ್ಲಿ ಜೋಶಿ ಪಂಜಾಬಿನ ಜಲಂಧರ್‌ಗೆ ತೆರಳಿದರು. ಅಲ್ಲಿ ಗಾಯಕ ವಿನಾಯಕರಾವ್ ಬುವಾ ಪಟವರ್ಧನ್ ಅವರು ಮತ್ತೊಬ್ಬ ಗುರುವಿನ ಹೆಸರು ಸೂಚಿಸಿದರು. ಆ ಗುರುವೇ ಧಾರವಾಡದ ಕುಂದಗೋಳದ ರಾಮಬಾವು ಕುಂದಗೋಳಕರ್. ಜೋಶಿ ಸೀದಾ ಅಲ್ಲಿಂದ ಗದಗಿನ ಮನೆಗೆ ಮರಳಿದರು. ಅಲ್ಲಿ ತಂದೆಯನ್ನು ಒತ್ತಾಯಿಸಿ ರಾಮಬಾವು ಅಲಿಯಾಸ್ ಸವಾಯಿ ಗಂಧರ್ವರಲ್ಲಿ ಸಂಗೀತಾಭ್ಯಾಸಕ್ಕೆ ಸೇರಿಕೊಂಡರು.
ಗಂಧರ್ವ ಲೋಕದಲ್ಲಿ..
೧೯೩೬ರಿಂದ ನಾಲ್ಕು ವರ್ಷ ಜೋಶಿಯವರು ಸವಾಯಿ ಗಂಧರ್ವರ ಮನೆಯಲ್ಲಿದ್ದುಕೊಂಡು ಸಂಗೀತಾಭ್ಯಾಸ ಮಾಡಿದರು. ಅಲ್ಲೇ ಖಯಾಲ್‌ಗಳ ಪರಿಣತಿ ಗಿಟ್ಟಿಸಿದರು.
೧೯೪೬ರಲ್ಲಿ ಅವರ ಗುರು ಸವಾಯಿ ಗಂಧರ್ವ ಅಲಿಯಾಸ್ ರಾಮಬಾವು ಕುಂದಗೋಳಕರ್ ಅವರ ಷಷ್ಟಿಪೂರ್ತಿ ಸಮಾರಂಭ ಜರುಗಿತು. ಅದರ ಅಂಗವಾಗಿ ಏರ್ಪಡಿಸಿದ್ದ ಸಂಗೀತ ಗೋಷ್ಠಿಯೇ ಜೋಶಿಯವರ ಮೊದಲ ಸಾರ್ವಜನಿಕ ಸಂಗೀತ ಕಛೇರಿ. ೨೪ರ ತರುಣ ಭೀಮಣ್ಣ ಯಾವ ಅಂಜಿಕೆಯೂ ಇಲ್ಲದೆ ಅದ್ಭುತವಾಗಿ ಹಾಡಿದರು.
ಇದಾಗಿ ಕೆಲವು ದಿನಗಳಲ್ಲಿ ಸವಾಯಿ ಗಂಧರ್ವರಿಂದ ದೂರವಾದರು. ಉತ್ತರ ಹಿಂದುಸ್ತಾನಿ ಸಂಗೀತ ಸುಧೆಯ ರುಚಿ ಕಂಡಿದ್ದ ಭೀಮಸೇನ ಜೋಶಿಗೆ ಕೇವಲ ತಮ್ಮ ಘರಾಣಾದಲ್ಲೇ ಹೊರಳಾಡುವುದು ಬೇಕಿರಲಿಲ್ಲ. ಕೇಸರಿಬಾಯಿ ಕೇರ್ಕರ್, ಬೇಗಂ ಅಖ್ತರ್, ಉಸ್ತಾದ್ ಮುಷ್ತಾಖ್ ಹುಸೇನ್, ಉಸ್ತಾದ್ ಅಮೀರ್ ಖಾನ್ ಸಾಹೇಬ್ ಮುಂತಾದವರ ಗಾಯನ ಕೇಳಿ ಪುಳಕಗೊಂಡಿದ್ದ ಅವರು ತಾವೂ ಅದರ ಜಾಡಿಗೆ ಬಿದ್ದರು. ಕ್ರಮೇಣ ಹೊಸ ಪ್ರಯೋಗಗಳೊಂದಿಗೆ ಅವರೆಲ್ಲರನ್ನೂ ಮೀರಿಸಿ ತಮ್ಮದೇ ಛಾಪು ಒತ್ತಿದರು. ಆದರೂ ಕಿರಾಣಾ ಘರಾಣಾದಿಂದ ದೂರ ಹೋಗಲಿಲ್ಲ. ಕರೀಮ್‌ಖಾನ್‌ರ ಗಾಯನ ಕೇಳುತ್ತಾ ಬೆಳೆದ ಭೀಮಸೇನ ಕಿರಾಣಾ ಘರಾಣಾದ ಅಪ್ರತಿಮ ಗಾಯಕ ಎನಿಸಿಕೊಂಡರು.
ಸಂಗೀತ ಅವರನ್ನು ಸರಸ್ವತಿಯಂತೆ ಆವರಿಸಿಕೊಂಡಿತು. ರಾಗದ ವರವಂತೂ ಅಭಿಜಾತ ಸಂಗೀತಗಾರನಂತೆ ಯಾವತ್ತೋ ಅವರಿಗೆ ಒಲಿದಿತ್ತು. ಪುಣೆಯ ಸಂಗೀತ ಕಛೇರಿಯ ನಂತರ ದೇಶದ ಮೂಲೆ ಮೂಲೆಗಳಿಂದ ಕರೆ ಬರತೊಡಗಿತು. ವಿದೇಶಗಳಿಂದಲೂ ಅವರಿಗೆ ಆಹ್ವಾನ ಬಂತು. ಭೀಮಸೇನ.. ನಮ್ಮ ಕಾಲದ ತಾನಸೇನರಾದರು. ಆ ತಾನಸೇನ ಹಾಡಿ ದೀಪ ಹಚ್ಚಿದ. ಈ ಭೀಮ ಸೇನ ಎಲ್ಲರ ಎದೆಯೊಳಗೆ ಸ್ವರದೀಪವನ್ನು ಹಚ್ಚಿದ.
ಧೀರ ಗಂಭೀರ..
ಖ್ಯಾತ ಸಿತಾರ್ ವಾದಕ, ಪಂಡಿತ್ ರವಿಶಂಕರ್ ತಮ್ಮ ಆತ್ಮಚರಿತ್ರೆ ‘ರಾಗ-ಅನುರಾಗ’ದಲ್ಲಿ ಪಂಡಿತ್ ಭೀಮಸೇನರ ವ್ಯಕ್ತಿತ್ವದ ಬಗ್ಗೆ ಹೇಳಿದ್ದಾರೆ:
“ಧೀರ, ಗಂಭೀರ, ಮುಕ್ತ ಕಂಠದ ಬಗ್ಗೆ ಮಾತಾಡುವಾಗ ಭೀಮಸೇನ ಜೋಶಿಯವರ ಉಲ್ಲೇಖ ಮಾಡಲೇಬೇಕು. ಗಂಭೀರವಾದರೂ ಅವರ ಕಂಠದಲ್ಲಿ ಮಧುರತೆ ಇದೆ. ಈ ಯುಗದಲ್ಲಿ ‘ಮುಕ್ತ’ ಕಂಠ ಎಂದರೆ ಭೀಮಸೇನರದ್ದೆ ಎಂದು ನೀವು ಧೈರ‍್ಯದಿಂದ ಹೇಳಬಹುದು. ಅವರ ಶೈಲಿ ಎಲ್ಲರಿಗಿಂತ ಭಿನ್ನ. ಅವರ ಗಾನ ಗುಣಗಳು ಅನೇಕ. ಉಸಿರು ಹಿಡಿಯುವ ಕ್ಷಮತೆ, ಧೃತ ತಾನದ ಮೇಲೆ ಅಧಿಕಾರ, ಸ್ವರಗಳನ್ನು ಕರೆಯುತ್ತಿದ್ದಾರೊ ಎನ್ನುವ ಅವಿರ್ಭಾವ ಜೊತೆಗೆ ಸುಂದರವಾದ ಮುಖ, ಅನೇಕ ವರ್ಷಗಳಿಂದ ಜನಪ್ರಿಯತೆಯ ಶಿಖರದ ಮೇಲಿದ್ದಾರೆ ಭೀಮಸೇನ. ಅನೇಕ ಶ್ರೇಷ್ಠ ಹಿರಿಯ ಗಾಯಕರು ಆಗಿ ಹೋದರೂ ಇಂದು ಭೀಮಸೇನ ರಸಿಕರಿಗೆ ಅನಿವಾರ್ಯವಾಗಿದ್ದಾರೆ”.
ಒಬ್ಬ ಸಂಗೀತ ದಿಗ್ಗಜ, ಮತ್ತೊಬ್ಬ ದಿಗ್ಗಜನ ಬಗ್ಗೆ ಹೇಳಿದ ಮಾತುಗಳಿವು.
ಈ ಮಟ್ಟಿಗೆ ಭೀಮಸೇನ ಸಂಗೀತ ಪ್ರೇಮಿಗಳ ಪಾಲಿಗೆ ಆರಾಧ್ಯ ದೈವವಾಗಲು ಕಾರಣ ಕೇವಲ ಅವರ ಗಾಯನವಷ್ಟೇ ಅಲ್ಲ ಅವರ ಸ್ವಭಾವ ಕಾರಣವೂ ಆಯಿತು. ಯಾವುದೇ ನಾಟಕೀಯತೆ, ಆಡಂಬರವಿಲ್ಲದ ಅವರ ಸರಳ ಜೀವನ ಭೀಮಸೇನ ಸಂಗೀತದಷ್ಟೇ ಮೋಡಿ ಮಾಡಿತು. ಯಾರಲ್ಲೂ ಏನನ್ನೂ ಬೇಡದ, ಎಂದಿಗೂ ಸಂಯೋಜಕರನ್ನು ಕಾಡದ, ಒಳಗೊಂದು, ಹೊರಗೊಂದು ಸ್ವಭಾವವೇ ಭೀಮಸೇನರದ್ದಾಗಿರಲಿಲ್ಲ. ಈ ಗುಣ ಭೀಮಸೇನರ ಅಭಿಮಾನಿಗಳ ಮನಸೂರೆಗೊಂಡಿತು.
ಮನವರಿತು ಹಾಡುವ ಗಾಯಕ
ಜೋಶಿ ದೊಡ್ಡ ಶಕ್ತಿ ಇದು. ತನ್ನ ಎದುರುಗಿನ ಶ್ರೋತೃಗಳ ಮನಸ್ಸು ಆರಿತು ಹಾಡಬಲ್ಲವರಾಗಿದ್ದರು ಭೀಮಸೇನರು. ಅವರೊಳಗೊಬ್ಬ ಮನಃಶಾಸ್ತ್ರಜ್ಞ ನಿದ್ದ. ತನ್ನ ಎದುರು ಕೂತ ಕೇಳುಗರಿಗೆ ಏನು ಹಾಡಬೇಕು? ಏನು ಹಾಡಿದರೆ ಅವರ ಮನ ತಣಿಯುತ್ತದೆ ಎಂದು ಅರಿಯುವ ಕಲೆ ಅವರಿಗೆ ಸಿದ್ಧಸಿತ್ತು. ಒಂದು ಉದಾಹರಣೆ ಕೊಡುವುದಾದರೆ ಪೈಠಣದಲ್ಲೊಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಅಲ್ಲಿ ನೆರೆದವರ ಸಂಖ್ಯೆ ೩೦೦೦೦! ಐದು ನಿಮಿಷ ನೆರೆದವರನ್ನು ಗಮನಿಸಿದ ಜೋಷಿ ‘ಅಭಂಗವಾಣಿ’ ಹಾಡಿದರು. ಒಮ್ಮೆ ಕರತಾಡನ. ಜೋಶಿ ಅವರ ಗಾಯನ ಸಹಸ್ರಾರು ಮಂದಿಯನ್ನು ಒಮ್ಮೇಲೆ ಸಮ್ಮೋಹಗೊಳಿಸಿಬಿಟ್ಟಿತ್ತು.
ಮರೆಯಲಾಗದ ಹಾಡುಗಳು..
“ಮಿಲೆ ಸುರ್ ಮೇರಾ ತುಮ್ಹಾರಾ..” ಗೀತೆಯನ್ನು ದೇಶದ ಏಕತೆಯನ್ನು ಎತ್ತಿ ಹಿಡಿಯುವುದಕ್ಕೆಂದು ನಿರ್ಮಿಸಲಾಯಿತು. ಈ ಗೀತೆ ಆರಂಭವಾಗುತ್ತಿದುದೇ ಭೀಮಸೇನ ಜೋಶಿ ಅವರಿಂದ. ಇಂಥ ಇನ್ನು ಅನೇಕ ಗೀತೆಗಳೊಂದಿಗೆ ಭೀಮಸೇನರು ನಮ್ಮೊಂದಿಗೆ ಎಂದೆಂದಿಗೂ ಉಳಿಯುವಂತಾಗಿದೆ. ಸಂಧ್ಯಾರಾಗ ಚಿತ್ರದಲ್ಲಿ ಹಾಡಿದ ನಂಬಿದೆ ‘ನಿನ್ನ ನಾದ ದೇವತೆ..’, ಶಂಕರ್‌ನಾಗ್ ನಿರ್ದೇಶನದ ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರದಲ್ಲಿ ಹಾಡಿದ ‘ಭಾಗ್ಯದ ಲಕ್ಷ್ಮಿ ಬಾರಮ್ಮ...’ ಗೀತೆಗಳನ್ನು ನಾವು ಮರೆಯಲು ಸಾಧ್ಯವೇ ಇಲ್ಲ.
ಅಲ್ಲದೆ ‘ಯಾಕೆ ಮೂಕನಾದೆ...’, ‘ಕರುಣಿಸೋ ರಂಗ...’, ‘ಕೈಲಾಸವಾಸ..ಗೌರೀಶ ಈಶ..’ ಕೀರ್ತನೆಗಳು, ಭಕ್ತಿಗೀತೆಗಳು.. ಜೋಶಿ ಅವರ ನೆನಪಿನೊಂದಿಗೆ ದೇವರಿಗೆ ಪ್ರಾರ್ಥನೆ ಸಲ್ಲುತ್ತದೆ.
ಭಾರತರತ್ನ ಪಡೆದ ೨ನೇ ಕನ್ನಡಿಗ
ಸರ್ ಎಂ.ವಿಶ್ವೇಶ್ವರಯ್ಯನಂತರ ಭಾರತರತ್ನ ಗೌರವಕ್ಕೆ ಪಾತ್ರರಾದ ೨ನೇ ಕನ್ನಡಿಗ ಭೀಮಸೇನ ಜೋಶಿ. ೨೦೦೮ರಲ್ಲಿ ಈ ಗೌರವ ಸಂದಿತು. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಈ ಗೌರವಕ್ಕೆ ಪಾತ್ರದ ನಾಲ್ಕನೆಯವರು ಜೋಶಿ. ಎಂ.ಎಸ್.ಸುಬ್ಬಲಕ್ಷ್ಮಿ, ಪಂಡಿತ್‌ರವಿ ಶಂಕರ್, ಉಸ್ತಾದ್ ಬಿಸ್ಮಿಲ್ಲಾಖಾನ್ ಮೊದಲ ಮೂವರು. ಪ್ರಶಸ್ತಿ ಪ್ರಕಟಗೊಂಡಾಗ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಹಾಡುವುದನ್ನು ನಿಲ್ಲಿಸಿ ಬಹಳ ದಿನಗಳೇ ಆಗಿದ್ದವು.
ಇಬ್ಬರು ಹೆಂಡಿರು, ಏಳು ಮಕ್ಕಳು
ಜೋಶಿಯವರಿಗೆ ಇಬ್ಬರು ಹೆಂಡಿರು. ಮೊದಲ ಪತ್ನಿ ಸುನಂದಾ ಕಟ್ಟಿ. ಇನ್ನೊಬ್ಬರು ವತ್ಸಲಾಬಾಯಿ. ಸಂಗೀತಾಭ್ಯಾಸದ ವೇಳೆ ಮನೆಯವರ ಒತ್ತಾಯಕ್ಕೆ ಜೋಶಿ ತಮ್ಮ ಸೋದರ ಮಾವನ ಮಗಳಾದ ಸುನಂದಾ ಅವರನ್ನು ವಿವಾಹವಾದರು.
ಇದಾಗಿ ಕೆಲವೇ ದಿನಗಳಲ್ಲಿ ಪರಿಚಯವಾದ ವತ್ಸಲಾರ ಪ್ರೀತಿಯಲ್ಲಿ ಬಿದ್ದರು. ಈ ಮದುವೆಗೆ ಮನೆಯವರ, ಆಪ್ತರ ವಿರೋಧವಿತ್ತು. ಆದರೂ ಅದಾವುದನ್ನು ತಲೆ ಕೆಡಿಸಿಕೊಳ್ಳದೇ ವತ್ಸಲಾರನ್ನು ವರಿಸಿದರು.
ಸುನಂದಾ ಜೋಶಿ ಅವರ ನಾಲ್ಕು ಮಕ್ಕಳಿಗೆ ಜನ್ಮವಿತ್ತರು. ವತ್ಸಲಾ ಅವರು ಮೂರು ಮಕ್ಕಳಿಗೆ ಜನ್ಮ ನೀಡಿದರು. ಸುನಂದಾ ೧೯೯೧ರಲ್ಲಿ, ವತ್ಸಲಾ ೨೦೦೪ರಲ್ಲಿ ನಿಧನರಾದರು.
Tuesday, February 8, 2011
Subscribe to:
Post Comments (Atom)
ಹಿಂದಿನ ಬರೆಹಗಳು
-
▼
2011
(92)
-
▼
February
(14)
- ಕೆಂಪೇಗೌಡರು ಕಟ್ಟಿದ ನಾಡಲ್ಲಿ ನುಡಿಹಬ್ಬ
- ಉದ್ಯಾನ ನಗರಿಯ ಒಡಲಿಲ್ಲ ಅಕ್ಷರ ಜಾತ್ರೆಯ ಪುಳಕ...
- ಕನ್ನಡ ಮತ್ತು ಸಾಹಿತ್ಯ ಸಮ್ಮೇಳನ
- ನಿರೀಕ್ಷಿಸದೇ ಬಂದ ಭಾಗ್ಯವಿದು
- ನಡೆದಾಡುವ ನಿಘಂಟು ಶಬ್ದರ್ಷಿ ಪ್ರೊ. ಜಿ.ವೆಂಕಟಸುಬ್ಬಯ್ಯ
- ನಿಜಾಮರ ಆಡಳಿತದಲ್ಲಿ ಕನ್ನಡಕ್ಕೆ ಹೋರಾಡಿದವರು
- ನೆನಪುಗಳ ಬಿಚ್ಚಿಟ್ಟ ನಾಡೋಜ
- ಸಾಧಿಸಿರುವ ಕಾರ್ಯಗಳ ಬಗ್ಗೆ ಹೆಮ್ಮೆ ಮತ್ತು ತೃಪ್ತಿ
- ಕನ್ನಡ ಭಾರತರತ್ನ ಪಂಡಿತ್ ಭೀಮಸೇನ ಜೋಶಿ
- ಯಾಕೆ ಮೂಕನಾದ್ಯೋ ಗುರುವೆ...
- ಗಾನಲೋಕದ ಭೀಮಸೇನ
- ಕರ್ನಾಟಕ ಏಕೀಕರಣದಲ್ಲಿ ಕರ್ನಾಟಕ ಸಂಘಗಳ ಪಾತ್ರ
- ನಾನು ಕಂಡ ತೇಜಸ್ವಿ...
- ದಿಟ್ಟ ಕನ್ನಡ ಹೋರಾಟಗಾರ ಈಶ್ವರಪ್ಪ
-
▼
February
(14)
No comments:
Post a Comment