Tuesday, February 8, 2011

ಉದ್ಯಾನ ನಗರಿಯ ಒಡಲಿಲ್ಲ ಅಕ್ಷರ ಜಾತ್ರೆಯ ಪುಳಕ...ನ. ನಾಗೇಶ್

ಅಕ್ಷರ ಜಾತ್ರೆಗೆ ಉದ್ಯಾನನಗರಿ ಅಣಿಗೊಂಡಿದೆ.
ಬರೋಬ್ಬರಿ ನಾಲ್ಕು ದಶಕಗಳ ನಂತರ ಬೆಂದಕಾಳೂರಿನಲ್ಲಿ ನುಡಿ ಜಾತ್ರೆಗೆ ಕನ್ನಡಮ್ಮ ಸಿಂಗರಿಸಿಕೊಳ್ಳುತ್ತಿದ್ದಾಳೆ. ಅಕ್ಷರ ಜಾತ್ರೆಯನ್ನು ಪ್ರತಿಯೊಬ್ಬ ಕನ್ನಡಿಗನ ಮನೆ-ಮನದ ಹಬ್ಬವನ್ನಾಗಿಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಹೊಸತುಗಳಿಗೆ ನಾಂದಿ ಹಾಡಿದೆ.
ಇತಿಹಾಸ ಪ್ರಸಿದ್ಧವಾದ ಬೆಂಗಳೂರಿನ ಬಸವನಗುಡಿಯಲ್ಲಿರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಎಪ್ಪತ್ತೇಳನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಉದ್ಯಾನಗರಿಯ ಕನ್ನಡ ಮನಸ್ಸುಗಳಲ್ಲಿ ಹೊಸತೊಂದು ಹುರುಪು, ಜೀವಕಳೆ ತಂದಿದೆ.
ಫೆ.೪ರಿಂದ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಸಾಹಿತ್ಯ ಸರಸ್ವತಿಯದೇ ಆರಾಧನೆ. ವಿಚಾರಪೂರ್ಣ ಭಾಷಣಗಳು, ಸ್ವಾರಸ್ಯಪೂರ್ಣ ಚರ್ಚೆಗಳು, ಭರವಸೆಯ ಬೆಳಕಿನ ಕಾವ್ಯ, ಕನ್ನಡ ಸಂಸ್ಕೃತಿಯ ನಾನಾ ಮಗ್ಗಲುಗಳ ಅವಲೋಕನ, ನೆಚ್ಚಿನ ಲೇಖಕರು, ಇಷ್ಟಪಟ್ಟ ಪುಸ್ತಕಗಳು, ಮನರಂಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ರುಚಿಗಟ್ಟಾದ ತಿನಿಸುಗಳು, ಸಾಗರೋಪಾದಿಯ ಸಾಹಿತ್ಯ ಪ್ರೇಮಿಗಳು ...ಹೀಗೆ ಬೆಂಗಳೂರು ಮೂರು ದಿನಗಳ ಕಾಲ ಮಗ್ಗಲು ಬದಲಿಸಿದಾಗ ಜಂಜಡದ ಬದುಕಿನಲ್ಲಿ ರೋಸಿಹೋದ ಮನಸ್ಸಿನಲ್ಲಿ ನೆಮ್ಮದಿಯ ಹಾಯಿದೋಣಿ. ಇಂಥದ್ದೊಂದು ಸಮ್ಮೇಳನವನ್ನು ಮನ:ಪಟಲದಲ್ಲಿ ಸೆರೆಹಿಡಿದುಕೊಳ್ಳುವುದೇ ಒಂದು ಆನಂದ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಹಲವು ಕುತೂಹಲಗಳಿಗೆ, ಬದಲಾವಣೆಗಳಿಗೆ ಮೈ ತೆರೆದಿದೆ. ಇದಕ್ಕೆ ಕಾರಣವೂ ಇದೆ. ರಾಜಧಾನಿಯಲ್ಲಿ ಪರಭಾಷಿಗರ ವಲಸೆ ಮಿತಿಮೀರಿದೆ. ಇಂಗ್ಲಿಷ್ ವ್ಯಾಮೋಹ, ಕಂಗ್ಲೀಷ್ ಭಾಷೆಗಳ ಭರಾಟೆ ಜೋರಾಗಿಯೇ ಇದೆ. ಪ್ರತಿಯೊಂದಕ್ಕೂ ಹೋರಾಟ ಮಾಡಿಯೇ ದಕ್ಕಿಸಿಕೊಳ್ಳಬೇಕಾದ ದು:ಸ್ಥಿತಿ ಕನ್ನಡದ್ದು. ಹಾಗಾಗಿ ಈ ಬಾರಿಯ ಸಮ್ಮೇಳನ ಜಡಬಿದ್ದ ಜನರಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಲು ಸಿದ್ದಗೊಂಡಿದೆ.
ಪ್ರತಿ ಬಾರಿ ಸಮ್ಮೇಳನ ನಡೆದಾಗಲೂ ಹೆಚ್ಚಿಗೆ ಸುದ್ದಿಯಾಗುವುದು ಊಟದ ವ್ಯವಸ್ಥೆ ಸರಿಯಿಲ್ಲ, ಕಿಟ್ ಸಿಕ್ಕಿಲ್ಲ, ವಾಸ್ತವ್ಯ ಪಕ್ಕಾಗಿಲ್ಲ, ವಿಚಾರ ಪೂರ್ಣ ಚರ್ಚೆಗಳಿಲ್ಲ, ಮತ್ತೊಂದು ಸಾಹಿತ್ಯ ಪ್ರಕಾರಕ್ಕೆ ಆಸ್ಪದ ನೀಡಿಲ್ಲ ...ಹೀಗೆ ಅಪಸವ್ಯಗಳದೇ ದೊಡ್ಡ ಸದ್ದು. ಇದನ್ನೆಲ್ಲ ಗಮನಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಅವರು, ಈ ಬಾರಿ ಇಂತಹ ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದೆ, ಅಚ್ಚುಕಟ್ಟಾಗಿ, ಮಾದರಿ ರೂಪದಲ್ಲಿ ಸಮ್ಮೇಳನವನ್ನು ಆಯೋಜಿಸುತ್ತಿದ್ದಾರೆ.
ಒಂದು ಸಮ್ಮೇಳನವನ್ನು ಯಶಸ್ವಿಗೊಳಿಸುವುದು ಸುಲಭದ ಮಾತಲ್ಲ. ಯಶಸ್ಸಿನ ಬೆನ್ನ ಹಿಂದೆ ನೂರಾರು, ಸಾವಿರಾರು ಕೈಗಳ ಅವಿರತ ದುಡಿಮೆ ಬೇಕಾಗುತ್ತದೆ. ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಅಣಿಗೊಳಿಸಬೇಕಾದ ಸೂಕ್ಷ್ಮತೆಯ ಅಗತ್ಯವಿರುತ್ತದೆ. ಸೂಕ್ತ ವ್ಯಕ್ತಿಗಳಿಗೆ ಅರ್ಹ ಜವಾಬ್ದಾರಿಗಳನ್ನು ನೀಡಬೇಕಾಗುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಿಗೆ ಹೆಜ್ಜೆ ಇಟ್ಟು ಯಶಸ್ಸಿನ ಹಾದಿಯಲ್ಲಿ ಪಯಣಿಸಬೇಕಾಗುತ್ತದೆ. ಹಲವು ಮನಸ್ಸುಗಳನ್ನು ಒಂದಾಗಿಸಿ ಕನ್ನಡ ಕಟ್ಟುವ ಕಾಯಕಕ್ಕೆ ಕನ್ನಡದ ತಂಡವನ್ನೇ ಕಟ್ಟಬೇಕಾಗುತ್ತದೆ.
ಇದೆಲ್ಲದರ ಅರಿವಿರುವ ಡಾ.ನಲ್ಲೂರು ಪ್ರಸಾದ್ ಅವರು, ಈ ಎಲ್ಲಾ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದಲೇ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ ಸಂಸ್ಥೆಗಳು, ಕನ್ನಡ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕನ್ನಡ ಪರ ಸಂಘಟನೆಗಳು, ಸೇವಾ ಸಂಸ್ಥೆಗಳು ಎಲ್ಲವನ್ನೂ ಒಂದೆಡೆ ಕಲೆ ಹಾಕಿ ಕಾರ್ಯಕ್ರಮದ ಸ್ವರೂಪ ವಿವರಿಸಿ, ಅರ್ಥಪೂರ್ಣ ಆಚರಣೆಗೆ ಏನೆಲ್ಲ ಆಗಬೇಕೋ ಎಲ್ಲವನ್ನೂ ಕೇಳಿ, ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ಸೃಷ್ಟಿಸಲು ಶ್ರಮಿಸಿದ್ದಾರೆ.
ಕನ್ನಡ ತಾಯಿಯ ನುಡಿ ತೇರಿಗೆ ನಿಘಂಟು ತಜ್ಞ ಪ್ರೋ.ಜಿ.ವೆಂಕಟಸುಬ್ಬಯ್ಯ ಅವರಂತಹ ಘನ ಪಾಂಡಿತ್ಯದ, ಹಿರಿ ಜೀವವನ್ನು ಸಾರಥಿಯನ್ನಾಗಿಸಿದ್ದು ಸಮ್ಮೇಳನದ ಮೊದಲ ಯಶಸ್ಸು ಎಂದೇ ಹೇಳಬೇಕಾಗುತ್ತದೆ. ವೆಂಕಟಸುಬ್ಬಯ್ಯನವರಿಗೆ ಕನ್ನಡ ಭಾಷೆ, ನೆಲ, ಜಲ, ವಿಚಾರಗಳ ಕುರಿತಂತೆ ‘ಇದಂ ಮಿತ್ಥಂ’ ಎಂದು ಮಾತನಾಡುವ ಎದೆಗಾರಿಕೆ ಇದೆ. ಹಿರಿಯ ಜೀವಕ್ಕೆ ಕನ್ನಡದ ಕುರಿತಾದ ಅವರಷ್ಟೇ ಹಿರಿಯದಾದ ಕನಸುಗಳಿವೆ. ಅವುಗಳನ್ನು ನನಸಾಗಿಸುವ ಉತ್ಸಾಹ, ಹುಮ್ಮಸ್ಸು ಇಳಿ ವಯಸ್ಸಿನ ಮನಸ್ಸಿನಲ್ಲಿ ಈಗಲೂ ಇದೆ. ಸಮ್ಮೇಳನಾಧ್ಯಕ್ಷರಾಗಿ ಇವರ ಆಯ್ಕೆಯನ್ನು ಎಲ್ಲರೂ ತಕರಾರಿಲ್ಲದೇ ಒಪ್ಪಿಕೊಂಡಿದ್ದಾರೆ.
ಸಾರೋಟಕೆ ಸಾಟಿಯುಂಟೆ
ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವಿಶಿಷ್ಠ ಮಾದರಿಯ ರಥವನ್ನು ವಿನ್ಯಾಸಗೊಳಿಸಲಾಗಿದೆ. ೧೫ ಅಡಿ ಎತ್ತರ, ೧೫ ಅಡಿ ಉದ್ದದ ರಥದಲ್ಲಿ ಸಮ್ಮೇಳನಾಧ್ಯಕ್ಷರು, ಅವರ ಪತ್ನಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಉರವಣಿಗೆ ನಡೆಯಲಿದೆ. ರಥದ ಮುಂಭಾಗ ಸಾರಥಿ, ಮೇಲ್ಭಾಗ ಛತ್ರಿ, ಕನ್ನಡ ಧ್ವಜ, ಜೊತೆಗೆ ಆಕರ್ಷಕ ಚಿತ್ರಕಲೆಯನೊಳಗೊಂಡ, ಚಿನ್ನದ ಬಣ್ಣ ಲೇಪಿತ ವಿಶಿಷ್ಠ ಸಾರೋಟ ಈ ಬಾರಿ ಸಮ್ಮೇಳನದ ಹಲವು ವಿಶೇಷಗಳಲ್ಲಿ ಪ್ರಮುಖವಾದುದಾಗಿದೆ.
ಸಮ್ಮೇಳನದ ಮೆರವಣಿಗೆಯ ಸಾರಥ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರಿಗೆ ವಹಿಸಲಾಗಿದೆ. ಈ ಬಾರಿಯ ಸಮ್ಮೇಳನವನ್ನು ಅತ್ಯಂತ ವಿಶಿಷ್ಠವಾಗಿ, ವೈಭವೋಪೇತವಾಗಿ ನೆರವೇರಿಸಲು ನಿರ್ಧರಿಸಿ ಈ ಮಹತ್ತರ ಕಾರ್ಯವನ್ನು ನಾರಾಯಣಗೌಡರು ವಹಿಸಿಕೊಂಡಿದ್ದಾರೆ. ನಾರಾಯಣ ಗೌಡರ ಉಸ್ತುವಾರಿಕೆ ಅಂದ ಮೇಲೆ ಅಲ್ಲೊಂದು ವಿಶೇಷತೆ ಇರಲೇಬೇಕು. ವೈಭವದ ಭರದಲ್ಲಿ ಅರ್ಥ ಕಳೆದುಕೊಳ್ಳದಂತೆ, ಶಿಸ್ತಿನ ಎಲ್ಲೆ ಮೀರದಂತೆ ನೋಡಿದವರು ಮೆಚ್ಚಿ ಸೈ ಎನ್ನುವಂತೆ, ತಾಯಿಯಂತ ಅಕ್ಕರೆಯಿಂದ, ಪ್ರೀತಿಯಿಂದ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಛಾತಿ ಅವರಲ್ಲಿದೆ. ಹಾಗಾಗಿಯೇ ಇಂತಹದ್ದೊಂದು ಜವಾಬ್ದಾರಿಯನ್ನು ನಾರಾಯಣಗೌಡರು ವಹಿಸಿಕೊಂಡರು.
ಇದೊಂದು ಕಲಾವಿದನೊಬ್ಬನ ಕನಸಿನ ಕೂಸು. ರಥದ ಮುಂಭಾಗ ನಾಲ್ಕು ಕುದುರೆಗಳು, ಅಕ್ಕ ಪಕ್ಕ ಪರಿಷತ್ತಿನ ಲಾಂಛನ ಹೊತ್ತು ಸಾಗುವ ಸೈನಿಕ ವೇಷಧಾರಿಗಳು, ೭೭ನೇ ಸಾಹಿತ್ಯ ಸಮ್ಮೇಳನವಾದ್ದರಿಂದ ಮುಂಭಾಗ ಪೂರ್ಣ ಕುಂಭ ಕಳಸ ಹೊತ್ತ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಕಾರ್ಯಕರ್ತರು, ೭೭ ಮಂದಿ ಕನ್ನಡ ಧ್ವಜ ಹಿಡಿದ ಕರವೇಯ ಕಟ್ಟಾಳುಗಳು ಸಾಗುತ್ತಾರೆ. ಸಾರೋಟದ ಮುಂದೆ ಭುವನೇಶ್ವರಿ ತಾಯಿ ರಥ. ಅದರಲ್ಲಿ ಗೋವಿನ ಹಾಡಿನ ದೃಶ್ಯಾವಳಿ. ಮುಂದೆ ಹತ್ತು ಮಂದಿ ಅಶ್ವದಳ, ಆನೆ, ಒಂಟೆ. ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್, ಜ್ಞಾನ ಪೀಠ ಪುರಸ್ಕೃತರ ಪ್ರತಿಕೃತಿಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ೩೦ ನಾದಸ್ವರ ಕಲಾವಿದರು ಮೆರಣಿಗೆಗೆ ಸಾಥ್ ನೀಡಲಿದ್ದಾರೆ.
ನಂದಿಕೋಲು, ಚಿಟ್ಟಿ ಮೇಳ, ಯಕ್ಷಗಾನ, ವೀರಗಾಸೆ, ಗೊರವನಕುಣಿತ, ಬೇಡರ ಕುಣಿತ, ಕೊರವಂಜಿ, ಪೂಜಾ ಕುಣಿತ, ಕಂಸಾಳೆ, ಕೀಲುಕುದುರೆ, ಹುಲಿ ವೇಷ, ಕರಗ, ಜಗಲಿಗೆ ಕುಣಿತ, ಧಾಟಿ ಕುಣಿತ, ಕೋಲಾಟ, ಕರಡಿ ಮಜಲು, ಪುರವಂತಿಕೆ ಕುಣಿತ, ಹಗಲು ವೇಷ, ಹಾಲಕ್ಕಿ, ಸುಗ್ಗಿ ಕುಣಿತ ಹೀಗೆ ನಗರದ ಜನರಿಗೆ ಪರಿಚಯವಿಲ್ಲದ ೪೦ಕ್ಕೂ ಹೆಚ್ಚು ಜಾನಪದ ಪ್ರಾಕಾರಗಳ ಕಲಾವಿದರು ಮೆರವಣಿಗೆ ವಿಶೇಷ ಆಕರ್ಷಣೆಯಾಗಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಇಲಾಖೆಯಿಂದ ಸ್ತಬ್ಧಚಿತ್ರಗಳು ಸೇರ್ಪಡೆಗೊಳ್ಳಲಿವೆ.
ಪಾಲಿಕೆಯ ಮುಂದಿನ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಳ್ಳುತ್ತದೆ. ಜೆ.ಸಿ.ರಸ್ತೆ, ಮಿನರ್ವ ವೃತ್ತ, ಕೊಂಡಜ್ಜಿ ಬಸಪ್ಪ ವೃತ್ತ, ಮಕ್ಕಳ ಕೂಟದ ಮೂಲಕ ನ್ಯಾಷನಲ್ ಕಾಲೇಜು ಮೈದಾನ ತಲುಪಿಕೊಳ್ಳಲಿದೆ.
ಮೆರವಣಿಗೆ ಕಲ್ಪನೆಯೇ ರಸಭರಿತವಾಗಿದೆ. ಇನ್ನು ಕಣ್ಣಾರೆ ಇದನ್ನು ಕಂಡರೆ ಜನ್ಮ ಸಾರ್ಥಕವಾದಂತೆ. ಇಂತಹ ಅಪರೂಪದ ಮೆರವಣಿಗೆಯ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರ ಅಹರ್ನಿಶಿ ದುಡಿತವಿದೆ.
ಕನ್ನಡ ಸಾಹಿತ್ಯ ಭವನದ ಕನಸು
೭೭ನೇ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ನಗರದ ಹೊರವಲಯದಲ್ಲಿ ಸುಮಾರು ೧೦ ಎಕರೆಯಷ್ಟು ವಿಸ್ತಾರ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಭವನವನ್ನು ನಿರ್ಮಿಸುವ ಕನಸನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. ಇಲ್ಲಿ ಕನ್ನಡ ಸಾಹಿತ್ಯ, ಇತಿಹಾಸ, ಕಲೆ, ಸಂಶೋಧನೆಗಳು ನಡೆಯುವ ಕಾರ್ಯಸ್ಥಾನವಾಗಬೇಕೆಂಬ ಮಹತ್ತರ ಉದ್ದೇಶವಿದೆ.
ಈ ಕನಸಿನ ಸಾಕಾರಕ್ಕೆ ಲಕ್ಷಾಂತರ ಮನಸ್ಸುಗಳು ಹಾತೊರೆಯುತ್ತಿವೆ.
ವಿಭಿನ್ನ ಮಂಟಪಗಳು,
ವಿಚಾರ ಪೂರ್ಣ ಗೋಷ್ಠಿಗಳು
ನಾಡಪ್ರಭು ಕೆಂಪೇಗೌಡ ಮಹಾ ಮಂಟಪದಲ್ಲಿ ಸಮ್ಮೇಳನ ನಡೆಯಲಿದೆ. ಪ್ರಧಾನ ವೇದಿಕೆಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೆಸರಿಸಲಾಗಿದೆ. ಸರ್. ಮಿರ್ಜಾ ಇಸ್ಮಾಯಿಲ್, ಎಸ್.ಎಂ.ವಿಶ್ವೇಶ್ವರಯ್ಯ, ಮಾರ್ಕ್ ಕಬ್ಬನ್, ಕೆಂಗಲ್ ಹನುಮಂತಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸರ್. ಪುಟ್ಟಣಚೆಟ್ಟಿ, ಆರ್.ಕಲ್ಯಾಣಮ್ಮ, ಅ.ನ.ಕೃಷ್ಣರಾಯ, ಮ.ರಾಮಮೂರ್ತಿ, ಗುಬ್ಬಿ ವೀರಣ್ಣ, ತೋಟದಪ್ಪ, ದೊಡ್ಡಣ್ಣ ಶೆಟ್ಟಿ, ಸಜ್ಜನರಾವ್, ಟಿ.ಪಿ.ಕೈಲಾಸಂ, ಡಾ.ರಾಜ್‌ಕುಮಾರ್‌ರಂತಹ ಸಾರಸ್ವತ ದಿಗ್ಗಜರು, ರಂಗಕರ್ಮಿ, ಧರ್ಮದರ್ಶಿ, ಅಪ್ರತಿಮ ಹೋರಾಟಗಾರರ ಹೆಸರುಗಳನ್ನು ಮಹಾದ್ವಾರಗಳಿಗೆ ನಾಮಕರಣ ಮಾಡಲಾಗಿದೆ.
ಬೆಂಗಳೂರು, ದೇಸಿ ಸಂಸ್ಕೃತಿ, ಮಹಿಳೆ, ರಂಗಭೂಮಿ, ಕನ್ನಡ ಪ್ರಜ್ಞೆ, ಹಾಸ್ಯ ಸಂವೇದನೆ ಸೇರಿದಂತೆ ಅನೇಕ ಗಂಭೀರ ವಿಚಾರಗಳ ಕುರಿತಂತೆ ಪಾಂಡಿತ್ಯಪೂರ್ಣ ಗೋಷ್ಠಿಗಳು, ಚರ್ಚೆಗಳು ನಡೆಯಲಿದ್ದು, ಸಾಹಿತ್ಯಾಸಕ್ತರನ್ನು, ಜನ ಸಮುದಾಯವನ್ನು ಚಿಂತನೆಗೆ ಹಚ್ಚುವ ಜೊತೆ ಜೊತೆಗೆ ಕನ್ನಡದ ಕಾಯಕಕ್ಕೆ ಧುಮುಕು ಪ್ರೇರಣೆಯನ್ನು ನೀಡಬಲ್ಲದಾಗಿದೆ.
ವಸತಿ, ಊಟ ಎಲ್ಲವೂ ಅಚ್ಚುಕಟ್ಟು
ಸಾಹಿತ್ಯ ಸಮ್ಮೇಳನವೆಂದರೆ ಅದೊಂದು ಅಕ್ಷರ ಜಾತ್ರೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಸಾಹಿತ್ಯಾಭಿಮಾನಿಗಳಿಗೆ ಅದೊಂದು ಸಾಹಿತ್ಯದ ರಸದೂಟ. ಪ್ರತಿ ಸಮ್ಮೇಳನದಲ್ಲಿ ಸಾಹಿತ್ಯದ ಸವಿಯ ಜೊತೆಗೆ ಸಮ್ಮೇಳನ ನಡೆಯುವ ಪ್ರದೇಶದ ವಿಶೇಷ ಖಾದ್ಯಗಳನ್ನು ಸವಿಯುವ ಅವಕಾಶ. ಆದರೆ ಈ ಬಾರಿಯ ಸಾಹಿತ್ಯ ಸಮ್ಮೇಳನ ಹಿಂದಿನವುಗಳಿಗಿಂತ ಭಿನ್ನ.
ಬೆಂಗಳೂರಿನಲ್ಲಿ ನಾಲ್ಕು ದಶಕಗಳ ನಂತರ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಉಟೋಪಚಾರದ ಆತಿಥ್ಯಕ್ಕಿಂತ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಆದ್ದರಿಂದ ಈ ಬಾರಿ ಭಾರಿ ಭೋಜನದ ಬದಲಿಗೆ ಸರಳ ಉಟೋಪಚಾರಕ್ಕೆ ನಿರ್ಧರಿಸಿದೆ.
ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಮೂರು ಲಕ್ಷ ಪ್ರತಿನಿಧಿಗಳಿಗೆ ಉಟೋಪಚಾರ ನೀಡಲು ತಯಾರಿ ನಡೆದಿದೆ. ಅಡಿಗಾಸ್ ಇದರ ಜವಾಬ್ದಾರಿ ಹೊತ್ತಿದೆ. ಮಕ್ಕಳ ಕೂಟದ ಬಳಿ ಇರುವ ಹಳೆ ಕೋಟೆ ಆವರಣವನ್ನು ಉಟೋಪಚಾರಕ್ಕೆ ವಿನಿಯೋಗಿಸಲಾಗುತ್ತಿದೆ. ಸಾಹಿತಿಗಳು, ಗಣ್ಯರ ಉಟೋಪಚಾರಕ್ಕೆ ಮಹಿಳಾ ಸೇವಾ ಸಮಾಜವನ್ನು ನಿಗದಿಪಡಿಸಿಕೊಳ್ಳಲಾಗಿದೆ.
ವಸತಿಗಾಗಿ ಶಾಲೆಗಳ ಮೊರೆಹೋಗಲಾಗಿದ್ದು, ಎಲ್ಲವನ್ನೂ ಅಚ್ಚುಕಟ್ಟಿನಿಂದ ನಿರ್ವಹಿಸಲಾಗಿದೆ.
ಈ ಬಾರಿ ಕಿಟ್‌ಗೆ ಬದಲಾಗಿ ಬಟ್ಟೆಯ ಚೀಲ ನೀಡಲಾಗುತ್ತಿದೆ. ಸುಸಜ್ಜಿತ ಮಾಧ್ಯಮ ಕೇಂದ್ರ, ಪುಸ್ತಕ ಮಳಿಗೆಗಳು, ಆಸನಗಳ ವ್ಯವಸ್ಥೆ ಎಲ್ಲವೂ, ಎಲ್ಲದರಲ್ಲೂ ಪರಿಪೂರ್ಣ ವ್ಯವಸ್ಥೆ ಮಾಡಲಾಗಿದೆ. ಪರಿಚಾರಕರು, ಸ್ವಯಂಸೇವಕರು ಸಾಹಿತ್ಯಾಸಕ್ತರಿಗೆ ಅಪ್ಯಾಯತೆಯ ಸ್ವಾಗತಕ್ಕೆ ಸಜ್ಜಾಗಿದ್ದಾರೆ.
ಸಮ್ಮೇಳನದ ಯಶಸ್ಸಿಗೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ, ಗೃಹ ಸಚಿವ ಆರ್. ಅಶೋಕ, ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು, ವಿಧಾನಪರಿಷತ್ ಸದಸ್ಯ ಅಶ್ವತ್‌ನಾರಾಯಣ, ಮಹಾನಗರ ಪಾಲಿಕೆ ಮಹಾಪೌರ ಎಸ್.ಕೆ.ನಟರಾಜ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸದಾಶಿವ, ಕಸಾಪದ ಕಾರ್ಯಕಾರಿ ಸಮಿತಿ ಸದಸ್ಯ, ಸಂಘಟನೆಗಳ ಪ್ರತಿನಿಧಿ ಹಾಗೂ ಕರವೇಯ ಖಜಾಂಜಿ ಸತೀಶ್‌ಗೌಡ ಸೇರಿದಂತೆ ಅನೇಕರ ಪರಿಶ್ರಮವಿದೆ.
ಮತ್ತೇನು. ಕನ್ನಡ ಹಬ್ಬಕ್ಕೆ ಸಜ್ಜಾಗಿ. ಅಪರೂಪದ, ಹಲವು ವಿಶೇಷಗಳ ಸಮ್ಮೇಳನಕ್ಕೆ ಸಾಕ್ಷೀಭೂತರಾಗಿ.

No comments:

Post a Comment

ಹಿಂದಿನ ಬರೆಹಗಳು