Thursday, June 2, 2011

ಭಾಷಾ ಬದ್ಧತೆಯ ನಾರಾಯಣಗೌಡರು



ಇವತ್ತು ನಮ್ಮ ದೇಶದ ಅನೇಕ ಭಾಷೆಗಳಿಗೆ ಕುತ್ತು ಬಂದಿದೆ. ಜಗತ್ತಿನಲ್ಲಿ ತಿಂಗಳಿಗೆ ಒಂದು ಭಾಷೆ ಸಾಯುತ್ತಾ ಹೋಗುತ್ತದೆಯಂತೆ; ಭಾಷೆಗಳೂ ಇರಬಹುದು, ಉಪಭಾಷೆಗಳು ಇರಬಹುದು. ಒಂದು ಭಾಷೆ ಒಂದು ನಾಗರಿಕತೆಯ ಬಳುವಳಿ; ಸಂಸ್ಕೃತಿಯ ಪ್ರತಿಬಿಂಬ.
ಮನುಷ್ಯ ತನಗೆ ಕಂಡದ್ದನ್ನು ಮೂಕಾಭಿನಯದ ಮೂಲಕ ಉಳಿದವರಿಗೆ ಹೇಳತೊಡಗಿದ. ಕೈಸನ್ನೆಯ ಮೂಲಕ, ಅಭಿನಯದ ಮೂಲಕ, ಕೊನೆಗೆ ಮಾತು ಬಂತು-ಮಾತು ಭಾಷೆಯಾಯಿತು. ವ್ಯಾಕರಣ ಬಂತು. ಒಂದು ನಿರ್ದಿಷ್ಟ ಸಮುದಾಯ, ಒಂದು ನಿರ್ದಿಷ್ಟ ಸ್ಥಳದಲ್ಲಿ ನೆಲೆಸಿ, ಬಹಳ ಕಾಲ ಇರುವ ಸಂದರ್ಭ ಬಂದಾಗಲೆಲ್ಲ ನಿರ್ಧಿಷ್ಟ ಭಾಷೆ ಉದ್ಭವವಾಗಿ ಬೆಳೆಯತೊಡಗಿತು.
ಒಂದು ಭಾಷೆಯಿಂದ ಸಮುದಾಯ ತನ್ನ ನೋವು ನಲಿವುಗಳನ್ನು, ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಸಹಾಯವಾಯಿತು. ಭಾಷೆಯಷ್ಟು ಪ್ರಮುಖವಾದ ಅಭಿವ್ಯಕ್ತಿಯ ಮಾಧ್ಯಮ ಇನ್ನೊಂದಿಲ್ಲ. ಅದು ಮಾತಿನ ಮೂಲಕ, ಬರವಣಿಗೆಯ ಮೂಲಕ ಹೀಗೆ... ಇದೇ ರೀತಿ ಇನ್ನೊಂದು ಪ್ರಾಂತ್ಯದ ಸಮುದಾಯ.. ಅದರ ಭಾಷೆ... ಅವರ ಸಂಕಟಗಳು...
ಆದರೆ ಭಾಷೆ ಕೇವಲ ಮಾತನಾಡುವ ಹೇಳುವ ಸಾಧನವಾಗಿ ಮಾತ್ರ ಉಳಿದಿಲ್ಲ. ಅದು ಜ್ಞಾನದಾಯಕವಾಗಿದೆ. ಅದರಿಂದ ವಿವಿಧ ಜ್ಞಾನಶಾಖೆಗಳನ್ನು ಅಭ್ಯಸಿಸುವ ಅವಕಾಶದ ಬಾಗಿಲು ತೆರೆಯಿತು. ಈ ಶಾಖೆಗಳ ಅಧ್ಯಯನದಿಂದ ಕೆಲಸ, ಕೆಲಸದಿಂದ ಹುದ್ದೆ, ಜೀವನ... ಆಗ ಪೈಪೋಟಿ ಶುರುವಾಯಿತು.
ಕೆಲಸ ಯಾರಿಗೆ ಸಿಗಬೇಕು; ಸ್ಥಳೀಯರು-ಹೊರಗಿನವರು ಕನ್ನಡ ಕಲಿತವರು-ಕನ್ನಡ ಕಲಿಯದವರು, ನಾವು ಬೇರೆ-ನೀವು ಬೇರೆ. ಹುದ್ದೆಗಳು ಸಾಕಷ್ಟು ಇರುವಾಗ, ಕಲಿತವರು ಕಡಿಮೆ ಇರುವಾಗ ಇಂಥ ಗಂಡಾಂತರದ ಸಮಸ್ಯೆ ಉದ್ಭವಿಸುವುದಿಲ್ಲ. ತುಂಬಾ ಕಲಿತ, ಅಪಾರ ಬುದ್ಧಿವಂತಿಕೆಗೆ ಹೆಸರಾದ ಐಯ್ಯರ್ ಸಮುದಾಯದವರನ್ನು-ತಮಿಳು ಭಾಷೆ ಕಲಿತವರನ್ನು ಮೈಸೂರು ಮಹಾರಾಜರೇ ಬರಮಾಡಿಕೊಂಡು ಆರತಿ ತಟ್ಟೆ ಹಿಡಿದರು.
೧೯೪೭ರಲ್ಲಿ ಸ್ವಾತಂತ್ರ್ಯ ಬಂತು. ಆದರೆ ಒಂದೇ ಭಾಷೆ ಮಾತನಾಡುವವರು ಒಂದೇ ರಾಜ್ಯದಲ್ಲಿರಲಿ-ಒಂದೇ ಕಡೆ ಇರ‍್ತೇವೆ. ಅದು ಆಡಳಿತಕ್ಕೆ ಅನುಕೂಲವಾಗುತ್ತದೆ. ನಮ್ಮ ಸಂಸ್ಕೃತಿ ಒಂದೇ... ಈ ಭಾವನೆ ಬೇರು ಬಿಟ್ಟು ಹೆಮ್ಮೆರವಾಗಿ ಬೆಳೆಯಿತು.... ಕುಟುಂಬ ಒಡೆದು ಪಾಲು ಮಾಡುವುದೇ ಕಷ್ಟ... ಇನ್ನು ಯಾವ್ಯಾವ ರಾಜ್ಯವನ್ನು ಗಡಿ ಮಾಡುವುದು.... ಸುಲಭದ ಕೆಲಸವಲ್ಲ... ಹೇಗೂ ಮಾಡಿದರೂ ಕೊಂಕು ಹುಡುಕಬಹುದು... ಆಂಧ್ರ ಬಿರುಸಾಗಿ ಶುರುಮಾಡಿತು.... ಎಲ್ಲರೂ ಒಂದೇ ಭಾಷೆಯ ಹೆಸರಿನಲ್ಲಿ ಭಾರತ ಒಡೆದು ಹೋಗುವುದು ಬೇಡ ಎಂದ ಆಗಿನ ಪ್ರಧಾನಿ ಆಂಧ್ರದ ಮಹಾಜ್ವಾಲೆಗೆ ಹೆದರಿದರು.
ನಂತರ ೧೯೫೬ರಲ್ಲಿ ಐದು ಭಾಗಗಳಲ್ಲಿ ಮಾತನಾಡುತ್ತಿದ್ದ ಕೊಡಗು, ಹಳೇ ಮೈಸೂರು, ಮದರಾಸು, ಮಹಾರಾಷ್ಟ್ರ, ಹೈದರಬಾದ್ ಎಲ್ಲರೂ ಒಂದು ಕಡೆ ಸೇರಿ ಮೈಸೂರಾಯಿತು. ಕೊನೆಗೆ ಕರ್ನಾಟಕವಾಯಿತು. ಭಾರತದಲ್ಲಿ ೧೬೧೮ ಭಾಷೆಗಳಿವೆ ನೆನಪಿರಲಿ.
ಆಮೇಲೇನಾಯಿತು? ಆಂಗ್ಲಭಾಷೆ ಮಾತನಾಡುವವರು ಬುದ್ಧಿವಂತರೆಂದು ಅವರಿಗೆ ಅವಕಾಶ ಹೆಚ್ಚು ಸಿಗಲು ಆರಂಭವಾಯಿತು. ಕೆಲಸಗಳಿಗಾಗಿ ರಾಜ್ಯದ ಸರಹದ್ದು ದಾಟಿ ಬೇರೆಯವರು ಇಲ್ಲಿಗೆ-ಇಲ್ಲಿಯವರು ಬೇರೆ ಕಡೆ ವಲಸೆ ಶುರುವಾಯಿತು. ಇವತ್ತು ಯಾವ ಪ್ರದೇಶವೂ ಒಂದೇ ಭಾಷೆ ಮಾತನಾಡುವ ಸ್ಥಳಗಳಾಗಿ ಉಳಿಯಲಿಲ್ಲ.
ಆದರೆ ಸಂಕೋಚದ ಮುದ್ದೆಯಾದ ಕನ್ನಡಿಗನಿಗೆ ಅವಕಾಶ ಕಡಿಮೆಯಾಗತೊಡಗಿದಾಗ ಹೋರಾಟ ಅನಿವಾರ್ಯವಾಯಿತು.
ಹೋರಾಟದ ಸ್ವರೂಪಗಳು ಬೇರೆ ಬೇರೆ ರೀತಿಯಾದವು. ರಾಮಮೂರ್ತಿ ಯಿಂದ ನಾರಾಯಣಗೌಡರವರೆಗೆ ಗೋಕಾಕ್, ಸರೋಜಿನಿ ಮಹಿಷಿ ವರದಿ.. ನಮ್ಮ ಊರಲ್ಲಿ ನಮಗೇ ಮರ್ಯಾದೆ ಬೇಡವೇ..... ಅಭಿಮಾನ ಶೂನ್ಯರಾದ ನಮ್ಮಲ್ಲಿಯೇ ಕೆಚ್ಚನ್ನು ಹಚ್ಚಲು ಕಾರಣರಾದರು...ಅದರಲ್ಲಿ ಇತ್ತೀಚಿನ ದಿನಗಳಲ್ಲಿ ನಾರಾಯಣಗೌಡರು ಮುಖ್ಯರು. ಅನೇಕ ಸಂದರ್ಭಗಳಲ್ಲಿ ಅವರದು ಹಿಂಸೆಯ ಮಾರ್ಗ ಎನಿಸಬಹುದು. ಇಂಥ ಹಿಂಸೆ ಇನ್ನೊಂದು ಹಿಂಸೆಯನ್ನು ಹುಟ್ಟುಹಾಕುತ್ತದೆ. ಎಲ್ಲ ಸಮಸ್ಯೆಗಳಿಗೆ ಗಾಂಧಿಯ ಮಾರ್ಗವೇ ಪರಿಹಾರ ಎಂಬುದು ನಮ್ಮ ಅಭಿಮತವಾಗಬೇಕು.
ಶ್ರೀ ನಾರಾಯಣಗೌಡರು ಕನ್ನಡದ ವಿಷಯದಲ್ಲಿ ರಾಜಿ ಮಾಡಿಕೊಂಡಿದ್ದನ್ನು ನಾನು ಕೇಳಿಲ್ಲ. ಅವರು ಕೆಲವು ಸಂದರ್ಭದಲ್ಲಿ ತಮ್ಮ ತೀವ್ರವಾದ ಚಳವಳಿಯಿಂದ ಅವರು ಹಿಂಸಾ ಪ್ರವೃತ್ತಿಯವರು ಎಂದೆನಿಸಿರಹುದು ಆದರೆ ಅದು ಅವರ ಕನ್ನಡ ಭಾಷೆಯ ಬದ್ಧತೆಯ ಪ್ರಶ್ನೆ.
ಹೇಳಿಕೆ ಕೊಡುವುದರಲ್ಲಿ ಅವರಿಗೆ ನಂಬಿಕೆಯಿಲ್ಲ; ಹೋರಾಟದಲ್ಲಿ ಅವರು ನಂಬಿಕೆಯುಳ್ಳವರು. ಪತ್ರಿಕಾಗೋಷ್ಠಿ ನಡೆಸಿ ಜನಪ್ರಿಯರಾಗಬೇಕೆನ್ನುವ ಅಭಿಲಾಷೆ ಅವರದಲ್ಲ. ಇದರ ಬದಲಿಗೆ ಆಂದೋಲನ ನಡೆಸಿ ಕನ್ನಡ ಭಾಷೆ ವಿರೋಧಿಗಳನ್ನು ಎದುರಿಸುವ ತಾಕತ್ತಿರುವ ಕೆಲವರಲ್ಲಿ ಇವರೂ ಒಬ್ಬರು. ಅವರ ಸಂಘಟನಾ ಚಾತುರ್ಯತೆ ಮೆಚ್ಚುವಂಥದ್ದು. ಒಮ್ಮೆ ಶಾಂತವೇರಿ ಗೋಪಾಲಗೌಡರು ವಿಧಾನಸಭೆಯಲ್ಲಿ ಯಾವುದೋ ವಿಷಯದ ಬಗ್ಗೆ ಮಾತನಾಡುತ್ತ ಸಿಟ್ಟಿನಿಂದ ಧ್ವನಿವರ್ಧಕವನ್ನು ಕಿತ್ತು ಬಿಸಾಡಿದರಂತೆ. ಸಮಾಜವಾದಿಯ ನಾಯಕರು ಮತ್ತು ಶಾಂತಿಪ್ರಿಯರೂ ಆದ ಶಾಂತವೇರಿಯವರಿಗೆ ಸಿಟ್ಟು ಬಂದಿದ್ದು ಬದ್ಧತೆಯಿಂದ.
ಬದ್ಧತೆ ಇರುವವರಿಗೆ ಸಿಟ್ಟು ಬರುತ್ತದೆ. ಪ್ರೀತಿ ಇದ್ದವರಿಗೆ ಸಿಟ್ಟು ಬರುತ್ತದೆ. ಹೇಗಾದರೂ ಆಗಲಿ, ಏನಾದರೂ ಆಗಲಿ ಎಂಬ ತಾತ್ಸಾರ ಭಾವನೆಯುಳ್ಳವರಿಗೆ ಸಿಟ್ಟು ಬರುವುದೇ ಇಲ್ಲ. ಯಾಕೆಂದರೆ ಅಂಥವರಿಗೆ ಯಾವ ಕೆಲಸದ ಮೇಲೂ ಪ್ರೀತಿಯೇ ಇರುವುದಿಲ್ಲ. ಕುದುರೆ ಇದೆ ಮೈದಾನ ಇದೆ-ಎಂಬ ಧೋರಣೆ. ಆದರೆ ನಾನು ಕಂಡಂತೆ ನಾರಾಯಣಗೌಡರಿಗೆ ಕನ್ನಡ ಭಾಷೆಯ ಬಗ್ಗೆ ಅತೀವ ಪ್ರೀತಿ ಇದೆ. ಅದಕ್ಕಾಗಿಯೇ ಸಿಟ್ಟು ಬರುತ್ತದೆ.
ಸಿಟ್ಟು ಕಡಿಮೆಯಾಗಿ, ಪ್ರೀತಿ ಹೆಚ್ಚಾಗಿ
ಕನ್ನಡ ಭಾಷೆ ಉಳಿಸಲು, ಬೆಳೆಸಲು
ಕರವೇ ಸಮೃದ್ಧವಾಗಲಿ ಎಂದು ಹಾರೈಸುವೆ.

ಡಾ.ಜಯಪ್ರಕಾಶ ಮಾವಿನಕುಳಿ
‘ಮಾವಿನಕುಳಿ ಮನೆ, ಮೂಡುಬಿದಿರೆ-೫೭೪೧೯೭, ಮೊ: ೯೪೪೮೭-೨೫೦೬೫

No comments:

Post a Comment

ಹಿಂದಿನ ಬರೆಹಗಳು